M’Cheyne Bible Reading Plan
ಸಂಸೋನನು ಗಾಜಾಕ್ಕೆ ಹೋದನು
16 ಒಂದು ದಿನ ಸಂಸೋನನು ಗಾಜಾ ನಗರಕ್ಕೆ ಹೋದನು. ಅವನು ಅಲ್ಲಿ ಒಬ್ಬ ವೇಶ್ಯೆಯನ್ನು ಕಂಡು ಆ ರಾತ್ರಿ ಅವಳೊಂದಿಗಿರಲು ಅವಳ ಮನೆಯೊಳಗೆ ಹೋದನು. 2 ಯಾರೋ ಒಬ್ಬರು, “ಸಂಸೋನನು ಇಲ್ಲಿಗೆ ಬಂದಿದ್ದಾನೆ” ಎಂದು ಗಾಜಾದ ಜನರಿಗೆ ಹೇಳಿದರು. ಅವರು ಅವನನ್ನು ಕೊಲ್ಲಬೇಕೆಂದಿದ್ದರು. ಅದಕ್ಕಾಗಿ ಅವರು ಆ ಸ್ಥಳವನ್ನು ಸುತ್ತುಗಟ್ಟಿದರು. ನಗರದ ಬಾಗಿಲುಗಳನ್ನು ಭದ್ರಪಡಿಸಿ ಅಡಗಿಕೊಂಡು ಸಂಸೋನನ ದಾರಿಕಾಯ್ದರು. ಇಡೀರಾತ್ರಿ ಅವರು ನಗರದ ಬಾಗಿಲಲ್ಲಿ ಸುಮ್ಮನಿದ್ದರು. “ಬೆಳಗಾದ ಮೇಲೆ ನಾವು ಸಂಸೋನನನ್ನು ಕೊಲ್ಲೋಣ” ಎಂದು ತಮ್ಮತಮ್ಮಲ್ಲಿ ಮಾತನಾಡಿಕೊಂಡರು.
3 ಆದರೆ ಸಂಸೋನನು ಆ ವೇಶ್ಯೆಯ ಜೊತೆಯಲ್ಲಿ ಮಧ್ಯರಾತ್ರಿಯವರೆಗೆ ಮಾತ್ರ ಇದ್ದನು. ಸಂಸೋನನು ಮಧ್ಯರಾತ್ರಿಯಲ್ಲಿ ಎದ್ದುಬಿಟ್ಟನು. ಸಂಸೋನನು ನಗರ ದ್ವಾರದ ಬಾಗಿಲನ್ನು ಗಟ್ಟಿಯಾಗಿ ಹಿಡಿದು ಎಳೆದನು. ಕದಗಳು ಗೋಡೆಗಳಿಂದ ಕಿತ್ತುಬಂದವು. ಸಂಸೋನನು ಬಾಗಿಲಕದಗಳನ್ನೂ ಅದರ ನಿಲುವುಪಟ್ಟಿಗಳನ್ನೂ ಅಗುಳಿಗಳನ್ನೂ ಕಿತ್ತು ತನ್ನ ಹೆಗಲ ಮೇಲೆ ಹೊತ್ತು ಹೆಬ್ರೋನ್ ನಗರದ ಹತ್ತಿರವಿರುವ ಪರ್ವತ ಶಿಖರಕ್ಕೆ ತೆಗೆದುಕೊಂಡು ಹೋದನು.
ಸಂಸೋನ ಮತ್ತು ದೆಲೀಲಾ
4 ತರುವಾಯ ಸಂಸೋನನು ದೆಲೀಲಾ ಎಂಬ ಸ್ತ್ರೀಯನ್ನು ಪ್ರೀತಿಸಿದನು. ಅವಳು ಸೋರೇಕ್ ಕಣಿವೆಯವಳು.
5 ಫಿಲಿಷ್ಟಿಯ ಪ್ರಭುಗಳು ದೆಲೀಲಳ ಬಳಿಗೆ ಹೋಗಿ, “ಸಂಸೋನನು ಅಷ್ಟೊಂದು ಶಕ್ತಿಶಾಲಿಯಾಗಿರುವುದಕ್ಕೆ ಕಾರಣಗಳನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಅವನನ್ನು ಮರುಳುಗೊಳಿಸಿ ಅವನ ರಹಸ್ಯವನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡು. ಆಗ ನಾವು ಅವನನ್ನು ಸೋಲಿಸಿ, ಬಂಧಿಸಿ ನಮ್ಮ ಅಧೀನದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ನೀನು ಇದನ್ನು ಮಾಡಿದರೆ ನಮ್ಮಲ್ಲಿ ಪ್ರತಿಯೊಬ್ಬನೂ ನಿನಗೆ ಇಪ್ಪತ್ತೆಂಟು ಬೆಳ್ಳಿನಾಣ್ಯಗಳನ್ನು ಕೊಡುತ್ತೇವೆ” ಎಂದು ಹೇಳಿದರು.
6 ದೆಲೀಲಳು ಸಂಸೋನನಿಗೆ, “ನಿನಗೆ ಇಂಥ ಮಹಾಶಕ್ತಿ ಹೇಗೆ ಬಂತು? ನಿನ್ನನ್ನು ನಿರ್ಬಲಗೊಳಿಸಿ ಬಂಧಿಸುವುದು ಹೇಗೆ?” ಎಂದು ಕೇಳಿದಳು.
7 ಅದಕ್ಕೆ ಸಂಸೋನನು, “ಬಿಲ್ಲಿನ ಏಳು ಹೊಸತಂತಿಗಳಿಂದ ನನ್ನನ್ನು ಕಟ್ಟಿದರೆ ನಾನು ಬೇರೆ ಮನುಷ್ಯರಂತೆ ಬಲಹೀನನಾಗುತ್ತೇನೆ” ಎಂದು ಉತ್ತರಿಸಿದನು.
8 ಆಗ ಫಿಲಿಷ್ಟಿಯ ಅಧಿಪತಿಗಳು ದೆಲೀಲಳಿಗೆ ಬಿಲ್ಲಿನ ಏಳು ಹೊಸ ತಂತಿಗಳನ್ನು ತಂದುಕೊಟ್ಟರು. ಅವು ಇನ್ನೂ ಒಣಗಿರಲಿಲ್ಲ. ದೆಲೀಲಳು ಸಂಸೋನನನ್ನು ಬಿಲ್ಲಿನ ಆ ತಂತಿಗಳಿಂದ ಬಿಗಿದು ಕಟ್ಟಿದಳು. 9 ಪಕ್ಕದ ಕೋಣೆಯಲ್ಲಿ ಕೆಲವು ಜನ ಅಡಗಿಕೊಂಡಿದ್ದರು. ಆಗ ದೆಲೀಲಳು ಸಂಸೋನನಿಗೆ, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಹೇಳಿದಳು. ಆದರೆ ಸಂಸೋನನು ಸುಲಭವಾಗಿ ಆ ಬಿಲ್ಲಿನ ತಂತಿಗಳನ್ನು ಕಿತ್ತುಹಾಕಿದನು; ಸುಟ್ಟದಾರದಿಂದ ಬೂದಿ ಉದುರಿ ಬೀಳುವಂತೆ ಆ ತಂತಿಗಳು ಕಿತ್ತುಬಿದ್ದವು. ಹೀಗಾಗಿ ಫಿಲಿಷ್ಟಿಯರಿಗೆ ಸಂಸೋನನ ಬಲದ ರಹಸ್ಯ ತಿಳಿಯಲಿಲ್ಲ.
10 ಆಗ ದೆಲೀಲಳು ಸಂಸೋನನಿಗೆ, “ನೀನು ನನಗೆ ಸುಳ್ಳು ಹೇಳಿದೆ, ನನ್ನನ್ನು ವಂಚಿಸಿದೆ. ನಿನ್ನನ್ನು ಬಂಧಿಸುವದು ಹೇಗೆಂಬುದನ್ನು ದಯವಿಟ್ಟು ಹೇಳು” ಎಂದು ಕೇಳಿದಳು.
11 ಅದಕ್ಕೆ ಸಂಸೋನನು, “ಎಂದೂ ಉಪಯೋಗಿಸದ ಹೊಸ ಹಗ್ಗಗಳಿಂದ ನನ್ನನ್ನು ಕಟ್ಟಿದರೆ ನಾನು ಬೇರೆಯವರಂತೆ ನಿರ್ಬಲನಾಗುತ್ತೇನೆ” ಎಂದನು.
12 ದೆಲೀಲಳು ಕೆಲವು ಹೊಸ ಹಗ್ಗಗಳನ್ನು ತೆಗೆದುಕೊಂಡು ಸಂಸೋನನನ್ನು ಬಿಗಿದುಕಟ್ಟಿದಳು. ಕೆಲವು ಜನರು ಪಕ್ಕದ ಕೋಣೆಯಲ್ಲಿ ಅಡಗಿಕೊಂಡಿದ್ದರು. ದೆಲೀಲಳು, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಕೂಗಿದಳು. ಆದರೆ ಅವನು ದಾರಗಳನ್ನು ಕಿತ್ತುಹಾಕುವಂತೆ ಆ ಹಗ್ಗಗಳನ್ನು ಸುಲಭವಾಗಿ ಕಿತ್ತುಹಾಕಿದನು.
13 ಆಗ ದೆಲೀಲಳು ಸಂಸೋನನಿಗೆ, “ನೀನು ನನಗೆ ಪುನಃ ಸುಳ್ಳು ಹೇಳಿದೆ. ನೀನು ನನ್ನನ್ನು ವಂಚಿಸಿದೆ. ನಿನ್ನನ್ನು ಬಂಧಿಸುವುದು ಹೇಗೆಂಬುದನ್ನು ಈಗ ನನಗೆ ತಿಳಿಸು” ಎಂದು ಕೇಳಿದಳು.
ಸಂಸೋನನು, “ನನ್ನ ತಲೆಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದು ಕಟ್ಟಿದರೆ ನಾನು ಬೇರೆ ಮನುಷ್ಯರಂತೆ ದುರ್ಬಲನಾಗುತ್ತೇನೆ” ಎಂದು ಹೇಳಿದನು.
14 ಸಂಸೋನನು ಮಲಗಿಕೊಂಡಿರುವಾಗ ದೆಲೀಲಳು ಅವನ ತಲೆಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದಳು. ಆಮೇಲೆ ಆ ಮಗ್ಗವನ್ನು ಒಂದು ಗೂಟದಿಂದ ಭದ್ರಪಡಿಸಿದಳು. ಬಳಿಕ, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಮತ್ತೆ ಕೂಗಿಕೊಂಡಳು. ಸಂಸೋನನು ಗೂಟವನ್ನೂ ಮಗ್ಗವನ್ನೂ ಲಾಳಿಯನ್ನೂ ಕಿತ್ತುಹಾಕಿದನು.
