M’Cheyne Bible Reading Plan
5 ಯೆಹೋವದೇವರ ಆಲಯಕ್ಕೆ ಸೊಲೊಮೋನನು ಮಾಡಬೇಕಾಗಿದ್ದ ಕೆಲಸವೆಲ್ಲವೂ ಮುಗಿಯಿತು. ದಾವೀದನು ದೇವಾಲಯಕ್ಕಾಗಿ ಕೊಟ್ಟಿದ್ದ ವಸ್ತುಗಳನ್ನೆಲ್ಲಾ ಸೊಲೊಮೋನನು ತಂದಿರಿಸಿದನು; ಬೆಳ್ಳಿಬಂಗಾರಗಳಿಂದ ಮಾಡಿದ ಸಾಮಾನುಗಳನ್ನು ಸೊಲೊಮೋನನು ದೇವಾಲಯದ ಭಂಡಾರದ ಕೋಣೆಗಳಲ್ಲಿ ಇಡಿಸಿದನು.
ದೇವಾಲಯಕ್ಕೆ ಪವಿತ್ರ ಪೆಟ್ಟಿಗೆಯ ಆಗಮನ
2 ದಾವೀದನಗರದಲ್ಲಿದ್ದ ಅಂದರೆ ಚೀಯೋನಿನಲ್ಲಿದ್ದ ಒಡಂಬಡಿಕೆಯ ಪೆಟ್ಟಿಗೆಯನ್ನು ತರುವದಕ್ಕಾಗಿ ಸೊಲೊಮೋನನು ಇಸ್ರೇಲರ ಎಲ್ಲಾ ಹಿರಿಯರನ್ನು ಮತ್ತು ಕುಲಾಧಿಪತಿಗಳನ್ನು ಜೆರುಸಲೇಮಿಗೆ ಒಟ್ಟಾಗಿ ಕರೆಸಿದನು. 3 ಪರ್ಣಶಾಲೆಗಳ ಹಬ್ಬದ ದಿವಸ ಇಸ್ರೇಲರೆಲ್ಲರೂ ಅರಸನಾದ ಸೊಲೊಮೋನನ ಮುಂದೆ ಸೇರಿಬಂದರು. ಈ ಹಬ್ಬವು ವರ್ಷದ ಏಳನೆಯ ತಿಂಗಳಲ್ಲಿ ನಡೆಯಿತು.
4 ಇಸ್ರೇಲಿನ ಹಿರಿಯರೆಲ್ಲರೂ ಒಟ್ಟಾಗಿ ಸೇರಿಬಂದಾಗ ಲೇವಿಯರು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಜೆರುಸಲೇಮಿಗೆ ತಂದರು. 5 ಯಾಜಕರೂ ಲೇವಿಯರೂ ದೇವದರ್ಶನದ ಗುಡಾರವನ್ನು, ಅದರ ಪವಿತ್ರ ವಸ್ತುಗಳನ್ನು ಹೊತ್ತು ಜೆರುಸಲೇಮಿಗೆ ತಂದರು. 6 ಸೊಲೊಮೋನನು ಮತ್ತು ಇಸ್ರೇಲರೆಲ್ಲರೂ ಆ ಒಡಂಬಡಿಕೆಯ ಪೆಟ್ಟಿಗೆಯ ಮುಂದೆ ನೆರೆದು ಬಂದರು. ಸೊಲೊಮೋನನು ಮತ್ತು ಎಲ್ಲಾ ಇಸ್ರೇಲರೂ ಲೆಕ್ಕವಿಲ್ಲದಷ್ಟು ಕುರಿಗಳನ್ನೂ ಹೋರಿಗಳನ್ನೂ ಯಜ್ಞ ಮಾಡಿದರು. 7 ಆಮೇಲೆ ಯಾಜಕರು ಒಡಂಬಡಿಕೆಯ ಪೆಟ್ಟಿಗೆಯನ್ನು ಅದಕ್ಕಾಗಿ ಮಾಡಿದ್ದ ಮಹಾಪರಿಶುದ್ಧ ಸ್ಥಳದ ಕೆರೂಬಿಗಳ ರೆಕ್ಕೆಗಳ ಕೆಳಗೆ ಇಟ್ಟರು. 8 ಕೆರೂಬಿಗಳ ರೆಕ್ಕೆಗಳು ಒಡಂಬಡಿಕೆಯ ಪೆಟ್ಟಿಗೆಯ ಮೇಲೆ ಚಾಚಿಕೊಂಡಿದ್ದವು. ಕೆರೂಬಿಗಳು ಆ ಪೆಟ್ಟಿಗೆಯ ಮೇಲೆಯೂ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಉಪಯೋಗಿಸುತ್ತಿದ್ದ ಕಂಬಗಳ ಮೇಲೆಯೂ ನಿಂತುಕೊಂಡಿದ್ದವು. 9 ಆ ಪೆಟ್ಟಿಗೆಯನ್ನು ಹೊರಲು ಜೋಡಿಸಿದ್ದ ಕೋಲುಗಳು ಉದ್ದವಾಗಿದ್ದ ಕಾರಣ ಅದರ ಕೊನೆಗಳು ಮಹಾಪರಿಶುದ್ಧ ಸ್ಥಳದ ಮುಂಭಾಗದಲ್ಲಿ ಕಾಣುತ್ತಿದ್ದವು. ಆದರೆ ದೇವಾಲಯದ ಹೊರಗಿನಿಂದ ಆ ಕೋಲುಗಳು ಯಾರಿಗೂ ಕಾಣುತ್ತಿರಲಿಲ್ಲ. ಇಂದಿಗೂ ಆ ಕೋಲುಗಳು ಅಲ್ಲಿಯೇ ಅವೆ. 10 ಒಡಂಬಡಿಕೆಯ ಪೆಟ್ಟಿಗೆಯೊಳಗೆ ಎರಡು ಕಲ್ಲಿನ ಹಲಗೆಗಳು ಮಾತ್ರ ಇದ್ದವು. ಹೋರೇಬ್ ಬೆಟ್ಟದಲ್ಲಿ ಮೋಶೆಯು ಈ ಕಲ್ಲಿನ ಹಲಗೆಗಳನ್ನು ಪೆಟ್ಟಿಗೆಯೊಳಗಿಟ್ಟನು. ಆ ಬೆಟ್ಟದಲ್ಲಿ ಯೆಹೋವನು ಈಜಿಪ್ಟಿನಿಂದ ಬಿಡುಗಡೆ ಹೊಂದಿದ ಇಸ್ರೇಲರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು.
11 ಅಲ್ಲಿ ನೆರೆದುಬಂದಿದ್ದ ಯಾಜಕರೆಲ್ಲರೂ ಯಾವ ವರ್ಗವ್ಯತ್ಯಾಸವಿಲ್ಲದೆ ಆಚಾರಕ್ಕನುಸಾರವಾಗಿ ತಮ್ಮನ್ನು ಶುದ್ಧೀಕರಿಸಿಕೊಂಡರು. ಬಳಿಕ ಅವರು ಪವಿತ್ರ ಸ್ಥಳದಿಂದ ಹೊರಬಂದು ಒಟ್ಟಾಗಿ ನಿಂತುಕೊಂಡರು. 12 ಯಜ್ಞವೇದಿಕೆಯ ಪೂರ್ವ ಭಾಗದಲ್ಲಿ ಲೇವಿಯರ ಗಾಯಕರು ನಿಂತರು. ಆಸಾಫನ, ಹೇಮಾನನ ಮತ್ತು ಯೆದುತೂನನ ಗಾಯಕ ವೃಂದದವರೆಲ್ಲರೂ ಅಲ್ಲಿ ಇದ್ದರು. ಅವರ ಗಂಡುಮಕ್ಕಳೂ ಕುಟುಂಬದವರೂ ಅಲ್ಲಿದ್ದರು. ಗಾಯಕರೆಲ್ಲರೂ ಬಿಳೀ ನಾರುಮಡಿಯ ಬಟ್ಟೆಗಳನ್ನು ಉಟ್ಟಿದ್ದರು. ತಾಳ, ತಂತಿವಾದ್ಯಗಳನ್ನು ಹಿಡಿದುಕೊಂಡಿದ್ದರು. ಗಾಯಕರೊಂದಿಗೆ ನೂರಿಪ್ಪತ್ತು ಮಂದಿ ಯಾಜಕರು ತುತ್ತೂರಿಯನ್ನೂದಿದರು. 13 ಗಾಯಕರ ಸ್ವರವೂ ತುತ್ತೂರಿಗಳ ಶಬ್ದವೂ ಒಬ್ಬನದೆಯೋ ಎಂಬಂತೆ ತೋರಿಬಂತು. ಅವರು ದೇವರನ್ನು ಸ್ತುತಿಸಿ ಕೊಂಡಾಡಿದಾಗ ಒಂದೇ ಶಬ್ದವು ಹೊರಟಿತ್ತು. ಅವರು ತಮ್ಮ ತಾಳ, ತಂತಿವಾದ್ಯಗಳನ್ನು ಗಟ್ಟಿಯಾಗಿ ಬಾರಿಸಿದರು.
