Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 9-11

ಹೊಲದ ಪ್ರಾಣಿಗಳ ವ್ಯಾಧಿ

ಆಗ ಯೆಹೋವನು ಮೋಶೆಗೆ, “ನೀನು ಫರೋಹನ ಬಳಿಗೆ ಹೋಗಿ ಅವನಿಗೆ ಹೀಗೆ ಹೇಳು: ‘ಇಬ್ರಿಯರ ದೇವರಾದ ಯೆಹೋವನು ಹೇಳುವುದೇನೆಂದರೆ, ನನ್ನನ್ನು ಆರಾಧಿಸುವುದಕ್ಕೆ ನನ್ನ ಜನರು ಹೋಗಲಿ. ನೀನು ಅವರನ್ನು ಬಿಡದೆ ಇನ್ನೂ ತಡೆದರೆ, ನಾನು ಕೈಯೆತ್ತಿ ಹೊಲಗಳಲ್ಲಿರುವ ನಿನ್ನ ಪಶುಗಳನ್ನೂ ನಿನ್ನ ಎಲ್ಲಾ ಕುದುರೆಗಳನ್ನೂ ಕತ್ತೆಗಳನ್ನೂ ಒಂಟೆಗಳನ್ನೂ ದನಕರುಗಳನ್ನೂ ಕುರಿಗಳನ್ನೂ ಘೋರವ್ಯಾದಿಯಿಂದ ಸಾಯಿಸುವೆನು. ಆದರೆ ಇಸ್ರೇಲರ ಪಶುಗಳಿಗೂ ಈಜಿಪ್ಟಿನವರ ಪಶುಗಳಿಗೂ ವ್ಯತ್ಯಾಸ ಮಾಡುವೆನು. ಇಸ್ರೇಲರ ಯಾವ ಪಶುವೂ ಸಾಯುವುದಿಲ್ಲ. ಇದು ನಡೆಯತಕ್ಕ ಕಾಲವನ್ನು ನಿರ್ಣಯಿಸಿ ನಾಳೆಯೇ ಇದನ್ನು ಕಾರ್ಯರೂಪಕ್ಕೆ ತರುವೆನು’ ಎಂದು ಹೇಳಬೇಕು” ಅಂದನು.

ಮರುದಿನ ಯೆಹೋವನು ಈ ಕಾರ್ಯವನ್ನು ಮಾಡಿದನು. ಈಜಿಪ್ಟಿನ ಹೊಲಗಳಲ್ಲಿದ್ದ ಪಶುಗಳೆಲ್ಲಾ ಸತ್ತುಹೋದವು; ಆದರೆ ಇಸ್ರೇಲರಿಗೆ ಸೇರಿದ ಯಾವ ಪಶುವೂ ಸಾಯಲಿಲ್ಲ. ಇಸ್ರೇಲರ ಯಾವ ಪಶುವಾದರೂ ಸತ್ತಿದೆಯೋ ಎಂದು ತಿಳಿದುಕೊಳ್ಳಲು ಫರೋಹನು ಜನರನ್ನು ಕಳುಹಿಸಿದನು. ಇಸ್ರೇಲರ ಪಶುಗಳಲ್ಲಿ ಒಂದಾದರೂ ಸತ್ತಿರಲಿಲ್ಲ. ಆದರೂ ಫರೋಹನು ತನ್ನ ಹೃದಯವನ್ನು ಕಠಿಣಪಡಿಸಿಕೊಂಡದ್ದರಿಂದ ಇಸ್ರೇಲರನ್ನು ಹೋಗಗೊಡಿಸಲಿಲ್ಲ.

ಹುಣ್ಣುಗಳು

ಯೆಹೋವನು ಮೋಶೆ ಆರೋನರಿಗೆ, “ನೀವು ಒಲೆಯ ಬೂದಿಯನ್ನು ಕೈತುಂಬ ತೆಗೆದುಕೊಳ್ಳಿರಿ. ಮೋಶೆಯು ಅದನ್ನು ಫರೋಹನ ಮುಂದೆ ಗಾಳಿಯಲ್ಲಿ ತೂರಲಿ. ಅದು ಧೂಳಾಗಿ ಈಜಿಪ್ಟಿನಲ್ಲೆಲ್ಲಾ ಹರಡಿಕೊಳ್ಳುವುದು; ಈ ಧೂಳು ಈಜಿಪ್ಟಿನಲ್ಲಿರುವ ಮನುಷ್ಯರನ್ನಾಗಲಿ ಪಶುಗಳನ್ನಾಗಲಿ ತಾಗಿದಾಗ ಅವರ ಚರ್ಮದ ಮೇಲೆ ಹುಣ್ಣುಗಳಾಗುತ್ತವೆ” ಎಂದು ಹೇಳಿದನು.

10 ಆದ್ದರಿಂದ ಮೋಶೆ ಆರೋನರು ಒಲೆಯಿಂದ ಬೂದಿಯನ್ನು ತೆಗೆದುಕೊಂಡು ಹೋಗಿ ಫರೋಹನ ಮುಂದೆ ನಿಂತುಕೊಂಡರು. ಅವರು ಬೂದಿಯನ್ನು ಗಾಳಿಯಲ್ಲಿ ತೂರಿದಾಗ ಜನರ ಮೇಲೂ ಪ್ರಾಣಿಗಳ ಮೇಲೂ ಹುಣ್ಣುಗಳಾಗತೊಡಗಿದವು. 11 ಮೋಶೆಯ ಈ ಕಾರ್ಯವನ್ನು ವಿಫಲಗೊಳಿಸಲು ಮಾಂತ್ರಿಕರಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಈಜಿಪ್ಟಿನ ಎಲ್ಲಾ ಜನರಂತೆ ಮಾಂತ್ರಿಕರ ಮೇಲೆಯೂ ಹುಣ್ಣುಗಳಾದವು. 12 ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣಗೊಳಿಸಿದ್ದರಿಂದ ಫರೋಹನು ಮೋಶೆ ಆರೋನರ ಮಾತನ್ನು ಕೇಳಲಿಲ್ಲ. ಯೆಹೋವನು ಹೇಳಿದಂತೆಯೇ ಇದಾಯಿತು.

