Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಮೀಕ 3:5-12

ಸುಳ್ಳುಪ್ರವಾದಿಗಳು

ಕೆಲವು ಸುಳ್ಳುಪ್ರವಾದಿಗಳೆದ್ದು ಯೆಹೋವನ ಜನರಿಗೆ ಸುಳ್ಳನ್ನು ತಿಳಿಸುತ್ತಾರೆ. ಅಂಥವರ ಬಗ್ಗೆ ಯೆಹೋವನು ಹೇಳುವುದೇನೆಂದರೆ,

“ಈ ಪ್ರವಾದಿಗಳ ಮಾತುಗಳು ಅವರ ಹೊಟ್ಟೆಗಳನ್ನವಲಂಬಿಸಿವೆ.
ಜನರು ಅವರಿಗೆ ಆಹಾರ ಕೊಟ್ಟರೆ ಶಾಂತಿಯನ್ನು ವಾಗ್ದಾನ ಮಾಡುತ್ತಾರೆ.
    ಜನರು ಅವರಿಗೆ ಆಹಾರ ಕೊಡದಿದ್ದರೆ ಯುದ್ಧವನ್ನು ವಾಗ್ದಾನ ಮಾಡುತ್ತಾರೆ.

“ಹೀಗಿರುವದರಿಂದ ನಿಮಗೆ ರಾತ್ರಿಯಂತಿರುವದು.
    ನಿಮಗೆ ದರ್ಶನಗಳಾಗುವದಿಲ್ಲ.
ಮುಂದೆ ಏನು ಸಂಭವಿಸುತ್ತದೆ ಎಂಬುದನ್ನು ನೀವು ನೋಡುವದಿಲ್ಲ.
    ಆದ್ದರಿಂದ ನಿಮಗೆ ಕತ್ತಲೆಯಂತಿದೆ.
ಪ್ರವಾದಿಗಳಿಗೆ ಸೂರ್ಯನು ಮುಳುಗಿರುತ್ತಾನೆ.
    ಅವರಿಗೆ ಮುಂದೆ ಆಗುವಂಥದು ಕಾಣಿಸುವುದಿಲ್ಲ.
    ಆದ್ದರಿಂದ ಅವರಿಗೆ ಎಲ್ಲಾ ಕತ್ತಲೆಯಾಗಿದೆ.
ದೇವದರ್ಶಿಗಳು ನಾಚಿಕೆಗೊಂಡಿದ್ದಾರೆ.
    ಭವಿಷ್ಯ ಹೇಳುವವರು ನಾಚಿಕೆಗೊಳಗಾಗಿದ್ದಾರೆ.
ಯಾಕೆಂದರೆ ದೇವರು ಅವರ ಕೂಡ ಮಾತನಾಡುವದನ್ನು ನಿಲ್ಲಿಸಿರುವದರಿಂದ
    ಅವರು ಏನನ್ನೂ ಹೇಳುವದಿಲ್ಲ.”

ಮೀಕನು ದೇವರ ನಂಬಿಗಸ್ತ ಪ್ರವಾದಿ

ಯೆಹೋವನ ಆತ್ಮನು ನನ್ನಲ್ಲಿ ಅಧಿಕಾರವನ್ನೂ,
    ಒಳ್ಳೆಯತನವನ್ನೂ ಶಕ್ತಿಯನ್ನೂ ತುಂಬಿದ್ದಾನೆ.
ಯಾಕೆಂದರೆ ಯಾಕೋಬನ ಅಪರಾಧಗಳನ್ನು ಅವನಿಗೆ ತಿಳಿಸುವುದಕ್ಕಾಗಿಯಷ್ಟೇ,
    ಇಸ್ರೇಲಿನ ಪಾಪಗಳನ್ನು ಅವನಿಗೆ ಹೇಳುವುದಕ್ಕಾಗಿಯಷ್ಟೇ.

