Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ರಾಜರುಗಳು 1-2

ಆ ಕಾಲದಲ್ಲಿ ರಾಜನಾದ ದಾವೀದನು ಬಹಳ ಮುದುಕನಾಗಿದ್ದನು. ಅವನ ದೇಹವು ಬೆಚ್ಚಗಾಗುತ್ತಲೇ ಇರಲಿಲ್ಲ. ಅವನ ಸೇವಕರು ಅವನಿಗೆ ಕಂಬಳಿಗಳನ್ನು ಹೊದಿಸಿದರೂ ಅವನ ದೇಹವು ತಣ್ಣಗೇ ಇರುತ್ತಿತ್ತು. ಆದ್ದರಿಂದ ಅವನ ಸೇವಕರು ಅವನಿಗೆ, “ನಾವು ನಿನ್ನ ಆರೈಕೆಗಾಗಿ ಒಬ್ಬ ಯುವಕನ್ನಿಕೆಯನ್ನು ಹುಡುಕುವೆವು. ಅವಳು ನಿನ್ನನ್ನು ಒತ್ತರಿಸಿಕೊಂಡು ಮಲಗಿ ಬೆಚ್ಚಗಿಡುತ್ತಾಳೆ” ಎಂದು ಹೇಳಿದರು. ಆದ್ದರಿಂದ ರಾಜನ ಸೇವಕರು ಇಸ್ರೇಲಿನ ಎಲ್ಲ ಕಡೆಗಳಲ್ಲೂ ಯುವತಿಯೊಬ್ಬಳನ್ನು ಹುಡುಕಲಾರಂಭಿಸಿದರು. ಅವರು ರಾಜನನ್ನು ಬೆಚ್ಚಗಿಡಲು ಒಬ್ಬ ಸುಂದರ ಹುಡುಗಿಯನ್ನು ಹುಡುಕಲಾರಂಭಿಸಿದರು. ಅವರಿಗೆ ಅಬೀಷಗ್ ಎಂಬ ಹೆಸರಿನ ಯುವತಿಯು ಸಿಕ್ಕಿದಳು. ಅವಳು ಶೂನೇಮ್ ನಗರದವಳು. ಅವರು ಆ ಯುವತಿಯನ್ನು ರಾಜನ ಬಳಿಗೆ ಕರೆದುಕೊಂಡು ಬಂದರು. ಆ ಯುವತಿಯು ಬಹಳ ಸೌಂದರ್ಯವತಿಯಾಗಿದ್ದಳು. ಅವಳು ರಾಜನ ಆರೈಕೆಯನ್ನು ಮಾಡಿದಳು ಮತ್ತು ಅವನ ಸೇವೆಯನ್ನೂ ಮಾಡಿದಳು. ರಾಜನಾದ ದಾವೀದನು ಅವಳನ್ನು ಕೂಡಲಿಲ್ಲ.

ರಾಜನಾದ ದಾವೀದನ ಮಗನಾದ ಅದೋನೀಯನು ಬಹಳ ಗರ್ವಿಷ್ಠನಾದನು. ಅವನು, “ನಾನೇ ರಾಜನಾಗುತ್ತೇನೆ” ಎಂದು ಹೇಳಿಕೊಂಡನು. (ಅದೋನೀಯನ ತಾಯಿಯ ಹೆಸರು ಹಗ್ಗೀತ.) ಅದೋನೀಯನು ರಾಜನಾಗಬೇಕೆಂಬುದಾಗಿ ಬಹಳ ಆಸೆಪಟ್ಟನು. ಆದ್ದರಿಂದ ಅವನು ತನಗಾಗಿ ಒಂದು ರಥವನ್ನು, ಕುದುರೆಗಳನ್ನು ಮತ್ತು ರಥದ ಮುಂದೆ ಓಡುವಂತಹ ಐವತ್ತು ಜನರನ್ನು ಪಡೆದನು. ರಾಜನಾದ ದಾವೀದನು ತನ್ನ ಮಗನಾದ ಅದೋನೀಯನನ್ನು ಎಂದೂ ತಿದ್ದಲಿಲ್ಲ. ದಾವೀದನು, “ನೀನು ಹೀಗೇಕೆ ಮಾಡುತ್ತಿರುವೆ?” ಎಂದು ಅವನನ್ನು ಒಂದು ಸಾರಿಯಾದರೂ ಕೇಳಲಿಲ್ಲ. ಅದೋನೀಯನು ಅಬ್ಷಾಲೋಮನ ಬಳಿಕ ಹುಟ್ಟಿದ ಮಗ. ಅದೋನೀಯನು ಬಹಳ ಸುಂದರನಾಗಿದ್ದನು.

ಅದೋನೀಯನು ಚೆರೂಯಳ ಮಗನಾದ ಯೋವಾಬ ಮತ್ತು ಯಾಜಕನಾದ ಎಬ್ಯಾತಾರನೊಂದಿಗೆ ಮಾತನಾಡಿದನು. ತಾನು ರಾಜನಾಗಬೇಕೆಂಬ ಅದೋನೀಯನ ಯೋಜನೆಗೆ ಅವರು ಬೆಂಬಲ ನೀಡಿದರು. ಆದರೆ ಅದೋನೀಯನ ಕಾರ್ಯವನ್ನು ಒಪ್ಪದ ಅನೇಕರು ದಾವೀದನಿಗೆ ನಂಬಿಗಸ್ತರಾಗಿದ್ದರು. ಇವರು ಯಾರೆಂದರೆ: ಯಾಜಕನಾದ ಚಾದೋಕ, ಯೆಹೋಯಾದಾವನ ಮಗನಾದ ಬೆನಾಯ, ಪ್ರವಾದಿಯಾದ ನಾತಾನ್, ಶಿಮ್ಮೀ, ರೇಗೀ ಮತ್ತು ರಾಜನಾದ ದಾವೀದನ ವಿಶೇಷ ಅಂಗರಕ್ಷಕರು. ಇವರಲ್ಲಿ ಯಾರೂ ಅದೋನೀಯನ ಸಂಗಡ ಸೇರಲಿಲ್ಲ.

ಒಂದು ದಿನ, ಅದೋನೀಯನು ಎನ್‌ರೋಗೆಲಿನ ಹತ್ತಿರದ ಚೋಹೆಲೆತ್ ಎಂಬ ಬಂಡೆಯ ಬಳಿ ಕೆಲವು ಕುರಿಗಳನ್ನು, ಹಸುಗಳನ್ನು ಮತ್ತು ಕೊಬ್ಬಿದ ಕರುಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದನು. ಅದೋನೀಯನು ತನ್ನ ಸಹೋದರರನ್ನು (ರಾಜನ ಇತರ ಗಂಡುಮಕ್ಕಳನ್ನು) ಮತ್ತು ಯೆಹೂದದ ಅಧಿಕಾರಿಗಳನ್ನು ಆಹ್ವಾನಿಸಿದನು. 10 ಆದರೆ ಅದೋನೀಯನು ಪ್ರವಾದಿಯಾದ ನಾತಾನನನ್ನಾಗಲಿ ಬೆನಾಯನನ್ನಾಗಲಿ ಅವನ ತಂದೆಯ ವಿಶೇಷ ಅಂಗರಕ್ಷಕರನ್ನಾಗಲಿ ಅವನ ಸೋದರ ಸೊಲೊಮೋನನನ್ನಾಗಲಿ ಆಹ್ವಾನಿಸಲಿಲ್ಲ.

11 ನಾತಾನನಿಗೆ ಇದು ತಿಳಿದಾಗ, ಅವನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಬಳಿಗೆ ಹೋಗಿ, “ಹಗ್ಗೀತಳ ಮಗನಾದ ಅದೋನೀಯನು ಮಾಡುತ್ತಿರುವುದನ್ನು ನೀನು ಕೇಳಿದೆಯಾ? ಅವನು ತನ್ನನ್ನು ತಾನೇ ರಾಜನನ್ನಾಗಿ ಮಾಡಿಕೊಂಡಿದ್ದಾನೆ ಮತ್ತು ನಮ್ಮ ಒಡೆಯನಾದ ರಾಜ ದಾವೀದನಿಗೆ ಇದು ತಿಳಿದಿಲ್ಲ. 12 ನಿನ್ನ ಜೀವ ಮತ್ತು ನಿನ್ನ ಮಗನಾದ ಸೊಲೊಮೋನನ ಜೀವ ಅಪಾಯದಲ್ಲಿರುವಂತಿದೆ. ಆದರೆ ನೀನು ನಿನ್ನನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದನ್ನು ನಾನು ನಿನಗೆ ತಿಳಿಸುತ್ತೇನೆ. 13 ರಾಜನಾದ ದಾವೀದನ ಬಳಿಗೆ ಹೋಗಿ ಅವನಿಗೆ, ‘ನನ್ನ ಒಡೆಯನಾದ ರಾಜನೇ, ನನ್ನ ಮಗನಾದ ಸೊಲೊಮೋನನು ನಿನ್ನ ನಂತರದ ರಾಜನೆಂದು ನೀನು ನನಗೆ ವಾಗ್ದಾನ ಮಾಡಿದ್ದೆ. ಹೀಗಿರುವಾಗ ಅದೋನೀಯನು ನೂತನ ರಾಜನಾದದ್ದು ಏಕೆ?’ ಎಂದು ಹೇಳು. 14 ನೀನು ಅವನೊಂದಿಗೆ ಮಾತನಾಡುತ್ತಿರುವಾಗ ನಾನು ಒಳಗೆ ಬಂದು ಅದೋನೀಯನ ಬಗ್ಗೆ ನೀನು ಹೇಳಿದ್ದೆಲ್ಲವೂ ನಿಜ ಎಂದು ಹೇಳುತ್ತೇನೆ” ಎಂಬುದಾಗಿ ತಿಳಿಸಿದನು.

