Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 1-3

ಈಜಿಪ್ಟಿನಲ್ಲಿ ಯಾಕೋಬನ ಕುಟುಂಬ

ಯಾಕೋಬನು (ಇಸ್ರೇಲನು) ತನ್ನ ಗಂಡುಮಕ್ಕಳೊಂದಿಗೆ ಈಜಿಪ್ಟಿಗೆ ಪ್ರಯಾಣ ಮಾಡಿದನು; ತಮ್ಮ ಕುಟುಂಬಗಳೊಡನೆ ಹೋದ ಅವನ ಗಂಡುಮಕ್ಕಳು ಯಾರೆಂದರೆ: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್, ಬೆನ್ಯಾಮೀನ್, ದಾನ್, ನಫ್ತಾಲಿ, ಗಾದ್ ಮತ್ತು ಆಶೇರ್. ಯಾಕೋಬನ ಸಂತತಿಯವರಲ್ಲಿ ಒಟ್ಟು ಎಪ್ಪತ್ತು ಮಂದಿ ಇದ್ದರು. (ಯಾಕೋಬನ ಹನ್ನೆರಡು ಮಂದಿ ಗಂಡುಮಕ್ಕಳಲ್ಲಿ ಒಬ್ಬನಾದ ಯೋಸೇಫನು ಮೊದಲೇ ಈಜಿಪ್ಟಿನಲ್ಲಿದ್ದನು.)

ಬಳಿಕ ಯೋಸೇಫನೂ ಅವನ ಸಹೋದರರೂ ಮತ್ತು ಆ ತಲೆಮಾರಿನ ಜನರೆಲ್ಲರೂ ಸತ್ತುಹೋದರು. ಆದರೆ ಇಸ್ರೇಲರಿಗೆ ಅನೇಕ ಮಕ್ಕಳಿದ್ದರು; ಅವರ ಸಂಖ್ಯೆಯು ಹೆಚ್ಚಾಗತೊಡಗಿತು. ಇಸ್ರೇಲರು ಬಲಗೊಂಡರು; ಈಜಿಪ್ಟಿನಲ್ಲೆಲ್ಲಾ ತುಂಬಿಕೊಂಡರು.

ಇಸ್ರೇಲರಿಗೆ ಹಿಂಸೆ

ಬಳಿಕ ಒಬ್ಬ ಹೊಸ ರಾಜನು ಈಜಿಪ್ಟನ್ನು ಆಳತೊಡಗಿದನು. ಈ ರಾಜನಿಗೆ ಯೋಸೇಫನ ವಿಷಯವಾಗಿ ತಿಳಿದಿರಲಿಲ್ಲ. ಈ ರಾಜನು ತನ್ನ ಜನರಿಗೆ, “ಇಸ್ರೇಲರ ಸಂಖ್ಯೆಯು ಹೆಚ್ಚಾಯಿತು; ಅವರು ನಮಗಿಂತಲೂ ಬಲಿಷ್ಠರಾದರು. 10 ಯುದ್ಧವೇನಾದರೂ ಸಂಭವಿಸಿದರೆ, ಇಸ್ರೇಲರು ನಮ್ಮ ವೈರಿಗಳೊಡನೆ ಸೇರಿಕೊಂಡು ನಮ್ಮನ್ನು ಸೋಲಿಸಿ ನಮ್ಮಿಂದ ತಪ್ಪಿಸಿಕೊಳ್ಳಬಹುದು. ಆದ್ದರಿಂದ ಅವರು ಅಭಿವೃದ್ಧಿಯಾಗದಂತೆ ನಾವು ಉಪಾಯವನ್ನು ಮಾಡೋಣ” ಎಂದು ಹೇಳಿದನು.

11 ಆದ್ದರಿಂದ ಅವರು ಇಸ್ರೇಲರನ್ನು ಹಿಂಸಿಸಲು ತೀರ್ಮಾನಿಸಿದರು. ಇಸ್ರೇಲರಿಂದ ಬಿಟ್ಟೀಕೆಲಸ ಮಾಡಿಸುವುದಕ್ಕಾಗಿ ಅಧಿಕಾರಿಗಳನ್ನು ನೇಮಿಸಿದರು. ಈ ಅಧಿಕಾರಿಗಳು ರಾಜನಿಗಾಗಿ ಪಿತೋಮ್ ಮತ್ತು ರಾಮ್ಸೇಸ್ ಪಟ್ಟಣಗಳನ್ನು ಇಸ್ರೇಲರಿಂದ ಬಲವಂತವಾಗಿ ಕಟ್ಟಿಸಿದರು; ಧಾನ್ಯಗಳನ್ನು ಮತ್ತು ಇನ್ನಿತರ ವಸ್ತುಗಳನ್ನು ಶೇಖರಿಸುವುದಕ್ಕೆ ರಾಜನು ಈ ಪಟ್ಟಣಗಳನ್ನು ಉಪಯೋಗಿಸಿದನು.

12 ಈಜಿಪ್ಟಿನವರು ಇಸ್ರೇಲರಿಂದ ಪ್ರಯಾಸಕರವಾದ ಕೆಲಸಗಳನ್ನು ಬಲವಂತವಾಗಿ ಮಾಡಿಸಿದಷ್ಟೂ ಇಸ್ರೇಲರು ಹೆಚ್ಚು ಹರಡಿಕೊಂಡದ್ದರಿಂದ ಈಜಿಪ್ಟಿನ ಜನರು ಇಸ್ರೇಲರಿಗೆ ಹೆಚ್ಚೆಚ್ಚಾಗಿ ಭಯಪಟ್ಚರು. 13 ಅಲ್ಲದೆ ಇನ್ನೂ ಪ್ರಯಾಸಕರವಾದ ಕೆಲಸವನ್ನು ಬಲವಂತದಿಂದ ಮಾಡಿಸಿಕೊಂಡರು.