“ಯೆಹೋವನಿಗೆ ಸ್ತೋತ್ರವಾಗಲಿ; ಆತನು ಒಳ್ಳೆಯವನು;
ಆತನ ಪ್ರೀತಿಯು ಶಾಶ್ವತವಾದದ್ದು”
ಎಂದು ಗಾಯಕರು ಹಾಡಿದರು.
ಆಗ ದೇವಾಲಯವು ಯೆಹೋವನ ತೇಜಸ್ಸಿನಿಂದ ಕೂಡಿದ ಮೋಡದಿಂದ ತುಂಬಿಹೋಯಿತು. 14 ಆಗ ಯಾಜಕರು ನಿಂತುಕೊಂಡು ಸೇವೆಯನ್ನು ಮಾಡಲಾಗಲಿಲ್ಲ. ಯಾಕೆಂದರೆ ದೇವರ ಮಹಿಮೆಯು ದೇವಾಲಯವನ್ನು ತುಂಬಿಕೊಂಡಿತ್ತು.
6 ಆಗ ಸೊಲೊಮೋನನು, “ಯೆಹೋವನೇ, ಕಾರ್ಗತ್ತಲಿನಲ್ಲಿ ವಾಸಿಸುತ್ತೇನೆ ಎಂದು ಹೇಳಿರುವೆಯಲ್ಲಾ! 2 ನಾನು ನಿನಗೋಸ್ಕರ ಆಲಯವನ್ನು ಕಟ್ಟಿಸಿದ್ದೇನೆ. ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಲಿ” ಎಂದು ಪ್ರಾರ್ಥಿಸಿದನು.
ಸೊಲೊಮೋನನ ಭಾಷಣ
3 ಸೊಲೊಮೋನನು ತನ್ನ ಮುಂದೆ ನೆರೆದಿದ್ದ ಎಲ್ಲಾ ಇಸ್ರೇಲ್ ಸಮೂಹದವರ ಕಡೆಗೆ ತಿರುಗಿ ಅವರನ್ನು ಆಶೀರ್ವದಿಸಿ,
4 “ಇಸ್ರೇಲಿನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ನನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಿದ್ದಾನೆ. ಆತನು ದಾವೀದನಿಗೆ, 5 ‘ಈಜಿಪ್ಟಿನಿಂದ ನನ್ನ ಜನರನ್ನು ಬಿಡಿಸಿ ಹೊರ ತಂದಂದಿನಿಂದ ನನ್ನ ಆಲಯಕೋಸ್ಕರ ಇಸ್ರೇಲರ ಕುಲಗಳ ಯಾವ ಪಟ್ಟಣವನ್ನೂ ನಾನು ಆರಿಸಿಕೊಳ್ಳಲಿಲ್ಲ. ಇಸ್ರೇಲರನ್ನು ನಡಿಸುವುದಕ್ಕಾಗಿ ಒಬ್ಬ ನಾಯಕನನ್ನೂ ನಾನು ಆರಿಸಿಕೊಳ್ಳಲಿಲ್ಲ. 6 ಆದರೆ ಈಗ ನಾನು ನನ್ನ ಹೆಸರನ್ನು ಸ್ಥಾಪಿಸಲು ಜೆರುಸಲೇಮನ್ನು ಆರಿಸಿಕೊಂಡಿದ್ದೇನೆ; ದಾವೀದನನ್ನು ನನ್ನ ಜನರ ನಾಯಕನನ್ನಾಗಿ ಆರಿಸಿಕೊಂಡಿದ್ದೇನೆ’ ಎಂದು ಹೇಳಿದನು.
7 “ಇಸ್ರೇಲರ ದೇವರಾದ ಯೆಹೋವನಿಗೆ ಆಲಯವನ್ನು ಕಟ್ಟಲು ನನ್ನ ತಂದೆಯಾದ ದಾವೀದನಿಗೆ ಮನಸ್ಸಿತ್ತು. 8 ಆದರೆ ದೇವರು ನನ್ನ ತಂದೆಗೆ, ‘ದಾವೀದನೇ, ನೀನು ನನಗಾಗಿ ಒಂದು ಆಲಯವನ್ನು ಕಟ್ಟಲು ಮನಸ್ಸು ಮಾಡಿರುವದು ಒಳ್ಳೆಯದೇ ಸರಿ! 9 ಆದರೆ ನೀನು ಆಲಯವನ್ನು ಕಟ್ಟಬಾರದು. ನಿನ್ನ ಸ್ವಂತ ಮಗನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟುವನು’ ಎಂದು ಹೇಳಿದನು. 10 ಯೆಹೋವನು ತಾನು ಕೊಟ್ಟ ಮಾತನ್ನು ಈಗ ನೆರವೇರಿಸಿದನು. ನಾನು ನನ್ನ ತಂದೆಯ ಸ್ಥಾನದಲ್ಲಿ ಅರಸನಾಗಿದ್ದೇನೆ. ದಾವೀದನು ನನ್ನ ತಂದೆ. ಈಗ ನಾನು ಇಸ್ರೇಲರ ರಾಜನು. ಇದು ದೇವರ ವಾಗ್ದಾನಕ್ಕನುಸಾರವಾಗಿದೆ. ನಾನು ಇಸ್ರೇಲರ ದೇವರಾದ ಯೆಹೋವನ ನಾಮಕ್ಕಾಗಿ ದೇವಾಲಯವನ್ನು ಕಟ್ಟಿರುತ್ತೇನೆ. 11 ಇದಲ್ಲದೆ ನಿಬಂಧನ ಶಾಸನವಿರುವ ದೇವರ ಒಡಂಬಡಿಕೆಯ ಪೆಟ್ಟಿಗೆಯನ್ನು ದೇವಾಲಯದೊಳಗೆ ಇಟ್ಟಿರುತ್ತೇನೆ” ಎಂದು ಹೇಳಿದನು.
ಸುಳ್ಳುಬೋಧಕರ ವಿರುದ್ಧ ಯೋಹಾನನ ಎಚ್ಚರಿಕೆ
4 ನನ್ನ ಪ್ರಿಯ ಸ್ನೇಹಿತರೇ, ಈಗ ಲೋಕದಲ್ಲಿ ಅನೇಕ ಸುಳ್ಳುಪ್ರವಾದಿಗಳಿದ್ದಾರೆ. ಆದ್ದರಿಂದ ಪ್ರತಿಯೊಂದು ಆತ್ಮವನ್ನು ನಂಬಬೇಡಿ. ಆದರೆ ಆ ಆತ್ಮಗಳು ದೇವರಿಂದ ಬಂದವುಗಳೇ ಎಂಬುದನ್ನು ಪರೀಕ್ಷಿಸಿ ತಿಳಿದುಕೊಳ್ಳಿರಿ. 2 ದೇವರಾತ್ಮವನ್ನು ನೀವು ಇದೇ ರೀತಿ ತಿಳಿದುಕೊಳ್ಳಲು ಸಾಧ್ಯ. “ಈ ಲೋಕಕ್ಕೆ ಮನುಷ್ಯನಾಗಿ ಬಂದ ಯೇಸುವೇ ಕ್ರಿಸ್ತನೆಂದು ನಾನು ನಂಬುತ್ತೇನೆ” ಎಂದು ಹೇಳುವ ಆತ್ಮವು ದೇವರಿಂದ ಬಂದದ್ದಾಗಿದೆ. 3 ಯೇಸುವಿನ ಬಗ್ಗೆ ಹೀಗೆ ಹೇಳದ ಆತ್ಮವು ದೇವರಿಂದ ಬಂದದ್ದಲ್ಲ. ಅದು ಕ್ರಿಸ್ತವಿರೋಧಿಯ ಆತ್ಮ. ಕ್ರಿಸ್ತವಿರೋಧಿಯು ಬರುತ್ತಾನೆ ಎಂಬುದನ್ನು ನೀವು ಕೇಳಿರುವಿರಿ. ಕ್ರಿಸ್ತವಿರೋಧಿಯು ಈಗಾಗಲೇ ಈ ಲೋಕದಲ್ಲಿದ್ದಾನೆ.
