Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ರಾಜರುಗಳು 21-22

ನಾಬೋತನ ದ್ರಾಕ್ಷಿತೋಟ

21 ಸಮಾರ್ಯದ ರಾಜನಾದ ಅಹಾಬನಿಗೆ ಇಜ್ರೇಲಿನಲ್ಲಿ ಅರಮನೆಯಿತ್ತು. ಆ ಅರಮನೆಯ ಹಿತ್ತಲಿನಲ್ಲಿ ಒಂದು ದ್ರಾಕ್ಷಿತೋಟವಿತ್ತು. ಇಜ್ರೇಲಿನವನಾದ ನಾಬೋತನೆಂಬ ಹೆಸರಿನ ಮನುಷ್ಯನು ಆ ದ್ರಾಕ್ಷಿತೋಟದ ಒಡೆಯನಾಗಿದ್ದನು. ಒಂದು ದಿನ ಅಹಾಬನು ನಾಬೋತನಿಗೆ, “ನಿನ್ನ ದ್ರಾಕ್ಷಿತೋಟವನ್ನು ನನಗೆ ಕೊಡು. ನಾನು ಅದನ್ನು ತರಕಾರಿಯ ತೋಟವನ್ನಾಗಿ ಮಾಡುವೆನು. ನಿನ್ನ ದ್ರಾಕ್ಷಿತೋಟವು ನನ್ನ ಅರಮನೆಯ ಹತ್ತಿರದಲ್ಲಿದೆ. ನಾನು ಅದಕ್ಕೆ ಬದಲಾಗಿ ಒಂದು ಉತ್ತಮ ದ್ರಾಕ್ಷಿತೋಟವನ್ನು ನಿನಗೆ ಕೊಡುವೆನು. ನೀನು ಬಯಸಿದರೆ, ನಾನು ಅದರ ಬೆಲೆಯನ್ನು ಹಣದ ರೂಪದಲ್ಲಿ ಕೊಡುತ್ತೇನೆ” ಎಂದು ಹೇಳಿದನು.

ನಾಬೋತನು, “ನಾನು ನನ್ನ ಭೂಮಿಯನ್ನು ಎಂದಿಗೂ ನಿನಗೆ ಕೊಡುವುದಿಲ್ಲ. ಅದು ನನ್ನ ವಂಶಕ್ಕೆ ಸೇರಿದ್ದು” ಎಂದು ಉತ್ತರಿಸಿದನು.

ಅಹಾಬನು ಮನೆಗೆ ಹೋದನು. ಅವನು ನಾಬೋತನ ಮೇಲೆ ಕೋಪಗೊಂಡನು ಮತ್ತು ಬೇಸರಗೊಂಡನು. ಇಜ್ರೇಲಿನವನಾದ ನಾಬೋತನು ಹೇಳಿದ ಸಂಗತಿಗಳನ್ನು ಅವನು ಇಷ್ಟಪಡಲಿಲ್ಲ. “ನಾನು ನನ್ನ ವಂಶಕ್ಕೆ ಸೇರಿದ ದ್ರಾಕ್ಷಿತೋಟವನ್ನು ನಿನಗೆ ಕೊಡುವುದಿಲ್ಲ” ಎಂದು ನಾಬೋತನು ಹೇಳಿದ್ದನು. ಅಹಾಬನು ತನ್ನ ಹಾಸಿಗೆಯಲ್ಲಿ ಮಲಗಿ, ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡನು. ಅವನು ಊಟಮಾಡಲಿಲ್ಲ.

ಅಹಾಬನ ಪತ್ನಿಯಾದ ಈಜೆಬೆಲಳು ಅವನ ಹತ್ತಿರ ಹೋದಳು. ಈಜೆಬೆಲಳು, “ನೀನೇಕೆ ತಳಮಳಗೊಂಡಿರುವೆ? ನೀನು ಏಕೆ ಊಟಮಾಡಲಿಲ್ಲ?” ಎಂದು ಅವನನ್ನು ಕೇಳಿದಳು.

ಅಹಾಬನು, “ನಾನು ಇಜ್ರೇಲಿನ ನಾಬೋತನಿಗೆ, ‘ನಿನ್ನ ತೋಟವನ್ನು ನನಗೆ ಕೊಡು. ಅದರ ಪೂರ್ಣ ಬೆಲೆಯನ್ನು ನಿನಗೆ ಕೊಡುತ್ತೇನೆ ಅಥವಾ ನೀನು ಬಯಸಿದರೆ, ನಿನಗೆ ಬೇರೊಂದು ತೋಟವನ್ನು ಕೊಡುತ್ತೇನೆ’ ಎಂದು ಹೇಳಿದೆನು. ಆದರೆ ನಾಬೋತನು ತನ್ನ ತೋಟವನ್ನು ನನಗೆ ಕೊಡಲಿಲ್ಲ” ಎಂದು ಉತ್ತರಿಸಿದನು.

ಈಜೆಬೆಲಳು, “ನೀನು ಇಸ್ರೇಲಿಗೆಲ್ಲ ರಾಜ! ನಿನ್ನ ಹಾಸಿಗೆಯಿಂದ ಎದ್ದು ಬಾ. ನೀನು ಸ್ವಲ್ಪ ಊಟಮಾಡಿ, ಸಂತೋಷದಿಂದಿರು. ನಾನು ನಿನಗೆ ನಾಬೋತನ ದ್ರಾಕ್ಷಿತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು.

ನಂತರ ಈಜೆಬೆಲಳು ಕೆಲವು ಪತ್ರಗಳನ್ನು ಬರೆದಳು. ಅವಳು ಆ ಪತ್ರಗಳಿಗೆ ಅಹಾಬನ ಹೆಸರಿನ ಸಹಿಯನ್ನು ಮಾಡಿದಳು. ಅಹಾಬನ ಸ್ವಂತ ಮೊಹರನ್ನು ಅವಳು ಆ ಪತ್ರಗಳಿಗೆ ಹಾಕಿದಳು. ನಾಬೋತನು ಇದ್ದ ಆ ಪಟ್ಟಣದಲ್ಲಿ ವಾಸವಾಗಿದ್ದ ಮುಖ್ಯಜನರಿಗೂ ಹಿರಿಯರಿಗೂ ಅವಳು ಆ ಪತ್ರಗಳನ್ನು ಕಳುಹಿಸಿದಳು. ಆ ಪತ್ರದಲ್ಲಿ ಹೀಗೆ ಬರೆದಿತ್ತು:

“ಉಪವಾಸದ ಒಂದು ದಿನವನ್ನು ಗೊತ್ತುಮಾಡಿ, ಆ ದಿನವನ್ನು ಪ್ರಕಟಿಸಿ, ನಂತರ ಪಟ್ಟಣದ ಜನರನ್ನೆಲ್ಲ ಸಭೆ ಸೇರಿಸಿರಿ. 10 ನಾಬೋತನ ಬಗ್ಗೆ ಸುಳ್ಳುಹೇಳುವ ಕೆಲವು ಜನರನ್ನು ಪತ್ತೆಹಚ್ಚಿ, ನಾಬೋತನು ರಾಜನ ವಿರುದ್ಧವಾಗಿ ಮತ್ತು ದೇವರ ವಿರುದ್ಧವಾಗಿ ಮಾತನಾಡುವುದನ್ನು ನಾವು ಕೇಳಿಸಿಕೊಂಡೆವೆಂದು ಅವರು ಹೇಳಲೇಬೇಕು. ಆಗ ನಾಬೋತನನ್ನು ನಗರದಿಂದ ಹೊರಕ್ಕೆ ಕರೆದೊಯ್ದು ಅವನನ್ನು ಕಲ್ಲೆಸೆದು ಕೊಂದುಹಾಕಿರಿ.”

11 ಇಜ್ರೇಲಿನ ಹಿರಿಯರು ಮತ್ತು ಪ್ರಮುಖರಾದ ಜನರು ಆ ಆಜ್ಞೆಗನುಸಾರವಾಗಿ ಮಾಡಿದರು. 12 ನಾಯಕರು ಒಂದು ದಿನವನ್ನು ಉಪವಾಸದ ದಿನವಾಗಿ ಪ್ರಕಟಿಸಿದರು. ಆ ದಿನ ಅವರು ಜನರನ್ನೆಲ್ಲ ಸಭೆಸೇರಿಸಿದರು. ನಾಬೋತನನ್ನು ಜನರೆದುರಿಗೆ ಪ್ರಮುಖವಾದ ಒಂದು ಸ್ಥಳದಲ್ಲಿ ಅವರು ಕುಳ್ಳಿರಿಸಿದರು. 13 ನಾಬೋತನು ದೇವರ ವಿರುದ್ಧವಾಗಿಯೂ ರಾಜನ ವಿರುದ್ಧವಾಗಿಯೂ ಮಾತನಾಡಿದ್ದನ್ನು ತಾವು ಕೇಳಿರುವುದಾಗಿ ಇಬ್ಬರು ಅಲ್ಲಿನ ಜನರಿಗೆ ಹೇಳಿದರು. ಜನರು ನಾಬೋತನನ್ನು ನಗರದ ಹೊರಕ್ಕೆ ಕರೆದೊಯ್ದು ಅವನನ್ನು ಕಲ್ಲೆಸೆದು ಕೊಂದರು. 14 ನಾಯಕರು ಈಜೆಬೆಲಳಿಗೆ ಒಂದು ಸಂದೇಶವನ್ನು ಕಳುಹಿಸಿದರು. ಆ ಸಂದೇಶವು ಹೀಗಿತ್ತು: “ನಾಬೋತನನ್ನು ಕೊಂದುಹಾಕಲಾಗಿದೆ.”

