Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 34-35

ಹೊಸ ಕಲ್ಲಿನ ಹಲಿಗೆಗಳು

34 ತರುವಾಯ ಯೆಹೋವನು ಮೋಶೆಗೆ, “ಒಡೆದುಹೋದ ಮೊದಲಿನ ಎರಡು ಕಲ್ಲಿನ ಹಲಿಗೆಗಳಂತೆ ಇನ್ನೆರಡು ಕಲ್ಲಿನ ಹಲಿಗೆಗಳನ್ನು ಮಾಡು. ಮೊದಲಿನ ಕಲ್ಲುಗಳಲ್ಲಿ ಬರೆದಿದ್ದ ಮಾತುಗಳನ್ನೇ ನಾನು ಈ ಕಲ್ಲುಗಳ ಮೇಲೆ ಬರೆಯುವೆನು. ನಾಳೆ ಮುಂಜಾನೆ ಸೀನಾಯಿ ಬೆಟ್ಟಕ್ಕೇರಿ ಬಾ. ಬೆಟ್ಟದ ಮೇಲೆ ನನ್ನೆದುರಿನಲ್ಲಿ ನಿಂತುಕೊ. ನಿನ್ನೊಂದಿಗೆ ಯಾರೂ ಬರಕೂಡದು. ಬೆಟ್ಟದ ಯಾವ ಸ್ಥಳದಲ್ಲಿಯೂ ಯಾರೂ ಕಾಣಿಸಬಾರದು. ನಿಮ್ಮ ಪಶುಗಳಾಗಲಿ ಕುರಿಮಂದೆಗಳಾಗಲಿ ಬೆಟ್ಟದ ಬುಡದಲ್ಲಿ ಹುಲ್ಲು ಮೇಯಕೂಡದು” ಎಂದು ಹೇಳಿದನು.

ಆದ್ದರಿಂದ ಮೋಶೆ ಮೊದಲಿನ ಎರಡು ಕಲ್ಲುಗಳಂತೆ ಇನ್ನೆರಡು ಕಲ್ಲಿನ ಹಲಿಗೆಗಳನ್ನು ಮಾಡಿದನು. ಬಳಿಕ ಮರುದಿನ ಮುಂಜಾನೆ ಬೇಗನೆ ಸೀನಾಯಿ ಬೆಟ್ಟವನ್ನೇರಿದನು. ಯೆಹೋವನು ಆಜ್ಞಾಪಿಸಿದಂತೆ ಮೋಶೆಯು ಪ್ರತಿಯೊಂದನ್ನು ಮಾಡಿದನು. ಮೋಶೆಯು ಎರಡು ಕಲ್ಲಿನ ಹಲಿಗೆಗಳನ್ನು ಹಿಡಿದುಕೊಂಡು ಹೋದನು. ಮೋಶೆಯು ಬೆಟ್ಟವನ್ನೇರಿ ಹೋದನಂತರ ಯೆಹೋವನು ಮೇಘದಲ್ಲಿ ಅವನ ಬಳಿಗೆ ಇಳಿದುಬಂದನು. ಯೆಹೋವನು ಮೋಶೆಯೊಡನೆ ಅಲ್ಲಿ ನಿಂತನು ಮತ್ತು ಮೋಶೆಯು ಯೆಹೋವನ ಹೆಸರನ್ನು ಕರೆದನು.[a] ಯೆಹೋವನು ಮೋಶೆಯ ಮುಂದೆ ಹಾದುಹೋಗುತ್ತಾ, “ದೇವರಾದ ಯೆಹೋವನು ದಯೆಯೂ ಕನಿಕರವೂ ಉಳ್ಳ ದೇವರಾಗಿದ್ದಾನೆ. ಯೆಹೋವನು ಕೋಪಗೊಳ್ಳುವುದರಲ್ಲಿ ನಿಧಾನವಾಗಿದ್ದಾನೆ. ಯೆಹೋವನು ಮಹಾ ಪ್ರೀತಿಸ್ವರೂಪನಾಗಿದ್ದಾನೆ. ಯೆಹೋವನು ಭರವಸೆಗೆ ಯೋಗ್ಯನಾಗಿದ್ದಾನೆ. ಯೆಹೋವನು ಸಾವಿರಾರು ತಲೆಗಳವರೆಗೆ ತನ್ನ ದಯೆ ತೋರಿಸುತ್ತಾನೆ. ಜನರು ಮಾಡುವ ಪಾಪಗಳನ್ನು ಯೆಹೋವನು ಕ್ಷಮಿಸುತ್ತಾನೆ. ಆದರೆ ಅಪರಾಧಿಗಳನ್ನು ಶಿಕ್ಷಿಸುವುದಕ್ಕೆ ಆತನು ಮರೆಯುವುದಿಲ್ಲ. ಯೆಹೋವನು ಅಪರಾಧಿಗಳನ್ನು ಶಿಕ್ಷಿಸುವನು ಮತ್ತು ಅವರ ಅಪರಾಧದ ಫಲವು ಅವರ ಮಕ್ಕಳ ಮೇಲೂ ಮೊಮ್ಮಕ್ಕಳ ಮೇಲೂ ಮತ್ತು ಮರಿಮೊಮ್ಮಕ್ಕಳ ಮೇಲೂ ಬರುವಂತೆ ಮಾಡುವನು” ಎಂದು ಹೇಳಿದನು.

ಕೂಡಲೆ ಮೋಶೆಯು ನೆಲದ ಮೇಲೆ ಅಡ್ಡಬಿದ್ದು ಯೆಹೋವನನ್ನು ಆರಾಧಿಸಿದನು. ಮೋಶೆಯು, “ಯೆಹೋವನೇ, ನಿನ್ನ ದಯೆ ನನಗೆ ದೊರಕುವುದಾದರೆ, ದಯವಿಟ್ಟು ನಮ್ಮೊಂದಿಗೆ ಬಾ. ಇವರು ಅವಿಧೇಯರಾದ ಜನರೆಂದು ನಾನು ಬಲ್ಲೆನು. ಆದರೆ ನಮ್ಮ ಪಾಪಗಳನ್ನು ಕ್ಷಮಿಸು. ನಮ್ಮನ್ನು ನಿನ್ನ ಜನರನ್ನಾಗಿ ಸ್ಪೀಕರಿಸು” ಎಂದು ಬೇಡಿಕೊಂಡನು.