4 ನನ್ನ ಪ್ರಿಯ ಮಕ್ಕಳೇ, ನೀವು ದೇವರಿಗೆ ಸೇರಿದವರು. ಆದ್ದರಿಂದ ನೀವು ಅವರನ್ನು (ಸುಳ್ಳುಬೋಧಕರು) ಸೋಲಿಸಿದ್ದೀರಿ. ಏಕೆಂದರೆ ನಿಮ್ಮಲ್ಲಿರುವಾತನು (ದೇವರು) ಈ ಲೋಕದ ಜನರಲ್ಲಿರುವವನಿಗಿಂತ (ಸೈತಾನ) ದೊಡ್ಡವನಾಗಿದ್ದಾನೆ. 5 ಆ ಜನರು (ಸುಳ್ಳುಬೋಧಕರು) ಈ ಲೋಕಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಅವರು ಹೇಳುವುದೆಲ್ಲವೂ ಈ ಲೋಕಕ್ಕೆ ಸೇರಿವೆ. ಅವರು ಏನೇ ಹೇಳಿದರೂ ಲೋಕವು ಕೇಳುತ್ತದೆ. 6 ನಾವಾದರೋ ದೇವರಿಂದ ಬಂದವರು. ಆದ್ದರಿಂದ ದೇವರನ್ನು ಬಲ್ಲ ಜನರು ನಮಗೆ ಕಿವಿಗೊಡುತ್ತಾರೆ, ಆದರೆ ದೇವರಿಂದ ಬಂದಿಲ್ಲದ ಜನರು ನಮ್ಮ ಮಾತುಗಳನ್ನು ಕೇಳುವುದಿಲ್ಲ. ಯಾವುದು ಸತ್ಯವನ್ನು ಬೋಧಿಸುವ ಆತ್ಮ, ಯಾವುದು ಸುಳ್ಳನ್ನು ಬೋಧಿಸುವ ಆತ್ಮ ಎಂಬುದನ್ನು ಹೀಗೆ ತಿಳಿದುಕೊಳ್ಳುತ್ತೇವೆ.
ಪ್ರೀತಿಯು ದೇವರಿಂದ ಬರುತ್ತದೆ
7 ಪ್ರಿಯ ಸ್ನೇಹಿತರೇ, ಪ್ರೀತಿಯು ದೇವರಿಂದ ಬಂದಿರುವುದರಿಂದ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ಪ್ರೀತಿಸುವವನು ದೇವರಿಂದ ಹೊಸದಾಗಿ ಹುಟ್ಟಿದವನಾಗಿದ್ದಾನೆ. ಆದ್ದರಿಂದ ಅವನು ದೇವರನ್ನು ಬಲ್ಲವನಾಗಿರುತ್ತಾನೆ. 8 ಪ್ರೀತಿಸದಿರುವವನು ದೇವರನ್ನು ತಿಳಿದಿಲ್ಲ. ಏಕೆಂದರೆ ದೇವರು ಪ್ರೀತಿಸ್ವರೂಪಿ. 9 ದೇವರು ತನ್ನ ಒಬ್ಬನೇ ಮಗನ ಮೂಲಕ ನಮಗೆ ಜೀವವನ್ನು ಕೊಡುವುದಕ್ಕಾಗಿ ಆತನನ್ನು ಈ ಲೋಕಕ್ಕೆ ಕಳುಹಿಸಿದನು. ಹೀಗೆ ದೇವರು ತನ್ನ ಪ್ರೀತಿಯನ್ನು ನಮಗೆ ತೋರಿಸಿದ್ದಾನೆ. 10 ದೇವರಿಗೆ ನಮ್ಮ ಮೇಲಿರುವ ಪ್ರೀತಿಯೇ ನಿಜವಾದ ಪ್ರೀತಿ. ನಮಗೆ ದೇವರ ಮೇಲಿರುವ ಪ್ರೀತಿ ನಿಜವಾದ ಪ್ರೀತಿಯಲ್ಲ. ನಮ್ಮ ಪಾಪ ನಿವಾರಣೆಗಾಗಿ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು.
11 ಪ್ರಿಯ ಸ್ನೇಹಿತರೇ, ಹೀಗೆ ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿದನು! ಆದ್ದರಿಂದ ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು. 12 ದೇವರನ್ನು ಯಾರೂ ಎಂದೂ ನೋಡಿಲ್ಲ. ಆದರೆ ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರು ನಮ್ಮಲ್ಲಿ ನೆಲೆಸಿರುತ್ತಾನೆ. ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ದೇವರ ಪ್ರೀತಿಯು ನಮ್ಮಲ್ಲಿ ಪರಿಪೂರ್ಣವಾದ ಮಟ್ಟವನ್ನು ತಲುಪುತ್ತದೆ.
13 ನಾವು ದೇವರಲ್ಲಿ ನೆಲೆಸಿದ್ದೇವೆ ಮತ್ತು ದೇವರು ನಮ್ಮಲ್ಲಿ ನೆಲೆಸಿದ್ದಾನೆ ಎಂಬುದು ನಮಗೆ ತಿಳಿದದೆ. ದೇವರು ನಮಗೆ ತನ್ನ ಆತ್ಮವನ್ನು ಕೊಟ್ಟಿರುವುದರಿಂದ ಇದು ನಮಗೆ ತಿಳಿದಿದೆ. 14 ದೇವರು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿದ್ದನ್ನು ನಾವು ನೋಡಿದ್ದೇವೆ. ನಾವು ಈಗ ಜನರಿಗೆ ಹೇಳುತ್ತಿರುವುದು ಅದನ್ನೇ. 15 “ಯೇಸುವೇ ದೇವರ ಮಗನೆಂದು ನಾನು ನಂಬುತ್ತೇನೆ” ಎಂದು ಹೇಳುವವನಲ್ಲಿ ದೇವರು ನೆಲೆಸಿದ್ದಾನೆ ಮತ್ತು ಅವನು ದೇವರಲ್ಲಿ ನೆಲೆಸಿದ್ದಾನೆ. 16 ಹೀಗಿರಲಾಗಿ ನಮ್ಮ ಮೇಲೆ ದೇವರಿಗಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ. ನಾವು ಆ ಪ್ರೀತಿಯಲ್ಲಿ ಭರವಸವಿಟ್ಟಿದ್ದೇವೆ.
ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ. ದೇವರೂ ಅವನಲ್ಲಿ ನೆಲೆಸಿದ್ದಾನೆ. 17 ಹೀಗೆ ಪ್ರೀತಿಯು ನಮ್ಮಲ್ಲಿ ಪರಿಪೂರ್ಣವಾಗುವುದರಿಂದ ದೇವರು ನಮಗೆ ತೀರ್ಪು ನೀಡುವ ದಿನದಂದು ನಾವು ನಿರ್ಭಯದಿಂದಿರುತ್ತೇವೆ. ಈ ಲೋಕದಲ್ಲಿ ನಾವು ಆತನಂತೆಯೇ (ಕ್ರಿಸ್ತನು ಅಥವಾ ದೇವರು) ಇರುವುದರಿಂದ ನಾವು ಧೈರ್ಯದಿಂದಿರುತ್ತೇವೆ. 18 ದೇವರ ಪ್ರೀತಿಯು ಎಲ್ಲಿರುವುದೋ ಅಲ್ಲಿ ಭಯವಿರುವುದಿಲ್ಲ. ಏಕೆಂದರೆ ದೇವರ ಪರಿಪೂರ್ಣ ಪ್ರೀತಿಯು ಭಯವನ್ನು ತೆಗೆದುಹಾಕುತ್ತದೆ. ದೇವರ ದಂಡನೆಯೇ ಒಬ್ಬ ವ್ಯಕ್ತಿಯಲ್ಲಿ ಭಯವನ್ನು ಉಂಟುಮಾಡುವಂಥದ್ದು. ಆದ್ದರಿಂದ ಭಯವಿರುವವನಲ್ಲಿ ದೇವರ ಪ್ರೀತಿ ಪರಿಪೂರ್ಣವಾಗಿಲ್ಲ.