15 ಇದನ್ನು ಕೇಳಿದ ಈಜೆಬೆಲಳು ಅಹಾಬನಿಗೆ, “ನಾಬೋತನು ಸತ್ತುಹೋದನು. ಈಗ ನೀನು ಹೋಗಿ, ನಿನಗೆ ಇಷ್ಟವಾದ ಆ ದ್ರಾಕ್ಷಿತೋಟವನ್ನು ತೆಗೆದುಕೊ” ಎಂದು ಹೇಳಿದಳು. 16 ಅಹಾಬನು ದ್ರಾಕ್ಷಿತೋಟಕ್ಕೆ ಹೋಗಿ ಅದನ್ನು ತನ್ನದನ್ನಾಗಿಸಿಕೊಂಡನು.

17 ಈ ಸಮಯದಲ್ಲಿ ಯೆಹೋವನು ಪ್ರವಾದಿಯೂ ತಿಷ್ಬೇ ಊರಿನವನೂ ಆದ ಎಲೀಯನ ಜೊತೆಯಲ್ಲಿ ಮಾತನಾಡಿದನು. ಯೆಹೋವನು ಹೀಗೆಂದನು: 18 “ಸಮಾರ್ಯದಲ್ಲಿ ಆಳುತ್ತಿರುವ ಇಸ್ರೇಲಿನ ರಾಜನಾದ ಅಹಾಬನ ಬಳಿಗೆ ಹೋಗು. ಅಹಾಬನು ಈಗ ನಾಬೋತನ ದ್ರಾಕ್ಷಿತೋಟದಲ್ಲಿದ್ದಾನೆ. ಆ ತೋಟವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಅವನು ಅಲ್ಲಿಗೆ ಹೋಗಿದ್ದಾನೆ. 19 ಯೆಹೋವನಾದ ನಾನು ಅವನಿಗೆ ಹೀಗೆ ಹೇಳಿದೆನೆಂದು ತಿಳಿಸು: ‘ಅಹಾಬನೇ! ನೀನು ನಾಬೋತನನ್ನು ಕೊಂದುಹಾಕಿದೆ. ಈಗ ನೀನು ಅವನ ದ್ರಾಕ್ಷಿತೋಟವನ್ನು ತೆಗೆದುಕೊಳ್ಳುತ್ತಿರುವೆ. ಆದ್ದರಿಂದ ನಾನಿದನ್ನು ನಿನಗೆ ಹೇಳುತ್ತೇನೆ! ನಾಬೋತನು ಸತ್ತ ಸ್ಥಳದಲ್ಲಿಯೇ ನೀನು ಸಹ ಸಾಯುವೆ. ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲಿಯೇ ನಿನ್ನ ರಕ್ತವನ್ನೂ ನೆಕ್ಕುತ್ತವೆ!’”

20 ಎಲೀಯನು ಅಹಾಬನ ಹತ್ತಿರಕ್ಕೆ ಹೋದನು. ಅಹಾಬನು ಎಲೀಯನನ್ನು ಕಂಡು, “ನೀನು ನನ್ನನ್ನು ಮತ್ತೆ ಕಂಡುಹಿಡಿದೆ. ನೀನು ಯಾವಾಗಲೂ ನನಗೆ ವಿರೋಧವಾಗಿರುವೆ” ಎಂದನು.

ಎಲೀಯನು, “ಹೌದು, ನಾನು ನಿನ್ನನ್ನು ಮತ್ತೆ ಕಂಡುಹಿಡಿದೆ. ಯೆಹೋವನ ವಿರುದ್ಧ ಪಾಪಮಾಡಲು ನೀನು ನಿನ್ನ ಜೀವನವನ್ನು ಯಾವಾಗಲೂ ಉಪಯೋಗಿಸುತ್ತಿರುವೆ. 21 ಆದ್ದರಿಂದ ಯೆಹೋವನು ನಿನಗೆ, ‘ನಾನು ನಿನ್ನನ್ನು ನಾಶಪಡಿಸುತ್ತೇನೆ. ನಿನ್ನನ್ನು ಮತ್ತು ನಿನ್ನ ಕುಟುಂಬದ ಪ್ರತಿಯೊಬ್ಬ ಗಂಡಸರನ್ನು ನಾನು ಕೊಂದುಹಾಕುತ್ತೇನೆ. 22 ನೆಬಾಟನ ಮಗನಾದ, ರಾಜನಾದ ಯಾರೊಬ್ಬಾಮನ ಕುಟುಂಬಕ್ಕೆ ಆದ ಗತಿಯೇ ನಿನ್ನ ಕುಟುಂಬಕ್ಕೂ ಆಗುವುದು. ರಾಜನಾದ ಬಾಷನ ಕುಟುಂಬಕ್ಕೆ ಆದ ಗತಿಯೇ ನಿನ್ನ ಕುಟುಂಬಕ್ಕೂ ಆಗುವುದು. ಈ ಎರಡು ಕುಟುಂಬಗಳೂ ಸಂಪೂರ್ಣವಾಗಿ ನಾಶಗೊಂಡವು. ನೀನು ನನ್ನನ್ನು ಕೋಪಗೊಳಿಸಿದ್ದಕ್ಕಾಗಿ ನಾನು ನಿನಗೆ ಹೀಗೆ ಮಾಡುತ್ತೇನೆ. ಇಸ್ರೇಲಿನ ಜನರು ಪಾಪಮಾಡುವುದಕ್ಕೆ ನೀನು ಕಾರಣನಾದೆ’ ಎನ್ನುತ್ತಾನೆ. 23 ಇದಲ್ಲದೆ ಯೆಹೋವನು, ‘ನಿನ್ನ ಪತ್ನಿಯಾದ ಈಜೆಬೆಲಳ ದೇಹವನ್ನು, ಇಜ್ರೇಲ್ ನಗರದಲ್ಲಿ ನಾಯಿಗಳು ತಿನ್ನುತ್ತವೆ, 24 ನಿನ್ನ ಕುಟುಂಬದಲ್ಲಿ ಯಾರಾದರೂ ನಗರದಲ್ಲಿ ಸತ್ತರೆ, ಅವರನ್ನು ನಾಯಿಗಳು ತಿನ್ನುತ್ತವೆ. ಯಾರಾದರೂ ತೋಟಗಳಲ್ಲಿ ಸತ್ತರೆ, ಅವರನ್ನು ಪಕ್ಷಿಗಳು ಕಿತ್ತುತಿನ್ನುತ್ತವೆ ಎನ್ನುತ್ತಾನೆ’” ಎಂದು ಹೇಳಿದನು.

25 ಅಹಾಬನು ಮಾಡಿದಷ್ಟು ಪಾಪಗಳನ್ನು, ಇಲ್ಲವೆ ಕೆಟ್ಟಕಾರ್ಯಗಳನ್ನು ಮಾಡಿದ ಮನುಷ್ಯರು ಬೇರೆ ಯಾರೂ ಇಲ್ಲ. ಅವನು ಆ ಕಾರ್ಯಗಳನ್ನು ಮಾಡುವುದಕ್ಕೆ ಅವನ ಪತ್ನಿಯಾದ ಈಜೆಬೆಲಳು ಅವನನ್ನು ಒತ್ತಾಯಪಡಿಸಿದಳು. 26 ಅಹಾಬನು ಬಹುಕೆಟ್ಟ ಪಾಪವನ್ನು ಮಾಡಿದನು ಮತ್ತು ವಿಗ್ರಹಗಳನ್ನು ಆರಾಧಿಸಿದನು. ಅಮೋರಿಯರು ಇಂತಹ ಕಾರ್ಯವನ್ನೇ ಮಾಡಿದ್ದರು. ಯೆಹೋವನು ಅವರನ್ನು ಅವರ ನಾಡಿನಿಂದ ಓಡಿಸಿದನು ಮತ್ತು ಅದನ್ನು ಇಸ್ರೇಲಿನ ಜನರಿಗೆ ದಯಪಾಲಿಸಿದನು.

27 ಎಲೀಯನು ಮಾತನಾಡಿದ ನಂತರ ಅಹಾಬನು ಬಹಳ ಶೋಕತಪ್ತನಾದನು. ಅವನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣಿತಟ್ಟನ್ನು ಸುತ್ತಿಕೊಂಡನು. ಅವನು ಊಟಮಾಡದೆ ಹಾಗೆಯೇ ಮಲಗಿಕೊಂಡನು; ದುಃಖದಿಂದ ತಳಮಳಗೊಂಡನು.

28 ಯೆಹೋವನು ಪ್ರವಾದಿಯಾದ ಎಲೀಯನಿಗೆ, 29 “ಅಹಾಬನು ನನ್ನ ಎದುರಿನಲ್ಲಿ ತನ್ನನ್ನು ತಗ್ಗಿಸಿಕೊಂಡಿರುವುದನ್ನು ನಾನು ನೋಡುತ್ತಿದ್ದೇನೆ. ಆದ್ದರಿಂದ ಅವನ ಜೀವಮಾನಕಾಲದಲ್ಲಿ ಅವನಿಗೆ ಕೇಡಾಗದಂತೆ ಮಾಡುವೆನು. ಅವನ ಮಗ ರಾಜನಾಗುವವರೆಗೆ ನಾನು ಕಾಯುತ್ತೇನೆ. ನಂತರ ಅಹಾಬನ ಕುಟುಂಬಕ್ಕೆ ಕೇಡನ್ನು ಬರಮಾಡುತ್ತೇನೆ” ಎಂದು ಹೇಳಿದನು.

ಅಹಾಬನಿಗೆ ಮೀಕಾಯೆಹುವಿನ ಎಚ್ಚರಿಕೆ

22 ಮುಂದಿನ ಎರಡು ವರ್ಷಗಳಲ್ಲಿ, ಇಸ್ರೇಲ್ ಮತ್ತು ಅರಾಮ್ಯರ ಮಧ್ಯೆ ಶಾಂತಿಯಿತ್ತು. ಮೂರನೆಯ ವರ್ಷದಲ್ಲಿ ಯೆಹೂದದ ರಾಜನಾದ ಯೆಹೋಷಾಫಾಟನು ಇಸ್ರೇಲಿನ ರಾಜನಾದ ಅಹಾಬನನ್ನು ಭೇಟಿಮಾಡಲು ಹೋದನು.

ಆ ಸಮಯದಲ್ಲಿ, ಅಹಾಬನು ತನ್ನ ಅಧಿಕಾರಿಗಳಿಗೆ, “ಅರಾಮ್ಯರ ರಾಜನು ಗಿಲ್ಯಾದಿನ ರಾಮೋತ್ ಪಟ್ಟಣವನ್ನು ನಮ್ಮಿಂದ ತೆಗೆದುಕೊಂಡದ್ದನ್ನು ಜ್ಞಾಪಿಸಿಕೊಳ್ಳಿರಿ? ರಾಮೋತನ್ನು ಹಿಂದಕ್ಕೆ ಪಡೆಯಲು ನಾವು ಏನನ್ನೂ ಮಾಡಲಿಲ್ಲವೇಕೆ? ಅದು ನಮ್ಮ ಪಟ್ಟಣ” ಎಂದು ಹೇಳಿದನು. ಆದ್ದರಿಂದ ಅಹಾಬನು ರಾಜನಾದ ಯೆಹೋಷಾಫಾಟನನ್ನು, “ಅರಾಮ್ಯರ ವಿರುದ್ಧವಾಗಿ ರಾಮೋತಿನಲ್ಲಿ ಹೋರಾಟ ಮಾಡುವುದಕ್ಕೆ ನೀನು ನಮ್ಮೊಂದಿಗೆ ಸೇರಿಕೊಳ್ಳುವೆಯಾ?” ಎಂದು ಕೇಳಿದನು.

ಯೆಹೋಷಾಫಾಟನು, “ಆಗಲಿ, ನಾನು ನಿನ್ನ ಜೊತೆ ಸೇರಿಕೊಳ್ಳುತ್ತೇನೆ. ನನ್ನ ಸೈನ್ಯಗಳು ಮತ್ತು ನನ್ನ ಕುದುರೆಗಳು ನಿನ್ನ ಸೈನ್ಯದ ಜೊತೆ ಸೇರಲು ಸಿದ್ಧವಾಗಿವೆ. ಆದರೆ ಯೆಹೋವನ ಸಲಹೆಯನ್ನು ನಾವು ಮೊದಲು ಕೇಳಬೇಕಾಗಿದೆ” ಎಂದನು.

ಅಹಾಬನು ಪ್ರವಾದಿಗಳ ಸಭೆಯೊಂದನ್ನು ಕರೆದನು. ಆ ಸಮಯದಲ್ಲಿ ನಾನೂರುಮಂದಿ ಪ್ರವಾದಿಗಳಿದ್ದರು. ಅಹಾಬನು ಪ್ರವಾದಿಗಳನ್ನು, “ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ನಾನು ರಾಮೋತಿಗೆ ಹೋಗಬೇಕೇ? ಅಥವಾ ನಾನು ಬೇರೊಂದು ಸಮಯಕ್ಕಾಗಿ ಕಾಯಬೇಕೇ?” ಎಂದು ಕೇಳಿದನು.

ಪ್ರವಾದಿಗಳು, “ನೀನು ಹೋಗಿ ಯುದ್ಧಮಾಡು. ನೀನು ಗೆಲ್ಲುವಂತೆ ಯೆಹೋವನು ಮಾಡುವನು” ಎಂದು ಹೇಳಿದರು.

ಆದರೆ ಯೆಹೋಷಾಫಾಟನು, “ಯೆಹೋವನ ಪ್ರವಾದಿಗಳು ಇಲ್ಲಿ ಬೇರೆ ಯಾರಾದರೂ ಇದ್ದಾರೆಯೇ? ಯಾರಾದರೂ ಇದ್ದರೆ, ದೇವರು ಏನು ಹೇಳುತ್ತಾನೆಂಬುದನ್ನು ನಾವು ಅವರನ್ನು ಕೇಳೋಣ” ಎಂದು ಹೇಳಿದನು.

ರಾಜನಾದ ಅಹಾಬನು, “ಬೇರೊಬ್ಬ ಪ್ರವಾದಿಯು ಇಲ್ಲಿದ್ದಾನೆ. ಅವನು ಇಮ್ಲನ ಮಗನಾದ ಮೀಕಾಯೆಹು ಎಂಬ ಹೆಸರಿನವನು. ಆದರೆ ನಾನು ಅವನನ್ನು ದ್ವೇಷಿಸುತ್ತೇನೆ. ಯೆಹೋವನ ಪ್ರತಿನಿಧಿಯಾಗಿ ಅವನು ಮಾತನಾಡುವಾಗ ಅವನೆಂದೂ ನನಗೆ ಒಳ್ಳೆಯವುಗಳನ್ನು ಪ್ರವಾದಿಸುವುದಿಲ್ಲ. ಅವನು ಯಾವಾಗಲೂ ನನಗೆ ಕೆಟ್ಟವುಗಳನ್ನೇ ಪ್ರವಾದಿಸುತ್ತಾನೆ” ಎಂದು ಉತ್ತರಿಸಿದನು.

ಯೆಹೋಷಾಫಾಟನು, “ರಾಜನಾದ ಅಹಾಬನೇ, ನೀನು ಆ ಸಂಗತಿಗಳನ್ನು ಹೇಳಲೇಬಾರದು!” ಎಂದು ಹೇಳಿದನು.

ರಾಜನಾದ ಅಹಾಬನು ತನ್ನ ಅಧಿಕಾರಿಗಳಲ್ಲಿ ಒಬ್ಬನಿಗೆ, “ಹೋಗಿ, ಮೀಕಾಯೆಹುವನ್ನು ಕಂಡುಹಿಡಿ” ಎಂದು ತಿಳಿಸಿದನು.

10 ಆ ಸಮಯದಲ್ಲಿ ಈ ಇಬ್ಬರು ರಾಜರು ತಮ್ಮ ರಾಜವಸ್ತ್ರಗಳನ್ನು ಧರಿಸಿದ್ದರು. ಸಮಾರ್ಯ ಪಟ್ಟಣದ ಹೆಬ್ಬಾಗಿಲಿನ ಬಳಿಯಲ್ಲಿದ್ದ ಸಿಂಹಾಸನಗಳ ಮೇಲೆ ಅವರು ಕುಳಿತಿದ್ದರು. ಅವರ ಎದುರಿನಲ್ಲಿ ಪ್ರವಾದಿಗಳೆಲ್ಲರೂ ನಿಂತಿದ್ದರು. ಪ್ರವಾದಿಗಳು ಪ್ರವಾದಿಸುತ್ತಿದ್ದರು. 11 ಪ್ರವಾದಿಗಳಲ್ಲಿ ಚಿದ್ಕೀಯ ಎಂಬ ಹೆಸರಿನವನೊಬ್ಬನಿದ್ದನು. ಅವನು ಕೆನಾನನ ಮಗ. ಚಿದ್ಕೀಯನು ಕೆಲವು ಕಬ್ಬಿಣದ ಕೊಂಬುಗಳನ್ನು[a] ಮಾಡಿಸಿದ್ದನು. ಆಗ ಅವನು ಅಹಾಬನಿಗೆ, “ಯೆಹೋವನು ಹೀಗೆನ್ನುವನು: ‘ಅರಾಮ್ಯರ ಸೈನ್ಯದ ವಿರುದ್ಧ ಹೋರಾಡಲು ನೀನು ಈ ಕೊಂಬುಗಳನ್ನು ಬಳಸುವೆ. ನೀನು ಅವರನ್ನು ಸೋಲಿಸುವೆ ಮತ್ತು ನಾಶಗೊಳಿಸುವೆ’” ಎಂದು ಹೇಳಿದನು. 12 ಇತರ ಪ್ರವಾದಿಗಳೆಲ್ಲರೂ ಚಿದ್ಕೀಯನ ಮಾತನ್ನು ಬೆಂಬಲಿಸಿದರು. ಪ್ರವಾದಿಯು, “ನಿನ್ನ ಸೈನ್ಯವು ಈಗ ಹೊರಡಲಿ. ಅವರು ರಾಮೋತಿನಲ್ಲಿ ಅರಾಮ್ಯರ ಸೈನ್ಯದ ವಿರುದ್ಧ ಹೋರಾಡಲೇಬೇಕು. ನೀನು ಹೋರಾಟದಲ್ಲಿ ಜಯಗಳಿಸುವೆ. ನೀನು ಗೆಲ್ಲುವಂತೆ ಯೆಹೋವನು ಮಾಡುತ್ತಾನೆ” ಎಂದನು.

