Revised Common Lectionary (Complementary)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
131 ಯೆಹೋವನೇ, ನನ್ನ ಹೃದಯದಲ್ಲಿ ಗರ್ವವಿಲ್ಲ.
ನನ್ನ ಕಣ್ಣುಗಳಲ್ಲಿ ಸೊಕ್ಕಿಲ್ಲ.
ಮಹಾಕಾರ್ಯಗಳನ್ನಾಗಲಿ ಅಸಾಧ್ಯ ಕಾರ್ಯಗಳನ್ನಾಗಲಿ
ಮಾಡಲು ನಾನು ಪ್ರಯತ್ನಿಸುವುದಿಲ್ಲ.
2 ನಾನು ಸಮಾಧಾನದಿಂದಿರುವೆ.
ನನ್ನ ಆತ್ಮವು ನೆಮ್ಮದಿಯಿಂದಿದೆ.
ತನ್ನ ತಾಯಿಯ ತೋಳುಗಳಲ್ಲಿ ಸಂತೃಪ್ತಿಯಾಗಿರುವ ಮಗುವಿನಂತೆ
ನನ್ನ ಆತ್ಮವು ಸಮಾಧಾನದಿಂದಲೂ ನೆಮ್ಮದಿಯಿಂದಲೂ ಇದೆ.
3 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಈಗಲೂ ಆತನಲ್ಲಿ ಭರವಸವಿಡು.
ಎಂದೆಂದಿಗೂ ಆತನಲ್ಲಿ ಭರವಸವಿಡು!
ಯೆಹೋವನು ನೆಬೂಕದ್ನೆಚ್ಚರನನ್ನು ರಾಜನನ್ನಾಗಿ ಮಾಡಿದ್ದು
27 ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಯೆಹೂದದ ರಾಜನಾದ ಚಿದ್ಕೀಯನ ಆಳ್ವಿಕೆಯ ನಾಲ್ಕನೇ ವರ್ಷದಲ್ಲಿ ಈ ಸಂದೇಶ ಬಂದಿತು. ಚಿದ್ಕೀಯನು ರಾಜನಾಗಿದ್ದ ಯೋಷೀಯನ ಮಗ.[a] 2 ಯೆಹೋವನು ನನಗೆ ಹೀಗೆ ಹೇಳಿದನು: “ನೀನು ಮರದ ಕಂಬದಿಂದ ಕೆಲವು ನೊಗಗಳನ್ನು ಮಾಡಿ ನಿನ್ನ ಕತ್ತಿನ ಹಿಂಬದಿಯ ಮೇಲೆ ಇಟ್ಟುಕೋ. 3 ತರುವಾಯ ಎದೋಮಿನ ರಾಜ, ಮೋವಾಬಿನ ರಾಜ, ಅಮ್ಮೋನಿನ ರಾಜ, ತೂರಿನ ರಾಜ, ಚೀದೋನಿನ ರಾಜ ಇವರುಗಳಿಗೆ ಅವುಗಳನ್ನು ಕಳಿಸು. ಯೆಹೂದದ ರಾಜನಾದ ಚಿದ್ಕೀಯನನ್ನು ನೋಡಲು ಬಂದ ಈ ರಾಜರ ರಾಯಭಾರಿಗಳ ಮೂಲಕ ಸಂದೇಶವನ್ನು ಕಳಿಸು. 