Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 13-14

ಯೆಹೂದ ರಾಜ್ಯದ ರಾಜನಾದ ಅಬೀಯನು

13 ಇಸ್ರೇಲ್ ರಾಜ್ಯದ ರಾಜನಾದ ಯಾರೊಬ್ಬಾಮನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಅಬೀಯನು ಯೆಹೂದದ ರಾಜನಾಗಿ ಆಳತೊಡಗಿದನು. ಅವನು ಜೆರುಸಲೇಮಿನಲ್ಲಿ ಮೂರು ವರ್ಷ ಆಳಿದನು. ಊರೀಯೇಲನ ಮಗಳಾದ ಮೀಕಾಯಳು ಅಬೀಯನ ತಾಯಿ. ಊರೀಯೇಲನು ಗಿಬೆಯ ಊರಿನವನು. ಅಬೀಯನಿಗೂ ಯಾರೊಬ್ಬಾಮನಿಗೂ ಯುದ್ಧವಾಗುತ್ತಿತ್ತು. ಅಬೀಯನ ಬಳಿ ನಾಲ್ಕು ಲಕ್ಷ ಮಂದಿ ವೀರ ಸೈನಿಕರಿದ್ದರು. ಅವನು ಸೈನ್ಯವನ್ನು ಯುದ್ಧದಲ್ಲಿ ಮುನ್ನಡೆಸಿದನು. ಯಾರೊಬ್ಬಾಮನ ಬಳಿಯಲ್ಲಿ ಎಂಟು ಲಕ್ಷ ಮಂದಿ ಸೈನಿಕರು ಇದ್ದರು. ಯಾರೊಬ್ಬಾಮನು ಅಬೀಯನ ಮೇಲೆ ಯುದ್ಧಕ್ಕೆ ತಯಾರಾದನು.

ಆಗ ಅಬೀಯನು ಎಫ್ರಾಯೀಮ್ ಬೆಟ್ಟಪ್ರಾಂತ್ಯದ ಚೆಮಾರೈ ಬೆಟ್ಟದ ಮೇಲೆ ನಿಂತು, “ಯಾರೊಬ್ಬಾಮನೇ, ಸಮಸ್ತ ಇಸ್ರೇಲರೇ, ನನ್ನ ಮಾತುಗಳಿಗೆ ಕಿವಿಗೊಡಿರಿ. ಇಸ್ರೇಲರ ದೇವರಾದ ಯೆಹೋವನು ದಾವೀದನಿಗೂ ಅವನ ಗಂಡುಮಕ್ಕಳಿಗೂ ನಿರಂತರವಾಗಿ ಇಸ್ರೇಲನ್ನು ಆಳಲು ಉಪ್ಪಿನ ಒಡಂಬಡಿಕೆಯ ಮೂಲಕ ಅಧಿಕಾರ ಕೊಟ್ಟಿದ್ದಾನೆಂದು ನಿಮಗೆ ತಿಳಿದಿರಬೇಕು. ಆದರೆ ಯಾರೊಬ್ಬಾಮನು ತನ್ನ ಒಡೆಯನಿಗೆ ವಿರುದ್ಧವಾಗಿ ದಂಗೆ ಎದ್ದನು. ನೆಬಾಟನ ಮಗನಾದ ಯಾರೊಬ್ಬಾಮನು ಸೊಲೊಮೋನನ ಸೇವಕರಲ್ಲಿ ಒಬ್ಬನಾಗಿದ್ದನು. ಆಗ ಕೆಲಸಕ್ಕೆ ಬಾರದ ದುಷ್ಟಜನರು ಯಾರೊಬ್ಬಾಮನ ಸ್ನೇಹಿತರಾಗಿ ಅವನನ್ನು ಹಿಂಬಾಲಿಸಿ ರೆಹಬ್ಬಾಮನಿಗೆ ವಿರುದ್ಧವಾಗಿ ದಂಗೆ ಎದ್ದರು. ಸೊಲೊಮೋನನ ಮಗನಾದ ರೆಹಬ್ಬಾಮನು ಆಗ ಸಣ್ಣ ಪ್ರಾಯದವನಾಗಿ ಅನುಭವವಿಲ್ಲದವನಾಗಿದ್ದನು. ಆದ್ದರಿಂದ ಯಾರೊಬ್ಬಾಮನನ್ನೂ ಅವನ ದುಷ್ಟ ಹಿಂಬಾಲಕರನ್ನೂ ತಡೆಯಲು ಅವನಿಗೆ ಆಗಲಿಲ್ಲ.

