Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಆದಿಕಾಂಡ 24

ಇಸಾಕನಿಗಾಗಿ ಹೆಂಡತಿ

24 ಅಬ್ರಹಾಮನು ಬಹಳ ವೃದ್ಧನಾದನು. ಯೆಹೋವನು ಅಬ್ರಹಾಮನನ್ನೂ ಅವನು ಮಾಡಿದ ಪ್ರತಿಯೊಂದನ್ನೂ ಆಶೀರ್ವದಿಸಿದನು. ಅಬ್ರಹಾಮನ ಆಸ್ತಿಯನ್ನೆಲ್ಲಾ ನೋಡಿಕೊಳ್ಳಲು ಒಬ್ಬ ಸೇವಕನಿದ್ದನು. ಅಬ್ರಹಾಮನು ಆ ಸೇವಕನನ್ನು ಕರೆದು, “ನನ್ನ ತೊಡೆಯ ಕೆಳಗೆ ನಿನ್ನ ಕೈಯಿಟ್ಟು ನನಗೆ ಪ್ರಮಾಣಮಾಡು. ಕಾನಾನ್ ದೇಶದ ಕನ್ನಿಕೆಯನ್ನು ನನ್ನ ಮಗನು ಮದುವೆಯಾಗದಂತೆ ನೀನು ನೋಡಿಕೊಳ್ಳುವುದಾಗಿಯೂ ನನ್ನ ಸ್ವದೇಶದಲ್ಲಿರುವ ನನ್ನ ಸ್ವಜನರ ಬಳಿಗೆ ಹೋಗಿ ನನ್ನ ಮಗನಾದ ಇಸಾಕನಿಗೆ ಕನ್ನಿಕೆಯನ್ನು ಹುಡುಕಿ ಕರೆದುಕೊಂಡು ಬರುವುದಾಗಿಯೂ ಭೂಪರಲೋಕಗಳ ದೇವರಾದ ಯೆಹೋವನ ಮೇಲೆ ಪ್ರಮಾಣಮಾಡು” ಎಂದು ಹೇಳಿದನು.

ಸೇವಕನು ಅವನಿಗೆ, “ಆ ಕನ್ಯೆಯು ನನ್ನೊಡನೆ ಈ ದೇಶಕ್ಕೆ ಬರಲು ಒಪ್ಪದಿದ್ದರೆ, ನಾನು ನಿನ್ನ ಮಗನನ್ನು ನಿನ್ನ ಸ್ವದೇಶಕ್ಕೆ ಕರೆದುಕೊಂಡು ಹೋಗಬೇಕೇ?” ಎಂದು ಕೇಳಿದನು.

ಅಬ್ರಹಾಮನು ಅವನಿಗೆ, “ಇಲ್ಲ, ಆ ದೇಶಕ್ಕೆ ನನ್ನ ಮಗನನ್ನು ಕರೆದುಕೊಂಡು ಹೋಗಬೇಡ. ಪರಲೋಕದ ದೇವರಾದ ಯೆಹೋವನು ನನ್ನನ್ನು ಸ್ವದೇಶದಿಂದ ಈ ಸ್ಥಳಕ್ಕೆ ಕರೆದುಕೊಂಡು ಬಂದನು. ಆ ದೇಶ ನನ್ನ ತಂದೆಗೂ ನನ್ನ ಕುಟುಂಬಕ್ಕೂ ಸೇರಿದೆ. ಆದರೆ ಯೆಹೋವನು ಈ ದೇಶವನ್ನು ನನ್ನ ಸಂತತಿಗೆ ಕೊಡುವುದಾಗಿ ವಾಗ್ದಾನ ಮಾಡಿದನು. ನೀನು ನನ್ನ ಮಗನಿಗೆ ಕನ್ಯೆಯನ್ನು ಹುಡುಕಿ ಕರೆದುಕೊಂಡು ಬರಲು ಸಾಧ್ಯವಾಗುವಂತೆ ಯೆಹೋವನು ತನ್ನ ದೂತನನ್ನು ನಿನ್ನ ಮುಂದೆ ಕಳುಹಿಸಲಿ. ಆದರೆ ಆ ಕನ್ಯೆಯು ನಿನ್ನೊಡನೆ ಬರಲು ಇಷ್ಟಪಡದಿದ್ದರೆ, ಈ ಪ್ರಮಾಣದಿಂದ ನೀನು ಬಿಡುಗಡೆಯಾಗುವೆ. ಆದರೆ ನೀನು ನನ್ನ ಮಗನನ್ನು ನನ್ನ ಸ್ವದೇಶಕ್ಕೆ ಕರೆದುಕೊಂಡು ಹೋಗಕೂಡದು” ಎಂದು ಹೇಳಿದನು.

ಆಗ ಆ ಸೇವಕನು ತನ್ನ ಒಡೆಯನಾದ ಅಬ್ರಹಾಮನ ತೊಡೆಯ ಕೆಳಗೆ ಕೈಯಿಟ್ಟು ಪ್ರಮಾಣ ಮಾಡಿದನು.

ಕನ್ಯೆಯನ್ನು ಹುಡುಕಲು ಪ್ರಯಾಣ

10 ಆ ಸೇವಕನು ಅಬ್ರಹಾಮನ ಹತ್ತು ಒಂಟೆಗಳನ್ನು ಸಿದ್ಧಮಾಡಿ ಶ್ರೇಷ್ಠವಾದ ಅನೇಕ ಉಡುಗೊರೆಗಳನ್ನು ತೆಗೆದುಕೊಂಡು ಮೆಸೊಪೋಟೊಮಿಯಕ್ಕೆ ಬಂದು ನಾಹೋರನು ವಾಸವಾಗಿದ್ದ ಊರನ್ನು ತಲುಪಿದನು. 11 ಅವನು ಊರ ಹೊರಗಿದ್ದ ಬಾವಿಯ ಬಳಿಯಲ್ಲಿ ಒಂಟೆಗಳನ್ನು ಮಲಗಿಸಿದನು; ಪ್ರತಿಸಾಯಂಕಾಲ ಸ್ತ್ರೀಯರು ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆ ಬಾವಿಗೆ ಬರುತ್ತಿದ್ದರು.

12 ಆ ಸೇವಕನು, “ಯೆಹೋವನೇ, ನೀನು ನನ್ನ ಒಡೆಯನಾದ ಅಬ್ರಹಾಮನ ದೇವರು. ಈ ದಿನ ಅವನ ಮಗನಿಗಾಗಿ ಕನ್ಯೆಯನ್ನು ಕಂಡುಕೊಳ್ಳಲು ಸಹಾಯಮಾಡು. ನನ್ನ ಒಡೆಯನಾದ ಅಬ್ರಹಾಮನಿಗೋಸ್ಕರವಾಗಿಯೇ ಈ ಉಪಕಾರ ಮಾಡು. 13 ನಾನು ಈ ನೀರಿನ ಬಾವಿಯ ಬಳಿಯಲ್ಲಿ ನಿಂತಿರುತ್ತೇನೆ; ಈ ಊರಿನ ಯುವತಿಯರು ನೀರನ್ನು ತೆಗೆದುಕೊಳ್ಳಲು ಇಲ್ಲಿಗೆ ಬರುತ್ತಾರೆ. 14 ಇಸಾಕನಿಗೆ ಯೋಗ್ಯಳಾದ ಕನ್ಯೆಯನ್ನು ಕಂಡುಕೊಳ್ಳಲು ನಾನು ಒಬ್ಬಳಿಗೆ, ‘ದಯವಿಟ್ಟು ನಿನ್ನ ಕೊಡವನ್ನು ಕೆಳಗಿಳಿಸಿ ಕುಡಿಯಲು ನೀರು ಕೊಡು’ ಎನ್ನುವೆ. ಆಕೆ ನನಗೆ, ‘ನೀನೂ ಕುಡಿ, ನಿನ್ನ ಒಂಟೆಗಳಿಗೂ ನೀರು ಕೊಡುತ್ತೇನೆ’ ಎಂದರೆ ಆಕೆಯೇ ನಿನ್ನಿಂದ ಆಯ್ಕೆಗೊಂಡ ಯೋಗ್ಯ ಕನ್ಯೆಯೆಂದೂ ನೀನು ನನ್ನ ಒಡೆಯನಿಗೆ ಕರುಣೆ ತೋರಿದೆಯೆಂದೂ ನಾನು ತಿಳಿದುಕೊಳ್ಳುವೆ” ಎಂದು ಪ್ರಾರ್ಥಿಸಿದನು.

ಕನ್ಯೆಯ ಆಯ್ಕೆ

15 ಆ ಸೇವಕನು ಪ್ರಾರ್ಥನೆ ಮಾಡಿ ಮುಗಿಸುವುದಕ್ಕಿಂತ ಮೊದಲೇ ರೆಬೆಕ್ಕ ಎಂಬ ಯುವತಿಯು ಬಾವಿಯ ಬಳಿಗೆ ಬಂದಳು. ರೆಬೆಕ್ಕಳು ಬೆತೂವೇಲನ ಮಗಳು. ಬೆತೂವೇಲನು ಮಿಲ್ಕಳ ಮತ್ತು ನಾಹೋರನ ಮಗನು. ನಾಹೋರನು ಅಬ್ರಹಾಮನ ತಮ್ಮ. ರೆಬೆಕ್ಕಳು ತನ್ನ ಹೆಗಲ ಮೇಲೆ ನೀರಿನ ಕೊಡವನ್ನು ತೆಗೆದುಕೊಂಡು ಬಾವಿಗೆ ಬಂದಳು. 16 ಆಕೆ ಬಹು ಸುಂದರಿಯಾಗಿಯೂ ಕನ್ನಿಕೆಯಾಗಿಯೂ ಇದ್ದಳು. ಆಕೆ ಬಾವಿಯ ಬಳಿಗೆ ಹೋಗಿ ಕೊಡದಲ್ಲಿ ನೀರನ್ನು ತುಂಬಿಸಿಕೊಂಡಳು. 17 ಆಗ ಆ ಸೇವಕನು ಅವಳ ಬಳಿಗೆ ಓಡಿಹೋಗಿ, “ದಯವಿಟ್ಟು ಕುಡಿಯಲು ನಿನ್ನ ಕೊಡದಿಂದ ಸ್ವಲ್ಪ ನೀರನ್ನು ಕೊಡು” ಎಂದು ಕೇಳಿದನು.

18 ರೆಬೆಕ್ಕಳು ಕೂಡಲೇ ತನ್ನ ಕೊಡವನ್ನು ಹೆಗಲ ಮೇಲಿಂದ ಕೆಳಗಿಳಿಸಿ ಅವನಿಗೆ ಕುಡಿಯಲು ನೀರನ್ನು ಕೊಟ್ಟು, “ಅಯ್ಯಾ, ನೀರನ್ನು ಕುಡಿ” ಅಂದಳು. 19 ಅವನು ನೀರು ಕುಡಿದಾದ ಮೇಲೆ ಆಕೆ ಅವನಿಗೆ, “ನಿನ್ನ ಒಂಟೆಗಳಿಗೂ ಬೇಕಾದಷ್ಟು ನೀರನ್ನು ತಂದುಕೊಡುತ್ತೇನೆ” ಎಂದು ಹೇಳಿ, 20 ನೀರನ್ನೆಲ್ಲ ತೊಟ್ಟಿಯಲ್ಲಿ ಸುರಿದು ಮತ್ತೆ ನೀರನ್ನು ತೆಗೆದುಕೊಂಡು ಬರಲು ಬಾವಿಯ ಬಳಿಗೆ ಬೇಗಬೇಗನೆ ಹೋದಳು. ಹೀಗೆ ಅವನ ಒಂಟೆಗಳಿಗೆಲ್ಲಾ ನೀರನ್ನು ಕೊಟ್ಟಳು.

21 ಆ ಸೇವಕನು ಆಕೆಯನ್ನೇ ಗಮನಿಸುತ್ತಾ, ಯೆಹೋವನು ತನ್ನ ಪ್ರಾರ್ಥನೆಗೆ ಉತ್ತರ ಕೊಟ್ಟನೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಕಾದುಕೊಂಡಿದ್ದನು. 22 ಒಂಟೆಗಳು ನೀರನ್ನು ಕುಡಿದಾದ ಮೇಲೆ ಅವನು ರೆಬೆಕ್ಕಳಿಗೆ ಅರ್ಧತೊಲೆಯ ಒಂದು ಚಿನ್ನದ ಉಂಗುರವನ್ನು ಕೊಟ್ಟನು. ಇದಲ್ಲದೆ ಅವನು ಆಕೆಗೆ ಹತ್ತು ತೊಲೆಯ ಎರಡು ಚಿನ್ನದ ಬಳೆಗಳನ್ನು ಕೊಟ್ಟನು. 23 ಆ ಸೇವಕನು, “ನಿನ್ನ ತಂದೆ ಯಾರು? ನನ್ನ ಜನರು ಇಳಿದುಕೊಳ್ಳಲು ನಿನ್ನ ತಂದೆಯ ಮನೆಯಲ್ಲಿ ಸ್ಥಳವಿದೆಯೋ?” ಎಂದು ಕೇಳಿದನು.

