M’Cheyne Bible Reading Plan
6 ಆಗ ಯೆಹೋವನು ಮೋಶೆಗೆ, “ನಾನು ಫರೋಹನಿಗೆ ಮಾಡುವುದನ್ನು ಈಗ ನೀನು ನೋಡುವೆ. ನಾನು ನನ್ನ ಮಹಾಶಕ್ತಿಯನ್ನು ಅವನಿಗೆ ವಿರುದ್ಧವಾಗಿ ಉಪಯೋಗಿಸುವುದರಿಂದ ಅವನು ನನ್ನ ಜನರನ್ನು ಹೋಗಗೊಡಿಸುವನು; ಬಲವಂತದಿಂದ ಅವರನ್ನು ಹೊರಡಿಸುವನು” ಎಂದು ಹೇಳಿದನು.
2 ಬಳಿಕ ಯೆಹೋವನು ಮೋಶೆಗೆ, 3 “ನಾನು ಯೆಹೋವನೇ. ನಾನು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಕಾಣಿಸಿಕೊಂಡೆನು. ಅವರು ನನ್ನನ್ನು ‘ಎಲ್ ಶದ್ದಾಯ್’ (ಸರ್ವಶಕ್ತನಾದ ದೇವರು) ಎಂದು ಕರೆದರು. ಆದರೆ ನಾನು ನನ್ನನ್ನು ಯೆಹೋವ ಎಂಬ ನನ್ನ ಹೆಸರಿನಲ್ಲಿ ಅವರಿಗೆ ಗೊತ್ತುಪಡಿಸಿಕೊಳ್ಳಲಿಲ್ಲ. 4 ನಾನು ಅವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು. ಕಾನಾನ್ ದೇಶವನ್ನು ಅವರಿಗೆ ಕೊಡುವುದಾಗಿ ನಾನು ವಾಗ್ದಾನ ಮಾಡಿದೆನು. ಅವರು ಆ ದೇಶದಲ್ಲಿ ಜೀವಿಸಿದರೂ ಅದು ಅವರ ಸ್ವಂತ ದೇಶವಾಗಿರಲಿಲ್ಲ. 5 ಈಗ ಇಸ್ರೇಲರ ಕಷ್ಟಗಳನ್ನೂ ಬಲ್ಲೆನು; ಅವರು ಈಜಿಪ್ಟಿನವರ ಗುಲಾಮರೆಂದೂ ಬಲ್ಲೆನು; ನಾನು ನನ್ನ ಒಡಂಬಡಿಕೆಯನ್ನು ಜ್ಞಾಪಿಸಿಕೊಂಡಿದ್ದೇನೆ. 6 ಆದ್ದರಿಂದ ನನ್ನ ಈ ಮಾತುಗಳನ್ನು ಇಸ್ರೇಲರಿಗೆ ತಿಳಿಸು: ‘ನಾನೇ ಯೆಹೋವನು. ಈಜಿಪ್ಟಿನವರು ನಿಮ್ಮಿಂದ ಮಾಡಿಸುವ ಬಿಟ್ಟೀಕೆಲಸದಿಂದ ತಪ್ಪಿಸಿ ಈಜಿಪ್ಟಿನವರ ಗುಲಾಮಗಿರಿಯಿಂದ ಬಿಡಿಸುವೆನು. ನನ್ನ ಮಹಾಶಕ್ತಿಯಿಂದ ಈಜಿಪ್ಟಿನವರನ್ನು ಭಯಂಕರವಾಗಿ ದಂಡಿಸುವೆನು; ಬಳಿಕ ನಿಮ್ಮನ್ನು ರಕ್ಷಿಸುವೆನು. 7 ನೀವು ನನ್ನ ಜನರಾಗಿರುವಿರಿ; ನಾನು ನಿಮ್ಮ ದೇವರಾಗಿರುವೆನು. ನಿಮ್ಮ ದೇವರಾಗಿರುವ ಯೆಹೋವನಾದ ನಾನೇ ನಿಮ್ಮನ್ನು ಈಜಿಪ್ಟಿನವರ ಬಿಟ್ಟೀಕೆಲಸದಿಂದ ಬಿಡುಗಡೆಗೊಳಿಸಿದೆನೆಂದು ಆಗ ನೀವು ತಿಳಿದುಕೊಳ್ಳುವಿರಿ. 8 ಇದಲ್ಲದೆ ಅಬ್ರಹಾಮ, ಇಸಾಕ ಮತ್ತು ಯಾಕೋಬರಿಗೆ ನಾನು ವಾಗ್ದಾನ ಮಾಡಿದ ದೇಶಕ್ಕೆ ನಿಮ್ಮನ್ನು ನಡಿಸುವೆನು. ನಾನು ಆ ದೇಶವನ್ನು ನಿಮಗೆ ಕೊಡುವೆನು. ಅದು ನಿಮ್ಮದಾಗಿರುವುದು. ನಾನೇ ಯೆಹೋವನು’” ಎಂದು ಹೇಳಿದನು.
9 ಅಂತೆಯೇ ಮೋಶೆಯು ಇಸ್ರೇಲರಿಗೆ ತಿಳಿಸಿದನು. ಆದರೆ ಜನರು ಬಹು ಪ್ರಯಾಸಪಟ್ಟು ದುಡಿಯುತ್ತಿದ್ದುದರಿಂದ ಮೋಶೆಯ ಮಾತಿಗೆ ಕಿವಿಗೊಡುವಷ್ಟು ತಾಳ್ಮೆ ಅವರಿಗಿರಲಿಲ್ಲ.
10 ಆಗ ಯೆಹೋವನು ಮೋಶೆಗೆ, 11 “ಹೋಗು, ಇಸ್ರೇಲರನ್ನು ಈಜಿಪ್ಟಿನಿಂದ ಕಳುಹಿಸಬೇಕೆಂದು ಫರೋಹನಿಗೆ ಹೇಳು” ಅಂದನು.
12 ಅದಕ್ಕೆ ಮೋಶೆ, “ಇಸ್ರೇಲರು ನನ್ನ ಮಾತನ್ನು ಕೇಳುವುದಿಲ್ಲ! ಆದ್ದರಿಂದ ಫರೋಹನು ನನ್ನ ಮಾತನ್ನು ಖಂಡಿತವಾಗಿ ಕೇಳುವುದಿಲ್ಲ. ನಾನು ಮಾತಾಡುವುದರಲ್ಲಿ ಜಾಣನಲ್ಲ”[a] ಎಂದು ಹೇಳಿದನು.
13 ಆದರೆ, ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತಾಡಿ ಇಸ್ರೇಲರೊಡನೆಯೂ ಫರೋಹನೊಡನೆಯೂ ಮಾತಾಡಬೇಕೆಂದು ಆಜ್ಞಾಪಿಸಿದನು. ಅಲ್ಲದೆ ಈಜಿಪ್ಟಿನಿಂದ ಇಸ್ರೇಲರನ್ನು ಬಿಡಿಸಿಕೊಂಡು ಹೋಗಬೇಕೆಂದು ಯೆಹೋವನು ಅವರಿಗೆ ಆಜ್ಞಾಪಿಸಿದನು.
ಇಸ್ರೇಲರ ಕೆಲವು ಕುಟುಂಬಗಳು
14 ಇಸ್ರೇಲರ ಕುಟುಂಬಗಳ ನಾಯಕರುಗಳ ಹೆಸರುಗಳು ಇಲ್ಲಿವೆ:
ಇಸ್ರೇಲನ ಮೊದಲನೆಯ ಮಗನಾದ ರೂಬೇನನಿಗೆ ನಾಲ್ಕು ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಹನೋಕ್, ಫಲ್ಲು, ಹೆಚ್ರೋನ್ ಮತ್ತು ಕರ್ಮೀ.
15 ಸಿಮೆಯೋನನ ಗಂಡುಮಕ್ಕಳು ಯಾರೆಂದರೆ: ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಸೌಲ. (ಸೌಲನು ಕಾನಾನ್ಯ ಸ್ತ್ರೀಯ ಮಗನು.)
16 ಲೇವಿಯು ನೂರಮೂವತ್ತೇಳು ವರ್ಷ ಜೀವಿಸಿದನು. ಲೇವಿಯ ಗಂಡುಮಕ್ಕಳ ವಂಶಾವಳಿ: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.
