Revised Common Lectionary (Complementary)
ರಚನೆಗಾರ: ದಾವೀದ.
5 ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
ನನ್ನ ಆಲೋಚನೆಗಳಿಗೆ ಗಮನಕೊಡು.
2 ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
ನನ್ನ ಪ್ರಾರ್ಥನೆಯನ್ನು ಆಲೈಸು.
3 ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.
4 ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
5 ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
ದುಷ್ಟರನ್ನು ನೀನು ದ್ವೇಷಿಸುವೆ.
6 ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.
7 ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
8 ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
9 ಅವರ ಮಾತುಗಳಲ್ಲಿ ಸತ್ಯವೆಂಬುದೇ ಇಲ್ಲ.
ಅವರ ಬಾಯಿಗಳು ಸವಿಮಾತುಗಳನ್ನಾಡಿದರೂ
ಅವರ ಹೃದಯಗಳು ನಾಶಕರವಾದ ಗುಂಡಿಯಾಗಿವೆ.
ಅವರ ಗಂಟಲು ತೆರೆದ ಸಮಾಧಿಗಳಂತಿವೆ.
10 ದೇವರೇ, ಅವರನ್ನು ದಂಡಿಸು!
ಅವರು ತಮ್ಮ ಬಲೆಗಳಿಗೇ ಸಿಕ್ಕಿಕೊಳ್ಳಲಿ.
ಅವರು ನಿನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
ಅವರ ಅನೇಕ ಅಪರಾಧಗಳ ನಿಮಿತ್ತ ಅವರನ್ನು ದಂಡಿಸು.
11 ದೇವರಲ್ಲಿ ಭರವಸವಿಟ್ಟಿರುವ ಜನರೆಲ್ಲರೂ ಸದಾಕಾಲ ಸಂತೋಷವಾಗಿರಲಿ.
ನಿನ್ನ ಹೆಸರನ್ನು ಪ್ರೀತಿಸುವ ಜನರನ್ನು ಕಾಪಾಡಿ ಅವರಿಗೆ ಶಕ್ತಿಯನ್ನು ದಯಪಾಲಿಸು.
12 ಯೆಹೋವನೇ, ನೀನು ನೀತಿವಂತರಿಗೆ ಒಳ್ಳೆಯದನ್ನೇ ಮಾಡುವೆ;
ನೀನು ಅವರನ್ನು ವಿಶಾಲವಾದ ಗುರಾಣಿಯಂತೆ ಸಂರಕ್ಷಿಸುವೆ.
ಎಲ್ಲಾ ಜನಾಂಗದವರು ಯೆಹೋವನನ್ನು ಅನುಸರಿಸುವರು
56 ಯೆಹೋವನು ಹೇಳುವುದೇನೆಂದರೆ: “ಎಲ್ಲರಿಗೂ ನ್ಯಾಯವಂತರಾಗಿರಿ; ಎಲ್ಲರಿಗೂ ಒಳ್ಳೆಯವರಾಗಿರಿ; ಯಾಕೆಂದರೆ ನನ್ನ ರಕ್ಷಣೆಯು ಬೇಗನೆ ಬರಲಿದೆ; ಇಡೀ ಲೋಕಕ್ಕೆಲ್ಲಾ ನನ್ನ ನೀತಿಯು ಬೇಗನೆ ವ್ಯಕ್ತವಾಗುವುದು. 2 ಸಬ್ಬತ್ತಿನ ವಿಷಯದಲ್ಲಿ ದೇವರ ಕಟ್ಟಳೆಗಳನ್ನು ಅನುಸರಿಸುವವರು ಆಶೀರ್ವಾದ ಹೊಂದುವರು. ದುಷ್ಕೃತ್ಯಗಳನ್ನು ಮಾಡದವನು ಸಂತೋಷದಿಂದಿರುವನು.”
3 ಯೆಹೂದ್ಯರಲ್ಲದ ಜನರು ಯೆಹೋವನ ಬಳಿಗೆ ಬರುವರು. ಅವರು, “ಯೆಹೋವನು ನಮ್ಮನ್ನು ತನ್ನ ಜನರೊಂದಿಗೆ ಸ್ವೀಕರಿಸುವದಿಲ್ಲ” ಎಂದು ಹೇಳಬಾರದು. ಕಂಚುಕಿಯು, “ನಾನು ಕೆಲಸಕ್ಕೆ ಬಾರದ ಒಣಗಿದ ಮರ.” ಎಂದು ಹೇಳಬಾರದು.
