Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯೆಹೋಶುವನು 11

ಉತ್ತರದ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡದ್ದು

11 ಹಾಚೋರಿನ ಅರಸನಾದ ಯಾಬೀನನು ನಡೆದ ಎಲ್ಲ ಸಂಗತಿಗಳ ಬಗ್ಗೆ ಕೇಳಿದನು. ಅದಕ್ಕಾಗಿ ಅವನು ಅನೇಕ ಅರಸರ ಸೈನ್ಯಗಳನ್ನು ಒಟ್ಟಿಗೆ ಸೇರಿಸುವ ನಿರ್ಧಾರವನ್ನು ಮಾಡಿದನು. ಮಾದೋನಿನ ಅರಸನಾದ ಯೋಬಾಬನಿಗೆ, ಶಿಮ್ರೋನಿನ ಅರಸನಿಗೆ, ಅಕ್ಷಾಫಿನ ಅರಸನಿಗೆ ಯಾಬೀನನು ಸಂದೇಶವನ್ನು ಕಳುಹಿಸಿದನು. ಉತ್ತರದಿಕ್ಕಿನ ಪರ್ವತ ಪ್ರದೇಶಗಳಲ್ಲಿನ ಮತ್ತು ಅರಣ್ಯದಲ್ಲಿನ ಅರಸರಿಗೂ ಕಿನ್ನೆರೋತ್, ನೆಗೆವ್ ಮತ್ತು ಪಶ್ಚಿಮದ ಇಳಿಜಾರಿನ ಪ್ರದೇಶದ ಅರಸರಿಗೂ ಪಶ್ಚಿಮದಿಕ್ಕಿನ ನೆಫತ್‌ದೋರ್ ರಾಜನಿಗೂ ಯಾಬೀನನು ಸಂದೇಶವನ್ನು ಕಳುಹಿಸಿದನು. ಯಾಬೀನನು ಪೂರ್ವ ಮತ್ತು ಪಶ್ಚಿಮದಲ್ಲಿದ್ದ ಕಾನಾನಿನ ಅರಸರಿಗೂ ಅಮೋರಿಯರಿಗೂ ಹಿತ್ತಿಯರಿಗೂ ಪೆರಿಜ್ಜೀಯರಿಗೂ ಬೆಟ್ಟಪ್ರದೇಶದ ಯೆಬೂಸಿಯರಿಗೂ ಹೆರ್ಮೋನ್ ಪರ್ವತದ ಬುಡದಲ್ಲಿ ಮಿಚ್ಛಾದ ಹತ್ತಿರ ವಾಸವಾಗಿದ್ದ ಹಿವ್ವಿಯರಿಗೂ ಸಂದೇಶವನ್ನು ಕಳುಹಿಸಿದನು. ಹೀಗಾಗಿ ಈ ಎಲ್ಲ ಅರಸರ ಸೈನ್ಯಗಳು ಒಟ್ಟುಗೂಡಿದವು. ಈ ಮಹಾಸೈನ್ಯದಲ್ಲಿ ಅಸಂಖ್ಯಾತ ಯೋಧರಿದ್ದರು, ಕುದುರೆಗಳಿದ್ದವು ಮತ್ತು ರಥಗಳಿದ್ದವು. ಸಮುದ್ರತೀರದ ಮರಳು ಕಣಗಳಷ್ಟೇ ಅಸಂಖ್ಯಾತ ಯೋಧರು ಆ ಸೈನ್ಯದಲ್ಲಿರುವಂತೆ ಕಾಣುತ್ತಿತ್ತು.

ಈ ಎಲ್ಲ ಅರಸರು ಮೇರೋಮ್ ಸಣ್ಣ ನದಿಯ ಹತ್ತಿರ ಒಟ್ಟುಗೂಡಿ ತಮ್ಮ ಸೈನ್ಯಗಳನ್ನು ಒಂದೇ ಪಾಳೆಯದಲ್ಲಿ ಸೇರಿಸಿದರು. ಅವರು ಇಸ್ರೇಲಿನ ವಿರುದ್ಧ ಯುದ್ಧ ಮಾಡಲು ಯೋಜನೆಗಳನ್ನು ಮಾಡಿದರು.

ಆಗ ಯೆಹೋವನು ಯೆಹೋಶುವನಿಗೆ, “ಆ ಸೈನ್ಯಕ್ಕೆ ನೀನು ಹೆದರಬೇಡ; ನೀವು ಅವರನ್ನು ಸೋಲಿಸುವಂತೆ ನಾನು ಮಾಡುತ್ತೇನೆ. ನಾಳೆ ಇಷ್ಟು ಹೊತ್ತಿಗೆ ನೀವು ಅವರೆಲ್ಲರನ್ನು ಕೊಂದುಬಿಡುವಿರಿ. ನೀವು ಅವರ ಕುದುರೆಗಳ ಕಾಲುಗಳನ್ನು ಕತ್ತರಿಸುವಿರಿ; ಅವರ ರಥಗಳನ್ನು ಸುಟ್ಟುಹಾಕುವಿರಿ” ಎಂದನು.

ಯೆಹೋಶುವನು ಮತ್ತು ಅವನ ಎಲ್ಲ ಸೈನಿಕರು ಶತ್ರುಗಳನ್ನು ಬೆರಗುಗೊಳಿಸಿದರು. ಮೇರೋಮ್ ನದಿಯ ಬಳಿಯಲ್ಲಿ ಅವರು ಶತ್ರುಗಳ ಮೇಲೆ ಧಾಳಿಮಾಡಿದರು. ಇಸ್ರೇಲರು ಶತ್ರುಗಳನ್ನು ಸೋಲಿಸುವಂತೆ ಯೆಹೋವನು ಮಾಡಿದನು. ಇಸ್ರೇಲರ ಸೈನ್ಯವು ಶತ್ರುಗಳನ್ನು ಸೋಲಿಸಿ ಅವರನ್ನು ದೊಡ್ಡ ಚೀದೋನ್ ಮತ್ತು ಮಿಸ್ರೆಪೋತ್ಮಯಿಮ್‌ವರೆಗೂ ಪೂರ್ವದಿಕ್ಕಿನಲ್ಲಿ ಮಿಚ್ಛೆಯ ಕಣಿವೆಯವರೆಗೂ ಬೆನ್ನಟ್ಟಿತು. ಶತ್ರುಗಳಲ್ಲಿ ಯಾರೂ ಉಳಿದುಕೊಳ್ಳದಂತೆ ಇಸ್ರೇಲರು ಯುದ್ಧಮಾಡಿದರು. ಯೆಹೋವನು ಹೇಳಿದಂತೆಯೇ ಯೆಹೋಶುವನು ಮಾಡಿದನು. ಯೆಹೋಶುವನು ಅವರ ಕುದುರೆಯ ಕಾಲುಗಳನ್ನು ಕತ್ತರಿಸಿದನು; ಅವರ ರಥಗಳನ್ನು ಸುಟ್ಟುಹಾಕಿದನು.

10 ಯೆಹೋಶುವನು ಹಿಂದಿರುಗಿ ಹೋಗಿ ಹಾಚೋರನ್ನು ಸ್ವಾಧೀನಪಡಿಸಿಕೊಂಡನು. ಯೆಹೋಶುವನು ಹಾಚೋರಿನ ಅರಸನನ್ನು ಕೊಂದನು. (ಹಾಚೋರ್ ಇಸ್ರೇಲಿನ ವಿರುದ್ಧ ಹೋರಾಡಿದ ಎಲ್ಲ ರಾಜ್ಯಗಳಿಗೆ ಮುಂದಾಳಾಗಿತ್ತು.) 11 ಇಸ್ರೇಲಿನ ಸೈನಿಕರು ಆ ಪಟ್ಟಣದಲ್ಲಿದ್ದವರನ್ನೆಲ್ಲಾ ಕೊಂದುಬಿಟ್ಟರು; ಒಬ್ಬರನ್ನೂ ಜೀವಂತವಾಗಿ ಅಲ್ಲಿ ಉಳಿಸಲಿಲ್ಲ. ಆಮೇಲೆ ಅವರು ಆ ಪಟ್ಟಣವನ್ನು ಸುಟ್ಟುಬಿಟ್ಟರು.

