New Testament in a Year
ಯೇಸುವಿನ ಅಧಿಕಾರದ ಬಗ್ಗೆ ಯೆಹೂದ್ಯನಾಯಕರ ಸಂದೇಹ
(ಮಾರ್ಕ 11:27-33; ಲೂಕ 20:1-8)
23 ಯೇಸು ದೇವಾಲಯಕ್ಕೆ ಹೋದನು. ಯೇಸು ಅಲ್ಲಿ ಉಪದೇಶಿಸುತ್ತಿದ್ದಾಗ, ಮಹಾಯಾಜಕರು ಮತ್ತು ಜನರ ಹಿರಿಯ ನಾಯಕರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನೀನು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ತಿಳಿಸು!” ಎಂದರು.
24 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಕೊಟ್ಟರೆ, ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ. 25 ದೀಕ್ಷಾಸ್ನಾನ ಕೊಡುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತೋ ಇಲ್ಲವೆ ಮನುಷ್ಯನಿಂದ ಬಂದಿತೋ? ನನಗೆ ಹೇಳಿ!” ಎಂದು ಉತ್ತರ ಕೊಟ್ಟನು.
ಯಾಜಕರು ಮತ್ತು ಯೆಹೂದ್ಯ ನಾಯಕರು ಯೇಸುವಿನ ಪ್ರಶ್ನೆಯನ್ನು ಕುರಿತು ತಮ್ಮೊಳಗೆ, “‘ಯೋಹಾನನು ಕೊಟ್ಟ ದೀಕ್ಷಾಸ್ನಾನವು ದೇವರಿಂದ ಬಂದಿತು’ ಎಂದರೆ, ‘ಹಾಗಾದರೆ ಯೋಹಾನನನ್ನು ನೀವು ಏಕೆ ನಂಬಲಿಲ್ಲ?’ ಎಂದು ಕೇಳುವನು. 26 ‘ಅದು ಮನುಷ್ಯನಿಂದ ಬಂದಿತು’ ಎಂದರೆ ಜನರೆಲ್ಲರೂ ನಮ್ಮ ಮೇಲೆ ಕೋಪಗೊಳ್ಳುವರು. ಅವರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿ ಎಂದು ನಂಬಿರುವುದರಿಂದ ನಾವು ಅವರಿಗೆ ಹೆದರಬೇಕಾಗಿದೆ” ಎಂದು ಮಾತಾಡಿಕೊಂಡರು.
27 ಬಳಿಕ ಅವರು, “ಯೋಹಾನನಿಗೆ ಎಲ್ಲಿಂದ ಅಧಿಕಾರ ಬಂದಿತೋ ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.
ಆಗ ಯೇಸು, “ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆ ಎಂಬುದನ್ನು ನಾನು ಸಹ ನಿಮಗೆ ಹೇಳುವುದಿಲ್ಲ” ಎಂದನು.
ಇಬ್ಬರು ಗಂಡುಮಕ್ಕಳನ್ನು ಕುರಿತು ಯೇಸು ಹೇಳಿದ ಸಾಮ್ಯ
28 “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. ಆ ಮನುಷ್ಯನು ಮೊದಲನೆಯ ಮಗನ ಬಳಿಗೆ ಹೋಗಿ, ‘ಮಗನೇ ಈ ದಿನ ನೀನು ಹೋಗಿ, ನನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡು’ ಎಂದು ಹೇಳಿದನು.
29 “ಅದಕ್ಕೆ ಮಗನು, ‘ನಾನು ಹೋಗುವುದಿಲ್ಲ’ ಎಂದನು. ಆದರೆ ಆ ಬಳಿಕ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು.
30 “ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ, ‘ಮಗನೇ, ಈ ದಿನ ನೀನು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಮಗನು, ‘ಆಗಲಿಯಪ್ಪಾ, ನಾನು ಹೋಗಿ ಕೆಲಸ ಮಾಡುತ್ತೇನೆ’ ಎಂದನು. ಆದರೆ ಆ ಮಗನು ಹೋಗಲೇ ಇಲ್ಲ.
31 “ಈ ಇಬ್ಬರು ಗಂಡುಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?”
ಆಗ ಯೆಹೂದ್ಯ ನಾಯಕರು, “ಮೊದಲನೆಯ ಮಗ” ಎಂದು ಉತ್ತರಕೊಟ್ಟರು.
ಯೇಸು ಅವರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸುಂಕವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟಜನರೆಂದು ನೀವು ಅಂದುಕೊಂಡಿದ್ದೀರಿ. ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯಕ್ಕೆ ಪ್ರವೇಶಿಸುತ್ತಾರೆ. 32 ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನು ಬಂದನು. ನೀವು ಯೋಹಾನನನ್ನು ನಂಬಲಿಲ್ಲ, ಆದರೆ ಸುಂಕವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ. ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ.
ದೇವರ ಸ್ವಂತ ಮಗನ ಆಗಮನ
(ಮಾರ್ಕ 12:1-12; ಲೂಕ 20:9-19)
33 “ಈ ಸಾಮ್ಯವನ್ನು ಕೇಳಿರಿ: ಒಬ್ಬ ಮನುಷ್ಯನಿಗೆ ಒಂದು ಸ್ವಂತ ತೋಟವಿತ್ತು. ಅವನು ತೋಟದಲ್ಲಿ ದ್ರಾಕ್ಷಿಯನ್ನು ಬೆಳೆಸಿದನು; ತೋಟದ ಸುತ್ತಲೂ ಗೋಡೆ ಕಟ್ಟಿ ದ್ರಾಕ್ಷಾರಸ ತಯಾರಿಸಲು ಆಲೆಯನ್ನು ಹೂಡಿಸಿದನು. ಕಾವಲಿಗಾಗಿ ಅಟ್ಟಣೆಯನ್ನೂ ಕಟ್ಟಿಸಿದನು. ಅವನು ಆ ತೋಟವನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೊರಟುಹೋದನು. 34 ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂದಾಗ ತನ್ನ ಪಾಲನ್ನು ತೆಗೆದುಕೊಂಡು ಬರಲು ಸೇವಕರನ್ನು ರೈತರ ಬಳಿಗೆ ಕಳುಹಿಸಿದನು.
