Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ರಾಜರುಗಳು 3-5

ಜ್ಞಾನಕ್ಕಾಗಿ ಸೊಲೊಮೋನನ ಬೇಡಿಕೆ

ಸೊಲೊಮೋನನು ಈಜಿಪ್ಟಿನ ರಾಜನಾದ ಫರೋಹನ ಮಗಳನ್ನು ಮದುವೆಯಾಗಿ ಅವನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡನು. ಸೊಲೊಮೋನನು ಅವಳನ್ನು ದಾವೀದನಗರಕ್ಕೆ ಕರೆದು ತಂದನು. ಸೊಲೊಮೋನನು ಆ ಸಮಯದಲ್ಲಿ ತನ್ನ ಅರಮನೆಯನ್ನು ಮತ್ತು ಯೆಹೋವನ ದೇವಾಲಯಗಳನ್ನು ನಿರ್ಮಿಸುತ್ತಿದ್ದನು. ಜೆರುಸಲೇಮಿನ ಸುತ್ತಲೂ ಒಂದು ಗೋಡೆಯನ್ನು ಸಹ ಸೊಲೊಮೋನನು ನಿರ್ಮಿಸುತ್ತಿದ್ದನು. ದೇವಾಲಯದ ನಿರ್ಮಾಣವು ಇನ್ನೂ ಪೂರ್ಣಗೊಂಡಿರಲಿಲ್ಲ. ಆದ್ದರಿಂದ ಜನರು ಅದುವರೆವಿಗೂ ಎತ್ತರವಾದ ಸ್ಥಳಗಳಲ್ಲಿ ಯಜ್ಞವೇದಿಕೆಯ ಮೇಲೆ ಪಶುಗಳ ಯಜ್ಞಗಳನ್ನು ಸಮರ್ಪಿಸುತ್ತಿದ್ದರು. ಸೊಲೊಮೋನನು ತನಗೆ ಯೆಹೋವನ ಮೇಲಿದ್ದ ಪ್ರೀತಿಯನ್ನು ತೋರ್ಪಡಿಸಿದನು. ಅವನ ತಂದೆಯಾದ ದಾವೀದನು ಅವನಿಗೆ ಮಾಡಬೇಕೆಂದು ಹೇಳಿದ್ದ ಎಲ್ಲ ಕಾರ್ಯಗಳನ್ನು ಮಾಡುವುದರ ಮೂಲಕ ವಿಧೇಯತೆಯನ್ನು ತೋರ್ಪಡಿಸಿದನು. ಆದರೆ ಸೊಲೊಮೋನನು ತನಗೆ ದಾವೀದನು ಹೇಳದೆ ಇದ್ದ ಕೆಲವು ಕಾರ್ಯಗಳನ್ನೂ ಮಾಡಿದನು. ಸೊಲೊಮೋನನು ಎತ್ತರವಾದ ಸ್ಥಳಗಳನ್ನು ಯಜ್ಞವನ್ನರ್ಪಿಸಲು ಮತ್ತು ಧೂಪಹಾಕಲು ಉಪಯೋಗಿಸುತ್ತಿದ್ದನು.

ರಾಜನಾದ ಸೊಲೊಮೋನನು ಯಜ್ಞವನ್ನು ಅರ್ಪಿಸಲು ಗಿಬ್ಯೋನಿಗೆ ಹೋದನು. ಅದು ಅತ್ಯಂತ ಮುಖ್ಯವಾದ ಎತ್ತರದ ಸ್ಥಳವಾದುದರಿಂದ ಅವನು ಅಲ್ಲಿಗೆ ಹೋದನು. ಸೊಲೊಮೋನನು ಒಂದು ಸಾವಿರ ಯಜ್ಞಗಳನ್ನು ಯಜ್ಞವೇದಿಕೆಯ ಮೇಲೆ ಅರ್ಪಿಸಿದನು. ಸೊಲೊಮೋನನು ಗಿಬ್ಯೋನಿನಲ್ಲಿದ್ದಾಗ, ಯೆಹೋವನು ರಾತ್ರಿ ಕನಸಿನಲ್ಲಿ ಅವನಿಗೆ ದರ್ಶನವನ್ನು ನೀಡಿ, “ನೀನು ಏನುಬೇಕಾದರೂ ಕೇಳು. ನಾನು ಅದನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.

ಸೊಲೊಮೋನನು, “ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ನೀನು ಬಹಳ ದಯಾಪರನಾಗಿದ್ದೆ. ಅವನು ನಿನ್ನನ್ನು ಅನುಸರಿಸಿದನು. ಅವನು ಒಳ್ಳೆಯವನಾಗಿದ್ದು ನೀತಿವಂತನಾಗಿ ಬದುಕಿದನು. ಅವನ ನಂತರ ಅವನ ಮಗನನ್ನು ಅವನ ಸಿಂಹಾಸನದಲ್ಲಿ ಕುಳ್ಳಿರಿಸಿ ಆಳಲು ನೇಮಿಸಿ ನೀನು ಮಹಾಕೃಪೆಯನ್ನು ತೋರಿಸಿದೆ. ನನ್ನ ದೇವರಾದ ಯೆಹೋವನೇ, ನನ್ನ ತಂದೆಯ ಸ್ಥಾನದಲ್ಲಿ ನನ್ನನ್ನು ನೀನು ರಾಜನನ್ನಾಗಿ ಮಾಡಿದೆ. ಆದರೆ ನಾನೊಬ್ಬ ಚಿಕ್ಕ ಮಗುವಿನಂತಿದ್ದೇನೆ. ನಾನು ಮಾಡಬೇಕಾದ ಕಾರ್ಯಗಳನ್ನು ಮಾಡಲು ಇರಬೇಕಾದ ಬುದ್ದಿವಂತಿಕೆಯು ನನ್ನಲ್ಲಿಲ್ಲ. ನಿನ್ನ ಸೇವಕನಾದ ನಾನು, ನೀನೇ ಆರಿಸಿಕೊಂಡಿರುವ ಜನರ ನಡುವೆ ಇದ್ದೇನೆ. ಇಲ್ಲಿ ಅನೇಕಾನೇಕ ಜನರಿದ್ದಾರೆ. ಅವರನ್ನು ಎಣಿಸಲಾಗದು, ಒಬ್ಬ ಆಡಳಿತಗಾರನು ಅವರ ಮಧ್ಯದಲ್ಲಿದ್ದು ಅನೇಕ ತೀರ್ಪುಗಳನ್ನು ಮಾಡಬೇಕಾಗುತ್ತದೆ. ಆದ್ದರಿಂದ ನಿನ್ನ ಜನರನ್ನು ಒಳ್ಳೆಯ ರೀತಿಯಲ್ಲಿ ಆಳಲು ಮತ್ತು ಅವರಿಗೆ ಸರಿಯಾದ ತೀರ್ಪುಗಳನ್ನು ನೀಡಲು ನನಗೆ ವಿವೇಕವನ್ನು ಕರುಣಿಸು. ಇದು ನನಗೆ ಸರಿ ಮತ್ತು ತಪ್ಪುಗಳ ನಡುವಿರುವ ಭೇದವನ್ನು ತಿಳಿಸಿಕೊಡುತ್ತದೆ. ನನಗೆ ಉತ್ತಮವಾದ ವಿವೇಕವಿಲ್ಲದಿದ್ದರೆ, ನಾನು ಈ ಮಹಾಜನಾಂಗವನ್ನು ಆಳುವುದು ಸಾಧ್ಯವಾಗುವುದಿಲ್ಲ” ಎಂದು ಉತ್ತರಿಸಿದನು.