14 ಈಜಿಪ್ಟಿನವರು ಇಸ್ರೇಲರ ಜೀವಿತವನ್ನು ಕಷ್ಟಕರವನ್ನಾಗಿ ಮಾಡಿದರು. ಇಸ್ರೇಲರಿಂದ ಇಟ್ಟಿಗೆ, ಗಾರೆ, ಬೇಸಾಯ ಮತ್ತು ಪ್ರತಿಯೊಂದು ಕೆಲಸವನ್ನು ಬಲವಂತವಾಗಿ ಮಾಡಿಸಿಕೊಂಡರು.

ದೇವರನ್ನು ಹಿಂಬಾಲಿಸಿದ ದಾದಿಯರು

15 ಇಸ್ರೇಲಿನ ಸ್ತ್ರೀಯರಿಗೆ ಹೆರಿಗೆ ಮಾಡಿಸಲು ಇಬ್ರಿಯರಾದ ಇಬ್ಬರು ದಾದಿಯರಿದ್ದರು. ಇವರ ಹೆಸರು: ಶಿಫ್ರಾ ಮತ್ತು ಪೂಗಾ. ಈಜಿಪ್ಟಿನ ರಾಜನು ಈ ದಾದಿಯರೊಡನೆ ಮಾತಾಡಿ ಅವರಿಗೆ, 16 “ಇಬ್ರಿಯ ಸ್ತ್ರೀಯರಿಗೆ ನೀವು ಹೆರಿಗೆ ಮಾಡುವಾಗ ಹೆಣ್ಣುಮಗು ಹುಟ್ಟಿದರೆ, ಅದನ್ನು ಉಳಿಸಿರಿ; ಗಂಡುಮಗು ಹುಟ್ಟಿದರೆ ಸಾಯಿಸಿರಿ!” ಎಂದು ಹೇಳಿದನು.

17 ಆದರೆ ಆ ದಾದಿಯರಿಗೆ ದೇವರಲ್ಲಿ ಭಯಭಕ್ತಿ ಇದ್ದಕಾರಣ ಅವರು ರಾಜನ ಆಜ್ಞೆಗೆ ವಿಧೇಯರಾಗದೆ ಗಂಡುಮಕ್ಕಳನ್ನೂ ಉಳಿಸಿದರು.

18 ಈಜಿಪ್ಟಿನ ರಾಜನು ದಾದಿಯರನ್ನು ಕರೆದು, “ನೀವು ಹೀಗೇಕೆ ಮಾಡುತ್ತಿದ್ದೀರಿ? ಗಂಡುಮಕ್ಕಳನ್ನು ನೀವು ಉಳಿಸುತ್ತಿರುವುದೇಕೆ?” ಎಂದು ಕೇಳಿದನು.

19 ದಾದಿಯರು, “ಇಬ್ರಿಯ ಸ್ತ್ರೀಯರು ಈಜಿಪ್ಟಿನ ಸ್ತ್ರೀಯರಿಗಿಂತ ಚುರುಕಾಗಿದ್ದಾರೆ. ನಾವು ಅವರಿಗೆ ಸಹಾಯ ಮಾಡುವುದಕ್ಕಿಂತ ಮೊದಲೇ ಅವರು ಹೆರುತ್ತಾರೆ” ಎಂದು ಹೇಳಿದರು. 20-21 ಈ ದಾದಿಯರು ದೇವರಲ್ಲಿ ಭಯಭಕ್ತಿಯುಳ್ಳವರಾಗಿದ್ದ ಕಾರಣ ಆತನು ಅವರನ್ನೂ ಅವರ ಕುಟುಂಬಗಳನ್ನೂ ಅಭಿವೃದ್ಧಿಪಡಿಸಿದನು.

ಇದಲ್ಲದೆ ಇಸ್ರೇಲರ ಸಂಖ್ಯೆಯು ಅಧಿಕವಾಗಿ ಬೆಳೆಯತೊಡಗಿತು. 22 ಆದ್ದರಿಂದ ಫರೋಹನು ತನ್ನ ಜನರಿಗೆಲ್ಲಾ, “ಇಬ್ರಿಯರಿಗೆ ಹುಟ್ಟುವ ಗಂಡುಕೂಸುಗಳನ್ನೆಲ್ಲಾ ನೈಲ್ ನದಿಗೆ ಎಸೆದುಬಿಡಬೇಕು. ಆದರೆ ಎಲ್ಲಾ ಹೆಣ್ಣುಮಕ್ಕಳು ಬದುಕಲಿ” ಎಂದು ಆಜ್ಞಾಪಿಸಿದನು.

ಮೋಶೆಯ ಬಾಲ್ಯ

ಲೇವಿ ಕುಟುಂಬದ ಒಬ್ಬನು ಲೇವಿ ಕುಟುಂಬಕ್ಕೆ ಸೇರಿದ ಸ್ತ್ರೀಯೊಬ್ಬಳನ್ನು ಮದುವೆಯಾದನು. ಆ ಸ್ತ್ರೀಯು ಗರ್ಭಿಣಿಯಾಗಿ ಗಂಡುಮಗುವಿಗೆ ಜನ್ಮವಿತ್ತಳು. ಮಗುವು ಸುಂದರವಾಗಿತ್ತು. ಆಕೆ ಮೂರು ತಿಂಗಳವರೆಗೆ ಆ ಮಗುವನ್ನು ಬಚ್ಚಿಟ್ಟಳು. ಇನ್ನೂ ಹೆಚ್ಚು ಕಾಲ ಬಚ್ಚಿಡಲಾಗದೆ ಆಕೆ ಒಂದು ಬುಟ್ಟಿಯನ್ನು ಮಾಡಿ ಅದಕ್ಕೆ ರಾಳವನ್ನು ಹಚ್ಚಿದಳು. ಆಕೆ ಮಗುವನ್ನು ಬುಟ್ಟಿಯಲ್ಲಿಟ್ಟು ಆ ಬುಟ್ಟಿಯನ್ನು ನೀರಿನಲ್ಲಿ ಎತ್ತರವಾಗಿ ಬೆಳೆದ ಹುಲ್ಲಿನಲ್ಲಿ ಇಟ್ಟಳು. ಮಗುವಿಗೆ ಏನಾಗುವುದೋ ಎಂದು ನೋಡಲು ಮಗುವಿನ ಅಕ್ಕ ಅಲ್ಲಿದ್ದುಕೊಂಡು ಕಾಯುತ್ತಿದ್ದಳು.