12 ಯೆಹೋಶುವನು ಈ ಎಲ್ಲ ಪಟ್ಟಣಗಳನ್ನು ವಶಪಡಿಸಿಕೊಂಡನು; ಅವುಗಳ ಎಲ್ಲ ಅರಸರನ್ನು ಕೊಂದುಹಾಕಿದನು; ಈ ಪಟ್ಟಣಗಳಲ್ಲಿದ್ದ ಎಲ್ಲವನ್ನು ನಾಶಮಾಡಿದನು. ಯೆಹೋವನ ಸೇವಕನಾದ ಮೋಶೆಯು ಆಜ್ಞಾಪಿಸಿದಂತೆಯೇ ಅವನು ಮಾಡಿದನು. 13 ಆದರೆ ಇಸ್ರೇಲಿನ ಸೈನಿಕರು ಬೆಟ್ಟಗಳ ಮೇಲೆ ಕಟ್ಟಲಾದ ಯಾವ ಪಟ್ಟಣವನ್ನೂ ಸುಡಲಿಲ್ಲ. ಬೆಟ್ಟಗಳ ಮೇಲೆ ಕಟ್ಟಿದ ಪಟ್ಟಣಗಳಲ್ಲಿ ಅವರು ಸುಟ್ಟ ಒಂದೇ ಒಂದು ಪಟ್ಟಣವೆಂದರೆ ಹಾಚೋರ್. ಈ ಪಟ್ಟಣವನ್ನು ಯೆಹೋಶುವನು ಸುಟ್ಟನು. 14 ಆ ಪಟ್ಟಣಗಳಲ್ಲಿ ಸಿಕ್ಕಿದ ಎಲ್ಲ ಪದಾರ್ಥಗಳನ್ನು ಮತ್ತು ಎಲ್ಲ ಪಶುಗಳನ್ನು ಇಸ್ರೇಲರು ತಮಗಾಗಿ ಇಟ್ಟುಕೊಂಡರು. ಆದರೆ ಅಲ್ಲಿದ್ದ ಜನರನ್ನೆಲ್ಲ ಕೊಂದರು. ಅವರಲ್ಲಿ ಯಾರನ್ನೂ ಸಜೀವವಾಗಿ ಉಳಿಸಲಿಲ್ಲ. 15 ಹೀಗೆ ಮಾಡಬೇಕೆಂದು ಯೆಹೋವನು ತನ್ನ ಸೇವಕನಾದ ಮೋಶೆಗೆ ಬಹುಕಾಲದ ಹಿಂದೆಯೇ ಹೇಳಿದ್ದನು. ಮೋಶೆಯು ಈ ಕಾರ್ಯವನ್ನು ಮಾಡಲು ಯೆಹೋಶುವನಿಗೆ ಆಜ್ಞಾಪಿಸಿದ್ದನು. ಹೀಗೆ ಯೆಹೋಶುವನು ದೇವರ ಆಜ್ಞೆಯನ್ನು ಪಾಲಿಸಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೆಲ್ಲವನ್ನು ಯೆಹೋಶುವನು ಮಾಡಿದನು.

16 ಹೀಗೆ ಯೆಹೋಶುವನು ಆ ದೇಶದ ಎಲ್ಲರನ್ನು ಸೋಲಿಸಿದನು. ಬೆಟ್ಟದ ಮೇಲಿನ ಪ್ರದೇಶ, ನೆಗೆವ್ ಪ್ರದೇಶ, ಗೋಷೆನಿನ ಎಲ್ಲ ಪ್ರದೇಶ, ಪಶ್ಚಿಮದ ಇಳಕಲಿನ ಪ್ರದೇಶ, ಜೋರ್ಡನಿನ ಕಣಿವೆ, ಇಸ್ರೇಲಿನ ಪರ್ವತ ಪ್ರದೇಶ ಮತ್ತು ಅವುಗಳ ಹತ್ತಿರದ ಎಲ್ಲ ಬೆಟ್ಟಗಳ ಪ್ರದೇಶ ಅವನ ಸ್ವಾಧೀನಕ್ಕೆ ಬಂದವು. 17 ಸೇಯೀರಿನ ಹತ್ತಿರವಿರುವ ಹಾಲಾಕ್ ಬೆಟ್ಟದಿಂದ ಹೆರ್ಮೋನ್ ಬೆಟ್ಟದ ಬುಡದಲ್ಲಿ ಲೆಬನೋನ್ ಕಣಿವೆಯಲ್ಲಿರುವ ಬಾಲ್ಗಾದ್ ಪಟ್ಟಣದವರೆಗೂ ಇರುವ ಭೂಮಿಯು ಅವನ ಸ್ವಾಧೀನವಾಯಿತು. ಯೆಹೋಶುವನು ಆ ಪ್ರದೇಶದ ಎಲ್ಲ ಅರಸರನ್ನು ಸೆರೆಹಿಡಿದು ಕೊಂದುಹಾಕಿದನು. 18 ಯೆಹೋಶುವನು ಆ ಅರಸರ ವಿರುದ್ಧ ಬಹುಕಾಲದವರೆಗೆ ಹೋರಾಡಿದನು. 19 ಆ ಪ್ರದೇಶದಲ್ಲಿ ಕೇವಲ ಒಂದು ಪಟ್ಟಣ ಮಾತ್ರ ಇಸ್ರೇಲರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿತ್ತು. ಅದೇ ಹಿವ್ವಿಯರ ಗಿಬ್ಯೋನ್ ಪಟ್ಟಣ. ಉಳಿದೆಲ್ಲ ಪಟ್ಟಣಗಳು ಯುದ್ಧದಲ್ಲಿ ಸೋತುಹೋಗಿದ್ದವು. 20 ತಾವು ಶಕ್ತಿಶಾಲಿಗಳೆಂಬ ಭಾವನೆಯನ್ನು ಯೆಹೋವನು ಆ ಜನರಲ್ಲಿ ಹುಟ್ಟಿಸಿ ಅವರನ್ನು ಇಸ್ರೇಲರ ಮೇಲೆ ಯುದ್ಧಕ್ಕೆ ಬರಮಾಡಿದನು. ಯುದ್ಧದಲ್ಲಿ ಕರುಣೆಯಿಲ್ಲದೆ ಅವರನ್ನು ಸಂಹರಿಸಬೇಕೆಂಬುದು ಯೆಹೋವನ ಯೋಜನೆಯಾಗಿತ್ತು. ಯೆಹೋವನು ಮೋಶೆಗೆ ಹೇಳಿದ ರೀತಿಯಲ್ಲಿ ಯೆಹೋಶುವನು ಆ ಪಟ್ಟಣಗಳನ್ನು ನಾಶಮಾಡಲು ಇದರಿಂದ ಸಾಧ್ಯವಾಯಿತು.

