Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 15-16

ದೇಹದಿಂದುಂಟಾಗುವ ಸ್ರಾವಗಳ ವಿಷಯದಲ್ಲಿ ಅನುಸರಿಸಬೇಕಾದ ನಿಯಮಗಳು

15 ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ: “ಇಸ್ರೇಲರಿಗೆ ಹೀಗೆ ಹೇಳಿರಿ: ಒಬ್ಬನ ದೇಹದಿಂದ ಸ್ರಾವವಾದಾಗ ಆ ವ್ಯಕ್ತಿ ಅಶುದ್ಧನಾಗಿದ್ದಾನೆ. ಆ ಸ್ರಾವವು ಹರಿಯುತ್ತಿದ್ದರೂ ನಿಂತುಹೋಗಿದ್ದರೂ ಅವನು ಅಶುದ್ಧನೇ.

“ಸ್ರಾವವಾಗುತ್ತಿರುವ ವ್ಯಕ್ತಿ ಯಾವ ಹಾಸಿಗೆಯ ಮೇಲೆ ಮಲಗಿದರೂ ಆ ಹಾಸಿಗೆ ಅಶುದ್ಧವಾಗುತ್ತದೆ. ಯಾವನಾದರೂ ಆ ವ್ಯಕ್ತಿಯ ಹಾಸಿಗೆಯನ್ನು ಮುಟ್ಟಿದರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಸ್ರಾವವುಳ್ಳವನು ಕುಳಿತುಕೊಳ್ಳುವ ವಸ್ತುವಿನ ಮೇಲೆ ಯಾವನಾದರೂ ಕುಳಿತುಕೊಂಡರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಅಲ್ಲದೆ ಸ್ರಾವವುಳ್ಳ ವ್ಯಕ್ತಿಯನ್ನು ಯಾವನಾದರೂ ಮುಟ್ಟಿದರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

“ಸ್ರಾವವುಳ್ಳ ವ್ಯಕ್ತಿ ಶುದ್ಧವ್ಯಕ್ತಿಯ ಮೇಲೆ ಉಗುಳಿದರೆ, ಶುದ್ಧವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಿಂದ ಸ್ನಾನಮಾಡಬೇಕು. ಈ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಸ್ರಾವವುಳ್ಳ ವ್ಯಕ್ತಿ ಯಾವ ತಡಿಯ ಮೇಲೆ ಕುಳಿತರೂ ಅದು ಅಶುದ್ಧವಾಗುವುದು. 10 ಆದ್ದರಿಂದ ಯಾವನಾದರೂ ಸ್ರಾವವುಳ್ಳ ವ್ಯಕ್ತಿಯ ಕೆಳಗಿರುವ ಯಾವದೇ ವಸ್ತುಗಳನ್ನು ಮುಟ್ಟಿದರೂ ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಸ್ರಾವವುಳ್ಳ ವ್ಯಕ್ತಿಯ ಕೆಳಗಿರುವ ವಸ್ತುಗಳನ್ನು ತೆಗೆದುಕೊಂಡುಹೋಗುವ ಯಾವನಾದರೂ ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 11 ಒಂದುವೇಳೆ ಸ್ರಾವವುಳ್ಳ ಒಬ್ಬನು ತನ್ನ ಕೈಗಳನ್ನು ನೀರಿನಲ್ಲಿ ತೊಳೆಯದೆ ಇನ್ನೊಬ್ಬ ವ್ಯಕ್ತಿಯನ್ನು ಮುಟ್ಟಿದರೆ, ಆಗ ಆ ಇನ್ನೊಬ್ಬ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

12 “ಸ್ರಾವವುಳ್ಳ ವ್ಯಕ್ತಿ ಮಣ್ಣಿನ ಮಡಿಕೆಯನ್ನು ಮುಟ್ಟಿದರೆ, ಆ ಮಡಿಕೆಯನ್ನು ಒಡೆದುಹಾಕಬೇಕು. ಸ್ರಾವವುಳ್ಳ ವ್ಯಕ್ತಿ ಮರದ ಬಟ್ಟಲನ್ನು ಮುಟ್ಟಿದರೆ, ಆ ವಸ್ತುವನ್ನು ನೀರಿನಲ್ಲಿ ತೊಳೆಯಬೇಕು.

13 “ಸ್ರಾವವುಳ್ಳವನ ಸ್ರಾವವು ನಿಂತು ವಾಸಿಯಾದಾಗ, ಅವನು ಶುದ್ಧಮಾಡಿಕೊಳ್ಳುವುದಕ್ಕೆ ಏಳು ದಿನಗಳವರೆಗೆ ಕಾಯಬೇಕು. ಬಳಿಕ ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಹರಿಯುವ ನೀರಿನಲ್ಲಿ ಸ್ನಾನಮಾಡಬೇಕು. ಆಗ ಅವನು ಶುದ್ಧನಾಗುವನು. 14 ಎಂಟನೆಯ ದಿನದಲ್ಲಿ ಆ ವ್ಯಕ್ತಿ ತನಗೋಸ್ಕರ ಎರಡು ಬೆಳವಕ್ಕಿಗಳನ್ನು ಅಥವಾ ಎರಡು ಪಾರಿವಾಳದ ಮರಿಗಳನ್ನು ತೆಗೆದುಕೊಳ್ಳಬೇಕು. ಅವನು ದೇವದರ್ಶನ ಗುಡಾರದ ಬಾಗಿಲಿನ ಬಳಿ ಯೆಹೋವನ ಸನ್ನಿಧಿಗೆ ಬರಬೇಕು. ಆ ವ್ಯಕ್ತಿ ಎರಡು ಪಕ್ಷಿಗಳನ್ನು ಯಾಜಕನಿಗೆ ಕೊಡಬೇಕು. 15 ಯಾಜಕನು ಈ ಪಕ್ಷಿಗಳಲ್ಲಿ ಒಂದನ್ನು ಪಾಪಪರಿಹಾರಕ ಯಜ್ಞವಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಅರ್ಪಿಸುವನು. ಹೀಗೆ ಯಾಜಕನು ಅವನ ಅಶುದ್ಧವಾದ ಸ್ರಾವಕ್ಕಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು.

