ಯೆಹೆಜ್ಕೇಲ 1:4-14
Kannada Holy Bible: Easy-to-Read Version
ಯೆಹೋವನ ರಥ—ದೇವರ ಸಿಂಹಾಸನ
4 ಉತ್ತರ ದಿಕ್ಕಿನಿಂದ ಒಂದು ದೊಡ್ಡ ಬಿರುಗಾಳಿ ಬರುವದನ್ನು ಯೆಹೆಜ್ಕೇಲನಾದ ನಾನು ನೋಡಿದೆನು. ಬಿರುಗಾಳಿಯೊಡನೆ ಕೂಡಿದ ಒಂದು ದೊಡ್ಡ ಮೋಡವು ಅಲ್ಲಿತ್ತು. ಅದರಿಂದ ಬೆಂಕಿಯು ಪ್ರಜ್ವಲಿಸುತ್ತಿತ್ತು. ಮೋಡದ ಸುತ್ತಲೂ ಬೆಳಕಿತ್ತು. ಬೆಂಕಿಯ ಮಧ್ಯದಲ್ಲಿ ಕಾದಲೋಹದಂತೆ ಹೊಳೆಯುತ್ತಿದ್ದ ಏನನ್ನೊ ಕಂಡೆನು. 5 ಆ ಮೋಡದೊಳಗೆ ಮನುಷ್ಯರನ್ನು ಹೋಲುವ ನಾಲ್ಕು ಜೀವಿಗಳಿದ್ದವು. 6 ಆ ಜೀವಿಗಳಲ್ಲಿ ಪ್ರತಿಯೊಂದಕ್ಕೂ ನಾಲ್ಕು ಮುಖಗಳೂ ನಾಲ್ಕು ರೆಕ್ಕೆಗಳೂ ಇದ್ದವು. 7 ಅವುಗಳ ಕಾಲುಗಳು ನೆಟ್ಟಗಿದ್ದವು. ಅವುಗಳ ಪಾದಗಳು ಕರುವಿನ ಗೊರಸಿನಂತಿದ್ದವು. ಅವು ಬೆಳಗಿದ ತಾಮ್ರದಂತೆ ಹೊಳೆಯುತ್ತಿದ್ದವು. 8 ಒಂದೊಂದು ಜೀವಿಯ ನಾಲ್ಕು ಪಾರ್ಶ್ವಗಳಲ್ಲಿನ ರೆಕ್ಕೆಗಳ ಕೆಳಗೆ ಮನುಷ್ಯನ ತೋಳುಗಳೂ ಕೈಗಳೂ ಇದ್ದವು. ನಾಲ್ಕು ಜೀವಿಗಳಿಗೆ ಮುಖಗಳೂ ರೆಕ್ಕೆಗಳೂ ಈ ರೀತಿಯಲ್ಲಿದ್ದವು; 9 ಆ ರೆಕ್ಕೆಗಳು ಒಂದಕ್ಕೊಂದು ತಾಕಿದ್ದವು. ಆ ಜೀವಿಗಳು ಚಲಿಸುವಾಗ ಅತ್ತಿತ್ತ ತಿರುಗುತ್ತಿರಲಿಲ್ಲ. ತಮ್ಮ ದೃಷ್ಟಿಯಿದ್ದ ಕಡಗೆ ನೆಟ್ಟಗೆ ಹೋದವು.
10 ಪ್ರತೀ ಜೀವಿಗೆ ನಾಲ್ಕು ಮುಖಗಳಿದ್ದವು. ಮುಂಭಾಗದಲ್ಲಿ ಮನುಷ್ಯನ ಮುಖ, ಬಲ ಬದಿಯಲ್ಲಿ ಸಿಂಹದ ಮುಖ, ಎಡ ಬದಿಯಲ್ಲಿ ಹೋರಿಯ ಮುಖ, ಹಿಂಬದಿಯಲ್ಲಿ ಗರುಡನ ಮುಖ. 11 ಒಂದೊಂದು ಜೀವಿಯ ಎರಡು ರೆಕ್ಕೆಗಳು ಮತ್ತೊಂದು ಜೀವಿಯ ರೆಕ್ಕೆಗಳನ್ನು ತಾಗುತ್ತಿದ್ದವು ಮತ್ತು ಉಳಿದೆರಡು ರೆಕ್ಕೆಗಳು ಅದರ ದೇಹವನ್ನು ಆವರಿಸಿಕೊಂಡಿದ್ದವು. 12 ಆ ಜೀವಿಗಳು ಯಾವ ದಿಕ್ಕಿಗೆ ನೋಡುತ್ತಿದ್ದವೋ ಅದೇ ಕಡೆಗೆ ಹೋಗುತ್ತಿದ್ದವು. ದೇವರಾತ್ಮನು ಅವುಗಳನ್ನು ಯಾವ ಕಡೆಗೆ ನಡಿಸುತ್ತಾನೋ ಆ ದಿಕ್ಕಿಗೆ ಅವು ಹೋದವು. ಆದರೆ ಹೋಗುತ್ತಿರುವಾಗ ಅವುಗಳು ತಿರುಗಲಿಲ್ಲ. 13 ಆ ಜೀವಿಗಳ ಮಧ್ಯದಲ್ಲಿ ಉರಿಯುವ ಕೆಂಡಗಳಂತೆ ಕಾಣುತ್ತಿದ್ದ ಏನೋ ಇತ್ತು.
ಈ ಬೆಂಕಿಯು ಸಣ್ಣ ದೀವಟಿಗೆಗಳಂತೆ ಜೀವಿಗಳ ಮಧ್ಯೆ ಸಂಚರಿಸುತ್ತಿದ್ದವು. ಆ ಬೆಂಕಿಯು ಪ್ರಕಾಶಮಾನವಾಗಿದ್ದು ಅದರೊಳಗಿಂದ ಮಿಂಚುಗಳು ಹೊರಡುತ್ತಿದ್ದವು. 14 ಆ ಮಿಂಚಿನ ವೇಗದಂತೆ ಜೀವಿಗಳು ಅತ್ತಿತ್ತ ಓಡಾಡುತ್ತಿದ್ದವು.
Read full chapterKannada Holy Bible: Easy-to-Read Version. All rights reserved. © 1997 Bible League International