Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 21-22

ಇತರ ಕಟ್ಟಳೆಗಳು ಮತ್ತು ಆಜ್ಞೆಗಳು

21 ಬಳಿಕ ದೇವರು ಮೋಶೆಗೆ ಹೇಳಿದ್ದೇನೆಂದರೆ, “ನೀನು ಜನರಿಗೆ ನೇಮಿಸಬೇಕಾದ ಇತರ ಕಟ್ಟಳೆಗಳು ಯಾವುವೆಂದರೆ:

“ನೀವು ಇಬ್ರಿಯ ಗುಲಾಮನನ್ನು ಕೊಂಡುಕೊಂಡರೆ, ಆ ಗುಲಾಮನು ಆರು ವರ್ಷಗಳವರೆಗೆ ಮಾತ್ರ ನಿಮ್ಮ ಸೇವೆಮಾಡುವನು. ಆರು ವರ್ಷಗಳ ನಂತರ, ಅವನು ಬಿಡುಗಡೆಯಾಗುವನು, ಅವನು ಏನೂ ಕೊಡಬೇಕಾಗಿರುವುದಿಲ್ಲ. ಅವನು ನಿಮ್ಮ ಗುಲಾಮನಾಗುವಾಗ ಮದುವೆಯಾಗಿಲ್ಲದಿದ್ದರೆ, ಅವನು ಬಿಡುಗಡೆ ಹೊಂದುವಾಗಲೂ ಹೆಂಡತಿಯಿಲ್ಲದವನಾಗಿ ಹೋಗುವನು. ಆದರೆ ಅವನು ನಿಮ್ಮ ಗುಲಾಮನಾಗುವಾಗ ಮದುವೆಯಾಗಿದ್ದರೆ ಅವನು ಬಿಡುಗಡೆ ಹೊಂದುವಾಗ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗುವನು. ಗುಲಾಮನು ಮದುವೆಯಾಗಿಲ್ಲದಿದ್ದರೆ, ಅವನ ಯಜಮಾನನು ಅವನಿಗೆ ಮದುವೆ ಮಾಡಿಸಬಹುದು. ಆ ಸ್ತ್ರೀಯು ಮಕ್ಕಳನ್ನು ಹೆತ್ತರೆ, ಆಕೆಯೂ ಆಕೆಯ ಮಕ್ಕಳೂ ಯಜಮಾನನ ಸ್ವತ್ತಾಗುವರು. ಗುಲಾಮನು ತನ್ನ ಸೇವಾ ವರ್ಷಗಳನ್ನು ಮುಗಿಸಿದ ತರುವಾಯ ಬಿಡುಗಡೆ ಹೊಂದುವನು.

“ಆದರೆ ಒಂದುವೇಳೆ ಆ ಗುಲಾಮನು ತನ್ನ ಯಜಮಾನನ ಸಂಗಡವಿರಲು ದೃಢವಾಗಿ ಬಯಸಿದರೆ ಅವನು, ‘ನಾನು ನನ್ನ ಯಜಮಾನನನ್ನು ಪ್ರೀತಿಸುತ್ತೇನೆ. ನಾನು ನನ್ನ ಹೆಂಡತಿಯನ್ನೂ ಮಕ್ಕಳನ್ನೂ ಪ್ರೀತಿಸುತ್ತೇನೆ. ನಾನು ಬಿಡುಗಡೆ ಹೊಂದದೆ ಇಲ್ಲೇ ಇರುವೆನು’ ಎಂದು ಹೇಳಬೇಕು. ಹೀಗಾದರೆ ಯಜಮಾನನು ಆ ಗುಲಾಮನನ್ನು ದೇವರ ಸನ್ನಿಧಿಗೆ[a] ಕರೆದುಕೊಂಡು ಬರುವನು. ಯಜಮಾನನು ಗುಲಾಮನನ್ನು ಬಾಗಿಲ ಬಳಿಗೆ ಅಥವಾ ಬಾಗಿಲಿನ ಮರದ ನಿಲುವುಪಟ್ಟಿಗಳ ಬಳಿಗೆ ಕರೆದುಕೊಂಡು ಬರುವನು. ಯಜಮಾನನು ಗುಲಾಮನ ಕಿವಿಗೆ ಚೂಪಾದ ಸಲಾಕೆಯಿಂದ ರಂಧ್ರ ಮಾಡುವನು. ಆಗ ಗುಲಾಮನು ತನ್ನ ಜೀವಮಾನಪರ್ಯಂತ ಆ ಯಜಮಾನನಿಗೆ ಸೇವೆ ಮಾಡುವನು.

“ಒಬ್ಬನು ತನ್ನ ಮಗಳನ್ನು ಗುಲಾಮಳನ್ನಾಗಿ ಮಾರಲು ತೀರ್ಮಾನಿಸಿದರೆ, ಆಕೆಯನ್ನು ಬಿಡುಗಡೆಗೊಳಿಸುವ ನಿಯಮಗಳು ಗುಲಾಮರಾದ ಪುರುಷರನ್ನು ಬಿಡುಗಡೆಗೊಳಿಸುವ ನಿಯಮಗಳ ಪ್ರಕಾರ ಇರುವುದಿಲ್ಲ. ಯಜಮಾನನು ತನಗಾಗಿ ಆರಿಸಿಕೊಂಡ ಗುಲಾಮಳನ್ನು ಇಷ್ಟಪಡದಿದ್ದರೆ, ಅವಳನ್ನು ಬಿಡುಗಡೆ ಮಾಡಬಹುದು. (ಅವಳ ತಂದೆಗೆ ಅವಳನ್ನು ಮಾರಬಹುದು.) ಅವಳನ್ನು ವಿದೇಶಿಯರಿಗೆ ಮಾರುವ ಹಕ್ಕನ್ನು ಯಜಮಾನನು ಕಳೆದುಕೊಳ್ಳುತ್ತಾನೆ; ಯಾಕೆಂದರೆ ಆಕೆಯಲ್ಲಿ ಅವನಿಗಿದ್ದ ನಂಬಿಕೆಯು ಮುರಿದುಹೋಯಿತು. ಯಜಮಾನನು ಗುಲಾಮಳನ್ನು ತನ್ನ ಸ್ವಂತ ಮಗನಿಗೆ ಮದುವೆ ಮಾಡಿಸುವುದಾಗಿ ವಾಗ್ದಾನ ಮಾಡಿದರೆ, ಅವಳನ್ನು ಗುಲಾಮಳನ್ನಾಗಿ ನೋಡಿಕೊಳ್ಳದೆ ಸೊಸೆಯಾಗಿ ನೋಡಿಕೊಳ್ಳಬೇಕು.

