M’Cheyne Bible Reading Plan
14 ಯಾಜಕನಾದ ಎಲ್ಲಾಜಾರನು, ನೂನನ ಮಗನಾದ ಯೆಹೋಶುವನು ಮತ್ತು ಇಸ್ರೇಲಿನ ಕುಲಗಳ ನಾಯಕರು, ಇಸ್ರೇಲರಿಗೆ ಕಾನಾನ್ ನಾಡಿನ ಯಾವಯಾವ ಭಾಗವನ್ನು ಕೊಡಬೇಕೆಂಬುದನ್ನು ತೀರ್ಮಾನಿಸಿದರು. 2 ಜನರು ತಮ್ಮ ಪ್ರದೇಶವನ್ನು ಯಾವ ವಿಧಾನದಿಂದ ಆರಿಸಿಕೊಳ್ಳಬೇಕೆಂಬುದರ ಬಗ್ಗೆ ಬಹುಕಾಲದ ಹಿಂದೆಯೇ ಯೆಹೋವನು ಮೋಶೆಗೆ ತಿಳಿಸಿದ್ದನು. ತಮ್ಮತಮ್ಮ ಪ್ರದೇಶಗಳನ್ನು ನಿರ್ಣಯಿಸಲು ಇಸ್ರೇಲಿನ ಒಂಭತ್ತುವರೆ ಕುಲಗಳ ಜನರು ಚೀಟುಹಾಕಿದರು. 3 ಎರಡುವರೆ ಕುಲಗಳ ಜನರಿಗೆ ಮೋಶೆಯು ಜೋರ್ಡನ್ ನದಿಯ ಪೂರ್ವದಿಕ್ಕಿನ ಪ್ರದೇಶವನ್ನು ಕೊಟ್ಟಿದ್ದನು. ಆದರೆ ಲೇವಿಯ ಕುಲದವರಿಗೆ ಉಳಿದವರಂತೆ ಯಾವ ಪ್ರದೇಶವನ್ನೂ ಕೊಡಲಿಲ್ಲ. 4 ಹನ್ನೆರಡು ಕುಲಗಳಿಗೆ ಅವರವರ ಪ್ರದೇಶಗಳ ಪೂರ್ಣಸ್ವಾಸ್ತ್ಯವನ್ನು ಕೊಡಲಾಯಿತು. ಯೋಸೇಫನ ಮನೆತನದವರು ಮನಸ್ಸೆ ಮತ್ತು ಎಫ್ರಾಯೀಮ್ ಎಂಬ ಎರಡು ಕುಲಗಳಾಗಿ ವಿಂಗಡಿಸಲ್ಪಟ್ಟಿದ್ದರು. ಪ್ರತಿಯೊಂದು ಕುಲಕ್ಕೂ ಸ್ವಲ್ಪಸ್ವಲ್ಪ ಪ್ರದೇಶ ದೊರೆಯಿತು. ಆದರೆ ಲೇವಿ ಕುಲದ ಜನರಿಗೆ ಯಾವ ಪ್ರದೇಶವನ್ನೂ ಕೊಡಲಿಲ್ಲ. ಅವರಿಗೆ ವಾಸಿಸಲು ಕೆಲವು ಊರುಗಳನ್ನು ಮಾತ್ರ ಕೊಡಲಾಯಿತು. ಈ ಊರುಗಳು ಪ್ರತಿಯೊಂದು ಕುಲದ ಜನರ ಪ್ರದೇಶದಲ್ಲಿ ಇದ್ದವು. ಅವರ ಪಶುಗಳಿಗಾಗಿ ಹುಲ್ಲುಗಾವಲುಗಳನ್ನು ಕೊಡಲಾಯಿತು. 5 ಇಸ್ರೇಲರ ಕುಲಗಳಿಗೆ ಪ್ರದೇಶವನ್ನು ಹೇಗೆ ಹಂಚಬೇಕೆಂಬುದನ್ನು ಯೆಹೋವನು ಮೋಶೆಗೆ ಹೇಳಿದ್ದನು. ಆತನು ಆಜ್ಞಾಪಿಸಿದ ರೀತಿಯಲ್ಲಿಯೇ ಇಸ್ರೇಲರು ಪ್ರದೇಶವನ್ನು ಹಂಚಿಕೊಂಡರು.
ಕಾಲೇಬನಿಗೆ ದೊರೆತ ಪ್ರದೇಶ
6 ಒಂದು ದಿವಸ ಯೆಹೂದ ಕುಲದ ಕೆಲವರು ಗಿಲ್ಗಾಲಿನಲ್ಲಿದ್ದ ಯೆಹೋಶುವನ ಬಳಿಗೆ ಬಂದರು. ಅವರಲ್ಲಿ ಕನಿಜ್ಜೀಯನೂ ಯೆಫುನ್ನೆಯ ಮಗನೂ ಆದ ಕಾಲೇಬನು ಒಬ್ಬನಾಗಿದ್ದನು. ಕಾಲೇಬನು ಯೆಹೋಶುವನಿಗೆ, “ಕಾದೇಶ್‌ಬರ್ನೇಯದಲ್ಲಿ ಯೆಹೋವನು ತನ್ನ ಸೇವಕನಾದ[a] ಮೋಶೆಯೊಂದಿಗೆ ನಮ್ಮಿಬ್ಬರ ವಿಷಯವಾಗಿ ಮಾತಾಡಿದ್ದು ನಿನಗೆ ನೆನಪಿದೆಯಷ್ಟೇ. 7 ಯೆಹೋವನ ಸೇವಕನಾದ ಮೋಶೆಯು, ಈ ದೇಶದಲ್ಲಿ ಗೂಢಚರ್ಯ ಮಾಡುವುದಕ್ಕೆ ನನ್ನನ್ನು ಕಳುಹಿಸಿದ್ದನು. ಆಗ ನನಗೆ ನಲವತ್ತು ವರ್ಷವಾಗಿತ್ತು. ನಾನು ಹಿಂತಿರುಗಿ ಬಂದಾಗ ಈ ದೇಶದ ಬಗ್ಗೆ ದೇವರ ವಾಗ್ದಾನಗಳನ್ನು ನಂಬಿ ಯಥಾರ್ಥವಾದ ಸಂಗತಿಗಳನ್ನು ಮೋಶೆಗೆ ಹೇಳಿದೆ. 8 ನನ್ನ ಜೊತೆಯಲ್ಲಿ ಬಂದ ಬೇರೆಯವರು ಭಯವನ್ನುಂಟುಮಾಡುವ ಸಂಗತಿಗಳನ್ನು ಹೇಳಿದರು. ಆದರೆ ಯೆಹೋವನು ಆ ಭೂಮಿಯನ್ನು ನಮಗೆ ಕೊಡುತ್ತಾನೆಂದು ನಾನು ನಿಜವಾಗಿ ನಂಬಿದ್ದೆ. 9 ಆದ್ದರಿಂದ ಮೋಶೆಯು ಅಂದು ನನಗೆ, ‘ನೀನು ಸಂಚರಿಸಿ ನೋಡಿದ ಆ ಭೂಮಿಯು ನಿನ್ನ ಸ್ವಂತ ಭೂಮಿಯಾಗುತ್ತದೆ. ನಿನ್ನ ಮಕ್ಕಳು ಶಾಶ್ವತವಾಗಿ ಅದರ ಸ್ವಾಸ್ತ್ಯವನ್ನು ಹೊಂದಿರುತ್ತಾರೆ. ನೀನು ನನ್ನ ದೇವರಾದ ಯೆಹೋವನಲ್ಲಿ ನಿಜವಾದ ನಂಬಿಕೆ ಇಟ್ಟಿದ್ದಕ್ಕಾಗಿ ಆ ಪ್ರದೇಶವನ್ನು ನಿನಗೆ ಕೊಡುತ್ತೇನೆ’ ಎಂದು ವಾಗ್ದಾನ ಮಾಡಿದನು.
10 “ಯೆಹೋವನು ತಾನು ಹೇಳಿದಂತೆ ನನ್ನನ್ನು ನಲವತ್ತೈದು ವರ್ಷ ಜೀವಂತವಾಗಿ ಉಳಿಸಿದ್ದಾನೆ. ಆ ಸಮಯದಲ್ಲಿ ನಾವೆಲ್ಲರು ಅರಣ್ಯದಲ್ಲಿ ಸುತ್ತಾಡಿದೆವು. ಈಗ ನಾನು ಎಂಭತ್ತೈದು ವರ್ಷದವನಾಗಿದ್ದೇನೆ. 11 ಮೋಶೆಯು ನನ್ನನ್ನು ಕಳುಹಿಸಿ ಕೊಟ್ಟಾಗ ನಾನು ದೃಢಕಾಯನಾಗಿದ್ದಂತೆಯೇ ಈಗಲೂ ಸಹ ದೃಢಕಾಯನಾಗಿದ್ದೇನೆ. ಆಗ ನಾನು ಯುದ್ಧಮಾಡಲು ಹೇಗೆ ಸಿದ್ಧವಾಗಿರುತ್ತಿದ್ದೆನೋ ಅದೇ ರೀತಿ ಈಗಲೂ ಸಿದ್ಧನಾಗಿದ್ದೇನೆ. 12 ಆದ್ದರಿಂದ ಯೆಹೋವನು ನನಗೆ ಬಹಳ ಹಿಂದೆಯೇ ವಾಗ್ದಾನ ಮಾಡಿದ್ದ ಬೆಟ್ಟಪ್ರದೇಶವನ್ನು ಈಗ ನನಗೆ ಕೊಡು. ಬಲಿಷ್ಠರಾದ ಅನಾಕವಂಶಸ್ಥರು ವಾಸವಾಗಿರುವ ಆ ಪಟ್ಟಣಗಳು ಬಹಳ ದೊಡ್ಡದಾಗಿವೆಯೆಂದೂ ಸುಭದ್ರವಾದವುಗಳೆಂದೂ ನೀನು ಕೇಳಿರುವೆ. ಆದರೆ ಯೆಹೋವನು ನನ್ನೊಂದಿಗಿರುವುದರಿಂದ ಆತನು ಹೇಳಿದಂತೆಯೇ ಆ ಪ್ರದೇಶವನ್ನು ನಾನು ತೆಗೆದುಕೊಳ್ಳುತ್ತೇನೆ” ಅಂದನು.
13 ಯೆಹೋಶುವನು ಯೆಫುನ್ನೆಯ ಮಗನಾದ ಕಾಲೇಬನನ್ನು ಆಶೀರ್ವದಿಸಿ ಹೆಬ್ರೋನ್ ನಗರವನ್ನು ಅವನಿಗೆ ಸ್ವಾಸ್ತ್ಯವಾಗಿ ಕೊಟ್ಟನು. 14 ಆ ನಗರ ಈಗಲೂ ಕೆನಿಜ್ಜೀಯನಾದ ಯೆಫುನ್ನೆಯ ಮಗನಾದ ಕಾಲೇಬನ ವಂಶದವರ ಸ್ವಾಸ್ತ್ಯವಾಗಿದೆ. ಏಕೆಂದರೆ ಅವನು ಇಸ್ರೇಲಿನ ದೇವರಾದ ಯೆಹೋವನನ್ನು ನಂಬಿದ್ದನು ಮತ್ತು ಆತನ ಆಜ್ಞೆಯನ್ನು ಪಾಲಿಸಿದನು. 15 ಹಿಂದೆ ಆ ನಗರದ ಹೆಸರು ಕಿರ್ಯಾತ್ ಅರ್ಬ ಎಂದಿತ್ತು. ಅನಾಕ ವಂಶದವರಲ್ಲಿ ಶ್ರೇಷ್ಠನಾದ ಅರ್ಬ ಎಂಬವನ ಸ್ಮರಣಾರ್ಥವಾಗಿ ಆ ನಗರಕ್ಕೆ ಅವನ ಹೆಸರನ್ನೇ ಇಡಲಾಗಿತ್ತು.