ಇಸ್ರೇಲಿನ ನಾಯಕರು ಇದಕ್ಕೆ ಕಾರಣ

ಯಾಕೋಬಿನ ನಾಯಕರೇ, ಇಸ್ರೇಲಿನ ಪ್ರಧಾನರೇ, ನನಗೆ ಕಿವಿಗೊಡಿರಿ!
    ಸರಿಯಾದ ಜೀವಿತವನ್ನು ನೀವು ದ್ವೇಷಿಸುತ್ತೀರಿ.
ನೆಟ್ಟಗಿರುವದನ್ನು ಡೊಂಕಾಗಿ ನೀವು ಮಾಡುವಿರಿ.
10 ಜನರನ್ನು ಕೊಲೆ ಮಾಡಿ ಚೀಯೋನನ್ನು ಕಟ್ಟುತ್ತೀರಿ.
    ಜನರನ್ನು ಮೋಸಮಾಡಿ ಜೆರುಸಲೇಮನ್ನು ಕಟ್ಟುತ್ತೀರಿ.
11 ಜೆರುಸಲೇಮಿನ ನ್ಯಾಯಾಧೀಶರು ಲಂಚ ತೆಗೆದುಕೊಂಡು
    ಅನ್ಯಾಯವಾದ ತೀರ್ಪುಕೊಡುವರು.
ಜನರಿಗೆ ಬೋಧಿಸುವ ಮೊದಲು ಜೆರುಸಲೇಮಿನ ಯಾಜಕರು
    ಹಣವನ್ನು ವಸೂಲಿ ಮಾಡುವರು.
ಜನರು ತಮ್ಮ ಭವಿಷ್ಯದ ಬಗ್ಗೆ ಕೇಳಲು
    ಪ್ರವಾದಿಗಳಿಗೆ ಮುಂಗಡವಾಗಿ ಹಣ ಕೊಡುವರು.
ಆಮೇಲೆ ಆ ನಾಯಕರು, “ಯೆಹೋವನು ನಮ್ಮಲ್ಲಿ ವಾಸಮಾಡುತ್ತಿದ್ದಾನೆ.
    ಆದ್ದರಿಂದ ನಮಗೆ ಕೆಟ್ಟದ್ದು ಏನೂ ಸಂಭವಿಸುವದಿಲ್ಲ” ಎಂದು ಹೇಳುವರು.

12 ನಾಯಕರೇ, ನಿಮ್ಮಿಂದಾಗಿ ಚೀಯೋನ್ ನಾಶವಾಗುವದು.
    ನೇಗಿಲಿನಿಂದ ಉತ್ತಲ್ಪಟ್ಟ ಹೊಲದಂತೆ ಅದು ಇರುವದು.
ಜೆರುಸಲೇಮ್ ಕಲ್ಲಿನ ರಾಶಿಯಾಗುವದು.
    ಆಲಯದ ಗುಡ್ಡವು ಬರಿದಾದ ಬೆಟ್ಟವಾಗುವುದು.
    ಅದರ ಮೇಲೆ ಪೊದೆಗಳು ಹುಲುಸಾಗಿ ಬೆಳೆದುಕೊಳ್ಳುವವು.