24 ರೆಬೆಕ್ಕಳು ಅವನಿಗೆ, “ನನ್ನ ತಂದೆಯ ಹೆಸರು ಬೆತೂವೇಲ. ಅವನು ಮಿಲ್ಕಳ ಮತ್ತು ನಾಹೋರನ ಮಗನು” ಎಂದು ಹೇಳಿದಳು. 25 ಬಳಿಕ, “ಹೌದು, ನಿನ್ನ ಒಂಟೆಗಳಿಗೆ ಹುಲ್ಲೂ ಮೇವೂ ನಮ್ಮಲ್ಲಿವೆ ಮತ್ತು ನೀವು ಇಳಿದುಕೊಳ್ಳಲೂ ಸ್ಥಳವಿದೆ” ಎಂದಳು.

26 ಆಗ ಆ ಸೇವಕನು ತಲೆಬಾಗಿ ಯೆಹೋವನನ್ನು ಆರಾಧಿಸಿದನು. 27 ಬಳಿಕ ಆಕೆಗೆ, “ನನ್ನ ಒಡೆಯನಾದ ಅಬ್ರಹಾಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನ ಒಡೆಯನಿಗೆ ದಯಾಳುವೂ ನಂಬಿಗಸ್ತನೂ ಆಗಿದ್ದಾನೆ. ನನ್ನ ಒಡೆಯನ ಮಗನಿಗಾಗಿ ಯೆಹೋವನು ನನ್ನನ್ನು ನನ್ನ ಒಡೆಯನ ಕುಟುಂಬಕ್ಕೆ ನಡೆಸಿದ್ದಾನೆ” ಎಂದು ಹೇಳಿದನು.

28 ಆಗ ರೆಬೆಕ್ಕಳು ಬೇಗನೆ ಹೋಗಿ ಈ ಸಂಗತಿಗಳನ್ನೆಲ್ಲಾ ತನ್ನ ಕುಟುಂಬದವರಿಗೆ ತಿಳಿಸಿದಳು. 29-30 ರೆಬೆಕ್ಕಳಿಗೆ ಒಬ್ಬ ಅಣ್ಣನಿದ್ದನು. ಅವನ ಹೆಸರು ಲಾಬಾನ. ನಡೆದ ಸಂಗತಿಗಳನ್ನೆಲ್ಲ ರೆಬೆಕ್ಕಳು ಅವನಿಗೆ ತಿಳಿಸಿದಳು. ಲಾಬಾನನು ಆಕೆಯ ಮಾತುಗಳನ್ನೆಲ್ಲ ಕೇಳಿದಾಗ ಮತ್ತು ಉಂಗುರವನ್ನು ಮತ್ತು ಕೈಗಳಲ್ಲಿದ್ದ ಬಳೆಗಳನ್ನು ಕಂಡಾಗ ಬಾವಿಯ ಬಳಿಗೆ ಓಡಿಹೋದನು. ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ಆ ಸೇವಕನು ನಿಂತುಕೊಂಡಿದ್ದನು. 31 ಲಾಬಾನನು ಅವನಿಗೆ, “ಯೆಹೋವನ ಆಶೀರ್ವಾದ ಹೊಂದಿದವನೇ, ಒಳಗೆ ಬಾ. ನೀನು ಹೊರಗಡೆ ನಿಂತುಕೊಳ್ಳಬೇಕಾಗಿಲ್ಲ. ನೀನು ಇಳಿದುಕೊಳ್ಳುವುದಕ್ಕಾಗಿ ಕೋಣೆಯನ್ನೂ ನಿನ್ನ ಒಂಟೆಗಳಿಗಾಗಿ ಸ್ಥಳವನ್ನೂ ಸಿದ್ಧಪಡಿಸಿದ್ದೇನೆ” ಎಂದು ಹೇಳಿದನು.

32 ಆದ್ದರಿಂದ ಅಬ್ರಹಾಮನ ಸೇವಕನು ಲಾಬಾನನ ಮನೆಗೆ ಹೋದನು. ಒಂಟೆಗಳ ಮೇಲಿದ್ದ ಹೊರೆಗಳನ್ನು ಇಳಿಸಲು ಲಾಬಾನನು ಸಹಾಯಮಾಡಿದನು; ಒಂಟೆಗಳಿಗೆ ಸ್ಥಳಮಾಡಿಕೊಟ್ಟು ಮೇವನ್ನು ಕೊಡಿಸಿದನು; ಆಮೇಲೆ ಆ ಸೇವಕನಿಗೆ ಮತ್ತು ಅವನ ಸಂಗಡ ಇದ್ದವರಿಗೆ, ಕಾಲು ತೊಳೆದುಕೊಳ್ಳಲು ನೀರು ಕೊಟ್ಟನು. 33 ನಂತರ ಲಾಬಾನನು ಅವನಿಗೆ ಊಟವನ್ನು ಕೊಟ್ಟನು. ಆದರೆ ಆ ಸೇವಕನು ಊಟಮಾಡದೆ ಅವರಿಗೆ, “ನಾನು ಬಂದ ಉದ್ದೇಶವನ್ನು ತಿಳಿಸದೆ ಊಟಮಾಡುವುದಿಲ್ಲ” ಎಂದು ಹೇಳಿದನು.

ಅದಕ್ಕೆ ಲಾಬಾನನು, “ಸರಿ, ಹೇಳು” ಅಂದನು.

ರೆಬೆಕ್ಕಳನ್ನು ಇಸಾಕನಿಗಾಗಿ ಕೇಳಿದ್ದು

34 ಆ ಸೇವಕನು “ನಾನು ಅಬ್ರಹಾಮನ ಸೇವಕನು. 35 ಯೆಹೋವನು ನನ್ನ ಒಡೆಯನನ್ನು ಪ್ರತಿಯೊಂದರಲ್ಲಿಯೂ ಬಹಳವಾಗಿ ಆಶೀರ್ವದಿಸಿದ್ದಾನೆ. ನನ್ನ ಒಡೆಯನು ಮಹಾವ್ಯಕ್ತಿಯಾಗಿದ್ದಾನೆ. ಯೆಹೋವನು ಅಬ್ರಹಾಮನಿಗೆ ಅನೇಕ ಕುರಿಹಿಂಡುಗಳನ್ನೂ ದನಕರುಗಳ ಮಂದೆಗಳನ್ನೂ ಕೊಟ್ಟಿದ್ದಾನೆ. ಅಬ್ರಹಾಮನಿಗೆ ಬೇಕಾದಷ್ಟು ಬೆಳ್ಳಿಬಂಗಾರಗಳಿವೆ. ಅನೇಕ ಸೇವಕರಿದ್ದಾರೆ. ಅನೇಕ ಒಂಟೆಗಳೂ ಕತ್ತೆಗಳೂ ಇವೆ. 36 ಸಾರಳು ನನ್ನ ಒಡೆಯನ ಹೆಂಡತಿ. ಆಕೆ ತುಂಬಾ ವಯಸ್ಸಾಗಿರುವಾಗ ಒಬ್ಬ ಗಂಡುಮಗನನ್ನು ಹೆತ್ತಳು. ನನ್ನ ಒಡೆಯನು ತನ್ನ ಆಸ್ತಿಯನ್ನೆಲ್ಲ ಆ ಮಗನಿಗೇ ಕೊಟ್ಟಿದ್ದಾನೆ. 37 ನನ್ನ ಒಡೆಯನ್ನು ನನ್ನಿಂದ ಒಂದು ಪ್ರಮಾಣವನ್ನು ಬಲವಂತವಾಗಿ ಮಾಡಿಸಿದನು. ನನ್ನ ಒಡೆಯನು ನನಗೆ, ‘ನನ್ನ ಮಗನಿಗೆ ಕಾನಾನಿನ ಹುಡುಗಿಯೊಡನೆ ಮದುವೆಯಾಗದಂತೆ ನೀನು ನೋಡಿಕೊಳ್ಳಬೇಕು; ನಾವು ಈ ಜನರೊಡನೆ ವಾಸಿಸುತ್ತಿದ್ದೇವೆ. ಆದರೆ ಕಾನಾನಿನ ಹುಡುಗಿಯೊಂದಿಗೆ ನನ್ನ ಮಗನಿಗೆ ಮದುವೆಯಾಗುವುದು ನನಗೆ ಇಷ್ಟವಿಲ್ಲ. 38 ಆದ್ದರಿಂದ ನೀನು ನನ್ನ ಸ್ವದೇಶಕ್ಕೆ ಹೋಗಿ ನನ್ನ ಸ್ವಜನರಿಂದಲೇ ನನ್ನ ಮಗನಿಗೆ ಕನ್ಯೆಯನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದನು. 39 ನಾನು ನನ್ನ ಒಡೆಯನಿಗೆ, ‘ಆ ಕನ್ಯೆಯು ಈ ದೇಶಕ್ಕೆ ನನ್ನೊಂದಿಗೆ ಬರಲು ಒಪ್ಪದಿರಬಹುದು’ ಎಂದು ಹೇಳಿದೆ. 40 ಆದರೆ ನನ್ನ ಒಡೆಯನು ನನಗೆ, ‘ನಾನು ಯೆಹೋವನ ಸೇವೆ ಮಾಡುತ್ತಿದ್ದೇನೆ. ಆದ್ದರಿಂದ ಯೆಹೋವನು ತನ್ನ ದೂತನನ್ನು ನಿನ್ನೊಂದಿಗೆ ಕಳುಹಿಸಿ ನಿನಗೆ ಸಹಾಯ ಮಾಡುವನು. ಅಲ್ಲಿರುವ ನನ್ನ ತಂದೆಯ ಕುಟುಂಬದವರಲ್ಲಿ ನೀನು ನನ್ನ ಮಗನಿಗಾಗಿ ಒಬ್ಬ ಕನ್ಯೆಯನ್ನು ಕಂಡುಕೊಳ್ಳುವೆ. 41 ಆದರೆ ನೀನು ನನ್ನ ತಂದೆಯ ನಾಡಿಗೆ ಹೋದಾಗ ಅವರು ನನ್ನ ಮಗನಿಗೆ ಒಬ್ಬ ಕನ್ಯೆಯನ್ನು ಕೊಡಲು ಒಪ್ಪದಿದ್ದರೆ ನೀನು ಈ ಪ್ರಮಾಣದಿಂದ ಬಿಡುಗಡೆಯಾಗಿರುವೆ’ ಎಂದು ಹೇಳಿದನು.

42 “ಇಂದು ನಾನು ಈ ಬಾವಿಯ ಬಳಿಗೆ ಬಂದು, ‘ನನ್ನ ಒಡೆಯನಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ದಯವಿಟ್ಟು ನನ್ನ ಪ್ರವಾಸವನ್ನು ಯಶಸ್ವಿಗೊಳಿಸು. 43 ನಾನು ಬಾವಿಯ ಬಳಿಯಲ್ಲಿ ನಿಂತುಕೊಂಡು ನೀರನ್ನು ತೆಗೆದುಕೊಳ್ಳಲು ಬರುವ ಒಬ್ಬ ಯುವತಿಗಾಗಿ ಕಾದಿರುತ್ತೇನೆ. ಆಮೇಲೆ ನಾನು ಆಕೆಗೆ, “ದಯವಿಟ್ಟು ಕುಡಿಯಲು ನಿನ್ನ ಕೊಡದಿಂದ ನೀರನ್ನು ಕೊಡು” ಎಂದು ಕೇಳುತ್ತೇನೆ. 44 ಅವಳು ನನಗೆ, “ನೀನೂ ನೀರನ್ನು ಕುಡಿ, ನಿನ್ನ ಒಂಟೆಗಳಿಗೂ ನೀರನ್ನು ತಂದುಕೊಡುವೆ” ಎಂದು ಹೇಳಿದರೆ, ನನ್ನ ಒಡೆಯನ ಮಗನಿಗೆ ಯೆಹೋವನು ಆರಿಸಿಕೊಂಡಿರುವ ಕನ್ನಿಕೆ ಇವಳೇ ಎಂಬುದಾಗಿ ತಿಳಿದುಕೊಳ್ಳುವೆ’ ಎಂದು ಪ್ರಾರ್ಥಿಸಿದೆ.

