Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 36-38

36 “ಆದ್ದರಿಂದ ಬೆಚಲೇಲನೂ ಒಹೊಲೀಯಾಬನೂ ಮತ್ತು ಇತರ ಎಲ್ಲಾ ನಿಪುಣರೂ ಯೆಹೋವನು ಆಜ್ಞಾಪಿಸಿದ ಕೆಲಸವನ್ನು ಮಾಡಬೇಕು. ಈ ಪವಿತ್ರಸ್ಥಳವನ್ನು ಕಟ್ಟುವುದಕ್ಕಾಗಿ ಅವಶ್ಯವಿರುವ ಎಲ್ಲಾ ಸೂಕ್ಷ್ಮವಾದ ಕೆಲಸವನ್ನು ಮಾಡುವುದಕ್ಕೆ ಯೆಹೋವನು ಈ ಜನರಿಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಅನುಗ್ರಹಿಸಿದ್ದಾನೆ.”

ಬಳಿಕ ಮೋಶೆಯು ಬೆಚಲೇಲನನ್ನೂ ಒಹೊಲೀಯಾಬನನ್ನೂ ಮತ್ತು ಯೆಹೋವನಿಂದ ವಿಶೇಷ ಜ್ಞಾನ ಹೊಂದಿದ ಇತರ ಎಲ್ಲಾ ನಿಪುಣರನ್ನೂ ಕರೆದನು. ಕೆಲಸದಲ್ಲಿ ಸಹಾಯಮಾಡಲು ಇವರು ಬಯಸಿದ್ದರಿಂದ ಬಂದರು. ಇಸ್ರೇಲರು ಕಾಣಿಕೆಗಳಾಗಿ ತಂದ ವಸ್ತುಗಳನ್ನೆಲ್ಲಾ ಮೋಶೆಯು ಅವರಿಗೆ ಕೊಟ್ಟನು. ಅವರು ದೇವರ ಪವಿತ್ರಸ್ಥಳವನ್ನು ಕಟ್ಟುವುದಕ್ಕಾಗಿ ಈ ವಸ್ತುಗಳನ್ನು ಉಪಯೋಗಿಸಿದರು. ಪ್ರತಿ ಮುಂಜಾನೆ ಜನರು ಕಾಣಿಕೆಗಳನ್ನು ತರುತ್ತಲೇ ಇದ್ದರು. ಆಗ ಆ ನಿಪುಣರೆಲ್ಲಾ ತಾವು ಮಾಡುತ್ತಿದ್ದ ಪವಿತ್ರಸ್ಥಳದ ಕೆಲಸವನ್ನು ಬಿಟ್ಟು ಮೋಶೆಯೊಡನೆ ಮಾತಾಡಲು ಹೋದರು. ಅವರು, “ಜನರು ಬಹಳ ಹೆಚ್ಚಾಗಿ ತಂದಿದ್ದಾರೆ! ಗುಡಾರದ ಕೆಲಸವನ್ನು ಮುಗಿಸುವುದಕ್ಕೆ ನಮಗೆ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ಇವೆ!” ಎಂದು ಹೇಳಿದರು.

ಆಗ ಮೋಶೆಯು, “ಪವಿತ್ರಸ್ಥಳದ ಕೆಲಸಕ್ಕಾಗಿ ಯಾವ ಪುರುಷನಾಗಲಿ ಸ್ತ್ರೀಯಾಗಲಿ ಇನ್ನು ಮುಂದೆ ಯಾವುದನ್ನೂ ಕಾಣಿಕೆಯಾಗಿ ಸಿದ್ಧಮಾಡಬಾರದು” ಎಂಬ ಸಂದೇಶವನ್ನು ಪಾಳೆಯದಲ್ಲೆಲ್ಲಾ ಕಳುಹಿಸಿದನು. ಆದ್ದರಿಂದ ಜನರು ಹೆಚ್ಚಾಗಿ ಕೊಡುವುದನ್ನು ನಿಲ್ಲಿಸಬೇಕಾಯಿತು. ದೇವರ ಪವಿತ್ರಸ್ಥಳವನ್ನು ಕಟ್ಟುವ ಕೆಲಸವನ್ನು ಮುಗಿಸುವುದಕ್ಕೆ ಬೇಕಾಗಿರುವುದಕ್ಕಿಂತಲೂ ಹೆಚ್ಚಾಗಿ ಜನರು ತಂದಿದ್ದರು.

ಪವಿತ್ರಗುಡಾರ

ತರುವಾಯ ನಿಪುಣರು ಪವಿತ್ರಗುಡಾರವನ್ನು ಮಾಡಲು ಪ್ರಾರಂಭಿಸಿದರು. ಅವರು ಶ್ರೇಷ್ಠ ನಾರುಬಟ್ಟೆಯಿಂದಲೂ ನೀಲಿ, ನೇರಳೆ, ಕೆಂಪು ದಾರಗಳಿಂದಲೂ ಹತ್ತು ಪರದೆಗಳನ್ನು ಮಾಡಿದರು. ಅವರು ಕೆರೂಬಿಗಳ ಚಿತ್ರಗಳನ್ನು ಪರದೆಗಳಲ್ಲಿ ಕಸೂತಿ ಹಾಕಿದರು. ಪ್ರತಿ ಪರದೆಯೂ ಒಂದೇ ಅಳತೆಯುಳ್ಳದ್ದಾಗಿ ಇಪ್ಪತ್ತೆಂಟು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇತ್ತು. 10 ಕೆಲಸಗಾರರು ಪರದೆಗಳನ್ನು ಒಟ್ಟಾಗಿ ಜೋಡಿಸಿ ಪರದೆಗಳ ಎರಡು ಭಾಗಗಳನ್ನಾಗಿ ಮಾಡಿದರು. ಒಂದು ಭಾಗದಲ್ಲಿ ಐದು ಪರದೆಗಳನ್ನೂ ಇನ್ನೊಂದು ಭಾಗದಲ್ಲಿ ಐದು ಪರದೆಗಳನ್ನೂ ಒಟ್ಟಾಗಿ ಜೋಡಿಸಿದರು. 11 ಬಳಿಕ ಅವರು ಒಂದು ಗುಂಪಿನ ಕೊನೆಯ ಪರದೆಯ ಅಂಚಿನಲ್ಲಿ ಕುಣಿಕೆಗಳನ್ನು ಮಾಡಲು ನೀಲಿಬಟ್ಟೆಯನ್ನು ಉಪಯೋಗಿಸಿದರು. ಇನ್ನೊಂದು ಗುಂಪಿನಲ್ಲಿದ್ದ ಕೊನೆಯ ಪರದೆಯಲ್ಲೂ ಹಾಗೆಯೇ ಮಾಡಿದರು. 12 ಒಂದು ಗುಂಪಿನ ಕೊನೆಯ ಪರದೆಯಲ್ಲೂ ಐವತ್ತು ಕುಣಿಕೆಗಳಿದ್ದವು. ಇನ್ನೊಂದು ಗುಂಪಿನ ಕೊನೆಯ ಪರದೆಯಲ್ಲೂ ಐವತ್ತು ಕುಣಿಕೆಗಳಿದ್ದವು. ಕುಣಿಕೆಗಳನ್ನು ಒಂದಕ್ಕೊಂದು ಎದುರಾಗಿ ಇರಿಸಿದರು. 13 ಬಳಿಕ ಅವರು ಐವತ್ತು ಚಿನ್ನದ ಬಳೆಗಳನ್ನು ಮಾಡಿ ಎರಡು ಪರದೆಗಳನ್ನು ಒಟ್ಟಾಗಿ ಸೇರಿಸಿದರು. ಹೀಗೆ ಪವಿತ್ರಗುಡಾರವು ಜೋಡಿಸಲ್ಪಟ್ಟು ಒಂದೇ ಗುಡಾರವಾಯಿತು.

