Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಹಾನ 19:23-42

23 ಸೈನಿಕರು ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಆತನ ಬಟ್ಟೆಗಳನ್ನು ನಾಲ್ಕು ಭಾಗ ಮಾಡಿ ಒಬ್ಬೊಬ್ಬರು ಒಂದೊಂದು ಭಾಗವನ್ನು ತೆಗೆದುಕೊಂಡರು. ಅಲ್ಲದೆ ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಅದು ಹೊಲಿಗೆಯಿಲ್ಲದೆ ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು. 24 ಆದ್ದರಿಂದ ಸೈನಿಕರು, “ನಾವು ಇದನ್ನು ಹರಿದು ಪಾಲುಮಾಡಬಾರದು. ನಾವು ಚೀಟಿಹಾಕಿ ಇದು ಯಾರಿಗೆ ಬರುತ್ತದೋ ನೋಡೋಣ” ಎಂದು ಮಾತಾಡಿಕೊಂಡು ಹಾಗೆಯೇ ಮಾಡಿದರು.

“ಅವರು ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲು ಮಾಡಿಕೊಂಡರು;
    ನನ್ನ ಅಂಗಿಗಾಗಿ ಚೀಟಿ ಹಾಕಿದರು”(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ಮಾತು ಹೀಗೆ ನೆರವೇರಿತು.

25 ಯೇಸುವಿನ ತಾಯಿ, ತಾಯಿಯ ಸಹೋದರಿ, ಕ್ಲೋಪನ ಹೆಂಡತಿಯಾದ ಮರಿಯಳು ಮತ್ತು ಮಗ್ದಲದ ಮರಿಯಳು ಶಿಲುಬೆಯ ಬಳಿಯಲ್ಲಿ ನಿಂತುಕೊಂಡಿದ್ದರು. 26 ಯೇಸು ತನ್ನ ತಾಯಿಯನ್ನೂ ಅಲ್ಲೇ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಅಮ್ಮಾ, ಇಗೋ, ನಿನ್ನ ಮಗನು” ಎಂದು ಹೇಳಿದನು. 27 ಬಳಿಕ ಯೇಸು ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದನು. ಅಂದಿನಿಂದ ಆ ಶಿಷ್ಯನು ಆಕೆಯನ್ನು ಕರೆದುಕೊಂಡು ಹೋಗಿ ತನ್ನ ಮನೆಯಲ್ಲೇ ಇರಿಸಿಕೊಂಡನು.

ಯೇಸುವಿನ ಮರಣ

(ಮತ್ತಾಯ 27:45-56; ಮಾರ್ಕ 15:33-41; ಲೂಕ 23:44-49)

28 ಇದಾದ ಮೇಲೆ ಎಲ್ಲವೂ ನೆರವೇರಿತೆಂದು ತಿಳಿದುಕೊಂಡು ಪವಿತ್ರ ಗ್ರಂಥದ ಮಾತನ್ನು ನೆರವೇರಿಸುವುದಕ್ಕಾಗಿ ಆತನು, “ನನಗೆ ದಾಹವಾಗಿದೆ”[a] ಎಂದು ಹೇಳಿದನು. 29 ಅಲ್ಲಿ ಹುಳಿರಸ ತುಂಬಿದ ಪಾತ್ರೆಯೊಂದಿತ್ತು. ಸೈನಿಕರು ಸ್ಪಂಜನ್ನು ಹುಳಿರಸದಲ್ಲಿ ತೋಯಿಸಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಅದನ್ನು ಮೇಲೆತ್ತಿ ಯೇಸುವಿನ ಬಾಯಿಗೆ ಮುಟ್ಟಿಸಿದರು. 30 ಯೇಸು ಹುಳಿರಸವನ್ನು ರುಚಿನೋಡಿ, “ತೀರಿತು” ಎಂದು ಹೇಳಿ ತಲೆಬಾಗಿ ಪ್ರಾಣಬಿಟ್ಟನು.

31 ಆ ದಿನವು ಸಿದ್ಧತೆಯ ದಿನವಾಗಿತ್ತು. ಮರುದಿನ ವಿಶೇಷವಾದ ಸಬ್ಬತ್‌ದಿನವಾಗಿತ್ತು. ಸಬ್ಬತ್‌ದಿನದಂದು ದೇಹಗಳು ಶಿಲುಬೆಯ ಮೇಲಿರುವುದು ಯೆಹೂದ್ಯರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರ ಕಾಲುಗಳನ್ನು ಮುರಿದು ಬೇಗನೆ ಸಾಯಿಸಲು ಆಜ್ಞಾಪಿಸಬೇಕೆಂಬುದಾಗಿ ಅವರು ಪಿಲಾತನನ್ನು ಕೇಳಿಕೊಂಡರು. 32 ಆದ್ದರಿಂದ ಸೈನಿಕರು ಬಂದು ಯೇಸುವಿನೊಂದಿಗೆ ಶಿಲುಬೆಗೇರಿಸಲ್ಪಟ್ಟಿದ್ದ ಇಬ್ಬರ ಕಾಲುಗಳನ್ನು ಮುರಿದುಹಾಕಿದರು. 33 ಬಳಿಕ ಅವರು ಯೇಸುವಿನ ಅತಿ ಸಮೀಪಕ್ಕೆ ಬಂದಾಗ ಆತನು ಆಗಲೇ ಸತ್ತುಹೋಗಿರುವುದನ್ನು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ.