ಇದಾದ ಮೇಲೆ, ಆ ಪ್ರದೇಶದಲ್ಲಿ ಶಾಂತಿ ನೆಲೆಸಿತು.
ಯೆಹೂದ ಕುಲದವರಿಗೆ ಸ್ವಾಸ್ತ್ಯ
15 ಯೆಹೂದಕುಲಕ್ಕೆ ಕೊಟ್ಟ ಸ್ವಾಸ್ತ್ಯವನ್ನು ಆ ಕುಲದ ಗೋತ್ರಗಳಲ್ಲಿ ಹಂಚಲಾಗಿತ್ತು. ಆ ಪ್ರದೇಶವು ಎದೋಮಿನ ಗಡಿಯವರೆಗೂ ದಕ್ಷಿಣದಲ್ಲಿ ತೇಮಾನಿನ ಅಂಚಿನಲ್ಲಿರುವ ಚಿನ್ ಅರಣ್ಯದವರೆಗೂ ವಿಸ್ತರಿಸಿಕೊಂಡಿತ್ತು. 2 ಯೆಹೂದ್ಯರ ಸ್ವಾಸ್ತ್ಯವು ಲವಣಸಮುದ್ರದ ದಕ್ಷಿಣ ತೀರದಿಂದ ಆರಂಭವಾಗಿತ್ತು. 3 ಆ ಸೀಮೆಯು ದಕ್ಷಿಣದಲ್ಲಿ ಸ್ಕಾರ್ಪಿಯನ್ ಎಂಬ ಇಕ್ಕಟ್ಟಾದ ಮಾರ್ಗದಿಂದ ಮುನ್ನಡೆದು ಚಿನ್ ಮರುಭೂಮಿಯವರೆಗೆ ಹೋಗಿತ್ತು. ಅಲ್ಲಿಂದ ಅದು ದಕ್ಷಿಣದಲ್ಲಿ ಕಾದೇಶ್‌ಬರ್ನೇಯದವರೆಗೂ ಹೆಚ್ರೋನ್‌ನಿಂದ ಅದ್ದಾರವರೆಗೂ ಮುಂದುವರಿದು ಅಲ್ಲಿ ತಿರುಗಿಕೊಂಡು ಕರ್ಕದವರೆಗೆ ವಿಸ್ತರಿಸಿತ್ತು. 4 ಆ ಸೀಮೆಯು ಈಜಿಪ್ಟಿನ ಅಚ್ಮೋನಿನ ಹಳ್ಳಕ್ಕೆ ಮುಂದುವರೆದು ಮೆಡಿಟರೆನಿಯನ್ ಸಮುದ್ರದವರೆಗೆ ಹಬ್ಬಿತ್ತು. ಈ ಭೂಮಿಯೆಲ್ಲಾ ಅವರ ದಕ್ಷಿಣ ಸೀಮೆಯಲ್ಲಿತ್ತು.
5 ಅವರ ಪ್ರದೇಶದ ಪೂರ್ವದಿಕ್ಕಿನ ಸೀಮೆ ಮೃತ್ಯುಸಾಗರದ ದಂಡೆಯಿಂದ ಜೋರ್ಡನ್ ನದಿಯು ಸಮುದ್ರವನ್ನು ಸೇರುವ ಕ್ಷೇತ್ರದವರೆಗೆ ಹಬ್ಬಿತ್ತು.
ಅವರ ಉತ್ತರ ಸೀಮೆಯು ಜೋರ್ಡನ್ ನದಿಯು ಮೃತ್ಯುಸಾಗರವನ್ನು ಸೇರುವ ಕ್ಷೇತ್ರದಿಂದ ಆರಂಭವಾಗಿ 6 ಅಲ್ಲಿಂದ ಬೇತ್‌ಹೊಗ್ಲಾಕ್ಕೆ ಸಾಗಿ ಬೇತ್‌ಅರಬಾದ ಉತ್ತರಕ್ಕೆ ಮುಂದುವರಿದಿತ್ತು. ಅಲ್ಲಿಂದ ಅದು ರೂಬೇನನ ಮಗನಾದ ಬೋಹನನ ಬಂಡೆಯವರೆಗೆ ಸಾಗಿತ್ತು. 7 ಅಲ್ಲಿಂದ ಅದು ಆಕೋರಿನ ಕಣಿವೆಯಿಂದ ಹಾದು ದೆಬೀರಕ್ಕೆ ಮುಟ್ಟಿ ಅಲ್ಲಿ ಉತ್ತರಕ್ಕೆ ತಿರುಗಿ ಗಿಲ್ಗಾಲಕ್ಕೆ ಮುಟ್ಟಿತ್ತು. ಅದು ಮೀಮಿನ ಬೆಟ್ಟದಿಂದ ಹೋಗುವ ದಾರಿಯ ಎದುರಿಗೆ ಗಿಲ್ಗಾಲ್ ಇದೆ. ಅದು ಹಳ್ಳದ ದಕ್ಷಿಣ ಭಾಗದಲ್ಲಿದೆ. ಈ ಸೀಮೆಯು ಏನ್‌ಷೆಮೆಷ್ ನದಿಯವರೆಗೆ ಹೋಗಿ ಏನ್‌ರೋಗೆಲ್‌ನಲ್ಲಿ ಕೊನೆಗೊಳ್ಳುತ್ತದೆ. 8 ಆ ಸೀಮೆಯು ಜೆರುಸಲೇಮ್ ಎಂದು ಕರೆಯಲ್ಪಟುವ ಯೆಬೂಸಿಯ ನಗರದ ದಕ್ಷಿಣ ಮಾರ್ಗವಾಗಿ ಬೆನ್‌ಹಿನ್ನೋಮ್ ಕಣಿವೆಗೆ ಹೋಗುತ್ತದೆ. ಆ ಸ್ಧಳದಲ್ಲಿ ಸೀಮೆಯು ಹಿನ್ನೋಮ್ ಕಣಿವೆಯ ಪಶ್ಚಿಮದಿಕ್ಕಿನ ಬೆಟ್ಟದ ತುದಿಗೆ ಹೋಗುತ್ತದೆ. ಇದು ರೆಫಾಯೀಮ್ ಕಣಿವೆಯ ಉತ್ತರದ ಕೊನೆ. 9 ಅಲ್ಲಿಂದ ಆ ಸೀಮೆಯು ನೆಫ್ತೋಹ ಬುಗ್ಗೆಗೆ ಹೋಗುತ್ತದೆ; ಅಲ್ಲಿಂದ ಎಫ್ರೋನ್ ಬೆಟ್ಟದ ಸಮೀಪದ ನಗರಗಳಿಗೆ ಹೋಗುತ್ತದೆ; ಅಲ್ಲಿಂದ ತಿರುಗಿ “ಬಾಲಾ” ಎಂಬ ಊರಿಗೆ ಹೋಗುತ್ತದೆ. (ಬಾಲಾವನ್ನು ಕಿರ್ಯತ್ಯಾರೀಮ್ ಎಂದೂ ಕರೆಯುತ್ತಾರೆ.) 10 ಬಾಲಾದಲ್ಲಿ ಆ ಸೀಮೆಯು ಪಶ್ಚಿಮಕ್ಕೆ ತಿರುಗಿಕೊಂಡು ಸೇಯೀರ್ ಬೆಟ್ಟಪ್ರದೇಶಕ್ಕೆ ಹೋಗುತ್ತದೆ; ಅಲ್ಲಿಂದ ಅದು ಕೆಸಾಲೋನ್ ಎಂಬ ಯಾರೀಮ್ ಬೆಟ್ಟದ ಉತ್ತರ ಮಾರ್ಗವಾಗಿ ಇಳಿಯುತ್ತಾ ಬೇತ್‌ಷೆಮೆಷಿಗೂ ಅಲ್ಲಿಂದ ತಿಮ್ನಾ ಊರಿಗೂ ಹೋಗುತ್ತದೆ. 11 ಅಲ್ಲಿಂದ ಆ ಗಡಿಯು ಉತ್ತರ ದಿಕ್ಕಿನಲ್ಲಿರುವ ಎಕ್ರೋನ್ ಗುಡ್ಡಕ್ಕೆ ಹೋಗಿ ಅಲ್ಲಿಂದ ಶಿಕ್ಕೆರೋನಿಗೆ ತಿರುಗಿಕೊಂಡು ಬಾಲಾ ಗುಡ್ಡವನ್ನು ತಲುಪುತ್ತದೆ. ಆ ಗಡಿಯು ಯಬ್ನೇಲಿನವರೆಗೆ ಮುಂದುವರೆದು ನಂತರ ಮೆಡಿಟರೆನಿಯನ್ ಸಮುದ್ರ ತೀರದಲ್ಲಿ ಮುಗಿಯುವುದು. 12 ಮೆಡಿಟರೆನಿಯನ್ ಸಮುದ್ರತೀರವೇ ಯೆಹೂದ್ಯರ ಸ್ವಾಸ್ತ್ಯದ ಪಶ್ಚಿಮ ಸೀಮೆಯಾಗಿತ್ತು. ಹೀಗೆ ಯೆಹೂದ್ಯರ ಸ್ವಾಸ್ತ್ಯವು ಈ ನಾಲ್ಕು ಸೀಮೆಯ ಒಳಗಡೆ ಇತ್ತು. ಯೆಹೂದ್ಯರ ಗೋತ್ರಗಳು ಈ ಪ್ರದೇಶದಲ್ಲಿದ್ದವು.
13 ಯೆಫುನ್ನೆಯ ಮಗನಾದ ಕಾಲೇಬನಿಗೆ ಯೆಹೂದ ಕುಲದವರ ಸ್ವಾಸ್ತ್ಯದಲ್ಲಿಯೇ ಸ್ವಲ್ಪ ಪ್ರದೇಶವನ್ನು ಕೊಡಬೇಕೆಂದು ದೇವರು ಯೆಹೋಶುವನಿಗೆ ಹೇಳಿದ್ದನು. ಅದಕ್ಕಾಗಿ ಯೆಹೋಶುವನು ಕಾಲೇಬನಿಗೆ ದೇವರು ಆಜ್ಞಾಪಿಸಿದ ಪ್ರದೇಶವನ್ನು ಕೊಟ್ಟನು. ಯೆಹೋಶುವನು ಅವನಿಗೆ ಹೆಬ್ರೋನ್ ಎಂಬ ಕಿರ್ಯಾತರ್ಬ ಊರನ್ನು ಕೊಟ್ಟನು. (ಅರ್ಬನು ಅನಾಕನ ತಂದೆ.) 14 ಹೆಬ್ರೋನ್‌ನಲ್ಲಿ ವಾಸವಾಗಿದ್ದ ಮೂರು ಅನಾಕ ಕುಟುಂಬಗಳನ್ನು ಕಾಲೇಬನು ಅಲ್ಲಿಂದ ಬಲವಂತವಾಗಿ ಹೊರಡಿಸಿದನು. ಆ ಕುಟುಂಬಗಳ ಹೆಸರುಗಳು ಶೇಷೈ, ಅಹೀಮನ್ ಮತ್ತು ತಲ್ಮೈ. ಅವರು ಅನಾಕನ ವಂಶಸ್ಥರಾಗಿದ್ದರು. 15 ಆಮೇಲೆ ಕಾಲೇಬನು ದೆಬೀರಿನಲ್ಲಿ ವಾಸಮಾಡುತ್ತಿದ್ದ ಜನರ ವಿರುದ್ಧ ಹೋರಾಡಿದನು. (ಹಿಂದಿನ ಕಾಲದಲ್ಲಿ ದೆಬೀರಿಗೆ ಕಿರ್ಯತ್‌ಸೇಫೇರ್ ಎಂದು ಕರೆಯುತ್ತಿದ್ದರು.) 16 ಕಾಲೇಬನು, “ನಾನು ಕಿರ್ಯತ್ ಸೇಫೇರಿನ ಮೇಲೆ ಧಾಳಿ ಮಾಡಲಿಚ್ಛಿಸುತ್ತೇನೆ. ಆ ನಗರದ ಮೇಲೆ ಧಾಳಿಮಾಡಿ ಅದನ್ನು ಗೆದ್ದುಕೊಟ್ಟವರಿಗೆ ನನ್ನ ಮಗಳಾದ ಅಕ್ಷಾಳನ್ನು ಮದುವೆಮಾಡಿ ಕೊಡುತ್ತೇನೆ” ಎಂದು ಸಾರಿದನು.