45 “ನಾನು ಪ್ರಾರ್ಥನೆ ಮುಗಿಸುವಷ್ಟರಲ್ಲಿ ರೆಬೆಕ್ಕಳು ನೀರಿಗಾಗಿ ಬಾವಿಗೆ ಬಂದಳು. ಆಕೆ ಹೆಗಲ ಮೇಲೆ ಕೊಡವನ್ನು ಹೊತ್ತುಕೊಂಡಿದ್ದಳು. ಆಕೆ ಬಾವಿಗೆ ಹೋಗಿ ನೀರನ್ನು ತೆಗೆದುಕೊಂಡಳು. ನಾನು ಆಕೆಗೆ, ದಯವಿಟ್ಟು ಸ್ವಲ್ಪ ನೀರನ್ನು ಕೊಡು ಎಂದು ಕೇಳಿದೆ. 46 ಆ ಕೂಡಲೆ ಆಕೆಯು ಕೊಡವನ್ನು ಹೆಗಲಿನಿಂದ ಕೆಳಗಿಳಿಸಿ, ನನಗೆ ನೀರನ್ನು ಕೊಟ್ಟು, ‘ನೀರನ್ನು ಕುಡಿ; ನಿನ್ನ ಒಂಟೆಗಳಿಗೂ ನೀರನ್ನು ತಂದುಕೊಡುವೆ’ ಎಂದು ಹೇಳಿದಳು. ನಾನು ನೀರನ್ನು ಕುಡಿದ ಮೇಲೆ ಆಕೆ ನನ್ನ ಒಂಟೆಗಳಿಗೂ ನೀರನ್ನು ತಂದುಕೊಟ್ಟಳು. 47 ಆಮೇಲೆ ನಾನು ಆಕೆಗೆ, ‘ನಿನ್ನ ತಂದೆ ಯಾರು?’ ಎಂದು ಕೇಳಿದೆ, ಆಕೆ ‘ನನ್ನ ತಂದೆಯ ಹೆಸರು ಬೆತೂವೇಲ. ಅವನು ಮಿಲ್ಕಳ ಮತ್ತು ನಾಹೋರನ ಮಗನು’ ಎಂದು ಹೇಳಿದಳು. ಆಗ ನಾನು ಆಕೆಗೆ ಉಂಗುರವನ್ನೂ ಕೈಬಳೆಗಳನ್ನೂ ಕೊಟ್ಟೆನು. 48 ಆ ಸಮಯದಲ್ಲಿ ನಾನು ತಲೆಬಾಗಿ ಯೆಹೋವನಿಗೆ ವಂದನೆ ಸಲ್ಲಿಸಿದೆನು. ನನ್ನ ಒಡೆಯನಾದ ಅಬ್ರಹಾಮನ ದೇವರಾದ ಯೆಹೋವನನ್ನು ಸ್ತುತಿಸಿ ಕೊಂಡಾಡಿದೆನು; ಯಾಕೆಂದರೆ ಆತನು ನನ್ನನ್ನು ನನ್ನ ಒಡೆಯನ ತಮ್ಮನ ಮೊಮ್ಮಗಳ ಬಳಿಗೆ ನೇರವಾಗಿ ನಡೆಸಿದನು. 49 ಈಗ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ. ನೀವು ನನ್ನ ಒಡೆಯನಿಗೆ ಪ್ರೀತಿಯಿಂದಲೂ ನಂಬಿಕೆಯಿಂದಲೂ ನಿಮ್ಮ ಮಗಳನ್ನು ಕೊಡುವಿರಾ? ಅಥವಾ ಕೊಡುವುದಿಲ್ಲವೇ? ನಿಮ್ಮ ಉತ್ತರಕ್ಕನುಸಾರವಾಗಿ ನಾನು ಮುಂದಿನ ಕಾರ್ಯದ ಬಗ್ಗೆ ಆಲೋಚಿಸುವೆ” ಎಂದು ಹೇಳಿದನು.

50 ಅದಕ್ಕೆ ಲಾಬಾನನು ಮತ್ತು ಬೆತೂವೇಲನು, “ನಿನ್ನನ್ನು ಯೆಹೋವನೇ ಕಳುಹಿಸಿದ್ದಾನೆ. ನಡೆಯತಕ್ಕದ್ದನ್ನು ಬದಲಾಯಿಸಲು ನಮಗೆ ಸಾಧ್ಯವಿಲ್ಲ. 51 ರೆಬೆಕ್ಕಳು ನಿಮ್ಮವಳು. ನೀನು ಆಕೆಯನ್ನು ಕರೆದುಕೊಂಡು ಹೋಗಿ ಯೆಹೋವನ ಇಷ್ಟಕ್ಕನುಸಾರವಾಗಿ ನಿನ್ನ ಒಡೆಯನ ಮಗನಿಗೆ ಮದುವೆ ಮಾಡಿಸು” ಎಂದು ಹೇಳಿದರು.

52 ಅಬ್ರಹಾಮನ ಸೇವಕನು ಈ ಮಾತುಗಳನ್ನು ಕೇಳಿ ಯೆಹೋವನಿಗೆ ನೆಲದವರೆಗೂ ತಲೆಬಾಗಿ ನಮಸ್ಕರಿಸಿದನು. 53 ಆಮೇಲೆ ಆ ಸೇವಕನು ತಾನು ತಂದಿದ್ದ ಉಡುಗೊರೆಗಳನ್ನು ರೆಬೆಕ್ಕಳಿಗೆ ಕೊಟ್ಟನು. ಅವನು ರೆಬೆಕ್ಕಳಿಗೆ ಬೆಳ್ಳಿಬಂಗಾರಗಳ ಒಡವೆಗಳನ್ನೂ ಶ್ರೇಷ್ಠವಾದ ಬಟ್ಟೆಗಳನ್ನೂ ಕೊಟ್ಟನು. ಇದಲ್ಲದೆ ಅವನು ಬೆಲೆಬಾಳುವ ಉಡುಗೊರೆಗಳನ್ನು ಆಕೆಯ ಅಣ್ಣನಿಗೂ ತಾಯಿಗೂ ಕೊಟ್ಟನು. 54 ಆ ಸೇವಕನು ಮತ್ತು ಅವನ ಸಂಗಡಿಗರು ಅಲ್ಲಿ ಇಳಿದುಕೊಂಡು ಊಟಮಾಡಿದರು. ಅವರು ಮರುದಿನ ಮುಂಜಾನೆ ಎದ್ದು, “ಈಗ ನಾವು ನಮ್ಮ ಒಡೆಯನ ಬಳಿಗೆ ಹೋಗುತ್ತೇವೆ” ಎಂದು ಹೇಳಿದರು.

55 ರೆಬೆಕ್ಕಳ ತಾಯಿ ಮತ್ತು ಅಣ್ಣನು ಅವರಿಗೆ, “ರೆಬೆಕ್ಕಳು ಸ್ವಲ್ಪ ದಿನಗಳವರೆಗೆ ನಮ್ಮ ಜೊತೆ ಇರಲಿ. ಹತ್ತು ದಿನಗಳವರೆಗಾದರೂ ನಮ್ಮೊಡನೆ ಇರಲಿ. ಆಮೇಲೆ ಆಕೆಯನ್ನು ಕರೆದುಕೊಂಡು ಹೋಗು” ಎಂದು ಹೇಳಿದರು.

56 ಆದರೆ ಆ ಸೇವಕನು ಅವರಿಗೆ, “ನನ್ನನ್ನು ತಡೆಯಬೇಡಿ. ಯೆಹೋವನು ನನ್ನ ಪ್ರಯಾಣವನ್ನು ಯಶಸ್ವಿಗೊಳಿಸಿದ್ದಾನೆ. ಈಗ ನನ್ನನ್ನು ನನ್ನ ಒಡೆಯನ ಬಳಿಗೆ ಕಳುಹಿಸಿಕೊಡಿ” ಎಂದು ಹೇಳಿದನು.

57 ರೆಬೆಕ್ಕಳ ಅಣ್ಣ ಮತ್ತು ತಾಯಿ ಅವನಿಗೆ, “ನಾವು ರೆಬೆಕ್ಕಳನ್ನು ಕರೆದು ಆಕೆಯ ಇಷ್ಟವನ್ನು ಕೇಳುತ್ತೇವೆ” ಅಂದರು. 58 ಅವರು ರೆಬೆಕ್ಕಳನ್ನು ಕರೆದು, “ಈಗಲೇ ಈ ಮನುಷ್ಯನೊಡನೆ ಹೋಗಲು ನಿನಗೆ ಇಷ್ಟವಿದೆಯೋ?” ಎಂದು ಕೇಳಿದರು.

ರೆಬೆಕ್ಕಳು, “ಹೌದು, ನಾನು ಹೋಗುತ್ತೇನೆ” ಅಂದಳು.

59 ಆದ್ದರಿಂದ ಅವರು ರೆಬೆಕ್ಕಳನ್ನು ಅಬ್ರಹಾಮನ ಸೇವಕನೊಂದಿಗೂ ಅವನ ಸಂಗಡಿಗರೊಂದಿಗೂ ಕಳುಹಿಸಿಕೊಟ್ಟರು. ರೆಬೆಕ್ಕಳ ಸೇವಕಿ ಸಹ ಅವರೊಂದಿಗೆ ಹೋದಳು. 60 ಅವರು ಹೊರಡಲು ಸಿದ್ಧರಾಗಿದ್ದಾಗ ಅವರು ರೆಬೆಕ್ಕಳಿಗೆ,

“ನಮ್ಮ ತಂಗಿಯೇ,
    ನೀನು ಕೋಟ್ಯಾನುಕೋಟಿ ಜನರ ತಾಯಿಯಾಗು.
ನಿನ್ನ ಸಂತತಿಗಳವರು ತಮ್ಮ ಶತ್ರುಗಳನ್ನು ಸೋಲಿಸಿ
    ಅವರ ನಗರಗಳನ್ನು ವಶಮಾಡಿಕೊಳ್ಳಲಿ”

ಎಂದು ಹೇಳಿ ಹರಸಿದರು.

61 ಆಮೇಲೆ ರೆಬೆಕ್ಕಳು ಮತ್ತು ಆಕೆಯ ಸೇವಕಿಯರು ಒಂಟೆಯ ಮೇಲೆ ಹತ್ತಿ ಕುಳಿತುಕೊಂಡು ಆ ಸೇವಕನನ್ನೂ ಅವನ ಸಂಗಡಿಗರನ್ನೂ ಹಿಂಬಾಲಿಸಿದರು. ಹೀಗೆ ಆ ಸೇವಕನು ರೆಬೆಕ್ಕಳನ್ನು ಕರೆದುಕೊಂಡು ಮನೆಗೆ ಮರಳಿ ಪ್ರಯಾಣಮಾಡಿದನು.

62 ಆ ಸಮಯದಲ್ಲಿ, ಇಸಾಕನು ಬೀರ್‌ಲಹೈರೋಯಿಗೆ ಹೋಗಿ ಬಂದಿದ್ದನು; ಯಾಕೆಂದರೆ ಅವನು ನೆಗವ್‌ನಲ್ಲಿ ವಾಸವಾಗಿದ್ದನು. 63 ಸಾಯಂಕಾಲದಲ್ಲಿ ಇಸಾಕನು ಧ್ಯಾನಮಾಡಲು ಹೊಲಕ್ಕೆ ಹೋದನು. ಇಸಾಕನು ಕಣ್ಣೆತ್ತಿ ನೋಡಿದಾಗ ಬಹುದೂರದಲ್ಲಿ ಒಂಟೆಗಳು ಬರುತ್ತಿರುವುದನ್ನು ಕಂಡನು.

64 ರೆಬೆಕ್ಕಳು ಕಣ್ಣೆತ್ತಿ ನೋಡಿದಾಗ ಇಸಾಕನನ್ನು ಕಂಡಳು. ಆಮೇಲೆ ಆಕೆ ಒಂಟೆಯಿಂದ ಬೇಗನೆ ಇಳಿದು ಬಂದಳು. 65 ಆಕೆ, ಆ ಸೇವಕನಿಗೆ, “ನಮ್ಮನ್ನು ಭೇಟಿಯಾಗಲು ಹೊಲದಲ್ಲಿ ಬರುತ್ತಿರುವ ಆ ಯೌವನಸ್ಥನು ಯಾರು?” ಎಂದು ಕೇಳಿದಳು.

ಆ ಸೇವಕನು, “ಅವನು ನನ್ನ ಒಡೆಯನ ಮಗನು” ಎಂದು ಹೇಳಿದನು. ಆ ಕೂಡಲೇ ರೆಬೆಕ್ಕಳು ತನ್ನ ಮುಖಕ್ಕೆ ಮುಸುಕನ್ನು ಹಾಕಿಕೊಂಡಳು.

66 ಆ ಸೇವಕನು ನಡೆದ ಸಂಗತಿಯನ್ನೆಲ್ಲಾ ಇಸಾಕನಿಗೆ ತಿಳಿಸಿದನು. 67 ನಂತರ ಇಸಾಕನು ಆಕೆಯನ್ನು ಕರೆದುಕೊಂಡು ತನ್ನ ತಾಯಿಯ ಗುಡಾರಕ್ಕೆ ಬಂದನು. ಅಂದು ರೆಬೆಕ್ಕಳು ಇಸಾಕನ ಹೆಂಡತಿಯಾದಳು. ಇಸಾಕನು ಅವಳನ್ನು ಬಹಳವಾಗಿ ಪ್ರೀತಿಸಿದನು. ತಾಯಿಯ ಸಾವಿನಿಂದ ಉಂಟಾಗಿದ್ದ ದುಃಖವು ಕಡಿಮೆಯಾಗಿ ಇಸಾಕನಿಗೆ ಆದರಣೆಯಾಯಿತು.

