Revised Common Lectionary (Complementary)
6 ದೇವರೇ,[a] ನಿನ್ನ ಸಿಂಹಾಸನವು ಶಾಶ್ವತವಾದದ್ದು.
ಒಳ್ಳೆಯತನವು ನಿನ್ನ ರಾಜದಂಡವಾಗಿದೆ.
7 ನೀನು ನೀತಿಯನ್ನು ಪ್ರೀತಿಸುವೆ; ದುಷ್ಟತನವನ್ನು ದ್ವೇಷಿಸುವೆ.
ಆದ್ದರಿಂದ ನಿನ್ನ ದೇವರಾಗಿರುವಾತನು
ನಿನ್ನನ್ನು ನಿನ್ನ ಸ್ನೇಹಿತರಿಗೆ ರಾಜನನ್ನಾಗಿ ಆರಿಸಿಕೊಂಡಿದ್ದಾನೆ.[b]
8 ನಿನ್ನ ಬಟ್ಟೆಗಳು ಪರಿಮಳದ್ರವ್ಯಗಳಾದ ಗೋಲರಸ, ಅಗರು ಮತ್ತು ಚಂದನಗಳಿಂದ ಕೂಡಿವೆ.
ಗಜದಂತದಿಂದ ಶೃಂಗರಿಸಿರುವ ಅರಮನೆಗಳಲ್ಲಿ ನಿನ್ನನ್ನು ಸಂತೋಷಪಡಿಸಲು ವಾದ್ಯಗಳನ್ನು ನುಡಿಸುವರು.
9 ನಿನ್ನ ಸ್ತ್ರೀಪರಿವಾರದಲ್ಲಿರುವವರು ರಾಜಕುಮಾರಿಯರೇ,
ನಿನ್ನ ಪಟ್ಟದರಾಣಿಯು ಓಫೀರ್ ದೇಶದ ಬಂಗಾರದಿಂದ ಮಾಡಿದ ಕಿರೀಟವನ್ನು ಧರಿಸಿಕೊಂಡು ನಿನ್ನ ಬಲಗಡೆಯಲ್ಲಿ ನಿಂತಿರುವಳು.
10 ರಾಣಿಯೇ, ನನಗೆ ಕಿವಿಗೊಡು.
ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊ.
ಸ್ವಜನರನ್ನೂ ತವರುಮನೆಯನ್ನೂ ಮರೆತುಬಿಡು.
11 ಆಗ ರಾಜನು ನಿನ್ನ ಸೌಂದರ್ಯವನ್ನು ಮೆಚ್ಚಿಕೊಳ್ಳುವನು.
ಅವನು ನಿನಗೆ ಹೊಸ ಯಜಮಾನನಾಗಿರುವನು.
ಆದ್ದರಿಂದ ನೀನು ಅವನನ್ನು ಗೌರವಿಸಬೇಕು.[c]
12 ತೂರ್ ಪಟ್ಟಣದ ಶ್ರೀಮಂತರು
ನಿನ್ನನ್ನು ಸಂಧಿಸಲು ನಿನಗಾಗಿ ಉಡುಗೊರೆಗಳನ್ನು ತರುವರು.
13 ಅಂತಃಪುರದಲ್ಲಿ ರಾಜಕುಮಾರಿಯು ವೈಭವದಿಂದಿರುವಳು;
ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.
14 ಆಕೆಯು ಕಸೂತಿ ರಚಿತವಾದ ವಸ್ತ್ರಗಳನ್ನು ಧರಿಸಿಕೊಂಡು
ತನ್ನ ಸಖಿಯರಾದ ಕನ್ಯಾಪರಿವಾರದೊಡನೆ ರಾಜನ ಬಳಿಗೆ ಬರುವಳು.
15 ಅವರು ಸಂತೋಷದಿಂದಲೂ ಉಲ್ಲಾಸದಿಂದಲೂ
ರಾಜನ ಅರಮನೆಯೊಳಕ್ಕೆ ಪ್ರವೇಶಿಸುವರು.