“ದಾವೀದನ ಮಕ್ಕಳು ಆಳುತ್ತಿರುವ ಯೆಹೋವನ ರಾಜ್ಯವನ್ನು ಸೋಲಿಸಲು ಈಗ ನೀವು ನಿರ್ಧರಿಸಿದ್ದೀರಿ. ನಿಮ್ಮಲ್ಲಿ ಅಧಿಕ ಸಂಖ್ಯೆಯ ಸೈನ್ಯವಿರಬಹುದು. ಯಾರೊಬ್ಬಾಮನು ನಿಮ್ಮ ದೇವರುಗಳಾಗಿ ಮಾಡಿಸಿದ ಬಂಗಾರದ ಬಸವ ಮೂರ್ತಿಗಳು ನಿಮ್ಮಲ್ಲಿವೆ. ನೀವು ಆರೋನನ ಸಂತತಿಯವರಾದ ಯೆಹೋವನ ಯಾಜಕರನ್ನು ಹೊರಡಿಸಿಬಿಟ್ಟರಿ. ನೀವು ಲೇವಿಯರನ್ನೂ ಹೊರಡಿಸಿಬಿಟ್ಟಿರಿ. ಅನ್ಯಜನಾಂಗದವರಂತೆ ನೀವು ನಿಮ್ಮಲ್ಲಿಂದಲೇ ಯಾಜಕರನ್ನು ಆರಿಸಿಕೊಂಡಿರಿ. ಯಾವನಾದರೂ ಏಳು ಟಗರುಗಳನ್ನೂ ಒಂದು ಎಳೇ ಹೋರಿಯನ್ನೂ ತಂದರೆ ನೀವು ಅವನನ್ನು ‘ದೇವರಲ್ಲದವುಗಳ’ ಸೇವೆಮಾಡಲು ಯಾಜಕನನ್ನಾಗಿ ಮಾಡುವಿರಿ.

10 “ನಮಗಾದರೋ ಯೆಹೋವನೇ ದೇವರು. ಯೆಹೂದ್ಯ ಪ್ರಾಂತ್ಯದವರಾದ ನಾವು ದೇವರ ಕಟ್ಟಳೆಗೆ ವಿಧೇಯರಾಗಲು ನಿರಾಕರಿಸಲಿಲ್ಲ. ನಾವು ಆತನನ್ನು ತೊರೆಯಲಿಲ್ಲ. ಆತನ ಸೇವೆಮಾಡಲು ಲೇವಿಯರು ಮತ್ತು ಆರೋನನ ಸಂತತಿಯವರಾದ ಯಾಜಕರು ಸಹಾಯ ಮಾಡುವರು. 11 ಅವರು ಪ್ರತಿದಿನವೂ ಮುಂಜಾನೆ ಸಾಯಂಕಾಲಗಳಲ್ಲಿ ಸರ್ವಾಂಗಹೋಮಗಳನ್ನೂ ಧೂಪಗಳನ್ನೂ ಅರ್ಪಿಸುವರು; ಮೇಜಿನ ಮೇಲೆ ನೈವೇದ್ಯದ ರೊಟ್ಟಿಗಳನ್ನಿಡುವರು. ಅವರು ಬಂಗಾರದ ದೀಪಸ್ತಂಭಗಳ ಮೇಲಿನ ಆರತಿಗಳನ್ನು ಸರಿಯಾಗಿ ನೋಡಿಕೊಳ್ಳುವುದರಿಂದ ಅವು ಹಗಲಿನಲ್ಲಿಯೂ ಸಾಯಂಕಾಲದಲ್ಲಿಯೂ ಪ್ರಕಾಶಮಾನವಾಗಿ ಉರಿಯುವವು. ನಾವು ಬಹಳ ಎಚ್ಚರಿಕೆಯಿಂದ ನಮ್ಮ ದೇವರ ಸೇವೆಮಾಡುತ್ತೇವೆ. ಆದರೆ ನೀವು ಆತನನ್ನು ತೊರೆದುಬಿಟ್ಟಿದ್ದೀರಿ. 12 ದೇವರು ನಮ್ಮೊಂದಿಗಿದ್ದಾನೆ. ನಮ್ಮನ್ನು ಆಳುವವನು ಆತನೇ. ಅವನ ಯಾಜಕರು ನಮ್ಮೊಂದಿಗಿದ್ದಾರೆ. ದೇವರ ಯಾಜಕರು ತುತ್ತೂರಿಯನ್ನೂದಿ ನಿಮ್ಮನ್ನು ಆತನ ಬಳಿಗೆ ಬರಲು ಎಚ್ಚರಿಸುತ್ತಾರೆ. ಇಸ್ರೇಲರೇ, ನಿಮ್ಮ ಪೂರ್ವಿಕರ ದೇವರಾದ ಯೆಹೋವನ ಜನರೊಂದಿಗೆ ಕಾದಾಡಬೇಡಿರಿ. ನೀವು ಜಯಹೊಂದುವದಿಲ್ಲ” ಎಂದು ಹೇಳಿದನು.

