Print Page Options
Previous Prev Day Next DayNext

New Testament in a Year

Read the New Testament from start to finish, from Matthew to Revelation.
Duration: 365 days
Kannada Holy Bible: Easy-to-Read Version (KERV)
Version
ಯೋಹಾನ 12:1-26

ಬೆಥಾನಿಯಲ್ಲಿ ಯೇಸು

(ಮತ್ತಾಯ 26:6-13; ಮಾರ್ಕ 14:3-9)

12 ಪಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿದ್ದಾಗ ಯೇಸು ಬೆಥಾನಿಗೆ ಹೋದನು. ಲಾಜರನು ವಾಸವಾಗಿದ್ದ ಊರೇ ಬೆಥಾನಿ. (ಯೇಸು ಸತ್ತವರೊಳಗಿಂದ ಎಬ್ಬಿಸಿದ ಮನುಷ್ಯನೇ ಲಾಜರನು.) ಅವರು ಯೇಸುವಿಗೆ ರಾತ್ರಿಭೋಜನವನ್ನು ಏರ್ಪಡಿಸಿದ್ದರು. ಮಾರ್ಥಳು ಊಟವನ್ನು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟ ಮಾಡುತ್ತಿದ್ದವರಲ್ಲಿ ಲಾಜರನೂ ಒಬ್ಬನಾಗಿದ್ದನು. ಆಗ ಮರಿಯಳು, ಬಹು ಬೆಲೆಬಾಳುವ ಸುಗಂಧತೈಲವನ್ನು[a] ಅರ್ಧ ಲೀಟರಿನಷ್ಟು ತೆಗೆದುಕೊಂಡು ಬಂದು, ಯೇಸುವಿನ ಪಾದಗಳಿಗೆ ಹಚ್ಚಿದಳು. ಬಳಿಕ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರೆಸಿದಳು. ಆ ಪರಿಮಳದ್ರವ್ಯದ ಸುವಾಸನೆಯು ಇಡೀ ಮನೆಯನ್ನೇ ತುಂಬಿಕೊಂಡಿತು.

ಇಸ್ಕರಿಯೋತ ಯೂದನು ಅಲ್ಲಿದ್ದನು. ಅವನು ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದನು. (ಮುಂದೆ, ಯೇಸುವಿಗೆ ದ್ರೋಹ ಮಾಡಿದವನು ಇವನೇ.) ಮರಿಯಳು ಮಾಡಿದ ಈ ಕಾರ್ಯವನ್ನು ಯೂದನು ಇಷ್ಟಪಡಲಿಲ್ಲ. ಅವನು, “ಆ ಪರಿಮಳದ ದ್ರವ್ಯದ ಬೆಲೆ ಮುನ್ನೂರು ಬೆಳ್ಳಿನಾಣ್ಯಗಳು.[b] ಅದನ್ನು ಮಾರಿ ಆ ಹಣವನ್ನು ಬಡವರಿಗೆ ಕೊಡಬೇಕಿತ್ತು” ಎಂದು ಟೀಕಿಸಿದನು. ಆದರೆ ಯೂದನಿಗೆ ಬಡವರ ಬಗ್ಗೆ ನಿಜವಾಗಿಯೂ ಚಿಂತೆಯಿರಲಿಲ್ಲ. ಅವನು ಕಳ್ಳನಾಗಿದ್ದುದರಿಂದ ಹಾಗೆ ಹೇಳಿದನು. ಶಿಷ್ಯಸಮುದಾಯಕ್ಕೋಸ್ಕರವಿದ್ದ ಹಣದ ಪೆಟ್ಟಿಗೆಯು ಅವನ ವಶದಲ್ಲಿತ್ತು. ಅವನು ಆಗಾಗ್ಗೆ ಆ ಪೆಟ್ಟಿಗೆಯಿಂದ ಹಣವನ್ನು ಕದ್ದುಕೊಳ್ಳುತ್ತಿದ್ದನು.

ಯೇಸು ಅವನಿಗೆ, “ಆಕೆಯನ್ನು ತಡೆಯಬೇಡ. ನನ್ನನ್ನು ಶವಸಂಸ್ಕಾರಕ್ಕೆ ಸಿದ್ಧಪಡಿಸುವ ಈ ದಿನಕ್ಕೋಸ್ಕರ ಆಕೆ ಸುಗಂಧ ದ್ರವ್ಯವನ್ನು ಶೇಖರಿಸಿದ್ದು ಒಳ್ಳೆಯದೇ ಸರಿ. ಬಡವರು ಯಾವಾಗಲೂ ನಿಮ್ಮೊಂದಿಗಿರುತ್ತಾರೆ ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.