17 ಕೆನಜನ ಮಗನಾದ ಒತ್ನೀಯೇಲನು ಆ ಪಟ್ಟಣವನ್ನು ಗೆದ್ದನು. ಕಾಲೇಬನು ತನ್ನ ಮಗಳಾದ ಅಕ್ಷಾಳನ್ನು ಒತ್ನೀಯೇಲನಿಗೆ ಮದುವೆ ಮಾಡಿಕೊಟ್ಟನು. 18 ಒತ್ನೀಯೇಲನ ಮನೆಗೆ ಅಕ್ಷಾ ಹೋದಳು. ಕಾಲೇಬನಿಂದ ಇನ್ನಷ್ಟು ಭೂಮಿಯನ್ನು ಕೇಳಲು ಅಕ್ಷಾಳನ್ನು ಒತ್ನೀಯೇಲನು[b] ಪ್ರೇರೇಪಿಸಿದನು. ಅಕ್ಷಾಳು ತನ್ನ ತಂದೆಯ ಬಳಿಗೆ ಬಂದು ಕತ್ತೆಯ ಮೇಲಿಂದ ಇಳಿದಾಗ, “ನಿನಗೆ ಏನುಬೇಕು?” ಎಂದು ಕಾಲೇಬನು ಕೇಳಿದನು.
19 ಅದಕ್ಕೆ ಅವಳು “ನನ್ನನ್ನು ಆಶೀರ್ವದಿಸು.[c] ನೀನು ನನಗೆ ನೆಗೆವ್‌ನಲ್ಲಿ ಮರುಭೂಮಿಯನ್ನು ಕೊಟ್ಟಿರುವೆ. ದಯವಿಟ್ಟು ನೀರಿರುವ ಭೂಮಿಯನ್ನು ಸ್ವಲ್ಪಕೊಡು” ಎಂದು ಕೇಳಿಕೊಂಡಳು. ಅವಳ ಕೋರಿಕೆಗನುಸಾರವಾಗಿ ಕಾಲೇಬನು ಮೇಲಿನ ಮತ್ತು ಕೆಳಗಿನ ನೀರಿನ ಬುಗ್ಗೆಗಳನ್ನು ಕೊಟ್ಟನು.
20 ದೇವರು ವಾಗ್ದಾನ ಮಾಡಿದ ಭೂಮಿಯನ್ನು ಯೆಹೂದ ಕುಲವು ಪಡೆದುಕೊಂಡಿತು. ಪ್ರತಿಯೊಂದು ಗೋತ್ರವು ಆ ಭೂಮಿಯ ಸ್ವಲ್ಪ ಭಾಗವನ್ನು ಪಡೆಯಿತು.
21 ಯೆಹೂದ ಕುಲವು ನೆಗೆವ್ ದಕ್ಷಿಣಭಾಗದಲ್ಲಿದ್ದ ಎಲ್ಲ ಊರುಗಳನ್ನು ಪಡೆಯಿತು. ಈ ಊರುಗಳು ಎದೋಮಿನ ಸೀಮೆಯ ಹತ್ತಿರ ಇದ್ದವು. ಆ ಊರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:
ಕಬ್ಜೇಲ್, ಏದೆರ್, ಯಾಗೂರ್, 22 ಕೀನಾ, ದೀಮೋನಾ, ಆದಾದಾ, 23 ಕೆದೆಷ್, ಹಾಚೋರ್, ಇತ್ನಾನ್, 24 ಜೀಫ್, ಟೆಲೆಮ್, ಬೆಯಾಲೋತ್, 25 ಹಾಚೋರ್‌ಹದತ್ತಾ, ಹಾಚೋರ್ ಎಂಬುವ ಕಿರ್ಯೋತ್‌ಹೆಚ್ರೋನ್, 26 ಅಮಾಮ್, ಶೆಮ, ಮೋಲಾದಾ, 27 ಹಚರ್‌ಗದ್ದಾ, ಹೆಷ್ಮೋನ್, ಬೇತ್ಪೆಲೆಟ್, 28 ಹಚರ್‌ಷೂವಾಲ್, ಬೇರ್ಷೆಬ, ಬಿಜ್ಯೋತ್ಯಾ, 29 ಬಾಲಾ, ಇಯ್ಯೀಮ್, ಎಚೆಮ್, 30 ಎಲ್ಟೋಲದ್, ಕೆಸೀಲ್, ಹೊರ್ಮಾ, 31 ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ, 32 ಲೆಬಾವೋತ್, ಶಿಲ್ಹೀಮ್, ಆಯಿನ್ ಮತ್ತು ರಿಮ್ಮೋನ್. ಒಟ್ಟಿಗೆ ಇಪ್ಪತ್ತೊಂಭತ್ತು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.
33 ಯೆಹೂದ ಕುಲದವರು ಪಶ್ಚಿಮ ದಿಕ್ಕಿನ ಇಳಕಲಿನ ಪ್ರದೇಶದಲ್ಲಿಯೂ ಕೆಲವು ಊರುಗಳನ್ನು ಪಡೆದಿದ್ದರು. ಆ ಊರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:
ಎಷ್ಟಾವೋಲ್, ಚೊರ್ಗಾ, ಅಶ್ನಾ, 34 ಜನೋಹ, ಏಂಗನ್ನೀಮ್, ತಪ್ಪೂಹ, ಏನಾಮ್, 35 ಯರ್ಮೂತ್, ಅದುಲ್ಲಾಮ್, ಸೋಕೋ, ಅಜೇಕಾ, 36 ಶಾರಯೀಮ್, ಅದೀತಯಿಮ್, ಗೆದೇರಾ ಮತ್ತು ಗೆದೆರೋತಯಿಮ್. ಒಟ್ಟಿನಲ್ಲಿ ಹದಿನಾಲ್ಕು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.
37 ಯೆಹೂದ ಕುಲದವರಿಗೆ ಈ ಊರುಗಳನ್ನು ಸಹ ಕೊಡಲಾಯಿತು:
ಚೆನಾನ್, ಹದಾಷಾ, ಮಿಗ್ದಲ್ಗಾದ್, 38 ದಿಲಾನ್, ಮಿಚ್ಪೆ, ಯೊಕ್ತೇಲ್, 39 ಲಾಕೀಷ್, ಬೊಚ್ಕತ್, ಎಗ್ಲೋನ್, 40 ಕಬ್ಬೋನ್, ಲಹ್ಮಾಸ್, ಕಿತ್ಲೀಷ್, 41 ಗೆದೇರೋತ್, ಬೇತ್‌ದಾಗೋನ್, ನಾಮಾ ಮತ್ತು ಮಕ್ಕೆದಾ. ಒಟ್ಟಿನಲ್ಲಿ ಹದಿನಾರು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.
42 ಯೆಹೂದದ ಜನರು ಈ ಊರುಗಳನ್ನು ಸಹ ಪಡೆದುಕೊಂಡರು:
ಲಿಬ್ನಾ, ಎತೆರ್, ಆಷಾನ್, 43 ಇಫ್ತಾಹ, ಅಶ್ನಾ, ನೆಚೀಬ್, 44 ಕೆಯೀಲಾ, ಅಕ್ಜೀಬ್, ಮಾರೇಷಾ ಎಂಬ ಒಂಭತ್ತು ಪಟ್ಟಣಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು. 45 ಯೆಹೂದದ ಜನರು ಎಕ್ರೋನ್ ಪಟ್ಟಣವನ್ನು ಮತ್ತು ಅದರ ಸಮೀಪದಲ್ಲಿದ್ದ ಎಲ್ಲ ಸಣ್ಣ ಊರುಗಳನ್ನು ಮತ್ತು ಹೊಲಗದ್ದೆಗಳನ್ನು ಪಡೆದುಕೊಂಡರು. 46 ಎಕ್ರೋನಿನ ಪಶ್ಚಿಮದಲ್ಲಿದ್ದ ಪ್ರದೇಶ ಮತ್ತು ಅಷ್ಡೋದಿನ ಹತ್ತಿರದ ಎಲ್ಲಾ ಊರುಗಳನ್ನು ಮತ್ತು ಹೊಲಗದ್ದೆಗಳನ್ನು ಸಹ ಅವರು ಪಡೆದುಕೊಂಡರು. 47 ಅಷ್ಡೋದಿನ ಸುತ್ತಮುತ್ತಲಿನ ಎಲ್ಲ ಕ್ಷೇತ್ರ ಮತ್ತು ಅಲ್ಲಿಯ ಸಣ್ಣ ಊರುಗಳು ಯೆಹೂದ ಪ್ರದೇಶದ ಭಾಗವಾಗಿದ್ದವು. ಯೆಹೂದದ ಜನರು ಗಾಜಾದ ಸುತ್ತಮುತ್ತಲಿನ ಕ್ಷೇತ್ರ ಮತ್ತು ಹತ್ತಿರದ ಊರುಕೇರಿಗಳನ್ನೂ ಹೊಲಗದ್ದೆಗಳನ್ನೂ ಪಡೆದುಕೊಂಡರು. ಅವರ ನೆಲವು ಈಜಿಪ್ಟಿನ ನದಿಯವರೆಗೂ ವಿಸ್ತರಿಸಿತ್ತು; ಮೆಡಿಟರೆನಿಯನ್ ಸಮುದ್ರದ ತೀರದುದ್ದಕ್ಕೂ ಚಾಚಿತ್ತು.
48 ಯೆಹೂದದ ಜನರಿಗೆ ಬೆಟ್ಟಪ್ರದೇಶದಲ್ಲಿಯೂ ಊರುಗಳನ್ನು ಕೊಡಲಾಗಿತ್ತು. ಆ ಊರುಗಳ ಪಟ್ಟಿ ಇಂತಿದೆ:
ಶಾಮೀರ್, ಯತ್ತೀರ್, ಸೋಕೋ, 49 ದನ್ನಾ, ದೆಬೀರ್ ಎಂಬ ಕಿರ್ಯತ್‌ಸನ್ನಾ, 50 ಅನಾಬ್, ಎಷ್ಟೆಮೋ, ಅನೀಮ್, 51 ಗೋಷೆನ್, ಹೋಲೋನ್ ಮತ್ತು ಗಿಲೋ ಎಂಬ ಹನ್ನೊಂದು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.
52 ಯೆಹೂದದ ಜನರಿಗೆ ಈ ಊರುಗಳನ್ನು ಸಹ ಕೊಡಲಾಯಿತು:
ಅರಬ್, ದೂಮಾ, ಎಷಾನ್, 53 ಯಾನೂಮ್, ಬೇತ್‌ತಪ್ಪೂಹ, ಅಫೇಕಾ, 54 ಹುಮ್ಟಾ ಹೆಬ್ರೋನ್ ಎಂಬ ಕಿರ್ಯತರ್ಬ ಮತ್ತು ಚೀಯೋರ್ ಎಂಬ ಒಂಭತ್ತು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.