17 ಗೇರ್ಷೋನನಿಗೆ ಲಿಬ್ನೀ ಮತ್ತು ಶಿಮ್ಮೀ ಎಂಬ ಇಬ್ಬರು ಗಂಡುಮಕ್ಕಳಿದ್ದರು.
18 ಕೆಹಾತನು ನೂರಮೂವತ್ತು ಮೂರು ವರ್ಷ ಜೀವಿಸಿದನು. ಕೆಹಾತನ ಗಂಡುಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
19 ಮೆರಾರೀಯ ಗಂಡುಮಕ್ಕಳು: ಮಹ್ಲೀ ಮತ್ತು ಮೂಷೀ. ಇಸ್ರೇಲನ ಮಗನಾದ ಲೇವಿಯಿಂದುಂಟಾದ ಗೋತ್ರಗಳು ಇವೇ.
20 ಅಮ್ರಾಮನು ನೂರಮೂವತ್ತೇಳು ವರ್ಷ ಜೀವಿಸಿದನು. ಅಮ್ರಾಮನು ತನ್ನ ತಂದೆಯ ಸಹೋದರಿಯಾದ ಯೋಕೆಬೆದಳನ್ನು ಮದುವೆಯಾದನು. ಅಮ್ರಾಮ್ ಮತ್ತು ಯೋಕೆಬೆದಳು ಆರೋನ ಮತ್ತು ಮೋಶೆಗೆ ಜನ್ಮವಿತ್ತರು.
21 ಇಚ್ಹಾರನ ಗಂಡುಮಕ್ಕಳು: ಕೋರಹ, ನೆಫೆಗ್ ಮತ್ತು ಜಿಕ್ರಿ.
22 ಉಜ್ಜೀಯೇಲನ ಗಂಡುಮಕ್ಕಳು: ಮೀಷಾಯೇಲ್, ಎಲ್ಚಾಫಾನ್ ಮತ್ತು ಸಿತ್ರೀ.
23 ಆರೋನನು ಎಲೀಶೇಬಳನ್ನು ಮದುವೆಯಾದನು. (ಎಲೀಶೇಬಳು ಅಮ್ಮೀನಾದಾಬನ ಮಗಳು ಮತ್ತು ನಹಶೋನನ ತಂಗಿ.) ಆರೋನನಿಗೆ ಎಲೀಶೇಬಳಲ್ಲಿ ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್ ಎಂಬ ಗಂಡುಮಕ್ಕಳು ಹುಟ್ಟಿದರು.
24 ಕೋರಹನ ಗಂಡುಮಕ್ಕಳು: ಅಸ್ಸೀರ್, ಎಲ್ಕಾನಾ ಮತ್ತು ಅಬೀಯಾಸಾಫ್. ಇವರೇ ಕೋರಹನ ಕುಲಗಳು.
25 ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಮಗಳನ್ನು ಮದುವೆಯಾದನು; ಆಕೆ ಫೀನೆಹಾಸನಿಗೆ ಜನ್ಮವಿತ್ತಳು. ಇವರೆಲ್ಲರೂ ಇಸ್ರೇಲನ ಮಗನಾದ ಲೇವಿಯ ಗೋತ್ರದವರು.
26 ಮೋಶೆ ಆರೋನರು ಸಹ ಲೇವಿ ಕುಲದವರು. “ನನ್ನ ಜನರನ್ನು ಗುಂಪುಗುಂಪಾಗಿ[b] ಈಜಿಪ್ಟಿನಿಂದ ನಡೆಸಿಕೊಂಡು ಹೋಗಿ” ಎಂದು ದೇವರು ಹೇಳಿದ್ದು ಇವರಿಗೇ. 27 ಇಸ್ರೇಲರು ಈಜಿಪ್ಟಿನಿಂದ ಹೊರಟುಹೋಗಲು ಅನುಮತಿ ನೀಡಬೇಕೆಂದು ಈಜಿಪ್ಟಿನ ರಾಜನಾದ ಫರೋಹನೊಂದಿಗೆ ಮಾತಾಡಿದವರು ಮೋಶೆ ಮತ್ತು ಆರೋನರೇ.
ಯೆಹೋವನು ಮೋಶೆಯನ್ನು ತಿರುಗಿ ಕರೆದದ್ದು
28 ಬಳಿಕ ಯೆಹೋವನು ಮೋಶೆಯ ಸಂಗಡ ಈಜಿಪ್ಟಿನಲ್ಲಿ ಮಾತಾಡಿ, 29 “ನಾನು ಯೆಹೋವನು. ನಾನು ನಿನಗೆ ತಿಳಿಸುವ ಪ್ರತಿಯೊಂದನ್ನು ಈಜಿಪ್ಟಿನ ರಾಜನಿಗೆ ಹೇಳು” ಅಂದನು.
30 ಆದರೆ ಮೋಶೆ ಯೆಹೋವನಿಗೆ, “ನಾನು ಒಳ್ಳೆಯ ಮಾತುಗಾರನಲ್ಲ. ರಾಜನು ನನ್ನ ಮಾತನ್ನು ಕೇಳುವನೇ?” ಎಂದು ಉತ್ತರಿಸಿದನು.
ಯೇಸು ತನ್ನ ಅಪೊಸ್ತಲರನ್ನು ಸೇವೆಗೆ ಕಳುಹಿಸಿದ್ದು
(ಮತ್ತಾಯ 10:5-15; ಮಾರ್ಕ 6:7-13)
9 ಯೇಸು ಹನ್ನೆರಡು ಮಂದಿ ಅಪೊಸ್ತಲರನ್ನು ಒಟ್ಟಾಗಿ ಕರೆದು ಅವರಿಗೆ ಕಾಯಿಲೆಗಳನ್ನು ವಾಸಿಮಾಡುವ ಶಕ್ತಿಯನ್ನೂ ದೆವ್ವಗಳ ಮೇಲೆ ಅಧಿಕಾರವನ್ನೂ ಕೊಟ್ಟನು. 2 ದೇವರ ರಾಜ್ಯದ ಬಗ್ಗೆ ತಿಳಿಸುವುದಕ್ಕೂ ಅಸ್ವಸ್ಥರಾದವರನ್ನು ವಾಸಿಮಾಡುವುದಕ್ಕೂ ಯೇಸು ಅಪೊಸ್ತಲರನ್ನು ಕಳುಹಿಸಿದನು. 3 ಆತನು ಅವರಿಗೆ ಹೇಳಿದ್ದೇನೆಂದರೆ: “ನೀವು ಪ್ರಯಾಣಕ್ಕಾಗಿ ಊರುಗೋಲನ್ನಾಗಲಿ ಚೀಲವನ್ನಾಗಲಿ ಆಹಾರವನ್ನಾಗಲಿ ಹಣವನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ಎರಡು ಅಂಗಿಗಳನ್ನೂ ತೆಗೆದುಕೊಳ್ಳಬೇಡಿ. 4 ನೀವು ಒಂದು ಮನೆಯಲ್ಲಿ ಇಳಿದುಕೊಂಡಾಗ, ಆ ಊರನ್ನು ಬಿಟ್ಟುಹೋಗುವ ಸಮಯದವರೆಗೂ ಅಲ್ಲೇ ತಂಗಿರಿ. 5 ಆ ಊರಿನ ಜನರು ನಿಮ್ಮನ್ನು ಸ್ವಾಗತಿಸದಿದ್ದರೆ, ಆ ಊರಿನ ಹೊರಗೆ ಹೋಗಿ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. ಅದು ಅವರಿಗೆ ಎಚ್ಚರಿಕೆಯಾಗಿರುವುದು.”
6 ಆದ್ದರಿಂದ ಅಪೊಸ್ತಲರು ಹೊರಟು ಊರೂರುಗಳಿಗೆ ಹೋಗಿ, ಎಲ್ಲೆಲ್ಲೂ ಸುವಾರ್ತೆಯನ್ನು ಸಾರಿದರು ಮತ್ತು ರೋಗಿಗಳನ್ನು ವಾಸಿಮಾಡಿದರು.