13 ಆದರೆ ಯಾರೊಬ್ಬಾಮನು ತನ್ನ ಸೈನ್ಯದ ಒಂದು ಭಾಗವನ್ನು ಅಬೀಯನ ಸೈನ್ಯದ ಹಿಂಭಾಗಕ್ಕೆ ಅವನಿಗೆ ಗೊತ್ತಿಲ್ಲದಂತೆ ಕಳುಹಿಸಿದನು. ಯಾರೊಬ್ಬಾಮನ ಸೈನ್ಯವು ಅಬೀಯನ ಸೈನ್ಯಕ್ಕೆ ಎದುರಾಗಿತ್ತು. ಅಬೀಯನ ಹಿಂದೆ ಯಾರೊಬ್ಬಾಮನ ಸೈನ್ಯವು ಅಡಗಿಕೊಂಡಿತ್ತು. 14 ಅಬೀಯನ ಸೈನ್ಯವು ಸುತ್ತಲೂ ನೋಡಿದಾಗ ವೈರಿಗಳ ಸೈನ್ಯವು ಮುಂದೆಯೂ ಹಿಂದೆಯೂ ಯುದ್ಧಮಾಡುತ್ತಿರುವದನ್ನು ನೋಡಿ ಯೆಹೋವನನ್ನು ಕೂಗಿದರು. ಯಾಜಕರು ತುತ್ತೂರಿಯನ್ನೂದಿದರು. 15 ಆಗ ಅಬೀಯನ ಸೈನ್ಯದವರು ದೊಡ್ಡ ಆರ್ಭಟ ಮಾಡಿದರು. ಆರ್ಭಟಿಸುತ್ತಾ ಮುಂದೆ ಸಾಗಿದರು. ಯಾರೊಬ್ಬಾಮನ ಸೈನ್ಯವನ್ನು ಮತ್ತು ಎಲ್ಲಾ ಇಸ್ರೇಲರನ್ನು ಯೆಹೂದದ ಅಬೀಯನ ಸೈನ್ಯವು ಸೋಲಿಸುವಂತೆ ದೇವರು ಮಾಡಿದನು. 16 ಯೆಹೂದದ ಸೈನ್ಯದ ಮುಂದೆ ಇಸ್ರೇಲರ ಸೈನ್ಯವು ಬೆನ್ನುಕೊಟ್ಟು ಓಡಿಹೋಗುವಂತೆ ದೇವರು ಮಾಡಿದನು. 17 ಅಬೀಯನ ಸೈನ್ಯವು ಇಸ್ರೇಲಿನ ಸೈನ್ಯದ ಮೇಲೆ ಮಹಾಜಯವನ್ನು ಗಳಿಸಿತು. ಯಾರೊಬ್ಬಾಮನ ಐದು ಲಕ್ಷ ಪಳಗಿದ ಸೈನಿಕರು ಕೊಲ್ಲಲ್ಪಟ್ಟರು. 18 ಇಸ್ರೇಲಿನ ಜನರು ಸೋತುಹೋದರು. ಯೆಹೂದದ ಜನರಿಗೆ ಜಯ ದೊರಕಿತು. ಯಾಕೆಂದರೆ ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಮೇಲೆ ಭರವಸವನ್ನಿಟ್ಟಿದರು.

19 ಅಬೀಯನ ಸೈನಿಕರು ಯಾರೊಬ್ಬಾಮನ ಸೈನಿಕರನ್ನು ಓಡಿಸಿದರು. ಮತ್ತು ಅವರ ಪಟ್ಟಣಗಳಾದ ಬೇತೇಲ್, ಯೆಷಾನಾ ಮತ್ತು ಎಪ್ರೋನ್‌ಗಳನ್ನು ವಶಪಡಿಸಿಕೊಂಡರು. ಈ ಪಟ್ಟಣಗಳನ್ನೂ ಅವುಗಳ ಸುತ್ತಮುತ್ತಲಿದ್ದ ಹಳ್ಳಿಗಳನ್ನೂ ವಶಪಡಿಸಿಕೊಂಡರು.

20 ಅಬೀಯನಿರುವಷ್ಟು ಕಾಲ ಯಾರೊಬ್ಬಾಮನು ಮತ್ತೆ ಬಲಗೊಳ್ಳಲೇ ಇಲ್ಲ. ಯೆಹೋವನು ಯಾರೊಬ್ಬಾಮನನ್ನು ಸಾಯಿಸಿದನು. 21 ಅಬೀಯನು ಬಲಗೊಂಡನು. ಅವನು ಹದಿನಾಲ್ಕು ಮಂದಿ ಸ್ತ್ರೀಯರನ್ನು ಮದುವೆ ಮಾಡಿಕೊಂಡು ಅವರಿಂದ ಇಪ್ಪತ್ತೆರಡು ಗಂಡುಮಕ್ಕಳನ್ನೂ ಹದಿನಾರು ಹೆಣ್ಣುಮಕ್ಕಳನ್ನೂ ಪಡೆದನು. 22 ಅಬೀಯನು ಮಾಡಿದ ಎಲ್ಲಾ ಕಾರ್ಯಗಳ ಕುರಿತು ಪ್ರವಾದಿ ಇದ್ದೋ ಬರೆದ ಪುಸ್ತಕದಲ್ಲಿ ದಾಖಲಾಗಿವೆ.