55 ಯೆಹೂದದ ಜನರಿಗೆ ಈ ಊರುಗಳನ್ನೂ ಕೊಡಲಾಯಿತು:
ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ, 56 ಇಜ್ರೇಲ್, ಯೆಗ್ದೆಯಾಮ್, ಜನೋಹ, 57 ಕಯಿನ್, ಗಿಬೆಯಾ ಮತ್ತು ತಿಮ್ನಾ ಎಂಬ ಹತ್ತು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.
58 ಯೆಹೂದದ ಜನರಿಗೆ ಈ ಊರುಗಳನ್ನೂ ಕೊಡಲಾಯಿತು:
ಹಲ್ಹೂಲ್, ಬೇತ್‌ಚೂರ್, ಗೆದೋರ್, 59 ಮಾರಾತ್, ಬೇತನೋತ್, ಎಲ್ಟೆಕೋನ್ ಎಂಬ ಆರು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.
60 ಯೆಹೂದದ ಜನರಿಗೆ ರಬ್ಬಾ ಮತ್ತು ಕಿರ್ಯತ್ಯಾರೀಮ್ ಎಂದು ಕರೆಯಲ್ಪಡುವ ಕಿರ್ಯತ್‌ಬಾಳ್ ಎಂಬ ಎರಡು ಊರುಗಳನ್ನು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳನ್ನು ಸಹ ಕೊಡಲಾಯಿತು.
61 ಯೆಹೂದದ ಜನರಿಗೆ ಮರುಭೂಮಿಯಲ್ಲಿಯೂ ಕೆಲವು ಊರುಗಳನ್ನು ಕೊಡಲಾಯಿತು. ಆ ಊರುಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:
ಬೇತ್‌ಅರಾಬಾ, ಮಿದ್ದೀನ್, ಸೆಕಾಕಾ, 62 ನಿಬ್ಷಾನ್, ಉಪ್ಪಿನಪಟ್ಟಣ ಮತ್ತು ಏಂಗೆದೀ ಎಂಬ ಆರು ಊರುಗಳು ಮತ್ತು ಅವುಗಳ ಸುತ್ತಮುತ್ತಲಿನ ಹೊಲಗದ್ದೆಗಳು.
63 ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಹಾಕಲು ಯೆಹೂದ ಕುಲದವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಯೆಬೂಸಿಯರು ಇಂದಿನವರೆಗೂ ಜೆರುಸಲೇಮಿನಲ್ಲಿ ಯೆಹೂದ ಕುಲದವರೊಡನೆ ವಾಸವಾಗಿದ್ದಾರೆ.
146 ಯೆಹೋವನಿಗೆ ಸ್ತೋತ್ರವಾಗಲಿ!
ನನ್ನ ಮನವೇ, ಯೆಹೋವನನ್ನು ಸ್ತುತಿಸು!
2 ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
ಆತನನ್ನು ಸಂಕೀರ್ತಿಸುವೆನು.
3 ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
4 ಮನುಷ್ಯರು ಸತ್ತು ಸಮಾಧಿಗೆ ಸೇರುವರು;
ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
5 ಯಾರಿಗೆ ದೇವರು ಸಹಾಯಕನೋ,
ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
6 ಯೆಹೋವನು ಆಕಾಶವನ್ನೂ ಭೂಮಿಯನ್ನೂ
ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
7 ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
8 ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
ಯೆಹೋವನು ನೀತಿವಂತರನ್ನು ಪ್ರೀತಿಸುವನು.
9 ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!
ಯೆಹೋವನಿಗೆ ಸ್ತೋತ್ರವಾಗಲಿ!
147 ಯೆಹೋವನನ್ನು ಸ್ತುತಿಸಿರಿ! ಆತನು ಒಳ್ಳೆಯವನು.
ನಮ್ಮ ದೇವರನ್ನು ಸಂಕೀರ್ತಿಸಿರಿ.
ಆತನನ್ನು ಸ್ತುತಿಸುವುದು ಒಳ್ಳೆಯದೂ ಸಂತೋಷಕರವೂ ಆಗಿದೆ.
2 ಯೆಹೋವನು ಜೆರುಸಲೇಮನ್ನು ಕಟ್ಟಿದನು.
ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದ ಇಸ್ರೇಲರನ್ನು ಆತನು ಹಿಂದಕ್ಕೆ ಕರೆತಂದನು.
3 ಅವರ ಒಡೆದ ಹೃದಯಗಳನ್ನು ಆತನು ವಾಸಿಮಾಡುವನು;
ಅವರ ಗಾಯಗಳನ್ನು ಕಟ್ಟುವನು.
4 ಆತನು ನಕ್ಷತ್ರಗಳನ್ನು ಎಣಿಸುವನು.
ಆತನಿಗೆ ಪ್ರತಿಯೊಂದು ನಕ್ಷತ್ರದ ಹೆಸರು ತಿಳಿದಿದೆ.
5 ನಮ್ಮ ಒಡೆಯನು ಬಹು ದೊಡ್ಡವನೂ ಪರಾಕ್ರಮಿಯೂ ಆಗಿದ್ದಾನೆ.
ಆತನ ಜ್ಞಾನವು ಅಪರಿಮಿತವಾಗಿದೆ.
6 ಯೆಹೋವನು ದೀನರಿಗೆ ಆಧಾರವಾಗಿದ್ದಾನೆ.
ದುಷ್ಟರನ್ನಾದರೋ ನಾಚಿಕೆಗೆ ಗುರಿಪಡಿಸುವನು.
7 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
ನಮ್ಮ ದೇವರನ್ನು ಹಾರ್ಪ್‌ವಾದ್ಯಗಳೊಂದಿಗೆ ಸ್ತುತಿಸಿರಿ.
8 ಆತನು ಆಕಾಶವನ್ನು ಮೋಡಗಳಿಂದ ತುಂಬಿಸುವನು;
ಭೂಮಿಗಾಗಿ ಮಳೆಯನ್ನು ಸುರಿಸುವನು;
ಬೆಟ್ಟಗಳ ಮೇಲೆ ಹುಲ್ಲನ್ನು ಬೆಳೆಯಮಾಡುವನು.
9 ದೇವರು ಪ್ರಾಣಿಗಳಿಗೂ
ಪಕ್ಷಿಯ ಮರಿಗಳಿಗೂ ಆಹಾರ ಕೊಡುವನು.
10 ಯುದ್ಧದ ಕದುರೆಗಳಾಗಲಿ ಶಕ್ತಿಯುತರಾದ ಸೈನಿಕರಾಗಲಿ ಆತನನ್ನು ಮೆಚ್ಚಿಸಲಾರವು.
11 ಯೆಹೋವನು ತನ್ನನ್ನು ಆರಾಧಿಸುವ ಜನರಲ್ಲೇ ಸಂತೋಷಪಡುವನು.
ಆತನು ತನ್ನ ಶಾಶ್ವತ ಪ್ರೀತಿಯಲ್ಲಿ ಭರವಸವಿಟ್ಟಿರುವವರನ್ನು ಮೆಚ್ಚಿಕೊಳ್ಳುವನು.
12 ಜೆರುಸಲೇಮೇ, ಯೆಹೋವನನ್ನು ಸ್ತುತಿಸು!
ಚೀಯೋನೇ, ನಿನ್ನ ದೇವರನ್ನು ಸ್ತುತಿಸು!
13 ಜೆರುಸಲೇಮೇ, ದೇವರು ನಿನ್ನ ಬಾಗಿಲುಗಳ ಸರಳುಗಳನ್ನು ಬಲಪಡಿಸುವನು;
ನಿನ್ನ ನಗರದಲ್ಲಿರುವ ಜನರನ್ನು ಆಶೀರ್ವದಿಸುವನು.
14 ಆತನು ನಿಮ್ಮ ದೇಶದಲ್ಲಿ ಶಾಂತಿಯನ್ನು ನೆಲೆಗೊಳಿಸಿದನು.
ನಿಮ್ಮನ್ನು ಶ್ರೇಷ್ಠವಾದ ಗೋಧಿಯಿಂದ ತೃಪ್ತಿಪಡಿಸಿದನು.
15 ಆತನು ಭೂಮಿಗೆ ಆಜ್ಞಾಪಿಸಲು
ಅದು ಕೂಡಲೆ ವಿಧೇಯವಾಗುತ್ತದೆ.
16 ನೆಲವು ಉಣ್ಣೆಯಂತೆ ಬಿಳುಪಾಗುವವರೆಗೆ ಆತನು ಮಂಜನ್ನು ಬೀಳಿಸುವನು;
ಹಿಮವನ್ನು ಗಾಳಿಯ ಮೂಲಕ ಧೂಳಿನಂತೆ ಹರಡುವನು.
17 ಆತನು ಆಕಾಶದಿಂದ ಕಲ್ಲುಗಳಂತಿರುವ ಆಲಿಕಲ್ಲನ್ನು ಸುರಿಸುವನು;
ಯಾವನೂ ಚಳಿಯಲ್ಲಿ ಹೊರಗಡೆ ಇರಲಾರನು.
18 ಆತನು ಮತ್ತೊಂದು ಆಜ್ಞೆಯನ್ನು ಹೊರಡಿಸುವನು; ಆಗ ಬಿಸಿಗಾಳಿಯು ಮತ್ತೆ ಬೀಸುವುದು;
ಮಂಜು ಕರಗಿಹೋಗುವುದು. ನೀರು ಹರಿಯತೊಡಗುವುದು.
19 ಆತನು ಯಾಕೋಬಿಗೆ ತನ್ನ ಆಜ್ಞೆಗಳನ್ನು ಕೊಟ್ಟನು.
ಇಸ್ರೇಲಿಗೆ ತನ್ನ ಕಟ್ಟಳೆಗಳನ್ನೂ ನಿಯಮಗಳನ್ನೂ ಕೊಟ್ಟನು.
20 ಆತನು ಬೇರೆ ಯಾವ ಜನಾಂಗದವರಿಗೂ ಹೀಗೆ ಮಾಡಲಿಲ್ಲ.
ಆತನು ಅನ್ಯಜನಾಂಗಗಳವರಿಗೆ ತನ್ನ ಕಟ್ಟಳೆಗಳನ್ನು ಉಪದೇಶಿಸಲಿಲ್ಲ.
ಯೆಹೋವನಿಗೆ ಸ್ತೋತ್ರವಾಗಲಿ!
