Old/New Testament
ಯೆಹೋವನು ಇಸ್ರೇಲಿಗೆ ವಿರುದ್ಧವಾಗಿದ್ದಾನೆ
12 ಎಫ್ರಾಯೀಮ್ ಸಮಯವನ್ನು ಹಾಳು ಮಾಡುತ್ತಿದ್ದಾನೆ. ಇಸ್ರೇಲು ದಿನವಿಡೀ ಗಾಳಿಯನ್ನು ಹಿಮ್ಮೆಟ್ಟುತ್ತಿದ್ದಾನೆ. ಜನರು ಹೆಚ್ಚೆಚ್ಚಾಗಿ ಸುಳ್ಳು ಹೇಳುತ್ತಿದ್ದಾರೆ; ಹೆಚ್ಚೆಚ್ಚಾಗಿ ಕದಿಯುತ್ತಾರೆ. ಅಶ್ಶೂರ್ಯದವರೊಂದಿಗೆ ಒಪ್ಪಂದ ಮಾಡಿರುತ್ತಾರೆ. ತಮ್ಮ ಆಲೀವ್ ಎಣ್ಣೆಯನ್ನು ಈಜಿಪ್ಟಿಗೆ ಕೊಂಡೊಯ್ಯುತ್ತಿದ್ದಾರೆ.
2 ಯೆಹೋವನು ಹೇಳುವುದೇನೆಂದರೆ, “ಇಸ್ರೇಲಿಗೆ ವಿರುದ್ಧವಾಗಿ ನಾನು ವಾದ ಮಾಡುತ್ತೇನೆ. ತಾನು ಮಾಡಿದ ಸಂಗತಿಗಳಿಗಾಗಿ ಯಾಕೋಬನು ಶಿಕ್ಷೆ ಅನುಭವಿಸಬೇಕು. 3 ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಯಾಕೋಬನು ತನ್ನ ಅಣ್ಣನಿಗೆ ಮೋಸ ಮಾಡಲು ಪ್ರಾರಂಭಮಾಡಿದ್ದನು. ಯಾಕೋಬನು ಬಲಶಾಲಿಯಾದ ಯೌವನಸ್ಥನು. ಆಗ ಅವನು ದೇವರೊಂದಿಗೆ ಹೋರಾಡಿದನು. 4 ಯಾಕೋಬನು ದೇವದೂತನೊಡನೆ ಹೋರಾಡಿ ಗೆದ್ದನು. ಅವನು ಕನಿಕರಕ್ಕಾಗಿ ಮೊರೆಯಿಟ್ಟನು. ಇದು ಬೇತೇಲ್ ಎಂಬಲ್ಲಿ ನಡೆಯಿತು. ಆ ಸ್ಥಳದಲ್ಲಿ ಆತನು ನಮ್ಮೊಂದಿಗೆ ಮಾತನಾಡಿದನು. 5 ಹೌದು ಯೆಹೋವನು ಸೈನ್ಯಗಳ ದೇವರಾಗಿದ್ದಾನೆ. ಆತನ ಹೆಸರು ಯೆಹೋವನು. 6 ಆದ್ದರಿಂದ ನಿನ್ನ ಯೆಹೋವನ ಬಳಿಗೆ ಹಿಂದಿರುಗಿ ಬಾ. ಆತನಿಗೆ ವಿಧೇಯನಾಗಿರು. ಸರಿಯಾಗಿರುವದನ್ನೇ ಮಾಡು. ಯಾವಾಗಲೂ ನಿನ್ನ ದೇವರ ಮೇಲೆ ಭರವಸವಿಡು.
