M’Cheyne Bible Reading Plan
3 1-2 ಇಸ್ರೇಲರ ಪ್ರದೇಶವನ್ನು ಬಿಟ್ಟುಹೋಗುವಂತೆ ಯೆಹೋವನು ಉಳಿದೆಲ್ಲ ಜನಾಂಗದವರನ್ನು ಒತ್ತಾಯಪಡಿಸಲಿಲ್ಲ. ಯೆಹೋವನು ಇಸ್ರೇಲರನ್ನು ಪರೀಕ್ಷಿಸಬೇಕೆಂದಿದ್ದನು. ಈಗ ಬದುಕಿದ್ದ ಇಸ್ರೇಲರಲ್ಲಿ ಯಾರೂ ಕಾನಾನ್ಯರ ಭೂಮಿಯನ್ನು ತೆಗೆದುಕೊಳ್ಳುವುದಕ್ಕಾಗಿ ಯುದ್ಧ ಮಾಡಿರಲಿಲ್ಲ. ಅದಕ್ಕಾಗಿ ಯೆಹೋವನು ಆ ಬೇರೆ ಜನಾಂಗದವರನ್ನು ಅವರ ದೇಶದಲ್ಲಿ ವಾಸಿಸಲು ಬಿಟ್ಟನು. (ಆ ಯುದ್ಧಗಳಲ್ಲಿ ಭಾಗವಹಿಸದ ಈ ಇಸ್ರೇಲರಿಗೆ ಯುದ್ಧ ಮಾಡುವುದನ್ನು ಕಲಿತುಕೊಳ್ಳಲು ಒಂದು ಅವಕಾಶ ದೊರೆಯುವಂತೆ ಯೆಹೋವನು ಹೀಗೆ ಮಾಡಿದ್ದನು.) ಯೆಹೋವನು ಆ ಭೂಮಿಯಲ್ಲಿ ವಾಸಿಸಲು ಬಿಟ್ಟ ಜನಾಂಗಗಳ ಹೆಸರುಗಳು ಇಂತಿವೆ: 3 ಐದು ಮಂದಿ ಫಿಲಿಷ್ಟಿಯ ಪ್ರಭುಗಳು, ಎಲ್ಲಾ ಕಾನಾನ್ಯರು, ಚೀದೋನ್ಯರು, ಲೆಬನೋನ್ ಪರ್ವತಾವಳಿಯಲ್ಲಿ ಬಾಳ್‌ಹೆರ್ಮೊನ್ ಬೆಟ್ಟದಿಂದ ಲೆಬೂಹಮಾತಿನ ದಾರಿಯವರೆಗೆ ವಾಸವಾಗಿರುವ ಹಿವ್ವಿಯರು. 4 ಯೆಹೋವನು ಇಸ್ರೇಲರನ್ನು ಪರೀಕ್ಷಿಸುವುದಕ್ಕಾಗಿ ಬೇರೆ ಜನಾಂಗದವರನ್ನು ಆ ಪ್ರದೇಶದಲ್ಲಿ ಬಿಟ್ಟಿದ್ದನು. ಯೆಹೋವನು ಮೋಶೆಯ ಮೂಲಕ ಅವರ ಪೂರ್ವಿಕರಿಗೆ ಕೊಟ್ಟ ಆಜ್ಞೆಗಳನ್ನು ಇಸ್ರೇಲರು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಆತನು ನೋಡಬೇಕೆಂದಿದ್ದನು.
5 ಇಸ್ರೇಲರು ಕಾನಾನ್ಯ, ಹಿತ್ತಿಯ, ಅಮೋರಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಜನಾಂಗಗಳೊಡನೆ ವಾಸಮಾಡತೊಡಗಿದರು. 6 ಇಸ್ರೇಲರು ಅವರ ಕನ್ಯೆಯರನ್ನು ಮದುವೆಯಾಗ ತೊಡಗಿದರು ಮತ್ತು ತಮ್ಮ ಕನ್ಯೆಯರನ್ನು ಅವರ ಕುಮಾರರಿಗೆ ಮದುವೆ ಮಾಡಿಕೊಟ್ಟರು ಮತ್ತು ಅವರ ದೇವರುಗಳನ್ನು ಪೂಜಿಸಲು ಪ್ರಾರಂಭಿಸಿದರು.
ಒತ್ನೀಯೇಲ್ ಪ್ರಥಮ ನ್ಯಾಯಾಧೀಶ
7 ಇಸ್ರೇಲರ ದುಷ್ಕೃತ್ಯಗಳನ್ನು ಯೆಹೋವನು ನೋಡಿದನು. ಇಸ್ರೇಲರು ತಮ್ಮ ದೇವರಾದ ಯೆಹೋವನನ್ನು ಮರೆತು ಬಾಳ್ ಮತ್ತು ಅಶೇರ್ ಎಂಬ ಸುಳ್ಳುದೇವರುಗಳ ಸೇವೆ ಮಾಡುತ್ತಿದ್ದರು. 8 ಇಸ್ರೇಲರ ಮೇಲೆ ಯೆಹೋವನು ಕೋಪಿಸಿಕೊಂಡಿದ್ದನು. ಹರೇಮ್‌ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮ್ ಎಂಬವನು ಅವರನ್ನು ಸೋಲಿಸುವುದಕ್ಕೂ ಆಳುವುದಕ್ಕೂ ಯೆಹೋವನು ಆಸ್ಪದ ಕೊಟ್ಟನು. ಇಸ್ರೇಲಿನ ಜನರು ಎಂಟು ವರ್ಷ ಆ ಅರಸನ ಅಧೀನದಲ್ಲಿದ್ದರು. 9 ಇಸ್ರೇಲರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು. ಅವರನ್ನು ರಕ್ಷಿಸಲು ಯೆಹೋವನು ಒಬ್ಬ ಮನುಷ್ಯನನ್ನು ಕಳುಹಿಸಿದನು. ಆ ಮನುಷ್ಯನ ಹೆಸರು ಒತ್ನೀಯೇಲ. ಅವನು ಕೆನಜ ಎಂಬವನ ಮಗನು. ಕೆನಜನು ಕಾಲೇಬನ ತಮ್ಮ. ಒತ್ನೀಯೇಲನು ಇಸ್ರೇಲರನ್ನು ರಕ್ಷಿಸಿದನು. 10 ಒತ್ನೀಯೇಲನ ಮೇಲೆ ಯೆಹೋವನ ಆತ್ಮ ಬಂದಿತು; ಆದ್ದರಿಂದ ಅವನು ಇಸ್ರೇಲರ ನ್ಯಾಯಾಧೀಶನಾದನು. ಒತ್ನೀಯೇಲನು ಇಸ್ರೇಲರನ್ನು ಯುದ್ಧಕ್ಕೆ ಕರೆದೊಯ್ದನು. ಅರಾಮಿನ ಅರಸನಾದ ಕೂಷನ್ ರಿಷಾತಯಿಮ್‌ನನ್ನು ಸೋಲಿಸಲು ಯೆಹೋವನು ಒತ್ನೀಯೇಲನಿಗೆ ಸಹಾಯ ಮಾಡಿದನು. 11 ಆದ್ದರಿಂದ ನಲವತ್ತು ವರ್ಷಗಳ ಕಾಲದವರೆಗೆ ಅಂದರೆ ಕೆನಜನ ಮಗನಾದ ಒತ್ನೀಯೇಲನ ಮರಣದವರೆಗೆ ಆ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು.
ನ್ಯಾಯಾಧೀಶ ಏಹೂದ
12 ಇಸ್ರೇಲರು ಪುನಃ ದುಷ್ಕೃತ್ಯಗಳನ್ನು ಮಾಡುವುದನ್ನು ಯೆಹೋವನು ನೋಡಿದನು. ಆದ್ದರಿಂದ ಆತನು ಮೋವಾಬ್ಯರ ಅರಸನಾದ ಎಗ್ಲೋನನಿಗೆ ಇಸ್ರೇಲರನ್ನು ಸೋಲಿಸುವ ಶಕ್ತಿಯನ್ನು ಕೊಟ್ಟನು. 13 ಇವನು ಅಮ್ಮೋನಿಯರಿಂದ ಮತ್ತು ಅಮಾಲೇಕ್ಯರಿಂದ ಸಹಾಯವನ್ನು ಪಡೆದನು. ಅವರು ಅವನೊಂದಿಗೆ ಸೇರಿಕೊಂಡು ಇಸ್ರೇಲರ ಮೇಲೆ ಧಾಳಿಮಾಡಿದರು. ಎಗ್ಲೋನ್ ಮತ್ತು ಅವನ ಸೈನಿಕರು ಇಸ್ರೇಲರನ್ನು ಸೋಲಿಸಿ ಅವರನ್ನು ಜೆರಿಕೊ ಎಂಬುವ ಖರ್ಜೂರ ನಗರದಿಂದ ಹೊರದೂಡಿದರು. 14 ಮೋವಾಬ್ಯರ ಅರಸನಾದ ಎಗ್ಲೋನನು ಇಸ್ರೇಲರ ಮೇಲೆ ಹದಿನೆಂಟು ವರ್ಷ ಆಳ್ವಿಕೆ ಮಾಡಿದನು.
15 ಜನರು ಯೆಹೋವನಿಗೆ ಮೊರೆಯಿಟ್ಟರು. ಇಸ್ರೇಲರನ್ನು ರಕ್ಷಿಸಲು ಯೆಹೋವನು ಒಬ್ಬ ಮನುಷ್ಯನನ್ನು ಕಳುಹಿಸಿದನು. ಆ ಮನುಷ್ಯನ ಹೆಸರು ಏಹೂದ. ಅವನು ಎಡಚನಾಗಿದ್ದನು. ಅವನು ಬೆನ್ಯಾಮೀನ್ ಕುಲದ ಗೇರ ಎಂಬವನ ಮಗನಾಗಿದ್ದನು. ಇಸ್ರೇಲರು ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪಕಾಣಿಕೆಯನ್ನು ಕೊಡಲು ಏಹೂದನನ್ನು ಕಳುಹಿಸಿದರು. 16 ಏಹೂದನು ತನಗೊಂದು ಖಡ್ಗವನ್ನು ಮಾಡಿಕೊಂಡನು. ಆ ಖಡ್ಗವು ಇಬ್ಬಾಯಿ ಖಡ್ಗವಾಗಿದ್ದು ಹದಿನೆಂಟು ಅಂಗುಲ ಉದ್ದವಾಗಿತ್ತು. ಅದನ್ನು ಅವನು ತನ್ನ ಬಲತೊಡೆಗೆ ಕಟ್ಟಿಕೊಂಡು ತನ್ನ ಬಟ್ಟೆಗಳಿಂದ ಮುಚ್ಚಿಕೊಂಡನು.