16 “ಒಬ್ಬನಿಗೆ ವೀರ್ಯಸ್ಖಲನವಾದರೆ, ಅವನು ನೀರಿನಲ್ಲಿ ಸರ್ವಾಂಗಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 17 ಯಾವ ಬಟ್ಟೆಯ ಮೇಲಾಗಲಿ ತೊಗಲಿನ ವೇಲಾಗಲಿ ವೀರ್ಯವು ಬಿದ್ದರೆ, ಆ ಬಟ್ಟೆ ಅಥವಾ ತೊಗಲನ್ನು ನೀರಿನಿಂದ ತೊಳೆಯಬೇಕು. ಅದು ಸಾಯಂಕಾಲವರೆಗೆ ಅಶುದ್ಧವಾಗಿರುವುದು. 18 ಪುರುಷನಿಗೆ ಸ್ತ್ರೀಸಂಗದಿಂದ ವೀರ್ಯಸ್ಖಲನವಾದರೆ, ಆಗ ಅವರಿಬ್ಬರೂ ಸ್ನಾನಮಾಡಬೇಕು. ಅವರು ಸಾಯಂಕಾಲದವರೆಗೆ ಅಶುದ್ಧರಾಗಿರುವರು.

19 “ಸ್ತ್ರೀಗೆ ಅವಳ ತಿಂಗಳ ಮುಟ್ಟಿನಿಂದ ಸ್ರಾವವಿದ್ದರೆ, ಅವಳು ಏಳು ದಿನಗಳವರೆಗೆ ಅಶುದ್ಧಳಾಗಿರುವಳು. ಯಾವನಾದರೂ ಆಕೆಯನ್ನು ಮುಟ್ಟಿದರೆ, ಆ ವ್ಯಕ್ತಿಯೂ ಸಾಯಂಕಾಲದವರೆಗೆ ಆಶುದ್ಧನಾಗಿರುವನು. 20 ಅಲ್ಲದೆ, ಸ್ತ್ರೀಯು ತನ್ನ ಮುಟ್ಟಿನ ದಿನಗಳಲ್ಲಿ ಯಾವುದರ ಮೇಲೆ ಮಲಗಿದರೂ ಅದು ಅಶುದ್ಧವಾಗಿರುವುದು ಮತ್ತು ಆ ಸಮಯದಲ್ಲಿ ಆಕೆಯು ಯಾವುದರ ಮೇಲೆ ಕುಳಿತುಕೊಂಡರೂ ಅದು ಅಶುದ್ಧವಾಗಿರುವುದು. 21 ಯಾವನಾದರೂ ಅವಳ ಹಾಸಿಗೆಯನ್ನು ಮುಟ್ಟಿದರೆ, ಆ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 22 ಯಾವನಾದರೂ ಅವಳು ಕುಳಿತುಕೊಂಡಿದ್ದ ಯಾವ ವಸ್ತುವನ್ನಾದರೂ ಮುಟ್ಟಿದರೆ, ಆ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 23 ಅವನು ಅವಳ ಹಾಸಿಗೆಯನ್ನಾಗಲಿ ಅಥವಾ ಅವಳು ಕುಳಿತ್ತಿದ್ದ ಸ್ಥಳದಲ್ಲಿ ಇದ್ದ ಯಾವದನ್ನಾದರೂ ಮುಟ್ಟಿದರೆ ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.

24 “ಪುರುಷನು ಸ್ತ್ರೀಯ ಮುಟ್ಟಿನ ಸಮಯದಲ್ಲಿ ಆಕೆಯೊಡನೆ ಲೈಂಗಿಕ ಸಂಪರ್ಕ ಹೊಂದಿದರೆ, ಆಗ ಅವನು ಏಳು ದಿನಗಳವರೆಗೆ ಅಶುದ್ಧನಾಗಿರುವನು. ಅವನು ಮಲಗಿಕೊಳ್ಳುವ ಪ್ರತಿಯೊಂದು ಹಾಸಿಗೆಯು ಅಶುದ್ಧವಾಗುವುದು.

25 “ಸ್ತ್ರೀಗೆ ತನ್ನ ಮುಟ್ಟಿನ ದಿನಗಳ ಹೊರತಾಗಿ ಅನೇಕ ದಿನಗಳವರೆಗೆ ರಕ್ತಸ್ರಾವವಾದರೆ ಅಥವಾ ಮುಟ್ಟಿನ ದಿನಗಳ ನಂತರ ಅವಳಿಗೆ ಸ್ರಾವವಾದರೆ, ಆಕೆಯು ತನ್ನ ಮುಟ್ಟಿನ ದಿನಗಳಲ್ಲಿ ಅಶುದ್ಧಳಾಗಿರುವಂತೆ, ಅಶುದ್ಧಳಾಗಿರುವಳು. ಅವಳಿಗೆ ಸ್ರಾವವಾಗುವ ದಿನಗಳೆಲ್ಲಾ ಅವಳು ಅಶುದ್ಧಳಾಗಿರುವಳು. 26 ಆ ಸ್ರಾವವಿರುವ ತನಕ ಅವಳು ಯಾವ ಹಾಸಿಗೆಯ ಮೇಲೆ ಮಲಗಿದರೂ, ಅದು ತಿಂಗಳ ಮುಟ್ಟಿನ ಕಾಲದಲ್ಲಿ ಅವಳು ಮಲಗಿರುವ ಹಾಸಿಗೆಯಂತೆಯೇ ಅಶುದ್ಧವಾಗಿರುವುದು. ಅವಳು ಯಾವುದರ ಮೇಲೆ ಕುಳಿತರೂ ಅದು ತಿಂಗಳ ಮುಟ್ಟಿನ ಕಾಲದಲ್ಲಿ ಅವಳು ಕುಳಿತಿದ್ದ ವಸ್ತುವಿನಂತೆಯೇ ಅಶುದ್ಧವಾಗಿರುವುದು. 27 ಯಾವನಾದರೂ ಆ ವಸ್ತುಗಳನ್ನು ಮುಟ್ಟಿದರೆ, ಆ ವ್ಯಕ್ತಿ ಅಶುದ್ಧನಾಗಿರುವನು. ಆ ವ್ಯಕ್ತಿಯು ತನ್ನ ಬಟ್ಟೆಗಳನ್ನು ತೊಳೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. 28 ಸ್ತ್ರೀಗೆ ಸ್ರಾವವು ನಿಂತ ನಂತರ, ಅವಳು ಏಳು ದಿನಗಳವರೆಗೆ ಕಾಯಬೇಕು. ಅದರ ನಂತರ ಅವಳು ಶುದ್ಧಳಾಗಿರುವಳು. 29 ಬಳಿಕ ಎಂಟನೆಯ ದಿನದಲ್ಲಿ ಸ್ತ್ರೀಯು ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಳ್ಳಬೇಕು. ಅವಳು ಅವುಗಳನ್ನು ದೇವದರ್ಶನಗುಡಾರದ ಬಾಗಿಲಲ್ಲಿ ಯಾಜಕನ ಬಳಿಗೆ ತರಬೇಕು. 30 ತರುವಾಯ ಯಾಜಕನು ಒಂದು ಪಕ್ಷಿಯನ್ನು ಪಾಪಪರಿಹಾರಕ ಯಜ್ಞವಾಗಿಯೂ ಇನ್ನೊಂದು ಪಕ್ಷಿಯನ್ನು ಸರ್ವಾಂಗಹೋಮವಾಗಿಯೂ ಅರ್ಪಿಸಬೇಕು. ಹೀಗೆ ಯಾಜಕನು ಅವಳಿಗಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು.