10 ಆಗ ಯೆಹೋವನು, “ನಾನು ನಿಮ್ಮೊಂದಿಗೆ ಈ ಒಡಂಬಡಿಕೆಯನ್ನು ಮಾಡುತ್ತಿದ್ದೇನೆ. ಭೂಲೋಕದಲ್ಲಿ ಎಲ್ಲಿಯೇ ಆಗಲಿ ಯಾವ ಜನಾಂಗದಲ್ಲಿಯೇ ಆಗಲಿ ಹಿಂದೆಂದೂ ನಡೆಯದಂತ ಮಹತ್ಕಾರ್ಯಗಳನ್ನು ಮಾಡುವೆನು. ಎಲ್ಲಾ ಜನರು ಮತ್ತು ನಿನ್ನೊಂದಿಗಿರುವ ಜನರು ಇವುಗಳನ್ನು ನೋಡಿ ಯೆಹೋವನಾದ ನಾನೇ ಮಹಾ ಮಹಿಮಸ್ವರೂಪನೆಂದು ತಿಳಿದುಕೊಳ್ಳುವರು. 11 ನಾನು ಈ ದಿನ ಕೊಡುವ ಆಜ್ಞೆಗಳಿಗೆ ವಿಧೇಯರಾಗಿರಿ. ನಿಮ್ಮ ವೈರಿಗಳಾದ ಅಮೋರಿಯರನ್ನು, ಕಾನಾನ್ಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ನಾನು ಹೊರಗಟ್ಟುವೆನು. 12 ಎಚ್ಚರಿಕೆಯಾಗಿರಿ! ನೀವು ಹೋಗುತ್ತಿರುವ ದೇಶದಲ್ಲಿರುವ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬೇಡಿರಿ. ನೀವು ಆ ಜನರೊಂದಿಗೆ ಒಪ್ಪಂದ ಮಾಡಿಕೊಂಡರೆ, ಅದು ನಿಮಗೆ ಕೇಡನ್ನು ಬರಮಾಡುವುದು. 13 ಅವರ ವೇದಿಕೆಗಳನ್ನು ನಾಶಮಾಡಿರಿ. ಅವರು ಪೂಜಿಸುವ ಕಲ್ಲುಗಳನ್ನು ಒಡೆದು ಹಾಕಿರಿ. ಅವರ ವಿಗ್ರಹಗಳನ್ನು ಕಡಿದು ಹಾಕಿರಿ. 14 ಬೇರೆ ಯಾವ ದೇವರನ್ನೂ ಪೂಜಿಸಬೇಡಿರಿ. ನಾನೇ ಯೆಹೋವನು. ‘ಸ್ವಗೌರವವನ್ನು ಕಾಪಾಡಿಕೊಳ್ಳುವವನು’ ಎಂಬುದೇ ನನ್ನ ಹೆಸರು.

15 “ಎಚ್ಚರಿಕೆಯಾಗಿರಿ, ಆ ದೇಶದಲ್ಲಿ ವಾಸಿಸುವ ಜನರೊಂದಿಗೆ ಯಾವ ಒಪ್ಪಂದವನ್ನೂ ಮಾಡಿಕೊಳ್ಳಬೇಡಿರಿ. ಇಲ್ಲವಾದರೆ ಅವರು ತಮ್ಮ ದೇವರುಗಳನ್ನು ಪೂಜಿಸುವಾಗ ನೀವು ಅವರೊಂದಿಗೆ ಸೇರಿಕೊಳ್ಳುವಿರಿ. ಅವರೊಂದಿಗೆ ಸೇರಿಕೊಳ್ಳುವಂತೆ ನಿಮ್ಮನ್ನು ಆಹ್ವಾನಿಸುವರು; ಅವರ ಯಜ್ಞಾರ್ಪಣೆಗಳನ್ನು ತಿನ್ನುವಿರಿ. 16 ನೀವು ಅವರ ಪುತ್ರಿಯರಲ್ಲಿ ಕೆಲವರನ್ನು ನಿಮ್ಮ ಪುತ್ರರಿಗೆ ಹೆಂಡತಿಯರಾಗುವುದಕ್ಕೆ ಆರಿಸಿಕೊಳ್ಳುವಿರಿ. ಅವರ ಪುತ್ರಿಯರು ಸುಳ್ಳುದೇವರುಗಳ ಸೇವೆ ಮಾಡುತ್ತಾರೆ. ನಿಮ್ಮ ಪುತ್ರರನ್ನೂ ಅವರು ಅದೇ ಸೇವೆಗೆ ನಡೆಸುತ್ತಾರೆ.

17 “ವಿಗ್ರಹಗಳನ್ನು ಮಾಡಿಕೊಳ್ಳಬೇಡಿರಿ.

18 “ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಿರಿ. ನಾನು ನಿಮಗೆ ಮೊದಲು ಆಜ್ಞಾಪಿಸಿದಂತೆ ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿನಗಳವರೆಗೆ ತಿನ್ನಿರಿ. ನಾನು ಆರಿಸಿಕೊಂಡ ಅಬೀಬ್ ಮಾಸದಲ್ಲಿ ಇದನ್ನು ಮಾಡಿರಿ. ಯಾಕೆಂದರೆ ಆ ತಿಂಗಳಲ್ಲಿ ನೀವು ಈಜಿಪ್ಟಿನಿಂದ ಬಿಡುಗಡೆ ಹೊಂದಿದಿರಿ.