17 ಏಹೂದನು ಮೋವಾಬ್ಯರ ಅರಸನಾದ ಎಗ್ಲೋನನ ಹತ್ತಿರ ಬಂದು ಅವನಿಗೆ ಕಪ್ಪದ ಹಣವನ್ನು ಕೊಟ್ಟನು. ಎಗ್ಲೋನನು ಬಹಳ ದಪ್ಪ ಮನುಷ್ಯನಾಗಿದ್ದನು. 18 ಏಹೂದನು ಎಗ್ಲೋನನಿಗೆ ಹಣವನ್ನು ಕೊಟ್ಟ ತರುವಾಯ ಅದನ್ನು ಹೊತ್ತುಕೊಂಡು ಬಂದ ಜನರನ್ನು ಮನೆಗೆ ಕಳುಹಿಸಿಬಿಟ್ಟನು. 19 ಏಹೂದನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂತಿರುಗಿ ಎಗ್ಲೋನನ ಬಳಿಗೆ ಬಂದು, “ಅರಸನೇ, ನಿನಗೆ ತಿಳಿಸಬೇಕಾದ ಒಂದು ರಹಸ್ಯ ಸಂದೇಶವಿದೆ” ಎಂದು ಹೇಳಿದನು.
ಅರಸನು, “ಸುಮ್ಮನಿರು” ಎಂದು ಹೇಳಿ ತನ್ನ ಸೇವಕರೆಲ್ಲರನ್ನು ಕೋಣೆಯಿಂದ ಆಚೆ ಕಳುಹಿಸಿದನು. 20 ಏಹೂದನು ಅರಸನಾದ ಎಗ್ಲೋನನ ಹತ್ತಿರಕ್ಕೆ ಹೋದನು. ಎಗ್ಲೋನನು ತಂಪಾದ ಅರಮನೆಯ ಮಹಡಿಯ ಕೋಣೆಯಲ್ಲಿ ಒಬ್ಬಂಟಿಗನಾಗಿ ಕುಳಿತಿದ್ದನು.
ಆಗ ಏಹೂದನು, “ದೇವರಿಂದ ನಾನು ನಿನಗೆ ಒಂದು ಸಂದೇಶವನ್ನು ತಂದಿದ್ದೇನೆ” ಎಂದನು. ಅರಸನು ತನ್ನ ಸಿಂಹಾಸನದಿಂದ ಎದ್ದುನಿಂತನು. ಅವನು ಏಹೂದನಿಗೆ ತುಂಬ ಹತ್ತಿರದಲ್ಲಿದ್ದನು. 21 ಅರಸನು ತನ್ನ ಸಿಂಹಾಸನದಿಂದ ಎದ್ದುನಿಂತಾಗ ಏಹೂದನು ತನ್ನ ಎಡಗೈಯನ್ನು ಚಾಚಿ ತನ್ನ ಬಲತೊಡೆಗೆ ಕಟ್ಟಿದ್ದ ಕತ್ತಿಯನ್ನು ಹೊರತೆಗೆದನು. ಏಹೂದನು ಆ ಖಡ್ಗವನ್ನು ಅರಸನ ಹೊಟ್ಟೆಗೆ ತಿವಿದನು. 22 ಏಹೂದನು ಕತ್ತಿಯನ್ನು ಜೋರಾಗಿ ಒತ್ತಿದ್ದರಿಂದ ಅದು ಹಿಡಿಯ ಸಹಿತ ಮುಳುಗಿ ಹೋಯಿತು. ಅರಸನ ಕೊಬ್ಬಿದ ದೇಹದಲ್ಲಿ ಕತ್ತಿಯು ಸಂಪೂರ್ಣವಾಗಿ ಮುಚ್ಚಿಕೊಂಡಿತು. ಆದ್ದರಿಂದ ಏಹೂದನು ಎಗ್ಲೋನನ ಹೊಟ್ಟೆಯಲ್ಲಿಯೇ ಖಡ್ಗವನ್ನು ಬಿಟ್ಟನು. ಮಲವು ಹೊರಗೆ ಬಂದಿತು.
23 ಏಹೂದನು ಕೋಣೆಯ ಹೊರಗೆ ಹೋಗಿ ಬಾಗಿಲು ಹಾಕಿಕೊಂಡು ಬೀಗಹಾಕಿದನು. 24 ಏಹೂದನು ಹೋದ ಕೂಡಲೆ ಸೇವಕರು ಹಿಂದಿರುಗಿ ಬಂದರು. ಕೋಣೆಯ ಬಾಗಿಲಿಗೆ ಬೀಗ ಹಾಕಿದ್ದನ್ನು ಸೇವಕರು ನೋಡಿದರು. “ಅರಸನು ತನ್ನ ವಿಶ್ರಾಂತಿ ಕೋಣೆಯ ಶೌಚಾಲಯದಲ್ಲಿ ಇರಬಹುದು” ಎಂದುಕೊಂಡರು. 25 ಹೀಗಾಗಿ ಸೇವಕರು ಬಹಳ ಹೊತ್ತಿನವರೆಗೆ ಅರಸನಿಗಾಗಿ ಕಾಯುತ್ತಾ ಚಿಂತೆಗೊಳಗಾದರು. ಅವರು ಬೀಗದ ಕೈಯನ್ನು ತಂದು ಬಾಗಿಲುಗಳನ್ನು ತೆರೆದರು. ಸೇವಕರು ಒಳಗೆ ಹೋದಾಗ ತಮ್ಮ ಅರಸನು ನೆಲದ ಮೇಲೆ ಸತ್ತು ಬಿದ್ದಿರುವುದನ್ನು ಕಂಡರು.
26 ಸೇವಕರು ಅರಸನಿಗಾಗಿ ಕಾಯುತ್ತಾ ನಿಂತಿರುವಾಗ ತಪ್ಪಿಸಿಕೊಂಡು ಹೋಗುವುದಕ್ಕೆ ಏಹೂದನಿಗೆ ಅವಕಾಶ ಸಿಕ್ಕಿತು. ಏಹೂದನು ವಿಗ್ರಹಗಳ ಪಕ್ಕದಿಂದ ಹಾದು ಹೊಳೆದಾಟಿ 27 ಸೆಯೀರಾ ಎಂಬ ಸ್ಥಳಕ್ಕೆ ಬಂದನು. ಅಲ್ಲಿ ಎಫ್ರಾಯೀಮ್ ಬೆಟ್ಟಪ್ರದೇಶದಲ್ಲಿ ಅವನು ತುತ್ತೂರಿಯನ್ನು ಊದಿದನು. ಇಸ್ರೇಲರು ತುತ್ತೂರಿಯ ಧ್ವನಿಯನ್ನು ಕೇಳಿ ಬೆಟ್ಟದಿಂದ ಇಳಿದು ಏಹೂದನನ್ನು ಹಿಂಬಾಲಿಸಿ ಹೋದರು. 28 ಏಹೂದನು ಇಸ್ರೇಲರಿಗೆ, “ನನ್ನನ್ನು ಹಿಂಬಾಲಿಸಿರಿ, ನಮ್ಮ ಶತ್ರುಗಳಾದ ಮೋವಾಬ್ಯರನ್ನು ಸೋಲಿಸಲು ಯೆಹೋವನು ನಮಗೆ ಸಹಾಯ ಮಾಡಿದ್ದಾನೆ” ಎಂದನು.
ಇಸ್ರೇಲರು ಏಹೂದನನ್ನು ಹಿಂಬಾಲಿಸಿದರು. ಅವರು ಜೋರ್ಡನ್ ನದಿಯ ಹಾಯಗಡಗಳನ್ನೆಲ್ಲಾ ವಶಪಡಿಸಿಕೊಂಡರು. ಆ ಸ್ಥಳಗಳು ಮೋವಾಬಿಗೆ ಹೋಗುವ ದಾರಿಯಲ್ಲಿದ್ದವು. ಜೋರ್ಡನ್ ನದಿಯನ್ನು ದಾಟಿಹೋಗಲು ಇಸ್ರೇಲರು ಯಾರಿಗೂ ಅವಕಾಶ ಕೊಡಲಿಲ್ಲ. 29 ಇಸ್ರೇಲರು ದೃಢಕಾಯರೂ ಧೈರ್ಯಶಾಲಿಗಳೂ ಆಗಿದ್ದ ಹತ್ತು ಸಾವಿರ ಮಂದಿ ಮೋವಾಬ್ಯರನ್ನು ಕೊಂದುಹಾಕಿದರು. ಒಬ್ಬ ಮೋವಾಬ್ಯನೂ ತಪ್ಪಿಸಿಕೊಳ್ಳಲಿಲ್ಲ. 30 ಅಂದಿನಿಂದ ಇಸ್ರೇಲರು ಮೋವಾಬ್ಯರನ್ನು ಆಳಲು ಪ್ರಾರಂಭಿಸಿದರು. ಆ ಪ್ರದೇಶದಲ್ಲಿ ಎಂಭತ್ತು ವರ್ಷಗಳವರೆಗೆ ಶಾಂತಿ ನೆಲೆಸಿತು.
ನ್ಯಾಯಾಧೀಶನಾದ ಶಮ್ಗರ
31 ಏಹೂದನು ಇಸ್ರೇಲರನ್ನು ರಕ್ಷಿಸಿದ ತರುವಾಯ, ಇನ್ನೊಬ್ಬ ವ್ಯಕ್ತಿಯು ಇಸ್ರೇಲರನ್ನು ರಕ್ಷಿಸಿದನು. ಅವನು ಅನಾತನ[a] ಮಗನಾದ ಶಮ್ಗರ. ಶಮ್ಗರನು ಎದ್ದು ಎತ್ತಿನ ಮುಳ್ಳುಗೋಲಿನಿಂದ ಆರುನೂರು ಮಂದಿ ಫಿಲಿಷ್ಟಿಯರನ್ನು ಕೊಂದನು.
ಸ್ತೆಫನನ ಪ್ರಸಂಗ
7 ಪ್ರಧಾನಯಾಜಕನು ಸ್ತೆಫನನಿಗೆ, “ಈ ಸಂಗತಿಗಳು ನಿಜವೋ?” ಎಂದು ಕೇಳಿದನು. 2 ಪ್ರತ್ಯುತ್ತರವಾಗಿ ಅವನು ಹೀಗೆಂದನು: “ನನ್ನ ಯೆಹೂದ್ಯತಂದೆಗಳೇ, ಸಹೋದರರೇ, ನನಗೆ ಕಿವಿಗೊಡಿರಿ. ನಮ್ಮ ಪಿತೃವಾದ ಅಬ್ರಹಾಮನಿಗೆ ನಮ್ಮ ಪ್ರಭಾವಸ್ವರೂಪನಾದ ದೇವರು ಕಾಣಸಿಕೊಂಡನು. ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪೊಟೇಮಿಯದಲ್ಲಿದ್ದನು. 3 ದೇವರು ಅಬ್ರಹಾಮನಿಗೆ, ‘ನಿನ್ನ ದೇಶವನ್ನೂ ನಿನ್ನ ಜನರನ್ನೂ ಬಿಟ್ಟು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು’(A) ಎಂದು ಹೇಳಿದನು.
