Revised Common Lectionary (Complementary)
ರಚನೆಗಾರ: ದಾವೀದ.
31 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
ಕರುಣೆತೋರಿ ನನ್ನನ್ನು ರಕ್ಷಿಸು.
2 ನನಗೆ ಕಿವಿಗೊಡು.
ಬೇಗನೆ ಬಂದು, ನನ್ನನ್ನು ರಕ್ಷಿಸು.
ನನಗೆ ಬಂಡೆಯೂ ನನ್ನ ಆಶ್ರಯಸ್ಥಾನವೂ ಕೋಟೆಯೂ ಆಗಿದ್ದು
ನನ್ನನ್ನು ಕಾಪಾಡು!
3 ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವುದರಿಂದ
ನಿನ್ನ ಹೆಸರಿನ ಘನತೆಗಾಗಿ ನನ್ನನ್ನು ನಡೆಸು; ನನಗೆ ಮಾರ್ಗದರ್ಶನ ನೀಡು.
4 ನನ್ನ ವೈರಿಗಳು ನನಗೆ ಬಲೆಬೀಸಿದ್ದಾರೆ.
ಅವರ ಬಲೆಗೆ ಸಿಕ್ಕಿಬೀಳದಂತೆ ನನ್ನನ್ನು ರಕ್ಷಿಸು.
ನೀನೇ ನನ್ನ ಆಶ್ರಯಸ್ಥಾನವಾಗಿರುವೆ.
5 ಯೆಹೋವನೇ, ನಮ್ಮ ಭರವಸೆಗೆ ಯೋಗ್ಯನಾದ ದೇವರು ನೀನೊಬ್ಬನೇ.
ನನ್ನ ಜೀವವನ್ನು ನಿನ್ನ ಕೈಗಳಲ್ಲಿ ಇಟ್ಟಿರುವೆ.
ನನ್ನನ್ನು ರಕ್ಷಿಸು!
19 ದೇವರೇ, ನೀನು ನಿನ್ನ ಭಕ್ತರಿಗಾಗಿ ಅಮೂಲ್ಯವಾದವುಗಳನ್ನು ಅಡಗಿಸಿಟ್ಟಿರುವೆ.
ನಿನ್ನಲ್ಲಿ ಭರವಸವಿಟ್ಟಿರುವ ಜನರಿಗಾಗಿ
ಎಲ್ಲರ ಮುಂದೆ ನೀನು ಮಾಡುವ ಒಳ್ಳೆಯ ಕಾರ್ಯಗಳು ಎಷ್ಟೋ ವಿಶೇಷವಾಗಿವೆ.
20 ನೀತಿವಂತರಿಗೆ ಕೇಡುಮಾಡಲು ಕೆಡುಕರು ಒಟ್ಟಾಗಿ ಸೇರಿದ್ದಾರೆ.
ನೀನಾದರೋ ನೀತಿವಂತರನ್ನು ಮರೆಮಾಡಿ ಕಾಪಾಡುವೆ;
ಅವರನ್ನು ನಿನ್ನ ಆಶ್ರಯಸ್ಥ್ಥಾನದಲ್ಲಿ ಅಡಗಿಸಿಡುವೆ.
21 ಯೆಹೋವನಿಗೆ ಸ್ತೋತ್ರವಾಗಲಿ! ವೈರಿಗಳು ಈ ಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ
ಆತನು ತನ್ನ ಶಾಶ್ವತ ಪ್ರೀತಿಯನ್ನು ಆಶ್ಚರ್ಯಕರವಾಗಿ ತೋರಿದ್ದಾನೆ.
22 ನಾನು ಭಯಗೊಂಡು, “ದೇವರು ನನ್ನನ್ನು ತನ್ನ ಸಾನಿಧ್ಯದಿಂದ ಹೊರಗಟ್ಟಿದ್ದಾನೆ” ಎಂದುಕೊಂಡೆನು.
ಆದರೆ ನಾನು ನಿನ್ನನ್ನು ಕೂಗಿಕೊಂಡಾಗ ನೀನು ಕಿವಿಗೊಟ್ಟೆ.
23 ದೇವರ ಭಕ್ತರೇ, ನೀವು ಯೆಹೋವನನ್ನು ಪ್ರೀತಿಸಲೇಬೇಕು!
ಆತನು ನಂಬಿಗಸ್ತರನ್ನು ಕಾಪಾಡುವನು; ಗರ್ವಿಷ್ಠರನ್ನಾದರೋ ದಂಡಿಸುವನು.
