Revised Common Lectionary (Complementary)
7 ದೇವರು ಹೀಗೆನ್ನುತ್ತಾನೆ: “ನನ್ನ ಜನರೇ, ಇಸ್ರೇಲರೇ, ನನಗೆ ಕಿವಿಗೊಡಿರಿ!
ನಾನು ನಿಮಗೆ ವಿರುದ್ಧವಾಗಿ ಸಾಕ್ಷಿ ಹೇಳುವೆನು.
ದೇವರಾದ ನಾನೇ ನಿಮ್ಮ ದೇವರು!
8 ನಿಮ್ಮ ಯಜ್ಞಗಳ ಬಗ್ಗೆ ನಾನು ದೂರು ಹೇಳುತ್ತಿಲ್ಲ.
ಇಸ್ರೇಲರಾದ ನೀವು ನನಗೆ ಸರ್ವಾಂಗಹೋಮಗಳನ್ನು ನಿತ್ಯವೂ ಅರ್ಪಿಸುತ್ತಲೇ ಇದ್ದೀರಿ.
9 ನಿಮ್ಮಮನೆಗಳಿಂದ ನಾನು ಹೋರಿಗಳನ್ನು ತೆಗೆದುಕೊಳ್ಳುವುದಿಲ್ಲ;
ನಿಮ್ಮ ದೊಡ್ಡಿಗಳಿಂದ ಆಡುಗಳನ್ನು ತೆಗೆದುಕೊಳ್ಳುವುದಿಲ್ಲ.
10 ನನಗೆ ಆ ಪಶುಗಳ ಅಗತ್ಯವಿಲ್ಲ.
ಕಾಡಿನಲ್ಲಿರುವ ಸರ್ವ ಮೃಗಗಳೂ ಗುಡ್ಡಗಳ ಮೇಲಿರುವ ಸಾವಿರಾರು ಪಶುಗಳೂ ನನ್ನವೇ.
11 ಅತ್ಯಂತ ಉನ್ನತವಾದ ಬೆಟ್ಟಗಳ ಮೇಲಿರುವ ಪಕ್ಷಿಗಳೆಲ್ಲಾ ನನಗೆ ಗೊತ್ತುಂಟು.
ಬೆಟ್ಟಗಳ ಮೇಲೆ ಚಲಿಸುವ ಜೀವಜಂತುಗಳೆಲ್ಲಾ ನನ್ನವೇ.
12 ನನಗೆ ಹಸಿವೆಯಾಗಿದ್ದರೆ, ಆಹಾರಕ್ಕಾಗಿ ನಿಮ್ಮನ್ನು ಕೇಳಬೇಕಿಲ್ಲ.
ಲೋಕವೂ ಅದರಲ್ಲಿರುವ ಸಮಸ್ತವೂ ನನ್ನದೇ.
13 ನಾನು ಹೋರಿಗಳ ಮಾಂಸವನ್ನು ತಿನ್ನುವೆನೇ?
ನಾನು ಆಡುಗಳ ರಕ್ತವನ್ನು ಕುಡಿಯುವೆನೇ?”
14 ಕೃತಜ್ಞತಾಯಜ್ಞಗಳನ್ನು ದೇವರಿಗೆ ಅರ್ಪಿಸಿರಿ.
ನೀವು ಮಾಡಿಕೊಂಡ ಹರಕೆಗಳನ್ನು ಮಹೋನ್ನತನಿಗೆ ಸಲ್ಲಿಸಿರಿ.
15 ದೇವರು ಹೀಗೆನ್ನುತ್ತಾನೆ: “ಆಪತ್ಕಾಲಗಳಲ್ಲಿ ನನಗೆ ಮೊರೆಯಿಡಿರಿ!
ನಾನು ನಿಮಗೆ ಸಹಾಯ ಮಾಡುವೆನು, ಆಗ ನೀವು ನನ್ನನ್ನು ಸನ್ಮಾನಿಸುವಿರಿ.”
40 ನಾವು ಏನು ಮಾಡಿದ್ದೇವೆ ಎಂಬುದನ್ನು ಪರಿಶೀಲಿಸಿ ನೋಡೋಣ.
ಬಳಿಕ ಯೆಹೋವನಿಗೆ ಅಭಿಮುಖರಾಗೋಣ.
