Revised Common Lectionary (Complementary)
ರಚನೆಗಾರ: ಸೊಲೊಮೋನ.
72 ದೇವರೇ, ನಿನ್ನಂತೆ ನ್ಯಾಯವಾಗಿ ತೀರ್ಪುನೀಡಲು ರಾಜನಿಗೆ ಕಲಿಸಿಕೊಡು.
ನಿನ್ನ ನೀತಿಯನ್ನು ಕಲಿತುಕೊಳ್ಳಲು ರಾಜಕುಮಾರನಿಗೆ ಸಹಾಯಮಾಡು.
2 ನಿನ್ನ ಜನರಿಗೆ ನೀತಿಯಿಂದಲೂ ನಿನ್ನ ಬಡಜನರಿಗೆ ನ್ಯಾಯವಾಗಿಯೂ
ತೀರ್ಪುಮಾಡಲು ಅವನಿಗೆ ಸಹಾಯಮಾಡು.
3 ಪ್ರಖ್ಯಾತವಾದ ಬೆಟ್ಟಗುಡ್ಡಗಳಲ್ಲೆಲ್ಲಾ,
ದೇಶದಲ್ಲೆಲ್ಲಾ ಶಾಂತಿಯೂ ನ್ಯಾಯವೂ ನೆಲೆಸಿರಲಿ.
4 ರಾಜನು ಬಡವರಿಗೆ ನ್ಯಾಯ ದೊರಕಿಸಿಕೊಡಲಿ; ನಿಸ್ಸಹಾಯಕರಿಗೆ ಸಹಾಯಮಾಡಲಿ.
ಅವರಿಗೆ ಕೇಡುಮಾಡುವವರನ್ನು ರಾಜನು ದಂಡಿಸಲಿ.
5 ಸೂರ್ಯಚಂದ್ರರು ಆಕಾಶದಲ್ಲಿ ಇರುವವರೆಗೂ
ಜನರು ರಾಜನಿಗೆ ಭಯಪಡಲಿ; ಅವನನ್ನು ಗೌರವಿಸಲಿ.
6 ಹುಲ್ಲುಗಾವಲಿನ ಮೇಲೆ ಸುರಿಯುವ ಮಳೆಯಂತೆಯೂ
ಭೂಮಿಯನ್ನು ಹದಗೊಳಿಸುವ ಹಿತವಾದ ಮಳೆಯಂತೆಯೂ ನೀನು ಅವನಿಗೆ ಸಹಾಯಕನಾಗಿರು.
7 ಅವನ ಆಡಳಿತದ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ.
ಚಂದ್ರನಿರುವವರೆಗೂ ಶಾಂತಿ ನೆಲಸಿರಲಿ.
8 ಅವನ ರಾಜ್ಯವು ಸಮುದ್ರದಿಂದ ಸಮುದ್ರದವರೆಗೂ
ಯೂಫ್ರೇಟೀಸ್ ನದಿಯಿಂದ ಭೂಮಿಯ ಬಹುದೂರದ ಸ್ಥಳದವರೆಗೂ ಬೆಳೆಯಲಿ.
9 ಅರಣ್ಯದಲ್ಲಿ ವಾಸಿಸುತ್ತಿರುವ ಜನರು ಅವನಿಗೆ ಅಡ್ಡಬೀಳಲಿ.
ಅವನ ವೈರಿಗಳೆಲ್ಲ ಅವನ ಮುಂದೆ ಬಿದ್ದು ಮಣ್ಣುಮುಕ್ಕಲಿ.
10 ತಾರ್ಷೀಷಿನ ರಾಜರುಗಳೂ ಬಹುದೂರದ ದೇಶಗಳವರೂ ಅವನಿಗೆ ಉಡುಗೊರೆಗಳನ್ನು ಕೊಡಲಿ.
ಶೆಬಾ ಮತ್ತು ಸೆಬಾ ಪ್ರಾಂತ್ಯಗಳ ರಾಜರುಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಕೊಡಲಿ.
11 ಅರಸರುಗಳೆಲ್ಲಾ ನಮ್ಮ ರಾಜನಿಗೆ ಅಡ್ಡಬೀಳಲಿ.
ಜನಾಂಗಗಳೆಲ್ಲಾ ಅವನ ಸೇವೆಮಾಡಲಿ.