19 “ಸ್ತ್ರೀಯಲ್ಲಿ ಹುಟ್ಟಿದ ಮೊದಲಿನ ಮಗು ಯಾವಾಗಲೂ ನನಗೆ ಸೇರಿದ್ದು. ನಿಮ್ಮ ದನಕುರಿಗಳಲ್ಲಿ ಹುಟ್ಟಿದ ಮೊದಲ ಮರಿಗಳು ನನಗೆ ಸೇರಿದವುಗಳಾಗಿವೆ. 20 ಚೊಚ್ಚಲಾಗಿ ಹುಟ್ಟಿದ ಕತ್ತೆಯನ್ನು ನೀವು ಇಟ್ಟುಕೊಳ್ಳಲು ಬಯಸಿದರೆ, ಆಗ ನೀವು ಕುರಿಮರಿಯನ್ನು ಕೊಟ್ಟು ಅದನ್ನು ಬಿಡಿಸಿಕೊಳ್ಳಬಹುದು. ಆದರೆ ನೀವು ಅದನ್ನು ಕೊಂಡುಕೊಳ್ಳದಿದ್ದರೆ, ಅದರ ಕುತ್ತಿಗೆಯನ್ನು ಮುರಿದು ಕೊಂದುಬಿಡಬೇಕು. ನೀವು ನಿಮ್ಮ ಎಲ್ಲಾ ಚೊಚ್ಚಲು ಗಂಡುಮಕ್ಕಳನ್ನು ನನ್ನಿಂದ ಕೊಂಡುಕೊಳ್ಳಬೇಕು. ಯಾವ ವ್ಯಕ್ತಿಯೂ ಕಾಣಿಕೆಯಿಲ್ಲದೆ, ನನ್ನ ಸನ್ನಿಧಿಗೆ ಬರಕೂಡದು.

21 “ನೀವು ವಾರದಲ್ಲಿ ಆರುದಿನ ಕೆಲಸ ಮಾಡುವಿರಿ. ಆದರೆ ಏಳನೆಯ ದಿನದಲ್ಲಿ ನೀವು ವಿಶ್ರಮಿಸಿಕೊಳ್ಳಬೇಕು. ನೀವು ಬಿತ್ತುವ ಮತ್ತು ಕೊಯ್ಯುವ ಸಮಯದಲ್ಲಿಯೂ ವಿಶ್ರಮಿಸಿಕೊಳ್ಳಬೇಕು.

22 “ವಾರಗಳ ಹಬ್ಬವನ್ನು ಆಚರಿಸಿರಿ. ಈ ಹಬ್ಬಕ್ಕಾಗಿ ಗೋಧಿಬೆಳೆಯ ಪ್ರಥಮ ಕಾಳನ್ನು ಉಪಯೋಗಿಸಿರಿ ಮತ್ತು ವರ್ಷಾಂತ್ಯದಲ್ಲಿ ಸುಗ್ಗಿಹಬ್ಬವನ್ನು ಆಚರಿಸಿರಿ.

23 “ವರ್ಷದಲ್ಲಿ ಮೂರುಸಲ ನಿಮ್ಮಲ್ಲಿರುವ ಗಂಡಸರೆಲ್ಲರೂ, ಇಸ್ರೇಲರ ದೇವರಾಗಿರುವ ಒಡೆಯನಾದ ಯೆಹೋವನ ಸನ್ನಿಧಿಯಲ್ಲಿ ಸೇರಬೇಕು.

24 “ನೀವು ದೇಶದೊಳಕ್ಕೆ ಹೋದಾಗ, ನಾನು ನಿಮ್ಮ ವೈರಿಗಳನ್ನು ಆ ದೇಶದಿಂದ ಹೊರಗಟ್ಟುವೆನು. ನಾನು ನಿಮ್ಮ ಮೇರೆಗಳನ್ನು ವಿಸ್ತರಿಸುವೆನು. ನಿಮಗೆ ಹೆಚ್ಚೆಚ್ಚಾಗಿ ಭೂಮಿ ದೊರೆಯುವುದು. ಪ್ರತಿ ವರ್ಷ ಮೂರುಸಲ ನೀವು ನಿಮ್ಮ ದೇವರಾದ ಯೆಹೋವನ ಸನ್ನಿಧಿಗೆ ಹೋಗುವಿರಿ. ಆ ಸಮಯದಲ್ಲಿ ಯಾರೂ ನಿಮ್ಮಿಂದ ಭೂಮಿಯನ್ನು ಅಪಹರಿಸಲು ಪ್ರಯತ್ನಿಸುವುದಿಲ್ಲ.

25 “ನೀವು ಯಜ್ಞಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಹಿಟ್ಟನ್ನು ಸಮರ್ಪಿಸಬಾರದು;

“ಪಸ್ಕ ಭೋಜನದ ಮಾಂಸದಲ್ಲಿ ಏನನ್ನೂ ಮರುದಿನದ ಮುಂಜಾನೆಯವರೆಗೆ ಉಳಿಸಬಾರದು.

26 “ನೀವು ಕೊಯ್ಯುವ ಪ್ರಥಮವಾದ ಬೆಳೆಗಳನ್ನು ಯೆಹೋವನಿಗೆ ಕೊಡಿರಿ. ಅವುಗಳನ್ನು ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ತನ್ನಿರಿ.

“ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಎಂದಿಗೂ ಬೇಯಿಸಬಾರದು.”

27 ಬಳಿಕ ಯೆಹೋವನು ಮೋಶೆಗೆ, “ನಾನು ನಿನಗೆ ಹೇಳಿದ ಸಂಗತಿಗಳನ್ನೆಲ್ಲಾ ಬರೆ. ಆ ಸಂಗತಿಗಳು ನಾನು ನಿನ್ನೊಂದಿಗೆ ಮತ್ತು ಇಸ್ರೇಲರೊಂದಿಗೆ ಮಾಡಿದ ಒಡಂಬಡಿಕೆಯಾಗಿದೆ” ಎಂದು ಹೇಳಿದನು.

28 ಮೋಶೆಯು ಅಲ್ಲಿ ಯೆಹೋವನೊಂದಿಗೆ ಹಗಲಿರುಳು ನಲವತ್ತು ದಿನಗಳಿದ್ದನು. ಆ ದಿನಗಳಲ್ಲಿ ಅವನು ಆಹಾರವನ್ನಾಗಲಿ ನೀರನ್ನಾಗಲಿ ಸೇವಿಸಲಿಲ್ಲ. ಮೋಶೆಯು ಒಡಂಬಡಿಕೆಯ ವಾಕ್ಯಗಳನ್ನು ಅಂದರೆ ದಶಾಜ್ಞೆಗಳನ್ನು ಎರಡು ಕಲ್ಲಿನ ಹಲಿಗೆಗಳ ಮೇಲೆ ಬರೆದನು.