31 “ಆದ್ದರಿಂದ ಅಶುದ್ಧತ್ವದ ಕುರಿತು ನೀವು ಇಸ್ರೇಲರನ್ನು ಎಚ್ಚರಿಸಬೇಕು. ನೀವು ಜನರನ್ನು ಎಚ್ಚರಿಸದಿದ್ದರೆ ಅವರು ನನ್ನ ಪವಿತ್ರ ಗುಡಾರವನ್ನು ಅಶುದ್ಧಮಾಡಿ ಸಾವಿಗೀಡಾಗುವರು.”

32 ಸ್ರಾವವುಳ್ಳ ಜನರು ಅನುಸರಿಸಬೇಕಾದ ನಿಯಮಗಳು ಇವುಗಳೇ. ವೀರ್ಯಸ್ಖಲನದಿಂದ ಅಶುದ್ಧರಾದ ಪುರುಷರು ಅನುಸರಿಸಬೇಕಾದ ನಿಯಮಗಳು ಇವುಗಳೇ. 33 ತಮ್ಮ ತಿಂಗಳ ಮುಟ್ಟಿನಿಂದ ಅಶುದ್ಧರಾಗುವ ಸ್ತ್ರೀಯರು, ಸ್ರಾವವಾಗುವ ಗಂಡಸರು ಮತ್ತು ಸ್ತ್ರೀಯರು ಅನುಸರಿಸಬೇಕಾದ ನಿಯಮಗಳು ಇವುಗಳೇ. ಅಶುದ್ಧಳಾದ ಸ್ತ್ರೀಯೊಡನೆ ಮಲಗುವುದರಿಂದ ಅಶುದ್ಧನಾಗುವ ಯಾವನಾದರೂ ಅನುಸರಿಸಬೇಕಾದ ನಿಯಮಗಳು ಇವುಗಳೇ.

ದೋಷಪರಿಹಾರಕ ದಿನ

16 ಆರೋನನ ಇಬ್ಬರು ಪುತ್ರರು ಯೆಹೋವನಿಗೆ ಆತನು ಆಜ್ಞಾಪಿಸದೇ ಇದ್ದ ಧೂಪವನ್ನು ಅರ್ಪಿಸುತ್ತಿದ್ದಾಗ ಸತ್ತರು. ಅದಾದ ನಂತರ ಯೆಹೋವನು ಮೋಶೆಯೊಡನೆ ಮಾತಾಡಿದನು. ಆತನು ಹೇಳಿದ್ದೇನೆಂದರೆ: “ನಿನ್ನ ಸಹೋದರನಾದ ಆರೋನನೊಡನೆ ಮಾತಾಡು. ಅವನು ತನಗೆ ಇಷ್ಟಬಂದಾಗಲೆಲ್ಲಾ ತೆರೆಯ ಹಿಂದಿರುವ ಮಹಾ ಪವಿತ್ರಸ್ಥಳದೊಳಕ್ಕೆ ಹೋಗಬಾರದೆಂದು ಅವನಿಗೆ ಹೇಳು. ಆ ತೆರೆಯ ಹಿಂದೆ ಇರುವ ಕೋಣೆಯೊಳಗೆ ಪವಿತ್ರ ಪೆಟ್ಟಿಗೆಯು ಇರುತ್ತದೆ. ಕೃಪಾಸನವು ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿರುತ್ತದೆ. ಕೃಪಾಸನದ ಮೇಲೆ ಮೇಘದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಆರೋನನು ಆ ಕೋಣೆಯೊಳಗೆ ಹೋದರೆ ಸಾಯುವನು!

“ದೋಷಪರಿಹಾರಕ ದಿನದಲ್ಲಿ ಆರೋನನು ಮಹಾ ಪವಿತ್ರಸ್ಥಳದೊಳಗೆ ಪ್ರವೇಶಿಸುವ ಮೊದಲು ಪಾಪಪರಿಹಾರಕ ಯಜ್ಞವಾಗಿ ಹೋರಿಯನ್ನೂ ಸರ್ವಾಂಗಹೋಮವಾಗಿ ಟಗರನ್ನೂ ಅರ್ಪಿಸಬೇಕು. ಆರೋನನು ತನ್ನ ಪೂರ್ಣಶರೀರವನ್ನು ನೀರಿನಿಂದ ತೊಳೆದುಕೊಳ್ಳಬೇಕು. ಬಳಿಕ ಅವನು ಈ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಆರೋನನು ಪವಿತ್ರ ನಾರಿನ ನಿಲುವಂಗಿಯನ್ನೂ ನಾರಿನ ಚಡ್ಡಿಯನ್ನೂ ಧರಿಸಿಕೊಂಡಿರಬೇಕು. ಅವನು ನಾರಿನ ನಡುಕಟ್ಟನ್ನು ಕಟ್ಟಿಕೊಳ್ಳಬೇಕು; ನಾರಿನ ಮುಂಡಾಸವನ್ನು ಇಟ್ಟುಕೊಳ್ಳಬೇಕು. ಇವುಗಳು ಪವಿತ್ರವಾದವುಗಳಾಗಿವೆ.

“ಆರೋನನು ಇಸ್ರೇಲರಿಂದ ಪಾಪಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಳ್ಳಬೇಕು. ಬಳಿಕ ಆರೋನನು ಪಾಪಪರಿಹಾರಕ ಯಜ್ಞಕ್ಕೋಸ್ಕರ ಹೋರಿಯನ್ನು ಅರ್ಪಿಸಬೇಕು. ಈ ಪಾಪಪರಿಹಾರಕ ಯಜ್ಞವು ಅವನಿಗಾಗಿ ಇರುತ್ತದೆ. ಆರೋನನು ತನಗೂ ತನ್ನ ಕುಟುಂಬದವರಿಗೂ ಪ್ರಾಯಶ್ಚಿತ್ತ ಮಾಡಲು ಇದನ್ನು ಮಾಡಬೇಕು.