ಯೆಹೋವನ ಆಲಯದಲ್ಲಿ ಯೆರೆಮೀಯನ ಧರ್ಮೋಪದೇಶ
7 ಯೆರೆಮೀಯನಿಗೆ ಯೆಹೋವನ ಸಂದೇಶ ಹೀಗಿತ್ತು: 2 “ಯೆರೆಮೀಯನೇ, ಯೆಹೋವನ ಆಲಯದ ಹೆಬ್ಬಾಗಿಲಿನ ಹತ್ತಿರ ನಿಂತುಕೊಂಡು ಈ ಸಂದೇಶವನ್ನು ಸಾರು:
“‘ಇದು ಯೆಹೋವನ ಸಂದೇಶ. ಯೆಹೂದದ ಜನರೆಲ್ಲರೇ, ಯೆಹೋವನನ್ನು ಆರಾಧಿಸಲು ಈ ದ್ವಾರದಿಂದ ಪ್ರವೇಶ ಮಾಡುವ ಜನರೇ, ಈ ಸಂದೇಶವನ್ನು ಕೇಳಿರಿ. 3 ಯೆಹೋವನು ಇಸ್ರೇಲರ ದೇವರು. ಸರ್ವಶಕ್ತನಾದ ದೇವರು ಹೀಗೆ ಹೇಳುತ್ತಾನೆ: ನಿಮ್ಮ ನಡತೆಯನ್ನು ಬದಲಾಯಿಸಿರಿ; ಒಳ್ಳೆಯದನ್ನು ಮಾಡಿರಿ. ಆಗ ನೀವು ಇಲ್ಲಿರಲು ಆಸ್ಪದ ಕೊಡುತ್ತೇನೆ. 4 ಕೆಲವರು ಹೇಳುವ ಸುಳ್ಳುಗಳನ್ನು ನಂಬಬೇಡಿರಿ. ಅವರು “ಇದು ಯೆಹೋವನ ಆಲಯ, ಯೆಹೋವನ ಆಲಯ, ಯೆಹೋವನ ಆಲಯ” ಎಂದು ಹೇಳುತ್ತಾರೆ. 5 ನೀವು ನಿಮ್ಮ ನಡತೆಯನ್ನು ಬದಲಾಯಿಸಿ ಸತ್ಕಾರ್ಯಗಳನ್ನು ಮಾಡಿದರೆ ನಾನು ನಿಮಗೆ ಈ ಸ್ಥಳದಲ್ಲಿ ವಾಸಿಸಲು ಆಸ್ಪದಕೊಡುತ್ತೇನೆ. ನೀವು ಒಬ್ಬರಿಗೊಬ್ಬರು ನ್ಯಾಯವಾದ ರೀತಿಯಲ್ಲಿ ವ್ಯವಹರಿಸಬೇಕು. 6 ಅಪರಿಚಿತರೊಂದಿಗೂ ನೀವು ನ್ಯಾಯಬದ್ಧವಾಗಿ ವರ್ತಿಸಬೇಕು. ವಿಧವೆಯರಿಗೆ ಮತ್ತು ಅನಾಥರಿಗೆ ನೀವು ಒಳ್ಳೆಯದನ್ನು ಮಾಡಬೇಕು. ನಿರ್ದೋಷಿಗಳ ಕೊಲೆ ಮಾಡಬಾರದು; ಅನ್ಯ ದೇವರುಗಳನ್ನು ಸೇವಿಸಬಾರದು. ಏಕೆಂದರೆ ಅವುಗಳು ನಿಮ್ಮ ಜೀವನವನ್ನು ಹಾಳುಮಾಡುತ್ತವೆ. 7 ನೀವು ನನ್ನ ಆಜ್ಞೆಯನ್ನು ಪಾಲಿಸಿದರೆ ಇಲ್ಲಿರಲು ನಾನು ನಿಮಗೆ ಆಸ್ಪದ ಕೊಡುತ್ತೇನೆ. ನಾನು ಈ ಪ್ರದೇಶವನ್ನು ನಿಮ್ಮ ಪೂರ್ವಿಕರಿಗೆ ಶಾಶ್ವತವಾದ ಸ್ವಾಸ್ತ್ಯವಾಗಿ ಕೊಟ್ಟಿದ್ದೇನೆ.
8 “‘ನೀವು ಸುಳ್ಳುಗಳನ್ನು ನಂಬುತ್ತಿದ್ದೀರಿ, ಆ ಸುಳ್ಳುಗಳು ಹುರುಳಿಲ್ಲದವುಗಳಾಗಿವೆ. 9 ನೀವು ಕದಿಯುವುದಿಲ್ಲವೇ? ಕೊಲೆಗಳನ್ನು ಮಾಡುವುದಿಲ್ಲವೇ? ನೀವು ವ್ಯಭಿಚಾರ ಮಾಡುವುದಿಲ್ಲವೇ? ನೀವು ಅನ್ಯರ ಮೇಲೆ ಸುಳ್ಳು ದೋಷಾರೋಪಣೆ ಮಾಡುವುದಿಲ್ಲವೇ? ನೀವು ಸುಳ್ಳುದೇವರಾದ ಬಾಳನನ್ನು ಪೂಜಿಸಿ ಅನ್ಯದೇವರುಗಳ ಅನುಯಾಯಿಗಳಾಗಿಲ್ಲವೇ? 10 ನೀವು ಈ ಪಾಪಗಳನ್ನು ಮಾಡುತ್ತಿದ್ದರೂ ನನ್ನ ಹೆಸರಿನಿಂದ ಕರೆಯಲ್ಪಡುವ ಈ ಆಲಯದಲ್ಲಿ ನನ್ನ ಎದುರಿಗೆ ನಿಲ್ಲಬಹುದೆಂದು ಭಾವಿಸಿರುವಿರಾ? ನೀವು ನನ್ನ ಸಮ್ಮುಖದಲ್ಲಿ ನಿಂತುಕೊಂಡು, “ನಾವು ಸುರಕ್ಷಿತರಾಗಿದ್ದೇವೆ” ಎಂದು ಹೇಳಿಕೊಂಡು ನಿಮ್ಮ ದುಷ್ಕೃತ್ಯಗಳನ್ನು ಮುಂದುವರಿಸಬಹುದೆಂದು ಭಾವಿಸಿರುವಿರಾ? 11 ಈ ಪವಿತ್ರ ಆಲಯವನ್ನು ನನ್ನ ಹೆಸರಿನಿಂದ ಕರೆಯಲಾಗಿದೆ. ಈ ಆಲಯವು ನಿಮ್ಮ ದೃಷ್ಟಿಯಲ್ಲಿ ಕೇವಲ ಕಳ್ಳರು ಅಡಗುವ ಸ್ಥಳವಾಯಿತೇ? ನಾನು ನಿಮ್ಮ ವ್ಯವಹಾರವನ್ನೆಲ್ಲಾ ನೋಡುತ್ತಿದ್ದೇನೆ’” ಎಂಬುದು ಯೆಹೋವನಾದ ನನ್ನ ನುಡಿ.
12 “ಯೆಹೂದದ ಜನರಾದ ನೀವು ಈಗ ಶೀಲೋವಿಗೆ ಹೋಗಿರಿ. ನಾನು ಮೊದಲು ನನ್ನ ಹೆಸರಿಗಾಗಿ ಆಲಯವನ್ನು ಮಾಡಿದ ಸ್ಥಳಕ್ಕೆ ಹೋಗಿರಿ. ಇಸ್ರೇಲಿನ ಜನರು ಸಹ ದುಷ್ಕೃತ್ಯಗಳನ್ನು ಮಾಡಿದರು. ಅವರು ಮಾಡಿದ ದುಷ್ಕೃತ್ಯಗಳ ಕಾರಣ ನಾನು ಆ ಸ್ಥಳಕ್ಕೆ ಮಾಡಿರುವುದನ್ನು ಹೋಗಿ ನೋಡಿರಿ. 13 ಇಸ್ರೇಲಿನ ಜನರಾದ ನೀವು ಈ ದುಷ್ಕೃತ್ಯಗಳನ್ನು ಮಾಡುತ್ತಿದ್ದೀರಿ.” ಇದು ಯೆಹೋವನಾದ ನನ್ನ ಮಾತು: “ನಾನು ನಿಮಗೆ ಮತ್ತೆಮತ್ತೆ ಹೇಳಿದೆ, ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ನಾನು ನಿಮ್ಮನ್ನು ಕೂಗಿದೆ, ಆದರೆ ನೀವು ಉತ್ತರ ಕೊಡಲಿಲ್ಲ. 14 ಆದ್ದರಿಂದ ನನ್ನ ಹೆಸರನ್ನು ಹೊಂದಿರುವ ಆಲಯವನ್ನೂ ನೀವು ನಂಬಿರುವ ಆಲಯವನ್ನೂ ನಿಮ್ಮ ಪೂರ್ವಿಕರಿಗೆ ನಾನು ಕೊಟ್ಟಿರುವ ಸ್ಥಳವನ್ನೂ ನಾನು ಶೀಲೋವಿಗೆ ಮಾಡಿದಂತೆ ಮಾಡುವೆನು. 15 ನಾನು ನಿಮ್ಮ ಎಲ್ಲಾ ಸಹೋದರರನ್ನು ಅಂದರೆ ಸಮಸ್ತ ಎಫ್ರಾಯೀಮ್ ವಂಶದವರನ್ನು ಎಸೆದುಬಿಟ್ಟ ಹಾಗೆ ನಿಮ್ಮನ್ನೂ ನನ್ನಿಂದ ದೂರ ಎಸೆದುಬಿಡುವೆನು.”
16 “ಯೆರೆಮೀಯನೇ, ನೀನು ಈ ಯೆಹೂದದ ಜನರಿಗಾಗಿ ಪ್ರಾರ್ಥಿಸಬೇಡ; ಇವರಿಗಾಗಿ ಮೊರೆಯಿಡಬೇಡ; ಇವರಿಗಾಗಿ ಬೇಡಿಕೊಳ್ಳಬೇಡ; ಇವರಿಗಾಗಿ ನೀನು ಮಾಡುವ ಪ್ರಾರ್ಥನೆಯನ್ನು ನಾನು ಕೇಳುವದಿಲ್ಲ. 17 ಆ ಜನರು ಯೆಹೂದದ ಪಟ್ಟಣಗಳಲ್ಲಿಯೂ ಜೆರುಸಲೇಮಿನ ಬೀದಿಗಳಲ್ಲಿಯೂ ಏನು ಮಾಡುತ್ತಿದ್ದಾರೆಂಬುದು ನಿನಗೆ ಗೊತ್ತು. 18 ಯೆಹೂದದ ಜನರು ಹೀಗೆ ಮಾಡುತ್ತಿದ್ದಾರೆ; ಮಕ್ಕಳು ಸೌದೆಯನ್ನು ಆರಿಸುತ್ತಾರೆ. ತಂದೆಗಳು ಆ ಸೌಧೆಯಿಂದ ಬೆಂಕಿಯನ್ನು ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದಿ ಸ್ವರ್ಗದ ರಾಣಿಗಾಗಿ ಹೋಳಿಗೆಗಳನ್ನು ಮಾಡುತ್ತಾರೆ. ಈ ಯೆಹೂದದ ಜನರು ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸುತ್ತಾರೆ. ಅವರು ನನ್ನನ್ನು ರೇಗಿಸುವದಕ್ಕಾಗಿಯೇ ಹೀಗೆ ಮಾಡುತ್ತಾರೆ. 19 ನಿಜವಾಗಿ ಹೇಳುವುದಾದರೆ, ಯೆಹೂದದ ಜನರು ನನಗೆ ಕೇಡುಮಾಡುತ್ತಿಲ್ಲ, ಅವರು ತಮಗೇ ಕೇಡುಮಾಡಿಕೊಳ್ಳುತ್ತಿದ್ದಾರೆ. ಅವರು ತಮಗೆ ನಾಚಿಕೆಯಾಗುವಂತೆ ಮಾಡುತ್ತಿದ್ದಾರೆ” ಎಂದು ಯೆಹೋವನು ಹೇಳಿದನು.
20 ಯೆಹೋವನು ಹೀಗೆಂದನು: “ನಾನು ಈ ಸ್ಥಳಕ್ಕೆ ವಿರೋಧವಾಗಿ ನನ್ನ ಕೋಪವನ್ನು ತೋರಿಸುವೆನು. ನಾನು ಜನರನ್ನೂ ಪ್ರಾಣಿಗಳನ್ನೂ ದಂಡಿಸುವೆನು. ಕಾಡಿನ ಮರಗಳನ್ನೂ ಹೊಲದ ಬೆಳೆಗಳನ್ನೂ ದಂಡಿಸುವೆನು. ನನ್ನ ಕೋಪವು ಉರಿಯುವ ಬೆಂಕಿಯಂತಿರುವದು; ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.”
