Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 16

ರಚನೆಗಾರ: ದಾವೀದ.

16 ದೇವರೇ, ನನ್ನನ್ನು ಕಾಪಾಡು. ಯಾಕೆಂದರೆ ನಾನು ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
ನಾನು ಯೆಹೋವನಿಗೆ, “ನೀನೇ ನನ್ನ ಒಡೆಯನು.
    ನನ್ನಲ್ಲಿರುವ ಒಳ್ಳೆಯದನ್ನೆಲ್ಲ ದಯಪಾಲಿಸಿದಾತನು ನೀನೇ” ಎಂದು ಹೇಳಿದೆನು.
ಯೆಹೋವನು ಭೂಲೋಕದಲ್ಲಿರುವ ತನ್ನ ಭಕ್ತರಿಗೆ ಅತಿಶಯವಾದವುಗಳನ್ನು ಮಾಡುವನು;
    ಅವರ ಮೇಲೆ ತನಗಿರುವ ನಿಜವಾದ ಪ್ರೀತಿಯನ್ನು ತೋರ್ಪಡಿಸುವನು.

ಆದರೆ ಅನ್ಯದೇವರುಗಳನ್ನು ಆಶ್ರಯಿಸಿಕೊಂಡವರಿಗೆ ಕೇಡುಗಳು ಹೆಚ್ಚಾಗುತ್ತವೆ.
    ಅವರು ಆ ವಿಗ್ರಹಗಳಿಗೆ ಅರ್ಪಿಸುವ ರಕ್ತದ ಕಾಣಿಕೆಗಳಲ್ಲಿ ನಾನು ಪಾಲುಗಾರನಾಗುವುದಿಲ್ಲ,
    ಆ ವಿಗ್ರಹಗಳ ಹೆಸರುಗಳನ್ನೂ ನಾನು ಉಚ್ಚರಿಸುವುದಿಲ್ಲ.
ನನ್ನ ಪಾಲೂ ನನ್ನ ಪಾತ್ರೆಯೂ ಯೆಹೋವನಿಂದಲೇ ಬರುತ್ತವೆ.
    ನನಗೆ ಆಧಾರವಾಗಿದ್ದು ನನ್ನ ಪಾಲನ್ನು ದಯಪಾಲಿಸುವಾತನು ನೀನೇ.
ನನ್ನ ಪಾಲು[a] ರಮಣೀಯವಾಗಿದೆ.
    ನನ್ನ ಸ್ವಾಸ್ತ್ಯವು[b] ಬಹು ಸುಂದರವಾಗಿದೆ.
ನನ್ನ ಆಲೋಚನಾಕರ್ತನಾದ ಯೆಹೋವನನ್ನು ಕೊಂಡಾಡುವೆನು;
    ರಾತ್ರಿಯಲ್ಲಿಯೂ, ಆತನು ತನ್ನ ಆಲೋಚನೆಗಳನ್ನು ನನ್ನ ಅಂತರಾತ್ಮದಲ್ಲಿ ಬೇರೂರಿಸುವನು.

ನಾನು ಯೆಹೋವನನ್ನು ಯಾವಾಗಲೂ ನನ್ನ ಎದುರಿನಲ್ಲೇ ಇಟ್ಟುಕೊಂಡಿದ್ದೇನೆ;
    ಆತನು ನನ್ನ ಬಲಗಡೆಯಲ್ಲಿರುವುದರಿಂದ ನಾನೆಂದಿಗೂ ಕದಲುವುದಿಲ್ಲ.
ಆದ್ದರಿಂದ ನನ್ನ ಹೃದಯವೂ ಆತ್ಮವೂ ಉಲ್ಲಾಸಪಡುತ್ತವೆ.
    ನನ್ನ ದೇಹವೂ ಸುರಕ್ಷಿತವಾಗಿರುವುದು.
10 ಯಾಕೆಂದರೆ, ನೀನು ನನ್ನ ಆತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ.
    ನಿನ್ನ ಪವಿತ್ರನನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.
11 ನೀನು ನನಗೆ ಜೀವಮಾರ್ಗವನ್ನು ಉಪದೇಶಿಸುವೆ.
    ನಿನ್ನ ಸನ್ನಿಧಿಯಲ್ಲಿದ್ದರೆ ಪರಿಪೂರ್ಣ ಸಂತೋಷವಿರುವುದು;
    ನಿನ್ನ ಬಲಗಡೆಯಲ್ಲಿದ್ದರೆ ಶಾಶ್ವತವಾದ ಆನಂದವಿರುವುದು.