35 “ಆದರೆ ರೈತರು ಆ ಸೇವಕರನ್ನು ಹಿಡಿದುಕೊಂಡು ಒಬ್ಬನನ್ನು ಹೊಡೆದರು; ಬೇರೊಬ್ಬನನ್ನು ಕತ್ತರಿಸಿಹಾಕಿದರು; ಮೂರನೇ ಸೇವಕನನ್ನು ಕಲ್ಲೆಸೆದು ಕೊಂದರು. 36 ಆದ್ದರಿಂದ ಅವನು ಮೊದಲನೆ ಸಲ ಕಳುಹಿಸಿದ ಸೇವಕರಿಗಿಂತಲೂ ಹೆಚ್ಚು ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. ಆದರೆ ರೈತರು ಮೊದಲನೆ ಸಲ ಮಾಡಿದಂತೆಯೇ ಈ ಸೇವಕರಿಗೂ ಮಾಡಿದರು. 37 ಆಗ ಅವನು, ‘ರೈತರು ನನ್ನ ಮಗನನ್ನು ಗೌರವಿಸುವರು’ ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದನು.
38 “ಆದರೆ ರೈತರು ಮಗನನ್ನು ನೋಡಿದಾಗ, ‘ಇವನು ತೋಟದ ಒಡೆಯನ ಮಗನು. ಈ ತೋಟ ಇವನದಾಗುವುದು. ನಾವು ಇವನನ್ನು ಕೊಂದರೆ, ಈ ತೋಟ ನಮ್ಮದಾಗುವುದು’ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 39 ಆದ್ದರಿಂದ ರೈತರು ಮಗನನ್ನು ಹಿಡಿದು ತೋಟದಿಂದ ಹೊರಕ್ಕೆಸೆದು ಅವನನ್ನು ಕೊಂದುಹಾಕಿದರು.
40 “ಹೀಗಿರಲು ತೋಟದ ಯಜಮಾನನು ತಾನೇ ಬಂದಾಗ ಈ ರೈತರಿಗೆ ಏನು ಮಾಡುತ್ತಾನೆ?”
41 ಯೆಹೂದ್ಯ ಯಾಜಕರು ಮತ್ತು ನಾಯಕರು, “ಅವನು ಖಂಡಿತವಾಗಿ ಆ ದುಷ್ಟಜನರನ್ನು ಕೊಂದು ಸುಗ್ಗಿಕಾಲದಲ್ಲಿ ತನ್ನ ಪಾಲನ್ನು ತನಗೆ ಕೊಡುವ ರೈತರಿಗೆ ಅದನ್ನು ಗುತ್ತಿಗೆಗೆ ಕೊಡುತ್ತಾನೆ” ಎಂದು ಹೇಳಿದರು.
42 ಯೇಸು ಅವರಿಗೆ, “ಖಂಡಿತವಾಗಿಯೂ ನೀವು ಇದನ್ನು ಪವಿತ್ರ ಗ್ರಂಥದಲ್ಲಿ ಓದಿದ್ದೀರಿ:
‘ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
ಪ್ರಭುವು ಇದನ್ನು ಮಾಡಿದನು. ಇದು ನಮಗೆ ಆಶ್ಚರ್ಯಕರವಾಗಿದೆ.’(A)
43 “ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ದೇವರ ರಾಜ್ಯವು ನಿಮ್ಮಿಂದ ತೆಗೆದುಹಾಕಲ್ಪಟ್ಟು ಆ ರಾಜ್ಯದಲ್ಲಿ ದೇವರ ಇಷ್ಟಕ್ಕನುಸಾರವಾದ ಕಾರ್ಯಗಳನ್ನು ಮಾಡುವವರಿಗೆ ಕೊಡಲ್ಪಡುವುದು. 44 ಈ ಕಲ್ಲಿನ ಮೇಲೆ ಬೀಳುವ ಮನುಷ್ಯನು ತುಂಡುತುಂಡಾಗುತ್ತಾನೆ. ಈ ಕಲ್ಲು ಮನುಷ್ಯನ ಮೇಲೆ ಬಿದ್ದರೆ, ಅವನು ಜಜ್ಜಿಹೋಗುವನು.”
45 ಮಹಾಯಾಜಕರು ಮತ್ತು ಫರಿಸಾಯರು ಯೇಸು ಹೇಳಿದ ಈ ಸಾಮ್ಯಗಳನ್ನು ಕೇಳಿ, ತಮ್ಮನ್ನೇ ಕುರಿತು ಇವುಗಳನ್ನು ಹೇಳಿದನೆಂದು ತಿಳಿದುಕೊಂಡರು. 46 ಅವರು ಯೇಸುವನ್ನು ಬಂಧಿಸಲು ಉಪಾಯ ಹುಡುಕಿದರೂ ಜನರಿಗೆ ಭಯಪಟ್ಟು ಬಂಧಿಸಲಿಲ್ಲ. ಏಕೆಂದರೆ ಯೇಸು ಒಬ್ಬ ಪ್ರವಾದಿ ಎಂದು ಜನರು ನಂಬಿದ್ದರು.
Kannada Holy Bible: Easy-to-Read Version. All rights reserved. © 1997 Bible League International