ಕೀರ್ತನೆಗಳು 43

43 ದೇವರೇ, ನನ್ನನ್ನು ನಿರಪರಾಧಿಯೆಂದು ತೀರ್ಪು ನೀಡು.
ವ್ಯಾಜ್ಯದಲ್ಲಿ ನನ್ನ ಪರವಾಗಿಯೂ ಅನ್ಯ ಜನಾಂಗಗಳಿಗೆ ವಿರೋಧವಾಗಿಯೂ ವಾದಿಸು.
ಸುಳ್ಳುಗಾರರಿಂದಲೂ ಕೆಡುಕರಿಂದಲೂ ನನ್ನನ್ನು ರಕ್ಷಿಸು.
ದೇವರೇ, ನೀನೇ ನನಗೆ ಆಶ್ರಯಸ್ಥಾನವಾಗಿರುವೆ!
    ನೀನು ನನ್ನನ್ನು ಯಾಕೆ ಕೈಬಿಟ್ಟಿರುವೆ?
ಶತ್ರು ಬಾಧೆಯಿಂದ ನಾನೇಕೆ
    ದುಃಖಿಸುತ್ತಾ ಸಂಕಟಪಡಬೇಕು?
ನಿನ್ನ ಬೆಳಕೂ ಸತ್ಯವೂ ನನ್ನ ಮೇಲೆ ಪ್ರಕಾಶಿಸಲಿ.
    ನಿನ್ನ ಬೆಳಕೂ ಸತ್ಯವೂ ನನಗೆ ಮಾರ್ಗದರ್ಶನ ನೀಡಲಿ.
    ಅವು ನನ್ನನ್ನು ನಿನ್ನ ಪವಿತ್ರ ಪರ್ವತಕ್ಕೂ ನಿನ್ನ ನಿವಾಸಕ್ಕೂ ನಡೆಸುತ್ತವೆ.
ನನ್ನ ದೇವರೇ, ನಿನ್ನ ಯಜ್ಞವೇದಿಕೆಯ ಬಳಿಗೆ ಬರುವೆನು.
    ನನ್ನ ಸಂತೋಷಕ್ಕೆ ನೀನೇ ಆಧಾರನಾಗಿರುವೆ.
ದೇವರೇ, ನನ್ನ ದೇವರೇ,
    ಹಾರ್ಪ್‌ವಾದ್ಯವನ್ನು ಬಾರಿಸುತ್ತಾ ನಿನ್ನನ್ನು ಕೊಂಡಾಡುವೆನು.

ನನ್ನ ಆತ್ಮವೇ, ನೀನು ವ್ಯಸನದಿಂದಿರುವುದೇಕೆ?
    ಗಲಿಬಿಲಿಗೊಂಡಿರುವುದೇಕೆ?
ದೇವರನ್ನು ನಿರೀಕ್ಷಿಸು;
    ನನ್ನ ರಕ್ಷಕನೂ ದೇವರೂ ಆಗಿರುವ ಆತನನ್ನು ಸ್ತುತಿಸುತ್ತಲೇ ಇರುವೆನು.

1 ಥೆಸಲೋನಿಕದವರಿಗೆ 2:9-13

ಸಹೋದರ ಸಹೋದರಿಯರೇ, ನಾವು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ನಿಮ್ಮ ನೆನಪಿನಲ್ಲೇ ಇವೆ. ನಿಮಗೆ ದೇವರ ಸುವಾರ್ತೆಯನ್ನು ಉಪದೇಶಿಸಿದಾಗ ನೀವು ನಮಗೆ ವೇತನ ನೀಡುವ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಹಗಲಿರುಳು ದುಡಿದು ಜೀವನ ಸಾಗಿಸಿದೆವು.

10 ವಿಶ್ವಾಸಿಗಳಾದ ನಿಮ್ಮೊಡನೆ ನಾವಿದ್ದಾಗ ತಪ್ಪಿಲ್ಲದವರಾಗಿಯೂ ಪರಿಶುದ್ಧರಾಗಿಯೂ ಮತ್ತು ನಿರ್ದೋಷಿಗಳಾಗಿಯೂ ಜೀವಿಸಿದ್ದೆವು. ಇದು ನಿಜವೆಂಬುದು ನಿಮಗೂ ತಿಳಿದಿದೆ ಮತ್ತು ದೇವರಿಗೂ ತಿಳಿದಿದೆ. 11 ತಂದೆಯು ತನ್ನ ಸ್ವಂತ ಮಕ್ಕಳೊಡನೆ ನಡೆದುಕೊಳ್ಳುವಂತೆ ನಿಮ್ಮಲ್ಲಿ ಪ್ರತಿಯೊಬ್ಬರೊಡನೆಯೂ ನಡೆದುಕೊಂಡೆವೆಂಬುದು ನಿಮಗೆ ತಿಳಿದಿದೆ. 12 ನಿಮ್ಮನ್ನು ಬಲಗೊಳಿಸಿದೆವು ಮತ್ತು ಸಂತೈಸಿದೆವು. ನಿಮ್ಮನ್ನು ತನ್ನ ರಾಜ್ಯಕ್ಕೂ ಮಹಿಮೆಗೂ ಕರೆದ ದೇವರಿಗಾಗಿ ಯೋಗ್ಯವಾದ ರೀತಿಯಲ್ಲಿ ಜೀವಿಸಿರಿ ಎಂದು ನಾವು ನಿಮಗೆ ತಿಳಿಸಿದೆವು.