ಮತ್ತಾಯ 23

ಯೇಸು ಧಾರ್ಮಿಕ ನಾಯಕರನ್ನು ಖಂಡಿಸಿದನು

(ಮಾರ್ಕ 12:38-40; ಲೂಕ 11:37-52; 20:45-47)

23 ಬಳಿಕ ಯೇಸು ನೆರೆದಿದ್ದ ಜನರೊಂದಿಗೂ ತನ್ನ ಶಿಷ್ಯರೊಂದಿಗೂ ಮಾತಾಡಿ ಹೇಳಿದ್ದೇನೆಂದರೆ: “ಮೋಶೆಯ ಧರ್ಮಶಾಸ್ತ್ರ ಹೇಳುವುದನ್ನು ನಿಮಗೆ ತಿಳಿಸಲು ಧರ್ಮೋಪದೇಶಕರಿಗೂ ಫರಿಸಾಯರಿಗೂ ಅಧಿಕಾರವಿದೆ. ಆದ್ದರಿಂದ ನೀವು ಅವರಿಗೆ ವಿಧೇಯರಾಗಿರಬೇಕು ಮತ್ತು ಅವರು ಹೇಳಿದ್ದನ್ನೆಲ್ಲ ಕೈಕೊಂಡು ನಡೆಯಬೇಕು. ಆದರೆ ಅವರ ಜೀವಿತಗಳು ಅನುಸರಿಸತಕ್ಕ ಒಳ್ಳೆಯ ಮಾದರಿ ಜೀವಿತಗಳಲ್ಲ. ಅವರು ನಿಮಗೆ ತಿಳಿಸುವಂಥ ಸಂಗತಿಗಳನ್ನು ತಾವೇ ಅನುಸರಿಸುವುದಿಲ್ಲ. ಅವರು ಬೇರೆಯವರಿಗೆ ಕಷ್ಟಕರವಾದ ನಿಯಮಗಳನ್ನು ಕೊಟ್ಟು ಅವುಗಳಿಗೆ ವಿಧೇಯರಾಗಬೇಕೆಂದು ಒತ್ತಾಯ ಮಾಡುತ್ತಾರೆ. ತಾವಾದರೋ ಆ ನಿಯಮಗಳಲ್ಲಿ ಯಾವದನ್ನಾದರೂ ಅನುಸರಿಸಲು ಪ್ರಯತ್ನಿಸುವುದಿಲ್ಲ.

“ತಮ್ಮನ್ನು ಬೇರೆ ಜನರು ನೋಡಲಿ ಎಂಬ ಒಂದೇ ಉದ್ದೇಶದಿಂದ ಅವರು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾರೆ. ಪವಿತ್ರ ಗ್ರಂಥಗಳು ತುಂಬಿರುವ ವಿಶೇಷವಾದ ಚರ್ಮದ ಚೀಲಗಳನ್ನು ಅವರು ಕಟ್ಟಿಕೊಂಡಿರುತ್ತಾರೆ. ಅವರು ಈ ಚೀಲಗಳನ್ನು ಇನ್ನೂ ಹೆಚ್ಚುಹೆಚ್ಚು ದೊಡ್ಡದನ್ನಾಗಿ ಮಾಡುತ್ತಾರೆ. ಜನರು ನೋಡಲಿ ಎಂದು ಅವರು ತಮ್ಮ ವಿಶೇಷ ಪ್ರಾರ್ಥನೆಯ ಉಡುಪುಗಳನ್ನು ಮತ್ತಷ್ಟು ಉದ್ದ ಮಾಡುತ್ತಾರೆ. ಆ ಫರಿಸಾಯರು ಮತ್ತು ಧರ್ಮೋಪದೇಶಕರು ಔತಣಗಳಲ್ಲಿ ಹಾಗೂ ಸಭಾಮಂದಿರಗಳಲ್ಲಿ ಅತಿ ಪ್ರಾಮುಖ್ಯವಾದ ಸ್ಥಾನಗಳನ್ನು ಅಪೇಕ್ಷಿಸುತ್ತಾರೆ. ಮಾರುಕಟ್ಟೆಗಳಲ್ಲಿ ಜನರು ತಮಗೆ ಮರ್ಯಾದೆ ತೋರಿಸಬೇಕೆಂದು ಆಶಿಸುತ್ತಾರೆ; ಜನರಿಂದ ಉಪದೇಶಕರೆನಿಸಿಕೊಳ್ಳಲು ಇಷ್ಟಪಡುತ್ತಾರೆ.

“ಆದರೆ ನೀವು ಉಪದೇಶಕರೆನಿಸಿಕೊಳ್ಳಬೇಡಿ. ನೀವೆಲ್ಲರೂ ಸಹೋದರಸಹೋದರಿಯರು. ನಿಮಗೆ ಒಬ್ಬನೇ ಉಪದೇಶಕನು. ಈ ಲೋಕದಲ್ಲಿ ಯಾರನ್ನೂ ‘ತಂದೆ’ ಎಂದು ಕರೆಯಬೇಡಿ. ನಿಮಗೆ ಒಬ್ಬನೇ ತಂದೆ. ಆತನು ಪರಲೋಕದಲ್ಲಿದ್ದಾನೆ. 10 ‘ಗುರು’ವೆಂದೂ ಕರೆಸಿಕೊಳ್ಳಬೇಡಿ. ನಿಮಗೆ ಕ್ರಿಸ್ತನೊಬ್ಬನೇ ಗುರು. 11 ಸೇವಕನಂತೆ ನಿಮಗೆ ಸೇವೆ ಮಾಡುವವನೇ ನಿಮ್ಮಲ್ಲಿ ಅತ್ಯಂತ ದೊಡ್ಡವನಾಗಿದ್ದಾನೆ. 12 ತಾನು ಬೇರೆಯವರಿಗಿಂತ ಉತ್ತಮನೆಂದು ತನ್ನನ್ನು ಭಾವಿಸಿಕೊಳ್ಳುವವನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಉನ್ನತಿಗೇರಿಸಲ್ಪಡುವನು.

13 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ಜನರು ಪರಲೋಕರಾಜ್ಯಕ್ಕೆ ಪ್ರವೇಶಿಸುವ ದಾರಿಯನ್ನು ನೀವು ಮುಚ್ಚಿಬಿಡುತ್ತೀರಿ. ನೀವೂ ಪ್ರವೇಶಿಸುವುದಿಲ್ಲ ಮತ್ತು ಪ್ರವೇಶಿಸುವುದಕ್ಕೆ ಪ್ರಯತ್ನಿಸುವ ಜನರಿಗೂ ಬಿಡುವುದಿಲ್ಲ. 14 [a]

15 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮ ಮಾರ್ಗಗಳನ್ನು ಹಿಂಬಾಲಿಸುವ ಒಬ್ಬನನ್ನು ಕಂಡುಕೊಳ್ಳಲು ನೀವು ಸಮುದ್ರಗಳನ್ನು ದಾಟಿ ಬೇರೆಬೇರೆ ದೇಶಗಳಲ್ಲಿ ಪ್ರಯಾಣ ಮಾಡುತ್ತೀರಿ. ಅವನನ್ನು ಕಂಡುಕೊಂಡ ಮೇಲೆ ನಿಮಗಿಂತಲೂ ಹೆಚ್ಚು ಕೆಟ್ಟವನನ್ನಾಗಿ ಮಾಡುತ್ತೀರಿ. ನೀವು ನರಕಪಾತ್ರರಾಗುವಷ್ಟು ಕೆಟ್ಟವರಾಗಿದ್ದೀರಿ.

16 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು. ಒಬ್ಬನು ದೇವಾಲಯದ ಹೆಸರಿನ ಮೇಲೆ ವಾಗ್ದಾನ ಮಾಡಿದರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ದೇವಾಲಯದಲ್ಲಿರುವ ಚಿನ್ನದ ಮೇಲೆ ವಾಗ್ದಾನ ಮಾಡಿದರೆ, ಅವನು ಅದನ್ನು ಈಡೇರಿಸಬೇಕು ಎಂದು ಹೇಳುತ್ತೀರಿ! 17 ನೀವು ಕುರುಡರಾದ ಮೂರ್ಖರು! ಯಾವುದು ಹೆಚ್ಚಿನದು? ಚಿನ್ನವೋ ಅಥವಾ ದೇವಾಲಯವೋ? ಆ ಚಿನ್ನವು ಪರಿಶುದ್ಧಗೊಂಡದ್ದು ದೇವಾಲಯದಿಂದಲೇ. ಆದ್ದರಿಂದ ದೇವಾಲಯವೇ ಹೆಚ್ಚಿನದು.

18 “ಒಬ್ಬನು ಯಜ್ಞವೇದಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದಕ್ಕೇನೂ ಬೆಲೆಯಿಲ್ಲ ಎನ್ನುತ್ತೀರಿ. ಆದರೆ ಒಬ್ಬನು ಯಜ್ಞವೇದಿಕೆಯ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದರೆ ಅವನು ಅದನ್ನು ಈಡೇರಿಸಲೇಬೇಕು ಎಂದು ಹೇಳುತ್ತೀರಿ. 19 ನೀವು ಕುರುಡರು. ನಿಮಗೇನೂ ಅರ್ಥವಾಗುವುದಿಲ್ಲ. ಯಾವುದು ಹೆಚ್ಚಿನದು? ಕಾಣಿಕೆಯೋ ಅಥವಾ ಯಜ್ಞವೇದಿಕೆಯೋ? ಕಾಣಿಕೆ ಪರಿಶುದ್ಧಗೊಂಡದ್ದು ಯಜ್ಞವೇದಿಕೆಯಿಂದಲೇ. ಆದ್ದರಿಂದ ಯಜ್ಞವೇದಿಕೆಯೇ ಹೆಚ್ಚಿನದು. 20 ಯಜ್ಞವೇದಿಕೆಯ ಮೇಲೆ ವಾಗ್ದಾನ ಮಾಡುವವನು ಯಜ್ಞವೇದಿಕೆಯ ಮತ್ತು ಅದರ ಮೇಲಿರುವ ಕಾಣಿಕೆಯ ಮೇಲೆ ವಾಗ್ದಾನ ಮಾಡಿದಂತಾಯಿತು. 21 ದೇವಾಲಯದ ಮೇಲೆ ವಾಗ್ದಾನ ಮಾಡುವವನು ನಿಜವಾಗಿಯೂ ದೇವಾಲಯದ ಮತ್ತು ಅದರೊಳಗೆ ವಾಸವಾಗಿರುವಾತನ ಮೇಲೆ ವಾಗ್ದಾನ ಮಾಡಿದಂತಾಯಿತು. 22 ಪರಲೋಕದ ಮೇಲೆ ವಾಗ್ದಾನ ಮಾಡುವವನು ದೇವರ ಸಿಂಹಾಸನದ ಮೇಲೆಯೂ ಆ ಸಿಂಹಾಸನದ ಮೇಲೆ ಕುಳಿತಿರುವಾತನ ಮೇಲೆಯೂ ವಾಗ್ದಾನ ಮಾಡಿದಂತಾಯಿತು.

23 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನಿಮ್ಮಲ್ಲಿರುವ ಪ್ರತಿಯೊಂದರಲ್ಲೂ ನಿಮ್ಮ ಪುದೀನ, ಸಬ್ಬಸ್ಸಿಗೆ ಸೊಪ್ಪು, ಜೀರಿಗೆ ಗಿಡಗಳಲ್ಲಿಯೂ ಸಹ ಹತ್ತರಲ್ಲೊಂದು ಪಾಲನ್ನು ದೇವರಿಗೆ ಕೊಡುತ್ತೀರಿ. ಆದರೆ ಧರ್ಮಶಾಸ್ತ್ರದ ಬೋಧನೆಗಳಲ್ಲಿ ನಿಜವಾಗಿಯೂ ಪ್ರಾಮುಖ್ಯವಾದ ಆಜ್ಞೆಗಳನ್ನು ಅಂದರೆ ನ್ಯಾಯವನ್ನೂ ಕರುಣೆಯನ್ನೂ ಯಥಾರ್ಥತೆಯನ್ನೂ ನೀವು ತೊರೆದುಬಿಟ್ಟಿದ್ದೀರಿ. ಈ ಆಜ್ಞೆಗಳಿಗೆ ನೀವು ಮೊದಲು ವಿಧೇಯರಾಗಿ, ಈಗ ಮಾಡುತ್ತಿರುವಂಥ ಕಾರ್ಯಗಳನ್ನು ಮಾಡಬೇಕಿತ್ತು. 24 ನೀವು ಜನರಿಗೆ ಮಾರ್ಗದರ್ಶನ ಮಾಡುತ್ತೀರಿ. ಆದರೆ ನೀವೇ ಕುರುಡರು! ಒಬ್ಬನು ತಾನು ಕುಡಿಯುವ ಪಾನೀಯದೊಳಗಿಂದ ಸಣ್ಣ ಸೊಳ್ಳೆಯನ್ನು ತೆಗೆದುಹಾಕಿ ಆಮೇಲೆ ಒಂಟೆಯನ್ನು ನುಂಗುವವನಂತೆ ನೀವಿದ್ದೀರಿ.

25 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ನಿಮ್ಮ ಪಾತ್ರೆ ಬಟ್ಟಲುಗಳ ಹೊರಭಾಗವನ್ನು ತೊಳೆದು ಸ್ವಚ್ಛಮಾಡುತ್ತೀರಿ. ಆದರೆ ಅವುಗಳ ಒಳಭಾಗವು ಮೋಸದಿಂದಲೂ ನಿಮಗೆ ತೃಪ್ತಿ ನೀಡುವ ಪದಾರ್ಥಗಳಿಂದಲೂ ತುಂಬಿವೆ. 26 ಫರಿಸಾಯರೇ, ನೀವು ಕುರುಡರು! ಮೊದಲು ಬಟ್ಟಲಿನ ಒಳಭಾಗವನ್ನು ಚೆನ್ನಾಗಿ ಶುಚಿಮಾಡಿರಿ. ಆಗ ಬಟ್ಟಲಿನ ಹೊರಭಾಗವು ನಿಜವಾಗಿಯೂ ಶುಚಿಯಾಗಿರುವುದು.

