Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 17-18

ಪ್ರಾಣಿಗಳನ್ನು ಕೊಲ್ಲುವುದರ ಮತ್ತು ತಿನ್ನುವುದರ ಕುರಿತು ನಿಯಮಗಳು

17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: ಆರೋನನೊಡನೆಯೂ ಅವನ ಪುತ್ರರೊಡನೆಯೂ ಇಸ್ರೇಲರೆಲ್ಲರೊಡನೆಯೂ ಮಾತಾಡು. ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆಂದು ಹೇಳು. ಅದೇನೆಂದರೆ, ಇಸ್ರೇಲರಲ್ಲಿ ಯಾವನಾದರೂ ಹೋರಿಯನ್ನಾಗಲಿ ಕುರಿಮರಿಯನ್ನಾಗಲಿ ಹೋತವನ್ನಾಗಲಿ ಪಾಳೆಯದೊಳಗೆ ಅಥವಾ ಪಾಳೆಯದ ಹೊರಗೆ ವಧಿಸಬಹುದು. ಅವನು ಆ ಪ್ರಾಣಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಅವನು ಆ ಪಶುವಿನ ಒಂದು ಭಾಗವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಅವನು ರಕ್ತವನ್ನು ಸುರಿಸಿದ್ದರಿಂದ ತನ್ನ ಕಾಣಿಕೆಯನ್ನು ಯೆಹೋವನ ಪವಿತ್ರ ಗುಡಾರದೊಳಗೆ ತೆಗೆದುಕೊಂಡು ಹೋಗಬೇಕು. ಅವನು ಪ್ರಾಣಿಯ ಒಂದು ಭಾಗವನ್ನು ಯೆಹೋವನಿಗೆ ಉಡುಗೊರೆಯಾಗಿ ತೆಗೆದುಕೊಂಡು ಹೋಗದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು. ಸಮಾಧಾನಯಜ್ಞರೂಪವಾಗಿ ಇದನ್ನು ಯೆಹೋವನಿಗೆ ಅರ್ಪಿಸುವ ಯಜ್ಞಕ್ಕೆ ಇದೇ ನಿಯಮ. ಇಸ್ರೇಲರು ಹೊಲಗಳಲ್ಲಿ ಕೊಲ್ಲುವ ತಮ್ಮ ಪ್ರಾಣಿಗಳನ್ನು ದೇವದರ್ಶನಗುಡಾರದ ಬಾಗಿಲಿಗೆ ಅಂದರೆ ಯೆಹೋವನ ಸನ್ನಿಧಿಯಲ್ಲಿರುವ ಯಾಜಕರ ಬಳಿಗೆ ತರಬೇಕು. ಬಳಿಕ ಯಾಜಕನು ಆ ಪಶುಗಳ ರಕ್ತವನ್ನು ದೇವದರ್ಶನಗುಡಾರದ ಬಾಗಿಲಿನ ಹತ್ತಿರವಿರುವ ಯೆಹೋವನ ಯಜ್ಞವೇದಿಕೆಗೆ ಚೆಲ್ಲುವನು ಮತ್ತು ಅವುಗಳ ಕೊಬ್ಬನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡುವನು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ. ಅವರು “ಅಜದೇವತೆಗಳಿಗೆ” ಇನ್ನು ಮುಂದೆ ಬಲಿಕೊಡಬಾರದು. ಅವರು ಅನ್ಯದೇವತೆಗಳ ಹಿಂದೆ ಹೋಗಿದ್ದಾರೆ. ಆ ರೀತಿಯಲ್ಲಿ ಅವರು ಸೂಳೆಯರ ಹಾಗೆ ವರ್ತಿಸಿದ್ದಾರೆ. ಈ ನಿಯಮಗಳು ಶಾಶ್ವತವಾಗಿವೆ.

“ಜನರಿಗೆ ಹೇಳಬೇಕಾದದ್ದೇನೆಂದರೆ: ನಿಮ್ಮ ಮಧ್ಯದಲ್ಲಿ ವಾಸಿಸುತ್ತಿರುವ ಯಾವ ಇಸ್ರೇಲನಾಗಲಿ ಅನ್ಯನಾಗಲಿ ಸರ್ವಾಂಗಹೋಮವನ್ನಾಗಲಿ ಯಜ್ಞವನ್ನಾಗಲಿ ಅರ್ಪಿಸಬಹುದು. ಅವನು ತನ್ನ ಬಲಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತೆಗೆದುಕೊಂಡು ಬಂದು ಯೆಹೋವನಿಗೆ ಅರ್ಪಿಸಬೇಕು. ಇಲ್ಲವಾದರೆ ಅವನನ್ನು ಅವನ ಕುಲದಿಂದ ತೆಗೆದುಹಾಕಬೇಕು.