4-5 ಯಾಕೆಂದರೆ ಯೆಹೋವನು ಹೇಳುವುದೇನೆಂದರೆ: “ಈ ಕಂಚುಕಿಯರಲ್ಲಿ ಕೆಲವರು ಸಬ್ಬತ್ ನಿಯಮವನ್ನು ಅನುಸರಿಸುತ್ತಾರೆ. ಅವರು ನನ್ನ ಇಷ್ಟಪ್ರಕಾರ ನಡೆದುಕೊಳ್ಳುತ್ತಾರೆ; ಅವರು ನನ್ನ ಒಡಂಬಡಿಕೆಗೆ ಸರಿಯಾಗಿ ನಡೆಯುತ್ತಾರೆ. ಆದ್ದರಿಂದ ನಾನು ಅವರಿಗೋಸ್ಕರ ನನ್ನ ಮಂದಿರದಲ್ಲಿ ಸ್ಮಾರಕಸ್ತಂಭ ನೆಡುವೆನು. ನನ್ನ ಪಟ್ಟಣದಲ್ಲಿ ಅವರ ಹೆಸರುಗಳು ಜ್ಞಾಪಕ ಮಾಡಲ್ಪಡುವವು. ಹೌದು, ಆ ಕಂಚುಕಿಗಳಿಗೆ ನಾನು ಮಕ್ಕಳಿಗಿಂತ ಉತ್ತಮವಾದದ್ದನ್ನು ಕೊಡುವೆನು. ಅವರಿಗೆ ನಿತ್ಯಕಾಲಕ್ಕೂ ಇರುವ ಹೆಸರನ್ನು ಕೊಡುವೆನು. ನನ್ನ ಜನರಿಂದ ಅವರನ್ನು ಬೇರ್ಪಡಿಸುವುದಿಲ್ಲ.”
6 “ಅನ್ಯದೇಶದವರಲ್ಲಿ ಕೆಲವರು ಯೆಹೋವನನ್ನು ಅನುಸರಿಸುವರು. ಆತನನ್ನು ಸೇವಿಸಿ ಆತನ ನಾಮವನ್ನು ಪ್ರೀತಿಸುವರು. ಅವರು ಯೆಹೋವನ ಸೇವಕರಾಗುವುದಕ್ಕಾಗಿ ಆತನೊಂದಿಗೆ ಸೇರಿಕೊಳ್ಳುವರು. ಸಬ್ಬತ್ದಿವಸವನ್ನು ಆರಾಧನೆ ಮಾಡುವ ವಿಶೇಷ ದಿವಸವೆಂದು ನೆನಸಿ ಒಡಂಬಡಿಕೆಯನ್ನು ಪರಿಪಾಲಿಸುವರು. 7 ನಾನು ಅವರನ್ನು ನನ್ನ ಪವಿತ್ರಪರ್ವತಕ್ಕೆ ತರುವೆನು; ನನ್ನ ಪ್ರಾರ್ಥನಾಲಯದಲ್ಲಿ ಅವರನ್ನು ಸಂತೋಷಪಡಿಸುವೆನು. ಅವರು ಅರ್ಪಿಸುವ ಸರ್ವಾಂಗಹೋಮಗಳನ್ನೂ ಯಜ್ಞಗಳನ್ನೂ ನಾನು ಮೆಚ್ಚಿಕೊಳ್ಳುವೆನು. ಯಾಕೆಂದರೆ ನನ್ನ ಆಲಯವು ಎಲ್ಲಾ ಜನಾಂಗದವರಿಗೆ ಪ್ರಾರ್ಥನಾಲಯವೆಂದು ಕರೆಯಲ್ಪಡುವುದು.” 8 ಇದು ನನ್ನ ಒಡೆಯನಾದ ಯೆಹೋವನ ಮಾತುಗಳು.
