Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಧರ್ಮೋಪದೇಶಕಾಂಡ 4-6

ದೇವರ ಕಟ್ಟಳೆಗಳಿಗೆ ವಿಧೇಯರಾಗಬೇಕೆಂದು ಮೋಶೆಯು ಹೇಳಿದ್ದು

“ಇಸ್ರೇಲರೇ, ಈಗ ನಾನು ಉಪದೇಶಿಸಲಿರುವ ಕಟ್ಟಳೆಗಳಿಗೂ ಆಜ್ಞೆಗಳಿಗೂ ಕಿವಿಗೊಡಿರಿ. ನೀವು ಅವುಗಳಿಗೆ ವಿಧೇಯರಾದರೆ ಜೀವಿಸುವಿರಿ. ಆಗ ನೀವು ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶವನ್ನು ಸ್ವಾಧೀನ ಮಾಡಿಕೊಳ್ಳುವಿರಿ. ನಾನು ಕೊಡುವ ಆಜ್ಞೆಗಳಿಗೆ ನೀವು ಏನನ್ನೂ ಸೇರಿಸಬಾರದು; ಏನನ್ನೂ ತೆಗೆಯಬಾರದು. ನಾನು ನಿಮಗೆ ತಿಳಿಸುವ ದೇವರ ಆಜ್ಞೆಗಳಿಗೆ ನೀವು ವಿಧೇಯರಾಗಬೇಕು.

“ಬಾಳ್‌ಪೆಗೋರಿನಲ್ಲಿ ನಡೆದ ಸಂಗತಿಯನ್ನು ನೀವು ನೋಡಿದ್ದೀರಿ. ಅಲ್ಲಿ ಬಾಳನನ್ನು ಪೂಜಿಸಿದವರನ್ನೆಲ್ಲಾ ಯೆಹೋವನು ನಾಶಮಾಡಿದನು. ಆದರೆ ಯಾರು ದೇವರಾದ ಯೆಹೋವನನ್ನು ಮಾತ್ರ ಸೇವಿಸಿದರೋ ಅವರು ಈಗಲೂ ಜೀವಂತರಾಗಿದ್ದಾರೆ.

“ಯೆಹೋವನು ನನಗೆ ಆಜ್ಞಾಪಿಸಿದ ವಿಧಿನಿಯಮಗಳನ್ನು ನಾನು ನಿಮಗೆ ಬೋಧಿಸಿದೆನು. ಈಗ ನೀವು ಸ್ವಾಧೀನಪಡಿಸಿಕೊಳ್ಳುವ ದೇಶದಲ್ಲಿ ನೀವು ನೆಲೆಸುವಾಗ ಆ ವಿಧಿನಿಯಮಗಳನ್ನು ಅನುಸರಿಸಬೇಕೆಂದು ನಾನು ನಿಮಗೆ ಬೋಧಿಸಿದೆನು. ಆ ನಿಯಮಗಳನ್ನು ಪರಿಪೂರ್ಣವಾಗಿ ಅಭ್ಯಾಸಿಸಿರಿ, ‘ಆಗ ಅನ್ಯಜನರು ನಿಮ್ಮನ್ನು ನೋಡಿ ನೀವು ಜ್ಞಾನಿಗಳು’ ಎಂದು ತಿಳಿದುಕೊಳ್ಳುವರು. ಆ ದೇಶದ ಜನರು ನಿಮ್ಮ ವಿಧಿನಿಯಮಗಳನ್ನು ಕೇಳಿ, ‘ನಿಜವಾಗಿಯೂ ಈ ಮಹಾ ಜನಾಂಗದ ಜನರು ಬುದ್ಧಿಯುಳ್ಳವರು ಮತ್ತು ಜ್ಞಾನಿಗಳು’ ಎಂದು ಹೇಳುವರು

“ನಾವು ನಮ್ಮ ದೇವರಾದ ಯೆಹೋವನಿಗೆ ಪ್ರಾರ್ಥಿಸುವಾಗ ಆತನು ನಮ್ಮ ಹತ್ತಿರವೇ ಇದ್ದಾನೆ. ಯಾವ ದೇಶದವರಿಗೂ ಆತನಂಥ ದೇವರಿಲ್ಲ. ನಾನು ನಿಮಗೆ ಈ ಹೊತ್ತು ಕೊಡುವ ಉಪದೇಶಗಳಿಗೆ ನ್ಯಾಯದಲ್ಲೂ ಒಳ್ಳೆಯದರಲ್ಲೂ ಸರಿಸಮಾನವಾದ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಬೇರೆ ಯಾವ ದೊಡ್ಡ ದೇಶವೂ ಹೊಂದಿಲ್ಲ! ಆದರೆ ನೀವು ನೋಡಿದ್ದನ್ನು ನಿಮ್ಮ ಜೀವಮಾನವೆಲ್ಲಾ ಜಾಗ್ರತೆಯುಳ್ಳವರಾಗಿದ್ದು ಮರೆಯದೆ ಅದನ್ನು ನಿಮ್ಮ ಮಕ್ಕಳಿಗೂ ಮೊಮ್ಮಕ್ಕಳಿಗೂ ತಿಳಿಸಬೇಕು. 10 ಸೀನಾಯಿ ಬೆಟ್ಟದ ಬಳಿಯಲ್ಲಿ ನೀನು ಯೆಹೋವನ ಸನ್ನಿಧಾನದಲ್ಲಿ ನಿಂತಿದ್ದನ್ನು ನೀವು ಜ್ಞಾಪಕ ಮಾಡಿಕೊಳ್ಳಿರಿ. ಆತನು ನನಗೆ ಹೇಳಿದ್ದೇನೆಂದರೆ: ‘ನಾನು ಹೇಳುವ ಮಾತುಗಳನ್ನು ಕೇಳುವಂತೆ ಜನರನ್ನೆಲ್ಲಾ ಒಟ್ಟುಗೂಡಿಸು. ನನ್ನ ಮಾತುಗಳನ್ನು ಕೇಳಿ ಅವರು ಜೀವಮಾನವೆಲ್ಲಾ ನನ್ನನ್ನು ಸನ್ಮಾನಿಸಲು ಮತ್ತು ಭಯಭಕ್ತಿಯಿಂದಿರಲು ಕಲಿತುಕೊಳ್ಳುವರು ಮತ್ತು ಅವರ ಮಕ್ಕಳಿಗೂ ಕಲಿಸುವರು.’ 11 ಆಗ ನೀವು ಬೆಟ್ಟದ ಸಮೀಪಕ್ಕೆ ಬಂದು ನಿಂತುಕೊಂಡಿರಿ. ಆ ಪರ್ವತವು ಬೆಂಕಿಯಿಂದ ಪ್ರಜ್ವಲಿಸಿ ಆಕಾಶದ ತನಕ ಮುಟ್ಟಿತ್ತು. ಆಗ ಕಾರ್ಮೋಡವೂ ಕತ್ತಲೆಯೂ ಆವರಿಸಿತು. 12 ಆ ಬೆಂಕಿಯೊಳಗಿಂದ ಯೆಹೋವನು ಮಾತನಾಡಿದನು. ಅದು ಯಾರೋ ಮಾತಾಡಿದಂತಿತ್ತು, ಆದರೆ ನೀವು ಯಾರನ್ನೂ ಕಾಣಲಿಲ್ಲ. ನೀವು ಸ್ವರವನ್ನು ಮಾತ್ರ ಕೇಳಿದಿರಿ. 13 ಅಲ್ಲಿ ಆತನು ನಿಮ್ಮೊಂದಿಗೆ ಒಡಂಬಡಿಕೆ ಮಾಡಿಕೊಂಡನು. ಆತನು ಹತ್ತು ಆಜ್ಞೆಗಳನ್ನು ನಿಮಗೆ ಕೊಟ್ಟು ಅವುಗಳನ್ನು ಅನುಸರಿಸಲು ಆಜ್ಞಾಪಿಸಿದನು. ಆ ಹತ್ತು ಆಜ್ಞೆಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದನು. 14 ಅದೇ ಸಮಯದಲ್ಲಿ ದೇವರಾದ ಯೆಹೋವನು ನನಗೆ ಇತರ ವಿಧಿನಿಯಮಗಳನ್ನು ತಿಳಿಸಿ ನೀವು ವಾಗ್ದಾನ ಮಾಡಿದ ದೇಶದೊಳಗೆ ನೆಲೆಸಿದಾಗ ಆ ವಿಧಿನಿಯಮಗಳನ್ನು ಅನುಸರಿಸಲು ನಿಮಗೆ ತಿಳಿಸಲು ಹೇಳಿದನು.