ದಾನಿಯೇಲ 4:28-37

28 ಇದೆಲ್ಲವೂ ಅರಸನಾದ ನೆಬೂಕದ್ನೆಚ್ಚರನ ಅನುಭವಕ್ಕೆ ಬಂತು. 29-30 ಕನಸು ಕಂಡ ಹನ್ನೆರಡು ತಿಂಗಳುಗಳಾದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಬಾಬಿಲೋನಿನಲ್ಲಿದ್ದ ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಮಾಳಿಗೆಯ ಮೇಲಿದ್ದಾಗ ಅರಸನು, “ಈ ಬಾಬಿಲೋನ್ ನಗರವನ್ನು ನೋಡಿ, ನಾನು ಈ ಮಹಾನಗರವನ್ನು ಕಟ್ಟಿದೆ. ಇದು ನನ್ನ ಅರಮನೆ. ನಾನು ನನ್ನ ಸಾಮರ್ಥ್ಯದಿಂದ ಈ ಅರಮನೆಯನ್ನು ಕಟ್ಟಿದೆ. ನಾನು ಎಂಥಾ ದೊಡ್ಡವನು ಎಂದು ಲೋಕಕ್ಕೆ ತೋರಿಸಲು ನಾನು ಈ ಅರಮನೆಯನ್ನು ಕಟ್ಟಿದೆ” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದನು.

31 ಆ ಶಬ್ದಗಳು ಇನ್ನೂ ಬಾಯಿಯಲ್ಲಿಯೇ ಇದ್ದಾಗ, ಆಕಾಶವಾಣಿಯಾಯಿತು. ಆ ಧ್ವನಿಯು, “ಅರಸನಾದ ನೆಬೂಕದ್ನೆಚ್ಚರನೇ, ನಿನ್ನಿಂದ ನಿನ್ನ ರಾಜಪದವಿಯನ್ನು ಕಿತ್ತುಕೊಳ್ಳಲಾಗಿದೆ. 32 ಜನರನ್ನು ಬಿಟ್ಟುಹೋಗುವಂತೆ ನಿನ್ನನ್ನು ಒತ್ತಾಯಿಸಲಾಗುವುದು. ನೀನು ಕಾಡುಪ್ರಾಣಿಗಳೊಂದಿಗೆ ವಾಸಿಸುವೆ. ಹಸುಗಳಂತೆ ಹುಲ್ಲು ತಿನ್ನುವೆ; ನೀನು ಪಾಠ ಕಲಿಯುವದಕ್ಕೆ ಏಳು ವರ್ಷ ಬೇಕಾಗುವುದು. ಆಗ ಮಹೋನ್ನತನಾದ ದೇವರು ಮಾನವನ ಸಾಮ್ರಾಜ್ಯಗಳ ಮೇಲೆ ಆಳ್ವಿಕೆ ಮಾಡುತ್ತಾನೆ ಮತ್ತು ತನಗೆ ಬೇಕಾದವರಿಗೆ ಸಾಮ್ರಾಜ್ಯವನ್ನು ಕೊಡುತ್ತಾನೆ ಎಂಬ ಸತ್ಯವನ್ನು ನೀನು ತಿಳಿದುಕೊಳ್ಳುವೆ” ಎಂದು ನುಡಿಯಿತು.

33 ಆ ಮಾತುಗಳು ತಕ್ಷಣ ನೆರವೇರಿದವು. ನೆಬೂಕದ್ನೆಚ್ಚರನು ಜನರನ್ನು ಬಿಟ್ಟುಹೋಗಬೇಕಾಯಿತು. ಅವನು ಹಸುಗಳಂತೆ ಹುಲ್ಲು ತಿನ್ನತೊಡಗಿದನು. ಅವನು ಇಬ್ಬನಿಯಿಂದ ನೆನೆದನು. ಅವನ ಕೂದಲುಗಳು ಹದ್ದಿನ ಗರಿಗಳಂತೆ ಬೆಳೆದವು. ಅವನ ಉಗುರುಗಳು ಪಕ್ಷಿಗಳ ಉಗುರುಗಳಂತೆ ಬೆಳೆದವು.