10 “ರಕ್ತವನ್ನು ತಿನ್ನುವ ಪ್ರತಿಯೊಬ್ಬನಿಗೂ ನಾನು ವಿರುದ್ಧವಾಗಿರುವೆನು. ಅವನು ನಿಮ್ಮ ಮಧ್ಯದಲ್ಲಿ ವಾಸವಾಗಿರುವ ಇಸ್ರೇಲನಾಗಲಿ ಪರದೇಶಸ್ಥನಾಗಲಿ ಆಗಿರಬಹುದು. ನಾನು ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕುವೆನು. 11 ಯಾಕೆಂದರೆ ದೇಹದ ಜೀವ ರಕ್ತದಲ್ಲಿದೆ. ನೀವು ನಿಮಗೋಸ್ಕರವಾಗಿ ಯಜ್ಞವೇದಿಕೆಯ ಮೇಲೆ ಪ್ರಾಯಶ್ಚಿತ್ತ ಮಾಡಲಿ ಎಂದು ನಾನು ಅದನ್ನು ನಿಮಗೆ ಕೊಟ್ಟಿದ್ದೇನೆ. ನೀವು ನಿಮಗೋಸ್ಕರವಾಗಿ ಪ್ರಾಯಶ್ಚಿತ್ತ ಮಾಡಲು ಈ ನಿಯಮಗಳನ್ನು ಉಪಯೋಗಿಸಬೇಕು. ಒಬ್ಬನ ಜೀವಕ್ಕೆ ರಕ್ತವೇ ಪ್ರಾಯಶ್ಚಿತ್ತವಾಗಿದೆ. ಜೀವಿಯೊಂದನ್ನು ಕೊಂದಿದ್ದರ ಬೆಲೆಯಾಗಿ ನೀವು ನನಗೆ ಆ ರಕ್ತವನ್ನು ಕೊಡಬೇಕು. 12 ಆದ್ದರಿಂದ ನಾನು ಇಸ್ರೇಲರಿಗೆ ಹೇಳುವುದೇನೆಂದರೆ: ನಿಮ್ಮಲ್ಲಿ ಯಾವನೂ ರಕ್ತಭೋಜನ ಮಾಡಬಾರದು ಮತ್ತು ನಿಮ್ಮ ಮಧ್ಯದಲ್ಲಿ ವಾಸಿಸುವ ಯಾವ ಪರದೇಶಸ್ಥನೂ ರಕ್ತಭೋಜನ ಮಾಡಬಾರದು.

13 “ಯಾವನಾದರೂ ಒಂದು ಪ್ರಾಣಿಯನ್ನು ಬೇಟೆಯಾಡಿದರೆ ಅಥವಾ ಪಕ್ಷಿಯನ್ನು ಹಿಡಿದರೆ, ಅವನು ಅದರ ರಕ್ತವನ್ನು ನೆಲದ ಮೇಲೆ ಸುರಿದು ಅದನ್ನು ಮಣ್ಣಿನಿಂದ ಮುಚ್ಚಿಬಿಡಬೇಕು. ಅವನು ಇಸ್ರೇಲನಾದರೂ ನಿಮ್ಮ ಮಧ್ಯದಲ್ಲಿ ವಾಸಿಸುವ ಪರದೇಶಸ್ಥನಾದರೂ ಹಾಗೆಯೇ ಮಾಡಬೇಕು. 14 ನೀವು ಇದನ್ನು ಯಾಕೆ ಮಾಡಬೇಕೆಂದರೆ, ಮಾಂಸದಲ್ಲಿ ರಕ್ತವು ಇನ್ನೂ ಇದ್ದರೆ, ಅದರ ಪ್ರಾಣವು ಇನ್ನೂ ಮಾಂಸದಲ್ಲಿ ಇದೆ. ಆದ್ದರಿಂದ ನಾನು ಇಸ್ರೇಲರಿಗೆ ಈ ಅಪ್ಪಣೆಯನ್ನು ಕೊಡುತ್ತೇನೆ. ರಕ್ತದಿಂದ ಕೂಡಿರುವ ಮಾಂಸವನ್ನು ತಿನ್ನಬಾರದು. ಯಾವನಾದರೂ ರಕ್ತ ಭೋಜನ ಮಾಡಿದರೆ, ಅವನು ತನ್ನ ಜನರಿಂದ ತೆಗೆದುಹಾಕಲ್ಪಡಬೇಕು.