41 ಪರಲೋಕದ ದೇವರಿಗೆ ನಮ್ಮ ಹೃದಯಗಳನ್ನೂ
ಕೈಗಳನ್ನೂ ಎತ್ತಿಹಿಡಿಯೋಣ.
42 “ನಾವು ದಂಗೆ ಎದ್ದಿದ್ದೇವೆ ಮತ್ತು ಅವಿಧೇಯರಾಗಿದ್ದೇವೆ.
ಆದ್ದರಿಂದ ನೀನು ನಮ್ಮನ್ನು ಕ್ಷಮಿಸಿಲ್ಲ.
43 ನೀನು ನಮಗೆ ನಿನ್ನ ಕೋಪವನ್ನು ಹೊದಿಸಿ ನಮ್ಮನ್ನು ಓಡಿಸಿಬಿಟ್ಟೆ.
ನೀನು ನಮ್ಮನ್ನು ನಿಷ್ಕರುಣೆಯಿಂದ ಕೊಂದುಹಾಕಿದೆ!
44 ನೀನು ನಿನಗೆ ಮೋಡಗಳನ್ನು ಹೊದಿಸಿಕೊಂಡು
ನಮ್ಮ ಯಾವ ಪ್ರಾರ್ಥನೆಯೂ ನಿನ್ನ ಬಳಿಗೆ ಬಾರದಂತೆ ಮಾಡಿದೆ.
45 ನೀನು ನಮ್ಮನ್ನು ಇತರ ಜನಾಂಗಗಳಿಗೆ ಕಸದಂತೆಯೂ
ಹೊಲಸಿನಂತೆಯೂ ಮಾಡಿದೆ.
46 ನಮ್ಮ ಶತ್ರುಗಳೆಲ್ಲಾ
ನಮ್ಮೊಂದಿಗೆ ಕೋಪದಿಂದ ಮಾತಾಡುತ್ತಾರೆ.
47 ನಾವು ಭಯಗೊಂಡಿದ್ದೇವೆ.
ನಾವು ಗುಂಡಿಯೊಳಗೆ ಬಿದ್ದಿದ್ದೇವೆ.
ನಮಗೆ ಬಹಳವಾಗಿ ನೋವಾಗಿದೆ!
ನಾವು ಮುರಿದುಹೋದವರಾಗಿದ್ದೇವೆ!”
48 ನನ್ನ ಕಣ್ಣೀರು ತೊರೆಗಳಂತೆ ಹರಿಯುತ್ತಿದೆ!
ನನ್ನ ಜನರು ನಾಶವಾದ ಕಾರಣ ನಾನು ಗೋಳಾಡುತ್ತಿರುವೆ!
49 ನನ್ನ ಕಣ್ಣೀರು ಸತತವಾಗಿ ಹರಿಯುತ್ತಿದೆ!
ನಾನು ಗೋಳಾಡುತ್ತಲೇ ಇರುವೆನು!
50 ಯೆಹೋವನೇ, ಕೆಳಗಿರುವ ನಮ್ಮನ್ನು
ನೀನು ಬಗ್ಗಿ ನೋಡುವತನಕ ನಾನು ಗೋಳಾಡುತ್ತಲೇ ಇರುವೆನು!
ನೀನು ಪರಲೋಕದಿಂದ ನಮ್ಮನ್ನು ನೋಡುವತನಕ
ನಾನು ಗೋಳಾಡುತ್ತಲೇ ಇರುವೆನು.
51 ನನ್ನ ಪಟ್ಟಣದ ಯುವತಿಯರಿಗೆ ಸಂಭವಿಸಿದ್ದನ್ನು
ನಾನು ನೋಡುವಾಗಲೆಲ್ಲ ನನ್ನ ಕಣ್ಣುಗಳು ನನ್ನನ್ನು ದುಃಖಗೊಳಿಸುತ್ತವೆ.
52 ನಿಷ್ಕಾರಣವಾಗಿ ಜನರು ನನ್ನ ವೈರಿಗಳಾಗಿದ್ದು ನನ್ನನ್ನು ಪಕ್ಷಿಯಂತೆ ಬೇಟೆಯಾಡಿದರು.