10 “ಯಜಮಾನನು ಇನ್ನೊಬ್ಬ ಸ್ತ್ರೀಯನ್ನು ಮದುವೆಯಾದರೆ, ಅವನು ತನ್ನ ಮೊದಲನೆಯ ಹೆಂಡತಿಗೆ ಅವನು ಕೊಡುವ ಆಹಾರ ಅಥವಾ ಬಟ್ಟೆಬರೆಗಳಲ್ಲಿ ಏನೂ ಕಡಿಮೆ ಮಾಡಬಾರದು; ಮದುವೆಯ ಮೂಲಕ ಆಕೆಯು ಯಾವ್ಯಾವ ವಸ್ತುಗಳನ್ನು ಹೊಂದಲು ಹಕ್ಕು ಪಡೆದಿರುತ್ತಾಳೊ ಅವೆಲ್ಲವನ್ನು ಅವನು ಆಕೆಗೆ ಕೊಡಬೇಕು. 11 ಅವನು ಆಕೆಗಾಗಿ ಈ ಮೂರು ಸಂಗತಿಗಳನ್ನು ಮಾಡಬೇಕು. ಇಲ್ಲವಾದರೆ ಅವಳು ಬಿಡುಗಡೆಯಾಗಿದ್ದಾಳೆ. ಅವಳು ಅವನಿಗೆ ಯಾವ ಸಾಲವನ್ನೂ ತೀರಿಸಬೇಕಾಗಿಲ್ಲ.

12 “ಒಬ್ಬನು ಮತ್ತೊಬ್ಬನನ್ನು ಹೊಡೆದು ಕೊಂದರೆ, ಅವನೂ ಕೊಲ್ಲಲ್ಪಡಬೇಕು. 13 ಆದರೆ ಕೊಲ್ಲಬೇಕೆಂಬ ಉದ್ದೇಶವಿಲ್ಲದೆ ಹೊಡೆದಾಗ ಸತ್ತುಹೋದರೆ ಅದು ದೇವರ ಸಂಕಲ್ಪವೆಂದು ಪರಿಗಣಿಸಬೇಕು. ನಾನು ನೇಮಿಸಲಿರುವ ಆಶ್ರಯಸ್ಥಳಗಳಿಗೆ ಹೊಡೆದವನು ಓಡಿಹೋಗಿ ಸುರಕ್ಷಿತವಾಗಿ ಬದುಕಲಿ. 14 ಆದರೆ ಒಬ್ಬನು ಕೋಪದಿಂದಾಗಲಿ ದ್ವೇಷದಿಂದಾಗಲಿ ಇನ್ನೊಬ್ಬನನ್ನು ಕೊಂದರೆ, ಆ ಕೊಲೆಗಾರನಿಗೆ ದಂಡನೆಯಾಗಬೇಕು. ನನ್ನ ಯಜ್ಞವೇದಿಕೆಯಿಂದ ಅವನನ್ನು ದೂರಕ್ಕೆ ತೆಗೆದುಕೊಂಡು ಹೋಗಿ ಕೊಲ್ಲಬೇಕು.

15 “ತಂದೆಯನ್ನಾಗಲಿ ತಾಯಿಯನ್ನಾಗಲಿ ಹೊಡೆಯುವವನನ್ನು ಕೊಲ್ಲಬೇಕು.

16 “ಯಾವನಾದರೂ ಮತ್ತೊಬ್ಬನನ್ನು ಕದ್ದು ಗುಲಾಮನನ್ನಾಗಿ ಮಾರಿದರೆ ಅಥವಾ ತನ್ನ ಗುಲಾಮನನ್ನಾಗಿ ಮಾಡಿಕೊಂಡರೆ ಅವನಿಗೆ ಮರಣಶಿಕ್ಷೆಯಾಗಬೇಕು.

17 “ತಂದೆಯನ್ನಾಗಲಿ ತಾಯಿಯನ್ನಾಗಲಿ ಶಪಿಸುವವನನ್ನೂ ಕೊಲ್ಲಬೇಕು.

18 “ಇಬ್ಬರು ಜಗಳವಾಡುತ್ತಿರುವಾಗ ಒಬ್ಬನನ್ನು ಕಲ್ಲಿನಿಂದಾಗಲಿ ಮುಷ್ಟಿಯಿಂದಾಗಲಿ ಹೊಡೆದಾಗ, ಪೆಟ್ಟಾದ ಮನುಷ್ಯನು ಸಾಯದಿದ್ದರೆ, ಹೊಡೆದವನನ್ನು ಕೊಲ್ಲಬಾರದು. 19 ಗಾಯಗೊಂಡವನು ಕೆಲವು ಕಾಲದವರೆಗೆ ಹಾಸಿಗೆಯಲ್ಲಿರಬೇಕಾದರೆ, ಬಳಿಕ ಅವನು ಎದ್ದು ಊರುಗೋಲಿನ ಸಹಾಯದಿಂದ ನಡೆಯಬಲ್ಲವನಾದರೆ, ಹೊಡೆದವನು ಅವನನ್ನು ಆರೈಕೆ ಮಾಡಬೇಕು. ಗಾಯಗೊಂಡವನು ಕೆಲಸಮಾಡಲಾರದೆ ಹೋದ ಸಮಯಕ್ಕೆ ಹೊಡೆದವನು ಹಣ ಕೊಡಬೇಕು; ಅವನು ಸಂಪೂರ್ಣ ವಾಸಿಯಾಗುವವರೆಗೆ ಆರೈಕೆ ಮಾಡಬೇಕು.

20 “ಕೆಲವು ಸಲ ಯಜಮಾನರು ಗುಲಾಮನನ್ನಾಗಲಿ ಗುಲಾಮಳನ್ನಾಗಲಿ ಹೊಡೆಯುತ್ತಾರೆ. ಹೊಡೆದಾಗ ಆ ವ್ಯಕ್ತಿಯು ಸತ್ತರೆ, ಯಜಮಾನನಿಗೆ ಶಿಕ್ಷೆಯಾಗಬೇಕು. 21 ಆದರೆ ಆ ವ್ಯಕ್ತಿಯು ಸಾಯದೆ ಕೆಲವು ದಿನಗಳ ನಂತರ ಗುಣವಾದರೆ ಯಜಮಾನನಿಗೆ ಶಿಕ್ಷೆಯಾಗಬಾರದು. ಯಾಕೆಂದರೆ ಯಜಮಾನನು ಹಣವನ್ನು ಕೊಟ್ಟು ಆ ವ್ಯಕ್ತಿಯನ್ನು ಕೊಂಡುಕೊಂಡಿದ್ದಾನೆ ಮತ್ತು ಆ ವ್ಯಕ್ತಿಯು ಅವನ ಸ್ವತ್ತಾಗಿದ್ದಾನೆ.

