Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 30-31

ಇಸ್ರೇಲರು ತಮ್ಮ ಸ್ವದೇಶಕ್ಕೆ ಹಿಂದಿರುಗುವರು

30 “ನಾನು ಈಗ ಹೇಳಿದ್ದೆಲ್ಲವೂ ನಿಮಗೆ ಸಂಭವಿಸುವುದು. ಆಶೀರ್ವಾದದ ಮೂಲಕ ನಿಮಗೆ ಶುಭವಾಗುವದು; ಶಾಪದಿಂದ ನಿಮಗೆ ಅಶುಭವಾಗುವುದು. ನಮ್ಮ ದೇವರಾದ ಯೆಹೋವನು ಇತರ ದೇಶಗಳಿಗೆ ನಿಮ್ಮನ್ನು ಕಳುಹಿಸಿ ಬಿಡುವನು. ಆಗ ನೀವು ಇವುಗಳನ್ನೆಲ್ಲಾ ನೆನಸುವಿರಿ. ನೀವೂ ನಿಮ್ಮ ಸಂತತಿಯವರೂ ಯೆಹೋವನ ಬಳಿಗೆ ಬರುವಿರಿ. ನಿಮ್ಮ ಹೃದಯಪೂರ್ವಕವಾಗಿ ಆತನನ್ನು ಹಿಂಬಾಲಿಸುವಿರಿ ಮತ್ತು ಆಜ್ಞೆಗಳಿಗೆ ಸಂಪೂರ್ಣವಾಗಿ ವಿಧೇಯರಾಗುವಿರಿ. ಆಗ ದೇವರಾದ ಯೆಹೋವನು ನಿಮ್ಮ ಮೇಲೆ ದಯೆ ತೋರಿಸುವನು. ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿ ಎಲ್ಲಿ ಚದರಿಸಲ್ಪಟ್ಟಿದ್ದೀರೋ ಅಲ್ಲಿಂದ ತಿರುಗಿ ಹಿಂದಕ್ಕೆ ತರುವನು. ಲೋಕದ ಕಟ್ಟಕಡೆಯ ಸ್ಥಳಕ್ಕೆ ನೀವು ಚದರಿಹೋದರೂ ಅಲ್ಲಿಂದ ನಿಮ್ಮನ್ನು ಹಿಂದಕ್ಕೆ ತರುವನು. ನಿಮ್ಮ ಪೂರ್ವಿಕರು ವಾಸಿಸಿದ ಸ್ಥಳಕ್ಕೆ ನಿಮ್ಮನ್ನು ಮತ್ತೆ ಬರಮಾಡುವನು. ಆ ದೇಶವು ನಿಮ್ಮದಾಗುವುದು. ಯೆಹೋವನು ನಿಮಗೆ ಒಳ್ಳೆಯದನ್ನು ಮಾಡುವನು. ನಿಮ್ಮ ಪೂರ್ವಿಕರಿಗಿಂತಲೂ ಅಧಿಕವಾಗಿ ನಿಮ್ಮನ್ನು ಅಭಿವೃದ್ಧಿಪಡಿಸುವನು. ನೀವು ಮತ್ತು ನಿಮ್ಮ ಸಂತತಿಯವರು ತನಗೆ ವಿಧೇಯರಾಗುವಂತೆ ನಮ್ಮ ದೇವರಾದ ಯೆಹೋವನು ಮಾಡುತ್ತಾನೆ. ಆಗ ನೀವು ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದ ಪ್ರೀತಿಸುವಿರಿ ಮತ್ತು ಜೀವಿಸುವಿರಿ.

“ನಿಮ್ಮ ದೇವರಾದ ಯೆಹೋವನು ಕೆಟ್ಟಸಂಗತಿಗಳೆಲ್ಲಾ ನಿಮ್ಮ ವೈರಿಗಳಿಗೆ ಆಗುವಂತೆ ಮಾಡುವನು. ಯಾಕೆಂದರೆ ಅವರು ನಿಮ್ಮನ್ನು ದ್ವೇಷಿಸಿ ತೊಂದರೆ ಕೊಡುತ್ತಿರುವರು. ನೀವು ಮತ್ತೆ ಯೆಹೋವನಿಗೆ ವಿಧೇಯರಾಗುವಿರಿ. ಇಂದು ನಾನು ನಿಮಗೆ ಕೊಡುವ ಎಲ್ಲಾ ಆಜ್ಞೆಗಳಿಗೆ ನೀವು ವಿಧೇಯರಾಗುವಿರಿ. ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗುವಂತೆ ದೇವರು ಮಾಡುವನು. ನಿಮಗೆ ಅನೇಕ ಮಕ್ಕಳನ್ನು ಅನುಗ್ರಹಿಸುವನು. ನಿಮ್ಮ ದನಗಳನ್ನು ಆಶೀರ್ವದಿಸುವನು. ಅವುಗಳಿಗೆ ಅನೇಕ ಕರುಗಳಿರುವವು. ನಿಮ್ಮ ಹೊಲಗಳು ಅಧಿಕವಾದ ಬೆಳೆಯನ್ನು ಕೊಡುವಂತೆ ಆಶೀರ್ವದಿಸುವನು. ಯೆಹೋವನು ನಿಮಗೆ ಶುಭವನ್ನು ಉಂಟುಮಾಡುವುದರಲ್ಲಿ ಸಂತೋಷಿಸುವನು. ನಿಮ್ಮ ಪೂರ್ವಿಕರಿಗೆ ಮೇಲನ್ನು ಉಂಟುಮಾಡಲು ಆತನು ಬಯಸಿದ್ದನು. 10 ಆತನು ಹೇಳಿದಂತೆ ನೀವು ನಡೆದುಕೊಳ್ಳಬೇಕು. ಈ ಧರ್ಮೋಪದೇಶ ಪುಸ್ತಕದಲ್ಲಿ ಬರೆದಿರುವ ಬೋಧನೆಗಳನ್ನು ನೀವು ಅನುಸರಿಸಬೇಕು. ನಿಮ್ಮ ಪೂರ್ಣಪ್ರಾಣದಿಂದಲೂ ಪೂರ್ಣಆತ್ಮದಿಂದಲೂ ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಬೇಕು; ಆಗ ನಿಮಗೆ ಈ ಎಲ್ಲಾ ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ.