15 ಆದ್ದರಿಂದ ಬತ್ಷೆಬೆಳು ರಾಜನನ್ನು ನೋಡಲು ಅವನ ಮಲಗುವ ಕೊಠಡಿಗೆ ಹೋದಳು. ರಾಜನು ಬಹಳ ವೃದ್ಧನಾಗಿದ್ದನು. ಶೂನೇಮಿನ ಯುವತಿಯಾದ ಅಬೀಷಗಳು ಅಲ್ಲಿ ಅವನ ಆರೈಕೆಯನ್ನು ಮಾಡುತ್ತಿದ್ದಳು. 16 ರಾಜನ ಎದುರಿನಲ್ಲಿ ಬತ್ಷೆಬೆಳು ಬಾಗಿ ನಮಸ್ಕರಿಸಿದಳು. ರಾಜನು, “ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು.

17 ಬತ್ಷೆಬೆಳು, “ನನ್ನ ಒಡೆಯನೇ, ನಿನ್ನ ದೇವರಾದ ಯೆಹೋವನ ಆಣೆಯಾಗಿ ನೀನು ನನಗೆ ಒಂದು ವಾಗ್ದಾನವನ್ನು ಮಾಡಿದ್ದೆ. ‘ನನ್ನ ನಂತರ ನಿನ್ನ ಮಗ ಸೊಲೊಮೋನನು ರಾಜನಾಗುವನು. ಸೊಲೊಮೋನನು ನನ್ನ ಸಿಂಹಾಸನದ ಮೇಲೆ ಕುಳಿತು ಆಳುವನು’ ಎಂಬುದೇ ಆ ಪ್ರಮಾಣ. 18 ಆದರೆ ಈಗ ಅದೋನೀಯನು ತನ್ನನ್ನು ರಾಜನಾಗಿ ಮಾಡಿಕೊಳ್ಳುತ್ತಿದ್ದಾನೆ. ಇದು ನಿನಗೆ ತಿಳಿದಿಲ್ಲ. 19 ಅದೋನೀಯನು ಅನೇಕ ಹಸುಗಳನ್ನು, ಕೊಬ್ಬಿದ ಕರುಗಳನ್ನು ಮತ್ತು ಕುರಿಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದ್ದಾನೆ. ಅವನು ನಿನ್ನ ಎಲ್ಲಾ ಗಂಡುಮಕ್ಕಳನ್ನು ಆಹ್ವಾನಿಸಿದ್ದನು. ಅವನು ಯಾಜಕನಾದ ಎಬ್ಯಾತಾರನನ್ನು ಮತ್ತು ನಿನ್ನ ಸೇನಾಧಿಪತಿಯಾದ ಯೋವಾಬನನ್ನು ಆಹ್ವಾನಿಸಿದ್ದನು. ಆದರೆ ಅವನು ನಿನ್ನ ಸೇವೆಮಾಡುವ ನಿನ್ನ ಮಗನಾದ ಸೊಲೊಮೋನನನ್ನು ಆಹ್ವಾನಿಸಲಿಲ್ಲ. 20 ನನ್ನ ಒಡೆಯನಾದ ರಾಜನೇ, ನಿನ್ನ ನಂತರ ಯಾರು ರಾಜನಾಗಬೇಕೆಂಬ ನಿನ್ನ ತೀರ್ಮಾನಕ್ಕಾಗಿ ಇಸ್ರೇಲರೆಲ್ಲರೂ ಕಾಯುತ್ತಿದ್ದಾರೆ. 21 ನೀನು ಪೂರ್ವಿಕರ ಬಳಿಗೆ ಸೇರಿದ ಮೇಲೆ ಸೊಲೊಮೋನನನ್ನು ಮತ್ತು ನನ್ನನ್ನು ಅಪರಾಧಿಗಳೆಂದು ಜನರೆಲ್ಲರೂ ಹೇಳುವರು” ಎಂದು ಹೇಳಿದಳು.

22 ರಾಜನೊಡನೆ ಬತ್ಷೆಬೆಳು ಮಾತಾಡುತ್ತಿರುವಷ್ಟರಲ್ಲಿ ಪ್ರವಾದಿಯಾದ ನಾತಾನನು ಅವನನ್ನು ನೋಡಲು ಬಂದನು. 23 ಸೇವಕರು ರಾಜನಿಗೆ, “ಪ್ರವಾದಿಯಾದ ನಾತಾನನು ಬಂದಿರುವನು” ಎಂದು ಹೇಳಿದರು. ಆಗ ನಾತಾನನು ಪ್ರವೇಶಿಸಿ, ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. 24 ಆಗ ನಾತಾನನು, “ನನ್ನ ರಾಜನೇ, ನನ್ನ ಒಡೆಯನೇ, ನಿನ್ನ ನಂತರ ಅದೋನೀಯನು ನೂತನ ರಾಜನಾಗಿ ಜನರನ್ನು ಆಳಲೆಂದು ನೀನು ತೀರ್ಮಾನಿಸಿ ಪ್ರಕಟಿಸಿರುವೆಯಾ? 25 ಈ ದಿನ ಅವನು ಅನೇಕ ಹೋರಿಗಳನ್ನು ಮತ್ತು ಕುರಿಗಳನ್ನು ಸಮಾಧಾನಯಜ್ಞವಾಗಿ ಅರ್ಪಿಸಿದನು. ಅವನು ನಿನ್ನ ಇತರ ಗಂಡುಮಕ್ಕಳನ್ನು, ಸೇನಾಧಿಪತಿಗಳನ್ನು ಮತ್ತು ಯಾಜಕನಾದ ಎಬ್ಯಾತಾರನನ್ನು ಆಹ್ವಾನಿಸಿದ್ದನು. ಅವರು ಈಗ ಅವನೊಡನೆ ತಿನ್ನುತ್ತಾ ಕುಡಿಯುತ್ತಾ ಇದ್ದಾರೆ. ‘ರಾಜನಾದ ಅದೋನೀಯನು ಚಿರಾಯುವಾಗಿರಲಿ’ ಎಂದು ಅವರು ಹೇಳುತ್ತಿದ್ದಾರೆ. 26 ಆದರೆ ಅವನು ನನ್ನನ್ನಾಗಲಿ ಯಾಜಕನಾದ ಚಾದೋಕನನ್ನಾಗಲಿ ಯೆಹೋಯಾದಾವನ ಮಗನಾದ ಬೆನಾಯನನ್ನಾಗಲಿ ನಿನ್ನ ಮಗನಾದ ಸೊಲೊಮೋನನನ್ನಾಗಲಿ ಆಹ್ವಾನಿಸಲಿಲ್ಲ. 27 ನನ್ನ ಒಡೆಯನಾದ ರಾಜನೇ, ನಮಗೆ ಹೇಳದೆ ಇದನ್ನು ಮಾಡಿದೆಯಾ? ದಯವಿಟ್ಟು ಹೇಳು, ನಿನ್ನ ನಂತರ ರಾಜನಾಗುವವನು ಯಾರು?” ಎಂದು ಕೇಳಿದನು.

28 ಆಗ ರಾಜನಾದ ದಾವೀದನು, “ಒಳಗೆ ಬರಲು ಬತ್ಷೆಬೆಳಿಗೆ ಹೇಳಿ!” ಎಂದು ಹೇಳಿದನು. ಬತ್ಷೆಬೆಳು ರಾಜನ ಎದುರಿಗೆ ಬಂದಳು.

29 ಆಗ ರಾಜನು ಈ ಪ್ರಮಾಣವನ್ನು ಮಾಡಿದನು: “ದೇವರಾದ ಯೆಹೋವನು ನನ್ನನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸಿದನು. ದೇವರಾಣೆಯಾಗಿಯೂ ನಾನು ನಿನಗೆ ಈ ಪ್ರಮಾಣವನ್ನು ಮಾಡುತ್ತೇನೆ. 30 ಅಂದು ನಾನು ನಿನಗೆ ಮಾಡಿದ ಪ್ರಮಾಣವನ್ನು ಇಂದು ಪೂರೈಸುತ್ತೇನೆ. ಇಸ್ರೇಲಿನ ದೇವರಾದ ಯೆಹೋವನ ಹೆಸರಿನಲ್ಲಿ ನಾನು ನಿನಗೆ ಆ ಪ್ರಮಾಣವನ್ನು ಮಾಡಿದ್ದೆನು. ನನ್ನ ನಂತರ ನಿನ್ನ ಮಗ ಸೊಲೊಮೋನನು ರಾಜನಾಗುವನೆಂದೂ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಾನು ನಿನಗೆ ಪ್ರಮಾಣ ಮಾಡಿದ್ದೆನು. ನಾನು ನನ್ನ ವಾಗ್ದಾನವನ್ನು ಈಡೇರಿಸುತ್ತೇನೆ” ಎಂದು ಹೇಳಿದನು.

31 ಆಗ ಬತ್ಷೆಬೆಳು ರಾಜನಿಗೆ ಸಾಷ್ಟಾಂಗನಮಸ್ಕಾರ ಮಾಡಿದಳು. ಅವಳು, “ರಾಜನಾದ ದಾವೀದನು ಚಿರಾಯುವಾಗಿರಲಿ!” ಎಂದು ಹೇಳಿದಳು.