ಅದೇ ಸಮಯದಲ್ಲಿ ಫರೋಹನ ಮಗಳು ಸ್ನಾನ ಮಾಡುವುದಕ್ಕೆ ನದಿಗೆ ಹೋದಳು. ಆಕೆಯ ಸೇವಕಿಯರು ನದಿಯ ದಡದಲ್ಲಿ ತಿರುಗಾಡುತ್ತಿದ್ದರು. ಆಕೆ ಎತ್ತರವಾದ ಹುಲ್ಲಿನ ಮೇಲಿದ್ದ ಬುಟ್ಟಿಯನ್ನು ನೋಡಿ ತನ್ನ ಸೇವಕಿಯರಲ್ಲಿ ಒಬ್ಬಳಿಗೆ, “ಹೋಗಿ ಅದನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು. ರಾಜನ ಮಗಳು ಬುಟ್ಟಿಯನ್ನು ತೆಗೆದು ನೋಡಿದಾಗ ಅಳುತ್ತಿದ್ದ ಗಂಡುಮಗುವನ್ನು ಕಂಡಳು. ಆಕೆಗೆ ಅದರ ಮೇಲೆ ಮರುಕವಾಯಿತು. ಆಕೆ, “ಇದು ಇಬ್ರಿಯರ ಮಗು” ಎಂದು ಹೇಳಿದಳು.

ಮಗುವಿನ ಅಕ್ಕ ಆಕೆಯ ಬಳಿಗೆ ಬಂದು, “ಮಗುವಿಗೆ ಹಾಲು ಕುಡಿಸಲು ಒಬ್ಬ ಇಬ್ರಿಯ ಸ್ತ್ರೀಯನ್ನು ಕರೆದುಕೊಂಡು ಬರಲೇ?” ಎಂದು ಕೇಳಿದಳು.

ಅರಸನ ಮಗಳು, “ಹೋಗಿ, ಕರೆದುಕೊಂಡು ಬಾ” ಅಂದಳು.

ಆದ್ದರಿಂದ ಆ ಹುಡುಗಿ ಹೋಗಿ ಮಗುವಿನ ಸ್ವಂತ ತಾಯಿಯನ್ನು ಕರೆದುಕೊಂಡು ಬಂದಳು.

ರಾಜನ ಮಗಳು ತಾಯಿಗೆ, “ಈ ಮಗುವಿಗೆ ಹಾಲು ಕುಡಿಸಿ ನೋಡಿಕೊ, ನಾನು ನಿನಗೆ ಸಂಬಳ ಕೊಡುವೆನು” ಎಂದು ಹೇಳಿದಳು.

ಆದ್ದರಿಂದ ಆ ಸ್ತ್ರೀ ತನ್ನ ಮಗುವನ್ನು ತೆಗೆದುಕೊಂಡು ಸಾಕಿದಳು. 10 ಮಗುವು ಬೆಳೆಯಿತು. ಸ್ವಲ್ಪಕಾಲದ ನಂತರ ಆ ಸ್ತ್ರೀಯು ಬಾಲಕನನ್ನು ರಾಜನ ಮಗಳ ಬಳಿಗೆ ಕರೆದುಕೊಂಡು ಬಂದಳು. ರಾಜನ ಮಗಳು ಆ ಬಾಲಕನನ್ನು ತನ್ನ ಸ್ವಂತ ಮಗನೆಂದು ಸ್ವೀಕರಿಸಿದಳು. ಆ ಬಾಲಕನನ್ನು ನೀರಿನೊಳಗಿಂದ ಎಳೆದೆನೆಂದು ಆ ಬಾಲಕನಿಗೆ “ಮೋಶೆ” ಎಂದು ಹೆಸರಿಟ್ಟಳು.

ಮೋಶೆ ತನ್ನ ಜನರಿಗೆ ಸಹಾಯ ಮಾಡಿದ್ದು

11 ಮೋಶೆಯು ಬೆಳೆದು ದೊಡ್ಡವನಾದನು. ತನ್ನ ಜನರಾದ ಇಬ್ರಿಯರು ಬಲವಂತಕ್ಕೊಳಗಾಗಿ ಪ್ರಯಾಸಕರವಾದ ಬಿಟ್ಟೀಕೆಲಸಗಳನ್ನು ಮಾಡುವುದನ್ನು ನೋಡಿದನು. ಒಂದು ದಿನ ಈಜಿಪ್ಟಿನವನೊಬ್ಬನು ಇಬ್ರಿಯನೊಬ್ಬನನ್ನು ಹೊಡೆಯುವುದನ್ನು ಕಂಡ 12 ಮೋಶೆಯು ಸುತ್ತಲೂ ನೋಡಿ ಯಾರೂ ಗಮನಿಸುತ್ತಿಲ್ಲವೆಂದು ತಿಳಿದುಕೊಂಡು ಈಜಿಪ್ಟಿನವನನ್ನು ಕೊಂದು ಮರಳಿನಲ್ಲಿ ಮುಚ್ಚಿಟ್ಟನು.

13 ಮರುದಿನ, ಇಬ್ಬರು ಇಬ್ರಿಯರು ಜಗಳವಾಡುತ್ತಿರುವುದನ್ನು ಕಂಡ ಮೋಶೆಯು ಅವರಲ್ಲಿ ತಪ್ಪು ಮಾಡಿದವನಿಗೆ, “ನಿನ್ನ ನೆರೆಯವನಿಗೆ ಯಾಕೆ ಹೊಡೆಯುತ್ತಿರುವೆ?” ಎಂದು ಕೇಳಿದನು.