15 “ಅಲ್ಲದೆ ಯಾವನಾದರೂ ತನ್ನಷ್ಟಕ್ಕೆ ಸತ್ತ ಪ್ರಾಣಿಯನ್ನು ತಿಂದರೆ ಅಥವಾ ಬೇರೆ ಪ್ರಾಣಿಯಿಂದ ಕೊಲ್ಲಲ್ಪಟ್ಟ ಪ್ರಾಣಿಯನ್ನು ತಿಂದರೆ, ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿಕೊಳ್ಳಬೇಕು. ಅವನು ಇಸ್ರೇಲನಾಗಿದ್ದರೂ ನಿಮ್ಮ ಮಧ್ಯದಲ್ಲಿ ವಾಸಿಸುವ ಪರದೇಶಸ್ಥನಾಗಿದ್ದರೂ ಹಾಗೆಯೇ ಮಾಡಬೇಕು. 16 ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳದೆಯೂ ಸ್ನಾನ ಮಾಡಿಕೊಳ್ಳದೆಯೂ ಹೋದರೆ ಆಗ ಅವನು ಪಾಪಮಾಡಿದ ದೋಷಿಯಾಗಿರುವನು.”

ಲೈಂಗಿಕ ಸಂಬಂಧಗಳ ನಿಯಮಗಳು

18 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಹೇಳು: ನಾನು ನಿಮ್ಮ ದೇವರಾಗಿರುವ ಯೆಹೋವನು. ಹಿಂದೆ ನೀವು ಈಜಿಪ್ಟಿನಲ್ಲಿ ವಾಸಿಸಿದಿರಿ. ಈಜಿಪ್ಟಿನ ಜನರು ಆಚರಿಸುವ ಆಚಾರಗಳನ್ನು ನೀವು ಅನುಸರಿಸಬಾರದು. ಆ ದೇಶದಲ್ಲಿ ಮಾಡುತ್ತಿದ್ದ ಕಾರ್ಯಗಳನ್ನು ನೀವು ಮಾಡಬಾರದು. ನಾನು ನಿಮ್ಮನ್ನು ಕಾನಾನಿಗೆ ನಡೆಸುತ್ತಿದ್ದೇನೆ. ಆ ದೇಶದಲ್ಲಿ ಮಾಡುವ ಕಾರ್ಯಗಳನ್ನು ನೀವು ಮಾಡಕೂಡದು. ಅವರ ಸಂಪ್ರದಾಯಗಳನ್ನು ಅನುಸರಿಸಬೇಡಿ. ನೀವು ನನ್ನ ನಿಯಮಗಳಿಗೆ ವಿಧೇಯರಾಗಿ ನನ್ನ ಕಟ್ಟಳೆಗಳನ್ನು ಅನುಸರಿಸಬೇಕು. ಆ ನಿಯಮಗಳನ್ನು ತಪ್ಪದೆ ಪಾಲಿಸಿರಿ. ಯಾಕೆಂದರೆ ನಾನು ನಿಮ್ಮ ದೇವರಾದ ಯೆಹೋವನು. ಆದ್ದರಿಂದ ನೀವು ನನ್ನ ಕಟ್ಟಳೆಗಳಿಗೆ ಮತ್ತು ನಿಯಮಗಳಿಗೆ ವಿಧೇಯರಾಗಬೇಕು. ಒಬ್ಬನು ನನ್ನ ಕಟ್ಟಳೆಗಳಿಗೆ ಮತ್ತು ನಿಯಮಗಳಿಗೆ ವಿಧೇಯನಾದರೆ, ಅವನು ಜೀವಿಸುವನು! ನಾನೇ ಯೆಹೋವನು!

“ನೀವು ಎಂದಿಗೂ ನಿಮ್ಮ ಹತ್ತಿರದ ಸಂಬಂಧಿಗಳೊಂದಿಗೆ ಲೈಂಗಿಕ ಸಂಬಂಧ[a] ಮಾಡಬಾರದು. ನಾನೇ ಯೆಹೋವನು!