7 “ಯಾಕೋಬನು ಒಬ್ಬ ವ್ಯಾಪಾರಿ.[a] ಅವನು ತನ್ನ ಸ್ನೇಹಿತನಿಗೇ ಮೋಸಮಾಡುತ್ತಾನೆ. ಅವನ ತ್ರಾಸು ಮೋಸದ್ದು, 8 ಎಫ್ರಾಯೀಮು, ‘ನಾನು ಐಶ್ವರ್ಯವಂತನು. ನನ್ನಲ್ಲಿ ನಿಜವಾದ ಐಶ್ವರ್ಯವಿದೆ. ನನ್ನ ಅಪರಾಧಗಳನ್ನು ಯಾರೂ ಕಂಡುಹಿಡಿಯಲಾರರು. ನನ್ನ ದುಷ್ಟತ್ವದ ಬಗ್ಗೆ ಯಾರಿಗೂ ತಿಳಿಯದು’ ಎಂದು ಅನ್ನುತ್ತಾನೆ.
9 “ಆದರೆ ನೀನು ಈಜಿಪ್ಟ್ ದೇಶದಲ್ಲಿರುವಾಗಲೇ ನಾನು ನಿನ್ನ ದೇವರಾಗಿದ್ದೇನೆ. ನೀನು ಗುಡಾರಗಳಲ್ಲಿ ವಾಸಿಸುವಂತೆ ಮಾಡುವೆನು. 10 ನಾನು ಪ್ರವಾದಿಗಳೊಂದಿಗೆ ಮಾತನಾಡಿದೆನು. ಅವರಿಗೆ ಅನೇಕ ದರ್ಶನಗಳನ್ನು ಕೊಟ್ಟೆನು. ನನ್ನ ಪಾಠಗಳನ್ನು ನಿಮಗೆ ಕಲಿಸುವಂತೆ ಅನೇಕ ಮಾರ್ಗಗಳನ್ನು ಪ್ರವಾದಿಗಳಿಗೆ ತೋರಿಸಿಕೊಟ್ಟೆನು. 11 ಆದರೆ ಗಿಲ್ಯಾದಿನ ಜನರು ಪಾಪ ಮಾಡಿದ್ದಾರೆ. ಅವರ ಬಳಿಯಲ್ಲಿ ಅನೇಕ ಭಯಂಕರವಾದ ವಿಗ್ರಹಗಳಿವೆ. ಗಿಲ್ಗಾಲಿನಲ್ಲಿ ಬಸವನ ವಿಗ್ರಹಗಳಿಗೆ ಜನರು ಯಜ್ಞವನ್ನರ್ಪಿಸುತ್ತಾರೆ. ಅವರಲ್ಲಿ ಅನೇಕ ಯಜ್ಞವೇದಿಕೆಗಳಿವೆ. ಹೇಗೆ ಉಳಿಮೆ ಮಾಡಿದ ಹೊಲದಲ್ಲಿ ಮಣ್ಣಿನ ಸಾಲುಗಳಿರುತ್ತದೋ ಅದೇ ರೀತಿಯಲ್ಲಿ ಅವರ ಬಳಿಯಲ್ಲಿ ವಿಗ್ರಹಗಳ ಸಾಲಿದೆ.
12 “ಯಾಕೋಬನು ಅರಾಮ್ ದೇಶಕ್ಕೆ ಓಡಿಹೋದನು. ಅಲ್ಲಿ ಇಸ್ರೇಲನು ಒಬ್ಬ ಹೆಂಡತಿಗಾಗಿ ಸೇವೆ ಮಾಡಿದನು. ಇನ್ನೊಂದು ಹೆಂಡತಿಯನ್ನು ಮಾಡಿಕೊಳ್ಳಲಿಕ್ಕೆ ಕುರಿಗಳನ್ನು ಕಾಯ್ದನು. 13 ಆದರೆ ದೇವರು ಇಸ್ರೇಲರನ್ನು ಈಜಿಪ್ಟಿನಿಂದ ಹೊರತರುವದಕ್ಕಾಗಿ ಒಬ್ಬ ಪ್ರವಾದಿಯನ್ನು ಉಪಯೋಗಿಸಿದನು. ಇಸ್ರೇಲರನ್ನು ಪ್ರವಾದಿಯ ಮೂಲಕ ಬಿಡಿಸಿದನು. 14 ಆದರೆ ಎಫ್ರಾಯೀಮನು ಯೆಹೋವನನ್ನು ಅತಿಯಾಗಿ ಕೋಪಿಸಿಕೊಳ್ಳುವಂತೆ ಮಾಡಿದನು. ಎಫ್ರಾಯೀಮನು ಅನೇಕ ಮಂದಿಯನ್ನು ಕೊಲೆ ಮಾಡಿದನು. ಅವನ ಅಪರಾಧಗಳಿಗಾಗಿ ಅವನು ಶಿಕ್ಷಿಸಲ್ಪಡುವನು. ಅವನ ದೇವರಾದ ಯೆಹೋವನು ಅವನು ಮಾಡಿದ ಅಪರಾಧಕ್ಕೆ ತಕ್ಕ ದಂಡನೆಯನ್ನು ವಿಧಿಸಿ ಅವಮಾನ ಹೊರುವಂತೆ ಮಾಡುವನು.”