21 ಆಗ ಅನಾಕ ವಂಶಸ್ಥರು ಹೆಬ್ರೋನ್, ದೆಬೀರ್, ಅನಾಬ್ ಮತ್ತು ಯೆಹೂದ ಬೆಟ್ಟಪ್ರದೇಶಗಳಲ್ಲಿ ವಾಸವಾಗಿದ್ದರು. ಯೆಹೋಶುವನು ಈ ಅನಾಕ ವಂಶಸ್ಥರೊಂದಿಗೆ ಯುದ್ಧ ಮಾಡಿದನು. ಯೆಹೋಶುವನು ಆ ಎಲ್ಲ ಜನರನ್ನು ಮತ್ತು ಊರುಗಳನ್ನು ನಾಶಪಡಿಸಿದನು. 22 ಇಸ್ರೇಲಿನ ಪ್ರದೇಶದಲ್ಲಿ ಅನಾಕ ವಂಶಸ್ಥರಲ್ಲಿ ಯಾರೂ ಉಳಿಯಲಿಲ್ಲ. ಜೀವಸಹಿತ ಉಳಿದ ಅನಾಕ ವಂಶಸ್ಥರು ಕೇವಲ ಗಾಜಾ, ಗತೂರು, ಅಷ್ಡೋದ್ ಎಂಬಲ್ಲಿ ಮಾತ್ರ ಇದ್ದರು. 23 ಬಹಳ ಹಿಂದೆಯೇ ಯೆಹೋವನು ಮೋಶೆಗೆ ಹೇಳಿದ ಪ್ರಕಾರ ಯೆಹೋಶುವನು ಇಸ್ರೇಲಿನ ಪ್ರದೇಶವನ್ನೆಲ್ಲ ಸ್ವಾಧೀನಪಡಿಸಿಕೊಂಡನು. ಯೆಹೋವನು ತಾನು ವಾಗ್ದಾನ ಮಾಡಿದಂತೆ ಆ ಪ್ರದೇಶವನ್ನು ಇಸ್ರೇಲರಿಗೆ ಕೊಟ್ಟುಬಿಟ್ಟನು. ಆಗ ಯೆಹೋಶುವನು ಆ ಪ್ರದೇಶವನ್ನು ಕುಲಗಳ ಪ್ರಕಾರ ಹಂಚಿಕೊಟ್ಟನು. ಆಗ ಯುದ್ಧವು ಮುಗಿಯಿತು, ಕೊನೆಗೆ ಆ ಪ್ರದೇಶದಲ್ಲಿ ಶಾಂತಿ ನೆಲೆಸಿತು.

ಕೀರ್ತನೆಗಳು 144

ರಚನೆಗಾರ: ದಾವೀದ.

144 ಯೆಹೋವನು ನನಗೆ ಬಂಡೆಯಾಗಿದ್ದಾನೆ.
    ಆತನಿಗೆ ಸ್ತೋತ್ರವಾಗಲಿ.
ಆತನು ನನ್ನನ್ನು ಯುದ್ಧಕ್ಕೂ
    ಕದನಕ್ಕೂ ತರಬೇತು ಮಾಡುವನು.
ಆತನು ನನ್ನನ್ನು ಪ್ರೀತಿಸುವ ದೇವರೂ
    ನನ್ನ ಕೋಟೆಯೂ ನನ್ನ ದುರ್ಗವೂ ನನ್ನ ರಕ್ಷಕನೂ ನನ್ನ ಗುರಾಣಿಯೂ ನನ್ನ ಆಶ್ರಯವೂ ಆಗಿದ್ದಾನೆ.

ಯೆಹೋವನೇ, ಮನುಷ್ಯರು ಎಷ್ಟು ಮಾತ್ರದವರು?
    ನೀನು ಅವರನ್ನು ಯಾಕೆ ನೆನಸಬೇಕು?
ಮನುಷ್ಯರು ಎಷ್ಟರವರು?
    ನೀನು ಅವರನ್ನು ಯಾಕೆ ಗಮನಿಸಬೇಕು?
ಮನುಷ್ಯರು ಕೇವಲ ಉಸಿರೇ.
    ಅವರ ಜೀವಮಾನವು ಬೇಗನೆ ಗತಿಸಿಹೋಗುವ ನೆರಳಿನಂತಿದೆ.

ಯೆಹೋವನೇ, ಆಕಾಶವನ್ನು ಹರಿದು ಇಳಿದು ಬಾ.
    ಪರ್ವತಗಳನ್ನು ಮುಟ್ಟು.
    ಆಗ ಅವುಗಳಿಂದ ಹೊಗೆಯು ಮೇಲೇರುವುದು.
ಸಿಡಿಲಿನಿಂದ ಶತ್ರುಗಳನ್ನು ಚದರಿಸಿಬಿಡು.
    ನಿನ್ನ ಬಾಣಗಳಿಂದ ಅವರನ್ನು ಓಡಿಸಿಬಿಡು.
ಮೇಲಿನ ಲೋಕದಿಂದ ಕೈಚಾಚಿ ಮಹಾ ಜಲರಾಶಿಯಂತಿರುವ
    ನನ್ನ ಶತ್ರುಗಳಿಂದ ನನ್ನನ್ನು ಎಳೆದುಕೋ.
    ಅನ್ಯಜನರ ಕೈಯಿಂದ ನನ್ನನ್ನು ಬಿಡಿಸು.
ಅವರ ಬಾಯಿ ಸುಳ್ಳುಗಳಿಂದ ತುಂಬಿವೆ.
    ಅವರ ಬಲಗೈ ಮೋಸದಿಂದ ತುಂಬಿವೆ.

ಯೆಹೋವನೇ, ನಿನಗೆ ನೂತನ ಕೀರ್ತನೆಯನ್ನು ಹಾಡುವೆನು.
    ನಾನು ಹತ್ತು ತಂತಿಗಳ ಹಾರ್ಪ್‌ವಾದ್ಯವನ್ನು ನುಡಿಸುತ್ತಾ ನಿನ್ನನ್ನು ಸ್ತುತಿಸುವೆನು.
10 ರಾಜರುಗಳಿಗೆ ಸಹಾಯಮಾಡಿ ಯುದ್ಧಗಳಲ್ಲಿ ಗೆಲ್ಲಿಸುವವನೂ ನೀನೇ.
    ನಿನ್ನ ಸೇವಕನಾದ ದಾವೀದನನ್ನು ಅವನ ಶತ್ರುಗಳ ಖಡ್ಗಗಳಿಂದ ರಕ್ಷಿಸಿದವನೂ ನೀನೇ.
11 ಈ ಅನ್ಯಜನರಿಂದ ನನ್ನನ್ನು ರಕ್ಷಿಸು.
    ಅವರ ಬಾಯಿಗಳು ಸುಳ್ಳುಗಳಿಂದ ತುಂಬಿವೆ.
    ಅವರ ಬಲಗೈಗಳು ಮೋಸದಿಂದ ತುಂಬಿವೆ.

12 ನಮ್ಮ ಯುವಕರು ಮಹಾವೃಕ್ಷಗಳಂತಿದ್ದಾರೆ.
    ನಮ್ಮ ಯುವತಿಯರು ಅರಮನೆಯಲ್ಲಿ ಸುಂದರವಾಗಿ ಕೆತ್ತಲ್ಪಟ್ಟ ಕಂಬಗಳಂತಿರುವರು.
13 ನಮ್ಮ ಕಣಜಗಳು ಸಕಲ ಬಗೆಯ ದವಸಧಾನ್ಯಗಳಿಂದ ತುಂಬಿರುತ್ತವೆ.
    ನಮ್ಮ ಹೊಲಗಳಲ್ಲಿರುವ ಕುರಿಗಳು ಸಾವಿರಾರು ಮರಿಗಳನ್ನು ಈಯುತ್ತವೆ.
14     ನಮ್ಮ ಸೈನಿಕರು ಸುರಕ್ಷಿತವಾಗಿದ್ದಾರೆ.
ಯಾವ ಶತ್ರುಗಳೂ ನುಗ್ಗಿಬರಲು ಪ್ರಯತ್ನಿಸುತ್ತಿಲ್ಲ.
    ನಾವು ಯುದ್ಧಕ್ಕೆ ಹೋಗುವುದೂ ಇಲ್ಲ;
ನಮ್ಮ ಬೀದಿಗಳಲ್ಲಿ ಗೋಳಾಟವೂ ಇರುವುದಿಲ್ಲ.