14 ಬಳಿಕ ಕೆಲಸಗಾರರು ಪವಿತ್ರಗುಡಾರವನ್ನು ಹೊದಿಸುವುದಕ್ಕೆ ಇನ್ನೊಂದು ಗುಡಾರವನ್ನು ಮಾಡಿದರು. ಈ ಗುಡಾರವನ್ನು ಮಾಡಲು ಹನ್ನೊಂದು ಪರದೆಗಳನ್ನು ಉಪಯೋಗಿಸಿದರು. ಅವರು ಆಡುಕೂದಲಿನಿಂದ ಈ ಪರದೆಗಳನ್ನು ಮಾಡಿದರು. 15 ಈ ಎಲ್ಲಾ ಪರದೆಗಳು ಒಂದೇ ಅಳತೆಯುಳ್ಳದ್ದಾಗಿ ಮೂವತ್ತು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇದ್ದವು. 16 ಕೆಲಸಗಾರರು ಐದು ಪರದೆಗಳನ್ನು ಒಟ್ಟಾಗಿ ಸೇರಿಸಿ ಒಂದು ಭಾಗವನ್ನಾಗಿ ಮಾಡಿದರು. ಬಳಿಕ ಅವರು ಇತರ ಆರು ಪರದೆಗಳನ್ನು ಒಟ್ಟಾಗಿ ಸೇರಿಸಿ ಇನ್ನೊಂದು ಭಾಗವನ್ನಾಗಿ ಮಾಡಿದರು. 17 ಅವರು ಒಂದು ಭಾಗದ ಕೊನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಇಟ್ಟರು. ಇನ್ನೊಂದು ಭಾಗದ ಕೊನೆಯ ಪರದೆಯಲ್ಲಿಯೂ ಅದೇ ರೀತಿಯಾಗಿ ಮಾಡಿದರು. 18 ಕೆಲಸಗಾರರು ಎರಡು ಪರದೆಗಳನ್ನು ಒಟ್ಟಾಗಿ ಜೋಡಿಸಲು ಐವತ್ತು ತಾಮ್ರದ ಬಳೆಗಳನ್ನು ಮಾಡಿದರು. ಇದು ಸಮಸ್ತವನ್ನು ಒಂದೇ ಗುಡಾರವಾಗುವಂತೆ ಮಾಡಿತು. 19 ಬಳಿಕ ಅವರು ಪವಿತ್ರಗುಡಾರಕ್ಕೆ ಎರಡು ಮೇಲ್ಹೊದಿಕೆಗಳನ್ನು ಮಾಡಿದರು. ಒಂದು ಮೇಲ್ಹೊದಿಕೆಯನ್ನು ಕೆಂಪು ಬಣ್ಣದ ಕುರಿದೊಗಲುಗಳಿಂದ ಮಾಡಿದರು; ಮತ್ತೊಂದು ಮೇಲ್ಹೊದಿಕೆಯನ್ನು ಕಡಲುಹಂದಿಯ ತೊಗಲುಗಳಿಂದ ಮಾಡಿದರು.

20 ಬಳಿಕ ಕೆಲಸಗಾರರು ಪವಿತ್ರಗುಡಾರದ ಚೌಕಟ್ಟುಗಳನ್ನು ಜಾಲೀಮರದಿಂದ ಮಾಡಿದರು. 21 ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದವಾಗಿಯೂ ಒಂದು ಮೊಳ ಅಗಲವಾಗಿಯೂ ಇತ್ತು. 22 ಎರಡು ಕಂಬಗಳಿಗೆ ಎರಡು ಅಡ್ಡಕಂಬಗಳನ್ನು ಜೋಡಿಸಿ ಚೌಕಟ್ಟನ್ನು ಮಾಡಲಾಗಿತ್ತು. ಪವಿತ್ರಗುಡಾರದ ಪ್ರತಿ ಚೌಕಟ್ಟನ್ನು ಅದೇ ರೀತಿಯಲ್ಲಿ ಮಾಡಲಾಗಿತ್ತು. 23 ಪವಿತ್ರಗುಡಾರದ ದಕ್ಷಿಣ ಭಾಗದಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು. 24 ಬಳಿಕ ಅವರು ಚೌಕಟ್ಟುಗಳಿಗೆ ನಲವತ್ತು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿದರು. ಒಂದು ನಿಲುವುಪೆಟ್ಟಿಗೆಗೆ ಒಂದರಂತೆ ಪ್ರತಿ ಚೌಕಟ್ಟಿಗೆ ಎರಡು ಗದ್ದಿಗೇಕಲ್ಲುಗಳಿದ್ದವು. 25 ಅವರು ಪವಿತ್ರಗುಡಾರದ ಇನ್ನೊಂದು ಕಡೆಯ ಉತ್ತರ ಭಾಗದಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು. 26 ಅವರು ಪ್ರತಿ ಚೌಕಟ್ಟಿಗೆ ಎರಡು ಗದ್ದಿಗೇಕಲ್ಲುಗಳಂತೆ ನಲವತ್ತು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿದರು. 27 ಅವರು ಪವಿತ್ರಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮ ಭಾಗಕ್ಕೆ ಇನ್ನೂ ಆರು ಚೌಕಟ್ಟುಗಳನ್ನು ಮಾಡಿದರು. 28 ಪವಿತ್ರಗುಡಾರದ ಹಿಂಭಾಗದಲ್ಲಿನ ಮೂಲೆಗಳಿಗೂ ಎರಡು ಚೌಕಟ್ಟುಗಳನ್ನು ಮಾಡಿದರು. 29 ಈ ಚೌಕಟ್ಟುಗಳು ಕೆಳಭಾಗಕ್ಕೆ ಒಟ್ಟಾಗಿ ಸೇರಿಸಲ್ಪಟ್ಟಿದ್ದವು; ತುದಿಯಲ್ಲಿ ಒಂದು ಬಳೆಯು ಮೂಲೆ ಚೌಕಟ್ಟುಗಳನ್ನು ಒಟ್ಟಿಗೆ ಹಿಡಿದುಕೊಂಡಿತ್ತು. ಅವರು ಎರಡೂ ಮೂಲೆಗಳಿಗೆ ಹಾಗೆಯೇ ಮಾಡಿದರು. 30 ಪವಿತ್ರಗುಡಾರದ ಪಶ್ಚಿಮ ದಿಕ್ಕಿನಲ್ಲಿ ಒಟ್ಟು ಎಂಟು ಚೌಕಟ್ಟುಗಳಿದ್ದವು. ಪ್ರತಿ ಚೌಕಟ್ಟಿಗೆ ಎರಡು ಗದ್ದಿಗೇಕಲ್ಲುಗಳಂತೆ ಹದಿನಾರು ಬೆಳ್ಳಿಯ ಗದ್ದಿಗೇಕಲ್ಲುಗಳಿದ್ದವು.

31 ಬಳಿಕ ಕೆಲಸಗಾರರು ಚೌಕಟ್ಟುಗಳಿಗೆ ಅಗುಳಿಗಳನ್ನು ಮಾಡಲು ಜಾಲೀಮರವನ್ನು ಉಪಯೋಗಿಸಿದರು. ಪವಿತ್ರಗುಡಾರದ ಮೊದಲಿನ ಕಡೆಯಲ್ಲಿ ಐದು ಅಗುಳಿಗಳೂ 32 ಇನ್ನೊಂದು ಕಡೆಯಲ್ಲಿ ಐದು ಅಗುಳಿಗಳೂ ಪವಿತ್ರಗುಡಾರದ ಹಿಂಭಾಗದಲ್ಲಿ ಅಂದರೆ ಪಶ್ಚಿಮ ಭಾಗದಲ್ಲಿ ಐದು ಅಗುಳಿಗಳೂ ಇದ್ದವು. 33 ಚೌಕಟ್ಟುಗಳನ್ನು ಒಂದು ಕೊನೆಯಿಂದ ಇನ್ನೊಂದು ಕೊನೆಯವರೆಗೂ ಹಾದುಹೋಗುವಂತೆ ಅವರು ಮಧ್ಯದ ಅಗುಳಿಯನ್ನು ಮಾಡಿದರು. 34 ಅವರು ಈ ಚೌಕಟ್ಟುಗಳನ್ನು ಚಿನ್ನದಿಂದ ಹೊದಿಸಿದರು. ಅಗುಳಿಗಳಿಗಾಗಿ ಚಿನ್ನದ ಕೊಂಡಿಗಳನ್ನು ಮಾಡಿದರು; ಅಗುಳಿಗಳನ್ನು ಚಿನ್ನದಿಂದ ಹೊದಿಸಿದರು.