ಸೊಲೊಮೋನನು ಹೊಸ ರಾಜನಾಗಿ ಆರಿಸಲ್ಪಟ್ಟದ್ದು

32 ಆಗ ರಾಜನಾದ ದಾವೀದನು, “ಯಾಜಕನಾದ ಚಾದೋಕನಿಗೆ, ಪ್ರವಾದಿಯಾದ ನಾತಾನನಿಗೆ ಮತ್ತು ಯೆಹೋಯಾದಾವನ ಮಗನಾದ ಬೆನಾಯನಿಗೆ ಇಲ್ಲಿಗೆ ಬರಲು ಹೇಳು” ಎಂದು ಹೇಳಿದನು. ಈ ಮೂವರು ರಾಜನ ಬಳಿಗೆ ಬಂದರು. 33 ಆಗ ರಾಜನು ಅವರಿಗೆ, “ನನ್ನ ಸೇವಕರನ್ನು ಕರೆದುಕೊಂಡು ನನ್ನ ಮಗನಾದ ಸೊಲೊಮೋನನನ್ನು ನನ್ನ ಸ್ವಂತ ಹೇಸರಕತ್ತೆಯ ಮೇಲೆ ಕುಳ್ಳಿರಿಸಿಕೊಂಡು ಗೀಹೋನ್ ಬುಗ್ಗೆಗೆ ಹೋಗಿರಿ. 34 ಅಲ್ಲಿ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಅವನನ್ನು ಇಸ್ರೇಲಿನ ನೂತನ ರಾಜನನ್ನಾಗಿ ಅಭಿಷೇಕಿಸಲಿ. ಅನಂತರ ತುತ್ತೂರಿಯನ್ನು ಊದಿರಿ; ಎಲ್ಲರೂ ‘ರಾಜನಾದ ಸೊಲೊಮೋನನು ಚಿರಂಜೀವಿಯಾಗಿರಲಿ’ ಎಂದು ಆರ್ಭಟಿಸಲಿ. 35 ನಂತರ ಅವನೊಂದಿಗೆ ಹಿಂದಿರುಗಿ ಇಲ್ಲಿಗೆ ಬನ್ನಿ. ಸೊಲೊಮೋನನು ನನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಹೊಸ ರಾಜನಾಗಿ ರಾಜ್ಯಭಾರ ಮಾಡಲಿ. ನಾನು ಸೊಲೊಮೋನನನ್ನು ಇಸ್ರೇಲಿನ ಮತ್ತು ಯೆಹೂದದ ರಾಜನನ್ನಾಗಿ ಆರಿಸಿದ್ದೇನೆ” ಎಂದು ಹೇಳಿದನು.

36 ಯೆಹೋಯಾದಾವನ ಮಗನಾದ ಬೆನಾಯನು, “ಆಮೆನ್, ನಿನ್ನ ದೇವರಾದ ಯೆಹೋವನು ಇದನ್ನು ಕಾರ್ಯಗತಗೊಳಿಸಲಿ. 37 ನನ್ನ ಒಡೆಯನಾದ ರಾಜನೇ, ನಿನಗೆ ಯಾವಾಗಲೂ ಸಹಾಯಮಾಡಿದ ಯೆಹೋವನು ಸೊಲೊಮೋನನಿಗೂ ಸಹಾಯ ಮಾಡಲಿ. ನಿನ್ನ ರಾಜ್ಯಕ್ಕಿಂತಲೂ ಸೊಲೊಮೋನನ ರಾಜ್ಯವು ಹೆಚ್ಚು ಬಲಿಷ್ಠವಾಗಲಿ.” ಎಂದು ಉತ್ತರಿಸಿದನು.

38 ಚಾದೋಕನು, ನಾತಾನನು, ಬೆನಾಯನು ಮತ್ತು ರಾಜನ ಅಧಿಕಾರಿಗಳು ರಾಜನಾದ ದಾವೀದನಿಗೆ ವಿಧೇಯರಾದರು. ಅವರು ಸೊಲೊಮೋನನನ್ನು ರಾಜನಾದ ದಾವೀದನ ಹೇಸರಕತ್ತೆಯ ಮೇಲೆ ಕುಳ್ಳಿರಿಸಿ, ಅವನೊಂದಿಗೆ ಗೀಹೋನಿಗೆ ಹೋದರು. 39 ಯಾಜಕನಾದ ಚಾದೋಕನು ಪವಿತ್ರಗುಡಾರದಿಂದ ಎಣ್ಣೆಯನ್ನು ತೆಗೆದುಕೊಂಡು ಬಂದನು. ಸೊಲೊಮೋನನು ರಾಜನೆಂದು ತೋರಿಸಲು ಅವನ ತಲೆಯ ಮೇಲೆ ಚಾದೋಕನು ಎಣ್ಣೆಯನ್ನು ಸುರಿದನು. ದಾವೀದನ ಜನರು ತುತ್ತೂರಿಯನ್ನು ಊದಿದರು. ಆಗ ಎಲ್ಲಾ ಜನರೂ, “ರಾಜನಾದ ಸೊಲೊಮೋನನು ಚಿರಂಜೀವಿಯಾಗಿರಲಿ” ಎಂದು ಆರ್ಭಟಿಸಿದರು. 40 ಜನರೆಲ್ಲರೂ ಸೊಲೊಮೋನನನ್ನು ಹಿಂಬಾಲಿಸುತ್ತಾ ನಗರಕ್ಕೆ ಬಂದರು. ಅವರು ಕೊಳಲುಗಳನ್ನು ಊದುತ್ತಾ ಸಂತಸದಿಂದ ಕೂಗಾಡುತ್ತಾ ಬಂದರು. ಅವರು ಮಾಡಿದ ಶಬ್ದವು ಭೂಮಿಯನ್ನೇ ನಡುಗಿಸುವಂತಿತ್ತು.

41 ಆ ಸಮಯಕ್ಕೆ ಅದೋನೀಯನು ಮತ್ತು ಅವನೊಂದಿಗಿದ್ದ ಅತಿಥಿಗಳು ಊಟವನ್ನು ಮುಗಿಸುತ್ತಿದ್ದರು. ಅವರಿಗೆ ತುತ್ತೂರಿಯ ಶಬ್ದವು ಕೇಳಿಸಿತು. ಯೋವಾಬನು, “ಆ ಶಬ್ದವು ಏನು? ನಗರದಲ್ಲಿ ಏನು ನಡೆಯುತ್ತಿದೆ?” ಎಂದು ಕೇಳಿದನು.

42 ಯೋವಾಬನು ಮಾತನಾಡುತ್ತಿದ್ದಂತೆ, ಯಾಜಕನಾದ ಎಬ್ಯಾತಾರನ ಮಗನಾದ ಯೋನಾತಾನನು ಅಲ್ಲಿಗೆ ಬಂದನು. ಅದೋನೀಯನು, “ಇಲ್ಲಿಗೆ ಬಾ! ನೀನು ಒಬ್ಬ ಒಳ್ಳೆಯ ಮನುಷ್ಯ. ಆದ್ದರಿಂದ ನೀನು ನನಗೆ ಶುಭ ಸಮಾಚಾರವನ್ನೇ ತಂದಿರುವೆ” ಎಂದು ಹೇಳಿದನು.

43 ಆದರೆ ಯೋನಾತಾನನು, “ಇಲ್ಲ! ಇದು ನಿನಗೆ ಶುಭ ಸಮಾಚಾರವಲ್ಲ! ನಮ್ಮ ರಾಜನಾದ ದಾವೀದನು ಸೊಲೊಮೋನನನ್ನು ನೂತನ ರಾಜನನ್ನಾಗಿ ಮಾಡಿದನು. 44 ರಾಜನಾದ ದಾವೀದನು ಯಾಜಕನಾದ ಚಾದೋಕನನ್ನು, ಪ್ರವಾದಿಯಾದ ನಾತಾನನನ್ನು, ಯೆಹೋಯಾದಾವನ ಮಗನಾದ ಬೆನಾಯನನ್ನು ಮತ್ತು ರಾಜನ ಎಲ್ಲಾ ಅಧಿಕಾರಿಗಳನ್ನು ಅವನೊಂದಿಗೆ ಕಳುಹಿಸಿದನು. ಅವರು ಸೊಲೊಮೋನನನ್ನು ರಾಜನ ಸ್ವಂತ ಹೇಸರಕತ್ತೆಯ ಮೇಲೆ ಕುಳ್ಳಿರಿಸಿದರು. 45 ನಂತರ ಯಾಜಕನಾದ ಚಾದೋಕನು ಮತ್ತು ಪ್ರವಾದಿಯಾದ ನಾತಾನನು ಗೀಹೋನ್ ಬುಗ್ಗೆಯ ಹತ್ತಿರ ಸೊಲೊಮೋನನನ್ನು ಅಭಿಷೇಕಿಸಿದರು. ಅನಂತರ ಅವರು ನಗರಕ್ಕೆ ಹೋದರು. ಅವರನ್ನು ಜನರು ಹಿಂಬಾಲಿಸಿದರು. ಈಗ ನಗರದ ಜನರು ತುಂಬಾ ಸಂತೋಷದಿಂದ ಇದ್ದಾರೆ. ಆ ಶಬ್ದವನ್ನೇ ನೀವು ಕೇಳುತ್ತಿರುವುದು. 46-47 ಸೊಲೊಮೋನನು ಈಗ ರಾಜನ ಸಿಂಹಾಸನದ ಮೇಲೆ ಕುಳಿತಿದ್ದಾನೆ. ರಾಜನಾದ ದಾವೀದನು ಒಳ್ಳೆಯ ಕಾರ್ಯಮಾಡಿದನೆಂದು ಹೇಳಲು ರಾಜನ ಸೇವಕರೆಲ್ಲರೂ ಬಂದಿದ್ದಾರೆ. ‘ನಿನ್ನ ದೇವರು ಸೊಲೊಮೋನನನ್ನು ನಿನಗಿಂತಲೂ ಪ್ರಖ್ಯಾತನನ್ನಾಗಿ ಮಾಡಲಿ. ದೇವರು ಸೊಲೊಮೋನನ ರಾಜ್ಯವನ್ನು ನಿನ್ನ ರಾಜ್ಯಕ್ಕಿಂತಲೂ ಹೆಚ್ಚು ಬಲಿಷ್ಠಗೊಳಿಸಲಿ. ಅವನು ನಿನಗಿಂತಲೂ ಉತ್ತಮನಾಗಲಿ!’ ಎಂದು ಅವರು ಹೇಳುತ್ತಿದ್ದಾರೆ. ರಾಜನಾದ ದಾವೀದನೂ ಅಲ್ಲಿದ್ದನು. ಅವನು ತನ್ನ ಹಾಸಿಗೆಯಲ್ಲಿ ತಲೆಬಾಗಿಸಿಕೊಂಡು, 48 ‘ನಾನು ಕಣ್ಣಾರೆ ಕಾಣುವಂತೆ ನನ್ನ ಮಕ್ಕಳಲ್ಲಿ ಒಬ್ಬನನ್ನು ಇಂದು ಸಿಂಹಾಸನದ ಮೇಲೆ ಕುಳ್ಳಿರಿಸಿದ ಇಸ್ರೇಲಿನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ’ ಎಂದು ಹೇಳಿದ್ದಾನೆ” ಎಂದನು.

