Revised Common Lectionary (Complementary)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
2 ನನ್ನ ಒಡೆಯನೇ, ನನಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸು.
3 ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
ಒಬ್ಬನೂ ಜೀವಂತವಾಗಿ ಉಳಿಯಲಾರ.
4 ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.
5 ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
6 ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
7 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
8 ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.
13 ಜೆರುಸಲೇಮಿನಲ್ಲಿ ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಲು ಎಷ್ಟೋ ಮಂದಿ ಜೆರುಸಲೇಮಿಗೆ ಎರಡನೆಯ ತಿಂಗಳಲ್ಲಿ ಬಂದರು. ಅದು ಮಹಾ ಜನಸಮೂಹವಾಗಿತ್ತು. 14 ಆ ಜನರು ಜೆರುಸಲೇಮಿನೊಳಗಿದ್ದ ಅನ್ಯ ದೇವರುಗಳಿಗಾಗಿ ಮಾಡಿದ್ದ ಯಜ್ಞವೇದಿಕೆಗಳನ್ನು ಕೆಡವಿಹಾಕಿದರು; ವಿಗ್ರಹಗಳಿಗೆ ಧೂಪಸಮರ್ಪಣೆಗಾಗಿ ಮಾಡಿದ ವೇದಿಕೆಗಳನ್ನೂ ಹಾಳುಗೆಡವಿದರು. ಅವುಗಳನ್ನೆಲ್ಲಾ ಕಿದ್ರೋನ್ ಕಣಿವೆಯಲ್ಲಿ ಬಿಸಾಡಿದರು. 15 ಆ ಬಳಿಕ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ದರು. ಯಾಜಕರೂ ಲೇವಿಯರೂ ನಾಚಿಕೆಯಿಂದ[a] ತಮ್ಮನ್ನು ಸೇವೆಗಾಗಿ ಸಿದ್ಧಪಡಿಸಿಕೊಂಡು ಸರ್ವಾಂಗಹೋಮಕ್ಕಾಗಿ ಕಾಣಿಕೆಗಳನ್ನು ಯೆಹೋವನ ಮಂದಿರಕ್ಕೆ ತಂದರು. 16 ಮೋಶೆಯ ಕಟ್ಟಳೆಯ ಪ್ರಕಾರವಾಗಿ ಅವರು ತಮ್ಮತಮ್ಮ ಸ್ಥಾನಗಳಲ್ಲಿ ನಿಂತುಕೊಂಡು ಸೇವೆ ನಡಿಸಿದರು. ಲೇವಿಯರು ರಕ್ತವನ್ನು ಯಾಜಕರಿಗೆ ಕೊಟ್ಟರು. ಯಾಜಕರು ಆ ರಕ್ತವನ್ನು ವೇದಿಕೆಯ ಮೇಲೆ ಚಿಮಿಕಿಸಿದರು. 17 ಜನಸಮೂಹದವರಲ್ಲಿ ಎಷ್ಟೋ ಮಂದಿ ಪವಿತ್ರ ಸೇವೆಗಾಗಿ ತಮ್ಮನ್ನು ಸಿದ್ಧಮಾಡಿಕೊಂಡಿರಲಿಲ್ಲ. ಆದ್ದರಿಂದ ಪಸ್ಕದ ಕುರಿಯನ್ನು ಅವರು ವಧಿಸಲಾಗಲಿಲ್ಲ. ಲೇವಿಯರೇ ಅವರ ಬದಲಾಗಿ ಪಸ್ಕದ ಕುರಿಯನ್ನು ವಧಿಸಿದರು. ಹೀಗೆ ಲೇವಿಯರು ಪ್ರತಿಯೊಂದು ಕುರಿಯನ್ನು ದೇವರಿಗಾಗಿ ಪರಿಶುದ್ಧಗೊಳಿಸಿ ಸಮರ್ಪಿಸಿದರು.