ಲಾಜರನ ವಿರುದ್ಧ ಸಂಚು

ಯೇಸು ಬೆಥಾನಿಯಲ್ಲಿದ್ದಾನೆ ಎಂಬ ಸುದ್ದಿಯನ್ನು ಅನೇಕ ಯೆಹೂದ್ಯರು ಕೇಳಿ ಆತನನ್ನೂ ಲಾಜರನನ್ನೂ ನೋಡಬೇಕೆಂದು ಅಲ್ಲಿಗೆ ಹೋದರು. ಯೇಸುವಿನಿಂದ ಜೀವಂತವಾಗಿ ಎಬ್ಬಿಸಲ್ಪಟ್ಟವನೇ ಲಾಜರನು. 10 ಆದರೆ ಮಹಾಯಾಜಕರು ಲಾಜರನನ್ನು ಸಹ ಕೊಲ್ಲಲು ಯೋಜನೆಗಳನ್ನು ಮಾಡಿದರು. 11 ಲಾಜರನ ನಿಮಿತ್ತ ಅನೇಕ ಯೆಹೂದ್ಯರು ತಮ್ಮ ನಾಯಕರನ್ನು ತೊರೆದು ಯೇಸುವಿನಲ್ಲಿ ನಂಬಿಕೆ ಇಡುತ್ತಿದ್ದರು. ಆದಕಾರಣವೇ ಯೆಹೂದ್ಯ ನಾಯಕರು ಲಾಜರನನ್ನು ಸಹ ಕೊಲ್ಲಬೇಕೆಂದಿದ್ದರು.

ಜೆರುಸಲೇಮಿಗೆ ಯೇಸುವಿನ ಪ್ರವೇಶ

(ಮತ್ತಾಯ 21:1-11; ಮಾರ್ಕ 11:1-11; ಲೂಕ 19:28-40)

12 ಮರುದಿನ, ಯೇಸು ಜೆರುಸಲೇಮಿಗೆ ಬರುತ್ತಿದ್ದಾನೆ ಎಂಬ ಸುದ್ದಿ ಅಲ್ಲಿಯ ಜನರಿಗೆ ತಿಳಿಯಿತು. ಪಸ್ಕಹಬ್ಬಕ್ಕಾಗಿ ಬಂದಿದ್ದ ಅನೇಕರು ಅಲ್ಲಿದ್ದರು. 13 ಜನರು ಖರ್ಜೂರದ ಗರಿಗಳನ್ನು ತೆಗೆದುಕೊಂಡು ಯೇಸುವನ್ನು ಎದುರುಗೊಳ್ಳಲು ಹೋದರು.

“ಆತನಿಗೆ ಸ್ತೋತ್ರವಾಗಲಿ!
    ‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ದೇವರಾಶೀರ್ವಾದವಾಗಲಿ!’(A)

ಇಸ್ರೇಲ್ ರಾಜನಿಗೆ ದೇವರಾಶೀರ್ವಾದವಾಗಲಿ!”

ಎಂದು ಜನರು ಕೂಗಿದರು.

14 ಯೇಸು ಅಲ್ಲಿದ್ದ ಕತ್ತೆಯೊಂದನ್ನು ಕಂಡು, ಅದರ ಮೇಲೆ ಕುಳಿತುಕೊಂಡು ಹೊರಟನು. ಪವಿತ್ರ ಗ್ರಂಥ ಹೇಳುವಂತೆಯೇ ಇದು ನೆರವೇರಿತು:

15 “ಸಿಯೋನ್ ನಗರವೇ, ಭಯಪಡಬೇಡ!
    ನೋಡು! ನಿನ್ನ ರಾಜನು ಬರುತ್ತಿದ್ದಾನೆ.
ಆತನು ಪ್ರಾಯದ ಕತ್ತೆಯ ಮೇಲೆ ಕುಳಿತುಕೊಂಡು ಬರುತ್ತಿದ್ದಾನೆ.”(B)

16 ಯೇಸುವಿನ ಶಿಷ್ಯರು ಆ ಸಮಯದಲ್ಲಿ ಇದನ್ನು ಅರ್ಥಮಾಡಿಕೊಳ್ಳಲಿಲ್ಲ. ಆದರೆ ಯೇಸು ಮಹಿಮಾಪದವಿಗೆ ಏರಿಹೋದ ನಂತರ, ಈ ಸಂಗತಿಗಳು ಆತನ ವಿಷಯವಾಗಿ ಬರೆಯಲ್ಪಟ್ಟಿವೆ ಎಂಬುದನ್ನು ಶಿಷ್ಯರು ಅರ್ಥಮಾಡಿಕೊಂಡರು; ಮತ್ತು ತಾವು ಆತನಿಗಾಗಿ ಮಾಡಿದ ಕಾರ್ಯಗಳನ್ನು ಜ್ಞಾಪಿಸಿಕೊಂಡರು.

