Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯಾಜಕಕಾಂಡ 6-7

ಬೇರೆ ಪಾಪಗಳಿಗಾಗಿ ದೋಷಪರಿಹಾರಕ ಯಜ್ಞಗಳು

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಯಾವನಾದರೂ ಮತ್ತೊಬ್ಬನಿಂದ ತನ್ನ ವಶಕ್ಕೆ ಕೊಡಲ್ಪಟ್ಟ ವಸ್ತುವಿನ ವಿಷಯದಲ್ಲಾಗಲಿ ತನ್ನ ಬಳಿಯಲ್ಲಿ ಅಡವು ಇಟ್ಟ ವಸ್ತುವಿನ ವಿಷಯದಲ್ಲಾಗಲಿ ತಾನು ಮಾಡಿದ ಕಳುವಿನ ವಿಷಯದಲ್ಲಾಗಲಿ ಸುಳ್ಳಾಡುವುದರಿಂದಾಗಲಿ ಮತ್ತೊಬ್ಬನನ್ನು ಮೋಸಗೊಳಿಸುವುದರಿಂದಾಗಲಿ ಮತ್ತೊಬ್ಬನು ಕಳೆದುಕೊಂಡದ್ದನ್ನು ಕಂಡುಕೊಂಡು ಅದರ ಬಗ್ಗೆ ಸುಳ್ಳು ಹೇಳುವುದರಿಂದಾಗಲಿ ಮಾಡಿದ ಪ್ರಮಾಣವನ್ನು ಉಲ್ಲಂಘಿಸುವುದರಿಂದಾಗಲಿ ಪಾಪಮಾಡಿ ಯೆಹೋವನಿಗೆ ದ್ರೋಹಮಾಡಿದರೆ, ಅವನು ತಾನು ಕದ್ದದ್ದನ್ನಾಗಲಿ ಮೋಸದಿಂದ ತೆಗೆದುಕೊಂಡದ್ದನ್ನಾಗಲಿ ಅಡವು ಇಟ್ಟುಕೊಂಡದ್ದನ್ನಾಗಲಿ ಕಂಡುಕೊಂಡ ಅಥವಾ ಕಳೆದುಹೋದ ವಸ್ತುವನ್ನಾಗಲಿ ಸುಳ್ಳಾಣೆ ಇಟ್ಟುಕೊಂಡ ವಸ್ತುವನ್ನಾಗಲಿ ಸಂಪೂರ್ಣವಾಗಿ ತಂದುಕೊಡಬೇಕು. ಅದರೊಂದಿಗೆ ಅದರ ಐದನೆಯ ಒಂದಂಶವನ್ನು ಹೆಚ್ಚಾಗಿ ತಂದುಕೊಡಬೇಕು. ದೋಷಪರಿಹಾರಕ ಯಜ್ಞವನ್ನು ಅರ್ಪಿಸುವ ದಿನದಲ್ಲಿಯೇ ನಿಜವಾದ ಯಜಮಾನನಿಗೆ ಇದನ್ನು ತಂದುಕೊಡಬೇಕು. ಆ ವ್ಯಕ್ತಿ ದೋಷಪರಿಹಾರಕ ಯಜ್ಞವನ್ನು ಯಾಜಕನ ಬಳಿಗೆ ತರಬೇಕು. ಅದು ಮಂದೆಯಿಂದ ತಂದ ಟಗರಾಗಿರಬೇಕು. ಟಗರಿನಲ್ಲಿ ಯಾವ ದೋಷವೂ ಇರಬಾರದು. ಅದು ಯಾಜಕನು ಹೇಳುವ ಬೆಲೆಯುಳ್ಳದ್ದಾಗಿರಬೇಕು. ಅದು ಯೆಹೋವನಿಗೆ ಸಮರ್ಪಿಸುವ ದೋಷಪರಿಹಾರಕ ಯಜ್ಞವಾಗಿರುವುದು. ಬಳಿಕ ಯಾಜಕನು ಯೆಹೋವನ ಸನ್ನಿಧಿಗೆ ಹೋಗಿ ಅವನನ್ನು ಶುದ್ಧಿಮಾಡುವನು. ಆಗ ದೇವರು ಅವನನ್ನು ಕ್ಷಮಿಸುವನು.”

ಸರ್ವಾಂಗಹೋಮಗಳು

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಆರೋನನಿಗೂ ಅವನ ಪುತ್ರರಿಗೂ ಈ ಅಪ್ಪಣೆಯನ್ನು ಕೊಡು: ಸರ್ವಾಂಗಹೋಮದ ನಿಯಮ ಇದಾಗಿದೆ. ಸರ್ವಾಂಗಹೋಮವು ವೇದಿಕೆಯ ಒಲೆಯಲ್ಲಿ[a] ರಾತ್ರಿಯೆಲ್ಲಾ ಮರುದಿನ ಮುಂಜಾನೆಯವರೆಗೆ ಉರಿಯುತ್ತಿರಬೇಕು. ವೇದಿಕೆಯಲ್ಲಿ ಬೆಂಕಿಯು ಉರಿಯುತ್ತಿರಬೇಕು. 10 ಯಾಜಕನು ತನ್ನ ನಾರಿನ ನಿಲುವಂಗಿಯನ್ನೂ ನಾರಿನ ಚಡ್ಡಿಯನ್ನೂ ಧರಿಸಿಕೊಳ್ಳಬೇಕು. ಯಾಜಕನು ಸರ್ವಾಂಗಹೋಮ ಮಾಡಿದಾಗ ಬೆಂಕಿಯಿಂದ ಉಂಟಾದ ಬೂದಿಯನ್ನು ತೆಗೆದು ವೇದಿಕೆಯ ಬಳಿಯಲ್ಲಿಡಬೇಕು. 11 ಬಳಿಕ ಯಾಜಕನು ತನ್ನ ಬಟ್ಟೆಗಳನ್ನು ತೆಗೆದುಹಾಕಿ ಬೇರೆ ಬಟ್ಟೆಗಳನ್ನು ಧರಿಸಿಕೊಂಡು ಬೂದಿಯನ್ನು ಪಾಳೆಯದ ಹೊರಗೆ ಒಂದು ವಿಶೇಷ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು. 12 ಆದರೆ ವೇದಿಕೆಯ ಮೇಲೆ ಬೆಂಕಿ ಉರಿಯುತ್ತಲೇ ಇರಬೇಕು. ಅದನ್ನು ಆರಿ ಹೋಗುವುದಕ್ಕೆ ಬಿಡಬಾರದು, ಯಾಜಕನು ಪ್ರತಿ ಮುಂಜಾನೆ ವೇದಿಕೆಯ ಮೇಲೆ ಸರ್ವಾಂಗಹೋಮವನ್ನು ಸಿದ್ಧಪಡಿಸಿ, ಸಮಾಧಾನಯಜ್ಞದ ಕೊಬ್ಬನ್ನು ಸುಡಬೇಕು. 13 ಬೆಂಕಿಯು ವೇದಿಕೆಯ ಮೇಲೆ ಉರಿಯುತ್ತಲೇ ಇರಬೇಕು; ಆರಿಹೋಗಬಾರದು.