10 ಸೊಲೊಮೋನನ ಈ ಕೋರಿಕೆಯನ್ನು ಕೇಳಿ ಯೆಹೋವನಿಗೆ ಸಂತೋಷವಾಯಿತು. 11 ಆದ್ದರಿಂದ ದೇವರು ಅವನಿಗೆ, “ನೀನು ನಿನಗಾಗಿ ಹೆಚ್ಚು ಆಯಸ್ಸನ್ನೂ ಕೇಳಲಿಲ್ಲ, ಶ್ರೀಮಂತಿಕೆಯನ್ನೂ ಕೇಳಲಿಲ್ಲ, ನಿನ್ನ ಶತ್ರುಗಳಿಗೆ ಮರಣವನ್ನು ದಯಪಾಲಿಸೆಂದೂ ಕೇಳಲಿಲ್ಲ, ನೀನು ನ್ಯಾಯವಾದ ತೀರ್ಪು ನೀಡಲು ವಿವೇಕವನ್ನು ಕೇಳಿದೆ. 12 ನಿನ್ನ ಕೋರಿಕೆಯನ್ನು ಅನುಗ್ರಹಿಸುವೆನು; ನಿನ್ನನ್ನು ಜ್ಞಾನಿಯನ್ನಾಗಿಯೂ ವಿವೇಕಿಯನ್ನಾಗಿಯೂ ಮಾಡುವೆನು. ಪೂರ್ವಕಾಲದಲ್ಲಿ ನಿನ್ನಂತವರು ಯಾರೊಬ್ಬರೂ ಇರಲಿಲ್ಲ ಎನ್ನುವಷ್ಟು ಜ್ಞಾನಿಯನ್ನಾಗಿ ನಿನ್ನನ್ನು ಮಾಡುತ್ತೇನೆ. ಮುಂದೆ ನಿನ್ನಂತವರು ಯಾರೊಬ್ಬರೂ ಇರುವುದಿಲ್ಲ. 13 ನೀನು ಕೇಳದೆಹೋದ ಬಿನ್ನಹಗಳನ್ನು ನಾನು ನಿನಗೆ ಅನುಗ್ರಹಿಸುತ್ತೇನೆ. ನಿನ್ನ ಜೀವವಿರುವವರೆಗೆ ನೀನು ಶ್ರೀಮಂತನಾಗಿದ್ದು ಘನಮಾನವನ್ನು ಹೊಂದುವಿ. ಪ್ರಪಂಚದಲ್ಲಿ ನಿನ್ನಂತಹ ಉನ್ನತವಾದ ಬೇರೊಬ್ಬ ರಾಜನು ಇರುವುದಿಲ್ಲ. 14 ನೀನು ನನ್ನ ಕಟ್ಟಳೆಗಳನ್ನು ಆಜ್ಞೆಗಳನ್ನು ಅನುಸರಿಸುವುದರ ಮೂಲಕ ನನಗೆ ವಿಧೇಯನಾಗಿರಬೇಕು ಎಂದು ಹೇಳುತ್ತೇನೆ. ನಿನ್ನ ತಂದೆಯಾದ ದಾವೀದನು ನಡೆದ ಮಾರ್ಗದಲ್ಲಿ ನೀನೂ ನಡೆ. ಆಗ ನಾನು ನಿನಗೆ ದೀರ್ಘಾಯುಷ್ಯವನ್ನು ಕೊಡುತ್ತೇನೆ” ಎಂದು ಹೇಳಿದನು.

15 ಸೊಲೊಮೋನನು ಎಚ್ಚರಗೊಂಡನು. ದೇವರು ಕನಸಿನಲ್ಲಿ ತನ್ನೊಡನೆ ಮಾತನಾಡಿದನೆಂಬುದು ಅವನಿಗೆ ತಿಳಿಯಿತು. ನಂತರ ಸೊಲೊಮೋನನು ಜೆರುಸಲೇಮಿಗೆ ಹೋಗಿ, ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಎದುರಿನಲ್ಲಿ ನಿಂತುಕೊಂಡನು. ಸೊಲೊಮೋನನು ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಅರ್ಪಿಸಿದನು. ಅನಂತರ ಅವನು ತನ್ನ ಆಳ್ವಿಕೆಗೆ ಸಹಾಯ ಮಾಡಿದ ಎಲ್ಲ ನಾಯಕರಿಗೆ ಮತ್ತು ಅಧಿಕಾರಿಗಳಿಗೆ ಒಂದು ಔತಣವನ್ನೇರ್ಪಡಿಸಿದನು.

16 ಒಂದು ದಿನ ಇಬ್ಬರು ವೇಶ್ಯೆಯರು ಸೊಲೊಮೋನನ ಹತ್ತಿರಕ್ಕೆ ಬಂದರು. ಅವರು ರಾಜನ ಎದುರಿನಲ್ಲಿ ನಿಂತರು. 17 ಒಬ್ಬ ಸ್ತ್ರೀಯು, “ಸ್ವಾಮಿ, ನಾನು ಮತ್ತು ಈ ಸ್ತ್ರೀಯು ಒಂದೇ ಮನೆಯಲ್ಲಿ ವಾಸಿಸುತ್ತಿದ್ದೇವೆ. ನಾವಿಬ್ಬರೂ ಗರ್ಭಿಣಿಯರಾಗಿದ್ದೆವು ಮತ್ತು ನಮ್ಮ ಮಕ್ಕಳಿಗೆ ಜನ್ಮಕೊಡಲು ಸಿದ್ಧರಾಗಿದ್ದೆವು. ಅವಳು ನನ್ನ ಹತ್ತಿರ ಇದ್ದಾಗ ನಾನು ನನ್ನ ಮಗುವಿಗೆ ಜನ್ಮನೀಡಿದೆ. 18 ಮೂರು ದಿನಗಳ ತರುವಾಯ, ಈ ಸ್ತ್ರೀಯೂ ತನ್ನ ಮಗುವಿಗೆ ಜನ್ಮನೀಡಿದಳು. ಮನೆಯಲ್ಲಿ ನಮ್ಮೊಡನೆ ಬೇರೆ ಯಾರೂ ಇರಲಿಲ್ಲ. ಅಲ್ಲಿ ನಾವಿಬ್ಬರೇ ಇದ್ದೆವು. 19 ಒಂದು ರಾತ್ರಿ, ಈ ಸ್ತ್ರೀಯು ಗಾಢನಿದ್ರೆಯಲ್ಲಿ ತನ್ನ ಮಗುವಿನ ಮೇಲೆ ಹೊರಳಿದ್ದರಿಂದ ಆ ಮಗು ಸತ್ತುಹೋಯಿತು. 20 ಅಂದು ರಾತ್ರಿ ನಾನು ಗಾಢನಿದ್ರೆಯಲ್ಲಿರುವಾಗ ಈಕೆಯು ನನ್ನ ಹಾಸಿಗೆಯಿಂದ ನನ್ನ ಮಗುವನ್ನು ತೆಗೆದುಕೊಂಡು ತನ್ನ ಹಾಸಿಗೆಗೆ ಹೋದಳು; ತನ್ನ ಸತ್ತ ಮಗುವನ್ನು ನನ್ನ ಹಾಸಿಗೆಯಲ್ಲಿಟ್ಟಳು. 21 ಮುಂಜಾನೆ ನಾನು ಎಚ್ಚರಗೊಂಡು ನನ್ನ ಮಗುವಿಗೆ ಹಾಲು ಕುಡಿಸಲು ಸಿದ್ಧಳಾದಾಗ ಮಗು ಸತ್ತುಹೋಗಿರುವುದನ್ನು ಕಂಡೆನು. ಆ ಮಗುವನ್ನು ನಾನು ಸೂಕ್ಷ್ಮವಾಗಿ ನೋಡಿದಾಗ ಆ ಮಗು ನನ್ನದಲ್ಲವೆಂಬುದು ನನಗೆ ತಿಳಿಯಿತು” ಎಂದು ಹೇಳಿದಳು.

22 ಆದರೆ ಇನ್ನೊಬ್ಬ ಸ್ತ್ರೀಯು, “ಇಲ್ಲ! ಜೀವಂತವಾಗಿರುವ ಮಗು ನನ್ನದು. ಸತ್ತಿರುವ ಮಗು ನಿನ್ನದು!” ಎಂದು ಹೇಳಿದಳು.

ಆದರೆ ಮೊದಲನೆಯ ಸ್ತ್ರೀಯು, “ಇಲ್ಲ! ನೀನು ಸುಳ್ಳು ಹೇಳುತ್ತಿರುವೆ! ಸತ್ತಿರುವ ಮಗು ನಿನ್ನದು. ಜೀವಂತವಾಗಿರುವ ಮಗು ನನ್ನದು!” ಎಂದು ಹೇಳಿದಳು. ಹೀಗೆ ಆ ಇಬ್ಬರು ಸ್ತ್ರೀಯರು ರಾಜನ ಎದುರಿನಲ್ಲಿ ವಾದಿಸಿದರು.