ಆಲಿಕಲ್ಲು

13 ಬಳಿಕ ಯೆಹೋವನು ಮೋಶೆಗೆ, “ಮುಂಜಾನೆ ಎದ್ದು ಫರೋಹನ ಬಳಿಗೆ ಹೋಗಿ, ಅವನಿಗೆ, ‘ಇಬ್ರಿಯರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ನನ್ನನ್ನು ಆರಾಧಿಸಲು ನನ್ನ ಜನರು ಹೋಗಲಿ! 14 ಇಲ್ಲವಾದರೆ, ನಾನು ನಿನ್ನ ವಿರುದ್ಧವಾಗಿಯೂ ನಿನ್ನ ಅಧಿಕಾರಿಗಳ ವಿರುದ್ಧವಾಗಿಯೂ ನಿನ್ನ ಜನರ ವಿರುದ್ಧವಾಗಿಯೂ ನನ್ನ ಪೂರ್ಣಶಕ್ತಿಯಿಂದ ಉಪದ್ರವಗಳನ್ನು ಕಳುಹಿಸುವೆನು. ಆಗ ನನ್ನಂಥ ದೇವರು ಲೋಕದಲ್ಲಿ ಇಲ್ಲವೇ ಇಲ್ಲವೆಂದು ನೀನು ತಿಳಿದುಕೊಳ್ಳುವೆ. 15 ನಾನು ನನ್ನ ಶಕ್ತಿಯಿಂದ ನಿನಗೂ ನಿನ್ನ ಜನರಿಗೂ ವ್ಯಾಧಿಯನ್ನು ಬರಮಾಡಿ ನಿಮ್ಮನ್ನು ನಿರ್ಮೂಲ ಮಾಡಬಹುದಿತ್ತು. 16 ಆದರೆ, ನನ್ನ ಶಕ್ತಿಯನ್ನು ನಿನಗೆ ತೋರಿಸಬೇಕೆಂದೂ ಲೋಕದ ಜನರೆಲ್ಲರು ನನ್ನ ಬಗ್ಗೆ ತಿಳಿದುಕೊಳ್ಳಬೇಕೆಂದೂ ನಾನು ನಿನ್ನನ್ನು ಇನ್ನೂ ಉಳಿಸಿದ್ದೇನೆ. 17 ಆದರೂ ನೀನು ನನ್ನ ಜನರಿಗೆ ವಿರುದ್ಧವಾಗಿರುವೆ; ಅವರಿಗೆ ಸ್ವತಂತ್ರವನ್ನು ಕೊಡದಿರುವೆ. 18 ಆದ್ದರಿಂದ ನಾಳೆ ಇದೇ ಸಮಯಕ್ಕೆ ಸರಿಯಾಗಿ ಭೀಕರವಾದ ಆಲಿಕಲ್ಲಿನ ಮಳೆಯನ್ನು ಸುರಿಸುವೆನು. ಈಜಿಪ್ಟ್ ರಾಜ್ಯವು ಸ್ಥಾಪನೆಯಾದಂದಿನಿಂದ ಇಂಥ ಆಲಿಕಲ್ಲಿನ ಮಳೆ ಬಿದ್ದಿಲ್ಲ. 19 ಈಗ ನೀನು ನಿನ್ನ ಪಶುಗಳನ್ನೂ ನಿನ್ನ ಹೊಲದಲ್ಲಿರುವ ನಿನ್ನ ಪ್ರತಿಯೊಂದನ್ನೂ ಸುರಕ್ಷಿತವಾದ ಸ್ಥಳದಲ್ಲಿ ಇರಿಸಬೇಕು. ಮನೆಯೊಳಗಿರದೆ ಹೊಲದಲ್ಲಿರುವ ಮನುಷ್ಯರೂ ಪಶುಗಳೂ ಆಲಿಕಲ್ಲಿನ ಮಳೆಗೆ ಸಿಕ್ಕಿಕೊಂಡು ಸಾಯುವರು’ ಎಂದು ಹೇಳಬೇಕು” ಅಂದನು.

20 ಫರೋಹನ ಅಧಿಕಾರಿಗಳಲ್ಲಿ ಕೆಲವರು ಯೆಹೋವನ ಸಂದೇಶಕ್ಕೆ ಕಿವಿಗೊಟ್ಟು ತಮ್ಮ ಎಲ್ಲಾ ಪಶುಗಳನ್ನೂ ಗುಲಾಮರನ್ನೂ ಮನೆಯೊಳಗೆ ಸೇರಿಸಿಕೊಂಡರು. 21 ಆದರೆ ಇತರರು ಯೆಹೋವನ ಸಂದೇಶವನ್ನು ನಿರ್ಲಕ್ಷ್ಯಮಾಡಿ ತಮ್ಮ ಎಲ್ಲಾ ಗುಲಾಮರನ್ನೂ ಪಶುಗಳನ್ನೂ ಹೊಲಗಳಲ್ಲಿಯೇ ಬಿಟ್ಟರು.

22 ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು; ಆಗ ಈಜಿಪ್ಟಿನಲ್ಲೆಲ್ಲಾ ಆಲಿಕಲ್ಲಿನ ಮಳೆ ಬೀಳತೊಡಗುವುದು. ಆಲಿಕಲ್ಲಿನ ಮಳೆಯು ಜನರ, ಪ್ರಾಣಿಗಳ ಮತ್ತು ಈಜಿಪ್ಟಿನ ಹೊಲಗಳಲ್ಲಿರುವ ಎಲ್ಲಾ ಸಸ್ಯಗಳ ಮೇಲೆ ಬೀಳುವುದು” ಎಂದು ಹೇಳಿದನು.