ಇಸ್ರೇಲ್ ಜನರು ತಮ್ಮ ದೇಶದಿಂದ ಹೊರಗೆ ಹಾಕಲ್ಪಟ್ಟರು. ಆದರೆ ಯೆಹೋವನು ಅವರನ್ನು ಮತ್ತೆ ಬರಮಾಡುತ್ತಾನೆ. ಆತನು, “ಈ ಜನರನ್ನು ನಾನು ಮತ್ತೆ ಒಟ್ಟುಗೂಡಿಸುತ್ತೇನೆ” ಎಂದು ಹೇಳುತ್ತಾನೆ.
ಯೆಹೂದ್ಯಳಲ್ಲದ ಸ್ತ್ರೀಗೆ ಯೇಸುವಿನ ಸಹಾಯ
(ಮತ್ತಾಯ 15:21-28)
24 ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. ಯೇಸು ಅಲ್ಲಿ ಒಂದು ಮನೆಯೊಳಕ್ಕೆ ಹೋದನು. ತಾನು ಅಲ್ಲಿರುವುದು ಅಲ್ಲಿಯ ಜನರಿಗೆ ತಿಳಿಯಬಾರದೆಂಬುದು ಆತನ ಅಪೇಕ್ಷೆಯಾಗಿತ್ತು. ಆದರೆ ಯೇಸುವಿಗೆ ಅಡಗಿಕೊಳ್ಳಲಿಕ್ಕಾಗಲಿಲ್ಲ. 25 ಯೇಸು ಅಲ್ಲಿರುವನೆಂಬುದು ಒಬ್ಬ ಸ್ತ್ರೀಗೆ ತಿಳಿಯಿತು. ಅವಳ ಕಿರಿಯ ಮಗಳಿಗೆ ದೆವ್ವ ಹಿಡಿದಿತ್ತು. ಆದ್ದರಿಂದ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು, ಆತನ ಪಾದಗಳ ಮುಂದೆ ಅಡ್ಡಬಿದ್ದು ನಮಸ್ಕರಿಸಿದಳು. 26 ಅವಳು ಸಿರಿಯ ಪ್ರದೇಶದ ಪೊಯಿನಿಕ್ಯದಲ್ಲಿ ಹುಟ್ಟಿದ್ದಳು ಮತ್ತು ಗ್ರೀಕಳಾಗಿದ್ದಳು. ಆ ಸ್ತ್ರೀಯು ತನ್ನ ಮಗಳಲ್ಲಿರುವ ದೆವ್ವವನ್ನು ಹೊರಗಟ್ಟಬೇಕೆಂದು ಯೇಸುವಿನಲ್ಲಿ ಬೇಡಿಕೊಂಡಳು.
27 ಯೇಸು ಆ ಸ್ತ್ರೀಗೆ, “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ. ತಮಗೆ ಬೇಕಾದುದನ್ನು ಮಕ್ಕಳು ಮೊದಲು ತಿನ್ನಲಿ” ಎಂದು ಹೇಳಿದನು.
28 ಆ ಸ್ತ್ರೀಯು, “ಅದು ನಿಜ ಪ್ರಭು. ಆದರೆ ಮಕ್ಕಳು ತಿನ್ನದೆ ಬಿಟ್ಟ ಆಹಾರದ ಚೂರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನಬಹುದಲ್ಲವೇ?” ಎಂದು ಉತ್ತರಕೊಟ್ಟಳು.
29 ಆಗ ಯೇಸು ಆ ಸ್ತ್ರೀಗೆ, “ನೀನು ಒಳ್ಳೆಯ ಉತ್ತರ ಕೊಟ್ಟೆ. ಹೋಗು, ನಿನ್ನ ಮಗಳನ್ನು ದೆವ್ವವು ಬಿಟ್ಟುಹೋಗಿದೆ” ಎಂದು ಹೇಳಿದನು.
30 ಆ ಸ್ತ್ರೀಯು ಮನೆಗೆ ಹೋದಾಗ ತನ್ನ ಮಗಳು ಹಾಸಿಗೆಯಲ್ಲಿ ಮಲಗಿರುವುದನ್ನು ಕಂಡಳು. ದೆವ್ವವು ಅವಳನ್ನು ಬಿಟ್ಟುಹೋಗಿತ್ತು.
Kannada Holy Bible: Easy-to-Read Version. All rights reserved. © 1997 Bible League International