15 “ಆ ದಿನ ಸೀನಾಯಿ ಬೆಟ್ಟದಲ್ಲಿ ಸ್ವರವನ್ನು ಮಾತ್ರ ಕೇಳಿದಿರಿ. ನೀವು ಯೆಹೋವನ ರೂಪವನ್ನು ನೋಡಲಿಲ್ಲ. ದೇವರಿಗೆ ಯಾವ ಆಕಾರವೂ ಇಲ್ಲ. 16 ಆದ್ದರಿಂದ ಜಾಗ್ರತೆಯಿಂದಿರಬೇಕು. ನೀವು ಪಾಪಮಾಡಿ ನಿಮ್ಮನ್ನು ನಾಶಪಡಿಸಿಕೊಳ್ಳಬೇಡಿ. ಮನುಷ್ಯನ ರೂಪವನ್ನಾಗಲಿ 17 ಆಕಾಶದಲ್ಲಿ ಹಾರಾಡುವ ಪಕ್ಷಿಯ ರೂಪವನ್ನಾಗಲಿ ಭೂಮಿಯ ಮೇಲೆ ಸಂಚರಿಸುವ ಪ್ರಾಣಿಯ ರೂಪವನ್ನಾಗಲಿ 18 ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ರೂಪವನ್ನಾಗಲಿ ನೀರಿನಲ್ಲಿ ಈಜಾಡುವ ಮೀನುಗಳ ರೂಪವನ್ನಾಗಲಿ ಮಾಡಿಕೊಳ್ಳಬೇಡಿ. 19 ನೀವು ಆಕಾಶವನ್ನು ತಲೆಯೆತ್ತಿ ನೋಡುವಾಗ ಅಲ್ಲಿ ಕಾಣುವ ಸೂರ್ಯಚಂದ್ರ ನಕ್ಷತ್ರಾದಿಗಳನ್ನು ಪೂಜಿಸಬೇಡಿ. ಇವುಗಳನ್ನೆಲ್ಲಾ ಅನ್ಯರು ಪೂಜಿಸುವರು. 20 ಆದರೆ ಯೆಹೋವನು ನಿಮ್ಮನ್ನು ಈಜಿಪ್ಟ್ ದೇಶದಿಂದ ಹೊರತಂದು ತನ್ನ ಸ್ವಕೀಯ ಪ್ರಜೆಯನ್ನಾಗಿ ಮಾಡಿಕೊಂಡಿರುತ್ತಾನೆ. ಕಬ್ಬಿಣವನ್ನು ಕರಗಿಸುವ ಬೆಂಕಿಯ ಕುಲುಮೆಯಂತಿದ್ದ ಈಜಿಪ್ಟಿನಿಂದ ನಿಮ್ಮನ್ನು ಎಳೆದು ತಂದು ತನ್ನ ವಿಶೇಷ ಜನಾಂಗವಾಗಿ ನಿಮ್ಮನ್ನು ತೆಗೆದುಕೊಂಡಿರುತ್ತಾನೆ. ಈಗ ನೀವು ಆತನ ಜನರಾಗಿದ್ದೀರಿ.

21 “ನಿಮ್ಮ ದೆಸೆಯಿಂದ ಯೆಹೋವನು ನನ್ನ ಮೇಲೆ ಸಿಟ್ಟುಗೊಂಡನು. ಆ ಕಾರಣದಿಂದ ಕಾನಾನ್ ದೇಶವನ್ನು ನಾನು ಪ್ರವೇಶಿಸಬಾರದು ಎಂದು ನನಗೆ ಹೇಳಿರುತ್ತಾನೆ. ಜೋರ್ಡನ್ ನದಿಯಾಚೆ ನಿಮಗೆ ಕೊಡುವ ಆ ಉತ್ತಮ ದೇಶವನ್ನು ನಾನು ನೋಡುವುದಿಲ್ಲವೆಂದು ಪ್ರಮಾಣ ಮಾಡಿದ್ದಾನೆ. 22 ಆದ್ದರಿಂದ ನಾನು ಇದೇ ದೇಶದಲ್ಲಿ ಸಾಯುವೆನು. ಆದರೆ ನೀವು ಬೇಗನೆ ಜೋರ್ಡನ್ ನದಿಯನ್ನು ದಾಟಿ ಆ ಒಳ್ಳೆಯ ದೇಶವನ್ನು ವಶಪಡಿಸಿಕೊಂಡು ಅಲ್ಲಿ ವಾಸಿಸುವಿರಿ. 23 ನೀವು ಆ ದೇಶದಲ್ಲಿ ವಾಸಿಸುವಾಗ ನಿಮ್ಮ ದೇವರಾದ ಯೆಹೋವನೊಡನೆ ನೀವು ಮಾಡಿರುವ ಒಡಂಬಡಿಕೆಯನ್ನು ಮರೆಯಬೇಡಿರಿ. ನೀವು ಆತನ ಕಟ್ಟಳೆಗಳಿಗೆ ವಿಧೇಯರಾಗಿರಿ. ಯಾವ ವಿಗ್ರಹಗಳನ್ನಾಗಲಿ ಮಾಡಿಕೊಳ್ಳಬೇಡಿರಿ. 24 ನೀವು ಇತರ ದೇವರುಗಳನ್ನು ಪೂಜಿಸುವುದನ್ನು ಜೀವಸ್ವರೂಪನಾದ ಯೆಹೋವನು ದ್ವೇಷಿಸುವುದರಿಂದ ಬೆಂಕಿಯಂತೆ ಆತನು ನಿಮ್ಮನ್ನು ದಹಿಸಿ ಬಿಡುವನು.

25 “ನೀವು ಹೋಗುವ ದೇಶದಲ್ಲಿ ಬಹಳ ವರ್ಷ ಬಾಳಿದ ನಂತರ ನಿಮಗೆ ಮಕ್ಕಳೂ ಮೊಮ್ಮಕ್ಕಳೂ ಆಗುವರು. ಬಳಿಕ ನೀವು ನಿಮ್ಮ ಜೀವಿತಗಳನ್ನು ಹಾಳುಮಾಡಿಕೊಳ್ಳುವಿರಿ. ನೀವು ಎಲ್ಲಾ ಬಗೆಯ ವಿಗ್ರಹಗಳನ್ನು ಮಾಡಿಕೊಳ್ಳುವಿರಿ. ಅದು ದೇವರಿಗೆ ಬಹಳ ಕೋಪವನ್ನು ಉಂಟುಮಾಡುವುದು! 26 ಆದ್ದರಿಂದ ನಾನು ನಿಮಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಆಕಾಶವೂ ಭೂಮಿಯೂ ಇದಕ್ಕೆ ಸಾಕ್ಷಿ. ಆ ಕೆಟ್ಟ ಕೆಲಸವನ್ನು ನೀವು ಮಾಡಿದರೆ ನೀವು ಹಾಳಾಗಿ ಹೋಗುವಿರಿ. ನೀವೀಗ ಜೋರ್ಡನ್ ನದಿಯನ್ನು ದಾಟಿ ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಹೋಗುತ್ತೀರಿ. ಆದರೆ ನೀವು ಮೂರ್ತಿಗಳನ್ನು ಮಾಡಿಕೊಂಡರೆ ಅಲ್ಲಿ ಹೆಚ್ಚುಕಾಲ ಬಾಳುವುದಿಲ್ಲ. ನೀವು ಸಂಪೂರ್ಣವಾಗಿ ನಾಶವಾಗುವಿರಿ. 27 ಯೆಹೋವನು ನಿಮ್ಮನ್ನು ಅನ್ಯದೇಶಗಳಿಗೆ ಚದರಿಸಿಬಿಡುವನು. ಆತನು ನಿಮ್ಮನ್ನು ಚದರಿಸಿಬಿಡುವ ದೇಶಗಳವರ ಮಧ್ಯದಲ್ಲಿ ನಿಮ್ಮಲ್ಲಿ ಕೆಲವರು ಮಾತ್ರ ಜೀವಂತವಾಗಿ ಉಳಿದುಕೊಳ್ಳುವರು. 28 ಅಲ್ಲಿ, ಮನುಷ್ಯರು ಕೈಯಿಂದ ಮಾಡಿದ ದೇವರುಗಳನ್ನು ಪೂಜಿಸುವಿರಿ. ಅವು ಮರಕಲ್ಲುಗಳಿಂದ ರೂಪಿಸಲ್ಪಟ್ಟಿವೆ. ಅವು ನೋಡಲಾರವು, ಕೇಳಲಾರವು, ತಿನ್ನಲಾರವು ಮತ್ತು ಮೂಸಿನೋಡಲಾರವು! 29 ಆಗ ನೀವು ನಿಮ್ಮ ದೇವರಾದ ಯೆಹೋವನನ್ನು ಹುಡುಕುವಿರಿ. ನೀವು ನಿಮ್ಮ ಹೃದಯ ಆತ್ಮಗಳಿಂದ ಹುಡುಕಿದಾಗ ಆತನು ನಿಮಗೆ ಸಿಗುವನು. 30 ನೀವು ಕಷ್ಟದಲ್ಲಿ ಬಿದ್ದಾಗ, ಅವೆಲ್ಲಾ ನಿಮಗೆ ಸಂಭವಿಸಿದಾಗ ನೀವು ನಿಮ್ಮ ದೇವರಾದ ಯೆಹೋವನ ಬಳಿಗೆ ಹಿಂದಿರುಗಿಬಂದು ಆತನಿಗೆ ವಿಧೇಯರಾಗುವಿರಿ. 31 ನಿಮ್ಮ ದೇವರಾದ ಯೆಹೋವನು ಕರುಣೆಯುಳ್ಳ ದೇವರಾಗಿದ್ದಾನೆ. ನಿಮ್ಮನ್ನು ಅಲ್ಲಿಯೇ ಇರಗೊಡಿಸುವುದಿಲ್ಲ; ನಿಮ್ಮನ್ನು ಸಂಪೂರ್ಣವಾಗಿ ನಾಶಪಡಿಸುವುದಿಲ್ಲ; ನಿಮ್ಮ ಪೂರ್ವಿಕರೊಂದಿಗೆ ಮಾಡಿದ ಒಡಂಬಡಿಕೆಯನ್ನು ಆತನು ಮರೆತುಬಿಡುವವನಲ್ಲ.

