Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 13

ರಚನೆಗಾರ: ದಾವೀದ.

13 ಯೆಹೋವನೇ, ನನ್ನನ್ನು ಇನ್ನೆಷ್ಟುಕಾಲ ಮರೆತಿರುವೆ?
    ನನ್ನನ್ನು ಶಾಶ್ವತವಾಗಿ ಮರೆತುಬಿಡುವೆಯಾ?
    ಇನ್ನೆಷ್ಟುಕಾಲ ನನಗೆ ಮರೆಯಾಗಿರುವೆ?
ನಾನು ದುಃಖಕ್ರಾಂತನಾಗಿ ಇನ್ನೆಷ್ಟುಕಾಲ ಆಲೋಚಿಸುತ್ತಿರಬೇಕು?
    ನನ್ನ ವೈರಿಗಳು ಇನ್ನೆಷ್ಟುಕಾಲ ನನ್ನ ಮೇಲೆ ಜಯಗಳಿಸಬೇಕು?

ನನ್ನ ದೇವರಾದ ಯೆಹೋವನೇ, ನನ್ನ ಮೇಲೆ ದೃಷ್ಟಿಯಿಟ್ಟು ಸದುತ್ತರವನ್ನು ದಯಪಾಲಿಸು.
    ಇಲ್ಲವಾದರೆ, ನಾನು ಸಾಯಲೇಬೇಕಾಗುವುದು!
ಆಗ ವೈರಿಯು, “ನಾನು ಅವನನ್ನು ಸೋಲಿಸಿದೆ!” ಎಂದು ಹೇಳುತ್ತಾ
    ನನ್ನ ಬೀಳುವಿಕೆಯನ್ನು ಕಂಡು ಸಂತೋಷಪಡುವನು.

ನಾನಂತೂ ನಿನ್ನ ಶಾಶ್ವತವಾದ ಪ್ರೀತಿಯಲ್ಲಿ ಭರವಸೆಯಿಟ್ಟಿದ್ದೇನೆ.
    ನಿನ್ನ ರಕ್ಷಣೆಯ ನಿಮಿತ್ತ ನನ್ನ ಹೃದಯವು ಹರ್ಷಿಸುವುದು.
ಯೆಹೋವನು ಮಹೋಪಕಾರಗಳನ್ನು ಮಾಡಿರುವುದರಿಂದ
    ಆತನಿಗೆ ಹರ್ಷಗೀತೆಗಳನ್ನು ಹಾಡುವೆನು.

ದಾನಿಯೇಲ 8:15-27

ದಾನಿಯೇಲನಿಗೆ ದರ್ಶನದ ಅರ್ಥವನ್ನು ವಿವರಿಸಲಾಯಿತು

15 ದಾನಿಯೇಲನೆಂಬ ನಾನು ಈ ದರ್ಶನವನ್ನು ಕಂಡೆ ಮತ್ತು ಅದರ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದೆ. ನಾನು ಈ ದರ್ಶನದ ಬಗ್ಗೆ ವಿಚಾರ ಮಾಡುತ್ತಿದ್ದಾಗ ಮನುಷ್ಯನಂತಿದ್ದವನೊಬ್ಬನು ನನ್ನ ಎದುರಿಗೆ ನಿಂತಿದ್ದನು. 16 ಆಗ ನಾನು ಮನುಷ್ಯನ ಧ್ವನಿಯನ್ನು ಕೇಳಿದೆ. ಈ ಧ್ವನಿಯು ಊಲಾ ನದಿಯ ಮೇಲಿಂದ ಬಂದಿತು. ಆ ಧ್ವನಿಯು, “ಗಬ್ರಿಯೇಲನೇ, ಕನಸಿನ ಅರ್ಥವನ್ನು ಈ ಮನುಷ್ಯನಿಗೆ ತಿಳಿಸು” ಎಂದು ಆದೇಶ ಕೊಟ್ಟಿತು.