ಯೇಸುವಿನ ಬಗ್ಗೆ ಹೆರೋದನಿಗಾದ ಗಲಿಬಿಲಿ
(ಮತ್ತಾಯ 14:1-12; ಮಾರ್ಕ 6:14-29)
7 ನಡೆಯುತ್ತಿದ್ದ ಎಲ್ಲಾ ಸಂಗತಿಗಳ ಬಗ್ಗೆ ರಾಜ್ಯಪಾಲ ಹೆರೋದನು ಕೇಳಿ ಗಲಿಬಿಲಿಗೊಂಡನು. ಏಕೆಂದರೆ, “ಸ್ನಾನಿಕ ಯೋಹಾನನೇ ಸತ್ತವರೊಳಗಿಂದ ಎದ್ದಿದ್ದಾನೆ” ಎಂದು ಕೆಲವರು ಹೇಳುತ್ತಿದ್ದರು. 8 ಇನ್ನು ಕೆಲವರು, “ಎಲೀಯನು ನಮ್ಮ ಬಳಿಗೆ ಬಂದಿದ್ದಾನೆ” ಎಂದು ಹೇಳುತ್ತಿದ್ದರು. ಮತ್ತೆ ಕೆಲವರು, “ಪೂರ್ವಕಾಲದ ಪ್ರವಾದಿಗಳಲ್ಲೊಬ್ಬನು ಜೀವಂತವಾಗಿ ಎದ್ದಿದ್ದಾನೆ” ಎಂದು ಹೇಳುತ್ತಿದ್ದರು. 9 ಹೆರೋದನು, “ನಾನು ಯೋಹಾನನ ತಲೆಯನ್ನು ಕತ್ತರಿಸಿದೆನು. ಆದರೆ ಈ ಸಂಗತಿಗಳನ್ನು ಮಾಡುತ್ತಿರುವ ಈ ಮನುಷ್ಯನು ಯಾರು?” ಎಂದು ಆಲೋಚಿಸುತ್ತಾ ಯೇಸುವನ್ನು ನೋಡಲು ಪ್ರಯತ್ನಿಸಿದನು.
ಐದು ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಊಟ
(ಮತ್ತಾಯ 14:13-21; ಮಾರ್ಕ 6:30-44; ಯೋಹಾನ 6:1-14)
10 ಅಪೊಸ್ತಲರು ಸುವಾರ್ತಾ ಪ್ರಯಾಣದಿಂದ ಹಿಂತಿರುಗಿ ಬಂದು, ತಾವು ಮಾಡಿದ ಸಂಗತಿಗಳನ್ನು ಯೇಸುವಿಗೆ ತಿಳಿಸಿದರು. ಆಗ ಆತನು ಅವರನ್ನು ಬೆತ್ಸಾಯಿದ ಊರಿನ ಸಮೀಪಕ್ಕೆ ಪ್ರತ್ಯೇಕವಾಗಿ ಕರೆದುಕೊಂಡು ಹೋದನು. ಅಲ್ಲಿ ಯೇಸು ಮತ್ತು ಆತನ ಅಪೊಸ್ತಲರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. 11 ಆದರೆ ಯೇಸು ಅಲ್ಲಿಗೆ ಹೋದದ್ದು ಜನರಿಗೆ ತಿಳಿಯಿತು. ಅವರು ಆತನನ್ನು ಹಿಂಬಾಲಿಸಿದರು. ಯೇಸು ಅವರನ್ನು ಸ್ವಾಗತಿಸಿ ದೇವರ ರಾಜ್ಯದ ಬಗ್ಗೆ ಅವರಿಗೆ ತಿಳಿಸಿದನು; ಕಾಯಿಲೆಯ ಜನರನ್ನು ವಾಸಿಮಾಡಿದನು.
12 ಅಂದು ಸಾಯಂಕಾಲ, ಹನ್ನೆರಡು ಮಂದಿ ಅಪೊಸ್ತಲರು ಯೇಸುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಯಾರೂ ವಾಸವಾಗಿಲ್ಲ. ಆದ್ದರಿಂದ ಜನರನ್ನು ಕಳುಹಿಸಿಬಿಡು. ಅವರು ಸುತ್ತಮುತ್ತಲಿರುವ ಹೊಲಗಳಿಗೂ ಊರುಗಳಿಗೂ ಹೋಗಿ ಆಹಾರವನ್ನು ಕೊಂಡುಕೊಳ್ಳಲಿ ಮತ್ತು ರಾತ್ರಿ ನಿದ್ರಿಸಲು ಸ್ಥಳವನ್ನು ಹುಡುಕಿಕೊಳ್ಳಲಿ” ಎಂದು ಹೇಳಿದರು.
13 ಆದರೆ ಯೇಸು ಅಪೊಸ್ತಲರಿಗೆ, “ನೀವೇ ಅವರಿಗೆ ಸ್ವಲ್ಪ ಆಹಾರ ಕೊಡಿರಿ” ಎಂದು ಹೇಳಿದನು.
ಅದಕ್ಕೆ ಅಪೊಸ್ತಲರು, “ನಮ್ಮಲ್ಲಿ ಕೇವಲ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ. ನಾವೇ ಹೋಗಿ ಈ ಜನರಿಗೆಲ್ಲಾ ಆಹಾರವನ್ನು ಕೊಂಡುಕೊಳ್ಳಬೇಕೇ?” ಎಂದು ಕೇಳಿದರು. 14 (ಅಲ್ಲಿ ಸುಮಾರು ಐದು ಸಾವಿರ ಮಂದಿ ಗಂಡಸರು ಇದ್ದರು.)
ಯೇಸು ತನ್ನ ಶಿಷ್ಯರಿಗೆ, “ಇವರನ್ನು ಸುಮಾರು ಐವತ್ತೈವತ್ತು ಜನರಂತೆ ಸಾಲಾಗಿ ಕುಳ್ಳಿರಿಸಿರಿ” ಅಂದನು.
15 ಅಂತೆಯೇ ಶಿಷ್ಯರು ಮಾಡಿದರು. ಜನರೆಲ್ಲರೂ ನೆಲದ ಮೇಲೆ ಕುಳಿತುಕೊಂಡರು. 16 ಆಗ ಯೇಸು ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ಕೈಯಲ್ಲಿ ತೆಗೆದುಕೊಂಡು, ಆಕಾಶದ ಕಡೆಗೆ ನೋಡಿ, ಅವುಗಳಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದನು. ಬಳಿಕ ಯೇಸು ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚಬೇಕೆಂದು ಹೇಳಿದನು. 17 ಎಲ್ಲರೂ ತಿಂದು ತೃಪ್ತರಾದರು. ತಿನ್ನಲಾರದೆ ಬಿಟ್ಟಿದ್ದ ಆಹಾರದ ತುಂಡುಗಳನ್ನು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು.
ಯೇಸುವೇ ಕ್ರಿಸ್ತನು
(ಮತ್ತಾಯ 16:13-19; ಮಾರ್ಕ 8:27-29)
18 ಒಮ್ಮೆ ಯೇಸು ಏಕಾಂತವಾಗಿ ಪ್ರಾರ್ಥನೆ ಮಾಡುತ್ತಿದ್ದನು. ಆತನ ಶಿಷ್ಯರು ಒಟ್ಟಾಗಿ ಅಲ್ಲಿಗೆ ಬಂದರು. ಯೇಸು ಅವರಿಗೆ, “ಜನರು ನನ್ನನ್ನು ಯಾರೆಂದು ಹೇಳುತ್ತಾರೆ?” ಎಂದು ಕೇಳಿದನು.
19 ಅದಕ್ಕೆ ಶಿಷ್ಯರು, “ಕೆಲವು ಜನರು ನಿನ್ನನ್ನು ‘ಸ್ನಾನಿಕನಾದ ಯೋಹಾನ’ ಎನ್ನುತ್ತಾರೆ. ಇನ್ನು ಕೆಲವರು, ‘ಎಲೀಯ’ ಎನ್ನುತ್ತಾರೆ. ಮತ್ತೆ ಕೆಲವರು, ‘ಪೂರ್ವಕಾಲದ ಪ್ರವಾದಿಗಳಲ್ಲಿ ಒಬ್ಬನು ಜೀವಂತವಾಗಿ ಎದ್ದುಬಂದಿದ್ದಾನೆ’ ಎನ್ನುತ್ತಾರೆ” ಎಂದು ಉತ್ತರಿಸಿದರು.
20 ಆಗ ಯೇಸು, “ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಶಿಷ್ಯರನ್ನು ಕೇಳಿದನು.