4 “ಆದ್ದರಿಂದ ಅಬ್ರಹಾಮನು ಖಾಲ್ದೆಯ[a] ದೇಶವನ್ನು ಬಿಟ್ಟು ಹಾರಾನಿನಲ್ಲಿ ವಾಸಿಸಲು ಹೋದನು. ಅಬ್ರಹಾಮನ ತಂದೆ ಸತ್ತಮೇಲೆ ದೇವರು ಅವನನ್ನು ಈಗ ನೀವು ವಾಸಿಸುತ್ತಿರುವ ಈ ಸ್ಥಳಕ್ಕೆ ಕಳುಹಿಸಿದನು. 5 ಆದರೆ ದೇವರು ಅಬ್ರಹಾಮನಿಗೆ ಇಲ್ಲಿ ಯಾವ ಭೂಮಿಯನ್ನೂ ಕೊಡಲಿಲ್ಲ. ದೇವರು ಅವನಿಗೆ ಒಂದು ಅಡಿ ಸ್ಥಳವನ್ನೂ ಕೊಡಲಿಲ್ಲ. ಆದರೆ ಮುಂದಿನ ಕಾಲದಲ್ಲಿ ಈ ದೇಶವನ್ನು ಅವನಿಗೂ ಅವನ ಮಕ್ಕಳಿಗೂ ಕೊಡುವುದಾಗಿ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದನು. (ಅಬ್ರಹಾಮನಿಗೆ ಮಕ್ಕಳೇ ಇಲ್ಲದಿದ್ದಾಗ ಇದಾಯಿತು.)
6 “ದೇವರು ಅವನಿಗೆ, ‘ನಿನ್ನ ಸಂತಾನದವರು ಬೇರೊಂದು ದೇಶದಲ್ಲಿ ವಾಸಿಸುವರು. ಅವರು ಪರದೇಶಿಗಳಾಗಿರುವರು. ಅಲ್ಲಿಯ ಜನರು ಅವರನ್ನು ಗುಲಾಮರನ್ನಾಗಿ ಮಾಡಿಕೊಂಡು ನಾನೂರು ವರ್ಷಗಳವರೆಗೆ ಅವರಿಗೆ ಕೇಡುಗಳನ್ನು ಮಾಡುವರು. 7 ಆದರೆ ಅವರನ್ನು ಗಲಾಮರನ್ನಾಗಿ ಮಾಡಿಕೊಂಡ ಜನಾಂಗವನ್ನು ನಾನು ದಂಡಿಸುವೆನು’(B) ಎಂದು ಹೇಳಿದನು. ಇದಲ್ಲದೆ ದೇವರು ಅವನಿಗೆ, ‘ಆ ಬಳಿಕ ನಿನ್ನ ಜನರು ಆ ದೇಶದಿಂದ ಹೊರಗೆ ಬಂದು ನನ್ನನ್ನು ಈ ಸ್ಥಳದಲ್ಲಿ ಆರಾಧಿಸುವರು’(C) ಎಂದು ಹೇಳಿದನು.
8 “ದೇವರು ಅಬ್ರಹಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಆ ಒಡಂಬಡಿಕೆಯ ಗುರುತೇ ಸುನ್ನತಿ. ಹೀಗಿರಲು ಅಬ್ರಹಾಮನು ಒಬ್ಬ ಮಗನನ್ನು ಪಡೆದಾಗ, ಆ ಮಗನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು. ಅವನ ಮಗನ ಹೆಸರು ಇಸಾಕ. ಇಸಾಕನು ಸಹ ತನ್ನ ಮಗನಾದ ಯಾಕೋಬನಿಗೆ ಸುನ್ನತಿ ಮಾಡಿದನು. ಮತ್ತು ಯಾಕೋಬನು ತನ್ನ ಗಂಡುಮಕ್ಕಳಿಗೆಲ್ಲಾ ಸುನ್ನತಿ ಮಾಡಿದನು. ಈ ಗಂಡುಮಕ್ಕಳೇ ಮುಂದೆ ಹನ್ನೆರಡು ಮಂದಿ ಪಿತೃಗಳಾದರು.
9 “ಈ ಪಿತೃಗಳು ಯೋಸೇಫನ (ಅವರು ತಮ್ಮ) ಮೇಲೆ ಹೊಟ್ಟೆಕಿಚ್ಚುಪಟ್ಟರು. ಅವರು ಯೋಸೇಫನನ್ನು ಈಜಿಪ್ಟಿನ ಜನರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಯೋಸೇಫನೊಂದಿಗೆ ಇದ್ದನು. 10 ಯೋಸೇಫನಿಗೆ ಅಲ್ಲಿ ಅನೇಕ ತೊಂದರೆಗಳು ಬಂದವು. ಆದರೆ ದೇವರು ಆ ಎಲ್ಲಾ ತೊಂದರೆಗಳಿಂದ ಅವನನ್ನು ರಕ್ಷಿಸಿದನು. ಆಗ ಫರೋಹನು ಈಜಿಪ್ಟಿನ ರಾಜನಾಗಿದ್ದನು. ದೇವರು ಯೋಸೇಫನಿಗೆ ಕೊಟ್ಟ ಜ್ಞಾನದ ದೆಸೆಯಿಂದ ಫರೋಹನು ಯೋಸೇಫನನ್ನು ಇಷ್ಟಪಟ್ಟನು ಮತ್ತು ಗೌರವಿಸಿದನು. ಫರೋಹನು ಯೋಸೇಫನನ್ನು ಈಜಿಪ್ಟಿನ ರಾಜ್ಯಪಾಲನನ್ನಾಗಿಯೂ ತನ್ನ ಮನೆಯಲ್ಲಿದ್ದ ಎಲ್ಲಾ ಜನರ ಮೇಲೆ ಅಧಿಪತಿಯನ್ನಾಗಿಯೂ ಮಾಡಿದನು. 11 ಆದರೆ ಈಜಿಪ್ಟಿನಲ್ಲಿ ಮತ್ತು ಕಾನಾನಿನಲ್ಲಿ ಬರಗಾಲ ಉಂಟಾಯಿತು. ಆಹಾರವಿಲ್ಲದೆ ನಮ್ಮ ಪಿತೃಗಳಿಗೆ ಬಹಳ ಕಷ್ಟವಾಯಿತು.
12 “ಆದರೆ ಈಜಿಪ್ಟಿನಲ್ಲಿ ಆಹಾರವನ್ನು ಸಂಗ್ರಹಿಸಲಾಗಿದೆ ಎಂಬ ಸುದ್ದಿಯನ್ನು ಯಾಕೋಬನು ಕೇಳಿ, ನಮ್ಮ ಪಿತೃಗಳನ್ನು ಅಲ್ಲಿಗೆ ಕಳುಹಿಸಿದನು. (ಇದು ಈಜಿಪ್ಟಿಗೆ ಅವರ ಮೊದಲ ಪ್ರಯಾಣ.) 13 ಬಳಿಕ ಅವರು ಅಲ್ಲಿಗೆ ಎರಡನೆಯ ಸಲ ಹೋದರು. ಈ ಸಲ, ತಾನು ಯಾರೆಂಬುದನ್ನು ಯೋಸೇಫನು ತನ್ನ ಸಹೋದರರಿಗೆ ತಿಳಿಸಿದನು ಮತ್ತು ಯೋಸೇಫನ ಕುಟುಂಬದ ಬಗ್ಗೆ ಫರೋಹನಿಗೆ ತಿಳಿಯಿತು. 14 ಬಳಿಕ, ಯೋಸೇಫನು ತನ್ನ ತಂದೆಯಾದ ಯಾಕೋಬನನ್ನು ಮತ್ತು ಸಂಬಂಧಿಕರನ್ನು (ಅವರೆಲ್ಲರು ಒಟ್ಟಿಗೆ ಎಪ್ಪತ್ತೈದು ಮಂದಿ) ಈಜಿಪ್ಟಿಗೆ ಆಹ್ವಾನಿಸಲು ಕೆಲವು ಜನರನ್ನು ಕಳುಹಿಸಿದನು. 15 ಆದ್ದರಿಂದ ಯಾಕೋಬನು ಈಜಿಪ್ಟಿಗೆ ಹೋದನು. ಯಾಕೋಬನು ಮತ್ತು ನಮ್ಮ ಪಿತೃಗಳು ತಾವು ಸಾಯುವವರೆಗೆ ಅಲ್ಲೇ ಇದ್ದರು. 16 ಬಳಿಕ ಅವರ ದೇಹಗಳನ್ನು ಶೇಕೆಮಿಗೆ ಸಾಗಿಸಲಾಯಿತು. ಅಲ್ಲಿಯ ಸಮಾಧಿಯೊಂದರಲ್ಲಿ ಅವರನ್ನು ಹೂಳಲಾಯಿತು. (ಅಬ್ರಹಾಮನು ಹಾಮೋರನ ಗಂಡುಮಕ್ಕಳಿಂದ ಕೊಂಡುಕೊಂಡದ್ದು ಈ ಸಮಾಧಿಯನ್ನೇ. ಅವನು ಅವರಿಗೆ ಬೆಳ್ಳಿಯನ್ನು ಕ್ರಯವಾಗಿ ಕೊಟ್ಟಿದ್ದನು.)
17 “ಈಜಿಪ್ಟಿನಲ್ಲಿ ನಮ್ಮ ಜನರಾದ ಯೆಹೂದ್ಯರ ಸಂಖ್ಯೆಯು ಹೆಚ್ಚತೊಡಗಿತು. (ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಕಾಲ ಬಹು ಶೀಘ್ರದಲ್ಲೇ ಬರಲಿತ್ತು.) 18 ಬಳಿಕ, ಬೇರೊಬ್ಬ ರಾಜನು ಈಜಿಪ್ಟನ್ನು ಆಳಲಾರಂಭಿಸಿದನು. ಅವನಿಗೆ ಯೋಸೇಫನ ಬಗ್ಗೆ ಏನೂ ತಿಳಿದಿರಲಿಲ್ಲ. 19 ಈ ರಾಜನು ನಮ್ಮ ಜನರಿಗೆ ಮೋಸ ಮಾಡಿದನು. ಅವನು ನಮ್ಮ ಪಿತೃಗಳಿಗೆ ಕೇಡನ್ನು ಮಾಡಿದನು. ಅವರ ಕೂಸುಗಳನ್ನು ಸಾಯಿಸಬೇಕೆಂದು ಹೊರಗೆ ಹಾಕಿಸಿದನು.