4 ಈ ಸಂದೇಶವನ್ನು ತಮ್ಮ ಒಡೆಯರಿಗೆ ತಿಳಿಸಬೇಕೆಂದು ಆ ರಾಯಭಾರಿಗಳಿಗೆ ಹೇಳು. ಅವರಿಗೆ ಹೀಗೆ ಹೇಳು: ‘ಇಸ್ರೇಲಿನ ದೇವರು ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ ಎಂದು ನಿಮ್ಮ ಒಡೆಯರಿಗೆ ತಿಳಿಸಿ. 5 ನಾನು ಭೂಮಿಯನ್ನೂ ಮತ್ತು ಅದರ ಮೇಲಿರುವ ಎಲ್ಲಾ ಜನರನ್ನೂ ಸೃಷ್ಟಿಸಿದೆ. ನಾನು ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳನ್ನು ಸೃಷ್ಟಿಸಿದೆ. ನಾನು ಇದನ್ನು ನನ್ನ ಮಹಾಶಕ್ತಿಯಿಂದಲೂ ಬಲವಾದ ತೋಳುಗಳಿಂದಲೂ ಸೃಷ್ಟಿಸಿದೆ. ನಾನು ಆ ಭೂಮಿಯನ್ನು ನನ್ನ ಮನಸ್ಸಿಗೆ ಬಂದವರಿಗೆ ಕೊಡಬಹುದು. 6 ಈಗ ನಾನು ನಿಮ್ಮೆಲ್ಲ ದೇಶಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸಿದ್ದೇನೆ. ಅವನು ನನ್ನ ಸೇವಕನಾಗಿದ್ದಾನೆ. ಕಾಡುಪ್ರಾಣಿಗಳು ಸಹ ಅವನ ಆಜ್ಞೆಯನ್ನು ಪಾಲಿಸುವಂತೆ ಮಾಡುವೆನು. 7 ಎಲ್ಲಾ ಜನಾಂಗಗಳು ನೆಬೂಕದ್ನೆಚ್ಚರನ, ಅವನ ಮಗನ ಮತ್ತು ಅವನ ಮೊಮ್ಮಗನ ಸೇವೆಮಾಡುವವು. ಆಮೇಲೆ ಬಾಬಿಲೋನನ್ನು ಸೋಲಿಸುವ ಸಮಯ ಬರುತ್ತದೆ. ಅನೇಕ ಜನಾಂಗಗಳು ಮತ್ತು ದೊಡ್ಡ ರಾಜರು ಬಾಬಿಲೋನನ್ನು ತಮ್ಮ ಸೇವಕನನ್ನಾಗಿ ಮಾಡಿಕೊಳ್ಳುವರು.
8 “‘ಆದರೆ ಈಗ ಕೆಲವು ಜನಾಂಗಗಳು ಅಥವಾ ರಾಜ್ಯಗಳು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಸೇವಿಸಲು ಒಪ್ಪಲಿಲ್ಲ. ಅವುಗಳು ಅವನ ನೊಗವನ್ನು ತಮ್ಮ ಕತ್ತಿನ ಮೇಲೆ ಇಟ್ಟುಕೊಳ್ಳಲು ಒಪ್ಪಲಿಲ್ಲ. ಆದ್ದರಿಂದ ನಾನು ಆ ಜನಾಂಗವನ್ನು ಖಡ್ಗ, ಹಸಿವು ಮತ್ತು ಭಯಂಕರ ವ್ಯಾಧಿಗಳಿಂದ ಶಿಕ್ಷಿಸುತ್ತೇನೆ, ಇದು ಯೆಹೋವನಿಂದ ಬಂದ ಸಂದೇಶ. ನಾನು ಆ ಜನಾಂಗವನ್ನು ನಾಶಗೊಳಿಸುವವರೆಗೂ ಹಾಗೆ ಮಾಡುವೆನು. ಅವನ ವಿರುದ್ಧ ಹೋರಾಡುವ ಜನಾಂಗವನ್ನು ನಾಶಮಾಡುವದಕ್ಕಾಗಿ ನಾನು ನೆಬೂಕದ್ನೆಚ್ಚರನನ್ನು ಉಪಯೋಗಿಸುತ್ತೇನೆ. 9 ಆದ್ದರಿಂದ ನಿಮ್ಮ ಪ್ರವಾದಿಗಳ ಮಾತುಗಳನ್ನು ಕೇಳಬೇಡಿರಿ. ಮಾಟಮಾಂತ್ರಗಳನ್ನು ಬಳಸಿ ಭವಿಷ್ಯವನ್ನು ಹೇಳುವವರ ಮಾತುಗಳನ್ನು ಕೇಳಬೇಡಿರಿ. ಕನಸುಗಳ ಗೂಢಾರ್ಥವನ್ನು ಹೇಳುವೆವೆಂಬ ಜನರ ಮಾತುಗಳನ್ನು ಕೇಳಬೇಡಿರಿ. ಸತ್ತವರೊಡನೆ ಮಾತನಾಡುವ ಅಥವಾ ಮಾಟಮಂತ್ರ ಮಾಡುವ ಜನರ ಮಾತುಗಳನ್ನು ಕೇಳಬೇಡಿರಿ. ಅವರೆಲ್ಲರೂ, “ನೀವು ಬಾಬಿಲೋನಿನ ರಾಜನಿಗೆ ಗುಲಾಮರಾಗುವದಿಲ್ಲ” ಎಂದು ಹೇಳುವರು. 10 ಆದರೆ ಅವರು ನಿಮಗೆ ಹೇಳುವುದು ಸುಳ್ಳುಗಳೇ. ಅವರು ನಿಮ್ಮನ್ನು ನಿಮ್ಮ ದೇಶದಿಂದ ಬಹುದೂರ ತೆಗೆದುಕೊಂಡು ಹೋಗುವರು. ನಾನು ನಿಮ್ಮನ್ನು ನಿಮ್ಮ ದೇಶದಿಂದ ಬಲವಂತವಾಗಿ ಹೊರಗಟ್ಟುವೆನು. ನೀವು ಅನ್ಯ ದೇಶದಲ್ಲಿ ಸಾಯುವಿರಿ.
11 “‘ಆದರೆ ಬಾಬಿಲೋನ್ ರಾಜನ ನೊಗಕ್ಕೆ ತಮ್ಮ ಹೆಗಲನ್ನು ಕೊಡುವ ಮತ್ತು ಅವನ ಆಜ್ಞೆಯನ್ನು ಪಾಲಿಸುವ ಜನಾಂಗಗಳು ಬದುಕುವವು. ಆ ಜನಾಂಗಗಳವರು ತಮ್ಮ ದೇಶದಲ್ಲಿಯೇ ಇದ್ದುಕೊಂಡು ಬಾಬಿಲೋನಿನ ರಾಜನ ಸೇವೆ ಮಾಡುವ ಅವಕಾಶವನ್ನು ಮಾಡಿಕೊಡುತ್ತೇನೆ. ಆ ಜನಾಂಗಗಳ ಜನರು ತಮ್ಮ ದೇಶದಲ್ಲಿಯೇ ವ್ಯವಸಾಯ ಮಾಡಿಕೊಂಡಿರುವರು.’” ಇದು ಯೆಹೋವನ ನುಡಿ.