49 ಆಗ ಅದೋನೀಯನ ಅತಿಥಿಗಳೆಲ್ಲರೂ ಭಯಗೊಂಡು ಓಡಿಹೋದರು. 50 ಅದೋನೀಯನೂ ಹೆದರಿಕೊಂಡು ಯಜ್ಞವೇದಿಕೆಯ ಬಳಿಗೆ ಹೋಗಿ, ಯಜ್ಞವೇದಿಕೆಯ ಕೊಂಬುಗಳನ್ನು ಹಿಡಿದುಕೊಂಡನು.[a] 51 ಆಗ ಯಾರೋ ಒಬ್ಬರು ಸೊಲೊಮೋನನಿಗೆ, “ಅದೋನೀಯನು ನಿನಗೆ ಬಹಳವಾಗಿ ಹೆದರಿಕೊಂಡು ಪವಿತ್ರಗುಡಾರದ ಯಜ್ಞವೇದಿಕೆಯ ಬಳಿಗೆ ಹೋಗಿ ಯಜ್ಞವೇದಿಕೆಯ ಕೊಂಬುಗಳನ್ನು ಬಿಡದೆ ಹಿಡಿದುಕೊಂಡೇ ಇದ್ದಾನೆ, ‘ನನ್ನನ್ನು ಕೊಲ್ಲುವುದಿಲ್ಲವೆಂದು ಪ್ರಮಾಣ ಮಾಡುವಂತೆ ರಾಜನಾದ ಸೊಲೊಮೋನನಿಗೆ ತಿಳಿಸಿ’ ಎಂಬುದಾಗಿ ಅದೋನೀಯನು ಕೇಳಿಕೊಳ್ಳುತ್ತಿದ್ದಾನೆ” ಎಂದು ಹೇಳಿದನು.

52 ಆದ್ದರಿಂದ ಸೊಲೊಮೋನನು, “ಅದೋನೀಯನು ತಾನು ಒಳ್ಳೆಯ ಮನುಷ್ಯನೆಂದು ನಿರೂಪಿಸಿದರೆ ಅವನ ತಲೆಯ ಒಂದು ಕೂದಲಿಗೂ ತೊಂದರೆಯಾಗುವುದಿಲ್ಲವೆಂದು ನಾನು ಪ್ರಮಾಣ ಮಾಡುತ್ತೇನೆ. ಆದರೆ ಅವನೇನಾದರೂ ಕೇಡನ್ನು ಮಾಡಿದರೆ ಸಾಯುವನು” ಎಂದು ಹೇಳಿದನು. 53 ರಾಜನಾದ ಸೊಲೊಮೋನನು ಅದೋನೀಯನನ್ನು ಕರೆತರಲು ಕೆಲವು ಜನರನ್ನು ಕಳುಹಿಸಿದನು. ಅವರು ಅದೋನೀಯನನ್ನು ರಾಜನಾದ ಸೊಲೊಮೋನನ ಬಳಿಗೆ ಕರೆದುತಂದರು. ಅದೋನೀಯನು ರಾಜನಾದ ಸೊಲೊಮೋನನ ಬಳಿಗೆ ಬಂದು, ಸಾಷ್ಟಾಂಗನಮಸ್ಕಾರ ಮಾಡಿದನು. ಸೊಲೊಮೋನನು ಅವನಿಗೆ, “ಮನೆಗೆ ಹೋಗು” ಎಂದನು.

ದಾವೀದ ರಾಜನ ಮರಣ

ದಾವೀದನು ಸಾಯುವ ಕಾಲವು ಹತ್ತಿರವಾಯಿತು. ಆದ್ದರಿಂದ ದಾವೀದನು ಸೊಲೊಮೋನನೊಂದಿಗೆ ಮಾತನಾಡುತ್ತಾ, ಅವನಿಗೆ, “ಎಲ್ಲರಂತೆ ನನಗೂ ಸಾಯುವ ಕಾಲ ಸಮೀಪಿಸಿತು. ನೀನಾದರೋ ಬಲಿಷ್ಠನಾಗಿರು; ಧೈರ್ಯವಂತನಾಗಿರು. ನಿನ್ನ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ಎಚ್ಚರಿಕೆಯಿಂದ ಅನುಸರಿಸು. ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಆಜ್ಞೆಗಳಿಗೂ ಕಟ್ಟಳೆಗಳಿಗೂ ನಿರ್ಣಯಗಳಿಗೂ ಒಡಂಬಡಿಕೆಗಳಿಗೂ ವಿಧೇಯನಾಗಿರು. ಆಗ ನೀನು ನಿನ್ನ ಎಲ್ಲ ಕೆಲಸಕಾರ್ಯಗಳಲ್ಲೂ ನೀನು ಹೋಗುವ ಎಲ್ಲಾ ಕಡೆಗಳಲ್ಲೂ ಯಶಸ್ಸನ್ನು ಗಳಿಸುವೆ. ನೀನು ಯೆಹೋವನಿಗೆ ವಿಧೇಯನಾದರೆ, ಆಗ ಯೆಹೋವನು ನನಗೆ ಮಾಡಿದ ವಾಗ್ದಾನವನ್ನು ಈಡೇರಿಸುವನು. ಯೆಹೋವನು ನನಗೆ ಈ ರೀತಿ ವಾಗ್ದಾನ ಮಾಡಿರುವನು: ‘ನಿನ್ನ ಮಕ್ಕಳು ನಂಬಿಗಸ್ತರಾಗಿ ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ನನ್ನ ಆಜ್ಞೆಗಳಿಗೆ ವಿಧೇಯರಾಗಿ ಜೀವಿಸುವುದಾಗಿದ್ದರೆ, ನಿನ್ನ ವಂಶದವರಲ್ಲಿ ಒಬ್ಬನು ಯಾವಾಗಲೂ ಇಸ್ರೇಲಿನ ಜನರನ್ನು ಆಳುವವನಾಗಿರುತ್ತಾನೆ.’”

“ಚೆರೂಯಳ ಮಗನಾದ ಯೋವಾಬನು ನನಗೆ ಮಾಡಿದ್ದನ್ನು ಸಹ ನೀನು ಜ್ಞಾಪಿಸಿಕೊ. ಇಸ್ರೇಲಿನ ಇಬ್ಬರು ಸೇನಾಧಿಪತಿಗಳನ್ನು ಅವನು ಕೊಂದುಹಾಕಿದನು. ಅವರು ಯಾರೆಂದರೆ: ನೇರನ ಮಗನಾದ ಅಬ್ನೇರನು ಮತ್ತು ಯೆತೆರನ ಮಗನಾದ ಅಮಾಸನು. ಈ ಜನರ ರಕ್ತವು ಅವನ ಸೊಂಟಪಟ್ಟಿಯ ಕತ್ತಿ ಹಾಗೂ ಯುದ್ಧಕಾಲದಲ್ಲಿ ತೊಡುವ ಪಾದರಕ್ಷೆಗಳ ಮೇಲೆ ಚಿಮ್ಮಿತು. ಶಾಂತಿಯ ಕಾಲದಲ್ಲಿ ಅವನು ಅವರನ್ನು ಕೊಂದುಹಾಕಿದನು. ಆದ್ದರಿಂದ ನಾನು ಅವನನ್ನು ದಂಡಿಸಬೇಕಾಗಿತ್ತು. ಆದರೆ ಈಗ ನೀನು ರಾಜನಾಗಿರುವೆ. ಆದ್ದರಿಂದ ನಿನ್ನ ಜ್ಞಾನಕ್ಕೆ ಸರಿತೋಚಿದ ರೀತಿಯಲ್ಲಿ ನೀನು ಅವನನ್ನು ದಂಡಿಸು. ಆದರೆ ನೀನು ಅವನನ್ನು ಖಂಡಿತವಾಗಿ ಕೊಲ್ಲಲೇಬೇಕು. ಅವನು ಮುದಿತನದಲ್ಲಿ ಸಮಾಧಾನದಿಂದ ಸಾಯಲು ಬಿಡಬೇಡ!”