20 “ಮೋಶೆಯು ಜನಿಸಿದ್ದು ಈ ಕಾಲದಲ್ಲೇ. ಅವನು ಬಹು ಸುಂದರನಾಗಿದ್ದನು. ಮೋಶೆಯನ್ನು ಅವನ ತಂದೆಯ ಮನೆಯಲ್ಲಿ ಮೂರು ತಿಂಗಳವರೆಗೆ ನೋಡಿಕೊಳ್ಳಲಾಯಿತು. 21 ಅವರು ಮೋಶೆಯನ್ನು ಹೊರಗೆ ಹಾಕಿದಾಗ ಫರೋಹನ ಮಗಳು ಅವನನ್ನು ತೆಗೆದುಕೊಂಡಳು. ಆಕೆಯು ಅವನನ್ನು ತನ್ನ ಸ್ವಂತ ಮಗನಂತೆ ಬೆಳೆಸಿದಳು. 22 ಈಜಿಪ್ಟಿನವರು ತಮಗೆ ಗೊತ್ತಿದ್ದ ಸಕಲ ವಿದ್ಯೆಗಳನ್ನು ಮೋಶೆಗೆ ಕಲಿಸಿದರು. ಅವನು ವಿಷಯಗಳನ್ನು ಹೇಳುವುದರಲ್ಲಿಯೂ ಕಾರ್ಯಗಳನ್ನು ಮಾಡುವು ದರಲ್ಲಿಯೂ ಬಹು ಸಮರ್ಥನಾಗಿದ್ದನು.
23 “ಮೋಶೆಗೆ ನಲವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಸಹೋದರರಾದ ಯೆಹೂದ್ಯ ಜನರನ್ನು ಸಂದರ್ಶಿಸುವುದು ಒಳ್ಳೆಯದೆಂದು ಯೋಚಿಸಿಕೊಂಡನು. 24 ಈಜಿಪ್ಟಿನವನೊಬ್ಬನು ಯೆಹೂದ್ಯನೊಬ್ಬನಿಗೆ ಅನ್ಯಾಯ ಮಾಡಿ ಹಿಂಸಿಸುತ್ತಿರುವುದನ್ನು ಕಂಡ ಮೋಶೆಯು ಆ ಈಜಿಪ್ಟಿನವನಿಗೆ ಬಲವಾಗಿ ಹೊಡೆದು ಕೊಂದುಹಾಕಿದನು. 25 ತಮ್ಮನ್ನು ರಕ್ಷಿಸಲು ದೇವರು ಮೋಶೆಯನ್ನು ಉಪಯೋಗಿಸುತ್ತಿದ್ದಾನೆ ಎಂಬುದಾಗಿ ತನ್ನ ಯೆಹೂದ್ಯ ಸಹೋದರರು ಅರ್ಥಮಾಡಿಕೊಳ್ಳುತ್ತಾರೆ ಎಂದು ಮೋಶೆ ಭಾವಿಸಿಕೊಂಡನು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ.
26 “ಮರುದಿನ, ಇಬ್ಬರು ಯೆಹೂದ್ಯರು ಹೊಡೆದಾಡುವುದನ್ನು ಮೋಶೆಯು ಕಂಡನು. ಅವರನ್ನು ಸಮಾಧಾನಪಡಿಸಲು ಅವನು ಪ್ರಯತ್ನಿಸಿ ‘ಗೆಳೆಯರೇ, ನೀವು ಸಹೋದರರಾಗಿದ್ದೀರಿ! ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡುವುದೇಕೆ?’ ಎಂದು ಅವರನ್ನು ಕೇಳಿದನು. 27 ಮತ್ತೊಬ್ಬನಿಗೆ ಅನ್ಯಾಯ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ಯಾರಾದರೂ ಹೇಳಿದರೇ? ಇಲ್ಲ! 28 ನಿನ್ನೆ ಆ ಈಜಿಪ್ಟಿನವನನ್ನು ಕೊಂದಂತೆ ನನ್ನನ್ನೂ ಕೊಲ್ಲುವೆಯಾ?’(D) ಎಂದು ಹೇಳಿದನು. 29 ಇದನ್ನು ಕೇಳಿದ್ದೇ ಮೋಶೆಯು ಈಜಿಪ್ಟನ್ನು ಬಿಟ್ಟು ಮಿದ್ಯಾನ್ಯರ ನಾಡಿಗೆ ಹೋಗಿ ವಿದೇಶಿಯವನಂತೆ ವಾಸಿಸತೊಡಗಿದನು. ಅಲ್ಲಿ ಅವನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು.
30 “ನಲವತ್ತು ವರ್ಷಗಳಾದ ಮೇಲೆ ಮೋಶೆಯು ಸಿನಾಯ್ ಬೆಟ್ಟದ ಸಮೀಪದಲ್ಲಿರುವ ಮರಳುಗಾಡಿನಲ್ಲಿದ್ದಾಗ ಉರಿಯುತ್ತಿದ್ದ ಪೊದೆಯ ಜ್ವಾಲೆಯಲ್ಲಿ ದೇವದೂತನೊಬ್ಬನು ಕಾಣಿಸಿಕೊಂಡನು. 31 ಮೋಶೆಯು ಆಶ್ಚರ್ಯದಿಂದ ನೋಡಲು ಸಮೀಪಕ್ಕೆ ಹೋದನು. ಆಗ ಮೋಶೆಗೆ ವಾಣಿಯೊಂದು ಕೇಳಿಸಿತು. ಅದು ಪ್ರಭುವಿನ ವಾಣಿಯಾಗಿತ್ತು. 32 ಪ್ರಭುವು ಅವನಿಗೆ, ‘ನಾನೇ ನಿನ್ನ ಪಿತೃಗಳ ದೇವರು. ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(E) ಎಂದು ಹೇಳಿದನು. ಮೋಶೆಯು ಭಯದಿಂದ ನಡುಗ ತೊಡಗಿದನು; ಪೊದೆಯನ್ನು ನೋಡಲು ಹೆದರಿದನು.
33 “ಪ್ರಭುವು ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು, ಈಗ ನೀನು ನಿಂತುಕೊಂಡಿರುವ ಸ್ಥಳ ಪರಿಶುದ್ಧವಾದದ್ದು. 34 ಜನರು ಈಜಿಪ್ಟಿನಲ್ಲಿ ಬಹಳ ಸಂಕಟಪಡುತ್ತಿರುವುದನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳಾಟವನ್ನು ನಾನು ಕೇಳಿದ್ದೇನೆ. ನಾನು ಅವರನ್ನು ರಕ್ಷಿಸುವುದಕ್ಕಾಗಿ ಇಳಿದುಬಂದಿದ್ದೇನೆ. ಮೋಶೆಯೇ, ಈಗ ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುತ್ತಿದ್ದೇನೆ’(F) ಎಂದು ಹೇಳಿದನು.
35 “ಆ ಯೆಹೂದ್ಯರಿಂದ ತಿರಸ್ಕೃತನಾದವನೇ ಈ ಮೋಶೆ. ಅವರು ಅವನಿಗೆ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ನಿನಗೆ ಯಾರಾದರೂ ಹೇಳಿದರೇ?’ ಎಂದು ಪ್ರಶ್ನಿಸಿದ್ದರು. ಆದರೆ ದೇವರು ಅಧಿಪತಿಯನ್ನಾಗಿಯೂ ವಿಮೋಚಕನನ್ನಾಗಿಯೂ ಕಳುಹಿಸಿದ್ದು ಆ ಮೋಶೆಯನ್ನೇ. ದೇವರು ತನ್ನ ದೂತನ ಮೂಲಕವಾಗಿ ಮೋಶೆಯನ್ನು ಕಳುಹಿಸಿದನು. ಉರಿಯುವ ಪೊದೆಯಲ್ಲಿ ಮೋಶೆಯು ಕಂಡದ್ದು ಈ ದೇವದೂತನನ್ನೇ. 36 ಆದ್ದರಿಂದ ಮೋಶೆಯು ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವನು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಈಜಿಪ್ಟಿನಲ್ಲಿಯೂ ಕೆಂಪುಸಮುದ್ರದಲ್ಲಿಯೂ ಮತ್ತು ನಲವತ್ತು ವರ್ಷಗಳ ಕಾಲ ಅರಣ್ಯದಲ್ಲಿಯೂ ಮಾಡಿದನು.
37 “ಈ ಮೋಶೆಯೇ ಯೆಹೂದ್ಯ ಜನರಿಗೆ, ‘ದೇವರು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ಆ ಪ್ರವಾದಿಯು ನಿಮ್ಮ ಸ್ವಜನರ ಮಧ್ಯದಿಂದಲೇ ಬರುವನು. ಅವನು ನನ್ನಂತೆಯೇ ಇರುವನು’(G) ಎಂದು ಹೇಳಿದನು. 38 ಅರಣ್ಯದಲ್ಲಿ ಯೆಹೂದ್ಯರ ಸಮೂಹದೊಂದಿಗೆ ಇದ್ದವನು ಈ ಮೋಶೆಯೇ. ಸಿನಾಯ್ ಬೆಟ್ಟದ ಬಳಿ ತನ್ನೊಂದಿಗೆ ಮಾತಾಡಿದ ದೇವದೂತನೊಂದಿಗೆ ಅವನಿದ್ದನು. ಅಲ್ಲದೆ ಅವನು ನಮ್ಮ ಪಿತೃಗಳೊಂದಿಗೆ ಇದ್ದನು. ಜೀವಕರವಾದ ಆಜ್ಞೆಗಳನ್ನು ಮೋಶೆಯು ದೇವರಿಂದ ಸ್ವೀಕರಿಸಿಕೊಂಡು ಅವುಗಳನ್ನು ನಮಗೆ ಕೊಟ್ಟನು.