23 ಆಗ ರಾಜನಾದ ಸೊಲೊಮೋನನು, “ಜೀವಂತವಾಗಿರುವ ಮಗು ನನ್ನದೆಂದೂ ಸತ್ತಿರುವ ಮಗು ಅವಳದೆಂದೂ ನೀವಿಬ್ಬರೂ ಹೇಳುತ್ತಿದ್ದೀರಲ್ಲವೇ?” ಎಂದು ಹೇಳಿ, 24 ತನ್ನ ಸೇವಕರಿಗೆ, “ಒಂದು ಕತ್ತಿಯನ್ನು ತೆಗೆದುಕೊಂಡು ಬಂದು 25 ಜೀವಂತವಾಗಿರುವ ಮಗುವನ್ನು ಕತ್ತರಿಸಿ ಅವರಿಬ್ಬರಿಗೂ ಅರ್ಧರ್ಧ ಮಗುವನ್ನು ಕೊಟ್ಟುಬಿಡಿ” ಎಂದು ಆಜ್ಞಾಪಿಸಿದನು.

26 ಆಗ ಎರಡನೆಯ ಸ್ತ್ರೀಯು, “ಈಗ ಸರಿಹೋಯಿತು. ಮಗುವನ್ನು ಎರಡು ಹೋಳುಮಾಡಿ. ಆಗ ನಮ್ಮಿಬ್ಬರಿಗೂ ಅವನಿರುವುದಿಲ್ಲ” ಎಂದಳು. ಆದರೆ ಮೊದಲನೆಯ ಸ್ತ್ರೀಯು, ಅಂದರೆ, ತನ್ನ ಮಗುವಿನ ಮೇಲೆ ತುಂಬಾ ಪ್ರೀತಿಯನ್ನಿಟ್ಟಿದ ನಿಜವಾದ ತಾಯಿಯು ರಾಜನಿಗೆ, “ದಯವಿಟ್ಟು ಆ ಮಗುವನ್ನು ಕೊಲ್ಲಬೇಡಿ ಸ್ವಾಮಿ! ಅವಳಿಗೇ ಕೊಟ್ಟುಬಿಡಿ” ಎಂದು ಹೇಳಿದಳು.

27 ಆಗ ಸೊಲೊಮೋನನು, “ಮಗುವನ್ನು ಕೊಲ್ಲಬೇಡಿ! ಅದನ್ನು ಮೊದಲನೆಯ ಸ್ತ್ರೀಗೆ ಕೊಡಿ. ಅವಳೇ ನಿಜವಾದ ತಾಯಿ” ಎಂದು ಹೇಳಿದನು.

28 ಸೊಲೊಮೋನನ ತೀರ್ಪಿನ ವಿಚಾರವು ಇಸ್ರೇಲಿನ ಜನರಿಗೆ ತಿಳಿಯಿತು. ಅವನು ವಿವೇಕಿಯಾದುದರಿಂದ ಅವರು ಅವನನ್ನು ಗೌರವಿಸಿದರು ಮತ್ತು ಸನ್ಮಾನಿಸಿದರು. ಅವನು ದೇವರ ಜ್ಞಾನದಿಂದ ಸಮಂಜಸವಾದ ತೀರ್ಪು ನೀಡುತ್ತಾನೆಂದು ಅವರು ಕಂಡುಕೊಂಡರು.

ಸೊಲೊಮೋನನ ರಾಜ್ಯ

ರಾಜನಾದ ಸೊಲೊಮೋನನು ಇಸ್ರೇಲಿನ ಜನತೆಯನ್ನೆಲ್ಲ ಆಳಿದನು. ಅವನಿಗೆ ಆಳಲು ನೆರವಾದ ಅವನ ಮುಖ್ಯಾಧಿಕಾರಿಗಳ ಹೆಸರುಗಳು ಹೀಗಿವೆ:

ಚಾದೋಕನ ಮಗನಾದ ಅಜರ್ಯನು ಯಾಜಕನಾಗಿದ್ದನು.

ಶೀಷನ ಮಕ್ಕಳಾದ ಎಲೀಹೋರೆಫ್ ಮತ್ತು ಅಹೀಯಾಹು; ಇವರಿಬ್ಬರೂ ನ್ಯಾಯಾಲಯದಲ್ಲಿ ನಡೆದ ಸಂಗತಿಗಳ ಕುರಿತಾಗಿ ಟಿಪ್ಪಣಿ ಬರೆಯುವ ಉದ್ಯೋಗವನ್ನು ಹೊಂದಿದ್ದರು.

ಅಹೀಲೂದನ ಮಗನಾದ ಯೆಹೋಷಾಫಾಟನು ಜನರ ಇತಿಹಾಸದ ಕುರಿತು ಟಿಪ್ಪಣಿ ಬರೆದನು.

ಯೆಹೋಯಾದಾವನ ಮಗನಾದ ಬೆನಾಯ; ಬೆನಾಯನು ಸೇನಾಧಿಪತಿಯಾಗಿದ್ದನು.

ಚಾದೋಕ ಮತ್ತು ಎಬ್ಯಾತಾರರು; ಚಾದೋಕ ಮತ್ತು ಎಬ್ಯಾತಾರರು ಯಾಜಕರಾಗಿದ್ದರು.

ನಾತಾನನ ಮಗನಾದ ಅಜರ್ಯ; ಅಜರ್ಯನು ಜಿಲ್ಲಾ ಅಧಿಕಾರಿಗಳ ಮೇಲ್ವಿಚಾರಕನಾಗಿದ್ದನು.

ನಾತಾನನ ಮಗನಾದ ಚಾಬೂದ; ಚಾಬೂದನು ರಾಜನಾದ ಸೊಲೊಮೋನನಿಗೆ ಯಾಜಕನೂ ಸಲಹೆಗಾರನೂ ಆಗಿದ್ದನು.

ಅಹೀಷಾರ್; ಅಹೀಷಾರನು ರಾಜನ ಅರಮನೆಯ ಪ್ರತಿಯೊಂದರಲ್ಲೂ ಜವಾಬ್ದಾರನಾಗಿದ್ದನು.

ಅಬ್ದನ ಮಗನಾದ ಅದೋನೀರಾಮ; ಅದೋನೀರಾಮನು ಗುಲಾಮರ ಮೇಲ್ವಿಚಾರಕನಾಗಿದ್ದನು.

ಇಸ್ರೇಲರನ್ನು ಹನ್ನೆರಡು ವಿಭಾಗ ಮಾಡಿ ಅವುಗಳನ್ನು ಜಿಲ್ಲೆಗಳೆಂದು ಕರೆದರು. ಪ್ರತಿಯೊಂದು ಜಿಲ್ಲೆಯನ್ನು ಆಳಲು ಸೊಲೊಮೋನನು ರಾಜ್ಯಪಾಲರನ್ನು ನೇಮಿಸಿದನು. ಈ ರಾಜ್ಯಪಾಲರು ತಮ್ಮ ಜಿಲ್ಲೆಗಳಿಂದ ಆಹಾರಪದಾರ್ಥಗಳನ್ನು ಸಂಗ್ರಹಿಸಿ ರಾಜನಿಗೂ ಅವನ ಕುಟುಂಬಕ್ಕೂ ಕೊಡಬೇಕೆಂದು ಆಜ್ಞಾಪಿಸಿದನು. ಪ್ರತಿಯೊಬ್ಬ ರಾಜ್ಯಪಾಲನು ವರ್ಷಕ್ಕೆ ಒಂದು ತಿಂಗಳು ರಾಜನಿಗೆ ಆಹಾರಪದಾರ್ಥಗಳನ್ನು ಕೊಡುವ ಜವಾಬ್ದಾರಿಯನ್ನು ಹೊಂದಿದ್ದನು. ಹನ್ನೆರಡು ರಾಜ್ಯಪಾಲರುಗಳ ಹೆಸರುಗಳು ಹೀಗಿವೆ:

ಎಫ್ರಾಯೀಮ್ ಬೆಟ್ಟಪ್ರದೇಶಕ್ಕೆ ಬೆನ್-ಹೂರನು ರಾಜ್ಯಪಾಲನಾಗಿದ್ದನು.