ಜೀವವೋ ಮರಣವೋ

11 “ನಾನು ಈ ದಿನ ಕೊಡುವ ಆಜ್ಞೆಯು ಅಂಥ ಕಷ್ಟದ್ದೇನೂ ಅಲ್ಲ; ಅದು ದೂರವಾದದ್ದೂ ಅಲ್ಲ. 12 ಈ ಆಜ್ಞೆಯು ಆಕಾಶದೊಳಗೆ ಇಲ್ಲ, ‘ನಮಗೋಸ್ಕರ ಮೇಲಿನ ಲೋಕವನ್ನೇರಿ ಅದನ್ನು ತಿಳಿದುಕೊಂಡು ಬಂದು ನಮಗೆ ತಿಳಿಯಪಡಿಸುವವನು ಯಾರು? ನಾವು ಅದನ್ನು ಕೇಳಿ ಅದರಂತೆಯೇ ಮಾಡುತ್ತಿದ್ದೆವು’ ಎಂದು ವಿಚಾರಿಸುವ ಅವಶ್ಯವಿಲ್ಲ. 13 ಇದು ಸಮುದ್ರದ ಆಚೆ ಇರುವ ಮಾತಲ್ಲ, ‘ನಮಗೋಸ್ಕರ ಸಮುದ್ರವನ್ನು ದಾಟಿ ಅದನ್ನು ತೆಗೆದುಕೊಂಡು ಬಂದು ನಮಗೆ ತಿಳಿಸುವವರು ಯಾರಿರುವರು? ನಾವದನ್ನು ಕೇಳಿ ಅದರಂತೆ ನಡೆಯಬಹುದಾಗಿತ್ತು’ ಎಂದು ಹೇಳುವ ಅವಶ್ಯಕತೆ ಇಲ್ಲ. 14 ದೇವರ ನುಡಿಯು ನಿಮ್ಮ ಬಳಿಯಲ್ಲಿಯೇ ಇದೆ. ಅದು ನಿಮ್ಮ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ. ಆದ್ದರಿಂದ ಅವುಗಳಿಗೆ ಕಷ್ಟವಿಲ್ಲದೆ ವಿಧೇಯರಾಗಬಹುದು.

15 “ಈ ದಿನ ನೀವು ಜೀವ ಮತ್ತು ಮರಣ; ಶುಭ ಮತ್ತು ಅಶುಭ ಇವುಗಳನ್ನು ಆಯ್ಕೆಮಾಡಿಕೊಳ್ಳಲು ನಿಮಗೆ ಅವಕಾಶ ಮಾಡಿಕೊಟ್ಟಿದ್ದೇನೆ. 16 ನಿಮ್ಮ ದೇವರಾದ ಯೆಹೋವನನ್ನು ನೀವು ಸಂಪೂರ್ಣವಾಗಿ ಪ್ರೀತಿಸಬೇಕೆಂದು ಆಜ್ಞಾಪಿಸುತ್ತೇನೆ. ಆತನ ಆಜ್ಞೆಗಳಿಗೆ, ನಿಯಮಗಳಿಗೆ ಮತ್ತು ವಿಧಿಗಳಿಗೆ ವಿಧೇಯರಾಗಬೇಕೆಂದು ನಾನು ನಿಮಗೆ ಆಜ್ಞಾಪಿಸುತ್ತೇನೆ. ಆಗ ನೀವು ಬದುಕುವಿರಿ ಮತ್ತು ನಿಮ್ಮ ಜನಾಂಗ ದೊಡ್ಡದಾಗಿ ಬೆಳೆಯುವುದು. ನಿಮಗಾಗಿ ತೆಗೆದುಕೊಳ್ಳಲು ಪ್ರವೇಶಿಸಲಿರುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸುವನು. 17 ಆದರೆ ನೀವು ಯೆಹೋವನಿಗೆ ವಿಮುಖರಾಗಿ ಆತನಿಗೆ ಕಿವಿಗೊಡದೆ ಹೋದರೆ, ಬೇರೆ ದೇವರುಗಳನ್ನು ಆರಾಧಿಸಲು ಮತ್ತು ಸೇವೆಮಾಡಲು ಹೋದರೆ, 18 ನೀವು ನಾಶವಾಗುವಿರಿ. ನಿಮ್ಮನ್ನು ನಾನು ಎಚ್ಚರಿಸುತ್ತಿದ್ದೇನೆ. ನೀವು ಯೆಹೋವನಿಗೆ ವಿಮುಖರಾದರೆ, ನಿಮಗಾಗಿ ತೆಗೆದುಕೊಳ್ಳಲು ನೀವು ಪ್ರವೇಶಿಸುತ್ತಿರುವ ಜೋರ್ಡನ್ ನದಿಯ ಆಚೆ ದಡದಲ್ಲಿರುವ ದೇಶದಲ್ಲಿ ನೀವು ಬಹುಕಾಲದವರೆಗೆ ಜೀವಿಸುವುದಿಲ್ಲ.