39 “ಆದರೆ ಮೋಶೆಗೆ ವಿಧೇಯರಾಗಲು ನಮ್ಮ ಪಿತೃಗಳಿಗೆ ಇಷ್ಟವಿರಲಿಲ್ಲ. ಅವರು ಅವನನ್ನು ತಿರಸ್ಕರಿಸಿ, ಈಜಿಪ್ಟಿಗೆ ಹಿಂತಿರುಗಬೇಕೆಂದಿದ್ದರು. 40 ನಮ್ಮ ಪಿತೃಗಳು ಆರೋನನಿಗೆ, ‘ಮೋಶೆಯು ನಮ್ಮನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದನು. ಆದರೆ ಅವನಿಗೆ ಏನಾಯಿತೋ ನಮಗೆ ಗೊತ್ತಿಲ್ಲ. ಆದ್ದರಿಂದ ನಮ್ಮ ಮುಂದೆ ಹೋಗಲು ಮತ್ತು ನಮ್ಮನ್ನು ನಡೆಸಲು ಕೆಲವು ದೇವರುಗಳನ್ನು ಮಾಡು’(H) ಎಂದರು. 41 ಆದ್ದರಿಂದ ಆ ಜನರು ಕರುವಿನಾಕೃತಿಯಲ್ಲಿ ಒಂದು ವಿಗ್ರಹವನ್ನು ಮಾಡಿ, ಅದಕ್ಕೆ ಯಜ್ಞಗಳನ್ನು ಅರ್ಪಿಸಿದರು. ಆ ಜನರು ತಮ್ಮ ಕೈಯಾರೆ ಮಾಡಿಕೊಂಡ ವಿಗ್ರಹದ ವಿಷಯದಲ್ಲಿ ಬಹು ಸಂತೋಷಪಟ್ಟರು! 42 ಆದರೆ ದೇವರು ಅವರಿಗೆ ವಿರೋಧವಾಗಿ, ಆಕಾಶದ ಸುಳ್ಳುದೇವರುಗಳನ್ನು ಪೂಜಿಸುವಂತೆ ಅವರನ್ನು ಬಿಟ್ಟುಬಿಟ್ಟನು. ಇದರ ಬಗ್ಗೆ ಪ್ರವಾದಿಗಳ ಪುಸ್ತಕದಲ್ಲಿ ಹೀಗೆ ಬರೆದಿದೆ: ದೇವರು ಹೀಗೆನ್ನುತ್ತಾನೆ,
‘ಯೆಹೂದ್ಯ ಜನರಾದ ನೀವು ನಲವತ್ತು ವರ್ಷಗಳ ಕಾಲ ಮರಳುಗಾಡಿನಲ್ಲಿದ್ದಾಗ
ನನಗೆ ಯಜ್ಞಗಳನ್ನು ಅರ್ಪಿಸಲಿಲ್ಲ; ಕಾಣಿಕೆಗಳನ್ನು ತರಲಿಲ್ಲ.
43 ನೀವು ನಿಮ್ಮೊಂದಿಗೆ ಮೊಲೋಖನ (ಸುಳ್ಳುದೇವರ) ಗುಡಾರವನ್ನು
ಮತ್ತು ನಿಮ್ಮ ರೇಫಾ ದೇವತೆಯ ನಕ್ಷತ್ರರೂಪವನ್ನು ಹೊತ್ತುಕೊಂಡು ಹೋದಿರಿ.
ಆರಾಧಿಸುವುದಕ್ಕಾಗಿ ನೀವು ಮಾಡಿಕೊಂಡ ವಿಗ್ರಹಗಳೇ ಇವು.
ಆದ್ದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆಗೆ ಕಳುಹಿಸಿಬಿಡುವೆನು.’(I)
44 “ದೇವರು ನಮ್ಮ ಪಿತೃಗಳೊಂದಿಗೆ ಯಾವ ಗುಡಾರದಲ್ಲಿ ಮತಾಡಿದ್ದನೋ ಆ ಗುಡಾರವು[b] ಈ ಯೆಹೂದ್ಯರೊಂದಿಗೆ ಮರಳುಗಾಡಿನಲ್ಲಿತ್ತು. ಈ ಗುಡಾರವನ್ನು ನಿರ್ಮಿಸುವ ಬಗೆಯನ್ನು ದೇವರು ಮೋಶೆಗೆ ತಿಳಿಸಿಕೊಟ್ಟನು. ದೇವರು ತನಗೆ ತೋರಿಸಿದ ಆಕಾರದಂತೆಯೇ ಮೋಶೆಯು ಅದನ್ನು ನಿರ್ಮಿಸಿದನು. 45 ತರುವಾಯ ಇತರ ಜನಾಂಗಗಳ ನಾಡುಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಯೆಹೋಶುವನು ನಮ್ಮ ಪಿತೃಗಳನ್ನು ಮುನ್ನಡೆಸಿದನು. ನಮ್ಮ ಜನರು ಆ ದೇಶದೊಳಗೆ ಹೋದಾಗ, ದೇವರು ಇತರ ಜನರನ್ನು ಅಲ್ಲಿಂದ ಹೊರಡಿಸಿಬಿಟ್ಟನು. ನಮ್ಮ ಜನರು ಆ ಹೊಸ ದೇಶದೊಳಗೆ ಹೋದಾಗ ಈ ಗುಡಾರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ನಮ್ಮ ಜನರು ಈ ಗುಡಾರವನ್ನು ತಮ್ಮ ಪಿತೃಗಳಿಂದ ಸ್ವೀಕರಿಸಿಕೊಂಡು ದಾವೀದನ ಕಾಲದವರೆಗೂ ಅದನ್ನು ಇಟ್ಟುಕೊಂಡಿದ್ದರು. 46 ದೇವರು ದಾವೀದನನ್ನು ಬಹಳವಾಗಿ ಮೆಚ್ಚಿಕೊಂಡನು. ‘ಯಾಕೋಬನ ದೇವರಾದ ನಿನಗಾಗಿ ಒಂದು ಆಲಯವನ್ನು ಕಟ್ಟಲು ನನಗೆ ಅವಕಾಶಕೊಡು’ ಎಂದು ದಾವೀದನು ದೇವರನ್ನು ಕೇಳಿಕೊಂಡನು. 47 ಆದರೆ ದೇವಾಲಯವನ್ನು ಕಟ್ಟಿದ್ದು (ದಾವೀದನ ಮಗನಾದ) ಸೊಲೊಮೋನನೇ.
48 “ಆದರೆ ಮನುಷ್ಯರು ತಮ್ಮ ಕೈಯಾರೆ ನಿರ್ಮಿಸಿದ ಮನೆಗಳಲ್ಲಿ ಮಹೋನ್ನತನು (ದೇವರು) ವಾಸಿಸುವುದಿಲ್ಲ. ಪ್ರವಾದಿಯು ಹೀಗೆ ಬರೆದಿದ್ದಾನೆ:
49 ‘ಪ್ರಭುವು ಹೀಗೆನ್ನುತ್ತಾನೆ,
ಪರಲೋಕವು ನನ್ನ ಸಿಂಹಾಸನ.
ಭೂಮಿಯು ನನ್ನ ಪಾದಪೀಠ.
ನೀವು ನನಗೋಸ್ಕರ ಯಾವ ಬಗೆಯ ಮನೆಯನ್ನು ಕಟ್ಟಬಲ್ಲಿರಿ?
ನಾನು ವಿಶ್ರಮಿಸಿಕೊಳ್ಳತಕ್ಕ ಸ್ಥಳವೇ ಇಲ್ಲ!
50 ನೆನಪಿರಲಿ, ಈ ವಸ್ತುಗಳನ್ನೆಲ್ಲ ಮಾಡಿದವನು ನಾನೇ!’(J)”
51 ಸ್ತೆಫನನು ಮಾತನ್ನು ಮುಂದುವರಿಸಿದನು: “ಮೊಂಡರಾದ ಯೆಹೂದ್ಯನಾಯಕರೇ! ನೀವು ನಿಮ್ಮ ಹೃದಯಗಳನ್ನು ದೇವರಿಗೆ ಕೊಟ್ಟಿಲ್ಲ. ನೀವು ಆತನಿಗೆ ಕಿವಿಗೊಡುವುದಿಲ್ಲ. ಪವಿತ್ರಾತ್ಮನು ನಿಮಗೆ ತಿಳಿಸಲು ಪ್ರಯತ್ನಿಸುತ್ತಿರುವ ವಿಷಯಕ್ಕೆ ನೀವು ಯಾವಾಗಲೂ ವಿರೋಧಿಗಳಾಗಿದ್ದೀರಿ. ನಿಮ್ಮ ಪಿತೃಗಳು ಹೀಗೆಯೇ ಮಾಡಿದರು ಮತ್ತು ನೀವೂ ಅವರಂತೆಯೇ ಇದ್ದೀರಿ! 52 ಜೀವಸಿದ್ದ ಪ್ರವಾದಿಗಳಲ್ಲಿ ಪ್ರತಿಯೊಬ್ಬರನ್ನೂ ನಿಮ್ಮ ಪಿತೃಗಳು ಹಿಂಸಿಸಿದರು. ನೀತಿವಂತನೊಬ್ಬನು (ಕ್ರಿಸ್ತನು) ಬರುತ್ತಾನೆಂದು ಬಹುಕಾಲದ ಹಿಂದೆಯೇ ಆ ಪ್ರವಾದಿಗಳು ತಿಳಿಸಿದ್ದರು. ಆದರೆ ನಿಮ್ಮ ಪಿತೃಗಳು ಆ ಪ್ರವಾದಿಗಳನ್ನು ಕೊಂದುಹಾಕಿದರು. ಈಗ ನೀವು ನೀತಿವಂತನಿಗೆ ವಿರುದ್ಧವಾಗಿ ತಿರುಗಿ ಆತನನ್ನು ಕೊಂದುಹಾಕಿದಿರಿ. 53 ದೇವರು ತನ್ನ ದೂತರ ಮೂಲಕ ಕೊಟ್ಟ ಮೋಶೆಯ ಧರ್ಮಶಾಸ್ತ್ರವನ್ನು ಪಡೆದುಕೊಂಡ ನೀವೇ ಅದಕ್ಕೆ ವಿಧೇಯರಾಗುವುದಿಲ್ಲ!”
ಸ್ತೆಫನನು ಕೊಲ್ಲಲ್ಪಟ್ಟನು
54 ಸ್ತೆಫನನ ಈ ಮಾತುಗಳನ್ನು ಕೇಳಿದ ಆ ಯೆಹೂದ್ಯನಾಯಕರು ಬಹಳ ಕೋಪಗೊಂಡರು. ಅವರು ರೋಷದಿಂದ ಸ್ತೆಫನನ ಮೇಲೆ ಹಲ್ಲು ಕಡಿದರು. 55 ಆದರೆ ಸ್ತೆಫನನು ಪವಿತ್ರಾತ್ಮಭರಿತನಾಗಿದ್ದನು. ಅವನು ಆಕಾಶದತ್ತ ಕಣ್ಣೆತ್ತಿ ನೋಡಿ, ದೇವರ ಮಹಿಮೆಯನ್ನೂ ಯೇಸುವು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ಕಂಡು, 56 “ಇಗೋ, ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನು (ಯೇಸು) ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ!” ಎಂದು ಹೇಳಿದನು.