15 ಇಂಥ ಸುಸ್ಥಿತಿಯಲ್ಲಿರುವ ಜನರೇ ಧನ್ಯರು.
    ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರೇ ಭಾಗ್ಯವಂತರು.

ಯೆರೆಮೀಯ 5

ಯೆಹೂದಿಯರ ದುಷ್ಟತನ

ಯೆಹೋವನು ಹೀಗೆನ್ನುತ್ತಾನೆ: “ಜೆರುಸಲೇಮಿನ ಬೀದಿಗಳಲ್ಲಿ ಅತ್ತಿತ್ತ ತಿರುಗಾಡಿ ನೋಡಿರಿ; ಈ ವಿಷಯಗಳ ಬಗ್ಗೆ ವಿಚಾರ ಮಾಡಿರಿ. ನಗರದ ಸಾರ್ವಜನಿಕ ಸ್ಥಳಗಳಲ್ಲಿ ಹುಡುಕಿ ನೋಡಿರಿ. ಸತ್ಯಶೋಧಕನೂ ಪ್ರಾಮಾಣಿಕನೂ ಒಳ್ಳೆಯವನೂ ಆಗಿರುವ ಮನುಷ್ಯನು ಎಲ್ಲಿ ಸಿಕ್ಕುವನೋ ನೋಡಿ. ಕೇವಲ ಒಬ್ಬ ಒಳ್ಳೆಯವನಿದ್ದರೂ ನಾನು ಇಡೀ ಜೆರುಸಲೇಮನ್ನು ಕ್ಷಮಿಸುತ್ತೇನೆ. ಜನರು ಆಣೆ ಮಾಡುವಾಗ ‘ಯೆಹೋವನಾಣೆ’ ಎಂದು ಹೇಳುವರು. ಆದರೆ ಅದು ಕೇವಲ ಬಾಯಿ ಮಾತಷ್ಟೇ ಹೊರತು ಯಥಾರ್ಥವಾದದ್ದಲ್ಲ.”

ಯೆಹೋವನೇ, ನೀನು ನಂಬಿಗಸ್ತರಾದ
    ಜನರನ್ನು ಹುಡುಕುವೆ.
ನೀನು ಯೆಹೂದದ ಜನರಿಗೆ ಹೊಡೆದೆ,
    ಆದರೆ ಅವರಿಗೆ ಅದರಿಂದ ನೋವಾಗಲಿಲ್ಲ.
ನೀನು ಅವರನ್ನು ಹಾಳುಮಾಡಿದೆ,
    ಆದರೆ ಅದರಿಂದ ಅವರು ಪಾಠವನ್ನೂ ಕಲಿಯಲಿಲ್ಲ.
ಅವರು ತಮ್ಮ ದುಷ್ಕೃತ್ಯಗಳಿಗಾಗಿ ಪಶ್ಚಾತ್ತಾಪಪಡಲಿಲ್ಲ.
    ಅವರು ಬಹಳ ಹಟಮಾರಿಗಳಾದರು.

ಆದರೆ ನಾನು ನನ್ನೊಳಗೆ,
“ಕೇವಲ ಸಾಮಾನ್ಯ ಜನರು ಇಷ್ಟು ಮೂರ್ಖರಾಗಿರಬಹುದು.
    ಅವರು ಯೆಹೋವನ ಮಾರ್ಗವನ್ನು ತಿಳಿದುಕೊಂಡಿಲ್ಲ.
    ಸಾಮಾನ್ಯ ಜನರಿಗೆ ತಮ್ಮ ದೇವರ ಉಪದೇಶ ತಿಳಿದಿಲ್ಲ.
ನಾನು ಯೆಹೂದದ ಜನನಾಯಕರ ಹತ್ತಿರ ಹೋಗಿ
    ಅವರೊಂದಿಗೆ ಮಾತನಾಡುವೆನು.
ಜನನಾಯಕರು ಯೆಹೋವನ ಮಾರ್ಗಗಳನ್ನು ನಿಶ್ಚಯವಾಗಿ ತಿಳಿದುಕೊಂಡಿರುವರು.
    ಅವರು ತಮ್ಮ ಯೆಹೋವನ ನ್ಯಾಯವಿಧಿಗಳನ್ನು ಅರಿತುಕೊಂಡಿರುತ್ತಾರೆ” ಅಂದುಕೊಂಡೆನು.
ಆದರೆ ಈ ಜನನಾಯಕರುಗಳೆಲ್ಲಾ ದೇವರ ಸೇವೆಯನ್ನು ತೊರೆದುಬಿಟ್ಟಿದ್ದರು.
    ಅವರು ದೇವರಿಗೆ ವಿರೋಧಿಗಳಾದರು.
ಆದ್ದರಿಂದ ಕಾಡಿನ ಸಿಂಹವು ಅವರ ಮೇಲೆರಗುವುದು,
    ಮರಳುಗಾಡಿನ ತೋಳವು ಅವರನ್ನು ಕೊಂದು ಬಿಡುವದು.
ಅವರ ನಗರಗಳ ಹತ್ತಿರ ಚಿರತೆಯು ಅಡಗಿಕೊಂಡಿದೆ.
    ನಗರದಿಂದ ಹೊರಗೆ ಬಂದವರನ್ನೆಲ್ಲ ಅದು ಚೂರುಚೂರು ಮಾಡುವುದು.
ಯೆಹೂದದ ಜನರು ಮತ್ತೆಮತ್ತೆ ಪಾಪಗಳನ್ನು ಮಾಡಿದ್ದರಿಂದ ಹೀಗಾಗುವದು.
    ಅವರು ಅನೇಕಸಲ ಯೆಹೋವನಿಂದ ದೂರ ಹೋಗಿದ್ದಾರೆ.

“ಯೆಹೂದವೇ, ನಾನು ನಿನ್ನನ್ನು ಏಕೆ ಕ್ಷಮಿಸಬೇಕು? ಒಂದು ಕಾರಣವನ್ನಾದರೂ ಕೊಡು.
    ನಿನ್ನ ಮಕ್ಕಳು ನನ್ನನ್ನು ತೊರೆದಿದ್ದಾರೆ.
    ದೇವರುಗಳೇ ಅಲ್ಲದ ವಿಗ್ರಹಗಳಿಗೆ ಅವರು ಹರಕೆ ಹೊತ್ತಿದ್ದಾರೆ.
ನಾನು ನಿನ್ನ ಮಕ್ಕಳಿಗೆ ಬೇಕಾದದ್ದನ್ನು ಕೊಟ್ಟೆ.
    ಆದರೂ ಅವರು ನನಗೆ ನಂಬಿಗಸ್ತರಾಗಿ ಉಳಿಯಲಿಲ್ಲ.
    ಅವರು ತಮ್ಮ ಹೆಚ್ಚಿನ ಸಮಯವನ್ನು ವೇಶ್ಯೆಯರ ಮನೆಗಳಲ್ಲಿ ಕಳೆದರು.
ಅವರು ಮನದಣಿಯುವ ಹಾಗೆ ತಿಂದು ಕೊಬ್ಬಿ ಕಾಮವೇರಿದ ಕುದುರೆಗಳಂತಿದ್ದಾರೆ.
    ಅವರು ನೆರೆಮನೆಯವನ ಹೆಂಡತಿಯನ್ನು ಕೆನೆತು ಕರೆಯುವ ಕುದುರೆಯಂತಿದ್ದಾರೆ.
ಹೀಗೆ ಮಾಡಿದ್ದಕ್ಕಾಗಿ ಯೆಹೂದದ ಜನರನ್ನು ನಾನು ಶಿಕ್ಷಿಸಬೇಕಲ್ಲವೇ?”
ಯೆಹೋವನು ಹೇಳುತ್ತಾನೆ.
“ಹೌದು, ನಾನು ಇಂಥಾ ಜನಾಂಗವನ್ನು ಶಿಕ್ಷಿಸಬೇಕು.
    ಅವರಿಗೆ ತಕ್ಕ ಶಿಕ್ಷೆಯನ್ನು ನಾನು ಕೊಡಬೇಕು.