ಪೇತ್ರನು, “ನೀನು ದೇವರಿಂದ ಬಂದ ಕ್ರಿಸ್ತನು” ಎಂದು ಉತ್ತರಕೊಟ್ಟನು.
21 ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಯೇಸು ಅವರನ್ನು ಎಚ್ಚರಿಸಿದನು.
ಯೇಸು ತನ್ನ ಮರಣದ ಕುರಿತು ಮುಂತಿಳಿಸಿದ್ದು
(ಮತ್ತಾಯ 16:21-28; ಮಾರ್ಕ 8:31–9:1)
22 ಬಳಿಕ ಯೇಸು, “ಮನುಷ್ಯಕುಮಾರನು ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಆತನು ಹಿರಿಯ ಯೆಹೂದ್ಯನಾಯಕರಿಂದಲೂ ಮಹಾಯಾಜಕರಿಂದಲೂ ಧರ್ಮೋಪದೇಶಕರಿಂದಲೂ ತಿರಸ್ಕೃತನಾಗಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.
23 ಯೇಸು ತನ್ನ ಮಾತನ್ನು ಮುಂದುವರಿಸಿ ಅವರೆಲ್ಲರಿಗೆ ಹೇಳಿದ್ದೇನೆಂದರೆ: “ನನ್ನ ಹಿಂಬಾಲಕನಾಗಬಯಸುವವನು ತನ್ನನ್ನು ನಿರಾಕರಿಸಿ, ಪ್ರತಿದಿನ ತನ್ನ ಶಿಲುಬೆಯನ್ನು (ತನಗಾಗುವ ಹಿಂಸೆಯನ್ನು) ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. 24 ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು. ನನಗೋಸ್ಕರ ತನ್ನ ಜೀವವನ್ನು ಕೊಡುವವನು ಅದನ್ನು ಉಳಿಸಿಕೊಳ್ಳುವನು. 25 ಒಬ್ಬನು ಇಡೀ ಲೋಕವನ್ನೇ ಸಂಪಾದಿಸಿಕೊಂಡು, ತನ್ನನ್ನೇ ಕೆಡಿಸಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅದರಿಂದ ಅವನಿಗೆ ಲಾಭವೇನು? 26 ಯಾವನಾದರೂ ನನಗೂ ನನ್ನ ಉಪದೇಶಕ್ಕೂ ನಾಚಿಕೊಳ್ಳುವುದಾದರೆ, ನಾನು ನನ್ನ ಮಹಿಮೆಯೊಡನೆ, ತಂದೆಯ ಮಹಿಮೆಯೊಡನೆ ಮತ್ತು ಪರಿಶುದ್ಧ ದೂತರ ಮಹಿಮೆಯೊಡನೆ ಬಂದಾಗ ಅವನ ವಿಷಯದಲ್ಲಿ ನಾಚಿಕೊಳ್ಳುವೆನು. 27 ನಾನು ಸತ್ಯವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ಕೆಲವರು ತಾವು ಸಾಯುವುದಕ್ಕಿಂತ ಮೊದಲು ದೇವರ ರಾಜ್ಯವನ್ನು ನೋಡುವರು” ಎಂದು ಹೇಳಿದನು.
ಮೋಶೆ, ಎಲೀಯ ಮತ್ತು ಯೇಸು
(ಮತ್ತಾಯ 17:1-8; ಮಾರ್ಕ 9:2-8)
28 ಯೇಸು ಈ ಸಂಗತಿಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ನಂತರ, ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಪ್ರಾರ್ಥನೆ ಮಾಡುವುದಕ್ಕೆ ಬೆಟ್ಟದ ಮೇಲೆ ಹೋದನು. 29 ಯೇಸು ಪ್ರಾರ್ಥಿಸುತ್ತಿದ್ದಾಗ, ಆತನ ಮುಖವು ರೂಪಾಂತರವಾಯಿತು. ಆತನ ಬಟ್ಟೆಗಳು ಬೆಳ್ಳಗೆ ಹೊಳೆಯತೊಡಗಿದವು. 30 ಆಗ ಇಬ್ಬರು ಪ್ರವಾದಿಗಳು ಯೇಸುವಿನೊಡನೆ ಮಾತನಾಡುತ್ತಿದ್ದರು. ಅವರು ಮೋಶೆ ಮತ್ತು ಎಲೀಯ. 31 ಇವರಿಬ್ಬರು ಸಹ ಪ್ರಕಾಶಮಾನವಾಗಿ ಹೊಳೆಯುತ್ತಿದ್ದರು. ಜೆರುಸಲೇಮಿನಲ್ಲಿ ಸಂಭವಿಸಲಿಕ್ಕಿದ್ದ ಆತನ ಮರಣದ ಬಗ್ಗೆ ಅವರು ಮಾತಾಡುತ್ತಿದ್ದರು. 32 ಗಾಢನಿದ್ರೆಯಲ್ಲಿದ್ದ ಪೇತ್ರ ಮತ್ತು ಇತರರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಯೇಸುವಿನೊಡನೆ ನಿಂತಿದ್ದ ಅವರಿಬ್ಬರನ್ನೂ ಕಂಡರು. 33 ಮೋಶೆ ಮತ್ತು ಎಲೀಯ ಆತನನ್ನು ಬಿಟ್ಟುಹೋಗುತ್ತಿರುವಾಗ, ಪೇತ್ರನು, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ಇಲ್ಲಿ ನಾವು ಮೂರು ಗುಡಾರಗಳನ್ನು ಹಾಕುತ್ತೇವೆ. ನಿನಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು” ಎಂದು ಹೇಳಿದನು. (ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದು ತಿಳಿಯಲಿಲ್ಲ.)
34 ಪೇತ್ರನು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಮೋಡವು ಬಂದು ಅವರ ಸುತ್ತಲೂ ಆವರಿಸಿತು. ಆಗ ಪೇತ್ರ, ಯಾಕೋಬ ಮತ್ತು ಯೋಹಾನನಿಗೆ ಭಯವಾಯಿತು. 35 ಮೋಡದೊಳಗಿಂದ, “ಈತನು ನನ್ನ ಮಗನು. ನಾನು ಆರಿಸಿಕೊಂಡವನು ಇವನೇ. ಈತನಿಗೆ ವಿಧೇಯರಾಗಿರಿ” ಎಂಬ ವಾಣಿ ಕೇಳಿಸಿತು.
36 ಆ ವಾಣಿ ಆದಮೇಲೆ ಅವರು ಯೇಸುವನ್ನು ಮಾತ್ರ ಕಂಡರು. ಪೇತ್ರ, ಯಾಕೋಬ, ಯೋಹಾನರು ತಾವು ಕಂಡ ಈ ಸಂಗತಿಗಳಲ್ಲಿ ಒಂದನ್ನಾದರೂ ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಮೌನವಾಗಿದ್ದರು.
ದೆವ್ವದಿಂದ ಪೀಡಿತನಾಗಿದ್ದ ಬಾಲಕನಿಗೆ ಬಿಡುಗಡೆ
(ಮತ್ತಾಯ 17:14-18; ಮಾರ್ಕ 9:14-27)
37 ಮರುದಿನ, ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಬೆಟ್ಟದಿಂದಿಳಿದು ಬಂದರು. ಜನರ ಬಹು ದೊಡ್ಡ ಗುಂಪೊಂದು ಯೇಸುವನ್ನು ಎದುರುಗೊಂಡಿತು. 38 ಗುಂಪಿನಲ್ಲಿದ್ದ ಒಬ್ಬ ಮನುಷ್ಯನು, “ಉಪದೇಶಕನೇ, ದಯಮಾಡಿ ಬಂದು ನನ್ನ ಮಗನನ್ನು ನೋಡು. ನನಗೆ ಅವನೊಬ್ಬನೇ ಮಗನು. 39 ದೆವ್ವವೊಂದು ನನ್ನ ಮಗನೊಳಗೆ ಬರುತ್ತದೆ. ಆಗ ಅವನು ಕೂಗಾಡುತ್ತಾನೆ. ಸ್ವಾಧೀನ ಕಳೆದುಕೊಂಡು ಬಾಯಿಂದ ನೊರೆಸುರಿಸುತ್ತಾನೆ. ದೆವ್ವವು ಅವನನ್ನು ಒದ್ದಾಡಿಸಿ ಜಜ್ಜದ ಹೊರತು ಬಿಟ್ಟುಬಿಡುವುದೇ ಇಲ್ಲ. 40 ನನ್ನ ಮಗನನ್ನು ದೆವ್ವದಿಂದ ಬಿಡಿಸಬೇಕೆಂದು ನಿನ್ನ ಶಿಷ್ಯರನ್ನೂ ಬೇಡಿಕೊಂಡೆನು. ಆದರೆ ಅವರಿಂದ ಸಾಧ್ಯವಾಗಲಿಲ್ಲ” ಎಂದು ಯೇಸುವಿಗೆ ಕೂಗಿ ಹೇಳಿದನು.
