Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಜ್ಞಾನೋಕ್ತಿಗಳು 6-7

ಜಾಮೀನಿನ ಅಪಾಯ

ನನ್ನ ಮಗನೇ, ಮತ್ತೊಬ್ಬನ ಸಾಲಕ್ಕೆ ನೀನು ಜಾಮೀನಾಗಬೇಡ. ಅವನು ಸಾಲ ತೀರಿಸಲಾಗದಿದ್ದರೆ ನಾನು ತೀರಿಸುತ್ತೇನೆ ಎಂದು ಪ್ರಮಾಣ ಮಾಡಿರುವೆಯಾ? ಮಾಡಿದ್ದರೆ, ಸಿಕ್ಕಿಕೊಂಡಿರುವೆ! ನಿನ್ನ ಸ್ವಂತ ಮಾತೇ ನಿನ್ನನ್ನು ಬಲೆಗೆ ಸಿಕ್ಕಿಸಿದೆ! ನೀನು ಅವನ ಅಧಿಕಾರದ ಅಧೀನದಲ್ಲಿರುವೆ. ಆದ್ದರಿಂದ ಅವನ ಬಳಿಗೆ ಹೋಗಿ ನಿನ್ನನ್ನು ಸಾಲದಿಂದ ಬಿಡುಗಡೆ ಮಾಡುವಂತೆ ಬೇಡಿಕೋ. ವಿಶ್ರಮಿಸಲು ಹಾಗೂ ನಿದ್ರಿಸಲು ಕಾಯಬೇಡ. ಬೇಟೆಗಾರನಿಂದ ತಪ್ಪಿಸಿಕೊಂಡು ಓಡುವ ಜಿಂಕೆಯಂತೆ ಆ ಸಾಲದ ಬಂಧನದಿಂದ ತಪ್ಪಿಸಿಕೊ. ಬಲೆಯಿಂದ ತಪ್ಪಿಸಿಕೊಂಡು ಹಾರುವ ಪಕ್ಷಿಯಂತೆ ನಿನ್ನನ್ನು ಬಿಡುಗಡೆ ಮಾಡಿಕೋ.

ಸೋಮಾರಿತನದ ಅಪಾಯ

ಸೋಮಾರಿಯೇ, ನೀನು ಇರುವೆಯಂತೆ ಚುರುಕಾಗಿರಬೇಕು. ಇರುವೆಯನ್ನು ನೋಡಿ ಕಲಿತುಕೋ. ಇರುವೆಗೆ ರಾಜನಿಲ್ಲ, ಅಧಿಕಾರಿಯಿಲ್ಲ, ನಾಯಕನಿಲ್ಲ, ಆದರೆ ಸುಗ್ಗಿಕಾಲದಲ್ಲಿ ತನಗೆ ಬೇಕಾದ ಆಹಾರವನ್ನೆಲ್ಲ ಅದು ಕೂಡಿಸಿಟ್ಟುಕೊಳ್ಳುವುದು. ಆದ್ದರಿಂದ ಚಳಿಗಾಲದಲ್ಲಿ ಅದಕ್ಕೆ ಬೇಕಾದಷ್ಟು ಆಹಾರ ಇರುವುದು.

ಸೋಮಾರಿಯೇ, ಇನ್ನೆಷ್ಟುಕಾಲ ಮಲಗಿಕೊಂಡಿರುವೆ? ನಿನ್ನ ವಿಶ್ರಾಂತಿಯಿಂದ ಯಾವಾಗ ಎದ್ದೇಳುವೆ? 10 ಸೋಮಾರಿಯು, “ಸ್ವಲ್ಪ ನಿದ್ರೆ, ಸ್ವಲ್ಪ ವಿಶ್ರಾಂತಿ” ಅನ್ನುವನು. 11 ಆದರೆ ಅವನು ನಿದ್ರಿಸುತ್ತಲೇ ಇರುವನು; ಬಡವನಾಗುತ್ತಲೇ ಹೋಗುವನು. ಅವನ ಸ್ಥಿತಿಯು ದರೋಡೆಕೋರರು ಬಂದು ಇದ್ದದ್ದನ್ನೆಲ್ಲಾ ದೋಚಿಕೊಂಡು ಹೋದಂತಾಗಿರುವುದು.