ಯೆಹೋವನು ಯಜ್ಞಗಳಿಗಿಂತ ಹೆಚ್ಚಾಗಿ ವಿಧೇಯತೆಯನ್ನು ಅಪೇಕ್ಷಿಸುವನು
21 ಸರ್ವಶಕ್ತನೂ ಇಸ್ರೇಲಿನ ದೇವರೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: “ಹೋಗಿರಿ, ನಿಮ್ಮ ಮನಸ್ಸಿಗೆ ಬಂದಷ್ಟು ಸರ್ವಾಂಗಹೋಮಗಳನ್ನು ಮತ್ತು ಯಜ್ಞಗಳನ್ನು ಅರ್ಪಿಸಿರಿ. ಆ ಯಜ್ಞಗಳ ಮಾಂಸವನ್ನು ನೀವೇ ತಿನ್ನಿರಿ. 22 ನಾನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದೆ. ನಾನು ಅವರೊಂದಿಗೆ ಮಾತನಾಡಿದೆ. ಆದರೆ ನಾನು ಅವರಿಗೆ ಸರ್ವಾಂಗಹೋಮಗಳ ಬಗ್ಗೆಯಾಗಲಿ ಯಜ್ಞಗಳ ಬಗ್ಗೆಯಾಗಲಿ ಯಾವ ಆಜ್ಞೆಯನ್ನೂ ಕೊಟ್ಟಿಲ್ಲ. 23 ನಾನು ಅವರಿಗೆ, ‘ನನಗೆ ವಿಧೇಯರಾಗಿರಿ. ನಾನು ನಿಮಗೆ ದೇವರಾಗಿರುತ್ತೇನೆ, ನೀವು ನನ್ನ ಭಕ್ತರಾಗಿರುತ್ತೀರಿ. ನಾನು ಆಜ್ಞಾಪಿಸಿದ್ದನ್ನೆಲ್ಲವನ್ನು ಮಾಡಿರಿ, ಅದರಿಂದ ನಿಮಗೆ ಒಳ್ಳೆಯದಾಗುವುದು’ ಎಂದು ಮಾತ್ರ ಆಜ್ಞಾಪಿಸಿದ್ದೆ.
24 “ಆದರೆ ನಿಮ್ಮ ಪೂರ್ವಿಕರು ನನ್ನ ಮಾತನ್ನು ಕೇಳಲಿಲ್ಲ. ಅವರು ನನ್ನ ಕಡೆಗೆ ಗಮನ ಕೊಡಲಿಲ್ಲ. ಅವರು ಮೊಂಡರಾಗಿದ್ದು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡರು. ಅವರು ಒಳ್ಳೆಯವರಾಗಲಿಲ್ಲ. ಅವರು ಇನ್ನೂ ಕೆಟ್ಟವರಾದರು. ಅವರು ಹಿಂದಕ್ಕೆ ಸರಿದರು, ಮುಂದಕ್ಕೆ ಬರಲಿಲ್ಲ. 25 ನಿಮ್ಮ ಪೂರ್ವಿಕರು ಈಜಿಪ್ಟನ್ನು ಬಿಟ್ಟ ದಿನದಿಂದ ಇಂದಿನವರೆಗೂ ನಾನು ನಿಮ್ಮಲ್ಲಿಗೆ ನನ್ನ ಸೇವಕರನ್ನು ಕಳುಹಿಸಿದ್ದೇನೆ. ನನ್ನ ಸೇವಕರು ಪ್ರವಾದಿಗಳಾಗಿದ್ದಾರೆ. ನಾನು ಅವರನ್ನು ಮತ್ತೆಮತ್ತೆ ನಿಮ್ಮಲ್ಲಿಗೆ ಕಳುಹಿಸಿದೆ. 26 ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕೇಳಲಿಲ್ಲ. ಅವರು ನನ್ನ ಕಡೆಗೆ ಗಮನ ಕೊಡಲಿಲ್ಲ. ಅವರು ಅತಿ ಮೊಂಡರಾಗಿದ್ದು ಅವರ ತಂದೆಗಳಿಗಿಂತ ಹೆಚ್ಚಿನ ದುಷ್ಕೃತ್ಯಗಳನ್ನು ಮಾಡಿದರು.
27 “ಯೆರೆಮೀಯನೇ, ನೀನು ಈ ಸಂಗತಿಗಳನ್ನು ಯೆಹೂದದ ಜನರಿಗೆ ಹೇಳು. ಆದರೆ ಅವರು ನಿನ್ನ ಮಾತುಗಳನ್ನು ಕೇಳುವದಿಲ್ಲ. 28 ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ತಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸದ ಜನಾಂಗವಿದು. ಈ ಜನರು ದೇವರ ಧರ್ಮೋಪದೇಶವನ್ನು ಕೇಳಲಿಲ್ಲ. ಈ ಜನರಿಗೆ ನಿಜವಾದ ಧರ್ಮೋಪದೇಶ ಗೊತ್ತಿಲ್ಲ.
ಸಂಹಾರದ ತಗ್ಗು
29 “ಯೆರೆಮೀಯನೇ, ನಿನ್ನ ಕೂದಲನ್ನು ಕತ್ತರಿಸಿ[a] ಎಸೆದುಬಿಡು. ಬೋಳುಶಿಖರಕ್ಕೆ ಹೋಗಿ ರೋಧಿಸು. ಏಕೆಂದರೆ ಯೆಹೋವನು ಈ ತಲೆಮಾರಿನ ಜನರನ್ನು ತಿರಸ್ಕರಿಸಿದ್ದಾನೆ; ಆತನು ಇವರಿಗೆ ವಿಮುಖನಾಗಿದ್ದಾನೆ. ಆತನು ಕೋಪದಿಂದ ಅವರನ್ನು ದಂಡಿಸುವನು. 30 ನೀನು ಹಾಗೆ ಮಾಡಲೇಬೇಕು ಯಾಕೆಂದರೆ, ಯೆಹೂದದ ಜನರು ಮಾಡುವ ದುಷ್ಕೃತ್ಯಗಳನ್ನು ನಾನು ನೋಡಿದ್ದೇನೆ.” ಯೆಹೋವನು ಹೀಗೆನ್ನುತ್ತಾನೆ: “ಅವರು ತಮ್ಮ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ನಾನು ಆ ವಿಗ್ರಹಗಳನ್ನು ದ್ವೇಷಿಸುತ್ತೇನೆ. ನನ್ನ ಹೆಸರಿನಿಂದ ಖ್ಯಾತಿಪಡೆದ ಆಲಯದಲ್ಲಿ ಅವರು ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ಅವರು ನನ್ನ ಆಲಯವನ್ನು ‘ಮಲಿನ’ಗೊಳಿಸಿದ್ದಾರೆ. 31 ಯೆಹೂದದ ಜನರು ಬೆನ್‌ಹಿನ್ನೊಮ್ ತಗ್ಗಿನಲ್ಲಿ ತೋಫೆತೆಂಬ ಪೂಜಾಸ್ಥಳವನ್ನು ಕಟ್ಟಿದ್ದಾರೆ. ಆ ಸ್ಥಳಗಳಲ್ಲಿ ಜನರು ತಮ್ಮ ಗಂಡು ಮತ್ತು ಹೆಣ್ಣುಮಕ್ಕಳನ್ನು ಕೊಂದು ಯಜ್ಞದ ಆಹುತಿಯೆಂದು ಅವರನ್ನು ಸುಡುತ್ತಾರೆ. ನೀವು ಹೀಗೆ ಮಾಡಬೇಕೆಂದು ನಾನೆಂದೂ ಹೇಳಿಲ್ಲ. ಇಂಥ ವಿಚಾರಗಳು ನನ್ನ ಮನಸ್ಸಿನಲ್ಲಿಯೂ ಬಂದಿಲ್ಲ. 32 ಹೀಗಿರಲು ನಾನು ಈ ಕಣಿವೆಯನ್ನು ತೋಫೆತ್ ಮತ್ತು ಬೆನ್‌ಹಿನ್ನೊಮೀನ ಕಣಿವೆ ಎಂದು ಕರೆಯದೆ ಇದನ್ನು ಸಂಹಾರದ ಕಣಿವೆ ಎಂದು ಕರೆಯುವ ದಿನಗಳು ಬರುತ್ತಿವೆ ಎಂಬ ಎಚ್ಚರಿಕೆಯನ್ನು ಕೊಡುತ್ತೇನೆ.” ಇದು ಯೆಹೋವನು ಹೇಳಿದ ಮಾತು. “ಶವಗಳನ್ನು ಹೂಳುವದಕ್ಕೆ ಕೊಂಚವೂ ಸ್ಥಳ ಇಲ್ಲದಂತಾಗುವವರೆಗೆ ತೋಫೆತಿನಲ್ಲಿ ಶವಗಳನ್ನು ಹೂಳುವ ಕಾರಣ ಅದಕ್ಕೆ ಈ ಹೆಸರನ್ನು ಕೊಡಲಾಗುವುದು. 33 ಆಗ ಸತ್ತವರ ದೇಹಗಳು ಭೂಮಿಯ ಮೇಲೆ ಬಿದ್ದಿರುತ್ತವೆ; ಅವು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ಕಾಡುಪ್ರಾಣಿಗಳಿಗೂ ಆಹಾರವಾಗುತ್ತವೆ. ಆ ಪಕ್ಷಿಗಳನ್ನು ಮತ್ತು ಪ್ರಾಣಿಗಳನ್ನು ಓಡಿಸುವದಕ್ಕೆ ಒಬ್ಬನಾದರೂ ಜೀವಂತವಾಗಿರುವುದಿಲ್ಲ. 34 ಜೆರುಸಲೇಮಿನ ಬೀದಿಗಳಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಸಂತೋಷ ಮತ್ತು ಸಂಭ್ರಮದ ಧ್ವನಿಯನ್ನೂ ವಧುವರರ ಸ್ವರವನ್ನೂ ಬರದಂತೆ ಮಾಡುತ್ತೇನೆ. ಈ ಪ್ರದೇಶವು ಬರಿದಾದ ಮರಳುಗಾಡಾಗುವದು.”
ಅರಸನಂತೆ ಯೇಸುವಿನ ಪ್ರವೇಶ
(ಮಾರ್ಕ 11:1-11; ಲೂಕ 19:28-38; ಯೋಹಾನ 12:12-19)
21 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿನತ್ತ ಪ್ರಯಾಣ ಮಾಡುತ್ತಾ ಆಲಿವ್ ಗುಡ್ಡದ ಸಮೀಪದಲ್ಲಿದ್ದ ಬೆತ್ಛಗೆಯನ್ನು ಸಮೀಸಿದರು. 2 ಅಲ್ಲಿ ಯೇಸು ತನ್ನ ಇಬ್ಬರು ಶಿಷ್ಯರನ್ನು ಕರೆದು, “ನಿಮ್ಮ ಎದುರಿನಲ್ಲಿ ಇರುವ ಪಟ್ಟಣದೊಳಕ್ಕೆ ಹೋಗಿ. ನೀವು ಅದನ್ನು ಪ್ರವೇಶಿಸಿದಾಗ, ಅಲ್ಲೇ ಕಟ್ಟಿರುವ ಒಂದು ಕತ್ತೆಯನ್ನು ಕಾಣುತ್ತೀರಿ. ಆ ಕತ್ತೆಯ ಜೊತೆಯಲ್ಲಿ ಒಂದು ಕತ್ತೆಮರಿಯನ್ನು ಸಹ ನೀವು ಕಾಣುವಿರಿ. ಆ ಎರಡು ಕತ್ತೆಗಳನ್ನು ಬಿಚ್ಚಿ ಅವುಗಳನ್ನು ನನ್ನ ಬಳಿಗೆ ತನ್ನಿರಿ. 3 ನೀವು ಏಕೆ ಕತ್ತೆಗಳನ್ನು ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ, ‘ಈ ಕತ್ತೆಗಳು ಗುರುವಿಗೆ ಬೇಕಾಗಿವೆ. ಆತನು ಅವುಗಳನ್ನು ಬೇಗನೆ ಹಿಂದಕ್ಕೆ ಕಳುಹಿಸುತ್ತಾನೆ’ ಎಂದು ಹೇಳಿರಿ” ಎಂಬುದಾಗಿ ಹೇಳಿ ಕಳುಹಿಸಿದನು.