ದೇವರ ಅದ್ಭುತಕಾರ್ಯಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ

32 “ಇಂಥಾ ಅದ್ಭುತಕಾರ್ಯಗಳು ಹಿಂದೆ ಎಂದಾದರೂ ನಡೆದಿವೆಯೋ? ದೇವರು ಭೂಮಿಯ ಮೇಲೆ ಮಾನವನನ್ನು ನಿರ್ಮಿಸಿದ ಕಾಲದಿಂದಿಡಿದು ಇಂದಿನವರೆಗೂ ಲೋಕದ ಎಲ್ಲಾ ಕಡೆಗಳಲ್ಲಿ ನಡೆದಿರುವ ಸಂಗತಿಗಳನ್ನು ವೀಕ್ಷಿಸಿ ನೋಡಿರಿ. ಇದರಷ್ಟು ಮಹತ್ತಾದ ಯಾವುದನ್ನಾದರೂ ಎಂದಾದರೂ ಕೇಳಿರುವುದುಂಟೇ? 33 ಬೆಂಕಿಯ ಜ್ವಾಲೆಯೊಳಗಿಂದ ದೇವರು ಮಾತನಾಡಿದ್ದನ್ನು ನೀವು ಕೇಳಿದರೂ ಬದುಕಿದ್ದೀರಿ. ಬೇರೆ ಜನರಿಗೆ ಇಂಥಾ ಅನುಭವವಿದೆಯೋ? ಇಲ್ಲ. 34 ಬೇರೊಂದು ಜನಾಂಗದೊಳಗಿಂದ ಜನರನ್ನು ತನಗೋಸ್ಕರ ತೆಗೆದುಕೊಳ್ಳಲು ಬೇರೆ ಯಾವ ದೇವರಾದರೂ ಎಂದಾದರೂ ಪ್ರಯತ್ನಿಸಿದ್ದುಂಟೇ? ಇಲ್ಲ! ಆದರೆ ದೇವರಾದ ಯೆಹೋವನು ಇಂಥ ಮಹಾಕಾರ್ಯಗಳನ್ನು ಮಾಡುವುದನ್ನು ನೀವು ನೋಡಿದ್ದೀರಿ! ಆತನು ನಿಮಗೆ ತನ್ನ ಶಕ್ತಿಯನ್ನು, ಬಲವನ್ನು, ಅದ್ಭುತಕಾರ್ಯಗಳನ್ನು ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನು ತೋರಿಸಿದ್ದಾನೆ. ಆತನು ಈಜಿಪ್ಟಿನ ಮೇಲೆ ಬರಮಾಡಿದ ವಿಪತ್ತುಗಳನ್ನು ಮತ್ತು ಭಯಂಕರವಾದ ಘಟನೆಗಳನ್ನು ನೀವು ನೋಡಿದ್ದೀರಿ! 35 ಯೆಹೋವನು ನಿಮಗೆ ಇವುಗಳನ್ನು ತೋರಿಸಿದ್ದಾನೆ, ಯಾಕೆಂದರೆ ಆತನೇ ದೇವರೆಂದೂ ಆತನಲ್ಲದೆ ಬೇರೆ ಯಾವ ದೇವರಿಲ್ಲವೆಂದೂ ನೀವು ತಿಳಿದುಕೊಳ್ಳಬೇಕೆಂಬುದು ಆತನ ಉದ್ದೇಶವಾಗಿತ್ತು. 36 ಆಕಾಶದಿಂದ ಆತನ ಮಾತುಗಳನ್ನು ನೀವು ಕೇಳುವಂತೆ ಮಾಡಿದನು; ಭೂಮಿಯ ಮೇಲೆ ಒಂದು ದೊಡ್ಡ ಬೆಂಕಿಯನ್ನು ನೋಡುವಂತೆ ಮಾಡಿದನು; ಮತ್ತು ಅದರೊಳಗಿಂದ ನಿಮ್ಮೊಡನೆ ಮಾತನಾಡಿದನು. ನಿಮಗೆ ಪಾಠಗಳನ್ನು ಕಲಿಸುವುದಕ್ಕಾಗಿ ಇವೆಲ್ಲವನ್ನು ಮಾಡಿದನು.

37 “ದೇವರಾದ ಯೆಹೋವನು ನಿಮ್ಮ ಪೂರ್ವಿಕರನ್ನು ಪ್ರೀತಿಸಿದ್ದರಿಂದ ನಿಮ್ಮನ್ನು ಆರಿಸಿಕೊಂಡನು. ಆತನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಹೊರತಂದನು. 38 ನೀವು ಮುಂದುವರಿಯುತ್ತಿದ್ದಾಗ ನಿಮಗಿಂತಲೂ ಮಹತ್ತಾದ ಮತ್ತು ಬಲಿಷ್ಠವಾಗಿದ್ದ ಜನಾಂಗಗಳನ್ನು ಹೊರಡಿಸಿಬಿಟ್ಟನು. ಅವರ ದೇಶದೊಳಗೆ ಯೆಹೋವನು ನಿಮ್ಮನ್ನು ನಡಿಸಿದನು. ಅಲ್ಲಿ ನೀವು ವಾಸಿಸುವುದಕ್ಕಾಗಿ ಆ ದೇಶವನ್ನು ನಿಮಗೆ ಕೊಟ್ಟನು. ಈಗಲೂ ಆತನು ಹಾಗೆಯೇ ಮಾಡುತ್ತಿದ್ದಾನೆ.

39 “ಆದ್ದರಿಂದ ಈ ಹೊತ್ತು ನೀವೆಲ್ಲಾ ಯೆಹೋವನನ್ನು ದೇವರೆಂದು ಸ್ವೀಕರಿಸಬೇಕು. ಆತನು ಮೇಲಿರುವ ಆಕಾಶಕ್ಕೂ ಕೆಳಗಿರುವ ಭೂಮಿಗೂ ದೇವರಾಗಿದ್ದಾನೆ. ಆತನ ಹೊರತು ಬೇರೆ ದೇವರುಗಳಿಲ್ಲ. 40 ನಾನು ಈ ಹೊತ್ತು ಕೊಡಲಿರುವ ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ನೀವು ಪರಿಪಾಲಿಸಬೇಕು. ಆಗ ನಿಮಗೂ ನಿಮ್ಮ ನಂತರ ಜೀವಿಸುವ ನಿಮ್ಮ ಮಕ್ಕಳಿಗೂ ಶುಭವಾಗುವುದು. ದೇವರಾದ ಯೆಹೋವನು ನಿಮಗೆ ಕೊಡಲಿರುವ ದೇಶದಲ್ಲಿ ಶಾಶ್ವತವಾಗಿ ಬಾಳುವಿರಿ!”