ಧಾನ್ಯಸಮರ್ಪಣೆಗಳು

14 “ಇದು ಧಾನ್ಯಸಮರ್ಪಣೆಯ ನಿಯಮವಾಗಿದೆ: ಆರೋನನ ಪುತ್ರರು ಅದನ್ನು ಸಮರ್ಪಿಸಲು ಯಜ್ಞವೇದಿಕೆಯ ಮುಂಭಾಗದಲ್ಲಿ ಯೆಹೋವನ ಬಳಿಗೆ ತರಬೇಕು. 15 ಯಾಜಕನು ಧಾನ್ಯನೈವೇದ್ಯದಿಂದ ಒಂದು ಹಿಡಿ ಶ್ರೇಷ್ಠ ಹಿಟ್ಟನ್ನು ಮತ್ತು ಎಣ್ಣೆಯನ್ನು ಮತ್ತು ಎಲ್ಲಾ ಧೂಪವನ್ನು ತೆಗೆದುಕೊಂಡು ನೈವೇದ್ಯವಾದದ್ದನ್ನು ಸೂಚಿಸುವುದಕ್ಕಾಗಿ ಅದನ್ನು ವೇದಿಕೆಯ ಮೇಲೆ ಸುಡಬೇಕು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

16 “ಆರೋನನ ಮತ್ತು ಅವನ ಪುತ್ರರು ಧಾನ್ಯನೈವೇದ್ಯದಲ್ಲಿ ಉಳಿದದ್ದನ್ನು ತಿನ್ನಬೇಕು. ಅವರು ಆ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿಕೊಂಡು ಪವಿತ್ರಸ್ಥಳದಲ್ಲಿ ಅಂದರೆ ದೇವದರ್ಶನಗುಡಾರದ ಸುತ್ತಲಿರುವ ಅಂಗಳದಲ್ಲಿ ತಿನ್ನಬೇಕು. 17 ಹುಳಿಕಲಸಿ ರೊಟ್ಟಿ ಸುಡಬಾರದು. ನನಗೆ ಅಗ್ನಿಯ ಮೂಲಕ ಹೋಮವಾಗಿ ಅರ್ಪಿಸಿದ ಸಮರ್ಪಣೆಗಳಲ್ಲಿ ನಾನು ಅದನ್ನು ಯಾಜಕರ ಪಾಲನ್ನಾಗಿ ಕೊಟ್ಟಿದ್ದೇನೆ. ಅದು ಪಾಪಪರಿಹಾರಕ ಯಜ್ಞದಂತೆಯೂ ದೋಷಪರಿಹಾರಕ ಯಜ್ಞದಂತೆಯೂ ಮಹಾ ಪವಿತ್ರವಾಗಿದೆ. 18 ಆರೋನನ ವಂಶದವರಾದ ಗಂಡಸರೆಲ್ಲರೂ ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಗಳನ್ನು ತಿನ್ನಬಹುದು. ಇದು ನಿಮ್ಮ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿದೆ. ಈ ಕಾಣಿಕೆಗಳಿಗೆ ತಗಲಿದ್ದೆಲ್ಲಾ ಪವಿತ್ರವಾಗುತ್ತವೆ.”

ಯಾಜಕರ ಧಾನ್ಯನೈವೇದ್ಯ

19 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 20 “ಆರೋನನು ಮಹಾಯಾಜಕನಾಗಿ ಅಭಿಷೇಕಿಸಲ್ಪಡುವ ದಿನದಂದು ಅವನು ಮತ್ತು ಅವನ ಪುತ್ರರು ಯೆಹೋವನ ಸನ್ನಿಧಿಗೆ ತರಬೇಕಾದ ಧಾನ್ಯಸಮರ್ಪಣೆ ಇದಾಗಿದೆ. ಅವರು ಎಂಟು ಬಟ್ಟಲು[b] ಶ್ರೇಷ್ಠ ಗೋಧಿಹಿಟ್ಟನ್ನು ಧಾನ್ಯನೈವೇದ್ಯಕ್ಕಾಗಿ ತರಬೇಕು. (ದಿನನಿತ್ಯದ ನೈವೇದ್ಯಗಳ ಸಮಯಗಳಲ್ಲಿ ಇದನ್ನು ಅರ್ಪಿಸಬೇಕು.) ಅವರು ಇದರಲ್ಲಿ ಅರ್ಧದಷ್ಟನ್ನು ಮುಂಜಾನೆಯಲ್ಲಿ ಮತ್ತು ಉಳಿದರ್ಧವನ್ನು ಸಾಯಂಕಾಲದಲ್ಲಿ ಅರ್ಪಿಸಬೇಕು. 21 ಶ್ರೇಷ್ಠವಾದ ಗೋಧಿಹಿಟ್ಟಿಗೆ ಎಣ್ಣೆಯನ್ನು ಬೆರೆಸಿ ಕಬ್ಬಿಣದ ಹಂಚಿನ ಮೇಲೆ ರೊಟ್ಟಿ ಸುಟ್ಟು ಅದನ್ನು ಒಳಗೆ ತರಬೇಕು. ನೀವು ಈ ಸಮರ್ಪಣೆಯನ್ನು ತುಂಡುತುಂಡಾಗಿ ಮುರಿದು ಸಮರ್ಪಿಸಬೇಕು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.

22 “ಆರೋನನ ಸ್ಥಾನವನ್ನು ಹೊಂದುವುದಕ್ಕಾಗಿ ಆರೋನನ ಸಂತತಿಯವರಲ್ಲಿ ಆರಿಸಲ್ಪಟ್ಟು ಅಭಿಷೇಕಿಸಲ್ಪಟ್ಟ ಯಾಜಕನು ಯೆಹೋವನಿಗೆ ಈ ಧಾನ್ಯಸಮರ್ಪಣೆ ಮಾಡಬೇಕು. ಈ ನಿಯಮ ಶಾಶ್ವತವಾದದ್ದು. ಧಾನ್ಯಸಮರ್ಪಣೆ ಸಂಪೂರ್ಣವಾಗಿ ಹೋಮವಾಗಬೇಕು. 23 ಯಾಜಕನ ಪ್ರತಿಯೊಂದು ಧಾನ್ಯಸಮರ್ಪಣೆ ಸಂಪೂರ್ಣವಾಗಿ ಹೋಮವಾಗಬೇಕು. ಅದನ್ನು ತಿನ್ನಲೇಬಾರದು.”

