Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಮತ್ತಾಯ 15:21-39

ಯೆಹೂದ್ಯಳಲ್ಲದ ಸ್ತ್ರೀಗೆ ಯೇಸು ಮಾಡಿದ ಸಹಾಯ

(ಮಾರ್ಕ 7:24-30)

21 ಯೇಸು ಆ ಸ್ಥಳವನ್ನು ಬಿಟ್ಟು, ಟೈರ್ ಮತ್ತು ಸೀದೋನ್‌ಗಳ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. 22 ಆ ಸ್ಥಳದಿಂದ ಕಾನಾನ್ಯಳಾದ ಒಬ್ಬ ಸ್ತ್ರೀ ಯೇಸುವಿನ ಬಳಿಗೆ ಬಂದು, “ಪ್ರಭುವೇ, ದಾವೀದನ ಮಗನೇ, ದಯವಿಟ್ಟು ನನಗೆ ಕರುಣೆ ತೋರು! ನನ್ನ ಮಗಳಲ್ಲಿ ದೆವ್ವ ಸೇರಿಕೊಂಡಿದೆ ಮತ್ತು ಆಕೆ ಬಹಳ ಸಂಕಟಪಡುತ್ತಿದ್ದಾಳೆ” ಎಂದು ಗಟ್ಟಿಯಾಗಿ ಕೂಗಿಕೊಂಡಳು.

23 ಆದರೆ ಯೇಸು ಆ ಸ್ತ್ರೀಗೆ ಉತ್ತರ ಕೊಡಲಿಲ್ಲ. ಆದ್ದರಿಂದ ಶಿಷ್ಯರು ಯೇಸುವಿನ ಬಳಿಗೆ ಬಂದು, “ಆ ಸ್ತ್ರೀಗೆ ಹೊರಟುಹೋಗುವುದಕ್ಕೆ ಹೇಳು. ಆಕೆಯು ಕೂಗಿಕೊಂಡು ನಮ್ಮ ಹಿಂದೆಯೇ ಬರುತ್ತಿದ್ದಾಳೆ” ಎಂದು ಕೇಳಿಕೊಂಡರು.

24 ಯೇಸು, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಮಾತ್ರ ದೇವರು ನನ್ನನ್ನು ಕಳುಹಿಸಿದನು” ಎಂದನು.

25 ಆಗ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಅಡ್ಡಬಿದ್ದು, “ಪ್ರಭುವೇ, ನನಗೆ ಸಹಾಯ ಮಾಡು” ಎಂದು ಕೇಳಿದಳು.

26 ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ” ಎಂದು ಉತ್ತರಕೊಟ್ಟನು.

27 ಆ ಸ್ತ್ರೀಯು, “ಹೌದು ಪ್ರಭುವೇ, ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ಆಹಾರದ ತುಂಡುಗಳನ್ನು ತಿನ್ನುತ್ತವೆಯಲ್ಲಾ” ಎಂದಳು.

28 ಆಗ ಯೇಸು, “ಅಮ್ಮಾ, ನಿನ್ನ ನಂಬಿಕೆ ದೊಡ್ಡದು. ನಿನ್ನ ಕೋರಿಕೆಯನ್ನು ನಾನು ಈಡೇರಿಸುತ್ತೇನೆ” ಎಂದನು. ಆ ಕ್ಷಣದಲ್ಲೇ ಆಕೆಯ ಮಗಳು ಗುಣವಾದಳು.

ಯೇಸುವಿನಿಂದ ಅನೇಕರಿಗೆ ಸ್ವಸ್ಥತೆ

29 ಆಗ ಯೇಸು ಆ ಸ್ಥಳವನ್ನು ಬಿಟ್ಟು ಗಲಿಲಾಯ ಸರೋವರದ ದಡಕ್ಕೆ ಹೋಗಿ ಒಂದು ಬೆಟ್ಟದ ಮೇಲೆ ಕುಳಿತುಕೊಂಡನು.