35 ಮಹಾಪವಿತ್ರಸ್ಥಳದ ದ್ವಾರಕ್ಕೆ ವಿಶೇಷ ಪರದೆಯನ್ನು ಮಾಡಲು ಅವರು ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ, ಕೆಂಪುದಾರಗಳನ್ನು ಉಪಯೋಗಿಸಿದರು. ಅವರು ಕೆರೂಬಿಗಳ ಚಿತ್ರಗಳನ್ನು ಪರದೆಯಲ್ಲಿ ಕಸೂತಿ ಹಾಕಿದರು. 36 ಅವರು ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿದರು ಮತ್ತು ಕಂಬಗಳನ್ನು ಚಿನ್ನದಿಂದ ಹೊದಿಸಿದರು. ಬಳಿಕ ಅವರು ಕಂಬಗಳಿಗೆ ಚಿನ್ನದ ಕೊಂಡಿಗಳನ್ನು ಮಾಡಿದರು. ಅವರು ಕಂಬಗಳಿಗೆ ನಾಲ್ಕು ಬೆಳ್ಳಿಯ ಗದ್ದಿಗೇಕಲ್ಲುಗಳನ್ನು ಮಾಡಿದರು. 37 ಬಳಿಕ ಗುಡಾರದ ಬಾಗಿಲಿಗೆ ಪರದೆಯನ್ನು ಮಾಡಿದರು. ಅವರು ಈ ಪರದೆಯನ್ನು ಮಾಡಲು ನೀಲಿ, ನೇರಳೆ, ಕೆಂಪುದಾರವನ್ನು, ಶ್ರೇಷ್ಠ ನಾರುಬಟ್ಟೆಯನ್ನು ಉಪಯೋಗಿಸಿದರು ಮತ್ತು ಅವರು ಚಿತ್ರಗಳನ್ನು ಅದರಲ್ಲಿ ಹೆಣೆದರು. 38 ಬಳಿಕ ಅವರು ಐದು ಕಂಬಗಳನ್ನೂ ಬಾಗಿಲಿನ ಪರದೆಗೆ ಕೊಂಡಿಗಳನ್ನೂ ಮಾಡಿದರು. ಅವರು ಕಂಬಗಳ ತುದಿಯನ್ನು ಮತ್ತು ಪರದೆಯ ಕೋಲುಗಳನ್ನು ಚಿನ್ನದಿಂದ ಹೊದಿಸಿದರು. ಅವರು ಕಂಬಗಳಿಗೆ ಐದು ತಾಮ್ರದ ಗದ್ದಿಗೇಕಲ್ಲುಗಳನ್ನು ಮಾಡಿದರು.

ಒಡಂಬಡಿಕೆ ಪೆಟ್ಟಿಗೆ

37 ಬೆಚಲೇಲನು ಜಾಲೀಮರದಿಂದ ಪವಿತ್ರ ಪೆಟ್ಟಿಗೆಯನ್ನು ಮಾಡಿದನು. ಪೆಟ್ಟಿಗೆಯು ಎರಡೂವರೆ ಮೊಳ ಉದ್ದ ಒಂದೂವರೆ ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರವಿತ್ತು. ಪೆಟ್ಟಿಗೆಯ ಹೊರಗಿನ ಮತ್ತು ಒಳಗಿನ ಭಾಗವನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. ಬಳಿಕ ಪೆಟ್ಟಿಗೆಯ ಸುತ್ತಲೂ ಚಿನ್ನದ ಗೋಟು ಕಟ್ಟಿಸಿದನು. ಅವನು ಚಿನ್ನದ ನಾಲ್ಕು ಬಳೆಗಳನ್ನು ಮಾಡಿಸಿ ಪೆಟ್ಟಿಗೆಯ ನಾಲ್ಕು ಮೂಲೆಗಳಲ್ಲಿ ಇರಿಸಿದನು. ಈ ಬಳೆಗಳು ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಉಪಯೋಗಿಸಲ್ಪಡುತ್ತಿದ್ದವು. ಪ್ರತಿಯೊಂದು ಬದಿಯಲ್ಲೂ ಎರಡು ಬಳೆಗಳಿದ್ದವು. ಬಳಿಕ ಪೆಟ್ಟಿಗೆಯನ್ನು ಹೊರುವುದಕ್ಕಾಗಿ ಕೋಲುಗಳನ್ನು ಜಾಲೀಮರದಿಂದ ಮಾಡಿಸಿದನು. ಅದನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. ಪೆಟ್ಟಿಗೆಯ ಪಾರ್ಶ್ವಗಳಲ್ಲಿರುವ ಬಳೆಗಳಲ್ಲಿ ಅವನು ಕೋಲುಗಳನ್ನು ಸೇರಿಸಿದನು. ಬಳಿಕ ಅವನು ಅಪ್ಪಟ ಬಂಗಾರದ ಕೃಪಾಸನವನ್ನು ಮಾಡಿಸಿದನು. ಅದು ಎರಡೂವರೆ ಮೊಳ ಉದ್ದ ಮತ್ತು ಒಂದೂವರೆ ಮೊಳ ಅಗಲ ಇತ್ತು. ಬಳಿಕ ಬೆಚಲೇಲನು ಬಂಗಾರವನ್ನು ಸುತ್ತಿಗೆಯಿಂದ ಕೆತ್ತಿ ಎರಡು ಕೆರೂಬಿಗಳ ಆಕಾರಗಳನ್ನು ಮಾಡಿದನು. ಅವನು ಕೆರೂಬಿದೂತರನ್ನು ಕೃಪಾಸನದ ಕೊನೆಗಳಲ್ಲಿ ಇಟ್ಟನು. ಒಂದು ಕೆರೂಬಿಯನ್ನು ಕೃಪಾಸನದ ಒಂದು ಕೊನೆಯಲ್ಲೂ ಇನ್ನೊಂದನ್ನು ಮತ್ತೊಂದು ಕೊನೆಯಲ್ಲೂ ಇಟ್ಟನು. ಅವುಗಳನ್ನು ಒಟ್ಟಾಗಿ ಕೃಪಾಸನಕ್ಕೆ ಜೋಡಿಸಿ ಒಂದೇ ವಸ್ತುವನ್ನಾಗಿ ಮಾಡಿದನು. ಕೆರೂಬಿಗಳ ರೆಕ್ಕೆಗಳು ಆಕಾಶದ ಕಡೆಗೆ ಚಾಚಿದ್ದವು. ಅವುಗಳು ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚಿದ್ದವು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿದ್ದವು.