ಮೋಶೆಯ ಹೊಳೆಯುವ ಮುಖ

29 ತರುವಾಯ ಮೋಶೆಯು ಸೀನಾಯಿ ಬೆಟ್ಟದಿಂದ ಇಳಿದು ಬಂದನು. ಒಡಂಬಡಿಕೆಯ ವಾಕ್ಯಗಳು ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಅವನು ಹಿಡಿದುಕೊಂಡಿದ್ದನು. ಯೆಹೋವನು ಅವನೊಡನೆ ಮಾತಾಡಿದ್ದರಿಂದ ಅವನ ಮುಖವು ಹೊಳೆಯುತ್ತಿತ್ತು. ಆದರೆ ಮೋಶೆಗೆ ಇದು ತಿಳಿದಿರಲಿಲ್ಲ. 30 ಮೋಶೆಯ ಮುಖವು ಶುಭ್ರವಾಗಿ ಹೊಳೆಯುತ್ತಿರುವುದನ್ನು ಆರೋನನೂ ಇಸ್ರೇಲರೆಲ್ಲರೂ ನೋಡಿದರು. ಆದ್ದರಿಂದ ಅವನ ಬಳಿಗೆ ಹೋಗಲು ಅವರು ಭಯಪಟ್ಟರು. 31 ಆದರೆ ಮೋಶೆ ಅವರನ್ನು ಕರೆದನು. ಆದ್ದರಿಂದ ಆರೋನನೂ ಜನನಾಯಕರೆಲ್ಲರೂ ಮೋಶೆಯ ಬಳಿಗೆ ಹೋದರು. ಮೋಶೆಯು ಅವರೊಡನೆ ಮಾತಾಡಿದನು. 32 ಅದಾದನಂತರ, ಇಸ್ರೇಲರೆಲ್ಲರೂ ಮೋಶೆಯ ಬಳಿಗೆ ಬಂದರು. ಯೆಹೋವನು ಸೀನಾಯಿ ಬೆಟ್ಟದಲ್ಲಿ ತನಗೆ ಕೊಟ್ಟ ಆಜ್ಞೆಗಳನ್ನು ಮೋಶೆಯು ಅವರಿಗೆ ಕೊಟ್ಟನು.

33 ಮೋಶೆಯು ಜನರೊಡನೆ ಮಾತಾಡಿ ಮುಗಿಸಿದಾಗ, ತನ್ನ ಮುಖದ ಮೇಲೆ ಮುಸುಕನ್ನು ಹಾಕಿಕೊಂಡನು. 34 ಮೋಶೆಯು ಯೆಹೋವನೊಡನೆ ಮಾತಾಡಲು ಆತನ ಸನ್ನಿಧಿಗೆ ಹೋದಾಗಲೆಲ್ಲಾ ಮೋಶೆಯು ಮುಸುಕನ್ನು ತೆಗೆದಿಡುತ್ತಿದ್ದನು. ಬಳಿಕ ಮೋಶೆ ಹೊರಗೆ ಬಂದು ಯೆಹೋವನು ಆಜ್ಞಾಪಿಸಿದ ಸಂಗತಿಗಳನ್ನು ಇಸ್ರೇಲರಿಗೆ ತಿಳಿಸುತ್ತಿದ್ದನು. 35 ಮೋಶೆಯ ಮುಖವು ಶುಭ್ರವಾಗಿ ಹೊಳೆಯುತ್ತಿದ್ದುದನ್ನು ಜನರು ನೋಡಿದರು. ಆದ್ದರಿಂದ ಮೋಶೆಯು ಮುಂದಿನ ಸಾರಿ ಯೆಹೋವನೊಡನೆ ಮಾತಾಡಲು ಹೋಗುವವರೆಗೆ ತನ್ನ ಮುಖಕ್ಕೆ ಮುಸುಕು ಹಾಕಿಕೊಂಡಿರುವನು.

ಸಬ್ಬತ್ ದಿನದ ಬಗ್ಗೆ ನಿಯಮಗಳು

35 ಮೋಶೆಯು ಇಸ್ರೇಲರನ್ನು ಒಟ್ಟಾಗಿ ಸೇರಿಸಿದನು. ಮೋಶೆ ಅವರಿಗೆ, “ನೀವು ಅನುಸರಿಸಬೇಕೆಂದು ಯೆಹೋವನು ನಿಮಗೆ ಆಜ್ಞಾಪಿಸಿದ ಸಂಗತಿಗಳನ್ನು ನಾನು ಹೇಳುವೆನು:

“ಕೆಲಸ ಮಾಡುವುದಕ್ಕೆ ಆರು ದಿನಗಳಿವೆ. ಆದರೆ ಏಳನೆಯ ದಿನವು ನಿಮಗೆ ಬಹು ವಿಶೇಷವಾದ ವಿಶ್ರಾಂತಿ ದಿನವಾಗಿರುವುದು. ಆ ವಿಶೇಷ ದಿನದಲ್ಲಿ ವಿಶ್ರಮಿಸುವುದರ ಮೂಲಕ ನೀವು ಯೆಹೋವನನ್ನು ಸನ್ಮಾನಿಸುವಿರಿ. ಏಳನೆಯ ದಿನದಲ್ಲಿ ಕೆಲಸಮಾಡುವ ವ್ಯಕ್ತಿಯು ಸಂಹರಿಸಲ್ಪಡಬೇಕು. ನೀವು ವಾಸಿಸುವ ಯಾವ ಸ್ಥಳದಲ್ಲಿಯೂ ಸಬ್ಬತ್‌ದಿನದಂದು ಬೆಂಕಿಯನ್ನು ಹೊತ್ತಿಸಬಾರದು” ಎಂದು ಹೇಳಿದನು.