57 ಆಗ ಯೆಹೂದ್ಯನಾಯಕರೆಲ್ಲ ಗಟ್ಟಿಯಾಗಿ ಕೂಗಿ, ತಮ್ಮ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡರು. ಅವರೆಲ್ಲರು ಸ್ತೆಫನನ ಬಳಿಗೆ ಒಟ್ಟಾಗಿ ಓಡಿಬಂದು, 58 ಅವನನ್ನು ಪಟ್ಟಣದಿಂದ ಹೊರಗೆ ಎಳೆದೊಯ್ದು, ಅವನು ಸಾಯುವವರೆಗೂ ಅವನ ಮೇಲೆ ಕಲ್ಲುಗಳನ್ನು ಎಸೆದರು. ಸ್ತೆಫನನ ವಿರುದ್ಧವಾಗಿ ಸುಳ್ಳು ಹೇಳಿದ ಜನರು ತಮ್ಮ ಮೇಲಂಗಿಗಳನ್ನು ಬಿಚ್ಚಿ ಸೌಲನೆಂಬ ಯುವಕನಿಗೆ ಕೊಟ್ಟು, 59 ಸ್ತೆಫನನಿಗೆ ಕಲ್ಲುಗಳನ್ನು ಎಸೆದರು. ಆದರೆ ಸ್ತೆಫನನು ಪ್ರಾರ್ಥಿಸುತ್ತಾ, “ಪ್ರಭುವಾದ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿಕೊ!” ಎಂದನು. 60 ಅವನು ಮೊಣಕಾಲೂರಿ, “ಪ್ರಭುವೇ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡ!” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು.
ವಿಪತ್ತಿನ ದಿನ
16 ನನಗೆ ಯೆಹೋವನಿಂದ ಈ ಸಂದೇಶ ಬಂದಿತು: 2 “ಯೆರೆಮೀಯನೇ, ನೀನು ಮದುವೆ ಮಾಡಿಕೊಳ್ಳಬಾರದು. ನೀನು ಇಲ್ಲಿ ಮಕ್ಕಳನ್ನು ಹೊಂದಬಾರದು.”
3 ಯೆಹೂದ ಪ್ರದೇಶದಲ್ಲಿ ಹುಟ್ಟಿದ ಮಕ್ಕಳ ಕುರಿತಾಗಿಯೂ ಅದರ ತಂದೆತಾಯಿಗಳ ಕುರಿತಾಗಿಯೂ ಯೆಹೋವನು ಹೀಗೆ ಹೇಳುತ್ತಾನೆ. 4 “ಅವರು ಒಂದು ಭಯಾನಕವಾದ ರೀತಿಯಲ್ಲಿ ಮರಣಹೊಂದುತ್ತಾರೆ. ಅವರನ್ನು ಯಾರೂ ಹೂಳುವುದಿಲ್ಲ. ಅವರ ದೇಹಗಳು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುತ್ತವೆ. ಅವರು ವೈರಿಗಳ ಖಡ್ಗಗಳಿಂದ ಮಡಿಯುವರು. ಅವರು ಅನ್ನವಿಲ್ಲದೆ ಸಾಯುವರು. ಅವರ ಶವಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೇಲಿನ ಕಾಡುಪ್ರಾಣಿಗಳಿಗೂ ಆಹಾರವಾಗುವವು.”
5 ಯೆಹೋವನು ಹೇಳಿದನು: “ಯೆರೆಮೀಯನೇ, ಜನರು ಶವಸಂಸ್ಕಾರದ ಊಟಮಾಡುತ್ತಿರುವ ಮನೆಯೊಳಗೆ ನೀನು ಹೋಗಬೇಡ. ಸತ್ತವರ ಸಂಗಡ ಅಳುವದಕ್ಕಾಗಲಿ ಅಥವಾ ನಿನ್ನ ದುಃಖವನ್ನು ಸೂಚಿಸುವದಕ್ಕಾಗಲಿ, ನೀನು ಅಲ್ಲಿಗೆ ಹೋಗಬೇಡ. ಏಕೆಂದರೆ ನಾನು ಅವರ ಮೇಲಿನ ನನ್ನ ಕೃಪೆಯನ್ನು ಹಿಂತೆಗೆದುಕೊಂಡಿದ್ದೇನೆ. ನಾನು ಯೆಹೂದದ ಈ ಜನರಿಗೆ ಕರುಣೆಯನ್ನು ತೋರಿಸುವದಿಲ್ಲ. ನಾನು ಅವರಿಗೋಸ್ಕರ ವ್ಯಥೆಪಡುವದಿಲ್ಲ.” ಇದು ಯೆಹೋವನ ನುಡಿ.
6 “ಯೆಹೂದದ ಪ್ರಮುಖರು ಮತ್ತು ಜನಸಾಮಾನ್ಯರು ಸತ್ತುಹೋಗುವರು. ಯಾರೂ ಅವರನ್ನು ಹೂಳುವದಿಲ್ಲ. ಅವರಿಗೋಸ್ಕರ ಗೋಳಾಡುವದಿಲ್ಲ. ಅವರ ಬಗ್ಗೆ ದುಃಖ ಸೂಚಿಸಲು ಯಾರೂ ತಮಗೆ ಗಾಯಗಳನ್ನು ಮಾಡಿಕೊಳ್ಳುವದಿಲ್ಲ; ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವದಿಲ್ಲ. 7 ಸತ್ತವರಿಗಾಗಿ ಗೋಳಾಡುವವರ ಸಲುವಾಗಿ ಯಾರೂ ಆಹಾರವನ್ನು ತರುವದಿಲ್ಲ. ತಾಯಿಯನ್ನಾಗಲಿ ತಂದೆಯನ್ನಾಗಲಿ ಕಳೆದುಕೊಂಡವರಿಗೆ ಯಾರೂ ಸಮಾಧಾನವನ್ನು ಹೇಳುವದಿಲ್ಲ. ಸತ್ತವರಿಗಾಗಿ ಅಳುವವರನ್ನು ಸಮಾಧಾನಪಡಿಸಲು ಯಾರೂ ಪಾನಪಾತ್ರೆಯನ್ನು ನೀಡುವದಿಲ್ಲ.
8 “ಯೆರೆಮೀಯನೇ, ಔತಣವನ್ನು ಏರ್ಪಡಿಸಿದ ಮನೆಗೆ ಹೋಗಬೇಡ. ಆ ಮನೆಗೆ ಹೋಗಿ ಊಟಮಾಡುತ್ತಾ ಪಾನಮಾಡುತ್ತಾ ಕುಳಿತುಕೊಳ್ಳಬೇಡ. 9 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: ‘ಉಲ್ಲಾಸಪಡುತ್ತಿದ್ದ ಜನರ ಧ್ವನಿಯನ್ನು ನಾನು ಬೇಗನೆ ನಿಲ್ಲಿಸಿಬಿಡುತ್ತೇನೆ. ಮದುವೆಯ ಸಮಾರಂಭಗಳಲ್ಲಿ ಜನರು ಮಾಡುವ ಸಂತೋಷ ಸಂಭ್ರಮದ ಧ್ವನಿಯನ್ನು ನಾನು ನಿಲ್ಲಿಸಿಬಿಡುತ್ತೇನೆ. ಇದು ನಿನ್ನ ಜೀವನಕಾಲದಲ್ಲಿಯೇ ಸಂಭವಿಸುತ್ತದೆ. ಇದೆಲ್ಲವನ್ನು ನಾನು ಬೇಗ ಮಾಡುತ್ತೇನೆ.’
10 “ಯೆರೆಮೀಯನೇ, ನೀನು ಈ ವಿಷಯವನ್ನು ಯೆಹೂದದ ಜನರಿಗೆ ಹೇಳಿದಾಗ ‘ಈ ಮಹಾವಿಪತ್ತು ನಮಗೆ ಸಂಭವಿಸಬೇಕೆಂದು ಯೆಹೋವನು ಏಕೆ ನಿರ್ಣಯಿಸಿದ್ದಾನೆ? ನಮ್ಮ ಅಪರಾಧವೇನು? ನಮ್ಮ ದೇವರಾದ ಯೆಹೋವನ ವಿರುದ್ಧವಾಗಿ ನಾವು ಮಾಡಿದ ಪಾಪವೇನು?’ ಎಂದು ಅವರು ಕೇಳುತ್ತಾರೆ. 11 ನೀನು ಅವರಿಗೆ ಹೀಗೆ ಹೇಳಬೇಕು: ‘ನಿಮ್ಮ ಪೂರ್ವಿಕರು ನನ್ನ ಉಪದೇಶದಂತೆ ನಡೆಯುವದನ್ನು ಬಿಟ್ಟುಬಿಟ್ಟರು’ ಎಂದು ದೇವರು ಹೇಳುತ್ತಾನೆ. ‘ಅವರು ನನ್ನ ಅನುಸರಣೆಯನ್ನು ಬಿಟ್ಟು ಬೇರೆ ದೇವರುಗಳನ್ನು ಅನುಸರಿಸಲು ಮತ್ತು ಸೇವಿಸಲು ಪ್ರಾರಂಭಿಸಿದರು. ಅವರು ಅನ್ಯದೇವರುಗಳನ್ನು ಪೂಜಿಸಿದರು. ನಿಮ್ಮ ಪೂರ್ವಿಕರು ನನ್ನನ್ನು ತ್ಯಜಿಸಿ ನನ್ನ ಧರ್ಮವಿಧಿಗಳನ್ನು ಮೀರಿದರು. 12 ನೀವು ನಿಮ್ಮ ಪೂರ್ವಿಕರಿಗಿಂತ ಭಯಂಕರವಾದ ಪಾಪವನ್ನು ಮಾಡಿದ್ದೀರಿ. ನೀವು ಬಹಳ ಮೊಂಡರಾಗಿದ್ದೀರಿ. ನೀವು ನಿಮ್ಮ ಮನಸ್ಸಿಗೆ ಬಂದಂತೆ ಮಾಡುತ್ತಿದ್ದೀರಿ. ನೀವು ನನ್ನ ಆಜ್ಞೆಯನ್ನು ಪಾಲಿಸುತ್ತಿಲ್ಲ. 13 ಆದ್ದರಿಂದ ನಾನು ನಿಮ್ಮನ್ನು ಈ ದೇಶದ ಹೊರಗೆ ಎಸೆಯುತ್ತೇನೆ. ನೀವು ಪರದೇಶಕ್ಕೆ ಸೆರೆಹೋಗುವಂತೆ ಮಾಡುತ್ತೇನೆ. ನೀವು ಮತ್ತು ನಿಮ್ಮ ಪೂರ್ವಿಕರು ಎಂದೂ ನೋಡದ ಪ್ರದೇಶಕ್ಕೆ ನೀವು ಹೋಗುವಿರಿ. ಆ ಪ್ರದೇಶದಲ್ಲಿ ನೀವು ನಿಮ್ಮ ಮನಸ್ಸಿಗೆ ಬಂದಷ್ಟು ಸುಳ್ಳುದೇವತೆಗಳ ಸೇವೆಮಾಡಬಹುದು. ನಾನು ನಿಮಗೆ ಸಹಾಯವನ್ನೂ ಮಾಡುವದಿಲ್ಲ, ಯಾವ ರೀತಿಯ ಒಲವನ್ನೂ ತೋರುವದಿಲ್ಲ.’”