22 “ಇಬ್ಬರು ಜಗಳವಾಡುವಾಗ ಗರ್ಭಿಣೆ ಸ್ತ್ರೀಗೆ ಪೆಟ್ಟಾಗಿ ಗರ್ಭಸ್ರಾವವಾದರೆ ಅದಕ್ಕೆ ಕಾರಣನಾದ ವ್ಯಕ್ತಿಯು ಅವಳಿಗೆ ದಂಡ ಕೊಡಬೇಕು. ಅವನು ಎಷ್ಟು ದಂಡ ಕೊಡಬೇಕೆಂಬುದನ್ನು ಅವಳ ಗಂಡನು ನ್ಯಾಯಾಧಿಪತಿಗಳ ಸಹಾಯದಿಂದ ತೀರ್ಮಾನಿಸುವನು. 23 ಆದರೆ ಆ ಸ್ತ್ರೀಯು ತೀರಿಕೊಂಡರೆ ಅದಕ್ಕೆ ಕಾರಣನಾದವನಿಗೆ ಮರಣದಂಡನೆಯಾಗಬೇಕು. ನೀವು ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕೊಡಿಸಬೇಕು. 24 ಕಣ್ಣಿಗೆ ಪ್ರತಿಯಾಗಿ ಕಣ್ಣು, ಹಲ್ಲಿಗೆ ಪ್ರತಿಯಾಗಿ ಹಲ್ಲು, ಕೈಗೆ ಪ್ರತಿಯಾಗಿ ಕೈ, ಕಾಲಿಗೆ ಪ್ರತಿಯಾಗಿ ಕಾಲು, 25 ಬರೆಗೆ ಪ್ರತಿಯಾಗಿ ಬರೆ, ಗಾಯಕ್ಕೆ ಪ್ರತಿಯಾಗಿ ಗಾಯ, ಏಟಿಗೆ ಪ್ರತಿಯಾಗಿ ಏಟು, ಈ ಮೇರೆಗೆ ಪ್ರತಿದಂಡನೆಯಾಗಬೇಕು.

26 “ಯಜಮಾನನು ಗುಲಾಮನಿಗೆ ಹೊಡೆದಾಗ ಗುಲಾಮನು ಕುರುಡನಾದರೆ, ಆ ಗುಲಾಮನು ಬಿಡುಗಡೆ ಹೊಂದಿದ್ದಾನೆ. ಅವನು ತನ್ನ ಬಿಡುಗಡೆಗೆ ತನ್ನ ಕಣ್ಣನ್ನೇ ಪ್ರತಿಯಾಗಿ ಕೊಟ್ಟಿದ್ದಾನೆ. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿಯೂ ಇದೇ ನಿಯಮ ಅನ್ವಯಿಸುತ್ತದೆ. 27 ಯಜಮಾನನು ಗುಲಾಮನ ಬಾಯಿಗೆ ಹೊಡೆದದ್ದರಿಂದ, ಗುಲಾಮನು ತನ್ನ ಹಲ್ಲನ್ನು ಕಳೆದುಕೊಂಡರೆ, ಆ ಗುಲಾಮನ ಹಲ್ಲು ಅವನ ಬಿಡುಗಡೆಗೆ ಕೊಟ್ಟ ಹಣವಾಗಿದೆ. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿ ಇದೇ ನಿಯಮವು ಅನ್ವಯಿಸುತ್ತದೆ.

28 “ಒಬ್ಬನ ಎತ್ತು ಪುರುಷನನ್ನಾಗಲಿ ಸ್ತ್ರೀಯನ್ನಾಗಲಿ ಕೊಂದರೆ, ಆಗ ನೀವು ಕಲ್ಲುಗಳಿಂದ ಆ ಎತ್ತನ್ನು ಕೊಲ್ಲಬೇಕು. ನೀವು ಅದರ ಮಾಂಸವನ್ನು ತಿನ್ನಬಾರದು. ಆದರೆ ಎತ್ತಿನ ಮಾಲೀಕನು ತಪ್ಪಿತಸ್ಥನಲ್ಲ. 29 ಆದರೆ ಹಿಂದೊಮ್ಮೆ ಆ ಎತ್ತು ಜನರಿಗೆ ತಿವಿದಿದ್ದು, ಅದರ ಮಾಲೀಕನಿಗೆ ಇದರ ವಿಷಯದಲ್ಲಿ ಎಚ್ಚರಿಕೆ ನೀಡಿದ್ದರೆ ಆಗ ಆ ಮಾಲೀಕನು ತಪ್ಪಿತಸ್ಥನಾಗಿದ್ದಾನೆ. ಯಾಕೆಂದರೆ ಅವನು ಆ ಎತ್ತನ್ನು ಕಟ್ಟಿಹಾಕಲಿಲ್ಲ ಅಥವಾ ಅದರ ಸ್ಥಳದಲ್ಲಿ ಬಂಧಿಸಿರಲಿಲ್ಲ. ಆದ್ದರಿಂದ ಎತ್ತನ್ನು ಕಟ್ಟಿಹಾಕದೆ ಇದ್ದುದರಿಂದ, ಅದು ಯಾರನ್ನಾದರೂ ಕೊಂದರೆ, ಆಗ ಆ ಮಾಲೀಕನು ತಪ್ಪಿತಸ್ಥನಾಗಿದ್ದಾನೆ. ನೀವು ಎತ್ತನ್ನು ಕಲ್ಲೆಸೆದು ಕೊಲ್ಲಬೇಕಲ್ಲದೆ ಅದರ ಮಾಲೀಕನನ್ನೂ ಕೊಲ್ಲಬೇಕು. 30 ಆದರೆ ಸತ್ತವನ ಕುಟುಂಬದವರು ಅವನಿಂದ ಹಣವನ್ನು ಕೇಳಿದರೆ ಮತ್ತು ಅವನು ಹಣವನ್ನು ಕೊಟ್ಟರೆ, ಅವನು ತನ್ನ ಜೀವವನ್ನು ಬಿಡಿಸಿಕೊಂಡಂತಾಗುವುದು. ಆಗ ಆ ಎತ್ತಿನ ಮಾಲೀಕನನ್ನು ಕೊಲ್ಲಬಾರದು. ಆದರೆ ನ್ಯಾಯಾಧಿಪತಿಗಳು ತೀರ್ಮಾನಿಸುವಷ್ಟು ಹಣವನ್ನು ಅವನು ಕೊಡಬೇಕು.

31 “ಎತ್ತು ಒಬ್ಬನ ಮಗನನ್ನಾಗಲಿ ಅಥಲಾ ಮಗಳನ್ನಾಗಲಿ ಕೊಂದರೆ ಇದೇ ನಿಯಮವನ್ನು ಪಾಲಿಸಬೇಕು. 32 ಆದರೆ ಎತ್ತು ಗುಲಾಮನನ್ನು ಕೊಂದರೆ, ಆಗ ಆ ಪಶುವಿನ ಮಾಲೀಕನು ಗುಲಾಮನ ಯಜಮಾನನಿಗೆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಕೊಡಬೇಕು ಮತ್ತು ಎತ್ತನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕು. ಗುಲಾಮನ ಅಥವಾ ಗುಲಾಮಳ ವಿಷಯದಲ್ಲಿ ಇದೇ ನಿಯಮವನ್ನು ಪಾಲಿಸಬೇಕು.