ದುಷ್ಟನು

12 ಕೆಡುಕನೂ ನೀಚನೂ ಆಗಿರುವವನು ಸುಳ್ಳಾಡುತ್ತಾ ಅಡ್ಡಾಡುತ್ತಾನೆ. 13 ಅವನು ಜನರನ್ನು ಮೋಸಗೊಳಿಸಲು ತನ್ನ ಕಾಲುಗಳಿಂದಲೂ ಕೈಬೆರಳುಗಳಿಂದಲೂ ಸನ್ನೆಮಾಡುತ್ತಾನೆ. 14 ಅವನು ಕೆಡುಕ. ಎಲ್ಲಾ ಸಮಯಗಳಲ್ಲಿ ಅವನು ಕೆಡುಕನ್ನೇ ಆಲೋಚಿಸುತ್ತಾನೆ; ಎಲ್ಲೆಲ್ಲೂ ತೊಂದರೆ ಮಾಡುತ್ತಾನೆ. 15 ಆದರೆ ಅವನಿಗೆ ಆಪತ್ತು ಇದ್ದಕ್ಕಿದ್ದಂತೆ ಬರುವುದು. ಅವನು ನಾಶವಾಗುವನು! ಅವನಿಗೆ ಸಹಾಯಮಾಡಲು ಯಾರೂ ಇರುವುದಿಲ್ಲ!

ಯೆಹೋವನು ದ್ವೇಷಿಸುವ ಏಳು ವಸ್ತುಗಳು

16 ಯೆಹೋವನು ಈ ಆರು ವಸ್ತುಗಳನ್ನು ದ್ವೇಷಿಸುತ್ತಾನೆ, ಇಲ್ಲ, ಏಳು ವಸ್ತುಗಳನ್ನು ದ್ವೇಷಿಸುತ್ತಾನೆ:
17     ಗರ್ವದ ಕಣ್ಣು, ಸುಳ್ಳಾಡುವ ನಾಲಿಗೆ,
    ನಿರಪರಾಧಿಗಳನ್ನು ಕೊಲ್ಲುವ ಕೈ.
18     ದುರಾಲೋಚನೆ ಮಾಡುವ ಹೃದಯ,
    ಕೇಡುಮಾಡಲು ಓಡುವ ಕಾಲು.
19     ಅಸತ್ಯವಾಡುವ ಸುಳ್ಳುಸಾಕ್ಷಿ
    ಮತ್ತು ಸಹೋದರರಲ್ಲಿ ಜಗಳ ಬಿತ್ತುವ ವ್ಯಕ್ತಿ.

ವ್ಯಭಿಚಾರದ ಕುರಿತು ಎಚ್ಚರಿಕೆ

20 ನನ್ನ ಮಗನೇ, ನಿನ್ನ ತಂದೆಯ ಆಜ್ಞೆಗಳನ್ನು ಜ್ಞಾಪಕಮಾಡಿಕೋ. ನಿನ್ನ ತಾಯಿಯ ಉಪದೇಶಗಳನ್ನು ಮರೆಯಬೇಡ. 21 ಯಾವಾಗಲೂ ಅವರ ಮಾತುಗಳನ್ನು ಜ್ಞಾಪಕಮಾಡಿಕೊ. ಅವುಗಳನ್ನು ನಿನ್ನ ಕೊರಳಿಗೆ ಕಟ್ಟಿಕೊ; ನಿನ್ನ ಹೃದಯದ ಮೇಲೆ ಇಟ್ಟುಕೋ. 22 ನೀನು ಹೋಗುವಲ್ಲೆಲ್ಲಾ ಅವರ ಉಪದೇಶಗಳು ನಿನ್ನನ್ನು ನಡೆಸುತ್ತವೆ. ನೀನು ಮಲಗಿರುವಾಗಲೂ ಅವು ನಿನ್ನನ್ನು ಕಾಯುತ್ತವೆ. ನೀನು ಎಚ್ಚರಗೊಂಡಾಗ ಅವು ನಿನ್ನೊಡನೆ ಮಾತಾಡಿ ನಿನಗೆ ಮಾರ್ಗದರ್ಶನ ನೀಡುತ್ತವೆ.