15 ಆಗ ದೆಲೀಲಳು ಸಂಸೋನನಿಗೆ, “‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ನೀನು ಹೇಗೆ ಹೇಳಲು ಸಾಧ್ಯ? ನನ್ನನ್ನು ನೀನು ನಂಬುವುದೇ ಇಲ್ಲ. ನೀನು ನನಗೆ ನಿನ್ನ ರಹಸ್ಯವನ್ನು ತಿಳಿಸುವುದಿಲ್ಲ. ಮೂರನೆಯ ಸಲ ನೀನು ನನ್ನನ್ನು ವಂಚಿಸಿದೆ. ನೀನು ನನಗೆ ನಿನ್ನ ಶಕ್ತಿಯ ರಹಸ್ಯವನ್ನು ತಿಳಿಸಲಿಲ್ಲ” ಎಂದಳು. 16 ಅವಳು ಸಂಸೋನನನ್ನು ಪ್ರತಿದಿನ ಪೀಡಿಸತೊಡಗಿದಳು. ಅವನ ಶಕ್ತಿಯ ರಹಸ್ಯದ ಬಗ್ಗೆ ಅವಳು ಪದೇಪದೇ ಕೇಳುತ್ತಿದ್ದದರಿಂದ ಅವನಿಗೆ ಸಾಯುವಷ್ಟು ಬೇಸರವಾಯಿತು. 17 ಕೊನೆಗೆ ಸಂಸೋನನು ದೆಲೀಲಳಿಗೆ ಎಲ್ಲವನ್ನು ಹೇಳಿದನು. “ನಾನೆಂದೂ ನನ್ನ ತಲೆಕೂದಲನ್ನು ಕತ್ತರಿಸಿಕೊಂಡಿಲ್ಲ. ನಾನು ಹುಟ್ಟುವ ಮೊದಲೇ ನನ್ನನ್ನು ದೇವರಿಗೆ ಪ್ರತಿಷ್ಠಿಸಲಾಗಿತ್ತ್ತು. ಯಾರಾದರೂ ನನ್ನ ತಲೆಬೋಳಿಸಿದರೆ ನಾನು ನನ್ನ ಶಕ್ತಿಯನ್ನು ಕಳೆದುಕೊಳ್ಳುತ್ತೇನೆ. ನಾನು ಬೇರೆ ಮನುಷ್ಯರಷ್ಟೇ ದುರ್ಬಲನಾಗುತ್ತೇನೆ” ಎಂದು ಹೇಳಿದನು.
18 ಸಂಸೋನನು ತನ್ನ ರಹಸ್ಯವನ್ನು ತಿಳಿಸಿದನೆಂದು ದೆಲೀಲಳಿಗೆ ಗೊತ್ತಾಯಿತು. ಅವಳು ಫಿಲಿಷ್ಟಿಯ ಅಧಿಪತಿಗಳಿಗೆ ಸಂದೇಶವನ್ನು ಕಳುಹಿಸಿದಳು. ಅವಳು, “ಸಂಸೋನನು ನನಗೆ ಎಲ್ಲವನ್ನು ಹೇಳಿದ್ದಾನೆ, ಮತ್ತೊಮ್ಮೆ ಬನ್ನಿ” ಎಂದು ಹೇಳಿದಳು. ಫಿಲಿಷ್ಟಿಯ ಅಧಿಪತಿಗಳು ದೆಲೀಲಳ ಬಳಿಗೆ ಬಂದರು. ಅವರು ಅವಳಿಗೆ ಕೊಡುವುದಾಗಿ ಹೇಳಿದ್ದ ಹಣವನ್ನು ತಂದಿದ್ದರು.
19 ಸಂಸೋನನು ಅವಳ ತೊಡೆಯ ಮೇಲೆ ಮಲಗಿ ನಿದ್ರೆಮಾಡಿದನು. ಆಗ ಅವಳು ಸಂಸೋನನ ಏಳುಜಡೆಗಳನ್ನು ಬೋಳಿಸಲು ಒಬ್ಬ ಮನುಷ್ಯನನ್ನು ಒಳಗೆ ಕರೆದಳು. ಅವನು ಆ ಏಳು ಜಡೆಗಳನ್ನು ಬೋಳಿಸಲು, ಅವನು ಇತರರಂತೆ ದುರ್ಬಲನಾದನು. 20 ಆಮೇಲೆ ದೆಲೀಲಳು ಅವನನ್ನು, “ಸಂಸೋನನೇ, ಫಿಲಿಷ್ಟಿಯರು ನಿನ್ನನ್ನು ಬಂಧಿಸಲಿದ್ದಾರೆ” ಎಂದು ಕೂಗಿದಳು. ಅವನು ಎಚ್ಚೆತ್ತನು. “ಮುಂಚಿನಂತೆಯೇ ನಾನು ತಪ್ಪಿಸಿಕೊಳ್ಳುವೆನು” ಎಂದು ಅವನು ತಿಳಿದಿದ್ದನು. ಆದರೆ ಯೆಹೋವನು ಅವನನ್ನು ಬಿಟ್ಟುಹೋಗಿದ್ದಾನೆಂಬುದು ಅವನಿಗೆ ಗೊತ್ತಾಗಲಿಲ್ಲ.
21 ಫಿಲಿಷ್ಟಿಯರು ಸಂಸೋನನನ್ನು ಬಂಧಿಸಿ ಅವನ ಕಣ್ಣುಗಳನ್ನು ಕಿತ್ತು ಗಾಜಾ ನಗರಕ್ಕೆ ತೆಗೆದುಕೊಂಡು ಹೋದರು. ಅವನು ಓಡಿಹೋಗದಂತೆ ಅವನಿಗೆ ಸಂಕೋಲೆಗಳನ್ನು ಬಿಗಿದರು. ಅವರು ಸಂಸೋನನನ್ನು ಒಂದು ಸೆರೆಮನೆಯಲ್ಲಿಟ್ಟು ಧಾನ್ಯಬೀಸುವ ಕೆಲಸಕ್ಕೆ ಹಚ್ಚಿದರು. 22 ಆದರೆ ಸಂಸೋನನ ಕೂದಲುಗಳು ಪುನಃ ಬೆಳೆಯತೊಡಗಿದವು.
23 ಫಿಲಿಷ್ಟಿಯ ಅಧಿಪತಿಗಳು ಒಂದು ಉತ್ಸವವನ್ನು ಮಾಡಲು ಸೇರಿಬಂದಿದ್ದರು. ಅವರು ತಮ್ಮ ದೇವರಾದ ದಾಗೋನನಿಗೆ ಒಂದು ಮಹಾಯಜ್ಞವನ್ನು ಸಮರ್ಪಿಸಬೇಕೆಂದಿದ್ದರು. “ನಮ್ಮ ಶತ್ರುವಾದ ಸಂಸೋನನನ್ನು ಸೋಲಿಸಲು ನಮ್ಮ ದೇವರು ನಮಗೆ ಸಹಾಯ ಮಾಡಿದನು” ಎಂದು ಅವರು ಭಾವಿಸಿದ್ದರು. 24 ಫಿಲಿಷ್ಟಿಯರು ಸಂಸೋನನನ್ನು ನೋಡಿದ ಕೂಡಲೇ ತಮ್ಮ ದೇವರನ್ನು ಸ್ತುತಿಸಿದರು. ಅವರು,
“ಇವನು ನಮ್ಮ ಜನರನ್ನು ಹಾಳುಮಾಡಿದನು.
ಇವನು ನಮ್ಮ ಅನೇಕ ಜನರನ್ನು ಕೊಂದನು.
ಆದರೆ ನಮ್ಮ ದೇವರು ನಮ್ಮ ಶತ್ರುವನ್ನು
ಸೆರೆಹಿಡಿಯಲು ಸಹಾಯ ಮಾಡಿದನು”
ಎಂದು ಹಾಡಿದರು.
25 ಆ ಉತ್ಸವದಲ್ಲಿ ಜನರು ಸಂತೋಷವಾಗಿದ್ದರು. ಅವರು, “ಸಂಸೋನನನ್ನು ಕರೆದು ತನ್ನಿ. ನಾವು ಅವನ ತಮಾಷೆಯನ್ನು ನೋಡಬೇಕು” ಎಂದರು. ಅವರು ಸಂಸೋನನನ್ನು ಸೆರೆಮನೆಯಿಂದ ತಂದು ಅವನನ್ನು ಅಪಹಾಸ್ಯ ಮಾಡಿದರು. ಸಂಸೋನನನ್ನು ಅವರ ದೇವರಾದ ದಾಗೋನನ ಮಂದಿರದಲ್ಲಿ ಎರಡು ಕಂಬಗಳ ಮಧ್ಯದಲ್ಲಿ ನಿಲ್ಲಿಸಿದರು. 26 ಒಬ್ಬ ಸೇವಕನು ಸಂಸೋನನ ಕೈಯನ್ನು ಹಿಡಿದುಕೊಂಡಿದ್ದನು. “ಈ ಮಂದಿರಕ್ಕೆ ಆಧಾರವಾಗಿರುವ ಕಂಬಗಳ ಹತ್ತಿರ ನನ್ನನ್ನು ಕರೆದುಕೊಂಡು ಹೋಗು. ನಾನು ಅವುಗಳಿಗೆ ಒರಗಿಕೊಳ್ಳುತ್ತೇನೆ” ಎಂದು ಸಂಸೋನನು ಅವನನ್ನು ಕೇಳಿಕೊಂಡನು.
27 ಆ ಮಂದಿರದಲ್ಲಿ ಗಂಡಸರು ಹೆಂಗಸರು ಕಿಕ್ಕಿರಿದು ನೆರೆದಿದ್ದರು. ಫಿಲಿಷ್ಟಿಯರ ಅಧಿಪತಿಗಳೆಲ್ಲರೂ ಅಲ್ಲಿದ್ದರು. ಮಾಳಿಗೆಯ ಮೇಲೆ ಸುಮಾರು ಮೂರು ಸಾವಿರ ಹೆಂಗಸರು ಮತ್ತು ಗಂಡಸರು ಇದ್ದರು. ಅವರು ನಕ್ಕು ಸಂಸೋನನನ್ನು ಅಪಹಾಸ್ಯ ಮಾಡುತ್ತಿದ್ದರು. 28 ಆಗ ಸಂಸೋನನು ಯೆಹೋವನಿಗೆ, “ಸರ್ವಶಕ್ತನಾದ ಯೆಹೋವನೇ, ನನ್ನ ಕಡೆಗೆ ಗಮನ ಹರಿಸು. ದೇವರೇ, ದಯವಿಟ್ಟು ನನಗಿನ್ನೊಂದು ಸಲ ಶಕ್ತಿಯನ್ನು ಕೊಡು. ಫಿಲಿಷ್ಟಿಯರು ನನ್ನ ಎರಡು ಕಣ್ಣುಗಳನ್ನು ಕಿತ್ತುಹಾಕಿದ್ದಕ್ಕೆ ಇದೊಂದು ಸಲ ಅವರನ್ನು ಶಿಕ್ಷಿಸುತ್ತೇನೆ” ಎಂದು ಬೇಡಿಕೊಂಡನು. 29 ಆಮೇಲೆ ಸಂಸೋನನು ಇಡೀ ಮಂದಿರಕ್ಕೆ ಆಧಾರವಾಗಿದ್ದ ಎರಡು ಕಂಬಗಳ ಮಧ್ಯದಲ್ಲಿ ನಿಂತುಕೊಂಡನು. ಒಂದು ಕಂಬವನ್ನು ಬಲಗೈಯಿಂದಲೂ ಇನ್ನೊಂದು ಕಂಬವನ್ನು ಎಡಗೈಯಿಂದಲೂ ಹಿಡಿದು, 30 “ಈ ಫಿಲಿಷ್ಟಿಯರ ಜೊತೆ ನಾನೂ ಸಾಯಲು ಸಿದ್ಧ” ಎಂದು ಹೇಳಿ ಆ ಎರಡೂ ಕಂಬಗಳನ್ನು ತನ್ನ ಎಲ್ಲಾ ಶಕ್ತಿಯಿಂದ ಎಳೆಯುತ್ತಾ ಬಾಗಿದನು. ಆಗ ಮಂದಿರವು ಅಧಿಪತಿಗಳ ಮೇಲೂ ಅಲ್ಲಿದ್ದ ಜನರೆಲ್ಲರ ಮೇಲೂ ಕುಸಿದು ಬಿತ್ತು. ಈ ಪ್ರಕಾರ ಸಂಸೋನನು ತಾನು ಜೀವದಿಂದಿದ್ದಾಗ ಕೊಂದ ಜನರಿಗಿಂತ ಹೆಚ್ಚು ಜನರನ್ನು ತಾನು ಸಾಯುವಾಗ ಕೊಂದನು.