ಇಸ್ರೇಲ್ ತನ್ನನ್ನು ತಾನೇ ನಾಶಮಾಡಿಕೊಂಡಿತು
13 “ಎಫ್ರಾಯೀಮ್ ಇಸ್ರೇಲರೊಳಗೆ ತನ್ನನ್ನು ತಾನೇ ಮುಖ್ಯಸ್ಥನನ್ನಾಗಿ ಮಾಡಿಕೊಂಡನು. ಎಫ್ರಾಯೀಮನು ಮಾತನಾಡಿದಾಗ ಜನರು ಹೆದರಿ ನಡುಗಿದರು. ಆದರೆ ಅವನು ಪಾಪದಲ್ಲಿ ಬಿದ್ದನು. ಬಾಳನನ್ನು ಪೂಜಿಸಲು ಪ್ರಾರಂಭಿಸಿದನು. 2 ಈಗ ಇಸ್ರೇಲರು ಹೆಚ್ಚೆಚ್ಚಾಗಿ ಪಾಪ ಮಾಡುತ್ತಿರುತ್ತಾರೆ. ತಮಗಾಗಿ ವಿಗ್ರಹಗಳನ್ನು ಮಾಡಿಕೊಳ್ಳುತ್ತಾರೆ. ಅಕ್ಕಸಾಲಿಗರು ಬೆಳ್ಳಿಯಿಂದ ವಿಗ್ರಹಗಳನ್ನು ಮಾಡುವರು. ತಾವು ಮಾಡಿದ ಮೂರ್ತಿಗಳೊಂದಿಗೆ ಮಾತನಾಡುವರು. ಆ ವಿಗ್ರಹಗಳಿಗೆ ಯಜ್ಞವನ್ನರ್ಪಿಸುವರು. ಬಂಗಾರದ ಬಸವನ ವಿಗ್ರಹಕ್ಕೆ ಮುದ್ದು ಕೊಡುವರು. 3 ಆದ್ದರಿಂದ ಆ ಜನರು ಬೇಗನೇ ಕಣ್ಮರೆಯಾಗುವರು. ಅವರು ಬೆಳಗಿನ ಜಾವದ ಇಬ್ಬನಿಯಂತೆ ಬೇಗನೇ ಮಾಯವಾಗುವರು. ಇಸ್ರೇಲರು ಕಣದಲ್ಲಿರುವ ಹೊಟ್ಟಿನಂತೆ ಗಾಳಿಯಲ್ಲಿ ಹೊಡೆದುಕೊಂಡು ಹೋಗುವರು. ಇಸ್ರೇಲರು ಮನೆಯೊಳಗಿಂದ ಮೇಲಕ್ಕೆ ಹೊರಟು ಆಮೇಲೆ ಕಾಣದೆಹೋಗುವ ಹೊಗೆಯಂತಿದ್ದಾರೆ.
