Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮಾರ್ಕ 15:1-25

ಪಿಲಾತನಿಂದ ಯೇಸುವಿನ ವಿಚಾರಣೆ

(ಮತ್ತಾಯ 27:1-2,11-14; ಲೂಕ 23:1-5; ಯೋಹಾನ 18:28-38)

15 ಮುಂಜಾನೆ ನಸುಕಿನಲ್ಲೇ, ಮಹಾಯಾಜಕರು, ಹಿರಿಯ ಯೆಹೂದ್ಯನಾಯಕರು ಧರ್ಮೋಪದೇಶಕರು ಮತ್ತು ಯೆಹೂದ್ಯ ಸಮಿತಿಯವರು ಸಭೆಸೇರಿ ಯೇಸುವಿಗೆ ಮಾಡಬೇಕಾದದ್ದನ್ನು ನಿರ್ಧರಿಸಿದರು. ಅವರು ಯೇಸುವನ್ನು ಬಂಧಿಸಿ, ರಾಜ್ಯಪಾಲನಾದ ಪಿಲಾತನ ಬಳಿಗೆ ಕರೆದುಕೊಂಡು ಹೋಗಿ ಅವನಿಗೆ ಒಪ್ಪಿಸಿದರು.

ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು.

ಯೇಸು, “ಹೌದು, ನೀನು ಹೇಳಿದ್ದು ಸರಿ” ಎಂದು ಉತ್ತರಿಸಿದನು.

ಮಹಾಯಾಜಕರು ಯೇಸುವಿನ ಮೇಲೆ ಅನೇಕ ತಪ್ಪುಗಳನ್ನು ಹೊರಿಸಿದರು. ಆದ್ದರಿಂದ ಪಿಲಾತನು ಯೇಸುವಿಗೆ ಮತ್ತೊಮ್ಮೆ, “ಈ ಜನರು ನಿನ್ನ ಮೇಲೆ ಅನೇಕ ಅಪರಾಧಗಳನ್ನು ಹೊರಿಸುತ್ತಿದ್ದರೂ ನೀನು ಏಕೆ ಉತ್ತರಿಸುವುದಿಲ್ಲ?” ಎಂದು ಕೇಳಿದನು.

ಆದರೆ ಯೇಸು ಮೌನವಾಗಿದ್ದನು. ಪಿಲಾತನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು.

ಯೇಸುವನ್ನು ಬಿಡಿಸಲು ಪಿಲಾತನು ಮಾಡಿದ ವಿಫಲ ಪ್ರಯತ್ನ

(ಮತ್ತಾಯ 27:15-31; ಲೂಕ 23:13-25; ಯೋಹಾನ 18:39–19:16)

ಪ್ರತಿ ವರ್ಷವೂ ಪಸ್ಕಹಬ್ಬದ ಸಮಯದಲ್ಲಿ ಜನರು ಬಯಸಿದ ಕೈದಿಯನ್ನು ರಾಜ್ಯಪಾಲನು ಸೆರೆಮನೆಯಿಂದ ಬಿಡುಗಡೆ ಮಾಡುತ್ತಿದ್ದನು. ಆ ಸಮಯದಲ್ಲಿ ಬರಬ್ಬ ಎಂಬವನು ದಂಗೆಕೋರರೊಂದಿಗೆ ಸೆರೆಮನೆಯಲ್ಲಿದ್ದನು. ಈ ದಂಗೆಕೋರರು ಒಂದು ಗಲಭೆಯ ಸಮಯದಲ್ಲಿ ಕೊಲೆ ಮಾಡಿದ ಆಪಾದನೆಗೆ ಗುರಿಯಾಗಿದ್ದರು.

ಜನರು ಪಿಲಾತನ ಬಳಿಗೆ, ಎಂದಿನಂತೆ ತಮಗಾಗಿ ಒಬ್ಬ ಕೈದಿಯನ್ನು ಬಿಡುಗಡೆ ಮಾಡಬೇಕೆಂದು ಕೇಳಿದರು. ಪಿಲಾತನು ಜನರಿಗೆ, “ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ಬಯಸುತ್ತೀರಾ?” ಎಂದು ಕೇಳಿದನು. 10 ಮಹಾಯಾಜಕರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ಬಂಧಿಸಿ ತನಗೆ ಒಪ್ಪಿಸಿದ್ದಾರೆಂಬುದು ಪಿಲಾತನಿಗೆ ತಿಳಿದಿತ್ತು. 11 ಆದರೆ ಯೇಸುವನ್ನು ಬಿಡುಗಡೆ ಮಾಡದೆ ಬರಬ್ಬನನ್ನು ಬಿಡುಗಡೆ ಮಾಡುವಂತೆ ಪಿಲಾತನನ್ನು ಕೇಳಿಕೊಳ್ಳಬೇಕೆಂದು ಮಹಾಯಾಜಕರು ಜನರನ್ನು ಪ್ರೇರೇಪಿಸಿದರು.

12 ಪಿಲಾತನು ಜನರಿಗೆ ಮತ್ತೆ “ಯೆಹೂದ್ಯರ ರಾಜನೆಂದು ನೀವು ಕರೆಯುವ ಈ ಮನುಷ್ಯನನ್ನು ನಾನೇನು ಮಾಡಲಿ?” ಎಂದು ಕೇಳಿದನು.