27 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಸುಣ್ಣ ಹಚ್ಚಿದ ಸಮಾಧಿಗಳಂತಿದ್ದೀರಿ. ಆ ಸಮಾಧಿಗಳ ಹೊರಭಾಗ ಚಂದವಾಗಿ ಕಾಣುತ್ತದೆ. ಆದರೆ ಒಳಭಾಗ ಸತ್ತವರ ಎಲುಬುಗಳಿಂದಲೂ ಎಲ್ಲಾ ಬಗೆಯ ಹೊಲಸುಗಳಿಂದಲೂ ತುಂಬಿರುತ್ತದೆ. 28 ನೀವು ಅದೇ ರೀತಿ ಇದ್ದೀರಿ. ನಿಮ್ಮನ್ನು ನೋಡಿದ ಜನರು ನಿಮ್ಮನ್ನು ಒಳ್ಳೆಯವರೆಂದು ಭಾವಿಸಿಕೊಳ್ಳುತ್ತಾರೆ. ಆದರೆ ನಿಮ್ಮ ಅಂತರಂಗವು ಕಪಟದಿಂದಲೂ ದುಷ್ಟತನದಿಂದಲೂ ತುಂಬಿಕೊಂಡಿದೆ.

29 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟುತ್ತೀರಿ. ಒಳ್ಳೆಯವರಾಗಿ ಜೀವಿಸದವರ ಗೋರಿಗಳಿಗೆ ಹೋಗಿ ಗೌರವ ತೋರಿಸುತ್ತೀರಿ. 30 ‘ನಮ್ಮ ಪಿತೃಗಳ ಕಾಲದಲ್ಲಿ ನಾವು ಇದ್ದಿದ್ದರೆ ಈ ಪ್ರವಾದಿಗಳನ್ನು ಕೊಲ್ಲುವುದಕ್ಕೆ ಅವರಿಗೆ ಸಹಾಯ ಮಾಡುತ್ತಿರಲಿಲ್ಲ’ ಎಂದು ಹೇಳುತ್ತೀರಿ. 31 ಆ ಪ್ರವಾದಿಗಳನ್ನು ಕೊಂದವರ ಮಕ್ಕಳು (ಸಂತತಿಯವರು) ನೀವೇ ಎಂಬುದಕ್ಕೆ ಇದೇ ಆಧಾರವಾಗಿದೆ. 32 ನಿಮ್ಮ ಪಿತೃಗಳು ಪ್ರಾರಂಭಿಸಿದ ಆ ಪಾಪವನ್ನು ನೀವು ಪೂರ್ತಿಮಾಡುವಿರಿ!

33 “ನೀವು ಸರ್ಪಗಳು! ನೀವು ವಿಷಕರವಾದ ಹಾವುಗಳ ಕುಟುಂಬದವರು! ನೀವು ದೇವರಿಂದ ತಪ್ಪಿಸಿಕೊಳ್ಳಲಾರಿರಿ. ನೀವೆಲ್ಲರು ಅಪರಾಧಿಗಳೆಂಬ ತೀರ್ಪುಹೊಂದಿ ನರಕಕ್ಕೆ ಹೋಗುವಿರಿ! 34 ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಬಳಿಗೆ ಪ್ರವಾದಿಗಳನ್ನೂ ಜ್ಞಾನಿಗಳನ್ನೂ ಉಪದೇಶಕರನ್ನೂ ಕಳುಹಿಸುತ್ತೇನೆ. ನೀವು ಅವರಲ್ಲಿ ಕೆಲವರನ್ನು ಕೊಲ್ಲುವಿರಿ; ಇನ್ನು ಕೆಲವರನ್ನು ಶಿಲುಬೆಗೇರಿಸುವಿರಿ; ಇತರ ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಹೊಡೆಯುವಿರಿ; ನೀವು ಅವರನ್ನು ಊರಿಂದ ಊರಿಗೆ ಅಟ್ಟಿಬಿಡುವಿರಿ.

35 “ಆದ್ದರಿಂದ ಭೂಮಿಯ ಮೇಲೆ ಕೊಲ್ಲಲ್ಪಟ್ಟ ಎಲ್ಲಾ ಸತ್ಪುರುಷರ ಕೊಲೆಯ ಅಪರಾಧಕ್ಕೆ ನೀವು ಗುರಿಯಾಗುವಿರಿ. ಸತ್ಪುರುಷನಾದ ಹೇಬೆಲನನ್ನು ಮೊದಲುಗೊಂಡು ಬರಕೀಯನ ಮಗನಾದ ಜಕರೀಯನನ್ನು ಕೊಂದದ್ದಕ್ಕೆ ನೀವು ಅಪರಾಧಿಗಳಾಗುವಿರಿ. ಜಕರೀಯನು ದೇವಾಲಯಕ್ಕೂ ಯಜ್ಞವೇದಿಕೆಗೂ ನಡುವೆ ಕೊಲ್ಲಲ್ಪಟ್ಟನು. 36 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಈ ಕಾಲದಲ್ಲಿ ಜೀವಿಸುತ್ತಿರುವ ನಿಮ್ಮ ಮೇಲೆ ಈ ಅಪರಾಧಗಳೆಲ್ಲಾ ಬರುತ್ತವೆ.

ಜೆರುಸಲೇಮಿನ ಜನರಿಗೆ ಯೇಸು ನೀಡಿದ ಎಚ್ಚರಿಕೆ

(ಲೂಕ 13:34-35)

37 “ಜೆರುಸಲೇಮೇ, ಜೆರುಸಲೇಮೇ! ಪ್ರವಾದಿಗಳನ್ನು ಕೊಲ್ಲುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿದ ಜನರನ್ನು ಕಲ್ಲುಗಳಿಂದ ಕೊಲ್ಲುವವಳೇ, ಅನೇಕ ಸಲ ನಿನ್ನ ಜನರಿಗೆ ನಾನು ಸಹಾಯ ಮಾಡಬೇಕೆಂದಿದ್ದೆನು. ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಸೇರಿಸಿಕೊಳ್ಳುವ ಹಾಗೆ ನಿನ್ನ ಜನರನ್ನು ಸೇರಿಸಿಕೊಳ್ಳಲು ನನಗೆ ಮನಸ್ಸಿತ್ತು. ಆದರೆ ನೀನು ಒಪ್ಪಲಿಲ್ಲ. 38 ಈಗ ನಿನ್ನ ಮನೆಯು ಸಂರ್ಪೂಣವಾಗಿ ಬರಿದಾಗಿಬಿಟ್ಟಿದೆ. 39 ನಾನು ನಿನಗೆ ಹೇಳುವುದೇನೆಂದರೆ, ‘ಪ್ರಭುವಿನ ಹೆಸರಿನಲ್ಲಿ ಬರುವಾತನನ್ನು ದೇವರು ಆಶೀರ್ವದಿಸಲಿ’(A) ಎಂದು ನೀನು ಹೇಳುವ ತನಕ ನನ್ನನ್ನು ನೋಡುವುದೇ ಇಲ್ಲ.”

ನೆಹೆಮೀಯ 13

ನೆಹೆಮೀಯನ ಕಡೇ ಆಜ್ಞೆಗಳು

13 ಆ ದಿವಸ ಎಲ್ಲಾ ಜನರಿಗೆ ಕೇಳಿಸುವಂತೆ ಮೋಶೆಯ ಗ್ರಂಥಗಳನ್ನು ಓದಲಾಯಿತು. ಅದರಲ್ಲಿ ಈ ಆಜ್ಞೆಯು ಬರೆಯಲ್ಪಟ್ಟಿದ್ದನ್ನು ಕಂಡುಕೊಂಡರು. ಅದೇನೆಂದರೆ: ದೇವರ ಸಭೆಯಲ್ಲಿ ಯಾವ ಅಮ್ಮೋನ್ಯನಾಗಲಿ ಮೋವಾಬ್ಯನಾಗಲಿ ಇರಕೂಡದು. ಯಾಕೆಂದರೆ ಅವರು ಇಸ್ರೇಲರಿಗೆ ಆಹಾರವನ್ನಾಗಲಿ ನೀರನ್ನಾಗಲಿ ಕೊಟ್ಟಿರಲಿಲ್ಲ. ಅಲ್ಲದೆ ಅವರು ಬಿಳಾಮನಿಗೆ ಹಣಕೊಟ್ಟು ಇಸ್ರೇಲರನ್ನು ಶಪಿಸುವಂತೆ ಮಾಡಿದರು. ಆದರೆ ನಮ್ಮ ದೇವರು ಆ ಶಾಪವನ್ನು ನಮಗೆ ಆಶೀರ್ವಾದವಾಗುವಂತೆ ಮಾಡಿದರು. ಇಸ್ರೇಲರು ದೇವರ ಕಟ್ಟಳೆಯನ್ನು ಕೇಳಿ ಅದಕ್ಕೆ ವಿಧೇಯರಾದರು. ಅನ್ಯರ ಸಂತತಿಯವರಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡರು.

4-5 ಆದರೆ ಅದಕ್ಕಿಂತ ಮೊದಲು ಎಲ್ಯಾಷೀಬನು ದೇವಾಲಯದ ಒಂದು ಕೋಣೆಯನ್ನು ಟೋಬೀಯನಿಗೆ ಕೊಟ್ಟಿದ್ದನು. ಎಲ್ಯಾಷೀಬನು ದೇವಾಲಯದ ಉಗ್ರಾಣದ ಮುಖ್ಯಸ್ಥನಾಗಿದ್ದನು ಮತ್ತು ಟೋಬೀಯನ ಪ್ರಾಣಸ್ನೇಹಿತನಾಗಿದ್ದನು. ಆ ಕೋಣೆಯಲ್ಲಿ ಧಾನ್ಯಸಮರ್ಪಣೆಯ ಉಳಿದ ಭಾಗ, ಧೂಪ, ದೇವಾಲಯದ ಪಾತ್ರೆಗಳು, ದಶಮಾಂಶ, ದವಸಧಾನ್ಯಗಳು, ಹೊಸ ದ್ರಾಕ್ಷಾರಸ, ಎಣ್ಣೆ ಇವುಗಳನ್ನೆಲ್ಲಾ ಗಾಯಕರಿಗೂ ಲೇವಿಯರಿಗೂ ಮತ್ತು ದ್ವಾರಪಾಲಕರಿಗೂ ಕೊಡುವುದಕ್ಕಾಗಿ ಅಲ್ಲಿಟ್ಟಿದ್ದರು. ಅಲ್ಲಿ ಯಾಜಕರಿಗೆ ಉಡುಗೊರೆಗಳನ್ನು ಸಹ ಇಟ್ಟಿದ್ದರು. ಅದೇ ಕೋಣೆಯನ್ನು ಎಲ್ಯಾಷೀಬನು ಟೋಬೀಯನಿಗೆ ಕೊಟ್ಟಿದ್ದನು.

ಇದೆಲ್ಲಾ ನಡೆಯುತ್ತಿರುವಾಗ ನಾನು ಜೆರುಸಲೇಮಿನಲ್ಲಿರಲಿಲ್ಲ. ನಾನು ಬಾಬಿಲೋನಿನ ಅರಸನ ಬಳಿಗೆ ಹಿಂತಿರುಗಿದ್ದೆನು. ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ನಾನು ಅವನ ಬಳಿಗೆ ಹೋದೆನು. ಸ್ವಲ್ಪಕಾಲವಾದ ಬಳಿಕ ಅರಸನ ಅಪ್ಪಣೆಯೊಂದಿಗೆ ನಾನು ಹಿಂತಿರುಗಿ ಜೆರುಸಲೇಮಿಗೆ ಬಂದೆನು. ಎಲ್ಯಾಷೀಬನು ಟೋಬೀಯನಿಗೆ ನಮ್ಮ ದೇವರ ಆಲಯದ ಒಂದು ಕೋಣೆಯನ್ನು ಕೊಟ್ಟನೆಂಬ ದುಃಖದ ವಿಷಯವು ನನಗೆ ಜೆರುಸಲೇಮಿನಲ್ಲಿದ್ದಾಗ ತಿಳಿಯಿತು. ಆಗ ನಾನು ಎಲ್ಯಾಷೀಬನು ಮಾಡಿದ ಬಗ್ಗೆ ಬಹಳವಾಗಿ ಸಿಟ್ಟುಗೊಂಡೆನು. ಟೋಬೀಯನು ಉಪಯೋಗಿಸುತ್ತಿದ್ದ ಕೋಣೆಯೊಳಗಿದ್ದ ಅವನ ಸಾಮಾನುಗಳನ್ನೆಲ್ಲಾ ಹೊರಕ್ಕೆಳೆದು ಬಿಸಾಕಿದೆನು. ಆ ಕೋಣೆಗಳನ್ನು ಶುದ್ಧಮಾಡಲು ನಾನು ಆಜ್ಞೆ ಮಾಡಿದೆನು. ಆಮೇಲೆ ದೇವಾಲಯದ ಪಾತ್ರೆಗಳನ್ನು, ವಸ್ತುಗಳನ್ನು, ಧಾನ್ಯಸಮರ್ಪಣೆಗಳನ್ನು ಮತ್ತು ಧೂಪವನ್ನು ಆ ಕೋಣೆಯೊಳಗೆ ತಂದಿಟ್ಟೆನು.