16 ಆಗ ನಾನು (ಯೆರೆಮೀಯನು) ಯಾಜಕರಿಗೂ ಆ ಸಮಸ್ತ ಜನರಿಗೂ ಹೀಗೆ ಹೇಳಿದೆ: “ಯೆಹೋವನು ಹೇಳುತ್ತಾನೆ. ಆ ಸುಳ್ಳುಪ್ರವಾದಿಗಳು, ‘ಬಾಬಿಲೋನಿನವರು ಯೆಹೋವನ ಆಲಯದಿಂದ ಅನೇಕ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆ ವಸ್ತುಗಳನ್ನು ಬೇಗನೆ ಹಿಂದಕ್ಕೆ ತರಲಾಗುವುದು’ ಎಂದು ಹೇಳುತ್ತಿದ್ದಾರೆ. ಆ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿ. ಏಕೆಂದರೆ ಅವರು ನಿಮಗೆ ಸುಳ್ಳುಪ್ರವಾದನೆ ಮಾಡುತ್ತಿದ್ದಾರೆ. 17 ಆ ಪ್ರವಾದಿಗಳ ಮಾತನ್ನು ಕೇಳಬೇಡಿ. ಬಾಬಿಲೋನಿನ ರಾಜನ ಸೇವೆಮಾಡಿರಿ. ದಂಡನೆಗಳನ್ನು ಸ್ವಿಕರಿಸಿರಿ, ಆಗ ನೀವು ಬದುಕುವಿರಿ. ನಿಷ್ಕಾರಣವಾಗಿ ಈ ಜೆರುಸಲೇಮ್ ನಗರವು ಹಾಳಾಗಬಾರದು. 18 ಆ ಜನರು ಯೆಹೋವನ ಸಂದೇಶವನ್ನು ತಂದ ಪ್ರವಾದಿಗಳಾಗಿದ್ದರೆ, ಅವರು ಪ್ರಾರ್ಥನೆ ಸಲ್ಲಿಸಲಿ. ಇನ್ನೂ ಯೆಹೋವನ ಆಲಯದಲ್ಲಿರುವ ವಸ್ತುಗಳ ಬಗ್ಗೆ ಅವರು ಪ್ರಾರ್ಥನೆ ಸಲ್ಲಿಸಲಿ. ಇನ್ನೂ ರಾಜನ ಅರಮನೆಯಲ್ಲಿರುವ ವಸ್ತುಗಳ ಬಗ್ಗೆ ಅವರು ಪ್ರಾರ್ಥನೆ ಸಲ್ಲಿಸಲಿ. ಇನ್ನೂ ಜೆರುಸಲೇಮಿನಲ್ಲಿರುವ ಪದಾರ್ಥಗಳ ಬಗ್ಗೆ ಅವರು ಪ್ರಾರ್ಥನೆ ಸಲ್ಲಿಸಲಿ. ಆ ವಸ್ತುಗಳನ್ನೆಲ್ಲ ಬಾಬಿಲೋನಿಗೆ ತೆಗೆದುಕೊಂಡು ಹೋಗಬಾರದೆಂದು ಅವರು ಪ್ರಾರ್ಥನೆ ಸಲ್ಲಿಸಲಿ.
19 “ಸರ್ವಶಕ್ತನಾದ ಯೆಹೋವನು ಜೆರುಸಲೇಮಿನಲ್ಲಿ ಇನ್ನೂ ಉಳಿದ ವಸ್ತುಗಳ ಬಗ್ಗೆ ಹೀಗೆ ಹೇಳುತ್ತಾನೆ. ಯೆಹೋವನ ಆಲಯದಲ್ಲಿ ಕಂಬಗಳಿವೆ, ಕಂಚಿನ ಸಾಗರವಿದೆ, ಪೀಠಗಳಿವೆ ಮತ್ತು ಇತರ ವಸ್ತುಗಳಿವೆ. ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಆ ವಸ್ತುಗಳನ್ನು ಜೆರುಸಲೇಮಿನಲ್ಲಿಯೇ ಬಿಟ್ಟುಹೋದನು. 