“ತಾಯಿಯೊಂದಿಗೆ ಲೈಂಗಿಕ ಸಂಬಂಧ ಮಾಡಿ ನಿಮ್ಮ ತಂದೆಗೆ ಎಂದಿಗೂ ಅವಮಾನ ತರಬಾರದು. ಆಕೆ ನಿಮ್ಮ ತಾಯಿಯಾಗಿದ್ದಾಳೆ. ನೀವು ಆಕೆಯೊಂದಿಗೆ ಎಂದಿಗೂ ಲೈಂಗಿಕ ಸಂಬಂಧ ಮಾಡಬಾರದು. ಮಲತಾಯಿಯೊಂದಿಗೂ ಲೈಂಗಿಕ ಸಂಬಂಧ ಮಾಡಬಾರದು. ಅದು ನಿಮ್ಮ ತಂದೆಗೆ ಅವಮಾನ ತರುವುದು.

“ಸಹೋದರಿಯೊಂದಿಗೆ, ಅಂದರೆ ನಿಮ್ಮ ತಂದೆ ಅಥವಾ ತಾಯಿಯ ಮಗಳೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ನಿಮ್ಮ ಸಹೋದರಿಯು ನಿಮ್ಮ ಮನೆಯಲ್ಲಾಗಲಿ[b] ಅಥವಾ ಇನ್ನೊಂದು ಸ್ಥಳದಲ್ಲಾಗಲಿ ಹುಟ್ಟಿದರೂ ಆಕೆಯೊಡನೆ ಲೈಂಗಿಕ ಸಂಬಂಧ ಮಾಡಬಾರದು.

10 “ನೀವು ನಿಮ್ಮ ಮೊಮ್ಮಗಳೊಡನೆ ಲೈಂಗಿಕ ಸಂಬಂಧ ಮಾಡಬಾರದು. ಅದು ನಿಮಗೆ ಅವಮಾನ ತರುವುದು.

11 “ತಂದೆಗೆ ಮತ್ತು ಅವನ ಹೆಂಡತಿಗೆ ಒಬ್ಬ ಮಗಳಿದ್ದರೆ, ಆಕೆ ನಿಮ್ಮ ಸಹೋದರಿಯಾಗಿದ್ದಾಳೆ. ನೀವು ಆಕೆಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು.

12 “ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಆಕೆಯು ನಿಮ್ಮ ತಂದೆಯ ಹತ್ತಿರದ ಸಂಬಂಧಿ. 13 ತಾಯಿಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಆಕೆಯು ನಿಮ್ಮ ತಾಯಿಯ ಹತ್ತಿರದ ಸಂಬಂಧಿಯಾಗಿದ್ದಾಳೆ. 14 ನೀವು ನಿಮ್ಮ ತಂದೆಯ ಸಹೋದರನ ಹೆಂಡತಿಯೊಡನೆ ಲೈಂಗಿಕ ಸಂಬಂಧವಿಟ್ಟುಕೊಂಡರೆ ಅವನನ್ನು ಅವಮಾನಪಡಿಸಿದಂತಾಗುವುದು. ಯಾಕೆಂದರೆ ಆಕೆಯು ನಿಮ್ಮ ದೊಡ್ಡಮ್ಮ ಅಥವಾ ಚಿಕ್ಕಮ್ಮ.

15 “ಸೊಸೆಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಆಕೆಯು ನಿಮ್ಮ ಮಗನ ಹೆಂಡತಿ.

16 “ಸಹೋದರನ ಹೆಂಡತಿಯೊಡನೆ ಲೈಂಗಿಕ ಸಂಬಂಧ ಮಾಡಬಾರದು. ಅಂಥ ಸಂಬಂಧವು ನಿಮ್ಮ ಸಹೋದರನಿಗೆ ಅವಮಾನವನ್ನು ಉಂಟುಮಾಡುವುದು.

17 “ಒಬ್ಬ ಸ್ತ್ರೀಯೊಡನೆಯೂ ಆಕೆಯ ಮಗಳೊಡನೆಯೂ ಲೈಂಗಿಕ ಸಂಬಂಧ ಮಾಡಬಾರದು. ಆ ಸ್ತ್ರೀಯ ಮೊಮ್ಮಗಳೊಡನೆಯೂ ಲೈಂಗಿಕ ಸಂಬಂಧ ಮಾಡಬಾರದು. ಈ ಮೊಮ್ಮಗಳು ಈ ಸ್ತ್ರೀಯ ಮಗನ ಅಥವಾ ಮಗಳ ಮಗಳಾಗಿರಬಹುದು. ಆಕೆಯ ಮೊಮ್ಮಕ್ಕಳಾದ ಹೆಣ್ಣುಮಕ್ಕಳು ಆಕೆಯ ಹತ್ತಿರದ ಸಂಬಂಧಿಕರಾಗಿದ್ದಾರೆ. ಆಕೆಯೊಡನೆ ಲೈಂಗಿಕ ಸಂಬಂಧ ಮಾಡುವುದು ತಪ್ಪು.