ಪವಿತ್ರಗುಡಾರಕ್ಕೆ ವಸ್ತುಗಳು

ಮೋಶೆಯು ಇಸ್ರೇಲರಿಗೆ, “ಯೆಹೋವನು ಆಜ್ಞಾಪಿಸಿದ್ದು ಇದುವೇ. ಯೆಹೋವನಿಗಾಗಿ ಕಾಣಿಕೆಗಳನ್ನು ಕೂಡಿಸಿರಿ. ನಿಮ್ಮಲ್ಲಿ ಪ್ರತಿಯೊಬ್ಬನು ತಾನು ಕೊಡುವಂಥದ್ದನ್ನು ತನ್ನ ಹೃದಯದಲ್ಲಿ ತೀರ್ಮಾನಿಸಿಕೊಳ್ಳಬೇಕು. ಬಳಿಕ ಆ ಕಾಣಿಕೆಯನ್ನು ಯೆಹೋವನ ಸನ್ನಿಧಿಗೆ ತರಬೇಕು. ಚಿನ್ನ, ಬೆಳ್ಳಿ, ತಾಮ್ರ, ನೀಲಿ, ನೇರಳೆ, ಕೆಂಪುದಾರ ಮತ್ತು ಶ್ರೇಷ್ಠ ನಾರುಬಟ್ಟೆ, ಆಡಿನ ಕೂದಲು, ಕೆಂಪುಬಣ್ಣದ ಕುರಿದೊಗಲು, ಕಡಲುಹಂದಿಯ ತೊಗಲು, ಜಾಲೀಮರ, ದೀಪಗಳಿಗೆ ಬೇಕಾದ ಎಣ್ಣೆ, ಅಭಿಷೇಕತೈಲ ಮತ್ತು ಪರಿಮಳಧೂಪವನ್ನು ತಯಾರಿಸಲು ಬೇಕಾದ ಸುಗಂಧದ್ರವ್ಯ ಇವುಗಳನ್ನು ತನ್ನಿರಿ. ಏಫೋದಿನಲ್ಲಿ ಮತ್ತು ದೈವನಿರ್ಣಯದ ಪದಕದಲ್ಲಿ ಹಾಕಬೇಕಾಗಿರುವ ಗೋಮೇಧಿಕ ರತ್ನಗಳು ಮತ್ತು ಇತರ ರತ್ನಗಳನ್ನು ತನ್ನಿರಿ.

10 “ಯೆಹೋವನು ಆಜ್ಞಾಪಿಸಿದ ವಸ್ತುಗಳನ್ನು ನಿಮ್ಮಲ್ಲಿ ನಿಪುಣರಾದ ಕೆಲಸಗಾರರೆಲ್ಲರೂ ಮಾಡಬೇಕು. ಅವು ಯಾವುವೆಂದರೆ, 11 ಪವಿತ್ರಗುಡಾರ, ಅದರ ಹೊರಗಿನ ಡೇರೆ, ಅದರ ಮೇಲ್ಹೊದಿಕೆಗಳು, ಅದರ ಕೊಂಡಿಗಳು, ಚೌಕಟ್ಟುಗಳು, ಅಗುಳಿಗಳು, ಕಂಬಗಳು, ಗದ್ದಿಗೇಕಲ್ಲುಗಳು, 12 ಪವಿತ್ರಪೆಟ್ಟಿಗೆ ಮತ್ತು ಅದನ್ನು ಹೊರುವ ಕೋಲುಗಳು, ಕೃಪಾಸನ ಮತ್ತು ಪೆಟ್ಟಿಗೆ ಇರುವ ಸ್ಥಳವನ್ನು ಮುಚ್ಚುವ ಪರದೆ, 13 ಮೇಜು ಮತ್ತು ಅದರ ಕೋಲುಗಳು, ಮೇಜಿನ ಮೇಲಿರುವ ಎಲ್ಲಾ ಉಪಕರಣಗಳು, ಮೇಜಿನ ಮೇಲಿರುವ ನೈವೇದ್ಯರೊಟ್ಟಿ, 14 ದೀಪಸ್ತಂಭ ಮತ್ತು ಅದರ ಉಪಕರಣಗಳು, ದೀಪಗಳು, ದೀಪಕ್ಕೆ ಬೇಕಾದ ಎಣ್ಣೆ, 15 ಧೂಪವೇದಿ ಮತ್ತು ಅದರ ಕೋಲುಗಳು, ಅಭಿಷೇಕತೈಲ, ಪರಿಮಳಧೂಪ, ಪವಿತ್ರ ಗುಡಾರದ ಬಾಗಿಲಿನ ಪರದೆ, 16 ಸರ್ವಾಂಗಹೋಮ ಮಾಡಲು ಯಜ್ಞವೇದಿಕೆ ಮತ್ತು ಅದರ ತಾಮ್ರದ ಜಾಳಿಗೆ, ಕೋಲುಗಳು, ಯಜ್ಞವೇದಿಕೆಗೆ ಬೇಕಾಗುವ ಎಲ್ಲಾ ಉಪಕರಣಗಳು, ಗಂಗಾಳ ಮತ್ತು ಅದರ ಪೀಠ, 17 ಅಂಗಳದ ಸುತ್ತಲಿನ ಪರದೆಗಳು, ಕಂಬಗಳು, ಗದ್ದಿಗೇಕಲ್ಲುಗಳು, ಅಂಗಳದ ಬಾಗಿಲಿನ ಪರದೆ, 18 ಗುಡಾರದ ಗೂಟಗಳು, ಅಂಗಳದ ಗೂಟಗಳು ಮತ್ತು ಹಗ್ಗಗಳು, 19 ಮತ್ತು ಪವಿತ್ರಸ್ಥಳದಲ್ಲಿ ಯಾಜಕರು ಧರಿಸತಕ್ಕ ವಿಶೇಷವಾದ ಹೆಣೆದ ಬಟ್ಟೆಗಳು. ಈ ಬಟ್ಟೆಗಳನ್ನು ಯಾಜಕನಾದ ಆರೋನನು ಮತ್ತು ಅವನ ಪುತ್ರರು ಯಾಜಕ ಸೇವೆ ಮಾಡುವಾಗ ಧರಿಸಿಕೊಳ್ಳುವರು” ಎಂದು ಹೇಳಿದನು.