34 ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಆಕಾಶದ ಕಡೆಗೆ ನೋಡಿದೆ. ಆಗ ನಾನು ಸ್ವಸ್ಥ ಬುದ್ಧಿಯುಳ್ಳವನಾಗಿದ್ದೆ. ಬಳಿಕ ನಾನು ಮಹೋನ್ನತನಾದ ದೇವರನ್ನು ಸ್ತುತಿಸಿದೆ. ನಿತ್ಯನಾದ ಆ ದೇವರನ್ನು ಕೊಂಡಾಡಿದೆ. ಸ್ತೋತ್ರಮಾಡಿದೆ.

ದೇವರ ಆಳ್ವಿಕೆಯು ಶಾಶ್ವತವಾದದ್ದು!
    ಆತನ ಸಾಮ್ರಾಜ್ಯವು ಎಲ್ಲಾ ತಲೆಮಾರುಗಳಲ್ಲಿಯೂ ಇರುವುದು.
35 ಭೂಮಿಯ ಜನರು ಬಹು ಮುಖ್ಯರಲ್ಲ.
    ದೇವರು ಪರಲೋಕ ಸಮೂಹದವರಿಗೂ ಭೂಲೋಕದ ನಿವಾಸಿಗಳಿಗೂ ತನ್ನ ಚಿತ್ತಾನುಸಾರ ಮಾಡುತ್ತಾನೆ.
ಯಾರೂ ಆತನನ್ನು ತಡೆಯಲಾರರು!
    ಯಾರೂ ಆತನನ್ನು ಪ್ರಶ್ನಿಸಲಾರರು!

36 ಆಗ ದೇವರು ನನಗೆ ಸರಿಯಾದ ಬುದ್ಧಿಯನ್ನು ಕೊಟ್ಟನು. ನನಗೆ ರಾಜನ ಗೌರವ, ಪ್ರಭಾವ, ವೈಭವಗಳು ಮತ್ತೆ ಲಭಿಸಿದವು. ನನ್ನ ಮಂತ್ರಿಗಳೂ ಅಧಿಪತಿಗಳೂ ನನ್ನನ್ನು ಸ್ವೀಕರಿಸಿದರು. ನಾನು ಮತ್ತೆ ಅರಸನಾದೆನು. ನಾನು ಮೊದಲಿಗಿಂತಲೂ ಅಧಿಕ ಶಕ್ತಿಶಾಲಿಯಾದ ಮತ್ತು ಪ್ರಭಾವಶಾಲಿಯಾದ ಅರಸನಾದೆನು. 37 ಅರಸ ನೆಬೂಕದ್ನೆಚ್ಚರನಾದ ನಾನು ಈಗ ಪರಲೋಕದ ರಾಜನನ್ನು ಘನಪಡಿಸುತ್ತೇನೆ, ಮಹಿಮೆಪಡಿಸುತ್ತೇನೆ. ಆತನು ಮಾಡುವದೆಲ್ಲ ಸರಿ. ಆತನು ಯಾವಾಗಲೂ ನ್ಯಾಯವಂತನಾಗಿದ್ದಾನೆ. ಆತನು ಗರ್ವಿಷ್ಠರನ್ನು ದೀನರನ್ನಾಗಿ ಮಾಡಬಲ್ಲನು.

ಮಾರ್ಕ 12:1-12

ದೇವರ ಮಗನ ಆಗಮನ

(ಮತ್ತಾಯ 21:33-46; ಲೂಕ 20:9-19)

12 ಯೇಸು ಜನರಿಗೆ ಸಾಮ್ಯಗಳ ಮೂಲಕ ಉಪದೇಶಿಸುತ್ತಾ ಅವರಿಗೆ ಹೇಳಿದ್ದೇನೆಂದರೆ: “ಒಬ್ಬನು ದ್ರಾಕ್ಷಿಯ ತೋಟವನ್ನು ಮಾಡಿ, ಸುತ್ತಲೂ ಗೋಡೆ ಹಾಕಿಸಿ, ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದನು. ಅವನು ಕೆಲವು ರೈತರಿಗೆ ತೋಟವನ್ನು ಗುತ್ತಿಗೆಗೆ ಕೊಟ್ಟು ಪ್ರವಾಸಕ್ಕೆ ಹೊರಟನು.