14 ಯೆಹೋವನು ಹೇಳಿದನು: “ಪ್ರಮಾಣ ಮಾಡಬೇಕಾದರೆ ಜನರು ‘ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದ ಯೆಹೋವನ ಜೀವದಾಣೆ’ ಎಂದು ಹೇಳುತ್ತಾರೆ. ಒಂದು ಕಾಲ ಬರಲಿದೆ. 15 ಆಗ ಅವರು ‘ಇಸ್ರೇಲರನ್ನು ಉತ್ತರದ ನಾಡಿನಿಂದಲೂ ಎಲ್ಲಾ ದೇಶಗಳಿಂದಲೂ ಹೊರತಂದ ಯೆಹೋವನ ಜೀವದಾಣೆ.’ ಇಸ್ರೇಲರನ್ನು ನಾನು ಅವರ ಪೂರ್ವಿಕರಿಗೆ ಕೊಟ್ಟ ದೇಶಕ್ಕೆ ಮತ್ತೆ ಕರೆದುಕೊಂಡು ಬರುವೆನು. ಆದ್ದರಿಂದಲೇ ಜನರು ಹೀಗೆ ಹೇಳುವರು.”
16 ಯೆಹೋವನು, “ನಾನು ಅನೇಕ ಮೀನುಗಾರರನ್ನು ಈ ಪ್ರದೇಶಕ್ಕೆ ಕರೆಸುವೆನು. ಆ ಮೀನುಗಾರರು ಯೆಹೂದದ ಜನರನ್ನು ಬಂಧಿಸುವರು. ಇದಾದ ಮೇಲೆ ನಾನು ಹಲವಾರು ಜನ ಬೇಟೆಗಾರರನ್ನು ಈ ಪ್ರದೇಶಕ್ಕೆ ಕರೆಸುವೆನು. ಆ ಬೇಟೆಗಾರರು[a] ಪ್ರತಿಯೊಂದು ಪರ್ವತ, ಬೆಟ್ಟ ಮತ್ತು ಬಂಡೆಗಳ ಸಂದುಗೊಂದುಗಳಲ್ಲಿ ಯೆಹೂದ್ಯರನ್ನು ಬೇಟೆಯಾಡುವರು. 17 ಅವರು ಮಾಡುವ ಪಾಪಕೃತ್ಯಗಳು ನನಗೆ ಕಾಣಿಸುತ್ತಿವೆ. ಯೆಹೂದದ ಜನರು ತಾವು ಮಾಡುವದನ್ನು ನನ್ನಿಂದ ಮುಚ್ಚಿಡಲು ಸಾಧ್ಯವಿಲ್ಲ. ಅವರ ಪಾಪವು ನನಗೆ ಗೊತ್ತಾಗುವುದು. 18 ಅವರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಯೆಹೂದದ ಜನರನ್ನು ಶಿಕ್ಷಿಸುತ್ತೇನೆ. ಪ್ರತಿಯೊಂದು ಪಾಪಕ್ಕಾಗಿ ನಾನು ಅವರನ್ನು ಎರಡು ಸಲ ಶಿಕ್ಷಿಸುತ್ತೇನೆ. ಅವರು ನನ್ನ ದೇಶವನ್ನು ‘ಹೊಲಸು’ ಮಾಡಿದ್ದಕ್ಕಾಗಿ ನಾನು ಹೀಗೆ ಮಾಡುತ್ತೇನೆ. ಅವರು ತಮ್ಮ ಭಯಂಕರವಾದ ವಿಗ್ರಹಗಳಿಂದ ನನ್ನ ಪ್ರದೇಶವನ್ನು ‘ಹೊಲಸು’ ಮಾಡಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ಆದರೆ ಅವರು ತಮ್ಮ ವಿಗ್ರಹಗಳಿಂದ ನನ್ನ ದೇಶವನ್ನು ತುಂಬಿಸಿಬಿಟ್ಟಿದ್ದಾರೆ.”
19 ಯೆಹೋವನೇ, ನೀನೇ ನನ್ನ ಬಲವಾಗಿರುವೆ. ನನ್ನ ರಕ್ಷಕನಾಗಿರುವೆ.
ಕಷ್ಟ ಬಂದಾಗ ಓಡಿಬಂದು ಆಶ್ರಯ ಪಡೆಯಲು ಸುರಕ್ಷಿತ ಸ್ಥಳವಾಗಿರುವೆ.
ಜಗತ್ತಿನ ಎಲ್ಲಾ ಭಾಗಗಳ ಜನಾಂಗದ ಜನರು ನಿನ್ನಲ್ಲಿಗೆ ಬರುವರು.
ಅವರು, “ನಮ್ಮ ಪೂರ್ವಿಕರು ಸುಳ್ಳುದೇವರುಗಳನ್ನಿಟ್ಟುಕೊಂಡಿದ್ದರು.
ಅವರು ಆ ನಿರರ್ಥಕವಾದ ವಿಗ್ರಹಗಳನ್ನು ಪೂಜಿಸಿದರು.
ಆದರೆ ಆ ವಿಗ್ರಹಗಳು ಅವರಿಗೆ ಕೊಂಚವೂ ಸಹಾಯ ಮಾಡಲಿಲ್ಲ” ಎಂದು ಹೇಳುವರು.
20 ಜನರು ನಿಜವಾದ ದೇವರುಗಳನ್ನು ಮಾಡಬಲ್ಲರೇ?
ಇಲ್ಲ, ಅವರು ವಿಗ್ರಹಗಳನ್ನು ಮಾಡಬಹುದು.
ಆದರೆ ಆ ವಿಗ್ರಹಗಳು ನಿಜವಾದ ದೇವರುಗಳಲ್ಲ.
21 “ವಿಗ್ರಹಗಳನ್ನು ಮಾಡುವ ಜನರಿಗೆ ನಾನು ಪಾಠ ಕಲಿಸುತ್ತೇನೆ.
ಈಗಲೇ ನಾನು ಅವರಿಗೆ ನನ್ನ ಶಕ್ತಿಯ ಬಗ್ಗೆ ಮತ್ತು ನನ್ನ ಬಲದ ಬಗ್ಗೆ ಕಲಿಸುವೆನು.
ಆಗ ನಾನು ದೇವರೆಂಬುದು ಅವರಿಗೆ ತಿಳಿಯುವುದು.
ನಾನೇ ಯೆಹೋವನು ಎಂಬುದು ಅವರಿಗೆ ಗೊತ್ತಾಗುವುದು.
ಪಾರ್ಶ್ವವಾಯುರೋಗಿಗೆ ಸ್ವಸ್ಥತೆ
(ಮತ್ತಾಯ 9:1-8; ಲೂಕ 5:17-26)
2 ಕೆಲವು ದಿನಗಳ ತರುವಾಯ, ಯೇಸು ಕಪೆರ್ನೌಮಿಗೆ ಹಿಂದಿರುಗಿ ಬಂದನು. ಯೇಸು ಮನೆಯಲ್ಲಿದ್ದಾನೆಂಬ ಸುದ್ದಿಯು ಹಬ್ಬಿತು. 2 ಜನರು ಗುಂಪುಗುಂಪಾಗಿ ಯೇಸುವಿನ ಉಪದೇಶವನ್ನು ಕೇಳಲು ಒಟ್ಟುಗೂಡಿದರು. ಮನೆಯು ತುಂಬಿಹೋಯಿತು. ಅಲ್ಲಿ ನಿಲ್ಲಲು ಹೊರಗಡೆಯಲ್ಲಿಯೂ ಸ್ಥಳವಿರಲಿಲ್ಲ. ಯೇಸು ಉಪದೇಶಿಸುತ್ತಿದ್ದನು. 3 ಕೆಲವು ಜನರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ತಂದರು. ಅವನನ್ನು ನಾಲ್ಕು ಮಂದಿ ಹೊತ್ತುಕೊಂಡಿದ್ದರು. 4 ಮನೆಯು ಜನರಿಂದ ತುಂಬಿಹೋಗಿದ್ದುದರಿಂದ ಅವರು ಅವನನ್ನು ಯೇಸುವಿನ ಬಳಿಗೆ ತರಲಾಗಲಿಲ್ಲ. ಆದ್ದರಿಂದ ಅವರು ಯೇಸುವಿದ್ದ ಮನೆಯ ಮೇಲ್ಛಾವಣೆಯ ಮೇಲಕ್ಕೆ ಹೋಗಿ ಯೇಸುವಿದ್ದ ಸ್ಥಳದ ಮೇಲೆ ಹೆಂಚುಗಳನ್ನು ತೆಗೆದುಹಾಕಿದರು. ಹೀಗೆ ಅಲ್ಲಿ ಒಂದು ದ್ವಾರವನ್ನು ಮಾಡಿ ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. 5 ಈ ಜನರ ದೊಡ್ಡ ನಂಬಿಕೆಯನ್ನು ಕಂಡ ಯೇಸು ರೋಗಿಗೆ, “ಯುವಕನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
6 ಕೆಲವು ಮಂದಿ ಧರ್ಮೋಪದೇಶಕರು ಅಲ್ಲಿ ಕುಳಿತಿದ್ದರು. ಯೇಸು ಹೇಳಿದ್ದನ್ನು ಕೇಳಿದ ಅವರು, 7 “ಇವನು ಹೀಗೇಕೆ ಹೇಳುತ್ತಿದ್ದಾನೆ? ಇದು ದೇವದೂಷಣೆ! ದೇವರೊಬ್ಬನೇ ಪಾಪಗಳನ್ನು ಕ್ಷಮಿಸಲು ಸಾಧ್ಯ” ಎಂದು ತಮ್ಮ ಮನಸ್ಸಿನಲ್ಲಿ ಅಂದುಕೊಂಡರು.
8 ಧರ್ಮೋಪದೇಶಕರ ಆಲೋಚನೆಯನ್ನು ತಕ್ಷಣವೇ ಗ್ರಹಿಸಿಕೊಂಡ ಯೇಸು ಅವರಿಗೆ, “ನೀವು ಹೀಗೇಕೆ ಆಲೋಚಿಸುತ್ತೀರಿ? 9 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೋ? ಇಲ್ಲವೇ, ‘ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಹೋಗು’ ಎಂದು ಹೇಳುವುದೋ? 10 ಆದರೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರವಿದೆ ಎಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿದನು. ಬಳಿಕ ಯೇಸು ರೋಗಿಗೆ, 11 “ನಾನು ನಿನಗೆ ಹೇಳುತ್ತಿದ್ದೇನೆ, ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು.