18-19 ಎಫ್ರಾಯೀಮ್, ಮನಸ್ಸೆ, ಇಸ್ಸಾಕಾರ್ ಮತ್ತು ಜೆಬುಲೂನಿನಿಂದ ಬಂದಿದ್ದ ಎಷ್ಟೋ ಮಂದಿ ಪಸ್ಕಹಬ್ಬಕ್ಕಾಗಿ ತಮ್ಮನ್ನು ಸಿದ್ಧಮಾಡಿಕೊಂಡಿರಲಿಲ್ಲ. ಅವರು ಪಸ್ಕದ ಕುರಿಮರಿಯನ್ನು ಯೋಗ್ಯವಾದ ರೀತಿಯಲ್ಲಿ ತಿನ್ನಲಿಲ್ಲ. ಆದರೆ ಹಿಜ್ಕೀಯನು ಅಂಥವರಿಗೋಸ್ಕರವಾಗಿ, “ದೇವರಾದ ಯೆಹೋವನೇ, ನೀನು ಒಳ್ಳೆಯವನಾಗಿರುವೆ. ಇವರು ಯೋಗ್ಯವಾದ ರೀತಿಯಲ್ಲಿ ನಿನ್ನನ್ನು ಆರಾಧಿಸಲು ಬಂದಿದ್ದಾರೆ. ಆದರೆ ಧರ್ಮಶಾಸ್ತ್ರದ ಪ್ರಕಾರ ಅವರು ತಮ್ಮನ್ನು ಶುದ್ಧ ಮಾಡಿಕೊಳ್ಳಲಿಲ್ಲ. ದಯಮಾಡಿ ಅವರನ್ನು ಕ್ಷಮಿಸು. ನಮ್ಮ ಪಿತೃಗಳು ವಿಧೇಯರಾಗಿದ್ದ ದೇವರೇ, ಜನರು ಮೋಶೆಯ ನಿಯಮಕ್ಕನುಸಾರವಾಗಿ ತಮ್ಮನ್ನು ಶುದ್ಧಿ ಮಾಡಿಕೊಂಡಿಲ್ಲದಿದ್ದರೂ ನೀನು ಅವರನ್ನು ದಯವಿಟ್ಟು ಕ್ಷಮಿಸು” ಎಂದು ಪ್ರಾರ್ಥಿಸಿದನು. 20 ಯೆಹೋವನು ಹಿಜ್ಕೀಯನ ಪ್ರಾರ್ಥನೆಯನ್ನು ಕೇಳಿ ಅವರನ್ನು ಕ್ಷಮಿಸಿದನು. 21 ಇಸ್ರೇಲರು ಜೆರುಸಲೇಮಿನಲ್ಲಿ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಏಳು ದಿವಸಗಳ ತನಕ ಆಚರಿಸಿದರು. ಅವರೆಲ್ಲಾ ಹರ್ಷದಿಂದ ತುಂಬಿ ಹಬ್ಬವನ್ನು ಆಚರಿಸಿದರು. ಯಾಜಕರೂ ಲೇವಿಯರೂ ಪ್ರತಿದಿನ ಗಟ್ಟಿಯಾಗಿ ಸ್ತುತಿಗೀತೆಗಳನ್ನು ಹಾಡಿದರು. 22 ದೇವರ ಸೇವೆ ಮಾಡುವದನ್ನು ತಿಳಿದಿದ್ದ ಲೇವಿಯರನ್ನು ಹಿಜ್ಕೀಯನು ಪ್ರೋತ್ಸಾಹಿಸಿದನು. ಜನರು ಏಳು ದಿವಸ ಹಬ್ಬವನ್ನು ಆಚರಿಸಿ ಸಮಾಧಾನಯಜ್ಞವನ್ನು ಸಮರ್ಪಿಸಿದರು; ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿದರು.
