Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯೆಹೋಶುವನು 7

ಆಕಾನನ ಪಾಪ

ಇಸ್ರೇಲರು ಯೆಹೋವನ ಆಜ್ಞೆಗೆ ವಿಧೇಯರಾಗಲಿಲ್ಲ. ಯೆಹೂದ ಕುಲದವನೂ ಕರ್ಮೀಯ ಮಗನೂ ಜಬ್ದೀಯ ಮೊಮ್ಮಗನೂ ಜೆರಹನ ಗೋತ್ರದವನೂ ಆದ ಆಕಾನ ಎಂಬವನು ನಾಶಮಾಡಬೇಕಾದ ವಸ್ತುಗಳಲ್ಲಿ ಕೆಲವನ್ನು ಇಟ್ಟುಕೊಂಡಿದ್ದನು. ಅದಕ್ಕಾಗಿ ಯೆಹೋವನು ಇಸ್ರೇಲಿನವರ ಮೇಲೆ ತುಂಬಾ ಕೋಪಗೊಂಡನು.

ಜೆರಿಕೊವನ್ನು ಸ್ವಾಧೀನಪಡಿಸಿಕೊಂಡ ಮೇಲೆ ಯೆಹೋಶುವನು ಕೆಲವು ಜನರನ್ನು “ಆಯಿ” ಎಂಬ ಪಟ್ಟಣಕ್ಕೆ ಕಳುಹಿಸಿದನು. “ಆಯಿ” ಬೇತಾವೆನಿನ ಸಮೀಪಕ್ಕೂ ಬೇತೇಲಿನ ಪೂರ್ವಕ್ಕೂ ಇತ್ತು. ಯೆಹೋಶುವನು “‘ಆಯಿ’ಗೆ ಹೋಗಿರಿ ಮತ್ತು ಆ ಪ್ರಾಂತ್ಯದ ದುರ್ಬಲತೆಗಳನ್ನು ಕಂಡುಹಿಡಿಯಿರಿ” ಎಂದು ಹೇಳಿದನು. ಆಗ ಅವರು ಆ ಪ್ರದೇಶದಲ್ಲಿ ಗೂಢಚರ್ಯ ಮಾಡುವುದಕ್ಕೆ ಹೋದರು.

ತರುವಾಯ ಆ ಜನರು ಯೆಹೋಶುವನಲ್ಲಿಗೆ ಬಂದು, “ಆಯಿ ಒಂದು ದುರ್ಬಲ ಪ್ರದೇಶವಾಗಿದೆ, ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ನಮ್ಮ ಎಲ್ಲ ಜನರು ಬೇಕಾಗುವುದಿಲ್ಲ. ಅಲ್ಲಿ ಯುದ್ಧ ಮಾಡಲು ಎರಡು ಅಥವಾ ಮೂರುಸಾವಿರ ಜನರನ್ನು ಕಳುಹಿಸಿದರೆ ಸಾಕು, ಇಡೀ ಸೈನ್ಯವನ್ನು ಉಪಯೋಗಿಸುವ ಅವಶ್ಯಕತೆ ಇಲ್ಲ. ಅಲ್ಲಿ ನಮ್ಮ ವಿರುದ್ಧ ಹೋರಾಡಬಲ್ಲ ಕೆಲವೇ ಜನರು ಇದ್ದಾರೆ” ಎಂದು ಹೇಳಿದರು.

4-5 ಸುಮಾರು ಮೂರು ಸಾವಿರ ಜನರು “ಆಯಿ”ಗೆ ಹೋದರು. ಆದರೆ “ಆಯಿ”ಯ ಜನರು ಇಸ್ರೇಲಿನ ಸುಮಾರು ಮೂವತ್ತಾರು ಜನರನ್ನು ಕೊಂದು ಹಾಕಿದರು. ಆದ್ದರಿಂದ ಇಸ್ರೇಲಿನ ಜನರು ಓಡಿಹೋದರು. “ಆಯಿ”ಯ ಜನರು ಅವರನ್ನು ಪಟ್ಟಣದ ದ್ವಾರದಿಂದ ಕಲ್ಲುಗಣಿಗಳವರೆಗೆ ಬೆನ್ನಟ್ಟಿಕೊಂಡು ಬಂದರು. “ಆಯಿ”ಯ ಜನರು ಅವರನ್ನು ಚೆನ್ನಾಗಿ ಥಳಿಸಿದರು.