24 ಯೆಹೋವನನ್ನು ನಿರೀಕ್ಷಿಸಿಕೊಂಡಿರುವವರೇ, ದೃಢವಾಗಿಯೂ ಧೈರ್ಯವಾಗಿಯೂ ಇರಿ.
ದೇವರ ಮತ್ತು ಇಸ್ರೇಲರ ನಡುವೆ ಒಡಂಬಡಿಕೆ
24 ದೇವರು ಮೋಶೆಗೆ, “ನೀನು, ಆರೋನ, ನಾದಾಬ, ಅಬೀಹೂ ಮತ್ತು ಇಸ್ರೇಲರ ಎಪ್ಪತ್ತು ಮಂದಿ ಹಿರಿಯರು ಬೆಟ್ಟವನ್ನೇರಿಬಂದು ದೂರದಿಂದ ನನ್ನನ್ನು ಆರಾಧಿಸಬೇಕು. 2 ಬಳಿಕ ನೀನು ಮಾತ್ರ ನನ್ನ ಬಳಿಗೆ ಬರಬೇಕು; ಬೇರೆಯವರು ಬರಕೂಡದು; ಆದರೆ ಉಳಿದ ಜನರು ಬೆಟ್ಟವನ್ನೂ ಏರಕೂಡದು” ಎಂದು ಹೇಳಿದನು.
3 ಮೋಶೆಯು ಯೆಹೋವನ ಎಲ್ಲಾ ನಿಯಮಗಳನ್ನು ಮತ್ತು ಆಜ್ಞೆಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲರೂ, “ಯೆಹೋವನ ಆಜ್ಞೆಗಳಿಗೆಲ್ಲಾ ನಾವು ವಿಧೇಯರಾಗುವೆವು” ಎಂದು ಒಂದೇ ಸ್ವರದಿಂದ ಹೇಳಿದರು.
4 ಆದ್ದರಿಂದ ಮೋಶೆ ಯೆಹೋವನ ಆಜ್ಞೆಗಳನ್ನೆಲ್ಲಾ ಒಂದು ಸುರುಳಿಯಲ್ಲಿ ಬರೆದನು. ಮರುದಿನ ಮುಂಜಾನೆ, ಅವನು ಬೇಗನೆ ಎದ್ದು ಬೆಟ್ಟದ ಕೆಳಭಾಗದ ಹತ್ತಿರ, ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಂಬಗಳುಳ್ಳ ಒಂದು ಯಜ್ಞವೇದಿಕೆಯನ್ನು ಕಟ್ಟಿಸಿದನು. ಇಸ್ರೇಲರ ಹನ್ನೆರಡು ಕುಲಗಳಿಗೆ ಒಂದೊಂದರಂತೆ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. 5 ಬಳಿಕ ಮೋಶೆಯು ಯಜ್ಞಗಳನ್ನು ಸಮರ್ಪಿಸುವುದಕ್ಕೆ ಇಸ್ರೇಲರ ಯೌವನಸ್ಥರನ್ನು ಕಳುಹಿಸಿದನು. ಅವರು ಯೆಹೋವನಿಗೆ ಎತ್ತುಗಳನ್ನು ಸರ್ವಾಂಗಹೋಮಗಳಾಗಿಯೂ ಸಮಾಧಾನಯಜ್ಞಗಳಾಗಿಯೂ ಅರ್ಪಿಸಿದರು.
6 ಮೋಶೆಯು ಈ ಪಶುಗಳ ರಕ್ತವನ್ನು ತೆಗೆದುಕೊಂಡು ಅದರಲ್ಲಿ ಅರ್ಧಭಾಗವನ್ನು ಬೋಗುಣಿಗಳಲ್ಲಿ ಹಾಕಿದನು; ಉಳಿದ ಅರ್ಧಭಾಗವನ್ನು ಯಜ್ಞವೇದಿಕೆಯ ಮೇಲೆ ಸುರಿದನು.
7 ವಿಶೇಷ ಒಡಂಬಡಿಕೆಯಿಂದ ಬರೆಯಲ್ಪಟ್ಟಿದ್ದ ಸುರುಳಿಯನ್ನು ಮೋಶೆಯು ಎಲ್ಲಾ ಜನರಿಗೆ ಕೇಳುವಂತೆ ಓದಿದನು. ಆಗ ಜನರು, “ಯೆಹೋವನ ಆಜ್ಞೆಗಳನ್ನೆಲ್ಲ ಅನುಸರಿಸಿ ಆತನಿಗೆ ವಿಧೇಯರಾಗಿರುತ್ತೇವೆ” ಅಂದರು.