31 ಸಂಸೋನನ ಸಹೋದರರು ಮತ್ತು ಅವನ ತಂದೆಯ ಕುಟುಂಬದವರೆಲ್ಲರು ಬಂದು ಅವನ ದೇಹವನ್ನು ತೆಗೆದುಕೊಂಡು ಹೋಗಿ ಅವನ ತಂದೆಯ ಸಮಾಧಿಯಲ್ಲಿ ಹೂಳಿಟ್ಟರು. ಅವನ ತಂದೆಯ ಹೆಸರು ಮಾನೋಹ. ಆ ಸಮಾಧಿಯು ಚೊರ್ಗಕ್ಕೂ ಮತ್ತು ಎಷ್ಟಾವೋಲಿಗೂ ಮಧ್ಯದಲ್ಲಿದೆ. ಸಂಸೋನನು ಇಪ್ಪತ್ತು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು.
ಮಕೆದೋನಿಯಕ್ಕೆ ಮತ್ತು ಗ್ರೀಸಿಗೆ ಪೌಲನ ಪ್ರಯಾಣ
20 ಗಲಭೆಯು ನಿಂತುಹೋದ ಮೇಲೆ, ಪೌಲನು ಯೇಸುವಿನ ಶಿಷ್ಯರನ್ನು ಕರೆಯಿಸಿ ಅವರನ್ನು ಧೈರ್ಯಪಡಿಸಿದನು. ಬಳಿಕ ಪೌಲನು ಅಲ್ಲಿಂದ ಹೊರಟು ಮಕೆದೋನಿಯಾಕ್ಕೆ ಹೋದನು. 2 ಅವನು ಆ ಪ್ರದೇಶದಲ್ಲಿ ಪ್ರಯಾಣ ಮಾಡುತ್ತಾ ಅನೇಕ ಊರುಗಳಿಗೆ ಭೇಟಿನೀಡಿ, ಯೇಸುವಿನ ಶಿಷ್ಯರಿಗೆ ಅನೇಕ ಸಂಗತಿಗಳನ್ನು ತಿಳಿಸಿ ಬಲಪಡಿಸಿದನು. ಬಳಿಕ ಪೌಲನು ಗ್ರೀಸಿಗೆ (ಅಖಾಯ) ಹೋದನು. 3 ಅಲ್ಲಿ ಅವನು ಮೂರು ತಿಂಗಳವರೆಗೆ ಇದ್ದನು. ಅವನು ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ಧನಾಗಿದ್ದನು.
ಆದರೆ ಕೆಲವು ಯೆಹೂದ್ಯರು ಅವನಿಗೆ ವಿರೋಧವಾಗಿ ಯೋಜನೆ ಮಾಡಿದರು. ಆದ್ದರಿಂದ ಪೌಲನು ಸಿರಿಯಕ್ಕೆ ಮಕೆದೋನಿಯದ ಮೂಲಕ ಹಿಂತಿರುಗಿ ಹೋಗಲು ನಿರ್ಧರಿಸಿದನು. 4 ಕೆಲವು ಜನರು ಅವನೊಂದಿಗಿದ್ದರು. ಅವರು ಯಾರೆಂದರೆ: ಬೆರೋಯ ಪಟ್ಟಣದ ಪುರ್ರನ ಮಗನಾದ ಸೋಪತ್ರನು, ಥೆಸಲೋನಿಕ ಪಟ್ಟಣದ ಆರಿಸ್ತಾರ್ಕ ಮತ್ತು ಸೆಕುಂದ, ದರ್ಬೆ ಪಟ್ಟಣದ ಗಾಯ ಮತ್ತು ತಿಮೊಥೆಯ, ಅಲ್ಲದೆ ಏಷ್ಯಾದ ತುಖಿಕ ಹಾಗು ತ್ರೊಫಿಮ. 5 ಇವರು ಪೌಲನಿಗಿಂತ ಮುಂಚಿತವಾಗಿಯೇ ಹೋದರು. ಅವರು ನಮಗಾಗಿ ತ್ರೋವ ಪಟ್ಟಣದಲ್ಲಿ ಕಾಯುತ್ತಿದ್ದರು. 6 ಯೆಹೂದ್ಯರ ಹುಳಿ ರಹಿತ ರೊಟ್ಟಿ ಹಬ್ಬದ ನಂತರ ನಾವು ಫಿಲಿಪ್ಪಿ ಪಟ್ಟಣದ ಹಡಗಿನಲ್ಲಿ ಹೋದೆವು. ಐದು ದಿನಗಳಾದ ನಂತರ ನಾವು ಇವರನ್ನು ತ್ರೋವದಲ್ಲಿ ಸಂಧಿಸಿದೆವು. ಅಲ್ಲಿ ನಾವು ಏಳು ದಿನ ತಂಗಿದೆವು.
ತ್ರೋವಕ್ಕೆ ಪೌಲನ ಕೊನೆಯ ಭೇಟಿ
7 ಭಾನುವಾರದಂದು, ನಾವೆಲ್ಲರು ಪ್ರಭುವಿನ ರಾತ್ರಿ ಭೋಜನಕ್ಕೆ ಒಟ್ಟಾಗಿ ಸೇರಿದೆವು. ಸಭೆ ಸೇರಿಬಂದಿದ್ದ ಜನರೊಂದಿಗೆ ಪೌಲನು ಮಾತಾಡಿದನು. ಅವನು ಮರುದಿನ ಅಲ್ಲಿಂದ ಹೊರಡಬೇಕೆಂದು ಅಲೋಚಿಸಿಕೊಂಡಿದ್ದನು. ಪೌಲನು ಮಧ್ಯರಾತ್ರಿಯವರೆಗೂ ಮಾತಾಡುತ್ತಲೇ ಇದ್ದನು. 8 ನಾವೆಲ್ಲರೂ ಮೇಲಂತಸ್ತಿನ ಕೊಠಡಿಯೊಂದರಲ್ಲಿ ಸೇರಿ ಬಂದಿದ್ದೆವು. ಆ ಕೊಠಡಿಯಲ್ಲಿ ಅನೇಕ ದೀಪಗಳಿದ್ದವು. 9 ಯುತಿಕ ಎಂಬ ಯುವಕನು ಕಿಟಕಿಯಲ್ಲಿ ಕುಳಿತುಕೊಂಡಿದ್ದನು. ಪೌಲನು ಮಾತಾಡುತ್ತಲೇ ಇದ್ದನು. ಇತ್ತ ಯುವಕನು ಗಾಢವಾಗಿ ನಿದ್ರಿಸುತ್ತಾ ಮೂರನೆ ಅಂತಸ್ತಿನಿಂದ ಕೆಳಗಡೆ ಬಿದ್ದುಬಿಟ್ಟನು. ಜನರು ಕೆಳಗಿಳಿದು ಹೋಗಿ ಅವನನ್ನು ಎತ್ತಿ ನೋಡಿದಾಗ ಅವನು ಸತ್ತಿದ್ದನು.
10 ಪೌಲನು ಕೆಳಗಿಳಿದು ಅವನ ಬಳಿಗೆ ಹೋಗಿ, ಮೊಣಕಾಲೂರಿ ಅವನನ್ನು ಅಪ್ಪಿಕೊಂಡು, ಅಲ್ಲಿದ್ದ ವಿಶ್ವಾಸಿಗಳಿಗೆ, “ಚಿಂತಿಸಬೇಡಿ. ಇವನು ಮತ್ತೆ ಜೀವಂತನಾದನು” ಎಂದು ಹೇಳಿದನು. 11 ಪೌಲನು ಮತ್ತೆ ಮೇಲಂತಸ್ತಿಗೆ ಹೋಗಿ ರೊಟ್ಟಿಯನ್ನು ಮುರಿದು ಊಟಮಾಡಿದನು. ಪೌಲನು ಅವರೊಂದಿಗೆ ದೀರ್ಘಕಾಲ ಮಾತಾಡಿದನು. ಅಷ್ಟರಲ್ಲಿಯೇ ಮುಂಜಾನೆಯಾಗಿತ್ತು. ಬಳಿಕ ಪೌಲನು ಹೊರಟುಹೋದನು. 12 ಜನರು ಜೀವಂತನಾಗಿದ್ದ ಆ ಯುವಕನನ್ನು ಮನೆಗೆ ಕರೆದುಕೊಂಡು ಹೋದರು. ಇದರಿಂದ ಜನರಿಗೆ ಬಹಳ ಆದರಣೆಯಾಯಿತು.
ತ್ರೋವದಿಂದ ಮಿಲೇತಕ್ಕೆ ಪ್ರಯಾಣ
13 ನಾವು ಪೌಲನಿಗಿಂತ ಮುಂಚಿತವಾಗಿಯೇ ಅಸ್ಸೊಸಿ ಎಂಬ ಪಟ್ಟಣಕ್ಕೆ ನೌಕಾಯಾನ ಮಾಡಿದೆವು. ತಾನು ಭೂಮಾರ್ಗವಾಗಿ ಬರುವುದಾಗಿಯೂ ಅಸ್ಸೊಸಿನಲ್ಲಿ ನಮ್ಮನ್ನು ಸಂಧಿಸಿ ಅಲ್ಲಿಂದ ನಮ್ಮೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡುವುದಾಗಿಯೂ ಪೌಲನು ನಮಗೆ ತಿಳಿಸಿದ್ದನು. 14 ಅಂತೆಯೇ ನಾವು ಪೌಲನನ್ನು ಅಸ್ಸೊಸಿನಲ್ಲಿ ಸಂಧಿಸಿದೆವು. ಅಲ್ಲಿಂದ ಅವನು ನಮ್ಮೊಂದಿಗೆ ಹಡಗಿನಲ್ಲಿ ಪ್ರಯಾಣ ಮಾಡಿದನು. ನಾವೆಲ್ಲರೂ ಮಿತಿಲೇನಿ ಪಟ್ಟಣಕ್ಕೆ ಹೋದೆವು. 15 ಮರುದಿನ ನಾವು ಅಲ್ಲಿಂದ ನೌಕಾಯಾನ ಮಾಡಿ ಖಿಯೋಸ್ ದ್ವೀಪದ ಸಮೀಪದಲ್ಲಿದ್ದ ಸ್ಥಳವೊಂದಕ್ಕೆ ಬಂದೆವು. ಮರುದಿನ ಸಾಮೋಸ್ ದ್ವೀಪಕ್ಕೆ ನೌಕಾಯಾನ ಮಾಡಿದೆವು. ಅದರ ಮೂರನೆಯ ದಿನ ನಾವು ಮಿಲೇತ ಪಟ್ಟಣಕ್ಕೆ ಬಂದೆವು. 16 ಎಫೆಸದಲ್ಲಿ ತಂಗಬಾರದೆಂದು ಪೌಲನು ಆಗಲೇ ನಿರ್ಧಾರ ಮಾಡಿದ್ದನು. ಏಷ್ಯಾದಲ್ಲಿ ದೀರ್ಘಕಾಲ ತಂಗಲು ಅವನಿಗೆ ಇಷ್ಟವಿರಲಿಲ್ಲ. ಸಾಧ್ಯವಾದರೆ ಪಂಚಾಶತ್ತಮ ಹಬ್ಬಕ್ಕೆ ಜೆರುಸಲೇಮಿನಲ್ಲಿರಬೇಕೆಂದು ಅವನು ತನ್ನ ಪ್ರಯಾಣವನ್ನು ತ್ವರಿತಗೊಳಿಸಿದನು.
