Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:65-72

65 ಯೆಹೋವನೇ, ನಿನ್ನ ವಾಗ್ದಾನಕ್ಕೆ ತಕ್ಕಂತೆ
    ನಿನ್ನ ಸೇವಕನಿಗೆ ಒಳ್ಳೆಯದನ್ನೇ ಮಾಡಿರುವೆ.
66 ಜ್ಞಾನದ ನಿರ್ಧಾರಗಳನ್ನು ಮಾಡಲು ನನಗೆ ಜ್ಞಾನವನ್ನು ಕೊಡು.
    ನಾನು ನಿನ್ನ ಆಜ್ಞೆಗಳಲ್ಲಿ ಭರವಸವಿಟ್ಟಿರುವೆ.
67 ನಾನು ಸಂಕಟಪಡುವುದಕ್ಕಿಂತ ಮೊದಲು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದೆ;
    ಈಗಲಾದರೋ ನಾನು ನಿನ್ನ ಆಜ್ಞೆಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
68 ನೀನು ಒಳ್ಳೆಯವನೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ ಆಗಿರುವೆ.
    ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
69 ಗರ್ವಿಷ್ಠರು ನನಗೆ ವಿರೋಧವಾಗಿ ಸುಳ್ಳು ಹೇಳಿದರು.
    ನಾನಾದರೋ ನಿನ್ನ ಆಜ್ಞೆಗಳಿಗೆ ಪೂರ್ಣಹೃದಯದಿಂದ ವಿಧೇಯನಾಗಿರುವೆ.
70 ಅವರು ಬಹು ಮೂಢರು.
    ನಾನಾದರೋ ನಿನ್ನ ಉಪದೇಶಗಳನ್ನು ಕಲಿಯುವುದರಲ್ಲಿ ಆನಂದಿಸುವೆ.
71 ನಿನ್ನ ಕಟ್ಟಳೆಗಳನ್ನು ಕಲಿಯಲು
    ನಾನು ಪಟ್ಟ ಪ್ರಯಾಸವು ಒಳ್ಳೆಯದಾಯಿತು.
72 ನಿನ್ನ ಉಪದೇಶಗಳು ನನಗೆ ಒಳ್ಳೆಯದಾಗಿವೆ.
    ಅವು ಹತ್ತುಸಾವಿರ ಬೆಳ್ಳಿಬಂಗಾರಗಳ ನಾಣ್ಯಗಳಿಗಿಂತಲೂ ಅಮೂಲ್ಯವಾಗಿವೆ.