18 “ಹೆಂಡತಿ ಇನ್ನೂ ಜೀವದಿಂದಿರುವಾಗ, ಆಕೆಯ ಸಹೋದರಿಯನ್ನು ಹೆಂಡತಿಯನ್ನಾಗಿ ತೆಗೆದುಕೊಳ್ಳಬಾರದು. ಇಲ್ಲವಾದರೆ ಆ ಇಬ್ಬರು ಸಹೋದರಿಯರು ಒಬ್ಬರಿಗೊಬ್ಬರು ವೈರಿಗಳಾಗುವರು. ಹೆಂಡತಿಯ ಸಹೋದರಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು.

19 “ಅಲ್ಲದೆ ಸ್ತ್ರೀಯು ಮುಟ್ಟಿನಿಂದ ಅಶುದ್ಧಳಾಗಿರುವಾಗ ಲೈಂಗಿಕ ಸಂಬಂಧಕ್ಕಾಗಿ ಆಕೆಯ ಹತ್ತಿರ ಹೋಗಬಾರದು.

20 “ನೆರೆಯವನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ಮಾಡಬಾರದು. ಇಂಥ ಸಂಬಂಧವು ನಿಮ್ಮನ್ನು ಅಶುದ್ಧರನ್ನಾಗಿ ಮಾಡುವುದು.

21 “ನೀವು ನಿಮ್ಮ ಯಾವ ಮಕ್ಕಳನ್ನೂ ಅಗ್ನಿಯ ಮೂಲಕ ಮೊಲೆಕನಿಗೆ ಕೊಡಬಾರದು. ಇಲ್ಲವಾದರೆ ನೀವು ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡುವಿರಿ. ನಾನೇ ಯೆಹೋವನು!

22 “ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು. ಅದು ಭಯಂಕರ ಪಾಪ!

23 “ಪಶುವಿನೊಡನೆ ಲೈಂಗಿಕ ಸಂಬಂಧ ಮಾಡಬಾರದು. ಇಂಥ ಸಂಬಂಧವು ನಿಮ್ಮನ್ನು ಅಪವಿತ್ರರನ್ನಾಗಿ ಮಾಡುವುದು. ಅಲ್ಲದೆ ಸ್ತ್ರೀಯು ಪಶುವಿನೊಡನೆ ಲೈಂಗಿಕ ಸಂಬಂಧ ಪಡೆಯಬಾರದು. ಇಂಥ ಸಂಬಂಧ ಸ್ವಭಾವಕ್ಕೆ ವಿರುದ್ದವಾದದ್ದು.

24 “ಆ ದುರಾಚಾರಗಳಲ್ಲಿ ಯಾವುದರಿಂದಲೂ ನಿಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಬೇಡಿರಿ. ನಾನು ಜನಾಂಗಗಳನ್ನು ಅವರ ದೇಶಗಳಿಂದ ಹೊರಡಿಸಿ ಅವರ ದೇಶವನ್ನು ನಿಮಗೆ ಕೊಡುತ್ತಿದ್ದೇನೆ. ಯಾಕೆಂದರೆ ಅವರು ಅಂಥ ಭಯಂಕರ ಪಾಪಗಳನ್ನು ಮಾಡಿದರು. 25 ಆದ್ದರಿಂದ ದೇಶವು ಸಹ ಅಶುದ್ಧವಾಯಿತು. ಆದ್ದರಿಂದ ನಾನು ಅದನ್ನು ಅದರ ಪಾಪಗಳಿಗಾಗಿ ದಂಡಿಸಿದೆನು. ಆ ದೇಶವು ತನ್ನಲ್ಲಿ ವಾಸಿಸಿದ ಜನರನ್ನು ಕಾರಿಬಿಟ್ಟಿತು.