14 ಅಬೀಯನು ತನ್ನ ಪೂರ್ವಿಕರೊಂದಿಗೆ ವಿಶ್ರಾಂತಿಗೆ ಸೇರಿದನು. ಜನರು ಅವನನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು. ಅಬೀಯನ ನಂತರ ಅವನ ಮಗನಾದ ಆಸನು ಪಟ್ಟಕ್ಕೆ ಬಂದನು. ಆಸನ ಆಳ್ವಿಕೆಯ ಹತ್ತು ವರ್ಷ ದೇಶದಲ್ಲಿ ಸಮಾಧಾನ ನೆಲೆಸಿತ್ತು.

ಯೆಹೂದದ ಅರಸನಾದ ಆಸ

ಆಸನು ತನ್ನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿಯೂ ನೀತಿವಂತನಾಗಿಯೂ ಇದ್ದನು. ಮೂರ್ತಿಪೂಜೆಗಾಗಿ ಮಾಡಿದ ಯಜ್ಞವೇದಿಕೆಗಳನ್ನು ತೆಗೆದುಹಾಕಿಸಿದನು. ವಿಗ್ರಹಾರಾಧಕರ ಪೂಜಾಸ್ಥಳಗಳನ್ನು, ಸ್ಮಾರಕಕಲ್ಲುಗಳನ್ನು ಒಡೆದು ಹಾಳುಮಾಡಿಸಿದನು. ಅಶೇರಸ್ತಂಭಗಳನ್ನು ತುಂಡು ಮಾಡಿಸಿದನು. “ನಿಮ್ಮ ಪೂರ್ವಿಕರ ದೇವರಾದ ಯೆಹೋವನನ್ನೇ ಅನುಸರಿಸಿ ಆತನ ಆಜ್ಞೆಗಳಿಗೂ ಕಟ್ಟಳೆಗಳಿಗೂ ವಿಧೇಯರಾಗಿರಿ” ಎಂದು ಆಸನು ಆಜ್ಞಾಪಿಸಿದನು. ಯೆಹೂದ ದೇಶದ ಪಟ್ಟಣಗಳಲ್ಲಿದ್ದ ಎಲ್ಲಾ ವಿಗ್ರಹಗಳನ್ನೂ ಪೂಜಾಸ್ಥಳಗಳನ್ನೂ ಕಿತ್ತುಹಾಕಿಸಿದನು. ಆತನ ಆಳ್ವಿಕೆಯಲ್ಲಿ ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತ್ತು. ಆ ಕಾಲದಲ್ಲಿ ಆಸನು ಯೆಹೂದ ಪ್ರಾಂತ್ಯದಲ್ಲಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಕಟ್ಟಿಸಿದನು. ಆಸನ ಆಳ್ವಿಕೆಯಲ್ಲಿ ಯುದ್ಧವೇ ಇರಲಿಲ್ಲ. ಯಾಕೆಂದರೆ ಯೆಹೋವನು ಅವನಿಗೆ ಸಮಾಧಾನವನ್ನು ಅನುಗ್ರಹಿಸಿದ್ದನು.

ಆಸನು ಜನರಿಗೆ, “ನಾವು ಈ ಪಟ್ಟಣಗಳ ಸುತ್ತಲೂ ಕೋಟೆಯನ್ನು ಕಟ್ಟೋಣ; ಬುರುಜುಗಳನ್ನೂ ಕದಗಳನ್ನೂ ಭದ್ರಪಡಿಸೋಣ. ನಾವು ನಮ್ಮ ದೇವರಾದ ಯೆಹೋವನನ್ನು ಅನುಸರಿಸುವದರಿಂದ ಈ ದೇಶವು ನಮ್ಮದಾಗಿರುತ್ತದೆ. ಆದ್ದರಿಂದ ನಾವು ಹೀಗೆ ಮಾಡೋಣ. ಆತನು ನಮ್ಮ ಸುತ್ತಲೂ ಸಮಾಧಾನವನ್ನು ಅನುಗ್ರಹಿಸಿದ್ದಾನೆ” ಎಂದು ಹೇಳಿದನು. ಅಂತೆಯೇ ಅವರು ಕಟ್ಟಿ ಪೂರೈಸಿದರು.