ಮಾಕಚ್, ಶಾಲ್ಬೀಮ್, ಬೇತ್‌ಷೆಮೆಷ್, ಏಲೋನ್, ಬೇತ್‌ಹಾನಾನ್‌ಗಳಿಗೆ ಬೆನ್‌ದೆಕರನು ರಾಜ್ಯಪಾಲನಾಗಿದ್ದನು.

10 ಅರುಬ್ಬೋತ್, ಸೋಕೋ, ಹೇಫರ್‌ಗಳಿಗೆ ಬೆನ್‌ಹೆಸೆದನು ರಾಜ್ಯಪಾಲನಾಗಿದ್ದನು.

11 ನಾಫೋತ್ ದೋರ್‌ಗೆ ಬೆನ್‌ಅಬೀನಾದಾಬನು ರಾಜ್ಯಪಾಲನಾಗಿದ್ದನು. ಅವನು ಸೊಲೊಮೋನನ ಮಗಳಾದ ಟಾಫತಳನ್ನು ಮದುವೆಯಾಗಿದ್ದನು.

12 ತಾಣಕ್, ಮೆಗಿದ್ದೋ ಮತ್ತು ಚಾರೆತಾನಿನ ಅಂಚಿನಲ್ಲಿದ್ದ ಬೇತ್‌ಷೆಯಾನಿನ ಎಲ್ಲ ಪ್ರದೇಶಕ್ಕೆ ಅಹೀಲೂದನ ಮಗನಾದ ಬಾಣಾ ರಾಜ್ಯಪಾಲನಾಗಿದ್ದನು. ಇದು ಇಜ್ರೇಲಿನ ತಳದಲ್ಲಿ ಬೇತ್‌ಷೆಯಾನಿನಿಂದ ಅಬೇಲ್ ಮೆಹೋಲವರೆಗಿರುವ, ಯೊಕ್ಮೆಯಾನಿನ ಆಚೆಗಿರುವ ಪ್ರದೇಶ.

13 ರಾಮೋತ್ ಗಿಲ್ಯಾದಿಗೆ ಬೆನ್‌ಗೆಬೆರನು ರಾಜ್ಯಪಾಲನಾಗಿದ್ದನು. ಗಿಲ್ಯಾದಿನ ಮನಸ್ಸೆಯ ಮಗನಾದ ಯಾಯೀರನ ಗ್ರಾಮಗಳಿಗೂ ಮತ್ತು ಪಟ್ಟಣಗಳೆಲ್ಲಕ್ಕೂ ಅವನು ರಾಜ್ಯಪಾಲನಾಗಿದ್ದನು. ಅವನು ಬಾಷಾನಿನ ಅರ್ಗೋಬ್ ಜಿಲ್ಲೆಗೂ ರಾಜ್ಯಪಾಲನಾಗಿದ್ದನು. ಈ ಪ್ರದೇಶದಲ್ಲಿ ಗೋಡೆಗಳಿಂದ ಸುತ್ತುವರಿದ ಅರವತ್ತು ನಗರಗಳಿದ್ದವು. ಈ ನಗರಗಳ ದ್ವಾರದಲ್ಲಿ ಹಿತ್ತಾಳೆಯ ಸಲಾಕೆಗಳುಳ್ಳ ಬಾಗಿಲುಗಳಿದ್ದವು.

14 ಮಹನಯಿಮಿಗೆ ಇದ್ದೋವಿನ ಮಗನಾದ ಅಹೀನಾದಾಬನು ರಾಜ್ಯಪಾಲನಾಗಿದ್ದನು.

15 ನಫ್ತಾಲಿಗೆ ಅಹೀಮಾಚನು ರಾಜ್ಯಪಾಲನಾಗಿದ್ದನು. ಸೊಲೊಮೋನನ ಮಗಳಾದ ಬಾಸೆಮತಳನ್ನು ಇವನು ಮದುವೆಯಾಗಿದ್ದನು.

16 ಆಶೇರಿಗೂ ಅಲೋತಿಗೂ ಹೂಷೈಯನ ಮಗ ಬಾಣನು ರಾಜ್ಯಪಾಲನಾಗಿದ್ದನು.

17 ಇಸ್ಸಾಕಾರಿಗೆ ಫಾರೂಹನ ಮಗನಾದ ಯೆಹೋಷಾಫಾಟನು ರಾಜ್ಯಪಾಲನಾಗಿದ್ದನು.

18 ಬೆನ್ಯಾಮೀನಿಗೆ ಏಲನ ಮಗನಾದ ಶಿಮ್ಮಿಯು ರಾಜ್ಯಪಾಲನಾಗಿದ್ದನು.

19 ಊರಿಯ ಮಗನಾದ ಗೆಬೆರನು ಗಿಲ್ಯಾದಿನ ರಾಜ್ಯಪಾಲನಾಗಿದ್ದನು. ಅಮೋರಿಯರ ರಾಜನಾದ ಸೀಹೋನನು ಮತ್ತು ಬಾಷಾನಿನ ರಾಜನಾದ ಓಗನು ವಾಸವಾಗಿದ್ದ ರಾಜ್ಯವೇ ಗಿಲ್ಯಾದ್. ಆದರೆ ಆ ಜಿಲ್ಲೆಗೆ ಗೆಬೆರ್ ಒಬ್ಬನೇ ರಾಜ್ಯಪಾಲನಾಗಿದ್ದನು.

20 ಯೆಹೂದದಲ್ಲಿ ಮತ್ತು ಇಸ್ರೇಲಿನಲ್ಲಿ ಅನೇಕ ಜನರಿದ್ದರು. ಅಲ್ಲಿನ ಜನಸಂಖ್ಯೆಯು ಸಮುದ್ರತೀರದ ಮರಳಿನ ಕಣಗಳಷ್ಟಿತ್ತು. ಜನರು ಸಂತುಷ್ಟರಾಗಿ ಜೀವಿಸುತ್ತಿದ್ದರು. ಅವರು ತಿಂದು ಕುಡಿದು ಸಂತೋಷಿಸುತ್ತಿದ್ದರು.

21 ಸೊಲೊಮೋನನು ಯೂಫ್ರೇಟೀಸ್ ನದಿಯಿಂದ ಮೊದಲುಗೊಂಡು ಫಿಲಿಷ್ಟಿಯರ ದೇಶದವರೆಗಿನ ರಾಜ್ಯಗಳನ್ನೆಲ್ಲ ಆಳುತ್ತಿದ್ದನು. ಅವನ ರಾಜ್ಯಾಧಿಕಾರವು ಈಜಿಪ್ಟಿನ ಗಡಿಯವರೆಗೆ ವಿಸ್ತರಿಸಿತ್ತು. ಈ ದೇಶಗಳು ಸೊಲೊಮೋನನಿಗೆ ಕಪ್ಪಕಾಣಿಕೆಯನ್ನು ಕೊಡುತ್ತ ಅವನ ಜೀವಮಾನ ಪೂರ್ತಿ ಅವರು ಅವನಿಗೆ ಆಧೀನರಾಗಿದ್ದರು.

22-23 ಪ್ರತಿದಿನವೂ ಸೊಲೊಮೋನನಿಗೆ ಮತ್ತು ಅವನ ಪಂಕ್ತಿಯಲ್ಲಿ ಊಟಮಾಡುವವರಿಗೆ ಬೇಕಾದ ಆಹಾರಪದಾರ್ಥಗಳು ಹೀಗಿವೆ: ನೂರೈವತ್ತು ಬುಷೆಲ್ಸ್[a] ಉತ್ತಮವಾದ ಗೋಧಿಯ ಹಿಟ್ಟು; ಮುನ್ನೂರು ಬುಷೆಲ್ಸ್[b] ಹಿಟ್ಟು; ಚೆನ್ನಾಗಿ ಮೇಯಿಸಿದ ಹತ್ತು ಹಸುಗಳು; ಹೊಲಗಳಲ್ಲಿ ಮೇಯಿಸಿದ ಇಪ್ಪತ್ತು ಹಸುಗಳು; ನೂರು ಕುರಿಗಳು; ಇವುಗಳಲ್ಲದೆ ದುಪ್ಪಿ, ಜಿಂಕೆ, ಸಾರಂಗ ಮತ್ತು ಕೊಬ್ಬಿದ ಕೋಳಿಗಳು.