13 ಈ ಕಾರ್ಯಗಳು ನಡೆಯುತ್ತಿರುವಾಗ, ಮೀಕಾಯೆಹುವನ್ನು ಕಂಡುಹಿಡಿಯಲು ಅಧಿಕಾರಿಯೊಬ್ಬನು ಹೋದನು. ಅಧಿಕಾರಿಯು ಮೀಕಾಯೆಹುವನ್ನು ಕಂಡುಹಿಡಿದು, ಅವನಿಗೆ, “ರಾಜನಿಗೆ ಶುಭವಾಗುವುದೆಂದು ಪ್ರವಾದಿಗಳೆಲ್ಲರೂ ಹೇಳಿದ್ದಾರೆ. ಆದ್ದರಿಂದ ಅವರು ಹೇಳಿದಂತೆಯೇ ನೀನೂ ಹೇಳುವುದು ನಿನಗೇ ಒಳ್ಳೆಯದು” ಎಂದು ಹೇಳಿದನು.

14 ಆದರೆ ಮೀಕಾಯೆಹುವು, “ಇಲ್ಲ! ಯೆಹೋವನಾಣೆ, ಆತನು ತಿಳಿಸುವುದನ್ನೇ ನಾನು ಹೇಳುತ್ತೇನೆ” ಎಂದು ಉತ್ತರಿಸಿದನು.

15 ನಂತರ ರಾಜನಾದ ಅಹಾಬನ ಎದುರಿನಲ್ಲಿ ಮೀಕಾಯೆಹು ನಿಂತುಕೊಂಡನು. ರಾಜನು ಅವನನ್ನು, “ಮೀಕಾಯೆಹುವೇ, ರಾಜನಾದ ಯೆಹೋಷಾಫಾಟನು ಮತ್ತು ನಾನು ನಮ್ಮ ಸೈನ್ಯಗಳನ್ನು ಒಟ್ಟುಗೂಡಿಸಬಹುದೇ? ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ನಾವೀಗ ಹೋಗಬೇಕೇ?” ಎಂದು ಕೇಳಿದನು.

ಮೀಕಾಯೆಹು, “ಆಗಲಿ, ಈಗ ನೀವು ಹೋಗಿ, ಅವರ ವಿರುದ್ಧ ಯುದ್ಧಮಾಡಿ. ಯೆಹೋವನು ನಿಮಗೆ ಜಯವನ್ನು ಕೊಡುತ್ತಾನೆ” ಎಂದನು.

16 ಆದರೆ ಅಹಾಬನು, “ಯೆಹೋವನ ಶಕ್ತಿಯಿಂದ ನೀನು ಮಾತನಾಡುತ್ತಿಲ್ಲ. ನೀನು ನಿನ್ನ ಸ್ವಂತ ಮಾತುಗಳನ್ನು ಹೇಳುತ್ತಿರುವೆ. ನನಗೆ ನೀನು ನಿಜವನ್ನು ಹೇಳು! ನಾನು ನಿನಗೆ ಎಷ್ಟು ಸಲ ಹೇಳಬೇಕು? ಯೆಹೋವನು ತಿಳಿಸುವುದನ್ನೇ ನನಗೆ ಹೇಳು!” ಎಂದು ಕೇಳಿದನು.

17 ಮೀಕಾಯೆಹು, “ಮುಂದೆ ಸಂಭವಿಸುವುದು ನನಗೆ ಕಾಣುತ್ತಿದೆ. ಇಸ್ರೇಲಿನ ಸೈನ್ಯವು ಬೆಟ್ಟಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಕುರುಬನಿಲ್ಲದ ಕುರಿಗಳಂತಾಗಿದೆ. ಯೆಹೋವನು ಹೇಳುವುದು ಇದನ್ನೇ, ‘ಈ ಜನರಿಗೆ ನಾಯಕನಿಲ್ಲ. ಅವರು ಯುದ್ಧಮಾಡದೆ, ಮನೆಗೆ ಹೋಗಬೇಕು’” ಎಂದು ಹೇಳಿದನು.

18 ಆಗ ಅಹಾಬನು ಯೆಹೋಷಾಫಾಟನಿಗೆ, “ನೋಡಿದೆಯಾ! ನಾನು ನಿನಗೆ ಹೇಳಿದೆನಲ್ಲಾ! ಈ ಪ್ರವಾದಿಯು ಎಂದೂ ನನ್ನ ಬಗ್ಗೆ ಒಳ್ಳೆಯದೇನನ್ನೂ ಹೇಳುವುದಿಲ್ಲ. ನಾನು ಕೇಳಬಾರದ ಸಂಗತಿಗಳನ್ನು ಅವನು ಯಾವಾಗಲೂ ನನಗೆ ಹೇಳುತ್ತಾನೆ” ಎಂದು ಹೇಳಿದನು.

19 ಆದರೆ ಮೀಕಾಯೆಹು ಯೆಹೋವನಿಗಾಗಿ ಮಾತನಾಡುತ್ತಲೇ ಇದ್ದನು. ಮೀಕಾಯೆಹು, “ಕೇಳಿರಿ! ಈ ಮಾತುಗಳನ್ನು ಯೆಹೋವನು ತಿಳಿಸುತ್ತಾನೆ! ಯೆಹೋವನು ಪರಲೋಕದಲ್ಲಿ ತನ್ನ ಸಿಂಹಾಸನದ ಮೇಲೆ ಕುಳಿತಿರುವುದನ್ನು ನಾನು ನೋಡಿದೆನು. ಆತನ ಎಲ್ಲಾ ದೂತರು ಆತನ ಎಡಬಲಗಳಲ್ಲಿ ನಿಂತಿದ್ದರು. 20 ಯೆಹೋವನು ಅವರಿಗೆ, ‘ನಿಮ್ಮಲ್ಲಿ ಯಾರಾದರೂ ರಾಜನಾದ ಅಹಾಬನನ್ನು ಪ್ರೇರೇಪಿಸುವಿರಾ? ಅವನು ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ಹೋಗಬೇಕೆಂದು ನಾನು ಅಪೇಕ್ಷೆಪಟ್ಟಿದ್ದೇನೆ. ಅಲ್ಲಿ ಅವನು ಕೊಲ್ಲಲ್ಪಡುವನು’ ಎಂದು ಹೇಳಿದನು. ತಾವು ಏನು ಮಾಡಬೇಕೆಂಬುದರ ಬಗ್ಗೆ ದೂತರಲ್ಲಿ ಒಮ್ಮತದ ಅಭಿಪ್ರಾಯವುಂಟಾಗಲಿಲ್ಲ. 21 ಆಗ ಒಬ್ಬ ದೂತನು ಯೆಹೋವನ ಬಳಿಗೆ ಹೋಗಿ, ‘ನಾನು ಅವನನ್ನು ಪ್ರೇರೇಪಿಸುತ್ತೇನೆ’ ಎಂದನು. 22 ಯೆಹೋವನು, ‘ರಾಜನಾದ ಅಹಾಬನನ್ನು ನೀನು ಹೇಗೆ ಪ್ರೇರೇಪಿಸುವೆ?’ ಎಂದು ಉತ್ತರಿಸಿದಾಗ, ದೂತನು, ‘ಅಹಾಬನ ಎಲ್ಲಾ ಪ್ರವಾದಿಗಳು ಗಲಿಬಿಲಿಗೊಳ್ಳುವಂತೆ ಮಾಡುತ್ತೇನೆ. ರಾಜನಾದ ಅಹಾಬನಿಗೆ ಪ್ರವಾದಿಗಳು ಸುಳ್ಳುಹೇಳುವಂತೆ ನಾನು ಮಾಡುತ್ತೇನೆ. ಪ್ರವಾದಿಗಳ ಸಂದೇಶವೆಲ್ಲವೂ ಸುಳ್ಳಾಗಿರುವುದು’ ಎಂದನು. ಆದ್ದರಿಂದ ಯೆಹೋವನು, ‘ಸರಿ, ಹೋಗಿ ರಾಜನಾದ ಅಹಾಬನನ್ನು ಪ್ರೇರೇಪಿಸು. ನೀನು ಸಫಲನಾಗುವೆ’” ಎಂದು ಹೇಳಿದನು.