10 “ಯೆಹೂದದ ದ್ರಾಕ್ಷಿಯ ಸಾಲುಬಳ್ಳಿಗಳ ಬಳಿಗೆ ಹೋಗಿರಿ, ಆ ಬಳ್ಳಿಗಳನ್ನು ಕತ್ತರಿಸಿರಿ.
    ಆದರೆ ಅವುಗಳನ್ನು ಸಂಪೂರ್ಣವಾಗಿ ನಾಶಮಾಡಬೇಡಿರಿ.
    ಅವುಗಳ ಎಲ್ಲಾ ಕೊಂಬೆಗಳನ್ನು ಕತ್ತರಿಸಿಬಿಡಿ. ಏಕೆಂದರೆ, ಈ ಕೊಂಬೆಗಳು ಯೆಹೋವನಿಗೆ ಸಂಬಂಧಿಸಿಲ್ಲ.[a]
11 ಇಸ್ರೇಲ್ ಜನರೂ ಯೆಹೂದದ ಜನರೂ
    ನನಗೆ ಎಲ್ಲಾ ವಿಧದಲ್ಲಿ ದ್ರೋಹವನ್ನು ಮಾಡಿರುವರು”
ಎಂದು ಯೆಹೋವನು ಹೇಳಿದನು.

12 “ಆ ಜನರು ಯೆಹೋವನ ಬಗ್ಗೆ ಸುಳ್ಳು ಹೇಳಿದ್ದಾರೆ. ‘ಯೆಹೋವನು ನಮಗೇನೂ ಮಾಡುವುದಿಲ್ಲ. ನಮಗೆ ಕೆಟ್ಟದ್ದೇನೂ ಆಗುವದಿಲ್ಲ. ಯಾವ ಸೈನ್ಯವೂ ನಮ್ಮ ಮೇಲೆ ಧಾಳಿ ಮಾಡುವುದಿಲ್ಲ; ನಾವೆಂದೂ ಉಪವಾಸಬೀಳುವದಿಲ್ಲ’ ಎಂದು ಅವರು ಹೇಳಿದ್ದಾರೆ.
13 ಆ ಸುಳ್ಳುಪ್ರವಾದಿಗಳು ಹೇಳಿದ್ದು ಕೇವಲ ಗಾಳಿಯ ಮಾತು.
ದೈವೋಕ್ತಿಯು ಅವರಲ್ಲಿಲ್ಲ, ಅವರಿಗೆ ಕೇಡಾಗುವದು.”

14 ಯೆಹೋವನೇ, ಸರ್ವಶಕ್ತನಾದ ದೇವರು. ಆತನು ಹೀಗೆನ್ನುತ್ತಾನೆ:
“ನಾನು ಶಿಕ್ಷಿಸುವದಿಲ್ಲವೆಂದು ಆ ಜನರು ಹೇಳಿದರು.
ಆದ್ದರಿಂದ ಯೆರೆಮೀಯನೇ, ನಾನು ನಿನಗೆ ಹೇಳುವ ಮಾತುಗಳು ಬೆಂಕಿಯಂತೆ ಇರುವವು.
    ಅವರು ಸೌದೆಯಂತೆ ಆಗುವರು.
ಬೆಂಕಿಯು ಎಲ್ಲಾ ಸೌದೆಯನ್ನು ಸುಟ್ಟುಬಿಡುವದು.”
15 ಇದು ಯೆಹೋವನ ಮಾತು:
“ಇಸ್ರೇಲ್ ಮನೆತನವೇ, ನಿನ್ನ ಮೇಲೆ ಧಾಳಿ ಮಾಡುವುದಕ್ಕೆ ನಾನು ಬಹಳ ದೂರದಿಂದ ಒಂದು ಜನಾಂಗವನ್ನು ತರುತ್ತೇನೆ.
ಅದು ಒಂದು ಬಲಿಷ್ಠ ಜನಾಂಗ;
    ಅದೊಂದು ಪುರಾತನ ಕಾಲದಿಂದ ಬಂದ ಜನಾಂಗ.
ಆ ಜನಾಂಗದವರು ಮಾತನಾಡುವ ಭಾಷೆ ನಿನಗೆ ತಿಳಿಯುವದಿಲ್ಲ.
    ಅವರು ಹೇಳುವುದು ನಿನಗೆ ಅರ್ಥವಾಗುವದಿಲ್ಲ.
16 ಅವರ ಬತ್ತಳಿಕೆಗಳು ಬಾಯಿತೆರೆದ ಗೋರಿಗಳಂತಿವೆ.
    ಅವರ ಜನರೆಲ್ಲ ಶೂರರಾದ ಸೈನಿಕರಾಗಿದ್ದಾರೆ.
17 ಆ ಸೈನಿಕರು ನೀವು ಬೆಳೆದ ಬೆಳೆಯನ್ನು ತಿಂದುಬಿಡುವರು.
    ಅವರು ನಿಮ್ಮೆಲ್ಲ ಆಹಾರವನ್ನು ತಿಂದುಬಿಡುವರು.
    ಅವರು ನಿಮ್ಮ ಗಂಡುಮಕ್ಕಳನ್ನೂ ಹೆಣ್ಣುಮಕ್ಕಳನ್ನೂ ತಿಂದುಬಿಡುವರು (ನಾಶಮಾಡುವರು).
ಅವರು ನಿಮ್ಮ ದನಕರುಗಳ ಹಿಂಡುಗಳನ್ನು, ಕುರಿಗಳ ಮಂದೆಗಳನ್ನು ತಿಂದುಬಿಡುವರು.
    ಅವರು ನಿಮ್ಮ ದ್ರಾಕ್ಷಿಗಳನ್ನೂ ನಿಮ್ಮ ಅಂಜೂರಗಳನ್ನೂ ತಿಂದುಬಿಡುವರು.
ಅವರು ತಮ್ಮ ಖಡ್ಗಗಳಿಂದ ನಿಮ್ಮ ಭದ್ರವಾದ ನಗರಗಳನ್ನು ನಾಶಮಾಡುವರು.
    ನೀವು ನಂಬಿಕೊಂಡಿದ್ದ ನಿಮ್ಮ ಭದ್ರವಾದ ನಗರಗಳನ್ನು ಅವರು ಹಾಳುಮಾಡುತ್ತಾರೆ.”