ಎಫೆಸದ ಹಿರಿಯರಿಗೆ ಪೌಲನ ಬುದ್ಧಿಮಾತು
17 ಪೌಲನು ಮಿಲೇತದಿಂದ ಒಂದು ಸಂದೇಶವನ್ನು ಎಫೆಸಕ್ಕೆ ಕಳುಹಿಸಿ ಅಲ್ಲಿನ ಸಭೆಯ ಹಿರಿಯರನ್ನು ತನ್ನ ಬಳಿಗೆ ಬರಮಾಡಿಕೊಂಡನು.
18 ಆ ಹಿರಿಯರು ಬಂದಾಗ ಪೌಲನು ಅವರಿಗೆ, “ನಾನು ಏಷ್ಯಾ ಪ್ರಾಂತ್ಯಕ್ಕೆ ಬಂದ ಮೊದಲನೆಯ ದಿನದಿಂದಲೂ ನೀವು ನನ್ನ ಜೀವಿತದ ಬಗ್ಗೆ ತಿಳಿದಿದ್ದೀರಿ. ನಾನು ನಿಮ್ಮೊಂದಿಗೆ ಇದ್ದ ಕಾಲದಲ್ಲೆಲ್ಲಾ ನಾನು ಯಾವ ರೀತಿಯಲ್ಲಿ ಜೀವಿಸಿದೆನೆಂಬುದು ನಿಮಗೆ ಗೊತ್ತಿದೆ. 19 ಯೆಹೂದ್ಯರು ನನಗೆ ವಿರೋಧವಾಗಿ ಮಾಡಿದ ಒಳಸಂಚುಗಳಿಂದ ನಾನು ಬಹಳ ಕಷ್ಟಪಡಬೇಕಾಯಿತು. ಅನೇಕ ಸಲ ಕಣ್ಣೀರಿಡಬೇಕಾಯಿತು. ಆದರೆ ನಾನು ಯಾವಾಗಲೂ ಪ್ರಭುವಿನ ಸೇವೆ ಮಾಡಿದೆನೆಂಬುದು ನಿಮಗೆ ಗೊತ್ತಿದೆ. ನಾನು ನನ್ನ ಬಗ್ಗೆ ಚಿಂತಿಸದೆ, 20 ನಿಮಗೆ ಒಳ್ಳೆಯದನ್ನೇ ಯಾವಾಗಲೂ ಮಾಡಿದೆನು. ನಾನು ನಿಮಗೆ ಯೇಸುವಿನ ಕುರಿತಾದ ಸುವಾರ್ತೆಯನ್ನು ಬಹಿರಂಗವಾಗಿ ಜನರೆದುರಿನಲ್ಲಿ ತಿಳಿಸಿದೆನು ಮತ್ತು ನಿಮ್ಮ ಮನೆಗಳಲ್ಲಿಯೂ ಸಹ ಬೋಧಿಸಿದೆನು. 21 ನಿಮ್ಮ ಹೃದಯಗಳನ್ನು ಮಾರ್ಪಡಿಸಿಕೊಂಡು ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ನಾನು ಎಲ್ಲಾ ಜನಾಂಗಗಳವರಿಗೆ ಅಂದರೆ ಯೆಹೂದ್ಯರಿಗೂ ಮತ್ತು ಗ್ರೀಕರಿಗೂ ತಿಳಿಸಿದೆನು. ನಮ್ಮ ಪ್ರಭುವಾದ ಯೇಸುವಿನಲ್ಲಿ ನಂಬಿಕೆ ಇಡಬೇಕೆಂದು ನಾನು ಅವರೆಲ್ಲರಿಗೂ ತಿಳಿಸಿದೆನು.
22 “ಆದರೆ ಈಗ ನಾನು ಪವಿತ್ರಾತ್ಮನಿಗೆ ವಿಧೇಯನಾಗಿ ಜೆರುಸಲೇಮಿಗೆ ಹೋಗಬೇಕು. ಅಲ್ಲಿ ನನಗೆ ಏನು ಸಂಭವಿಸುವುದೋ ತಿಳಿಯದು. 23 ಜೆರುಸಲೇಮಿನಲ್ಲಿ ತೊಂದರೆಗಳು ಮತ್ತು ಸೆರೆವಾಸವು ನನಗಾಗಿ ಕಾದಿವೆಯೆಂದು ಪವಿತ್ರಾತ್ಮನು ಪ್ರತಿಯೊಂದು ಪಟ್ಟಣದಲ್ಲಿಯೂ ನನಗೆ ಹೇಳುತ್ತಿರುವುದು ಮಾತ್ರ ಸ್ಪಷ್ಟವಾಗಿದೆ. 24 ನಾನು ನನ್ನ ಸ್ವಂತ ಪ್ರಾಣದ ಬಗ್ಗೆ ಚಿಂತಿಸುವುದಿಲ್ಲ. ಪ್ರಭುವಾದ ಯೇಸು ನನಗೆ ಕೊಟ್ಟಿರುವ ಕೆಲಸವನ್ನು ಪೂರೈಸುವುದೇ ನನಗೆ ಅತ್ಯಂತ ಮುಖ್ಯವಾಗಿದೆ. ದೇವರ ಕೃಪೆಯ ವಿಷಯವಾದ ಸುವಾರ್ತೆಯ ಬಗ್ಗೆ ಸಾಕ್ಷಿ ನೀಡುವುದೇ ನನ್ನ ಕೆಲಸವಾಗಿದೆ. ಆ ಕೆಲಸವನ್ನು ಮಾಡಿ ಪೂರೈಸುವುದೇ ನನ್ನ ಅಪೇಕ್ಷೆಯಾಗಿದೆ.
25 “ಈಗ ನನಗೆ ಕಿವಿಗೊಡಿ. ನಿಮ್ಮಲ್ಲಿ ಒಬ್ಬರಾಗಲಿ ನನ್ನನ್ನು ಮತ್ತೆಂದಿಗೂ ನೋಡುವುದಿಲ್ಲವೆಂದು ನನಗೆ ಗೊತ್ತಿದೆ. ನಿಮ್ಮೊಂದಿಗೆ ಇದ್ದ ಸಮಯದಲ್ಲೆಲ್ಲಾ ದೇವರ ರಾಜ್ಯದ ವಿಷಯವಾದ ಸುವಾರ್ತೆಯನ್ನು ನಾನು ನಿಮಗೆ ತಿಳಿಸಿದೆನು. 26 ಆದ್ದರಿಂದ ಇಂದು ನಾನು ನಿಮಗೆ ದೃಢವಾಗಿ ಹೇಳಬಹುದಾದ ಒಂದು ಸಂಗತಿಯೇನೆಂದರೆ, ನಿಮ್ಮಲ್ಲಿ ಯಾರಾದರೂ ರಕ್ಷಣೆ ಹೊಂದಿಲ್ಲದಿದ್ದರೆ ಅದಕ್ಕೆ ನಾನು ಹೊಣೆಯಲ್ಲ. 27 ಯಾಕೆಂದರೆ ದೇವರ ಅಪೇಕ್ಷೆಗನುಸಾರವಾಗಿ ನೀವು ತಿಳಿದುಕೊಳ್ಳಬೇಕಾದ ಪ್ರತಿಯೊಂದನ್ನೂ ನಾನು ನಿಮಗೆ ನಿಶ್ಚಯವಾಗಿ ತಿಳಿಸಿದ್ದೇನೆ. 28 ಆದ್ದರಿಂದ ನಿಮ್ಮ ವಿಷಯದಲ್ಲಿಯೂ ಪವಿತ್ರಾತ್ಮನು ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿಯೂ ಎಚ್ಚರಿಕೆಯಿಂದಿರಿ. ದೇವರು ತನ್ನ ಸ್ವಂತ ರಕ್ತದಿಂದ ಕೊಂಡುಕೊಂಡಿರುವ ಸಭೆಗೆ ನೀವು ಕುರುಬರಾಗಿದ್ದೀರಿ. 29 ನಾನು ಹೊರಟುಹೋದ ಮೇಲೆ ಬೇರೆಯವರು ನಿಮ್ಮ ಸಭೆಗೆ ಬರುತ್ತಾರೆಂದು ನನಗೆ ಗೊತ್ತಿದೆ. ಕ್ರೂರವಾದ ತೋಳಗಳಂತಿರುವ ಅವರು ಮಂದೆಯನ್ನು ನಾಶಮಾಡಲು ಪ್ರಯತ್ನಿಸುವರು. 30 ಅಲ್ಲದೆ, ನಿಮ್ಮ ಸಭೆಯ ಕೆಲವು ಜನರೇ ದುರ್ಬೋಧಕರಾಗಿ ಯೇಸುವಿನ ಶಿಷ್ಯರಲ್ಲಿ ಕೆಲವರನ್ನು ಸತ್ಯದಿಂದ ದೂರಕ್ಕೆ ನಡೆಸುವರು. 31 ಆದ್ದರಿಂದ ಎಚ್ಚರಿಕೆಯಿಂದಿರಿ! ನಾನು ಮೂರು ವರ್ಷಗಳ ಕಾಲ ನಿಮ್ಮೊಂದಿಗೆ ಇದ್ದೆನು. ಈ ಕಾಲಾವಧಿಯಲ್ಲಿ ನಾನು ನಿಮಗೆ ಹಗಲಿರುಳು ಉಪದೇಶಿಸುತ್ತಾ ನಿಮಗಾಗಿ ಕಣ್ಣೀರಿಡುತ್ತಾ ನಿಮ್ಮನ್ನು ಎಚ್ಚರಿಸಿದ್ದನ್ನು ಮರೆಯದಿರಿ.
32 “ಈಗ ನಾನು ನಿಮ್ಮನ್ನು ದೇವರಿಗೂ ಆತನ ಕೃಪಾವಾಕ್ಯಕ್ಕೂ ಒಪ್ಪಿಸಿಕೊಡುತ್ತಿದ್ದೇನೆ. ಆತನ ಕೃಪಾವಾಕ್ಯವು ನಿಮ್ಮ ಭಕ್ತಿಯನ್ನು ವೃದ್ಧಿಪಡಿಸಿ ಪರಿಶುದ್ಧರ ಬಾಧ್ಯತೆಯಲ್ಲಿ ಪಾಲುಗಾರರನ್ನಾಗಿ ಮಾಡುವುದು. 33 ನಾನು ನಿಮ್ಮೊಂದಿಗೆ ಇದ್ದಾಗ, ಯಾರ ಹಣವನ್ನಾಗಲಿ ಒಳ್ಳೆಯ ಬಟ್ಟೆಗಳನ್ನಾಗಲಿ ಎಂದೂ ಬಯಸಲಿಲ್ಲ. 34 ನಾನು ಯಾವಾಗಲೂ ನನ್ನ ಅಗತ್ಯತೆಗಳನ್ನು ಮತ್ತು ನನ್ನೊಂದಿಗಿರುವವರ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ದುಡಿಯುತ್ತಿದ್ದೆನು ಎಂಬುದು ನಿಮಗೆ ಗೊತ್ತಿದೆ. 35 ಕಷ್ಟಪಟ್ಟು ದುಡಿದು ದುರ್ಬಲರಿಗೆ ನೆರವಾಗಬೇಕೆಂದು ನಾನೇ ನಿಮಗೆ ಮಾದರಿಯಾಗಿ ತೋರಿಸಿಕೊಟ್ಟಿದ್ದೇನೆ. ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲೇ ಹೆಚ್ಚು ಸಂತೋಷ’ ಎಂಬ ಯೇಸುವಿನ ಮಾತನ್ನು ನಾವು ಮರೆಯಕೂಡದೆಂದು ನಿಮಗೆ ಉಪದೇಶಿಸಿದೆನು” ಎಂದು ಹೇಳಿದನು.