ಪಾಪಪರಿಹಾರ ಯಜ್ಞದ ಕಟ್ಟಳೆ

24 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 25 “ಆರೋನನಿಗೆ ಮತ್ತು ಅವನ ಪುತ್ರರಿಗೆ ಹೀಗೆ ಹೇಳು: ಪಾಪಪರಿಹಾರಕ ಯಜ್ಞದ ಕಟ್ಟಳೆ ಇದಾಗಿದೆ. ಸರ್ವಾಂಗಹೋಮ ಪಶುವು ವಧಿಸಲ್ಪಡುವ ಸ್ಥಳದಲ್ಲಿಯೇ ಪಾಪಪರಿಹಾರಕ ಯಜ್ಞಪಶುವು ಯೆಹೋವನ ಸನ್ನಿಧಿಯಲ್ಲಿ ವಧಿಸಲ್ಪಡಬೇಕು. ಅದು ಮಹಾ ಪವಿತ್ರವಾಗಿದೆ. 26 ಪಾಪಪರಿಹಾರಕ ಯಜ್ಞವನ್ನು ಅರ್ಪಿಸುವ ಯಾಜಕನು ಅದನ್ನು ಪವಿತ್ರಸ್ಥಳದಲ್ಲಿ ಅಂದರೆ ದೇವದರ್ಶನಗುಡಾರದ ಸುತ್ತಲಿರುವ ಅಂಗಳದಲ್ಲಿ ತಿನ್ನಬೇಕು. 27 ಪಾಪಪರಿಹಾರಕ ಯಜ್ಞದ ಮಾಂಸವು ತಗಲಿದ ವಸ್ತುವೂ ಪವಿತ್ರವಾಗುತ್ತದೆ; ಮುಟ್ಟುವ ವ್ಯಕ್ತಿಯೂ ಪವಿತ್ರವಾಗುವನು.

“ಚಿಮಿಕಿಸಲ್ಪಟ್ಟ ರಕ್ತದಲ್ಲಿ ಸ್ವಲ್ಪ ರಕ್ತವು ಯಾರ ಬಟ್ಟೆಯ ಮೇಲಾದರೂ ಬಿದ್ದರೆ, ನೀವು ಆ ಬಟ್ಟೆಗಳನ್ನು ಪವಿತ್ರಸ್ಥಳದಲ್ಲಿ ತೊಳೆಯಬೇಕು. 28 ಪಾಪಪರಿಹಾರಕ ಯಜ್ಞವನ್ನು ಮಣ್ಣಿನ ಮಡಕೆಯಲ್ಲಿ ಬೇಯಿಸಿದರೆ, ಆ ಮಡಕೆಯನ್ನು ಒಡೆದುಹಾಕಬೇಕು. ಪಾಪಪರಿಹಾರಕ ಯಜ್ಞವನ್ನು ತಾಮ್ರದ ಪಾತ್ರೆಯಲ್ಲಿ ಬೇಯಿಸಿದರೆ, ಆ ಪಾತ್ರೆಯನ್ನು ಉಜ್ಜಿ ನೀರಿನಲ್ಲಿ ತೊಳೆಯಬೇಕು.

29 “ಯಾಜಕನ ಕುಟುಂಬದಲ್ಲಿರುವ ಯಾವ ಪುರುಷನಾದರೂ ಪಾಪಪರಿಹಾರಕ ಯಜ್ಞದ ಮಾಂಸವನ್ನು ತಿನ್ನಬಹುದು. ಅದು ಬಹಳ ಪವಿತ್ರವಾಗಿದೆ. 30 ಆದರೆ ಪಾಪಪರಿಹಾರಕ ಯಜ್ಞದ ರಕ್ತವನ್ನು ದೇವದರ್ಶನಗುಡಾರದೊಳಗೆ ತೆಗೆದುಕೊಂಡು ಹೋಗಿ, ಜನರನ್ನು ಶುದ್ಧಿಗೊಳಿಸಲು ಪವಿತ್ರಸ್ಥಳದಲ್ಲಿ ಉಪಯೋಗಿಸಿದರೆ, ಆ ಪಾಪಪರಿಹಾರಕ ಯಜ್ಞವನ್ನು ಅಗ್ನಿಯಲ್ಲಿ ಸುಟ್ಟುಬಿಡಬೇಕು. ಯಾಜಕರು ಅದರ ಮಾಂಸವನ್ನು ತಿನ್ನಲೇಬಾರದು.

ದೋಷಪರಿಹಾರಕ ಯಜ್ಞಗಳು

“ದೋಷಪರಿಹಾರಕ ಯಜ್ಞದ ನಿಯಮಗಳು: ಅದು ಪವಿತ್ರವಾದದ್ದು. ಯಾಜಕನು ಸರ್ವಾಂಗಹೋಮ ಸಮರ್ಪಣೆಗಳ ಪಶುವನ್ನು ವಧಿಸುವ ಸ್ಥಳದಲ್ಲಿಯೇ ದೋಷಪರಿಹಾರಕ ಪಶುವನ್ನು ವಧಿಸಬೇಕು. ಬಳಿಕ ಯಾಜಕನು ದೋಷಪರಿಹಾರಕ ಯಜ್ಞದ ರಕ್ತವನ್ನು ವೇದಿಕೆಯ ಸುತ್ತಲೂ ಚಿಮಿಕಿಸಬೇಕು.

“ಯಾಜಕನು ದೋಷಪರಿಹಾರಕ ಯಜ್ಞಪಶುವಿನ ಕೊಬ್ಬನ್ನೆಲ್ಲಾ ಅರ್ಪಿಸಬೇಕು. ಅವನು ಬಾಲದ ಕೊಬ್ಬನ್ನು ಮತ್ತು ಒಳಗಿನ ಭಾಗಗಳನ್ನು ಆವರಿಸಿರುವ ಕೊಬ್ಬನ್ನೆಲ್ಲಾ ಸಮರ್ಪಿಸಬೇಕು. ಯಾಜಕನು ಅದರ ಎರಡು ಮೂತ್ರಪಿಂಡಗಳನ್ನೂ ಮತ್ತು ಅವುಗಳನ್ನು ಸೊಂಟದವರೆಗೆ ಆವರಿಸಿರುವ ಕೊಬ್ಬನ್ನೂ ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನೂ ಅರ್ಪಿಸಬೇಕು. ಅವನು ಮೂತ್ರಪಿಂಡಗಳೊಡನೆ ಪಿತ್ತಾಶಯವನ್ನು ಅರ್ಪಿಸಬೇಕು. ಯಾಜಕನು ಅವುಗಳನ್ನು ವೇದಿಕೆಯ ಮೇಲೆ ಹೋಮ ಮಾಡಬೇಕು. ಇದು ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿತವಾದ ಹೋಮವಾಗಿರುವುದು. ಅದು ದೋಷಪರಿಹಾರಕ ಯಜ್ಞವಾಗಿದೆ.