19 “ಈ ದಿನ ಎರಡು ಮಾರ್ಗಗಳಲ್ಲಿ ಯಾವುದನ್ನು ಬೇಕಾದರೂ ಆರಿಸಿಕೊಳ್ಳಲು ನಾನು ನಿಮಗೆ ಅವಕಾಶ ಕೊಟ್ಟಿದ್ದೇನೆ. ಪರಲೋಕವೂ ಭೂಮಿಯೂ ಅದಕ್ಕೆ ಸಾಕ್ಷಿ. ನೀವು ಜೀವವನ್ನಾಗಲಿ ಮರಣವನ್ನಾಗಲಿ ಆರಿಸಿಕೊಳ್ಳಬಹುದು. ಜೀವವನ್ನಾರಿಸಿಕೊಂಡರೆ, ಆಶೀರ್ವಾದವು ಸಿಗುವುದು. ಮರಣವು ನಿಮಗೆ ಶಾಪವನ್ನು ತರುವುದು. ಆದ್ದರಿಂದ ಜೀವವನ್ನು ಆರಿಸಿಕೊಳ್ಳಿರಿ, ನೀವೂ ನಿಮ್ಮ ಮಕ್ಕಳೂ ಬಾಳುವಿರಿ. 20 ನೀವು ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನಿಗೆ ವಿಧೇಯರಾಗಬೇಕು. ಯೆಹೋವನು ನಿಮ್ಮ ಜೀವವಾಗಿದ್ದಾನೆ. ನಿಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಕೊಡುವುದಾಗಿ ವಾಗ್ದಾನ ಮಾಡಿದ್ದ ದೇಶದಲ್ಲಿ ನಿಮಗೆ ದೀರ್ಘವಾದ ಆಯುಷ್ಯನ್ನು ಅನುಗ್ರಹಿಸುತ್ತಾನೆ.”

ಯೆಹೋಶುವನು ನಿಮ್ಮ ಹೊಸ ನಾಯಕನಾಗಿದ್ದಾನೆ

31 ಮೋಶೆಯು ಇಸ್ರೇಲರ ಸಮೂಹಕ್ಕೆ ಹೇಳಿದ್ದೇನೆಂದರೆ: “ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ. ನನಗೆ ನಿಮ್ಮನ್ನು ಇನ್ನೂ ನಡೆಸಲು ಸಾಧ್ಯವಿಲ್ಲ. ಯೆಹೋವನು, ‘ನೀನು ಜೋರ್ಡನ್ ಹೊಳೆಯನ್ನು ದಾಟಕೂಡದು’ ಎಂದು ಹೇಳಿರುತ್ತಾನೆ. ಆದರೆ ನಿಮ್ಮನ್ನು ಯೆಹೋವನೇ, ಆಚೆ ಕಡೆಗೆ ನಡೆಸುವನು. ಆ ದೇಶದ ಜನರನ್ನು ಯೆಹೋವನು ನಾಶಮಾಡುವನು. ಅವರ ಕೈಯಿಂದ ನೀವು ಆ ದೇಶವನ್ನು ವಶಪಡಿಸಿಕೊಳ್ಳುವಿರಿ. ಯೆಹೋಶುವನು ನಿಮ್ಮನ್ನು ಇನ್ನು ಮುಂದೆ ನಡಿಸುವನು ಎಂದು ಯೆಹೋವನು ಹೇಳಿದ್ದಾನೆ.

“ಯೆಹೋವನು ಸೀಹೋನನನ್ನು ಮತ್ತು ಓಗನನ್ನು ನಾಶಮಾಡಿದನು. ಅಮೋರಿಯ ಅರಸರನ್ನು ನಾಶಮಾಡಿದನು; ಅದೇ ರೀತಿಯಾಗಿ ನೀವು ಹೋಗುವ ದೇಶದಲ್ಲಿಯೂ ಮಾಡುವನು. ಯೆಹೋವನು ಆ ಜನಾಂಗಗಳನ್ನು ಸೋಲಿಸಲು ಸಹಾಯ ಮಾಡುವನು. ಆದರೆ ನಾನು ಹೇಳಿದ ಪ್ರಕಾರ ನೀವು ಅವರಿಗೆ ಮಾಡಬೇಕು. ಧೈರ್ಯವಾಗಿರಿ, ಶಕ್ತಿಹೊಂದಿದವರಾಗಿರಿ, ಆ ಜನರಿಗೆ ಹೆದರಬೇಡಿರಿ. ಯಾಕೆಂದರೆ ದೇವರಾದ ಯೆಹೋವನು ನಿಮ್ಮ ಸಂಗಡ ಇರುವನು. ಆತನು ನಿಮ್ಮ ಕೈ ಬಿಡುವುದಿಲ್ಲ, ನಿಮ್ಮನ್ನು ತೊರೆಯುವುದಿಲ್ಲ.”