14 ಅದಕ್ಕೆ ಆ ಮನುಷ್ಯನು, “ನಿನ್ನನ್ನು ನಮ್ಮ ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿದವರು ಯಾರು? ನಿನ್ನೆ ಆ ಈಜಿಪ್ಟಿನವನನ್ನು ಕೊಂದಂತೆ ನನ್ನನ್ನೂ ಕೊಲ್ಲಬೇಕೆಂದಿರುವಿಯೋ?” ಎಂದು ಉತ್ತರಿಸಿದನು.

ಆಗ ಮೋಶೆಗೆ ಭಯವಾಯಿತು. ಮೋಶೆಯು ತನ್ನೊಳಗೆ, “ನಾನು ಮಾಡಿದ್ದು ಪ್ರತಿಯೊಬ್ಬರಿಗೂ ತಿಳಿದಿದೆ” ಅಂದುಕೊಂಡನು.

15 ಮೋಶೆಯು ಮಾಡಿದ್ದು ಫರೋಹನಿಗೂ ತಿಳಿಯಿತು. ಆದ್ದರಿಂದ ಮೋಶೆಯನ್ನು ಕೊಲ್ಲಿಸಲು ಅವನು ತೀರ್ಮಾನಿಸಿದನು. ಆದರೆ ಮೋಶೆ ಫರೋಹನ ಬಳಿಯಿಂದ ಮಿದ್ಯಾನ್ ದೇಶಕ್ಕೆ ಓಡಿಹೋದನು.

ಮಿದ್ಯಾನಿನಲ್ಲಿ ಮೋಶೆ

16 ಮೋಶೆಯು ಮಿದ್ಯಾನ್ಯರ ಒಂದು ಬಾವಿಯ ಬಳಿ ಕುಳಿತುಕೊಂಡಿದ್ದನು. ಮಿದ್ಯಾನ್ಯರ ಒಬ್ಬ ಪುರೋಹಿತನಿಗೆ ಏಳು ಮಂದಿ ಹೆಣ್ಣುಮಕ್ಕಳಿದ್ದರು. ಆ ಹುಡುಗಿಯರು ಬಂದು ತಮ್ಮ ತಂದೆಯ ಕುರಿಗಳಿಗೆ ನೀರನ್ನು ಕುಡಿಸಲು ಬಾವಿಯಿಂದ ನೀರು ಸೇದಿ ತೊಟ್ಟಿಗಳಲ್ಲಿ ಹಾಕುತ್ತಿದ್ದರು. 17 ಅಷ್ಟರಲ್ಲಿ ಅಲ್ಲಿಗೆ ಬಂದ ಕೆಲವು ಕುರುಬರು ನೀರು ಸೇದಲು ಅವರಿಗೆ ಅಡ್ಡಿಮಾಡಿದ್ದರಿಂದ ಮೋಶೆಯು ಅವರಿಗೆ ಸಹಾಯಕನಾಗಿ ಬಂದು ಅವರ ಕುರಿಗಳಿಗೆ ನೀರು ಕುಡಿಸಿದನು.

18 ಬಳಿಕ ಅವರು ತಮ್ಮ ತಂದೆಯಾದ ರೆಗೂವೇಲನ ಬಳಿಗೆ ಮರಳಿಹೋದರು. ಅವರ ತಂದೆ, “ಈ ದಿನ ನೀವು ಬಹುಬೇಗನೆ ಮನೆಗೆ ಬಂದಿದ್ದೀರಲ್ಲಾ!” ಎಂದು ಕೇಳಿದನು.

19 ಆ ಹುಡುಗಿಯರು, “ಕುರುಬರು ನಮಗೆ ಅಡ್ಡಿ ಮಾಡಿದಾಗ ಈಜಿಪ್ಟಿನವನೊಬ್ಬನು ನಮ್ಮ ನೆರವಿಗೆ ಬಂದು ನಮಗೂ ನಮ್ಮ ಕುರಿಗಳಿಗೂ ನೀರು ಸೇದಿ ಕೊಟ್ಟನು” ಎಂದು ಉತ್ತರಿಸಿದರು.

20 ಅದಕ್ಕೆ ರೆಗೂವೇಲನು ತನ್ನ ಹೆಣ್ಣುಮಕ್ಕಳಿಗೆ, “ಆ ಮನುಷ್ಯನು ಎಲ್ಲಿದ್ದಾನೆ? ಅವನನ್ನು ನೀವು ಯಾಕೆ ಬಿಟ್ಟುಬಂದಿರಿ? ಅವನನ್ನು ಕರೆಯಿರಿ; ಅವನು ನಮ್ಮೊಂದಿಗೆ ಊಟಮಾಡಲಿ” ಎಂದು ಹೇಳಿದನು.

21 ಮೋಶೆಯು ರೆಗೂವೇಲನೊಂದಿಗೆ ವಾಸಮಾಡಲು ಇಷ್ಟಪಟ್ಟನು; ರೆಗೂವೇಲನು ತನ್ನ ಮಗಳಾದ ಚಿಪ್ಪೋರಳನ್ನು ಮೋಶೆಗೆ ಮದುವೆ ಮಾಡಿಸಿದನು. 22 ಚಿಪ್ಪೋರಳು ಗಂಡುಮಗುವಿಗೆ ಜನ್ಮವಿತ್ತಳು. ಮೋಶೆಯು ಅನ್ಯದೇಶದಲ್ಲಿ ಪ್ರವಾಸಿಯಾಗಿದ್ದ ಕಾರಣ ಆ ಮಗುವಿಗೆ “ಗೇರ್ಷೋಮ್” ಎಂದು ಹೆಸರಿಟ್ಟನು.