4 “ನೀವು ಈಜಿಪ್ಟಿನಲ್ಲಿದ್ದ ದಿವಸಗಳಿಂದ ನಾನೇ ನಿಮ್ಮ ಯೆಹೋವನಾಗಿದ್ದೇನೆ. ನನ್ನ ಹೊರತು ಬೇರೆ ಯಾವ ದೇವರನ್ನೂ ನೀವು ತಿಳಿದಿರಲಿಲ್ಲ. ನನ್ನ ಹೊರತು ಬೇರೆ ಯಾವ ರಕ್ಷಕನೂ ಇಲ್ಲ. 5 ಮರುಭೂಮಿಯಲ್ಲಿ ನಿಮ್ಮನ್ನು ತಿಳಿದುಕೊಂಡಿದ್ದೆನು. ಆ ಒಣಭೂಮಿಯಲ್ಲಿ ನಾನು ನಿಮ್ಮನ್ನು ಬಲ್ಲೆನು. 6 ನಾನು ಇಸ್ರೇಲರಿಗೆ ಆಹಾರ ಒದಗಿಸಿದೆನು. ಅವರು ಆ ಆಹಾರವನ್ನು ಉಂಡು ತಿಂದು ತೃಪ್ತರಾಗಿ ಕೊಬ್ಬೇರಿದ್ದರಿಂದ ನನ್ನನ್ನು ಮರೆತರು.
7 “ಆದ್ದರಿಂದಲೇ ನಾನು ಅವರಿಗೆ ಸಿಂಹದಂತಿರುವೆನು. ದಾರಿ ಬದಿಯಲ್ಲಿ ಹೊಂಚುಹಾಕುವ ಚಿರತೆಯಂತಿರುವೆನು. 8 ತನ್ನ ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರ ಮೇಲರಗಿ ಅವರನ್ನು ಗಾಯಗೊಳಿಸಿ ಅವರ ಎದೆಯನ್ನು ಸೀಳಿ ಬಿಡುವೆನು. ನಾನು ಸಿಂಹದಂತೆಯೂ ಕ್ರೂರ ಮೃಗದಂತೆಯೂ ಅವರನ್ನು ಸೀಳಿ ತಿಂದುಬಿಡುವೆನು.”
ದೈವಕೋಪದಿಂದ ಯಾರೂ ಇಸ್ರೇಲರನ್ನು ರಕ್ಷಿಸಲಾರರು
9 “ಇಸ್ರೇಲೇ, ನಾನು ನಿನಗೆ ಸಹಾಯ ಮಾಡಿದರೂ ನೀನು ನನಗೆ ವಿರೋಧವಾಗಿ ಎದ್ದಿರುವೆ. ಆದ್ದರಿಂದ ನಾನು ನಿನ್ನನ್ನು ನಾಶಮಾಡುವೆನು. 10 ನಿನ್ನ ಅರಸನೆಲ್ಲಿ? ನಿನ್ನ ಯಾವ ಪಟ್ಟಣದಲ್ಲಿಯಾಗಲಿ ಅವನು ನಿನ್ನನ್ನು ರಕ್ಷಿಸಲಾರ. ನಿನ್ನ ನ್ಯಾಯಾಧೀಶರುಗಳೆಲ್ಲಿ? ನೀನು, ‘ನಮಗೆ ರಾಜನನ್ನೂ ನಾಯಕರನ್ನೂ ಕೊಡು’ ಎಂದು ಕೇಳಿಕೊಂಡೆ. 11 ನಾನು ಕೋಪಗೊಂಡೆನು ಮತ್ತು ಒಬ್ಬ ಅರಸನನ್ನು ಕೊಟ್ಟೆನು. ನಾನು ಹೆಚ್ಚಾಗಿ ಕೋಪಗೊಂಡಾಗ ಅವನನ್ನು ತೆಗೆದುಬಿಟ್ಟೆನು.
12 “ಎಫ್ರಾಯೀಮ್ ತನ್ನ ಅಪರಾಧವನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದನು.