23 ನಿನ್ನ ತಂದೆತಾಯಿಗಳ ಆಜ್ಞೆಗಳು ಮತ್ತು ಉಪದೇಶಗಳು ನಿನಗೆ ನೀತಿಮಾರ್ಗವನ್ನು ತೋರಿಸುವ ಬೆಳಕಿನಂತಿವೆ. ಅವು ನಿನ್ನನ್ನು ಸರಿಪಡಿಸಿ ಜೀವಮಾರ್ಗದಲ್ಲಿ ನಡೆಯಲು ಸಹಾಯಮಾಡುತ್ತವೆ. 24 ಅವು ನಿನ್ನನ್ನು ಕೆಟ್ಟ ಹೆಂಗಸಿನ ಬಳಿಗೆ ಹೋಗದಂತೆ ತಡೆಯುತ್ತವೆ; ಗಂಡನನ್ನು ಬಿಟ್ಟಂಥ ಹೆಂಗಸಿನ ನಯವಾದ ನುಡಿಗಳಿಂದ ತಪ್ಪಿಸಿ ಕಾಪಾಡುತ್ತವೆ. 25 ಆಕೆಯ ಸೌಂದರ್ಯವನ್ನು ಕಂಡು ಹೃದಯದಲ್ಲಿ ಆಸೆಪಡಬೇಡ. ಆಕೆಯ ಕಣ್ಣುಗಳು ನಿನ್ನನ್ನು ವಶಮಾಡಿಕೊಳ್ಳಲು ಬಿಡಬೇಡ. 26 ಸೂಳೆಯು ಒಂದು ರೊಟ್ಟಿಗೇ ಬರಬಹುದು; ಆದರೆ ಬೇರೊಬ್ಬನ ಹೆಂಡತಿಗೆ ನಿನ್ನ ಜೀವವನ್ನೇ ಕಳೆದುಕೊಳ್ಳಬೇಕಾಗುವುದು. 27 ಮಡಿಲಲ್ಲಿ ಬೆಂಕಿಯನ್ನಿಟ್ಟುಕೊಂಡರೆ ಬಟ್ಟೆ ಸುಡುವುದಿಲ್ಲವೇ? 28 ಉರಿಯುವ ಕೆಂಡದ ಮೇಲೆ ನಡೆದರೆ ಪಾದಗಳು ಸುಟ್ಟುಹೋಗುವುದಿಲ್ಲವೇ? 29 ಬೇರೊಬ್ಬನ ಹೆಂಡತಿಯೊಡನೆ ಮಲಗಿಕೊಳ್ಳುವವನಿಗೆ ಇದೇ ರೀತಿಯಾಗುವುದು. ಅವನು ದಂಡನೆ ಅನುಭವಿಸುವನು.

30-31 ಹಸಿವೆಗೊಂಡಿರುವವನು ಕದ್ದುತಿಂದರೂ ತಿನ್ನಬಹುದು. ಅವನು ಸಿಕ್ಕಿಕೊಂಡರೆ ತಾನು ಕದ್ದದ್ದಕ್ಕಿಂತ ಏಳರಷ್ಟು ಹೆಚ್ಚಾಗಿ ಕೊಡಬೇಕು. ಒಂದುವೇಳೆ ಅವನು ತನ್ನಲ್ಲಿರುವ ಪ್ರತಿಯೊಂದನ್ನೂ ಕೊಡಬೇಕಾಗಬಹುದು! ಆದರೆ ಬೇರೆಯವರು ಅವನನ್ನು ಅರ್ಥಮಾಡಿಕೊಳ್ಳುತ್ತಾರೆ; ಅವನ ಬಗ್ಗೆ ಅವರಿಗಿರುವ ಗೌರವವು ಕಳೆದು ಹೋಗುವುದಿಲ್ಲ. 32 ಆದರೆ ವ್ಯಭಿಚಾರ ಮಾಡುವವನು ಮೂರ್ಖನಾಗಿದ್ದಾನೆ. ಅದನ್ನು ಮಾಡುವವನು ತನ್ನನ್ನೇ ನಾಶಮಾಡಿಕೊಳ್ಳುತ್ತಾನೆ. 33 ಅವನಿಗೆ ಹೊಡೆತಬೀಳುವುದು; ಅವಮಾನವಾಗುವುದು. ಆ ನಾಚಿಕೆಯು ಅವನನ್ನು ಬಿಟ್ಟುಹೋಗುವುದೇ ಇಲ್ಲ. 34 ಆಕೆಯ ಗಂಡನು ಮತ್ಸರದಿಂದ ಬಹು ಕೋಪಗೊಳ್ಳುವನು; ಕರುಣೆತೋರದೆ ಅವಳ ಮೇಲೆ ಸೇಡುತೀರಿಸಿಕೊಳ್ಳುವನು. 35 ಏನೇ ಕೊಟ್ಟರೂ, ಎಷ್ಟೇ ಹಣ ಕೊಟ್ಟರೂ ಅವನ ಕೋಪವನ್ನು ತಡೆಯಲಾಗುವುದಿಲ್ಲ.