41 ಆಗ ಯೇಸು, “ನಂಬಿಕೆಯಿಲ್ಲದ ದುಷ್ಟಸಂತಾನವೇ, ಇನೆಷ್ಟು ಕಾಲ ನಾನು ನಿಮ್ಮ ಸಂಗಡ ತಾಳ್ಮೆಯಿಂದ ಇರಲಿ?” ಎಂದು ಉತ್ತರಿಸಿ, ಆ ಮನುಷ್ಯನಿಗೆ, “ನಿನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ” ಅಂದನು.
42 ಆ ಹುಡುಗನು ಬರುತ್ತಿದ್ದಾಗ, ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿತು. ಹುಡುಗನು ತನ್ನ ಸ್ವಾಧೀನ ಕಳೆದುಕೊಂಡನು. ಆಗ ಯೇಸು ದೆವ್ವವನ್ನು ಗದರಿಸಿ ಆ ಹುಡುಗನನ್ನು ಗುಣಪಡಿಸಿದನು. ಬಳಿಕ ಅವನನ್ನು ಅವನ ತಂದೆಗೆ ಒಪ್ಪಿಸಿಕೊಟ್ಟನು. 43 ಜನರೆಲ್ಲರೂ ದೇವರ ಮಹಾಶಕ್ತಿಯನ್ನು ಕಂಡು ಬೆರಗಾದರು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟಣೆ
(ಮತ್ತಾಯ 17:22-23; ಮಾರ್ಕ 9:30-32)
ಯೇಸು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಜನರು ಇನ್ನೂ ಆಶ್ಚರ್ಯಚಕಿತರಾಗಿದ್ದರು. ಯೇಸು ತನ್ನ ಶಿಷ್ಯರಿಗೆ, 44 “ಮನುಷ್ಯಕುಮಾರನನ್ನು ಕೆಲವರ ವಶಕ್ಕೆ ಒಪ್ಪಿಸಲಾಗುವುದು. ನೀವು ಇದನ್ನು ಮರೆಯಕೂಡದು” ಎಂದು ಹೇಳಿದನು. 45 ಆದರೆ ಯೇಸುವಿನ ಈ ಮಾತುಗಳು ಶಿಷ್ಯರಿಗೆ ಅರ್ಥವಾಗಲಿಲ್ಲ. ಏಕೆಂದರೆ ಅವುಗಳ ಅರ್ಥವು ಅವರಿಗೆ ಮರೆಯಾಗಿತ್ತು. ಆದರೂ ಯೇಸು ಹೇಳಿದ್ದರ ಬಗ್ಗೆ ಆತನನ್ನು ಕೇಳುವದಕ್ಕೆ ಶಿಷ್ಯರು ಭಯಪಟ್ಟರು.
ಅತ್ಯಂತ ದೊಡ್ಡ ವ್ಯಕ್ತಿ
(ಮತ್ತಾಯ 18:1-5; ಮಾರ್ಕ 9:33-37)
46 ತಮ್ಮಲ್ಲಿ ಯಾವನು ಅತ್ಯಂತ ಪ್ರಮುಖನು ಎಂಬುದರ ಬಗ್ಗೆ ಯೇಸುವಿನ ಶಿಷ್ಯರು ವಾದಮಾಡತೊಡಗಿದರು. 47 ಅವರ ಆಲೋಚನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಒಂದು ಚಿಕ್ಕ ಮಗುವನ್ನು ಕರೆದು ತನ್ನ ಬಳಿಯಲ್ಲಿ ನಿಲ್ಲಿಸಿದನು. 48 ಬಳಿಕ ಯೇಸು ತನ್ನ ಶಿಷ್ಯರಿಗೆ, “ಒಬ್ಬನು ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ಒಬ್ಬನು ನನ್ನನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನು ಕಳುಹಿಸಿದಾತನನ್ನೇ (ದೇವರನ್ನು) ಸ್ವೀಕರಿಸಿಕೊಂಡಂತಾಯಿತು. ನಿಮ್ಮಲ್ಲಿ ಯಾವನು ದೀನನಾಗಿದ್ದಾನೋ ಅವನೇ ನಿಮ್ಮಲ್ಲಿ ಪ್ರಮುಖನಾಗಿದ್ದಾನೆ” ಎಂದು ಹೇಳಿದನು.
ನಿಮಗೆ ವಿರೋಧವಾಗಿಲ್ಲದ ವ್ಯಕ್ತಿ ನಿಮ್ಮವನೇ
(ಮಾರ್ಕ 9:38-40)
49 ಯೋಹಾನನು, “ಗುರುವೇ, ನಿನ್ನ ಹೆಸರಿನ ಮೂಲಕ ಜನರಿಂದ ದೆವ್ವಗಳನ್ನು ಬಿಡಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ನಾವು ನೋಡಿದೆವು. ಅವನು ನಮ್ಮವನಲ್ಲದ ಕಾರಣ ನಿನ್ನ ಹೆಸರನ್ನು ಬಳಸಕೂಡದೆಂದು ಅವನಿಗೆ ಹೇಳಿದೆವು” ಎಂದರು.
50 ಅದಕ್ಕೆ ಯೇಸು, “ಅವನಿಗೆ ಅಡ್ಡಿಮಾಡಬೇಡಿ. ಏಕೆಂದರೆ, ನಿಮಗೆ ವಿರೋಧವಾಗಿಲ್ಲದವನು ನಿಮ್ಮವನೇ” ಎಂದನು.
ಸಮಾರ್ಯ ಪಟ್ಟಣ
51 ಯೇಸು ಮತ್ತೆ ಪರಲೋಕಕ್ಕೆ ಹಿಂತಿರುಗುವ ಸಮಯ ಹತ್ತಿರವಾಗುತ್ತಿತ್ತು. ಆದ್ದರಿಂದ ಆತನು ಜೆರುಸಲೇಮಿಗೆ ಹೋಗಲು ತೀರ್ಮಾನಿಸಿದನು. 52 ಯೇಸು ಕೆಲವರನ್ನು ತನ್ನ ಮುಂದಾಗಿ ಕಳುಹಿಸಿದನು. ಯೇಸುವಿಗಾಗಿ ಪ್ರತಿಯೊಂದನ್ನು ಸಿದ್ಧಪಡಿಸಲು ಅವರು ಸಮಾರ್ಯ ಪಟ್ಟಣಕ್ಕೆ ಹೋದರು. 53 ಆದರೆ ಆತನು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಸಮಾರ್ಯದ ಜನರು ಆತನನ್ನು ಸ್ವಾಗತಿಸಲಿಲ್ಲ. 54 ಯೇಸುವಿನ ಶಿಷ್ಯರಾದ ಯಾಕೋಬ ಮತ್ತು ಯೋಹಾನ ಇದನ್ನು ಕಂಡು, “ಸ್ವಾಮೀ, ಆಕಾಶದಿಂದ ಬೆಂಕಿ ಬಿದ್ದು ಇವರನ್ನು ನಾಶಮಾಡಲಿ ಎಂದು ನಾವು ಆಜ್ಞಾಪಿಸಬೇಕೆನ್ನುವಿಯೋ!”[a] ಎಂದು ಕೇಳಿದರು.
55 ಆದರೆ ಯೇಸು ಅವರ ಕಡೆಗೆ ತಿರುಗಿ ಗದರಿಸಿದನು.[b] 56 ಬಳಿಕ ಯೇಸು ಮತ್ತು ಆತನ ಶಿಷ್ಯರು ಇನ್ನೊಂದು ಪಟ್ಟಣಕ್ಕೆ ಹೋದರು.