ತಾನು ಮಾಡಿದ ಪಾಪಗಳು ಯಾರಿಗೂ ತಿಳಿದಿಲ್ಲವೆಂದು ಅವನು ಭಾವಿಸಿದನು;
ಆದರೆ ಅವನು ಶಿಕ್ಷಿಸಲ್ಪಡುವನು;
13 ಅವನಿಗಾಗುವ ಶಿಕ್ಷೆಯು ಒಬ್ಬ ಸ್ತ್ರೀಯ ಪ್ರಸವವೇದನೆಯಂತಿರುವದು.
ಅವನು ಜಾಣನಾದ ಮಗನಾಗಿರುವದಿಲ್ಲ;
ಹುಟ್ಟುವ ಸಮಯ ಬಂದರೂ
ಅವನು ಜೀವಿಸುವದಿಲ್ಲ.
14 “ಸಮಾಧಿಯಿಂದ ಅವರನ್ನು ರಕ್ಷಿಸುವೆನು;
ಮರಣದಿಂದ ಅವರನ್ನು ಪಾರುಮಾಡುವೆನು.
ಮರಣವೇ, ನಿನ್ನ ವ್ಯಾಧಿಗಳೆಲ್ಲಿ?
ಸಮಾಧಿಯೇ, ನಿನ್ನ ಶಕ್ತಿ ಎಲ್ಲಿ?
ನಾನು ಪ್ರತಿಕಾರ ಸಲ್ಲಿಸುವದಿಲ್ಲ.
15 ಇಸ್ರೇಲ್ ತನ್ನ ಸಹೋದರರ ಮಧ್ಯದಲ್ಲಿ ಬೆಳೆಯುವನು.
ಒಂದು ಬಲವಾದ ಪೂರ್ವದಿಕ್ಕಿನ ಗಾಳಿಯು ಬರುವದು.
ಯೆಹೋವನ ಗಾಳಿಯು ಮರುಭೂಮಿಯಿಂದ ಬೀಸುವದು.
ಅವನ ನೀರಿನ ಒರತೆಯು ಒಣಗಿಹೋಗುವದು,
ಆ ಗಾಳಿಯು ಇಸ್ರೇಲರ ಐಶ್ವರ್ಯವನ್ನೆಲ್ಲಾ ಎತ್ತಿಕೊಂಡು ಹೋಗಿಬಿಡುವದು.
16 ಸಮಾರ್ಯವು ಶಿಕ್ಷಿಸಲ್ಪಡಬೇಕು.
ಯಾಕೆಂದರೆ ಆಕೆಯು ತನ್ನ ದೇವರಿಗೆ ವಿರುದ್ಧವಾಗಿ ನಡೆದಳು.
ಇಸ್ರೇಲರು ಖಡ್ಗದಿಂದ ಸಾಯುವರು.
ಅವರ ಮಕ್ಕಳು ಹರಿಯಲ್ಪಟ್ಟು ಚೂರುಚೂರಾಗುವರು.
ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಬಿಡುವರು.”
ಯೆಹೋವನ ಬಳಿಗೆ ಹಿಂದಿರುಗಿರಿ
14 ಇಸ್ರೇಲೇ, ನೀನು ಜಾರಿಬಿದ್ದು ದೇವರಿಗೆ ವಿರುದ್ಧವಾಗಿ ಪಾಪಮಾಡಿದಿ. ನಿನ್ನ ದೇವರಾದ ಯೆಹೋವನ ಬಳಿಗೆ ಹಿಂದಿರುಗಿ ಬಾ. 2 ನೀನು ಹೇಳಬೇಕಾದ ವಿಷಯಗಳ ಕುರಿತು ನೀನು ಆಲೋಚಿಸು ಮತ್ತು ಯೆಹೋವನ ಬಳಿಗೆ ಹಿಂದಿರುಗಿ ಬಾ ಮತ್ತು ಆತನಿಗೆ ಹೀಗೆ ಹೇಳು:
“ನಮ್ಮ ಪಾಪಗಳನ್ನು ನಮ್ಮಿಂದ ತೆಗೆ.