“ತರುವಾಯ ಆರೋನನು ಆ ಎರಡು ಹೋತಗಳನ್ನು ತೆಗೆದುಕೊಂಡು ಅವುಗಳನ್ನು ದೇವದರ್ಶನಗುಡಾರದ ಬಾಗಿಲಿನಲ್ಲಿ ಯೆಹೋವನ ಸನ್ನಿಧಿಗೆ ತರಬೇಕು. ಆರೋನನು ಚೀಟುಹಾಕಿ ಒಂದು ಹೋತವನ್ನು ಯೆಹೋವನಿಗಾಗಿಯೂ ಇನ್ನೊಂದನ್ನು ಅಜಾಜೇಲನಿಗಾಗಿಯೂ ಎಂದು ನಿರ್ಧರಿಸಬೇಕು.

“ಬಳಿಕ ಆರೋನನು ಚೀಟು ಹಾಕುವುದರ ಮೂಲಕ ಯೆಹೋವನಿಗೋಸ್ಕರ ಆರಿಸಲ್ಪಟ್ಟ ಹೋತವನ್ನು ಅರ್ಪಿಸುವನು. ಆರೋನನು ಈ ಹೋತವನ್ನು ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು. 10 ಆದರೆ ಚೀಟು ಹಾಕುವುದರ ಮೂಲಕ ಅಜಾಜೇಲನಿಗಾಗಿ ಆರಿಸಲ್ಪಟ್ಟ ಹೋತವನ್ನು ಜೀವಂತವಾಗಿ ಯೆಹೋವನ ಸನ್ನಿಧಿಗೆ ತರಬೇಕು ಮತ್ತು ಈ ಹೋತವನ್ನು ಮರುಭೂಮಿಯಲ್ಲಿರುವ ಅಜಾಜೇಲನಿಗೆ ಕಳುಹಿಸಬೇಕು. ಜನರಿಗೋಸ್ಕರ ಪ್ರಾಯಶ್ಚಿತ್ತ ಮಾಡಲು ಹೀಗೆ ಮಾಡಬೇಕು.

11 “ಬಳಿಕ ಆರೋನನು ಹೋರಿಯನ್ನು ತನ್ನ ಪಾಪಪರಿಹಾರಕ ಯಜ್ಞವಾಗಿ ಅರ್ಪಿಸುವನು. ಆರೋನನು ತನಗಾಗಿಯೂ ತನ್ನ ಕುಟುಂಬದವರಿಗಾಗಿಯೂ ಪ್ರಾಯಶ್ಚಿತ್ತ ಮಾಡುವನು. ಆರೋನನು ಹೋರಿಯನ್ನು ತನ್ನ ಪಾಪಪರಿಹಾರಕ ಯಜ್ಞವಾಗಿ ವಧಿಸುವನು. 12 ಬಳಿಕ ಅವನು ಯೆಹೋವನ ಸನ್ನಿಧಿಯಲ್ಲಿರುವ ವೇದಿಕೆಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತೆಗೆದುಕೊಳ್ಳಬೇಕು. ಆರೋನನು ಪರಿಮಳ ಧೂಪ ದ್ರವ್ಯದ ಪುಡಿಯಲ್ಲಿ ಎರಡು ಹಿಡಿ ತೆಗೆದುಕೊಳ್ಳುವನು. ಆರೋನನು ಆ ಧೂಪವನ್ನು ತೆರೆಯ ಹಿಂದೆ ಇರುವ ಕೋಣೆಗೆ ತೆಗೆದುಕೊಂಡು ಬರಬೇಕು. 13 ಆರೋನನು ಯೆಹೋವನ ಸನ್ನಿಧಿಯಲ್ಲಿ ಬೆಂಕಿಯ ಮೇಲೆ ಧೂಪವನ್ನು ಹಾಕಬೇಕು. ಆಗ ಒಡಂಬಡಿಕೆಯ ಪೆಟ್ಟಿಗೆ ಮೇಲಿರುವ ಕೃಪಾಸವನ್ನು ಧೂಪದ ಹೊಗೆಯು ಮುಚ್ಚಿಕೊಳ್ಳುವುದು. ಹೀಗೆ ಮಾಡುವುದರಿಂದ ಆರೋನನು ಸಾಯುವುದಿಲ್ಲ. 14 ಅಲ್ಲದೆ ಆರೋನನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಕೃಪಾಸನದ ಪೂರ್ವಭಾಗದಲ್ಲಿ ತನ್ನ ಬೆರಳಿನಿಂದ ಚಿಮಿಕಿಸಬೇಕು. ಕೃಪಾಸನದ ಮುಂಭಾಗದಲ್ಲಿ ಅವನು ತನ್ನ ಬೆರಳಿನಿಂದ ರಕ್ತವನ್ನು ಏಳು ಬಾರಿ ಚಿಮಿಕಿಸುವನು.

15 “ಬಳಿಕ ಆರೋನನು ಜನರಿಗೋಸ್ಕರವಾಗಿರುವ ಪಾಪಪರಿಹಾರಕ ಪಶುವಾದ ಹೋತವನ್ನು ವಧಿಸಬೇಕು. ಆರೋನನು ಈ ಹೋತದ ರಕ್ತವನ್ನು ತೆರೆಯ ಹಿಂಭಾಗದಲ್ಲಿರುವ ಕೋಣೆಗೆ ತೆಗೆದುಕೊಂಡು ಬರಬೇಕು. ಆರೋನನು ಹೋರಿಯ ರಕ್ತದಿಂದ ಮಾಡಿದಂತೆ ಹೋತದ ರಕ್ತದಿಂದಲೂ ಮಾಡಬೇಕು. ಆರೋನನು ಹೋತದ ರಕ್ತವನ್ನು ಕೃಪಾಸನದ ಮೇಲೂ ಮತ್ತು ಕೃಪಾಸನದ ಮುಂಭಾಗದಲ್ಲಿಯೂ ಚಿಮಿಕಿಸಬೇಕು. 16 ಆರೋನನು ಮಹಾ ಪವಿತ್ರಸ್ಥಳವನ್ನು ಪರಿಶುದ್ಧ ಮಾಡಲು ಅನುಸರಿಸಬೇಕಾದ ನಿಯಮಗಳು: ಇಸ್ರೇಲರ ಅಶುದ್ಧತ್ವ, ದಂಗೆಕೋರತನ ಮತ್ತು ಅವರ ಯಾವುದೇ ಪಾಪಗಳ ಪರಿಹಾರಕ್ಕಾಗಿ ಆರೋನನು ಇದನ್ನು ಮಾಡಬೇಕು. ಅವರ ಅಶುದ್ಧತ್ವದ ನಡುವೆ ಇರುವ ದೇವದರ್ಶನಗುಡಾರಕ್ಕೂ ಅವನು ಇದನ್ನೇ ಮಾಡಬೇಕು.