23 ಬಂದವರೆಲ್ಲರೂ ಇನ್ನೂ ಏಳು ದಿವಸ ಅಲ್ಲಿಯೇ ಇರಲು ಒಪ್ಪಿಕೊಂಡರು. ಇನ್ನೂ ಏಳು ದಿವಸ ಪಸ್ಕಹಬ್ಬ ಆಚರಿಸಲು ಅವರು ಸಂತೋಷಪಟ್ಟರು. 24 ಯೆಹೂದದ ಅರಸನಾದ ಹಿಜ್ಕೀಯನು ಸೇರಿಬಂದ ಜನರಿಗೆ ಒಂದು ಸಾವಿರ ಹೋರಿಗಳನ್ನೂ ಏಳು ಸಾವಿರ ಕುರಿಗಳನ್ನೂ ವಧಿಸಿ ತಿನ್ನಲು ಕೊಟ್ಟನು. ಪ್ರಧಾನರು ಒಂದು ಸಾವಿರ ಹೋರಿಗಳನ್ನೂ ಹತ್ತು ಸಾವಿರ ಕುರಿಗಳನ್ನೂ ಸೇರಿಬಂದ ಜನರಿಗೆ ಕೊಟ್ಟರು. ಎಷ್ಟೋ ಮಂದಿ ಯಾಜಕರು ಪವಿತ್ರ ಸೇವೆಗೆ ತಮ್ಮನ್ನು ಶುದ್ಧಪಡಿಸಿಕೊಂಡರು. 25 ಯೆಹೂದದ ಜನರೆಲ್ಲರೂ ಲೇವಿಯರೂ ಇಸ್ರೇಲಿನಿಂದ ಬಂದ ಜನರೂ ಮತ್ತು ಇಸ್ರೇಲಿನಿಂದ ಬಂದು ಯೆಹೂದದಲ್ಲಿ ನೆಲೆಸಿದ್ದ ವಿದೇಶಿಯರೂ ಹಬ್ಬವನ್ನು ಆಚರಿಸಿ ಬಹಳವಾಗಿ ಸಂತೋಷಿಸಿದರು. 26 ಜೆರುಸಲೇಮಿನಲ್ಲಿ ಸಂತಸವು ತುಂಬಿತ್ತು. ಸೊಲೊಮೋನ್ ಅರಸನ ಸಮಯದಿಂದ ಅಂದಿನ ತನಕ ಅಂಥಾ ಹಬ್ಬವು ಆಚರಿಸಲ್ಪಟ್ಟಿರಲಿಲ್ಲ. 27 ಯಾಜಕರು ಮತ್ತು ಲೇವಿಯರು ಎದ್ದುನಿಂತು ಜನರನ್ನು ಯೆಹೋವನು ಆಶೀರ್ವದಿಸುವಂತೆ ಕೇಳಿಕೊಂಡರು. ದೇವರು ಪರಲೋಕದ ತನ್ನ ಪವಿತ್ರ ನಿವಾಸಕ್ಕೆ ಬಂದ ಆ ಪ್ರಾರ್ಥನೆಗೆ ಕಿವಿಗೊಟ್ಟನು.