26 “ಆದ್ದರಿಂದ ನೀವು ನನ್ನ ಕಟ್ಟಳೆಗಳಿಗೂ ನಿಯಮಗಳಿಗೂ ಆಜ್ಞಾವಿಧಿಗಳಿಗೂ ವಿಧೇಯರಾಗಬೇಕು. ನೀವು ಆ ಭಯಂಕರ ಪಾಪಗಳಲ್ಲಿ ಯಾವುದನ್ನೂ ಮಾಡಬಾರದು. ಆ ವಿಧಿಗಳು ಇಸ್ರೇಲರಿಗಾಗಿ ಮತ್ತು ನಿಮ್ಮ ಮಧ್ಯದಲ್ಲಿ ವಾಸಿಸುವ ಅನ್ಯಜನರಿಗಾಗಿ ಇರುತ್ತವೆ. 27 ನಿಮಗಿಂತ ಮುಂಚೆ ಈ ದೇಶದಲ್ಲಿ ವಾಸಿಸಿದ ಜನರು ಆ ಭಯಂಕರ ಕೃತ್ಯಗಳನ್ನು ಮಾಡಿದರು. ಆದ್ದರಿಂದ ದೇಶವು ಹೊಲೆಯಾಯಿತು. 28 ನೀವು ಈ ಕಾರ್ಯಗಳನ್ನು ಮಾಡಿದರೆ, ನೀವು ಆ ದೇಶವನ್ನು ಹೊಲೆಮಾಡುವಿರಿ. ಅದು ಮೊದಲು ವಾಸಿಸಿದ ಜನಾಂಗಗಳನ್ನು ಕಾರಿಬಿಟ್ಟಂತೆ ನಿಮ್ಮನ್ನೂ ಕಾರಿಬಿಡುವುದು. 29 ಯಾವನಾದರೂ ಆ ಭಯಂಕರ ಪಾಪಗಳಲ್ಲಿ ಯಾವುದನ್ನಾದರೂ ಮಾಡಿದರೆ, ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕಬೇಕು. 30 ಅನ್ಯಜನರು ಆ ಭಯಂಕರ ಪಾಪಗಳನ್ನು ಮಾಡಿದ್ದಾರೆ. ಆದರೆ ನೀವು ನನ್ನ ಕಟ್ಟಳೆಗಳಿಗೆ ವಿಧೇಯರಾಗಬೇಕು. ನೀವು ಆ ಭಯಂಕರ ಪಾಪಗಳಲ್ಲಿ ಯಾವುದನ್ನೂ ಮಾಡಬಾರದು. ಆ ಭಯಂಕರ ಪಾಪಗಳಿಂದ ನಿಮ್ಮನ್ನು ಹೊಲೆ ಮಾಡಿಕೊಳ್ಳಬೇಡಿರಿ. ನಾನೇ ನಿಮ್ಮ ದೇವರಾದ ಯೆಹೋವನು.”

ಮತ್ತಾಯ 27:27-50

ಪಿಲಾತನ ಸೈನಿಕರು ಯೇಸುವಿಗೆ ಮಾಡಿದ ಅಪಹಾಸ್ಯ

(ಮಾರ್ಕ 15:16-20; ಯೋಹಾನ 19:2-3)

27 ಪಿಲಾತನ ಸೈನಿಕರು ಯೇಸುವನ್ನು ರಾಜಭವನದ ಒಳಕ್ಕೆ ಕರೆದೊಯ್ದರು. ಸೈನಿಕರೆಲ್ಲರೂ ಯೇಸುವನ್ನು ಸುತ್ತುಗಟ್ಟಿದರು. 28 ಸೈನಿಕರು ಆತನ ಬಟ್ಟೆಗಳನ್ನು ತೆಗೆದುಹಾಕಿ ಆತನಿಗೆ ಒಂದು ಕೆಂಪು ನಿಲುವಂಗಿಯನ್ನು ತೊಡಿಸಿದರು. 29 ಮುಳ್ಳಿನ ಬಳ್ಳಿಯಿಂದ ಒಂದು ಕಿರೀಟವನ್ನು ಹೆಣೆದು ಆತನ ತಲೆಯ ಮೇಲಿಟ್ಟರು. ಆತನ ಬಲಗೈಗೆ ಒಂದು ಕೋಲನ್ನು ಕೊಟ್ಟರು. ಬಳಿಕ ಸೈನಿಕರು ಯೇಸುವಿನ ಮುಂದೆ ಬಾಗಿ, “ಯೆಹೂದ್ಯರ ರಾಜನೇ, ನಮಸ್ಕಾರ” ಎಂದು ಅಪಹಾಸ್ಯ ಮಾಡಿದರು. 30 ಆತನ ಮೇಲೆ ಉಗುಳಿದರು. ಆತನ ಕೈಯಿಂದ ಕೋಲನ್ನು ತೆಗೆದುಕೊಂಡು ತಲೆಯ ಮೇಲೆ ಹೊಡೆದರು. 31 ಹೀಗೆ ಅಪಹಾಸ್ಯ ಮಾಡಿದ ಬಳಿಕ, ಆತನ ನಿಲುವಂಗಿಯನ್ನು ತೆಗೆದುಹಾಕಿ ಆತನ ಬಟ್ಟೆಗಳನ್ನು ಮತ್ತೆ ಆತನಿಗೆ ತೊಡಿಸಿ ಶಿಲುಬೆಗೇರಿಸಲು ಕರೆದೊಯ್ದರು.