ಇಸ್ರೇಲರಿಗೆ ಸಹಾಯ ಮಾಡಲು ದೇವರ ನಿರ್ಧಾರ

23 ಸ್ವಲ್ಪಕಾಲದ ಬಳಿಕ ಈಜಿಪ್ಟಿನ ರಾಜನೂ ಸತ್ತುಹೋದನು. ಇಸ್ರೇಲರು ತಾವು ಮಾಡಬೇಕಾದ ಪ್ರಯಾಸಕರವಾದ ಬಿಟ್ಟೀಕೆಲಸದಿಂದ ನಿಟ್ಟುಸಿರುಬಿಡುತ್ತಾ ಗೋಳಾಡುತ್ತಾ ಇದ್ದರು. ಅವರ ಗೋಳು ದೇವರಿಗೆ ಮುಟ್ಟಿತು. 24 ದೇವರು ಅವರ ನರಳಾಟವನ್ನು ಕೇಳಿ ತಾನು ಅಬ್ರಹಾಮನೊಂದಿಗೂ ಇಸಾಕನೊಂದಿಗೂ ಯಾಕೋಬನೊಂದಿಗೂ ಮಾಡಿದ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಂಡನು. 25 ದೇವರು ಇಸ್ರೇಲರ ಸಂಕಟಗಳನ್ನು ನೋಡಿ ಅವರಿಗೆ ಸಹಾಯಮಾಡಲು ನಿಶ್ಚಯಿಸಿಕೊಂಡನು.

ಉರಿಯುವ ಪೊದೆ

ಮೋಶೆಯ ಮಾವನ ಹೆಸರು ಇತ್ರೋನನು. ಇತ್ರೋನನು ಮಿದ್ಯಾನಿನ ಯಾಜಕನಾಗಿದ್ದನು. ಮೋಶೆಯು ಇತ್ರೋನನ ಕುರಿಗಳಿಗೆ ಕುರುಬನಾಗಿದ್ದನು. ಒಂದು ದಿನ, ಮೋಶೆಯು ಕುರಿಗಳನ್ನು ಮರುಭೂಮಿಯ ಪಶ್ಚಿಮಭಾಗಕ್ಕೆ ನಡೆಸಿಕೊಂಡು ದೇವರ ಬೆಟ್ಟವೆಂದು ಕರೆಯಲ್ಪಡುವ ಸೀನಾಯಿ ಎಂಬ ಹೋರೇಬ್ ಬೆಟ್ಟಕ್ಕೆ ಹೋದನು. ಆ ಬೆಟ್ಟದಲ್ಲಿ ಯೆಹೋವನ ದೂತನು ಮೋಶೆಗೆ ಉರಿಯುವ ಪೊದೆಯಲ್ಲಿ ಕಾಣಿಸಿಕೊಂಡನು.

ಪೊದೆಯು ಉರಿಯುತ್ತಿದ್ದರೂ ಸುಟ್ಟು ಹೋಗದಿರುವುದನ್ನು ಮೋಶೆ ಗಮನಿಸಿದನು. ಪೊದೆಯು ಉರಿಯುತ್ತಿದ್ದರೂ ಸುಟ್ಟುಹೋಗದಿರುವುದಕ್ಕೆ ಕಾರಣವೇನೆಂದು ತಿಳಿದುಕೊಳ್ಳಲು ಮೋಶೆಯು ಪೊದೆಯ ಸಮೀಪಕ್ಕೆ ಹೋಗತೊಡಗಿದನು.

ಮೋಶೆಯು ಪೊದೆಯನ್ನು ನೋಡಲು ಬರುತ್ತಿರುವುದನ್ನು ಯೆಹೋವನು ನೋಡಿದನು. ದೇವರು ಆ ಪೊದೆಯೊಳಗಿಂದ, “ಮೋಶೆ, ಮೋಶೆ!” ಎಂದು ಕರೆದನು.

ಅದಕ್ಕೆ ಮೋಶೆ, “ಇಗೋ ಇದ್ದೇನೆ” ಅಂದನು.

ಆಗ ಯೆಹೋವನು, “ಇನ್ನೂ ಹತ್ತಿರ ಬರಬೇಡ. ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು. ಏಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿಯಾಗಿದೆ. ನಾನು ನಿನ್ನ ಪೂರ್ವಿಕರ ದೇವರು, ನಾನು ಅಬ್ರಹಾಮನ ದೇವರು, ನಾನು ಇಸಾಕನ ದೇವರು, ನಾನು ಯಾಕೋಬನ ದೇವರು” ಎಂದು ಹೇಳಿದನು.

ದೇವರನ್ನು ನೋಡುವುದಕ್ಕೆ ಭಯಪಟ್ಟು ಮೋಶೆ ತನ್ನ ಮುಖವನ್ನು ಮುಚ್ಚಿಕೊಂಡನು.

ಆಗ ಯೆಹೋವನು, “ನನ್ನ ಜನರು ಈಜಿಪ್ಟಿನಲ್ಲಿ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿದ್ದೇನೆ. ಅಧಿಕಾರಿಗಳು ಅವರನ್ನು ಹಿಂಸಿಸುವಾಗ ಅವರು ಇಟ್ಟ ಮೊರೆಯನ್ನು ಕೇಳಿದ್ದೇನೆ. ಅವರ ದುಃಖವನ್ನೆಲ್ಲಾ ಬಲ್ಲೆನು. ಈಗ ನಾನು ಇಳಿದುಹೋಗಿ ಈಜಿಪ್ಟಿನವರಿಂದ ನನ್ನ ಜನರನ್ನು ರಕ್ಷಿಸುವೆನು. ನಾನು ಅವರನ್ನು ಆ ದೇಶದಿಂದ ಬಿಡುಗಡೆ ಮಾಡಿ ಒಳ್ಳೆಯದಾದ ಮತ್ತು ವಿಶಾಲವಾದ ದೇಶಕ್ಕೆ ಅವರನ್ನು ನಡೆಸುವೆನು. ಅದು ಸಮೃದ್ಧಿಕರವಾದ ದೇಶ.[a] ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸವಾಗಿರುವ ದೇಶ ಅದಾಗಿದೆ. ನಾನು ಇಸ್ರೇಲರ ಮೊರೆಯನ್ನು ಕೇಳಿದ್ದೇನೆ. ಈಜಿಪ್ಟಿನವರು ಅವರಿಗೆ ಕೊಡುವ ಹಿಂಸೆಯನ್ನು ನೋಡಿದ್ದೇನೆ. 10 ಆದ್ದರಿಂದ ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತಿದ್ದೇನೆ. ಹೋಗು! ನನ್ನ ಜನರಾದ ಇಸ್ರೇಲರನ್ನು ಈಜಿಪ್ಟಿನಿಂದ ಬಿಡುಗಡೆ ಮಾಡು!” ಎಂದು ಹೇಳಿದನು.