17 “ಆರೋನನು ಮಹಾ ಪವಿತ್ರಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡಲು ದೇವದರ್ಶನಗುಡಾರದೊಳಗೆ ಹೋದ ಸಮಯದಿಂದ ಅವನು ಬರುವ ತನಕ ಗುಡಾರದೊಳಗೆ ಯಾರೂ ಇರಕೂಡದು. ಆರೋನನು ಬರುವ ತನಕ ಯಾರೂ ಒಳಗೆ ಹೋಗಕೂಡದು. ಹೀಗೆ ಆರೋನನು ತನಗಾಗಿಯೂ ತನ್ನ ಕುಟುಂಬಕ್ಕಾಗಿಯೂ ಇಡೀ ಇಸ್ರೇಲ್ ಸಮೂಹಕ್ಕಾಗಿಯೂ ಪ್ರಾಯಶ್ಚಿತ್ತ ಮಾಡುವನು. 18 ತರುವಾಯ ಆರೋನನು ಹೊರಗೆ ಬಂದು ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಕೆಯ ಬಳಿಗೆ ಹೋಗುವನು. ಆರೋನನು ಯಜ್ಞವೇದಿಕೆಯನ್ನು ಶುದ್ಧೀಕರಿಸುವನು. ಆರೋನನು ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ಮತ್ತು ಹೋತದ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಕೆಯ ಎಲ್ಲಾ ಮೂಲೆಗಳಿಗೆ ಹಚ್ಚುವನು. 19 ಬಳಿಕ ಆರೋನನು ತನ್ನ ಬೆರಳಿನಿಂದ ಸ್ವಲ್ಪ ರಕ್ತವನ್ನು ಯಜ್ಞವೇದಿಕೆಯ ಮೇಲೆ ಏಳು ಸಲ ಚಿಮಿಕಿಸುವನು. ಹೀಗೆ ಆರೋನನು ಯಜ್ಞವೇದಿಕೆಯನ್ನು ಇಸ್ರೇಲರಿಂದ ಅದಕ್ಕುಂಟಾದ ಅಶುದ್ಧತ್ವದಿಂದ ದೂರಮಾಡಿ ಪರಿಶುದ್ಧಗೊಳಿಸುವನು.

20 “ಹೀಗೆ ಆರೋನನು ಮಹಾ ಪವಿತ್ರಸ್ಥಳವನ್ನೂ ದೇವದರ್ಶನಗುಡಾರವನ್ನೂ ಯಜ್ಞವೇದಿಕೆಯನ್ನೂ ಶುದ್ಧೀಕರಿಸುವನು. ಬಳಿಕ ಆರೋನನು ಜೀವಂತವಾಗಿರುವ ಹೋತವನ್ನು ಯೆಹೋವನ ಬಳಿಗೆ ತರುವನು. 21 ಆರೋನನು ಸಜೀವವಾದ ಹೋತದ ತಲೆಯ ಮೇಲೆ ತನ್ನ ಎರಡು ಕೈಗಳನ್ನಿಟ್ಟು ಇಸ್ರೇಲರು ಮಾಡಿದ ಪಾಪಗಳನ್ನು ಮತ್ತು ದ್ರೋಹಗಳನ್ನು ಅರಿಕೆಮಾಡುವನು. ಹೀಗೆ ಆರೋನನು ಜನರ ಪಾಪಗಳನ್ನು ಹೋತದ ತಲೆಯ ಮೇಲೆ ಹೊರಿಸುವನು. ಬಳಿಕ ಅವನು ಹೋತವನ್ನು ಮರುಭೂಮಿಗೆ ಕಳುಹಿಸಿಬಿಡುವನು. ಒಬ್ಬ ಮನುಷ್ಯನು ಹೋತವನ್ನು ನಡಿಸಿಕೊಂಡು ಹೋಗಲು ಸಿದ್ಧನಾಗಿ ನಿಂತಿರುವನು. 22 ಹೀಗೆ ಹೋತವು ಜನರ ಪಾಪಗಳನ್ನು ಹೊತ್ತುಕೊಂಡು ಬರಿದಾದ ಮರುಭೂಮಿಗೆ ಹೋಗುವುದು. ಹೋತವನ್ನು ನಡಿಸಿಕೊಂಡು ಹೋಗುವ ಮನುಷ್ಯನು ಮರುಭೂಮಿಯಲ್ಲಿ ಅದನ್ನು ಬಿಟ್ಟುಬಿಡುವನು.

23 “ಬಳಿಕ ಆರೋನನು ದೇವದರ್ಶನಗುಡಾರವನ್ನು ಪ್ರವೇಶಿಸುವನು. ಅವನು ಪವಿತ್ರಸ್ಥಳದೊಳಗೆ ಹೋಗಿದ್ದಾಗ ಧರಿಸಿಕೊಂಡಿದ್ದ ನಾರುಬಟ್ಟೆಯನ್ನು ತೆಗೆದುಹಾಕುವನು. ಅವನು ಈ ಬಟ್ಟೆಗಳನ್ನು ಅಲ್ಲಿಯೇ ಬಿಡಬೇಕು. 24 ಅವನು ತನ್ನ ಶರೀರವನ್ನು ಪವಿತ್ರಸ್ಥಳದಲ್ಲಿ ನೀರಿನಿಂದ ತೊಳೆದುಕೊಳ್ಳುವನು. ಬಳಿಕ ಅವನು ತನ್ನ ಇತರ ವಿಶೇಷ ಬಟ್ಟೆಗಳನ್ನು ಧರಿಸಿಕೊಳ್ಳುವನು. ಅವನು ಹೊರಗೆ ಬಂದು, ತನ್ನ ಸರ್ವಾಂಗಹೋಮವನ್ನು ಮತ್ತು ಜನರ ಸರ್ವಾಂಗಹೋಮವನ್ನು ಅರ್ಪಿಸುವನು. ಅವನು ತನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತ ಮಾಡುವನು. 25 ಬಳಿಕ ಅವನು ಪಾಪಪರಿಹಾರಕ ಯಜ್ಞದ ಕೊಬ್ಬನ್ನು ವೇದಿಕೆಯ ಮೇಲೆ ಹೋಮಮಾಡುವನು.