13 ಜನರು, “ಅವನನ್ನು ಶಿಲುಬೆಗೇರಿಸು!” ಎಂದು ಆರ್ಭಟಿಸಿದರು.

14 ಪಿಲಾತನು, “ಏಕೆ? ಅವನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಿದನು.

ಅದಕ್ಕೆ ಜನರು, “ಅವನನ್ನು ಶಿಲುಬೆಗೇರಿಸು!” ಎಂದು ಜೋರಾಗಿ ಆರ್ಭಟಿಸಿದರು.

15 ಪಿಲಾತನು ಜನರನ್ನು ಸಂತೋಷಪಡಿಸಲು ಬಯಸಿ ಅವರಿಗಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು ಮತ್ತು ಕೊರಡೆಗಳಿಂದ ಹೊಡೆದು ಶಿಲುಬೆಗೇರಿಸುವುದಕ್ಕಾಗಿ ಯೇಸುವನ್ನು ಸೈನಿಕರಿಗೆ ಒಪ್ಪಿಸಿದನು.

16 ಪಿಲಾತನ ಸೈನಿಕರು ಯೇಸುವನ್ನು ರಾಜಭವನದ ಅಂಗಳದೊಳಕ್ಕೆ ಕೊಂಡೊಯ್ದು ಇತರ ಸೈನಿಕರನ್ನೆಲ್ಲಾ ಒಟ್ಟಿಗೆ ಕರೆದರು. 17 ಸೈನಿಕರು ಯೇಸುವಿನ ಮೇಲೆ ಕಡುಕೆಂಪಾದ ನಿಲುವಂಗಿಯನ್ನು ಹಾಕಿ ಮುಳ್ಳಿನ ಬಳ್ಳಿಗಳಿಂದ ಒಂದು ಕಿರೀಟ ಮಾಡಿ ಯೇಸುವಿನ ತಲೆಯ ಮೇಲೆ ಇಟ್ಟರು. 18 ನಂತರ ಅವರು ಯೇಸುವಿಗೆ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ!” ಎಂದರು. 19 ಸೈನಿಕರು ಆತನ ತಲೆಯ ಮೇಲೆ ಅನೇಕ ಸಾರಿ ಬೆತ್ತದಿಂದ ಹೊಡೆದು ಆತನ ಮೇಲೆ ಉಗುಳಿದರು. ನಂತರ ಅವರು ಯೇಸುವಿನ ಮುಂದೆ ಮೊಣಕಾಲೂರಿ, ಆತನನ್ನು ಆರಾಧಿಸುವಂತೆ ನಟಿಸುತ್ತಾ ಪರಿಹಾಸ್ಯ ಮಾಡಿದರು. 20 ಆ ಬಳಿಕ ಸೈನಿಕರು ಕಡುಕೆಂಪಾದ ನಿಲುವಂಗಿಯನ್ನು ತೆಗೆದುಬಿಟ್ಟು, ಆತನ ಬಟ್ಟೆಗಳನ್ನೇ ಮತ್ತೆ ತೊಡಿಸಿದರು. ನಂತರ ಅವರು ಯೇಸುವನ್ನು ಶಿಲುಬೆಗೇರಿಸಲು ಕರೆದುಕೊಂಡು ಹೋದರು.

ಶಿಲುಬೆಗೇರಿಸಲ್ಪಟ್ಟ ಯೇಸು

(ಮತ್ತಾಯ 27:32-44; ಲೂಕ 23:26-43; ಯೋಹಾನ 19:17-27)

21 ಆಗ ಸಿರೇನ್ ಪಟ್ಟಣದ ಸಿಮೋನ ಎಂಬವನು ಹೊಲದಿಂದ ಬರುತ್ತಿದ್ದನು. ಅವನು ಅಲೆಕ್ಸಾಂಡರ್ ಮತ್ತು ರೂಫಸ್ ಎಂಬವರ ತಂದೆ. ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಸಿಮೋನನನ್ನು ಬಲವಂತ ಮಾಡಿದರು. 22 ಅವರು ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಹೋದರು. (ಗೊಲ್ಗೊಥ ಎಂದರೆ “ಕಪಾಲ ಸ್ಥಳ.”) 23 ಗೊಲ್ಗೊಥದಲ್ಲಿ ಸೈನಿಕರು ಯೇಸುವಿಗೆ ರಕ್ತಬೋಳ ಮಿಶ್ರಿತವಾದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಆದರೆ ಯೇಸು ಅದನ್ನು ಕುಡಿಯಲಿಲ್ಲ. 24 ಸೈನಿಕರು ಯೇಸುವನ್ನು ಶಿಲುಬೆಗೆ ನೇತುಹಾಕಿ, ಮೊಳೆಗಳನ್ನು ಜಡಿದರು. ನಂತರ ಸೈನಿಕರು ಚೀಟು ಹಾಕಿ ಯೇಸುವಿನ ಬಟ್ಟೆಗಳನ್ನು ತಮ್ಮಲ್ಲಿ ಹಂಚಿಕೊಂಡರು.

25 ಅವರು ಯೇಸುವನ್ನು ಶಿಲುಬೆಗೇರಿಸಿದಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International