23 ಆದ್ದರಿಂದ ಮೋಶೆ ತನ್ನ ಕೋಲನ್ನು ಆಕಾಶದ ಕಡೆಗೆ ಚಾಚಿದನು. ಕೂಡಲೇ ಯೆಹೋವನು, ಗುಡುಗು ಮಿಂಚುಗಳಿಂದ ಕೂಡಿದ ಆಲಿಕಲ್ಲಿನ ಮಳೆಯನ್ನು ಈಜಿಪ್ಟಿನಲ್ಲೆಲ್ಲಾ ಸುರಿಸಿದನು. 24 ಆಲಿಕಲ್ಲಿನ ಮಳೆಯು ಭೀಕರವಾಗಿತ್ತು, ಝಗಝಗಿಸುವ ಮಿಂಚೂ ಅದರೊಂದಿಗಿತ್ತು. ಈಜಿಪ್ಟ್ ಒಂದು ರಾಷ್ಟ್ರವಾದಂದಿನಿಂದ ಇಂಥ ಭೀಕರವಾದ ಆಲಿಕಲ್ಲಿನ ಮಳೆ ಎಂದೂ ಆಗಿರಲಿಲ್ಲ. 25 ಈಜಿಪ್ಟಿನ ಹೊಲಗಳಲ್ಲಿದ್ದ ಪ್ರತಿಯೊಂದನ್ನೂ ಬಿರುಗಾಳಿ ನಾಶಮಾಡಿತು. ಆಲಿಕಲ್ಲು ಜನರನ್ನೂ ಪ್ರಾಣಿಗಳನ್ನೂ ಸಸ್ಯಗಳನ್ನೂ ನಾಶಮಾಡಿತು; ಹೊಲಗಳಲ್ಲಿದ್ದ ಎಲ್ಲಾ ಮರಗಳನ್ನು ಮುರಿದುಹಾಕಿತು. 26 ಇಸ್ರೇಲರು ವಾಸವಾಗಿದ್ದ ಗೋಷೆನ್ ಪ್ರದೇಶದಲ್ಲಿ ಮಾತ್ರ ಆಲಿಕಲ್ಲಿನ ಮಳೆಯಾಗಲಿಲ್ಲ.

27 ಫರೋಹನು ಮೋಶೆ ಆರೋನರನ್ನು ಕರೆಸಿ ಅವರಿಗೆ, “ಈ ಸಾರಿ ನಾನು ಪಾಪಮಾಡಿದ್ದೇನೆ. ಯೆಹೋವನೇ ನೀತಿವಂತನು. ನಾನೂ ನನ್ನ ಜನರೂ ದೋಷಿಗಳಾಗಿದ್ದೇವೆ. 28 ಭಯಂಕರವಾದ ಗುಡುಗೂ ಆಲಿಕಲ್ಲಿನ ಮಳೆಯೂ ಬಹಳ ಹೆಚ್ಚಾದವು. ಇವುಗಳನ್ನು ನಿಲ್ಲಿಸಬೇಕೆಂದು ದೇವರನ್ನು ಪ್ರಾರ್ಥಿಸಿರಿ; ನಿಮ್ಮನ್ನು ಈ ದೇಶದಿಂದ ಕಳುಹಿಸಿಕೊಡುತ್ತೇನೆ; ತಡೆಯುವುದಿಲ್ಲ” ಎಂದು ಹೇಳಿದನು.

29 ಮೋಶೆಯು ಫರೋಹನಿಗೆ, “ನಾನು ಪಟ್ಟಣದಿಂದಾಚೆಗೆ ಹೋದಕೂಡಲೇ ಕೈಯೆತ್ತಿ ಯೆಹೋವನಲ್ಲಿ ಪ್ರಾರ್ಥಿಸುವೆನು, ಆಗ ಗುಡುಗೂ ಆಲಿಕಲ್ಲಿನ ಮಳೆಯೂ ನಿಂತುಹೋಗುವವು. ಭೂಲೋಕವು ಯೆಹೋವನ ಅಧೀನದಲ್ಲಿದೆಯೆಂದು ಆಗ ನೀನು ತಿಳಿದುಕೊಳ್ಳುವೆ. 30 ಆದರೆ ನೀನಾಗಲಿ ನಿನ್ನ ಅಧಿಕಾರಿಗಳಾಗಲಿ ಇನ್ನೂ ದೇವರಿಗೆ ಭಯಪಡುವುದಿಲ್ಲ ಎಂಬುದು ನನಗೆ ಗೊತ್ತಿದೆ” ಎಂದು ಹೇಳಿದನು.

31 ಅಗಸೆಗೆ ಮೊಗ್ಗೆಯೂ ಬಾರ್ಲಿಗೆ ತೆನೆಯೂ ಬಂದಿದ್ದರಿಂದ ಈ ಎರಡು ಬೆಳೆಗಳು ನಾಶವಾದವು. 32 ಆದರೆ ಗೋಧಿಯೂ ಕಡಲೆಯೂ ಬೇರೆ ಧಾನ್ಯಗಳ ನಂತರ ಆಗುವ ಬೆಳೆಗಳಾಗಿದ್ದವು. ಆದ್ದರಿಂದ ಈ ಪೈರುಗಳು ನಾಶವಾಗಲಿಲ್ಲ.

33 ಮೋಶೆಯು ಫರೋಹನ ಬಳಿಯಿಂದ ಹೊರಟು ಪಟ್ಟಣದಾಚೆಗೆ ಹೋದಾಗ ಕೈಯೆತ್ತಿ ಯೆಹೋವನಲ್ಲಿ ಪ್ರಾರ್ಥಿಸಿದನು. ಆಗ ಗುಡುಗೂ ಆಲಿಕಲ್ಲಿನ ಮಳೆಯೂ ನಿಂತುಹೋದವು; ಮಳೆಯೂ ನಿಂತುಹೋಯಿತು.

34 ಮಳೆಯೂ ಆಲಿಕಲ್ಲಿನ ಮಳೆಯೂ ಗುಡುಗೂ ನಿಂತುಹೋದದ್ದನ್ನು ಕಂಡ ಫರೋಹನು ಮತ್ತು ಅವನ ಅಧಿಕಾರಿಗಳು ಮತ್ತೆ ತಮ್ಮ ಹೃದಯಗಳನ್ನು ಕಠಿಣಪಡಿಸಿಕೊಂಡು ಪಾಪ ಮಾಡಿದರು. 35 ಇಸ್ರೇಲರು ಸ್ವತಂತ್ರರಾಗಿ ಹೋಗಲು ಫರೋಹನು ಬಿಡಲಿಲ್ಲ. ಯೆಹೋವನು ಮೋಶೆಯ ಮೂಲಕ ಹೇಳಿಸಿದಂತೆಯೇ ಇದಾಯಿತು.