ಧರ್ಮೋಪದೇಶಕಾಂಡ 17:2-13

ವಿಗ್ರಹಾರಾಧನೆ ಮಾಡಿದರೆ ದೊರಕುವ ಶಿಕ್ಷೆ

“ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಒಂದು ಪಟ್ಟಣದಲ್ಲಿ ನೀವು ಕೆಟ್ಟ ಸುದ್ದಿಯೊಂದನ್ನು ಅಂದರೆ ಒಬ್ಬ ಸ್ತ್ರೀಯಾಗಲಿ ಅಥವಾ ಪುರುಷನಾಗಲಿ ದೇವರೊಂದಿಗೆ ಮಾಡಿದ ಒಡಂಬಡಿಕೆಯನ್ನು ಮುರಿದು ಆತನಿಗೆ ವಿರುದ್ಧವಾಗಿ ಪಾಪಮಾಡಿ ಅವರು ಬೇರೆ ದೇವರುಗಳನ್ನಾಗಲಿ ಸೂರ್ಯಚಂದ್ರ ನಕ್ಷತ್ರಗಳನ್ನಾಗಲಿ ಪೂಜಿಸುತ್ತಾರೆ ಎಂಬ ಸುದ್ದಿಯನ್ನು ನೀವು ಕೇಳಿದರೂ ಕೇಳಬಹುದು, ಅದು ದೇವರ ಕಟ್ಟಳೆಗೆ ವಿರುದ್ಧವಾದದ್ದು. ಇಂಥಾ ಕೆಟ್ಟ ಸುದ್ದಿಯನ್ನು ನೀವು ಕೇಳಿದರೆ ಮೊಟ್ಟಮೊದಲಾಗಿ ಅದು ಸತ್ಯವೋ ಸುಳ್ಳೋ ಎಂಬುದನ್ನು ಸರಿಯಾಗಿ ಪರಿಶೀಲಿಸಬೇಕು. ಅಂಥ ಭಯಂಕರ ಸಂಗತಿಯು ಇಸ್ರೇಲಿನಲ್ಲಿ ಸಂಭವಿಸಿದ್ದು ನಿಜವಾಗಿದ್ದಲ್ಲಿ, ಆ ಪಾಪಮಾಡಿದವನಿಗೆ ಶಿಕ್ಷೆಯನ್ನು ವಿಧಿಸಬೇಕು. ಪಟ್ಟಣದ ಹೆಬ್ಬಾಗಿಲ ಹೊರಗಿರುವ ಬಯಲಿಗೆ ಆ ತಪ್ಪು ಮಾಡಿದ ಸ್ತ್ರೀಯನ್ನೂ, ಪುರುಷನನ್ನೂ ತೆಗೆದುಕೊಂಡು ಹೋಗಿ ಅಲ್ಲಿ ಅವರನ್ನು ಕಲ್ಲೆಸೆದು ಸಾಯಿಸಬೇಕು. ಅವರು ವಿಗ್ರಹಾರಾಧನೆ ಮಾಡಿದ್ದಕ್ಕೆ ಒಂದೇ ಸಾಕ್ಷಿ ಇರುವುದಾದರೆ ಅವರಿಗೆ ಮರಣಶಿಕ್ಷೆಯಾಗಬಾರದು. ಆದರೆ ಇಬ್ಬರು ಅಥವಾ ಮೂವರು ಸಾಕ್ಷಿಗಳು ಅವರು ವಿಗ್ರಹಾರಾಧನೆ ಮಾಡಿದ್ದು ಸತ್ಯವೆಂದು ಹೇಳಿದರೆ ಮಾತ್ರ ಅವರನ್ನು ಸಾಯಿಸಬೇಕು. ಸತ್ಯವೆಂದು ಹೇಳಿದ ಸಾಕ್ಷಿಗಳು ಮೊದಲು ಅವರ ಮೇಲೆ ಕಲ್ಲೆಸೆಯಬೇಕು. ಅನಂತರ ಬೇರೆಯವರು ಕಲ್ಲೆಸೆದು ಅವರನ್ನು ಸಾಯಿಸಬೇಕು. ಈ ರೀತಿಯಾಗಿ ನಿಮ್ಮ ಮಧ್ಯೆ ಇದ್ದ ದುಷ್ಕೃತ್ಯವನ್ನು ತೆಗೆದುಹಾಕಬೇಕು.