19 ದೇವರು ನಮ್ಮನ್ನು ಮೊದಲು ಪ್ರೀತಿಸಿದ್ದರಿಂದಲೇ ನಾವು ಆತನನ್ನು ಪ್ರೀತಿಸುತ್ತೇವೆ. 20 “ನಾನು ದೇವರನ್ನು ಪ್ರೀತಿಸುತ್ತೇನೆ” ಎಂದು ಹೇಳಿಕೊಳ್ಳುವವನು ತನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ದ್ವೇಷಿಸಿದರೆ, ಅವನು ಸುಳ್ಳುಗಾರನಾಗಿದ್ದಾನೆ. ಅವನು ತನ್ನ ಸಹೋದರನನ್ನು ಕಣ್ಣಾರೆ ನೋಡುತ್ತಿದ್ದರೂ ಅವನನ್ನು ದ್ವೇಷಿಸುತ್ತಾನೆ. ಆದ್ದರಿಂದ ಅವನು ದೇವರನ್ನು ಪ್ರೀತಿಸಲಾಗುವುದಿಲ್ಲ. ಏಕೆಂದರೆ ಅವನು ದೇವರನ್ನು ಎಂದೂ ನೋಡಿಲ್ಲ! 21 ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬುದು ದೇವರು ನಮಗೆ ನೀಡಿರುವ ಆಜ್ಞೆಯಾಗಿದೆ.
ನಿನೆವೆಗೊಂದು ಕೆಟ್ಟ ಸುದ್ಧಿ
3 ಕೊಲೆಗಡುಕರ ಆ ಪಟ್ಟಣಕ್ಕೆ ಬಹಳ ಕೆಡುಕು ಉಂಟಾಗುವದು.
ನಿನೆವೆಯು ಸುಳ್ಳಿನಿಂದ ತುಂಬಿದ ನಗರ.
ಬೇರೆ ರಾಜ್ಯಗಳಿಂದ ದೋಚಿದ ವಸ್ತುಗಳಿಂದ ತುಂಬಿದ ನಗರ.
ಆ ಪಟ್ಟಣವು ಕೊಲ್ಲುವುದನ್ನೂ ಲೂಟಿ ಮಾಡುವುದನ್ನೂ ನಿಲ್ಲಿಸುವುದೇ ಇಲ್ಲ.
2 ಚಾವಟಿಯ ಚಟಾರವೆಂಬ ಶಬ್ಧವನ್ನು ನೀನು ಕೇಳಬಹುದು.
ಚಕ್ರಗಳ ತಿರುಗುವ ಶಬ್ಧ,
ಕುದುರೆಗಳ ನಾಗಾಲೋಟವನ್ನು ಮತ್ತು
ರಥಗಳ ಹಾರಾಟವನ್ನು ನೀವು ನೋಡಬಹುದು.
3 ಕುದುರೆಗಳ ಮೇಲಿರುವ ಸೈನಿಕರು ಆಕ್ರಮಣವೆಸಗಿದ್ದಾರೆ.
ಅವರ ಖಡ್ಗವು ಮಿಂಚುತ್ತದೆ.
ಅವರ ಬರ್ಜಿಯು ಹೊಳೆಯುತ್ತದೆ,
ಬಹು ಮಂದಿ ಸತ್ತಿರುತ್ತಾರೆ.
ಶವಗಳ ರಾಶಿ ಬಿದ್ದಿವೆ, ಅವು ಲೆಕ್ಕವಿಲ್ಲದಷ್ಟು ಇವೆ.
ಅವುಗಳ ಮೇಲೆ ಜನರು ಎಡವಿಬೀಳುತ್ತಾರೆ.
4 ಇದಕ್ಕೆಲ್ಲಾ ಕಾರಣ ನಿನೆವೆ.
ನಿನೆವೆಯು ಒಬ್ಬ ವೇಶ್ಯೆ. ಆಕೆಗೆ ತೃಪ್ತಿ ಇರದು.
ಆಕೆಗೆ ಹೆಚ್ಚುಹೆಚ್ಚು ಬೇಕು.
ಅನೇಕ ದೇಶಗಳಿಗೆ ತನ್ನನ್ನು ಮಾರಿಬಿಟ್ಟಿದ್ದಾಳೆ.
ಮಂತ್ರತಂತ್ರಗಳನ್ನು ಉಪಯೋಗಿಸಿ ಜನರನ್ನು ತನ್ನ ಗುಲಾಮರನ್ನಾಗಿ ಮಾಡಿದ್ದಾಳೆ.
5 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ:
“ನಿನೆವೆಯೇ, ನಾನು ನಿನಗೆ ವಿರೋಧವಾಗಿದ್ದೇನೆ.
ನಿನ್ನ ಮೇಲಂಗಿಯನ್ನು ನಿನ್ನ ಮುಖದ ತನಕ ಎತ್ತುವೆನು.
ಜನಾಂಗಗಳು ನಿನ್ನ ಬೆತ್ತಲೆತನವನ್ನು ನೋಡಲಿ.
ನಿನ್ನ ನಾಚಿಕೆಯನ್ನು ಅವರು ನೋಡಲಿ.
6 ನಿನ್ನ ಮೇಲೆ ಹೊಲಸನ್ನು ಬಿಸಾಡುವೆನು.
ನಿನ್ನನ್ನು ದ್ವೇಷದಿಂದ ಕಾಣುವೆನು.
ಜನರು ನಿನ್ನನ್ನು ನೋಡಿ ನಗಾಡುವರು.
7 ನಿನ್ನನ್ನು ನೋಡಿದವರೆಲ್ಲರು ದಂಗುಬಡಿಯಲ್ಪಡುವರು.
‘ನಿನೆವೆಯು ನಾಶವಾಯಿತು. ಆಕೆಗಾಗಿ ಯಾರು ಮರುಗುವರು?’
ಎಂದು ಜನರು ಹೇಳುವರು.
ನಿನ್ನನ್ನು ಸಂತೈಸುವವರು ಯಾರೂ ಸಿಗುವುದಿಲ್ಲವಲ್ಲಾ?”
8 ನಿನೆವೆಯೇ, ನೀನು ನೈಲ್ ನದಿಯ ದಡದಲ್ಲಿರುವ ತೆಬೆಸ್ ಗಿಂತಲೂ ಉತ್ತಮಳೋ? ಇಲ್ಲ. ತೆಬೆಸಿನ ಸುತ್ತಲೂ ನೀರು ಇತ್ತು. ಆ ನೀರು ಆಕೆಯನ್ನು ತನ್ನ ವೈರಿಗಳಿಂದ ಕಾಪಾಡಲು ಶಕ್ತವಾಯಿತು. ಆ ನೀರನ್ನು ಆಕೆಯು ಗೋಡೆಯಂತೆ ಉಪಯೋಗಿಸಿದಳು. 9 ಇಥಿಯೋಫಿಯಾ ಮತ್ತು ಈಜಿಪ್ಟ್ ತೆಬೆಸ್‌ಗೆ ಹೆಚ್ಚಿನ ಬಲವನ್ನು ಕೊಟ್ಟವು. ಸುದಾನ್ ಮತ್ತು ಲಿಬ್ಯ ಆಕೆಯನ್ನು ಸಹಕರಿಸಿದವು. 10 ಆದರೆ ತೆಬೆಸ್ ಸೋಲಿಸಲ್ಪಟ್ಟಿತು. ಆಕೆಯ ಪ್ರಜೆಗಳು ಬೇರೆ ದೇಶಕ್ಕೆ ಕೈದಿಗಳಾಗಿ ಒಯ್ಯಲ್ಪಟ್ಟರು. ಸೈನಿಕರು ಆಕೆಯ ಹಸುಗೂಸುಗಳನ್ನು ರಸ್ತೆಯ ಮೂಲೆಮೂಲೆಗಳಲ್ಲಿ ಹೊಡೆದು ಸಾಯಿಸಿದರು. ತಮ್ಮಲ್ಲಿ ಯಾರು ಉನ್ನತ ಅಧಿಕಾರಿಗಳನ್ನು ಗುಲಾಮರನ್ನಾಗಿ ಉಪಯೋಗಿಸಬೇಕೆಂಬದಾಗಿ ಚೀಟುಹಾಕಿದರು. ಅವರು ತೆಬೆಸಿನ ಮುಖ್ಯ ಅಧಿಕಾರಿಗಳನ್ನು ಸಂಕೋಲೆಗಳಿಂದ ಬಂಧಿಸಿದರು.