ಆಶ್ರಯನಗರಗಳನ್ನು ಮೋಶೆಯು ಆರಿಸಿದ್ದು

41 ಆಮೇಲೆ ಮೋಶೆಯು ಜೋರ್ಡನ್ ನದಿಯ ಪೂರ್ವ ಪ್ರಾಂತ್ಯದ ಮೂರು ಆಶ್ರಯನಗರಗಳನ್ನು ಆರಿಸಿದನು. 42 ಯಾವನಾದರೂ ಒಬ್ಬ ಮನುಷ್ಯನನ್ನು ಉದ್ದೇಶವಿಲ್ಲದೆ ಆಕಸ್ಮಿಕವಾಗಿ ಕೊಂದರೆ ಅವನು ಈ ಮೂರು ನಗರಗಳಲ್ಲಿ ಯಾವುದಾದರೊಂದರಲ್ಲಿ ಆಶ್ರಯ ತೆಗೆದುಕೊಂಡಲ್ಲಿ ಅವನು ಮರಣದಂಡನೆಯಿಂದ ಪಾರಾಗುವನು ಅಂದರೆ ಅವನು ಕೊಲೆಯಾದವನನ್ನು ದ್ವೇಷಿಸದೆ ಇದ್ದಲ್ಲಿ ಮತ್ತು ಅವನನ್ನು ಕೊಲ್ಲಬೇಕೆಂಬ ಉದ್ದೇಶವಿಲ್ಲದಿದ್ದಲ್ಲಿ ಕೊಲೆಗಾರನು ಆ ನಗರದಲ್ಲಿ ಸುರಕ್ಷಿತನಾಗಿರುವನು. 43 ಆ ಮೂರು ನಗರಗಳು ಯಾವುವೆಂದರೆ: ರೂಬೇನ್ ಕುಲದವರಿಗೆ ಎತ್ತರವಾದ ಬಯಲು ಪ್ರದೇಶದಲ್ಲಿರುವ ಬೆಚೆರ್; ಗಾದ್ ಕುಲದವರಿಗೆ ಗಿಲ್ಯಾದಿನಲ್ಲಿರುವ ರಾಮೋತ್; ಮತ್ತು ಮನಸ್ಸೆ ಕುಲದವರಿಗೆ ಬಾಷಾನಿನಲ್ಲಿರುವ ಗೋಲಾನ್.

ಮೋಶೆಯ ಧರ್ಮಶಾಸ್ತ್ರದ ಪರಿಚಯ

44 ಇಸ್ರೇಲ್ ಜನರಿಗೆ ಮೋಶೆಯು ದೇವರ ಕಟ್ಟಳೆಗಳನ್ನು ಕೊಟ್ಟನು. 45 ಈಜಿಪ್ಟಿನಿಂದ ಹೊರಬಂದ ಅವರಿಗೆ ಈ ಉಪದೇಶಗಳನ್ನು, ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಕೊಟ್ಟನು. 46 ಜೋರ್ಡನ್ ನದಿಯ ಪೂರ್ವಭಾಗದ ಬೇತ್‌ಪೆಗೋರಿನಲ್ಲಿ ಇಸ್ರೇಲ್ ಜನಸಮೂಹವು ಸೇರಿಬಂದಿದ್ದಾಗ ಮೋಶೆಯು ಈ ನಿಯಮಗಳನ್ನು ಅವರಿಗೆ ತಿಳಿಸಿದನು. ಆ ಸ್ಥಳವು ಹೆಷ್ಬೋನಿನಲ್ಲಿ ವಾಸವಾಗಿದ್ದ ಅಮೋರಿಯನಾದ ಸೀಹೋನ್ ರಾಜನಿಗೆ ಸೇರಿತ್ತು. (ಮೋಶೆ ಮತ್ತು ಇಸ್ರೇಲರು ಈಜಿಪ್ಟಿನಿಂದ ಹೊರಬಂದಾಗ ಸೀಹೋನನನ್ನು ಸೋಲಿಸಿದ್ದರು.) 47 ಸೀಹೋನನ ರಾಜ್ಯವನ್ನು ಅವರು ತಮ್ಮ ಉಪಯೋಗಕ್ಕಾಗಿ ಸ್ವಾಧೀನ ಮಾಡಿಕೊಂಡರು, ಬಾಷಾನಿನ ರಾಜನಾದ ಓಗನ ರಾಜ್ಯವನ್ನು ತಮ್ಮ ಸ್ವಾಧೀನಪಡಿಸಿಕೊಂಡರು. ಅಮೋರಿಯರಾದ ಈ ಇಬ್ಬರು ರಾಜರುಗಳು ಜೋರ್ಡನ್ ನದಿಯ ಪೂರ್ವದಲ್ಲಿ ವಾಸವಾಗಿದ್ದರು. 48 ಈ ಪ್ರದೇಶವು ಅರ್ನೋನ್ ತಗ್ಗಿನಲ್ಲಿರುವ ಅರೋಯೇರಿನಿಂದ ಹಿಡಿದು ಸೀಯೋನ್ ಎಂಬ ಹೆರ್ಮೋನ್ ಪರ್ವತದ ತನಕ ವಿಸ್ತರಿಸಿಯದೆ. 49 ಈ ಪ್ರದೇಶವು ಜೋರ್ಡನ್ ತಗ್ಗು ಪ್ರಾಂತ್ಯವನ್ನು ಆವರಿಸಿದೆ. ದಕ್ಷಿಣಕ್ಕೆ ಇದರ ಮೇರೆ ಮೃತ್ಯು ಸರೋವರದ ತನಕವೂ ಪೂರ್ವದಲ್ಲಿ ಪಿಸ್ಗಾ ಬೆಟ್ಟದ ತನಕವೂ ವಿಸ್ತರಿಸಿದೆ.

ದಶಾಜ್ಞೆಗಳು

ಇಸ್ರೇಲ್ ಸಮೂಹದವರನ್ನೆಲ್ಲಾ ಮೋಶೆ ಒಟ್ಟಾಗಿ ಸೇರಿಸಿ ಅವರಿಗೆ ಹೇಳಿದ್ದೇನೆಂದರೆ: “ಇಸ್ರೇಲ್ ಜನರೇ, ನಾನು ಈ ಹೊತ್ತು ಹೇಳುವ ಕಟ್ಟಳೆಗಳಿಗೆ ಕಿವಿಗೊಡಿರಿ. ಇವುಗಳನ್ನು ಕಲಿತುಕೊಂಡು ಪಾಲಿಸುವವರಾಗಿರಿ. ಹೋರೇಬ್ ಎಂಬ ಸೀನಾಯಿ ಪರ್ವತದಲ್ಲಿ ಯೆಹೋವ ದೇವರು ನಮ್ಮೊಂದಿಗೆ ಒಡಂಬಡಿಕೆಯನ್ನು ಮಾಡಿರುತ್ತಾನೆ. ಯೆಹೋವನು ನಮ್ಮ ಪೂರ್ವಿಕರೊಂದಿಗೆ ಒಡಂಬಡಿಕೆ ಮಾಡದೆ ಈಗ ಇಲ್ಲಿ ಜೀವಂತರಾಗಿರುವ ನಮ್ಮೊಂದಿಗೆ ಮಾಡಿರುತ್ತಾನೆ. ಆ ಪರ್ವತದಲ್ಲಿ ಯೆಹೋವನು ನಿಮ್ಮೊಂದಿಗೆ ಮುಖಾಮುಖಿಯಾಗಿ ಬೆಂಕಿಯೊಳಗಿಂದ ನಿಮ್ಮೊಂದಿಗೆ ಮಾತಾಡಿರುತ್ತಾನೆ. ಆದರೆ ನೀವು ಬೆಂಕಿಗೆ ಭಯಪಟ್ಟಿದ್ದರಿಂದ ಬೆಟ್ಟವನ್ನು ಏರಲಿಲ್ಲ. ಆಗ ನಾನು ನಿಮಗೂ ಯೆಹೋವನಿಗೂ ಮಧ್ಯದಲ್ಲಿದ್ದುಕೊಂಡು ಯೆಹೋವನು ಹೇಳಿದ್ದನ್ನು ತಿಳಿಸಿದೆನು.

“ಯೆಹೋವನು ಹೇಳಿದ್ದೇನೆಂದರೆ:

‘ನಾನು ನಿಮ್ಮ ದೇವರಾದ ಯೆಹೋವನು. ನೀವು ಈಜಿಪ್ಟಿನಲ್ಲಿ ಗುಲಾಮರಾಗಿದ್ದಾಗ ನಿಮ್ಮನ್ನು ಅಲ್ಲಿಂದ ಬಿಡುಗಡೆ ಮಾಡಿದೆನು. ಆದ್ದರಿಂದ ನೀವು ಈ ಆಜ್ಞೆಗಳಿಗೆ ವಿಧೇಯರಾಗಬೇಕು:

‘ನೀವು ನನ್ನ ಹೊರತು ಬೇರೆ ಯಾವ ದೇವರುಗಳನ್ನೂ ಪೂಜಿಸಬಾರದು.