“ಗಿಲ್ಯಾದಿನವನಾದ ಬರ್ಜಿಲ್ಲ್ಯೆಯನ ಮಕ್ಕಳಿಗೆ ದಯೆಯನ್ನು ತೋರು. ಅವರು ನಿನಗೆ ಸ್ನೇಹಿತರಾಗಿರಲು ಮತ್ತು ನಿನ್ನ ಪಂಕ್ತಿಯಲ್ಲಿ ಊಟಮಾಡಲು ಅವಕಾಶ ಮಾಡು. ನಾನು ನಿನ್ನ ಸೋದರನಾದ ಅಬ್ಷಾಲೋಮನಿಂದ ಓಡಿಹೋದಾಗ ಅವರು ನನಗೆ ಸಹಾಯ ಮಾಡಿದರು.

“ಗೇರನ ಮಗನಾದ ಶಿಮ್ಮಿಯು ನಿನ್ನೊಡನೆ ಇಲ್ಲಿದ್ದಾನೆಂಬುದನ್ನು ಜ್ಞಾಪಿಸಿಕೊ. ಅವನು ಬಹುರೀಮಿನ ಬೆನ್ಯಾಮೀನ್ ಕುಲದವನು. ನಾನು ಮಹನಯಿಮಿಗೆ ಓಡಿಹೋದ ಆ ದಿನದಂದು ಅವನು ನನ್ನ ವಿರುದ್ಧವಾಗಿ ಬಹಳವಾಗಿ ಶಪಿಸಿದ್ದನ್ನು ಜ್ಞಾಪಿಸಿಕೊ. ನಂತರ ಅವನು ನನ್ನನ್ನು ಜೋರ್ಡನ್ ನದಿಯ ಹತ್ತಿರ ಭೇಟಿಮಾಡಲು ಬಂದನು. ಆದರೆ ನಾನು ಯೆಹೋವನ ಸನ್ನಿಧಿಯಲ್ಲಿ, ‘ಶಿಮ್ಮಿ ನಾನು ನಿನ್ನನ್ನು ಕೊಲ್ಲುವುದಿಲ್ಲ’ ಎಂದು ವಾಗ್ದಾನ ಮಾಡಿದೆನು. ಅವನನ್ನು ದಂಡಿಸದೆ ಬಿಡಬೇಡ. ನೀನು ಬುದ್ಧಿವಂತ! ಅವನಿಗೆ ಏನು ಮಾಡಬೇಕೆಂಬುದು ನಿನಗೆ ತಿಳಿದಿದೆ. ಆದರೆ ಅವನು ಮುದಿತನದಲ್ಲಿ ಸಮಾಧಾನದಿಂದ ಸಾಯಲು ಬಿಡಬೇಡ” ಎಂದು ಹೇಳಿದನು.

10 ನಂತರ ದಾವೀದನು ತೀರಿಕೊಂಡನು. ಅವನನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು. 11 ದಾವೀದನು ಇಸ್ರೇಲನ್ನು ನಲವತ್ತು ವರ್ಷಗಳ ಕಾಲ ಆಳಿದನು. ಅವನು ಏಳು ವರ್ಷ ಹೆಬ್ರೋನಿನಲ್ಲೂ ಮೂವತ್ತಮೂರು ವರ್ಷ ಜೆರುಸಲೇಮಿನಲ್ಲೂ ಆಡಳಿತ ನಡೆಸಿದನು.

ಸೊಲೊಮೋನ ಮತ್ತು ಅದೋನೀಯ

12 ಈಗ ಸೊಲೊಮೋನನು ತನ್ನ ತಂದೆಯ ಸಿಂಹಾಸನದ ಮೇಲೆ ಕುಳಿತು ಆಡಳಿತ ನಡೆಸತೊಡಗಿದನು. ರಾಜ್ಯವು ಅವನ ಪೂರ್ಣ ಹತೋಟಿಯಲ್ಲಿ ಇತ್ತು.

13 ಆ ಸಮಯದಲ್ಲಿ ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಳ ಹತ್ತಿರಕ್ಕೆ ಹೋದನು. ಬತ್ಷೆಬೆಳು, “ನೀನು ಸಮಾಧಾನದಿಂದ ಬಂದೆಯಾ?” ಎಂದು ಅವನನ್ನು ಕೇಳಿದಳು.

ಅದೋನೀಯನು, “ಹೌದು, ಇದು ಸಮಾಧಾನದ ಭೇಟಿಯಾಗಿದೆ. 14 ನಾನು ನಿನಗೆ ಒಂದು ವಿಷಯವನ್ನು ಹೇಳಬೇಕಾಗಿದೆ” ಎಂದು ಉತ್ತರಿಸಿದನು.

“ಹಾಗಾದರೆ ಹೇಳು” ಎಂದು ಬತ್ಷೆಬೆಳು ಹೇಳಿದಳು.

15 ಅದೋನೀಯನು, “ಒಂದು ಕಾಲದಲ್ಲಿ ರಾಜ್ಯಾಧಿಕಾರವು ನನ್ನದಾಗಿತ್ತೆಂಬುದು ನಿನ್ನ ನೆನಪಿನಲ್ಲಿದೆ. ಇಸ್ರೇಲಿನ ಜನರೆಲ್ಲರೂ ನಾನೇ ಅವರ ರಾಜನೆಂದು ತಿಳಿದಿದ್ದರು. ಆದರೆ ಸಂಗತಿಗಳು ಬದಲಾದವು. ಈಗ ನನ್ನ ಸೋದರನೇ ರಾಜನು. ಯೆಹೋವನು ಅವನನ್ನು ರಾಜನನ್ನಾಗಿ ಆರಿಸಿದನು. 16 ಆದ್ದರಿಂದ ಈಗ ನನ್ನಲ್ಲಿ ಒಂದು ಕೋರಿಕೆಯಿದೆ, ಅದನ್ನು ನೀನು ನಿರಾಕರಿಸಬೇಡ” ಎಂದನು.

ಬತ್ಷೆಬೆಳು, “ನಿನಗೇನು ಬೇಕಾಗಿದೆ?” ಎಂದು ಕೇಳಿದಳು.

17 ಅದೋನೀಯನು, “ರಾಜನಾದ ಸೊಲೊಮೋನನು ನೀನು ಏನನ್ನು ಕೇಳಿದರೂ ಮಾಡುತ್ತಾನೆಂಬುದು ನನಗೆ ತಿಳಿದಿದೆ. ಆದ್ದರಿಂದ, ಶೂನೇಮಿನ ಅಬೀಷಗ್ ಎಂಬ ಸ್ತ್ರೀಯನ್ನು ನನಗೆ ಕೊಡುವಂತೆ ದಯಮಾಡಿ ನೀನು ಅವನನ್ನು ಕೇಳು. ನಾನು ಅವಳನ್ನು ಮದುವೆಯಾಗುತ್ತೇನೆ” ಎಂದು ಹೇಳಿದನು.

18 ಆಗ ಬತ್ಷೆಬೆಳು, “ಒಳ್ಳೆಯದು, ನಾನು ನಿನಗಾಗಿ ರಾಜನೊಂದಿಗೆ ಮಾತನಾಡುತ್ತೇನೆ” ಎಂದು ಹೇಳಿದಳು.

19 ಬತ್ಷೆಬೆಳು ರಾಜನಾದ ಸೊಲೊಮೋನನೊಂದಿಗೆ ಮಾತನಾಡಲು ಹೋದಳು. ಸೊಲೊಮೋನನು ಆಕೆಯನ್ನು ಕಂಡು ಎದ್ದುನಿಂತು ಅವಳಿಗೆ ಬಾಗಿ ನಮಸ್ಕರಿಸಿ, ಸಿಂಹಾಸನದ ಮೇಲೆ ಕುಳಿತನು. ಅವನು ತನ್ನ ತಾಯಿಗಾಗಿ ಮತ್ತೊಂದು ಸಿಂಹಾಸನವನ್ನು ತರಲು ಕೆಲವು ಸೇವಕರಿಗೆ ಹೇಳಿದನು. ನಂತರ ಅವಳು ಅವನ ಬಲಗಡೆಯಲ್ಲಿ ಕುಳಿತಳು.

20 ಬತ್ಷೆಬೆಳು ಅವನಿಗೆ, “ನಿನ್ನಲ್ಲಿ ಒಂದು ಸಣ್ಣ ಕೋರಿಕೆಯಿದೆ, ಅದನ್ನು ದಯವಿಟ್ಟು ನಿರಾಕರಿಸದಿರು” ಎಂದು ಕೇಳಿದಳು.

ರಾಜನು, “ನನ್ನ ತಾಯಿಯೇ, ನಿನ್ನ ಕೋರಿಕೆಯೇನು? ನಾನು ನಿನ್ನ ಕೋರಿಕೆಯನ್ನು ನಿರಾಕರಿಸುವುದಿಲ್ಲ” ಎಂದು ಉತ್ತರಿಸಿದನು.

21 ಆದ್ದರಿಂದ ಬತ್ಷೆಬೆಳು, “ಶೂನೇಮಿನ ಸ್ತ್ರೀಯಾದ ಅಬೀಷಗಳು ನಿನ್ನ ಸೋದರನಾದ ಅದೋನೀಯನನ್ನು ಮದುವೆಯಾಗಲಿ” ಎಂದಳು.