ಮಿಡತೆಗಳಿಂದ ಬಾಧೆ

10 ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹೋಗು. ನಾನು ಅದ್ಭುತಕಾರ್ಯಗಳನ್ನು ತೋರಿಸಲು ಅವಕಾಶವಾಗಲೆಂದು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕಠಿಣಪಡಿಸಿದ್ದೇನೆ. ನಾನು ಈಜಿಪ್ಟಿನಲ್ಲಿ ಮಾಡಿದ ಸೂಚಕಕಾರ್ಯಗಳನ್ನೂ ಇತರ ಅದ್ಭುತಕಾರ್ಯಗಳನ್ನೂ ನೀವು ನಿಮ್ಮ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ವಿವರಿಸಿ, ‘ಯೆಹೋವನು ಈಜಿಪ್ಟಿನವರನ್ನು ತನಗೆ ಇಷ್ಟ ಬಂದಂತೆ ಶಿಕ್ಷಿಸಿದನು’ ಎಂಬುದಾಗಿ ತಿಳಿಸಬೇಕೆಂದು ನಾನು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕಠಿಣಪಡಿಸಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳ ಮೂಲಕ ನಾನೇ ಯೆಹೋವನೆಂದು ತಿಳಿದುಕೊಳ್ಳುವಿರಿ” ಎಂದು ಹೇಳಿದನು.

ಆದ್ದರಿಂದ ಮೋಶೆ ಆರೋನರು ಫರೋಹನ ಬಳಿಗೆ ಹೋಗಿ, “ಇಬ್ರಿಯರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನೀನು ಎಲ್ಲಿಯವರೆಗೆ ನನಗೆ ವಿಧೇಯನಾಗುವುದಿಲ್ಲ? ನನ್ನನ್ನು ಆರಾಧಿಸಲು ನನ್ನ ಜನರನ್ನು ಕಳುಹಿಸಿಕೊಡು! ನೀನು ನನ್ನ ಜನರನ್ನು ಕಳುಹಿಸಿಕೊಡದಿದ್ದರೆ, ನಾಳೆಯೇ ನಿನ್ನ ದೇಶದೊಳಗೆ ಮಿಡತೆಗಳನ್ನು ತರುವೆನು. ಮಿಡತೆಗಳು ಬಂದು ಭೂಮಿಯನ್ನು ಮುಚ್ಚಿಕೊಳ್ಳುವವು; ನೆಲವೇ ಕಾಣಿಸದೆ ಹೋಗುವುದು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವುದನ್ನು ಮಿಡತೆಗಳು ತಿಂದುಬಿಡುತ್ತವೆ; ಹೊಲದಲ್ಲಿರುವ ಎಲ್ಲಾ ಮರಗಳ ಎಲೆಗಳನ್ನು ತಿಂದುಬಿಡುತ್ತವೆ. ಅವು ನಿನ್ನ ಮನೆಗಳಲ್ಲಿಯೂ ನಿನ್ನ ಅಧಿಕಾರಿಗಳ ಮನೆಗಳಲ್ಲಿಯೂ ಈಜಿಪ್ಟಿನ ಎಲ್ಲಾ ಮನೆಗಳಲ್ಲಿಯೂ ತುಂಬಿರುತ್ತವೆ. ನಿನ್ನ ತಂದೆತಾತಂದಿರೂ ನೋಡಿಲ್ಲದಷ್ಟು ಮಿಡತೆಗಳಿರುತ್ತವೆ’” ಎಂದು ಹೇಳಿದರು. ಬಳಿಕ ಅವರು ಫರೋಹನ ಬಳಿಯಿಂದ ಹೊರಟುಹೋದರು.

ಅಧಿಕಾರಿಗಳು ಫರೋಹನಿಗೆ, “ಈ ಜನರಿಂದ ಇನ್ನೆಷ್ಟು ಕಾಲ ನಾವು ಬಳಲಬೇಕು? ಇವರು ಹೋಗಿ ತಮ್ಮ ದೇವರಾದ ಯೆಹೋವನನ್ನು ಆರಾಧಿಸಲಿ. ಈಜಿಪ್ಟ್ ನಾಶವಾಗುತ್ತಿದೆ ಎಂಬುದು ನಿನಗಿನ್ನೂ ಮನವರಿಕೆಯಾಗಿಲ್ಲವೇ?” ಅಂದರು.

ಆದ್ದರಿಂದ ಫರೋಹನು ಮೋಶೆ ಆರೋನರನ್ನು ತನ್ನ ಬಳಿಗೆ ಕರೆಯಿಸಿ, “ಹೋಗಿ ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಿರಿ. ಆದರೆ ಹೋಗುವವರು ಯಾರೆಂಬುದನ್ನು ನನಗೆ ತಿಳಿಸಿ” ಅಂದನು.

ಮೋಶೆಯು, “ಯೌವನಸ್ಥರು, ಮುದುಕರು, ಎಲ್ಲರೂ ಹೋಗುತ್ತೇವೆ. ನಮ್ಮ ಗಂಡು ಹೆಣ್ಣುಮಕ್ಕಳನ್ನೂ ನಮ್ಮ ದನಕುರಿಗಳನ್ನೂ ತೆಗೆದುಕೊಂಡು ಹೋಗುತ್ತೇವೆ. ಯಾಕೆಂದರೆ ಇದು ಯೆಹೋವನ ಜಾತ್ರೆ” ಎಂದು ಉತ್ತರಕೊಟ್ಟನು.

10 ಫರೋಹನು ಅವರಿಗೆ, “ಯೆಹೋವನಾಣೆ, ನೀವು ನಿಮ್ಮ ಸ್ತ್ರೀಯರನ್ನೂ ಮಕ್ಕಳನ್ನೂ ಕರೆದುಕೊಂಡು ಹೋಗಲು ನಾನು ಅನುಮತಿ ಕೊಡುವುದೇ ಇಲ್ಲ. 11 ನೀವು ನನಗೆ ವಿರೋಧವಾಗಿ ಸಂಚುಮಾಡುತ್ತಿರುವುದು ಈಗ ಸ್ಪಷ್ಟವಾಯಿತು” ಎಂದು ಹೇಳಿದನು. ಬಳಿಕ ಫರೋಹನು ಮೋಶೆ ಆರೋನರನ್ನು ಕಳುಹಿಸಿಬಿಟ್ಟನು.