23 ಮೀಕಾಯೆಹು ಹೀಗೆ ಹೇಳಿದ ಮೇಲೆ, “ಇಲ್ಲಿ ನಡೆದದ್ದೂ ಇದೇ. ನಿನ್ನ ಪ್ರವಾದಿಗಳೇ ನಿನಗೆ ಸುಳ್ಳುಹೇಳುವಂತೆ ಯೆಹೋವನು ಮಾಡಿದ್ದಾನೆ. ನಿನಗೆ ಮಹಾಕೇಡು ಬರಲೆಂದು ಯೆಹೋವನು ತಾನೇ ತೀರ್ಮಾನಿಸಿದ್ದಾನೆ” ಎಂದು ಹೇಳಿದನು.

24 ಆಗ ಪ್ರವಾದಿಯಾದ ಚಿದ್ಕೀಯನು ಮೀಕಾಯೆಹುವಿನ ಹತ್ತಿರಕ್ಕೆ ಹೋಗಿ ಅವನ ಮುಖದ ಮೇಲೆ ಹೊಡೆದು, “ಯೆಹೋವನ ಆತ್ಮವು ನನ್ನನ್ನು ಬಿಟ್ಟುಹೋಗಿದೆ ಎಂಬುದನ್ನೂ ಈಗ ನಿನ್ನ ಮೂಲಕ ಮಾತನಾಡುತ್ತಿದ್ದಾನೆ ಎಂಬುದನ್ನೂ ನೀನು ನಿಜವಾಗಿಯೂ ನಂಬುವೆಯಾ?” ಎಂದು ಕೇಳಿದನು.

25 ಮೀಕಾಯೆಹು, “ಕೇಡು ಬೇಗನೆ ಬರಲಿದೆ. ಆಗ ನೀನು ಹೋಗಿ ಒಂದು ಚಿಕ್ಕ ಕೊಠಡಿಯಲ್ಲಿ ಅಡಗಿಕೊಳ್ಳುವೆ. ನಾನು ಸತ್ಯವನ್ನೇ ನುಡಿದೆನೆಂದು ಆಗ ನಿನಗೆ ತಿಳಿಯುತ್ತದೆ!” ಎಂದನು.

26 ಆಗ ರಾಜನಾದ ಅಹಾಬನು ಮೀಕಾಯೆಹುವನ್ನು ಬಂಧಿಸುವಂತೆ ತನ್ನ ಅಧಿಕಾರಿಯೊಬ್ಬನಿಗೆ ಆಜ್ಞೆ ಮಾಡಿದನು. ರಾಜನಾದ ಅಹಾಬನು, “ಅವನನ್ನು ಬಂಧಿಸಿ, ನಗರಾಧಿಕಾರಿಯಾದ ಆಮೋನ ಮತ್ತು ರಾಜಪುತ್ರನಾದ ಯೋವಾಷನ ಬಳಿಗೆ ತೆಗೆದುಕೊಂಡು ಹೋಗಿ. 27 ಮೀಕಾಯೆಹುವನ್ನು ಸೆರೆಮನೆಯಲ್ಲಿಡಬೇಕೆಂದು ಅವರಿಗೆ ತಿಳಿಸಿ. ಅವನಿಗೆ ತಿನ್ನಲು ಸ್ವಲ್ಪ ರೊಟ್ಟಿ ಮತ್ತು ಕುಡಿಯಲು ಸ್ವಲ್ಪ ನೀರನ್ನು ಮಾತ್ರ ಕೊಡಿ. ನಾನು ಯುದ್ಧದಿಂದ ಮನೆಗೆ ಹಿಂದಿರುಗುವವರೆಗೆ ಅವನನ್ನು ಅಲ್ಲಿಯೇ ಇಡಿ” ಎಂದು ಹೇಳಿದನು.

28 ಮೀಕಾಯೆಹು ಗಟ್ಟಿಯಾದ ಧ್ವನಿಯಲ್ಲಿ, “ನಾನು ಏನು ಹೇಳುತ್ತೇನೆಂಬುದನ್ನು ಜನರೆಲ್ಲರೂ ಕೇಳಿರಿ! ರಾಜನಾದ ಅಹಾಬನೇ, ನೀನು ಈ ಹೋರಾಟದಿಂದ ಜೀವಸಹಿತ ಮನೆಗೆ ಬಂದರೆ, ಯೆಹೋವನು ನನ್ನ ಮೂಲಕ ಮಾತನಾಡಿಲ್ಲ” ಎಂದು ಹೇಳಿದನು.

29 ನಂತರ ರಾಜನಾದ ಅಹಾಬನು ಮತ್ತು ರಾಜನಾದ ಯೆಹೋಷಾಫಾಟನು ಅರಾಮ್ಯರ ಸೇನೆಯ ವಿರುದ್ಧ ಹೋರಾಡಲು ರಾಮೋತಿಗೆ ಹೋದರು. ಅದು ಗಿಲ್ಯಾದಿನ ಪ್ರದೇಶವೆಂಬಲ್ಲಿ ನಡೆಯಿತು. 30 ಅಹಾಬನು ಯೆಹೋಷಾಫಾಟನಿಗೆ, “ನಾವು ಹೋರಾಟಕ್ಕೆ ಸಿದ್ಧತೆಗಳನ್ನು ಮಾಡೋಣ. ನೋಡುವುದಕ್ಕೆ ರಾಜನಲ್ಲವೆಂದು ತೋರುವಂತಹ ವಸ್ತ್ರಗಳನ್ನು ನಾನು ಧರಿಸಿಕೊಳ್ಳುತ್ತೇನೆ. ಆದರೆ ನೀನು ರಾಜನಂತೆ ತೋರುವ ನಿನ್ನ ವಿಶೇಷ ವಸ್ತ್ರಗಳನ್ನು ಧರಿಸಿಕೊ” ಎಂದನು. ಇಸ್ರೇಲಿನ ರಾಜನು, ತಾನು ರಾಜನಲ್ಲವೆಂದು ತೋರುವಂತಹ ವಸ್ತ್ರಗಳನ್ನು ಧರಿಸಿಕೊಂಡು ಹೋರಾಟವನ್ನು ಆರಂಭಿಸಿದನು.

31 ಅರಾಮ್ಯರ ರಾಜನ ಬಳಿ ಮೂವತ್ತೆರಡು ರಥಬಲದ ಅಧಿಪತಿಗಳಿದ್ದರು. ಆ ರಾಜನು ಇಸ್ರೇಲಿನ ರಾಜನನ್ನು ಕಂಡು ಹಿಡಿಯುವಂತೆ ಈ ಮೂವತ್ತೆರಡು ರಥಬಲದ ಅಧಿಪತಿಗಳಿಗೆ ಆಜ್ಞಾಪಿಸಿದ್ದನು. ಅರಾಮ್ಯರ ರಾಜನು, ಇಸ್ರೇಲಿನ ರಾಜನನ್ನು ಕೊಂದುಹಾಕುವಂತೆ ಈ ಅಧಿಕಾರಿಗಳಿಗೆ ಆಜ್ಞಾಪಿಸಿದ್ದನು; 32 ಹೋರಾಟದ ಸಂದರ್ಭದಲ್ಲಿ ರಾಜನಾದ ಯೆಹೋಷಾಫಾಟನನ್ನು ಈ ಅಧಿಪತಿಗಳು ನೋಡಿದರು. ಆ ಅಧಿಕಾರಿಗಳು ಅವನನ್ನು ಇಸ್ರೇಲಿನ ರಾಜನೆಂದು ತಿಳಿದು ಅವನನ್ನು ಕೊಲ್ಲುವುದಕ್ಕೆ ಅವರು ಹೋದರು. ಯೆಹೋಷಾಫಾಟನು ಕೂಗಿಕೊಳ್ಳಲಾರಂಭಿಸಿದನು. 33 ಅವನು ರಾಜನಾದ ಅಹಾಬನಲ್ಲವೆಂಬುದನ್ನು ಆ ಅಧಿಕಾರಿಗಳು ತಿಳಿದು ಅವನನ್ನು ಕೊಲ್ಲಲಿಲ್ಲ.

34 ಆದರೆ ಒಬ್ಬ ಸೈನಿಕನು ಯಾರಿಗೂ ಗುರಿಯಿಡದೆ ಒಂದು ಬಾಣವನ್ನು ಗಾಳಿಯಲ್ಲಿ ಹೊಡೆದನು. ಆದರೆ ಅವನ ಬಾಣವು ಇಸ್ರೇಲಿನ ರಾಜನಾದ ಅಹಾಬನಿಗೆ ಬಡಿಯಿತು. ಆ ಬಾಣವು ರಾಜನ ದೇಹದ ಕವಚದ ಸಣ್ಣ ಸಂಧಿಯಲ್ಲಿ ತಾಕಿತು. ರಾಜನಾದ ಅಹಾಬನು ತನ್ನ ರಥದ ಸಾರಥಿಗೆ, “ಒಂದು ಬಾಣವು ನನಗೆ ತಾಕಿತು! ರಥವನ್ನು ಈ ಪ್ರದೇಶದಿಂದ ಹೊರಗೆ ಓಡಿಸು. ನಾವು ಯುದ್ಧದಿಂದ ಹೊರಟುಹೋಗಬೇಕಾಗಿದೆ” ಎಂದು ಹೇಳಿದನು.