13 ನೀವು ದೇವರ ಸಂದೇಶವನ್ನು ಸ್ವೀಕರಿಸಿಕೊಂಡದ್ದಕ್ಕಾಗಿ ದೇವರಿಗೆ ಯಾವಾಗಲೂ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ. ನೀವು ಆ ಸಂದೇಶವನ್ನು ನಮ್ಮಿಂದ ಕೇಳಿ, ಅದನ್ನು ದೇವರ ವಾಕ್ಯದಂತೆ ಒಪ್ಪಿಕೊಂಡಿರೇ ಹೊರತು ಮಾನವನ ವಾಕ್ಯಗಳೆಂದಲ್ಲ. ಅದು ನಿಜವಾಗಿಯೂ ದೇವರ ಸಂದೇಶ. ಆ ಸಂದೇಶವು ನಂಬುವವರಾದ ನಿಮ್ಮಲ್ಲಿ ಕಾರ್ಯಮಾಡುತ್ತದೆ.

ಮತ್ತಾಯ 23:1-12

ಯೇಸು ಧಾರ್ಮಿಕ ನಾಯಕರನ್ನು ಖಂಡಿಸಿದನು

(ಮಾರ್ಕ 12:38-40; ಲೂಕ 11:37-52; 20:45-47)

23 ಬಳಿಕ ಯೇಸು ನೆರೆದಿದ್ದ ಜನರೊಂದಿಗೂ ತನ್ನ ಶಿಷ್ಯರೊಂದಿಗೂ ಮಾತಾಡಿ ಹೇಳಿದ್ದೇನೆಂದರೆ: “ಮೋಶೆಯ ಧರ್ಮಶಾಸ್ತ್ರ ಹೇಳುವುದನ್ನು ನಿಮಗೆ ತಿಳಿಸಲು ಧರ್ಮೋಪದೇಶಕರಿಗೂ ಫರಿಸಾಯರಿಗೂ ಅಧಿಕಾರವಿದೆ. ಆದ್ದರಿಂದ ನೀವು ಅವರಿಗೆ ವಿಧೇಯರಾಗಿರಬೇಕು ಮತ್ತು ಅವರು ಹೇಳಿದ್ದನ್ನೆಲ್ಲ ಕೈಕೊಂಡು ನಡೆಯಬೇಕು. ಆದರೆ ಅವರ ಜೀವಿತಗಳು ಅನುಸರಿಸತಕ್ಕ ಒಳ್ಳೆಯ ಮಾದರಿ ಜೀವಿತಗಳಲ್ಲ. ಅವರು ನಿಮಗೆ ತಿಳಿಸುವಂಥ ಸಂಗತಿಗಳನ್ನು ತಾವೇ ಅನುಸರಿಸುವುದಿಲ್ಲ. ಅವರು ಬೇರೆಯವರಿಗೆ ಕಷ್ಟಕರವಾದ ನಿಯಮಗಳನ್ನು ಕೊಟ್ಟು ಅವುಗಳಿಗೆ ವಿಧೇಯರಾಗಬೇಕೆಂದು ಒತ್ತಾಯ ಮಾಡುತ್ತಾರೆ. ತಾವಾದರೋ ಆ ನಿಯಮಗಳಲ್ಲಿ ಯಾವದನ್ನಾದರೂ ಅನುಸರಿಸಲು ಪ್ರಯತ್ನಿಸುವುದಿಲ್ಲ.