ಜ್ಞಾನವು ನಿನ್ನನ್ನು ವ್ಯಭಿಚಾರದಿಂದ ದೂರವಿಡುತ್ತದೆ

ನನ್ನ ಮಗನೇ, ನನ್ನ ಮಾತುಗಳನ್ನು ಜ್ಞಾಪಕಮಾಡಿಕೋ, ನನ್ನ ಆಜ್ಞೆಗಳನ್ನು ಮರೆಯಬೇಡ. ನನ್ನ ಆಜ್ಞೆಗಳಿಗೆ ವಿಧೇಯನಾಗು, ಆಗ ನೀನು ಜೀವಿಸುವೆ. ನಿನ್ನ ಕಣ್ಣುಗುಡ್ಡೆಗಳೋ ಎಂಬಂತೆ ನನ್ನ ಉಪದೇಶಗಳಿಗೆ ಎಚ್ಚರಿಕೆಯಿಂದ ವಿಧೇಯನಾಗಿರು. ಅವುಗಳನ್ನು ನಿನ್ನ ಬೆರಳುಗಳ ಸುತ್ತಲೂ ಕಟ್ಟಿಕೊ; ನಿನ್ನ ಹೃದಯದ ಮೇಲೆ ಬರೆದುಕೊ, ಜ್ಞಾನವನ್ನು ನಿನ್ನ ಸಹೋದರಿಯಂತೆ ಪ್ರೀತಿಸು. ವಿವೇಕವನ್ನು ನಿನ್ನ ಕುಟುಂಬದಂತೆ ಪ್ರೀತಿಸು. ಆಗ ಅವು ನಿನ್ನನ್ನು ಬೇರೆ ಹೆಂಗಸರಿಂದ ತಪ್ಪಿಸಿ ಕಾಪಾಡುತ್ತವೆ; ನಿನ್ನನ್ನು ಪಾಪಕ್ಕೆ ನಡೆಸುವಂಥ ಅವರ ಸವಿ ಮಾತುಗಳಿಂದ ತಪ್ಪಿಸಿ ಕಾಪಾಡುತ್ತವೆ.