4 ಪ್ರವಾದಿಯಾದ ಜೆಕರ್ಯನು ಹೇಳಿದ ಪ್ರವಾದನೆಯು ಇದರಿಂದ ನೆರವೇರಿತು. ಅದೇನೆಂದರೆ:
5 “ಸೀಯೋನ್ ನಗರಿಗೆ ಹೇಳಿರಿ,
‘ನಿನ್ನ ರಾಜನು ಈಗ ನಿನ್ನ ಬಳಿಗೆ ಬರುತ್ತಿದ್ದಾನೆ.
ದೀನತೆಯಿಂದ ಕತ್ತೆಯ ಮೇಲೆ ಬರುತ್ತಿದ್ದಾನೆ.
ಹೌದು, ಪ್ರಾಯದ ಕತ್ತೆಮರಿಯ ಮೇಲೆ ಬರುತ್ತಿದ್ದಾನೆ.’”(A)
6 ಆ ಶಿಷ್ಯರು ಹೋಗಿ, ಯೇಸು ಹೇಳಿದ್ದಂತೆಯೇ ತಾಯಿ ಕತ್ತೆಯನ್ನೂ ಮತ್ತು ಅದರ ಮರಿಯನ್ನೂ ಯೇಸುವಿನ ಬಳಿಗೆ ತಂದರು. 7 ಅವರು ತಮ್ಮ ಮೇಲಂಗಿಗಳನ್ನು ಅವುಗಳ ಮೇಲೆ ಹಾಕಿದರು. 8 ಆಗ ಯೇಸು ಕುಳಿತುಕೊಂಡು ಜೆರುಸಲೇಮಿಗೆ ಹೋದನು. ಅನೇಕ ಜನರು ತಮ್ಮ ಮೇಲಂಗಿಗಳನ್ನು ಯೇಸುವಿಗಾಗಿ ದಾರಿಯ ಮೇಲೆ ಹಾಸಿದರು. ಕೆಲವರು ಮರಗಳಿಂದ ಚಿಗುರುಗಳನ್ನು ಕತ್ತರಿಸಿಕೊಂಡು ಬಂದು ದಾರಿಯ ಮೇಲೆ ಹರಡಿದರು. 9 ಕೆಲವರು ಯೇಸುವಿನ ಮುಂದೆ ನಡೆದು ಹೋಗುತ್ತಿದ್ದರು. ಕೆಲವರು ಯೇಸುವಿನ ಹಿಂದೆ ನಡೆದು ಬರುತ್ತಿದ್ದರು. ಜನರೆಲ್ಲರೂ ಹೀಗೆ ಆರ್ಭಟಿಸಿದರು:
ಪರಲೋಕದ ದೇವರನ್ನು ಕೊಂಡಾಡಿರಿ!”
10 ಬಳಿಕ ಯೇಸು ಜೆರುಸಲೇಮಿನೊಳಗೆ ಹೋದನು. ಪಟ್ಟಣದಲ್ಲಿದ್ದ ಜನರೆಲ್ಲ ಗಲಿಬಿಲಿಗೊಂಡರು. ಅವರು, “ಈ ಮನುಷ್ಯನು ಯಾರು?” ಎಂದು ಕೇಳಿದರು.
11 ಯೇಸುವನ್ನು ಹಿಂಬಾಲಿಸುತ್ತಿದ್ದ ಅನೇಕ ಜನರು, “ಈತನೇ ಯೇಸು. ಈತನು ಗಲಿಲಾಯ ಪ್ರಾಂತ್ಯದಲ್ಲಿರುವ ನಜರೇತ್ ಎಂಬ ಊರಿನ ಪ್ರವಾದಿ” ಎಂದು ಉತ್ತರಕೊಟ್ಟರು.
ದೇವಾಲಯವು ಪ್ರಾರ್ಥನಾಲಯ
(ಮಾರ್ಕ 11:15-19; ಲೂಕ 19:45-48; ಯೋಹಾನ 2:13-22)
12 ಯೇಸು ದೇವಾಲಯದ ಒಳಕ್ಕೆ ಹೋದನು. ಅಲ್ಲಿ ಮಾರುತ್ತಿದ್ದ ಮತ್ತು ಕೊಂಡುಕೊಳ್ಳುತ್ತಿದ್ದ ಜನರನ್ನೆಲ್ಲಾ ಆತನು ಹೊರಗೆ ಓಡಿಸಿಬಿಟ್ಟನು; ನಾಣ್ಯ ವಿನಿಮಯ ಮಾಡುತ್ತಿದ್ದವರ ಮತ್ತು ಪಾರಿವಾಳಗಳನ್ನು ಮಾರುತ್ತಿದ್ದವರ ಮೇಜುಗಳನ್ನು ಕೆಡವಿದನು. 13 ಯೇಸು ಅಲ್ಲಿದ್ದ ಜನರಿಗೆಲ್ಲ, “‘ನನ್ನ ಆಲಯವು ಪ್ರಾರ್ಥನಾಲಯ ಎನಿಸಿಕೊಳ್ಳುವುದು’(C) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ದೇವರ ಆಲಯವನ್ನು ‘ಕಳ್ಳರ ಗವಿ’ಯನ್ನಾಗಿ ಮಾಡುತ್ತಿದ್ದೀರಿ”(D) ಎಂದು ಹೇಳಿದನು.
14 ಕೆಲವು ಮಂದಿ ಕುರುಡರು ಮತ್ತು ಕುಂಟರು ದೇವಾಲಯದಲ್ಲಿ ಯೇಸುವಿನ ಬಳಿಗೆ ಬಂದರು. ಯೇಸು ಅವರನ್ನು ಗುಣಪಡಿಸಿದನು. 15 ಮಹಾಯಾಜಕರು ಮತ್ತು ಧರ್ಮೋಪದೇಶಕರು ಇದನ್ನು ನೋಡಿದರು. ಯೇಸು ಮಹತ್ಕಾರ್ಯಗಳನ್ನು ಮಾಡುತ್ತಿರುವುದನ್ನು ಮತ್ತು ದೇವಾಲಯದಲ್ಲಿ ಚಿಕ್ಕಮಕ್ಕಳು ಯೇಸುವನ್ನು ಕೊಂಡಾಡುತ್ತಿರುವುದನ್ನು ಅವರು ಗಮನಿಸಿದರು. ಚಿಕ್ಕ ಮಕ್ಕಳು, “ದಾವೀದನ ಕುಮಾರನಿಗೆ ಸ್ತೋತ್ರವಾಗಲಿ” ಎಂದು ಕೂಗುತ್ತಿದ್ದರು. ಇವುಗಳಿಂದಾಗಿ ಯಾಜಕರು ಮತ್ತು ಧರ್ಮೋಪದೇಶಕರು ಕೋಪಗೊಂಡರು.
16 ಮಹಾಯಾಜಕರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಈ ಚಿಕ್ಕಮಕ್ಕಳು ಹೇಳುತ್ತಿರುವ ಮಾತುಗಳನ್ನು ನೀನು ಕೇಳಿಸಿಕೊಂಡೆಯೋ?” ಎಂದು ಕೇಳಿದರು.
ಯೇಸು, “ಹೌದು, ‘ನೀನು ಚಿಕ್ಕಮಕ್ಕಳಿಗೂ ಎಳೆಯ ಕೂಸುಗಳಿಗೂ ಸ್ತೋತ್ರಮಾಡಲು ಕಲಿಸಿರುವೆ’(E) ಎಂದು ಪವಿತ್ರ ಗ್ರಂಥದಲ್ಲಿ ಹೇಳಿದೆ. ನೀವು ಪವಿತ್ರ ಗ್ರಂಥವನ್ನು ಓದಿಲ್ಲವೇ?” ಎಂದು ಉತ್ತರಕೊಟ್ಟನು.
17 ಬಳಿಕ ಆತನು ಆ ಸ್ಥಳವನ್ನು ಬಿಟ್ಟು ಬೆಥಾನಿ ಪಟ್ಟಣಕ್ಕೆ ಹೊರಟುಹೋದನು. ಯೇಸು ಆ ರಾತ್ರಿ ಅಲ್ಲಿಯೇ ತಂಗಿದನು.
ನಂಬಿಕೆಗಿರುವ ಶಕ್ತಿ
(ಮಾರ್ಕ 11:12-14,20-24)
18 ಮರುದಿನ ಮುಂಜಾನೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಹೋಗುತ್ತಿದ್ದನು. ಆತನಿಗೆ ಹಸಿವಾಯಿತು. 19 ಆತನು ದಾರಿಯ ಪಕ್ಕದಲ್ಲಿದ್ದ ಒಂದು ಅಂಜೂರದ ಮರವನ್ನು ನೋಡಿ ಹಣ್ಣನ್ನು ತಿನ್ನಲು ಅದರ ಬಳಿಗೆ ಹೋದನು. ಆದರೆ ಮರದಲ್ಲಿ ಬರೀ ಎಲೆಗಳೇ ಇದ್ದವು. ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನೀನೆಂದಿಗೂ ಹಣ್ಣುಬಿಡದಂತಾಗಲಿ!” ಎಂದನು. ಆ ಕೂಡಲೇ ಅಂಜೂರದ ಮರ ಒಣಗಿಹೋಯಿತು.
20 ಶಿಷ್ಯರು ಇದನ್ನು ನೋಡಿ ಬಹಳ ಆಶ್ಚರ್ಯಪಟ್ಟು, “ಈ ಅಂಜೂರದ ಮರವು ಅಷ್ಟು ಬೇಗನೆ ಹೇಗೆ ಒಣಗಿ ಹೋಯಿತು?” ಎಂದು ಕೇಳಿದರು.
21 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಸಂಶಯಪಡದೆ ನಂಬಿದರೆ ನಾನು ಈ ಮರಕ್ಕೆ ಮಾಡಿದಂತೆ ನೀವೂ ಮಾಡಲು ಸಾಧ್ಯ. ಅಲ್ಲದೆ ಇನ್ನೂ ಹೆಚ್ಚಾಗಿ ಮಾಡಲು ಸಾಧ್ಯ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಪೂರ್ಣ ನಂಬಿಕೆಯಿಂದ ಹೇಳಿದರೆ ಅಂತೆಯೇ ಸಂಭವಿಸುವುದು. 22 ನೀವು ನಂಬಿ, ಪ್ರಾರ್ಥನೆಯಲ್ಲಿ ಏನನ್ನೇ ಕೇಳಿದರೂ ನಿಮಗೆ ಅದು ದೊರೆಯುವುದು” ಎಂದು ಉತ್ತರಕೊಟ್ಟನು.
ಯೇಸುವಿನ ಅಧಿಕಾರದ ಬಗ್ಗೆ ಯೆಹೂದ್ಯನಾಯಕರ ಸಂದೇಹ
(ಮಾರ್ಕ 11:27-33; ಲೂಕ 20:1-8)
23 ಯೇಸು ದೇವಾಲಯಕ್ಕೆ ಹೋದನು. ಯೇಸು ಅಲ್ಲಿ ಉಪದೇಶಿಸುತ್ತಿದ್ದಾಗ, ಮಹಾಯಾಜಕರು ಮತ್ತು ಜನರ ಹಿರಿಯ ನಾಯಕರು ಯೇಸುವಿನ ಬಳಿಗೆ ಬಂದರು. ಅವರು ಯೇಸುವಿಗೆ, “ನೀನು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿರುವೆ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ತಿಳಿಸು!” ಎಂದರು.