“ತಮ್ಮನ್ನು ಬೇರೆ ಜನರು ನೋಡಲಿ ಎಂಬ ಒಂದೇ ಉದ್ದೇಶದಿಂದ ಅವರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ಪವಿತ್ರ ಗ್ರಂಥಗಳು ತುಂಬಿರುವ ವಿಶೇಷವಾದ ಚರ್ಮದ ಚೀಲಗಳನ್ನು ಅವರು ಕಟ್ಟಿಕೊಂಡಿರುತ್ತಾರೆ. ಅವರು ಈ ಚೀಲಗಳನ್ನು ಇನ್ನೂ ಹೆಚ್ಚುಹೆಚ್ಚು ದೊಡ್ಡದನ್ನಾಗಿ ಮಾಡುತ್ತಾರೆ. ಜನರು ನೋಡಲಿ ಎಂದು ಅವರು ತಮ್ಮ ವಿಶೇಷ ಪ್ರಾರ್ಥನೆಯ ಉಡುಪುಗಳನ್ನು ಮತ್ತಷ್ಟು ಉದ್ದ ಮಾಡುತ್ತಾರೆ. ಆ ಫರಿಸಾಯರು ಮತ್ತು ಧರ್ಮೋಪದೇಶಕರು ಔತಣಗಳಲ್ಲಿ ಹಾಗೂ ಸಭಾಮಂದಿರಗಳಲ್ಲಿ ಅತಿ ಪ್ರಾಮುಖ್ಯವಾದ ಸ್ಥಾನಗಳನ್ನು ಅಪೇಕ್ಷಿಸುತ್ತಾರೆ. ಮಾರುಕಟ್ಟೆಗಳಲ್ಲಿ ಜನರು ತಮಗೆ ಮರ್ಯಾದೆ ತೋರಿಸಬೇಕೆಂದು ಆಶಿಸುತ್ತಾರೆ; ಜನರಿಂದ ಉಪದೇಶಕರೆನಿಸಿಕೊಳ್ಳಲು ಇಷ್ಟಪಡುತ್ತಾರೆ.

“ಆದರೆ ನೀವು ಉಪದೇಶಕರೆನಿಸಿಕೊಳ್ಳಬೇಡಿ. ನೀವೆಲ್ಲರೂ ಸಹೋದರಸಹೋದರಿಯರು. ನಿಮಗೆ ಒಬ್ಬನೇ ಉಪದೇಶಕನು. ಈ ಲೋಕದಲ್ಲಿ ಯಾರನ್ನೂ ‘ತಂದೆ’ ಎಂದು ಕರೆಯಬೇಡಿ. ನಿಮಗೆ ಒಬ್ಬನೇ ತಂದೆ. ಆತನು ಪರಲೋಕದಲ್ಲಿದ್ದಾನೆ. 10 ‘ಗುರು’ವೆಂದೂ ಕರೆಸಿಕೊಳ್ಳಬೇಡಿ. ನಿಮಗೆ ಕ್ರಿಸ್ತನೊಬ್ಬನೇ ಗುರು. 11 ಸೇವಕನಂತೆ ನಿಮಗೆ ಸೇವೆ ಮಾಡುವವನೇ ನಿಮ್ಮಲ್ಲಿ ಅತ್ಯಂತ ದೊಡ್ಡವನಾಗಿದ್ದಾನೆ. 12 ತಾನು ಬೇರೆಯವರಿಗಿಂತ ಉತ್ತಮನೆಂದು ತನ್ನನ್ನು ಭಾವಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಉನ್ನತಿಗೇರಿಸಲ್ಪಡುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International