ಆಸನ ಬಳಿ ಮೂರು ಲಕ್ಷ ಸೈನಿಕರಿದ್ದರು, ಯೆಹೂದಕುಲದ ಇವರು ಗುರಾಣಿಗಳನ್ನೂ ಬರ್ಜಿಗಳನ್ನೂ ಬಳಸಬಲ್ಲವರಾಗಿದ್ದರು. ಇವರಲ್ಲದೆ ಬೆನ್ಯಾಮೀನ್ ಕುಲದಿಂದ ಎರಡು ಲಕ್ಷದ ಎಂಭತ್ತು ಸಾವಿರ ಮಂದಿ ಸೈನಿಕರಿದ್ದರು. ಇವರು ಸಣ್ಣ ಗುರಾಣಿಗಳನ್ನೂ ಬಿಲ್ಲುಬಾಣಗಳನ್ನೂ ಬಳಸಬಲ್ಲವರಾಗಿದ್ದರು. ಇವರೆಲ್ಲರೂ ರಣವೀರರಾಗಿದ್ದರು.

ಇಥಿಯೋಪಿಯಾ ದೇಶದ ಜೆರಹನು ಆಸನ ಮೇಲೆ ಯುದ್ಧಮಾಡಲು ಬಂದನು. ಅವನೊಡನೆ ಹತ್ತು ಲಕ್ಷ ಸೈನಿಕರಿದ್ದರು; ಮೂನ್ನೂರು ರಥಗಳಿದ್ದವು. ಅವನ ಸೈನ್ಯವು ಮಾರೇಷದ ತನಕ ಬಂದಿತ್ತು. 10 ಆಸನು ಜೆರಹನ ವಿರುದ್ಧ ಯುದ್ಧಮಾಡಲು ಹೊರಟನು. ಮಾರೇಷದ ಚೆಫಾತ ಎಂಬ ಕಣಿವೆಯಲ್ಲಿ ವ್ಯೂಹ ಕಟ್ಟಿದರು.

11 ಆಸನು ದೇವರಾದ ಯೆಹೋವನನ್ನು ಪ್ರಾರ್ಥಿಸಿ, “ಯೆಹೋವನೇ, ಬಲಹೀನರಾದವರು ಬಲಿಷ್ಠರಾದವರನ್ನು ಸೋಲಿಸಲು ನೀನೇ ಸಹಾಯಿಸಬೇಕು. ದೇವರಾದ ಯೆಹೋವನೇ, ನಮಗೆ ಸಹಾಯಮಾಡು. ನೀನೇ ನಮ್ಮ ರಕ್ಷಕನು. ನಾವು ನಿನ್ನ ಮೇಲೆ ಭರವಸವಿಟ್ಟಿರುತ್ತೇವೆ. ನಿನ್ನ ಹೆಸರಿನಲ್ಲಿ ನಾವು ದೊಡ್ಡ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟಿರುತ್ತೇವೆ. ಯೆಹೋವನೇ, ನೀನೇ ನಮ್ಮ ದೇವರು. ನಿನ್ನನ್ನು ಸೋಲಿಸಲು ಯಾರಿಗೂ ಅವಕಾಶಕೊಡಬೇಡ” ಎಂದು ಬೇಡಿಕೊಂಡನು.

12 ಆಗ ಯೆಹೂದ ದೇಶದ ಆಸನ ಸೈನ್ಯವು ಇಥಿಯೋಪಿಯಾದ ಸೈನ್ಯವನ್ನು ಸೋಲಿಸುವಂತೆ ಯೆಹೋವನು ಮಾಡಿದನು. 13 ಆಸನ ಸೈನಿಕರು ಇಥಿಯೋಪಿಯಾದ ಸೈನ್ಯವನ್ನು ಗೆರಾರಿನ ತನಕ ಹಿಂದಟ್ಟಿಕೊಂಡು ಹೋದರು. ಅವರು ಮತ್ತೆ ಸೈನ್ಯವನ್ನು ಕಟ್ಟಿ ಯುದ್ಧಮಾಡಲು ಸಾಧ್ಯವಾಗದಷ್ಟು ಸೈನಿಕರು ಸತ್ತರು. ಅವರ ಬಲವನ್ನು ಮುರಿಯಲು ಯೆಹೋವನು ತನ್ನ ಸೈನ್ಯವನ್ನು ಬಳಸಿಕೊಂಡನು. 14 ಆಸನು ತನ್ನ ಸೈನ್ಯದೊಡನೆ ಗೆರಾರಿನ ಎಲ್ಲಾ ಪಟ್ಟಣಗಳನ್ನು ಸೋಲಿಸಿಬಿಟ್ಟನು. ಅವುಗಳಲ್ಲಿ ವಾಸಿಸುವ ಜನರು ಯೆಹೋವನಿಗೆ ಭಯಪಟ್ಟರು. ಆ ಪಟ್ಟಣಗಳಲ್ಲಿ ಇದ್ದ ನಿಕ್ಷೇಪಗಳನ್ನು ಆಸನ ಸೈನಿಕರು ದೋಚಿದರು. 15 ಆಸನ ಸೈನಿಕರು ಕುರುಬರ ಪಾಳೆಯವನ್ನು ಧ್ವಂಸಮಾಡಿ ಅನೇಕಾನೇಕ ಕುರಿಗಳನ್ನೂ ಒಂಟೆಗಳನ್ನೂ ಸೂರೆಮಾಡಿ ಜೆರುಸಲೇಮಿಗೆ ತಂದರು.