ಜನರಿಂದ ಮಹಾಕಾಣಿಕೆ

20 ಬಳಿಕ ಇಸ್ರೇಲರೆಲ್ಲರೂ ಮೋಶೆಯ ಬಳಿಯಿಂದ ಹೊರಟುಹೋದರು. 21 ಕಾಣಿಕೆ ಕೊಡುವುದಕ್ಕೆ ಯಾರ್ಯಾರು ಬಯಸಿದರೋ ಅವರೆಲ್ಲರೂ ಬಂದು ಯೆಹೋವನಿಗೆ ಕಾಣಿಕೆಯನ್ನು ಅರ್ಪಿಸಿದರು. ಈ ಕಾಣಿಕೆಗಳು ದೇವದರ್ಶನಗುಡಾರ, ಅದರ ಎಲ್ಲಾ ವಸ್ತುಗಳು ಮತ್ತು ವಿಶೇಷ ಬಟ್ಟೆಗಳನ್ನು ಮಾಡಲು ಉಪಯೋಗಿಸಲ್ಪಟ್ಟವು. 22 ಕಾಣಿಕೆ ಕೊಡುವುದಕ್ಕೆ ಬಯಸಿದ ಎಲ್ಲಾ ಗಂಡಸರು, ಹೆಂಗಸರು ಎಲ್ಲಾ ವಿಧದ ಚಿನ್ನದ ಆಭರಣಗಳನ್ನು ತಂದರು. ಅವರು ತಮ್ಮ ಕಡಗ, ಮೂಗುತಿ, ಉಂಗುರ, ಕಂಠಮಾಲೆ ಮತ್ತು ಇತರ ಚಿನ್ನದ ಆಭರಣಗಳನ್ನು ತಂದರು. ಅವರೆಲ್ಲರು ತಮ್ಮ ಎಲ್ಲಾ ಕೊಡುಗೆಗಳನ್ನು ಯೆಹೋವನಿಗೆ ಕೊಟ್ಟರು. ಇದು ಯೆಹೋವನಿಗೆ ಕೊಟ್ಟ ವಿಶೇಷವಾದ ಕಾಣಿಕೆಯಾಗಿತ್ತು.

23 ಪ್ರತಿಯೊಬ್ಬನು ತನ್ನಲ್ಲಿದ್ದ ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ ಮತ್ತು ಕೆಂಪುದಾರಗಳನ್ನು ಯೆಹೋವನಿಗಾಗಿ ತಂದನು. ಯಾರಲ್ಲಿ ಕೆಂಪುಬಣ್ಣದ ಕುರಿದೊಗಲಾಗಲಿ ಕಡಲುಹಂದಿಯ ತೊಗಲಾಗಲಿ ಇದ್ದವೋ ಅವರು ಅವುಗಳನ್ನು ಯೆಹೋವನಿಗಾಗಿ ತಂದುಕೊಟ್ಟರು. 24 ಬೆಳ್ಳಿಯನ್ನಾಗಲಿ ತಾಮ್ರವನ್ನಾಗಲಿ ಕೊಡಲು ಬಯಸಿದವರು ಅದನ್ನು ಕೆಲಸಕ್ಕೋಸ್ಕರ ಯೆಹೋವನಿಗೆ ಕಾಣಿಕೆಯಾಗಿ ತಂದರು. ಜಾಲೀಮರವನ್ನು ಹೊಂದಿದವರು ಅದನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಟ್ಟರು. 25 ನಿಪುಣರಾದ ಸ್ತ್ರೀಯರು ಶ್ರೇಷ್ಠ ನಾರುಬಟ್ಟೆಯನ್ನು, ನೀಲಿ, ನೇರಳೆ, ಕೆಂಪುದಾರಗಳನ್ನು ಮಾಡಿದರು. 26 ನಿಪುಣರಾಗಿದ್ದ ಇತರ ಸ್ತ್ರೀಯರು ಆಡುಕೂದಲಿನಿಂದ ಬಟ್ಟೆಯನ್ನು ತಯಾರಿಸಿದರು.

27 ನಾಯಕರು ಗೋಮೇಧಿಕ ರತ್ನಗಳನ್ನು ಮತ್ತು ಇತರ ರತ್ನಗಳನ್ನು ತಂದುಕೊಟ್ಟರು. ಅವುಗಳನ್ನು ಯಾಜಕನ ಏಫೋದಿಗೂ ಮತ್ತು ದೈವನಿರ್ಣಯದ ಪದಕಕ್ಕೂ ಉಪಯೋಗಿಸಲಾಯಿತು. 28 ಜನರು ಸುಗಂಧದ್ರವ್ಯಗಳನ್ನೂ ಆಲಿವ್ ಎಣ್ಣೆಯನ್ನೂ ತಂದುಕೊಟ್ಟರು. ಈ ವಸ್ತುಗಳು ಪರಿಮಳಧೂಪ, ಅಭಿಷೇಕತೈಲ ಮತ್ತು ದೀಪಗಳಿಗೆ ಬೇಕಾದ ಎಣ್ಣೆ ಇವುಗಳನ್ನು ಮಾಡಲು ಉಪಯೋಗಿಸಲ್ಪಟ್ಟವು.

29 ಸಹಾಯ ಮಾಡುವುದಕ್ಕೆ ಬಯಸಿದ ಇಸ್ರೇಲರೆಲ್ಲರೂ ಯೆಹೋವನಿಗೆ ಕಾಣಿಕೆಗಳನ್ನು ತಂದುಕೊಟ್ಟರು. ಈ ಕಾಣಿಕೆಗಳನ್ನು ಗಂಡಸರು ಮತ್ತು ಹೆಂಗಸರು ಕೊಡುವುದಕ್ಕೆ ಬಯಸಿದ್ದರಿಂದ ಉದಾರವಾಗಿ ಕೊಟ್ಟರು. ಯೆಹೋವನು ಮೋಶೆಗೆ ಮತ್ತು ಜನರಿಗೆ ಆಜ್ಞಾಪಿಸಿದ ಎಲ್ಲಾ ವಸ್ತುಗಳನ್ನು ಮಾಡುವುದಕ್ಕೆ ಈ ಕಾಣಿಕೆಗಳು ಉಪಯೋಗಿಸಲ್ಪಟ್ಟವು.