11 ಆದ್ದರಿಂದ ನಿನೆವೆಯೇ, ನೀನು ಸಹ ಕುಡಿದು ಅಮಲೇರಿದವನಂತೆ ಕೆಳಗೆ ಬಿದ್ದುಬಿಡುವೆ. ನೀನು ಅಡಗಿಕೊಳ್ಳಲು ಪ್ರಯತ್ನಿಸುವೆ. ವೈರಿಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತವಾದ ಸ್ಥಳವನ್ನು ಹುಡುಕುವೆ. 12 ಆದರೆ ನಿನೆವೆಯೇ, ನಿನ್ನ ಎಲ್ಲಾ ಬಲವಾದ ಬುರುಜುಗಳು ಅಂಜೂರದ ಮರದಂತಿರುವವು. ಹೊಸ ಅಂಜೂರ ಹಣ್ಣುಗಳು ಮಾಗುವವು. ಒಬ್ಬನು ಬಂದು ಮರವನ್ನು ಅಲ್ಲಾಡಿಸಲು ಅಂಜೂರ ಹಣ್ಣುಗಳು ಅಲ್ಲಾಡಿಸುವವನ ಬಾಯಿಗೆ ಬೀಳುವವು. ಅವನು ಅವುಗಳನ್ನು ತಿಂದುಬಿಡುವನು; ಅವು ಇಲ್ಲವಾಗುವವು.
13 ನಿನೆವೆಯೇ, ನಿನ್ನ ಜನರೆಲ್ಲಾ ಹೆಂಗಸರಂತೆ, ವೈರಿ ಸೈನಿಕರು ಅವರನ್ನು ಹಿಡಿದುಕೊಳ್ಳಲು ತಯಾರಾಗಿದ್ದಾರೆ. ನಿನ್ನ ದೇಶದ ದ್ವಾರಗಳು, ವೈರಿಗಳು ಪ್ರವೇಶಿಸುವಂತೆ ಅಗಲವಾಗಿ ತೆರೆಯಲ್ಪಟ್ಟಿವೆ. ದ್ವಾರದ ಬಾಗಿಲಿನ ಅಡ್ಡಪಟ್ಟಿಯು ಬೆಂಕಿಯಿಂದ ಸುಟ್ಟಿರುತ್ತದೆ.
14 ನೀರನ್ನು ತಂದು ಪಟ್ಟಣದೊಳಗೆ ಶೇಖರಿಸಿಡು. ಯಾಕೆಂದರೆ ವೈರಿ ಸೈನ್ಯವು ನಿನ್ನ ನಗರವನ್ನು ಮುತ್ತುವವು. ನಗರದೊಳಗೆ ಅನ್ನ ನೀರನ್ನು ಯಾರಿಗೂ ತರಲು ಬಿಡುವುದಿಲ್ಲ. ನಿನ್ನ ಬುರುಜುಗಳನ್ನು ಬಲಪಡಿಸಿಕೊ. ಹೆಚ್ಚು ಇಟ್ಟಿಗೆಗಳನ್ನು ಮಾಡುವಂತೆ ಆವೆಮಣ್ಣನ್ನು ಶೇಖರಿಸು. ಗಾರೆಯನ್ನು ಕಲಸಿಕೊ. ಇಟ್ಟಿಗೆಗಳನ್ನು ಮಾಡುವ ಅಚ್ಚನ್ನು ತೆಗೆದುಕೊ. 15 ಇವೆಲ್ಲವನ್ನು ನೀನು ಮಾಡಬಹುದು. ಆದರೂ ಬೆಂಕಿಯು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುವುದು. ಖಡ್ಗವು ನಿನ್ನನ್ನು ಸಾಯಿಸುವದು. ನಿನ್ನ ದೇಶವು ಮಿಡತೆಗಳ ಹಿಂಡಿನಿಂದ ತಿಂದುಹಾಕಲ್ಪಟ್ಟ ದೇಶದಂತೆ ಕಾಣುವುದು.
ನಿನೆವೆಯೇ, ನೀನು ಬೆಳೆಯುತ್ತಾ ಬೆಳೆಯುತ್ತಾ ಮಿಡತೆಗಳ ಹಿಂಡಿನಂತಾದೆ. ನೀನು ಮಿಡತೆಗಳಂತಾದೆ. 16 ನಿನ್ನಲ್ಲಿ ಅನೇಕ ವ್ಯಾಪಾರಸ್ಥರು ಊರೂರಿಗೆ ತಿರುಗಿ ವ್ಯಾಪಾರ ಮಾಡುವವರಿದ್ದಾರೆ. ಅವರು ಆಕಾಶದಲ್ಲಿರುವ ನಕ್ಷತ್ರಗಳಷ್ಟು ಇದ್ದಾರೆ. ಅವರು ಮಿಡತೆಗಳಂತೆ ಬಂದು, ಎಲ್ಲವನ್ನು ತಿಂದು ಮುಗಿಸಿದ ಬಳಿಕ ಹೋಗುವಂಥವರಾಗಿದ್ದಾರೆ. 17 ನಿನ್ನ ಸರಕಾರದ ಅಧಿಕಾರಿಗಳು ಸಹ ಮಿಡತೆಗಳಂತಿದ್ದಾರೆ. ಅವರು ಚಳಿಯ ದಿವಸದಲ್ಲಿ ಕಲ್ಲಿನ ಗೋಡೆಯ ಮೇಲೆ ಬಂದು ಕುಳಿತುಕೊಳ್ಳುವ ಮಿಡತೆಯಂತಿದ್ದಾರೆ. ಆದರೆ ಸೂರ್ಯನು ಮೇಲೆ ಬಂದಾಗ ಬಿಸಿಲು ಏರಿ ಕಲ್ಲು ಬಿಸಿಯಾದಾಗ ಆ ಮಿಡತೆಗಳೆಲ್ಲಾ ಹಾರಿಹೋಗುವವು. ಅವು ಎಲ್ಲಿಗೆ ಹೋದವು ಎಂದು ಯಾರಿಗೂ ಗೊತ್ತಿಲ್ಲ. ನಿನ್ನ ಅಧಿಕಾರಿಗಳೂ ಅದೇ ರೀತಿಯಲ್ಲಿರುವರು.
18 ಅಶ್ಶೂರದ ಅರಸನೇ, ನಿನ್ನ ಕುರುಬರು ನಿದ್ರಿಸುತ್ತಿದ್ದಾರೆ. ಆ ಬಲಾಢ್ಯ ಕುರುಬರು ನಿದ್ರೆ ಮಾಡುತ್ತಿದ್ದಾರೆ. ನಿನ್ನ ಕುರಿಗಳು ಬೆಟ್ಟಗಳ ಮೇಲೆ ಚದರಿಹೋಗಿವೆ. ಅವುಗಳನ್ನು ಹಿಂತಿರುಗಿಸಿ ಒಟ್ಟುಗೂಡಿಸಲು ಯಾರೂ ಇಲ್ಲ. 19 ನಿನೆವೆಯೇ, ನೀನು ತೀವ್ರವಾದ ಗಾಯಹೊಂದಿರುವೆ. ಯಾವದೂ ನಿನ್ನನ್ನು ಗುಣಪಡಿಸಲಾರದು. ನಿನ್ನ ನಾಶನದ ಸುದ್ದಿ ಕೇಳಿದವರೆಲ್ಲರೂ ಚಪ್ಪಾಳೆ ತಟ್ಟುವರು. ಅವರು ಹರ್ಷಿಸುವರು. ಯಾಕೆಂದರೆ ನಿನಗಾದ ತೀವ್ರ ಗಾಯದ ನೋವನ್ನು ಅವರೆಲ್ಲರೂ ಅನುಭವಿಸಿದರು.