ವಿಶೇಷ ಮೇಜು

10 ತರುವಾಯ, ಅವನು ಜಾಲೀಮರದಿಂದ ಮೇಜನ್ನು ಮಾಡಿದನು. ಮೇಜು ಎರಡು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇತ್ತು. 11 ಅವನು ಮೇಜನ್ನು ಅಪ್ಪಟ ಬಂಗಾರದಿಂದ ಹೊದಿಸಿದನು; ಮೇಜಿನ ಸುತ್ತಲೂ ಚಿನ್ನದ ಗೋಟನ್ನು ಕಟ್ಟಿಸಿದನು. 12 ಬಳಿಕ ಅವನು ಮೇಜಿನ ಸುತ್ತಲೂ ಮೂರು ಇಂಚು ಅಗಲದ ಚೌಕಟ್ಟನ್ನು ಮಾಡಿದನು; ಆ ಚೌಕಟ್ಟಿಗೆ ಚಿನ್ನದ ಗೋಟನ್ನು ಕಟ್ಟಿಸಿದನು. 13 ಬಳಿಕ ಅವನು ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿರುವ ನಾಲ್ಕು ಮೂಲೆಗಳಲ್ಲಿ ಅವುಗಳನ್ನು ಇರಿಸಿದನು. 14 ಅವನು ಬಳೆಗಳನ್ನು ಮೇಜಿನ ತುದಿಯಲ್ಲಿರುವ ಚೌಕಟ್ಟಿಗೆ ಹತ್ತಿರವಾಗಿ ಇರಿಸಿದನು. ಕೋಲುಗಳಿಂದ ಮೇಜನ್ನು ಹೊರುವುದಕ್ಕಾಗಿ ಈ ಬಳೆಗಳು ಇದ್ದವು. 15 ಬಳಿಕ ಮೇಜನ್ನು ಹೊರುವುದಕ್ಕಾಗಿ ಉಪಯೋಗಿಸಲ್ಪಡುತ್ತಿದ್ದ ಕೋಲುಗಳನ್ನು ಜಾಲೀಮರದಿಂದ ಮಾಡಿದನು. ಕೋಲುಗಳನ್ನು ಅಪ್ಪಟ ಬಂಗಾರದಿಂದ ಹೊದಿಸಿದನು. 16 ಬಳಿಕ ಅವನು ಮೇಜಿನಲ್ಲಿ ಉಪಯೋಗಿಸಲ್ಪಡುತ್ತಿದ್ದ ಎಲ್ಲಾ ವಸ್ತುಗಳನ್ನು ಮಾಡಿದನು. ಅವನು ಅಪ್ಪಟ ಬಂಗಾರದ ತಟ್ಟೆ, ಚಮಚ, ಬೋಗುಣಿ ಮತ್ತು ಹೂಜೆಗಳನ್ನು ಮಾಡಿದನು. ಬೋಗುಣಿ ಮತ್ತು ಹೂಜೆಗಳು ಪಾನದ್ರವ್ಯ ಸಮರ್ಪಣೆಗಳನ್ನು ಅರ್ಪಿಸುವುದಕ್ಕೆ ಉಪಯುಕ್ತವಾಗಿದ್ದವು.

ದೀಪಸ್ತಂಭ

17 ಬಳಿಕ ಅವನು ದೀಪಸ್ತಂಭವನ್ನು ಮಾಡಿದನು. ಅವನು ಅಪ್ಪಟ ಬಂಗಾರದಿಂದ ಕಂಬವನ್ನು ಮಾಡಿದನು. ತರುವಾಯ ಹೂವು, ಮೊಗ್ಗು ಮತ್ತು ದಳಗಳನ್ನು ಮಾಡಿ ಜೋಡಿಸಿದನು. ಹೀಗೆ ಅವು ಪುಷ್ಪಾಲಂಕಾರವಾದ ಒಂದೇ ವಸ್ತುವಾಯಿತು. 18 ದೀಪಸ್ತಂಭಕ್ಕೆ ಆರು ಕೊಂಬೆಗಳಿದ್ದವು. ಮೂರು ಕೊಂಬೆಗಳು ಒಂದು ಕಡೆಯಲ್ಲೂ ಇನ್ನು ಮೂರು ಕೊಂಬೆಗಳು ಇನ್ನೊಂದು ಕಡೆಯಲ್ಲಿಯೂ ಇದ್ದವು. 19 ಪ್ರತಿಯೊಂದು ಕೊಂಬೆಗಳಲ್ಲಿ ಮೂರುಮೂರು ಹೂವುಗಳಿದ್ದವು. ಈ ಹೂವುಗಳು ಮೊಗ್ಗು, ದಳಗಳಿಂದ ಕೂಡಿದ ಬಾದಾಮಿಹೂವುಗಳಂತೆ ಮಾಡಲ್ಪಟ್ಟವು. 20 ದೀಪಸ್ತಂಭದ ಕಂಬದಲ್ಲಿ ಇನ್ನೂ ನಾಲ್ಕು ಹೂವುಗಳಿದ್ದವು. ಅವುಗಳು ಸಹ ಮೊಗ್ಗು, ದಳಗಳಿಂದ ಕೂಡಿದ ಬಾದಾಮಿಯ ಹೂವುಗಳಂತೆ ಮಾಡಲ್ಪಟ್ಟವು. 21 ಕಂಬದ ಪ್ರತಿಯೊಂದು ಕಡೆಯಲ್ಲಿ ಮೂರುಮೂರು ಕೊಂಬೆಗಳಂತೆ ಆರು ಕೊಂಬೆಗಳಿದ್ದವು. ಕೊಂಬೆಗಳು ಕವಲೊಡೆದಿರುವ ಮೂರು ಸ್ಥಳಗಳಲ್ಲೂ ಒಂದೊಂದು ಹೂವು ಇತ್ತು. ಆ ಹೂವಿಗೆ ಮೊಗ್ಗುಗಳು ಮತ್ತು ದಳಗಳು ಇದ್ದವು. 22 ಹೂವು ಮತ್ತು ಕೊಂಬೆಗಳಿಂದ ಕೂಡಿದ ಇಡೀ ದೀಪಸ್ತಂಭವು ಅಪ್ಪಟ ಬಂಗಾರದಿಂದ ಅಖಂಡವಾಗಿ ಮಾಡಲ್ಪಟ್ಟಿತ್ತು. 23 ಅವನು ಈ ದೀಪಸ್ತಂಭಕ್ಕೆ ಏಳು ಹಣತೆಗಳನ್ನು ಮಾಡಿದನು; ಬಳಿಕ ಅಪ್ಪಟ ಬಂಗಾರದಿಂದ ಬತ್ತಿಗಳನ್ನು ಸರಿಪಡಿಸುವ ಕತ್ತರಿಗಳನ್ನೂ ಹರಿವಾಣಗಳನ್ನೂ ಮಾಡಿದನು. 24 ದೀಪಸ್ತಂಭವನ್ನು ಮತ್ತು ಅದರ ಉಪಕರಣಗಳನ್ನು ಮಾಡಲು ಎಪ್ಪತ್ತೈದು ಪೌಂಡು ಅಪ್ಪಟ ಬಂಗಾರವನ್ನು ಉಪಯೋಗಿಸಿದನು.

ಧೂಪವೇದಿಕೆ

25 ಅವನು ಧೂಪವೇದಿಕೆಯನ್ನು ಜಾಲೀಮರದಿಂದ ಮಾಡಿದನು. ಧೂಪವೇದಿಕೆಯು ಚೌಕವಾಗಿತ್ತು. ಅದು ಒಂದು ಮೊಳ ಉದ್ದ, ಒಂದು ಮೊಳ ಅಗಲ ಮತ್ತು ಎರಡು ಮೊಳ ಎತ್ತರ ಇತ್ತು. ಧೂಪವೇದಿಕೆಯಲ್ಲಿ ನಾಲ್ಕು ಕೊಂಬುಗಳಿದ್ದವು. ಪ್ರತಿ ಮೂಲೆಯಲ್ಲಿಯೂ ಒಂದೊಂದು ಕೊಂಬುಗಳಿದ್ದವು. ಈ ಕೊಂಬುಗಳು ಒಟ್ಟಾಗಿ ಧೂಪವೇದಿಕೆಗೆ ಜೋಡಿಸಲ್ಪಟ್ಟು ಅವಿಭಾಜ್ಯವಾಗಿತ್ತು. 26 ಅವನು ಅಪ್ಪಟ ಬಂಗಾರದಿಂದ ಮೇಲ್ಭಾಗವನ್ನೂ ಎಲ್ಲಾ ಪಾರ್ಶ್ವಗಳನ್ನೂ ಕೊಂಬುಗಳನ್ನೂ ಹೊದಿಸಿದನು. ಬಳಿಕ ಅವನು ಧೂಪವೇದಿಕೆಯ ಸುತ್ತಲೂ ಚಿನ್ನದ ಗೋಟನ್ನು ಕಟ್ಟಿಸಿದನು. 27 ಅವನು ಧೂಪವೇದಿಕೆಗೆ ಎರಡು ಚಿನ್ನದ ಬಳೆಗಳನ್ನು ಮಾಡಿಸಿ ಗೋಟಿನ ಕೆಳಗೆ ವೇದಿಕೆಯ ಪ್ರತಿಯೊಂದು ಬದಿಯಲ್ಲಿ ಇರಿಸಿದನು. ಈ ಚಿನ್ನದ ಬಳೆಗಳು ವೇದಿಕೆಯನ್ನು ಕೋಲುಗಳ ಮೂಲಕ ಹೊರುವುದಕ್ಕೆ ಉಪಯುಕ್ತವಾಗಿದ್ದವು. 28 ಅವನು ಜಾಲೀಮರದಿಂದ ಕೋಲುಗಳನ್ನು ಮಾಡಿಸಿ ಚಿನ್ನದಿಂದ ಅವುಗಳನ್ನು ಹೊದಿಸಿದನು.