12 ಯೆಹೋವನು ಮೋಶೆಗೆ, “ಈಜಿಪ್ಟ್ ದೇಶದ ಮೇಲೆ ನಿನ್ನ ಕೈಯನ್ನೆತ್ತು. ಆಗ ಮಿಡತೆಗಳು ಬರುವವು! ಮಿಡತೆಗಳು ಈಜಿಪ್ಟ್ ದೇಶದಲ್ಲೆಲ್ಲಾ ಹರಡಿಕೊಳ್ಳುವವು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದುಕೊಂಡ ಪೈರುಗಳನ್ನೆಲ್ಲಾ ಮಿಡತೆಗಳು ತಿಂದುಬಿಡುವವು” ಎಂದು ಹೇಳಿದನು.

13 ಅಂತೆಯೇ ಮೋಶೆ ಈಜಿಪ್ಟ್ ದೇಶದ ಮೇಲೆ ಕೈ ಚಾಚಿದನು. ಆಗ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು. ಗಾಳಿಯು ಹಗಲಿರುಳು ಬೀಸಿತು. ಮುಂಜಾನೆಯಾದಾಗ ಆ ಗಾಳಿಯಿಂದ ಈಜಿಪ್ಟ್ ದೇಶಕ್ಕೆ ಮಿಡತೆಗಳು ಬಂದವು. 14 ಮಿಡತೆಗಳು ಈಜಿಪ್ಟ್ ದೇಶದೊಳಗೆ ಹಾರಿಬಂದು ನೆಲದ ಮೇಲೆ ಇಳಿದವು. ಈಜಿಪ್ಟಿನಲ್ಲಿ ಹಿಂದೆಂದೂ ಇಷ್ಟು ಮಿಡತೆಗಳು ಇರಲಿಲ್ಲ; ಇನ್ನು ಮುಂದೆಯೂ ಇರುವುದಿಲ್ಲ. 15 ಮಿಡತೆಗಳು ನೆಲವನ್ನು ಮುಚ್ಚಿಕೊಂಡವು; ಇದರಿಂದಾಗಿ ನೆಲವು ಕಾಣದಂತಾಯಿತು. ಆಲಿಕಲ್ಲಿನ ಮಳೆಗೆ ನಾಶವಾಗದೆ ಉಳಿದಿದ್ದ ಎಲ್ಲಾ ಪೈರುಗಳನ್ನೂ ಮರಗಳಲ್ಲಿದ್ದ ಕಾಯಿಗಳನ್ನೂ ಅವು ತಿಂದುಬಿಟ್ಟವು. ಈಜಿಪ್ಟಿನಲ್ಲೆಲ್ಲಾ ಮರಗಳಲ್ಲಾಗಲಿ ಗಿಡಗಳಲ್ಲಾಗಲಿ ಹಸುರಾಗಿದ್ದ ಒಂದಾದರೂ ಉಳಿಯಲಿಲ್ಲ.

16 ಫರೋಹನು ಕೂಡಲೇ ಮೋಶೆ ಆರೋನರನ್ನು ಕರೆಸಿ, “ನಾನು ನಿಮ್ಮ ದೇವರಾದ ಯೆಹೋವನಿಗೂ ನಿಮಗೂ ವಿರುದ್ಧವಾಗಿ ಪಾಪ ಮಾಡಿದ್ದೇನೆ. 17 ಇದೊಂದು ಸಲ ನನ್ನ ಪಾಪಗಳನ್ನು ಕ್ಷಮಿಸಿ ಈ ‘ವಿಪತ್ತನ್ನು’ ನನ್ನಿಂದ ತೊಲಗಿಸಬೇಕೆಂದು ಯೆಹೋವನಿಗೆ ಪ್ರಾರ್ಥಿಸಿರಿ” ಎಂದು ಹೇಳಿದನು.

18 ಮೋಶೆಯು ಫರೋಹನ ಬಳಿಯಿಂದ ಹೋಗಿ ಯೆಹೋವನಿಗೆ ಪ್ರಾರ್ಥಿಸಿದನು. 19 ಆದ್ದರಿಂದ ಯೆಹೋವನು ಗಾಳಿಯ ದಿಕ್ಕನ್ನು ಬದಲಾಯಿಸಿ, ಪಶ್ಚಿಮದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು; ಅದು ಮಿಡತೆಗಳನ್ನು ಕೆಂಪು ಸಮುದ್ರಕ್ಕೆ ಹಾರಿಸಿತು. ಈಜಿಪ್ಟಿನಲ್ಲಿ ಒಂದು ಮಿಡತೆಯೂ ಉಳಿಯಲಿಲ್ಲ. 20 ಆದರೆ ಫರೋಹನು ಮತ್ತೆ ಹೃದಯವನ್ನು ಕಠಿಣಪಡಿಸಿಕೊಂಡು ಇಸ್ರೇಲರನ್ನು ಕಳುಹಿಸಿಕೊಡಲಿಲ್ಲ.

ಮೂರು ದಿನ ಕಾರ್ಗತ್ತಲೆ

21 ಬಳಿಕ ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು. ಆಗ ಕಾರ್ಗತ್ತಲೆಯು ಈಜಿಪ್ಟನ್ನು ಆವರಿಸುವುದು. ಆ ಕಾರ್ಗತ್ತಲೆಯಿಂದ ಜನರು ತಡವರಿಸುತ್ತಾ ನಡೆಯುವರು” ಎಂದು ಹೇಳಿದನು.