26 “ಅಜಾಜೇಲನಿಗೆ ಹೋತವನ್ನು ನಡೆಸಿಕೊಂಡು ಹೋದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಿಂದ ತನ್ನ ಪೂರ್ಣಶರೀರವನ್ನು ತೊಳೆದುಕೊಳ್ಳಬೇಕು. ಬಳಿಕ ಅವನು ಪಾಳೆಯದೊಳಗೆ ಬರಬಹುದು.

27 “ಪಾಪಪರಿಹಾರಕ ಯಜ್ಞಕ್ಕಾಗಿ ಇರುವ ಹೋರಿಯನ್ನು ಮತ್ತು ಹೋತವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಬೇಕು. (ಆ ಪಶುಗಳ ರಕ್ತವನ್ನು, ಪವಿತ್ರವಸ್ತುಗಳನ್ನು ಶುದ್ಧೀಕರಿಸುವುದಕ್ಕೆ ಪವಿತ್ರಸ್ಥಳಕ್ಕೆ ತರಲಾಯಿತು.) ಯಾಜಕರು ಆ ಪಶುಗಳ ಚರ್ಮ, ಮಾಂಸ ಮತ್ತು ದೇಹದ ಕಲ್ಮಶವನ್ನೆಲ್ಲಾ ಬೆಂಕಿಯಿಂದ ಸುಟ್ಟುಹಾಕಿಸಬೇಕು. 28 ಬಳಿಕ ಅವುಗಳನ್ನು ಸುಡುವ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ತನ್ನ ಪೂರ್ಣದೇಹವನ್ನು ನೀರಿನಿಂದ ತೊಳೆದುಕೊಳ್ಳಬೇಕು. ಬಳಿಕ ಅವನು ಪಾಳೆಯದೊಳಗೆ ಬರಬಹುದು.

29 “ಇದು ನಿಮಗೆ ಶಾಶ್ವತವಾದ ಕಟ್ಟಳೆ: ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನೀವು ಆಹಾರವನ್ನು[a] ತೆಗೆದುಕೊಳ್ಳದೆ ಉಪವಾಸ ಮಾಡಬೇಕು. ಆ ದಿನದಲ್ಲಿ ಯಾವ ಕೆಲಸವನ್ನೂ ಮಾಡಬಾರದು. ನಿಮ್ಮ ದೇಶದಲ್ಲಿ ವಾಸಿಸುವ ಪ್ರವಾಸಿಗರಾಗಲಿ ಪರದೇಶಸ್ಥರಾಗಲಿ ಯಾವ ಕೆಲಸವನ್ನು ಮಾಡಬಾರದು. 30 ಯಾಕೆಂದರೆ ಈ ದಿನದಲ್ಲಿ ಯಾಜಕನು ನಿಮ್ಮನ್ನು ಶುದ್ಧೀಕರಿಸಲು ನಿಮಗಾಗಿ ಪ್ರಾಯಶ್ಚಿತ್ತ ಮಾಡುವನು. ಆಗ ನೀವು ಯೆಹೋವನಿಗಾಗಿ ನಿಮ್ಮ ಎಲ್ಲಾ ಪಾಪಗಳಿಂದ ಬಿಡುಗಡೆಯಾಗಿ ಪರಿಶುದ್ಧರಾಗುವಿರಿ. 31 ಈ ದಿನವು ನಿಮಗೆ ಬಹಳ ಪ್ರಾಮುಖ್ಯವಾದ ವಿಶ್ರಾಂತಿ ದಿನವಾಗಿದೆ. ನೀವು ಉಪವಾಸ ಮಾಡಬೇಕು. ಈ ನಿಯಮ ಶಾಶ್ವತವಾದದ್ದು.

32 “ಆದ್ದರಿಂದ ಪ್ರಧಾನಯಾಜಕನಾಗಿ ಆರಿಸಲ್ಪಟ್ಟವನು ವಸ್ತುಗಳನ್ನು ಶುದ್ಧೀಕರಿಸಲು ಈ ಆಚರಣೆಯನ್ನು ಮಾಡಬೇಕು. ಈತನು ತನ್ನ ತಂದೆಯ ನಂತರ ಪ್ರಧಾನಯಾಜಕನಾಗಿ ಸೇವೆಮಾಡುವುದಕ್ಕೆ ನೇಮಿಸಲ್ಪಟ್ಟವನಾಗಿದ್ದಾನೆ. ಆ ಯಾಜಕನು ಪವಿತ್ರವೂ ಶ್ರೇಷ್ಠವೂ ಆಗಿರುವ ನಾರುಬಟ್ಟೆಯನ್ನು ಧರಿಸಿಕೊಳ್ಳಬೇಕು. 33 ಅವನು ಮಹಾ ಪವಿತ್ರಸ್ಥಳ, ದೇವದರ್ಶನಗುಡಾರ ಮತ್ತು ವೇದಿಕೆಯನ್ನು ಶುದ್ಧೀಕರಿಸಬೇಕು; ಅವನು ಯಾಜಕರನ್ನು ಇಸ್ರೇಲರನ್ನು ಶುದ್ಧೀಕರಿಸಬೇಕು. 34 ಇಸ್ರೇಲರನ್ನು ಶುದ್ಧೀಕರಿಸುವ ಕಟ್ಟಳೆ ಶಾಶ್ವತವಾದದ್ದು. ನೀವು ಆ ಕಾರ್ಯಗಳನ್ನು ವರ್ಷಕ್ಕೊಮ್ಮೆ ಇಸ್ರೇಲರ ಪಾಪಗಳ ದೆಸೆಯಿಂದ ಮಾಡಬೇಕು.”

ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಆ ಕಾರ್ಯಗಳನ್ನು ಮಾಡಿದರು.

ಮತ್ತಾಯ 27:1-26

ರಾಜ್ಯಪಾಲನ ಮುಂದೆ ಯೇಸು

(ಮಾರ್ಕ 15:1; ಲೂಕ 23:1-2; ಯೋಹಾನ 18:28-32)

27 ಮರುದಿನ ಮುಂಜಾನೆ, ಮಹಾಯಾಜಕರೆಲ್ಲರೂ ಮತ್ತು ಹಿರಿಯ ನಾಯಕರೆಲ್ಲರೂ ಯೇಸುವನ್ನು ಕೊಲ್ಲಲು ತೀರ್ಮಾನಿಸಿದರು. ಅವರು ಆತನನ್ನು ಸರಪಣಿಗಳಿಂದ ಬಂಧಿಸಿ ರಾಜ್ಯಪಾಲನಾದ ಪಿಲಾತನ ಬಳಿಗೆ ಕರೆದೊಯ್ದು ಅವನಿಗೆ ಒಪ್ಪಿಸಿದರು.