“ಯಾಜಕನಾಗಿರುವ ಪ್ರತಿಯೊಬ್ಬನು ದೋಷಪರಿಹಾರಕ ಯಜ್ಞಮಾಂಸವನ್ನು ತಿನ್ನಬಹುದು. ಅದು ಬಹು ಪವಿತ್ರವಾಗಿರುವುದರಿಂದ ಅದನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕು. ದೋಷಪರಿಹಾರಕ ಯಜ್ಞವು ಪಾಪಪರಿಹಾರಕ ಯಜ್ಞದಂತಿದೆ. ಒಂದೇ ರೀತಿಯ ನಿಯಮಗಳು ಈ ಎರಡು ಸಮರ್ಪಣೆಗಳಿಗೆ ಅನ್ವಯಿಸುತ್ತವೆ. ಯಜ್ಞ ಸಮರ್ಪಿಸುವ ಯಾಜಕನು ಆಹಾರಕ್ಕಾಗಿ ಅದರ ಮಾಂಸವನ್ನು ಪಡೆಯುವನು. ಯಜ್ಞಮಾಡುವ ಯಾಜಕನು ಸರ್ವಾಂಗಹೋಮ ಪಶುವಿನ ಚರ್ಮವನ್ನು ಪಡೆಯಬಹುದು. ಪ್ರತಿ ಧಾನ್ಯಸಮರ್ಪಣೆಯು ಅದನ್ನು ಅರ್ಪಿಸುವ ಯಾಜಕನಿಗೆ ಸೇರುತ್ತದೆ. ಒಲೆಯಲ್ಲಾಗಲಿ ಕಬ್ಬಿಣದ ಹಂಚಿನಲ್ಲಾಗಲಿ ಬಾಂಡ್ಲೆಯಲ್ಲಾಗಲಿ ಬೇಯಿಸಿದ ಧಾನ್ಯಸಮರ್ಪಣೆಗಳನ್ನು ಯಾಜಕನು ಪಡೆಯುವನು. 10 ಧಾನ್ಯಸಮರ್ಪಣೆಗಳು ಆರೋನನ ಪುತ್ರರಿಗೆ ಸೇರುವವು. ಅದು ಒಣಗಿದ್ದರೂ ಎಣ್ಣೆಯಿಂದ ಬೆರೆತಿದ್ದರೂ ಅವರಿಗೆ ಸೇರುವವು. ಯಾಜಕರಾದ ಆರೋನನ ಪುತ್ರರೆಲ್ಲರೂ ಈ ಆಹಾರವನ್ನು ಸಮವಾಗಿ ಹಂಚಿಕೊಳ್ಳುವರು.

ಸಮಾಧಾನಯಜ್ಞ ಕಟ್ಟಳೆಗಳು

11 “ಸಮಾಧಾನಯಜ್ಞದ ಕಟ್ಟಳೆಗಳು ಇಂತಿವೆ: ಯಾರಾದರೂ ಯೆಹೋವನಿಗೆ ಕೃತಜ್ಞತೆಯಿಂದ ಸಮಾಧಾನಯಜ್ಞಗಳನ್ನು ಅರ್ಪಿಸಬೇಕೆಂದಿದ್ದರೆ, 12 ಅವನು ಎಣ್ಣೆ ಬೆರೆಸಿದ ಹುಳಿಯಿಲ್ಲದ ರೊಟ್ಟಿಯನ್ನೂ ಎಣ್ಣೆ ಹೊಯಿದು ಮಾಡಿದ ಕಡುಬುಗಳನ್ನೂ ಎಣ್ಣೆಬೆರೆಸಿದ ಹೋಳಿಗೆಗಳನ್ನೂ ತರಬೇಕು. 13 ಅವನು ದೇವರಿಗೆ ತನ್ನ ಕೃತಜ್ಞತೆಯನ್ನು ಸೂಚಿಸುವುದಕ್ಕಾಗಿ ಅರ್ಪಿಸುವ ಯಜ್ಞವೇ ಸಮಾಧಾನಯಜ್ಞವಾಗಿದೆ. ಈ ಯಜ್ಞದೊಡನೆ ಅವನು ಹುಳಿಯಿರುವ ರೊಟ್ಟಿಗಳ ನೈವೇದ್ಯವನ್ನು ಅರ್ಪಿಸಬೇಕು. 14 ಸಮರ್ಪಿಸಲ್ಪಟ್ಟ ಪ್ರತಿಯೊಂದು ಪದಾರ್ಥಗಳಲ್ಲೂ ಒಂದೊಂದನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಸಮಾಧಾನಯಜ್ಞದ ರಕ್ತವನ್ನು ಚಿಮಿಕಿಸುವ ಯಾಜಕನಿಗೆ ಇದು ಸಲ್ಲತಕ್ಕದ್ದು. 15 ಸಮಾಧಾನಯಜ್ಞದ ಮಾಂಸವನ್ನು ಅದು ಸಮರ್ಪಣೆಯಾದ ದಿನದಲ್ಲಿಯೇ ತಿನ್ನಬೇಕು. ಒಬ್ಬನು ದೇವರಿಗೆ ತನ್ನ ಕೃತಜ್ಞತೆಯನ್ನು ಸೂಚಿಸುವುದಕ್ಕಾಗಿ ಈ ಕಾಣಿಕೆಯನ್ನು ಅರ್ಪಿಸುತ್ತಾನೆ. ಅದರ ಮಾಂಸದಲ್ಲಿ ಮರುದಿನದ ಮುಂಜಾನೆಯವರೆಗೆ ಏನೂ ಉಳಿಸಬಾರದು.