29 ತರುವಾಯ ಅವನು ಪವಿತ್ರವಾದ ಅಭಿಷೇಕತೈಲವನ್ನು ಮಾಡಿದನು. ಅವನು ಶುದ್ಧವಾದ ಪರಿಮಳಧೂಪವನ್ನು ಮಾಡಿದನು. ಸುಗಂಧದ್ರವ್ಯಕಾರರ ವಿದ್ಯೆಯ ಮೇರೆಗೆ ಈ ವಸ್ತುಗಳನ್ನು ಮಾಡಲಾಯಿತು.

ಯಜ್ಞವೇದಿಕೆ

38 ತರುವಾಯ ಬೆಚಲೇಲನು ಯಜ್ಞವೇದಿಕೆಯನ್ನು ಜಾಲೀಮರದಿಂದ ಮಾಡಿದನು. ಈ ವೇದಿಕೆಯು ಸರ್ವಾಂಗಹೋಮಗಳನ್ನು ಅರ್ಪಿಸುವುದಕ್ಕೆ ಕಟ್ಟಲ್ಪಟ್ಟಿತ್ತು. ವೇದಿಕೆಯು ಚೌಕವಾಗಿತ್ತು. ಅದು ಐದು ಮೊಳ ಉದ್ದ, ಐದು ಮೊಳ ಅಗಲ ಮತ್ತು ಮೂರು ಮೊಳ ಎತ್ತರ ಇತ್ತು. ಅವನು ಯಜ್ಞವೇದಿಕೆಯ ನಾಲ್ಕು ಮೂಲೆಗಳಲ್ಲಿ ಒಂದೊಂದು ಕೊಂಬುಗಳನ್ನು ಇಟ್ಟು ಪ್ರತಿಯೊಂದೂ ಕೊಂಬನ್ನು ಅದರ ಮೂಲೆಗೆ ಸೇರಿಸಿದನು. ಹೀಗಾಗಿ ಪ್ರತಿಯೊಂದೂ ಅಖಂಡವಾದ ಒಂದೇ ವಸ್ತುವಿನಂತಾಯಿತು. ಅವನು ಯಜ್ಞವೇದಿಕೆಯನ್ನು ತಾಮ್ರದಿಂದ ಹೊದಿಸಿದನು. ಬಳಿಕ ವೇದಿಕೆಯಲ್ಲಿ ಉಪಯೋಗಿಸುವ ಎಲ್ಲಾ ಉಪಕರಣಗಳನ್ನು ಅಂದರೆ ಮಡಿಕೆಗಳು, ಸಲಿಕೆಗಳು, ಬೋಗುಣಿಗಳು, ಮುಳ್ಳುಗಳು ಮತ್ತು ಅಗ್ಗಿಷ್ಟಿಗೆಗಳನ್ನು ತಾಮ್ರದಿಂದ ಮಾಡಿದನು. ಬಳಿಕ ಅವನು ವೇದಿಕೆಗೆ ತಾಮ್ರದ ಜಾಳಿಗೆಯನ್ನು ಮಾಡಿದನು. ಜಾಳಿಗೆಯು ಹೆಣಿಗೇ ಕೆಲಸದಿಂದ ಮಾಡಲಾಗಿತ್ತು. ಜಾಳಿಗೆಯು ವೇದಿಕೆಯ ಕೆಳಭಾಗದಲ್ಲಿರುವ ಕಟ್ಟೆಯ ಕೆಳಗೆ ಇಡಲ್ಪಟ್ಟಿತ್ತು. ಅದು ಕೆಳಗಿನಿಂದ ವೇದಿಕೆಯ ಅರ್ಧಭಾಗದಷ್ಟು ಮೇಲಕ್ಕೆ ಹೋಯಿತು. ಬಳಿಕ ಅವನು ತಾಮ್ರದ ಬಳೆಗಳನ್ನು ಮಾಡಿದನು. ಈ ಬಳೆಗಳು ವೇದಿಕೆಯನ್ನು ಕೋಲುಗಳಿಂದ ಹೊರುವುದಕ್ಕೆ ಉಪಯುಕ್ತವಾಗಿದ್ದವು. ಅವನು ಬಳೆಗಳನ್ನು ಜಾಳಿಗೆಯ ನಾಲ್ಕು ಮೂಲೆಗಳಲ್ಲಿ ಇಟ್ಟನು. ಬಳಿಕ ಅವನು ಜಾಲೀಮರದಿಂದ ಕೋಲುಗಳನ್ನು ಮಾಡಿ ಅವುಗಳನ್ನು ತಾಮ್ರದಿಂದ ಹೊದಿಸಿದನು. ಅವನು ವೇದಿಕೆಯ ಪಾರ್ಶ್ವಗಳಲ್ಲಿದ್ದ ಬಳೆಗಳಲ್ಲಿ ಕೋಲುಗಳನ್ನು ಸೇರಿಸಿದನು. ಕೋಲುಗಳು ವೇದಿಕೆಯನ್ನು ಹೊರುವುದಕ್ಕಾಗಿ ಉಪಯುಕ್ತವಾಗಿದ್ದವು. ಅವನು ವೇದಿಕೆಯನ್ನು ಪೆಟ್ಟಿಗೆಯಂತೆ ಮಾಡಲು ಹಲಗೆಗಳನ್ನು ಉಪಯೋಗಿಸಿದನು. ಅದು ಟೊಳ್ಳಾಗಿತ್ತು.

ಅವನು ತಾಮ್ರದಿಂದ ಗಂಗಾಳವನ್ನೂ ಅದರ ಪೀಠವನ್ನೂ ಮಾಡಿದನು. ದೇವದರ್ಶನಗುಡಾರದ ಬಾಗಿಲಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರು ಕೊಟ್ಟ ತಾಮ್ರದ ದರ್ಪಣಗಳನ್ನು ಅದಕ್ಕೆ ಉಪಯೋಗಿಸಿದನು.

ಪವಿತ್ರಗುಡಾರದ ಸುತ್ತಲಿನ ಅಂಗಳ

ಬಳಿಕ ಅವನು ಅಂಗಳವನ್ನು ಮಾಡಿದನು. ದಕ್ಷಿಣ ಭಾಗದಲ್ಲಿ ನೂರು ಮೊಳ ಉದ್ದದ ಪರದೆಯ ಗೋಡೆಯನ್ನು ಮಾಡಿದನು. ಪರದೆಗಳು ಶ್ರೇಷ್ಠ ನಾರುಬಟ್ಟೆಯಿಂದ ಮಾಡಲಾಗಿದ್ದವು. 10 ದಕ್ಷಿಣ ಭಾಗದಲ್ಲಿದ್ದ ಪರದೆಗಳಿಗೆ ಇಪ್ಪತ್ತು ಕಂಬಗಳಿದ್ದವು. ಕಂಬಗಳಿಗೆ ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳಿದ್ದವು. ಕಂಬಗಳ ಕೊಂಡಿಗಳು ಮತ್ತು ಪರದೆಯ ಕೋಲುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು. 11 ಅಂಗಳದ ಉತ್ತರ ಭಾಗದಲ್ಲಿಯೂ ನೂರು ಮೊಳ ಉದ್ದದ ಪರದೆಗಳ ಗೋಡೆಯಿತ್ತು. ಅವುಗಳಿಗೆ ಇಪ್ಪತ್ತು ಕಂಬಗಳು, ಇಪ್ಪತ್ತು ತಾಮ್ರದ ಗದ್ದಿಗೇಕಲ್ಲುಗಳು ಇದ್ದವು. ಕಂಬಗಳ ಕೊಂಡಿಗಳು ಮತ್ತು ಪರದೆಯ ಕೋಲುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು.