24 ಸೊಲೊಮೋನನು ಯೂಫ್ರೇಟೀಸ್ ನದಿಯ ಪಶ್ಚಿಮದ ಪ್ರದೇಶವನ್ನೆಲ್ಲ ಆಳಿದನು. ಈ ದೇಶವು ತಿಫ್ಸಹುದಿಂದ ಗಾಜದವರೆಗಿತ್ತು. ಸೊಲೊಮೋನನ ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತ್ತು. 25 ಸೊಲೊಮೋನನ ಆಳ್ವಿಕೆಯಲ್ಲಿ ಯೆಹೂದದ ಮತ್ತು ಇಸ್ರೇಲಿನ ಜನರೆಲ್ಲರೂ ದಾನ್‌ನಿಂದ ಬೇರ್ಷೆಬದವರೆಗೆ ಸುರಕ್ಷಿತವಾಗಿದ್ದರು; ಶಾಂತಿಯಿಂದ ಜೀವಿಸುತ್ತಿದ್ದರು. ಜನರು ತಮ್ಮ ಅಂಜೂರ ಗಿಡಗಳ ಮತ್ತು ದ್ರಾಕ್ಷಾಲತೆಗಳ ನೆರಳಿನಲ್ಲಿ ಸಮಾಧಾನದಿಂದ ಕುಳಿತಿರುತ್ತಿದ್ದರು.

26 ಸೊಲೊಮೋನನು ತನ್ನ ರಥಗಳಿಗೆ ಬೇಕಾಗಿದ್ದ ನಾಲ್ಕು ಸಾವಿರ ಕುದುರೆಗಳಿಗೆ ಬೇಕಾಗುವಷ್ಟು ಸ್ಥಳ ಪಡೆದಿದ್ದನು. ಅವನಲ್ಲಿ ಹನ್ನೆರಡು ಸಾವಿರ ರಾಹುತರಿದ್ದರು. 27 ರಾಜನಾದ ಸೊಲೊಮೋನನಿಗೆ ಪ್ರತಿ ತಿಂಗಳಿಗೆ ಬೇಕಾದ ವಸ್ತುಗಳನ್ನು ಅವನ ಹನ್ನೆರಡು ಮಂದಿ ರಾಜ್ಯಪಾಲರಲ್ಲಿ ಒಬ್ಬರು ಸರದಿಯ ಪ್ರಕಾರ ಕೊಡುತ್ತಿದ್ದರು. ರಾಜನಿಗೂ ಅವನ ಪಂಕ್ತಿಯಲ್ಲಿ ಊಟಮಾಡುವ ಪ್ರತಿಯೊಬ್ಬರಿಗೂ ಆಹಾರಪದಾರ್ಥಗಳು ಯಥೇಚ್ಛವಾಗಿರುತ್ತಿದ್ದವು. 28 ರಾಜನ ರಥಗಳ ಕುದುರೆಗಳಿಗೆ ಮತ್ತು ಸವಾರಿಯ ಕುದುರೆಗಳಿಗೆ ಬೇಕಾದ ಹುಲ್ಲನ್ನು ಮತ್ತು ಬಾರ್ಲಿಯನ್ನು ಈ ರಾಜ್ಯಪಾಲರುಗಳು ಆಯಾಸ್ಥಳಗಳಿಂದ ತಂದುಕೊಡುತ್ತಿದ್ದರು.

ಸೊಲೊಮೋನನ ಜ್ಞಾನ

29 ದೇವರು ಸೊಲೊಮೋನನಿಗೆ ಜ್ಞಾನವಿವೇಕಗಳನ್ನು ಅನುಗ್ರಹಿಸಿದನು. ಸೊಲೊಮೋನನು ಅನೇಕಾನೇಕ ಸಂಗತಿಗಳನ್ನು ಅರ್ಥಮಾಡಿಕೊಳ್ಳುತ್ತಿದ್ದನು. ಯಾರೂ ಊಹಿಸಿಕೊಳ್ಳಲಾರದಷ್ಟು ಜ್ಞಾನವನ್ನು ಅವನು ಹೊಂದಿದ್ದನು. 30 ಅವನ ಜ್ಞಾನವು ಈಜಿಪ್ಟಿನ ಗಂಡಸರೆಲ್ಲರ ಜ್ಞಾನಕ್ಕಿಂತಲೂ ಹೆಚ್ಚಿನದಾಗಿತ್ತು. ಸೊಲೊಮೋನನ ಜ್ಞಾನವು ಪೂರ್ವದಿಕ್ಕಿನ ಜನರೆಲ್ಲರ ಜ್ಞಾನಕ್ಕಿಂತ ವಿಶಾಲವಾಗಿತ್ತು. 31 ಪ್ರಪಂಚದಲ್ಲಿನ ಯಾವುದೇ ವ್ಯಕ್ತಿಯ ಜ್ಞಾನಕ್ಕಿಂತಲೂ ಹೆಚ್ಚಿನ ಜ್ಞಾನವು ಅವನಲ್ಲಿತ್ತು. ಅವನು ಜೆರಹನ ಮಗನಾದ ಏತಾನನಿಗಿಂತಲೂ ಜ್ಞಾನಿಯಾಗಿದ್ದನು. ಮಾಹೋಲನ ಮಕ್ಕಳಾದ ಹೇಮಾನ್, ಕಲ್ಕೋಲ್, ದರ್ದರಿಗಿಂತ ಅವನು ಜ್ಞಾನಿಯಾಗಿದ್ದನು. ರಾಜನಾದ ಸೊಲೊಮೋನನು ಇಸ್ರೇಲ್ ಮತ್ತು ಯೆಹೂದಗಳ ಸುತ್ತಮುತ್ತಲಿನ ಪ್ರದೇಶಗಳಲ್ಲೆಲ್ಲಾ ಪ್ರಸಿದ್ಧನಾಗಿದ್ದನು. 32 ರಾಜನಾದ ಸೊಲೊಮೋನನು ತನ್ನ ಜೀವಿತದ ಅವಧಿಯಲ್ಲಿ ಮೂರುಸಾವಿರ ಜ್ಞಾನೋಪದೇಶಗಳನ್ನೂ ಒಂದು ಸಾವಿರದ ಐದು ಹಾಡುಗಳನ್ನೂ ಬರೆದನು.

33 ಸೊಲೊಮೋನನು ಪ್ರಕೃತಿಯ ಬಗ್ಗೆಯೂ ಹೆಚ್ಚಾಗಿ ತಿಳಿದುಕೊಂಡನು. ಸೊಲೊಮೋನನು ಲೆಬನೋನಿನ ದೇವದಾರು ವೃಕ್ಷಗಳಿಂದ ಮೊದಲುಗೊಂಡು ಗೋಡೆಗಳಲ್ಲಿ ಬೆಳೆಯುವ ಗಿಡಗಳವರೆಗೆ, ವಿವಿಧ ರೀತಿಯ ಸಸ್ಯಗಳ ಬಗ್ಗೆ ಪ್ರಸ್ತಾಪಿಸಿದನು. ರಾಜನಾದ ಸೊಲೊಮೋನನು ಪ್ರಾಣಿಗಳ, ಪಕ್ಷಿಗಳ ಮತ್ತು ಹರಿದಾಡುವ ಜಂತುಗಳ ಬಗ್ಗೆಯೂ ಪ್ರಸ್ತಾಪಿಸಿದನು. 34 ರಾಜನಾದ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳಲು ಎಲ್ಲಾ ದೇಶಗಳ ಜನರೂ ಬರುತ್ತಿದ್ದರು. ಎಲ್ಲಾ ದೇಶದ ರಾಜರುಗಳು ತಮ್ಮ ದೇಶದ ಜ್ಞಾನಿಗಳನ್ನು ರಾಜನಾದ ಸೊಲೊಮೋನನ ಬಳಿಗೆ ಕಳುಹಿಸುತ್ತಿದ್ದರು.