ಒಂದು ದಿನ ನಾನು ನನ್ನ ಮನೆಯ ಕಿಟಿಕಿಯಿಂದ ನೋಡಿದಾಗ ಅನೇಕ ಮೂಢ ಯೌವನಸ್ಥರನ್ನು ಕಂಡೆನು. ಅವರಲ್ಲಿ ತುಂಬಾ ಮೂಢನಾಗಿದ್ದ ಒಬ್ಬ ಯೌವನಸ್ಥನನ್ನು ಗಮನಿಸಿದೆ. ಅವನು ಒಬ್ಬ ಕೆಟ್ಟ ಹೆಂಗಸಿನ ಬೀದಿಯಲ್ಲಿ ಆಕೆಯ ಮನೆಯ ಕಡೆಗೆ ಹೋಗುತ್ತಿದ್ದನು. ಆಗ ಕತ್ತಲಾಗುತ್ತಿತ್ತು. ಸೂರ್ಯ ಮುಳುಗುತ್ತಿದ್ದನು; ರಾತ್ರಿ ಆರಂಭವಾಗುತ್ತಿತ್ತು. 10 ಆ ಹೆಂಗಸು ಅವನನ್ನು ಎದುರುಗೊಳ್ಳಲು ಮನೆಯ ಹೊರಗಡೆ ಬಂದಳು. ಆಕೆಯ ಉಡುಪು ವ್ಯಭಿಚಾರಿಣಿಯ ಉಡುಪಿನಂತಿತ್ತು. ಅವನೊಡನೆ ಪಾಪಮಾಡಬೇಕೆಂಬ ಆಸೆ ಆಕೆಯಲ್ಲಿತ್ತು. 11 ಅವಳು ಸುಮ್ಮನಿರದವಳೂ ಹಟಮಾರಿಯೂ ಆಗಿದ್ದಾಳೆ. ಅವಳು ಎಂದೂ ಮನೆಯಲ್ಲಿ ಇದ್ದವಳಲ್ಲ. 12 ಅವಳು ಪ್ರತಿಯೊಂದು ಮೂಲೆಯಲ್ಲೂ ಗಂಡಸರನ್ನು ಬಲೆಗೆ ಹಾಕಿಕೊಳ್ಳಲು ಕಾದುಕೊಂಡಿರುವಳು. ಅವಳು ಬೀದಿಗಳಲ್ಲಿ ನಡೆದು ಹೋದಳು. 13 ಅವಳು ಆ ಯೌವನಸ್ಥನನ್ನು ಹಿಡಿದುಕೊಂಡು ಮುದ್ದಿಟ್ಟಳು. ಅವಳು ನಾಚಿಕೆಯಿಲ್ಲದೆ ಅವನಿಗೆ, 14 “ಈ ದಿನ ನಾನು ಸಮಾಧಾನಯಜ್ಞವನ್ನು ಅರ್ಪಿಸಬೇಕಿತ್ತು. ನನ್ನ ಹರಕೆಯನ್ನು ಸಲ್ಲಿಸಿದೆನು. ಯಜ್ಞದಲ್ಲಿ ಉಳಿದ ಮಾಂಸ ನನ್ನಲ್ಲಿ ಬಹಳಷ್ಟಿದೆ. 15 ಆದ್ದರಿಂದ ನನ್ನೊಂದಿಗೆ ಬರುವಂತೆ ನಿನ್ನನ್ನು ಕರೆಯಲು ಬಂದೆ. ನಿನಗಾಗಿ ಹುಡುಕಾಡಿ ಈಗ ನಿನ್ನನ್ನು ಕಂಡುಕೊಂಡೆ. 16 ನನ್ನ ಹಾಸಿಗೆಯನ್ನು ಈಜಿಪ್ಟಿನ ಸುಂದರವಾದ ಹೊದಿಕೆಗಳಿಂದ ಹೊದಿಸಿ 17 ಪರಿಮಳದ್ರವ್ಯವನ್ನು ಚಿಮಿಕಿಸಿರುವೆ. ಆ ಪರಿಮಳದ್ರವ್ಯವನ್ನು ರಕ್ತಬೋಳ, ಅಗುರು ಮತ್ತು ಲವಂಗಚಕ್ಕೆಗಳಿಂದ ತಯಾರಿಸಿರುವೆ. 18 ಬಾ, ನಾವು ಮುಂಜಾನೆಯವರೆಗೆ ಪ್ರೇಮಿಸೋಣ; ರಾತ್ರಿಯೆಲ್ಲಾ ಸುಖಿಸೋಣ. 19 ನನ್ನ ಗಂಡನು ವ್ಯಾಪಾರಕ್ಕಾಗಿ ದೂರದೇಶಕ್ಕೆ ಹೋಗಿದ್ದಾನೆ. 20 ದೀರ್ಘಪ್ರಯಾಣಕ್ಕೆ ಬೇಕಾದಷ್ಟು ಹಣವನ್ನು ಅವನು ತನ್ನೊಡನೆ ತೆಗೆದುಕೊಂಡು ಹೋಗಿದ್ದಾನೆ; ಎರಡು ವಾರಗಳವರೆಗೆ ಅವನು ಮನೆಗೆ ಬರುವುದಿಲ್ಲ” ಎಂದು ಹೇಳಿದಳು.