ಆಗ ಇಸ್ರೇಲರು ತುಂಬ ಭಯಗೊಂಡು ಧೈರ್ಯವನ್ನು ಕಳೆದುಕೊಂಡರು. ಇದನ್ನು ಕೇಳಿ ಯೆಹೋಶುವನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು ಪವಿತ್ರ ಪೆಟ್ಟಿಗೆಯ ಮುಂದೆ ನೆಲದ ಮೇಲೆ ಬೋರಲಾಗಿ ಬಿದ್ದುಕೊಂಡನು. ಸಾಯಂಕಾಲದವರೆಗೂ ಯೆಹೋಶುವನು ಹಾಗೆಯೇ ಇದ್ದನು. ಇಸ್ರೇಲಿನ ಹಿರಿಯರೂ ಹಾಗೆಯೇ ಮಾಡಿದರು. ಅವರು ದುಃಖದಿಂದ ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡರು.

ಯೆಹೋಶುವನು, “ಯೆಹೋವನೇ ನನ್ನ ಒಡೆಯನೇ, ನಮ್ಮ ಜನರನ್ನು ನೀನು ಜೋರ್ಡನ್ ನದಿ ದಾಟಿಸಿ ಕರೆದುಕೊಂಡು ಬಂದೆ. ನಮ್ಮನ್ನು ಇಲ್ಲಿಯವರೆಗೆ ಕರೆದು ತಂದು ಅಮೋರಿಯರಿಂದ ನಾಶವಾಗಲು ನಮ್ಮನ್ನು ಬಿಟ್ಟು ಕೊಡುವುದೇಕೆ? ನಾವು ಇದ್ದುದರಲ್ಲಿ ತೃಪ್ತಿಪಟ್ಟುಕೊಂಡು ಜೋರ್ಡನ್ ನದಿಯ ಆಚೆಯಲ್ಲಿಯೇ ಇರಬೇಕಾಗಿತ್ತು. ಯೆಹೋವನೇ, ಇಸ್ರೇಲರು ವೈರಿಗಳ ಮುಂದೆ ಸೋತು ಹೋಗಿದ್ದಾರಲ್ಲಾ! ಈಗ ನಾನೇನು ಹೇಳಲಿ? ಈ ವಿಷಯವು ಕಾನಾನ್ಯರಿಗೂ ದೇಶದ ಉಳಿದ ಎಲ್ಲಾ ಜನರಿಗೂ ತಿಳಿಯುವುದು. ಆಗ ಅವರು ನಮ್ಮ ಮೇಲೆ ಧಾಳಿಮಾಡಿ ನಮ್ಮೆಲ್ಲರನ್ನು ಕೊಂದು ಹಾಕುತ್ತಾರೆ. ಆಗ ನೀನು ನಿನ್ನ ಕೀರ್ತಿಯನ್ನು ಉಳಿಸಿಕೊಳ್ಳಲು ಏನು ಮಾಡುವೆ?” ಎಂದು ಪ್ರಲಾಪಿಸಿದನು.