35 ಸೈನಿಕರು ಹೋರಾಡುತ್ತಲೇ ಇದ್ದರು. ರಾಜನಾದ ಅಹಾಬನು ರಥದಲ್ಲಿಯೇ ಇದ್ದನು. ಅವನು ರಥದ ಒಂದು ಪಕ್ಕಕ್ಕೆ ಒರಗಿಕೊಂಡು ನಿಂತಿದ್ದನು. ಅವನು ಅರಾಮ್ಯರ ಸೇನೆಯ ಕಡೆಗೆ ನೋಡುತ್ತಲೇ ಇದ್ದನು. ಅವನ ದೇಹದಿಂದ ಹರಿದ ರಕ್ತವು, ರಥದ ತಳದಲ್ಲಿ ಮಡುಗಟ್ಟಿತು. ಸಾಯಂಕಾಲವಾದ ಮೇಲೆ ರಾಜನು ಸತ್ತುಹೋದನು. 36 ಸೂರ್ಯನು ಮುಳುಗುತ್ತಿರಲು, ಇಸ್ರೇಲಿನ ಸೈನ್ಯದ ಪ್ರತಿಯೊಬ್ಬನು ತನ್ನ ಊರಿಗೂ ತನ್ನ ನಾಡಿಗೂ ಹೋಗಬೇಕು! ಎಂಬ ಕೂಗು ಸೈನ್ಯದಲ್ಲೆಲ್ಲಾ (ಪಾಳೆಯದಲ್ಲಿ) ಹಬ್ಬಿತು.

37 ರಾಜನಾದ ಅಹಾಬನು ಈ ರೀತಿಯಲ್ಲಿ ಸತ್ತುಹೋದನು. ಅವನ ದೇಹವನ್ನು ಕೆಲವು ಜನರು ಸಮಾರ್ಯಕ್ಕೆ ತೆಗೆದುಕೊಂಡು ಹೋದರು. ಅವರು ಅವನನ್ನು ಅಲ್ಲಿ ಸಮಾಧಿಮಾಡಿದರು. 38 ಆ ಜನರು ಅಹಾಬನ ರಥವನ್ನು ಸಮಾರ್ಯದ ಕೊಳದ ನೀರಿನಲ್ಲಿ ತೊಳೆದರು. ರಥದಲ್ಲಿದ್ದ ರಾಜನಾದ ಅಹಾಬನ ರಕ್ತವನ್ನು ನಾಯಿಗಳು ನೆಕ್ಕಿದವು. ದೇವದಾಸಿಯರು ಆ ಕೊಳದ ನೀರನ್ನು ಸ್ನಾನಕ್ಕೆ ಉಪಯೋಗಿಸುತ್ತಿದ್ದರು. ಯೆಹೋವನು ಹೇಳಿದ್ದ ರೀತಿಯಲ್ಲಿಯೇ ಈ ಸಂಗತಿಗಳು ಸಂಭವಿಸಿದವು.

39 ರಾಜನಾದ ಅಹಾಬನು ತನ್ನ ಆಳ್ವಿಕೆಯ ಕಾಲದಲ್ಲಿ ಮಾಡಿದ ಸಂಗತಿಗಳನ್ನೆಲ್ಲಾ “ಇಸ್ರೇಲಿನ ರಾಜರುಗಳ ಇತಿಹಾಸ” ಪುಸ್ತಕದಲ್ಲಿ ಬರೆದಿದ್ದಾರೆ. ರಾಜನು ತನ್ನ ಅರಮನೆಯನ್ನು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಬಳಸಿದ ದಂತದ ಕುರಿತಾಗಿಯೂ ಆ ಪುಸ್ತಕವು ತಿಳಿಸುತ್ತದೆ. ರಾಜನು ನಿರ್ಮಿಸಿದ ನಗರಗಳ ಬಗ್ಗೆಯೂ ಆ ಪುಸ್ತಕವು ತಿಳಿಸುತ್ತದೆ. 40 ಅಹಾಬನು ಸತ್ತಾಗ ಅವನನ್ನು ಅವನ ಪೂರ್ವಿಕರೊಡನೆ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಅಹಜ್ಯನು ರಾಜನಾದನು.

ಯೆಹೂದದ ರಾಜನಾದ ಯೆಹೋಷಾಫಾಟ

41 ಅಹಾಬನು ಇಸ್ರೇಲಿನ ರಾಜನಾಗಿದ್ದ ನಾಲ್ಕನೆಯ ವರ್ಷದಲ್ಲಿ ಯೆಹೋಷಾಫಾಟನು ಯೆಹೂದದ ರಾಜನಾದನು. ಯೆಹೋಷಾಫಾಟನು ಆಸನ ಮಗ. 42 ಯೆಹೋಷಾಫಾಟನು ರಾಜನಾದಾಗ ಅವನಿಗೆ ಮೂವತ್ತೈದು ವರ್ಷ ವಯಸ್ಸಾಗಿತ್ತು. ಯೆಹೋಷಾಫಾಟನು ಜೆರುಸಲೇಮಿನಲ್ಲಿ ಇಪ್ಪತ್ತೈದು ವರ್ಷ ಆಳಿದನು. ಯೆಹೋಷಾಫಾಟನ ತಾಯಿಯು ಆಜೂಬಳೆಂಬ ಹೆಸರಿನವಳು. ಆಜೂಬಳು ಶಿಲ್ಹಿಯ ಮಗಳು. 43 ಯೆಹೋಷಾಫಾಟನು ಒಳ್ಳೆಯವನಾಗಿದ್ದನು. ಅವನು ತನ್ನ ತಂದೆಯ ಮಾರ್ಗವನ್ನು ಅನುಸರಿಸಿದನು. ಯೆಹೋವನು ಅಪೇಕ್ಷಿಸಿದವುಗಳಿಗೆಲ್ಲ ಅವನು ವಿಧೇಯನಾಗಿದ್ದನು. ಆದರೆ ಯೆಹೋಷಾಫಾಟನು ಉನ್ನತಸ್ಥಳಗಳನ್ನು ನಾಶಗೊಳಿಸಲಿಲ್ಲ. ಜನರು ಆ ಸ್ಥಳಗಳಲ್ಲಿ ಯಜ್ಞಗಳನ್ನು ಅರ್ಪಿಸುತ್ತಾ ಧೂಪಹಾಕುತ್ತಾ ಇದ್ದರು.

44 ಯೆಹೋಷಾಫಾಟನು ಇಸ್ರೇಲಿನ ರಾಜನೊಂದಿಗೆ ಒಂದು ಶಾಂತಿಒಪ್ಪಂದವನ್ನು ಮಾಡಿಕೊಂಡನು. 45 ಯೆಹೋಷಾಫಾಟನು ಬಹಳ ಧೈರ್ಯಶಾಲಿ. ಅವನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದನು. ಅವನು ಮಾಡಿದ ಕಾರ್ಯಗಳನ್ನೆಲ್ಲಾ “ಯೆಹೂದದ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆಯಲಾಗಿದೆ.

46 ಲೈಂಗಿಕ ಸಂಬಂಧಕ್ಕಾಗಿ ತಮ್ಮ ದೇಹಗಳನ್ನು ಮಾರಾಟ ಮಾಡುತ್ತಿದ್ದ ಗಂಡಸರನ್ನು ಮತ್ತು ಹೆಂಗಸರನ್ನು, ಯೆಹೋಷಾಫಾಟನು ದೇಶದಿಂದ ಹೊರಗಟ್ಟಿದನು. ಅವನ ತಂದೆಯಾದ ಆಸನು ರಾಜನಾಗಿದ್ದ ಕಾಲದಲ್ಲಿ ಆ ಜನರು ಪೂಜಾಸ್ಥಳಗಳಲ್ಲಿ ಸೇವೆಯನ್ನು ಮಾಡುತ್ತಿದ್ದರು.

47 ಈ ಸಮಯದಲ್ಲಿ ಎದೋಮ್ ದೇಶದಲ್ಲಿ ರಾಜನಿರಲಿಲ್ಲ. ಆ ದೇಶವನ್ನು ಒಬ್ಬ ರಾಜ್ಯಪಾಲನು ಆಳುತ್ತಿದ್ದನು. ಈ ರಾಜ್ಯಪಾಲನನ್ನು ಯೆಹೂದದ ರಾಜನು ಆರಿಸಿದ್ದನು.