18 “ಯೆಹೂದವೇ, ಆ ಭಯಂಕರ ದಿನಗಳು ಬಂದಾಗ ನಾನು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುವದಿಲ್ಲ,
ಎಂದು ಯೆಹೋವನು ಹೇಳಿದನು.
19 ಯೆಹೂದದ ಜನರು ನಿನ್ನನ್ನು,
    ‘ಯೆರೆಮೀಯನೇ, ನಮ್ಮ ದೇವರಾದ ಯೆಹೋವನು ನಮಗೆ ಇಂಥಾ ಕೇಡನ್ನು ಏಕೆ ಮಾಡಿದನು’ ಎಂದು ಕೇಳಬಹುದು.
ಆಗ ಅವರಿಗೆ ಹೀಗೆ ಉತ್ತರಕೊಡು:
‘ಯೆಹೂದದ ಜನರಾದ ನೀವು ಯೆಹೋವನನ್ನು ತೊರೆದಿದ್ದೀರಿ,
    ನಿಮ್ಮ ದೇಶದಲ್ಲಿ ನೀವು ಅನ್ಯರ ವಿಗ್ರಹಗಳ ಸೇವೆ ಮಾಡುತ್ತಿದ್ದೀರಿ.
ಆದ್ದರಿಂದಲೇ ನೀವು ಪರದೇಶದಲ್ಲಿ
    ಪರದೇಶಿಯರ ಸೇವೆಯನ್ನು ಮಾಡುವಿರಿ.’”

20 ಯೆಹೋವನು ಹೀಗೆನ್ನುತ್ತಾನೆ: “ಈ ಸಂದೇಶವನ್ನು ಯಾಕೋಬನ ಜನಾಂಗದವರಿಗೆ ಸಾರಿರಿ.
    ಈ ಸಂದೇಶವನ್ನು ಯೆಹೂದ ಜನಾಂಗಕ್ಕೆ ಹೇಳಿರಿ:
21 ಬುದ್ಧಿ ಇಲ್ಲದ ಮೂರ್ಖಜನರೇ,
    ಈ ಸಂದೇಶವನ್ನು ಕೇಳಿರಿ.
    ನಿಮಗೆ ಕಣ್ಣುಗಳಿವೆ ಆದರೆ ನೀವು ನೋಡುವದಿಲ್ಲ,
    ನಿಮಗೆ ಕಿವಿಗಳಿವೆ ಆದರೆ ನೀವು ಕೇಳುವದಿಲ್ಲ.
22 ನೀವು ನನಗೆ ಅಂಜುವುದಿಲ್ಲವೇ?”
ಇದು ಯೆಹೋವನ ಸಂದೇಶ:
“ನೀವು ನನ್ನ ಎದುರಿಗೆ ಭಯದಿಂದ ನಡುಗುವುದಿಲ್ಲವೇ?
    ಸಾಗರಗಳಿಗೆ ಗಡಿಯಂತೆ ದಡವನ್ನು ನಿರ್ಮಿಸಿದವನು ನಾನೇ.
    ಸಮುದ್ರವು ನಿರಂತರವಾಗಿ ತನ್ನ ಸೀಮೆಯಲ್ಲಿಯೇ ಹರಿಯಬೇಕೆಂದು ಹಾಗೆ ಮಾಡಿದೆ.
    ತೆರೆಗಳು ದಡವನ್ನು ಅಪ್ಪಳಿಸಬಹುದು ಆದರೆ ಅವುಗಳು ಅದನ್ನು ನಾಶಮಾಡಲಾರವು.
    ತೆರೆಗಳು ಬರುವಾಗ ಭೋರ್ಗರೆಯಬಹುದು, ಆದರೆ ದಡವನ್ನು ದಾಟಿಹೋಗಲಾರವು.
23 ಯೆಹೂದದ ಜನರು ಹಟಮಾರಿಗಳಾಗಿದ್ದಾರೆ.
    ಅವರು ನನ್ನ ವಿರುದ್ಧ ಹೋಗುವದಕ್ಕೆ ಮಾರ್ಗಗಳನ್ನು ಹುಡುಕುತ್ತಿದ್ದಾರೆ.
    ಅವರು ನನ್ನಿಂದ ತಿರುಗಿ ಬಹಳ ದೂರ ಹೋಗಿಬಿಟ್ಟಿದ್ದಾರೆ.
24 ಯೆಹೂದದ ಜನರು,
    ‘ನಾವು ನಮ್ಮ ದೇವರಾದ ಯೆಹೋವನಿಗೆ ಭಯಭಕ್ತಿಯಿಂದಿರಬೇಕು.
    ಆತನು ನಮಗೆ ಸರಿಸಮಯದಲ್ಲಿ ಮುಂಗಾರು ಮತ್ತು ಹಿಂಗಾರುಮಳೆ ಸುರಿಸುತ್ತಾನೆ.
    ಸರಿಸಮಯಕ್ಕೆ ಫಸಲನ್ನು ಬರಮಾಡುತ್ತಾನೆ’ ಎಂದು ತಮ್ಮ ಹೃದಯದಲ್ಲಿ ಅಂದುಕೊಳ್ಳುವದಿಲ್ಲ.
25 ಯೆಹೂದದ ಜನರೇ, ನೀವು ತಪ್ಪುಗಳನ್ನು ಮಾಡಿರುವಿರಿ.
ಆದ್ದರಿಂದಲೇ ಮಳೆಬೆಳೆಗಳು ಆಗಿಲ್ಲ.
    ನಿಮ್ಮ ಪಾಪಗಳಿಂದಾಗಿ ಯೆಹೋವನ ಆ ಉತ್ತಮ ಕಾಣಿಕೆಗಳನ್ನು ನೀವು ಸವಿಯಲಾಗಲಿಲ್ಲ.
26 ನಮ್ಮ ಜನರಲ್ಲಿ ದುಷ್ಟರಿದ್ದಾರೆ.
    ಅವರು ಪಕ್ಷಿಗಳ ಬಲೆಯನ್ನು ಮಾಡುವ ಬಲೆಗಾರರಂತಿದ್ದಾರೆ.
ಅವರು ಬಲೆಗಳನ್ನು ಬೀಸುತ್ತಾರೆ.
    ಆದರೆ ಅವರು ಹಿಡಿಯುವುದು ಪಕ್ಷಿಗಳನ್ನಲ್ಲ, ಮನುಷ್ಯರನ್ನೇ.
27 ಪಕ್ಷಿಗಳಿಂದ ತುಂಬಿರುವ ಪಂಜರದಂತೆ
    ಈ ಕೇಡಿಗರ ಮನೆಗಳು ಸುಳ್ಳುಮೋಸಗಳಿಂದ ತುಂಬಿವೆ.
ಅವರ ಸುಳ್ಳುಮೋಸಗಳು ಅವರನ್ನು ಶ್ರೀಮಂತರನ್ನಾಗಿಯೂ ಶಕ್ತಿಶಾಲಿಗಳನ್ನಾಗಿಯೂ ಮಾಡಿವೆ.
28     ಅವರು ಮಾಡಿದ ದುಷ್ಕೃತ್ಯಗಳಿಂದ ಅವರು ಬೆಳೆದಿದ್ದಾರೆ, ಕೊಬ್ಬಿದ್ದಾರೆ.
ಅವರು ಮಾಡುವ ದುಷ್ಕೃತ್ಯಗಳಿಗೆ ಕೊನೆಯೇ ಇಲ್ಲ.
    ಅವರು ಅನಾಥ ಮಕ್ಕಳ ಪಕ್ಷವಹಿಸಿ ಮಾತನಾಡುವದಿಲ್ಲ.
    ಅವರು ಅನಾಥರಿಗೆ ಸಹಾಯ ಮಾಡುವದಿಲ್ಲ.
    ಅವರು ದಿಕ್ಕಿಲ್ಲದವರಿಗೆ ನ್ಯಾಯ ದೊರೆಯದಂತೆ ಮಾಡುವರು.
29 ಇವುಗಳ ನಿಮಿತ್ತ ಯೆಹೂದದ ಜನರನ್ನು ನಾನು ಶಿಕ್ಷಿಸಬೇಕಲ್ಲವೆ?”
ಯೆಹೋವನು ಹೀಗೆನ್ನುತ್ತಾನೆ:
“ಇಂಥ ಜನಾಂಗವನ್ನು ನಾನು ದಂಡಿಸಬೇಕೆಂಬುದು ನಿಮಗೆ ಗೊತ್ತು.
    ನಾನು ಅವರಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು.”