ನ್ಯಾಯಸ್ಥಾನದಲ್ಲಿ ಬಗೆಹರಿಸಲಾಗದ ವಿಷಯಗಳು

“ನಿಮ್ಮ ನ್ಯಾಯಸ್ಥಾನದಲ್ಲಿ ನ್ಯಾಯತೀರಿಸಲಾಗದ ಕಷ್ಟದ ಸಮಸ್ಯೆಗಳು ಬರುವವು. ಅವು ಕೊಲೆ ಅಥವಾ ಇಬ್ಬರ ಮಧ್ಯೆ ವಿವಾದವಿರಬಹುದು; ಅಥವಾ ಜಗಳಮಾಡಿ ಗಾಯಗೊಂಡಿರುವ ಪ್ರಕರಣವಾಗಿರಬಹುದು. ನಿಮ್ಮ ಪಟ್ಟಣಗಳ ನ್ಯಾಯಸ್ಥಾನದಲ್ಲಿ ಈ ಪ್ರಕರಣಗಳ ವಿಚಾರಣೆ ನಡಿಸುವಾಗ ಸರಿಯಾದ ಇತ್ಯರ್ಥಮಾಡಿ ತೀರ್ಪುಮಾಡಲು ಕಷ್ಟವಾದಲ್ಲಿ ನೀವು ದೇವರು ಆರಿಸುವ ಸ್ಥಳಕ್ಕೆ ಹೋಗಬೇಕು. ಲೇವಿಕುಲದ ಯಾಜಕರ ಬಳಿಗೂ ಅಲ್ಲಿ ಆ ಸಮಯದಲ್ಲಿರುವ ನ್ಯಾಯಾಧೀಶನ ಬಳಿಗೂ ಹೋಗಿ ಅವರಿಗೆ ವಿಷಯವನ್ನು ತಿಳಿಸಬೇಕು. ಅವರು ನಿಮ್ಮ ಮುಂದಿರುವ ಬಗೆಹರಿಯಲಾಗದ ಪ್ರಕರಣವನ್ನು ಆಲೈಸಿ, ವಿಚಾರಿಸಿ, 10 ಯೆಹೋವನ ವಿಶೇಷವಾದ ಸ್ಥಳದಲ್ಲಿ ತಮ್ಮ ತೀರ್ಪನ್ನು ಕೊಡುವರು. ಅವರು ಏನು ಹೇಳುತ್ತಾರೋ ಅದಕ್ಕೆ ಸಂಪೂರ್ಣವಾಗಿ ಒಪ್ಪಿಗೆ ನೀಡಬೇಕು. ನೀವು ಏನು ಮಾಡಬೇಕೆಂದು ಅವರು ಹೇಳುತ್ತಾರೋ ಅದನ್ನು ನೀವು ಮಾಡಲೇಬೇಕು. 11 ಅವರು ಹೇಳಿದ ಹಾಗೆ ಎಲ್ಲವನ್ನು ಅಕ್ಷರಶಃ ಪರಿಪಾಲಿಸಬೇಕು. ಅವರ ತೀರ್ಪನ್ನು ಬದಲಾಯಿಸಬಾರದು.

12 “ನಿಮ್ಮ ದೇವರಾದ ಯೆಹೋವನ ಸೇವೆಮಾಡುತ್ತಿರುವ ಯಾಜಕನಾಗಲಿ ನ್ಯಾಯಾಧೀಶನಾಗಲಿ ಹೇಳಿದ ತೀರ್ಪನ್ನು ಉಲ್ಲಂಘಿಸಿದವನಿಗೆ ಮರಣದಂಡನೆ ಆಗಬೇಕು. ನೀವು ಆ ದುಷ್ಟನನ್ನು ಇಸ್ರೇಲಿನಿಂದ ನಿರ್ಮೂಲ ಮಾಡಬೇಕು. 13 ಈ ದಂಡನೆಯ ಬಗ್ಗೆ ಜನರು ಕೇಳಿ ಭಯಪಟ್ಟು ಅಂಥ ಕೆಟ್ಟ ಕೃತ್ಯಗಳನ್ನು ಮಾಡದಿರುವರು.

ರೋಮ್ನಗರದವರಿಗೆ 13:1-7

ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಿ

13 ನೀವೆಲ್ಲರೂ ಸರ್ಕಾರದ ಅಧಿಕಾರಿಗಳಿಗೆ ವಿಧೇಯರಾಗಿರಬೇಕು. ಪ್ರತಿಯೊಬ್ಬ ಅಧಿಕಾರಿಗೆ ಅಧಿಕಾರವನ್ನು ಕೊಟ್ಟಿರುವವನು ದೇವರೇ. ಈಗಿರುವ ಎಲ್ಲಾ ಅಧಿಕಾರಿಗಳಿಗೆ ದೇವರೇ ಅಧಿಕಾರವನ್ನು ಕೊಟ್ಟಿದ್ದಾನೆ. ಆದ್ದರಿಂದ ಸರ್ಕಾರಕ್ಕೆ ವಿರೋಧವಾಗಿರುವ ವ್ಯಕ್ತಿಯು ನಿಜವಾಗಿಯೂ ದೇವರ ಆಜ್ಞೆಗೇ ವಿರೋಧವಾಗಿದ್ದಾನೆ. ಸರ್ಕಾರಕ್ಕೆ ವಿರೋಧವಾಗಿರುವ ಜನರು ತಮ್ಮ ಮೇಲೆ ತಾವೇ ದಂಡನೆಯನ್ನು ಬರಮಾಡಿಕೊಳ್ಳುತ್ತಾರೆ. ಸರಿಯಾದದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುವುದಿಲ್ಲ. ಆದರೆ ಕೆಟ್ಟದ್ದನ್ನು ಮಾಡುವ ಜನರಿಗೆ ಅಧಿಕಾರಿಗಳ ಭಯವಿರುತ್ತದೆ. ನೀವು ಅಧಿಕಾರಿಗಳಿಗೆ ಭಯಪಡದವರಾಗಿರಬೇಕೆಂದು ಅಪೇಕ್ಷಿಸುತ್ತೀರೋ? ಹಾಗಾದರೆ ನೀವು ಸರಿಯಾದದ್ದನ್ನೇ ಮಾಡಿರಿ. ಆಗ ಅಧಿಕಾರಿಗಳು ನಿಮ್ಮನ್ನು ಹೊಗಳುವರು.