33 “ಒಬ್ಬ ಮನುಷ್ಯನು ಕುಣಿಯೊಂದನ್ನು ತೋಡಿ ಅದನ್ನು ಮುಚ್ಚಿಲ್ಲದಿದ್ದರೆ ಮತ್ತು ಆ ಕುಣಿಯಲ್ಲಿ ಬೇರೊಬ್ಬನ ಪಶುವು ಬಿದ್ದು ಸತ್ತುಹೋದರೆ, 34 ಕುಣಿಯನ್ನು ತೋಡಿದವನು ಆ ಪಶುವಿಗೆ ಪ್ರತಿಯಾಗಿ ಈಡುಕೊಡಬೇಕು. ಅವನು ಈಡುಕೊಟ್ಟ ನಂತರ ಆ ಸತ್ತ ಪಶುವು ಅವನದಾಗುತ್ತದೆ.

35 “ಒಬ್ಬನ ಎತ್ತು ಇನ್ನೊಬ್ಬನ ಎತ್ತನ್ನು ಹಾದು ಕೊಂದರೆ ಆಗ ಜೀವಂತವಾಗಿರುವ ಎತ್ತನ್ನು ಮಾರಬೇಕು. ಆ ಎತ್ತನ್ನು ಮಾರಿದ್ದರಿಂದ ಬಂದ ಹಣವನ್ನು ಸಮವಾಗಿ ಹಂಚಿಕೊಳ್ಳಬೇಕು. ಕೊಲ್ಲಲ್ಪಟ್ಟ ಎತ್ತನ್ನು ಸಮವಾಗಿ ಹಂಚಿಕೊಳ್ಳಬೇಕು. 36 ಆದರೆ ಒಬ್ಬನ ಎತ್ತು ಮೊದಲೊಮ್ಮೆ ಇತರ ಪಶುಗಳಿಗೆ ಗಾಯಮಾಡಿದ್ದರೆ, ಅದರ ಮಾಲೀಕನು ಅದನ್ನು ಕಟ್ಟಿಹಾಕದಿದ್ದರಿಂದ ತಪ್ಪಿತಸ್ಥನಾಗಿದ್ದಾನೆ. ಅವನು ಸತ್ತ ಎತ್ತಿಗೆ ಪ್ರತಿಯಾಗಿ ಸ್ವಂತ ಎತ್ತನ್ನು ಕೊಡಬೇಕು. ಸತ್ತ ಎತ್ತನ್ನು ತಾನೇ ತೆಗೆದುಕೊಳ್ಳಬೇಕು.

22 “ಒಬ್ಬನು ಎತ್ತನ್ನಾಗಲಿ ಕುರಿಯನ್ನಾಗಲಿ ಕದ್ದು ಅದನ್ನು ಕೊಯಿದರೆ ಅಥವಾ ಮಾರಿದರೆ, ಅವನು ತಾನು ಕದ್ದ ಎತ್ತಿಗೆ ಪ್ರತಿಯಾಗಿ ಐದು ಎತ್ತುಗಳನ್ನೂ ಅಥವಾ ತಾನು ಕದ್ದ ಕುರಿಗೆ ಪ್ರತಿಯಾಗಿ ನಾಲ್ಕು ಕುರಿಗಳನ್ನೂ ಕೊಡಬೇಕು. 2-4 ಅವನಲ್ಲಿ ಏನೂ ಇಲ್ಲದ ಪಕ್ಷಕ್ಕೆ, ಅವನು ಗುಲಾಮನಾಗುವನು. ಆದರೆ ಆ ಕಳ್ಳನು ಪಶುವನ್ನು ಇನ್ನೂ ಇಟ್ಟುಕೊಂಡಿರುವುದು ನಿಮಗೆ ಗೊತ್ತಾದರೆ, ಅವನು ಕದ್ದ ಪಶುವಿಗೆ ಪ್ರತಿಯಾಗಿ ಎರಡು ಪಶುಗಳನ್ನು ಮಾಲೀಕನಿಗೆ ಕೊಡಿಸಬೇಕು. ಕದ್ದದ್ದು ಎತ್ತಾಗಿರಬಹುದು, ಕತ್ತೆಯಾಗಿರಬಹುದು ಅಥವಾ ಕುರಿಯಾಗಿರಬಹುದು.

“ಕಳ್ಳನು ರಾತ್ರಿಯಲ್ಲಿ ಮನೆಗೆ ಕನ್ನ ಹಾಕಲು ಪ್ರಯತ್ನಿಸುತ್ತಿರುವಾಗ ಕೊಲ್ಲಲ್ಪಟ್ಟರೆ, ಅವನನ್ನು ಕೊಂದದ್ದಕ್ಕೆ ಯಾರೂ ತಪ್ಪಿತಸ್ಧರಾಗುವುದಿಲ್ಲ. ಆದರೆ ಇದು ಹಗಲಿನಲ್ಲಿ ನಡೆದರೆ ಕೊಂದವನು ಕೊಲೆಗಾರನಾಗುವನು.

“ಒಬ್ಬನು ತನ್ನ ಹೊಲದಲ್ಲಾಗಲಿ ದ್ರಾಕ್ಷಿತೋಟದಲ್ಲಾಗಲಿ ತನ್ನ ಪಶುವಿಗೆ ಮೇಯಲು ಬಿಡಬಹುದು. ಆದರೆ ಅದು ಅವನ ನೆರೆಯವನ ಹೊಲವನ್ನಾಗಲಿ, ದ್ರಾಕ್ಷಿತೋಟವನ್ನಾಗಲಿ ಹಾಳು ಮಾಡಿದರೆ, ಅವನು ತನ್ನ ನೆರೆಯವನಿಗೆ ಉಂಟಾದ ನಷ್ಟಕ್ಕೆ ಪ್ರತಿಯಾಗಿ ತನ್ನ ಉತ್ತಮ ಬೆಳೆಗಳನ್ನು ಕೊಡಬೇಕು.

“ಒಬ್ಬನು ತನ್ನ ಹೊಲದಲ್ಲಿರುವ ಮುಳ್ಳಿನ ಪೊದೆಗಳನ್ನು ಸುಟ್ಟುಹಾಕಲು ಬೆಂಕಿಯನ್ನು ಹೊತ್ತಿಸಬಹುದು. ಆದರೆ ಬೆಂಕಿಯು ಹೆಚ್ಚಾಗಿ ಅವನ ನೆರೆಯವನ ಬೆಳೆಯನ್ನಾಗಲಿ ಬೆಳೆಯುತ್ತಿರುವ ಧಾನ್ಯಗಳನ್ನಾಗಲಿ ಸುಟ್ಟುಹಾಕಿದರೆ ಬೆಂಕಿಯನ್ನು ಹೊತ್ತಿಸಿದವನು ತಾನು ಸುಟ್ಟುಹಾಕಿದ ವಸ್ತುಗಳಿಗೆ ಪ್ರತಿಯಾಗಿ ಈಡುಕೊಡಬೇಕು.