‘ನೀವು ವಿಗ್ರಹಗಳನ್ನು ಮಾಡಿಕೊಳ್ಳಬಾರದು. ಆಕಾಶದ ಮೇಲಾಗಲಿ ಭೂಮಿಯ ಮೇಲಾಗಲಿ ಭೂಮಿಯ ಕೆಳಗಿರುವ ನೀರಿನಲ್ಲಾಗಲಿ ಯಾವ ವಸ್ತುಗಳ ವಿಗ್ರಹಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಮಾಡಿಕೊಳ್ಳಬಾರದು. ನಾನೇ ನಿಮ್ಮ ದೇವರಾದ ಯೆಹೋವನು. ಆದ್ದರಿಂದ ನೀವು ಯಾವ ವಿಗ್ರಹವನ್ನೂ ಪೂಜಿಸಬಾರದು ಮತ್ತು ಅದರ ಸೇವೆ ಮಾಡಬಾರದು. ನನ್ನ ಜನರು ಇತರ ದೇವರುಗಳನ್ನು ಆರಾಧಿಸುವುದನ್ನು ನಾನು ದ್ವೇಷಿಸುತ್ತೇನೆ. ನನಗೆ ವಿರುದ್ಧವಾಗಿ ಪಾಪ ಮಾಡಿದವರನ್ನು ನಾನು ಶಿಕ್ಷಿಸುತ್ತೇನೆ. ಅವರ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳು ನನ್ನ ದಂಡನೆಗೆ ಗುರಿಯಾಗುವರು. 10 ಆದರೆ ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳಿಗೆ ವಿಧೇಯರಾಗುವವರ ಮೇಲೆ ನಾನು ದಯೆ ತೋರಿಸುವೆನು. ಅವರ ಕುಟುಂಬಗಳವರಿಗೆ ಸಾವಿರ ತಲೆಮಾರುಗಳವರೆಗೂ ಕರುಣೆಯನ್ನು ತೋರಿಸುವೆನು.

11 ‘ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಎತ್ತಬಾರದು. ಯಾರಾದರೂ ಅಯೋಗ್ಯ ಕಾರ್ಯಕ್ಕಾಗಿ ನನ್ನ ಹೆಸರನ್ನು ಉಪಯೋಗಿಸಿದರೆ ನಾನು ಅವನನ್ನು ಶಿಕ್ಷಿಸುವೆನು.

12 ‘ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ಸಬ್ಬತ್ ದಿನವನ್ನು ವಿಶೇಷದಿನವೆಂದು ಪರಿಗಣಿಸಬೇಕು. 13 ವಾರದ ಆರು ದಿನಗಳಲ್ಲಿ ಕೆಲಸಮಾಡಿರಿ. 14 ಆದರೆ ಏಳನೆಯ ದಿನವು ವಿಶ್ರಾಂತಿಯ ದಿನವಾಗಿದೆ. ಆ ದಿನ ಯಾರೂ ಕೆಲಸ ಮಾಡಬಾರದು. ನೀವು ಮಾತ್ರವೇ ಅಲ್ಲ, ನಿಮ್ಮ ಮಕ್ಕಳು, ಸೇವಕರು, ನಿಮ್ಮ ಪಶುಗಳು, ನಿಮ್ಮಲ್ಲಿರುವ ಪರದೇಶಿಯರು ಕೆಲಸಮಾಡದೆ ವಿಶ್ರಾಂತಿಯಲ್ಲಿರಬೇಕು. ನಿಮ್ಮ ದೇವರಾದ ಯೆಹೋವನ ಗೌರವಾರ್ಥವಾಗಿ ಸಬ್ಬತ್ ದಿನವು ವಿಶ್ರಾಂತಿಯ ದಿನವಾಗಿದೆ. 15 ನೀವು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಿರೆಂಬುದನ್ನು ಮರೆಯಬೇಡಿ. ನಿಮ್ಮ ದೇವರಾದ ಯೆಹೋವನು ತನ್ನ ಮಹಾಶಕ್ತಿಯಿಂದ ನಿಮ್ಮನ್ನು ಈಜಿಪ್ಟಿನಿಂದ ಬಿಡಿಸಿ ನಿಮ್ಮನ್ನು ಸ್ವತಂತ್ರರನ್ನಾಗಿ ಮಾಡಿದನು. ಆದ್ದರಿಂದಲೇ ನಿಮ್ಮ ದೇವರು ಸಬ್ಬತ್ ದಿನವನ್ನು ಆಚರಿಸಬೇಕೆಂದು ಆಜ್ಞೆ ಮಾಡಿದ್ದು.

16 ‘ನಿಮ್ಮ ತಂದೆತಾಯಿಗಳನ್ನು ನೀವು ಸನ್ಮಾನಿಸಬೇಕು. ಇದು ನಿಮ್ಮ ದೇವರ ಆಜ್ಞೆ. ನೀವು ಇದಕ್ಕೆ ವಿಧೇಯರಾದರೆ ದೇವರು ನಿಮಗೆ ಕೊಡುವ ದೇಶದಲ್ಲಿ ನೀವು ಬಹುಕಾಲ ಬಾಳುವಿರಿ ಮತ್ತು ನಿಮಗೆ ಯಾವಾಗಲೂ ಶುಭವಿರುವುದು.

17 ‘ಕೊಲೆ ಮಾಡಬಾರದು.

18 ‘ವ್ಯಭಿಚಾರ ಮಾಡಬಾರದು.

19 ‘ಕದಿಯಬಾರದು.

20 ‘ಇತರರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಬಾರದು.

21 ‘ಇನ್ನೊಬ್ಬನ ಹೆಂಡತಿಯನ್ನು ಆಶಿಸಬಾರದು. ಅವನ ಮನೆಯನ್ನಾಗಲಿ ಹೊಲವನ್ನಾಗಲಿ ಸೇವಕರನ್ನಾಗಲಿ ದನವನ್ನಾಗಲಿ ಕತ್ತೆಯನ್ನಾಗಲಿ ನೀವು ಅಪೇಕ್ಷಿಸಬಾರದು. ಇನ್ನೊಬ್ಬನ ವಸ್ತುಗಳಲ್ಲಿ ಯಾವುದನ್ನೂ ಆಶಿಸಬಾರದು!’”

ಜನರು ದೇವರಿಗೆ ಹೆದರಿದರು

22 ಮೋಶೆಯು ಹೇಳಿದ್ದೇನೆಂದರೆ: “ನೀವೆಲ್ಲಾ ಆ ಬೆಟ್ಟದ ಬಳಿಯಲ್ಲಿರುವಾಗ ದೇವರಾದ ಯೆಹೋವನು ಈ ಆಜ್ಞೆಗಳನ್ನು ನಿಮಗೆ ಕೊಟ್ಟನು. ಬೆಂಕಿ, ಮೋಡ ಮತ್ತು ಕಾರ್ಗತ್ತಲೊಳಗಿನಿಂದ ಯೆಹೋವನು ಗಟ್ಟಿಯಾದ ಸ್ವರದಲ್ಲಿ ಮಾತಾಡಿದ್ದನ್ನು ನೀವು ಕೇಳಿದಿರಿ. ಆತನು ಈ ಆಜ್ಞೆಗಳನ್ನು ಕೊಟ್ಟ ಬಳಿಕ ಬೇರೆ ಏನನ್ನೂ ಹೇಳಲಿಲ್ಲ. ಆತನು ತನ್ನ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳ ಮೇಲೆ ಬರೆದು ನನಗೆ ಕೊಟ್ಟನು.

23 “ಬೆಟ್ಟವು ಬೆಂಕಿಯಿಂದ ಉರಿಯುತ್ತಿರುವಾಗ ಕಾರ್ಗತ್ತಲೆಯಿಂದ ಬಂದ ಸ್ವರವನ್ನು ನೀವು ಕೇಳಿದಿರಿ. ಆಗ ನಿಮ್ಮ ಹಿರಿಯರು, ಕುಲಪ್ರಧಾನರು ನನ್ನ ಬಳಿಗೆ ಬಂದು ಹೇಳಿದ್ದೇನೆಂದರೆ: 24 ‘ನಮ್ಮ ದೇವರಾದ ಯೆಹೋವನು ತನ್ನ ಮಹಿಮೆಯನ್ನೂ ಪ್ರತಾಪವನ್ನೂ ನಮಗೆ ತೋರಿಸಿದ್ದಾನೆ. ಬೆಂಕಿಯೊಳಗಿಂದ ಆತನು ಮಾತನಾಡಿದ್ದನ್ನು ನಾವು ಕೇಳಿದ್ದೇವೆ. ದೇವರು ಒಬ್ಬನೊಡನೆ ಸ್ವತಃ ಮಾತನಾಡಿದ ಬಳಿಕವೂ ಅವನು ಜೀವದಿಂದುಳಿಯಲು ಸಾಧ್ಯ ಎಂಬುದನ್ನು ನಾವು ಕಣ್ಣಾರೆ ಕಂಡೆವು. 25 ಆದರೆ ನಮ್ಮ ದೇವರಾದ ಯೆಹೋವನು ಮಾತನಾಡುವುದನ್ನು ನಾವು ಮತ್ತೆ ಕೇಳಿದರೆ ಖಂಡಿತವಾಗಿ ಸಾಯುವೆವು. ಆ ಭಯಂಕರವಾದ ಬೆಂಕಿಯು ನಮ್ಮನ್ನು ದಹಿಸುವುದು. ನಮಗೆ ಸಾಯಲು ಇಷ್ಟವಿಲ್ಲ. 26 ಜೀವಸ್ವರೂಪನಾದ ದೇವರ ನುಡಿಯನ್ನು ಪ್ರತ್ಯಕ್ಷವಾಗಿ ನಾವು ಕೇಳಿದ ಹಾಗೆ ಬೇರೆ ಯಾರೂ ಕೇಳಿಲ್ಲ. ಆದರೂ ನಾವು ಜೀವದಿಂದಿದ್ದೇವೆ. 27 ಮೋಶೆಯೇ, ನೀನು ಹತ್ತಿರ ಹೋಗಿ ಯೆಹೋವನು ಹೇಳುವುದನ್ನೆಲ್ಲಾ ಕೇಳಿ ನಮಗೆ ಅದನ್ನು ತಿಳಿಸು. ನಾವು ನಿನ್ನ ಮಾತುಗಳನ್ನು ಕೇಳಿ ನೀನು ಹೇಳಿದ ಹಾಗೆ ಮಾಡುವೆವು.’