ಬೆಚಲೇಲ ಮತ್ತು ಒಹೊಲೀಯಾಬ

30 ಬಳಿಕ ಮೋಶೆಯು ಇಸ್ರೇಲರಿಗೆ ಹೀಗೆಂದನು: “ನೋಡಿರಿ, ಯೆಹೋವನು ಯೆಹೂದ ಕುಲದಿಂದ ಊರಿಯ ಮಗನಾದ ಬೆಚಲೇಲನನ್ನು ಆರಿಸಿಕೊಂಡಿದ್ದಾನೆ. ಊರಿಯು ಹೂರನ ಮಗ. 31 ಯೆಹೋವನು ಬೆಚಲೇಲನನ್ನು ದೇವರಾತ್ಮಭರಿತನನ್ನಾಗಿ ಮಾಡಿ, ಎಲ್ಲಾ ವಸ್ತುಗಳನ್ನು ಮಾಡುವುದಕ್ಕೆ ಬೇಕಾದ ವಿಶೇಷ ನಿಪುಣತೆಯನ್ನೂ ಜ್ಞಾನವನ್ನೂ ಅನುಗ್ರಹಿಸಿದ್ದಾನೆ. 32 ಅವನು ಅಂದವಾಗಿ ನಕ್ಷೆಮಾಡಿ, ಚಿನ್ನ, ಬೆಳ್ಳಿ ಮತ್ತು ತಾಮ್ರಗಳಿಂದ ವಸ್ತುಗಳನ್ನು ಮಾಡಬಲ್ಲನು. 33 ಅವನು ಕಲ್ಲುಗಳನ್ನು, ರತ್ನಗಳನ್ನು ಕತ್ತರಿಸಿ ಜೋಡಿಸಬಲ್ಲನು. ಬೆಚಲೇಲನು ಮರಗೆಲಸವನ್ನು ಮಾಡಿ ಎಲ್ಲಾ ವಿಧದ ಕುಶಲ ವಸ್ತುಗಳನ್ನು ತಯಾರಿಸಬಲ್ಲನು. 34 ಇತರರಿಗೆ ಕಲಿಸುವುದಕ್ಕೆ ಬೇಕಾದ ವಿಶೇಷ ನಿಪುಣತೆಯನ್ನು ಯೆಹೋವನು ಬೆಚಲೇಲನಿಗೂ ಒಹೊಲೀಯಾಬನಿಗೂ ಅನುಗ್ರಹಿಸಿದ್ದಾನೆ. ಒಹೊಲೀಯಾಬನು ದಾನ್ ಕುಲದ ಅಹೀಸಾಮಾಕನ ಮಗನು. 35 ಯೆಹೋವನು ಇವರಿಬ್ಬರಿಗೆ ಎಲ್ಲಾ ವಿಧದ ಕೆಲಸಗಳನ್ನು ಮಾಡಲು ವಿಶೇಷ ನಿಪುಣತೆಯನ್ನು ಅನುಗ್ರಹಿಸಿದ್ದಾನೆ. ಅವರು ಮರಗೆಲಸವನ್ನೂ ಲೋಹದ ಕೆಲಸವನ್ನೂ ಮಾಡಬಲ್ಲರು. ಅವರು ನೀಲಿ, ನೇರಳೆ ಕೆಂಪುದಾರಗಳಿಂದ ಮತ್ತು ಶ್ರೇಷ್ಠ ನಾರುಬಟ್ಟೆಯಿಂದ ಅಲಂಕೃತವಾದ ಬಟ್ಟೆಗಳನ್ನು ನೇಯಿಗೆ ಮಾಡಬಲ್ಲರು; ಅವರು ಉಣ್ಣೆ ಬಟ್ಟೆಗಳನ್ನು ನೇಯಲು ಶಕ್ತರಾಗಿದ್ದಾರೆ.

ಮತ್ತಾಯ 22:23-46

ಯೇಸುವನ್ನು ವಂಚಿಸಲು ಕೆಲವು ಸದ್ದುಕಾಯರ ಪ್ರಯತ್ನ

(ಮಾರ್ಕ 12:18-27; ಲೂಕ 20:27-40)

23 ಅದೇ ದಿನದಲ್ಲಿ ಕೆಲವು ಸದ್ದುಕಾಯರು ಯೇಸುವಿನ ಬಳಿಗೆ ಬಂದು, (ಯಾರಿಗೂ ಪುನರುತ್ಥಾನವಿಲ್ಲ ಎಂಬುದು ಸದ್ದುಕಾಯರ ನಂಬಿಕೆ.) 24 “ಬೋಧಕನೇ, ವಿವಾಹಿತನೊಬ್ಬನು ಮಕ್ಕಳನ್ನು ಪಡೆಯದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗಾಗಿ ಸಂತಾನ ಪಡೆಯಬೇಕೆಂದು[a] ಮೋಶೆ ಹೇಳಿದ್ದಾನೆ. 25 ನಮ್ಮಲ್ಲಿ ಏಳು ಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಯಾಗಿ ಸತ್ತನು. ಅವನಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾದನು. 26 ಬಳಿಕ ಎರಡನೆಯ ಸಹೋದರನೂ ಸತ್ತನು. ಹೀಗೆಯೇ ಮೂರನೆಯ ಸಹೋದರನಿಗೂ ಮತ್ತು ಉಳಿದೆಲ್ಲ ಸಹೋದರರಿಗೂ ಆಯಿತು. 27 ಕಡೆಯಲ್ಲಿ ಆ ಹೆಂಗಸೂ ಸತ್ತಳು. 28 ಆದರೆ ಏಳು ಮಂದಿಯೂ ಅವಳನ್ನು ಮದುವೆ ಆಗಿದ್ದರು. ಹೀಗಿರಲಾಗಿ ಅವರು ಮರಣದಿಂದ ಮೇಲೇಳುವಾಗ ಅವಳು ಯಾರ ಹೆಂಡತಿಯಾಗಿರುವಳು?” ಎಂದು ಕೇಳಿದರು.

29 ಯೇಸು, “ನೀವು ತಪ್ಪಾಗಿ ತಿಳಿದುಕೊಂಡಿರಲು ಕಾರಣವೇನೆಂದರೆ, ಪವಿತ್ರ ಗ್ರಂಥವು ಏನು ಹೇಳುತ್ತದೆ ಎಂಬುದು ನಿಮಗೆ ತಿಳಿದಿಲ್ಲ ಮತ್ತು ದೇವರ ಶಕ್ತಿಯ ಬಗ್ಗೆಯೂ ನಿಮಗೆ ಗೊತ್ತಿಲ್ಲ. 30 ಸ್ತ್ರೀಯರು ಮತ್ತು ಪುರುಷರು ಪುನರುತ್ಥಾನ ಹೊಂದಿದ ಮೇಲೆ ಮದುವೆ ಮಾಡಿಕೊಳ್ಳುವುದಿಲ್ಲ. ಅವರೆಲ್ಲರೂ ಪರಲೋಕದ ದೇವದೂತರಂತೆ ಇರುತ್ತಾರೆ. 31 ಸತ್ತವರ ಪುನರುತ್ಥಾನದ ಕುರಿತು ದೇವರು, 32 ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(A) ಎಂದು ಹೇಳಿರುವುದನ್ನು ನೀವು ಓದಿಲ್ಲವೇ? ಹೀಗಿರುವಲ್ಲಿ, ದೇವರು ಜೀವಿತರಿಗೆ ಮಾತ್ರ ದೇವರೇ ಹೊರತು ಸತ್ತವರಿಗಲ್ಲಾ” ಅಂದನು.