36 ಪೌಲನು ಈ ಸಂಗತಿಗಳನ್ನು ಹೇಳಿ ಮುಗಿಸಿದ ಮೇಲೆ ಮೊಣಕಾಲೂರಿ ಅವರೆಲ್ಲರೊಡನೆ ಪ್ರಾರ್ಥಿಸಿದನು. 37-38 ಅವರೆಲ್ಲರೂ ಬಹಳವಾಗಿ ಅತ್ತರು. “ನೀವು ನನ್ನನ್ನು ಮತ್ತೆಂದಿಗೂ ನೋಡುವುದಿಲ್ಲ”ವೆಂದು ಪೌಲನು ಹೇಳಿದ್ದರಿಂದ ಅವರು ಬಹಳ ದುಃಖಗೊಂಡಿದ್ದರು. ಅವರು ಪೌಲನನ್ನು ಅಪ್ಪಿಕೊಂಡು ಮುದ್ದಿಟ್ಟರು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.
ಬಾಬಿಲೋನಿನಲ್ಲಿದ್ದ ಯೆಹೂದದ ಸೆರೆಯಾಳುಗಳಿಗೆ ಒಂದು ಪತ್ರ
29 ಯೆರೆಮೀಯನು ಬಾಬಿಲೋನಿನಲ್ಲಿದ್ದ ಯೆಹೂದ್ಯ ಸೆರೆಯಾಳುಗಳಿಗೆ, ಅಂದರೆ ಹಿರಿಯನಾಯಕರಿಗೆ, ಯಾಜಕರಿಗೆ, ಪ್ರವಾದಿಗಳಿಗೆ ಮತ್ತು ಇನ್ನುಳಿದ ಸಮಸ್ತ ಜನರಿಗೆ ಪತ್ರವನ್ನು ಕಳುಹಿಸಿದನು. ಇವರನ್ನು ನೆಬೂಕದ್ನೆಚ್ಚರನು ಜೆರುಸಲೇಮಿನಿಂದ ಬಾಬಿಲೋನಿಗೆ ಸೆರೆಯಾಳುಗಳಾಗಿ ಕೊಂಡೊಯ್ದನು. 2 (ರಾಜನಾದ ಯೆಹೋಯಾಕೀನನನ್ನು, ರಾಜಮಾತೆಯನ್ನು, ಯೆಹೂದದ ಮತ್ತು ಜೆರುಸಲೇಮಿನ ಅಧಿಕಾರಿಗಳನ್ನು, ಮುಂದಾಳುಗಳನ್ನು, ಬಡಗಿಗಳನ್ನು ಮತ್ತು ಕಮ್ಮಾರರನ್ನು ಜೆರುಸಲೇಮಿನಿಂದ ತೆಗೆದುಕೊಂಡು ಹೋದ ಮೇಲೆ ಈ ಪತ್ರವನ್ನು ಕಳಿಸಲಾಯಿತು.) 3 ಚಿದ್ಕೀಯನು ಎಲ್ಲಾಸ ಮತ್ತು ಗೆಮರ್ಯರನ್ನು ರಾಜನಾದ ನೆಬೂಕದ್ನೆಚ್ಚರನ ಬಳಿಗೆ ಕಳಿಸಿದನು. ಚಿದ್ಕೀಯನು ಯೆಹೂದದ ರಾಜನಾಗಿದ್ದನು. ಎಲ್ಲಾಸನು ಶಾಫಾನನ ಮಗನಾಗಿದ್ದನು. ಗೆಮರ್ಯನು ಹಿಲ್ಕೀಯನ ಮಗನಾಗಿದ್ದನು. ಬಾಬಿಲೋನಿಗೆ ಕೊಂಡೊಯ್ಯುವಂತೆ ಯೆರೆಮೀಯನು ಅವರಿಗಾಗಿ ಪತ್ರವನ್ನು ಕೊಟ್ಟನು. ಆ ಪತ್ರದಲ್ಲಿ ಹೀಗೆ ಬರೆಯಲಾಗಿತ್ತು:
4 ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ತಾನು ಜೆರುಸಲೇಮಿನಿಂದ ಬಾಬಿಲೋನಿಗೆ ಬಂಧಿಗಳನ್ನಾಗಿ ಕಳುಹಿಸಿದ ಎಲ್ಲಾ ಜನರಿಗೆ ಈ ಮಾತುಗಳನ್ನು ಹೇಳುತ್ತಾನೆ. 5 “ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಿಸಿರಿ. ಆ ಪ್ರದೇಶದಲ್ಲಿ ನೆಲೆಸಿರಿ. ತೋಟಗಳನ್ನು ಬೆಳೆಸಿರಿ ಮತ್ತು ನೀವು ಬೆಳೆಸಿದ ಆಹಾರವನ್ನು ಸೇವಿಸಿರಿ. 6 ಮದುವೆ ಮಾಡಿಕೊಳ್ಳಿರಿ; ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆಯಿರಿ. ನಿಮ್ಮ ಗಂಡುಮಕ್ಕಳಿಗೂ ನಿಮ್ಮ ಹೆಣ್ಣುಮಕ್ಕಳಿಗೂ ಮದುವೆ ಮಾಡಿರಿ. ಅವರಿಗೂ ಗಂಡು ಮತ್ತು ಹೆಣ್ಣು ಮಕ್ಕಳಾಗಲಿ. ಅನೇಕ ಮಕ್ಕಳನ್ನು ಹೆತ್ತು ಬಾಬಿಲೋನಿನಲ್ಲಿ ಬಹುಸಂಖ್ಯಾತರಾಗಿ. ಅಲ್ಪಸಂಖ್ಯಾತರಾಗಬೇಡಿ. 7 ಅಂತೆಯೇ, ನಾನು ನಿಮ್ಮನ್ನು ಕಳುಹಿಸಿದ ನಗರಕ್ಕೆ ಒಳ್ಳೆಯದನ್ನು ಮಾಡಿರಿ. ನೀವು ವಾಸಮಾಡುತ್ತಿರುವ ನಗರಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ಏಕೆಂದರೆ ಆ ನಗರದಲ್ಲಿ ನೆಮ್ಮದಿಯಿದ್ದರೆ ನಿಮಗೂ ನೆಮ್ಮದಿ ಸಿಗುವುದು.” 8 ಇಸ್ರೇಲರ ದೇವರೂ, ಸರ್ವಶಕ್ತನೂ ಆಗಿರುವ ಯೆಹೋವನು, ಹೀಗೆನ್ನುತ್ತಾನೆ: “ನಿಮ್ಮ ಪ್ರವಾದಿಗಳು ಮತ್ತು ಮಾಟಮಂತ್ರಗಾರರು ನಿಮ್ಮನ್ನು ಮರುಳುಗೊಳಿಸದಿರಲಿ. ಅವರು ನೋಡುವ ಕನಸುಗಳಿಗೆ ಕಿವಿಗೊಡಬೇಡಿ. 9 ಅವರು ಸುಳ್ಳುಗಳನ್ನು ಬೋಧಿಸುತ್ತಿರುವರು. ಅವರ ಸಂದೇಶವು ನನ್ನಿಂದ ಬಂದಿದೆ ಎಂದು ಅವರು ಹೇಳುತ್ತಿರುವರು. ಆದರೆ ನಾನು ಅದನ್ನು ಕಳುಹಿಸಲಿಲ್ಲ.” ಈ ಸಂದೇಶವು ಯೆಹೋವನಿಂದ ಬಂದದ್ದು.
10 ಯೆಹೋವನು ಹೀಗೆನ್ನುತ್ತಾನೆ: “ಬಾಬಿಲೋನ್ ಎಪ್ಪತ್ತು ವರ್ಷಗಳವರೆಗೆ ಬಲಿಷ್ಠವಾಗಿರುವುದು. ಅನಂತರ ನಾನು ಬಾಬಿಲೋನಿನಲ್ಲಿ ವಾಸಮಾಡುತ್ತಿರುವ ನಿಮ್ಮ ಬಳಿಗೆ ಬಂದು ನನ್ನ ವಾಗ್ದಾನದಂತೆ ನಿಮ್ಮನ್ನು ಜೆರುಸಲೇಮಿಗೆ ಮತ್ತೆ ಕರೆದುಕೊಂಡು ಬರುವೆನು. 11 ನಾನು ನಿಮಗಾಗಿ ಹಾಕಿದ ಯೋಜನೆಗಳು ನನಗೆ ಗೊತ್ತಿರುವುದರಿಂದ ನಾನು ಹೀಗೆ ಹೇಳುತ್ತಿದ್ದೇನೆ.” ಇದು ಯೆಹೋವನ ಸಂದೇಶ. “ನಾನು ನಿಮಗಾಗಿ ಒಳ್ಳೆಯ ಯೋಜನೆಗಳನ್ನು ಹಾಕಿದ್ದೇನೆ. ನಿಮಗೆ ಕೆಟ್ಟದ್ದನ್ನು ಮಾಡುವ ವಿಚಾರ ನನಗಿಲ್ಲ. ನಾನು ನಿಮಗಾಗಿ ಆಶಾದಾಯಕವಾದ ಮತ್ತು ಒಳ್ಳೆಯ ಭವಿಷ್ಯದ ವಿಚಾರಗಳನ್ನಿಟ್ಟುಕೊಂಡಿದ್ದೇನೆ. 12 ಆಗ ನೀವು ನನ್ನಲ್ಲಿ ಮೊರೆಯಿಡುವಿರಿ. ನೀವು ನನ್ನಲ್ಲಿಗೆ ಬಂದು ನನ್ನನ್ನು ಪ್ರಾರ್ಥಿಸಿರಿ; ಆಗ ನಾನು ನಿಮಗೆ ಕಿವಿಗೊಡುವೆನು. 13 ನೀವು ನನ್ನನ್ನು ಹುಡುಕುವಿರಿ. ನೀವು ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ. 14 ನಾನು ನಿಮಗೆ ದೊರೆಯುವೆನು.” ಇದು ಯೆಹೋವನ ನುಡಿ. “ನಾನು ನಿಮ್ಮನ್ನು ನಿಮ್ಮ ಬಂಧನದಿಂದ ಬಿಡಿಸಿ ಕರೆದುತರುವೆನು. ನಾನು ಈ ಸ್ಥಳವನ್ನು ಬಿಡಲು ನಿಮಗೆ ಒತ್ತಾಯಿಸಿದೆ. ಆದರೆ ನಾನು ನಿಮ್ಮನ್ನು ಕಳುಹಿಸಿದ್ದ ಎಲ್ಲಾ ಜನಾಂಗಗಳಿಂದ ಮತ್ತು ಎಲ್ಲಾ ಸ್ಥಳಗಳಿಂದ ನಿಮ್ಮನ್ನು ಒಟ್ಟುಗೂಡಿಸಿ ಈ ಸ್ಥಳಕ್ಕೆ ಕರೆದು ತರುವೆನು.” ಇದು ಯೆಹೋವನ ನುಡಿ.