ಯೆಹೋವನು ಮೋಶೆಯ ಸಂಗಡ ಮಾತನಾಡುತ್ತಾನೆ

28 “ನೀವು ಹೇಳಿದ್ದನ್ನು ಯೆಹೋವನು ಕೇಳಿ ನನ್ನೊಡನೆ ಹೀಗೆಂದನು: ‘ನಿನ್ನ ಜನರು ಹೇಳುವುದನ್ನು ನಾನು ಕೇಳಿದೆನು. ಆ ಮಾತುಗಳೆಲ್ಲಾ ಒಳ್ಳೆಯವೇ. 29 ಆದರೆ ಅವರು ಆಲೋಚಿಸುವ ರೀತಿಯನ್ನು ನಾನು ಬದಲಾಯಿಸಬೇಕಾಗಿದೆ. ಅವರು ನನಗೆ ವಿಧೇಯರಾಗಿ ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸಿ ತಮ್ಮ ಹೃದಯಗಳಿಂದ ನನ್ನನ್ನು ಗೌರವಿಸಬೇಕು. ಆಗ ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿ ಶುಭವಿರುವುದು.

30 “‘ನೀನು ಹೋಗಿ ಜನರಿಗೆ ಅವರವರ ಗುಡಾರಗಳಿಗೆ ಹಿಂದಿರುಗಿ ಹೋಗಲು ತಿಳಿಸು. 31 ಆದರೆ ಮೋಶೆಯೇ, ನೀನು ನನ್ನ ಬಳಿಯಲ್ಲಿಯೇ ನಿಂತಿರು. ನೀನು ಅವರಿಗೆ ಉಪದೇಶಿಸಬೇಕಾಗಿರುವ ಎಲ್ಲಾ ಆಜ್ಞೆಗಳನ್ನು, ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ನಾನು ನಿನಗೆ ತಿಳಿಸುತ್ತೇನೆ. ಅವರ ವಾಸಕ್ಕಾಗಿ ನಾನು ಕೊಡಲಿರುವ ದೇಶದಲ್ಲಿ ಅವರು ಇವುಗಳೆಲ್ಲವನ್ನು ಪರಿಪಾಲಿಸಬೇಕು.’

32 “ಆದ್ದರಿಂದ, ಇಸ್ರೇಲ್ ಜನರೇ, ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ಅನುಸರಿಸಲು ನೀವು ಎಚ್ಚರದಿಂದಿರಬೇಕು. ಆತನನ್ನು ಹಿಂಬಾಲಿಸುವುದನ್ನು ನಿಲ್ಲಿಸಬೇಡಿ. 33 ನಿಮ್ಮ ದೇವರಾದ ಯೆಹೋವನು ಹೇಳಿದ ಆಜ್ಞೆಗಳಿಗನುಸಾರವಾಗಿ ನಡೆದರೆ ನೀವು ಜೀವಿಸುವಿರಿ. ಆಗ ನೀವು ಶುಭವನ್ನೇ ಹೊಂದುವಿರಿ. ನಿಮಗೆ ದೊರಕಿದ ಸ್ವಾಸ್ತ್ಯಭೂಮಿಯಲ್ಲಿ ನೀವು ಬಹುಕಾಲ ಬಾಳುವಿರಿ.

ಯಾವಾಗಲೂ ದೇವರನ್ನು ಪ್ರೀತಿಸಿ ಆತನಿಗೆ ವಿಧೇಯರಾಗಿರಿ

“ನಿಮ್ಮದೇವರಾದ ಯೆಹೋವನು ನಿಮಗೆ ಉಪದೇಶಿಸಲೆಂದು ನನಗೆ ಕೊಟ್ಟ ಆಜ್ಞೆಗಳು, ಕಟ್ಟಳೆಗಳು ಮತ್ತು ನಿಯಮಗಳು ಇವೇ. ನೀವು ವಾಸಮಾಡಲು ಪ್ರವೇಶಿಸಲಿರುವ ದೇಶದಲ್ಲಿ ಅವುಗಳನ್ನು ಪಾಲಿಸಿರಿ. ನೀವೂ ಮತ್ತು ನಿಮ್ಮ ಸಂತತಿಯವರೂ ಜೀವಿಸುವ ದಿನಗಳಲ್ಲೆಲ್ಲಾ ದೇವರಾದ ಯೆಹೋವನನ್ನು ಗೌರವಿಸಬೇಕು. ನಾನೀಗ ಕೊಡುವ ಎಲ್ಲಾ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸಬೇಕು. ಹಾಗೆ ಮಾಡಿದ್ದಲ್ಲಿ ನೀವು ನೆಲೆಸುವ ಜಾಗದಲ್ಲಿ ನೀವು ಬಹುಕಾಲ ಜೀವಿಸುವಿರಿ. ಇಸ್ರೇಲಿನ ಜನರೇ, ಕಿವಿಗೊಟ್ಟು ಕೇಳಿರಿ. ದೇವರ ಆಜ್ಞೆಗಳಿಗೆ ವಿಧೇಯರಾಗಿರಿ. ಆಗ ನಿಮಗೆ ಎಲ್ಲಾದರಲ್ಲಿ ಶುಭವಾಗುವುದು. ನಿಮಗೆ ಹೆಚ್ಚು ಮಕ್ಕಳಾಗುವವು. ನೀವು ನೆಲೆಸುವ ದೇಶವು ನಿಮ್ಮ ಪೂರ್ವಿಕರಿಗೆ ದೇವರು ವಾಗ್ದಾನ ಮಾಡಿದ ಪ್ರಕಾರ ಫಲಭರಿತವಾಗುವುದು.

“ಇಸ್ರೇಲಿನ ಜನರೇ, ಕಿವಿಗೊಡಿರಿ. ಯೆಹೋವನೇ ನಮ್ಮ ದೇವರು. ದೇವರು ಒಬ್ಬನೇ! ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. ನಾನೀಗ ಕೊಡುವ ಆಜ್ಞೆಗಳನ್ನು ಯಾವಾಗಲೂ ನಿಮ್ಮ ಜ್ಞಾಪದಲ್ಲಿಟ್ಟುಕೊಂಡಿರಿ. ನಿಮ್ಮ ಮಕ್ಕಳಿಗೆ ಇದನ್ನು ಕಲಿಸಲು ಮರೆಯಬೇಡಿರಿ. ನಿಮ್ಮ ಮನೆಗಳಲ್ಲಿ ಕುಳಿತಿರುವಾಗ, ರಸ್ತೆಗಳಲ್ಲಿ ನಡೆಯುತ್ತಿರುವಾಗ, ನೀವು ಮಲಗಿರುವಾಗ, ಎದ್ದಾಗ ಈ ಆಜ್ಞೆಗಳ ಕುರಿತಾಗಿ ಮಾತಾಡಿಕೊಳ್ಳಿರಿ. ಈ ಆಜ್ಞೆಗಳನ್ನು ಬರೆದು ನಿಮ್ಮ ಕೈಗಳಿಗೆ ಕಟ್ಟಿರಿ, ನಿಮ್ಮ ಹಣೆಗಳ ಮೇಲೆ ಕಟ್ಟಿರಿ. ಇವು ನನ್ನ ಬೋಧನೆಯ ವಿಚಾರವಾಗಿ ನಿಮಗೆ ಜ್ಞಾಪಕ ಹುಟ್ಟಿಸಲು ಸಹಾಯವಾಗುವುದು. ಅವುಗಳನ್ನು ನಿಮ್ಮ ಬಾಗಿಲಿನ ಮೇಲೆಯೂ ನಿಲುವುಪಟ್ಟಿಗಳ ಮೇಲೆಯೂ ಬರೆಯಿರಿ.