17 ಆಗ ಮನುಷ್ಯನಂತಿದ್ದ ಗಬ್ರಿಯೇಲನು ನಾನು ನಿಂತಲ್ಲಿಗೆ ಬಂದನು. ಅವನು ತೀರ ನನ್ನ ಹತ್ತಿರಕ್ಕೆ ಬಂದಾಗ ನನಗೆ ಬಹಳ ಭಯವಾಯಿತು. ನಾನು ನೆಲಕ್ಕೆ ಬಿದ್ದೆ. ಆದರೆ ಗಬ್ರಿಯೇಲನು ನನಗೆ, “ಮನುಷ್ಯನೇ, ಈ ದರ್ಶನ ಅಂತ್ಯಕಾಲದ ಕುರಿತಾಗಿದೆ ಎಂಬುದು ನಿನಗೆ ತಿಳಿದಿರಲಿ” ಎಂದು ಹೇಳಿದನು.

18 ಗಬ್ರಿಯೇಲನು ನನ್ನೊಂದಿಗೆ ಮಾತನಾಡುತ್ತಿದ್ದಾಗ ನಾನು ನಿದ್ರಾವಶನಾದೆನು. ಅದು ಬಹಳ ಗಾಢವಾದ ನಿದ್ರೆಯಾಗಿತ್ತು. ನನ್ನ ಮುಖವು ನೆಲದ ಮೇಲೆ ಇತ್ತು. ಆಗ ಗಬ್ರಿಯೇಲನು ನನ್ನನ್ನು ಮುಟ್ಟಿ ಎಬ್ಬಿಸಿ, 19 “ನಾನು ನಿನಗೆ ಈಗ ದರ್ಶನದ ಅರ್ಥವನ್ನು ವಿವರಿಸುತ್ತೇನೆ. ಭವಿಷ್ಯದಲ್ಲಿ ನಡೆಯಲಿರುವುದನ್ನು ನಾನು ನಿನಗೆ ಹೇಳುತ್ತೇನೆ. ನಿನ್ನ ದರ್ಶನವು ಅಂತ್ಯಕಾಲದ ಕುರಿತಾದದ್ದು.

20 “ನೀನು ಎರಡು ಕೊಂಬುಗಳುಳ್ಳ ಒಂದು ಟಗರನ್ನು ನೋಡಿದೆ. ಆ ಕೊಂಬುಗಳು ಮೇದ್ಯಯ ಮತ್ತು ಪಾರಸಿಯ ರಾಜ್ಯಗಳು. 21 ಆ ಹೋತವು ಗ್ರೀಕ್ ರಾಜ್ಯ. ಅದರ ಎರಡು ಕಣ್ಣುಗಳ ಮಧ್ಯದ ಕೊಂಬು ಮೊದಲನೆಯ ಅರಸ. 22 ಆ ಕೊಂಬು ಮುರಿಯಿತು; ಅದರ ಸ್ಥಳದಲ್ಲಿ ನಾಲ್ಕು ಕೊಂಬುಗಳು ಮೊಳೆತವು. ಆ ನಾಲ್ಕು ಕೊಂಬುಗಳು ನಾಲ್ಕು ರಾಜ್ಯಗಳನ್ನು ಸೂಚಿಸುವವು. ಆ ನಾಲ್ಕು ರಾಜ್ಯಗಳು ಮೊದಲನೆಯ ಅರಸನ ರಾಷ್ಟ್ರದಿಂದ ಹುಟ್ಟುವವು. ಆದರೆ ಆ ನಾಲ್ಕು ರಾಜ್ಯಗಳು ಮೊದಲನೆಯ ಅರಸನಷ್ಟು ಶಕ್ತಿಶಾಲಿಯಾಗಿರುವದಿಲ್ಲ.