“ಒಬ್ಬನು ತನ್ನ ನೆರೆಯವನ ಮನೆಯಲ್ಲಿ ಸ್ವಲ್ಪ ಹಣವನ್ನಾಗಲಿ ವಸ್ತುಗಳನ್ನಾಗಲಿ ಇಟ್ಟಿದ್ದು, ಆ ಹಣವಾಗಲಿ ವಸ್ತುಗಳಾಗಲಿ ಕಳುವಾದರೆ ಕಳ್ಳನನ್ನು ಕಂಡುಹಿಡಿಯಲು ನೀವು ಪ್ರಯತ್ನಿಸಬೇಕು. ನೀವು ಕಳ್ಳನನ್ನು ಕಂಡುಹಿಡಿದರೆ, ಆಗ ಅವನು ತಾನು ಕದ್ದವಸ್ತುಗಳ ಬೆಲೆಯ ಎರಡರಷ್ಟನ್ನು ಕೊಡಬೇಕು. ಆದರೆ ನೀವು ಕಳ್ಳನನ್ನು ಕಂಡುಹಿಡಿಯಲಾಗದಿದ್ದರೆ, ಆ ಮನೆಯ ಮಾಲೀಕನು ತಪ್ಪಿತಸ್ಧನಾಗಿದ್ದಾನೋ ಇಲ್ಲವೋ ಎಂದು ದೇವರು[b] ನಿರ್ಣಯಿಸುವನು. ಮನೆಯ ಮಾಲೀಕನು ದೇವರ ಸನ್ನಿಧಿಗೆ ಹೋಗಬೇಕು. ಅವನು ಕದ್ದಿದ್ದಾನೋ ಇಲ್ಲವೋ ಎಂದು ದೇವರು ತೀರ್ಮಾನಿಸುವನು.

“ಕಳೆದುಹೋದ ಎತ್ತು, ಕತ್ತೆ, ಕುರಿ, ಬಟ್ಟೆಬರೆ, ಅಥವಾ ವಸ್ತುವಿನ ವಿಷಯದಲ್ಲಿ ಒಬ್ಬನು, ‘ಇದು ನನ್ನದು’ ಎಂದು ಹೇಳಿದರೆ ಮತ್ತು ಇನ್ನೊಬ್ಬನು, ‘ಇಲ್ಲ, ಇದು ನನ್ನದು’ ಎಂದು ಹೇಳಿದರೆ, ಇವರಿಬ್ಬರೂ ದೇವರ ಸನ್ನಿಧಿಗೆ ಹೋಗಬೇಕು. ತಪ್ಪಿತಸ್ಥನಾರೆಂದು ದೇವರು ತೀರ್ಮಾನಿಸುವನು. ತಪ್ಪಿತಸ್ಥನು ಇನ್ನೊಬ್ಬನಿಗೆ ಕಳೆದುಹೋದ ವಸ್ತುವಿನ ಬೆಲೆಯ ಎರಡರಷ್ಟನ್ನು ಕೊಡಬೇಕು.

10 “ಸ್ವಲ್ಪಕಾಲದವರೆಗೆ ತನ್ನ ಪಶುವನ್ನು ಪೋಷಿಸಬೇಕೆಂದು ತನ್ನ ನೆರೆಯವನನ್ನು ಕೇಳಿಕೊಳ್ಳಬಹುದು. ಈ ಪಶುವು ಕತ್ತೆಯಾಗಿರಬಹುದು, ಎತ್ತಾಗಿರಬಹುದು, ಕುರಿಯಾಗಿರಬಹುದು ಅಥವಾ ಯಾವುದೇ ಪಶುವಾಗಿರಬಹುದು. ಆದರೆ ಅದು ಸತ್ತರೆ ಅಥವಾ ಅದಕ್ಕೆ ಪೆಟ್ಟಾದರೆ ಅಥವಾ ಕಳುವಾದರೆ, 11 ಆ ನೆರೆಯವನು ಆ ಪಶುವನ್ನು ಕದ್ದಿಲ್ಲದ್ದಿದ್ದರೆ ತಾನು ಕದ್ದಿಲ್ಲವೆಂದು ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಬೇಕು. ಪಶುವಿನ ಮಾಲೀಕನು ಈ ಪ್ರಮಾಣವನ್ನು ಸ್ವೀಕರಿಸಬೇಕು. ನೆರೆಯವನು ಮಾಲೀಕನಿಗೆ ಪಶುವಿಗಾಗಿ ಈಡು ಕೊಡಬೇಕಾಗಿಲ್ಲ. 12 ಆದರೆ ಪಶುವು ಕದಿಯಲ್ಪಟ್ಟಿದ್ದರೆ, ಅವನು ಅದಕ್ಕಾಗಿ ಈಡು ಕೊಡಬೇಕು. 13 ಕ್ರೂರಪ್ರಾಣಿಗಳು ಆ ಪಶುವನ್ನು ಕೊಂದುಹಾಕಿದ್ದರೆ, ನೆರೆಯವನು ಸತ್ತ ಪಶುವನ್ನು ಸಾಕ್ಷಿಯಾಗಿ ತರಬೇಕು. ನೆರೆಯವನು ಮಾಲೀಕನಿಗೆ ಸತ್ತ ಪಶುವಿಗಾಗಿ ಈಡು ಕೊಡಬೇಕಾಗಿಲ್ಲ.

14 “ಒಬ್ಬನು ತನ್ನ ನೆರೆಯವನಿಂದ ಪಶುವನ್ನು ಸ್ವಲ್ಪಕಾಲಕ್ಕೆ ಸಾಲವಾಗಿ ತೆಗೆದುಕೊಂಡಿರುವಾಗ ಅದರ ಮಾಲೀಕನು ಅದರ ಸಮೀಪದಲ್ಲಿ ಇಲ್ಲದಿರುವ ಸಮಯದಲ್ಲಿ ಆ ಪಶುವಿಗೆ ಗಾಯವಾದರೆ ಅಥವಾ ಅದು ಸತ್ತುಹೋದರೆ, ಸಾಲ ತೆಗೆದುಕೊಂಡವನು ಆ ಪಶುವಿಗೆ ಈಡುಕೊಡಬೇಕು. 15 ಆದರೆ ಅದರ ಮಾಲೀಕನು ಪಶುವಿನೊಂದಿಗೆ ಅಲ್ಲಿದ್ದರೆ ಆಗ ನೆರೆಯವನು ಈಡುಕೊಡಬೇಕಾಗಿಲ್ಲ. ನೆರೆಯವನು ಪಶುವನ್ನು ಬಾಡಿಗೆಗೆ ತೆಗೆದುಕೊಂಡಿರುವಾಗ ಆ ಪಶು ಸತ್ತರೆ ಅಥವಾ ಅದಕ್ಕೆ ಪೆಟ್ಟಾದರೆ ಅವನು ಈಡುಕೊಡಬೇಕಾಗಿಲ್ಲ. ಆ ಪಶುವನ್ನು ಉಪಯೋಗಿಸಲು ಅವನು ಕೊಟ್ಟ ಬಾಡಿಗೆಯೇ ಸಾಕು.