10 ಲೇವಿಯರಿಗೆ ಸಲ್ಲತಕ್ಕ ಪಾಲನ್ನು ಜನರು ಕೊಡಲಿಲ್ಲವೆಂಬ ಕಾರಣದಿಂದಾಗಿ ಲೇವಿಯರೂ ಗಾಯಕರೂ ಹೊಲದಲ್ಲಿ ಕೆಲಸ ಮಾಡಲು ತಮ್ಮ ಊರುಗಳಿಗೆ ಹೊರಟುಹೋದರೆಂಬ ವಿಷಯ ನನಗೆ ತಿಳಿಯಿತು. 11 ಆಗ ನಾನು ಅಧಿಕಾರಿಗಳಿಗೆ, “ನೀವು ದೇವರ ಆಲಯವನ್ನು ನಿರ್ಲಕ್ಷಿಸಿದ್ದೇನು?” ಎಂದು ಪ್ರಶ್ನಿಸಿದೆನು. ಅನಂತರ ನಾನು ಲೇವಿಯರನ್ನು ಒಟ್ಟಾಗಿ ಸೇರಿಸಿ ತಮ್ಮತಮ್ಮ ಸ್ಥಳಗಳಿಗೆ ಹೋಗಿ ತಮಗೆ ನೇಮಕವಾದ ಕರ್ತವ್ಯ ಪಾಲಿಸುವಂತೆ ಹೇಳಿದೆನು. 12 ಆಗ ಯೆಹೂದ ಪ್ರಾಂತ್ಯದ ಪ್ರತಿಯೊಬ್ಬರೂ ತಮ್ಮ ದಶಮಾಂಶ, ಧಾನ್ಯ, ದ್ರಾಕ್ಷಾರಸ, ಎಣ್ಣೆ ಮುಂತಾದವುಗಳನ್ನು ತಂದುಕೊಟ್ಟರು. ಅವುಗಳನ್ನು ಉಗ್ರಾಣಗಳಲ್ಲಿ ಶೇಖರಿಸಿಡಲಾಯಿತು.

13 ಯಾಜಕನಾದ ಶೆಲೆಮ್ಯನನ್ನೂ ಬೋಧಕನಾದ ಚಾದೋಕನನ್ನೂ ಪೆದಾಯ ಎಂಬ ಲೇವಿಯನನ್ನೂ ಉಗ್ರಾಣಗಳಿಗೆ ಮುಖ್ಯಸ್ತರನ್ನಾಗಿ ಮಾಡಿದೆನು. ಮತ್ತನ್ಯನ ಮೊಮ್ಮಗನೂ ಜಕ್ಕೂರನ ಮಗನೂ ಆಗಿರುವ ಹಾನಾನನನ್ನು ಅವರಿಗೆ ಸಹಾಯಕನನ್ನಾಗಿ ನೇಮಿಸಿದೆನು. ಇವರು ನಂಬಿಗಸ್ತರಾಗಿದ್ದರು. ತಮ್ಮ ಜನರಿಗೆ ಬೇಕಾದ ದವಸವನ್ನು, ಆಹಾರಸಾಮಾಗ್ರಿಗಳನ್ನು ಒದಗಿಸುವ ಕಾರ್ಯಕ್ಕೆ ಅವರು ಜವಾಬ್ದಾರರಾಗಿದ್ದರು.

14 ದೇವರೇ, ನಾನು ಮಾಡಿದ ಈ ಕಾರ್ಯಗಳು ನಿನ್ನ ನೆನಪಿನಲ್ಲಿರಲಿ. ನಿನ್ನ ಆಲಯಕ್ಕೂ ಅದರ ಸೇವೆಗಳಿಗಾಗಿಯೂ ನಾನು ನಂಬಿಗಸ್ತಿಕೆಯಿಂದ ಮಾಡಿರುವ ಸೇವೆಯನ್ನೂ ಮರೆಯದಿರು.

15 ಆ ದಿವಸಗಳಲ್ಲಿ ಯೆಹೂದದ ಜನರು ಸಬ್ಬತ್ ದಿನದಲ್ಲಿ ಕೆಲಸ ಮಾಡುವುದನ್ನು ನೋಡಿದೆನು. ಅವರು ದ್ರಾಕ್ಷಿಯನ್ನು ತುಳಿದು ದ್ರಾಕ್ಷಾರಸ ತಯಾರಿಸುತ್ತಿದ್ದರು. ದವಸಧಾನ್ಯಗಳನ್ನು ಕತ್ತೆಗಳ ಮೇಲೆ ಹೇರಿಸಿಕೊಂಡು ಹೋಗುತ್ತಿದ್ದರು. ಬೆಳೆಯನ್ನು ಮಾರಲು ಜೆರುಸಲೇಮಿಗೆ ಬರುತ್ತಿದ್ದರು. ನಾನು ಅವರನ್ನು ಕಟುವಾಗಿ ಎಚ್ಚರಿಸಿ ಇನ್ನು ಮುಂದೆ ಸಬ್ಬತ್ ದಿನದಲ್ಲಿ ಪಟ್ಟಣದೊಳಗೆ ಏನನ್ನೂ ತರಬಾರದೆಂದು ಆಜ್ಞಾಪಿಸಿದೆನು.

16 ಜೆರುಸಲೇಮ್ ನಗರದಲ್ಲಿ ತೂರ್ ದೇಶದ ಕೆಲವರು ವಾಸಿಸುತ್ತಿದ್ದರು. ಅವರು ಸಬ್ಬತ್ ದಿನದಲ್ಲಿ ಮೀನು ಮತ್ತು ಇತರ ವಸ್ತುಗಳನ್ನು ನಗರದೊಳಕ್ಕೆ ತಂದು ಮಾರುತ್ತಿದ್ದರು. ಯೆಹೂದ್ಯರು ಅವರಿಂದ ಕೊಂಡುಕೊಳ್ಳುತ್ತಿದ್ದರು. 17 ನಾನು ಯೆಹೂದ ಪ್ರಾಂತದ ಗೌರವಸ್ಥ ಜನರಿಗೆ, “ಇದು ತಪ್ಪು, ನೀವು ತಪ್ಪು ಕೆಲಸ ಮಾಡುತ್ತಿದ್ದೀರಿ. ನೀವು ಸಬ್ಬತ್ ದಿನವನ್ನು ಅಶುದ್ಧವನ್ನಾಗಿ ಮಾಡುತ್ತಿದ್ದೀರಿ. ಅದನ್ನು ಸಾಮಾನ್ಯ ದಿನದಂತೆ ಮಾಡುತ್ತಿದ್ದೀರಿ. 18 ನಮ್ಮ ಪೂರ್ವಿಕರೂ ಇದೇ ರೀತಿ ಮಾಡಿದರು. ಆ ಕಾರಣದಿಂದ ನಮ್ಮ ದೇವರು ಇಂಥಾ ತೊಂದರೆಗಳನ್ನು ನಮ್ಮ ನಗರಕ್ಕೆ ತಂದೊಡ್ಡಿದನು. ನೀವು ಸಬ್ಬತ್ ದಿನವನ್ನು ಅಶುದ್ಧಮಾಡಿ ನಿಮ್ಮ ಮೇಲೆ ಇನ್ನೂ ಹೆಚ್ಚಿನ ಕೋಪವನ್ನು ಬರಮಾಡಿಕೊಳ್ಳುತ್ತಿದ್ದೀರಿ. ದೇವರು ಇದಕ್ಕಾಗಿ ಭಯಂಕರ ಶಿಕ್ಷೆಯನ್ನು ಕೊಡುವವನಾಗಿದ್ದಾನೆ” ಎಂದು ಹೇಳಿದೆನು.

19 ಅಲ್ಲದೆ ಶುಕ್ರವಾರ ಸೂರ್ಯಸ್ತಮಾನಕ್ಕಿಂತ ಮುಂಚೆ ಜೆರುಸಲೇಮಿನ ಬಾಗಿಲ ಕದಗಳನ್ನು ಮುಚ್ಚಲು ಆಜ್ಞೆಯಿತ್ತೆನು. ಸಬ್ಬತ್‌ದಿನ ಮುಗಿದ ಬಳಿಕವೇ ಅವುಗಳನ್ನು ತೆರೆಯಲು ಅಪ್ಪಣೆಕೊಟ್ಟೆನು. ದ್ವಾರಗಳ ಬಳಿ ನನ್ನ ಕೆಲವು ಜನರನ್ನು ನಿಲ್ಲಿಸಿ, ಸಬ್ಬತ್ ದಿನದಲ್ಲಿ ಯಾವ ಮೂಟೆಯನ್ನೂ ನಗರದೊಳಗೆ ತರಲು ಬಿಡಬಾರದು ಎಂದು ಅವರಿಗೆ ಆಜ್ಞಾಪಿಸಿದೆನು.

20 ಒಂದೆರಡು ಬಾರಿ ವ್ಯಾಪಾರಸ್ತರು ನಗರದ ಹೊರಗಡೆಯೇ ರಾತ್ರಿಯಲ್ಲಿ ಉಳಿದುಕೊಳ್ಳಬೇಕಾಯಿತು. 21 ನಾನು ಆ ವ್ಯಾಪಾರಸ್ತರಿಗೆ, “ನೀವು ಬಾಗಿಲಿಗೆದುರಾಗಿ ನಗರದ ಹೊರಗೆ ರಾತ್ರಿ ಉಳಿದುಕೊಳ್ಳಬಾರದು. ಹಾಗೆ ಮಾಡಿದ್ದಲ್ಲಿ ನಿಮ್ಮನ್ನು ದಸ್ತಗಿರಿ ಮಾಡಬೇಕಾಗುವದು” ಎಂದು ಎಚ್ಚರಿಸಿದೆನು. ಅಂದಿನಿಂದ ಅವರು ಸಬ್ಬತ್ ದಿನದಲ್ಲಿ ನಗರಕ್ಕೆ ವ್ಯಾಪಾರಕ್ಕಾಗಿ ಬರುವುದನ್ನು ನಿಲ್ಲಿಸಿದರು.

22 ಇದಾದ ಬಳಿಕ ತಮ್ಮನ್ನು ಶುದ್ಧಪಡಿಸಿಕೊಳ್ಳಲು ಲೇವಿಯರಿಗೆ ಆಜ್ಞಾಪಿಸಿದೆನು. ಅವರು ಶುದ್ಧಪಡಿಸಿಕೊಂಡ ಬಳಿಕ ಬಾಗಿಲುಗಳನ್ನು ಕಾಯಲು ಅವರನ್ನು ಕಳುಹಿಸಿದೆನು. ಯಾಕೆಂದರೆ ಸಬ್ಬತ್‌ದಿನವು ಪವಿತ್ರ ದಿನವೆಂದು ಎಲ್ಲರೂ ಆಚರಿಸುವಂತೆ ಹೀಗೆ ಮಾಡಿದೆನು.

ದೇವರೇ, ನನ್ನ ಈ ಕಾರ್ಯವನ್ನು ನಿನ್ನ ನೆನಪಿನಲ್ಲಿಟ್ಟುಕೋ. ನನ್ನ ಮೇಲೆ ದಯವಿಟ್ಟು ನಿನ್ನ ಪ್ರೀತಿಯನ್ನು ತೋರಿಸು.

23 ಆ ದಿನಗಳಲ್ಲಿ ಕೆಲವು ಮಂದಿ ಯೆಹೂದ್ಯರು ಅಷ್ಡೋದ್, ಅಮ್ಮೋನ್, ಮೋವಾಬ್ ಊರುಗಳಿಂದ ಹೆಣ್ಣನ್ನು ತಂದು ಮದುವೆ ಮಾಡಿಕೊಂಡದ್ದು ನನ್ನ ನೆನಪಿಗೆ ಬಂತು. 24 ಅವರಿಗೆ ಹುಟ್ಟಿದ ಮಕ್ಕಳಲ್ಲಿ ಅರ್ಧದಷ್ಟು ಮಂದಿಗೆ ಯೆಹೂದ್ಯರ ಭಾಷೆಯ ಜ್ಞಾನವೇ ಇರಲಿಲ್ಲ. ಅವರು ಅಷ್ಡೋದ್, ಅಮ್ಮೋನ್, ಮೋವಾಬ್, ದೇಶಗಳ ಭಾಷೆಗಳನ್ನಾಡುತ್ತಿದ್ದರು. 25 “ನೀವು ತಪ್ಪು ಕೆಲಸಮಾಡಿದಿರಿ” ಎಂದು ಅವರನ್ನು ಶಪಿಸಿದೆನು. ಕೆಲವರಿಗೆ ಹೊಡೆದೆನು; ಕೆಲವರ ಕೂದಲು ಎಳೆದು ಕಿತ್ತುಬಿಟ್ಟೆನು. ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಲು ಅವರನ್ನು ಒತ್ತಾಯಪಡಿಸಿ, “ನೀವು ಆ ಜನರ ಹೆಣ್ಣುಮಕ್ಕಳನ್ನು ಮದುವೆಯಾಗಬಾರದು. ಅನ್ಯರ ಹೆಣ್ಣುಮಕ್ಕಳು ನಿಮ್ಮ ಗಂಡುಮಕ್ಕಳನ್ನು ಮದುವೆಯಾಗದಂತೆ ನೋಡಿಕೊಳ್ಳಿರಿ. 26 ಇಂಥ ಮದುವೆಗಳಿಂದಾಗಿ ಸೊಲೊಮೋನನು ಪಾಪಕ್ಕೆ ಒಳಗಾದನು ಎಂಬುದು ನಿಮಗೆ ತಿಳಿಯದೋ? ಅವನಂಥ ವೈಭವಶಾಲಿ ಅರಸನು ಯಾವ ರಾಜ್ಯದಲ್ಲಿಯೂ ಇರಲಿಲ್ಲ. ದೇವರು ಸೊಲೊಮೋನನನ್ನು ಪ್ರೀತಿಸಿದನು. ಇಡೀ ಇಸ್ರೇಲಿಗೆ ಅವನನ್ನು ಅರಸನನ್ನಾಗಿ ಮಾಡಿದನು. ಅಂಥವನೂ ಅನ್ಯಸ್ತ್ರೀಯರಿಂದಾಗಿ ಪಾಪ ಮಾಡಿದನು. 27 ಈಗ ನೀವು ಸಹ ಅನ್ಯಸ್ತ್ರೀಯರನ್ನು ಮದುವೆಯಾಗಿ ಭಯಂಕರವಾದ ಪಾಪಗಳನ್ನು ಮಾಡುತ್ತಿದ್ದೀರಿ. ನೀವು ದೇವರಿಗೆ ವಿಧೇಯರಾಗಲಿಲ್ಲ” ಎಂದು ಹೇಳಿದೆನು.