22 ಮೋಶೆ ತನ್ನ ಕೈಯನ್ನು ಆಕಾಶದ ಕಡೆಗೆ ಚಾಚಿದಾಗ ಕಾರ್ಗತ್ತಲು ಈಜಿಪ್ಟನ್ನು ಆವರಿಸಿತು. ಕಾರ್ಗತ್ತಲು ಈಜಿಪ್ಟಿನಲ್ಲಿ ಮೂರು ದಿನಗಳವರೆಗೆ ಇತ್ತು. 23 ಈ ಮೂರು ದಿನಗಳಲ್ಲಿ ಯಾರೂ ಒಬ್ಬರನ್ನೊಬ್ಬರು ನೋಡಲಾಗಲಿಲ್ಲ. ಯಾವ ಸ್ಥಳಕ್ಕೂ ಹೋಗಲಿಲ್ಲ. ಆದರೆ ಇಸ್ರೇಲರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಬೆಳಕಿತ್ತು.

24 ಫರೋಹನು ಮತ್ತೆ ಮೋಶೆಯನ್ನು ಕರೆಸಿ, “ಹೋಗಿ, ಯೆಹೋವನನ್ನು ಆರಾಧಿಸಿರಿ! ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಆದರೆ ನೀವು ನಿಮ್ಮ ಕುರಿಗಳನ್ನು ದನಕರುಗಳನ್ನು ಇಲ್ಲಿಯೇ ಬಿಟ್ಟುಹೋಗಬೇಕು” ಎಂದು ಹೇಳಿದನು.

25 ಮೋಶೆಯು, “ನಾವು ನಮ್ಮ ಕುರಿಗಳನ್ನೂ ದನಕರುಗಳನ್ನೂ ಕಾಣಿಕೆಗಳಿಗಾಗಿ ಮತ್ತು ಯಜ್ಞಗಳಿಗಾಗಿ ತೆಗೆದುಕೊಂಡು ಹೋಗಬೇಕು; ಮಾತ್ರವಲ್ಲದೆ 26 ನಮ್ಮ ಪ್ರಾಣಿಗಳನ್ನೆಲ್ಲಾ ತೆಗೆದುಕೊಂಡು ಹೋಗುವೆವು. ಒಂದನ್ನಾದರೂ ಬಿಟ್ಟುಹೋಗುವುದಿಲ್ಲ; ಯಾವ ಪಶುಗಳನ್ನು ಅರ್ಪಿಸಬೇಕೆಂಬುದು ಅಲ್ಲಿಗೆ ಹೋದಾಗಲೇ ನಮಗೆ ತಿಳಿಯುವುದು. ಆದ್ದರಿಂದ, ನಾವು ಇವುಗಳನ್ನೆಲ್ಲಾ ನಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು” ಎಂದು ಹೇಳಿದನು.

27 ಯೆಹೋವನು ಫರೋಹನ ಹೃದಯವನ್ನು ಮತ್ತೆ ಕಠಿಣಗೊಳಿಸಿದನು. ಆದ್ದರಿಂದ ಫರೋಹನು ಅವರನ್ನು ಕಳುಹಿಸಿಕೊಡಲಿಲ್ಲ. 28 ಫರೋಹನು ಮೋಶೆಗೆ, “ಇಲ್ಲಿಂದ ತೊಲಗಿ ಹೋಗು! ನೀನು ನನ್ನ ಸನ್ನಿಧಿಗೆ ಇನ್ನು ಮೇಲೆ ಬರಕೂಡದು. ನೀನು ಮತ್ತೆ ಬಂದರೆ ನಿನಗೆ ಮರಣದಂಡನೆ ವಿಧಿಸುವೆನು” ಎಂದನು.

29 ಅದಕ್ಕೆ ಮೋಶೆಯು ಫರೋಹನಿಗೆ, “ಸರಿ, ಇನ್ನು ಮೇಲೆ ನಾನು ನಿನ್ನ ಸನ್ನಿಧಿಗೆ ಬರುವುದೇ ಇಲ್ಲ” ಎಂದು ಹೇಳಿದನು.

ಚೊಚ್ಚಲು ಮಕ್ಕಳ ಮರಣ

11 ಬಳಿಕ ಯೆಹೋವನು ಮೋಶೆಗೆ, “ನಾನು ಫರೋಹನಿಗೂ ಈಜಿಪ್ಟಿಗೂ ಮತ್ತೊಂದು ವಿಪತ್ತನ್ನು ಬರಮಾಡುತ್ತೇನೆ. ಆಗ ಅವನು ನಿಮ್ಮನ್ನು ಈಜಿಪ್ಟಿನಿಂದ ಕಳುಹಿಸುವನು; ನಿಮ್ಮನ್ನು ಬಲವಂತದಿಂದ ಕಳುಹಿಸಿಬಿಡುವನು. ನೀನು ಇಸ್ರೇಲರಿಗೆ ಈ ಸಂದೇಶವನ್ನು ತಿಳಿಸು: ‘ಸ್ತ್ರೀಯರೂ ಪುರುಷರೂ ತಮ್ಮ ನೆರೆಯವರಿಂದ ಬೆಳ್ಳಿಬಂಗಾರಗಳ ವಸ್ತುಗಳನ್ನು ಕೇಳಿಕೊಳ್ಳಬೇಕು.’ ಈಜಿಪ್ಟಿನವರು ನಿಮಗೆ ದಯೆತೋರುವಂತೆ ಯೆಹೋವನು ಅವರನ್ನು ಪ್ರೇರೇಪಿಸುವನು. ಈಜಿಪ್ಟಿನ ಜನರು ಮತ್ತು ಫರೋಹನ ಅಧಿಕಾರಿಗಳು ಮೋಶೆಯನ್ನು ಮಹಾಪುರುಷನೆಂದು ತಿಳಿದುಕೊಂಡಿದ್ದಾರೆ” ಎಂದು ಹೇಳಿದನು.