ಯೋಹಾನ 12:1-26

ಬೆಥಾನಿಯಲ್ಲಿ ಯೇಸು

(ಮತ್ತಾಯ 26:6-13; ಮಾರ್ಕ 14:3-9)

12 ಪಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿದ್ದಾಗ ಯೇಸು ಬೆಥಾನಿಗೆ ಹೋದನು. ಲಾಜರನು ವಾಸವಾಗಿದ್ದ ಊರೇ ಬೆಥಾನಿ. (ಯೇಸು ಸತ್ತವರೊಳಗಿಂದ ಎಬ್ಬಿಸಿದ ಮನುಷ್ಯನೇ ಲಾಜರನು.) ಅವರು ಯೇಸುವಿಗೆ ರಾತ್ರಿಭೋಜನವನ್ನು ಏರ್ಪಡಿಸಿದ್ದರು. ಮಾರ್ಥಳು ಊಟವನ್ನು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟ ಮಾಡುತ್ತಿದ್ದವರಲ್ಲಿ ಲಾಜರನೂ ಒಬ್ಬನಾಗಿದ್ದನು. ಆಗ ಮರಿಯಳು, ಬಹು ಬೆಲೆಬಾಳುವ ಸುಗಂಧತೈಲವನ್ನು[a] ಅರ್ಧ ಲೀಟರಿನಷ್ಟು ತೆಗೆದುಕೊಂಡು ಬಂದು, ಯೇಸುವಿನ ಪಾದಗಳಿಗೆ ಹಚ್ಚಿದಳು. ಬಳಿಕ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರೆಸಿದಳು. ಆ ಪರಿಮಳದ್ರವ್ಯದ ಸುವಾಸನೆಯು ಇಡೀ ಮನೆಯನ್ನೇ ತುಂಬಿಕೊಂಡಿತು.

ಇಸ್ಕರಿಯೋತ ಯೂದನು ಅಲ್ಲಿದ್ದನು. ಅವನು ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದನು. (ಮುಂದೆ, ಯೇಸುವಿಗೆ ದ್ರೋಹ ಮಾಡಿದವನು ಇವನೇ.) ಮರಿಯಳು ಮಾಡಿದ ಈ ಕಾರ್ಯವನ್ನು ಯೂದನು ಇಷ್ಟಪಡಲಿಲ್ಲ. ಅವನು, “ಆ ಪರಿಮಳದ ದ್ರವ್ಯದ ಬೆಲೆ ಮುನ್ನೂರು ಬೆಳ್ಳಿನಾಣ್ಯಗಳು.[b] ಅದನ್ನು ಮಾರಿ ಆ ಹಣವನ್ನು ಬಡವರಿಗೆ ಕೊಡಬೇಕಿತ್ತು” ಎಂದು ಟೀಕಿಸಿದನು. ಆದರೆ ಯೂದನಿಗೆ ಬಡವರ ಬಗ್ಗೆ ನಿಜವಾಗಿಯೂ ಚಿಂತೆಯಿರಲಿಲ್ಲ. ಅವನು ಕಳ್ಳನಾಗಿದ್ದುದರಿಂದ ಹಾಗೆ ಹೇಳಿದನು. ಶಿಷ್ಯಸಮುದಾಯಕ್ಕೋಸ್ಕರವಿದ್ದ ಹಣದ ಪೆಟ್ಟಿಗೆಯು ಅವನ ವಶದಲ್ಲಿತ್ತು. ಅವನು ಆಗಾಗ್ಗೆ ಆ ಪೆಟ್ಟಿಗೆಯಿಂದ ಹಣವನ್ನು ಕದ್ದುಕೊಳ್ಳುತ್ತಿದ್ದನು.

ಯೇಸು ಅವನಿಗೆ, “ಆಕೆಯನ್ನು ತಡೆಯಬೇಡ. ನನ್ನನ್ನು ಶವಸಂಸ್ಕಾರಕ್ಕೆ ಸಿದ್ಧಪಡಿಸುವ ಈ ದಿನಕ್ಕೋಸ್ಕರ ಆಕೆ ಸುಗಂಧ ದ್ರವ್ಯವನ್ನು ಶೇಖರಿಸಿದ್ದು ಒಳ್ಳೆಯದೇ ಸರಿ. ಬಡವರು ಯಾವಾಗಲೂ ನಿಮ್ಮೊಂದಿಗಿರುತ್ತಾರೆ ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.