10 ಯೆಹೋವನು ಯೆಹೋಶುವನಿಗೆ, “ಮೇಲಕ್ಕೆ ಏಳು, ನೀನು ಹೀಗೆ ಬೋರಲು ಬಿದ್ದಿರುವುದೇಕೆ? 11 ಇಸ್ರೇಲರು ಪಾಪಮಾಡಿದ್ದಾರೆ. ನಾನು ಮಾಡಿಕೊಂಡ ಒಡಂಬಡಿಕೆಯನ್ನು ಮೀರಿದ್ದಾರೆ. ನಾನು ನಾಶಪಡಿಸಲು ಹೇಳಿದ ವಸ್ತುಗಳಲ್ಲಿ ಕೆಲವನ್ನು ಅವರು ತೆಗೆದುಕೊಂಡಿದ್ದಾರೆ; ಅವರು ನನ್ನಿಂದ ಕದ್ದಿದ್ದಾರೆ; ಸುಳ್ಳು ಹೇಳಿದ್ದಾರೆ. ಅವರು ಆ ವಸ್ತುಗಳನ್ನು ತಮಗಾಗಿ ತೆಗೆದುಕೊಂಡಿದ್ದಾರೆ. 12 ಅದಕ್ಕಾಗಿಯೇ ಇಸ್ರೇಲಿನ ಸೈನ್ಯವು ಯುದ್ಧದಿಂದ ವಿಮುಖವಾಗಿ ಓಡಿಬಂತು. ಅವರು ತಪ್ಪನ್ನು ಮಾಡಿದ್ದರಿಂದಲೇ ಶಾಪಕ್ಕೆ ಗುರಿಯಾಗಿದ್ದಾರೆ. ಆ ಪಾಪವನ್ನು ನಿಮ್ಮಿಂದ ತೆಗೆದುಹಾಕಬೇಕು, ಅಲ್ಲಿಯವರೆಗೆ ನಾನು ನಿಮಗೆ ಸಹಾಯ ಮಾಡುವುದಿಲ್ಲ, ನಾನು ನಿಮ್ಮ ಸಂಗಡ ಬರುವುದೇ ಇಲ್ಲ.

13 “ಈಗ ಹೋಗಿ ಜನರನ್ನು ಶುದ್ಧಗೊಳಿಸು, ನೀನು ಜನರಿಗೆ, ‘ನೀವು ನಿಮ್ಮನ್ನು ಶುದ್ಧಿಗೊಳಿಸಿಕೊಳ್ಳಿರಿ, ನಾಳೆಗಾಗಿ ಸಿದ್ಧರಾಗಿರಿ, ಇಸ್ರೇಲಿನ ದೇವರಾದ ಯೆಹೋವನು ನಾಶಪಡಿಸಬೇಕೆಂದು ಆಜ್ಞಾಪಿಸಿದ ವಸ್ತುಗಳನ್ನು ಕೆಲ ಜನರು ಇಟ್ಟುಕೊಂಡಿದ್ದಾರೆಂದು ಹೇಳುತ್ತಾನೆ. ನೀವು ಆ ವಸ್ತುಗಳನ್ನು ಬಿಸಾಡುವವರೆಗೆ ನಿಮಗೆ ನಿಮ್ಮ ಶತ್ರುಗಳನ್ನು ಸೋಲಿಸಲು ಎಂದಿಗೂ ಸಾಧ್ಯವಿಲ್ಲ.