23 “ಆ ರಾಜ್ಯಗಳ ಅಂತ್ಯಕಾಲ ಸಮೀಪಿಸಿದಾಗ ಒಬ್ಬ ಧೈರ್ಯಶಾಲಿಯಾದ ಮತ್ತು ಕ್ರೂರನಾದ ಅರಸನು ತಲೆದೋರುವನು. ಈ ಅರಸನು ಬಹಳ ಕುತಂತ್ರಿಯಾಗಿರುವನು. ಅಧರ್ಮಿಗಳ ಮತ್ತು ಪಾಪಿಗಳ ಸಂಖ್ಯೆ ಹೆಚ್ಚಾದಾಗ ಇದೆಲ್ಲ ನಡೆಯುವುದು. 24 ಈ ಅರಸನು ಬಹಳ ಪ್ರಬಲನಾಗಿರುವನು. ಆದರೆ ಆ ಪ್ರಾಬಲ್ಯ ಸ್ವಶಕ್ತಿಯಿಂದ ಬಂದುದಲ್ಲ. ಈ ಅರಸನು ಅಪಾರ ವಿನಾಶವನ್ನುಂಟು ಮಾಡುವನು. ಅವನು ಕೈಕೊಂಡ ಪ್ರತಿಯೊಂದು ಕೆಲಸದಲ್ಲಿ ಅವನಿಗೆ ಜಯ ಲಭಿಸುವುದು. ಅವನು ಬಲಿಷ್ಠರನ್ನೂ ದೇವಭಕ್ತರನ್ನೂ ನಾಶಮಾಡುವನು.

25 “ಅರಸನು ಚತುರನೂ ಕುತಂತ್ರಿಯೂ ಆಗಿರುವನು. ಅವನು ತನ್ನ ಬುದ್ಧಿಶಕ್ತಿಯನ್ನೂ ಹುಸಿನುಡಿಗಳನ್ನೂ ಬಳಸಿಕೊಂಡು ಅಭಿವೃದ್ಧಿ ಹೊಂದುವನು. ತಾನು ಬಹಳ ಮುಖ್ಯನೆಂದು ಅವನು ಭಾವಿಸುವನು. ನೆಮ್ಮದಿಯಾಗಿರುವ ಅನೇಕ ಜನರನ್ನು ಅನಿರೀಕ್ಷಿತವಾಗಿ ನಾಶಮಾಡುವನು. ಅವನು ರಾಜರುಗಳ ರಾಜನೊಂದಿಗೆ (ದೇವರೊಂದಿಗೆ) ಸಹ ಹೋರಾಡುವ ಪ್ರಯತ್ನ ಮಾಡುವನು. ಆದರೆ ಆ ಕ್ರೂರ ರಾಜನ ಶಕ್ತಿಯು ನಾಶವಾಗುವುದು. ಆದರೆ ಅದು ಮನುಷ್ಯನ ಕೈಯಿಂದ ನಾಶವಾಗುವದಿಲ್ಲ.

26 “ಆಗಿನ ಕಾಲದ ಮತ್ತು ಪರಿಸ್ಥಿತಿಯ ಬಗ್ಗೆ ಕಂಡ ದರ್ಶನಗಳು ನಿಜವಾಗುವವು. ಈ ದರ್ಶನ ಗುಟ್ಟಾಗಿರಲಿ. ಅದೆಲ್ಲ ನಡೆಯಬೇಕಾದರೆ ಇನ್ನೂ ಬಹಳ ಕಾಲಬೇಕು” ಎಂದು ಹೇಳಿದನು.

27 ದಾನಿಯೇಲನೆಂಬ ನಾನು ಬಹಳ ಅಶಕ್ತನಾದೆನು. ಆ ದರ್ಶನದ ತರುವಾಯ ಹಲವಾರು ದಿವಸ ನಾನು ಕಾಯಿಲೆ ಬಿದ್ದೆನು. ಆಮೇಲೆ ನಾನು ಗುಣಹೊಂದಿ ರಾಜಕಾರ್ಯವನ್ನು ಪ್ರಾರಂಭಿಸಿದೆನು. ಆದರೆ ಆ ದರ್ಶನದಿಂದ ನನ್ನ ಮನಸ್ಸು ಕಲಕಿತು. ಆ ದರ್ಶನದ ಅರ್ಥವೇನೆಂಬುದು ನನಗೆ ತಿಳಿಯಲಿಲ್ಲ.