ನಾವು ಮಾಡುವ ಒಳ್ಳೆಯ ಕಾರ್ಯಗಳನ್ನು ಸ್ವೀಕರಿಸು.
ಆಗ ನಮ್ಮ ತುಟಿಗಳಿಂದ ನಿನಗೆ ಸ್ತೋತ್ರವೆಂಬ ಕಾಣಿಕೆಯನ್ನು ಸಮರ್ಪಿಸುವೆವು.
3 ಅಶ್ಶೂರವು ನಮ್ಮನ್ನು ರಕ್ಷಿಸಲಾರದು.
ನಾವು ಕುದುರೆ ಮೇಲೆ ಸವಾರಿ ಮಾಡುವದಿಲ್ಲ.
ನಮ್ಮ ಕೈಗಳು ತಯಾರಿಸಿದ ಬೊಂಬೆಗಳಿಗೆ ನಾವು ಇನ್ನು
‘ನಮ್ಮ ದೇವರು’ ಎಂದು ಹೇಳುವದಿಲ್ಲ.
ಯಾಕೆಂದರೆ ಅನಾಥರಿಗೆ
ಕರುಣೆಯನ್ನು ತೋರಿಸುವವನು ನೀನೇ.”
ಯೆಹೋವನು ಇಸ್ರೇಲನ್ನು ಕ್ಷಮಿಸುವನು
4 ಯೆಹೋವನು ಹೇಳುವುದೇನೆಂದರೆ,
“ಅವರು ನನ್ನನ್ನು ತೊರೆದುಬಿಟ್ಟಿದ್ದನ್ನು ನಾನು ಕ್ಷಮಿಸುವೆನು.
ಅವರನ್ನು ಅಧಿಕವಾಗಿಯೂ ಸ್ವಇಚ್ಛೆಯಿಂದಲೂ ಪ್ರೀತಿಸುವೆನು.
ಈಗ ಅವರ ಮೇಲೆ ನಾನು ಕೋಪಿಸುವದಿಲ್ಲ.
5 ಇಸ್ರೇಲಿಗೆ ನಾನು ಇಬ್ಬನಿಯಂತಿರುವೆನು.
ನೆಲದಾವರೆಯಂತೆ ಇಸ್ರೇಲ್ ಅರಳುವನು.
ಲೆಬನೋನಿನ ದೇವದಾರು ವೃಕ್ಷಗಳಂತೆ ಸೊಂಪಾಗಿ ಬೆಳೆಯುವನು.
6 ಅವನ ಕೊಂಬೆಗಳು ಬೆಳೆದು ಹರಡಿಕೊಳ್ಳುತ್ತವೆ;
ಅವನು ಅಂದವಾದ ಆಲೀವ್ ಮರದಂತಿರುವನು.
ಲೆಬನೋನಿನ ದೇವದಾರು ಮರಗಳ ಸುವಾಸನೆಯಂತೆ
ಅವನು ಗಮಗಮಿಸುವನು.
7 ಇಸ್ರೇಲಿನ ಜನರು ಮತ್ತೆ ನನ್ನ ಆಶ್ರಯದಲ್ಲಿ ವಾಸಿಸುವರು.
ಧಾನ್ಯದ ಸಸಿಗಳಂತೆ ಬೆಳೆಯುವರು,
ದ್ರಾಕ್ಷಾಲತೆಯಿಂದ ಚಿಗುರುವರು.
ಲೆಬನೋನಿನ ದ್ರಾಕ್ಷಿಬಳ್ಳಿಯಂತೆ ಅವರು ಇರುವರು.”
ವಿಗ್ರಹಗಳ ಬಗ್ಗೆ ಯೆಹೋವನ ಎಚ್ಚರಿಕೆ
8 “ಎಫ್ರಾಯೀಮೇ, ಇನ್ನುಮುಂದೆ ವಿಗ್ರಹವು ನಿನ್ನಲ್ಲಿರಬಾರದು.