ಆಮೇಲೆ ಮೋಶೆಯು ಯೆಹೋಶುವನನ್ನು ಕರೆದು ಎಲ್ಲಾ ಇಸ್ರೇಲರ ಎದುರಿನಲ್ಲಿ, “ಶಕ್ತಿಶಾಲಿಯಾಗಿದ್ದು ಧೈರ್ಯಗೊಂಡಿರು. ನೀನು ಈ ಜನರನ್ನು ಯೆಹೋವನು ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂಥ ದೇಶಕ್ಕೆ ನಡೆಸು. ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಇಸ್ರೇಲರಿಗೆ ಸಹಾಯ ಮಾಡು. ಯೆಹೋವನು ನಿನ್ನನ್ನು ನಡೆಸುತ್ತಾನೆ, ಆತನು ತಾನೇ ನಿನ್ನೊಂದಿಗಿರುವನು. ಆತನು ನಿನ್ನ ಕೈಬಿಡುವುದಿಲ್ಲ, ನಿನ್ನನ್ನು ತೊರೆಯುವುದಿಲ್ಲ. ಆದ್ದರಿಂದ ಚಿಂತಿಸಬೇಡ, ಭಯಪಡಬೇಡ” ಎಂದು ಹೇಳಿದನು.

ಮೋಶೆಯು ಬೋಧನೆಗಳನ್ನೆಲ್ಲಾ ಬರೆದದ್ದು

ಆಮೇಲೆ ಮೋಶೆಯು ಬೋಧನೆಗಳನ್ನೆಲ್ಲಾ ಬರೆದು ಯಾಜಕರ ಕೈಯಲ್ಲಿ ಅದನ್ನು ಕೊಟ್ಟನು. ಯಾಜಕರು ಲೇವಿಯ ಕುಲದವರು. ಅವರ ಕರ್ತವ್ಯ ಏನಾಗಿತ್ತೆಂದರೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊರುವುದು. ಮೋಶೆಯು ಇಸ್ರೇಲರ ಎಲ್ಲಾ ಹಿರಿಯರಿಗೂ ಬೋಧನೆಯ ಪುಸ್ತಕವನ್ನು ಕೊಟ್ಟನು. 10 ಆಮೇಲೆ ಮೋಶೆಯು ನಾಯಕರೊಂದಿಗೆ ಮಾತನಾಡುತ್ತಾ, “ಪ್ರತಿ ಏಳನೆಯ ವರ್ಷದ ಕೊನೆಯಲ್ಲಿ ಅಂದರೆ ಬಿಡುಗಡೆಯ ವರ್ಷದಲ್ಲಿ ನಡೆಯುವ ಪರ್ಣಶಾಲೆಗಳ ಹಬ್ಬದ ಸಮಯದಲ್ಲಿ ಈ ಬೋಧನಾಪುಸ್ತಕವನ್ನು ಓದಬೇಕು. 11 ಆ ಹಬ್ಬದ ಸಮಯದಲ್ಲಿ ಇಸ್ರೇಲರೆಲ್ಲರು ತಮ್ಮ ದೇವರಾದ ಯೆಹೋವನು ಆರಿಸುವ ವಿಶೇಷ ಸ್ಥಳದಲ್ಲಿ ಕೂಡಿಬರುವಾಗ ಈ ಬೋಧನೆಯ ಪುಸ್ತಕವನ್ನು ಎಲ್ಲರಿಗೂ ಕೇಳಿಸುವಂತೆ ಓದಬೇಕು. 12 ಎಲ್ಲರನ್ನು ಅಂದರೆ ಗಂಡಸರನ್ನೂ ಹೆಂಗಸರನ್ನೂ ಚಿಕ್ಕಮಕ್ಕಳನ್ನೂ ಮತ್ತು ನಿಮ್ಮನಿಮ್ಮ ಊರಿನಲ್ಲಿ ವಾಸಿಸುವ ಪರದೇಶಸ್ಥರನ್ನೂ ಒಟ್ಟಾಗಿ ಸೇರಿಸಬೇಕು. ಅವರು ಬೋಧನೆಯನ್ನು ಕೇಳಿ ತಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಲು ಕಲಿಯುವರು ಮತ್ತು ಬೋಧನೆಯಲ್ಲಿ ತಿಳಿಸಿರುವ ಪ್ರಕಾರ ಮಾಡುವರು. 13 ಅವರ ಸಂತತಿಯವರಿಗೆ ಯೆಹೋವನ ಕಟ್ಟಳೆಯ ಬಗ್ಗೆ ಗೊತ್ತಿಲ್ಲದಿದ್ದರೆ ಅವರು ಬೋಧನಾಪುಸ್ತಕ ಓದುವಾಗ ತಿಳಿದುಕೊಳ್ಳುವರು. ನಿಮ್ಮ ದೇವರಾದ ಯೆಹೋವನನ್ನು ಗೌರವಿಸಲು ಅವರು ಅದರಿಂದ ಕಲಿತುಕೊಳ್ಳುವರು; ನೀವು ಜೋರ್ಡನ್ ನದಿ ದಾಟಿಹೋಗಿ ವಶಪಡಿಸಿಕೊಳ್ಳಲಿರುವ ದೇಶದಲ್ಲಿ ನೀವು ವಾಸವಾಗಿರುವ ತನಕ ಅವರು ಗೌರವಿಸುವರು.”