24 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಕೊಟ್ಟರೆ, ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆಂದು ನಿಮಗೆ ತಿಳಿಸುತ್ತೇನೆ. 25 ದೀಕ್ಷಾಸ್ನಾನ ಕೊಡುವ ಅಧಿಕಾರ ಯೋಹಾನನಿಗೆ ದೇವರಿಂದ ಬಂದಿತೋ ಇಲ್ಲವೆ ಮನುಷ್ಯನಿಂದ ಬಂದಿತೋ? ನನಗೆ ಹೇಳಿ!” ಎಂದು ಉತ್ತರ ಕೊಟ್ಟನು.
ಯಾಜಕರು ಮತ್ತು ಯೆಹೂದ್ಯ ನಾಯಕರು ಯೇಸುವಿನ ಪ್ರಶ್ನೆಯನ್ನು ಕುರಿತು ತಮ್ಮೊಳಗೆ, “‘ಯೋಹಾನನು ಕೊಟ್ಟ ದೀಕ್ಷಾಸ್ನಾನವು ದೇವರಿಂದ ಬಂದಿತು’ ಎಂದರೆ, ‘ಹಾಗಾದರೆ ಯೋಹಾನನನ್ನು ನೀವು ಏಕೆ ನಂಬಲಿಲ್ಲ?’ ಎಂದು ಕೇಳುವನು. 26 ‘ಅದು ಮನುಷ್ಯನಿಂದ ಬಂದಿತು’ ಎಂದರೆ ಜನರೆಲ್ಲರೂ ನಮ್ಮ ಮೇಲೆ ಕೋಪಗೊಳ್ಳುವರು. ಅವರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿ ಎಂದು ನಂಬಿರುವುದರಿಂದ ನಾವು ಅವರಿಗೆ ಹೆದರಬೇಕಾಗಿದೆ” ಎಂದು ಮಾತಾಡಿಕೊಂಡರು.
27 ಬಳಿಕ ಅವರು, “ಯೋಹಾನನಿಗೆ ಎಲ್ಲಿಂದ ಅಧಿಕಾರ ಬಂದಿತೋ ನಮಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟರು.
ಆಗ ಯೇಸು, “ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದೇನೆ ಎಂಬುದನ್ನು ನಾನು ಸಹ ನಿಮಗೆ ಹೇಳುವುದಿಲ್ಲ” ಎಂದನು.
ಇಬ್ಬರು ಗಂಡುಮಕ್ಕಳನ್ನು ಕುರಿತು ಯೇಸು ಹೇಳಿದ ಸಾಮ್ಯ
28 “ಒಬ್ಬ ಮನುಷ್ಯನಿಗೆ ಇಬ್ಬರು ಗಂಡುಮಕ್ಕಳಿದ್ದರು. ಆ ಮನುಷ್ಯನು ಮೊದಲನೆಯ ಮಗನ ಬಳಿಗೆ ಹೋಗಿ, ‘ಮಗನೇ ಈ ದಿನ ನೀನು ಹೋಗಿ, ನನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡು’ ಎಂದು ಹೇಳಿದನು.
29 “ಅದಕ್ಕೆ ಮಗನು, ‘ನಾನು ಹೋಗುವುದಿಲ್ಲ’ ಎಂದನು. ಆದರೆ ಆ ಬಳಿಕ ತನ್ನ ಮನಸ್ಸನ್ನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು.
30 “ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ, ‘ಮಗನೇ, ಈ ದಿನ ನೀನು ದ್ರಾಕ್ಷಿತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಮಗನು, ‘ಆಗಲಿಯಪ್ಪಾ, ನಾನು ಹೋಗಿ ಕೆಲಸ ಮಾಡುತ್ತೇನೆ’ ಎಂದನು. ಆದರೆ ಆ ಮಗನು ಹೋಗಲೇ ಇಲ್ಲ.
31 “ಈ ಇಬ್ಬರು ಗಂಡುಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?”
ಆಗ ಯೆಹೂದ್ಯ ನಾಯಕರು, “ಮೊದಲನೆಯ ಮಗ” ಎಂದು ಉತ್ತರಕೊಟ್ಟರು.
ಯೇಸು ಅವರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸುಂಕವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟಜನರೆಂದು ನೀವು ಅಂದುಕೊಂಡಿದ್ದೀರಿ. ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯಕ್ಕೆ ಪ್ರವೇಶಿಸುತ್ತಾರೆ. 32 ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನು ಬಂದನು. ನೀವು ಯೋಹಾನನನ್ನು ನಂಬಲಿಲ್ಲ, ಆದರೆ ಸುಂಕವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ. ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ.
ದೇವರ ಸ್ವಂತ ಮಗನ ಆಗಮನ
(ಮಾರ್ಕ 12:1-12; ಲೂಕ 20:9-19)
33 “ಈ ಸಾಮ್ಯವನ್ನು ಕೇಳಿರಿ: ಒಬ್ಬ ಮನುಷ್ಯನಿಗೆ ಒಂದು ಸ್ವಂತ ತೋಟವಿತ್ತು. ಅವನು ತೋಟದಲ್ಲಿ ದ್ರಾಕ್ಷಿಯನ್ನು ಬೆಳೆಸಿದನು; ತೋಟದ ಸುತ್ತಲೂ ಗೋಡೆ ಕಟ್ಟಿ ದ್ರಾಕ್ಷಾರಸ ತಯಾರಿಸಲು ಆಲೆಯನ್ನು ಹೂಡಿಸಿದನು. ಕಾವಲಿಗಾಗಿ ಅಟ್ಟಣೆಯನ್ನೂ ಕಟ್ಟಿಸಿದನು. ಅವನು ಆ ತೋಟವನ್ನು ಕೆಲವು ರೈತರಿಗೆ ಗುತ್ತಿಗೆಗೆ ಕೊಟ್ಟು ವಿದೇಶಕ್ಕೆ ಹೊರಟುಹೋದನು. 34 ದ್ರಾಕ್ಷಿಹಣ್ಣನ್ನು ಕೀಳುವ ಸಮಯ ಬಂದಾಗ ತನ್ನ ಪಾಲನ್ನು ತೆಗೆದುಕೊಂಡು ಬರಲು ಸೇವಕರನ್ನು ರೈತರ ಬಳಿಗೆ ಕಳುಹಿಸಿದನು.
35 “ಆದರೆ ರೈತರು ಆ ಸೇವಕರನ್ನು ಹಿಡಿದುಕೊಂಡು ಒಬ್ಬನನ್ನು ಹೊಡೆದರು; ಬೇರೊಬ್ಬನನ್ನು ಕತ್ತರಿಸಿಹಾಕಿದರು; ಮೂರನೇ ಸೇವಕನನ್ನು ಕಲ್ಲೆಸೆದು ಕೊಂದರು. 36 ಆದ್ದರಿಂದ ಅವನು ಮೊದಲನೆ ಸಲ ಕಳುಹಿಸಿದ ಸೇವಕರಿಗಿಂತಲೂ ಹೆಚ್ಚು ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. ಆದರೆ ರೈತರು ಮೊದಲನೆ ಸಲ ಮಾಡಿದಂತೆಯೇ ಈ ಸೇವಕರಿಗೂ ಮಾಡಿದರು. 37 ಆಗ ಅವನು, ‘ರೈತರು ನನ್ನ ಮಗನನ್ನು ಗೌರವಿಸುವರು’ ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದನು.
38 “ಆದರೆ ರೈತರು ಮಗನನ್ನು ನೋಡಿದಾಗ, ‘ಇವನು ತೋಟದ ಒಡೆಯನ ಮಗನು. ಈ ತೋಟ ಇವನದಾಗುವುದು. ನಾವು ಇವನನ್ನು ಕೊಂದರೆ, ಈ ತೋಟ ನಮ್ಮದಾಗುವುದು’ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 39 ಆದ್ದರಿಂದ ರೈತರು ಮಗನನ್ನು ಹಿಡಿದು ತೋಟದಿಂದ ಹೊರಕ್ಕೆಸೆದು ಅವನನ್ನು ಕೊಂದುಹಾಕಿದರು.
40 “ಹೀಗಿರಲು ತೋಟದ ಯಜಮಾನನು ತಾನೇ ಬಂದಾಗ ಈ ರೈತರಿಗೆ ಏನು ಮಾಡುತ್ತಾನೆ?”
41 ಯೆಹೂದ್ಯ ಯಾಜಕರು ಮತ್ತು ನಾಯಕರು, “ಅವನು ಖಂಡಿತವಾಗಿ ಆ ದುಷ್ಟಜನರನ್ನು ಕೊಂದು ಸುಗ್ಗಿಕಾಲದಲ್ಲಿ ತನ್ನ ಪಾಲನ್ನು ತನಗೆ ಕೊಡುವ ರೈತರಿಗೆ ಅದನ್ನು ಗುತ್ತಿಗೆಗೆ ಕೊಡುತ್ತಾನೆ” ಎಂದು ಹೇಳಿದರು.
42 ಯೇಸು ಅವರಿಗೆ, “ಖಂಡಿತವಾಗಿಯೂ ನೀವು ಇದನ್ನು ಪವಿತ್ರ ಗ್ರಂಥದಲ್ಲಿ ಓದಿದ್ದೀರಿ:
‘ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
ಪ್ರಭುವು ಇದನ್ನು ಮಾಡಿದನು. ಇದು ನಮಗೆ ಆಶ್ಚರ್ಯಕರವಾಗಿದೆ.’(F)
43 “ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ದೇವರ ರಾಜ್ಯವು ನಿಮ್ಮಿಂದ ತೆಗೆದುಹಾಕಲ್ಪಟ್ಟು ಆ ರಾಜ್ಯದಲ್ಲಿ ದೇವರ ಇಷ್ಟಕ್ಕನುಸಾರವಾದ ಕಾರ್ಯಗಳನ್ನು ಮಾಡುವವರಿಗೆ ಕೊಡಲ್ಪಡುವುದು. 44 ಈ ಕಲ್ಲಿನ ಮೇಲೆ ಬೀಳುವ ಮನುಷ್ಯನು ತುಂಡುತುಂಡಾಗುತ್ತಾನೆ. ಈ ಕಲ್ಲು ಮನುಷ್ಯನ ಮೇಲೆ ಬಿದ್ದರೆ, ಅವನು ಜಜ್ಜಿಹೋಗುವನು.”
45 ಮಹಾಯಾಜಕರು ಮತ್ತು ಫರಿಸಾಯರು ಯೇಸು ಹೇಳಿದ ಈ ಸಾಮ್ಯಗಳನ್ನು ಕೇಳಿ, ತಮ್ಮನ್ನೇ ಕುರಿತು ಇವುಗಳನ್ನು ಹೇಳಿದನೆಂದು ತಿಳಿದುಕೊಂಡರು. 46 ಅವರು ಯೇಸುವನ್ನು ಬಂಧಿಸಲು ಉಪಾಯ ಹುಡುಕಿದರೂ ಜನರಿಗೆ ಭಯಪಟ್ಟು ಬಂಧಿಸಲಿಲ್ಲ. ಏಕೆಂದರೆ ಯೇಸು ಒಬ್ಬ ಪ್ರವಾದಿ ಎಂದು ಜನರು ನಂಬಿದ್ದರು.
Kannada Holy Bible: Easy-to-Read Version. All rights reserved. © 1997 Bible League International