28 ಪ್ರಧಾನ ಯಾಜಕನಾದ ಎಲ್ಯಾಷೀಬನ ಮಗನಾದ ಯೋಯಾದನ ಮಕ್ಕಳಲ್ಲಿ ಒಬ್ಬನು ಹೊರೋನಿನ ಸನ್ಬಲ್ಲಟನಿಗೆ ಅಳಿಯನಾದನು. ನಾನು ಅವನನ್ನು ಆ ಸ್ಥಳದಿಂದ ಹೊರಗೆ ಓಡಿಸಿಬಿಟ್ಟೆನು.

29 ನನ್ನ ದೇವರೇ, ಆ ಮನುಷ್ಯರನ್ನು ಶಿಕ್ಷಿಸು. ಅವರು ಯಾಜಕತ್ವವನ್ನು ಹೊಲಸು ಮಾಡಿದ್ದಾರೆ. ಅದನ್ನು ಅವರು ಸಾಮಾನ್ಯವೆಂದೆಣಿಸಿದ್ದಾರೆ. ಯಾಜಕರೊಂದಿಗೆ ಮತ್ತು ಲೇವಿಯರೊಂದಿಗೆ ನೀನು ಮಾಡಿದ ಒಡಂಬಡಿಕೆಯನ್ನು ಅವರು ತಿರಸ್ಕರಿಸಿದ್ದಾರೆ. 30 ನಾನು ಯಾಜಕರನ್ನೂ ಲೇವಿಯರನ್ನೂ ಶುದ್ಧರನ್ನಾಗಿ ಮಾಡಿಕೊಳ್ಳುವಂತೆ ಆಜ್ಞಾಪಿಸಿದೆನು. ಅವರಲ್ಲಿದ್ದ ಅನ್ಯರನ್ನು, ಪರರ ಬೋಧನೆಗಳನ್ನು ನಾನು ಅವರಿಂದ ತೆಗೆದುಹಾಕಿದೆನು. ಲೇವಿಯರಿಗೂ ಯಾಜಕರಿಗೂ ಅವರವರ ಕರ್ತವ್ಯಗಳನ್ನೂ ಜವಾಬ್ದಾರಿಕೆಗಳನ್ನೂ ತಿಳಿಸಿದೆನು. 31 ಜನರು ಕಟ್ಟಿಗೆಯನ್ನೂ ಪ್ರಥಮಫಲಗಳನ್ನೂ ಸರಿಯಾದ ಸಮಯದಲ್ಲಿ ತರುವಂತೆ ನಾನು ಆಜ್ಞಾಪಿಸಿದೆನು.

ನನ್ನ ದೇವರೇ, ಈ ಒಳ್ಳೆಯ ಕಾರ್ಯಗಳನ್ನೆಲ್ಲಾ ಮಾಡಿದ ನನ್ನನ್ನು ಮರೆಯಬೇಡ.

ಅಪೊಸ್ತಲರ ಕಾರ್ಯಗಳು 23

23 ಪೌಲನು ಯೆಹೂದ್ಯರ ನ್ಯಾಯಸಭೆಯನ್ನು ದೃಷ್ಟಿಸಿ ನೋಡಿ, “ಸಹೋದರರೇ, ನಾನು ಈ ದಿನದವರೆಗೂ ಒಳ್ಳೆಯ ಮನಸ್ಸಾಕ್ಷಿಯಿಂದ ದೇವರ ಮುಂದೆ ನಡೆದುಕೊಂಡಿದ್ದೇನೆ” ಎಂದು ಹೇಳಿದನು. ಪ್ರಧಾನಯಾಜಕನಾದ ಅನನೀಯನು ಅಲ್ಲಿದ್ದನು. ಪೌಲನು ಹೇಳಿದ್ದನ್ನು ಕೇಳಿದ ಅನನೀಯನು ಪೌಲನ ಪಕ್ಕದಲ್ಲಿ ನಿಂತಿದ್ದವರಿಗೆ ಪೌಲನ ಬಾಯಿಯ ಮೇಲೆ ಹೊಡೆಯಲು ಹೇಳಿದನು. ಪೌಲನು ಅನನೀಯನಿಗೆ, “ದೇವರು ನಿನ್ನನ್ನು ಸಹ ಹೊಡೆಯುವನು! ಸುಣ್ಣ ಬಳಿದ ಗೋಡೆ ನೀನು! ಮೋಶೆಯ ಧರ್ಮಶಾಸ್ತ್ರಕ್ಕನುಸಾರವಾಗಿ ನ್ಯಾಯತೀರ್ಪು ಮಾಡಲು ಅಲ್ಲಿ ಕುಳಿತುಕೊಂಡು ನನಗೆ ಹೊಡೆಯಲು ಅವರಿಗೆ ಹೇಳುತ್ತಿರುವೆಯಾ! ಮೋಶೆಯ ಧರ್ಮಶಾಸ್ತ್ರಕ್ಕೆ ಅದು ವಿರುದ್ಧವಾದದ್ದು” ಎಂದು ಹೇಳಿದನು.

ಪೌಲನ ಸಮೀಪದಲ್ಲಿ ನಿಂತಿದ್ದ ಜನರು ಅವನಿಗೆ, “ದೇವರ ಪ್ರಧಾನಯಾಜಕನಿಗೆ ನೀನು ಈ ರೀತಿ ಮಾತಾಡಕೂಡದು! ನೀನು ಅವನಿಗೆ ಅವಮಾನ ಮಾಡುತ್ತಿರುವೆ!” ಎಂದು ಹೇಳಿದರು.

ಪೌಲನು, “ಸಹೋದರರೇ, ಈ ಮನುಷ್ಯನು ಪ್ರಧಾನಯಾಜಕನೆಂದು ನನಗೆ ಗೊತ್ತಿರಲ್ಲಿಲ್ಲ. ‘ನಿಮ್ಮ ಜನನಾಯಕರ ಬಗ್ಗೆ ಕೆಟ್ಟಮಾತುಗಳುನ್ನು ಆಡಬಾರದು’(A) ಎಂದು ಧರ್ಮಶಾಸ್ತ್ರದಲ್ಲಿ ಬರೆದಿದೆ” ಎಂದು ಹೇಳಿದನು.

ಸಭೆಯಲ್ಲಿದ್ದ ಜನರಲ್ಲಿ ಕೆಲವರು ಸದ್ದುಕಾಯರಾಗಿದ್ದರು; ಮತ್ತೆ ಕೆಲವರು ಫರಿಸಾಯರಾಗಿದ್ದರು. ಆದ್ದರಿಂದ ಪೌಲನು, “ನನ್ನ ಸಹೋದರರೇ, ನಾನು ಫರಿಸಾಯನು! ನನ್ನ ತಂದೆಯೂ ಫರಿಸಾಯನಾಗಿದ್ದನು! ಸತ್ತವರು ಪುನರುತ್ಥಾನ ಹೊಂದುತ್ತಾರೆಂದು ನಾನು ನಂಬುವುದರಿಂದ ಇಲ್ಲಿ ನ್ಯಾಯವಿಚಾರಣೆಗೆ ಗುರಿಯಾಗಿದ್ದೇನೆ!” ಎಂದು ಕೂಗಿ ಹೇಳಿದನು.

ಪೌಲನು ಹೀಗೆ ಹೇಳಿದಾಗ, ಫರಿಸಾಯರಿಗೂ ಸದ್ದುಕಾಯರಿಗೂ ದೊಡ್ಡ ವಾಗ್ವಾದವಾಯಿತು. ಸಭೆಯಲ್ಲಿ ಭೇದ ಉಂಟಾಯಿತು. (ಸತ್ತವರಿಗೆ ಪುನರುತ್ಥಾನವಿಲ್ಲ; ದೇವದೂತರುಗಳಾಗಲಿ ಆತ್ಮಗಳಾಗಲಿ ಇಲ್ಲವೇ ಇಲ್ಲ ಎಂಬುದು ಸದ್ದುಕಾಯರ ನಂಬಿಕೆ. ಫರಿಸಾಯರ ನಂಬಿಕೆ ಇದಕ್ಕೆ ತದ್ವಿರುದ್ಧವಾಗಿದೆ.) ಈ ಯೆಹೂದ್ಯರೆಲ್ಲರೂ ಹೆಚ್ಚುಹೆಚ್ಚು ಗಟ್ಟಿಯಾಗಿ ಆರ್ಭಟಿಸಿತೊಡಗಿದರು. ಫರಿಸಾಯರ ಗುಂಪಿಗೆ ಸೇರಿದ್ದ ಕೆಲವು ಮಂದಿ ಧರ್ಮೋಪದೇಶಕರು ಎದ್ದುನಿಂತುಕೊಂಡು, “ಈ ಮನುಷ್ಯನಲ್ಲಿ ನಮಗೇನೂ ತಪ್ಪು ಕಂಡುಬರುತ್ತಿಲ್ಲ! ದಮಸ್ಕಕ್ಕೆ ಹೋಗುವ ದಾರಿಯಲ್ಲಿ ದೇವದೂತನಾಗಲಿ ಆತ್ಮವಾಗಲಿ ಅವನೊಂದಿಗೆ ಮಾತಾಡಿದ್ದಿರಬೇಕು!” ಎಂದು ವಾದಿಸಿದರು.

10 ಈ ವಾಗ್ವಾದವು ಜಗಳವಾಯಿತು. ಯೆಹೂದ್ಯರು ಪೌಲನನ್ನು ತುಂಡುತುಂಡು ಮಾಡುವರೆಂಬ ಭಯದಿಂದ ಸೇನಾಧಿಪತಿಯು ಸಿಪಾಯಿಗಳಿಗೆ, “ಕೆಳಗೆ ಇಳಿದುಹೋಗಿ ಪೌಲನನ್ನು ಯೆಹೂದ್ಯರ ಬಳಿಯಿಂದ ಕೊಂಡೊಯ್ದು ಸೈನ್ಯದ ಕೋಟೆಯೊಳಗೆ ಇರಿಸಿರಿ” ಎಂದು ಆಜ್ಞಾಪಿಸಿದನು.

11 ಮರುದಿನ ರಾತ್ರಿ ಪ್ರಭು ಯೇಸುವು ಬಂದು ಪೌಲನ ಬಳಿ ನಿಂತುಕೊಂಡು, “ಧೈರ್ಯದಿಂದಿರು! ನೀನು ನನ್ನ ಬಗ್ಗೆ ಜೆರುಸಲೇಮಿನ ಜನರಿಗೆ ತಿಳಿಸಿರುವೆ. ನೀನು ರೋಮಿಗೂ ಹೋಗಿ ಅಲ್ಲಿರುವ ಜನರಿಗೆ ನನ್ನ ಬಗ್ಗೆ ತಿಳಿಸಬೇಕು!” ಎಂದು ಹೇಳಿದನು.

ಪೌಲನನ್ನು ಕೊಲ್ಲಲು ಕೆಲವು ಯೆಹೂದ್ಯರ ಸಂಚು

12 ಮರುದಿನ ಮುಂಜಾನೆ ಯೆಹೂದ್ಯರಲ್ಲಿ ಕೆಲವರು, ತಾವು ಪೌಲನನ್ನು ಕೊಲ್ಲದ ಹೊರತು ಏನನ್ನೂ ತಿನ್ನುವುದಿಲ್ಲ ಮತ್ತು ಏನನ್ನೂ ಕುಡಿಯುವುದಿಲ್ಲ ಎಂಬುದಾಗಿ ಹರಕೆ ಮಾಡಿಕೊಂಡರು. 13 ಹೀಗೆ ಸುಮಾರು ನಲವತ್ತಕ್ಕಿಂತಲೂ ಹೆಚ್ಚು ಮಂದಿ ಹರಕೆ ಮಾಡಿಕೊಂಡಿದ್ದರು. 14 ಈ ಯೆಹೂದ್ಯರು ಮಹಾಯಾಜಕರ ಮತ್ತು ಯೆಹೂದ್ಯರ ಹಿರಿಯ ನಾಯಕರ ಬಳಿಗೆ ಹೋಗಿ, “ನಾವು ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂಬ ಕಠಿಣವಾದ ಹರಕೆ ಮಾಡಿಕೊಂಡಿದ್ದೇವೆ! 15 ಆದ್ದರಿಂದ ಈಗ ನೀವು ಮಾಡಬೇಕಾದದ್ದೇನೆಂದರೆ, ಸೇನಾಧಿಪತಿಗೂ ಎಲ್ಲಾ ಯೆಹೂದ್ಯ ನಾಯಕರಿಗೂ ಒಂದು ಸಂದೇಶವನ್ನು ಕಳುಹಿಸಿಕೊಡಿರಿ. ಪೌಲನಿಗೆ ಇನ್ನೂ ಹೆಚ್ಚು ಪ್ರಶ್ನೆಗಳನ್ನು ಕೇಳಬೇಕಾಗಿರುವುದರಿಂದ ಪೌಲನನ್ನು ನಮ್ಮ ಬಳಿಗೆ ಕರೆದುಕೊಂಡು ಬರಬೇಕೆಂದು ಸೇನಾಧಿಪತಿಗೆ ತಿಳಿಸಿರಿ. ಪೌಲನು ಇಲ್ಲಿಗೆ ಬರುತ್ತಿರುವಾಗಲೇ ನಾವು ಮಾರ್ಗದಲ್ಲಿ ಕಾದುಕೊಂಡಿದ್ದು ಅವನನ್ನು ಕೊಲ್ಲುತ್ತೇವೆ” ಎಂದು ಹೇಳಿದರು.