ದೇವರು ಯೆಹೋಶುವನನ್ನೂ ಮೋಶೆಯನ್ನೂ ಒಟ್ಟಿಗೆ ಕರೆದದ್ದು

14 ಯೆಹೋವನು ಮೋಶೆಗೆ, “ನೀನು ಸಾಯುವ ಸಮಯವು ಹತ್ತಿರವಾಗುತ್ತಾ ಬಂತು. ಯೆಹೋಶುವನನ್ನು ದೇವದರ್ಶನ ಗುಡಾರಕ್ಕೆ ಕರೆದುಕೊಂಡು ಬಾ. ಅವನು ಮಾಡಬೇಕಾದ ವಿಷಯಗಳನ್ನು ನಾನು ಯೆಹೋಶುವನಿಗೆ ತಿಳಿಸುವೆನು” ಎಂದು ಹೇಳಿದನು. ಮೋಶೆಯೂ ಯೆಹೋಶುವನೂ ದೇವದರ್ಶನ ಗುಡಾರದೊಳಗೆ ಹೋದರು.

15 ಯೆಹೋವನು ಒಂದು ಮೇಘಸ್ತಂಭದಲ್ಲಿ ಪ್ರತ್ಯಕ್ಷನಾದನು. ಆ ಮೇಘಸ್ತಂಭವು ಗುಡಾರದ ಬಾಗಿಲಲ್ಲಿ ಬಂದು ನಿಂತಿತು. 16 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ನೀನು ಬೇಗನೇ ಸಾಯುವೆ. ನಿನ್ನ ಪೂರ್ವಿಕರ ಬಳಿಗೆ ನೀನು ಸೇರಿದಾಗ ಈ ಜನರು ನನಗೆ ನಂಬಿಗಸ್ತರಾಗಿರುವುದಿಲ್ಲ. ನಾನು ಅವರೊಡನೆ ಮಾಡಿರುವ ಒಡಂಬಡಿಕೆಯನ್ನು ಅವರು ಮುರಿಯುವರು. ಅವರು ನನ್ನನ್ನು ತೊರೆದು ತಾವು ಸ್ವಾಧೀನಮಾಡಿಕೊಳ್ಳುವ ದೇಶದ ಅನ್ಯದೇವತೆಗಳನ್ನು ಪೂಜಿಸುವರು. 17 ಆಗ ನಾನು ಅವರ ಮೇಲೆ ತುಂಬಾ ಕೋಪವುಳ್ಳವನಾಗಿರುವೆನು. ಅವರಿಗೆ ಸಹಾಯ ಮಾಡದೆ ಅವರನ್ನು ಬಿಟ್ಟುಬಿಡುವೆನು; ಅವರು ನಾಶವಾಗುವರು; ಅವರಿಗೆ ಭಯಂಕರ ಸಂಗತಿಗಳು ಸಂಭವಿಸುವವು; ಅನೇಕ ಕೇಡುಗಳಾಗುವುವು; ಆಗ, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದಿರುವ ಕಾರಣ ಇವೆಲ್ಲಾ ನಮಗೆ ಸಂಭವಿಸುತ್ತವೆ’ ಎಂದು ಅವರು ಹೇಳುವರು. 18 ಆಗಲೂ ನಾನು ಅವರಿಗೆ ಸಹಾಯ ಮಾಡುವುದಿಲ್ಲ. ಅವರು ಕೆಟ್ಟಕಾರ್ಯಗಳನ್ನು ಮಾಡಿ ಅನ್ಯದೇವರುಗಳನ್ನು ಅವಲಂಭಿಸಿದ್ದಾರಲ್ಲಾ!

19 “ಆದ್ದರಿಂದ ನೀನು ಈ ಹಾಡನ್ನು ಬರೆ, ಇಸ್ರೇಲರಿಗೆ ಇದನ್ನು ಕಲಿಸು. ಈ ಹಾಡನ್ನು ಹಾಡಲು ಅವರಿಗೆ ಕಲಿಸು. ಆಗ ಇದು ಇಸ್ರೇಲ್ ಜನರ ವಿರುದ್ಧವಾಗಿ ಸಾಕ್ಷಿಯಾಗುವುದು. 20 ನಾನು ಅವರ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶಕ್ಕೆ ಅವರನ್ನು ಕರೆದುಕೊಂಡು ಹೋಗುವೆನು. ಆ ದೇಶವು ಹಾಲೂಜೇನೂ ಹರಿಯುವ ದೇಶವಾಗಿರುತ್ತದೆ. ಅವರಿಗೆ ಇಷ್ಟ ಬಂದದ್ದನ್ನೆಲ್ಲಾ ತಿನ್ನಲು ಅವರಿಗೆ ಸಿಗುವುದು. ಅವರಿಗೆ ಸಮೃದ್ಧಿಯಾದ ಜೀವಿತವು ಇರುವುದು. ಆದರೆ ಅವರು ಸುಳ್ಳುದೇವರ ಕಡೆಗೆ ತಿರುಗಿ ಅವುಗಳನ್ನು ಪೂಜಿಸುವರು. ಅವರು ನನ್ನಿಂದ ತೊಲಗಿ ನನ್ನ ಒಡಂಬಡಿಕೆಯನ್ನು ಮುರಿದುಬಿಡುವರು. 21 ಆಗ ಭಯಂಕರವಾದ ಸಂಗತಿಗಳು ಅವರಿಗೆ ಉಂಟಾಗುವವು. ಅವರಿಗೆ ಅನೇಕ ಸಂಕಟಗಳು ಉಂಟಾಗುವವು. ಆಗ ಆ ಜನರಿಗೆ ಈ ಹಾಡು ತಿಳಿದಿರುವುದರಿಂದ ತಾವು ಎಷ್ಟು ತಪ್ಪಿತಸ್ಥರು ಎಂದು ತಿಳಿಯುವುದು. ನಾನು ಕೊಡುವುದಾಗಿ ವಾಗ್ದಾನ ಮಾಡಿರುವ ದೇಶಕ್ಕೆ ಅವರನ್ನು ಇನ್ನೂ ಕರೆದುಕೊಂಡು ಹೋಗಿಲ್ಲ. ಆದರೆ ಅವರು ಅಲ್ಲಿ ಏನು ಮಾಡುತ್ತಾರೆಂಬುದು ನನಗೆ ಆಗಲೇ ಗೊತ್ತಿದೆ.”