22 ರಾಜನಾದ ಸೊಲೊಮೋನನು ತನ್ನ ತಾಯಿಗೆ, “ಅಬೀಷಗಳನ್ನು ಅವನಿಗೆ ಕೊಡು ಎಂಬುದಾಗಿ ನೀನೇಕೆ ನನ್ನನ್ನು ಕೇಳುತ್ತಿರುವೆ? ಅವನು ನನ್ನ ಹಿರಿಯಣ್ಣನಾಗಿರುವುದರಿಂದ ಅವನನ್ನೇ ರಾಜನನ್ನಾಗಿ ಮಾಡೆಂದು ನೀನು ಕೇಳದಿರುವುದೇಕೆ? ಯಾಜಕನಾದ ಎಬ್ಯಾತಾರನೂ ಯೋವಾಬನೂ ಅವನಿಗೆ ಬೆಂಬಲವನ್ನು ನೀಡಿದರು!” ಎಂದು ಉತ್ತರಿಸಿದನು.

23 ಆಗ ಸೊಲೊಮೋನನು, “ಯೆಹೋವನಾಣೆ, ಅದೋನೀಯನು ಈ ರೀತಿ ನನ್ನನ್ನು ಕೇಳಿದ್ದಕ್ಕಾಗಿ ಅವನು ತನ್ನ ಜೀವವನ್ನೇ ಬೆಲೆಯಾಗಿ ತೆರಬೇಕಾಗುವುದು! 24 ಯೆಹೋವನು ನನ್ನನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದನು. ನನ್ನ ತಂದೆಯಾದ ದಾವೀದನ ಸಿಂಹಾಸನವನ್ನು ಆತನು ನನಗೆ ದಯಪಾಲಿಸಿದನು. ಯೆಹೋವನು ತನ್ನ ವಾಗ್ದಾನದಂತೆ, ನನಗೆ ಮತ್ತು ನನ್ನ ವಂಶಿಕರಿಗೆ ರಾಜ್ಯಾಧಿಕಾರವನ್ನು ನೀಡಿದನು. ಅದೋನೀಯನು ಈ ದಿನವೇ ಸಾಯಬೇಕು ಎಂದು ನಾನು ಈ ಎಲ್ಲಾ ಕಾರ್ಯಗಳನ್ನು ನೆರವೇರಿಸಿದ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡುತ್ತೇನೆ” ಎಂದು ಹೇಳಿದನು.

25 ರಾಜನಾದ ಸೊಲೊಮೋನನು ಬೆನಾಯನಿಗೆ ಆಜ್ಞಾಪಿಸಿದನು. ಬೆನಾಯನು ಹೋಗಿ ಅದೋನೀಯನನ್ನು ಕೊಂದುಹಾಕಿದನು.

26 ಆಗ ರಾಜನಾದ ಸೊಲೊಮೋನನು ಯಾಜಕನಾದ ಎಬ್ಯಾತಾರನಿಗೆ, “ನಾನು ನಿನ್ನನ್ನು ಕೊಲ್ಲಲೇಬೇಕು. ಆದರೆ ಅಣತೋತಿನಲ್ಲಿರುವ ನಿನ್ನ ಮನೆಗೆ ಹಿಂತಿರುಗಿ ಹೋಗಲು ನಿನಗೆ ಅವಕಾಶ ಕೊಡುತ್ತೇನೆ. ನಾನು ನಿನ್ನನ್ನು ಕೊಲ್ಲುವುದಿಲ್ಲ ಏಕೆಂದರೆ ನನ್ನ ತಂದೆಯಾದ ದಾವೀದನೊಂದಿಗೆ ನಡೆಯುವಾಗ ಯೆಹೋವನ ಪವಿತ್ರಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ನೀನು ಸಹಾಯ ಮಾಡಿದೆ. ನನ್ನ ತಂದೆಯ ಕಷ್ಟದ ದಿನಗಳಲ್ಲೆಲ್ಲಾ ನೀನೂ ಅವನ ಕಷ್ಟಗಳಲ್ಲಿ ಪಾಲುಗಾರನಾಗಿದ್ದದ್ದು ನನಗೆ ತಿಳಿದಿದೆ” ಎಂದು ಹೇಳಿದನು. 27 ಸೊಲೊಮೋನನು ಎಬ್ಯಾತಾರನಿಗೆ, “ನಾನು ನಿನ್ನನ್ನು ಯೆಹೋವನ ಯಾಜಕನಾಗಿ ಸೇವೆಯಲ್ಲಿ ಮುಂದುವರಿಸುವುದಿಲ್ಲ” ಎಂದು ಹೇಳಿದನು. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು. ಇದು ಶೀಲೋವಿನಲ್ಲಿ ದೇವರು ಯಾಜಕನಾದ ಏಲಿಗೂ ಅವನ ಕುಟುಂಬದವರಿಗೂ ಹೇಳಿದಂತೆಯೇ ಆಯಿತು. ಎಬ್ಯಾತಾರನು ಏಲಿಯ ಗೋತ್ರದವನು.[b]

28 ಯೋವಾಬನು ಈ ಸಂಗತಿಯನ್ನು ಕೇಳಿ ಹೆದರಿದನು. (ಅವನು ಅಬ್ಷಾಲೋಮನಿಗೆ ಬೆಂಬಲ ನೀಡಿಲ್ಲದಿದ್ದರೂ ಅದೋನೀಯನಿಗೆ ಬೆಂಬಲ ನೀಡಿದ್ದನು.) ಯೋವಾಬನು ಯೆಹೋವನ ಗುಡಾರಕ್ಕೆ ಓಡಿಹೋಗಿ ಯಜ್ಞವೇದಿಕೆಯ ಕೊಂಬುಗಳನ್ನು ಹಿಡಿದುಕೊಂಡನು. 29 ಯೋವಾಬನು ಯೆಹೋವನ ಗುಡಾರದಲ್ಲಿ ಯಜ್ಞವೇದಿಕೆಯ ಹತ್ತಿರ ಇದ್ದಾನೆಂದು ಯಾರೋ ಒಬ್ಬನು ರಾಜನಾದ ಸೊಲೊಮೋನನಿಗೆ ತಿಳಿಸಿದನು. ಆದ್ದರಿಂದ ಸೊಲೊಮೋನನು ಬೆನಾಯನಿಗೆ, ಹೋಗಿ ಅವನನ್ನು ಕೊಂದುಬಿಡುವಂತೆ ಆಜ್ಞಾಪಿಸಿದನು.

30 ಬೆನಾಯನು ಯೆಹೋವನ ಗುಡಾರದೊಳಕ್ಕೆ ಹೋಗಿ ಯೋವಾಬನಿಗೆ, “ರಾಜನ ಆಜ್ಞೆಯಂತೆ ‘ಹೊರಗೆ ಬಾ!’” ಎಂದು ಹೇಳಿದನು.

ಆದರೆ ಯೋವಾಬನು, “ಇಲ್ಲ, ನಾನಿಲ್ಲೇ ಸಾಯುತ್ತೇನೆ” ಎಂದನು.

ಆದ್ದರಿಂದ ಬೆನಾಯನು ರಾಜನ ಬಳಿಗೆ ಹಿಂದಿರುಗಿ ಯೋವಾಬನು ಹೇಳಿದ್ದನ್ನು ತಿಳಿಸಿದನು. 31 ಆಗ ರಾಜನು ಬೆನಾಯನಿಗೆ, “ಅವನು ಹೇಳಿದಂತೆ ಮಾಡು! ಅವನನ್ನು ಅಲ್ಲಿಯೇ ಕೊಂದುಬಿಡು. ನಂತರ ಅವನನ್ನು ಸಮಾಧಿ ಮಾಡು. ಆಗ ನನ್ನ ಕುಟುಂಬದವರು ಮತ್ತು ನಾನು ಯೋವಾಬನ ದೋಷದಿಂದ ಮುಕ್ತರಾಗುವೆವು. ಮುಗ್ಧ ಜನರು ಯೋವಾಬನಿಂದ ಕೊಲ್ಲಲ್ಪಟ್ಟ ಕಾರಣ ಈ ದೋಷವುಂಟಾಯಿತು. 32 ಯೋವಾಬನು ತನಗಿಂತಲೂ ಬಹಳಷ್ಟು ಉತ್ತಮರಾದ ಇಬ್ಬರನ್ನು ಕೊಂದುಹಾಕಿದನು. ಅವರು ಯಾರೆಂದರೆ, ನೇರನ ಮಗನಾದ ಅಬ್ನೇರ ಮತ್ತು ಯೆತೆರನ ಮಗನಾದ ಅಮಾಸ. ಅಬ್ನೇರನು ಇಸ್ರೇಲಿನ ಸೇನಾಧಿಪತಿಯಾಗಿದ್ದನು; ಅಮಾಸನು ಯೆಹೂದದ ಸೇನಾಧಿಪತಿಯಾಗಿದ್ದನು. ಯೋವಾಬನು ಅವರನ್ನು ಕೊಂದನೆಂಬುದು ಆ ಸಮಯದಲ್ಲಿ ನನ್ನ ತಂದೆಯಾದ ದಾವೀದನಿಗೆ ತಿಳಿಯಲಿಲ್ಲ. ಯೋವಾಬನು ಅವರನ್ನು ಕೊಂದದ್ದರಿಂದ ಯೆಹೋವನು ಅವನನ್ನು ದಂಡಿಸುತ್ತಾನೆ. 33 ಅವರನ್ನು ಕೊಂದ ಅಪರಾಧವು ಯೋವಾಬನ ಮೇಲೆಯೂ ಅವನ ಕುಟುಂಬದ ಮೇಲೆಯೂ ಶಾಶ್ವತವಾಗಿರಲಿ. ಆದರೆ ದಾವೀದನನ್ನೂ ಅವನ ಸಂತತಿಯವರನ್ನೂ ಅವನ ಸಿಂಹಾಸನವನ್ನೂ ಯೆಹೋವನು ಶಾಶ್ವತವಾಗಿ ಆಶೀರ್ವದಿಸಲಿ” ಎಂದು ಹೇಳಿದನು.