12 ನಮ್ಮ ರಾಜನು ನಿಸ್ಸಹಾಯಕರಿಗೆ ಸಹಾಯ ಮಾಡುವನು.
ನಮ್ಮ ರಾಜನು ಬಡವರಿಗೂ ಅಸಹಾಯಕರಿಗೂ ಸಹಾಯ ಮಾಡುವನು.
13 ಬಡವರೂ ಅಸಹಾಯಕರೂ ಅವನನ್ನೇ ಅವಲಂಬಿಸಿಕೊಳ್ಳುವರು.
ರಾಜನು ಅವರ ಪ್ರಾಣಗಳನ್ನು ಕಾಪಾಡುವನು.
14 ಕ್ರೂರಿಗಳಿಂದ ಅವರನ್ನು ತಪ್ಪಿಸಿ ರಕ್ಷಿಸುವನು.
ಆ ಬಡವರ ಜೀವಗಳು ರಾಜನಿಗೆ ಅಮೂಲ್ಯವಾಗಿವೆ.
15 ರಾಜನು ಬಹುಕಾಲ ಬಾಳಲಿ!
ಅವನಿಗೆ ಶೆಬಾ ಪ್ರಾಂತ್ಯದಿಂದ ಬಂಗಾರವು ಬರಲಿ.
ರಾಜನಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
ಪ್ರತಿದಿನವೂ ಅವನನ್ನು ಆಶೀರ್ವದಿಸಿರಿ.
16 ಹೊಲಗಳು ಯಥೇಚ್ಚವಾಗಿ ಧಾನ್ಯಬೆಳೆಯಲಿ.
ಬೆಟ್ಟಗಳು ಬೆಳೆಗಳಿಂದ ತುಂಬಿಹೋಗಲಿ.
ಹೊಲಗಳು ಲೆಬನೋನಿನಲ್ಲಿರುವ ಹೊಲಗಳಂತೆ ಫಲವತ್ತಾಗಿರಲಿ.
ಬಯಲುಗಳು ಹುಲ್ಲಿನಿಂದ ಆವೃತಿಯಾಗಿರುವಂತೆ ಪಟ್ಟಣಗಳು ಜನರಿಂದ ತುಂಬಿಹೋಗಲಿ.
17 ರಾಜನು ಎಂದೆಂದಿಗೂ ಪ್ರಸಿದ್ಧನಾಗಿರಲಿ.
ಸೂರ್ಯನು ಇರುವವರೆಗೂ ಜನರು ಅವನ ಹೆಸರನ್ನು ಜ್ಞಾಪಿಸಿಕೊಳ್ಳಲಿ.
ಅವನಿಂದ ಜನರಿಗೆ ಆಶೀರ್ವಾದವಾಗಲಿ.
ಜನರೆಲ್ಲರೂ ಅವನನ್ನು ಆಶೀರ್ವದಿಸಲಿ.
18 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ.
ಅಂಥ ಅದ್ಭುತಕಾರ್ಯಗಳನ್ನು ದೇವರೊಬ್ಬನೇ ಮಾಡಬಲ್ಲನು!
19 ಆತನ ಪ್ರಭಾವಪೂರ್ಣವಾದ ಹೆಸರನ್ನು ಎಂದೆಂದಿಗೂ ಕೊಂಡಾಡಿರಿ!
ಆತನ ಮಹಿಮೆ ಭೂಲೋಕವನ್ನೆಲ್ಲಾ ತುಂಬಿಕೊಳ್ಳಲಿ!
ಆಮೆನ್, ಆಮೆನ್!
20 (ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯಗೊಂಡವು.)
ಬೆತ್ಲೆಹೇಮಿನಲ್ಲಿ ಮೆಸ್ಸೀಯನು ಜನಿಸುವನು
2 ಎಫ್ರಾತದ ಬೆತ್ಲೆಹೇಮೇ,
ನೀನು ಯೆಹೂದದ ಪ್ರಾಂತ್ಯದಲ್ಲಿ ಅತಿ ಚಿಕ್ಕ ಊರು ಆಗಿರುವೆ.
ನಿನ್ನಲ್ಲಿರುವ ಕುಟುಂಬಗಳು ಸ್ವಲ್ಪ ಮಾತ್ರವೇ.