22 ಅದೇ ದಿವಸದಲ್ಲಿ ಮೋಶೆಯು ಹಾಡನ್ನು ಬರೆದಿಟ್ಟನು. ಇಸ್ರೇಲ್ ಜನರಿಗೆ ಆ ಹಾಡನ್ನು ಕಲಿಸಲಾಯಿತು.

23 ನೂನನ ಮಗನಾದ ಯೆಹೋಶುವನೊಂದಿಗೆ ಯೆಹೋವನು ಮಾತನಾಡಿ ಹೇಳಿದ್ದೇನೆಂದರೆ: “ಧೈರ್ಯವಂತನಾಗಿದ್ದು ಬಲಗೊಳ್ಳು, ನೀನು ಜನರನ್ನು ವಾಗ್ದಾನದ ದೇಶಕ್ಕೆ ನಡೆಸಬೇಕು. ನಾನು ನಿನ್ನೊಂದಿಗಿರುವೆನು.”

ಮೋಶೆ ಇಸ್ರೇಲರನ್ನು ಎಚ್ಚರಿಸಿದ್ದು

24 ಯೆಹೋವನ ಕಟ್ಟಳೆ, ವಿಧಿನಿಯಮಗಳ ಬೋಧನೆಯನ್ನೆಲ್ಲಾ ಮೋಶೆಯು ಪುಸ್ತಕದಲ್ಲಿ ಜಾಗ್ರತೆಯಾಗಿ ಬರೆದಿಟ್ಟನು. 25 ಬಳಿಕ ಮೋಶೆಯು 26 ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡಿದ್ದ ಲೇವಿಯರಿಗೆ, “ನೀವು ಈ ಪುಸ್ತಕವನ್ನು ತೆಗೆದುಕೊಂಡು ದೇವದರ್ಶನಗುಡಾರದೊಳಗಿರುವ ಪೆಟ್ಟಿಗೆಯ ಪಕ್ಕದಲ್ಲಿಡಿರಿ. ಅದು ನಿಮಗೆ ವಿರುದ್ಧವಾದ ಸಾಕ್ಷಿಯಾಗಿರುವುದು. 27 ನೀವು ಹಠಮಾರಿಗಳೆಂದು ನಾನು ಬಲ್ಲೆನು. ನಾನು ನಿಮ್ಮೊಂದಿಗೆ ಇದ್ದಾಗಲೇ ನೀವು ಯೆಹೋವನಿಗೆ ವಿಧೇಯರಾಗಲಿಲ್ಲ. ಆದ್ದರಿಂದ ನಾನು ಸತ್ತ ಬಳಿಕ ಆತನ ಮಾತುಗಳನ್ನು ನೀವು ಕೇಳುವುದಿಲ್ಲ ಎಂದು ನನಗೆ ಚೆನ್ನಾಗಿ ಗೊತ್ತು. 28 ಎಲ್ಲಾ ಕುಲಾಧಿಪತಿಗಳವರನ್ನು ಮತ್ತು ಗೋತ್ರಪ್ರಧಾನರನ್ನು ನನ್ನ ಬಳಿಗೆ ಕರೆದುತನ್ನಿರಿ; ಅವರಿಗೆ ನಾನಿದನ್ನು ತಿಳಿಸುವೆನು. ನಾನು ಆಕಾಶವನ್ನೂ ಭೂಮಿಯನ್ನೂ ಅದಕ್ಕೆ ಸಾಕ್ಷಿಯಾಗಿ ಮಾಡುವೆನು. 29 ನನ್ನ ಮರಣದ ಬಳಿಕ ನೀವು ಕೆಟ್ಟಕಾರ್ಯಗಳನ್ನು ಮಾಡುವಿರೆಂದು ನನಗೆ ಗೊತ್ತಿದೆ; ನನ್ನ ಅಪ್ಪಣೆಗಳನ್ನು ಮೀರುವಿರಿ. ನಿಮಗೆ ಭಯಂಕರ ಸಂಗತಿಗಳು ಸಂಭವಿಸುವವು. ಯಾಕೆಂದರೆ ಯೆಹೋವನನ್ನು ನೀವು ಸಿಟ್ಟಿಗೆಬ್ಬಿಸುವಿರಿ” ಎಂದು ಹೇಳಿದನು.