34 ಆದ್ದರಿಂದ ಯೆಹೋಯಾದಾವನ ಮಗನಾದ ಬೆನಾಯನು ಯೋವಾಬನನ್ನು ಕೊಂದನು. ಯೋವಾಬನನ್ನು ಅರಣ್ಯದಲ್ಲಿನ ಅವನ ಮನೆಯ ಸಮೀಪದಲ್ಲೇ ಸಮಾಧಿ ಮಾಡಿದರು. 35 ಆಗ ಯೆಹೋಯಾದಾವನ ಮಗನಾದ ಬೆನಾಯನನ್ನು ಯೋವಾಬನ ಸ್ಥಾನದಲ್ಲಿ ಸೇನಾಧಿಪತಿಯನ್ನಾಗಿ ಸೊಲೊಮೋನನು ನೇಮಿಸಿದನು. ಎಬ್ಯಾತಾರನ ಸ್ಥಾನದಲ್ಲಿ ಚಾದೋಕನನ್ನು ನೂತನ ಪ್ರಧಾನಯಾಜಕನನ್ನಾಗಿ ನೇಮಿಸಿದನು. 36 ನಂತರ ರಾಜನು ಶಿಮ್ಮಿಯನ್ನು ಕರೆತರಲು ಕಳುಹಿಸಿದನು. ರಾಜನು ಅವನಿಗೆ, “ಜೆರುಸಲೇಮಿನಲ್ಲಿ ನಿನಗಾಗಿ ಒಂದು ಮನೆಯನ್ನು ನಿರ್ಮಿಸು. ಆ ಮನೆಯಲ್ಲಿ ವಾಸಮಾಡು, ನಗರವನ್ನು ಬಿಟ್ಟುಹೋಗದಿರು. 37 ನೀನು ನಗರವನ್ನು ಬಿಟ್ಟು ಕಿದ್ರೋನ್ ಹೊಳೆಯ ಹಿಂದಕ್ಕೆ ಹೋದರೆ, ನಿನ್ನನ್ನು ಕೊಲ್ಲಲಾಗುವುದು. ಅದು ನಿನ್ನ ಸ್ವಂತ ತಪ್ಪಾಗುವುದು” ಎಂದು ಹೇಳಿದನು.

38 ಅದಕ್ಕೆ ಶಿಮ್ಮಿಯು, “ನನ್ನ ರಾಜನೇ, ನೀನು ಹೇಳಿದಂತೆಯೇ ಆಗಲಿ. ನಾನು ನಿನಗೆ ವಿಧೇಯನಾಗಿರುವೆನು” ಎಂದು ಉತ್ತರಿಸಿದನು. ಹೀಗೆ ಶಿಮ್ಮಿಯು ಬಹು ದಿನಗಳವರೆಗೆ ಜೆರುಸಲೇಮಿನಲ್ಲಿ ವಾಸವಾಗಿದ್ದನು. 39 ಆದರೆ ಮೂರು ವರ್ಷಗಳ ತರುವಾಯ, ಶಿಮ್ಮಿಯ ಇಬ್ಬರು ಗುಲಾಮರು ಗತ್ ನಗರದ ರಾಜನ ಬಳಿಗೆ ಓಡಿಹೋದರು. ಆ ರಾಜನ ಹೆಸರು: ಮಾಕನ ಮಗನಾದ ಆಕೀಷ. ತನ್ನ ಗುಲಾಮರು ಗತ್ ನಗರದಲ್ಲಿರುವುದು ಶಿಮ್ಮಿಗೆ ತಿಳಿಯಿತು. 40 ಆದ್ದರಿಂದ ಶಿಮ್ಮಿಯು ತಡಿಯನ್ನು ತನ್ನ ಕತ್ತೆಯ ಮೇಲೆ ಹಾಕಿಕೊಂಡು, ಗತ್‌ನ ರಾಜನಾದ ಆಕೀಷನ ಬಳಿಗೆ ಹೋದನು. ಅವನು ತನ್ನ ಗುಲಾಮರನ್ನು ಅಲ್ಲಿ ಕಂಡುಹಿಡಿದು ತನ್ನ ಮನೆಗೆ ಮತ್ತೆ ಕರೆದುಕೊಂಡು ಬಂದನು.

41 ಆದರೆ ಶಿಮ್ಮಿಯು ಜೆರುಸಲೇಮಿನಿಂದ ಗತ್‌ಗೆ ಹೋಗಿ ಹಿಂದಿರುಗಿ ಬಂದುದ್ದನ್ನು ಯಾರೋ ಒಬ್ಬರು ಸೊಲೊಮೋನನಿಗೆ ತಿಳಿಸಿದರು. 42 ಸೊಲೊಮೋನನು ಶಿಮ್ಮಿಯನ್ನು ಕರೆಯಿಸಿ, “ನೀನು ಜೆರುಸಲೇಮನ್ನು ಬಿಟ್ಟುಹೋದರೆ ಮರಣಶಿಕ್ಷೆಯಾಗುವುದೆಂದು ನಾನು ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದ್ದೆನು. ನೀನು ಬೇರೆಲ್ಲಾದರೂ ಹೋದರೆ ಅದು ನಿನ್ನ ಸ್ವಂತ ತಪ್ಪಾಗುವುದೆಂದೂ ನಿನ್ನನ್ನು ಕೊಲ್ಲಲಾಗುವುದೆಂದೂ ನಾನು ನಿನ್ನನ್ನು ಎಚ್ಚರಿಸಿದ್ದೆನು. ಅದಕ್ಕೆ ನೀನೂ ಒಪ್ಪಿಗೆ ನೀಡಿ ನನಗೆ ವಿಧೇಯನಾಗಿರುವುದಾಗಿ ತಿಳಿಸಿದ್ದೆ. 43 ನೀನು ದೇವರಿಗೆ ಮಾಡಿದ ಪ್ರಮಾಣವನ್ನು ಯಾಕೆ ಕೈಕೊಳ್ಳಲಿಲ್ಲ? ನೀನು ನನ್ನ ಆಜ್ಞೆಗೆ ಯಾಕೆ ವಿಧೇಯನಾಗಲಿಲ್ಲ? 44 ನೀನು ನನ್ನ ತಂದೆಯಾದ ದಾವೀದನಿಗೆ ವಿರುದ್ಧವಾಗಿ ಅನೇಕ ಕೆಟ್ಟಕಾರ್ಯಗಳನ್ನು ಮಾಡಿರುವೆ ಎಂಬುದು ನಿನಗೆ ತಿಳಿದಿದೆ. ಈಗ ನಿನ್ನ ಆ ಕೆಟ್ಟಕಾರ್ಯಗಳಿಗಾಗಿ ಯೆಹೋವನು ನಿನ್ನನ್ನು ದಂಡಿಸುತ್ತಾನೆ. 45 ಆದರೆ ಯೆಹೋವನು ನನ್ನನ್ನು ಆಶೀರ್ವದಿಸುತ್ತಾನೆ. ಆತನು ದಾವೀದನ ಸಿಂಹಾಸನವನ್ನು ಎಂದೆಂದಿಗೂ ಸಂರಕ್ಷಿಸುವನು” ಎಂದು ಹೇಳಿದನು.

46 ನಂತರ ರಾಜನು ಶಿಮ್ಮಿಯನ್ನು ಕೊಲ್ಲಲು ಬೆನಾಯನಿಗೆ ಆಜ್ಞಾಪಿಸಿದನು. ಅಂತೆಯೇ, ಬೆನಾಯನು ಅವನನ್ನು ಸಂಹರಿಸಿದನು. ಹೀಗೆ ಸೊಲೊಮೋನನ ರಾಜ್ಯಾಧಿಕಾರವು ಸ್ಥಿರವಾಯಿತು.

ಲೂಕ 19:28-48

ಜೆರುಸಲೇಮಿಗೆ ಯೇಸುವಿನ ಪ್ರವೇಶ

(ಮತ್ತಾಯ 21:1-11; ಮಾರ್ಕ 11:1-11; ಯೋಹಾನ 12:12-19)

28 ಯೇಸು ಈ ಸಂಗತಿಗಳನ್ನು ಹೇಳಿದ ನಂತರ ಜೆರುಸಲೇಮಿನ ಕಡೆಗೆ ಪ್ರಯಾಣ ಮುಂದುವರಿಸಿದನು. 29 ಯೇಸು ಬೇತ್ಛಗೆ ಮತ್ತು ಬೆಥಾನಿಯ ಎಂಬ ಊರುಗಳ ಸಮೀಪಕ್ಕೆ ಬಂದನು. ಈ ಊರುಗಳು ಆಲಿವ್ ಮರಗಳ ಬೆಟ್ಟ[a] ಎಂದು ಕರೆಯಲ್ಪಟ್ಟ ಗುಡ್ಡದ ಹತ್ತಿರವಿತ್ತು. ಯೇಸು ಇಬ್ಬರು ಶಿಷ್ಯರನ್ನು ಕರೆದು ಅವರಿಗೆ, 30 “ಅಲ್ಲಿ ಕಾಣುವ ಊರಿಗೆ ಹೋಗಿರಿ. ನೀವು ಆ ಊರನ್ನು ಪ್ರವೇಶಿಸಿದಾಗ ಕಟ್ಟಿಹಾಕಿರುವ ಒಂದು ಪ್ರಾಯದ ಕತ್ತೆಯನ್ನು ಕಾಣುವಿರಿ. ಆ ಕತ್ತೆಯ ಮೇಲೆ ಯಾರೂ ಇದುವರೆಗೆ ಸವಾರಿಮಾಡಿಲ್ಲ. ಆ ಕತ್ತೆಯನ್ನು ಬಿಚ್ಚಿಕೊಂಡು ಇಲ್ಲಿಗೆ ಕರೆತನ್ನಿರಿ. 31 ನೀವು ಏಕೆ ಈ ಕತ್ತೆಯನ್ನು ಬಿಚ್ಚಿಕೊಂಡು ಹೋಗುತ್ತಿದ್ದೀರೆಂದು ಯಾರಾದರೂ ನಿಮ್ಮನ್ನು ಕೇಳಿದರೆ, ‘ಗುರುವಿಗೆ ಈ ಕತ್ತೆ ಬೇಕಾಗಿದೆ’ ಎಂದು ಹೇಳಿರಿ” ಎಂದನು.