48 ರಾಜನಾದ ಯೆಹೋಷಾಫಾಟನು ಸರಕು ಸಾಗಿಸುವ ಹಡಗುಗಳನ್ನು ತಯಾರಿಸಿದನು. ಯೆಹೋಷಾಫಾಟನು ಓಫೀರ್ ದೇಶದಿಂದ ಬಂಗಾರವನ್ನು ತರುವುದಕ್ಕಾಗಿ ಈ ಹಡಗುಗಳನ್ನು ಕಳುಹಿಸಿದನು. ಆದರೆ ಆ ಹಡಗುಗಳು ತಮ್ಮ ಸ್ವಂತ ಬಂದರಾದ ಎಚ್ಯೋನ್ಗೆಬೆರಿನಲ್ಲಿ ನಾಶವಾದವು. ಅವು ಓಫೀರ್ ದೇಶವನ್ನು ಮುಟ್ಟಲೇ ಇಲ್ಲ. 49 ಇಸ್ರೇಲಿನ ರಾಜನಾದ ಅಹಜ್ಯನು ಯೆಹೋಷಾಫಾಟನಿಗೆ ಸಹಾಯಮಾಡಲು ಹೋದನು. ಅಹಜ್ಯನು ಆ ಹಡಗುಗಳಲ್ಲಿ ತನ್ನ ಸ್ವಂತ ನಾವಿಕರಲ್ಲಿ ಕೆಲವರನ್ನು ಯೆಹೋಷಾಫಾಟನ ಜನರೊಂದಿಗೆ ಕಳುಹಿಸುತ್ತೇನೆಂದು ಯೆಹೋಷಾಫಾಟನಿಗೆ ತಿಳಿಸಿದನು. ಆದರೆ ಯೆಹೋಷಾಫಾಟನು ಅಹಜ್ಯನ ಜನರನ್ನು ಸ್ವೀಕರಿಸಲಿಲ್ಲ.

50 ಯೆಹೋಷಾಫಾಟನು ಸತ್ತುಹೋದನು. ಅವನನ್ನು ಅವನ ಪೂರ್ವಿಕರ ಬಳಿ ದಾವೀದನಗರದಲ್ಲಿ ಸಮಾಧಿಮಾಡಿದರು. ನಂತರ ಅವನ ಮಗನಾದ ಯೆಹೋರಾಮನು ರಾಜನಾದನು.

ಇಸ್ರೇಲಿನ ರಾಜನಾದ ಅಹಜ್ಯ

51 ಅಹಜ್ಯನು ಅಹಾಬನ ಮಗ. ಯೆಹೋಷಾಫಾಟನು ಯೆಹೂದದ ರಾಜನಾಗಿದ್ದ ಹದಿನೇಳನೆಯ ವರ್ಷದಲ್ಲಿ ಅವನು ಇಸ್ರೇಲಿನ ರಾಜನಾದನು. ಅಹಜ್ಯನು ಸಮಾರ್ಯದಲ್ಲಿ ಎರಡು ವರ್ಷ ರಾಜ್ಯವಾಳಿದನು. 52 ಅಹಜ್ಯನು ಯೆಹೋವನ ವಿರುದ್ಧ ಪಾಪವನ್ನು ಮಾಡಿದನು. ಅವನು ತನ್ನ ತಂದೆಯಾದ ಅಹಾಬ, ತಾಯಿಯಾದ ಈಜೆಬೆಲ ಮತ್ತು ನೆಬಾಟನ ಮಗನಾದ ಯಾರೊಬ್ಬಾಮ ಮಾಡಿದಂತಹ ಕಾರ್ಯಗಳನ್ನೇ ಮಾಡಿದನು. ಈ ಆಡಳಿತಗಾರರೆಲ್ಲ ಇಸ್ರೇಲಿನ ಜನರನ್ನು ಮತ್ತಷ್ಟು ಪಾಪಕ್ಕೆ ನಡೆಸಿದರು. 53 ಅಹಜ್ಯನು ತನ್ನ ತಂದೆಯಂತೆಯೇ ಸುಳ್ಳುದೇವರಾದ ಬಾಳನನ್ನು ಪೂಜಿಸಿ ಅವನ ಸೇವೆ ಮಾಡಿದನು; ಇಸ್ರೇಲಿನ ದೇವರಾದ ಯೆಹೋವನನ್ನು ರೇಗಿಸಿದನು. ಯೆಹೋವನು ಮೊದಲು ಅಹಜ್ಯನ ತಂದೆಯ ಮೇಲೆ ಕೋಪಗೊಂಡಿದ್ದಂತೆ, ಅಹಜ್ಯನ ಮೇಲೂ ಕೋಪಗೊಂಡನು.

ಲೂಕ 23:26-56

ಯೇಸುವನ್ನು ಶಿಲುಬೆಗೇರಿಸಿದರು

(ಮತ್ತಾಯ 27:32-44; ಮಾರ್ಕ 15:21-32; ಯೋಹಾನ 19:17-19)

26 ಸೈನಿಕರು ಯೇಸುವನ್ನು ಕೊಲ್ಲಲು ಕರೆದೊಯ್ಯುವಾಗ ಹೊಲದಿಂದ ಪಟ್ಟಣದೊಳಗೆ ಬರುತ್ತಿದ್ದ ಸೀಮೋನ ಎಂಬವನನ್ನು ಕಂಡರು. ಸೀಮೋನನು ಸಿರೇನ್ ಪಟ್ಟಣದವನು. ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡು ಯೇಸುವಿನ ಹಿಂದೆ ಬರುವಂತೆ ಸೈನಿಕರು ಸೀಮೋನನನ್ನು ಬಲವಂತ ಮಾಡಿದರು.

27 ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ದೊಡ್ಡಗುಂಪಾಗಿ ಸೇರಿದ್ದ ಸ್ತ್ರೀಯರು ಯೇಸುವಿಗಾಗಿ ದುಃಖಪಟ್ಟು ಎದೆ ಬಡಿದುಕೊಂಡು ಗೋಳಾಡುತ್ತಿದ್ದರು. 28 ಆದರೆ ಯೇಸು, ಆ ಸ್ತ್ರೀಯರಿಗೆ, “ಜೆರುಸಲೇಮಿನ ಸ್ತ್ರೀಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ! 29 ‘ಬಂಜೆಯರೇ ಭಾಗ್ಯವಂತರು! ಹೆರದವಳೇ ಹಾಲುಕುಡಿಸದವಳೇ ಭಾಗ್ಯವಂತಳು’ ಎಂದು ಜನರು ಹೇಳುವ ಸಮಯ ಬರುತ್ತದೆ. 30 ಆಗ ಜನರು ಬೆಟ್ಟಕ್ಕೆ, ‘ನಮ್ಮ ಮೇಲೆ ಬೀಳು!’ ಎಂತಲೂ ಗುಡ್ಡಗಳಿಗೆ, ‘ನಮ್ಮನ್ನು ಮುಚ್ಚಿಕೊಳ್ಳಿರಿ!’(A) ಎಂತಲೂ ಕೂಗಿಕೊಳ್ಳುವರು. 31 ಜೀವನ ಸುಖಕರವಾಗಿರುವಾಗ ಜನರು ಈ ರೀತಿ ವರ್ತಿಸಿದರೆ, ಜೀವನ ಕಷ್ಟಕರವಾದಾಗ ಏನು ಮಾಡುವರು?”[a] ಎಂದು ಹೇಳಿದನು.

32 ಯೇಸುವಿನ ಸಂಗಡ ಇಬ್ಬರು ದುಷ್ಕರ್ಮಿಗಳನ್ನು ಕೊಲ್ಲಬೇಕೆಂದು ಅವರು ನಿರ್ಧರಿಸಿದರು. 33 ಯೇಸುವನ್ನು ಮತ್ತು ಇಬ್ಬರು ದುಷ್ಕರ್ಮಿಗಳನ್ನು ಅವರು “ಕಪಾಲ”ವೆಂಬ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸೈನಿಕರು ಯೇಸುವನ್ನೂ ಆ ದುಷ್ಕರ್ಮಿಗಳನ್ನೂ ಶಿಲುಬೆಗಳಿಗೆ ಜಡಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದರು.

34 ಯೇಸು, “ತಂದೆಯೇ, ಇವರನ್ನು ಕ್ಷಮಿಸು. ಇವರಿಗೆ ತಾವು ಮಾಡುತ್ತಿರುವುದು ತಿಳಿದಿಲ್ಲ” ಎಂದು ಪ್ರಾರ್ಥಿಸಿದನು.

ಸೈನಿಕರು ಚೀಟುಹಾಕಿ ಯೇಸುವಿನ ಬಟ್ಟೆಗಳು ಯಾರಿಗೆ ಸೇರಬೇಕೆಂದು ತೀರ್ಮಾನಿಸಿದರು. 35 ಜನರು ನೋಡುತ್ತಾ ಅಲ್ಲಿ ನಿಂತಿದ್ದರು. ಯೆಹೂದ್ಯನಾಯಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು, “ಇವನು ದೇವರಿಂದ ಆರಿಸಲ್ಪಟ್ಟ ಕ್ರಿಸ್ತನಾಗಿದ್ದರೆ ತನ್ನನ್ನು ರಕ್ಷಿಸಿಕೊಳ್ಳಲಿ. ಇವನು ಬೇರೆಯವರನ್ನು ರಕ್ಷಿಸಿದನಲ್ಲವೇ?” ಅಂದರು.