12 ಅಂಗಳದ ಪಶ್ಚಿಮ ಭಾಗದಲ್ಲಿ ಪರದೆಗಳ ಗೋಡೆಯು ಐವತ್ತು ಮೊಳ ಉದ್ದವಾಗಿತ್ತು. ಅಲ್ಲಿ ಹತ್ತು ಕಂಬಗಳೂ ಹತ್ತು ಗದ್ದಿಗೇಕಲ್ಲುಗಳೂ ಇದ್ದವು. ಕಂಬಗಳ ಕೊಂಡಿಗಳು ಮತ್ತು ಪರದೆಯ ಕೋಲುಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು.

13 ಅಂಗಳದ ಪೂರ್ವ ಭಾಗವು ಐವತ್ತು ಮೊಳ ಅಗಲವಾಗಿತ್ತು. ಅಂಗಳದ ಪ್ರವೇಶದ್ವಾರವು ಈ ಭಾಗದಲ್ಲಿತ್ತು. 14 ಬಾಗಿಲಿನ ಒಂದು ಕಡೆಯಲ್ಲಿ ಪರದೆಗಳ ಗೋಡೆಯು ಹದಿನೈದು ಮೊಳ ಉದ್ದವಾಗಿತ್ತು. ಆ ಕಡೆಯಲ್ಲಿ ಮೂರು ಕಂಬಗಳೂ ಮೂರು ಗದ್ದಿಗೇಕಲ್ಲುಗಳೂ ಇದ್ದವು. 15 ಬಾಗಿಲಿನ ಇನ್ನೊಂದು ಕಡೆಯಲ್ಲೂ ಪರದೆಗಳ ಗೋಡೆಯು ಹದಿನೈದು ಮೊಳ ಉದ್ದವಾಗಿತ್ತು. ಆ ಕಡೆಯಲ್ಲಿ ಮೂರು ಕಂಬಗಳೂ ಮೂರು ಗದ್ದೀಗೆಕಲ್ಲುಗಳೂ ಇದ್ದವು. 16 ಅಂಗಳದ ಸುತ್ತಲಿದ್ದ ಪರದೆಗಳೆಲ್ಲಾ ಶ್ರೇಷ್ಠ ನಾರುಬಟ್ಟೆಯಿಂದ ಮಾಡಲ್ಪಟ್ಟಿದ್ದವು. 17 ಕಂಬಗಳ ಗದ್ದಿಗೇಕಲ್ಲುಗಳನ್ನು ತಾಮ್ರದಿಂದ ಮಾಡಲಾಗಿತ್ತು. ಕೊಂಡಿಗಳನ್ನು ಮತ್ತು ಪರದೆಯ ಕೋಲುಗಳನ್ನು ಬೆಳ್ಳಿಯಿಂದ ಮಾಡಲಾಗಿತ್ತು. ಕಂಬಗಳ ತುದಿಗಳನ್ನೂ ಬೆಳ್ಳಿಯಿಂದ ಹೊದಿಸಲಾಗಿತ್ತು. ಅಂಗಳದಲ್ಲಿದ್ದ ಕಂಬಗಳಿಗೆಲ್ಲಾ ಬೆಳ್ಳಿಯಿಂದ ಮಾಡಿದ ಪರದೆಯ ಕೋಲುಗಳಿದ್ದವು.

18 ಅಂಗಳದ ಬಾಗಿಲಿನ ಪರದೆಯು ಶ್ರೇಷ್ಠ ನಾರುಬಟ್ಟೆಯಿಂದಲೂ, ನೀಲಿ, ನೇರಳೆ, ಕೆಂಪುದಾರಗಳಿಂದಲೂ ಮಾಡಲಾಗಿತ್ತು. ಪರದೆಯಲ್ಲಿ ನಕಾಸಿ ಕೆಲಸ ಮಾಡಲಾಗಿತ್ತು. ಪರದೆಯು ಇಪ್ಪತ್ತು ಮೊಳ ಉದ್ದ ಮತ್ತು ಐದು ಮೊಳ ಅಗಲವಾಗಿತ್ತು. ಅಂಗಳದ ಸುತ್ತಲಿದ್ದ ಎಲ್ಲಾ ಪರದೆಗಳ ಎತ್ತರ ಒಂದೇ ಆಗಿತ್ತು. 19 ಪರದೆಗಳಿಗೆ ನಾಲ್ಕು ಕಂಬಗಳು ಮತ್ತು ನಾಲ್ಕು ತಾಮ್ರದ ಗದ್ದಿಗೇಕಲ್ಲುಗಳು ಇದ್ದವು. ಕಂಬಗಳ ಕೊಂಡಿಗಳನ್ನು ಬೆಳ್ಳಿಯಿಂದ ಮಾಡಲಾಗಿತ್ತು. ಕಂಬಗಳ ತುದಿಗಳು ಬೆಳ್ಳಿಯಿಂದ ಮಾಡಲ್ಪಟ್ಟಿದ್ದವು. 20 ಪವಿತ್ರಗುಡಾರದ ಎಲ್ಲಾ ಗೂಟಗಳು ಮತ್ತು ಅಂಗಳದ ಸುತ್ತಲಿದ್ದ ಪರದೆಗಳ ಗೂಟಗಳು ತಾಮ್ರದಿಂದ ಮಾಡಲ್ಪಟ್ಟಿದ್ದವು.

21 ಒಡಂಬಡಿಕೆಯ ಗುಡಾರವಾದ ಪವಿತ್ರಗುಡಾರವನ್ನು ಮಾಡಲು ಉಪಯೋಗಿಸಿದ ಎಲ್ಲಾ ವಸ್ತುಗಳನ್ನು ಬರೆದಿಡಬೇಕೆಂದು ಮೋಶೆಯು ಲೇವಿಯರಿಗೆ ಆಜ್ಞಾಪಿಸಿದನು. ಈ ಪಟ್ಟಿಯು ಆರೋನನ ಮಗನಾದ ಈತಾಮಾರನ ವಶದಲ್ಲಿ ಇತ್ತು.

22 ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರತಿಯೊಂದನ್ನೂ ಯೆಹೂದಕುಲದ ಹೂರನ ಮೊಮ್ಮಗನೂ ಊರಿಯ ಮಗನೂ ಆದ ಬೆಚಲೇಲನು ಮಾಡಿದನು. 23 ದಾನ್‌ಕುಲದ ಅಹೀಸಾಮಾಕನ ಮಗನಾದ ಒಹೊಲೀಯಾಬನು ಅವನಿಗೆ ಸಹಾಯ ಮಾಡಿದನು. ಒಹೊಲೀಯಾಬನು ನಿಪುಣನಾದ ಕೆಲಸಗಾರನೂ ನಕಾಸಿ ಕೆಲಸ ಮಾಡುವವನೂ ಆಗಿದ್ದನು. ಅವನು ಶ್ರೇಷ್ಠ ನಾರುಬಟ್ಟೆಯಲ್ಲಿ ನೀಲಿ, ನೇರಳೆ, ಕೆಂಪುದಾರಗಳಿಂದ ಬುಟೇದಾರೀ ಕೆಲಸ ಮಾಡಲು ನಿಪುಣನಾಗಿದ್ದನು.