16 ಆದರೆ ಈ ಯೋಜನೆಯ ಬಗ್ಗೆ ಪೌಲನ ಸೋದರಳಿಯನಿಗೆ ತಿಳಿಯಿತು. ಅವನು ಸೈನ್ಯದ ಕೋಟೆಯೊಳಗೆ ಹೋಗಿ ಈ ಯೋಜನೆಯ ಬಗ್ಗೆ ಪೌಲನಿಗೆ ತಿಳಿಸಿದನು. 17 ಆಗ ಪೌಲನು ಸೇನಾಧಿಕಾರಿಗಳಲ್ಲಿ ಒಬ್ಬನನ್ನು ಕರೆದು, “ಈ ಯೌವನಸ್ಥನನ್ನು ಸೇನಾಧಿಪತಿಯ ಬಳಿಗೆ ಕರೆದುಕೊಂಡು ಹೋಗು. ಇವನು ಒಂದು ಸಂದೇಶವನ್ನು ಅವನಿಗೆ ತಿಳಿಸಬೇಕಾಗಿದೆ” ಎಂದು ಹೇಳಿದನು. 18 ಆದ್ದರಿಂದ ಸೇನಾಧಿಕಾರಿಯು ಪೌಲನ ಸೋದರಳಿಯನನ್ನು ಸೇನಾಧಿಪತಿಯ ಬಳಿಗೆ ಕರೆದುಕೊಂಡು ಹೋದನು. ಆ ಅಧಿಕಾರಿಯು ಸೇನಾಧಿಪತಿಗೆ, “ಈ ಯೌವನಸ್ಥನನ್ನು ನಿನ್ನ ಬಳಿಗೆ ಕರೆದುಕೊಂಡು ಹೋಗಬೇಕೆಂದು ಸೆರೆವಾಸದಲ್ಲಿರುವ ಪೌಲನು ನನ್ನನ್ನು ಕೇಳಿಕೊಂಡನು ಇವನು ನಿನಗೊಂದು ಸಂದೇಶವನ್ನು ತಿಳಿಸಬೇಕೆಂದಿದ್ದಾನೆ” ಎಂದು ಹೇಳಿದನು.

19 ಸೇನಾಧಿಪತಿಯು ಆ ಯೌವನಸ್ಥನನ್ನು ಕೈಹಿಡಿದು ಏಕಾಂತವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ, “ನೀನು ಏನು ತಿಳಿಸಬೇಕೆಂದಿರುವೆ?” ಎಂದು ಕೇಳಿದನು.

20 ಆ ಯೌವನಸ್ಥನು, “ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಪೌಲನಿಗೆ ಕೇಳಬೇಕೆಂಬ ನೆವವನ್ನು ಹೇಳಿ ನಾಳೆಯ ಆಲೋಚನಾಸಭೆಗೆ ಪೌಲನನ್ನು ಕರೆದುಕೊಂಡುಬರಬೇಕೆಂದು ಯೆಹೂದ್ಯರು ನಿನ್ನನ್ನು ಕೇಳಿಕೊಳ್ಳಲು ನಿರ್ಧರಿಸಿದ್ದಾರೆ. 21 ಆದರೆ ಅವರನ್ನು ನಂಬಬೇಡ! ಪೌಲನನ್ನು ಕೊಲ್ಲುವುದಕ್ಕಾಗಿ ನಲವತ್ತಕ್ಕಿಂತಲೂ ಹೆಚ್ಚು ಮಂದಿ ಯೆಹೂದ್ಯರು ಅಡಗಿಕೊಂಡು ಕಾಯುತ್ತಿದ್ದಾರೆ. ಪೌಲನನ್ನು ಕೊಲ್ಲುವ ತನಕ ತಿನ್ನುವುದೂ ಇಲ್ಲ ಕುಡಿಯುವುದೂ ಇಲ್ಲ ಎಂದು ಅವರೆಲ್ಲರೂ ಹರಕೆ ಮಾಡಿಕೊಂಡಿದ್ದಾರೆ! ಈಗ ಅವರು ನಿನ್ನ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ” ಎಂದು ಹೇಳಿದನು.

22 ಸೇನಾಧಿಪತಿಯು ಯೌವನಸ್ಥನಿಗೆ, “ಅವರ ಯೋಜನೆಯ ಬಗ್ಗೆ ನೀನು ನನಗೆ ಹೇಳಿರುವುದಾಗಿ ಯಾರಿಗೂ ತಿಳಿಸಬೇಡ” ಎಂದು ಹೇಳಿ ಅವನನ್ನು ಕಳುಹಿಸಿಬಿಟ್ಟನು.

ಪೌಲನನ್ನು ಸೆಜರೇಯಕ್ಕೆ ಕಳುಹಿಸಲಾಯಿತು

23 ಬಳಿಕ ಸೇನಾಧಿಪತಿಯು ಇಬ್ಬರು ಸೇನಾಧಿಕಾರಿಗಳನ್ನು ಕರೆದು ಅವರಿಗೆ, “ಸೆಜರೇಯಕ್ಕೆ ಕಳುಹಿಸಿಕೊಡಲು ಇನ್ನೂರು ಮಂದಿ ಸೈನಿಕರನ್ನು ಸಿದ್ಧಪಡಿಸು. ಅಲ್ಲದೆ ಎಪ್ಪತ್ತು ಮಂದಿಯ ಅಶ್ವದಳವನ್ನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಪಡಿಸು. ಈ ರಾತ್ರಿ ಒಂಭತ್ತು ಗಂಟೆಗೆ ಇಲ್ಲಿಂದ ಹೊರಡಲು ನೀವು ಸಿದ್ಧರಾಗಿರಬೇಕು. 24 ಪೌಲನ ಪ್ರಯಾಣಕ್ಕಾಗಿ ಕೆಲವು ಕುದುರೆಗಳನ್ನು ತೆಗೆದುಕೊ. ರಾಜ್ಯಪಾಲನಾದ ಫೇಲಿಕ್ಸನ ಬಳಿಗೆ ಅವನನ್ನು ಸುರಕ್ಷಿತವಾಗಿ ಕೊಂಡೊಯ್ಯಲೇಬೇಕು” ಎಂದು ಹೇಳಿದನು. 25 ಸೇನಾಧಿಪತಿಯು ಒಂದು ಪತ್ರವನ್ನೂ ಬರೆದನು. ಅದರಲ್ಲಿ ಹೀಗೆ ತಿಳಿಸಲಾಗಿತ್ತು:

26 ಕ್ಲಾಡಿಯ ಲೂಸಿಯನಿಂದ ಮಹಾರಾಜಶ್ರೀಗಳಾದ ರಾಜ್ಯಪಾಲ ಫೇಲಿಕ್ಸನಿಗೆ,

ವಂದನೆಗಳು.

27 ಯೆಹೂದ್ಯರು ಈ ಮನುಷ್ಯನನ್ನು ಹಿಡಿದು ಕೊಲ್ಲುವುದರಲ್ಲಿದ್ದರು. ಆದರೆ ಇವನು ರೋಮ್‌ನ ಪ್ರಜೆಯೆಂಬುದು ನನಗೆ ತಿಳಿಯಿತು. ಆದ್ದರಿಂದ ನಾನು ಸೈನಿಕರೊಂದಿಗೆ ಹೋಗಿ ಇವನನ್ನು ಕಾಪಾಡಿದೆನು. 28 ಅವರು ಇವನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆ ಕಾರಣವನ್ನು ತಿಳಿದುಕೊಳ್ಳಲು ನಾನು ನ್ಯಾಯಸಭೆಯ ಮುಂದೆ ನಿಲ್ಲಿಸಿದೆ. 29 ಅಲ್ಲಿ ನನಗೆ ತಿಳಿದುಬಂದದ್ದೇನೆಂದರೆ, ಪೌಲನು ದುಷ್ಕೃತ್ಯಗಳನ್ನು ಮಾಡಿದ್ದಾನೆಂದು ಯೆಹೂದ್ಯರು ಹೇಳಿದರೂ ಅವರ ಆಪಾದನೆಗಳು ಅವರ ಸ್ವಂತ ಯೆಹೂದ್ಯ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟದ್ದಾಗಿದ್ದವು. ಅಲ್ಲದೆ ಇವನನ್ನು ಸೆರೆಮನೆಗಾಗಲಿ ಮರಣದಂಡನೆಗಾಗಲಿ ಗುರಿಪಡಿಸಬಹುದಾದ ಯಾವ ಅಪರಾಧವೂ ಇರಲಿಲ್ಲ. 30 ಆದರೆ ಯೆಹೂದ್ಯರಲ್ಲಿ ಕೆಲವರು ಪೌಲನನ್ನು ಕೊಲ್ಲಲು ಯೋಜನೆ ಮಾಡುತ್ತಿರುವುದು ನನಗೆ ತಿಳಿಯಿತು. ಆದ್ದರಿಂದ ನಾನು ಅವನನ್ನು ನಿನ್ನ ಬಳಿಗೆ ಕಳುಹಿಸಿದ್ದೇನೆ. ಅಲ್ಲದೆ ಅವನ ಮೇಲಿರುವ ದೂರುಗಳನ್ನು ನಿನಗೆ ತಿಳಿಸಬೇಕೆಂದು ನಾನು ಆಪಾದಕರಿಗೂ ಸಹ ತಿಳಿಸಿದ್ದೇನೆ.

31 ಸೇನಾಧಿಪತಿಯ ಆಜ್ಞೆಗನುಸಾರವಾಗಿ ಸೈನಿಕರು ಕಾರ್ಯವೆಸಗಿದರು. ಆ ರಾತ್ರಿ ಸೈನಿಕರು ಪೌಲನನ್ನು ಅಂತಿಪತ್ರಿಯ ಎಂಬ ಪಟ್ಟಣಕ್ಕೆ ಕರೆದುಕೊಂಡು ಹೋದರು. 32 ಮರುದಿನ ಅಶ್ವದಳದವರು ಪೌಲನೊಂದಿಗೆ ಸೆಜರೇಯ ಪಟ್ಟಣಕ್ಕೆ ಹೋದರು. ಆದರೆ ಉಳಿದ ಸೈನಿಕರು ಮತ್ತು ಭರ್ಜಿದಾರರು ಜೆರುಸಲೇಮಿನ ಸೈನ್ಯದ ಕೋಟೆಗೆ ಹಿಂತಿರುಗಿದರು. 33 ಅಶ್ವದಳದವರು ಸೆಜರೇಯ ಪಟ್ಟಣವನ್ನು ಪ್ರವೇಶಿಸಿ, ರಾಜ್ಯಪಾಲನಾದ ಫೇಲಿಕ್ಸನಿಗೆ ಪತ್ರವನ್ನು ಕೊಟ್ಟರು. ಬಳಿಕ ಅವರು ಪೌಲನನ್ನು ಅವನಿಗೆ ಒಪ್ಪಿಸಿದರು.

34 ರಾಜ್ಯಪಾಲನು ಪತ್ರವನ್ನು ಓದಿದನು. ಬಳಿಕ ಅವನು ಪೌಲನಿಗೆ, “ನೀನು ಯಾವ ದೇಶದವನು?” ಎಂದು ಕೇಳಿದಾಗ, ಸಿಲಿಸಿಯದವನೆಂಬುದು ತಿಳಿಯಿತು. 35 ರಾಜ್ಯಪಾಲನು, “ನಿನಗೆ ವಿರೋಧವಾಗಿರುವ ಯೆಹೂದ್ಯರು ಇಲ್ಲಿಗೆ ಬಂದಾಗ, ನಾನು ನಿನ್ನ ವಿಚಾರಣೆ ಮಾಡುತ್ತೇನೆ” ಎಂದು ಹೇಳಿದನು. ಬಳಿಕ ರಾಜ್ಯಪಾಲನು ಪೌಲನನ್ನು ಅರಮನೆಯೊಳಗೆ ಇರಿಸಬೇಕೆಂದು ಆಜ್ಞಾಪಿಸಿದನು. (ಈ ಕಟ್ಟಡವನ್ನು ಹೆರೋದನು ಕಟ್ಟಿಸಿದ್ದನು.)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International