30 ಯೆಹೋವನು, “ಯೆಹೂದ ಪ್ರದೇಶದಲ್ಲಿ ಭಯಂಕರವಾದ
    ಮತ್ತು ಅಸಹ್ಯವಾದ ಸಂಗತಿಗಳು ನಡೆದಿವೆ.
31 ಪ್ರವಾದಿಗಳು ಸುಳ್ಳು ಹೇಳುತ್ತಿದ್ದಾರೆ.
ಯಾಜಕರು ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿದ್ದಾರೆ.[b]
    ನನ್ನ ಜನರು ಇದನ್ನೇ ಮೆಚ್ಚಿಕೊಳ್ಳುತ್ತಿದ್ದಾರೆ.
ಆದರೆ ದಂಡನೆಯ ಸಮಯ ಬಂದಾಗ
    ನೀವು ಏನು ಮಾಡುವಿರಿ?” ಎಂದನು.

ಮತ್ತಾಯ 19

ವಿವಾಹ ವಿಚ್ಛೇದನದ ಕುರಿತು ಯೇಸುವಿನ ಬೋಧನೆ

(ಮಾರ್ಕ 10:1-12)

19 ಯೇಸು ಈ ಸಂಗತಿಗಳನ್ನು ಹೇಳಿದ ಬಳಿಕ ಗಲಿಲಾಯದಿಂದ ಹೊರಟು ಜೋರ್ಡನ್ ನದಿಯ ಮತ್ತೊಂದು ತೀರದಲ್ಲಿದ್ದ ಜುದೇಯ ಪ್ರಾಂತ್ಯಕ್ಕೆ ಬಂದನು. ಯೇಸುವನ್ನು ಅನೇಕ ಜನರು ಹಿಂಬಾಲಿಸಿದರು. ಯೇಸು ಅಲ್ಲಿ ರೋಗಿಗಳನ್ನು ಗುಣಪಡಿಸಿದನು.

ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ತಪ್ಪಿನಲ್ಲಿ ಸಿಕ್ಕಿಸುವುದಕ್ಕಾಗಿ, “ತನ್ನದೇ ಆದ ಯಾವ ಕಾರಣಕ್ಕಾಗಲಿ ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು.

ಯೇಸು, “ನೀವು ನಿಜವಾಗಿಯೂ ಇದನ್ನು ಪವಿತ್ರಗ್ರಂಥದಲ್ಲಿ ಓದಿದ್ದೀರಿ. ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ಸೃಷ್ಟಿಸಿದನು.’(A) ಆದಕಾರಣ ದೇವರು, ‘ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗುವರು.’(B) ಎಂದು ಹೇಳಿದನು. ಆದ್ದರಿಂದ ಇವರಿಬ್ಬರು ಇನ್ನು ಮೇಲೆ ಇಬ್ಬರಲ್ಲ, ಒಬ್ಬರೇ. ಅವರಿಬ್ಬರನ್ನು ದೇವರೇ ಒಟ್ಟಿಗೆ ಕೂಡಿಸಿದ್ದಾನೆ. ಆದ್ದರಿಂದ ಯಾವ ಮನುಷ್ಯನೂ ಅವರನ್ನು ಪ್ರತ್ಯೇಕಿಸಬಾರದು” ಎಂದು ಉತ್ತರಕೊಟ್ಟನು.

ಫರಿಸಾಯರು, “ಹಾಗಾದರೆ ಒಬ್ಬ ಪುರುಷನು ವಿವಾಹ ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಬಿಟ್ಟುಬಿಡಬಹುದೆಂದು ಮೋಶೆಯು ಹೇಳಿದ್ದೇಕೆ?” ಎಂದು ಕೇಳಿದರು.[a]

ಯೇಸು, “ನೀವು ದೇವರ ಬೋಧನೆಯನ್ನು ಸ್ವೀಕರಿಸದಿದ್ದ ಕಾರಣ ನಿಮ್ಮ ಹೆಂಡತಿಯರನ್ನು ಬಿಟ್ಟುಬಿಡುವುದಕ್ಕೆ ಮೋಶೆ ಅವಕಾಶಕೊಟ್ಟನು. ಆದರೆ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ಆರಂಭದಲ್ಲಿ ಅವಕಾಶ ಇರಲಿಲ್ಲ. ನಾನು ನಿಮಗೆ ಹೇಳುವುದೇನೆಂದರೆ, ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರಿಯಾಗುತ್ತಾನೆ. ಮೊದಲಿನ ಹೆಂಡತಿಯು ಬೇರೊಬ್ಬನೊಡನೆ ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ ಮಾತ್ರ ಅವನು ಆಕೆಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆ ಆಗಬಹುದು” ಎಂದು ಉತ್ತರಿಸಿದನು.

10 ಶಿಷ್ಯರು ಯೇಸುವಿಗೆ, “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡಲು ಇದೊಂದೇ ಕಾರಣವಾಗಿದ್ದರೆ, ಮದುವೆ ಆಗದಿರುವುದೇ ಉತ್ತಮ” ಎಂದರು.

11 ಅದಕ್ಕೆ ಯೇಸು, “ಮದುವೆಯ ವಿಷಯವಾದ ಈ ಸತ್ಯವನ್ನು ಪ್ರತಿಯೊಬ್ಬರೂ ಸ್ವೀಕರಿಸಲು ಸಾಧ್ಯವಿಲ್ಲ. ಇದನ್ನು ಸ್ವೀಕರಿಸಲು ದೇವರು ಯಾರನ್ನು ಸಮರ್ಥರನ್ನಾಗಿ ಮಾಡಿದ್ದಾನೋ ಅವರಿಗೆ ಮಾತ್ರ ಸಾಧ್ಯ. 12 ಕೆಲವರು ಮದುವೆ ಆಗದಿರಲು ಬೇರೆಬೇರೆ ಕಾರಣಗಳಿವೆ. ಹುಟ್ಟಿದಂದಿನಿಂದಲೇ ಕೆಲವರು ನಪುಂಸಕರಾಗಿರುತ್ತಾರೆ. ಇನ್ನು ಕೆಲವರು ಬೇರೆಯವರಿಂದ ನಪುಂಸಕರಾಗಿ ಮಾಡಲ್ಪಡುತ್ತಾರೆ. ಬೇರೆ ಕೆಲವರು ಪರಲೋಕರಾಜ್ಯಕ್ಕೋಸ್ಕರ ಮದುವೆಯನ್ನು ತೊರೆದುಬಿಡುತ್ತಾರೆ. ಆದರೆ ಮದುವೆ ಆಗುವಂಥವನು ಮದುವೆ ವಿಷಯವಾದ ಈ ಬೋಧನೆಯನ್ನು ಸ್ವೀಕರಿಸಬೇಕು” ಎಂದು ಉತ್ತರಕೊಟ್ಟನು.