34 ಆದರೆ ಸೈನಿಕರಲ್ಲಿ ಒಬ್ಬನು ತನ್ನ ಈಟಿಯಿಂದ ಯೇಸುವಿನ ಪಕ್ಕೆಗೆ ತಿವಿದನು. ಪಕ್ಕೆಯಿಂದ ರಕ್ತ ಮತ್ತು ನೀರು ಹೊರಗೆ ಹರಿದುಬಂದವು. 35 (ಇದನ್ನು ಕಂಡವನೇ ಇದರ ಬಗ್ಗೆ ಹೇಳಿದ್ದಾನೆ. ನೀವು ಸಹ ನಂಬಬೇಕೆಂದು ಅವನು ಇದನ್ನು ತಿಳಿಸಿದ್ದಾನೆ. ಅವನು ಹೇಳುವ ಸಂಗತಿಗಳು ಸತ್ಯವಾಗಿವೆ. ತಾನು ಹೇಳುತ್ತಿರುವುದು ಸತ್ಯವೆಂದು ಅವನಿಗೆ ಗೊತ್ತಿದೆ.) 36 ಪವಿತ್ರ ಗ್ರಂಥದಲ್ಲಿ ಬರೆದಿರುವ, “ಆತನ ಎಲುಬುಗಳಲ್ಲಿ ಒಂದಾದರೂ ಮುರಿಯಲ್ಪಡುವುದಿಲ್ಲ”(B) ಎಂಬ ಮಾತು ಹೀಗೆ ನೆರವೇರಿತು. 37 ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ, “ಜನರು ತಾವು ಈಟಿಯಿಂದ ಇರಿದವನನ್ನೇ ದಿಟ್ಟಿಸಿ ನೋಡುವರು”(C) ಎಂತಲೂ ಬರೆದಿದೆ.

ಯೇಸುವಿನ ಶವಸಂಸ್ಕಾರ

(ಮತ್ತಾಯ 27:57-61; ಮಾರ್ಕ 15:42-47; ಲೂಕ 23:50-56)

38 ತರುವಾಯ, ಅರಿಮಥಾಯ ಊರಿನ ಯೋಸೇಫ ಎಂಬವನು ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಪಿಲಾತನನ್ನು ಕೇಳಿಕೊಂಡನು. (ಯೋಸೇಫನು ಯೇಸುವಿನ ಒಬ್ಬ ಅನುಯಾಯಿ ಆಗಿದ್ದನು. ಆದರೆ ಅವನು ಯೆಹೂದ್ಯರಿಗೆ ಹೆದರಿಕೊಂಡಿದ್ದರಿಂದ ಅದರ ಬಗ್ಗೆ ಜನರಿಗೆ ಹೇಳಿಕೊಳ್ಳಲಿಲ್ಲ.) ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗಲು ಪಿಲಾತನು ಅವನಿಗೆ ಅಪ್ಪಣೆಕೊಟ್ಟನು. ಆದ್ದರಿಂದ ಅವನು ಬಂದು ಯೇಸುವಿನ ದೇಹವನ್ನು ತೆಗೆದುಕೊಂಡು ಹೋದನು.

39 ನಿಕೊದೇಮನೂ ಯೋಸೇಫನೊಂದಿಗೆ ಹೋದನು. ಹಿಂದೊಮ್ಮೆ, ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನೊಂದಿಗೆ ಮಾತಾಡಿದ್ದವನೇ ನಿಕೊದೇಮನು. ಅವನು ಸುಮಾರು ಐವತ್ತು ಕಿಲೋಗ್ರಾಮಿನಷ್ಟು ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಬಂದನು. ಆ ಸುಗಂಧದ್ರವ್ಯವು ರಕ್ತ ಬೋಳ ಮತ್ತು ಅಗರುಗಳ ಮಿಶ್ರಣವಾಗಿತ್ತು. 40 ಈ ಇಬ್ಬರು ಯೇಸುವಿನ ದೇಹವನ್ನು ತೆಗೆದುಕೊಂಡು ಅದಕ್ಕೆ ಸುಗಂಧದ್ರವ್ಯವನ್ನು ಹಾಕಿ ನಾರುಬಟ್ಟೆಗಳಿಂದ ಸುತ್ತಿದರು. (ಯೆಹೂದ್ಯರು ಸತ್ತವರನ್ನು ಇದೇರೀತಿ ಸಮಾಧಿ ಮಾಡುತ್ತಾರೆ.) 41 ಯೇಸುವನ್ನು ಶಿಲುಬೆಯ ಮೇಲೆ ಕೊಂದ ಸ್ಥಳದಲ್ಲೇ ಒಂದು ತೋಟವಿತ್ತು. ಆ ತೋಟದಲ್ಲಿ ಒಂದು ಹೊಸ ಸಮಾಧಿಯಿತ್ತು. ಅದರಲ್ಲಿ ಹಿಂದೆಂದೂ ಯಾರನ್ನೂ ಸಮಾಧಿ ಮಾಡಿರಲಿಲ್ಲ. 42 ಅದು ಸಮೀಪವಾಗಿದ್ದುದರಿಂದ ಮತ್ತು ಯೆಹೂದ್ಯರು ತಮ್ಮ ಸಬ್ಬತ್ ದಿನವನ್ನು ಆರಂಭಮಾಡಲು ಸಿದ್ಧರಾಗುತ್ತಿದುದರಿಂದ ಅವರು ಯೇಸುವನ್ನು ಆ ಸಮಾಧಿಯಲ್ಲಿಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International