10 “ದೇವರಾದ ಯೆಹೋವನು ನಮಗೆ ಈ ದೇಶವನ್ನು ಕೊಡುವುದಾಗಿ ನಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ ಮತ್ತು ಯಾಕೋಬನಿಗೆ ವಾಗ್ದಾನ ಮಾಡಿದ್ದನು. ಈಗ ಆ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ಅದರಲ್ಲಿರುವ ದೊಡ್ಡದೊಡ್ಡ ನಗರಗಳನ್ನು ನೀವು ಕೈಯಿಂದ ಕಟ್ಟಲಿಲ್ಲ. 11 ನೀವು ಕೂಡಿಸಿಡದ ಉತ್ತಮ ವಸ್ತುಗಳಿಂದ ತುಂಬಿರುವ ಮನೆಗಳನ್ನು ಯೆಹೋವನು ನಿಮಗೆ ಕೊಡುತ್ತಾನೆ. ನೀವು ತೋಡದಿರುವ ಬಾವಿಗಳನ್ನು ನಿಮಗೆ ಕೊಡುವನು. ನೀವು ನೆಡದಿರುವ ದ್ರಾಕ್ಷಾತೋಟಗಳನ್ನೂ ಎಣ್ಣೆಮರಗಳ ತೋಪುಗಳನ್ನೂ ನಿಮಗೆ ಕೊಡುವನು. ನಿಮಗೆ ತಿನ್ನಲು ಯಾವ ಕೊರತೆಯೂ ಇರುವುದಿಲ್ಲ.

12 “ನಿಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಿ ಆತನನ್ನೇ ಸೇವಿಸಿರಿ. ಆತನನ್ನು ಮರೆತುಬಿಡಬೇಡಿರಿ. ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಾಗ ಆತನೇ ನಿಮ್ಮನ್ನು ವಿಮೋಚಿಸಿದನಲ್ಲಾ? 13 ಆತನ ಹೆಸರಿನಲ್ಲಿಯೇ ವಾಗ್ದಾನಗಳನ್ನು ಮಾಡಿರಿ; ಅನ್ಯ ದೇವರ ಹೆಸರಿನಲ್ಲಿ ಮಾಡಕೂಡದು. 14 ಇತರ ದೇವರುಗಳನ್ನು ಅವಲಂಭಿಸಬಾರದು. ನಿಮ್ಮ ಸುತ್ತಲೂ ಇರುವವರ ದೇವರುಗಳನ್ನು ಪೂಜಿಸಬಾರದು. 15 ನಿಮ್ಮ ದೇವರಾದ ಯೆಹೋವನು ಯಾವಾಗಲೂ ನಿಮ್ಮ ಜೊತೆಯಲ್ಲಿರುವನು. ಸುಳ್ಳುದೇವರನ್ನು ಪೂಜಿಸುವವರನ್ನು ಯೆಹೋವನು ದ್ವೇಷಿಸುವುದರಿಂದ ಅವರನ್ನು ಈ ಲೋಕದಿಂದ ಅಳಿಸಿಬಿಡುವನು.

16 “ಮಸ್ಸಾದಲ್ಲಿ ನೀವು ನಿಮ್ಮ ದೇವರನ್ನು ಪರೀಕ್ಷಿಸಿದಂತೆ ಆತನನ್ನು ಪರೀಕ್ಷಿಸಬಾರದು. 17 ಆತನ ಆಜ್ಞೆಗಳಿಗೆ ವಿಧೇಯರಾಗಿರಲು ಎಚ್ಚರದಿಂದಿರಬೇಕು. ಆತನು ನಿಮಗೆ ಕೊಟ್ಟ ವಿಧಿನಿಯಮಗಳನ್ನು ಪರಿಪಾಲಿಸಲು ತಯಾರಾಗಿರಬೇಕು. 18 ಯೋಗ್ಯವಾದವುಗಳನ್ನು, ಸರಿಯಾದವುಗಳನ್ನು ಮತ್ತು ಯೆಹೋವನು ಮೆಚ್ಚುವ ಕಾರ್ಯಗಳನ್ನು ನೀವು ಮಾಡಬೇಕು. ಆಗ ನಿಮ್ಮ ಕಾರ್ಯಗಳೆಲ್ಲವೂ ಸಫಲವಾಗುವುವು. ಅಲ್ಲದೆ ಯೆಹೋವನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶದೊಳಗೆ ನೀವು ಹೋಗಿ ಅದನ್ನು ವಶಪಡಿಸಿಕೊಳ್ಳಬಹುದು. 19 ಯೆಹೋವನು ಹೇಳಿದಂತೆಯೇ, ಅಲ್ಲಿ ವಾಸವಾಗಿರುವ ನಿಮ್ಮ ವೈರಿಗಳನ್ನೆಲ್ಲಾ ಹೊರಗಟ್ಟುವಿರಿ.

ದೇವರ ಕಾರ್ಯಗಳನ್ನು ನಿಮ್ಮ ಮಕ್ಕಳಿಗೆ ತಿಳಿಸಬೇಕು

20 “ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳು ನಿಮಗೆ ಈ ಪ್ರಶ್ನೆ ಕೇಳಬಹುದು: ‘ಯೆಹೋವದೇವರು ನಮಗೆ ನ್ಯಾಯವಿಧಿ, ನಿಯಮಗಳನ್ನು ಕೊಟ್ಟಿರುತ್ತಾನೆ. ಇವುಗಳ ಅರ್ಥವೇನು?’ 21 ಆಗ ನೀವು ಹೀಗೆ ಉತ್ತರಿಸಬೇಕು: ‘ನಾವು ಈಜಿಪ್ಟಿನಲ್ಲಿ ಫರೋಹನ ಗುಲಾಮರಾಗಿದ್ದೆವು. ಆದರೆ ನಮ್ಮ ದೇವರಾದ ಯೆಹೋವನು ತನ್ನ ಪರಾಕ್ರಮದಿಂದ ನಮ್ಮನ್ನು ಬಿಡುಗಡೆ ಮಾಡಿದನು. 22 ಯೆಹೋವನು ಈಜಿಪ್ಟಿನವರನ್ನೂ ಫರೋಹನನ್ನೂ ಅವನ ಪರಿವಾರದವರನ್ನೂ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಮಹತ್ಕಾರ್ಯಗಳಿಂದಲೂ ಭಯಂಕರ ಕಾರ್ಯಗಳಿಂದಲೂ ಬಾಧಿಸಿದನು. 23 ಯೆಹೋವನು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನದಂತೆ ನಮಗೆ ಆ ದೇಶವನ್ನು ಕೊಡುವುದಕ್ಕಾಗಿ ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. 24 ಈ ಉಪದೇಶಗಳನ್ನೆಲ್ಲಾ ಅನುಸರಿಸಬೇಕೆಂದು ಯೆಹೋವನು ನಮಗೆ ಆಜ್ಞಾಪಿಸಿದ್ದಾನೆ. ನಮ್ಮ ದೇವರಾದ ಯೆಹೋವನನ್ನು ನಾವು ಗೌರವಿಸತಕ್ಕದ್ದು. ಆಗ ಇಂದಿನಂತೆ ಯೆಹೋವನು ನಮ್ಮನ್ನು ಜೀವಂತವಾಗಿರಿಸಿ ನಮಗೆ ಒಳ್ಳೆಯದನ್ನು ಮಾಡುತ್ತಾನೆ. 25 ನಮ್ಮ ದೇವರಾದ ಯೆಹೋವನು ಹೇಳಿದಂತೆಯೇ, ಇಡೀ ಧರ್ಮಶಾಸ್ತ್ರಕ್ಕೆ ನಾವು ಚಾಚೂತಪ್ಪದೆ ಎಚ್ಚರಿಕೆಯಿಂದ ವಿಧೇಯರಾದರೆ, ನಾವು ಒಳ್ಳೆಯದನ್ನು ಮಾಡಿದೆವೆಂದು ದೇವರು ಹೇಳುತ್ತಾನೆ.’

ಮಾರ್ಕ 11:1-18

ರಾಜನಂತೆ ಜೆರುಸಲೇಮಿಗೆ ಪ್ರವೇಶ

(ಮತ್ತಾಯ 21:1-11; ಲೂಕ 19:28-40; ಯೋಹಾನ 12:12-19)

11 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನ ಸಮೀಪಕ್ಕೆ ಬಂದಿದ್ದರು. ಅವರು ಆಲಿವ್ ಗುಡ್ಡದ ಬಳಿಯಿರುವ ಬೆತ್ಛಗೆ ಹಾಗೂ ಬೆಥಾನಿ ಎಂಬ ಊರುಗಳಿಗೆ ಬಂದಾಗ ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, “ಅಲ್ಲಿ ಕಾಣುತ್ತಿರುವ ಊರಿಗೆ ಹೋಗಿರಿ. ನೀವು ಅದನ್ನು ಪ್ರವೇಶಿಸಿದಾಗ, ಯಾರೂ ಸವಾರಿ ಮಾಡಿಲ್ಲದ ಒಂದು ಕತ್ತೆ ಮರಿಯನ್ನು ಅಲ್ಲಿ ಕಟ್ಟಿರುವುದನ್ನು ಕಾಣುವಿರಿ. ಆ ಕತ್ತೆಯನ್ನು ಬಿಚ್ಚಿಕೊಂಡು, ನನ್ನ ಬಳಿಗೆ ತನ್ನಿರಿ. ಯಾವನಾದರೂ ‘ಆ ಕತ್ತೆಯನ್ನು ಏಕೆ ತೆಗೆದುಕೊಂಡು ಹೋಗುತ್ತಿದ್ದೀರಿ’ ಎಂದು ನಿಮ್ಮನ್ನು ಕೇಳಿದರೆ, ‘ಒಡೆಯನಿಗೆ ಈ ಕತ್ತೆ ಬೇಕಾಗಿದೆ. ಆತನು ಇದನ್ನು ಬೇಗನೆ ಕಳುಹಿಸಿಕೊಡುವನು’ ಎಂದು ಅವನಿಗೆ ಹೇಳಿರಿ” ಎಂದನು.