ಯೇಸುವನ್ನು ಹಿಂಬಾಲಿಸಿ
(ಮತ್ತಾಯ 8:19-22)
57 ಅವರೆಲ್ಲರೂ ದಾರಿಯಲ್ಲಿ ಹೋಗುತ್ತಿದ್ದಾಗ, ಒಬ್ಬನು ಯೇಸುವಿಗೆ, “ನೀನು ಎಲ್ಲಿಗೆ ಹೋದರೂ ನಾನು ನಿನ್ನನ್ನು ಹಿಂಬಾಲಿಸುತ್ತೇನೆ” ಎಂದನು.
58 ಯೇಸು, “ನರಿಗಳಿಗೆ ಗುಹೆಗಳಿವೆ, ಪಕ್ಷಿಗಳಿಗೆ ಗೂಡುಗಳಿವೆ. ಆದರೆ ಮನುಷ್ಯಕುಮಾರನಿಗೆ ತಲೆ ಇಡುವಷ್ಟು ಸ್ಥಳವೂ ಇಲ್ಲ” ಎಂದು ಉತ್ತರಿಸಿದನು.
59 ಯೇಸು ಇನೊಬ್ಬನಿಗೆ, “ನನ್ನನ್ನು ಹಿಂಬಾಲಿಸು!” ಎಂದನು.
ಆದರೆ ಅವನು, “ಸ್ವಾಮೀ, ನಾನು ಮೊದಲು ಹೋಗಿ ನನ್ನ ತಂದೆಯ ಅಂತ್ಯಕ್ರಿಯೆಯನ್ನು ಮಾಡಲು ಅವಕಾಶ ನೀಡು” ಎಂದು ಹೇಳಿದನು.
60 ಯೇಸು ಅವನಿಗೆ, “ಸತ್ತಜನರೇ ತಮ್ಮವರಲ್ಲಿ ಸತ್ತುಹೋದವರ ಅಂತ್ಯಕ್ರಿಯೆ ಮಾಡಲಿ! ನೀನು ಹೋಗಿ ದೇವರ ರಾಜ್ಯದ ಬಗ್ಗೆ ತಿಳಿಸು” ಎಂದು ಹೇಳಿದನು.
61 ಮತ್ತೊಬ್ಬನು, “ಸ್ವಾಮೀ, ನಾನು ನಿನ್ನನ್ನು ಹಿಂಬಾಲಿಸುವೆನು. ಆದರೆ ಮೊದಲು ನನ್ನ ಕುಟುಂಬದವರ ಬಳಿಗೆ ಹೋಗಿಬರಲು ಅವಕಾಶ ನೀಡು” ಎಂದು ಹೇಳಿದನು.
62 ಯೇಸು, “ನೇಗಿಲಿನ ಮೇಲೆ ಕೈಯನ್ನು ಹಾಕಿ ಹಿಂತಿರುಗಿ ನೋಡುವವನು ದೇವರ ರಾಜ್ಯಕ್ಕೆ ತಕ್ಕವನಲ್ಲ” ಅಂದನು.
ಯೋಬನ ಉತ್ತರ
23 ಆಗ ಯೋಬನು ಹೀಗೆಂದನು:
2 “ನಾನಿನ್ನೂ ಸಂಕಟದಲ್ಲಿರುವುದರಿಂದ
ಈ ಹೊತ್ತು ಸಹ ನಾನು ದೂರು ಹೇಳುವೆನು.
3 ಆಹಾ, ದೇವರ ದರ್ಶನವು ನನಗೆ ಎಲ್ಲಿ ಆಗುವುದು?
ಆತನ ಬಳಿಗೆ ನಾನು ಹೇಗೆ ಹೋಗಬೇಕು? ನನಗೆ ಗೊತ್ತಾಗಿದ್ದರೆ ಎಷ್ಟೋ ಮೇಲು!
4 ಆಗ ನಾನು ದೇವರಿಗೆ ನನ್ನ ವ್ಯಾಜ್ಯದ ಬಗ್ಗೆ ವಿವರಿಸುತ್ತಿದ್ದೆನು;
ನಾನು ನಿರಪರಾಧಿಯೆಂದು ನಿರೂಪಿಸಲು ನನ್ನ ಬಾಯನ್ನು ವಾದಗಳಿಂದ ತುಂಬಿಸಿಕೊಳ್ಳುತ್ತಿದ್ದೆನು.
5 ದೇವರ ಪ್ರತ್ಯುತ್ತರವನ್ನು ನಾನು ಕೇಳಬಯಸುವೆ.
ಆತನ ಉತ್ತರಗಳನ್ನು ಅರ್ಥಮಾಡಿಕೊಳ್ಳಬಯಸುವೆ.
6 ದೇವರು ತನ್ನ ಮಹಾಶಕ್ತಿಯನ್ನು ನನಗೆ ವಿರೋಧವಾಗಿ ಬಳಸುವನೇ? ಇಲ್ಲ,
ಆತನು ನನಗೆ ಕಿವಿಗೊಡುವನು!
7 ನಾನು ಯಥಾರ್ಥನಾಗಿರುವೆ. ದೇವರು ನನ್ನ ವಿಷಯವನ್ನು ಕೇಳುವನು;
ನನ್ನ ನ್ಯಾಯಾಧಿಪತಿಯು ನನ್ನನ್ನು ಬಿಡುಗಡೆ ಮಾಡುವನು.
8 “ಆದರೆ, ನಾನು ಪೂರ್ವಕ್ಕೆ ಹೋದರೂ ದೇವರು ಅಲ್ಲಿಲ್ಲ.
ನಾನು ಪಶ್ಚಿಮಕ್ಕೆ ಹೋದರೂ ದೇವರು ಅಲ್ಲಿಯೂ ನನಗೆ ಕಾಣುವುದಿಲ್ಲ.
9 ದೇವರು ಉತ್ತರದಿಕ್ಕಿನಲ್ಲಿ ಕಾರ್ಯನಿರತನಾಗಿರುವಾಗಲೂ ನನಗೆ ಕಾಣುವುದಿಲ್ಲ.
ದೇವರು ದಕ್ಷಿಣ ದಿಕ್ಕಿಗೆ ತಿರುಗಿಕೊಂಡಾಗಲೂ ನನಗೆ ಕಾಣುವುದಿಲ್ಲ.
10 ಆದರೆ ನನ್ನ ಪ್ರತಿಯೊಂದು ಹೆಜ್ಜೆಯನ್ನೂ ದೇವರು ಬಲ್ಲನು.
ಆತನು ನನ್ನನ್ನು ಪರೀಕ್ಷಿಸಿ ನೋಡಿದಾಗ ನಾನು ಅಪ್ಪಟ ಬಂಗಾರದಂತಿರುವುದನ್ನು ಕಂಡುಕೊಳ್ಳುವನು.
11 ಆತನ ಮಾರ್ಗದಲ್ಲೇ ನಾನು ನಡೆದಿದ್ದೇನೆ.
ನಾನು ಓರೆಯಾಗದೆ ಆತನ ಮಾರ್ಗವನ್ನೇ ಅನುಸರಿಸಿದ್ದೇನೆ.
12 ಆತನ ಆಜ್ಞೆಗಳನ್ನು ನಾನು ಮೀರಲೇ ಇಲ್ಲ,
ಆತನ ಬಾಯಿಂದ ಬಂದ ಮಾತುಗಳನ್ನು ಮೃಷ್ಟಾನ್ನಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿದ್ದೇನೆ.
13 “ದೇವರು ಎಂದಿಗೂ ಬದಲಾಗುವುದಿಲ್ಲ.
ಯಾವನೂ ಆತನ ಮನಸ್ಸನ್ನು ಮಾರ್ಪಡಿಸಲಾರನು.
ದೇವರು ತಾನು ಬಯಸಿದ್ದನ್ನೇ ಮಾಡುವನು.
14 ದೇವರು ತನ್ನ ಆಲೋಚನೆಗೆ ತಕ್ಕಂತೆ ನನಗೆ ಮಾಡುವನು.
ಆತನಲ್ಲಿ ಇಂಥಾ ಸಂಕಲ್ಪಗಳು ಎಷ್ಟೋ ಇವೆ.
15 ಆದಕಾರಣ ನಾನು ಆತನ ಸನ್ನಿಧಿಯಲ್ಲಿ ಭಯಭ್ರಾಂತನಾಗಿದ್ದೇನೆ.