“ತರುವಾಯ ಫಲಕಾಲವು ಬಂದಾಗ ತನ್ನ ಪಾಲಿನ ದ್ರಾಕ್ಷಿಯನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಕಳುಹಿಸಿದನು. ಆದರೆ ರೈತರು ಆ ಸೇವಕನನ್ನು ಹಿಡಿದುಕೊಂಡು ಹೊಡೆದು ಏನನ್ನೂ ಕೊಡದೆ ಅವನನ್ನು ಕಳುಹಿಸಿಬಿಟ್ಟರು. ಆಗ ಯಜಮಾನನು ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ರೈತರು ಅವನಿಗೂ ತಲೆಯ ಮೇಲೆ ಹೊಡೆದು ಅವಮಾನ ಮಾಡಿದರು. ಆದ್ದರಿಂದ ಯಜಮಾನನು ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನು ಕೊಂದುಹಾಕಿದರು. ಆ ಯಜಮಾನನು ಇತರ ಅನೇಕ ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. ರೈತರು ಕೆಲವು ಸೇವಕರನ್ನು ಹೊಡೆದರು, ಕೆಲವರನ್ನು ಕೊಂದುಹಾಕಿದರು.

“ಆ ಯಜಮಾನನಿಗೆ ರೈತರ ಬಳಿಗೆ ಕಳುಹಿಸಲು ಪ್ರಿಯ ಮಗನೊಬ್ಬನೇ ಉಳಿದಿದ್ದನು. ಅವನು ಕಳುಹಿಸಬಹುದಾದ ಕೊನೆಯ ವ್ಯಕ್ತಿ ಅವನ ಸ್ವಂತ ಮಗನಾಗಿದ್ದನು. ‘ರೈತರು ನನ್ನ ಮಗನಿಗೆ ಗೌರವ ಕೊಡುತ್ತಾರೆ’ ಎಂದುಕೊಂಡು ಯಜಮಾನನು ಅವನನ್ನೇ ಕಳುಹಿಸಿದನು.

“ಆದರೆ ರೈತರು ಒಬ್ಬರಿಗೊಬ್ಬರು, ‘ಇವನು ಯಜಮಾನನ ಮಗನು. ಈ ದ್ರಾಕ್ಷಿತೋಟದ ಹಕ್ಕುದಾರ. ನಾವು ಇವನನ್ನು ಕೊಂದರೆ, ದ್ರಾಕ್ಷಿತೋಟ ನಮ್ಮದಾಗುತ್ತದೆ’ ಎಂದುಕೊಂಡು, ಮಗನನ್ನು ಹಿಡಿದು ಕೊಂದುಹಾಕಿ, ದ್ರಾಕ್ಷಿತೋಟದ ಹೊರಗೆ ಎಸೆದುಬಿಟ್ಟರು.

“ಹೀಗಿರುವಾಗ ಆ ದಾಕ್ಷಿತೋಟದ ಯಜಮಾನನು ಏನು ಮಾಡುತ್ತಾನೆ? ಅವನು ತೋಟಕ್ಕೆ ಹೋಗಿ, ಆ ರೈತರನ್ನು ಕೊಂದು ತೋಟವನ್ನು ಬೇರೆ ರೈತರಿಗೆ ಒಪ್ಪಿಸಿಕೊಡುತ್ತಾನೆ. 10 ಪವಿತ್ರಗ್ರಂಥದಲ್ಲಿ ಬರೆದಿರುವಂತೆ,

‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
11 ಇದು ಪ್ರಭುವಿನಿಂದ ಆಯಿತು. ಇದು ನಮಗೆ ಆಶ್ಚರ್ಯವಾಗಿ ತೋರುತ್ತದೆ.’(A)

12 ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯನಾಯಕರು ಕೇಳಿ ತಮ್ಮನ್ನು ಕುರಿತಾಗಿಯೇ ಇದನ್ನು ಹೇಳಿದನೆಂದು ತಿಳಿದುಕೊಂಡು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರೂ ಜನರಿಗೆ ಹೆದರಿಕೊಂಡು ಆತನನ್ನು ಬಿಟ್ಟುಹೋದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International