8 ಆಗ ಮೋಶೆ ಯಜ್ಞಗಳ ರಕ್ತದಿಂದ ತುಂಬಿದ ಬೋಗುಣಿಯನ್ನು ತೆಗೆದುಕೊಂಡು ಅದರಲ್ಲಿದ್ದ ರಕ್ತವನ್ನು ಜನರ ಮೇಲೆ ಚಿಮಿಕಿಸಿ, “ಈ ಸುರುಳಿಯಲ್ಲಿರುವ ವಾಕ್ಯಗಳಿಗನುಸಾರವಾಗಿ ಯೆಹೋವನು ನಿಮ್ಮೊಡನೆ ಒಂದು ವಿಶೇಷ ಒಡಂಬಡಿಕೆಯನ್ನು ಮಾಡಿಕೊಂಡಿದ್ದಾನೆಂಬುದನ್ನು ಈ ರಕ್ತವು ಸೂಚಿಸುತ್ತದೆ” ಎಂದು ಹೇಳಿದನು.
ಯೆಹೂದ್ಯರು ಮತ್ತು ಧರ್ಮಶಾಸ್ತ್ರ
17 “ನಾನು ಯೆಹೂದ್ಯನು” ಎಂದು ಹೇಳಿಕೊಳ್ಳುತ್ತಿರುವ ನಿನ್ನ ವಿಷಯವಾದರೂ ಏನು? ಧರ್ಮಶಾಸ್ತ್ರದಲ್ಲಿ ನಂಬಿಕೆಯಿಟ್ಟು ದೇವರಿಗೆ ಸಮೀಪವಾಗಿರುವುದಾಗಿ ನೀನು ಹೆಮ್ಮೆಪಡುವೆ. 18 ದೇವರ ಚಿತ್ತಕ್ಕನುಸಾರವಾದ ಕಾರ್ಯಗಳನ್ನು ಧರ್ಮಶಾಸ್ತ್ರದಿಂದ ಕಲಿತುಕೊಂಡಿರುವುದಾಗಿ ನೀನು ಹೇಳಿಕೊಳ್ಳುವೆ. 19 ಸರಿಯಾದ ಮಾರ್ಗವನ್ನು ತಿಳಿದಿಲ್ಲದ ಜನರಿಗೆ ಮಾರ್ಗದರ್ಶಕನಾಗಿಯೂ ಕತ್ತಲೆಯಲ್ಲಿರುವ ಜನರಿಗೆ ಬೆಳಕಾಗಿಯೂ ಇರುವುದಾಗಿ ನಿನ್ನ ಕುರಿತು ಭಾವಿಸಿಕೊಂಡಿರುವೆ. 20 ಮೂಢರಿಗೆ ಶಿಕ್ಷಕನೆಂತಲೂ ಕಲಿಯಬೇಕಾದವರಿಗೆ ಉಪಾಧ್ಯಾಯನೆಂತಲೂ ನೀನು ನಿನ್ನ ಬಗ್ಗೆ ಆಲೋಚಿಸಿಕೊಂಡಿರುವೆ. ನಿನ್ನಲ್ಲಿ ಧರ್ಮಶಾಸ್ತ್ರವಿದೆ, ಆದ್ದರಿಂದ ಪ್ರತಿಯೊಂದನ್ನೂ ತಿಳಿದುಕೊಂಡಿರುವುದಾಗಿಯೂ ಎಲ್ಲಾ ಸತ್ಯವನ್ನು ಹೊಂದಿಕೊಂಡಿರುವುದಾಗಿಯೂ ನೀನು ಭಾವಿಸಿಕೊಂಡಿರುವೆ. 21 ನೀನು ಬೇರೆಯವರಿಗೆ ಉಪದೇಶಿಸುವೆ. ಹೀಗಿರಲು ನೀನು ನಿನಗೇ ಉಪದೇಶ ಮಾಡಿಕೊಳ್ಳಬಾರದೇಕೆ? ಕದಿಯಬಾರದೆಂದು ನೀನು ಜನರಿಗೆ ಹೇಳುವೆ, ಆದರೆ ನೀನೇ ಕದಿಯುವೆ. 22 ಜನರು ವ್ಯಭಿಚಾರವೆಂಬ ಪಾಪವನ್ನು ಮಾಡಕೂಡದೆಂದು ನೀನು ಹೇಳುವೆ, ಆದರೆ ನೀನೇ ಆ ಪಾಪಮಾಡಿ ಅಪರಾಧಿಯಾಗಿರುವೆ. ನೀನು ವಿಗ್ರಹಗಳನ್ನು ದ್ವೇಷಿಸುವೆ, ಆದರೆ ನೀನೇ ಅವುಗಳನ್ನು ಗುಡಿಗಳಿಂದ ಕದಿಯುವೆ. 23 ನೀನು ದೇವರ ಧರ್ಮಶಾಸ್ತ್ರದ ಬಗ್ಗೆ ಹೆಮ್ಮೆಪಡುವೆ. ಆದರೆ ಆ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೇವರಿಗೆ ಅವಮಾನ ಮಾಡುವೆ. 