ಮೋಶೆಯು ಜನರಿಗೆ, “ಯೆಹೋವನು ಹೀಗೆನ್ನುತ್ತಾನೆ: ‘ಇಂದು ಮಧ್ಯರಾತ್ರಿ ನಾನು ಈಜಿಪ್ಟಿನ ಮೂಲಕ ಹಾದುಹೋಗುವೆನು. ಈಜಿಪ್ಟಿನ ಚೊಚ್ಚಲು ಮಕ್ಕಳೆಲ್ಲರೂ ಅಂದರೆ ಫರೋಹನ ಚೊಚ್ಚಲು ಮಗನಿಂದಿಡಿದು ಧಾನ್ಯವನ್ನು ಬೀಸುವ ಸೇವಕಿಯ ಚೊಚ್ಚಲು ಮಗನವರೆಗೂ ಇರುವ ಚೊಚ್ಚಲು ಮಕ್ಕಳೆಲ್ಲರೂ ಸಾಯುವರು. ಇದಲ್ಲದೆ ಚೊಚ್ಚಲು ಪಶುಗಳೂ ಸಾಯುತ್ತವೆ. ಈಜಿಪ್ಟಿನಲ್ಲೆಲ್ಲಾ ದೊಡ್ಡ ಗೋಳಾಟ ಉಂಟಾಗುವುದು, ಅಂಥ ಗೋಳಾಟ ಈವರೆಗೂ ಆಗಿಲ್ಲ; ಮುಂದೆಯೂ ಆಗುವುದಿಲ್ಲ. ಆದರೆ ಇಸ್ರೇಲರಲ್ಲಿ ಯಾರಿಗೂ ಕೇಡಾಗುವುದಿಲ್ಲ. ಒಂದು ನಾಯಿಯೂ ಅವರಿಗೆ ಬೊಗಳುವುದಿಲ್ಲ. ಇಸ್ರೇಲಿನ ಜನರಿಗಾಗಲಿ ಪಶುಗಳಿಗಾಗಲಿ ಕೇಡಾಗುವುದಿಲ್ಲ. ಇಸ್ರೇಲರಿಗೂ ಮತ್ತು ಈಜಿಪ್ಟಿನವರಿಗೂ ನಾನು ವ್ಯತ್ಯಾಸ ಮಾಡಿದ್ದೇನೆಂದು ಆಗ ನೀವು ತಿಳಿದುಕೊಳ್ಳುವಿರಿ. ಆಗ ನಿಮ್ಮ ಈ ಗುಲಾಮರೆಲ್ಲರೂ (ಈಜಿಪ್ಟಿನ ಅಧಿಕಾರಿಗಳು) ನನ್ನ ಬಳಿಗೆ ಬಂದು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸುವರು.’ ಅವರು, ‘ಹೊರಟುಹೋಗಿ, ನಿಮ್ಮ ಜನರೆಲ್ಲರನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿರಿ’ ಎಂದು ಹೇಳುವರು. ಆಗ ನಾನು ಫರೋಹನ ಬಳಿಯಿಂದ ಬಿಟ್ಟುಹೋಗುವೆನು” ಅಂದನು.

ಬಳಿಕ ಯೆಹೋವನು ಮೋಶೆಗೆ, “ಫರೋಹನು ನಿನ್ನ ಮಾತಿಗೆ ಕಿವಿಗೊಡುವುದಿಲ್ಲ. ಯಾಕೆಂದರೆ ನಾನು ನನ್ನ ಮಹಾಶಕ್ತಿಯನ್ನು ಈಜಿಪ್ಟಿನಲ್ಲಿ ತೋರಿಸಬೇಕಾಗಿದೆ” ಅಂದನು. 10 ಯೆಹೋವನು ಫರೋಹನ ಹೃದಯವನ್ನು ಕಠಿಣಗೊಳಿಸಿದ್ದರಿಂದ ಫರೋಹನು ಇಸ್ರೇಲರನ್ನು ಕಳುಹಿಸಿಕೊಡಲಿಲ್ಲ; ಆದ್ದರಿಂದ ಮೋಶೆ ಆರೋನರು ಈ ಅದ್ಭುತಕಾರ್ಯಗಳನ್ನೆಲ್ಲಾ ಮಾಡಿದರು.

ಮತ್ತಾಯ 15:21-39

ಯೆಹೂದ್ಯಳಲ್ಲದ ಸ್ತ್ರೀಗೆ ಯೇಸು ಮಾಡಿದ ಸಹಾಯ

(ಮಾರ್ಕ 7:24-30)

21 ಯೇಸು ಆ ಸ್ಥಳವನ್ನು ಬಿಟ್ಟು, ಟೈರ್ ಮತ್ತು ಸೀದೋನ್‌ಗಳ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. 22 ಆ ಸ್ಥಳದಿಂದ ಕಾನಾನ್ಯಳಾದ ಒಬ್ಬ ಸ್ತ್ರೀ ಯೇಸುವಿನ ಬಳಿಗೆ ಬಂದು, “ಪ್ರಭುವೇ, ದಾವೀದನ ಮಗನೇ, ದಯವಿಟ್ಟು ನನಗೆ ಕರುಣೆ ತೋರು! ನನ್ನ ಮಗಳಲ್ಲಿ ದೆವ್ವ ಸೇರಿಕೊಂಡಿದೆ ಮತ್ತು ಆಕೆ ಬಹಳ ಸಂಕಟಪಡುತ್ತಿದ್ದಾಳೆ” ಎಂದು ಗಟ್ಟಿಯಾಗಿ ಕೂಗಿಕೊಂಡಳು.

23 ಆದರೆ ಯೇಸು ಆ ಸ್ತ್ರೀಗೆ ಉತ್ತರ ಕೊಡಲಿಲ್ಲ. ಆದ್ದರಿಂದ ಶಿಷ್ಯರು ಯೇಸುವಿನ ಬಳಿಗೆ ಬಂದು, “ಆ ಸ್ತ್ರೀಗೆ ಹೊರಟುಹೋಗುವುದಕ್ಕೆ ಹೇಳು. ಆಕೆಯು ಕೂಗಿಕೊಂಡು ನಮ್ಮ ಹಿಂದೆಯೇ ಬರುತ್ತಿದ್ದಾಳೆ” ಎಂದು ಕೇಳಿಕೊಂಡರು.

24 ಯೇಸು, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಮಾತ್ರ ದೇವರು ನನ್ನನ್ನು ಕಳುಹಿಸಿದನು” ಎಂದನು.