24 ಪವಿತ್ರಸ್ಥಳಕ್ಕಾಗಿ ಎರಡು ಟನ್‌ಗಿಂತ ಹೆಚ್ಚು ಬಂಗಾರವು ಯೆಹೋವನಿಗೆ ಕಾಣಿಕೆಯಾಗಿ ಕೊಡಲ್ಪಟ್ಟಿತು. (ಅಧಿಕೃತ ಅಳತೆಯನ್ನು ಉಪಯೋಗಿಸಿ ಇದನ್ನು ತೂಕ ಮಾಡಲಾಯಿತು.)

25 ಲೆಕ್ಕಿಸಲ್ಪಟ್ಟ ಒಟ್ಟು ಗಂಡಸರು ಮೂರುಮುಕ್ಕಾಲು ಟನ್‌ಗಿಂತ ಹೆಚ್ಚು ಬೆಳ್ಳಿಯನ್ನು ಕೊಟ್ಟರು. (ಅಧಿಕೃತ ಅಳತೆಯನ್ನು ಉಪಯೋಗಿಸಿ ಇದನ್ನು ತೂಕ ಮಾಡಲಾಯಿತು.) 26 ಇಪ್ಪತ್ತು ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಎಲ್ಲಾ ಗಂಡಸರನ್ನು ಲೆಕ್ಕಿಸಲಾಯಿತು. ಅಲ್ಲಿ ಆರು ಲಕ್ಷದ ಮೂರು ಸಾವಿರದ ಐನೂರೈವತ್ತು ಮಂದಿ ಗಂಡಸರಿದ್ದರು ಮತ್ತು ಪ್ರತಿಯೊಬ್ಬನು ತಲಾ ಒಂದು ಬೆಕಾ[a] ಬೆಳ್ಳಿಯನ್ನು ತೆರಿಗೆಯಾಗಿ ಕೊಡಬೇಕಾಯಿತು. (ಅಧಿಕೃತ ಅಳತೆಯ ಪ್ರಕಾರ ಒಂದು ಬೆಕಾ ಅಂದರೆ ಅರ್ಧ ಶೆಕೆಲ್.) 27 ಯೆಹೋವನ ಪವಿತ್ರಸ್ಥಳ ಮತ್ತು ಪರದೆಗಳಿಗೆ ಬೇಕಾದ ನೂರು ಗದ್ದಿಗೇಕಲ್ಲುಗಳನ್ನು ಮಾಡಲು ಅವರು ಮೂರುಮುಕ್ಕಾಲು ಟನ್ ಬೆಳ್ಳಿಯನ್ನು ಉಪಯೋಗಿಸಿದರು. ಅವರು ಪ್ರತಿ ಗದ್ದಿಗೇಕಲ್ಲಿಗೆ ಎಪ್ಪತ್ತೈದು ಪೌಂಡು ಬೆಳ್ಳಿಯನ್ನು ಉಪಯೋಗಿಸಿದರು. 28 ಉಳಿದ ಐವತ್ತು ಪೌಂಡು ಬೆಳ್ಳಿಯನ್ನು, ಕೊಂಡಿಗಳನ್ನೂ ಪರದೆಯ ಕೋಲುಗಳನ್ನೂ ಮಾಡುವುದಕ್ಕೂ ಕಂಬಗಳಿಗೆ ಹೊದಿಸುವುದಕ್ಕೂ ಉಪಯೋಗಿಸಿದರು.

29 ಇಪ್ಪತ್ತಾರುವರೆ ಟನ್‌ಗಿಂತ ಹೆಚ್ಚು ತಾಮ್ರವನ್ನು ಯೆಹೋವನಿಗಾಗಿ ಕೊಡಲಾಯಿತು. 30 ಆ ತಾಮ್ರವನ್ನು ದೇವದರ್ಶನಗುಡಾರದ ಬಾಗಿಲಿನ ಗದ್ದಿಗೇಕಲ್ಲುಗಳನ್ನು ಮಾಡಲು ಉಪಯೋಗಿಸಲಾಯಿತು. ಯಜ್ಞವೇದಿಕೆಯನ್ನು ಮತ್ತು ತಾಮ್ರದ ಜಾಳಿಗೆಯನ್ನು ಮಾಡಲು ಅವರು ತಾಮ್ರವನ್ನು ಉಪಯೋಗಿಸಿದರು. ಯಜ್ಞವೇದಿಕೆಯ ಎಲ್ಲಾ ಉಪಕರಣಗಳನ್ನು ಮತ್ತು ಬಟ್ಟಲುಗಳನ್ನು ಮಾಡಲು ತಾಮ್ರವನ್ನು ಉಪಯೋಗಿಸಲಾಯಿತು. 31 ಅದನ್ನು ಅಂಗಳದ ಸುತ್ತಲಿರುವ ಪರದೆಗಳ ಮತ್ತು ಬಾಗಿಲಿನ ಪರದೆಗಳ ಗದ್ದಿಗೇಕಲ್ಲುಗಳಿಗೂ ಉಪಯೋಗಿಸಲಾಯಿತು. ತಾಮ್ರವನ್ನು ಪವಿತ್ರಗುಡಾರದ ಮತ್ತು ಅಂಗಳದ ಸುತ್ತಲಿರುವ ಪರದೆಗಳ ಗೂಟಗಳನ್ನು ಮಾಡಲು ಉಪಯೋಗಿಸಲಾಯಿತು.

ಮತ್ತಾಯ 23:1-22

ಯೇಸು ಧಾರ್ಮಿಕ ನಾಯಕರನ್ನು ಖಂಡಿಸಿದನು

(ಮಾರ್ಕ 12:38-40; ಲೂಕ 11:37-52; 20:45-47)

23 ಬಳಿಕ ಯೇಸು ನೆರೆದಿದ್ದ ಜನರೊಂದಿಗೂ ತನ್ನ ಶಿಷ್ಯರೊಂದಿಗೂ ಮಾತಾಡಿ ಹೇಳಿದ್ದೇನೆಂದರೆ: “ಮೋಶೆಯ ಧರ್ಮಶಾಸ್ತ್ರ ಹೇಳುವುದನ್ನು ನಿಮಗೆ ತಿಳಿಸಲು ಧರ್ಮೋಪದೇಶಕರಿಗೂ ಫರಿಸಾಯರಿಗೂ ಅಧಿಕಾರವಿದೆ. ಆದ್ದರಿಂದ ನೀವು ಅವರಿಗೆ ವಿಧೇಯರಾಗಿರಬೇಕು ಮತ್ತು ಅವರು ಹೇಳಿದ್ದನ್ನೆಲ್ಲ ಕೈಕೊಂಡು ನಡೆಯಬೇಕು. ಆದರೆ ಅವರ ಜೀವಿತಗಳು ಅನುಸರಿಸತಕ್ಕ ಒಳ್ಳೆಯ ಮಾದರಿ ಜೀವಿತಗಳಲ್ಲ. ಅವರು ನಿಮಗೆ ತಿಳಿಸುವಂಥ ಸಂಗತಿಗಳನ್ನು ತಾವೇ ಅನುಸರಿಸುವುದಿಲ್ಲ. ಅವರು ಬೇರೆಯವರಿಗೆ ಕಷ್ಟಕರವಾದ ನಿಯಮಗಳನ್ನು ಕೊಟ್ಟು ಅವುಗಳಿಗೆ ವಿಧೇಯರಾಗಬೇಕೆಂದು ಒತ್ತಾಯ ಮಾಡುತ್ತಾರೆ. ತಾವಾದರೋ ಆ ನಿಯಮಗಳಲ್ಲಿ ಯಾವದನ್ನಾದರೂ ಅನುಸರಿಸಲು ಪ್ರಯತ್ನಿಸುವುದಿಲ್ಲ.