ಜಕ್ಕಾಯ
19 ಒಮ್ಮೆ ಯೇಸು ಜೆರಿಕೊ ಪಟ್ಟಣದ ಮೂಲಕ ಹೋಗುತ್ತಿದ್ದನು. 2 ಆ ಪಟ್ಟಣದಲ್ಲಿ ಜಕ್ಕಾಯನೆಂಬ ಮನುಷ್ಯನಿದ್ದನು. ಅವನು ಐಶ್ವರ್ಯವಂತನೂ ಪ್ರಧಾನ ಸುಂಕವಸೂಲಿಗಾರನೂ ಆಗಿದ್ದನು. 3 ಅವನು ಯೇಸುವನ್ನು ನೋಡಲು ಬಯಸಿದನು. ಯೇಸುವನ್ನು ನೋಡುವುದಕ್ಕಾಗಿ ಇತರ ಅನೇಕ ಜನರೂ ಅಲ್ಲಿದ್ದರು. ಜಕ್ಕಾಯನು ಬಹಳ ಗಿಡ್ಡನಾಗಿದ್ದುದರಿಂದ ಆ ಜನರ ಗುಂಪಿನ ದೆಸೆಯಿಂದ ಯೇಸುವನ್ನು ನೋಡಲಾಗಲಿಲ್ಲ. 4 ಆದ್ದರಿಂದ ಅವನು ಬೇರೊಂದು ಸ್ಥಳಕ್ಕೆ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿ ಕುಳಿತುಕೊಂಡನು. ಯೇಸು ಆ ಸ್ಥಳದ ಮೂಲಕ ಹೋಗುವನೆಂದು ಜಕ್ಕಾಯನಿಗೆ ಗೊತ್ತಿತ್ತು.
5 ಯೇಸು ಆ ಸ್ಥಳಕ್ಕೆ ಬಂದಾಗ, ಮರದ ಮೇಲೆ ಕುಳಿತಿದ್ದ ಜಕ್ಕಾಯನನ್ನು ಕಣ್ಣೆತ್ತಿ ನೋಡಿ ಅವನಿಗೆ, “ಜಕ್ಕಾಯನೇ ಬೇಗನೆ ಕೆಳಗಿಳಿದು ಬಾ! ಈ ದಿನ ನಾನು ನಿನ್ನ ಮನೆಯಲ್ಲಿ ಇಳಿದುಕೊಳ್ಳಬೇಕು” ಎಂದು ಹೇಳಿದನು.
6 ಆಗ ಜಕ್ಕಾಯನು ಬೇಗನೆ ಕೆಳಗಿಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. 7 ಜನರೆಲ್ಲರೂ ಇದನ್ನು ನೋಡಿ, “ಯೇಸು ಎಂಥವನ ಮನೆಯಲ್ಲಿ ಇಳಿದುಕೊಳ್ಳುತ್ತಾನೆ. ಜಕ್ಕಾಯನು ಪಾಪಿ!” ಎಂದು ಆಕ್ಷೇಪಣೆ ಮಾಡತೊಡಗಿದರು.
8 ಜಕ್ಕಾಯನು ಪ್ರಭುವಿಗೆ (ಯೇಸುವಿಗೆ), “ನಾನು ಜನರಿಗೆ ಉಪಕಾರ ಮಾಡಬೇಕೆಂದಿದ್ದೇನೆ. ನಾನು ನನ್ನ ಹಣದಲ್ಲಿ ಅರ್ಧವನ್ನು ಬಡವರಿಗೆ ಕೊಡುವೆನು. ನಾನು ಯಾರಿಗಾದರೂ ಮೋಸಮಾಡಿದ್ದರೆ, ಆ ವ್ಯಕ್ತಿಗೆ ಅದರ ನಾಲ್ಕರಷ್ಟು ಹೆಚ್ಚಾಗಿ ಕೊಡುತ್ತೇನೆ” ಎಂದು ಹೇಳಿದನು.
9 ಯೇಸು, “ಈ ಮನುಷ್ಯನು ಒಳ್ಳೆಯವನೇ ಸರಿ. ಇವನು ನಿಜವಾಗಿಯೂ ಅಬ್ರಹಾಮನ ಕುಟುಂಬಕ್ಕೆ ಸೇರಿದ್ದಾನೆ. ಇಂದೇ ಈ ಮನೆಗೆ ರಕ್ಷಣೆ ಆಯಿತು. 10 ಮನುಷ್ಯಕುಮಾರನು ಬಂದದ್ದು ತಪ್ಪಿಹೋದ ಜನರನ್ನು ಹುಡುಕಿ ರಕ್ಷಿಸುವುದಕ್ಕಾಗಿಯಷ್ಟೇ” ಎಂದು ಹೇಳಿದನು.
ದೇವರು ಕೊಡುವ ವರಗಳನ್ನು ಉಪಯೋಗಿಸಿರಿ
(ಮತ್ತಾಯ 25:14-30)
11 ಯೇಸು ಪ್ರಯಾಣ ಮಾಡುತ್ತಾ ಜೆರುಸಲೇಮಿನ ಸಮೀಪಕ್ಕೆ ಬಂದನು. ಕೆಲವು ಜನರು ದೇವರ ರಾಜ್ಯವು ಬೇಗನೆ ಬರಲಿದೆ ಎಂದುಕೊಂಡರು. 12 ಜನರ ಈ ಭಾವನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಈ ಸಾಮ್ಯವನ್ನು ಹೇಳಿದನು: “ಬಹಳ ಪ್ರಾಮುಖ್ಯನಾದ ಒಬ್ಬನು ರಾಜ್ಯಾಧಿಕಾರವನ್ನು ಪಡೆದುಕೊಂಡು ಬರುವುದಕ್ಕಾಗಿ ದೂರದೇಶಕ್ಕೆ[a] ಹೊರಟನು. ರಾಜ್ಯಾಧಿಕಾರವನ್ನು ಪಡೆದುಕೊಂಡ ಮೇಲೆ ಹಿಂತಿರುಗಿ ಬಂದು ತನ್ನ ಜನರನ್ನು ಆಳಬೇಕೆಂಬುದು ಅವನ ಬಯಕೆಯಾಗಿತ್ತು. 13 ಆದ್ದರಿಂದ ಅವನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಒಟ್ಟಾಗಿ ಕರೆದು ಅವರಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸಾವಿರ ರೂಪಾಯಿ ಕೊಟ್ಟು, ‘ನಾನು ಹಿಂತಿರುಗಿ ಬರುವವರೆಗೆ ಈ ಹಣದಿಂದ ವ್ಯಾಪಾರ ಮಾಡಿರಿ’ ಎಂದು ಹೇಳಿದನು. 14 ಆದರೆ ಅವನ ದೇಶದ ಜನರು ಅವನನ್ನು ದ್ವೇಷಿಸಿ, ಜನರ ಒಂದು ಗುಂಪನ್ನು ಅವನ ಹಿಂದೆ ಕಳುಹಿಸಿದರು. ಆ ಗುಂಪಿನ ಜನರು ದೂರದೇಶದಲ್ಲಿ, ‘ಇವನು ನಮ್ಮ ರಾಜನಾಗುವುದು ನಮಗೆ ಇಷ್ಟವಿಲ್ಲ!’ ಎಂದು ಹೇಳಿದರು.
15 “ಆದರೂ ಅವನು ಅರಸನಾದನು. ಅವನು ತನ್ನ ದೇಶಕ್ಕೆ ಹಿಂತಿರುಗಿದಾಗ, ‘ನನ್ನ ಹಣ ಹೊಂದಿರುವ ಸೇವಕರನ್ನು ಕರೆಯಿರಿ. ಅವರು ಅದರಿಂದ ಎಷ್ಟು ಹೆಚ್ಚು ಹಣ ಸಂಪಾದಿಸಿದ್ದಾರೆಂದು ನಾನು ನೋಡಬೇಕು’ ಎಂದು ಹೇಳಿದನು. 16 ಮೊದಲನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿ ಸಂಪಾದಿಸಿದ್ದೇನೆ!’ ಎಂದು ಹೇಳಿದನು. 17 ಅರಸನು ಆ ಸೇವಕನಿಗೆ, ‘ಭಲೇ! ನೀನು ಒಳ್ಳೆಯ ಆಳು. ಚಿಕ್ಕವಿಷಯಗಳಲ್ಲಿ ನಾನು ನಿನ್ನ ಮೇಲೆ ಭರವಸೆ ಇಡಬಹುದೆಂದು ನನಗೆ ತಿಳಿಯಿತು. ಆದ್ದರಿಂದ ನನ್ನ ಹತ್ತು ಪಟ್ಟಣಗಳನ್ನು ಆಳುವುದಕ್ಕೆ ನಿನ್ನನ್ನು ನೇಮಿಸುವೆನು!’ ಎಂದು ಹೇಳಿದನು.