ಯೂದನ ಆತ್ಮಹತ್ಯೆ

(ಅ.ಕಾ. 1:18-19)

ಯೇಸುವನ್ನು ಆತನ ವೈರಿಗಳಿಗೆ ಒಪ್ಪಿಸಿಕೊಟ್ಟ ಯೂದನು, ಯೇಸುವಿಗೆ ಸಂಭವಿಸಿದ್ದನ್ನು ಕಂಡು, ತಾನು ಮಾಡಿದ ದ್ರೋಹಕ್ಕಾಗಿ ಬಹಳ ಪಶ್ಚಾತ್ತಾಪಪಟ್ಟನು. ಅವನು ಬೆಳ್ಳಿಯ ನಾಣ್ಯಗಳನ್ನು ಮಹಾಯಾಜಕರ ಮತ್ತು ಹಿರಿಯನಾಯಕರ ಬಳಿಗೆ ತೆಗೆದುಕೊಂಡು ಹೋಗಿ, “ನಾನು ಪಾಪ ಮಾಡಿದೆ, ನಿರಪರಾಧಿಯನ್ನು ಕೊಲ್ಲಲು ನಿಮಗೆ ಒಪ್ಪಿಸಿಬಿಟ್ಟೆ” ಎಂದು ಹೇಳಿದನು.

ಯೆಹೂದ್ಯ ನಾಯಕರು, “ಅದಕ್ಕೆ ನಾವೇನು ಮಾಡೋಣ! ಅದು ನಿನ್ನ ಸಮಸ್ಯೆ, ನಮ್ಮದಲ್ಲ!” ಎಂದು ಉತ್ತರಕೊಟ್ಟರು.

ಆಗ ಯೂದನು ಆ ಹಣವನ್ನು ದೇವಾಲಯದೊಳಗೆ ಬಿಸಾಡಿ ಹೊರಟುಹೋಗಿ ನೇಣು ಹಾಕಿಕೊಂಡನು.

ಮಹಾಯಾಜಕರು ದೇವಾಲಯದಲ್ಲಿದ್ದ ಬೆಳ್ಳಿಯ ನಾಣ್ಯಗಳನ್ನು ಆಯ್ದುಕೊಂಡು, “ಈ ಹಣವನ್ನು ಒಬ್ಬ ಮನುಷ್ಯನ ಹತ್ಯೆಗಾಗಿ ಕೊಟ್ಟಿದ್ದ ಕಾರಣ ಇದನ್ನು ದೇವಾಲಯದ ಹಣದೊಂದಿಗೆ ಸೇರಿಸುವುದು ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧ” ಎಂದು ಹೇಳಿದರು. ಆದ್ದರಿಂದ ಅವರು ಆ ಹಣದಿಂದ “ಕುಂಬಾರನ ಹೊಲ” ಎಂಬ ಜಮೀನನ್ನು ಕೊಂಡುಕೊಳ್ಳಲು ತೀರ್ಮಾನಿಸಿದರು. ಜೆರುಸಲೇಮಿಗೆ ಪ್ರವಾಸ ಬಂದವರು ಸತ್ತರೆ, ಅವರನ್ನು ಈ ಹೊಲದಲ್ಲಿ ಸಮಾಧಿ ಮಾಡಬೇಕೆಂದು ನಿರ್ಧರಿಸಲಾಯಿತು. ಆದಕಾರಣವೇ ಆ ಹೊಲವನ್ನು ಇಂದಿಗೂ “ಜೀವಹತ್ಯೆಯ ಹೊಲ”ವೆಂದು ಕರೆಯುತ್ತಾರೆ. ಹೀಗೆ ಪ್ರವಾದಿಯಾದ ಯೆರೆಮೀಯನು ಹೇಳಿದ ಮಾತು ನೆರವೇರಿತು. ಅದೇನೆಂದರೆ:

“ಅವರು ಮೂವತ್ತು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡರು. ಯೆಹೂದ್ಯರು ಆತನ ಜೀವಕ್ಕೆ ನಿರ್ಧರಿಸಿದ ಬೆಲೆಯೇ ಅಷ್ಟು. 10 ಪ್ರಭುವು ನನಗೆ ಆಜ್ಞಾಪಿಸಿದಂತೆ, ಅವರು ಮೂವತ್ತು ಬೆಳ್ಳಿಯ ನಾಣ್ಯಗಳಿಂದ ಕುಂಬಾರನ ಹೊಲವನ್ನು ಕೊಂಡುಕೊಂಡರು.”[a]

ರಾಜ್ಯಪಾಲ ಪಿಲಾತನಿಂದ ಯೇಸುವಿಗಾದ ವಿಚಾರಣೆ

(ಮಾರ್ಕ 15:2-5; ಲೂಕ 23:3-5; ಯೋಹಾನ 18:33-38)

11 ಯೇಸುವನ್ನು ರಾಜ್ಯಪಾಲ ಪಿಲಾತನ ಎದುರಿನಲ್ಲಿ ನಿಲ್ಲಿಸಿದರು. ಪಿಲಾತನು ಆತನಿಗೆ, “ನೀನು ಯೆಹೂದ್ಯರ ರಾಜನೇ?” ಎಂದು ಕೇಳಿದನು.

ಯೇಸು, “ಹೌದು, ನೀನು ಹೇಳಿದಂತೆ ಆತನೇ ನಾನು” ಎಂದು ಉತ್ತರಕೊಟ್ಟನು.

12 ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ಯೇಸುವಿನ ಮೇಲೆ ದೂರು ಹೇಳಿದಾಗ, ಆತನು ಮೌನವಾಗಿದ್ದನು.

13 ಆದ್ದರಿಂದ ಪಿಲಾತನು ಯೇಸುವನ್ನು, “ಈ ಜನರು ನಿನ್ನ ಮೇಲೆ ಹೇಳುತ್ತಿರುವ ಈ ದೂರುಗಳನ್ನೆಲ್ಲ ನೀನು ಕೇಳುತ್ತಿದ್ದರೂ ಏಕೆ ಉತ್ತರ ಕೊಡುತ್ತಿಲ್ಲ?” ಎಂದು ಕೇಳಿದನು.

14 ಆದರೆ ಯೇಸು ಪಿಲಾತನಿಗೆ ಉತ್ತರ ಕೊಡಲೇ ಇಲ್ಲ. ಪಿಲಾತನಿಗೆ ಬಹಳ ಆಶ್ಚರ್ಯವಾಯಿತು.