ಮೋಶೆಯ ಹಾಡು

30 ಇಸ್ರೇಲ್ ಸಮೂಹವು ಒಟ್ಟಾಗಿ ಸೇರಿದಾಗ ಮೋಶೆಯು ಹೀಗೆ ಹಾಡಿದನು:

ಮಾರ್ಕ 15:1-25

ಪಿಲಾತನಿಂದ ಯೇಸುವಿನ ವಿಚಾರಣೆ

(ಮತ್ತಾಯ 27:1-2,11-14; ಲೂಕ 23:1-5; ಯೋಹಾನ 18:28-38)

15 ಮುಂಜಾನೆ ನಸುಕಿನಲ್ಲೇ, ಮಹಾಯಾಜಕರು, ಹಿರಿಯ ಯೆಹೂದ್ಯನಾಯಕರು ಧರ್ಮೋಪದೇಶಕರು ಮತ್ತು ಯೆಹೂದ್ಯ ಸಮಿತಿಯವರು ಸಭೆಸೇರಿ ಯೇಸುವಿಗೆ ಮಾಡಬೇಕಾದದ್ದನ್ನು ನಿರ್ಧರಿಸಿದರು. ಅವರು ಯೇಸುವನ್ನು ಬಂಧಿಸಿ, ರಾಜ್ಯಪಾಲನಾದ ಪಿಲಾತನ ಬಳಿಗೆ ಕರೆದುಕೊಂಡು ಹೋಗಿ ಅವನಿಗೆ ಒಪ್ಪಿಸಿದರು.

ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು.

ಯೇಸು, “ಹೌದು, ನೀನು ಹೇಳಿದ್ದು ಸರಿ” ಎಂದು ಉತ್ತರಿಸಿದನು.

ಮಹಾಯಾಜಕರು ಯೇಸುವಿನ ಮೇಲೆ ಅನೇಕ ತಪ್ಪುಗಳನ್ನು ಹೊರಿಸಿದರು. ಆದ್ದರಿಂದ ಪಿಲಾತನು ಯೇಸುವಿಗೆ ಮತ್ತೊಮ್ಮೆ, “ಈ ಜನರು ನಿನ್ನ ಮೇಲೆ ಅನೇಕ ಅಪರಾಧಗಳನ್ನು ಹೊರಿಸುತ್ತಿದ್ದರೂ ನೀನು ಏಕೆ ಉತ್ತರಿಸುವುದಿಲ್ಲ?” ಎಂದು ಕೇಳಿದನು.

ಆದರೆ ಯೇಸು ಮೌನವಾಗಿದ್ದನು. ಪಿಲಾತನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು.

ಯೇಸುವನ್ನು ಬಿಡಿಸಲು ಪಿಲಾತನು ಮಾಡಿದ ವಿಫಲ ಪ್ರಯತ್ನ

(ಮತ್ತಾಯ 27:15-31; ಲೂಕ 23:13-25; ಯೋಹಾನ 18:39–19:16)

ಪ್ರತಿ ವರ್ಷವೂ ಪಸ್ಕಹಬ್ಬದ ಸಮಯದಲ್ಲಿ ಜನರು ಬಯಸಿದ ಕೈದಿಯನ್ನು ರಾಜ್ಯಪಾಲನು ಸೆರೆಮನೆಯಿಂದ ಬಿಡುಗಡೆ ಮಾಡುತ್ತಿದ್ದನು. ಆ ಸಮಯದಲ್ಲಿ ಬರಬ್ಬ ಎಂಬವನು ದಂಗೆಕೋರರೊಂದಿಗೆ ಸೆರೆಮನೆಯಲ್ಲಿದ್ದನು. ಈ ದಂಗೆಕೋರರು ಒಂದು ಗಲಭೆಯ ಸಮಯದಲ್ಲಿ ಕೊಲೆ ಮಾಡಿದ ಆಪಾದನೆಗೆ ಗುರಿಯಾಗಿದ್ದರು.

ಜನರು ಪಿಲಾತನ ಬಳಿಗೆ, ಎಂದಿನಂತೆ ತಮಗಾಗಿ ಒಬ್ಬ ಕೈದಿಯನ್ನು ಬಿಡುಗಡೆ ಮಾಡಬೇಕೆಂದು ಕೇಳಿದರು. ಪಿಲಾತನು ಜನರಿಗೆ, “ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ಬಯಸುತ್ತೀರಾ?” ಎಂದು ಕೇಳಿದನು. 10 ಮಹಾಯಾಜಕರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ಬಂಧಿಸಿ ತನಗೆ ಒಪ್ಪಿಸಿದ್ದಾರೆಂಬುದು ಪಿಲಾತನಿಗೆ ತಿಳಿದಿತ್ತು. 11 ಆದರೆ ಯೇಸುವನ್ನು ಬಿಡುಗಡೆ ಮಾಡದೆ ಬರಬ್ಬನನ್ನು ಬಿಡುಗಡೆ ಮಾಡುವಂತೆ ಪಿಲಾತನನ್ನು ಕೇಳಿಕೊಳ್ಳಬೇಕೆಂದು ಮಹಾಯಾಜಕರು ಜನರನ್ನು ಪ್ರೇರೇಪಿಸಿದರು.