ಸೊಲೊಮೋನನು ದೇವಾಲಯವನ್ನು ನಿರ್ಮಿಸಿದನು

ಹೀರಾಮನು ತೂರಿನ ರಾಜನಾಗಿದ್ದನು. ಹೀರಾಮನು ಯಾವಾಗಲೂ ದಾವೀದನ ಸ್ನೇಹಿತನಾಗಿದ್ದನು. ದಾವೀದನ ನಂತರ ಸೊಲೊಮೋನನು ನೂತನ ರಾಜನಾದನೆಂದು ಹೀರಾಮನು ಕೇಳಿ, ತನ್ನ ಸೇವಕರನ್ನು ಸೊಲೊಮೋನನ ಬಳಿಗೆ ಕಳುಹಿಸಿದನು. ಸೊಲೊಮೋನನು ರಾಜನಾದ ಹೀರಾಮನಿಗೆ,

“ನನ್ನ ತಂದೆಯಾದ ದಾವೀದನು ತನ್ನ ಸುತ್ತಮುತ್ತಲಿನವರೊಂದಿಗೆ ಅನೇಕ ಯುದ್ಧಗಳನ್ನು ಮಾಡಬೇಕಾಯಿತು, ಆದ್ದರಿಂದ ಅವನು ತನ್ನ ದೇವರಾದ ಯೆಹೋವನ ಗೌರವಕ್ಕಾಗಿ ಒಂದು ದೇವಾಲಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ತನ್ನ ಎಲ್ಲಾ ಶತ್ರುಗಳನ್ನು ಸೋಲಿಸಲು ಯೆಹೋವನು ಅವಕಾಶ ಕೊಡುವ ತನಕ ರಾಜನಾದ ದಾವೀದನು ಕಾಯುತ್ತಿದ್ದನು. ಆದರೆ ಈಗ ನನ್ನ ದೇವರಾದ ಯೆಹೋವನು ನನ್ನ ದೇಶದಲ್ಲೆಲ್ಲಾ ಶಾಂತಿ ನೆಲೆಸುವಂತೆ ಮಾಡಿದ್ದಾನೆ. ಈಗ ನನಗೆ ಶತ್ರುಗಳೇ ಇಲ್ಲ. ನನ್ನ ಜನರಿಗೆ ಯಾವ ಅಪಾಯವೂ ಇಲ್ಲ.

“ನನ್ನ ತಂದೆಯಾದ ದಾವೀದನಿಗೆ ಯೆಹೋವನು, ‘ನಿನ್ನ ನಂತರ ನಿನ್ನ ಮಗನನ್ನು ನಾನು ರಾಜನನ್ನಾಗಿ ಮಾಡುತ್ತೇನೆ. ನನ್ನನ್ನು ಸನ್ಮಾನಿಸಲು ನಿನ್ನ ಮಗನು ನನಗೆ ಒಂದು ದೇವಾಲಯವನ್ನು ಕಟ್ಟುತ್ತಾನೆ’ ಎಂದು ವಾಗ್ದಾನ ಮಾಡಿದ್ದನು. ಈಗ, ನನ್ನ ದೇವರಾದ ಯೆಹೋವನ ಗೌರವಾರ್ಥವಾಗಿ ದೇವಾಲಯವನ್ನು ನಿರ್ಮಿಸಬೇಕೆಂದಿದ್ದೇನೆ. ಆದ್ದರಿಂದ ನಿನ್ನ ಸಹಾಯವು ನನಗೆ ಬೇಕಾಗಿದೆ. ನಿನ್ನ ಜನರನ್ನು ಲೆಬನೋನಿಗೆ ಕಳುಹಿಸು. ಅಲ್ಲಿ ಅವರು ನನಗಾಗಿ ದೇವದಾರುಮರಗಳನ್ನು ಕಡಿದು ಬೀಳಿಸಲಿ. ನನ್ನ ಸೇವಕರೂ ನಿನ್ನವರೊಂದಿಗೆ ಕೆಲಸಮಾಡುತ್ತಾರೆ. ನಿನ್ನ ಸೇವಕರಿಗೆ ಗೊತ್ತುಪಡಿಸಿದ ವೇತನವನ್ನು ನಾನು ಕೊಡುತ್ತೇನೆ. ಆದರೆ ನಿನ್ನ ಸಹಾಯ ನನಗೆ ಬೇಕು. ನಮ್ಮ ಬಡಗಿಗಳು ಚೀದೋನ್ಯರ ಬಡಗಿಗಳಂತೆ ಕುಶಲಕರ್ಮಿಗಳಲ್ಲ” ಎಂದು ಹೇಳಿ ಕಳುಹಿಸಿದನು.

ಸೊಲೊಮೋನನು ಹೇಳಿದುದನ್ನು ಹೀರಾಮನು ಕೇಳಿದಾಗ ಬಹಳ ಸಂತೋಷಗೊಂಡು, “ಈ ಮಹಾ ಜನಾಂಗಕ್ಕೋಸ್ಕರ ದಾವೀದನಿಗೆ ವಿವೇಕಿಯಾದ ಮಗನನ್ನು ಕರುಣಿಸಿದ್ದಕ್ಕಾಗಿ ನಾನು ಯೆಹೋವನಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದನು. ನಂತರ ಹೀರಾಮನು ಸೊಲೊಮೋನನಿಗೆ ಈ ಸಂದೇಶವನ್ನು ಕಳುಹಿಸಿದನು:

“ನಿನ್ನ ಕೋರಿಕೆಯು ನನಗೆ ತಿಳಿಯಿತು. ನಾನು ನಿನಗೆ ಬೇಕಾದ ಎಲ್ಲ ದೇವದಾರು ಮರಗಳನ್ನು ಮತ್ತು ತುರಾಯಿ ಮರಗಳನ್ನು ಕೊಡುತ್ತೇನೆ. ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರತೀರಕ್ಕೆ ತರುತ್ತಾರೆ. ನಂತರ ನಾನು ಅವುಗಳನ್ನು ಒಟ್ಟಾಗಿ ಕಟ್ಟಿ, ನೀನು ತಿಳಿಸಿದ ಸ್ಥಳಕ್ಕೆ ತೇಲಿಬಿಡುತ್ತೇನೆ. ಗೊತ್ತುಪಡಿಸಿದ ಸ್ಥಳದಲ್ಲಿ ದಿಮ್ಮಿಗಳನ್ನು ಬೇರ್ಪಡಿಸುತ್ತೇನೆ; ನೀನು ಅವುಗಳನ್ನು ತೆಗೆದುಕೊಳ್ಳಬಹುದು. ಅವುಗಳಿಗೆ ಬದಲಾಗಿ ನೀನು ನನ್ನ ಮನೆಯವರಿಗೆ ಆಹಾರಸಾಮಾಗ್ರಿಗಳನ್ನು ಕೊಡಬೇಕೆಂಬುದೇ ನನ್ನ ಅಪೇಕ್ಷೆಯಾಗಿದೆ.”

10-11 ಹೀರಾಮನು ಸೊಲೊಮೋನನಿಗೆ ಬೇಕಾದಷ್ಟು ದೇವದಾರು ಮತ್ತು ತುರಾಯಿ ಮರಗಳನ್ನು ಕೊಡುತ್ತಿದ್ದನು.

ಅದಕ್ಕೆ ಬದಲಾಗಿ ಸೊಲೊಮೋನನು ಪ್ರತಿವರ್ಷವೂ ಹೀರಾಮನಿಗೆ ಅವನ ಮನೆಯವರಿಗೋಸ್ಕರ ಒಂದು ಲಕ್ಷದ ಇಪ್ಪತ್ತು ಸಾವಿರ ಬುಷೆಲ್ ಗೋಧಿಯನ್ನು ಮತ್ತು ಒಂದು ಲಕ್ಷದ ಇಪ್ಪತ್ತು ಸಾವಿರ ಗ್ಯಾಲನ್ ಶುದ್ಧವಾದ ಆಲೀವ್ ಎಣ್ಣೆಯನ್ನು ಕೊಟ್ಟನು.

