New Testament in a Year
ಯೇಸುವಿನ ಕುರಿತು ಹೆರೋದನ ಅಭಿಪ್ರಾಯ
(ಮಾರ್ಕ 6:14-29; ಲೂಕ 9:7-9)
14 ಆ ಕಾಲದಲ್ಲಿ ಹೆರೋದನು ಗಲಿಲಾಯದಲ್ಲಿ ಆಳುತ್ತಿದ್ದನು. ಜನರು ಯೇಸುವಿನ ಕುರಿತು ಹೇಳುತ್ತಿದ್ದ ಸಂಗತಿಗಳೆಲ್ಲ ಅವನಿಗೆ ತಿಳಿಯಿತು. 2 ಆದ್ದರಿಂದ ಹೆರೋದನು ತನ್ನ ಸೇವಕರಿಗೆ, “ನಿಜವಾಗಿಯೂ ಯೇಸುವೇ ಸ್ನಾನಿಕ ಯೋಹಾನನು. ಅವನು ಮತ್ತೆ ಜೀವಂತವಾಗಿ ಬಂದಿದ್ದಾನೆ. ಆದಕಾರಣವೇ ಅವನು ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದನು.
ಸ್ನಾನಿಕ ಯೋಹಾನನು ಕೊಲ್ಲಲ್ಪಟ್ಟ ರೀತಿ
3 ಈ ಸಮಯಕ್ಕೆ ಮೊದಲೇ ಹೆರೋದ್ಯಳ ನಿಮಿತ್ತವಾಗಿ ಹೆರೋದನು ಯೋಹಾನನನ್ನು ಸರಪಣಿಗಳಿಂದ ಬಂಧಿಸಿ, ಸೆರೆಮನೆಯಲ್ಲಿ ಹಾಕಿಸಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಹೆಂಡತಿ. 4 ಯೋಹಾನನು ಹೆರೋದನಿಗೆ, “ಹೆರೋದ್ಯಳನ್ನು ನೀನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದುದೇ ಈ ಸೆರೆವಾಸಕ್ಕೆ ಕಾರಣ. 5 ಹೆರೋದನು ಯೋಹಾನನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟು ಕೊಲ್ಲಿಸಿರಲಿಲ್ಲ. ಜನರು ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರು.
6 ಹೆರೋದನ ಹುಟ್ಟುಹಬ್ಬದ ದಿನದಂದು ಹೆರೋದ್ಯಳ ಮಗಳು ಹೆರೋದನ ಮತ್ತು ಅವನ ಅತಿಥಿಗಳ ಮುಂದೆ ನರ್ತಿಸಿದಳು. ಹೆರೋದನು ಅವಳನ್ನು ಬಹಳ ಮೆಚ್ಚಿಕೊಂಡನು. 7 ಆದ್ದರಿಂದ ಅವನು, “ನಿನಗೆ ಏನು ಬೇಕಾದರೂ ನಾನು ಕೊಡುತ್ತೇನೆ” ಎಂದು ಅವಳಿಗೆ ವಾಗ್ದಾನ ಮಾಡಿದನು. 8 ಏನು ಕೇಳಿಕೊಳ್ಳಬೇಕೆಂದು ಹೆರೋದ್ಯಳು ತನ್ನ ಮಗಳಿಗೆ ಹೇಳಿಕೊಟ್ಟಳು. ಆದ್ದರಿಂದ ಅವಳು ಹೆರೋದನಿಗೆ, “ಸ್ನಾನಿಕ ಯೋಹಾನನ ತಲೆಯನ್ನು ಇಲ್ಲಿಯೇ ಈ ತಟ್ಟೆಯ ಮೇಲೆಯೇ ನನಗೆ ಕೊಡು” ಎಂದು ಹೇಳಿದಳು.