20 ನೆಬೂಕದ್ನೆಚ್ಚರನು ಯೆಹೂದದ ರಾಜನಾದ ಯೆಹೋಯಾಕೀನನನ್ನು ಸೆರೆಯಾಳಾಗಿ ತೆಗೆದುಕೊಂಡು ಹೋಗುವಾಗ ಆ ವಸ್ತುಗಳನ್ನು ತೆಗೆದುಕೊಂಡು ಹೋಗಲಿಲ್ಲ. ಯೆಹೋಯಾಕೀನನು ಯೆಹೋಯಾಕೀಮನ ಮಗನಾಗಿದ್ದನು. ನೆಬೂಕದ್ನೆಚ್ಚರನು ಯೆಹೂದ ಮತ್ತು ಜೆರುಸಲೇಮಿನಿಂದ ಬೇರೆ ಪ್ರಮುಖ ಜನರನ್ನು ಸಹ ತೆಗೆದುಕೊಂಡು ಹೋದನು. 21 ಸರ್ವಶಕ್ತನೂ ಇಸ್ರೇಲರ ದೇವರೂ ಆಗಿರುವ ಯೆಹೋವನ ಆಲಯದಲ್ಲಿ ಇನ್ನೂ ಉಳಿದ ವಸ್ತುಗಳ ಬಗ್ಗೆಯೂ ರಾಜನ ಅರಮನೆಯಲ್ಲಿ ಮತ್ತು ಜೆರುಸಲೇಮಿನಲ್ಲಿ ಇನ್ನೂ ಉಳಿದಿರುವ ವಸ್ತುಗಳ ಬಗ್ಗೆಯೂ ಹೀಗೆನ್ನುತ್ತಾನೆ: ‘ಆ ವಸ್ತುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಗುವುದು. 22 ಆ ವಸ್ತುಗಳು ಬಾಬಿಲೋನಿಗೆ ಒಯ್ಯಲ್ಪಟ್ಟು ನಾನು ಅವುಗಳನ್ನು ಅಲ್ಲಿಂದ ತರುವ ದಿವಸಗಳವರೆಗೆ ಅಲ್ಲಿಯೇ ಇರುವವು, ಆಮೇಲೆ ನಾನು ಆ ವಸ್ತುಗಳನ್ನು ತರುವೆನು. ನಾನು ಆ ವಸ್ತುಗಳನ್ನು ಮತ್ತೆ ಈ ಸ್ಥಳದಲ್ಲಿ ಇಡುವೆನು.’” ಇದು ಯೆಹೋವನ ನುಡಿ.
ಎಲ್ಲಾ ಜನರು ತಪ್ಪು ಮಾಡಿದ್ದಾರೆ
18 ದೇವರ ಕೋಪವು ಪರಲೋಕದಿಂದ ತೋರಿಬಂದಿದೆ. ಜನರು ದೇವರಿಗೆ ವಿರೋಧವಾಗಿ ಮಾಡುವ ಎಲ್ಲಾ ಕೆಟ್ಟ ಮತ್ತು ದುಷ್ಕೃತ್ಯಗಳ ಬಗ್ಗೆ ದೇವರು ಕೋಪ ಉಳ್ಳವನಾಗಿದ್ದಾನೆ. ಅವರಿಗೆ ಸತ್ಯವು ತಿಳಿದಿದೆ, ಆದರೆ ಅವರು ತಮ್ಮ ದುಷ್ಟಜೀವಿತಗಳಿಂದ ಸತ್ಯವನ್ನು ಅಡಗಿಸುತ್ತಾರೆ. 19 ದೇವರು ತನ್ನ ಕೋಪವನ್ನು ತೋರಿಸುತ್ತಾನೆ, ಏಕೆಂದರೆ ದೇವರ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ಅವರಿಗೆ ಸ್ಪಷ್ಟಪಡಿಸಲಾಗಿದೆ. ಹೌದು, ತನ್ನ ಬಗ್ಗೆ ತಿಳಿದುಕೊಳ್ಳಬಹುದಾದ ಪ್ರತಿಯೊಂದನ್ನೂ ದೇವರು ಜನರಿಗೆ ಸ್ಪಷ್ಟವಾಗಿ ತೋರಿಸಿದ್ದಾನೆ.