11 ಅದಕ್ಕೆ ಮೋಶೆಯು ಯೆಹೋವನಿಗೆ, “ನಾನು ಮಹಾ ವ್ಯಕ್ತಿಯೇನಲ್ಲ! ಫರೋಹನ ಸನ್ನಿಧಾನಕ್ಕೆ ಹೋಗುವುದಕ್ಕೂ ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬರುವುದಕ್ಕೂ ನಾನೆಷ್ಟರವನು?” ಎಂದು ಹೇಳಿದನು.

12 ಅದಕ್ಕೆ ದೇವರು “ನೀನು ಇದನ್ನು ಮಾಡಬಹುದು; ಯಾಕೆಂದರೆ ನಾನೇ ನಿನ್ನೊಂದಿಗೆ ಇರುವೆನು. ನಿನ್ನನ್ನು ಕಳುಹಿಸಿದವನು ನಾನೇ ಎಂಬುದಕ್ಕೆ ಇದೇ ಸಾಕ್ಷಿಯಾಗಿರುವುದು. ನೀನು ಇಸ್ರೇಲರನ್ನು ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಮೇಲೆ, ನೀವು ಈ ಬೆಟ್ಟದ ಬಳಿ ನನ್ನನ್ನು ಆರಾಧಿಸುವಿರಿ” ಎಂದು ಹೇಳಿದನು.

13 ಆಗ ಮೋಶೆಯು ದೇವರಿಗೆ, “ನಾನು ಇಸ್ರೇಲರ ಬಳಿಗೆ ಹೋಗಿ ‘ನಿಮ್ಮ ಪೂರ್ವಿಕರ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ’ ಎಂದು ಹೇಳಿದರೆ, ಅವರು ‘ಆತನ ಹೆಸರೇನು?’ ಎಂದು ಕೇಳುವರು. ಆಗ ನಾನು ಅವರಿಗೆ ಏನು ಹೇಳಬೇಕು?” ಎಂದು ಕೇಳಿದನು.

14 ಆಗ ದೇವರು ಮೋಶೆಗೆ, “ನಾನು ‘ಇರುವಾತನೇ’ ಆಗಿದ್ದೇನೆ. ನೀನು ಇಸ್ರೇಲರ ಬಳಿಗೆ ಹೋದಾಗ ‘ಇರುವಾತನೇ’ ಎಂಬವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳು” ಅಂದನು. 15 ಇದಲ್ಲದೆ ದೇವರು ಮೋಶೆಗೆ, “ನೀನು ಇಸ್ರೇಲರಿಗೆ, ‘ನಿಮ್ಮ ಪೂರ್ವಿಕರ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಯೆಹೋವನು ನಿಮ್ಮಲ್ಲಿಗೆ ನನ್ನನ್ನು ಕಳುಹಿಸಿದ್ದಾನೆ. ಇದೇ ನನ್ನ ಶಾಶ್ವತವಾದ ಹೆಸರು; ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ಹೆಸರು ಇದೇ ಎಂದು ಹೇಳಬೇಕು’” ಅಂದನು.

16 ಇದಲ್ಲದೆ ಯೆಹೋವನು ಅವನಿಗೆ, “ನೀನು ಹೋಗಿ ಇಸ್ರೇಲರ ನಾಯಕರನ್ನು ಒಟ್ಟುಗೂಡಿಸಿ ಅವರಿಗೆ, ‘ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನನಗೆ ಕಾಣಿಸಿಕೊಂಡನು. ಅಬ್ರಹಾಮನ, ಇಸಾಕನ, ಯಾಕೋಬನ ದೇವರು ಹೇಳುವುದೇನೆಂದರೆ, ಈಜಿಪ್ಟಿನಲ್ಲಿ ನಿಮಗೆ ಸಂಭವಿಸಿದವುಗಳನ್ನು ನಾನು ಲಕ್ಷ್ಯವಿಟ್ಟು ನೋಡಿದ್ದೇನೆ. 17 ಈಜಿಪ್ಟಿನಲ್ಲಿ ನೀವು ಅನುಭವಿಸುತ್ತಿರುವ ಸಂಕಟಗಳಿಂದ ಬಿಡಿಸಬೇಕೆಂದು ತೀರ್ಮಾನಿಸಿದ್ದೇನೆ. ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು ಮತ್ತು ಯೆಬೂಸಿಯರು ವಾಸವಾಗಿರುವ ಸಮೃದ್ಧಿಕರವಾದ ದೇಶಕ್ಕೆ ನಾನು ನಿಮ್ಮನ್ನು ನಡೆಸುವೆನು!’ ಎಂದು ಹೇಳು.