ಶಿಲುಬೆಗೇರಿಸಲ್ಪಟ್ಟ ಯೇಸು

(ಮಾರ್ಕ 15:21-32; ಲೂಕ 23:26-43; ಯೋಹಾನ 19:17-27)

32 ಸೈನಿಕರು ಯೇಸುವಿನೊಂದಿಗೆ ನಗರದಿಂದ ಹೊರಕ್ಕೆ ಹೋಗುತ್ತಿರುವಾಗ ಸಿರೇನ ಪಟ್ಟಣದ “ಸಿಮೋನ” ಎಂಬ ವ್ಯಕ್ತಿಯನ್ನು ಕಂಡರು. ಆತನ ಶಿಲುಬೆ ಹೊರುವುದಕ್ಕಾಗಿ ಅವರು ಅವನನ್ನು ಬಲವಂತಪಡಿಸಿದರು. 33 ಅವರು ಗೊಲ್ಗೊಥಾ ಎಂಬ ಸ್ಥಳಕ್ಕೆ ಬಂದರು. (ಗೊಲ್ಗೊಥಾ ಎಂದರೆ “ಕಪಾಲ ಸ್ಥಳ” ಎಂದರ್ಥ.) 34 ಗೊಲ್ಗೊಥಾದಲ್ಲಿ ಸೈನಿಕರು ಆತನಿಗೆ ಕುಡಿಯಲು ದ್ರಾಕ್ಷಾರಸವನ್ನು ಕೊಟ್ಟರು. ಈ ದ್ರಾಕ್ಷಾರಸಕ್ಕೆ ನೋವು ನಿವಾರಕ ಔಷಧಿಯನ್ನು ಬೆರೆಸಿದ್ದರು. ಆತನು ದ್ರಾಕ್ಷಾರಸದ ರುಚಿ ನೋಡಿ ಅದನ್ನು ಕುಡಿಯಲಿಲ್ಲ.

35 ಸೈನಿಕರು ಆತನನ್ನು ಶಿಲುಬೆಗೆ ಮೊಳೆಗಳಿಂದ ಜಡಿದರು. ನಂತರ ಉಡುಪಿಗಾಗಿ ತಮ್ಮಲ್ಲಿಯೇ ಚೀಟಿಹಾಕಿ ತೆಗೆದುಕೊಂಡರು. 36 ಸೈನಿಕರು ಯೇಸುವನ್ನು ಕಾಯುತ್ತಾ ಅಲ್ಲೇ ಕುಳಿತಿದ್ದರು. 37 ಇದಲ್ಲದೆ ಆತನ ಮೇಲೆ ಹೊರಿಸಿದ ಅಪರಾಧವನ್ನು ಬರೆದು ಆತನ ತಲೆಯ ಮೇಲ್ಗಡೆ ಹಚ್ಚಿದರು. “ಈತನು ಯೇಸು, ಯೆಹೂದ್ಯರ ರಾಜ” ಎಂಬುದೇ ಆ ಅಪರಾಧ.

38 ಯೇಸುವಿನ ಪಕ್ಕದಲ್ಲಿ ಇಬ್ಬರು ಕಳ್ಳರನ್ನು ಶಿಲುಬೆಗೆ ಹಾಕಿದ್ದರು. ಒಬ್ಬ ಕಳ್ಳನನ್ನು ಯೇಸುವಿನ ಬಲಗಡೆಯಲ್ಲಿಯೂ ಮತ್ತೊಬ್ಬ ಕಳ್ಳನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದ್ದರು. 39 ದಾರಿಯಲ್ಲಿ ಹೋಗುತ್ತಿದ್ದ ಜನರು ತಲೆಯಾಡಿಸುತ್ತಾ, 40 “ನೀನು ದೇವಾಲಯವನ್ನು ಕೆಡವಿ, ಅದನ್ನು ಮತ್ತೆ ಮೂರು ದಿನಗಳಲ್ಲಿ ನಿರ್ಮಿಸುತ್ತೇನೆಂದು ಹೇಳುತ್ತಿದ್ದೆ. ಆದರೆ ಈಗ ನಿನ್ನನ್ನು ನೀನೇ ರಕ್ಷಿಸಿಕೊ! ನೀನು ನಿಜವಾಗಿಯೂ ದೇವರ ಮಗನಾಗಿದ್ದರೆ, ಶಿಲುಬೆಯಿಂದ ಕೆಳಗಿಳಿದು ಬಾ!” ಎಂದು ಹಾಸ್ಯಮಾಡಿದರು.