16 “ಒಬ್ಬನು ಕನ್ನಿಕೆಯನ್ನು ಮರುಳುಗೊಳಿಸಿ ಕೂಡಿದರೆ, ಅವನು ಅವಳನ್ನು ಮದುವೆಯಾಗಬೇಕು. ಅವನು ಆಕೆಯ ತಂದೆಗೆ ತಕ್ಕ ತೆರವನ್ನು ಕೊಡಬೇಕು. 17 ತಂದೆಯು ತನ್ನ ಮಗಳನ್ನು ಅವನಿಗೆ ಕೊಡಲು ನಿರಾಕರಿಸಿದರೂ ಅವನು ತೆರವನ್ನು ಕೊಡಬೇಕು. ಅವನು ಅವಳಿಗೋಸ್ಕರ ಪೂರ್ಣ ತೆರವನ್ನು ಕೊಡಬೇಕು.

18 “ಮಾಟಗಾರ್ತಿಯನ್ನು ನೀವು ಜೀವಸಹಿತ ಉಳಿಸಬಾರದು.

19 “ಪಶುಸಂಗ ಮಾಡಿದವನಿಗೆ ಮರಣದಂಡನೆಯಾಗಬೇಕು.

20 “ಸುಳ್ಳುದೇವರಿಗೆ ಯಜ್ಞವನ್ನರ್ಪಿಸುವವನನ್ನು ನಾಶ ಮಾಡಬೇಕು.[c] ನೀವು ದೇವರಾದ ಯೆಹೋವನೊಬ್ಬನಿಗೇ ಯಜ್ಞವನ್ನರ್ಪಿಸಬೇಕು.

21 “ನೀವು ಮೊದಲು ಈಜಿಪ್ಟಿನಲ್ಲಿ ಪರದೇಶಸ್ಥರಾಗಿದ್ದದ್ದನ್ನು ಜ್ಞಾಪಕಮಾಡಿಕೊಳ್ಳಿ. ಆದ್ದರಿಂದ ನೀವು ಮೋಸಮಾಡಬಾರದು; ನಿಮ್ಮ ದೇಶದಲ್ಲಿರುವ ಯಾವ ಪರದೇಶಸ್ಥನಿಗೂ ಕೇಡು ಮಾಡಬಾರದು.

22 “ನೀವೆಂದಿಗೂ ವಿಧವೆಯರಿಗೆ ಅಥವಾ ಅನಾಥ ಮಕ್ಕಳಿಗೆ ಕೇಡುಮಾಡಬಾರದು. 23 ನೀವು ಆ ವಿಧವೆಯರಿಗೆ ಅಥವಾ ಅನಾಥರಿಗೆ ಕೇಡುಮಾಡಿದರೆ, ನಾನು ಅವರ ಗೋಳಾಟವನ್ನು ಕೇಳಿ, 24 ನಿಮ್ಮ ಮೇಲೆ ಕೋಪಗೊಳ್ಳುವೆನು; ಕತ್ತಿಯಿಂದ ನಿಮ್ಮನ್ನು ಕೊಲ್ಲುವೆನು. ಆಗ ನಿಮ್ಮ ಹೆಂಡತಿಯರು ವಿಧವೆಯರಾಗುವರು; ನಿಮ್ಮ ಮಕ್ಕಳು ಅನಾಥರಾಗುವರು.

25 “ನನ್ನ ಜನರಲ್ಲಿ ಬಡವನಾಗಿರುವವನಿಗೆ ನೀವು ಹಣವನ್ನು ಸಾಲಕೊಟ್ಟರೆ, ನೀವು ಆ ಹಣಕ್ಕೆ ಬಡ್ಡಿ ಕೇಳಬಾರದು. ಬೇಗನೆ ಮರುಪಾವತಿ ಮಾಡುವಂತೆ ಅವನನ್ನು ಬಲವಂತಪಡಿಸಬಾರದು. 26 ಯಾವನಾದರೂ ನೀವು ಕೊಟ್ಟ ಸಾಲಕ್ಕೆ ತನ್ನ ಅಂಗಿಯನ್ನು ಒತ್ತೆಯಾಗಿಟ್ಟರೆ, ಸೂರ್ಯನು ಮುಳುಗುವ ಮೊದಲೇ ನೀವು ಆ ಅಂಗಿಯನ್ನು ಅವನಿಗೆ ಹಿಂತಿರುಗಿಸಬೇಕು. 27 ಯಾಕೆಂದರೆ ಅವನಿಗೆ ಬೇರೆ ಯಾವ ಹೊದಿಕೆಯೂ ಇಲ್ಲ; ಅದನ್ನೇ ಅವನು ಧರಿಸಿಕೊಳ್ಳಬೇಕು. ಅವನು ಮಲಗಿಕೊಳ್ಳುವಾಗ ಚಳಿಯಿಂದ ನನಗೆ ಮೊರೆಯಿಟ್ಟರೆ, ನಾನು ಅವನ ಮೊರೆಯನ್ನು ಕೇಳಿ ಅವನಿಗೆ ದಯೆತೋರುವೆನು.

28 “ನೀವು ದೇವರನ್ನಾಗಲಿ ಅಥವಾ ನಿಮ್ಮ ನಾಯಕರುಗಳನ್ನಾಗಲಿ ಶಪಿಸಬಾರದು.

29 “ಸುಗ್ಗಿಕಾಲದಲ್ಲಿ ನೀವು ಪ್ರಥಮಫಲವಾದ ಧಾನ್ಯವನ್ನು ಮತ್ತು ನಿಮ್ಮ ಪ್ರಥಮಫಲವಾದ ದ್ರಾಕ್ಷಾರಸವನ್ನು ನನಗೆ ಕೊಡಬೇಕು. ನೀವು ಅದನ್ನು ನಿಮಗಾಗಿಯೇ ಇಟ್ಟುಕೊಳ್ಳಬಾರದು.