18 “ಹಿರಿಯರು ನಿನಗೆ ಕಿವಿಗೊಡುವರು. ಆಗ ನೀನು ಮತ್ತು ಹಿರಿಯರು ಈಜಿಪ್ಟಿನ ರಾಜನ ಬಳಿಗೆ ಹೋಗಿ, ‘ಇಬ್ರಿಯರ ದೇವರಾದ ಯೆಹೋವನು ನಮಗೆ ಕಾಣಿಸಿಕೊಂಡನು. ಆದ್ದರಿಂದ ನಾವು ಮರುಭೂಮಿಯಲ್ಲಿ ಮೂರು ದಿನ ಪ್ರಯಾಣ ಮಾಡಿ ನಮ್ಮ ದೇವರಾದ ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಬೇಕು’ ಎಂದು ಹೇಳಿರಿ.

19 “ಆದರೆ ಈಜಿಪ್ಟಿನ ರಾಜನು ನಿಮ್ಮನ್ನು ಹೋಗಗೊಡಿಸುವುದಿಲ್ಲ ಎಂಬುದು ನನಗೆ ಗೊತ್ತಿದೆ. 20 ಆದ್ದರಿಂದ ನಾನು ಕೈಚಾಚಿ ಈಜಿಪ್ಟಿನ ವಿರುದ್ಧ ಮಹತ್ಕಾರ್ಯಗಳನ್ನು ಮಾಡಿ ಅನೇಕ ವಿಧದಲ್ಲಿ ಅದನ್ನು ಬಾಧಿಸುವೆನು. ಆಗ ಅವನು ನಿಮ್ಮನ್ನು ಹೋಗಗೊಡಿಸುವನು. 21 ಈಜಿಪ್ಟಿನ ಜನರು ಇಸ್ರೇಲರಿಗೆ ದಯೆ ತೋರುವಂತೆ ಮಾಡುವೆನು. ಇಸ್ರೇಲರು ಈಜಿಪ್ಟನ್ನು ಬಿಟ್ಟು ಹೊರಡುವಾಗ ಈಜಿಪ್ಟಿನವರು ಅವರಿಗೆ ಉಡುಗೊರೆಗಳನ್ನು ಕೊಡುವರು.

22 “ಪ್ರತಿಯೊಬ್ಬ ಇಬ್ರಿಯ ಸ್ತ್ರೀಯು ಈಜಿಪ್ಟಿನ ನೆರೆಯವರನ್ನಾಗಲಿ ಅಥವಾ ತನ್ನ ಮನೆಯಲ್ಲಿ ವಾಸಿಸುತ್ತಿರುವ ಯಾವುದೇ ಸ್ತ್ರೀಯನ್ನಾಗಲಿ ಕೇಳಿದರೆ ಅವರು ಆಕೆಗೆ ಉಡುಗೊರೆಗಳನ್ನು ಕೊಡುವರು. ನಿನ್ನ ಜನರು ಬೆಳ್ಳಿಬಂಗಾರಗಳನ್ನು, ಶ್ರೇಷ್ಠವಾದ ಬಟ್ಟೆಗಳನ್ನು ಪಡೆಯುವರು. ನೀವು ಈಜಿಪ್ಟನ್ನು ಬಿಡುವಾಗ ಆ ಉಡುಗೊರೆಗಳನ್ನು ನಿಮ್ಮ ಮಕ್ಕಳಿಗೆ ತೊಡಿಸುವಿರಿ. ಈ ರೀತಿಯಲ್ಲಿ ನೀವು ಈಜಿಪ್ಟಿನವರ ಐಶ್ವರ್ಯವನ್ನು ತೆಗೆದುಕೊಂಡು ಹೋಗುವಿರಿ” ಅಂದನು.

ಮತ್ತಾಯ 14:1-21

ಯೇಸುವಿನ ಕುರಿತು ಹೆರೋದನ ಅಭಿಪ್ರಾಯ

(ಮಾರ್ಕ 6:14-29; ಲೂಕ 9:7-9)

14 ಆ ಕಾಲದಲ್ಲಿ ಹೆರೋದನು ಗಲಿಲಾಯದಲ್ಲಿ ಆಳುತ್ತಿದ್ದನು. ಜನರು ಯೇಸುವಿನ ಕುರಿತು ಹೇಳುತ್ತಿದ್ದ ಸಂಗತಿಗಳೆಲ್ಲ ಅವನಿಗೆ ತಿಳಿಯಿತು. ಆದ್ದರಿಂದ ಹೆರೋದನು ತನ್ನ ಸೇವಕರಿಗೆ, “ನಿಜವಾಗಿಯೂ ಯೇಸುವೇ ಸ್ನಾನಿಕ ಯೋಹಾನನು. ಅವನು ಮತ್ತೆ ಜೀವಂತವಾಗಿ ಬಂದಿದ್ದಾನೆ. ಆದಕಾರಣವೇ ಅವನು ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದನು.

ಸ್ನಾನಿಕ ಯೋಹಾನನು ಕೊಲ್ಲಲ್ಪಟ್ಟ ರೀತಿ

ಈ ಸಮಯಕ್ಕೆ ಮೊದಲೇ ಹೆರೋದ್ಯಳ ನಿಮಿತ್ತವಾಗಿ ಹೆರೋದನು ಯೋಹಾನನನ್ನು ಸರಪಣಿಗಳಿಂದ ಬಂಧಿಸಿ, ಸೆರೆಮನೆಯಲ್ಲಿ ಹಾಕಿಸಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಹೆಂಡತಿ. ಯೋಹಾನನು ಹೆರೋದನಿಗೆ, “ಹೆರೋದ್ಯಳನ್ನು ನೀನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದುದೇ ಈ ಸೆರೆವಾಸಕ್ಕೆ ಕಾರಣ. ಹೆರೋದನು ಯೋಹಾನನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟು ಕೊಲ್ಲಿಸಿರಲಿಲ್ಲ. ಜನರು ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರು.