ಶಿಷ್ಯರು ಊರಿನೊಳಗೆ ಹೋದಾಗ ರಸ್ತೆಯಲ್ಲಿನ ಒಂದು ಮನೆಯ ಬಾಗಿಲಿನ ಪಕ್ಕದಲ್ಲಿ ಕಟ್ಟಿಹಾಕಿದ್ದ ಕತ್ತೆಮರಿಯೊಂದನ್ನು ಕಂಡರು. ಶಿಷ್ಯರು ಹೋಗಿ ಆ ಕತ್ತೆಯನ್ನು ಬಿಚ್ಚಿದಾಗ, ಅಲ್ಲಿ ನಿಂತಿದ್ದ ಕೆಲವು ಜನರು, “ನೀವು ಮಾಡುತ್ತಿರುವುದೇನು? ಆ ಕತ್ತೆಯನ್ನು ಏಕೆ ಬಿಚ್ಚುತ್ತಿದ್ದೀರಿ?” ಎಂದು ಕೇಳಿದರು. ಯೇಸು ತಮಗೆ ಹೇಳಿದ ರೀತಿಯಲ್ಲಿಯೇ ಶಿಷ್ಯರು ಉತ್ತರಿಸಿದರು. ಆಗ ಜನರು ಆ ಕತ್ತೆಯನ್ನು ಶಿಷ್ಯರಿಗೆ ಬಿಟ್ಟುಕೊಟ್ಟರು.

ಶಿಷ್ಯರು ಕತ್ತೆಯನ್ನು ಯೇಸುವಿನ ಬಳಿಗೆ ತಂದು ತಮ್ಮ ಹೊದಿಕೆಗಳನ್ನು ಅದರ ಮೇಲೆ ಹಾಸಿದರು. ಆಗ ಯೇಸು ಅದರ ಮೇಲೆ ಕುಳಿತನು. ಅನೇಕ ಜನರು ಯೇಸುವಿಗಾಗಿ ರಸ್ತೆಯ ಮೇಲೆ ತಮ್ಮ ಹೊದಿಕೆಗಳನ್ನು ಹಾಸಿದರು. ಬೇರೆ ಕೆಲವರು ತೋಟಗಳಿಂದ ಎಲೆಗಳನ್ನು ಕೊಯ್ದುತಂದು ರಸ್ತೆಯ ಮೇಲೆ ಹರಡಿದರು. ಕೆಲವು ಜನರು ಯೇಸುವಿನ ಮುಂದೆ ಹೋಗುತ್ತಿದ್ದರು. ಇತರ ಜನರು ಆತನ ಹಿಂದೆ ಹೋಗುತ್ತಿದ್ದರು. ಜನರೆಲ್ಲರೂ,

“‘ಆತನನ್ನು ಕೊಂಡಾಡಿರಿ![a]
    ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ಆಶೀರ್ವಾದವಾಗಲಿ.’(A)

10 “ನಮ್ಮ ಪಿತೃವಾದ ದಾವೀದನ
    ರಾಜ್ಯವು ಬರಲಿ!
ಮೇಲೋಕಗಳಲ್ಲಿ ದೇವರಿಗೆ ಜಯವಾಗಲಿ” ಎಂದು ಕೂಗಿದರು.

11 ಯೇಸು ಜೆರುಸಲೇಮನ್ನು ತಲುಪಿದಾಗ, ದೇವಾಲಯಕ್ಕೆ ಹೋಗಿ ಅಲ್ಲಿದ್ದ ಪ್ರತಿಯೊಂದನ್ನೂ ನೋಡಿದನು. ಆದರೆ ಆಗಲೇ ತಡವಾಗಿತ್ತು. ಆದ್ದರಿಂದ ಯೇಸು ಹನ್ನೆರಡು ಜನ ಅಪೊಸ್ತಲರೊಂದಿಗೆ ಬೆಥಾನಿಯಕ್ಕೆ ಹೋದನು.

ಒಣಗಿಹೋದ ಅಂಜೂರ ಮರ

(ಮತ್ತಾಯ 21:18-19)

12 ಮರುದಿನ, ಯೇಸು ಬೆಥಾನಿಯದಿಂದ ಹೋಗುತ್ತಿರಲು ಆತನಿಗೆ ಹಸಿವಾಗಿತ್ತು. 13 ಆತನು ಎಲೆಗಳಿದ್ದ ಒಂದು ಅಂಜೂರದ ಮರವನ್ನು ನೋಡಿದನು. ಆದ್ದರಿಂದ ಆ ಮರದಲ್ಲಿ ಅಂಜೂರದ ಹಣ್ಣೇನಾದರೂ ಸಿಕ್ಕಬಹುದೆಂದು ಅದರ ಬಳಿಗೆ ಹೋದನು. ಆದರೆ ಆತನು ಆ ಮರದಲ್ಲಿ ಅಂಜೂರದ ಹಣ್ಣುಗಳನ್ನು ಕಾಣಲಿಲ್ಲ. ಅಲ್ಲಿ ಎಲೆಗಳು ಮಾತ್ರ ಇದ್ದವು. ಏಕೆಂದರೆ ಅದು ಅಂಜೂರ ಹಣ್ಣಿನ ಕಾಲವಾಗಿರಲಿಲ್ಲ. 14 ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನಿನ್ನ ಹಣ್ಣನ್ನು ಯಾರೂ ತಿನ್ನದಂತಾಗಲಿ” ಎಂದನು. ಯೇಸುವಿನ ಶಿಷ್ಯರಿಗೂ ಈ ಮಾತು ಕೇಳಿಸಿತು.

ದೇವಾಲಯವೇ ಪ್ರಾರ್ಥನಾಲಯ

(ಮತ್ತಾಯ 21:12-17; ಲೂಕ 19:45-48; ಯೋಹಾನ 2:13-22)

15 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮನ್ನು ಪ್ರವೇಶಿಸಿದರು. ಅವರು ದೇವಾಲಯದೊಳಗೆ ಬಂದಾಗ ಅಲ್ಲಿ ವಸ್ತುಗಳನ್ನು ಮಾರುತ್ತಿದ್ದ ಮತ್ತು ಕೊಳ್ಳುತ್ತಿದ್ದ ಜನರನ್ನು ಆತನು ಅಲ್ಲಿಂದ ಹೊರಡಿಸತೊಡಗಿದನು; ಹಣ ವಿನಿಮಯಮಾಡಿಕೊಳ್ಳುತ್ತಿದ್ದ ವ್ಯಾಪಾರಿಗಳ ಮತ್ತು ಪಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು. 16 ಹೊರೆಹೊತ್ತುಕೊಂಡು ದೇವಾಲಯದ ಮೂಲಕ ಹಾದುಹೋಗುತ್ತಿದ್ದವರನ್ನು ಆತನು ತಡೆದನು. 17 ನಂತರ ಯೇಸು ಜನರಿಗೆ ಉಪದೇಶಿಸಿ, “‘ನನ್ನ ಆಲಯವು ಎಲ್ಲಾ ಜನರಿಗೂ ಪ್ರಾರ್ಥನೆಯ ಆಲಯವೆನಿಸಿಕೊಳ್ಳುವುದು’(B) ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ಆದರೆ ನೀವು ದೇವರ ಆಲಯವನ್ನು ‘ಕಳ್ಳರು ಅಡಗಿಕೊಳ್ಳುವ ಸ್ಥಳವನ್ನಾಗಿ ಮಾಡಿದ್ದೀರಿ’”(C) ಎಂದು ಹೇಳಿದನು.

18 ಮಹಾಯಾಜಕರು ಹಾಗೂ ಧರ್ಮೋಪದೇಶಕರು ಈ ಸಂಗತಿಗಳನ್ನು ಕೇಳಿ ಯೇಸುವನ್ನು ಕೊಲ್ಲಿಸಲು ತಕ್ಕ ಮಾರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸತೊಡಗಿದರು. ಜನರೆಲ್ಲರೂ ಯೇಸುವಿನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟಿದ್ದರಿಂದ ಅವರು ಯೇಸುವಿಗೆ ಭಯಪಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International