21 ಅವಳು ಆ ಯೌವನಸ್ಥನನ್ನು ಪ್ರೇರೇಪಿಸಲು ಈ ಮಾತುಗಳನ್ನಾಡಿದಳು. ಆಕೆಯ ಸವಿನುಡಿಗಳು ಅವನನ್ನು ಮರುಳುಗೊಳಿಸಿತು. 22-23 ಆ ಯೌವನಸ್ಥನು ಬಲೆಗೆ ಸಿಕ್ಕಿಕೊಳ್ಳುವುದಕ್ಕಾಗಿ ಆಕೆಯನ್ನು ತಕ್ಷಣವೇ ಹಿಂಬಾಲಿಸಿದನು. ಕೊಯ್ಯಲು ಎಳೆದೊಯ್ಯುವ ಹೋರಿಯಂತೆಯೂ ಬೇಟೆಗಾರನು ಬಾಣ ಹೂಡಿ ಎದೆಗೆ ಗುರಿಮಾಡಿದಾಗ ಜಿಗಿದುಕೊಂಡು ಹೋಗುವ ಜಿಂಕೆಯಂತೆಯೂ ಬಲೆಯೊಳಗೆ ಹಾರಿ ಹೋಗುವ ಪಕ್ಷಿಯಂತೆಯೂ ಅವನಿದ್ದನು. ತಾನು ಅಪಾಯದಲ್ಲಿರುವುದು ಅವನಿಗೆ ತಿಳಿದಿರಲಿಲ್ಲ.

24 ಗಂಡುಮಕ್ಕಳೇ, ನನಗೆ ಕಿವಿಗೊಡಿರಿ. ನಾನು ಹೇಳುವ ಮಾತುಗಳಿಗೆ ಗಮನಕೊಡಿರಿ. 25 ಅಂತಹ ಹೆಂಗಸಿನ ಬಗ್ಗೆ ಯೋಚಿಸಲೂಬೇಡಿ, ಆಕೆಗಾಗಿ ಅಲೆದಾಡಲೂಬೇಡಿ. 26 ಆಕೆಯಿಂದ ಅನೇಕ ಗಂಡಸರು ಬಿದ್ದುಹೋಗಿದ್ದಾರೆ; ಅವಳು ಅನೇಕ ಗಂಡಸರನ್ನು ನಾಶಮಾಡಿದ್ದಾಳೆ. 27 ಅವಳ ಮನೆಯು ಪಾತಾಳದ ಮಾರ್ಗದಲ್ಲಿದೆ. ಅವಳ ದಾರಿ ನೇರವಾಗಿ ಮರಣಕ್ಕೆ ನಡೆಸುತ್ತದೆ.

2 ಕೊರಿಂಥದವರಿಗೆ 2

ಆದ್ದರಿಂದ ನಾನು ನಿಮಗೆ ನೀಡಲಿರುವ ಮುಂದಿನ ಸಂದರ್ಶನವು ನಿಮಗೆ ದುಃಖವನ್ನು ಉಂಟುಮಾಡುವ ಸಂದರ್ಶನವಾಗಿರಬಾರದೆಂದು ನಿರ್ಧರಿಸಿದೆನು. ನಾನು ನಿಮ್ಮನ್ನು ದುಃಖಗೊಳಿಸಿದರೆ, ನನ್ನನ್ನು ಸಂತೋಷಗೊಳಿಸುವವರು ಯಾರು? ನನ್ನಿಂದ ದುಃಖಿತರಾದ ನೀವು ಮಾತ್ರ ನನ್ನನ್ನು ಸಂತೋಷಪಡಿಸಬಲ್ಲಿರಿ. ನಾನು ನಿಮ್ಮ ಬಳಿಗೆ ಬಂದಾಗ, ನನ್ನನ್ನು ಸಂತೋಷಗೊಳಿಸಬೇಕಾದ ಜನರಿಂದಲೇ ನನಗೆ ದುಃಖವಾಗಬಾರದೆಂಬ ಉದ್ದೇಶದಿಂದ ನಾನು ನಿಮಗೆ ಈ ಪತ್ರವನ್ನು ಬರೆದೆನು. ನೀವೆಲ್ಲರೂ ನನ್ನ ಆನಂದದಲ್ಲಿ ಪಾಲುಗಾರರಾಗುತ್ತೀರಿ ಎಂಬ ಭರವಸೆ ನನಗಿತ್ತು. ನಾನು ಮೊದಲೊಮ್ಮೆ ನಿಮಗೆ ಬರೆದಾಗ, ನನ್ನ ಹೃದಯವು ಬಹಳ ಗಲಿಬಿಲಿಗೊಂಡಿತ್ತು ಮತ್ತು ದುಃಖಗೊಂಡಿತ್ತು. ನಾನು ಕಣ್ಣೀರಿಡುತ್ತಾ ನಿಮಗೆ ಬರೆದದ್ದು ನಿಮ್ಮನ್ನು ದುಃಖಗೊಳಿಸುವುದಕ್ಕಲ್ಲ, ನಿಮ್ಮನ್ನು ಎಷ್ಟು ಪ್ರೀತಿಸುತ್ತೇನೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದಷ್ಟೆ.