ಹೆರೋದನ ಹುಟ್ಟುಹಬ್ಬದ ದಿನದಂದು ಹೆರೋದ್ಯಳ ಮಗಳು ಹೆರೋದನ ಮತ್ತು ಅವನ ಅತಿಥಿಗಳ ಮುಂದೆ ನರ್ತಿಸಿದಳು. ಹೆರೋದನು ಅವಳನ್ನು ಬಹಳ ಮೆಚ್ಚಿಕೊಂಡನು. ಆದ್ದರಿಂದ ಅವನು, “ನಿನಗೆ ಏನು ಬೇಕಾದರೂ ನಾನು ಕೊಡುತ್ತೇನೆ” ಎಂದು ಅವಳಿಗೆ ವಾಗ್ದಾನ ಮಾಡಿದನು. ಏನು ಕೇಳಿಕೊಳ್ಳಬೇಕೆಂದು ಹೆರೋದ್ಯಳು ತನ್ನ ಮಗಳಿಗೆ ಹೇಳಿಕೊಟ್ಟಳು. ಆದ್ದರಿಂದ ಅವಳು ಹೆರೋದನಿಗೆ, “ಸ್ನಾನಿಕ ಯೋಹಾನನ ತಲೆಯನ್ನು ಇಲ್ಲಿಯೇ ಈ ತಟ್ಟೆಯ ಮೇಲೆಯೇ ನನಗೆ ಕೊಡು” ಎಂದು ಹೇಳಿದಳು.

ರಾಜ ಹೆರೋದನು ಬಹಳವಾಗಿ ದುಃಖಪಟ್ಟನು. ಆದರೆ ಏನು ಕೇಳಿದರೂ ಕೊಡುತ್ತೇನೆಂದು ಅವನು ಅವಳಿಗೆ ವಾಗ್ದಾನ ಮಾಡಿದ್ದನು. ಹೆರೋದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದವರು ಸಹ ಆ ವಾಗ್ದಾನವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ಕೊಡುವುದಕ್ಕೆ ಹೆರೋದನು ಅಪ್ಪಣೆಕೊಟ್ಟನು. 10 ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿಕೊಂಡು ಬರಲು ಅವನು ಸೈನಿಕರನ್ನು ಕಳುಹಿಸಿಕೊಟ್ಟನು. 11 ಅವರು ಯೋಹಾನನ ತಲೆಯನ್ನು ತಟ್ಟೆಯ ಮೇಲೆ ತಂದು ಅವಳಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯಾದ ಹೆರೋದ್ಯಳ ಬಳಿಗೆ ತೆಗೆದುಕೊಂಡು ಹೋದಳು. 12 ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. ಬಳಿಕ ಅವರು ಯೇಸುವಿನ ಬಳಿಗೆ ಹೋಗಿ ಸಂಭವಿಸಿದ್ದನ್ನೆಲ್ಲ ತಿಳಿಸಿದರು.

ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮಾರ್ಕ 6:30-44; ಲೂಕ 9:10-17; ಯೋಹಾನ 6:1-14)

13 ಯೋಹಾನನಿಗೆ ಸಂಭವಿಸಿದ್ದನ್ನು ಕೇಳಿದಾಗ ಯೇಸು ದೋಣಿಹತ್ತಿ ನಿರ್ಜನವಾದ ಸ್ಥಳಕ್ಕೆ ಒಬ್ಬನೇ ಹೋದನು. ಆದರೆ ಈ ಸುದ್ದಿ ಜನರಿಗೆ ತಿಳಿಯಿತು. ಆದ್ದರಿಂದ ಅವರು ತಮ್ಮ ಊರುಗಳನ್ನು ಬಿಟ್ಟು ಕಾಲುನಡಿಗೆಯಲ್ಲೇ ಆತನಿದ್ದ ಸ್ಥಳಕ್ಕೆ ಹೋದರು. 14 ಯೇಸು ಅಲ್ಲಿಗೆ ಬಂದಾಗ, ಜನರು ಗುಂಪುಗುಂಪಾಗಿ ನೆರೆದಿರುವುದನ್ನು ಕಂಡು ಅವರಿಗಾಗಿ ದುಃಖಪಟ್ಟು ಕಾಯಿಲೆಯವರನ್ನು ಗುಣಪಡಿಸಿದನು.

15 ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಜನರು ವಾಸಿಸುವುದಿಲ್ಲ. ಈಗಾಗಲೇ ಸಮಯವಾಗಿದೆ. ಜನರು ತಮಗಾಗಿ ಆಹಾರವನ್ನು ಕೊಂಡುಕೊಳ್ಳಲು ಅವರನ್ನು ಊರುಗಳಿಗೆ ಕಳುಹಿಸಿಬಿಡು” ಎಂದು ಹೇಳಿದರು.

16 ಯೇಸು, “ಜನರು ಹೋಗುವುದು ಬೇಡ. ನೀವೇ ಅವರಿಗೆ ಸ್ವಲ್ಪ ಊಟವನ್ನು ಕೊಡಿ” ಎಂದು ಹೇಳಿದನು.

17 ಆಗ ಶಿಷ್ಯರು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ” ಎಂದು ಉತ್ತರಕೊಟ್ಟರು.

18 ಯೇಸು, “ಆ ರೊಟ್ಟಿ ಮತ್ತು ಮೀನುಗಳನ್ನು ನನ್ನ ಬಳಿಗೆ ತನ್ನಿರಿ” ಅಂದನು. 19 ಬಳಿಕ ಆತನು ಜನರಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು, ಆಕಾಶದ ಕಡೆಗೆ ನೋಡಿ, ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ರೊಟ್ಟಿಯನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರು ರೊಟ್ಟಿಯನ್ನು ಜನರಿಗೆ ಹಂಚಿದರು. 20 ಜನರೆಲ್ಲರೂ ತಿಂದು ತೃಪ್ತರಾದರು. ಜನರು ತಿಂದು ಮುಗಿಸಿದ ನಂತರ, ತಿನ್ನಲಾರದೆ ಉಳಿಸಿದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು. 21 ಊಟ ಮಾಡಿದವರಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದುಸಾವಿರ ಇದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International