“ನಿಮ್ಮ ಚೊಚ್ಚಲು ಗಂಡುಮಕ್ಕಳನ್ನು ನನಗೆ ಪ್ರತಿಷ್ಠಿಸಬೇಕು. 30 ಮಾತ್ರವಲ್ಲದೆ, ನಿಮ್ಮ ಕುರಿದನಗಳಲ್ಲಿ ಚೊಚ್ಚಲಾದವುಗಳನ್ನು ನನಗೆ ಅರ್ಪಿಸಬೇಕು. ಚೊಚ್ಚಲಾದವುಗಳು ತನ್ನ ತಾಯಿಯೊಂದಿಗೆ ಏಳು ದಿನಗಳಿರಲಿ. ಬಳಿಕ, ಎಂಟನೆಯ ದಿನದಲ್ಲಿ ನೀವು ಅದನ್ನು ನನಗೆ ಅರ್ಪಿಸಬೇಕು.

31 “ನೀವು ನನ್ನ ವಿಶೇಷ ಜನರಾಗಿದ್ದೀರಿ. ಆದ್ದರಿಂದ ಕ್ರೂರಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಯ ಮಾಂಸವನ್ನು ನೀವು ತಿನ್ನಬಾರದು. ಅದನ್ನು ನಾಯಿಗಳು ತಿನ್ನಲಿ.

ಮತ್ತಾಯ 19

ವಿವಾಹ ವಿಚ್ಛೇದನದ ಕುರಿತು ಯೇಸುವಿನ ಬೋಧನೆ

(ಮಾರ್ಕ 10:1-12)

19 ಯೇಸು ಈ ಸಂಗತಿಗಳನ್ನು ಹೇಳಿದ ಬಳಿಕ ಗಲಿಲಾಯದಿಂದ ಹೊರಟು ಜೋರ್ಡನ್ ನದಿಯ ಮತ್ತೊಂದು ತೀರದಲ್ಲಿದ್ದ ಜುದೇಯ ಪ್ರಾಂತ್ಯಕ್ಕೆ ಬಂದನು. ಯೇಸುವನ್ನು ಅನೇಕ ಜನರು ಹಿಂಬಾಲಿಸಿದರು. ಯೇಸು ಅಲ್ಲಿ ರೋಗಿಗಳನ್ನು ಗುಣಪಡಿಸಿದನು.

ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ತಪ್ಪಿನಲ್ಲಿ ಸಿಕ್ಕಿಸುವುದಕ್ಕಾಗಿ, “ತನ್ನದೇ ಆದ ಯಾವ ಕಾರಣಕ್ಕಾಗಲಿ ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು.

ಯೇಸು, “ನೀವು ನಿಜವಾಗಿಯೂ ಇದನ್ನು ಪವಿತ್ರಗ್ರಂಥದಲ್ಲಿ ಓದಿದ್ದೀರಿ. ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ಸೃಷ್ಟಿಸಿದನು.’(A) ಆದಕಾರಣ ದೇವರು, ‘ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗುವರು.’(B) ಎಂದು ಹೇಳಿದನು. ಆದ್ದರಿಂದ ಇವರಿಬ್ಬರು ಇನ್ನು ಮೇಲೆ ಇಬ್ಬರಲ್ಲ, ಒಬ್ಬರೇ. ಅವರಿಬ್ಬರನ್ನು ದೇವರೇ ಒಟ್ಟಿಗೆ ಕೂಡಿಸಿದ್ದಾನೆ. ಆದ್ದರಿಂದ ಯಾವ ಮನುಷ್ಯನೂ ಅವರನ್ನು ಪ್ರತ್ಯೇಕಿಸಬಾರದು” ಎಂದು ಉತ್ತರಕೊಟ್ಟನು.

ಫರಿಸಾಯರು, “ಹಾಗಾದರೆ ಒಬ್ಬ ಪುರುಷನು ವಿವಾಹ ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಬಿಟ್ಟುಬಿಡಬಹುದೆಂದು ಮೋಶೆಯು ಹೇಳಿದ್ದೇಕೆ?” ಎಂದು ಕೇಳಿದರು.[a]

ಯೇಸು, “ನೀವು ದೇವರ ಬೋಧನೆಯನ್ನು ಸ್ವೀಕರಿಸದಿದ್ದ ಕಾರಣ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಮೋಶೆ ಅವಕಾಶಕೊಟ್ಟನು. ಆದರೆ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ಆರಂಭದಲ್ಲಿ ಅವಕಾಶ ಇರಲಿಲ್ಲ. ನಾನು ನಿಮಗೆ ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರಿಯಾಗುತ್ತಾನೆ. ಮೊದಲಿನ ಹೆಂಡತಿಯು ಬೇರೊಬ್ಬನೊಡನೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವನು ಆಕೆಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆ ಆಗಬಹುದು” ಎಂದು ಉತ್ತರಿಸಿದನು.

10 ಶಿಷ್ಯರು ಯೇಸುವಿಗೆ, “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡಲು ಇದೊಂದೇ ಕಾರಣವಾಗಿದ್ದರೆ, ಮದುವೆ ಆಗದಿರುವುದೇ ಉತ್ತಮ” ಎಂದರು.

11 ಅದಕ್ಕೆ ಯೇಸು, “ಮದುವೆಯ ವಿಷಯವಾದ ಈ ಸತ್ಯವನ್ನು ಪ್ರತಿಯೊಬ್ಬರೂ ಸ್ವೀಕರಿಸಲು ಸಾಧ್ಯವಿಲ್ಲ. ಇದನ್ನು ಸ್ವೀಕರಿಸಲು ದೇವರು ಯಾರನ್ನು ಸಮರ್ಥರನ್ನಾಗಿ ಮಾಡಿದ್ದಾನೋ ಅವರಿಗೆ ಮಾತ್ರ ಸಾಧ್ಯ. 12 ಕೆಲವರು ಮದುವೆ ಆಗದಿರಲು ಬೇರೆಬೇರೆ ಕಾರಣಗಳಿವೆ. ಹುಟ್ಟಿದಂದಿನಿಂದಲೇ ಕೆಲವರು ನಪುಂಸಕರಾಗಿರುತ್ತಾರೆ. ಇನ್ನು ಕೆಲವರು ಬೇರೆಯವರಿಂದ ನಪುಂಸಕರಾಗಿ ಮಾಡಲ್ಪಡುತ್ತಾರೆ. ಬೇರೆ ಕೆಲವರು ಪರಲೋಕರಾಜ್ಯಕ್ಕೋಸ್ಕರ ಮದುವೆಯನ್ನು ತೊರೆದುಬಿಡುತ್ತಾರೆ. ಆದರೆ ಮದುವೆ ಆಗುವಂಥವನು ಮದುವೆ ವಿಷಯವಾದ ಈ ಬೋಧನೆಯನ್ನು ಸ್ವೀಕರಿಸಬೇಕು” ಎಂದು ಉತ್ತರಕೊಟ್ಟನು.