15 “ಆದರೆ ಯೆಹೋವನು ನಮಗೆ ಬಾಬಿಲೋನಿನಲ್ಲಿಯೇ ಪ್ರವಾದಿಗಳನ್ನು ಕೊಟ್ಟಿದ್ದಾನೆ” ಎಂದು ನೀವು ಹೇಳಬಹುದು. 16 ಬಾಬಿಲೋನಿಗೆ ತೆಗೆದುಕೊಂಡು ಹೋಗದ ನಿಮ್ಮ ಆಪ್ತರ ಬಗ್ಗೆ ಯೆಹೋವನು ಹೀಗೆನ್ನುತ್ತಾನೆ. ಈಗ ದಾವೀದನ ಸಿಂಹಾಸನಾರೂಢನಾದ ರಾಜನ ವಿಷಯವಾಗಿಯೂ ಇನ್ನೂ ಜೆರುಸಲೇಮ್ ನಗರದಲ್ಲಿಯೇ ಇರುವ ಜನರ ವಿಷಯವಾಗಿಯೂ ಹೇಳುತ್ತಿರುವೆನು. 17 ಸರ್ವಶಕ್ತನಾದ ಯೆಹೋವನು ಹೇಳಿದನು: “ಇನ್ನೂ ಜೆರುಸಲೇಮಿನಲ್ಲಿಯೇ ಇದ್ದ ಜನರ ವಿರುದ್ಧ ನಾನು ಬೇಗನೆ ಖಡ್ಗವನ್ನು, ಹಸಿವನ್ನು ಮತ್ತು ಭಯಂಕರವಾದ ವ್ಯಾಧಿಯನ್ನು ಕಳುಹಿಸುವೆನು. ನಾನು ಅವರನ್ನು, ಅತೀ ಕೊಳೆತು ತಿನ್ನಲಾಗದ ಅಂಜೂರದ ಹಣ್ಣುಗಳಂತೆ ಮಾಡುವೆನು. 18 ಇನ್ನೂ ಜೆರುಸಲೇಮಿನಲ್ಲಿರುವ ಜನರಿಗೆ ಖಡ್ಗ, ಹಸಿವು ಮತ್ತು ಭಯಂಕರವಾದ ವ್ಯಾಧಿಗಳಿಂದೊಡಗೂಡಿ ಬೆನ್ನಟ್ಟುವೆನು. ಆ ಜನರ ದುರ್ಗತಿಯನ್ನು ನೋಡಿ ಭೂಲೋಕದ ಸಮಸ್ತ ರಾಜ್ಯಗಳಿಗೆ ಭಯ ಉಂಟಾಗುವಂತೆ ಮಾಡುವೆನು. ಆ ಜನರನ್ನು ನಾಶಮಾಡುವೆನು. ನಡೆದ ವಿಷಯಗಳ ಬಗ್ಗೆ ಕೇಳಿ ಜನರು ಬೆರಗಾಗಿ ಸಿಳ್ಳುಹಾಕುವರು. ಯಾರಿಗಾದರೂ, ಕೇಡಾಗಲಿ ಎಂದು ಹೇಳಬೇಕಾದರೆ ಜನರು ಅವರ ಉದಾಹರಣೆಯನ್ನು ಕೊಡುವರು. ನಾನು ಅವರನ್ನು ಅಟ್ಟಿದ ಎಲ್ಲೆಡೆಯಲ್ಲಿಯೂ ಜನರು ಅವರನ್ನು ಅವಮಾನಗೊಳಿಸುವರು. 19 ಜೆರುಸಲೇಮಿನವರು ನನ್ನ ಸಂದೇಶಕ್ಕೆ ಕಿವಿಗೊಟ್ಟಿಲ್ಲವಾದ ಕಾರಣ ನಾನು ಹಾಗೆಲ್ಲ ನಡೆಯುವಂತೆ ಮಾಡುವೆನು” ಇದು ಯೆಹೋವನ ನುಡಿ. “ನಾನು ಮತ್ತೆಮತ್ತೆ ನನ್ನ ಸಂದೇಶವನ್ನು ಅವರಿಗೆ ಕೊಟ್ಟೆ. ಆ ಜನರಿಗೆ ಸಂದೇಶಗಳನ್ನು ಕೊಡುವದಕ್ಕಾಗಿ ನನ್ನ ಸೇವಕರಾದ ಪ್ರವಾದಿಗಳನ್ನು ಉಪಯೋಗಿಸಿಕೊಂಡೆ. ಆದರೆ ಆ ಜನರು ಕೇಳಲಿಲ್ಲ.” ಇದು ಯೆಹೋವನ ನುಡಿ. 20 “ನೀವು ಬಂಧಿಗಳು. ನಾನು ನಿಮ್ಮನ್ನು ಜೆರುಸಲೇಮ್ ಬಿಟ್ಟು ಬಾಬಿಲೋನಿಗೆ ಹೋಗುವಂತೆ ಒತ್ತಾಯಿಸಿದೆ. ಆದ್ದರಿಂದ ಯೆಹೋವನ ಸಂದೇಶವನ್ನು ಕೇಳಿರಿ.”
21 ಕೊಲಾಯನ ಮಗನಾದ ಅಹಾಬ ಮತ್ತು ಮಾಸೇಯನ ಮಗನಾದ ಚಿದ್ಕೀಯ ಇವರ ವಿಷಯವಾಗಿ ಸರ್ವಶಕ್ತನಾದ ಯೆಹೋವನು ಹೀಗೆಂದನು: “ಇವರಿಬ್ಬರು ನಿಮಗೆ ಸುಳ್ಳುಪ್ರವಾದನೆ ಮಾಡಿದ್ದಾರೆ. ಅವರ ಸಂದೇಶವು ನನ್ನಿಂದ ಬಂದದ್ದು ಎಂದು ಅವರು ಹೇಳಿದ್ದಾರೆ. ಆದರೆ ಅವರು ಹೇಳಿದ್ದು ಸುಳ್ಳು. ನಾನು ಆ ಇಬ್ಬರು ಪ್ರವಾದಿಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸುವೆನು. ನೆಬೂಕದ್ನೆಚ್ಚರನು ಬಾಬಿಲೋನಿನಲ್ಲಿ ಬಂಧಿಯಾಗಿರುವ ನಿಮ್ಮೆಲ್ಲರ ಸಮ್ಮುಖದಲ್ಲಿ ಆ ಇಬ್ಬರು ಪ್ರವಾದಿಗಳನ್ನು ಕೊಲ್ಲುವನು. 22 ಯೆಹೂದದ ಬಂಧಿಗಳೆಲ್ಲಾ ಬೇರೆಯವರಿಗೆ ಕೇಡಾಗಲಿ ಎಂದು ಕೇಳಿಕೊಳ್ಳುವಾಗ ಆ ಜನರ ಉದಾಹರಣೆ ಕೊಡುವರು. ಆ ಬಂಧಿಗಳು ಹೀಗೆನ್ನುವರು: ‘ಬಾಬಿಲೋನಿನ ರಾಜನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಮತ್ತು ಅಹಾಬನ ಗತಿಯನ್ನು ಯೆಹೋವನು ನಿನಗೆ ತರಲಿ.’ 23 ಆ ಪ್ರವಾದಿಗಳಿಬ್ಬರು ಇಸ್ರೇಲಿನಲ್ಲಿ ಹೆಚ್ಚಿನ ದುರಾಚಾರವನ್ನು ನಡೆಸಿದರು. ಅವರು ತಮ್ಮ ನೆರೆಯವರ ಹೆಂಡತಿಯರೊಂದಿಗೆ ವ್ಯಭಿಚಾರ ಮಾಡಿದರು. ಅವರು ಸುಳ್ಳುಗಳನ್ನು ಹೇಳಿದರು. ಆ ಸುಳ್ಳುಗಳನ್ನು ಯೆಹೋವನಾದ ನನ್ನ ಸಂದೇಶವೆಂದು ಹೇಳಿದರು. ಹಾಗೆ ಮಾಡಲು ನಾನು ಅವರಿಗೆ ಹೇಳಿಲ್ಲ, ಅವರು ಏನು ಮಾಡಿದ್ದಾರೆಂಬುದನ್ನು ನಾನು ಬಲ್ಲೆ. ಅದಕ್ಕೆ ನಾನೇ ಸಾಕ್ಷಿ.” ಇದು ಯೆಹೋವನ ಸಂದೇಶ.
ಶೆಮಾಯನಿಗೆ ದೇವರ ಸಂದೇಶ
24 (ಯೆಹೋವನು ಯೆರೆಮೀಯನಿಗೆ ಈ ಅಪ್ಪಣೆಯನ್ನು ಕೊಟ್ಟನು.) ನೀನು ನೆಹೆಲಾಮ್ಯನಾದ ಶೆಮಾಯನಿಗೆ ಕೂಡ ಒಂದು ಸಂದೇಶವನ್ನು ಕೊಡು. 25 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: “ಶೆಮಾಯನೇ, ಜೆರುಸಲೇಮಿನಲ್ಲಿರುವ ಎಲ್ಲಾ ಜನರಿಗೆ ನೀನು ಪತ್ರವನ್ನು ಕಳುಹಿಸಿದೆ. ನೀನು ಮಾಸೇಯನ ಮಗನಾಗಿರುವ ಯಾಜಕನಾದ ಚೆಫನ್ಯನಿಗೂ ಮತ್ತು ಎಲ್ಲಾ ಯಾಜಕರಿಗೂ ಪತ್ರಗಳನ್ನು ಕಳುಹಿಸಿದೆ. ಆ ಪತ್ರಗಳನ್ನು ಯೆಹೋವನ ಆದೇಶದ ಪ್ರಕಾರ ಕಳುಹಿಸದೆ, ನಿನ್ನ ಹೆಸರಿನಿಂದ ಕಳುಹಿಸಿದೆ. 26 ಶೆಮಾಯನೇ, ನೀನು ಚೆಫನ್ಯನಿಗೆ ಬರೆದ ಪತ್ರದಲ್ಲಿ ಹೀಗೆ ಹೇಳಿರುವೆ: ‘ಚೆಫನ್ಯನೇ, ಯೆಹೋವನು ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ಯಾಜಕನನ್ನಾಗಿ ನೇಮಿಸಿದ್ದಾನೆ. ನೀನು ಯೆಹೋವನ ಆಲಯದ ಮೇಲ್ವಿಚಾರಕನಾಗಿರುವೆ. ಹುಚ್ಚನಂತೆ ವರ್ತಿಸುವ ಮತ್ತು ಪ್ರವಾದಿಯಂತೆ ನಟಿಸುವ ವ್ಯಕ್ತಿಯನ್ನು ನೀನು ಬಂಧಿಸಬೇಕು, ಅವನಿಗೆ ಕೋಳಹಾಕಿ ಕೊರಳಿಗೆ ಕಬ್ಬಿಣದ ಕಂಠಪಟ್ಟಿಯನ್ನು ಹಾಕಬೇಕು. 27 ಈಗ ಯೆರೆಮೀಯನು ಪ್ರವಾದಿಯಂತೆ ನಟಿಸುತ್ತಿದ್ದಾನೆ. ನೀನು ಅವನನ್ನು ಏಕೆ ಬಂಧಿಸಲಿಲ್ಲ? 28 ಯೆರೆಮೀಯನು ಬಾಬಿಲೋನಿನಲ್ಲಿದ್ದ ನಮಗೆ ಈ ಸಂದೇಶವನ್ನು ಕಳುಹಿಸಿದ್ದಾನೆ: ಬಾಬಿಲೋನಿನಲ್ಲಿರುವ ನೀವು ಅಲ್ಲಿ ಬಹಳ ಕಾಲದವರೆಗೆ ಇರುವಿರಿ. ಆದ್ದರಿಂದ ಮನೆಗಳನ್ನು ಕಟ್ಟಿಕೊಂಡು ಅಲ್ಲಿ ನೆಲೆಸಿರಿ; ತೋಟಗಳನ್ನು ಬೆಳೆಸಿರಿ; ಮತ್ತು ನೀವು ಬೆಳೆದದ್ದನ್ನು ಆಹಾರವನ್ನಾಗಿ ಬಳಸಿರಿ.’”