16 “ಯಾವನಾದರೂ ಸ್ವಇಚ್ಛೆಯ ಕಾಣಿಕೆಗಾಗಲಿ ಹರಕೆಯನ್ನು ಸಲ್ಲಿಸುವುದಕ್ಕಾಗಲಿ ಸಮಾಧಾನಯಜ್ಞ ಅರ್ಪಿಸಬಹುದು ಅಥವಾ ಆ ವ್ಯಕ್ತಿ ದೇವರಿಗೆ ಕಾಣಿಕೆಯನ್ನು ಅರ್ಪಿಸಿದರೆ, ಅವನು ಅದರ ಯಜ್ಞಮಾಂಸವನ್ನು ಸಮರ್ಪಿಸಿದ ದಿನದಲ್ಲಿಯೇ ತಿನ್ನಬೇಕು. ಉಳಿದದ್ದನ್ನು ಮರುದಿನ ತಿನ್ನಬೇಕು. 17 ಆದರೆ ಈ ಯಜ್ಞಪಶುವು ಮೂರನೆಯ ದಿನದವರೆಗೆ ಉಳಿದರೆ, ಅದನ್ನು ಬೆಂಕಿಯಲ್ಲಿ ಸುಡಬೇಕು. 18 ಒಬ್ಬನು ತನ್ನ ಸಮಾಧಾನಯಜ್ಞದಲ್ಲಿ ಉಳಿದದ್ದನ್ನು ಮೂರನೆಯ ದಿನದಲ್ಲಿ ತಿಂದರೆ, ಯೆಹೋವನು ಅವನ ವಿಷಯದಲ್ಲಿ ಸಂತೋಷಗೊಳ್ಳುವುದಿಲ್ಲ. ಯೆಹೋವನು ಆ ಯಜ್ಞವನ್ನು ಅವನ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆ ಯಜ್ಞವು ಅಸಹ್ಯವಸ್ತುವಾಗುವುದು. ಆ ಮಾಂಸವನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸುವನು.

19 “ಮಾತ್ರವಲ್ಲದೆ ಜನರು ಅಶುದ್ಧವಾದ ವಸ್ತುವಿಗೆ ಸೋಂಕಿದ ಮಾಂಸವನ್ನು ತಿನ್ನಬಾರದು. ಅವರು ಈ ಮಾಂಸವನ್ನು ಬೆಂಕಿಯಲ್ಲಿ ಸುಟ್ಟುಹಾಕಬೇಕು. ಶುದ್ಧನಾಗಿರುವ ಪ್ರತಿಯೊಬ್ಬನು ಸಮಾಧಾನ ಸಮರ್ಪಣೆಯ ಮಾಂಸವನ್ನು ತಿನ್ನಬಹುದು. 20 ಆದರೆ ಒಬ್ಬನು ಅಶುದ್ಧನಾಗಿದ್ದು ಯೆಹೋವನಿಗೆ ಸೇರಿದ ಸಮಾಧಾನ ಸಮರ್ಪಣೆಗಳ ಮಾಂಸವನ್ನು ತಿಂದರೆ, ಅವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.

21 “ಒಬ್ಬನಿಗೆ ಮನುಷ್ಯದೇಹದಿಂದ ಆಗಿರುವ ಅಶುದ್ಧ ವಸ್ತು, ಅಶುದ್ಧ ಮೃಗ, ನಿಷಿದ್ಧ ವಸ್ತು ಇವುಗಳಲ್ಲಿ ಯಾವುದಾದರೂ ಸ್ಪರ್ಶವಾಗಿದ್ದರೆ ಅವನು ಅಶುದ್ಧನಾಗಿದ್ದಾನೆ. ಅವನು ಯೆಹೋವನಿಗೆ ಸೇರಿದ ಸಮಾಧಾನಯಜ್ಞಗಳ ಮಾಂಸವನ್ನು ತಿಂದರೆ, ಅವನನ್ನು ಕುಲದಿಂದ ತೆಗೆದುಹಾಕಬೇಕು.”

22 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 23 “ಇಸ್ರೇಲರಿಗೆ ಹೀಗೆ ಹೇಳು: ನೀವು ದನಗಳ, ಕುರಿಗಳ ಅಥವಾ ಹೋತಗಳ ಕೊಬ್ಬನ್ನು ತಿನ್ನಬಾರದು. 24 ನೀವು ತನ್ನಷ್ಟಕ್ಕೆ ತಾನೇ ಸತ್ತ ಪ್ರಾಣಿಯ ಅಥವಾ ಬೇರೆ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯ ಕೊಬ್ಬನ್ನು ಬೇರೆ ಕೆಲಸಕ್ಕೆ ಉಪಯೋಗಿಸಬಹುದು. ಆದರೆ ನೀವು ಅದನ್ನು ಎಂದಿಗೂ ತಿನ್ನಬಾರದು. 25 ಯಾವನಾದರೂ ಅಗ್ನಿಯ ಮೂಲಕ ಯೆಹೋವನಿಗೆ ಸಮರ್ಪಣೆಯಾದ ಪಶುವಿನ ಕೊಬ್ಬನ್ನು ತಿಂದರೆ, ಅವನನ್ನು ಅವನ ಜನರಿಂದ ತೆಗೆದುಹಾಕಬೇಕು.

26 “ನೀವು ಎಲ್ಲಿಯೇ ವಾಸಿಸಿದರೂ, ಯಾವುದೇ ಪಕ್ಷಿಯ ಅಥವಾ ಯಾವುದೇ ಪ್ರಾಣಿಯ ರಕ್ತವನ್ನು ನೀವು ಎಂದಿಗೂ ತಿನ್ನಬಾರದು. 27 ಯಾವನಾದರೂ ರಕ್ತವನ್ನು ತಿಂದರೆ, ಅವನನ್ನು ಅವನ ಜನರಿಂದ ತೆಗೆದುಹಾಕಲ್ಪಡಬೇಕು.”