ಆದರೆ ಇಸ್ರೇಲನ್ನು ಆಳುವವನು ನನಗೋಸ್ಕರವಾಗಿ ನಿನ್ನಿಂದ ಹೊರಡುವನು.
ಆತನ ಪ್ರಾರಂಭವು ಅನಾದಿ ಕಾಲದಿಂದಲೇ ಆಗಿದೆ.
3 ಸ್ತ್ರೀಯು ತನ್ನ ಮಗನನ್ನು ಹೆರುವ ತನಕ
ಯೆಹೋವನು ತನ್ನ ಜನರನ್ನು ತೊರೆದುಬಿಡುವನು.
ಅನಂತರ ಉಳಿದ ಅವನ ಸಹೋದರರು
ಇಸ್ರೇಲ್ ಜನರ ಬಳಿಗೆ ತಿರುಗಿ ಬರುವರು.
4 ಆಗ ಇಸ್ರೇಲರನ್ನು ಆಳುವಾತನು ಯೆಹೋವನ ಶಕ್ತಿಯಲ್ಲಿಯೂ
ತನ್ನ ದೇವರಾದ ಯೆಹೋವನ ಹೆಸರಿನಲ್ಲಿಯೂ ನಿಂತು ತನ್ನ ಮಂದೆಗೆ ಆಹಾರವನ್ನೀಯುವನು.
ಆತನ ಮಹತ್ತು ಭೂಮಿಯ ಕಟ್ಟಕಡೆಗೆ ಪ್ರಸರಿಸುವದರಿಂದ
ಅವರು ಸಮಾಧಾನದಿಂದ ವಾಸಿಸುವರು.
5 ಆಗ ಶಾಂತಿ ನೆಲೆಸುವದು.
ಹೌದು, ಅಶ್ಶೂರದ ಸೈನ್ಯವು ನಮ್ಮ ದೇಶಕ್ಕೆ ಬಂದು
ನಮ್ಮ ಮಹಾ ಕಟ್ಟಡಗಳನ್ನು ತುಳಿದುಹಾಕುವರು.
ಆದರೆ ಇಸ್ರೇಲನ್ನು ಆಳುವಾತನು ಏಳು ಕುರುಬರನ್ನೂ
ಎಂಟು ನಾಯಕರನ್ನೂ ಆರಿಸುವನು.
6 ಅವರು ತಮ್ಮ ಖಡ್ಗಗಳನ್ನು ಉಪಯೋಗಿಸಿ ಅಶ್ಶೂರದವರನ್ನು ಆಳುವರು.
ಅವರು ನಿಮ್ರೋದನ ದೇಶವನ್ನು ಆಳುವರು.
ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಆ ಜನರನ್ನು ಆಳುವರು.
ಆದರೆ ಇಸ್ರೇಲಿನ ರಾಜನು ಅಶ್ಶೂರದವರಿಂದ ನಮ್ಮನ್ನು ರಕ್ಷಿಸುವನು.
ಅವರು ನಮ್ಮ ದೇಶದೊಳಕ್ಕೆ ಬಂದು ನಮ್ಮ ಪ್ರದೇಶವನ್ನು ತುಳಿದು ಹಾಳುಮಾಡುವಾಗ ನಾವು ರಕ್ಷಿಸಲ್ಪಡುವೆವು.
7 ಆದರೆ ಜನಾಂಗಗಳಲ್ಲಿ ಚದರಿರುವ ಇಸ್ರೇಲಿನ ಅಳಿದುಳಿದವರು
ಯೆಹೋವನಿಂದ ಹೊರಡುವ ಮಂಜಿನಂತಿರುವರು.
ಅದು ಯಾರನ್ನೂ ಕಾಯುವದಿಲ್ಲ.
ಅವರು ಹುಲ್ಲಿನ ಮೇಲೆ ಬಿದ್ದಿರುವ ಮಳೆಯಂತಿರುವರು.
ಆ ಮಳೆಯು ಯಾರನ್ನೂ ಕಾಯುವದಿಲ್ಲ.
8 ಆದರೆ ಜನಾಂಗಗಳಲ್ಲಿ ಚದರಿರುವ
ಯಾಕೋಬನ ವಂಶದ ಅಳಿದುಳಿದವರು,
ಕಾಡಿನಲ್ಲಿರುವ ಪ್ರಾಣಿಗಳಲ್ಲಿ ಸಿಂಹವು ಹೇಗೆ ಇರುವದೋ, ಹಾಗೆಯೇ ಇರುವರು.