29 ಯಾಜಕನಾದ ಚೆಫನ್ಯನು ಈ ಕಾಗದವನ್ನು ಪ್ರವಾದಿಯಾದ ಯೆರೆಮೀಯನ ಮುಂದೆ ಓದಿದನು. 30 ಆಗ ಯೆರೆಮೀಯನಿಗೆ ಯೆಹೋವನ ಸಂದೇಶವು ಬಂದಿತು. 31 “ಯೆರೆಮೀಯನೇ, ಬಾಬಿಲೋನಿನಲ್ಲಿರುವ ಎಲ್ಲಾ ಬಂಧಿಗಳಿಗೆ ಈ ಸಂದೇಶವನ್ನು ಕಳುಹಿಸು, ‘ನೆಹೆಲಾಮ್ಯನಾದ ಶೆಮಾಯನ ವಿಷಯದಲ್ಲಿ ಯೆಹೋವನು ಹೀಗೆನ್ನುವನು: ಶೆಮಾಯನು ನಿಮಗೆ ಪ್ರವಾದನೆ ಮಾಡಿದ್ದಾನೆ. ಆದರೆ ನಾನು ಅವನನ್ನು ಕಳುಹಿಸಲಿಲ್ಲ. ನೀವು ಸುಳ್ಳನ್ನು ನಂಬುವಂತೆ ಅವನು ಮಾಡಿದ್ದಾನೆ. 32 ಆದ್ದರಿಂದ ಅವನನ್ನು ನಾನು ತಕ್ಷಣ ದಂಡಿಸುತ್ತೇನೆ. ನಾನು ಅವನ ಕುಟುಂಬವನ್ನು ಸಂಪೂರ್ಣವಾಗಿ ನಾಶಮಾಡುತ್ತೇನೆ. ನಾನು ನನ್ನ ಜನರಿಗಾಗಿ ಮಾಡುವ ಒಳ್ಳೆಯವುಗಳಲ್ಲಿ ಅವನು ಪಾಲು ಹೊಂದುವುದಿಲ್ಲ.’” ಇದು ಯೆಹೋವನ ನುಡಿ. “‘ಶೆಮಾಯನು, ಜನರನ್ನು ಯೆಹೋವನಾದ ನನ್ನ ವಿರುದ್ಧ ತಿರುಗುವಂತೆ ಮಾಡಿದ್ದರಿಂದ ನಾನು ಅವನನ್ನು ದಂಡಿಸುವೆನು.’”
ಪಿಲಾತನಿಂದ ಯೇಸುವಿನ ವಿಚಾರಣೆ
(ಮತ್ತಾಯ 27:1-2,11-14; ಲೂಕ 23:1-5; ಯೋಹಾನ 18:28-38)
15 ಮುಂಜಾನೆ ನಸುಕಿನಲ್ಲೇ, ಮಹಾಯಾಜಕರು, ಹಿರಿಯ ಯೆಹೂದ್ಯನಾಯಕರು ಧರ್ಮೋಪದೇಶಕರು ಮತ್ತು ಯೆಹೂದ್ಯ ಸಮಿತಿಯವರು ಸಭೆಸೇರಿ ಯೇಸುವಿಗೆ ಮಾಡಬೇಕಾದದ್ದನ್ನು ನಿರ್ಧರಿಸಿದರು. ಅವರು ಯೇಸುವನ್ನು ಬಂಧಿಸಿ, ರಾಜ್ಯಪಾಲನಾದ ಪಿಲಾತನ ಬಳಿಗೆ ಕರೆದುಕೊಂಡು ಹೋಗಿ ಅವನಿಗೆ ಒಪ್ಪಿಸಿದರು.
2 ಪಿಲಾತನು ಯೇಸುವಿಗೆ, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು.
ಯೇಸು, “ಹೌದು, ನೀನು ಹೇಳಿದ್ದು ಸರಿ” ಎಂದು ಉತ್ತರಿಸಿದನು.
3 ಮಹಾಯಾಜಕರು ಯೇಸುವಿನ ಮೇಲೆ ಅನೇಕ ತಪ್ಪುಗಳನ್ನು ಹೊರಿಸಿದರು. 4 ಆದ್ದರಿಂದ ಪಿಲಾತನು ಯೇಸುವಿಗೆ ಮತ್ತೊಮ್ಮೆ, “ಈ ಜನರು ನಿನ್ನ ಮೇಲೆ ಅನೇಕ ಅಪರಾಧಗಳನ್ನು ಹೊರಿಸುತ್ತಿದ್ದರೂ ನೀನು ಏಕೆ ಉತ್ತರಿಸುವುದಿಲ್ಲ?” ಎಂದು ಕೇಳಿದನು.
5 ಆದರೆ ಯೇಸು ಮೌನವಾಗಿದ್ದನು. ಪಿಲಾತನಿಗೆ ಇದರಿಂದ ಬಹಳ ಆಶ್ಚರ್ಯವಾಯಿತು.
ಯೇಸುವನ್ನು ಬಿಡಿಸಲು ಪಿಲಾತನು ಮಾಡಿದ ವಿಫಲ ಪ್ರಯತ್ನ
(ಮತ್ತಾಯ 27:15-31; ಲೂಕ 23:13-25; ಯೋಹಾನ 18:39–19:16)
6 ಪ್ರತಿ ವರ್ಷವೂ ಪಸ್ಕಹಬ್ಬದ ಸಮಯದಲ್ಲಿ ಜನರು ಬಯಸಿದ ಕೈದಿಯನ್ನು ರಾಜ್ಯಪಾಲನು ಸೆರೆಮನೆಯಿಂದ ಬಿಡುಗಡೆ ಮಾಡುತ್ತಿದ್ದನು. 7 ಆ ಸಮಯದಲ್ಲಿ ಬರಬ್ಬ ಎಂಬವನು ದಂಗೆಕೋರರೊಂದಿಗೆ ಸೆರೆಮನೆಯಲ್ಲಿದ್ದನು. ಈ ದಂಗೆಕೋರರು ಒಂದು ಗಲಭೆಯ ಸಮಯದಲ್ಲಿ ಕೊಲೆ ಮಾಡಿದ ಆಪಾದನೆಗೆ ಗುರಿಯಾಗಿದ್ದರು.
8 ಜನರು ಪಿಲಾತನ ಬಳಿಗೆ, ಎಂದಿನಂತೆ ತಮಗಾಗಿ ಒಬ್ಬ ಕೈದಿಯನ್ನು ಬಿಡುಗಡೆ ಮಾಡಬೇಕೆಂದು ಕೇಳಿದರು. 9 ಪಿಲಾತನು ಜನರಿಗೆ, “ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ಬಯಸುತ್ತೀರಾ?” ಎಂದು ಕೇಳಿದನು. 10 ಮಹಾಯಾಜಕರು ಹೊಟ್ಟೆಕಿಚ್ಚಿನಿಂದ ಯೇಸುವನ್ನು ಬಂಧಿಸಿ ತನಗೆ ಒಪ್ಪಿಸಿದ್ದಾರೆಂಬುದು ಪಿಲಾತನಿಗೆ ತಿಳಿದಿತ್ತು. 11 ಆದರೆ ಯೇಸುವನ್ನು ಬಿಡುಗಡೆ ಮಾಡದೆ ಬರಬ್ಬನನ್ನು ಬಿಡುಗಡೆ ಮಾಡುವಂತೆ ಪಿಲಾತನನ್ನು ಕೇಳಿಕೊಳ್ಳಬೇಕೆಂದು ಮಹಾಯಾಜಕರು ಜನರನ್ನು ಪ್ರೇರೇಪಿಸಿದರು.
12 ಪಿಲಾತನು ಜನರಿಗೆ ಮತ್ತೆ “ಯೆಹೂದ್ಯರ ರಾಜನೆಂದು ನೀವು ಕರೆಯುವ ಈ ಮನುಷ್ಯನನ್ನು ನಾನೇನು ಮಾಡಲಿ?” ಎಂದು ಕೇಳಿದನು.
13 ಜನರು, “ಅವನನ್ನು ಶಿಲುಬೆಗೇರಿಸು!” ಎಂದು ಆರ್ಭಟಿಸಿದರು.
14 ಪಿಲಾತನು, “ಏಕೆ? ಅವನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಿದನು.
ಅದಕ್ಕೆ ಜನರು, “ಅವನನ್ನು ಶಿಲುಬೆಗೇರಿಸು!” ಎಂದು ಜೋರಾಗಿ ಆರ್ಭಟಿಸಿದರು.
15 ಪಿಲಾತನು ಜನರನ್ನು ಸಂತೋಷಪಡಿಸಲು ಬಯಸಿ ಅವರಿಗಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು ಮತ್ತು ಕೊರಡೆಗಳಿಂದ ಹೊಡೆದು ಶಿಲುಬೆಗೇರಿಸುವುದಕ್ಕಾಗಿ ಯೇಸುವನ್ನು ಸೈನಿಕರಿಗೆ ಒಪ್ಪಿಸಿದನು.
16 ಪಿಲಾತನ ಸೈನಿಕರು ಯೇಸುವನ್ನು ರಾಜಭವನದ ಅಂಗಳದೊಳಕ್ಕೆ ಕೊಂಡೊಯ್ದು ಇತರ ಸೈನಿಕರನ್ನೆಲ್ಲಾ ಒಟ್ಟಿಗೆ ಕರೆದರು. 17 ಸೈನಿಕರು ಯೇಸುವಿನ ಮೇಲೆ ಕಡುಕೆಂಪಾದ ನಿಲುವಂಗಿಯನ್ನು ಹಾಕಿ ಮುಳ್ಳಿನ ಬಳ್ಳಿಗಳಿಂದ ಒಂದು ಕಿರೀಟ ಮಾಡಿ ಯೇಸುವಿನ ತಲೆಯ ಮೇಲೆ ಇಟ್ಟರು. 18 ನಂತರ ಅವರು ಯೇಸುವಿಗೆ, “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ!” ಎಂದರು. 19 ಸೈನಿಕರು ಆತನ ತಲೆಯ ಮೇಲೆ ಅನೇಕ ಸಾರಿ ಬೆತ್ತದಿಂದ ಹೊಡೆದು ಆತನ ಮೇಲೆ ಉಗುಳಿದರು. ನಂತರ ಅವರು ಯೇಸುವಿನ ಮುಂದೆ ಮೊಣಕಾಲೂರಿ, ಆತನನ್ನು ಆರಾಧಿಸುವಂತೆ ನಟಿಸುತ್ತಾ ಪರಿಹಾಸ್ಯ ಮಾಡಿದರು. 20 ಆ ಬಳಿಕ ಸೈನಿಕರು ಕಡುಕೆಂಪಾದ ನಿಲುವಂಗಿಯನ್ನು ತೆಗೆದುಬಿಟ್ಟು, ಆತನ ಬಟ್ಟೆಗಳನ್ನೇ ಮತ್ತೆ ತೊಡಿಸಿದರು. ನಂತರ ಅವರು ಯೇಸುವನ್ನು ಶಿಲುಬೆಗೇರಿಸಲು ಕರೆದುಕೊಂಡು ಹೋದರು.