53 ನನ್ನ ಪ್ರಾಣವನ್ನು ಒಂದು ಗುಂಡಿಯಲ್ಲಿ ಕೊನೆಗಾಣಿಸಲು ಅವರು ಪ್ರಯತ್ನಿಸಿದರು.
ಅವರು ನನಗೆ ಕಲ್ಲುಗಳನ್ನು ತೂರಿದರು.
54 ನೀರು ನನ್ನ ತಲೆಯ ಮೇಲೆ ಏರಿತು.
“ನಾನು ಸತ್ತುಹೋಗುತ್ತೇನೆ” ಎಂದುಕೊಂಡೆನು.
55 ಯೆಹೋವನೇ, ಗುಂಡಿಯ ತಳದಿಂದ
ನಾನು ನಿನ್ನ ಹೆಸರೆತ್ತಿ ಪ್ರಾರ್ಥಿಸಿದೆನು.
56 ನೀನು ನನ್ನ ಸ್ವರವನ್ನು ಕೇಳಿದೆ.
ನೀನು ನಿನ್ನ ಕಿವಿಗಳನ್ನು ಮುಚ್ಚಿಕೊಳ್ಳಲಿಲ್ಲ;
ನಿನ್ನನ್ನು ರಕ್ಷಿಸುವುದಿಲ್ಲ ಎಂದು ಹೇಳಲಿಲ್ಲ.
57 ನಾನು ನಿನ್ನನ್ನು ಕರೆದಾಗ, ನೀನು ಸಮೀಪಕ್ಕೆ ಬಂದು,
“ಭಯಪಡದಿರು” ಎಂದು ಹೇಳಿದೆ.
58 ಯೆಹೋವನೇ, ನೀನು ನನ್ನ ಪರವಾಗಿ ಹೋರಾಡಿದೆ.
ನನ್ನ ಪ್ರಾಣವನ್ನು ರಕ್ಷಿಸಿದೆ.
ಮಾಲ್ಟ ದ್ವೀಪದಲ್ಲಿ ಪೌಲನು
28 ನಾವು ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ ಅದು ಮಾಲ್ಟ ದ್ವೀಪವೆಂದು ನಮಗೆ ತಿಳಿಯಿತು. 2 ಆಗ ಮಳೆಯು ಸುರಿಯುತ್ತಿತ್ತು ಮತ್ತು ತುಂಬ ಚಳಿಯಿತ್ತು. ಆದರೆ ಅಲ್ಲಿನ ಜನರು ನಮಗೆ ವಿಶೇಷವಾದ ಕರುಣೆತೋರಿ ನಮಗಾಗಿ ಬೆಂಕಿಹೊತ್ತಿಸಿ ನಮ್ಮೆಲ್ಲರನ್ನು ಆಹ್ವಾನಿಸಿದರು. 3 ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ಅದನ್ನು ಬೆಂಕಿಯ ಮೇಲೆ ಹಾಕುತ್ತಿರಲು ಅದರ ಕಾವಿನ ದೆಸೆಯಿಂದ ವಿಷದ ಹಾವೊಂದು ಹೊರಗೆ ಬಂದು ಪೌಲನ ಕೈಗೆ ಸುತ್ತಿಕೊಂಡಿತು. 4 ಪೌಲನ ಕೈಗೆ ಸುತ್ತಿಕೊಂಡಿದ್ದ ಆ ಹಾವನ್ನು ಅಲ್ಲಿನ ಜನರು ನೋಡಿ, “ಇವನು ಕೊಲೆಗಾರನೇ ಸರಿ! ಇವನು ಸಮುದ್ರದಲ್ಲಿ ಸಾಯದಿದ್ದರೂ ಇವನು ಬದುಕುವುದು ನ್ಯಾಯಕ್ಕೆ[a] ಇಷ್ಟವಿಲ್ಲ” ಎಂದು ಹೇಳಿದರು.