ತಪ್ಪು ಮಾಡಿದ ಆ ವ್ಯಕ್ತಿಯನ್ನು ಕ್ಷಮಿಸಿರಿ

ನಿಮ್ಮ ಸಭೆಯ ಒಬ್ಬನು ದುಃಖವನ್ನು ಉಂಟುಮಾಡಿದ್ದು ನನಗಲ್ಲ. ಒಂದಲ್ಲ ಒಂದು ರೀತಿಯಲ್ಲಿ ಅವನು ನಿಮ್ಮೊಲ್ಲರಿಗೂ ದುಃಖವನ್ನು ಉಂಟುಮಾಡಿದ್ದಾನೆ. (ಅದು ತನ್ನ ವಾಸ್ತವ ಸ್ಥಿತಿಗಿಂತ ಹೆಚ್ಚು ಕೆಟ್ಟದ್ದಾಗಿ ಕಾಣುವಂತೆ ಮಾಡಲು ನನಗೆ ಇಷ್ಟವಿಲ್ಲ.) ನಿಮ್ಮ ಸಭೆಯ ಬಹುಮಂದಿ ಅವನಿಗೆ ವಿಧಿಸಿರುವ ಶಿಕ್ಷೆಯೇ ಸಾಕಾಗಿದೆ. ಆದರೆ ಈಗ ನೀವು ಅವನನ್ನು ಕ್ಷಮಿಸಬೇಕು ಮತ್ತು ಸಂತೈಸಬೇಕು. ಆಗ ಅವನು ಅತೀವ ದುಃಖದಿಂದ ಸಂಪೂರ್ಣವಾಗಿ ಸೋತುಹೋಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಅವನನ್ನು ಪ್ರೀತಿಸುತ್ತೀರೆಂಬುದನ್ನು ಅವನಿಗೆ ತೋರಿಸಿಕೊಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿದ್ದೀರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಲು ನಿಮಗೆ ಬರೆದೆನು. 10 ನೀವು ಒಬ್ಬ ವ್ಯಕ್ತಿಯನ್ನು ಕ್ಷಮಿಸಿದರೆ, ನಾನೂ ಆ ವ್ಯಕ್ತಿಯನ್ನು ಕ್ಷಮಿಸುತ್ತೇನೆ. ನಾನು ಕ್ಷಮಿಸಿದ್ದನ್ನು ನಿಮಗೋಸ್ಕರವಾಗಿಯೇ ಕ್ಷಮಿಸಿದ್ದೇನೆ. ನಾನು ಕ್ಷಮಿಸಬೇಕಾದದ್ದನ್ನೆಲ್ಲ ಕ್ಷಮಿಸಿದ್ದೇನೆ ಮತ್ತು ಕ್ರಿಸ್ತನೇ ನನ್ನೊಂದಿಗೆ ಇದ್ದನು. 11 ಸೈತಾನನು ನಮ್ಮಿಂದ ಯಾವುದನ್ನೂ ಕಸಿದುಕೊಳ್ಳಬಾರದೆಂದು ನಾನು ಹೀಗೆ ಮಾಡಿದೆನು. ಸೈತಾನನ ಯೋಜನೆಗಳು ಯಾವುವೆಂದು ನಮಗೆ ಚೆನ್ನಾಗಿ ತಿಳಿದಿವೆ.