ನೈವೇದ್ಯಸಮರ್ಪಣೆಯ ನಿಯಮಗಳು

28 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 29 “ಇಸ್ರೇಲರಿಗೆ ಹೇಳು. ಒಬ್ಬನು ಯೆಹೋವನಿಗೆ ಸಮಾಧಾನಯಜ್ಞಕ್ಕಾಗಿ ಪಶುವನ್ನು ತಂದರೆ, ಯೆಹೋವನಿಗೆ ಸಲ್ಲತಕ್ಕ ಭಾಗವನ್ನು ಆತನಿಗೆ ಕೊಡಬೇಕು. 30 ಕಾಣಿಕೆಯ ಆ ಭಾಗವು ಅಗ್ನಿಯಲ್ಲಿ ಹೋಮಮಾಡಬೇಕು. ಅವನು ಕಾಣಿಕೆಯನ್ನು ತೆಗೆದುಕೊಂಡು ಯೆಹೋವನ ಸನ್ನಿಧಿಗೆ ಹೋಗಬೇಕು. ಅವನು ಆ ಪಶುವಿನ ಕೊಬ್ಬನ್ನೂ ಎದೆಯ ಭಾಗವನ್ನೂ ಯಾಜಕನ ಬಳಿಗೆ ತರಬೇಕು. ಯೆಹೋವನ ಸನ್ನಿಧಿಯಲ್ಲಿ ಎದೆಯ ಭಾಗವು ನಿವಾಳಿಸಲ್ಪಡಬೇಕು. ಇದು ನೈವೇದ್ಯ ಸಮರ್ಪಣೆಯಾಗಿರುವುದು. 31 ಬಳಿಕ ಯಾಜಕನು ವೇದಿಕೆಯ ಮೇಲೆ ಕೊಬ್ಬನ್ನು ಹೋಮಮಾಡಬೇಕು. ಆದರೆ ಪಶುವಿನ ಎದೆಯ ಭಾಗವು ಆರೋನನಿಗೂ ಅವನ ಪುತ್ರರಿಗೂ ಸೇರಿದ್ದಾಗಿದೆ. 32 ನೀವು ಸಮಾಧಾನಯಜ್ಞದ ಪಶುವಿನ ಬಲತೊಡೆಯನ್ನು ಸಹ ಯಾಜಕನಿಗೆ ಕೊಡಬೇಕು. 33 ಪಶುವಿನ ಬಲ ತೊಡೆಯ ಭಾಗವು ಸಮಾಧಾನಯಜ್ಞದಲ್ಲಿ ರಕ್ತವನ್ನು ಮತ್ತು ಕೊಬ್ಬನ್ನು ಸಮರ್ಪಿಸುವ ಯಾಜಕನಿಗೆ ಸೇರುತ್ತವೆ. 34 ನೈವೇದ್ಯರೂಪವಾಗಿ ನಿವಾಳಿಸುವ ಸಮರ್ಪಣೆಯಲ್ಲಿ ಪಶುವಿನ ಎದೆಯ ಭಾಗವನ್ನು ಮತ್ತು ಸಮಾಧಾನಯಜ್ಞಗಳಲ್ಲಿ ಪಶುವಿನ ಬಲ ತೊಡೆಯನ್ನು ಯೆಹೋವನಾದ ನಾನು ಇಸ್ರೇಲರಿಂದ ತೆಗೆದುಕೊಂಡು ಆರೋನನಿಗೂ ಅವನ ಪುತ್ರರಿಗೂ ಕೊಡುತ್ತಿದ್ದೇನೆ. ಇಸ್ರೇಲರು ಈ ನಿಯಮಕ್ಕೆ ಎಂದೆಂದಿಗೂ ವಿಧೇಯರಾಗಬೇಕು.”

35 ಅಗ್ನಿಯ ಮೂಲಕ ಯೆಹೋವನಿಗೆ ಅರ್ಪಿಸಿದ ಸಮರ್ಪಣೆಗಳಲ್ಲಿ ಇವೇ ಆರೋನನಿಗೂ ಅವನ ಪುತ್ರರಿಗೂ ಕೊಡಲ್ಪಟ್ಟ ಭಾಗಗಳಾಗಿವೆ. ಆರೋನನೂ ಅವನ ಪುತ್ರರೂ ಯೆಹೋವನ ಯಾಜಕರಾಗಿ[c] ಸೇವೆ ಮಾಡುವಾಗಲೆಲ್ಲಾ ಯಜ್ಞಗಳಲ್ಲಿ ಆ ಪಾಲನ್ನು ಪಡೆಯುವರು. 36 ಯೆಹೋವನು ಯಾಜಕರನ್ನು ಅಭಿಷೇಕಿಸಿದ ಸಮಯದಲ್ಲಿ ಆತನು ಯಾಜಕರಿಗೆ ಆ ಭಾಗಗಳನ್ನು ಕೊಡಬೇಕೆಂಬುದಾಗಿ ಇಸ್ರೇಲರಿಗೆ ಆಜ್ಞಾಪಿಸಿದನು. ಜನರು ಯಾಜಕರಿಗೆ ಆ ಭಾಗಗಳನ್ನು ಎಂದೆಂದಿಗೂ ಕೊಡಬೇಕು.

37 ಅವುಗಳೇ ಸರ್ವಾಂಗಹೋಮಗಳ, ಧಾನ್ಯಸಮರ್ಪಣೆಗಳ, ಪಾಪಪರಿಹಾರಕ ಯಜ್ಞಗಳ, ದೋಷಪರಿಹಾರಕ ಯಜ್ಞಗಳ, ಸಮಾಧಾನಯಜ್ಞಗಳ ಮತ್ತು ಯಾಜಕರನ್ನು ಪ್ರತಿಷ್ಠಿಸುವ ನಿಯಮಗಳಾಗಿವೆ. 38 ಯೆಹೋವನು ಮೋಶೆಗೆ ಆ ನಿಯಮಗಳನ್ನು ಸೀನಾಯಿ ಬೆಟ್ಟದಲ್ಲಿ ಕೊಟ್ಟನು. ಇಸ್ರೇಲರು ಯೆಹೋವನಿಗೆ ತಮ್ಮ ಯಜ್ಞಗಳನ್ನು ಅರ್ಪಿಸಬೇಕೆಂದು ಸೀನಾಯಿ ಮರುಭೂಮಿಯಲ್ಲಿ ಆಜ್ಞಾಪಿಸಿದ ದಿನದಲ್ಲಿ ಯೆಹೋವನು ಆ ನಿಯಮಗಳನ್ನು ಕೊಟ್ಟನು.