5 ಆದರೆ ಪೌಲನು ಆ ಹಾವನ್ನು ಬೆಂಕಿಯೊಳಕ್ಕೆ ಝಾಡಿಸಿ ಬಿಟ್ಟನು. ಪೌಲನಿಗೆ ಯಾವ ಹಾನಿಯೂ ಆಗಲಿಲ್ಲ. 6 ಪೌಲನ ಮೈ ಊದಿಕೊಂಡು ಇದ್ದಕ್ಕಿದ್ದಂತೆ ಸತ್ತುಬೀಳುತ್ತಾನೆ ಎಂದು ಅವರು ತಿಳಿದುಕೊಂಡಿದ್ದರು. ಅವರು ಪೌಲನನ್ನೇ ಬಹು ಹೊತ್ತಿನವರೆಗೆ ದಿಟ್ಟಿಸಿ ನೋಡುತ್ತಿದ್ದರೂ ಪೌಲನಿಗೆ ಯಾವ ಹಾನಿಯೂ ಆಗಲಿಲ್ಲ. ಆದ್ದರಿಂದ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿ, “ಇವನೊಬ್ಬ ದೇವರು!” ಎಂದು ಹೇಳಿದರು.
7 ಆ ಸ್ಥಳದ ಸುತ್ತಮುತ್ತ ಕೆಲವು ಹೊಲಗಳು ಇದ್ದವು. ಆ ದ್ವೀಪದ ಪ್ರಮುಖ ವ್ಯಕ್ತಿಯೊಬ್ಬನಿಗೆ ಆ ಹೊಲಗಳು ಸೇರಿದ್ದವು. ಅವನ ಹೆಸರು ಪೊಪ್ಲಿಯ. ಅವನು ನಮ್ಮನ್ನು ತನ್ನ ಮನೆಗೆ ಸ್ವಾಗತಿಸಿದನು. ಪೊಪ್ಲಿಯನು ಕನಿಕರ ತೋರಿದನು. ನಾವು ಅವನ ಮನೆಯಲ್ಲಿ ಮೂರು ದಿನವಿದ್ದೆವು. 8 ಪೊಪ್ಲಿಯನ ತಂದೆಯು ಬಹಳ ಅಸ್ವಸ್ಥನಾಗಿದ್ದನು. ಅವನಿಗೆ ಜ್ವರವಿತ್ತು ಮತ್ತು ರಕ್ತಭೇದಿಯಾಗುತ್ತಿತ್ತು. ಪೌಲನು ಅವನ ಬಳಿಗೆ ಹೋಗಿ ಅವನಿಗಾಗಿ ಪ್ರಾರ್ಥಿಸಿ ಅವನ ಮೇಲೆ ತನ್ನ ಕೈಗಳನ್ನಿಟ್ಟು ಗುಣಪಡಿಸಿದನು. 9 ಇದಾದ ನಂತರ ದ್ವೀಪದಲ್ಲಿದ್ದ ಇತರ ರೋಗಿಗಳೆಲ್ಲ ಪೌಲನ ಬಳಿಗೆ ಬಂದರು. ಪೌಲನು ಅವರನ್ನು ಸಹ ಗುಣಪಡಿಸಿದನು.
10-11 ಆ ದ್ವೀಪ ನಿವಾಸಿಗಳು ನಮ್ಮನ್ನು ಬಹಳವಾಗಿ ಸನ್ಮಾನಿಸಿದರು. ನಾವು ಅಲ್ಲಿ ಮೂರು ತಿಂಗಳಿದ್ದೆವು. ನಾವು ಅಲ್ಲಿಂದ ಹೊರಡಲು ಸಿದ್ಧರಾದಾಗ ಅವರು ನಮಗೆ ಬೇಕಾದ ವಸ್ತುಗಳನ್ನು ಕೊಟ್ಟರು.
ರೋಮಿಗೆ ಪೌಲನ ಪ್ರಯಾಣ
ಅಲೆಕ್ಸಾಂಡ್ರಿಯ ಪಟ್ಟಣದಿಂದ ಬಂದ ಹಡಗೊಂದನ್ನು ನಾವು ಹತ್ತಿದೆವು. ಆ ಹಡಗು ಚಳಿಗಾಲದ ನಿಮಿತ್ತ ಮಾಲ್ಟ ದ್ವೀಪದಲ್ಲೇ ತಂಗಿತ್ತು. ಆ ಹಡಗಿನ ಮುಂಭಾಗದಲ್ಲಿ ಎರಡು ಗ್ರೀಕ್ ದೇವತೆಗಳ ಚಿಹ್ನೆಯಿತ್ತು.
Kannada Holy Bible: Easy-to-Read Version. All rights reserved. © 1997 Bible League International