30 ಜನರು ಗುಂಪುಗುಂಪಾಗಿ ಯೇಸುವಿನ ಬಳಿಗೆ ಬಂದರು. ಅವರು ಅನೇಕ ಬಗೆಯ ಕಾಯಿಲೆಯವರನ್ನು ಕರೆದುತಂದು, ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಅಲ್ಲಿ ಅಂಗವಿಕಲರು, ಕುರುಡರು, ಕುಂಟರು, ಕಿವುಡರು ಮತ್ತು ಇತರ ಅನೇಕ ಜನರಿದ್ದರು. ಆತನು ಇವರನ್ನೆಲ್ಲರನ್ನು ಗುಣಪಡಿಸಿದನು. 31 ಮೂಕರು ಮತ್ತೆ ಮಾತಾಡುವುದನ್ನೂ ಕುಂಟರು ನಡೆದಾಡುವುದನ್ನೂ ಅಂಗವಿಕಲರು ಸ್ವಸ್ಥರಾದದ್ದನ್ನೂ ಕುರುಡರಿಗೆ ಮತ್ತೆ ದೃಷ್ಟಿ ಬಂದದ್ದನ್ನೂ ಕಂಡು ಜನರೆಲ್ಲರೂ ಅತ್ಶಾಶ್ಚರ್ಯಪಟ್ಟು ಇಸ್ರೇಲರ ದೇವರನ್ನು ಕೊಂಡಾಡಿದರು.

ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮಾರ್ಕ 8:1-10)

32 ಯೇಸು ತನ್ನ ಶಿಷ್ಯರನ್ನು ಕರೆದು, “ನಾನು ಈ ಜನರಿಗಾಗಿ ದುಃಖಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಈಗ ಇವರಿಗೆ ಊಟಕ್ಕೆ ಏನೂ ಇಲ್ಲ. ಇವರನ್ನು ಹಸಿವಿನಿಂದ ಕಳುಹಿಸಿಬಿಡುವುದಕ್ಕೆ ನನಗೆ ಮನಸ್ಸಿಲ್ಲ. ಇವರು ಮನೆಗೆ ಹೋಗುತ್ತಿರುವಾಗ ಬಳಲಿಹೋಗಬಹುದು” ಎಂದು ಹೇಳಿದನು.

33 ಶಿಷ್ಯರು ಯೇಸುವಿಗೆ, “ಈ ಜನರೆಲ್ಲರಿಗೂ ಊಟಕ್ಕೆ ಬೇಕಾಗುವಷ್ಟು ರೊಟ್ಟಿ ನಮಗೆ ಎಲ್ಲಿ ಸಿಕ್ಕುತ್ತದೆ? ಇಲ್ಲಿಗೆ ಯಾವ ಊರೂ ಸಮೀಪವಾಗಿಲ್ಲ” ಎಂದು ಹೇಳಿದರು.

34 ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದನು.

ಶಿಷ್ಯರು, “ನಮ್ಮಲ್ಲಿ ಏಳು ರೊಟ್ಟಿಗಳಿವೆ ಮತ್ತು ಕೆಲವು ಸಣ್ಣ ಮೀನುಗಳಿವೆ” ಎಂದರು.

35 ಆಗ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವುದಕ್ಕೆ ಆತನು ಆಜ್ಞಾಪಿಸಿ, 36 ಆ ಏಳು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದನು. ಬಳಿಕ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅವುಗಳನ್ನು ಜನರಿಗೆ ಹಂಚಿದರು. 37 ಜನರೆಲ್ಲರೂ ತಿಂದು ತೃಪ್ತರಾದರು. ಬಳಿಕ ತಿನ್ನಲಾರದೆ ಉಳಿದುಹೋದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. 38 ಅಂದು ಊಟ ಮಾಡಿದ್ದವರಲ್ಲಿ ಗಂಡಸರೇ ಸುಮಾರು ನಾಲ್ಕುಸಾವಿರ ಮಂದಿಯಿದ್ದರು. ಇವರಲ್ಲದೆ ಹೆಂಗಸರು ಮತ್ತು ಮಕ್ಕಳು ಸಹ ಊಟಮಾಡಿದರು. 39 ಬಳಿಕ ಯೇಸು ತಮ್ಮತಮ್ಮ ಮನೆಗಳಿಗೆ ಹೋಗುವಂತೆ ಅವರಿಗೆ ಹೇಳಿ ಕಳುಹಿಸಿದನು. ಅನಂತರ ದೋಣಿಯನ್ನು ಹತ್ತಿ ಮಗದಾನ್ ಎಂಬ ಪ್ರಾಂತ್ಯಕ್ಕೆ ಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International