ತ್ರೋವದಲ್ಲಿ ಪೌಲನ ಉದ್ವೇಗ

12 ನಾನು ಕ್ರಿಸ್ತನ ಸುವಾರ್ತೆಯನ್ನು ತಿಳಿಸುವುದಕ್ಕಾಗಿ ತ್ರೋವಕ್ಕೆ ಹೋದೆನು. ಪ್ರಭುವು ಅಲ್ಲಿ ನನಗೆ ಒಳ್ಳೆಯ ಅವಕಾಶವನ್ನು ಕೊಟ್ಟನು. 13 ಆದರೆ ನನ್ನ ಸಹೋದರನಾದ ತೀತನನ್ನು ನಾನು ಅಲ್ಲಿ ಕಾಣಲಿಲ್ಲವಾದ್ದರಿಂದ ನನಗೆ ಸಮಾಧಾನವಿರಲಿಲ್ಲ. ಆದ್ದರಿಂದ ನಾನು ಅವರನ್ನು ವಂದಿಸಿ ಮಕೆದೋನಿಯಕ್ಕೆ ಹೊರಟೆನು.

14 ದೇವರಿಗೆ ಸ್ತೋತ್ರವಾಗಲಿ. ದೇವರು ನಮ್ಮನ್ನು ಕ್ರಿಸ್ತನ ಮೂಲಕ ಯಾವಾಗಲೂ ವಿಜಯೋತ್ಸವದತ್ತ ನಡೆಸುತ್ತಿದ್ದಾನೆ. ದೇವರು ತನ್ನ ಜ್ಞಾನವೆಂಬ ಪರಿಮಳವನ್ನು ಎಲ್ಲಾ ಕಡೆಗಳಲ್ಲಿಯೂ ಹರಡಲು ನಮ್ಮನ್ನು ಉಪಯೋಗಿಸುತ್ತಿದ್ದಾನೆ. 15 ರಕ್ಷಣಾಮಾರ್ಗದಲ್ಲಿರುವವರ ಮತ್ತು ನಾಶನಮಾರ್ಗದಲ್ಲಿರುವವರ ಮಧ್ಯದಲ್ಲಿ ನಾವು ಕ್ರಿಸ್ತನ ಪರಿಮಳವಾಗಿದ್ದೇವೆ. ದೇವರಿಗೆ ಇದೇ ನಮ್ಮ ಕಾಣಿಕೆ. 16 ನಾಶನಮಾರ್ಗದಲ್ಲಿರುವ ಜನರಿಗೆ ಮರಣವನ್ನು ಉಂಟುಮಾಡುವ ಮರಣದ ವಾಸನೆಯಾಗಿದ್ದೇವೆ. ಆದರೆ ರಕ್ಷಣಾಮಾರ್ಗದಲ್ಲಿರುವ ಜನರಿಗೆ ಜೀವವನ್ನು ಉಂಟುಮಾಡುವ ಜೀವದ ವಾಸನೆಯಾಗಿದ್ದೇವೆ. ಹೀಗಿರಲಾಗಿ, ಈ ಕಾರ್ಯವನ್ನು ಮಾಡಲು ಯಾರು ಯೋಗ್ಯರಾಗಿದ್ದಾರೆ? 17 ಇತರ ಅನೇಕರು ಮಾಡುವಂತೆ ನಾವು ದೇವರ ವಾಕ್ಯವನ್ನು ಕಲಬೆರಕೆ ಮಾಡುವುದಿಲ್ಲ. ಆದರೆ ಕ್ರಿಸ್ತನಲ್ಲಿದ್ದುಕೊಂಡು ದೇವರ ಸನ್ನಿಧಾನದಲ್ಲಿ ಸತ್ಯವನ್ನು ಹೇಳುತ್ತೇವೆ. ದೇವರಿಂದ ಕಳುಹಿಸಲ್ಪಟ್ಟ ಜನರಂತೆ ನಾವು ಮಾತಾಡುತ್ತೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International