18 “ಎರಡನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿ ಸಂಪಾದಿಸಿದ್ದೇನೆ’ ಅಂದನು. 19 ಅರಸನು ಆ ಸೇವಕನಿಗೆ, ‘ನೀನು ನನ್ನ ಐದು ಪಟ್ಟಣಗಳಿಗೆ ಅಧಿಕಾರಿಯಾಗಿರು’ ಎಂದು ಹೇಳಿದನು.
20 “ಆ ಬಳಿಕ ಇನ್ನೊಬ್ಬ ಆಳು ಬಂದು ಅರಸನಿಗೆ, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿ ಇಲ್ಲಿದೆ. 21 ನೀನು ಬಲಿಷ್ಠನೂ ಕಠಿಣ ಮನುಷ್ಯನೂ ಸ್ವತಃ ಸಂಪಾದನೆ ಮಾಡದ ಹಣವನ್ನು ದೋಚಿಕೊಳ್ಳುವವನೂ ಸ್ವತಃ ನೀನೇ ಬೆಳೆಯದ ದವಸಧಾನ್ಯಗಳನ್ನು ಒಟ್ಟುಗೂಡಿಸುವವನೂ ಆಗಿರುವೆ. ಆದ್ದರಿಂದ ನಿನಗೆ ಹೆದರಿ ನಿನ್ನ ಹಣವನ್ನು ಬಟ್ಟೆಯಲ್ಲಿ ಸುತ್ತಿ ಬಚ್ಚಿಟ್ಟಿದ್ದೆ’ ಎಂದನು.
22 “ಆಗ ಅರಸನು ಆ ಸೇವಕನಿಗೆ, ‘ನೀನು ಕೆಟ್ಟ ಆಳು! ನಿನ್ನ ಸ್ವಂತ ಮಾತುಗಳಿಂದಲೇ ನಿನಗೆ ತೀರ್ಪು ಮಾಡುತ್ತೇನೆ. ನನ್ನನ್ನು ಕಠಿಣ ಮನುಷ್ಯನೆಂದು ನೀನು ಹೇಳಿದೆ. ಸ್ವತಃ ನಾನೇ ಸಂಪಾದನೆ ಮಾಡದ ಹಣವನ್ನು ನಾನು ತೆಗೆದುಕೊಳ್ಳುವುದಾಗಿಯೂ ಸ್ವತಃ ನಾನೇ ಬೆಳೆಯದ ದವಸಧಾನ್ಯಗಳನ್ನು ನಾನು ಸಂಗ್ರಹಿಸುವುದಾಗಿಯೂ ನೀನು ಹೇಳಿದೆ. 23 ಅದು ನಿಜವಾಗಿದ್ದರೆ, ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ನಾನು ಮರಳಿ ಬಂದಾಗ, ನನಗೆ ಸ್ವಲ್ಪ ಬಡ್ಡಿಯಾದರೂ ಸಿಕ್ಕುತ್ತಿತ್ತು’ ಎಂದನು. 24 ಬಳಿಕ ಅರಸನು ಅಲ್ಲಿದ್ದ ಜನರಿಗೆ, ‘ಈ ಸೇವಕನ ಒಂದುಸಾವಿರ ರೂಪಾಯಿ ತೆಗೆದುಕೊಂಡು ಹತ್ತುಸಾವಿರ ರೂಪಾಯಿ ಸಂಪಾದಿಸಿದವನಿಗೆ ಕೊಡಿರಿ’ ಎಂದು ಹೇಳಿದನು.
25 “ಆ ಜನರು ಅರಸನಿಗೆ, ‘ಸ್ವಾಮೀ, ಆ ಸೇವಕನ ಬಳಿ ಈಗಾಗಲೇ ಹತ್ತುಸಾವಿರ ರೂಪಾಯಿ ಇದೆಯಲ್ಲಾ!’ ಎಂದು ಹೇಳಿದರು.
26 “ಅರಸನು, ‘ತನ್ನಲ್ಲಿರುವುದನ್ನು ಉಪಯೋಗಿಸುವವನು ಹೆಚ್ಚು ಪಡೆಯುವನು. ಆದರೆ ತನ್ನಲ್ಲಿರುವುದನ್ನು ಉಪಯೋಗಿಸದವನಿಂದ ಇದ್ದದ್ದನ್ನೂ ತೆಗೆದುಕೊಳ್ಳಲಾಗುವುದು. 27 ಈಗ ನನ್ನ ವೈರಿಗಳೆಲ್ಲಿ? ನಾನು ಅರಸನಾಗುವುದನ್ನು ವಿರೋಧಿಸಿದ ಜನರೆಲ್ಲಿ? ನನ್ನ ವೈರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ನನ್ನ ಕಣ್ಣೆದುರಿನಲ್ಲಿಯೇ ಕೊಲ್ಲಿರಿ!’ ಎಂದು ಹೇಳಿದನು.”
ಜೆರುಸಲೇಮಿಗೆ ಯೇಸುವಿನ ಪ್ರವೇಶ
(ಮತ್ತಾಯ 21:1-11; ಮಾರ್ಕ 11:1-11; ಯೋಹಾನ 12:12-19)
28 ಯೇಸು ಈ ಸಂಗತಿಗಳನ್ನು ಹೇಳಿದ ನಂತರ ಜೆರುಸಲೇಮಿನ ಕಡೆಗೆ ಪ್ರಯಾಣ ಮುಂದುವರಿಸಿದನು. 29 ಯೇಸು ಬೇತ್ಛಗೆ ಮತ್ತು ಬೆಥಾನಿಯ ಎಂಬ ಊರುಗಳ ಸಮೀಪಕ್ಕೆ ಬಂದನು. ಈ ಊರುಗಳು ಆಲಿವ್ ಮರಗಳ ಬೆಟ್ಟ[b] ಎಂದು ಕರೆಯಲ್ಪಟ್ಟ ಗುಡ್ಡದ ಹತ್ತಿರವಿತ್ತು. ಯೇಸು ಇಬ್ಬರು ಶಿಷ್ಯರನ್ನು ಕರೆದು ಅವರಿಗೆ, 30 “ಅಲ್ಲಿ ಕಾಣುವ ಊರಿಗೆ ಹೋಗಿರಿ. ನೀವು ಆ ಊರನ್ನು ಪ್ರವೇಶಿಸಿದಾಗ ಕಟ್ಟಿಹಾಕಿರುವ ಒಂದು ಪ್ರಾಯದ ಕತ್ತೆಯನ್ನು ಕಾಣುವಿರಿ. ಆ ಕತ್ತೆಯ ಮೇಲೆ ಯಾರೂ ಇದುವರೆಗೆ ಸವಾರಿಮಾಡಿಲ್ಲ. ಆ ಕತ್ತೆಯನ್ನು ಬಿಚ್ಚಿಕೊಂಡು ಇಲ್ಲಿಗೆ ಕರೆತನ್ನಿರಿ. 31 ನೀವು ಏಕೆ ಈ ಕತ್ತೆಯನ್ನು ಬಿಚ್ಚಿಕೊಂಡು ಹೋಗುತ್ತಿದ್ದೀರೆಂದು ಯಾರಾದರೂ ನಿಮ್ಮನ್ನು ಕೇಳಿದರೆ, ‘ಗುರುವಿಗೆ ಈ ಕತ್ತೆ ಬೇಕಾಗಿದೆ’ ಎಂದು ಹೇಳಿರಿ” ಎಂದನು.