ನಿನ್ನ ಪ್ರಾರ್ಥನೆಗೆ ಉತ್ತರಿಸುವವನು ನಾನೇ.
ನಿನ್ನನ್ನು ಕಾಯುವವನು ನಾನೇ.
ನಾನು ತುರಾಯಿ ಮರದಂತೆ ಸದಾ ಹಸಿರಾಗಿರುವೆನು.
ನಿನ್ನ ಫಲಗಳು ನನ್ನಿಂದ ಬರುವದು.”
ಅಂತಿಮ ಸಲಹೆ
9 ಬುದ್ಧಿವಂತ ಮನುಷ್ಯನು ಇವುಗಳನ್ನು ಅರ್ಥಮಾಡಿಕೊಳ್ಳುತ್ತಾನೆ.
ಜಾಣನು ಇದನ್ನು ಕಲಿತುಕೊಳ್ಳುತ್ತಾನೆ.
ಯೆಹೋವನ ಮಾರ್ಗವು ಸರಿಯಾದದ್ದು.
ಒಳ್ಳೆಯ ಜನರು ಅವರೊಂದಿಗೆ ಜೀವಿಸುವರು.
ಪಾಪಿಗಳು ಅವುಗಳಿಂದ ಸಾಯುವರು.
ಯೋಹಾನನು ಪರಲೋಕವನ್ನು ನೋಡಿದನು
4 ನಂತರ ನಾನು ನೋಡಿದಾಗ ನನ್ನ ಎದುರಿನಲ್ಲಿ ಪರಲೋಕದ ಬಾಗಿಲು ತೆರೆದಿರುವುದನ್ನು ಕಂಡೆನು. ನನ್ನ ಜೊತೆಯಲ್ಲಿ ಮೊದಲು ಮಾತನಾಡಿದ್ದ ಧ್ವನಿಯೇ ಮತ್ತೆ ನನ್ನೊಂದಿಗೆ ಮಾತಾಡಿತು. ಆ ಧ್ವನಿಯು ತುತೂರಿಯ ಧ್ವನಿಯಂತಿತ್ತು. ಆ ಧ್ವನಿಯು, “ಇಲ್ಲಿಗೆ ಹತ್ತಿ ಬಾ. ಮುಂದೆ ಸಂಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ” ಎಂದು ಹೇಳಿತು. 2 ಕೂಡಲೇ ನಾನು ಪವಿತ್ರಾತ್ಮನ ವಶನಾದೆನು. ಪರಲೋಕದಲ್ಲಿ ನನ್ನೆದುರಿಗೆ ಒಂದು ಸಿಂಹಾಸನವಿತ್ತು. ಯಾರೋ ಒಬ್ಬನು ಆ ಸಿಂಹಾಸನದ ಮೇಲೆ ಕುಳಿತಿದ್ದನು. 3 ಸಿಂಹಾಸನದ ಮೇಲೆ ಕುಳಿತಿದ್ದಾತನು ಅಮೂಲ್ಯವಾದ ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಬಣ್ಣದ ಕಾಮನಬಿಲ್ಲಿತ್ತು.
4 ಆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತುಕೊಂಡಿದ್ದರು. ಅವರು ಬಿಳಿ ವಸ್ತ್ರಗಳನ್ನು ಧರಿಸಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. 5 ಆ ಸಿಂಹಾಸನದಿಂದ ಸಿಡಿಲಿನ ಆರ್ಭಟವೂ ಗುಡುಗಿನ ಧ್ವನಿಯೂ ಬರುತ್ತಿತ್ತು. ಆ ಸಿಂಹಾಸನದ ಮುಂದೆ ಏಳು ದೀಪಗಳು ಬೆಳಗುತ್ತಿದ್ದವು. ಈ ದೀಪಗಳು ದೇವರ ಏಳು ಆತ್ಮಗಳಾಗಿದ್ದವು. 6 ಇದಲ್ಲದೆ ಸಿಂಹಾಸನದ ಮುಂದೆ ಗಾಜಿನ ಸಮುದ್ರದಂತೆ ಕಾಣುವ ವಸ್ತುವೊಂದಿತ್ತು. ಅದು ಸ್ಫಟಿಕದಂತೆ ಸ್ಪಚ್ಛವಾಗಿತ್ತು.