ಪಾರ್ಶ್ವವಾಯುರೋಗಿಗೆ ಸ್ವಸ್ಥತೆ
(ಮತ್ತಾಯ 9:1-8; ಲೂಕ 5:17-26)
2 ಕೆಲವು ದಿನಗಳ ತರುವಾಯ, ಯೇಸು ಕಪೆರ್ನೌಮಿಗೆ ಹಿಂದಿರುಗಿ ಬಂದನು. ಯೇಸು ಮನೆಯಲ್ಲಿದ್ದಾನೆಂಬ ಸುದ್ದಿಯು ಹಬ್ಬಿತು. 2 ಜನರು ಗುಂಪುಗುಂಪಾಗಿ ಯೇಸುವಿನ ಉಪದೇಶವನ್ನು ಕೇಳಲು ಒಟ್ಟುಗೂಡಿದರು. ಮನೆಯು ತುಂಬಿಹೋಯಿತು. ಅಲ್ಲಿ ನಿಲ್ಲಲು ಹೊರಗಡೆಯಲ್ಲಿಯೂ ಸ್ಥಳವಿರಲಿಲ್ಲ. ಯೇಸು ಉಪದೇಶಿಸುತ್ತಿದ್ದನು. 3 ಕೆಲವು ಜನರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ತಂದರು. ಅವನನ್ನು ನಾಲ್ಕು ಮಂದಿ ಹೊತ್ತುಕೊಂಡಿದ್ದರು. 4 ಮನೆಯು ಜನರಿಂದ ತುಂಬಿಹೋಗಿದ್ದುದರಿಂದ ಅವರು ಅವನನ್ನು ಯೇಸುವಿನ ಬಳಿಗೆ ತರಲಾಗಲಿಲ್ಲ. ಆದ್ದರಿಂದ ಅವರು ಯೇಸುವಿದ್ದ ಮನೆಯ ಮೇಲ್ಛಾವಣೆಯ ಮೇಲಕ್ಕೆ ಹೋಗಿ ಯೇಸುವಿದ್ದ ಸ್ಥಳದ ಮೇಲೆ ಹೆಂಚುಗಳನ್ನು ತೆಗೆದುಹಾಕಿದರು. ಹೀಗೆ ಅಲ್ಲಿ ಒಂದು ದ್ವಾರವನ್ನು ಮಾಡಿ ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. 5 ಈ ಜನರ ದೊಡ್ಡ ನಂಬಿಕೆಯನ್ನು ಕಂಡ ಯೇಸು ರೋಗಿಗೆ, “ಯುವಕನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
6 ಕೆಲವು ಮಂದಿ ಧರ್ಮೋಪದೇಶಕರು ಅಲ್ಲಿ ಕುಳಿತಿದ್ದರು. ಯೇಸು ಹೇಳಿದ್ದನ್ನು ಕೇಳಿದ ಅವರು, 7 “ಇವನು ಹೀಗೇಕೆ ಹೇಳುತ್ತಿದ್ದಾನೆ? ಇದು ದೇವದೂಷಣೆ! ದೇವರೊಬ್ಬನೇ ಪಾಪಗಳನ್ನು ಕ್ಷಮಿಸಲು ಸಾಧ್ಯ” ಎಂದು ತಮ್ಮ ಮನಸ್ಸಿನಲ್ಲಿ ಅಂದುಕೊಂಡರು.
8 ಧರ್ಮೋಪದೇಶಕರ ಆಲೋಚನೆಯನ್ನು ತಕ್ಷಣವೇ ಗ್ರಹಿಸಿಕೊಂಡ ಯೇಸು ಅವರಿಗೆ, “ನೀವು ಹೀಗೇಕೆ ಆಲೋಚಿಸುತ್ತೀರಿ? 9 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೋ? ಇಲ್ಲವೇ, ‘ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಹೋಗು’ ಎಂದು ಹೇಳುವುದೋ? 10 ಆದರೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರವಿದೆ ಎಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿದನು. ಬಳಿಕ ಯೇಸು ರೋಗಿಗೆ, 11 “ನಾನು ನಿನಗೆ ಹೇಳುತ್ತಿದ್ದೇನೆ, ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು.
12 ಆ ಕೂಡಲೇ ರೋಗಿಯು ಎದ್ದುನಿಂತು, ತನ್ನ ಹಾಸಿಗೆಯನ್ನು ತೆಗೆದುಕೊಂಡು ಅಲ್ಲಿಂದ ಹೊರಗೆ ಹೋದನು. ಇದನ್ನು ಕಂಡ ಆ ಜನರೆಲ್ಲರೂ ಆಶ್ಚರ್ಯಚಕಿತರಾಗಿ, “ನಾವು ಹಿಂದೆಂದೂ ಇಂಥ ಸಂಗತಿಯನ್ನು ನೋಡಿಯೇ ಇಲ್ಲ” ಎಂದು ಹೇಳಿ ದೇವರನ್ನು ಕೊಂಡಾಡಿದರು.
Kannada Holy Bible: Easy-to-Read Version. All rights reserved. © 1997 Bible League International