32 ಆ ಇಬ್ಬರು ಶಿಷ್ಯರು ಪಟ್ಟಣದೊಳಕ್ಕೆ ಹೋದರು. ಯೇಸು ಅವರಿಗೆ ಹೇಳಿದ ಪ್ರಕಾರವೇ ಅವರು ಕತ್ತೆಯನ್ನು ಕಂಡು 33 ಅದನ್ನು ಬಿಚ್ಚಿದರು. ಆದರೆ ಕತ್ತೆಯ ಯಜಮಾನ ಹೊರಗೆ ಬಂದು ಶಿಷ್ಯರಿಗೆ, “ಆ ಕತ್ತೆಯನ್ನು ನೀವು ಏಕೆ ಬಿಚ್ಚುತ್ತಿದ್ದೀರಿ?” ಎಂದು ಕೇಳಿದನು.
34 ಶಿಷ್ಯರು, “ಪ್ರಭುವಿಗೆ ಇದು ಬೇಕಾಗಿದೆ” ಎಂದು ಉತ್ತರಿಸಿದರು. 35 ಹೀಗೆ, ಶಿಷ್ಯರು ಆ ಕತ್ತೆಯನ್ನು ಯೇಸುವಿನ ಬಳಿಗೆ ತಂದರು. ಶಿಷ್ಯರು ತಮ್ಮ ಬಟ್ಟೆಗಳನ್ನು ಕತ್ತೆಯ ಬೆನ್ನಿನ ಮೇಲೆ ಹಾಕಿ ಯೇಸುವನ್ನು ಕತ್ತೆಯ ಮೇಲೆ ಕುಳ್ಳಿರಿಸಿದರು. 36 ಯೇಸು ಜೆರುಸಲೇಮಿನ ಕಡೆಗೆ ಪ್ರಯಾಣ ಮಾಡಿದನು. ಶಿಷ್ಯರು ತಮ್ಮ ಬಟ್ಟೆಗಳನ್ನು ರಸ್ತೆಯಲ್ಲಿ ಯೇಸುವಿನ ಮುಂದೆ ಹಾಸಿದರು.
37 ಯೇಸು ಜೆರುಸಲೇಮಿಗೆ ಸಮೀಪಿಸಿ ಆಲಿವ್ ಮರಗಳ ಗುಡ್ಡದ ಬಳಿಗೆ ಬಂದನು. ಆತನನ್ನು ಹಿಂಬಾಲಿಸುತ್ತಿದ್ದ ಶಿಷ್ಯ ಸಮೂಹದಲ್ಲಿದ್ದವರೆಲ್ಲರೂ ಸಂತೋಷಪಡುತ್ತಾ ತಾವು ನೋಡಿದ ಎಲ್ಲಾ ಮಹತ್ಕಾರ್ಯಗಳಿಗಾಗಿ ದೇವರನ್ನು ಸ್ತುತಿಸಿದರು. 38 ಅವರು,
“‘ಪ್ರಭುವಿನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದವಾಗಲಿ!’(A)
ಪರಲೋಕದಲ್ಲಿ ಸಮಾಧಾನವಾಗಲಿ; ದೇವರಿಗೆ ಮಹಿಮೆಯಾಗಲಿ”
ಎಂದು ಆರ್ಭಟಿಸಿದರು.
39 ಫರಿಸಾಯರಲ್ಲಿ ಕೆಲವರು, “ಬೋಧಕನೇ, ಈ ರೀತಿಯೆಲ್ಲಾ ಹೇಳಕೂಡದೆಂದು ನಿನ್ನ ಶಿಷ್ಯರಿಗೆ ಹೇಳು!” ಅಂದರು.
40 ಅದಕ್ಕೆ ಯೇಸು, “ಅವರು ಹೀಗೆ ಹೇಳಲೇಬೇಕು. ಒಂದುವೇಳೆ ಅವರು ಹೀಗೆ ಹೇಳದಿದ್ದರೆ, ಈ ಕಲ್ಲುಗಳೇ ಅವರ ಬದಲಾಗಿ ಹೇಳುತ್ತವೆ ಎಂದು ನಿಮಗೆ ಹೇಳುತ್ತೇನೆ” ಎಂಬುದಾಗಿ ಉತ್ತರಿಸಿದನು.
ಜೆರುಸಲೇಮಿನ ವಿಷಯದಲ್ಲಿ ಯೇಸು ಅತ್ತನು
41 ಯೇಸು ಜೆರುಸಲೇಮಿನ ಸಮೀಪಕ್ಕೆ ಬಂದಾಗ ಆ ಪಟ್ಟಣವನ್ನು ನೋಡಿ ಅದರ ವಿಷಯದಲ್ಲಿ ಕಣ್ಣೀರಿಟ್ಟು 42 ಜೆರುಸಲೇಮಿಗೆ, “ನಿನಗೆ ಯಾವುದರಿಂದ ಸಮಾಧಾನವಾಗುತ್ತದೆ ಎಂಬುದನ್ನು ನೀನು ಇಂದೇ ತಿಳಿದುಕೊಂಡಿದ್ದರೆ ಎಷ್ಟೋ ಒಳ್ಳೆಯದಾಗಿತ್ತು! ಆದರೆ ನೀನು ಅದನ್ನು ತಿಳಿಯಲಾರೆ, ಏಕೆಂದರೆ ಅದು ನಿನಗೆ ಮರೆಯಾಗಿದೆ. 43 ನಿನ್ನ ವೈರಿಗಳು ನಿನ್ನ ಸುತ್ತಲೂ ಗೋಡೆ ಕಟ್ಟಿ ನಿನ್ನನ್ನು ಎಲ್ಲಾ ಕಡೆಗಳಿಂದಲೂ ಮುತ್ತಿಗೆ ಹಾಕಿ, 44 ನಿನ್ನನ್ನೂ ನಿನ್ನ ಜನರೆಲ್ಲರನ್ನೂ ನಾಶಮಾಡುವರು. ನಿನ್ನ ಕಟ್ಟಡಗಳಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ದೇವರು ನಿನ್ನನ್ನು ರಕ್ಷಿಸುವುದಕ್ಕೆ ಬಂದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ ಇದೆಲ್ಲಾ ನಿನಗೆ ಸಂಭವಿಸುವುದು” ಎಂದು ಹೇಳಿದನು.
ದೇವಾಲಯಕ್ಕೆ ಯೇಸುವಿನ ಪ್ರವೇಶ
(ಮತ್ತಾಯ 21:12-17; ಮಾರ್ಕ 11:15-19; ಯೋಹಾನ 2:13-22)
45 ಯೇಸು ದೇವಾಲಯದೊಳಗೆ ಹೋಗಿ, ಅಲ್ಲಿ ಮಾರಾಟ ಮಾಡುತ್ತಿದ್ದ ಜನರನ್ನೆಲ್ಲಾ ಹೊರಕ್ಕೆ ಓಡಿಸತೊಡಗಿ, 46 ಅವರಿಗೆ, “‘ನನ್ನ ಆಲಯವು ಪ್ರಾರ್ಥನಾಲಯವಾಗಿರುವುದು’(B) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ಅದನ್ನು ‘ಕಳ್ಳರ ಗವಿಯನ್ನಾಗಿ ಮಾರ್ಪಡಿಸಿದ್ದೀರಿ’”(C) ಎಂದನು.
47 ಯೇಸು ದೇವಾಲಯದಲ್ಲಿ ಪ್ರತಿದಿನ ಜನರಿಗೆ ಉಪದೇಶಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಜನರ ನಾಯಕರಲ್ಲಿ ಕೆಲವರು ಯೇಸುವನ್ನು ಕೊಲ್ಲಲು ಬಯಸಿದರು. 48 ಆದರೆ ಜನರೆಲ್ಲರೂ ಯೇಸುವಿನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಯೇಸು ಹೇಳಿದ ವಿಷಯಗಳಲ್ಲಿ ಅವರು ಬಹಳ ಆಸಕ್ತರಾಗಿದ್ದರು. ಆದ್ದರಿಂದ ಮಹಾಯಾಜಕರಿಗೆ, ಧರ್ಮೋಪದೇಶಕರಿಗೆ ಮತ್ತು ಜನನಾಯಕರಿಗೆ ಯೇಸುವನ್ನು ಹೇಗೆ ಕೊಲ್ಲಬೇಕೆಂದೇ ತಿಳಿಯಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International