12 ಯೆಹೋವನು ತಾನು ವಾಗ್ದಾನ ಮಾಡಿದ್ದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದನು. ಹೀರಾಮನ ಮತ್ತು ಸೊಲೊಮೋನನ ನಡುವೆ ಸಮಾಧಾನವಿತ್ತು. ಈ ಇಬ್ಬರು ರಾಜರುಗಳು ತಮ್ಮತಮ್ಮಲ್ಲಿ ಒಂದು ಒಪ್ಪಂದವನ್ನು ಮಾಡಿಕೊಂಡರು.

13 ರಾಜನಾದ ಸೊಲೊಮೋನನು ಇಸ್ರೇಲಿನ ಮೂವತ್ತು ಸಾವಿರ ಜನರನ್ನು ಬಲತ್ಕಾರದಿಂದ ಈ ಕಾರ್ಯಕ್ಕೆ ನೇಮಿಸಿದನು. 14 ರಾಜನಾದ ಸೊಲೊಮೋನನು ಅದೋನೀರಾಮ ಎಂಬವನನ್ನು ಇವರಿಗೆ ಮೇಲ್ವಿಚಾರಕನನ್ನಾಗಿ ನೇಮಿಸಿದನು. ಸೊಲೊಮೋನನು ಅವರನ್ನು ಮೂರು ಗುಂಪುಗಳಾಗಿ ವಿಂಗಡಿಸಿದನು. ಒಂದೊಂದು ಗುಂಪಿನಲ್ಲಿ ಹತ್ತು ಸಾವಿರ ಜನರಿದ್ದರು. ಪ್ರತಿಯೊಂದು ಗುಂಪಿನವರು ಲೆಬನೋನಿನಲ್ಲಿ ಒಂದು ತಿಂಗಳು ಕೆಲಸ ಮಾಡಿದ ನಂತರ ಎರಡು ತಿಂಗಳು ಮನೆಗೆ ಹಿಂತಿರುಗುತ್ತಿದ್ದರು. 15 ಸೊಲೊಮೋನನು ಎಂಭತ್ತು ಸಾವಿರ ಜನರನ್ನು ಬಲಾತ್ಕಾರದಿಂದ ಬೆಟ್ಟಪ್ರದೇಶದಲ್ಲಿ ಕೆಲಸ ಮಾಡಲು ನೇಮಿಸಿದನು. ಈ ಜನರು ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಎಪ್ಪತ್ತು ಸಾವಿರ ಜನರು ಕಲ್ಲುಗಳನ್ನು ಹೊರುತ್ತಿದ್ದರು. 16 ಅಲ್ಲಿ ಕೆಲಸ ಮಾಡುವ ಜನರ ಮೇಲ್ವಿಚಾರಕರಾಗಿ ಮೂರು ಸಾವಿರದ ಮುನ್ನೂರು ಜನರಿದ್ದರು. 17 ರಾಜನಾದ ಸೊಲೊಮೋನನು ದೇವಾಲಯದ ಅಡಿಪಾಯಕ್ಕಾಗಿ ದೊಡ್ಡದಾದ ಹಾಗೂ ಬೆಲೆಬಾಳುವ ಕಲ್ಲುಗಳನ್ನು ಕೊರೆದು ತೆಗೆಯಲು ಆಜ್ಞಾಪಿಸಿದನು. ಈ ಕಲ್ಲುಗಳನ್ನು ಬಹು ಜಾಗರೂಕತೆಯಿಂದ ಕತ್ತರಿಸಿ ತೆಗೆದರು. 18 ನಂತರ ಸೊಲೊಮೋನನ ಮತ್ತು ಹೀರಾಮನ ಕಟ್ಟಡ ಕಟ್ಟುವವರು ಮತ್ತು ಗೆಬಾಲ್ಯ ಜನರು ಈ ಕಲ್ಲುಗಳನ್ನು ಕೆತ್ತಿದರು. ಅವರು ಕಲ್ಲುಗಳನ್ನು ಮತ್ತು ತೊಲೆಗಳನ್ನು ದೇವಾಲಯದ ನಿರ್ಮಾಣಕ್ಕಾಗಿ ಸಿದ್ಧಗೊಳಿಸಿದರು.

ಲೂಕ 20:1-26

ಯೆಹೂದ್ಯನಾಯಕರು ಯೇಸುವಿಗೆ ಕೇಳಿದ ಪ್ರಶ್ನೆ

(ಮತ್ತಾಯ 21:23-27; ಮಾರ್ಕ 11:27-33)

20 ಒಂದು ದಿನ ಯೇಸು ದೇವಾಲಯದಲ್ಲಿದ್ದನು. ಆತನು ಜನರಿಗೆ ಉಪದೇಶಿಸುತ್ತಾ ಸುವಾರ್ತೆಯನ್ನು ತಿಳಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಹಿರಿಯ ಯೆಹೂದ್ಯ ನಾಯಕರು ಯೇಸುವಿನ ಬಳಿಗೆ ಬಂದು, “ನಮಗೆ ಹೇಳು! ನೀನು ಯಾವ ಅಧಿಕಾರದಿಂದ ಈ ಸಂಗತಿಗಳನ್ನು ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು?” ಎಂದು ಕೇಳಿದರು.

ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ಜನರಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ದೇವರಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ? ನನಗೆ ಹೇಳಿರಿ” ಎಂದು ಉತ್ತರಕೊಟ್ಟನು.

ಅವರೆಲ್ಲರೂ ಇದರ ಬಗ್ಗೆ ಒಟ್ಟಾಗಿ ಚರ್ಚಿಸಿ ಒಬ್ಬರಿಗೊಬ್ಬರು, “‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತು’ ಎಂದು ಉತ್ತರಕೊಟ್ಟರೆ, ‘ಹಾಗಾದರೆ ನೀವು ಯೋಹಾನನನ್ನು ಏಕೆ ನಂಬಲಿಲ್ಲ?’ ಎಂದು ಆತನು ಕೇಳುವನು. ‘ದೀಕ್ಷಾಸ್ನಾನ ಮಾಡಿಸುವ ಅಧಿಕಾರ ಯೋಹಾನನಿಗೆ ಮನುಷ್ಯರಿಂದ ಬಂದಿತು’ ಎಂದು ಹೇಳಿದರೆ, ಜನರೆಲ್ಲರೂ ಕಲ್ಲೆಸೆದು ನಮ್ಮನ್ನು ಕೊಲ್ಲುವರು. ಏಕೆಂದರೆ ಯೋಹಾನನು ಪ್ರವಾದಿಯಾಗಿದ್ದನೆಂದು ಅವರು ನಂಬಿದ್ದಾರೆ” ಅಂದುಕೊಂಡರು. ಬಳಿಕ ಅವರು, “ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.

ಯೇಸು ಅವರಿಗೆ, “ಹಾಗಾದರೆ, ಈ ಸಂಗತಿಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂಬುದನ್ನು ನಾನೂ ನಿಮಗೆ ಹೇಳುವುದಿಲ್ಲ” ಅಂದನು.

ದೇವರು ತನ್ನ ಮಗನನ್ನು ಕಳುಹಿಸಿದನು

(ಮತ್ತಾಯ 21:33-46; ಮಾರ್ಕ 12:1-12)

ಬಳಿಕ ಯೇಸು ಜನರಿಗೆ ಈ ಸಾಮ್ಯವನ್ನು ಹೇಳಿದನು: “ಒಬ್ಬ ಮನುಷ್ಯನು ಒಂದು ದ್ರಾಕ್ಷಿತೋಟವನ್ನು ಮಾಡಿ ಅದನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟನು. ಬಳಿಕ ಅವನು ಅಲ್ಲಿಂದ ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು. 10 ಸ್ವಲ್ಪಕಾಲದ ನಂತರ ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂತು. ಆದ್ದರಿಂದ ಅವನು ತನ್ನ ಪಾಲಿನ ಹಣ್ಣನ್ನು ತೆಗೆದುಕೊಂಡು ಬರುವುದಕ್ಕಾಗಿ ತನ್ನ ಸೇವಕನನ್ನು ಆ ರೈತರ ಬಳಿಗೆ ಕಳುಹಿಸಿದನು. ಆದರೆ ಆ ರೈತರು ಆ ಸೇವಕನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು. 11 ಆದ್ದರಿಂದ ಅವನು ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನೂ ಹೊಡೆದು, ಅವಮಾನ ಮಾಡಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು. 12 ಆದ್ದರಿಂದ ಅವನು ಮೂರನೆಯ ಸಲ ತನ್ನ ಮತ್ತೊಬ್ಬ ಸೇವಕನನ್ನು ರೈತರ ಬಳಿಗೆ ಕಳುಹಿಸಿದನು. ಆ ರೈತರು ಅವನನ್ನೂ ಗಾಯವಾಗುವಷ್ಟು ಹೊಡೆದು ಹೊರಗೆ ಅಟ್ಟಿದರು.