36 ಸೈನಿಕರೂ ಯೇಸುವನ್ನು ಗೇಲಿಮಾಡಿದರು. ಅವರು ಯೇಸುವಿನ ಬಳಿಗೆ ಬಂದು, ಸ್ವಲ್ಪ ಹುಳಿದ್ರಾಕ್ಷಾರಸವನ್ನು ನೀಡಿ, 37 “ನೀನು ಯೆಹೂದ್ಯರ ಅರಸನಾಗಿದ್ದರೆ, ನಿನ್ನನ್ನು ರಕ್ಷಿಸಿಕೊ!” ಎಂದು ಹೇಳಿದರು. 38 (ಶಿಲುಬೆಯ ಮೇಲ್ಭಾಗದಲ್ಲಿ, “ಈತನು ಯೆಹೂದ್ಯರ ಅರಸನು” ಎಂದು ಬರೆಯಲಾಗಿತ್ತು.)

39 ದುಷ್ಕರ್ಮಿಗಳಲ್ಲೊಬ್ಬನು ಯೇಸುವನ್ನು ದೂಷಿಸಿ, “ನೀನು ಕ್ರಿಸ್ತನಲ್ಲವೋ? ಹಾಗಾದರೆ ನಿನ್ನನ್ನು ರಕ್ಷಿಸಿಕೊ! ನಮ್ಮನ್ನೂ ರಕ್ಷಿಸು!” ಅಂದನು.

40 ಆದರೆ ಇನ್ನೊಬ್ಬ ದುಷ್ಕರ್ಮಿಯು ಅವನನ್ನು ಗದರಿಸಿ, “ನೀನು ದೇವರಿಗೆ ಹೆದರಬೇಕು! ನಾವೆಲ್ಲರೂ ಬೇಗನೆ ಸಾಯುವೆವು! 41 ನೀನೂ ನಾನೂ ಅಪರಾಧಿಗಳಾಗಿದ್ದೇವೆ. ನಾವು ತಪ್ಪು ಮಾಡಿದ್ದರಿಂದ ಶಿಕ್ಷಿಸಲ್ಪಡಬೇಕು. ಆದರೆ ಈ ಮನುಷ್ಯನು (ಯೇಸು) ಯಾವ ತಪ್ಪನ್ನೂ ಮಾಡಲಿಲ್ಲ!” ಎಂದು ಹೇಳಿದನು. 42 ಬಳಿಕ ಆ ದುಷ್ಕರ್ಮಿಯು ಆತನಿಗೆ, “ಯೇಸುವೇ ನೀನು ನಿನ್ನ ರಾಜ್ಯವನ್ನು ಸ್ಥಾಪಿಸುವಾಗ ನನ್ನನ್ನು ನೆನಸಿಕೊ!” ಎಂದು ಹೇಳಿದನು.

43 ಆಗ ಯೇಸು ಅವನಿಗೆ, “ಕೇಳು! ನಾನು ಸತ್ಯವನ್ನೇ ಹೇಳುತ್ತೇನೆ. ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ” ಎಂದು ಹೇಳಿದನು.

ಯೇಸುವಿನ ಮರಣ

(ಮತ್ತಾಯ 27:45-56; ಮಾರ್ಕ 15:33-41; ಯೋಹಾನ 19:28-30)

44 ಇಷ್ಟರಲ್ಲಿ ಹೆಚ್ಚುಕಡಿಮೆ ಮಧ್ಯಾಹ್ನವಾಗಿತ್ತು. ಆದರೆ ಇಡೀ ಪ್ರದೇಶವು ಮಧ್ಯಾಹ್ನ ಮೂರು ಗಂಟೆಯ ತನಕ ಕತ್ತಲಾಯಿತು. 45 ಸೂರ್ಯನ ಬೆಳಕೇ ಇರಲಿಲ್ಲ! ದೇವಾಲಯದ ಪರದೆಯು ಎರಡು ಭಾಗವಾಗಿ ಹರಿದುಹೋಯಿತು. 46 ಆಮೇಲೆ ಯೇಸು, “ತಂದೆಯೇ, ನನ್ನ ಆತ್ಮವನ್ನು ನಿನಗೆ ಒಪ್ಪಿಸುತ್ತೇನೆ”[b] ಎಂದು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟನು.

47 ಅಲ್ಲಿದ್ದ ಶತಾಧಿಪತಿ ನಡೆದದ್ದನ್ನು ನೋಡಿ, “ಈ ಮನುಷ್ಯನು ಒಳ್ಳೆಯವನೆಂದು ನನಗೆ ಗೊತ್ತಿತ್ತು” ಎಂದು ಹೇಳಿ ದೇವರನ್ನು ಸ್ತುತಿಸಿದನು.

48 ಈ ಸಂಗತಿಯನ್ನು ನೋಡುವುದಕ್ಕೆ ಅನೇಕ ಜನರು ಪಟ್ಟಣದ ಹೊರಗೆ ಬಂದಿದ್ದರು. ಜನರು ಇದ್ದನ್ನು ನೋಡಿ, ಬಹಳ ದುಃಖದಿಂದ ಹೊರಟುಹೋದರು. 49 ಯೇಸುವಿನ ಆತ್ಮೀಯ ಸ್ನೇಹಿತರೂ ಅಲ್ಲಿದ್ದರು. ಗಲಿಲಾಯದಿಂದ ಯೇಸುವನ್ನು ಹಿಂಬಾಲಿಸಿದ ಕೆಲವು ಸ್ತ್ರೀಯರೂ ಅಲ್ಲಿದ್ದರು. ಅವರೆಲ್ಲರೂ ಶಿಲುಬೆಯಿಂದ ದೂರದಲ್ಲಿ ನಿಂತುಕೊಂಡು ಈ ಸಂಗತಿಗಳನ್ನು ನೋಡಿದರು.

ಅರಿಮಥಾಯದ ಯೋಸೇಫನು

(ಮತ್ತಾಯ 27:57-61; ಮಾರ್ಕ 15:42-47; ಯೋಹಾನ 19:38-42)

50-51 ಅರಿಮಥಾಯ ಎಂಬುದು ಯೆಹೂದ್ಯರ ಒಂದು ಊರು. ಯೋಸೇಫನು ಇದರ ನಿವಾಸಿ. ಇವನು ಒಳ್ಳೆಯ ಧಾರ್ಮಿಕ ವ್ಯಕ್ತಿಯಾಗಿದ್ದನು. ದೇವರ ರಾಜ್ಯದ ಆಗಮನವನ್ನು ಇವನು ನಿರೀಕ್ಷಿಸಿದ್ದನು. ಯೋಸೇಫನು ಯೆಹೂದ್ಯರ ಹಿರಿಸಭೆಯ ಸದಸ್ಯನಾಗಿದ್ದನು. ಆದರೆ ಬೇರೆ ಯೆಹೂದ್ಯ ನಾಯಕರು ಯೇಸುವನ್ನು ಕೊಲ್ಲಲು ತೀರ್ಮಾನಿಸಿದಾಗ ಇವನು ಅದಕ್ಕೆ ಒಪ್ಪಲಿಲ್ಲ. 52 ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಯೋಸೇಫನು ಪಿಲಾತನನ್ನು ಕೇಳಿಕೊಂಡನು. 53 ಬಳಿಕ ಇವನು ಯೇಸುವಿನ ದೇಹವನ್ನು ಶಿಲುಬೆಯಿಂದ ಇಳಿಸಿ ಬಟ್ಟೆಯಲ್ಲಿ ಸುತ್ತಿ, ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿ ಇಟ್ಟನು. ಈ ಸಮಾಧಿಯಲ್ಲಿ ಬೇರೆ ಯಾರನ್ನೂ ಎಂದೂ ಹೂಳಿರಲಿಲ್ಲ. 54 ಅದು ಸಿದ್ಧತೆಯ ದಿನದ[c] ಸಾಯಂಕಾಲವಾಗಿತ್ತು. ಸೂರ್ಯನು ಮುಳುಗಿದಾಗ, ಸಬ್ಬತ್‌ದಿನ ಪ್ರಾರಂಭವಾಗಲಿಕ್ಕಿತ್ತು.

55 ಗಲಿಲಾಯದಿಂದ ಯೇಸುವಿನ ಸಂಗಡ ಬಂದಿದ್ದ ಸ್ತ್ರೀಯರು ಯೋಸೇಫನನ್ನು ಹಿಂಬಾಲಿಸಿದರು. ಅವರು ಸಮಾಧಿಯನ್ನೂ ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳವನ್ನೂ ನೋಡಿದರು. 56 ಬಳಿಕ ಆ ಸ್ತ್ರೀಯರು ಯೇಸುವಿನ ದೇಹಕ್ಕೆ ಹಚ್ಚಲು ಪರಿಮಳದ್ರವ್ಯಗಳನ್ನು ಸಿದ್ಧಮಾಡುವುದಕ್ಕಾಗಿ ಹೊರಟುಹೋದರು.

ಸಬ್ಬತ್ ದಿನದಲ್ಲಿ ಅವರು ವಿಶ್ರಮಿಸಿಕೊಂಡರು. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಸಬ್ಬತ್‌ದಿನದಂದು ಜನರೆಲ್ಲರೂ ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International