ಯೇಸುವನ್ನು ಬಿಡಿಸಲು ಪಿಲಾತನ ವಿಫಲ ಯತ್ನ

(ಮಾರ್ಕ 15:6-15; ಲೂಕ 23:13-25; ಯೋಹಾನ 18:39–19:16)

15 ಪ್ರತಿವರ್ಷವೂ ಪಸ್ಕಹಬ್ಬದ ಸಮಯದಲ್ಲಿ ಜನರು ಬಯಸುವ ಕೈದಿಗಳಲ್ಲಿ ಒಬ್ಬನನ್ನು ರಾಜ್ಯಪಾಲನು ಬಿಡುಗಡೆ ಮಾಡಬೇಕೆಂಬುದು ಅಂದಿನ ಪದ್ಧತಿಯಾಗಿತ್ತು. 16 ಆ ಕಾಲದಲ್ಲಿ ಪ್ರಸಿದ್ಧನಾದ ಕೈದಿಯೊಬ್ಬನು ಸೆರೆಮನೆಯಲ್ಲಿದ್ದನು. ಅವನ ಹೆಸರು ಬರಬ್ಬ.[b]

17 ಜನರೆಲ್ಲರೂ ಪಿಲಾತನ ಭವನದ ಬಳಿ ನೆರೆದಿದ್ದರು. ಪಿಲಾತನು ಅವರಿಗೆ, “ನಾನು ನಿಮಗಾಗಿ ಯಾವ ಕೈದಿಯನ್ನು ಬಿಡುಗಡೆ ಮಾಡಲಿ, ಬರಬ್ಬನನ್ನೋ ಅಥವಾ ಕ್ರಿಸ್ತನೆಂದು ಕರೆಸಿಕೊಳ್ಳುವ ಯೇಸುವನ್ನೋ?” ಎಂದು ಕೇಳಿದನು. 18 ಜನರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ತನಗೆ ಒಪ್ಪಿಸಿದ್ದಾರೆಂಬುದು ಪಿಲಾತನಿಗೆ ಗೊತ್ತಿತ್ತು.

19 ಪಿಲಾತನು ನ್ಯಾಯಸ್ಥಾನದಲ್ಲಿ ಕುಳಿತುಕೊಂಡಿದ್ದಾಗ ಅವನ ಪತ್ನಿಯು ಒಂದು ಸಂದೇಶವನ್ನು ಕಳುಹಿಸಿದ್ದಳು. “ಆ ಮನುಷ್ಯನಿಗೆ ಏನನ್ನೂ ಮಾಡಬೇಡ. ಅವನು ತಪ್ಪಿತಸ್ಥನಲ್ಲ. ಆತನ ನಿಮಿತ್ತ ಕಳೆದ ರಾತ್ರಿ ಕನಸಿನಲ್ಲಿ ಬಹಳ ಸಂಕಟಪಟ್ಟಿದ್ದೇನೆ” ಎಂಬುದೇ ಆ ಸಂದೇಶ.

20 ಆದರೆ ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯ ನಾಯಕರು, ಬರಬ್ಬನನ್ನು ಬಿಡುಗಡೆ ಮಾಡಬೇಕೆಂದೂ ಯೇಸುವನ್ನು ಕೊಲ್ಲಿಸಬೇಕೆಂದೂ ಕೇಳಿಕೊಳ್ಳಲು ಜನರಿಗೆ ಹೇಳಿಕೊಟ್ಟರು.

21 ಪಿಲಾತನು, “ನಿಮಗಾಗಿ ನಾನು ಯಾರನ್ನು ಬಿಡುಗಡೆ ಮಾಡಲಿ? ಬರಬ್ಬನನ್ನೋ? ಯೇಸುವನ್ನೋ?” ಎಂದು ಕೇಳಿದನು.

ಜನರು “ಬರಬ್ಬನನ್ನು!” ಎಂದು ಉತ್ತರಕೊಟ್ಟರು.

22 ಪಿಲಾತನು, “ಹಾಗಾದರೆ ಕ್ರಿಸ್ತನೆಂದು ಕರೆಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಿದನು.

ಜನರೆಲ್ಲರೂ, “ಅವನನ್ನು ಶಿಲುಬೆಗೇರಿಸು!” ಎಂದು ಉತ್ತರಕೊಟ್ಟರು.

23 ಪಿಲಾತನು, “ಅವನನ್ನು ಶಿಲುಬೆಗೇರಿಸೆಂದು ನೀವು ಕೇಳುವುದೇಕೆ? ಅವನೇನು ತಪ್ಪುಮಾಡಿದ್ದಾನೆ?” ಎಂದು ಕೇಳಿದನು.

ಆದರೆ ಜನರೆಲ್ಲರೂ, “ಅವನನ್ನು ಶಿಲುಬೆಗೇರಿಸು!” ಎಂದು ಜೋರಾಗಿ ಕೂಗಿದರು.

24 ಜನರ ಮನಸ್ಸನ್ನು ಬದಲಾಯಿಸಲು ತನಗೆ ಸಾಧ್ಯವಿಲ್ಲವೆಂದೂ ಜನರು ಗಲಭೆ ಆರಂಭಿಸಲಿದ್ದಾರೆಂದೂ ತಿಳಿದುಕೊಂಡ ಪಿಲಾತನು ಸ್ವಲ್ಪ ನೀರನ್ನು ತೆಗೆದುಕೊಂಡು ಜನರೆಲ್ಲರ ಎದುರಿನಲ್ಲಿ ತನ್ನ ಕೈಗಳನ್ನು ತೊಳೆದುಕೊಳ್ಳುತ್ತಾ, “ಈ ಮನುಷ್ಯನ ಸಾವಿಗೆ ನಾನು ಜವಾಬ್ದಾರನಲ್ಲ. ಆತನನ್ನು ಶಿಲುಬೆಗೇರಿಸುತ್ತಿರುವವರು ನೀವೇ!” ಎಂದು ಹೇಳಿದನು.

25 ಜನರೆಲ್ಲರೂ, “ಅವನ ಸಾವಿಗೆ ನಾವೇ ಜವಾಬ್ದಾರರು. ಅವನ ಸಾವಿಗೆ ಏನಾದರೂ ದಂಡನೆಯಿದ್ದರೆ ಅದನ್ನು ನಾವು ಮತ್ತು ನಮ್ಮ ಮಕ್ಕಳು ಅನುಭವಿಸುತ್ತೇವೆ” ಎಂದು ಉತ್ತರಕೊಟ್ಟರು.

26 ಆಗ ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿ, ಯೇಸುವನ್ನು ಕೊರಡೆಗಳಿಂದ ಹೊಡೆಯಿಸಿ ಶಿಲುಬೆಗೇರಿಸಲು ಸೈನಿಕರಿಗೆ ಒಪ್ಪಿಸಿಬಿಟ್ಟನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International