16 ರಾಜನೇ, ನಿನ್ನ ಗಂಡುಮಕ್ಕಳು ನಿನ್ನ ತರುವಾಯ ಆಡಳಿತ ಮಾಡುವರು;
ನೀನು ಅವರನ್ನು ನಿನ್ನ ದೇಶದಲ್ಲೆಲ್ಲಾ ಅಧಿಪತಿಗಳನ್ನಾಗಿ ನೇಮಿಸುವೆ.
17 ನಾನು ನಿನ್ನ ಹೆಸರನ್ನು ಯಾವಾಗಲೂ ಪ್ರಖ್ಯಾತಿಪಡಿಸುವೆನು;
ಜನಾಂಗಗಳು ನಿನ್ನನ್ನು ಸದಾಕಾಲ ಕೊಂಡಾಡುವರು.
ಗುಲಾಮಳಾಗಿದ್ದ ಗೋಮೆರಳನ್ನು ಹೋಶೇಯನು ಕ್ರಯಕೊಟ್ಟು ಹಿಂದಕ್ಕೆ ಪಡಕೊಂಡದ್ದು
3 ತಿರುಗಿ ಯೆಹೋವನು ನನಗೆ ಮತ್ತೆ ಹೇಳಿದ್ದೇನೆಂದರೆ, “ಗೋಮೆರಳಿಗೆ ಅನೇಕ ಪ್ರಿಯತಮರಿದ್ದಾರೆ, ಆದರೆ ನೀನು ಆಕೆಯನ್ನು ಪ್ರೀತಿ ಮಾಡುತ್ತಲೇ ಇರಬೇಕು. ಯಾಕೆಂದರೆ ಅದು ಯೆಹೋವನ ರೀತಿ. ಯೆಹೋವನು ಇಸ್ರೇಲ್ ಜನರನ್ನು ಪ್ರೀತಿಸುತ್ತಲೇ ಇದ್ದಾನೆ. ಆದರೆ ಅವರು ಅನ್ಯದೇವರುಗಳನ್ನು ಆರಾಧಿಸುತ್ತಲೇ ಇದ್ದಾರೆ. ಅವರು ಒಣದ್ರಾಕ್ಷಿಯ ಉಂಡೆಗಳನ್ನು ತಿನ್ನಲು ಆಶಿಸುತ್ತಾರೆ.”
2 ನಾನು ಹದಿನೈದು ತುಂಡು ಬೆಳ್ಳಿಯನ್ನೂ ಒಂಭತ್ತು ಕ್ವಿಂಟಾಲ್ ಜವೆಗೋಧಿಯನ್ನೂ ಕೊಟ್ಟು ಆಕೆಯನ್ನು ಕೊಂಡುಕೊಂಡೆನು. 3 ಬಳಿಕ ನಾನು ಆಕೆಗೆ, “ನೀನು ನನ್ನೊಂದಿಗೆ ಅನೇಕ ದಿನಗಳವರೆಗೆ ಮನೆಯೊಳಗೆ ಇರಬೇಕು. ನೀನು ವೇಶ್ಯೆಯಂತಿರಬಾರದು. ನೀನು ಪರಪುರುಷನೊಡನೆ ಇರಬಾರದು. ನಾನೇ ನಿನ್ನ ಗಂಡನಾಗಿರುವೆನು” ಎಂದು ಹೇಳಿದೆನು.