ಯೇಸುವಿನಿಂದ ಮಕ್ಕಳಿಗೆ ಸ್ವಾಗತ

(ಮಾರ್ಕ 10:13-16; ಲೂಕ 18:15-17)

13 ಬಳಿಕ ಜನರು ಯೇಸುವಿನ ಬಳಿಗೆ ಬಂದು ತಮ್ಮ ಚಿಕ್ಕ ಮಕ್ಕಳನ್ನು ತಂದು ಅವರಿಗಾಗಿ ಪ್ರಾರ್ಥಿಸಬೇಕೆಂದು ಆತನನ್ನು ಬೇಡಿಕೊಂಡರು. ಇದನ್ನು ಕಂಡ ಶಿಷ್ಯರು ಚಿಕ್ಕ ಮಕ್ಕಳನ್ನು ಆತನ ಬಳಿಗೆ ತರಕೂಡದೆಂದು ಗದರಿಸಿದರು. 14 ಆದರೆ ಯೇಸು, “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರಿಗೆ ಅಡ್ಡಿ ಮಾಡಬೇಡಿ. ಏಕೆಂದರೆ ಪರಲೋಕರಾಜ್ಯ ಈ ಚಿಕ್ಕ ಮಕ್ಕಳಂಥವರದೇ” ಎಂದನು. 15 ನಂತರ ಯೇಸು ತನ್ನ ಕೈಗಳನ್ನು ಮಕ್ಕಳ ಮೇಲೆ ಇಟ್ಟು ಆಶೀರ್ವದಿಸಿದನು. ಬಳಿಕ ಅಲ್ಲಿಂದ ಹೊರಟುಹೋದನು.

ಧನಿಕ ಯುವಕನ ಸಮಸ್ಯೆ

(ಮಾರ್ಕ 10:17-31; ಲೂಕ 18:18-30)

16 ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವ ಹೊಂದಲು ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು.

17 ಯೇಸು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ಕೇಳುವುದೇಕೆ? ದೇವರೊಬ್ಬನೇ ಒಳ್ಳೆಯವನು. ಆದರೆ ನೀನು ನಿತ್ಯಜೀವವನ್ನು ಹೊಂದಬೇಕೆಂದಿದ್ದರೆ ಈ ಆಜ್ಞೆಗಳಿಗೆ ವಿಧೇಯನಾಗು” ಎಂದು ಉತ್ತರಕೊಟ್ಟನು.

18 ಆ ಮನುಷ್ಯನು, “ಯಾವ ಆಜ್ಞೆಗಳು?” ಎಂದು ಕೇಳಿದನು.

ಯೇಸು “ಕೊಲೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. 19 ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನು ಪ್ರೀತಿಸುವಂತೆ ಬೇರೆಯವರನ್ನೂ ಪ್ರೀತಿಸಬೇಕು”(C) ಎಂದು ಉತ್ತರಕೊಟ್ಟನು.

20 ಆ ಯುವಕನು, “ನಾನು ಇವೆಲ್ಲವುಗಳಿಗೆ ವಿಧೇಯನಾಗಿದ್ದೇನೆ. ನಾನು ಬೇರೆ ಏನಾದರೂ ಮಾಡಬೇಕೇ?” ಎಂದು ಕೇಳಿದನು.

21 ಯೇಸು, “ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ಆಗ ನಿನಗೆ ಪರಲೋಕದಲ್ಲಿ ದೊಡ್ಡ ಭಂಡಾರ ಇರುವುದು. ನಂತರ ಬಂದು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.

22 ಇದನ್ನು ಕೇಳಿದಾಗ ಅವನು ಬಹಳ ದುಃಖದಿಂದ ಹೊರಟುಹೋದನು. ಏಕೆಂದರೆ ಅವನು ದೊಡ್ಡ ಐಶ್ವರ್ಯವಂತನಾಗಿದ್ದನು.

23 ಆಗ ಯೇಸು ತನ್ನ ಶಿಷ್ಯರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಐಶ್ವರ್ಯವಂತನು ಪರಲೋಕರಾಜ್ಯಕ್ಕೆ ಪ್ರವೇಶಿಸುವುದು ಬಹಳ ಕಷ್ಟಕರ. 24 ಹೌದು, ಐಶ್ವರ್ಯವಂತನು ದೇವರ ರಾಜ್ಯ ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂದು ನಾನು ನಿಮಗೆ ಹೇಳುತ್ತೇನೆ” ಎಂದನು.

25 ಶಿಷ್ಯರು ಇದನ್ನು ಕೇಳಿ ಬಹಳ ಆಶ್ಚರ್ಯದಿಂದ, “ಹಾಗಾದರೆ ಯಾರು ರಕ್ಷಣೆ ಹೊಂದಬಲ್ಲರು?” ಎಂದು ಕೇಳಿದರು.

26 ಯೇಸು ತನ್ನ ಶಿಷ್ಯರ ಕಡೆಗೆ ದೃಷ್ಟಿಸಿ, “ಇದು ಮನುಷ್ಯರಿಗೆ ಅಸಾಧ್ಯವಾದ ಕಾರ್ಯ. ಆದರೆ ದೇವರಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.

27 ಪೇತ್ರನು ಯೇಸುವಿಗೆ, “ನಾವು ನಮಗಿದ್ದ ಪ್ರತಿಯೊಂದನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು. ನಮಗೆ ಏನು ದೊರಕುವುದು” ಎಂದನು.

28 ಯೇಸು ಶಿಷ್ಯರಿಗೆ ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಹೊಸ ಲೋಕವು ಸೃಷ್ಟಿಸಲ್ಪಟ್ಟಾಗ ಮನುಷ್ಯಕುಮಾರನು ತನ್ನ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುವನು. ನನ್ನನ್ನು ಹಿಂಬಾಲಿಸಿದ ನೀವೆಲ್ಲರೂ ಸಿಂಹಾಸನಗಳ ಮೇಲೆ ಕುಳಿತು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ. 29 ನನ್ನನ್ನು ಹಿಂಬಾಲಿಸಲು ತಮ್ಮ ಮನೆಗಳನ್ನು, ಸಹೋದರ ಸಹೋದರಿಯರನ್ನು, ತಂದೆತಾಯಿಗಳನ್ನು, ಮಕ್ಕಳನ್ನು ಇಲ್ಲವೆ ಆಸ್ತಿಯನ್ನು ತ್ಯಜಿಸಿದ ಪ್ರತಿಯೊಬ್ಬರು ತಾವು ಬಿಟ್ಟವುಗಳಿಗಿಂತ ಹೆಚ್ಚಾಗಿ ಪಡೆಯುತ್ತಾರೆ. ಅಲ್ಲದೆ ನಿತ್ಯಜೀವವನ್ನೂ ಹೊಂದಿಕೊಳ್ಳುತ್ತಾರೆ. 30 ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International