ಯೇಸುವಿನಿಂದ ಮಕ್ಕಳಿಗೆ ಸ್ವಾಗತ

(ಮಾರ್ಕ 10:13-16; ಲೂಕ 18:15-17)

13 ಬಳಿಕ ಜನರು ಯೇಸುವಿನ ಬಳಿಗೆ ಬಂದು ತಮ್ಮ ಚಿಕ್ಕ ಮಕ್ಕಳನ್ನು ತಂದು ಅವರಿಗಾಗಿ ಪ್ರಾರ್ಥಿಸಬೇಕೆಂದು ಆತನನ್ನು ಬೇಡಿಕೊಂಡರು. ಇದನ್ನು ಕಂಡ ಶಿಷ್ಯರು ಚಿಕ್ಕ ಮಕ್ಕಳನ್ನು ಆತನ ಬಳಿಗೆ ತರಕೂಡದೆಂದು ಗದರಿಸಿದರು. 14 ಆದರೆ ಯೇಸು, “ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರಿಗೆ ಅಡ್ಡಿ ಮಾಡಬೇಡಿ. ಏಕೆಂದರೆ ಪರಲೋಕರಾಜ್ಯ ಈ ಚಿಕ್ಕ ಮಕ್ಕಳಂಥವರದೇ” ಎಂದನು. 15 ನಂತರ ಯೇಸು ತನ್ನ ಕೈಗಳನ್ನು ಮಕ್ಕಳ ಮೇಲೆ ಇಟ್ಟು ಆಶೀರ್ವದಿಸಿದನು. ಬಳಿಕ ಅಲ್ಲಿಂದ ಹೊರಟುಹೋದನು.

ಧನಿಕ ಯುವಕನ ಸಮಸ್ಯೆ

(ಮಾರ್ಕ 10:17-31; ಲೂಕ 18:18-30)

16 ಒಬ್ಬನು ಯೇಸುವಿನ ಬಳಿಗೆ ಬಂದು, “ಬೋಧಕನೇ ನಾನು ನಿತ್ಯಜೀವ ಹೊಂದಲು ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು.

17 ಯೇಸು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ಕೇಳುವುದೇಕೆ? ದೇವರೊಬ್ಬನೇ ಒಳ್ಳೆಯವನು. ಆದರೆ ನೀನು ನಿತ್ಯಜೀವವನ್ನು ಹೊಂದಬೇಕೆಂದಿದ್ದರೆ ಈ ಆಜ್ಞೆಗಳಿಗೆ ವಿಧೇಯನಾಗು” ಎಂದು ಉತ್ತರಕೊಟ್ಟನು.

18 ಆ ಮನುಷ್ಯನು, “ಯಾವ ಆಜ್ಞೆಗಳು?” ಎಂದು ಕೇಳಿದನು.

ಯೇಸು “ಕೊಲೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. 19 ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನು ಪ್ರೀತಿಸುವಂತೆ ಬೇರೆಯವರನ್ನೂ ಪ್ರೀತಿಸಬೇಕು”(C) ಎಂದು ಉತ್ತರಕೊಟ್ಟನು.

20 ಆ ಯುವಕನು, “ನಾನು ಇವೆಲ್ಲವುಗಳಿಗೆ ವಿಧೇಯನಾಗಿದ್ದೇನೆ. ನಾನು ಬೇರೆ ಏನಾದರೂ ಮಾಡಬೇಕೇ?” ಎಂದು ಕೇಳಿದನು.

21 ಯೇಸು, “ನೀನು ಸಂಪೂರ್ಣನಾಗಬೇಕೆಂದಿದ್ದರೆ ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ಬಡವರಿಗೆ ಕೊಡು. ಆಗ ನಿನಗೆ ಪರಲೋಕದಲ್ಲಿ ದೊಡ್ಡ ಭಂಡಾರ ಇರುವುದು. ನಂತರ ಬಂದು ನನ್ನನ್ನು ಹಿಂಬಾಲಿಸು!” ಎಂದು ಉತ್ತರಕೊಟ್ಟನು.

22 ಇದನ್ನು ಕೇಳಿದಾಗ ಅವನು ಬಹಳ ದುಃಖದಿಂದ ಹೊರಟುಹೋದನು. ಏಕೆಂದರೆ ಅವನು ದೊಡ್ಡ ಐಶ್ವರ್ಯವಂತನಾಗಿದ್ದನು.

23 ಆಗ ಯೇಸು ತನ್ನ ಶಿಷ್ಯರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಐಶ್ವರ್ಯವಂತನು ಪರಲೋಕರಾಜ್ಯಕ್ಕೆ ಪ್ರವೇಶಿಸುವುದು ಬಹಳ ಕಷ್ಟಕರ. 24 ಹೌದು, ಐಶ್ವರ್ಯವಂತನು ದೇವರ ರಾಜ್ಯ ಪ್ರವೇಶಿಸುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂದು ನಾನು ನಿಮಗೆ ಹೇಳುತ್ತೇನೆ” ಎಂದನು.

25 ಶಿಷ್ಯರು ಇದನ್ನು ಕೇಳಿ ಬಹಳ ಆಶ್ಚರ್ಯದಿಂದ, “ಹಾಗಾದರೆ ಯಾರು ರಕ್ಷಣೆ ಹೊಂದಬಲ್ಲರು?” ಎಂದು ಕೇಳಿದರು.

26 ಯೇಸು ತನ್ನ ಶಿಷ್ಯರ ಕಡೆಗೆ ದೃಷ್ಟಿಸಿ, “ಇದು ಮನುಷ್ಯರಿಗೆ ಅಸಾಧ್ಯವಾದ ಕಾರ್ಯ. ಆದರೆ ದೇವರಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.

27 ಪೇತ್ರನು ಯೇಸುವಿಗೆ, “ನಾವು ನಮಗಿದ್ದ ಪ್ರತಿಯೊಂದನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು. ನಮಗೆ ಏನು ದೊರಕುವುದು” ಎಂದನು.

28 ಯೇಸು ಶಿಷ್ಯರಿಗೆ ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಹೊಸ ಲೋಕವು ಸೃಷ್ಟಿಸಲ್ಪಟ್ಟಾಗ ಮನುಷ್ಯಕುಮಾರನು ತನ್ನ ಮಹಾಸಿಂಹಾಸನದ ಮೇಲೆ ಕುಳಿತುಕೊಳ್ಳುವನು. ನನ್ನನ್ನು ಹಿಂಬಾಲಿಸಿದ ನೀವೆಲ್ಲರೂ ಸಿಂಹಾಸನಗಳ ಮೇಲೆ ಕುಳಿತು ಇಸ್ರೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ. 29 ನನ್ನನ್ನು ಹಿಂಬಾಲಿಸಲು ತಮ್ಮ ಮನೆಗಳನ್ನು, ಸಹೋದರ ಸಹೋದರಿಯರನ್ನು, ತಂದೆತಾಯಿಗಳನ್ನು, ಮಕ್ಕಳನ್ನು ಇಲ್ಲವೆ ಆಸ್ತಿಯನ್ನು ತ್ಯಜಿಸಿದ ಪ್ರತಿಯೊಬ್ಬರು ತಾವು ಬಿಟ್ಟವುಗಳಿಗಿಂತ ಹೆಚ್ಚಾಗಿ ಪಡೆಯುತ್ತಾರೆ. ಅಲ್ಲದೆ ನಿತ್ಯಜೀವವನ್ನೂ ಹೊಂದಿಕೊಳ್ಳುತ್ತಾರೆ. 30 ಆದರೆ ಮೊದಲನೆಯವರಲ್ಲಿ ಅನೇಕರು ಕಡೆಯರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International