4 ಅದೇ ರೀತಿಯಲ್ಲಿ, ಇಸ್ರೇಲಿನ ಜನರು ಬಹಳ ದಿವಸಗಳ ತನಕ ಅರಸನಾಗಲಿ ಅಧಿಪತಿಯಾಗಲಿ ಇಲ್ಲದೆ ಇರುವರು. ಅವರು ಯಜ್ಞವಿಲ್ಲದೆ ಇರುವರು, ಸ್ಮಾರಕಸ್ತಂಭಗಳೂ ಇರುವದಿಲ್ಲ. ಅವರಲ್ಲಿ ಏಫೋದ್ ಇರುವದಿಲ್ಲ; ಅಲ್ಲದೆ ಮನೆದೇವತೆಯೂ ಇರುವದಿಲ್ಲ. 5 ಹೀಗೆ ಇದ್ದ ಬಳಿಕ ಇಸ್ರೇಲರು ಹಿಂತಿರುಗಿ ಬರುವರು. ಆಗ ಅವರು ತಮ್ಮ ದೇವರಾದ ಯೆಹೋವನನ್ನೂ ಅವರ ಅರಸನಾದ ದಾವೀದನನ್ನೂ ಹುಡುಕುವರು. ಕೊನೆಯ ದಿವಸಗಳಲ್ಲಿ ತಮ್ಮ ದೇವರಾದ ಯೆಹೋವನನ್ನೂ ಆತನ ಒಳ್ಳೆಯತನವನ್ನೂ ಗೌರವಿಸಲು ಬರುವರು.
23 ನಿಮ್ಮನ್ನು ಶಿಕ್ಷಿಸುವುದಕ್ಕಾಗಲಿ ನೋಯಿಸುವುದಕ್ಕಾಗಲಿ ನನಗೆ ಇಷ್ಟವಿರಲಿಲ್ಲ. ಆದಕಾರಣ ನಾನು ನಿಮ್ಮ ಬಳಿಗೆ ಹಿಂತಿರುಗಿ ಬರಲಿಲ್ಲ. ಇದು ಸತ್ಯ. ಇದಕ್ಕೆ ದೇವರೇ ಸಾಕ್ಷಿ. 24 ನಿಮ್ಮ ನಂಬಿಕೆಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆಂದು ನಾನು ಹೇಳುತ್ತಿಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿದ್ದೀರಿ. ಆದರೆ ನಾವು ನಿಮ್ಮ ಸಂತೋಷಕ್ಕಾಗಿ ನಿಮ್ಮ ಜೊತೆಕೆಲಸದವರಾಗಿದ್ದೇವೆ.
2 ಆದ್ದರಿಂದ ನಾನು ನಿಮಗೆ ನೀಡಲಿರುವ ಮುಂದಿನ ಸಂದರ್ಶನವು ನಿಮಗೆ ದುಃಖವನ್ನು ಉಂಟುಮಾಡುವ ಸಂದರ್ಶನವಾಗಿರಬಾರದೆಂದು ನಿರ್ಧರಿಸಿದೆನು. 2 ನಾನು ನಿಮ್ಮನ್ನು ದುಃಖಗೊಳಿಸಿದರೆ, ನನ್ನನ್ನು ಸಂತೋಷಗೊಳಿಸುವವರು ಯಾರು? ನನ್ನಿಂದ ದುಃಖಿತರಾದ ನೀವು ಮಾತ್ರ ನನ್ನನ್ನು ಸಂತೋಷಪಡಿಸಬಲ್ಲಿರಿ. 3 ನಾನು ನಿಮ್ಮ ಬಳಿಗೆ ಬಂದಾಗ, ನನ್ನನ್ನು ಸಂತೋಷಗೊಳಿಸಬೇಕಾದ ಜನರಿಂದಲೇ ನನಗೆ ದುಃಖವಾಗಬಾರದೆಂಬ ಉದ್ದೇಶದಿಂದ ನಾನು ನಿಮಗೆ ಈ ಪತ್ರವನ್ನು ಬರೆದೆನು. ನೀವೆಲ್ಲರೂ ನನ್ನ ಆನಂದದಲ್ಲಿ ಪಾಲುಗಾರರಾಗುತ್ತೀರಿ ಎಂಬ ಭರವಸೆ ನನಗಿತ್ತು. 4 ನಾನು ಮೊದಲೊಮ್ಮೆ ನಿಮಗೆ ಬರೆದಾಗ, ನನ್ನ ಹೃದಯವು ಬಹಳ ಗಲಿಬಿಲಿಗೊಂಡಿತ್ತು ಮತ್ತು ದುಃಖಗೊಂಡಿತ್ತು. ನಾನು ಕಣ್ಣೀರಿಡುತ್ತಾ ನಿಮಗೆ ಬರೆದದ್ದು ನಿಮ್ಮನ್ನು ದುಃಖಗೊಳಿಸುವುದಕ್ಕಲ್ಲ, ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದಷ್ಟೆ.