41 ಮಹಾಯಾಜಕರೂ ಧರ್ಮೋಪದೇಶಕರೂ ಮತ್ತು ಹಿರಿಯ ಯೆಹೂದ್ಯ ನಾಯಕರೂ ಅಲ್ಲಿದ್ದರು. ಇವರು ಸಹ ಇತರ ಜನರಂತೆ ಯೇಸುವನ್ನು ಗೇಲಿ ಮಾಡಿದರು. 42 “ಇವನು ಬೇರೆಯವರನ್ನು ರಕ್ಷಿಸಿದನು. ಆದರೆ ತನ್ನನ್ನು ರಕ್ಷಿಸಿಕೊಳ್ಳಲಾರ! ಇಸ್ರೇಲರ ರಾಜ ಎಂದು ಜನ ಹೇಳುತ್ತಾರೆ. ಇವನು ರಾಜನಾಗಿದ್ದರೆ ಶಿಲುಬೆಯಿಂದ ಕೆಳಗಿಳಿದು ಬರಲಿ. ಆಗ ನಾವು ಇವನನ್ನು ನಂಬುತ್ತೇವೆ. 43 ಇವನು ದೇವರನ್ನು ನಂಬಿದ್ದನು. ಈಗ ದೇವರಿಗೆ ನಿಜವಾಗಿಯೂ ಇವನು ಬೇಕಿದ್ದರೆ, ದೇವರೇ ಇವನನ್ನು ಕಾಪಾಡಲಿ. ‘ನಾನು ದೇವರ ಮಗನು’ ಎಂದು ಇವನೇ ಹೇಳಿಕೊಂಡನಲ್ಲಾ” ಎಂದು ಅವರು ಹೇಳಿದರು. 44 ಅದೇ ರೀತಿಯಲ್ಲಿ ಯೇಸುವಿನ ಎಡಬಲಗಳಲ್ಲಿ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ನಿಂದಿಸಿದರು.

ಯೇಸುವಿನ ಮರಣ

(ಮಾರ್ಕ 15:33-41; ಲೂಕ 23:44-49; ಯೋಹಾನ 19:28-30)

45 ಅಂದು ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯವರೆಗೆ ದೇಶದಲ್ಲೆಲ್ಲಾ ಕತ್ತಲೆ ಕವಿಯಿತು. 46 ಸುಮಾರು ಮೂರು ಗಂಟೆಯ ಸಮಯದಲ್ಲಿ ಯೇಸು, “ಏಲೀ, ಏಲೀ, ಲಮಾ ಸಬಕ್ತಾನಿ?” ಎಂದು ಗಟ್ಟಿಯಾದ ಧ್ವನಿಯಲ್ಲಿ ಕೂಗಿದನು. ಹೀಗೆಂದರೆ, “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟುಬಿಟ್ಟೆ?”(A) ಎಂದರ್ಥ.

47 ಅಲ್ಲಿ ನಿಂತಿದ್ದ ಕೆಲವು ಜನರು ಇದನ್ನು ಕೇಳಿ, “ಇವನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದು ಹೇಳಿದರು.

48 ಆ ಜನರಲ್ಲಿ ಒಬ್ಬನು ಓಡಿಹೋಗಿ ಸ್ಪಂಜನ್ನು ತಂದು, ಅದರಲ್ಲಿ ಹುಳಿರಸವನ್ನು ತುಂಬಿಸಿ, ಅದನ್ನು ಒಂದು ಕೋಲಿಗೆ ಕಟ್ಟಿ ಆ ಕೋಲಿನಿಂದ ಸ್ಪಂಜನ್ನು ಯೇಸುವಿಗೆ ಕುಡಿಯಲು ಕೊಟ್ಟನು. 49 ಆದರೆ ಇತರ ಜನರು, “ಅವನ ಬಗ್ಗೆ ಚಿಂತಿಸಬೇಡ, ಅವನನ್ನು ರಕ್ಷಿಸಲು ಎಲೀಯನು ಬರಬಹುದೇನೋ ನೋಡೋಣ” ಎಂದು ಹೇಳಿದರು.

50 ಬಳಿಕ ಯೇಸು ಮತ್ತೆ ಗಟ್ಟಿಯಾದ ಧ್ವನಿಯಲ್ಲಿ ಕೂಗಿ ಪ್ರಾಣಬಿಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International