24 “ಯೆಹೂದ್ಯರಾದ ನಿಮ್ಮ ದೆಸೆಯಿಂದ ಯೆಹೂದ್ಯರಲ್ಲದ ಜನರು ದೇವರ ಹೆಸರಿಗೆ ವಿರೋಧವಾಗಿ ಮಾತಾಡುತ್ತಾರೆ”(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
25 ನೀನು ಧರ್ಮಶಾಸ್ತ್ರವನ್ನು ಅನುಸರಿಸಿದರೆ ನೀನು ಮಾಡಿಸಿಕೊಂಡ ಸುನ್ನತಿಗೆ ಅರ್ಥವಿದೆ. ಆದರೆ ನೀನು ಧರ್ಮಶಾಸ್ತ್ರವನ್ನು ಮೀರಿ ನಡೆದರೆ ನಿನಗೆ ಸುನ್ನತಿಯಾಗಿಲ್ಲದಂತೆಯೇ ಆಯಿತು. 26 ಯೆಹೂದ್ಯರಲ್ಲದ ಜನರಿಗೆ ಸುನ್ನತಿಯಾಗಿಲ್ಲ, ಆದರೆ ಧರ್ಮಶಾಸ್ತ್ರವು ಹೇಳುವುದನ್ನು ಅವರು ಮಾಡುವುದಾದರೆ, ಅವರು ಸುನ್ನತಿಯನ್ನು ಹೊಂದಿದಂಥವರಾದರು. 27 ಯೆಹೂದ್ಯರಾದ ನಿಮಗೆ ಲಿಖಿತ ಧರ್ಮಶಾಸ್ತ್ರವಿದೆ ಮತ್ತು ಸುನ್ನತಿಯಾಗಿದೆ. ಆದರೆ ನೀವು ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತೀರಿ. ಹೀಗಿರಲು, ದೇಹದಲ್ಲಿ ಸುನ್ನತಿಯನ್ನು ಹೊಂದಿಲ್ಲದಿದ್ದರೂ ಧರ್ಮಶಾಸ್ತ್ರಕ್ಕೆ ವಿಧೇಯರಾಗುವ ಜನರು ನಿಮ್ಮನ್ನು ಅಪರಾಧಿಗಳೆಂದು ತೋರ್ಪಡಿಸುತ್ತಾರೆ.
28 ಕೇವಲ ಬಾಹ್ಯ ದೇಹದಲ್ಲಿ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ. ಕೇವಲ ದೇಹದ ಹೊರಭಾಗದ ಸುನ್ನತಿಯು ನಿಜವಾದ ಸುನ್ನತಿಯಲ್ಲ. 29 ಅಂತರಂಗದಲ್ಲಿ ಯೆಹೂದ್ಯನಾಗಿರುವವನು ಮಾತ್ರ ನಿಜವಾದ ಯೆಹೂದ್ಯನು. ಹೃದಯದಲ್ಲಿ ಆದ ಸುನ್ನತಿಯೇ ನಿಜವಾದ ಸುನ್ನತಿ. ಈ ಸುನ್ನತಿಯಾದದ್ದು ಪವಿತ್ರಾತ್ಮನಿಂದಲೇ ಹೊರತು ಲಿಖಿತ ಧರ್ಮಶಾಸ್ತ್ರದಿಂದಲ್ಲ. ಪವಿತ್ರಾತ್ಮನಿಂದ ಹೃದಯದಲ್ಲಿ ಸುನ್ನತಿ ಹೊಂದಿರುವ ವ್ಯಕ್ತಿಯು ಹೊಗಳಿಕೆಯನ್ನು ಪಡೆಯುವುದು ದೇವರಿಂದಲೇ ಹೊರತು ಮನುಷ್ಯರಿಂದಲ್ಲ.
Kannada Holy Bible: Easy-to-Read Version. All rights reserved. © 1997 Bible League International