12 ಪಿಲಾತನು ಜನರಿಗೆ ಮತ್ತೆ “ಯೆಹೂದ್ಯರ ರಾಜನೆಂದು ನೀವು ಕರೆಯುವ ಈ ಮನುಷ್ಯನನ್ನು ನಾನೇನು ಮಾಡಲಿ?” ಎಂದು ಕೇಳಿದನು.

13 ಜನರು, “ಅವನನ್ನು ಶಿಲುಬೆಗೇರಿಸು!” ಎಂದು ಆರ್ಭಟಿಸಿದರು.

14 ಪಿಲಾತನು, “ಏಕೆ? ಅವನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಿದನು.

ಅದಕ್ಕೆ ಜನರು, “ಅವನನ್ನು ಶಿಲುಬೆಗೇರಿಸು!” ಎಂದು ಜೋರಾಗಿ ಆರ್ಭಟಿಸಿದರು.

15 ಪಿಲಾತನು ಜನರನ್ನು ಸಂತೋಷಪಡಿಸಲು ಬಯಸಿ ಅವರಿಗಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು ಮತ್ತು ಕೊರಡೆಗಳಿಂದ ಹೊಡೆದು ಶಿಲುಬೆಗೇರಿಸುವುದಕ್ಕಾಗಿ ಯೇಸುವನ್ನು ಸೈನಿಕರಿಗೆ ಒಪ್ಪಿಸಿದನು.

16 ಪಿಲಾತನ ಸೈನಿಕರು ಯೇಸುವನ್ನು ರಾಜಭವನದ ಅಂಗಳದೊಳಕ್ಕೆ ಕೊಂಡೊಯ್ದು ಇತರ ಸೈನಿಕರನ್ನೆಲ್ಲಾ ಒಟ್ಟಿಗೆ ಕರೆದರು. 17 ಸೈನಿಕರು ಯೇಸುವಿನ ಮೇಲೆ ಕಡುಕೆಂಪಾದ ನಿಲುವಂಗಿಯನ್ನು ಹಾಕಿ ಮುಳ್ಳಿನ ಬಳ್ಳಿಗಳಿಂದ ಒಂದು ಕಿರೀಟ ಮಾಡಿ ಯೇಸುವಿನ ತಲೆಯ ಮೇಲೆ ಇಟ್ಟರು. 18 ನಂತರ ಅವರು ಯೇಸುವಿಗೆ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ!” ಎಂದರು. 19 ಸೈನಿಕರು ಆತನ ತಲೆಯ ಮೇಲೆ ಅನೇಕ ಸಾರಿ ಬೆತ್ತದಿಂದ ಹೊಡೆದು ಆತನ ಮೇಲೆ ಉಗುಳಿದರು. ನಂತರ ಅವರು ಯೇಸುವಿನ ಮುಂದೆ ಮೊಣಕಾಲೂರಿ, ಆತನನ್ನು ಆರಾಧಿಸುವಂತೆ ನಟಿಸುತ್ತಾ ಪರಿಹಾಸ್ಯ ಮಾಡಿದರು. 20 ಆ ಬಳಿಕ ಸೈನಿಕರು ಕಡುಕೆಂಪಾದ ನಿಲುವಂಗಿಯನ್ನು ತೆಗೆದುಬಿಟ್ಟು, ಆತನ ಬಟ್ಟೆಗಳನ್ನೇ ಮತ್ತೆ ತೊಡಿಸಿದರು. ನಂತರ ಅವರು ಯೇಸುವನ್ನು ಶಿಲುಬೆಗೇರಿಸಲು ಕರೆದುಕೊಂಡು ಹೋದರು.

ಶಿಲುಬೆಗೇರಿಸಲ್ಪಟ್ಟ ಯೇಸು

(ಮತ್ತಾಯ 27:32-44; ಲೂಕ 23:26-43; ಯೋಹಾನ 19:17-27)

21 ಆಗ ಸಿರೇನ್ ಪಟ್ಟಣದ ಸಿಮೋನ ಎಂಬವನು ಹೊಲದಿಂದ ಬರುತ್ತಿದ್ದನು. ಅವನು ಅಲೆಕ್ಸಾಂಡರ್ ಮತ್ತು ರೂಫಸ್ ಎಂಬವರ ತಂದೆ. ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಸಿಮೋನನನ್ನು ಬಲವಂತ ಮಾಡಿದರು. 22 ಅವರು ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಹೋದರು. (ಗೊಲ್ಗೊಥ ಎಂದರೆ “ಕಪಾಲ ಸ್ಥಳ.”) 23 ಗೊಲ್ಗೊಥದಲ್ಲಿ ಸೈನಿಕರು ಯೇಸುವಿಗೆ ರಕ್ತಬೋಳ ಮಿಶ್ರಿತವಾದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಆದರೆ ಯೇಸು ಅದನ್ನು ಕುಡಿಯಲಿಲ್ಲ. 24 ಸೈನಿಕರು ಯೇಸುವನ್ನು ಶಿಲುಬೆಗೆ ನೇತುಹಾಕಿ, ಮೊಳೆಗಳನ್ನು ಜಡಿದರು. ನಂತರ ಸೈನಿಕರು ಚೀಟು ಹಾಕಿ ಯೇಸುವಿನ ಬಟ್ಟೆಗಳನ್ನು ತಮ್ಮಲ್ಲಿ ಹಂಚಿಕೊಂಡರು.

25 ಅವರು ಯೇಸುವನ್ನು ಶಿಲುಬೆಗೇರಿಸಿದಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International