ತಪ್ಪು ಮಾಡಿದ ಆ ವ್ಯಕ್ತಿಯನ್ನು ಕ್ಷಮಿಸಿರಿ
5 ನಿಮ್ಮ ಸಭೆಯ ಒಬ್ಬನು ದುಃಖವನ್ನು ಉಂಟುಮಾಡಿದ್ದು ನನಗಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅವನು ನಿಮ್ಮೊಲ್ಲರಿಗೂ ದುಃಖವನ್ನು ಉಂಟುಮಾಡಿದ್ದಾನೆ. (ಅದು ತನ್ನ ವಾಸ್ತವ ಸ್ಥಿತಿಗಿಂತ ಹೆಚ್ಚು ಕೆಟ್ಟದ್ದಾಗಿ ಕಾಣುವಂತೆ ಮಾಡಲು ನನಗೆ ಇಷ್ಟವಿಲ್ಲ.) 6 ನಿಮ್ಮ ಸಭೆಯ ಬಹುಮಂದಿ ಅವನಿಗೆ ವಿಧಿಸಿರುವ ಶಿಕ್ಷೆಯೇ ಸಾಕಾಗಿದೆ. 7 ಆದರೆ ಈಗ ನೀವು ಅವನನ್ನು ಕ್ಷಮಿಸಬೇಕು ಮತ್ತು ಸಂತೈಸಬೇಕು. ಆಗ ಅವನು ಅತೀವ ದುಃಖದಿಂದ ಸಂಪೂರ್ಣವಾಗಿ ಸೋತುಹೋಗಲು ಸಾಧ್ಯವಾಗುವುದಿಲ್ಲ. 8 ಆದ್ದರಿಂದ ನೀವು ಅವನನ್ನು ಪ್ರೀತಿಸುತ್ತೀರೆಂಬುದನ್ನು ಅವನಿಗೆ ತೋರಿಸಿಕೊಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. 9 ನೀವು ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿದ್ದೀರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಲು ನಿಮಗೆ ಬರೆದೆನು. 10 ನೀವು ಒಬ್ಬ ವ್ಯಕ್ತಿಯನ್ನು ಕ್ಷಮಿಸಿದರೆ, ನಾನೂ ಆ ವ್ಯಕ್ತಿಯನ್ನು ಕ್ಷಮಿಸುತ್ತೇನೆ. ನಾನು ಕ್ಷಮಿಸಿದ್ದನ್ನು ನಿಮಗೋಸ್ಕರವಾಗಿಯೇ ಕ್ಷಮಿಸಿದ್ದೇನೆ. ನಾನು ಕ್ಷಮಿಸಬೇಕಾದದ್ದನ್ನೆಲ್ಲ ಕ್ಷಮಿಸಿದ್ದೇನೆ ಮತ್ತು ಕ್ರಿಸ್ತನೇ ನನ್ನೊಂದಿಗೆ ಇದ್ದನು. 11 ಸೈತಾನನು ನಮ್ಮಿಂದ ಯಾವುದನ್ನೂ ಕಸಿದುಕೊಳ್ಳಬಾರದೆಂದು ನಾನು ಹೀಗೆ ಮಾಡಿದೆನು. ಸೈತಾನನ ಯೋಜನೆಗಳು ಯಾವುವೆಂದು ನಮಗೆ ಚೆನ್ನಾಗಿ ತಿಳಿದಿವೆ.
Kannada Holy Bible: Easy-to-Read Version. All rights reserved. © 1997 Bible League International