ಲಾಜರನ ವಿರುದ್ಧ ಸಂಚು

ಯೇಸು ಬೆಥಾನಿಯಲ್ಲಿದ್ದಾನೆ ಎಂಬ ಸುದ್ದಿಯನ್ನು ಅನೇಕ ಯೆಹೂದ್ಯರು ಕೇಳಿ ಆತನನ್ನೂ ಲಾಜರನನ್ನೂ ನೋಡಬೇಕೆಂದು ಅಲ್ಲಿಗೆ ಹೋದರು. ಯೇಸುವಿನಿಂದ ಜೀವಂತವಾಗಿ ಎಬ್ಬಿಸಲ್ಪಟ್ಟವನೇ ಲಾಜರನು. 10 ಆದರೆ ಮಹಾಯಾಜಕರು ಲಾಜರನನ್ನು ಸಹ ಕೊಲ್ಲಲು ಯೋಜನೆಗಳನ್ನು ಮಾಡಿದರು. 11 ಲಾಜರನ ನಿಮಿತ್ತ ಅನೇಕ ಯೆಹೂದ್ಯರು ತಮ್ಮ ನಾಯಕರನ್ನು ತೊರೆದು ಯೇಸುವಿನಲ್ಲಿ ನಂಬಿಕೆ ಇಡುತ್ತಿದ್ದರು. ಆದಕಾರಣವೇ ಯೆಹೂದ್ಯ ನಾಯಕರು ಲಾಜರನನ್ನು ಸಹ ಕೊಲ್ಲಬೇಕೆಂದಿದ್ದರು.

ಜೆರುಸಲೇಮಿಗೆ ಯೇಸುವಿನ ಪ್ರವೇಶ

(ಮತ್ತಾಯ 21:1-11; ಮಾರ್ಕ 11:1-11; ಲೂಕ 19:28-40)

12 ಮರುದಿನ, ಯೇಸು ಜೆರುಸಲೇಮಿಗೆ ಬರುತ್ತಿದ್ದಾನೆ ಎಂಬ ಸುದ್ದಿ ಅಲ್ಲಿಯ ಜನರಿಗೆ ತಿಳಿಯಿತು. ಪಸ್ಕಹಬ್ಬಕ್ಕಾಗಿ ಬಂದಿದ್ದ ಅನೇಕರು ಅಲ್ಲಿದ್ದರು. 13 ಜನರು ಖರ್ಜೂರದ ಗರಿಗಳನ್ನು ತೆಗೆದುಕೊಂಡು ಯೇಸುವನ್ನು ಎದುರುಗೊಳ್ಳಲು ಹೋದರು.

“ಆತನಿಗೆ ಸ್ತೋತ್ರವಾಗಲಿ!
    ‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ದೇವರಾಶೀರ್ವಾದವಾಗಲಿ!’(A)

ಇಸ್ರೇಲ್ ರಾಜನಿಗೆ ದೇವರಾಶೀರ್ವಾದವಾಗಲಿ!”

ಎಂದು ಜನರು ಕೂಗಿದರು.

14 ಯೇಸು ಅಲ್ಲಿದ್ದ ಕತ್ತೆಯೊಂದನ್ನು ಕಂಡು, ಅದರ ಮೇಲೆ ಕುಳಿತುಕೊಂಡು ಹೊರಟನು. ಪವಿತ್ರ ಗ್ರಂಥ ಹೇಳುವಂತೆಯೇ ಇದು ನೆರವೇರಿತು:

15 “ಸಿಯೋನ್ ನಗರವೇ, ಭಯಪಡಬೇಡ!
    ನೋಡು! ನಿನ್ನ ರಾಜನು ಬರುತ್ತಿದ್ದಾನೆ.
ಆತನು ಪ್ರಾಯದ ಕತ್ತೆಯ ಮೇಲೆ ಕುಳಿತುಕೊಂಡು ಬರುತ್ತಿದ್ದಾನೆ.”(B)

16 ಯೇಸುವಿನ ಶಿಷ್ಯರು ಆ ಸಮಯದಲ್ಲಿ ಇದನ್ನು ಅರ್ಥಮಾಡಿಕೊಳ್ಳಲಿಲ್ಲ. ಆದರೆ ಯೇಸು ಮಹಿಮಾಪದವಿಗೆ ಏರಿಹೋದ ನಂತರ, ಈ ಸಂಗತಿಗಳು ಆತನ ವಿಷಯವಾಗಿ ಬರೆಯಲ್ಪಟ್ಟಿವೆ ಎಂಬುದನ್ನು ಶಿಷ್ಯರು ಅರ್ಥಮಾಡಿಕೊಂಡರು; ಮತ್ತು ತಾವು ಆತನಿಗಾಗಿ ಮಾಡಿದ ಕಾರ್ಯಗಳನ್ನು ಜ್ಞಾಪಿಸಿಕೊಂಡರು.