“ತಮ್ಮನ್ನು ಬೇರೆ ಜನರು ನೋಡಲಿ ಎಂಬ ಒಂದೇ ಉದ್ದೇಶದಿಂದ ಅವರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ಪವಿತ್ರ ಗ್ರಂಥಗಳು ತುಂಬಿರುವ ವಿಶೇಷವಾದ ಚರ್ಮದ ಚೀಲಗಳನ್ನು ಅವರು ಕಟ್ಟಿಕೊಂಡಿರುತ್ತಾರೆ. ಅವರು ಈ ಚೀಲಗಳನ್ನು ಇನ್ನೂ ಹೆಚ್ಚುಹೆಚ್ಚು ದೊಡ್ಡದನ್ನಾಗಿ ಮಾಡುತ್ತಾರೆ. ಜನರು ನೋಡಲಿ ಎಂದು ಅವರು ತಮ್ಮ ವಿಶೇಷ ಪ್ರಾರ್ಥನೆಯ ಉಡುಪುಗಳನ್ನು ಮತ್ತಷ್ಟು ಉದ್ದ ಮಾಡುತ್ತಾರೆ. ಆ ಫರಿಸಾಯರು ಮತ್ತು ಧರ್ಮೋಪದೇಶಕರು ಔತಣಗಳಲ್ಲಿ ಹಾಗೂ ಸಭಾಮಂದಿರಗಳಲ್ಲಿ ಅತಿ ಪ್ರಾಮುಖ್ಯವಾದ ಸ್ಥಾನಗಳನ್ನು ಅಪೇಕ್ಷಿಸುತ್ತಾರೆ. ಮಾರುಕಟ್ಟೆಗಳಲ್ಲಿ ಜನರು ತಮಗೆ ಮರ್ಯಾದೆ ತೋರಿಸಬೇಕೆಂದು ಆಶಿಸುತ್ತಾರೆ; ಜನರಿಂದ ಉಪದೇಶಕರೆನಿಸಿಕೊಳ್ಳಲು ಇಷ್ಟಪಡುತ್ತಾರೆ.

“ಆದರೆ ನೀವು ಉಪದೇಶಕರೆನಿಸಿಕೊಳ್ಳಬೇಡಿ. ನೀವೆಲ್ಲರೂ ಸಹೋದರಸಹೋದರಿಯರು. ನಿಮಗೆ ಒಬ್ಬನೇ ಉಪದೇಶಕನು. ಈ ಲೋಕದಲ್ಲಿ ಯಾರನ್ನೂ ‘ತಂದೆ’ ಎಂದು ಕರೆಯಬೇಡಿ. ನಿಮಗೆ ಒಬ್ಬನೇ ತಂದೆ. ಆತನು ಪರಲೋಕದಲ್ಲಿದ್ದಾನೆ. 10 ‘ಗುರು’ವೆಂದೂ ಕರೆಸಿಕೊಳ್ಳಬೇಡಿ. ನಿಮಗೆ ಕ್ರಿಸ್ತನೊಬ್ಬನೇ ಗುರು. 11 ಸೇವಕನಂತೆ ನಿಮಗೆ ಸೇವೆ ಮಾಡುವವನೇ ನಿಮ್ಮಲ್ಲಿ ಅತ್ಯಂತ ದೊಡ್ಡವನಾಗಿದ್ದಾನೆ. 12 ತಾನು ಬೇರೆಯವರಿಗಿಂತ ಉತ್ತಮನೆಂದು ತನ್ನನ್ನು ಭಾವಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಉನ್ನತಿಗೇರಿಸಲ್ಪಡುವನು.

13 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ಜನರು ಪರಲೋಕರಾಜ್ಯಕ್ಕೆ ಪ್ರವೇಶಿಸುವ ದಾರಿಯನ್ನು ನೀವು ಮುಚ್ಚಿಬಿಡುತ್ತೀರಿ. ನೀವೂ ಪ್ರವೇಶಿಸುವುದಿಲ್ಲ ಮತ್ತು ಪ್ರವೇಶಿಸುವುದಕ್ಕೆ ಪ್ರಯತ್ನಿಸುವ ಜನರಿಗೂ ಬಿಡುವುದಿಲ್ಲ. 14 [a]

15 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮ ಮಾರ್ಗಗಳನ್ನು ಹಿಂಬಾಲಿಸುವ ಒಬ್ಬನನ್ನು ಕಂಡುಕೊಳ್ಳಲು ನೀವು ಸಮುದ್ರಗಳನ್ನು ದಾಟಿ ಬೇರೆಬೇರೆ ದೇಶಗಳಲ್ಲಿ ಪ್ರಯಾಣ ಮಾಡುತ್ತೀರಿ. ಅವನನ್ನು ಕಂಡುಕೊಂಡ ಮೇಲೆ ನಿಮಗಿಂತಲೂ ಹೆಚ್ಚು ಕೆಟ್ಟವನನ್ನಾಗಿ ಮಾಡುತ್ತೀರಿ. ನೀವು ನರಕಪಾತ್ರರಾಗುವಷ್ಟು ಕೆಟ್ಟವರಾಗಿದ್ದೀರಿ.

16 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು. ಒಬ್ಬನು ದೇವಾಲಯದ ಹೆಸರಿನ ಮೇಲೆ ವಾಗ್ದಾನ ಮಾಡಿದರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ದೇವಾಲಯದಲ್ಲಿರುವ ಚಿನ್ನದ ಮೇಲೆ ವಾಗ್ದಾನ ಮಾಡಿದರೆ, ಅವನು ಅದನ್ನು ಈಡೇರಿಸಬೇಕು ಎಂದು ಹೇಳುತ್ತೀರಿ! 17 ನೀವು ಕುರುಡರಾದ ಮೂರ್ಖರು! ಯಾವುದು ಹೆಚ್ಚಿನದು? ಚಿನ್ನವೋ ಅಥವಾ ದೇವಾಲಯವೋ? ಆ ಚಿನ್ನವು ಪರಿಶುದ್ಧಗೊಂಡದ್ದು ದೇವಾಲಯದಿಂದಲೇ. ಆದ್ದರಿಂದ ದೇವಾಲಯವೇ ಹೆಚ್ಚಿನದು.

18 “ಒಬ್ಬನು ಯಜ್ಞವೇದಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ಯಜ್ಞವೇದಿಕೆಯ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದರೆ ಅವನು ಅದನ್ನು ಈಡೇರಿಸಲೇಬೇಕು ಎಂದು ಹೇಳುತ್ತೀರಿ. 19 ನೀವು ಕುರುಡರು. ನಿಮಗೇನೂ ಅರ್ಥವಾಗುವುದಿಲ್ಲ. ಯಾವುದು ಹೆಚ್ಚಿನದು? ಕಾಣಿಕೆಯೋ ಅಥವಾ ಯಜ್ಞವೇದಿಕೆಯೋ? ಕಾಣಿಕೆ ಪರಿಶುದ್ಧಗೊಂಡದ್ದು ಯಜ್ಞವೇದಿಕೆಯಿಂದಲೇ. ಆದ್ದರಿಂದ ಯಜ್ಞವೇದಿಕೆಯೇ ಹೆಚ್ಚಿನದು. 20 ಯಜ್ಞವೇದಿಕೆಯ ಮೇಲೆ ವಾಗ್ದಾನ ಮಾಡುವವನು ಯಜ್ಞವೇದಿಕೆಯ ಮತ್ತು ಅದರ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದಂತಾಯಿತು. 21 ದೇವಾಲಯದ ಮೇಲೆ ವಾಗ್ದಾನ ಮಾಡುವವನು ನಿಜವಾಗಿಯೂ ದೇವಾಲಯದ ಮತ್ತು ಅದರೊಳಗೆ ವಾಸವಾಗಿರುವಾತನ ಮೇಲೆ ವಾಗ್ದಾನ ಮಾಡಿದಂತಾಯಿತು. 22 ಪರಲೋಕದ ಮೇಲೆ ವಾಗ್ದಾನ ಮಾಡುವವನು ದೇವರ ಸಿಂಹಾಸನದ ಮೇಲೆಯೂ ಆ ಸಿಂಹಾಸನದ ಮೇಲೆ ಕುಳಿತಿರುವಾತನ ಮೇಲೆಯೂ ವಾಗ್ದಾನ ಮಾಡಿದಂತಾಯಿತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International