25 ಆಗ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಅಡ್ಡಬಿದ್ದು, “ಪ್ರಭುವೇ, ನನಗೆ ಸಹಾಯ ಮಾಡು” ಎಂದು ಕೇಳಿದಳು.

26 ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ” ಎಂದು ಉತ್ತರಕೊಟ್ಟನು.

27 ಆ ಸ್ತ್ರೀಯು, “ಹೌದು ಪ್ರಭುವೇ, ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ಆಹಾರದ ತುಂಡುಗಳನ್ನು ತಿನ್ನುತ್ತವೆಯಲ್ಲಾ” ಎಂದಳು.

28 ಆಗ ಯೇಸು, “ಅಮ್ಮಾ, ನಿನ್ನ ನಂಬಿಕೆ ದೊಡ್ಡದು. ನಿನ್ನ ಕೋರಿಕೆಯನ್ನು ನಾನು ಈಡೇರಿಸುತ್ತೇನೆ” ಎಂದನು. ಆ ಕ್ಷಣದಲ್ಲೇ ಆಕೆಯ ಮಗಳು ಗುಣವಾದಳು.

ಯೇಸುವಿನಿಂದ ಅನೇಕರಿಗೆ ಸ್ವಸ್ಥತೆ

29 ಆಗ ಯೇಸು ಆ ಸ್ಥಳವನ್ನು ಬಿಟ್ಟು ಗಲಿಲಾಯ ಸರೋವರದ ದಡಕ್ಕೆ ಹೋಗಿ ಒಂದು ಬೆಟ್ಟದ ಮೇಲೆ ಕುಳಿತುಕೊಂಡನು.

30 ಜನರು ಗುಂಪುಗುಂಪಾಗಿ ಯೇಸುವಿನ ಬಳಿಗೆ ಬಂದರು. ಅವರು ಅನೇಕ ಬಗೆಯ ಕಾಯಿಲೆಯವರನ್ನು ಕರೆದುತಂದು, ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಅಲ್ಲಿ ಅಂಗವಿಕಲರು, ಕುರುಡರು, ಕುಂಟರು, ಕಿವುಡರು ಮತ್ತು ಇತರ ಅನೇಕ ಜನರಿದ್ದರು. ಆತನು ಇವರನ್ನೆಲ್ಲರನ್ನು ಗುಣಪಡಿಸಿದನು. 31 ಮೂಕರು ಮತ್ತೆ ಮಾತಾಡುವುದನ್ನೂ ಕುಂಟರು ನಡೆದಾಡುವುದನ್ನೂ ಅಂಗವಿಕಲರು ಸ್ವಸ್ಥರಾದದ್ದನ್ನೂ ಕುರುಡರಿಗೆ ಮತ್ತೆ ದೃಷ್ಟಿ ಬಂದದ್ದನ್ನೂ ಕಂಡು ಜನರೆಲ್ಲರೂ ಅತ್ಶಾಶ್ಚರ್ಯಪಟ್ಟು ಇಸ್ರೇಲರ ದೇವರನ್ನು ಕೊಂಡಾಡಿದರು.

ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮಾರ್ಕ 8:1-10)

32 ಯೇಸು ತನ್ನ ಶಿಷ್ಯರನ್ನು ಕರೆದು, “ನಾನು ಈ ಜನರಿಗಾಗಿ ದುಃಖಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಈಗ ಇವರಿಗೆ ಊಟಕ್ಕೆ ಏನೂ ಇಲ್ಲ. ಇವರನ್ನು ಹಸಿವಿನಿಂದ ಕಳುಹಿಸಿಬಿಡುವುದಕ್ಕೆ ನನಗೆ ಮನಸ್ಸಿಲ್ಲ. ಇವರು ಮನೆಗೆ ಹೋಗುತ್ತಿರುವಾಗ ಬಳಲಿಹೋಗಬಹುದು” ಎಂದು ಹೇಳಿದನು.

33 ಶಿಷ್ಯರು ಯೇಸುವಿಗೆ, “ಈ ಜನರೆಲ್ಲರಿಗೂ ಊಟಕ್ಕೆ ಬೇಕಾಗುವಷ್ಟು ರೊಟ್ಟಿ ನಮಗೆ ಎಲ್ಲಿ ಸಿಕ್ಕುತ್ತದೆ? ಇಲ್ಲಿಗೆ ಯಾವ ಊರೂ ಸಮೀಪವಾಗಿಲ್ಲ” ಎಂದು ಹೇಳಿದರು.

34 ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದನು.

ಶಿಷ್ಯರು, “ನಮ್ಮಲ್ಲಿ ಏಳು ರೊಟ್ಟಿಗಳಿವೆ ಮತ್ತು ಕೆಲವು ಸಣ್ಣ ಮೀನುಗಳಿವೆ” ಎಂದರು.

35 ಆಗ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವುದಕ್ಕೆ ಆತನು ಆಜ್ಞಾಪಿಸಿ, 36 ಆ ಏಳು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದನು. ಬಳಿಕ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅವುಗಳನ್ನು ಜನರಿಗೆ ಹಂಚಿದರು. 37 ಜನರೆಲ್ಲರೂ ತಿಂದು ತೃಪ್ತರಾದರು. ಬಳಿಕ ತಿನ್ನಲಾರದೆ ಉಳಿದುಹೋದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. 38 ಅಂದು ಊಟ ಮಾಡಿದ್ದವರಲ್ಲಿ ಗಂಡಸರೇ ಸುಮಾರು ನಾಲ್ಕುಸಾವಿರ ಮಂದಿಯಿದ್ದರು. ಇವರಲ್ಲದೆ ಹೆಂಗಸರು ಮತ್ತು ಮಕ್ಕಳು ಸಹ ಊಟಮಾಡಿದರು. 39 ಬಳಿಕ ಯೇಸು ತಮ್ಮತಮ್ಮ ಮನೆಗಳಿಗೆ ಹೋಗುವಂತೆ ಅವರಿಗೆ ಹೇಳಿ ಕಳುಹಿಸಿದನು. ಅನಂತರ ದೋಣಿಯನ್ನು ಹತ್ತಿ ಮಗದಾನ್ ಎಂಬ ಪ್ರಾಂತ್ಯಕ್ಕೆ ಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International