17 ಯೇಸು ಲಾಜರನಿಗೆ ಸಮಾಧಿಯೊಳಗಿಂದ ಬರುವಂತೆ ಹೇಳಿ ಅವನನ್ನು ಜೀವಂತವಾಗಿ ಎಬ್ಬಿಸಿದಾಗ ಅನೇಕ ಜನರು ಯೇಸುವಿನ ಸಂಗಡ ಇದ್ದರು. ಯೇಸು ಮಾಡಿದ ಈ ಕಾರ್ಯದ ಬಗ್ಗೆ ಅವರು ಇತರರಿಗೆ ಹೇಳುತ್ತಿದ್ದರು. 18 ಯೇಸು ಮಾಡಿದ ಈ ಅದ್ಭುತಕಾರ್ಯವನ್ನು ಕೇಳಿ, ಅನೇಕ ಜನರು ಯೇಸುವನ್ನು ಎದುರುಗೊಳ್ಳಲು ಹೋಗಿದ್ದರು. 19 ಆದ್ದರಿಂದ ಫರಿಸಾಯರು, “ನೋಡಿ! ನಮ್ಮ ಯೋಜನೆಯು ನಿಷ್ಪ್ರಯೋಜಕವಾಯಿತು. ಜನರು ಆತನನ್ನೇ ಹಿಂಬಾಲಿಸುತ್ತಿದ್ದಾರೆ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

ಜೀವ, ಮರಣಗಳ ಬಗ್ಗೆ ಯೇಸುವಿನ ಉಪದೇಶ

20 ಅಲ್ಲಿ ಗ್ರೀಕ್ ಜನರು ಸಹ ಇದ್ದರು. ಪಸ್ಕಹಬ್ಬದಲ್ಲಿ ಆರಾಧಿಸುವುದಕ್ಕಾಗಿ ಜೆರುಸಲೇಮಿಗೆ ಹೋಗಿದ್ದವರಲ್ಲಿ ಇವರೂ ಸೇರಿದ್ದರು. 21 ಈ ಗ್ರೀಕ್ ಜನರು ಫಿಲಿಪ್ಪನ ಬಳಿಗೆ ಹೋದರು. (ಫಿಲಿಪ್ಪನು ಗಲಿಲಾಯದ ಬೆತ್ಸಾಯಿ ಎಂಬ ಊರಿನವನಾಗಿದ್ದವನು.) ಅವರು, “ಸ್ವಾಮೀ, ನಾವು ಯೇಸುವನ್ನು ನೋಡಬೇಕು” ಎಂದು ಅವನನ್ನು ಕೇಳಿಕೊಂಡರು. 22 ಫಿಲಿಪ್ಪನು ಅಂದ್ರೆಯನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದನು. ಬಳಿಕ ಅಂದ್ರೆಯನು ಮತ್ತು ಫಿಲಿಪ್ಪನು ಒಟ್ಟಾಗಿ ಯೇಸುವಿನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದರು.

23 ಯೇಸು ಅವರಿಗೆ, “ಮನುಷ್ಯಕುಮಾರನು ತನ್ನ ಮಹಿಮೆಯನ್ನು ಹೊಂದುವ ಸಮಯ ಇದೇ ಆಗಿದೆ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಗೋಧಿಯ ಕಾಳು ಭೂಮಿಗೆ ಬಿದ್ದು ಸಾಯಲೇಬೇಕು. ಬಳಿಕ ಅದು ಬೆಳೆದು ಅನೇಕ ಕಾಳುಗಳನ್ನು ಫಲಿಸುವುದು. ಸಾಯದಿದ್ದರೆ, ಅದು ಯಾವಾಗಲೂ ಕೇವಲ ಒಂದೇ ಕಾಳಾಗಿರುವುದು. 25 ತನ್ನ ಸ್ವಂತ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ಈ ಲೋಕದಲ್ಲಿ ತನ್ನ ಪ್ರಾಣವನ್ನು ದ್ವೇಷಿಸುವವನು ಅದನ್ನು ಉಳಿಸಿಕೊಳ್ಳುವನು. ಅವನು ನಿತ್ಯಜೀವವನ್ನು ಹೊಂದುವನು. 26 ನನ್ನ ಸೇವೆ ಮಾಡುವವನು ನನ್ನನ್ನು ಹಿಂಬಾಲಿಸಬೇಕು. ಆಗ ನಾನು ಇರುವಲ್ಲೆಲ್ಲಾ ನನ್ನ ಸೇವಕನು ಇರುವನು. ನನ್ನ ಸೇವೆಮಾಡುವ ಜನರನ್ನು ನನ್ನ ತಂದೆಯು ಸನ್ಮಾನಿಸುವನು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International