ಇದನ್ನೆಲ್ಲಾ ಯೋಚಿಸುವಾಗ ಹೆದರಿಕೊಳ್ಳುತ್ತೇನೆ.
16 ನನ್ನ ಹೃದಯವನ್ನು ಕುಂದಿಸಿದವನೂ ದೇವರೇ.
ನನ್ನನ್ನು ಭಯಭ್ರಾಂತನನ್ನಾಗಿ ಮಾಡಿದವನೂ ಸರ್ವಶಕ್ತನಾದ ದೇವರೇ.
17 ಕಪ್ಪು ಮೋಡವು ನನ್ನ ಮುಖವನ್ನು ಕವಿದುಕೊಳ್ಳುವಂತೆ ಆಪತ್ತುಗಳು ನನಗೆ ಸಂಭವಿಸಿದವು.
ಆದರೆ ಕಾರ್ಗತ್ತಲೆಯೂ ನನ್ನನ್ನು ಮೌನಗೊಳಿಸಲಾರದು.
ಯೆಹೂದ್ಯರಂತಿರಬೇಡಿ
10 ಸಹೋದರ ಸಹೋದರಿಯರೇ, ಮೋಶೆಯನ್ನು ಅನುಸರಿಸಿದ ನಮ್ಮ ಪಿತೃಗಳಿಗೆ ಏನು ಸಂಭವಿಸಿತೆಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅವರೆಲ್ಲರೂ ಮೋಡದ ಕೆಳಗಿದ್ದರು; ಸಮುದ್ರದ ಮೂಲಕ ನಡೆದುಕೊಂಡು ಹೋದರು; 2 ಮೋಶೆಯ ಶಿಷ್ಯರಾಗುವುದಕ್ಕಾಗಿ ಮೋಡದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನ ಹೊಂದಿದರು; 3 ಒಂದೇ ಆತ್ಮಿಕ ಆಹಾರವನ್ನು ಊಟ ಮಾಡಿದರು; 4 ತಮ್ಮೊಂದಿಗಿದ್ದ ಆತ್ಮಿಕ ಬಂಡೆಯ ನೀರನ್ನು ಕುಡಿದರು. ಆ ಬಂಡೆಯೇ ಕ್ರಿಸ್ತನು. 5 ಆದರೂ ಅವರಲ್ಲಿ ಅನೇಕರು ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಅವರು ಮರುಭೂಮಿಯಲ್ಲಿ ಕೊಲ್ಲಲ್ಪಟ್ಟರು.
6 ಅವರು ಮಾಡಿದಂತೆ ನಾವು ಕೆಟ್ಟವುಗಳನ್ನು ಆಶಿಸಬಾರದೆಂಬುದಕ್ಕೆ ಈ ಘಟನೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. 7 ಅವರಲ್ಲಿ ಕೆಲವರು ಮಾಡಿದಂತೆ ನೀವು ವಿಗ್ರಹಗಳನ್ನು ಪೂಜಿಸಬೇಡಿ. “ಜನರು ತಿನ್ನಲು, ಕುಡಿಯಲು ಕುಳಿತುಕೊಂಡರು; ನೃತ್ಯ ಮಾಡಲು ಎದ್ದುನಿಂತರು”(A) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. 8 ಅವರಲ್ಲಿ ಕೆಲವರು ಮಾಡಿದಂತೆ ನಾವು ಲೈಂಗಿಕ ಪಾಪಗಳನ್ನು ಮಾಡಬಾರದು. ಅವರಲ್ಲಿ ಇಪ್ಪತ್ತಮೂರು ಸಾವಿರ ಮಂದಿ ತಮ್ಮ ಆ ಪಾಪದ ಫಲವಾಗಿ ಒಂದೇ ದಿನದಲ್ಲಿ ಸತ್ತುಹೋದರು. 9 ಅವರಲ್ಲಿ ಕೆಲವರು ಮಾಡಿದಂತೆ ನಾವು ಪ್ರಭುವನ್ನು ಪರೀಕ್ಷಿಸಬಾರದು. ಅದರ ಫಲವಾಗಿ ಅವರು ಹಾವುಗಳಿಂದ ಮರಣಹೊಂದಿದರು. 10 ಅವರಲ್ಲಿ ಕೆಲವರು ಮಾಡಿದಂತೆ ಗುಣುಗುಟ್ಟಬೇಡಿ. ಆ ಜನರು ಸಂಹಾರಕ ದೂತನಿಂದ ಕೊಲ್ಲಲ್ಪಟ್ಟರು.
11 ಆ ಜನರಿಗೆ ಸಂಭವಿಸಿದ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. ನಮ್ಮನ್ನು ಎಚ್ಚರಿಸುವುದಕ್ಕಾಗಿ ಆ ಸಂಗತಿಗಳನ್ನು ಬರೆದಿಡಲಾಗಿದೆ. ಈಗ ನಾವು ಯುಗದ ಅಂತಿಮ ಕಾಲದಲ್ಲಿ ಜೀವಿಸುತ್ತಿದ್ದೇವೆ. 12 ಆದ್ದರಿಂದ ತಾನು ದೃಢವಾಗಿ ನಿಂತಿದ್ದೇನೆ ಎಂದು ಯೋಚಿಸುವ ವ್ಯಕ್ತಿಯು ಬೀಳದಂತೆ ಎಚ್ಚರಿಕೆಯಿಂದಿರಬೇಕು. 13 ಎಲ್ಲಾ ಜನರಿಗೆ ಬರುವಂತೆ ನಿಮಗೂ ಶೋಧನೆಗಳು ಬರುತ್ತವೆ. ಆದರೆ ದೇವರು ನಂಬಿಗಸ್ತನಾಗಿದ್ದಾನೆ. ನೀವು ಸಹಿಸಿಕೊಳ್ಳಲಾರದ ಶೋಧನೆಯನ್ನು ಆತನು ನಿಮಗೆ ಬರಗೊಡಿಸುವುದಿಲ್ಲ. ಶೋಧನೆಗಳು ಬಂದಾಗ, ಅವುಗಳಿಂದ ಪಾರಾಗುವ ಮಾರ್ಗವನ್ನು ಸಹ ದೇವರು ನಿಮಗೆ ಒದಗಿಸುತ್ತಾನೆ. ಆಗ ನೀವು ಅದನ್ನು ಸಹಿಸಿಕೊಳ್ಳುವುದಕ್ಕೆ ಶಕ್ತರಾಗುವಿರಿ.
14 ಆದ್ದರಿಂದ, ನನ್ನ ಪ್ರಿಯ ಸ್ನೇಹಿತರೇ, ವಿಗ್ರಹಗಳ ಪೂಜೆಯ ಬಗ್ಗೆ ಯೋಚಿಸಲೂಬೇಡಿ. 15 ನೀವು ಬುದ್ಧಿವಂತರೆಂದು ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೇನೆ. ನಾನು ಹೇಳುವುದನ್ನು ಸ್ವತಃ ನೀವೇ ವಿಚಾರಣೆ ಮಾಡಿ. 16 ನಾವು ದ್ರಾಕ್ಷಾರಸದ ಪಾತ್ರೆಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಕುಡಿಯುವಾಗ ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಲಿಲ್ಲವೇ? ನಾವು ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಲಿಲ್ಲವೇ? 17 ರೊಟ್ಟಿಯು ಒಂದೇ. ಆದ್ದರಿಂದ ನಮ್ಮಲ್ಲಿ ಅನೇಕರಿದ್ದರೂ ನಾವು ಒಂದೇ ದೇಹವಾಗಿದ್ದೇವೆ. ಯಾಕೆಂದರೆ ನಾವೆಲ್ಲಾ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಳ್ಳುತ್ತೇವೆ.