ಮತ್ತಾಯ 25:1-30

ಹತ್ತು ಮಂದಿ ಕನ್ನಿಕೆಯರನ್ನು ಕುರಿತ ಸಾಮ್ಯ

25 “ಆ ದಿನಗಳಲ್ಲಿ ಪರಲೋಕರಾಜ್ಯವು ಹೇಗಿರುತ್ತದೆ ಎನ್ನುವುದಕ್ಕೆ ಈ ಸಾಮ್ಯವು ಉದಾಹರಣೆಯಾಗಿದೆ. ಹತ್ತು ಮಂದಿ ಕನ್ನಿಕೆಯರು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳಲು ಹೊರಟರು. ಅವರಲ್ಲಿ ಐದು ಮಂದಿ ಬುದ್ಧಿಹೀನರಾಗಿದ್ದರು. ಇನ್ನುಳಿದ ಐದು ಮಂದಿ ಬುದ್ಧಿವಂತೆಯರಾಗಿದ್ದರು. ಬುದ್ಧಿಹೀನ ಕನ್ನಿಕೆಯರು ತಮ್ಮ ದೀಪಾರತಿಗಳನ್ನು ತಂದರೇ ಹೊರತು ಬೇಕಾಗುವಷ್ಟು ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. ಬುದ್ಧಿವಂತೆಯರು ತಮ್ಮ ದೀಪಗಳೊಂದಿಗೆ ಬೇಕಾದಷ್ಟು ಎಣ್ಣೆಯನ್ನೂ ತೆಗೆದುಕೊಂಡರು. ಮದುಮಗನ ಆಗಮನ ತಡವಾಯಿತು. ಅವರೆಲ್ಲರೂ ಆಯಾಸದಿಂದ ತೂಕಡಿಸುತ್ತಾ ನಿದ್ರೆಹೋದರು.

“ಮಧ್ಯರಾತ್ರಿಯಲ್ಲಿ, ‘ಮದುಮಗನು ಬರುತ್ತಿದ್ದಾನೆ! ಬನ್ನಿರಿ, ಆತನನ್ನು ಸಂಧಿಸಿರಿ!’ ಎಂದು ಯಾರೋ ಒಬ್ಬನು ಪ್ರಕಟಿಸಿದನು.

“ಆಗ ಕನ್ನಿಕೆಯರೆಲ್ಲ ಎಚ್ಚರಗೊಂಡು ತಮ್ಮ ದೀಪಾರತಿಗಳನ್ನು ಸಿದ್ಧಮಾಡಿಕೊಂಡರು. ಬುದ್ಧಿಹೀನ ಕನ್ನಿಕೆಯರು ಬುದ್ಧಿವಂತ ಕನ್ನಿಕೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿ. ನಮ್ಮ ದೀಪಾರತಿಗಳಲ್ಲಿದ್ದ ಎಣ್ಣೆಯೆಲ್ಲಾ ಮುಗಿಯಿತು’ ಎಂದರು.

“ಬುದ್ಧಿವಂತೆಯರು, ‘ಇಲ್ಲ! ನಮ್ಮಲ್ಲಿರುವ ಎಣ್ಣೆ ನಮಗೇ ಸಾಕಾಗದಿರಬಹುದು. ಅಂಗಡಿಗೆ ಹೋಗಿ ಕೊಂಡುಕೊಳ್ಳಿರಿ’ ಎಂದು ಉತ್ತರಕೊಟ್ಟರು.

10 “ಆದ್ದರಿಂದ ಐದು ಮಂದಿ ಬುದ್ಧಿಹೀನ ಕನ್ನಿಕೆಯರು ಎಣ್ಣೆ ಕೊಂಡುಕೊಳ್ಳುವುದಕ್ಕೆ ಹೋದರು. ಅವರು ಹೋಗುತ್ತಿರುವಾಗ, ಮದುಮಗನು ಬಂದನು. ಸಿದ್ಧವಾಗಿದ್ದ ಕನ್ನಿಕೆಯರು ಮದುಮಗನ ಜೊತೆಯಲ್ಲಿ ಔತಣಕ್ಕೆ ಹೋದರು. ನಂತರ ಬಾಗಿಲು ಮುಚ್ಚಲಾಯಿತು.

11 “ತರುವಾಯ ಬುದ್ಧಿಹೀನ ಕನ್ನಿಕೆಯರು ಬಂದು, ‘ಸ್ವಾಮೀ, ಸ್ವಾಮೀ, ಒಳಗೆ ಬರಲು ನಮಗೆ ಬಾಗಿಲು ತೆರೆ’ ಅಂದರು.

12 “ಆದರೆ ಮದುಮಗನು, ‘ನಾನು ನಿಮಗೆ ಸತ್ಯವನ್ನೇ ಹೇಳುತ್ತೇನೆ. ನೀವು ಯಾರೋ ನನಗೆ ಗೊತ್ತಿಲ್ಲ’ ಎಂದು ಉತ್ತರಕೊಟ್ಟನು.

13 “ಆದ್ದರಿಂದ ಯಾವಾಗಲೂ ಸಿದ್ಧವಾಗಿರಿ. ಮನುಷ್ಯಕುಮಾರನು ಬರುವ ದಿನವಾಗಲಿ ಸಮಯವಾಗಲಿ ನಿಮಗೆ ಗೊತ್ತಿಲ್ಲ.

ಮೂವರು ಸೇವಕರನ್ನು ಕುರಿತ ಸಾಮ್ಯ

(ಲೂಕ 19:11-27)

14 “ಪರಲೋಕರಾಜ್ಯವು, ತನ್ನ ಮನೆಯನ್ನು ಬಿಟ್ಟು ಬೇರೆ ಸ್ಥಳವನ್ನು ಸಂದರ್ಶಿಸುವುದಕ್ಕೆ ಪ್ರಯಾಣ ಮಾಡಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ. ಆ ಮನುಷ್ಯನು ತಾನು ಹೊರಡುವುದಕ್ಕೆ ಮುಂಚೆ ತನ್ನ ಸೇವಕರೊಂದಿಗೆ ಮಾತನಾಡಿ, ತನ್ನ ಆಸ್ತಿಯನ್ನು ನೋಡಿಕೊಳ್ಳಲು ಅವರಿಗೆ ಹೇಳಿದನು. 15 ಅವನು ಆ ಸೇವಕರ ಸಾಮರ್ಥ್ಯಕ್ಕನುಸಾರವಾಗಿ ಎಷ್ಟೆಷ್ಟು ಜವಾಬ್ದಾರಿಕೆಯನ್ನು ಕೊಡಬೇಕೆಂಬುದನ್ನು ನಿರ್ಧರಿಸಿದನು. ಅವನು ಒಬ್ಬ ಸೇವಕನಿಗೆ ಐದು ತಲಾಂತು[a] ಮತ್ತೊಬ್ಬನಿಗೆ ಎರಡು ತಲಾಂತು ಕೊಟ್ಟನು. ಮೂರನೇ ಸೇವಕನಿಗೆ ಒಂದು ತಲಾಂತು ಕೊಟ್ಟನು. ಬಳಿಕ ಅವನು ಬೇರೆ ಸ್ಥಳಕ್ಕೆ ಹೊರಟುಹೋದನು. 16 ಐದು ತಲಾಂತು ತೆಗೆದುಕೊಂಡ ಸೇವಕನು ತಕ್ಷಣವೇ ಹೋಗಿ ಆ ಹಣವನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಸಂಪಾದಿಸಿದನು. 17 ಎರಡು ತಲಾಂತು ಹೊಂದಿದ ಸೇವಕನೂ ಅದೇ ರೀತಿ ಆ ಹಣವನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಎರಡು ತಲಾಂತು ಸಂಪಾದಿಸಿದನು. 18 ಆದರೆ ಒಂದು ತಲಾಂತು ಹೊಂದಿದವನು ಹೊರಟುಹೋಗಿ ನೆಲದಲ್ಲಿ ಒಂದು ಗುಂಡಿ ತೋಡಿ ಆ ಹಣವನ್ನು ಅಡಗಿಸಿಟ್ಟನು.