32 ಆ ಇಬ್ಬರು ಶಿಷ್ಯರು ಪಟ್ಟಣದೊಳಕ್ಕೆ ಹೋದರು. ಯೇಸು ಅವರಿಗೆ ಹೇಳಿದ ಪ್ರಕಾರವೇ ಅವರು ಕತ್ತೆಯನ್ನು ಕಂಡು 33 ಅದನ್ನು ಬಿಚ್ಚಿದರು. ಆದರೆ ಕತ್ತೆಯ ಯಜಮಾನ ಹೊರಗೆ ಬಂದು ಶಿಷ್ಯರಿಗೆ, “ಆ ಕತ್ತೆಯನ್ನು ನೀವು ಏಕೆ ಬಿಚ್ಚುತ್ತಿದ್ದೀರಿ?” ಎಂದು ಕೇಳಿದನು.

34 ಶಿಷ್ಯರು, “ಪ್ರಭುವಿಗೆ ಇದು ಬೇಕಾಗಿದೆ” ಎಂದು ಉತ್ತರಿಸಿದರು. 35 ಹೀಗೆ, ಶಿಷ್ಯರು ಆ ಕತ್ತೆಯನ್ನು ಯೇಸುವಿನ ಬಳಿಗೆ ತಂದರು. ಶಿಷ್ಯರು ತಮ್ಮ ಬಟ್ಟೆಗಳನ್ನು ಕತ್ತೆಯ ಬೆನ್ನಿನ ಮೇಲೆ ಹಾಕಿ ಯೇಸುವನ್ನು ಕತ್ತೆಯ ಮೇಲೆ ಕುಳ್ಳಿರಿಸಿದರು. 36 ಯೇಸು ಜೆರುಸಲೇಮಿನ ಕಡೆಗೆ ಪ್ರಯಾಣ ಮಾಡಿದನು. ಶಿಷ್ಯರು ತಮ್ಮ ಬಟ್ಟೆಗಳನ್ನು ರಸ್ತೆಯಲ್ಲಿ ಯೇಸುವಿನ ಮುಂದೆ ಹಾಸಿದರು.

37 ಯೇಸು ಜೆರುಸಲೇಮಿಗೆ ಸಮೀಪಿಸಿ ಆಲಿವ್ ಮರಗಳ ಗುಡ್ಡದ ಬಳಿಗೆ ಬಂದನು. ಆತನನ್ನು ಹಿಂಬಾಲಿಸುತ್ತಿದ್ದ ಶಿಷ್ಯ ಸಮೂಹದಲ್ಲಿದ್ದವರೆಲ್ಲರೂ ಸಂತೋಷಪಡುತ್ತಾ ತಾವು ನೋಡಿದ ಎಲ್ಲಾ ಮಹತ್ಕಾರ್ಯಗಳಿಗಾಗಿ ದೇವರನ್ನು ಸ್ತುತಿಸಿದರು. 38 ಅವರು,

“‘ಪ್ರಭುವಿನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದವಾಗಲಿ!’(A)

ಪರಲೋಕದಲ್ಲಿ ಸಮಾಧಾನವಾಗಲಿ; ದೇವರಿಗೆ ಮಹಿಮೆಯಾಗಲಿ”

ಎಂದು ಆರ್ಭಟಿಸಿದರು.

39 ಫರಿಸಾಯರಲ್ಲಿ ಕೆಲವರು, “ಬೋಧಕನೇ, ಈ ರೀತಿಯೆಲ್ಲಾ ಹೇಳಕೂಡದೆಂದು ನಿನ್ನ ಶಿಷ್ಯರಿಗೆ ಹೇಳು!” ಅಂದರು.

40 ಅದಕ್ಕೆ ಯೇಸು, “ಅವರು ಹೀಗೆ ಹೇಳಲೇಬೇಕು. ಒಂದುವೇಳೆ ಅವರು ಹೀಗೆ ಹೇಳದಿದ್ದರೆ, ಈ ಕಲ್ಲುಗಳೇ ಅವರ ಬದಲಾಗಿ ಹೇಳುತ್ತವೆ ಎಂದು ನಿಮಗೆ ಹೇಳುತ್ತೇನೆ” ಎಂಬುದಾಗಿ ಉತ್ತರಿಸಿದನು.

ಜೆರುಸಲೇಮಿನ ವಿಷಯದಲ್ಲಿ ಯೇಸು ಅತ್ತನು

41 ಯೇಸು ಜೆರುಸಲೇಮಿನ ಸಮೀಪಕ್ಕೆ ಬಂದಾಗ ಆ ಪಟ್ಟಣವನ್ನು ನೋಡಿ ಅದರ ವಿಷಯದಲ್ಲಿ ಕಣ್ಣೀರಿಟ್ಟು 42 ಜೆರುಸಲೇಮಿಗೆ, “ನಿನಗೆ ಯಾವುದರಿಂದ ಸಮಾಧಾನವಾಗುತ್ತದೆ ಎಂಬುದನ್ನು ನೀನು ಇಂದೇ ತಿಳಿದುಕೊಂಡಿದ್ದರೆ ಎಷ್ಟೋ ಒಳ್ಳೆಯದಾಗಿತ್ತು! ಆದರೆ ನೀನು ಅದನ್ನು ತಿಳಿಯಲಾರೆ, ಏಕೆಂದರೆ ಅದು ನಿನಗೆ ಮರೆಯಾಗಿದೆ. 43 ನಿನ್ನ ವೈರಿಗಳು ನಿನ್ನ ಸುತ್ತಲೂ ಗೋಡೆ ಕಟ್ಟಿ ನಿನ್ನನ್ನು ಎಲ್ಲಾ ಕಡೆಗಳಿಂದಲೂ ಮುತ್ತಿಗೆ ಹಾಕಿ, 44 ನಿನ್ನನ್ನೂ ನಿನ್ನ ಜನರೆಲ್ಲರನ್ನೂ ನಾಶಮಾಡುವರು. ನಿನ್ನ ಕಟ್ಟಡಗಳಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ದೇವರು ನಿನ್ನನ್ನು ರಕ್ಷಿಸುವುದಕ್ಕೆ ಬಂದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ ಇದೆಲ್ಲಾ ನಿನಗೆ ಸಂಭವಿಸುವುದು” ಎಂದು ಹೇಳಿದನು.

ದೇವಾಲಯಕ್ಕೆ ಯೇಸುವಿನ ಪ್ರವೇಶ

(ಮತ್ತಾಯ 21:12-17; ಮಾರ್ಕ 11:15-19; ಯೋಹಾನ 2:13-22)

45 ಯೇಸು ದೇವಾಲಯದೊಳಗೆ ಹೋಗಿ, ಅಲ್ಲಿ ಮಾರಾಟ ಮಾಡುತ್ತಿದ್ದ ಜನರನ್ನೆಲ್ಲಾ ಹೊರಕ್ಕೆ ಓಡಿಸತೊಡಗಿ, 46 ಅವರಿಗೆ, “‘ನನ್ನ ಆಲಯವು ಪ್ರಾರ್ಥನಾಲಯವಾಗಿರುವುದು’(B) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ಅದನ್ನು ‘ಕಳ್ಳರ ಗವಿಯನ್ನಾಗಿ ಮಾರ್ಪಡಿಸಿದ್ದೀರಿ’”(C) ಎಂದನು.

47 ಯೇಸು ದೇವಾಲಯದಲ್ಲಿ ಪ್ರತಿದಿನ ಜನರಿಗೆ ಉಪದೇಶಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಜನರ ನಾಯಕರಲ್ಲಿ ಕೆಲವರು ಯೇಸುವನ್ನು ಕೊಲ್ಲಲು ಬಯಸಿದರು. 48 ಆದರೆ ಜನರೆಲ್ಲರೂ ಯೇಸುವಿನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಯೇಸು ಹೇಳಿದ ವಿಷಯಗಳಲ್ಲಿ ಅವರು ಬಹಳ ಆಸಕ್ತರಾಗಿದ್ದರು. ಆದ್ದರಿಂದ ಮಹಾಯಾಜಕರಿಗೆ, ಧರ್ಮೋಪದೇಶಕರಿಗೆ ಮತ್ತು ಜನನಾಯಕರಿಗೆ ಯೇಸುವನ್ನು ಹೇಗೆ ಕೊಲ್ಲಬೇಕೆಂದೇ ತಿಳಿಯಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International