ಆ ಸಿಂಹಾಸನದ ಮುಂದೆ ಮತ್ತು ಅದರ ಪ್ರತಿಯೊಂದು ಮಗ್ಗುಲಿನಲ್ಲೂ ನಾಲ್ಕು ಜೀವಿಗಳಿದ್ದವು. ಈ ಜೀವಿಗಳ ಹಿಂಭಾಗದಲ್ಲೆಲ್ಲಾ ಮತ್ತು ಮುಂಭಾಗದಲ್ಲೆಲ್ಲಾ ಕಣ್ಣುಗಳು ತುಂಬಿದ್ದವು. 7 ಮೊದಲನೆ ಜೀವಿಯು ಸಿಂಹದಂತಿತ್ತು. ಎರಡನೆಯದು ಹಸುವಿನಂತಿತ್ತು. ಮೂರನೆಯದರ ಮುಖ ಮಾನವನ ಮುಖದಂತಿತ್ತು. ನಾಲ್ಕನೆಯದು ಹಾರುವ ಗರುಡನಂತಿತ್ತು.[a] 8 ಈ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಈ ಜೀವಿಗಳ ಹೊರಭಾಗದಲ್ಲೆಲ್ಲಾ ಮತ್ತು ಒಳಭಾಗದಲ್ಲೆಲ್ಲಾ ಕಣ್ಣುಗಳಿದ್ದವು. ಈ ನಾಲ್ಕು ಜೀವಿಗಳು ಹಗಲಿರುಳು ಎಡಬಿಡದೆ ಹೀಗೆ ಹೇಳುತ್ತಿದ್ದವು:
“ದೇವರಾದ ಪ್ರಭು, ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಆತನು ಸರ್ವಶಕ್ತನು.
ಆತನು ಭೂತಕಾಲದಲ್ಲಿ ಇದ್ದವನೂ ವರ್ತಮಾನಕಾಲದಲ್ಲಿ ಇರುವಾತನೂ ಮುಂದೆ ಬರುವಾತನೂ ಆಗಿದ್ದಾನೆ.”
9 ಈ ಜೀವಿಗಳು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಪ್ರಭಾವ, ಗೌರವ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದವು. ಯುಗಯುಗಾಂತರಗಳಲ್ಲಿಯೂ ಜೀವಿಸುವವನು ಆತನೇ. 10 ಇಪ್ಪತ್ತನಾಲ್ಕು ಮಂದಿ ಹಿರಿಯರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಮೊಣಕಾಲೂರಿ ನಮಸ್ಕರಿಸಿ, ಯುಗಯುಗಾಂತರಗಳಲ್ಲಿಯೂ ಜೀವಿಸುವ ಆತನನ್ನು ಆರಾಧಿಸುತ್ತಾ ಇಂತೆಂದರು:
11 “ನಮ್ಮ ಪ್ರಭುವೇ, ನಮ್ಮ ದೇವರೇ!
ನೀನು ಪ್ರಭಾವ, ಗೌರವ, ಅಧಿಕಾರಗಳನ್ನು ಪಡೆಯಲು ಯೋಗ್ಯನಾಗಿರುವೆ.
ಎಲ್ಲವನ್ನೂ ನಿರ್ಮಿಸಿದಾತನು ನೀನೇ.
ನಿನ್ನ ಚಿತ್ತದಂತೆಯೇ ಎಲ್ಲವೂ ಇದ್ದವು; ಎಲ್ಲವೂ ಸೃಷ್ಟಿಗೊಂಡವು.”
Kannada Holy Bible: Easy-to-Read Version. All rights reserved. © 1997 Bible League International