33 ಜನರೆಲ್ಲರೂ ಇದನ್ನು ಕೇಳಿ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟರು.

ಅತ್ಯಂತ ಪ್ರಮುಖ ಆಜ್ಞೆ ಯಾವುದು?

(ಮಾರ್ಕ 12:28-34; ಲೂಕ 10:25-28)

34 ಸದ್ದುಕಾಯರು ಪ್ರತಿವಾದ ಮಾಡಲಾಗದ ರೀತಿಯಲ್ಲಿ ಯೇಸು ಉತ್ತರಕೊಟ್ಟನೆಂಬುದು ಫರಿಸಾಯರಿಗೆ ತಿಳಿದು ಅವರು ಒಟ್ಟಾಗಿ ಯೇಸುವಿನ ಬಳಿಗೆ ಬಂದರು. 35 ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವೀಣನಾಗಿದ್ದ ಫರಿಸಾಯನೊಬ್ಬನು ಯೇಸುವನ್ನು ಪರೀಕ್ಷಿಸಲು, 36 “ಬೋಧಕನೇ, ಧರ್ಮಶಾಸ್ತ್ರದಲ್ಲಿ ಅತ್ಯಂತ ಪ್ರಮುಖ ಆಜ್ಞೆ ಯಾವುದು?” ಎಂದು ಕೇಳಿದನು.

37 ಯೇಸು, “‘ನಿನ್ನ ದೇವರಾಗಿರುವ ಪ್ರಭುವನ್ನು ಪ್ರೀತಿಸಬೇಕು. ನೀನು ಆತನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’(B) 38 ಇದೇ ಮೊದಲನೆಯ ಮತ್ತು ಅತ್ಯಂತ ಪ್ರಮುಖವಾದ ಆಜ್ಞೆ. 39 ಎರಡನೆಯ ಆಜ್ಞೆಯು ಮೊದಲನೆಯ ಆಜ್ಞೆಯಷ್ಟೇ ಪ್ರಮುಖವಾಗಿದೆ. ‘ನೀನು ನಿನ್ನನ್ನು ಪ್ರೀತಿಸುವಂತೆಯೇ ನೆರೆಯವರನ್ನು ಪ್ರೀತಿಸಬೇಕು’(C) ಎಂಬುದೇ ಆ ಆಜ್ಞೆ. 40 ಇಡೀ ಧರ್ಮಶಾಸ್ತ್ರವು ಮತ್ತು ಪ್ರವಾದಿಗಳ ಎಲ್ಲಾ ಗ್ರಂಥಗಳು ಈ ಎರಡು ಆಜ್ಞೆಗಳ ಅರ್ಥವನ್ನೇ ಒಳಗೊಂಡಿವೆ” ಎಂದು ಉತ್ತರಕೊಟ್ಟನು.

ಯೇಸು ಫರಿಸಾಯರಿಗೆ ಕೇಳಿದ ಪ್ರಶ್ನೆ

(ಮಾರ್ಕ 12:35-37; ಲೂಕ 20:41-44)

41 ಫರಿಸಾಯರು ಒಟ್ಟಿಗೆ ಬಂದಿದ್ದಾಗ ಯೇಸು ಅವರಿಗೆ, 42 “ಕ್ರಿಸ್ತನ ವಿಷಯವಾಗಿ ನಿಮ್ಮ ಆಲೋಚನೆಯೇನು? ಆತನು ಯಾರ ಮಗನು?” ಎಂದು ಅವರನ್ನು ಕೇಳಿದನು.

ಫರಿಸಾಯರು, “ಕ್ರಿಸ್ತನು ದಾವೀದನ ಮಗನಾಗಿದ್ದಾನೆ” ಎಂದು ಉತ್ತರಕೊಟ್ಟರು.

43 ಆಗ ಯೇಸುವು ಫರಿಸಾಯರಿಗೆ, “ಹಾಗಾದರೆ ದಾವೀದನು ಆತನನ್ನು ‘ಪ್ರಭು’ ಎಂದು ಏಕೆ ಕರೆದನು? ದಾವೀದನು ಪರಿಶುದ್ಧಾತ್ಮನ ಶಕ್ತಿಯಿಂದ ಮಾತನಾಡಿದ್ದನು. ದಾವೀದನು ಹೇಳಿದ್ದೇನೆಂದರೆ:

44 ‘ಪ್ರಭು (ದೇವರು) ನನ್ನ ಪ್ರಭುವಿಗೆ (ಕ್ರಿಸ್ತನಿಗೆ),
ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ
    ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು’(D)

ಎಂದು ಹೇಳಿದ್ದಾನೆ. 45 ದಾವೀದನು ಕ್ರಿಸ್ತನನ್ನು ‘ಪ್ರಭು’ ಎಂದು ಕರೆದಿದ್ದಾನೆ. ಹೀಗಿರಲು ಆತನು ದಾವೀದನಿಗೆ ಮಗನಾಗಲು ಹೇಗೆ ಸಾಧ್ಯ?” ಅಂದನು.

46 ಯೇಸುವಿನ ಪ್ರಶ್ನೆಗೆ ಉತ್ತರಕೊಡಲು ಫರಿಸಾಯರಲ್ಲಿ ಯಾರಿಗೂ ಸಾಧ್ಯವಾಗಲಿಲ್ಲ. ಅಂದಿನಿಂದ ಯೇಸುವನ್ನು ವಂಚಿಸುವುದಕ್ಕಾಗಿ ಪ್ರಶ್ನೆ ಕೇಳಲು ಯಾರೂ ಧೈರ್ಯಪಡಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International