18 ಇಸ್ರೇಲ್ ಜನರ ಬಗ್ಗೆ ಯೋಚಿಸಿ. ಯಜ್ಞವಾಗಿ ಅರ್ಪಿತವಾದುದನ್ನು ತಿನ್ನುವ ಆ ಜನರು ಯಜ್ಞವೇದಿಕೆಯಲ್ಲಿ ಪಾಲುಗಾರರಾಗಿಲ್ಲವೇ? 19 ವಿಗ್ರಹಕ್ಕೆ ಅರ್ಪಿತವಾದ ಆಹಾರಪದಾರ್ಥವು ಮುಖ್ಯವಾದದ್ದೆಂದು ನಾನು ಹೇಳುತ್ತಿಲ್ಲ. ಅಲ್ಲದೆ ವಿಗ್ರಹವು ಮುಖ್ಯವಾದದ್ದು ಎಂಬ ಅಭಿಪ್ರಾಯವೂ ನನಗಿಲ್ಲ. 20 ನಾನು ಹೇಳುತ್ತಿರುವುದೇನೆಂದರೆ, ಜನರು ವಿಗ್ರಹಗಳಿಗೆ ಅರ್ಪಿಸಿದ ಪದಾರ್ಥಗಳು ದೆವ್ವಗಳಿಗೆ ಅರ್ಪಿತವಾದುವುಗಳೇ ಹೊರತು ದೇವರಿಗಲ್ಲ. ನೀವು ದೆವ್ವಗಳೊಂದಿಗೆ ಯಾವ ವಿಷಯದಲ್ಲಿಯೂ ಪಾಲು ಹೊಂದಬಾರದೆಂಬುದು ನನ್ನ ಆಸೆ. 21 ನೀವು ಪ್ರಭುವಿನ ಪಾತ್ರೆ ಮತ್ತು ದೆವ್ವಗಳ ಪಾತ್ರೆ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಕುಡಿಯಲಾಗದು. ಪ್ರಭುವಿನ ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟ ಮಾಡಲಾರಿರಿ. 22 ಪ್ರಭುವಿಗೆ ಅಸೂಯೆಯನ್ನು ಉಂಟುಮಾಡಬೇಕೆಂದಿದ್ದೀರೋ? ಆತನಿಗಿಂತಲೂ ನಾವು ಬಲಿಷ್ಠರಾಗಿದ್ದೇವೋ? ಇಲ್ಲ!
ನಿಮ್ಮ ಸ್ವತಂತ್ರ ದೇವರ ಮಹಿಮೆಗೋಸ್ಕರ
23 “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ನಾವು ಮಾಡುವ ಕಾರ್ಯಗಳೆಲ್ಲಾ ಒಳ್ಳೆಯವೆಂದು ಹೇಳುವುದು ಸರಿಯಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಸ್ವಾತಂತ್ರ್ಯವಿದೆ.” ಆದರೆ ಕೆಲವು ಕಾರ್ಯಗಳು ಬೇರೆಯವರ ಅಭಿವೃದ್ಧಿಗೆ ಸಹಾಯಕವಾಗಿರುವುದಿಲ್ಲ. 24 ಪ್ರತಿಯೊಬ್ಬನೂ ತನಗೆ ಮಾತ್ರ ಹಿತಕರವಾದ ಕಾರ್ಯಗಳನ್ನು ಮಾಡದೆ ಬೇರೆಯವರಿಗೂ ಹಿತಕರವಾದ ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು.
25 ಮಾಂಸದ ಮಾರುಕಟ್ಟೆಯಲ್ಲಿ ಮಾರುವ ಯಾವ ಮಾಂಸವನ್ನಾದರೂ ತಿನ್ನಿರಿ. ನೀವು ತಿನ್ನಬಾರದೆಂದು ಯೋಚಿಸುವ ಮಾಂಸದಂತೆ ಅದು ತೋರಿದರೂ ಆ ಮಾಂಸದ ಬಗ್ಗೆ ಯಾವ ಪ್ರಶ್ನೆಗಳನ್ನೂ ಕೇಳಬೇಡಿರಿ. 26 ನೀವು ಅದನ್ನು ತಿನ್ನಿರಿ. ಏಕೆಂದರೆ, “ಭೂಮಿಯೂ ಅದರಲ್ಲಿರುವ ಸಮಸ್ತವೂ ಪ್ರಭುವಿನದಾಗಿದೆ.”(B)
27 ಕ್ರಿಸ್ತ ವಿಶ್ವಾಸಿಯಲ್ಲದ ಒಬ್ಬನು ನಿಮ್ಮನ್ನು ಊಟಕ್ಕೆ ಆಹ್ವಾನಿಸಿದರೆ, ಹೋಗುವುದಕ್ಕೆ ನಿಮಗೆ ಇಷ್ಟವಿದ್ದರೆ, ಅವನು ನಿಮಗೆ ಏನು ಬಡಿಸಿದರೂ ತಿನ್ನಿರಿ. ನೀವು ಆ ಪದಾರ್ಥವನ್ನು ತಿನ್ನಬೇಕೇ ಅಥವಾ ತಿನ್ನಬಾರದೇ ಎಂದು ನಿರ್ಧರಿಸಲು ಪ್ರಶ್ನೆಗಳನ್ನು ಕೇಳಬೇಡಿ. 28 ಆದರೆ ಒಬ್ಬನು ನಿಮಗೆ, “ಆ ಪದಾರ್ಥವು ವಿಗ್ರಹಗಳಿಗೆ ಅರ್ಪಿತವಾದದ್ದು” ಎಂದು ಹೇಳಿದರೆ, ನೀವು ಅದನ್ನು ತಿನ್ನಬೇಡಿ. ನಿಮಗೆ ಹೇಳಿದ ವ್ಯಕ್ತಿಯ ನಂಬಿಕೆಯನ್ನು ಹಾಳುಮಾಡಲು ನಿಮಗೆ ಇಷ್ಟವಿಲ್ಲದ್ದರಿಂದ ಮತ್ತು ಆ ಮಾಂಸವನ್ನು ತಿನ್ನುವುದು ತಪ್ಪೆಂದು ಜನರು ಭಾವಿಸಿಕೊಂಡಿರುವುದರಿಂದ ನೀವು ಅದನ್ನು ತಿನ್ನಬಾರದು. 29 ಆದರೆ ನೀವೇ ಆ ರೀತಿ ಭಾವಿಸಿಕೊಂಡಿದ್ದೀರಿ ಎಂದು ನಾನು ಹೇಳುತ್ತಿಲ್ಲ. ಆದರೆ ಮತ್ತೊಬ್ಬ ವ್ಯಕ್ತಿಯು ಅದನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವುದರಿಂದ ಅವನ ಮನಸ್ಸಾಕ್ಷಿಯ ದೆಸೆಯಿಂದ ನಮ್ಮ ಸ್ವಾತಂತ್ರ್ಯವು ವಿಚಾರಣೆಗೆ ಗುರಿಯಾಗಬಾರದು. 30 ನಾನು ದೇವರಿಗೆ ಕೃತಜ್ಞತೆ ಸಲ್ಲಿಸಿ ಊಟಮಾಡಿದ ಪದಾರ್ಥದಿಂದಾಗಿ ಖಂಡನೆಗೆ ಗುರಿಯಾಗಲು ನನಗೆ ಇಷ್ಟವಿಲ್ಲ.
31 ಆದ್ದರಿಂದ ನೀವು ತಿಂದರೂ ಕುಡಿದರೂ ಏನೇ ಮಾಡಿದರೂ ದೇವರ ಮಹಿಮೆಗಾಗಿ ಅದನ್ನು ಮಾಡಿರಿ. 32 ಇತರ ಜನರು ಅಂದರೆ ಯೆಹೂದ್ಯರಾಗಲಿ ಗ್ರೀಕರಾಗಲಿ ಅಥವಾ ದೇವರ ಸಭೆಯವರಾಗಲಿ ತಪ್ಪುಮಾಡಲು ಕಾರಣವಾಗುವಂಥದ್ದನ್ನು ನೀವೆಂದಿಗೂ ಮಾಡಬೇಡಿರಿ. 33 ನಾನು ಸಹ ಹಾಗೆಯೇ ಮಾಡುತ್ತೇನೆ. ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸಲು ನಾನು ಪ್ರಯತ್ನಿಸುತ್ತೇನೆ. ನನಗೆ ಹಿತಕರವಾದದ್ದನ್ನು ಮಾಡಲು ಇಷ್ಟಪಡದೆ ಬಹು ಜನರಿಗೆ ಹಿತಕರವಾದದ್ದನ್ನೇ ಮಾಡಲು ಪ್ರಯತ್ನಿಸುತ್ತೇನೆ. ಅವರು ರಕ್ಷಣೆ ಹೊಂದಬೇಕೆಂಬುದೇ ನನ್ನ ಅಪೇಕ್ಷೆ.
Kannada Holy Bible: Easy-to-Read Version. All rights reserved. © 1997 Bible League International