19 “ಬಹುಕಾಲದ ನಂತರ ಯಜಮಾನನು ಮನೆಗೆ ಬಂದನು. ತಾನು ಕೊಟ್ಟಿದ್ದ ಹಣದ ಕುರಿತಾಗಿ ಅವನು ಸೇವಕರನ್ನು ವಿಚಾರಿಸಿ ಲೆಕ್ಕ ಕೇಳಿದನು. 20 ಐದು ತಲಾಂತು ಪಡೆದ ಸೇವಕನು ಇನ್ನೂ ಐದು ತಲಾಂತನ್ನು ತನ್ನ ಯಜಮಾನನ ಬಳಿಗೆ ತಂದು, ‘ಧಣಿಯೇ, ನೀನು ನನ್ನಲ್ಲಿ ಭರವಸೆಯಿಟ್ಟು ಐದು ತಲಾಂತನ್ನು ಕೊಟ್ಟೆ. ನಾನು ಅದನ್ನು ವಿನಿಯೋಗಿಸಿ ಇನ್ನೂ ಐದು ತಲಾಂತು ಸಂಪಾದಿಸಿದ್ದೇನೆ’ ಎಂದನು.

21 “ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.

22 “ಆಮೇಲೆ ಎರಡು ತಲಾಂತು ಹೊಂದಿದ್ದ ಸೇವಕನು ಯಜಮಾನನ ಬಳಿಗೆ ಬಂದು, ‘ಧಣಿಯೇ, ನೀನು ನನಗೆ ಎರಡು ತಲಾಂತು ಕೊಟ್ಟೆ. ನಾನು ಆ ಹಣವನ್ನು ಉಪಯೋಗಿಸಿ ಇನ್ನೂ ಎರಡು ತಲಾಂತು ಸಂಪಾದಿಸಿರುವೆ’ ಅಂದನು.

23 “ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ನೀನು ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು, ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.

24 “ಬಳಿಕ ಒಂದು ತಲಾಂತು ಹೊಂದಿದ್ದ ಸೇವಕನು ಯಜಮಾನನ ಬಳಿಗೆ ಬಂದು, ‘ಧಣಿಯೇ, ನೀನು ಬಹಳ ಕಠಿಣ ಮನುಷ್ಯನು ಎಂದು ನಾನು ಬಲ್ಲೆ. ನೀನು ನೆಡದ ಕಡೆಯಲ್ಲಿ ರಾಶಿ ಮಾಡಿಕೊಳ್ಳುವವನು ಮತ್ತು ಬೀಜ ಬಿತ್ತದ ಕಡೆಯಲ್ಲಿ ಕೊಯ್ಯುವವನು. 25 ಆದ್ದರಿಂದ ನಾನು ಹೆದರಿಕೊಂಡು ನಿನ್ನ ಹಣವನ್ನು ಭೂಮಿಯಲ್ಲಿ ಅಡಗಿಸಿಟ್ಟೆನು. ನೀನು ನನಗೆ ಕೊಟ್ಟ ಹಣ ಇಲ್ಲಿದೆ, ತೆಗೆದುಕೊ’ ಅಂದನು.

26 “ಅದಕ್ಕೆ ಯಜಮಾನನು, ‘ನೀನು ಸೋಮಾರಿಯಾದ ಕೆಟ್ಟ ಸೇವಕ! ನಾನು ನೆಡದ ಕಡೆಯಲ್ಲಿ ರಾಶಿ ಮಾಡಿಕೊಳ್ಳುವವನೆಂದು ಮತ್ತು ಬೀಜ ಬಿತ್ತದ ಕಡೆಯಲ್ಲಿ ಕೊಯ್ಯುವವನೆಂದು ನಿನಗೆ ಗೊತ್ತಿತ್ತೇ? 27 ಹಾಗಿದ್ದರೆ ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ಆಗ ನಾನು ಅಸಲಿನೊಡನೆ ಬಡ್ಡಿಯನ್ನೂ ಪಡೆದುಕೊಳ್ಳುತ್ತಿದ್ದೆನು’ ಎಂದು ಉತ್ತರಕೊಟ್ಟನು.

28 “ಬಳಿಕ ಯಜಮಾನನು ತನ್ನ ಬೇರೆ ಸೇವಕರಿಗೆ, ‘ಅವನ ಒಂದು ತಲಾಂತನ್ನು ತೆಗೆದುಕೊಂಡು ಐದು ತಲಾಂತು ಹೊಂದಿರುವ ಸೇವಕನಿಗೆ ಕೊಡಿರಿ. 29 ತನ್ನಲ್ಲಿರುವುದನ್ನು ವಿನಿಯೋಗಿಸುವ ಪ್ರತಿಯೊಬ್ಬನಿಗೂ ಹೆಚ್ಚಾಗಿ ಕೊಡಲ್ಪಡುವುದು, ಆದರೆ ತನ್ನಲ್ಲಿರುವುದನ್ನು ವಿನಿಯೋಗಿಸದಿರುವ ವ್ಯಕ್ತಿಯಿಂದ ಇದ್ದದ್ದನ್ನೂ ಕಸಿದುಕೊಳ್ಳಲಾಗುವುದು’ ಎಂದು ಹೇಳಿದನು. 30 ಬಳಿಕ ಆ ಯಜಮಾನನು, ‘ಕೆಲಸಕ್ಕೆ ಬಾರದ ಆ ಸೇವಕನನ್ನು, ಜನರು ಗೋಳಾಡುತ್ತಾ ಬಾಧೆಯಿಂದ ತಮ್ಮ ಹಲ್ಲುಗಳನ್ನು ಕಡಿಯುತ್ತಿರುವ ಕಗ್ಗತ್ತಲೆಯ ಸ್ಥಳಕ್ಕೆ ದಬ್ಬಿರಿ’ ಎಂದು ಆಜ್ಞಾಪಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International