12 ಆ ಕೂಡಲೇ ರೋಗಿಯು ಎದ್ದುನಿಂತು, ತನ್ನ ಹಾಸಿಗೆಯನ್ನು ತೆಗೆದುಕೊಂಡು ಅಲ್ಲಿಂದ ಹೊರಗೆ ಹೋದನು. ಇದನ್ನು ಕಂಡ ಆ ಜನರೆಲ್ಲರೂ ಆಶ್ಚರ್ಯಚಕಿತರಾಗಿ, “ನಾವು ಹಿಂದೆಂದೂ ಇಂಥ ಸಂಗತಿಯನ್ನು ನೋಡಿಯೇ ಇಲ್ಲ” ಎಂದು ಹೇಳಿ ದೇವರನ್ನು ಕೊಂಡಾಡಿದರು.
ಯೇಸುವನ್ನು ಹಿಂಬಾಲಿಸಿದ ಲೇವಿ
(ಮತ್ತಾಯ 9:9-13; ಲೂಕ 5:27-32)
13 ಯೇಸು ಮತ್ತೆ ಸರೋವರಕ್ಕೆ ಹೋದನು. ಅನೇಕ ಜನರು ಆತನನ್ನು ಹಿಂಬಾಲಿಸಿ ಅಲ್ಲಿಗೆ ಹೋದದ್ದರಿಂದ ಆತನು ಅವರಿಗೆ ಉಪದೇಶಿಸಿದನು. 14 ಯೇಸು ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಸುಂಕವಸೂಲಿ ಮಾಡುತ್ತಿದ್ದ ಅಲ್ಫಾಯನ ಮಗನಾದ ಲೇವಿಯನ್ನು ಕಂಡನು. ಲೇವಿಯು ಸುಂಕದಕಟ್ಟೆಯಲ್ಲಿ ಕುಳಿತಿದ್ದನು. ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು. ಆಗ ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.
15 ಅಂದು ಸ್ವಲ್ಪ ಹೊತ್ತಾದ ಬಳಿಕ ಯೇಸು ಲೇವಿಯ ಮನೆಯಲ್ಲಿ ಊಟಮಾಡುತ್ತಿದ್ದನು. ಅಲ್ಲಿ ಅನೇಕ ಸುಂಕದ ಅಧಿಕಾರಿಗಳು ಮತ್ತು ಇತರ ಕೆಟ್ಟ ಜನರು ಸಹ ಯೇಸು ಮತ್ತು ಆತನ ಶಿಷ್ಯರ ಸಂಗಡ ಊಟಮಾಡುತ್ತಿದ್ದರು. ಈ ಜನರಲ್ಲಿ ಅನೇಕರು ಯೇಸುವಿನ ಹಿಂಬಾಲಕರಾಗಿದ್ದರು. 16 ಈ ಸುಂಕದ ಅಧಿಕಾರಿಗಳೊಂದಿಗೆ ಮತ್ತು ಇತರ ಕೆಟ್ಟ ಜನರೊಂದಿಗೆ ಯೇಸು ಊಟಮಾಡುತ್ತಿರುವುದನ್ನು ಧರ್ಮೋಪದೇಶಕರು ಮತ್ತು ಫರಿಸಾಯರು ನೋಡಿ ಆತನ ಶಿಷ್ಯರಿಗೆ, “ಯೇಸು ಪಾಪಿಗಳೊಂದಿಗೆ ಮತ್ತು ಸುಂಕದ ಅಧಿಕಾರಿಗಳೊಂದಿಗೆ ಏಕೆ ಊಟ ಮಾಡುತ್ತಾನೆ?” ಎಂದು ಕೇಳಿದರು.
17 ಬಳಿಕ ಯೇಸು ಅವರಿಗೆ, “ಆರೋಗ್ಯವಂತರಿಗೆ ವೈದ್ಯನ ಅಗತ್ಯವಿಲ್ಲ, ಆರೋಗ್ಯವಿಲ್ಲದವರಿಗೆ ವೈದ್ಯನ ಅಗತ್ಯವಿದೆ. ನಾನು ನೀತಿವಂತರನ್ನು ಕರೆಯಲು ಬರಲಿಲ್ಲ, ಪಾಪಿಗಳನ್ನು ಕರೆಯಲು ಬಂದೆನು” ಎಂದು ಹೇಳಿದನು.
ಯೇಸು ಇತರ ಧಾರ್ಮಿಕ ನಾಯಕರಂತಲ್ಲ
(ಮತ್ತಾಯ 9:14-17; ಲೂಕ 5:33-39)
18 ಯೋಹಾನನ ಶಿಷ್ಯರು ಮತ್ತು ಫರಿಸಾಯರು ಉಪವಾಸ ಮಾಡುತ್ತಿದ್ದರು. ಕೆಲವು ಜನರು ಯೇಸುವಿನ ಬಳಿಗೆ ಬಂದು, “ಯೋಹಾನನ ಶಿಷ್ಯರು ಮತ್ತು ಫರಿಸಾಯರ ಹಿಂಬಾಲಕರು ಉಪವಾಸ ಮಾಡುತ್ತಾರೆ. ಆದರೆ ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ?” ಎಂದು ಕೇಳಿದರು.
19 ಯೇಸು, “ಮದುವೆಯಲ್ಲಿ ಮದುಮಗನು ತಮ್ಮ ಜೊತೆಯಲ್ಲಿ ಇರುವಾಗ ಅವನ ಗೆಳೆಯರು ವ್ಯಸನಪಡುವುದಿಲ್ಲ. ಉಪವಾಸ ಮಾಡುವುದಿಲ್ಲ. 20 ಆದರೆ ಮದುಮಗನು ಅವರನ್ನು ಬಿಟ್ಟುಹೋಗುವ ಕಾಲ ಬರುತ್ತದೆ. ಆಗ ಅವನ ಗೆಳೆಯರು ವ್ಯಸನಪಡುತ್ತಾರೆ, ಉಪವಾಸ ಮಾಡುತ್ತಾರೆ.
21 “ಒಬ್ಬ ವ್ಯಕ್ತಿಯು ತನ್ನ ಹಳೆಯ ಮೇಲಂಗಿಯ ಹರಕಿಗೆ ಹೊಸ ಬಟ್ಟೆಯನ್ನು ತೇಪೆ ಹಚ್ಚುವುದಿಲ್ಲ. ಒಂದುವೇಳೆ ಹಚ್ಚಿದರೆ, ಆ ತೇಪೆಯು ಹಿಂಜಿಕೊಂಡು ಆ ಹರಕನ್ನು ಮತ್ತಷ್ಟು ದೊಡ್ಡದನ್ನಾಗಿ ಮಾಡುತ್ತದೆ. 22 ಹಾಗೆಯೇ, ಜನರು ಹೊಸ ದ್ರಾಕ್ಷಾರಸವನ್ನು ಹಳೆಯ ಬುದ್ದಲಿಗಳಲ್ಲಿ ಹಾಕಿಡುವುದಿಲ್ಲ. ಏಕೆಂದರೆ ಅದು ಬುದ್ದಲಿಗಳನ್ನು ಒಡೆದುಹಾಕುವುದರಿಂದ ದ್ರಾಕ್ಷಾರಸವೂ ಹಾಳಾಗುತ್ತದೆ. ಆದ್ದರಿಂದ ಜನರು ಯಾವಾಗಲೂ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ” ಎಂದು ಉತ್ತರಕೊಟ್ಟನು.
ಕೆಲವು ಯೆಹೂದ್ಯರು ಯೇಸುವಿನ ಕುರಿತು ಮಾಡಿದ ಟೀಕೆ
(ಮತ್ತಾಯ 12:1-8; ಲೂಕ 6:1-5)
23 ಸಬ್ಬತ್‌ದಿನದಂದು, ಯೇಸು ತನ್ನ ಶಿಷ್ಯರೊಂದಿಗೆ ಕೆಲವು ಹೊಲಗಳ ಮೂಲಕ ಹಾದುಹೋಗುತ್ತಿದ್ದನು. ಶಿಷ್ಯರು ತಿನ್ನಲು ಕೆಲವು ಕಾಳಿನ ತೆನೆಗಳನ್ನು ಕಿತ್ತುಕೊಂಡರು. 24 ಫರಿಸಾಯರು ಇದನ್ನು ಕಂಡು ಯೇಸುವಿಗೆ, “ನಿನ್ನ ಶಿಷ್ಯರು ಹೀಗೇಕೆ ಮಾಡುತ್ತಾರೆ? ಸಬ್ಬತ್‌ದಿನದಂದು ಹೀಗೆ ಮಾಡುವುದು ಯೆಹೊದ್ಯರ ನಿಯಮಗಳಿಗೆ ವಿರುದ್ಧವಲ್ಲವೆ?” ಎಂದು ಕೇಳಿದರು.
25 ಯೇಸು ಅವರಿಗೆ, “ದಾವೀದನು ಮತ್ತು ಅವನ ಜನರು ಹಸಿದು ಆಹಾರವನ್ನು ಬಯಸಿದಾಗ ಅವನೇನು ಮಾಡಿದನೆಂಬುದನ್ನು ನೀವು ಓದಿದ್ದೀರಿ.[a] 26 ಅದು ಮಹಾಯಾಜಕನಾದ ಅಬಿಯಾತರನ ಕಾಲ. ದಾವೀದನು ದೇವಾಲಯಕ್ಕೆ ಹೋಗಿ, ದೇವರಿಗೆ ಅರ್ಪಿಸಿದ ರೊಟ್ಟಿಯನ್ನು ತಿಂದನು. ಯಾಜಕರು ಮಾತ್ರ ಆ ರೊಟ್ಟಿಯನ್ನು ತಿನ್ನತಕ್ಕದ್ದೆಂದು ಮೋಶೆಯ ಧರ್ಮಶಾಸ್ತ್ರ ಹೇಳುತ್ತದೆ. ದಾವೀದನು ತನ್ನೊಂದಿಗಿದ್ದ ಜನರಿಗೂ ಆ ರೊಟ್ಟಿಯನ್ನು ನೀಡಿದನು” ಎಂದು ಉತ್ತರಕೊಟ್ಟನು.
27 ನಂತರ ಯೇಸು ಫರಿಸಾಯರಿಗೆ, “ಸಬ್ಬತ್‌ದಿನವನ್ನು ನಿರ್ಮಾಣ ಮಾಡಿರುವುದು ಜನರ ಸಹಾಯಕ್ಕಾಗಿ. ಆದರೆ ಜನರನ್ನು ಸೃಷ್ಟಿಸಿರುವುದು ಸಬ್ಬತ್‌ದಿನಕ್ಕೆ ಅವರು ಅಧೀನರಾಗಿರಲಿ ಎಂದಲ್ಲ. 28 ಆದ್ದರಿಂದ ಮನುಷ್ಯಕುಮಾರನು ಸಬ್ಬತ್‌ದಿನಕ್ಕೂ ಉಳಿದೆಲ್ಲ ದಿನಗಳಿಗೂ ಪ್ರಭುವಾಗಿದ್ದಾನೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International