ಇಬ್ರಿಯರಿಗೆ 10:32-39

ನಿಮ್ಮಲ್ಲಿರುವ ಸಂತೋಷ ಮತ್ತು ಧೈರ್ಯಗಳನ್ನು ಬಿಡಬೇಡಿ

32 ನೀವು ಸತ್ಯವನ್ನು ತಿಳಿದುಕೊಂಡ ಆ ದಿನಗಳನ್ನು ನೆನಪು ಮಾಡಿಕೊಳ್ಳಿ. ನೀವು ಅನೇಕ ಸಂಕಟಗಳಲ್ಲಿ ಹೋರಾಟ ಮಾಡಿದರೂ, ಧೃತಿಗೆಡದೆ ಮುಂದುವರಿದಿರಿ. 33 ಕೆಲವು ಸಂದರ್ಭಗಳಲ್ಲಿ ಜನರು ನಿಮಗೆ ದ್ವೇಷಮಯ ಸಂಗತಿಗಳನ್ನು ಹೇಳಿದರು ಹಾಗೂ ಅನೇಕ ಜನರ ಮುಂದೆ ನಿಮ್ಮನ್ನು ಹಿಂಸಿಸಿದರು. ಅದೇ ರೀತಿಯ ಹಿಂಸೆಗೆ ಗುರಿಯಾಗಿದ್ದ ಜನರಿಗೆ ಕೆಲವು ಸಂದರ್ಭಗಳಲ್ಲಿ ಸಹಾಯ ಮಾಡಿದಿರಿ. 34 ಹೌದು, ಸೆರೆಯಲ್ಲಿರುವ ಜನರಿಗೆ ಸಹಾಯ ಮಾಡಿದಿರಿ ಮತ್ತು ಅವರ ಸಂಕಟಗಳಲ್ಲಿ ಪಾಲ್ಗೊಂಡಿರಿ. ನಿಮ್ಮ ಸ್ವತ್ತುಗಳನ್ನೆಲ್ಲ ನಿಮ್ಮಿಂದ ಕಿತ್ತುಕೊಂಡು ಹೋದಾಗಲೂ ಸಂತೋಷದಿಂದಲೇ ಇದ್ದಿರಿ. ಅದಕ್ಕಿಂತಲೂ ಉತ್ತಮವಾದದ್ದೂ ಶಾಶ್ವತವಾದದ್ದೂ ನಿಮಗೆ ದೊರೆತಿದೆ ಎಂದು ನಿಮಗೆ ತಿಳಿದಿದ್ದ ಕಾರಣ ನೀವು ಸಂತೋಷವಾಗಿದ್ದಿರಿ.

35 ಹಿಂದೆ ಹೊಂದಿದ್ದ ಧೈರ್ಯವನ್ನು ಬಿಟ್ಟುಬಿಡಬೇಡಿ. ನಿಮ್ಮ ಧೈರ್ಯಕ್ಕೆ ತಕ್ಕ ಪ್ರತಿಫಲವು ಸಿಗುತ್ತದೆ. 36 ನೀವು ತಾಳ್ಮೆಯಿಂದಿರಬೇಕು, ನೀವು ದೇವರ ಚಿತ್ತಾನುಸಾರವಾಗಿ ಮಾಡಿದ ನಂತರ ಆತನ ವಾಗ್ದಾನದಂತೆ ನಿಮಗೆ ಪ್ರತಿಫಲವು ಸಿಕ್ಕೇ ಸಿಗುತ್ತದೆ. 37 ಆತನು ಹೀಗೆ ಹೇಳುತ್ತಾನೆ:

“ಸ್ವಲ್ಪಕಾಲದಲ್ಲಿಯೇ, ಬರುವಾತನು ಬರುತ್ತಾನೆ.
    ಆತನು ತಡಮಾಡುವುದಿಲ್ಲ.
38 ನೀತಿವಂತನು ನಂಬಿಕೆಯಿಂದಲೇ
    ಜೀವವನ್ನು ಹೊಂದಿಕೊಳ್ಳುವನು.
ಆದರೆ ಅವನು ಭಯದಿಂದ ಹಿಂಜರಿದರೆ
    ನಾನು ಅವನಲ್ಲಿ ಸಂತೋಷಪಡುವುದಿಲ್ಲ.”(A)

39 ಆದರೆ ನಾವು ಹಿಂಜರಿಯುವ ಜನರಲ್ಲ, ನಾಶವಾಗುವ ಜನರೂ ಅಲ್ಲ. ನಾವು ನಂಬಿಕೆಯುಳ್ಳವರಾಗಿದ್ದೇವೆ ಮತ್ತು ರಕ್ಷಣೆ ಹೊಂದಿದವರಾಗಿದ್ದೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International