13 “ಆಗ ತೋಟದ ಯಜಮಾನನು, ‘ನಾನೀಗ ಏನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನು ಕಳುಹಿಸುವೆನು. ಒಂದುವೇಳೆ, ಆ ರೈತರು ಅವನಿಗೆ ಮರ್ಯಾದೆ ಕೊಡಬಹುದು’ ಅಂದುಕೊಂಡನು. 14 ಆ ರೈತರು ಮಗನನ್ನು ನೋಡಿ, ಒಬ್ಬರಿಗೊಬ್ಬರು, ‘ಇವನು ಧಣಿಯ ಮಗನು. ಈ ಹೊಲ ಇವನಿಗೇ ಸೇರುತ್ತದೆ. ನಾವು ಇವನನ್ನು ಕೊಂದರೆ, ಆಗ ಹೊಲವೆಲ್ಲಾ ನಮ್ಮದಾಗುತ್ತದೆ’ ಎಂದು ಮಾತಾಡಿಕೊಂಡರು. 15 ಬಳಿಕ ಆ ಮಗನನ್ನು ತೋಟದಿಂದ ಹೊರಕ್ಕೆ ನೂಕಿಕೊಂಡು ಹೋಗಿ ಕೊಂದುಹಾಕಿದರು.

“ಆಗ ತೋಟದ ಯಜಮಾನನು ಏನು ಮಾಡುವನು? 16 ಅವನು ಬಂದು ಆ ರೈತರನ್ನು ಕೊಲ್ಲುವನು! ಬಳಿಕ ಅವನು ಆ ತೋಟವನ್ನು ಬೇರೆ ಕೆಲವು ರೈತರಿಗೆ ಕೊಡುವನು.”

ಜನರು ಈ ಸಾಮ್ಯವನ್ನು ಕೇಳಿ, “ಇಲ್ಲ! ಹಾಗೆಂದಿಗೂ ಆಗಬಾರದು!” ಅಂದರು. 17 ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, “ಹಾಗಾದರೆ,

‘ಕಟ್ಟುವವರು ಬೇಡವೆಂದು ಬಿಟ್ಟ
    ಕಲ್ಲೇ ಮೂಲೆಗಲ್ಲಾಯಿತು’(A)

ಎಂಬ ವಚನದ ಅರ್ಥವೇನು? 18 ಆ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡುತುಂಡಾಗುವನು. ಆ ಕಲ್ಲು ನಿಮ್ಮ ಮೇಲೆ ಬಿದ್ದರೆ ಅದು ನಿಮ್ಮನ್ನು ಜಜ್ಜಿಹಾಕುವುದು!” ಎಂದು ಹೇಳಿದನು.

19 ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯ ನಾಯಕರು ಕೇಳಿದರು. ತಮ್ಮನ್ನು ಕುರಿತಾಗಿಯೇ ಆತನು ಈ ಸಾಮ್ಯವನ್ನು ಹೇಳಿದನೆಂದು ಅವರು ತಿಳಿದುಕೊಂಡರು. ಆದ್ದರಿಂದ ಅವರು ಆಗಲೇ ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಅವರು ಜನರಿಗೆ ಭಯಪಟ್ಟು ಆತನನ್ನು ಬಂಧಿಸಲಿಲ್ಲ.

ಯೇಸುವನ್ನು ಮೋಸಗೊಳಿಸಲು ಯೆಹೂದ್ಯ ನಾಯಕರ ಪ್ರಯತ್ನ

(ಮತ್ತಾಯ 22:15-22; ಮಾರ್ಕ 12:13-17)

20 ಆದ್ದರಿಂದ ಧರ್ಮೋಪದೇಶಕರು ಮತ್ತು ಯಾಜಕರು ಯೇಸುವನ್ನು ಬಂಧಿಸಲು ಸರಿಯಾದ ಸಮಯಕ್ಕಾಗಿ ಕಾಯತೊಡಗಿದರು. ಅವರು ಕೆಲವು ಜನರನ್ನು ಯೇಸುವಿನ ಬಳಿಗೆ ಕಳುಹಿಸಿದರು. ಒಳ್ಳೆಯವರಂತೆ ನಟಿಸಲು ಅವರು ಆ ಜನರಿಗೆ ಹೇಳಿಕೊಟ್ಟಿದ್ದರು. ಅವರು ಯೇಸುವಿನ ಮಾತಿನಲ್ಲಿ ಏನಾದರೂ ತಪ್ಪು ಕಂಡುಹಿಡಿಯಬೇಕೆಂದಿದ್ದರು. (ಅವರು ಏನಾದರೂ ತಪ್ಪು ಕಂಡುಹಿಡಿದರೆ, ಆಗ ಯೇಸುವನ್ನು ಆತನ ಮೇಲೆ ಅಧಿಕಾರವಿದ್ದ ರಾಜ್ಯಪಾಲನಿಗೆ ಒಪ್ಪಿಸಿಕೊಡಬಹುದಾಗಿತ್ತು.) 21 ಆದ್ದರಿಂದ ಅವರು ಯೇಸುವಿಗೆ, “ಉಪದೇಶಕನೇ, ನೀನು ಸತ್ಯವನ್ನೇ ಹೇಳುವೆ ಮತ್ತು ಉಪದೇಶಿಸುವೆ ಎಂದು ನಮಗೆ ಗೊತ್ತಿದೆ. ನೀನು ಮುಖದಾಕ್ಷಿಣ್ಯ ಮಾಡುವವನಲ್ಲ. ದೇವರ ಮಾರ್ಗದ ಕುರಿತಾಗಿ ನೀನು ಯಾವಾಗಲೂ ಸತ್ಯವನ್ನೇ ಬೋಧಿಸುವೆ! 22 ಈಗ ಹೇಳು, ನಾವು ಸೀಸರನಿಗೆ[a] ತೆರಿಗೆ ಕೊಡುವುದು ಸರಿಯೋ? ತಪ್ಪೋ?” ಎಂದು ಕೇಳಿದರು.

23 ಆದರೆ ಈ ಜನರು ತನಗೆ ಮೋಸಮಾಡಲು ಪ್ರಯತ್ನಿಸುತ್ತಿದ್ದಾರೆಂದು ಯೇಸುವಿಗೆ ತಿಳಿದಿತ್ತು. 24 ಆದ್ದರಿಂದ ಯೇಸು ಅವರಿಗೆ, “ನನಗೆ ಒಂದು ಬೆಳ್ಳಿನಾಣ್ಯವನ್ನು ತೋರಿಸಿರಿ. ಆ ನಾಣ್ಯದ ಮೇಲೆ ಯಾರ ಹೆಸರಿದೆ? ಅದರ ಮೇಲೆ ಯಾರ ಮುಖಚಿತ್ರವಿದೆ?” ಎಂದು ಕೇಳಿದನು.

ಅವರು, “ಸೀಸರನದು” ಎಂದು ಹೇಳಿದರು.

25 ಯೇಸು ಅವರಿಗೆ, “ಸೀಸರನದನ್ನು ಸೀಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ” ಎಂದನು.

26 ಆ ಜನರು ಆತನ ಬುದ್ಧಿವಂತಿಕೆಯ ಉತ್ತರವನ್ನು ಕೇಳಿ ಆಶ್ಚರ್ಯಪಟ್ಟು ಮರುಪ್ರಶ್ನೆ ಕೇಳದಂತಾದರು. ಜನರ ಮುಂದೆ ಯೇಸುವನ್ನು ಮಾತಿನಲ್ಲಿ ಸಿಕ್ಕಿಸಲು ಅವರಿಂದಾಗಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International