20 ಜನರು ದೇವರ ನಿತ್ಯಶಕ್ತಿಯನ್ನಾಗಲಿ ಆತನ ದೈವತ್ವಗಳನ್ನಾಗಲಿ ಕಾಣಲಾರರು. ಆದರೆ ಲೋಕದ ಆರಂಭದಿಂದಲೂ ಆ ಸಂಗತಿಗಳು ಜನರಿಗೆ ಸುಲಭವಾಗಿ ಅರ್ಥವಾಗುತ್ತವೆ. ದೇವರು ಮಾಡಿದ ಸೃಷ್ಟಿಗಳಲ್ಲಿ ಆ ಸಂಗತಿಗಳು ಸ್ಪಷ್ಟವಾಗಿವೆ. ಆದ್ದರಿಂದ ಜನರು ತಾವು ಮಾಡುವ ಕೆಟ್ಟಕಾರ್ಯಗಳಿಗೆ ನೆವ ಹೇಳಲು ಸಾಧ್ಯವಿಲ್ಲ.
21 ಜನರು ದೇವರನ್ನು ತಿಳಿದಿದ್ದರೂ ದೇವರನ್ನು ಮಹಿಮೆಪಡಿಸಲಿಲ್ಲ, ಆತನಿಗೆ ಕೃತಜ್ಞತೆಯನ್ನು ಸಲ್ಲಿಸಲಿಲ್ಲ. ಜನರ ಆಲೋಚನೆಯು ನಿಷ್ಪ್ರಯೋಜಕವಾಯಿತು. ಅವರ ಮೂಢಮನಸ್ಸುಗಳು ಕತ್ತಲೆಯಿಂದ ತುಂಬಿಹೋದವು. 22 ಜನರು ತಮ್ಮನ್ನು ಜ್ಞಾನಿಗಳೆಂದು ಹೇಳಿಕೊಂಡು ಮೂರ್ಖರಾದರು. 23 ಸದಾಕಾಲ ಜೀವಿಸುವ ದೇವರ ಮಹಿಮೆಯನ್ನು ಅವರು ಬಿಟ್ಟುಕೊಟ್ಟು ಮನುಷ್ಯರಂತಿರುವ, ಪಕ್ಷಿಗಳಂತಿರುವ, ಪ್ರಾಣಿಗಳಂತಿರುವ ಮತ್ತು ಹಾವುಗಳಂತಿರುವ ವಿಗ್ರಹಗಳನ್ನು ಮಾಡಿಕೊಂಡು ಅವುಗಳನ್ನು ಆರಾಧಿಸತೊಡಗಿದರು.
24 ಪಾಪಗಳಿಂದ ತುಂಬಿಹೋಗಿದ್ದ ಅವರು ದುಷ್ಕೃತ್ಯಗಳನ್ನೇ ಮಾಡಬಯಸಿದರು. ಆದ್ದರಿಂದ ಪಾಪಮಾರ್ಗದಲ್ಲೇ ಹೋಗಲೆಂದು ದೇವರು ಅವರನ್ನು ಬಿಟ್ಟುಬಿಟ್ಟನು. ಅದರಿಂದಾಗಿ ಅವರು ತಮ್ಮತಮ್ಮಲ್ಲೇ ತಮ್ಮ ದೇಹಗಳಿಂದ ಲೈಂಗಿಕ ಪಾಪಗಳನ್ನು ಮಾಡಿದರು. 25 ಅವರು ದೇವರ ಸತ್ಯವನ್ನು ತೊರೆದು ಸುಳ್ಳನ್ನು ಹಿಡಿದುಕೊಂಡರು; ಸೃಷ್ಟಿಸಲ್ಪಟ್ಟ ವಸ್ತುಗಳನ್ನು ಆರಾಧಿಸಿದರು; ಅವುಗಳ ಸೇವೆ ಮಾಡಿದರು. ಆದರೆ ಆ ವಸ್ತುಗಳನ್ನು ಸೃಷ್ಟಿಸಿದ ದೇವರನ್ನು ಅವರು ಆರಾಧಿಸಲಿಲ್ಲ; ಆತನ ಸೇವೆ ಮಾಡಲಿಲ್ಲ. ದೇವರಿಗೇ ನಿರಂತರ ಸ್ತುತಿಸ್ತೋತ್ರ ಸಲ್ಲಬೇಕು. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International