ಶಿಲುಬೆಗೇರಿಸಲ್ಪಟ್ಟ ಯೇಸು
(ಮತ್ತಾಯ 27:32-44; ಲೂಕ 23:26-43; ಯೋಹಾನ 19:17-27)
21 ಆಗ ಸಿರೇನ್ ಪಟ್ಟಣದ ಸಿಮೋನ ಎಂಬವನು ಹೊಲದಿಂದ ಬರುತ್ತಿದ್ದನು. ಅವನು ಅಲೆಕ್ಸಾಂಡರ್ ಮತ್ತು ರೂಫಸ್ ಎಂಬವರ ತಂದೆ. ಸೈನಿಕರು ಯೇಸುವಿನ ಶಿಲುಬೆಯನ್ನು ಹೊರುವಂತೆ ಸಿಮೋನನನ್ನು ಬಲವಂತ ಮಾಡಿದರು. 22 ಅವರು ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಹೋದರು. (ಗೊಲ್ಗೊಥ ಎಂದರೆ “ಕಪಾಲ ಸ್ಥಳ.”) 23 ಗೊಲ್ಗೊಥದಲ್ಲಿ ಸೈನಿಕರು ಯೇಸುವಿಗೆ ರಕ್ತಬೋಳ ಮಿಶ್ರಿತವಾದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಆದರೆ ಯೇಸು ಅದನ್ನು ಕುಡಿಯಲಿಲ್ಲ. 24 ಸೈನಿಕರು ಯೇಸುವನ್ನು ಶಿಲುಬೆಗೆ ನೇತುಹಾಕಿ, ಮೊಳೆಗಳನ್ನು ಜಡಿದರು. ನಂತರ ಸೈನಿಕರು ಚೀಟು ಹಾಕಿ ಯೇಸುವಿನ ಬಟ್ಟೆಗಳನ್ನು ತಮ್ಮಲ್ಲಿ ಹಂಚಿಕೊಂಡರು.
25 ಅವರು ಯೇಸುವನ್ನು ಶಿಲುಬೆಗೇರಿಸಿದಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು. 26 ಯೇಸುವಿನ ವಿರುದ್ಧ ಮಾಡಲಾದ ಆಪಾದನೆಯನ್ನು ಅಂದರೆ “ಯೆಹೂದ್ಯರ ರಾಜ” ಎಂದು ಶಿಲುಬೆಯ ಮೇಲೆ ಬರೆಯಲಾಗಿತ್ತು. 27 ಅಲ್ಲದೆ ಅವರು ಯೇಸುವಿನ ಪಕ್ಕದಲ್ಲಿ ಇಬ್ಬರು ಕಳ್ಳರನ್ನು ಶಿಲುಬೆಗೆ ಹಾಕಿದರು. ಅವರು ಒಬ್ಬ ಕಳ್ಳನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬ ಕಳ್ಳನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದ್ದರು. 28 [a]
29 ಅಲ್ಲಿ ನಡೆದುಹೋಗುತ್ತಿದ್ದವರು ತಮ್ಮ ತಲೆಯಾಡಿಸುತ್ತಾ, “ನೀನು ದೇವಾಲಯವನ್ನು ಕೆಡವಿ, ಅದನ್ನು ಮತ್ತೆ ಮೂರು ದಿನಗಳಲ್ಲಿ ಕಟ್ಟುತ್ತೇನೆಂದು ಹೇಳಿದೆ. 30 ಈಗ ಶಿಲುಬೆಯಿಂದ ಕೆಳಗಿಳಿದು ಬಂದು ನಿನ್ನನ್ನು ರಕ್ಷಿಸಿಕೊ!” ಎಂದು ಅಪಹಾಸ್ಯ ಮಾಡಿದರು.
31 ಅಲ್ಲಿದ್ದ ಮಹಾಯಾಜಕರು ಹಾಗೂ ಧರ್ಮೋಪದೇಶಕರು ಸಹ, “ಅವನು ಇತರ ಜನರನ್ನು ರಕ್ಷಿಸಿದನು. ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು. 32 ಅವನು ನಿಜವಾಗಲೂ ಇಸ್ರೇಲರ ರಾಜನಾದ ಕ್ರಿಸ್ತನಾಗಿದ್ದರೆ, ಈಗ ಶಿಲುಬೆಯಿಂದ ಕೆಳಗಿಳಿದು ಬಂದು ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ. ಆಗ ನಾವು ಅವನನ್ನು ನಂಬುತ್ತೇವೆ” ಎಂದು ಅಪಹಾಸ್ಯ ಮಾಡಿದರು. ಯೇಸುವಿನ ಪಕ್ಕದ ಶಿಲುಬೆಗಳಿಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ಗೇಲಿಮಾಡಿದರು.
ಯೇಸುವಿನ ಮರಣ
(ಮತ್ತಾಯ 27:45-56; ಲೂಕ 23:44-49; ಯೋಹಾನ 19:28-30)
33 ಮಧ್ಯಾಹ್ನವಾದಾಗ, ಇಡೀ ದೇಶವೇ ಕತ್ತಲಾಯಿತು. ಈ ಕತ್ತಲೆಯು ಸಾಯಂಕಾಲ ಮೂರು ಗಂಟೆಯವರೆಗೆ ಇತ್ತು. 34 ಮೂರು ಗಂಟೆಗೆ, ಯೇಸು ದೊಡ್ಡ ಧ್ವನಿಯಿಂದ, “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದು ಕೂಗಿದನು. “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟೆ?”(A) ಎಂಬುದೇ ಇದರರ್ಥ.
35 ಅಲ್ಲಿ ನಿಂತಿದ್ದ ಕೆಲವು ಜನರು ಇದನ್ನು ಕೇಳಿ, “ನೋಡಿ! ಆತನು ಎಲೀಯನನ್ನು ಕರೆಯುತ್ತಿದ್ದಾನೆ” ಎಂದರು.
36 ಅಲ್ಲಿದ್ದ ಒಬ್ಬನು ಓಡಿಹೋಗಿ, ಸ್ಪಂಜನ್ನು ತೆಗೆದುಕೊಂಡು ಅದನ್ನು ಹುಳಿರಸದಿಂದ ತುಂಬಿಸಿ, ಒಂದು ಕೋಲಿಗೆ ಕಟ್ಟಿ ಯೇಸುವಿಗೆ ಕುಡಿಯಲು ಕೊಡುತ್ತಾ, “ಎಲೀಯನು ಇವನನ್ನು ಶಿಲುಬೆಯಿಂದ ಕೆಳಗಿಳಿಸಲು ಬರಬಹುದೇನೋ ನಾವು ಕಾಯ್ದು ನೋಡಬೇಕು” ಎಂದನು.
37 ನಂತರ ಯೇಸು ಮಹಾಧ್ವನಿಯಿಂದ ಕೂಗಿ, ಪ್ರಾಣಬಿಟ್ಟನು.
38 ಆಗ ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೂ ಎರಡು ಭಾಗಗಳಾಗಿ ಹರಿದುಹೋಯಿತು. 39 ಶಿಲುಬೆಯ ಮುಂದೆ ನಿಂತಿದ್ದ ಸೈನ್ಯದ ಅಧಿಕಾರಿಯು ಯೇಸು ಪ್ರಾಣಬಿಟ್ಟಾಗ ನಡೆದದ್ದನ್ನು ನೋಡಿ, “ಈ ಮನುಷ್ಯನು ನಿಜವಾಗಿಯೂ ದೇವರ ಮಗನು” ಎಂದನು.
40 ಕೆಲವು ಸ್ತ್ರೀಯರು ಶಿಲುಬೆಯಿಂದ ದೂರದಲ್ಲಿ ನಿಂತುಕೊಂಡು ನೋಡುತ್ತಾ ಇದ್ದರು. ಈ ಸ್ತ್ರೀಯರಲ್ಲಿ ಕೆಲವರೆಂದರೆ, ಮಗ್ದಲದ ಮರಿಯಳು, ಸಲೋಮೆ ಮತ್ತು ಯಾಕೋಬ ಯೋಸೆಯರ ತಾಯಿಯಾದ ಮರಿಯಳು (ಯಾಕೋಬನು ಅವಳ ಕಿರಿಯ ಮಗ.) 41 ಈ ಸ್ತ್ರೀಯರು ಗಲಿಲಾಯದಲ್ಲಿ ಯೇಸುವನ್ನು ಹಿಂಬಾಲಿಸಿ ಆತನ ಸೇವೆ ಮಾಡಿದವರು. ಯೇಸುವಿನೊಡನೆ ಜೆರುಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರು ಅಲ್ಲಿದ್ದರು.
ಯೇಸುವಿನ ಸಮಾಧಿ
(ಮತ್ತಾಯ 27:57-61; ಲೂಕ 23:50-56; ಯೋಹಾನ 19:38-42)
42 ಆಗ ಕತ್ತಲಾಗತೊಡಗಿತ್ತು. ಅಂದು ಸಿದ್ಧತೆಯ ದಿನವಾಗಿದ್ದರಿಂದ (ಅಂದರೆ ಸಬ್ಬತ್ತಿನ ಹಿಂದಿನ ದಿನ), 43 ಅರಿಮಥಾಯ ಊರಿನ ಯೋಸೇಫ ಎಂಬವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಧೈರ್ಯದಿಂದ ಕೇಳಿದನು. ಯೋಸೇಫನು ಯೆಹೂದ್ಯರ ಸಮಿತಿಯಲ್ಲಿ ಒಬ್ಬ ಮುಖ್ಯ ಸದಸ್ಯನಾಗಿದ್ದನು. ದೇವರರಾಜ್ಯ ಬರಲೆಂದು ಬಯಸಿದ ಜನರಲ್ಲಿ ಇವನೂ ಒಬ್ಬನಾಗಿದ್ದನು.
44 ಯೇಸು ಇಷ್ಟು ಬೇಗನೆ ಸತ್ತದ್ದನ್ನು ಕೇಳಿ ಪಿಲಾತನಿಗೆ ಆಶ್ಚರ್ಯವಾಯಿತು. ಯೇಸುವನ್ನು ಕಾವಲು ಕಾಯುತ್ತಿದ್ದ ಸೈನ್ಯಾಧಿಕಾರಿಯನ್ನು ಪಿಲಾತನು ಕರೆದು, “ಯೇಸು ಸತ್ತುಹೋದನೇ?” ಎಂದು ಕೇಳಿದನು. 45 ಆ ಅಧಿಕಾರಿಯು, “ಹೌದು” ಎಂದು ಹೇಳಿದ್ದರಿಂದ ಆತನ ದೇಹವನ್ನು ತೆಗೆದುಕೊಳ್ಳಲು ಪಿಲಾತನು ಯೋಸೇಫನಿಗೆ ಅಪ್ಪಣೆಕೊಟ್ಟನು.
46 ಯೋಸೇಫನು ನಾರುಬಟ್ಟೆಯನ್ನು ತೆಗೆದುಕೊಂಡು ಬಂದು, ಶಿಲುಬೆಯಿಂದ ದೇಹವನ್ನು ಇಳಿಸಿ, ಅದನ್ನು ಆ ಬಟ್ಟೆಯಿಂದ ಸುತ್ತಿದನು. ಅನಂತರ, ಬಂಡೆಯ ಸಮಾಧಿಯಲ್ಲಿ ಅದನ್ನಿರಿಸಿ ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಮುಚ್ಚಿದನು. 47 ಮಗ್ದಲದ ಮರಿಯಳು ಹಾಗೂ ಯೋಸೆಯನ ತಾಯಿಯಾದ ಮರಿಯಳು ಸಮಾಧಿ ಮಾಡಿದ ಸ್ಥಳವನ್ನು ಗುರುತಿಸಿಕೊಂಡರು.
Kannada Holy Bible: Easy-to-Read Version. All rights reserved. © 1997 Bible League International