17 ಯೇಸು ಲಾಜರನಿಗೆ ಸಮಾಧಿಯೊಳಗಿಂದ ಬರುವಂತೆ ಹೇಳಿ ಅವನನ್ನು ಜೀವಂತವಾಗಿ ಎಬ್ಬಿಸಿದಾಗ ಅನೇಕ ಜನರು ಯೇಸುವಿನ ಸಂಗಡ ಇದ್ದರು. ಯೇಸು ಮಾಡಿದ ಈ ಕಾರ್ಯದ ಬಗ್ಗೆ ಅವರು ಇತರರಿಗೆ ಹೇಳುತ್ತಿದ್ದರು. 18 ಯೇಸು ಮಾಡಿದ ಈ ಅದ್ಭುತಕಾರ್ಯವನ್ನು ಕೇಳಿ, ಅನೇಕ ಜನರು ಯೇಸುವನ್ನು ಎದುರುಗೊಳ್ಳಲು ಹೋಗಿದ್ದರು. 19 ಆದ್ದರಿಂದ ಫರಿಸಾಯರು, “ನೋಡಿ! ನಮ್ಮ ಯೋಜನೆಯು ನಿಷ್ಪ್ರಯೋಜಕವಾಯಿತು. ಜನರು ಆತನನ್ನೇ ಹಿಂಬಾಲಿಸುತ್ತಿದ್ದಾರೆ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

ಜೀವ, ಮರಣಗಳ ಬಗ್ಗೆ ಯೇಸುವಿನ ಉಪದೇಶ

20 ಅಲ್ಲಿ ಗ್ರೀಕ್ ಜನರು ಸಹ ಇದ್ದರು. ಪಸ್ಕಹಬ್ಬದಲ್ಲಿ ಆರಾಧಿಸುವುದಕ್ಕಾಗಿ ಜೆರುಸಲೇಮಿಗೆ ಹೋಗಿದ್ದವರಲ್ಲಿ ಇವರೂ ಸೇರಿದ್ದರು. 21 ಈ ಗ್ರೀಕ್ ಜನರು ಫಿಲಿಪ್ಪನ ಬಳಿಗೆ ಹೋದರು. (ಫಿಲಿಪ್ಪನು ಗಲಿಲಾಯದ ಬೆತ್ಸಾಯಿ ಎಂಬ ಊರಿನವನಾಗಿದ್ದವನು.) ಅವರು, “ಸ್ವಾಮೀ, ನಾವು ಯೇಸುವನ್ನು ನೋಡಬೇಕು” ಎಂದು ಅವನನ್ನು ಕೇಳಿಕೊಂಡರು. 22 ಫಿಲಿಪ್ಪನು ಅಂದ್ರೆಯನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದನು. ಬಳಿಕ ಅಂದ್ರೆಯನು ಮತ್ತು ಫಿಲಿಪ್ಪನು ಒಟ್ಟಾಗಿ ಯೇಸುವಿನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದರು.

23 ಯೇಸು ಅವರಿಗೆ, “ಮನುಷ್ಯಕುಮಾರನು ತನ್ನ ಮಹಿಮೆಯನ್ನು ಹೊಂದುವ ಸಮಯ ಇದೇ ಆಗಿದೆ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಗೋಧಿಯ ಕಾಳು ಭೂಮಿಗೆ ಬಿದ್ದು ಸಾಯಲೇಬೇಕು. ಬಳಿಕ ಅದು ಬೆಳೆದು ಅನೇಕ ಕಾಳುಗಳನ್ನು ಫಲಿಸುವುದು. ಸಾಯದಿದ್ದರೆ, ಅದು ಯಾವಾಗಲೂ ಕೇವಲ ಒಂದೇ ಕಾಳಾಗಿರುವುದು. 25 ತನ್ನ ಸ್ವಂತ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ಈ ಲೋಕದಲ್ಲಿ ತನ್ನ ಪ್ರಾಣವನ್ನು ದ್ವೇಷಿಸುವವನು ಅದನ್ನು ಉಳಿಸಿಕೊಳ್ಳುವನು. ಅವನು ನಿತ್ಯಜೀವವನ್ನು ಹೊಂದುವನು. 26 ನನ್ನ ಸೇವೆ ಮಾಡುವವನು ನನ್ನನ್ನು ಹಿಂಬಾಲಿಸಬೇಕು. ಆಗ ನಾನು ಇರುವಲ್ಲೆಲ್ಲಾ ನನ್ನ ಸೇವಕನು ಇರುವನು. ನನ್ನ ಸೇವೆಮಾಡುವ ಜನರನ್ನು ನನ್ನ ತಂದೆಯು ಸನ್ಮಾನಿಸುವನು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International