9 ರಾಜ ಹೆರೋದನು ಬಹಳವಾಗಿ ದುಃಖಪಟ್ಟನು. ಆದರೆ ಏನು ಕೇಳಿದರೂ ಕೊಡುತ್ತೇನೆಂದು ಅವನು ಅವಳಿಗೆ ವಾಗ್ದಾನ ಮಾಡಿದ್ದನು. ಹೆರೋದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದವರು ಸಹ ಆ ವಾಗ್ದಾನವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ಕೊಡುವುದಕ್ಕೆ ಹೆರೋದನು ಅಪ್ಪಣೆಕೊಟ್ಟನು. 10 ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿಕೊಂಡು ಬರಲು ಅವನು ಸೈನಿಕರನ್ನು ಕಳುಹಿಸಿಕೊಟ್ಟನು. 11 ಅವರು ಯೋಹಾನನ ತಲೆಯನ್ನು ತಟ್ಟೆಯ ಮೇಲೆ ತಂದು ಅವಳಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯಾದ ಹೆರೋದ್ಯಳ ಬಳಿಗೆ ತೆಗೆದುಕೊಂಡು ಹೋದಳು. 12 ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. ಬಳಿಕ ಅವರು ಯೇಸುವಿನ ಬಳಿಗೆ ಹೋಗಿ ಸಂಭವಿಸಿದ್ದನ್ನೆಲ್ಲ ತಿಳಿಸಿದರು.
ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ
(ಮಾರ್ಕ 6:30-44; ಲೂಕ 9:10-17; ಯೋಹಾನ 6:1-14)
13 ಯೋಹಾನನಿಗೆ ಸಂಭವಿಸಿದ್ದನ್ನು ಕೇಳಿದಾಗ ಯೇಸು ದೋಣಿಹತ್ತಿ ನಿರ್ಜನವಾದ ಸ್ಥಳಕ್ಕೆ ಒಬ್ಬನೇ ಹೋದನು. ಆದರೆ ಈ ಸುದ್ದಿ ಜನರಿಗೆ ತಿಳಿಯಿತು. ಆದ್ದರಿಂದ ಅವರು ತಮ್ಮ ಊರುಗಳನ್ನು ಬಿಟ್ಟು ಕಾಲುನಡಿಗೆಯಲ್ಲೇ ಆತನಿದ್ದ ಸ್ಥಳಕ್ಕೆ ಹೋದರು. 14 ಯೇಸು ಅಲ್ಲಿಗೆ ಬಂದಾಗ, ಜನರು ಗುಂಪುಗುಂಪಾಗಿ ನೆರೆದಿರುವುದನ್ನು ಕಂಡು ಅವರಿಗಾಗಿ ದುಃಖಪಟ್ಟು ಕಾಯಿಲೆಯವರನ್ನು ಗುಣಪಡಿಸಿದನು.
15 ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಜನರು ವಾಸಿಸುವುದಿಲ್ಲ. ಈಗಾಗಲೇ ಸಮಯವಾಗಿದೆ. ಜನರು ತಮಗಾಗಿ ಆಹಾರವನ್ನು ಕೊಂಡುಕೊಳ್ಳಲು ಅವರನ್ನು ಊರುಗಳಿಗೆ ಕಳುಹಿಸಿಬಿಡು” ಎಂದು ಹೇಳಿದರು.
16 ಯೇಸು, “ಜನರು ಹೋಗುವುದು ಬೇಡ. ನೀವೇ ಅವರಿಗೆ ಸ್ವಲ್ಪ ಊಟವನ್ನು ಕೊಡಿ” ಎಂದು ಹೇಳಿದನು.
17 ಆಗ ಶಿಷ್ಯರು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ” ಎಂದು ಉತ್ತರಕೊಟ್ಟರು.
18 ಯೇಸು, “ಆ ರೊಟ್ಟಿ ಮತ್ತು ಮೀನುಗಳನ್ನು ನನ್ನ ಬಳಿಗೆ ತನ್ನಿರಿ” ಅಂದನು. 19 ಬಳಿಕ ಆತನು ಜನರಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು, ಆಕಾಶದ ಕಡೆಗೆ ನೋಡಿ, ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ರೊಟ್ಟಿಯನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರು ರೊಟ್ಟಿಯನ್ನು ಜನರಿಗೆ ಹಂಚಿದರು. 20 ಜನರೆಲ್ಲರೂ ತಿಂದು ತೃಪ್ತರಾದರು. ಜನರು ತಿಂದು ಮುಗಿಸಿದ ನಂತರ, ತಿನ್ನಲಾರದೆ ಉಳಿಸಿದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು. 21 ಊಟ ಮಾಡಿದವರಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದುಸಾವಿರ ಇದ್ದರು.
Kannada Holy Bible: Easy-to-Read Version. All rights reserved. © 1997 Bible League International