ಕುರಿಗಳ ಹಿಂಡಿನ ಮಧ್ಯೆಯಿರುವ ಪ್ರಾಯದ ಸಿಂಹದಂತಿರುವರು.
ಅದು ತನಗೆ
ಇಷ್ಟ ಬಂದಂತೆ ತಿರುಗಾಡುವದು.
ಅದು ಒಂದು ಪ್ರಾಣಿಯನ್ನು ಹಿಡಿದರೆ
ಅದನ್ನು ಬಿಡಿಸಲು ಯಾರಿಂದಲೂ ಸಾಧ್ಯವಿಲ್ಲ.
ಜನಶೇಷವು ಅದರಂತಿರುವದು.
9 ನೀನು ನಿನ್ನ ವೈರಿಗಳ ಮೇಲೆ ಕೈ ಎತ್ತಿ
ಅವರನ್ನು ನಾಶಮಾಡುವೆ.
ಜೆರುಸಲೇಮಿನಲ್ಲಿ ಯೇಸುವಿನ ಮರಣ
(ಮತ್ತಾಯ 23:37-39)
31 ಆ ಸಮಯದಲ್ಲಿ ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು, “ಇಲ್ಲಿಂದ ಹೋಗಿ ಅಡಗಿಕೊ! ಹೆರೋದನು ನಿನ್ನನ್ನು ಕೊಲ್ಲಬೇಕೆಂದಿದ್ದಾನೆ!” ಎಂದು ಹೇಳಿದರು.
32 ಯೇಸು ಅವರಿಗೆ, “ನೀವು ಹೋಗಿ ಆ ನರಿಗೆ (ಹೆರೋದನಿಗೆ), ‘ಈ ದಿನ ಮತ್ತು ನಾಳೆ ನಾನು ಜನರನ್ನು ದೆವ್ವಗಳಿಂದ ಬಿಡಿಸುತ್ತೇನೆ ಮತ್ತು ರೋಗಿಗಳನ್ನು ಗುಣಪಡಿಸುವ ಕಾರ್ಯವನ್ನು ಪೂರ್ಣಗೊಳಿಸುತ್ತೇನೆ. ನಾಳಿದ್ದು, ನನ್ನ ಕಾರ್ಯವೆಲ್ಲಾ ಸಂಪೂರ್ಣ ಮುಕ್ತಾಯವಾಗುವುದು’ ಎಂದು ಹೇಳಿರಿ. 33 ಅನಂತರ ನಾನು ಜೆರುಸಲೇಮಿಗೆ ಹೋಗಬೇಕು. ಏಕೆಂದರೆ ಪ್ರವಾದಿಗಳು ಅಲ್ಲೇ ಕೊಲ್ಲಲ್ಪಡತಕ್ಕದ್ದು.
34 “ಜೆರುಸಲೇಮೇ, ಜೆರುಸಲೇಮೇ! ನೀನು ಪ್ರವಾದಿಗಳನ್ನು ಕೊಲ್ಲುವವಳು. ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ನೀನು ಕಲ್ಲೆಸೆದು ಕೊಲ್ಲುವೆ. ಕೋಳಿ ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಾನು ನಿನ್ನ ಜನರಿಗೆ ಸಹಾಯ ಮಾಡಲು ಎಷ್ಟೋ ಸಲ ಅಪೇಕ್ಷಿಸಿದೆ. ಆದರೆ ನೀನು ನನಗೆ ಆಸ್ಪದವನ್ನು ಕೊಡಲಿಲ್ಲ. 35 ನಿನ್ನ ಆಲಯವು ಬರಿದಾಗುವುದು. ‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ಆಶೀರ್ವಾದ!’(A) ಎಂದು ಹೇಳುವ ಸಮಯದ ತನಕ ನೀನು ನನ್ನನ್ನು ನೋಡುವುದೇ ಇಲ್ಲವೆಂದು ನಾನು ನಿನಗೆ ಹೇಳುತ್ತೇನೆ” ಎಂದನು.
Kannada Holy Bible: Easy-to-Read Version. All rights reserved. © 1997 Bible League International