ಅಧಿಕಾರಿಯು ನಿಮ್ಮ ಒಳ್ಳೆಯದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. ಆದರೆ ನೀವು ಕೆಟ್ಟದ್ದನ್ನು ಮಾಡಿದರೆ ಭಯಪಡಲೇಬೇಕು. ನಿಮ್ಮನ್ನು ದಂಡಿಸಲು ಅವನಿಗೆ ಅಧಿಕಾರವಿದೆ. ಅವನು ಆ ಅಧಿಕಾರವನ್ನು ಉಪಯೋಗಿಸುವನು. ಅಧಿಕಾರಿಯು ಕೆಟ್ಟದ್ದನ್ನು ಮಾಡುವ ಜನರನ್ನು ದಂಡಿಸುವುದಕ್ಕಾಗಿ ನೇಮಕಗೊಂಡಿರುವ ದೇವರ ಸೇವಕನಾಗಿದ್ದಾನೆ. ಆದ್ದರಿಂದ ನೀವು ಸರ್ಕಾರಕ್ಕೆ ವಿಧೇಯರಾಗಬೇಕು. ನೀವು ದಂಡನೆಗೆ ಗುರಿಯಾಗಬಹುದೆಂಬ ಕಾರಣದಿಂದ ಮಾತ್ರವಲ್ಲದೆ, ನಿಮ್ಮ ಮನಸ್ಸಾಕ್ಷಿಯ ದೆಸೆಯಿಂದಲೂ ನೀವು ಅವರಿಗೆ ವಿಧೇಯರಾಗಬೇಕು.

ಈ ಕಾರಣದಿಂದಲೇ ನೀವು ತೆರಿಗೆಯನ್ನು ಸಹ ಕೊಡುತ್ತೀರಿ. ಆ ಅಧಿಕಾರಿಗಳು ದೇವರಿಗೋಸ್ಕರ ಕೆಲಸ ಮಾಡುವವರಾಗಿದ್ದಾರೆ; ತಮ್ಮ ಸಮಯವನ್ನೆಲ್ಲಾ ಆಡಳಿತ ಮಾಡಲು ಉಪಯೋಗಿಸುವವರಾಗಿದ್ದಾರೆ. ನೀವು ಯಾರ್ಯಾರಿಗೆ ಏನೇನು ಕೊಡಬೇಕೋ ಅದನ್ನೆಲ್ಲಾ ಅವರಿಗೆ ಕೊಡಿರಿ. ಯಾವ ತೆರಿಗೆಯನ್ನಾದರೂ ಕೊಡಬೇಕಿದ್ದರೆ ಅದನ್ನು ಕೊಟ್ಟುಬಿಡಿರಿ. ಯಾರಿಗೆ ಗೌರವ ಕೊಡಬೇಕೋ ಅವರಿಗೆ ಗೌರವ ಕೊಡಿರಿ. ಯಾರಿಗೆ ಮರ್ಯಾದೆ ತೋರಿಸಬೇಕೊ ಅವರಿಗೆ ಮರ್ಯಾದೆಯನ್ನು ತೋರಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International