14 “‘ನಾಳೆ ಬೆಳಿಗ್ಗೆ ನೀವೆಲ್ಲರು ಯೆಹೋವನ ಮುಂದೆ ಬಂದು ನಿಲ್ಲಬೇಕು. ಎಲ್ಲಾ ಕುಲಗಳು ಯೆಹೋವನ ಮುಂದೆ ಬಂದು ನಿಲ್ಲಬೇಕು. ಯೆಹೋವನು ಒಂದು ಕುಲವನ್ನು ಸೂಚಿಸುತ್ತಾನೆ. ಆಗ ಆ ಕುಲ ಮಾತ್ರ ಮುಂದೆ ನಿಲ್ಲಬೇಕು. ಆಗ ಯೆಹೋವನು ಒಂದು ಗೋತ್ರವನ್ನು ಸೂಚಿಸುತ್ತಾನೆ. ಆಗ ಆ ಗೋತ್ರದವರು ಮಾತ್ರ ಯೆಹೋವನ ಮುಂದೆ ನಿಲ್ಲಬೇಕು. ಆಗ ಯೆಹೋವನು ಆ ಗೋತ್ರದ ಪ್ರತಿಯೊಂದು ಕುಟುಂಬವನ್ನು ನೋಡಿ, ಒಂದು ಕುಟುಂಬವನ್ನು ಸೂಚಿಸುತ್ತಾನೆ. ಬಳಿಕ ಯೆಹೋವನು ಆ ಕುಟುಂಬದ ಪ್ರತಿಯೊಬ್ಬ ಮನುಷ್ಯನನ್ನು ನೋಡುತ್ತಾನೆ. 15 ಆಗ ನಾವು ನಾಶಪಡಿಸಬೇಕಾಗಿದ್ದ ವಸ್ತುಗಳನ್ನು ಇಟ್ಟುಕೊಂಡ ಮನುಷ್ಯನು ಸಿಕ್ಕಿಬೀಳುತ್ತಾನೆ. ಬಳಿಕ ಆ ಮನುಷ್ಯನು ಬೆಂಕಿಯಿಂದ ನಾಶವಾಗುವನು. ಅವನ ಎಲ್ಲಾ ಸ್ವತ್ತು ಅವನೊಂದಿಗೆ ನಾಶವಾಗುವುದು. ಆ ಮನುಷ್ಯನು ಯೆಹೋವನ ಆಜ್ಞೆಯನ್ನು ಮೀರಿದ್ದಾನೆ. ಇಸ್ರೇಲರಿಗೆ ಕೇಡನ್ನು ಬರಮಾಡಿದ್ದಾನೆ’” ಎಂದನು.

16 ಮಾರನೆಯ ದಿನ, ಬೆಳಿಗ್ಗೆ ಯೆಹೋಶುವನು ಇಸ್ರೇಲಿನ ಎಲ್ಲ ಜನರನ್ನು ಯೆಹೋವನ ಮುಂದೆ ಕರೆದುಕೊಂಡು ಬಂದನು. ಎಲ್ಲ ಕುಲಗಳು ಯೆಹೋವನ ಮುಂದೆ ನಿಂತುಕೊಂಡವು. ಯೆಹೋವನು ಯೆಹೂದ ಕುಲವನ್ನು ಸೂಚಿಸಿದನು. 17 ಆದ್ದರಿಂದ ಯೆಹೂದ ಕುಲದ ಎಲ್ಲ ಗೋತ್ರಗಳು ಯೆಹೋವನ ಮುಂದೆ ಬಂದು ನಿಂತವು. ಯೆಹೋವನು ಜೆರಹನ ಗೋತ್ರವನ್ನು ಸೂಚಿಸಿದನು. ಆಗ ಜೆರಹನ ಗೋತ್ರದ ಎಲ್ಲ ಕುಟುಂಬಗಳು ಯೆಹೋವನ ಎದುರಿಗೆ ಬಂದು ನಿಂತವು. ಆಗ ಜಬ್ದೀಯ ಕುಟುಂಬವನ್ನು ಸೂಚಿಸಲಾಯಿತು. 18 ಆಗ ಯೆಹೋಶುವನು ಆ ಕುಟುಂಬದ ಎಲ್ಲ ಗಂಡಸರನ್ನು ಯೆಹೋವನ ಮುಂದೆ ಬರಲು ಹೇಳಿದನು. ಯೆಹೋವನು ಆಗ ಕರ್ಮೀಯ ಮಗನಾದ ಆಕಾನನನ್ನು ಸೂಚಿಸಿದನು. ಕರ್ಮೀಯು ಜಬ್ದೀಯ ಮಗನಾಗಿದ್ದನು, ಜಬ್ದೀಯು ಜೆರಹನ ಮಗನಾಗಿದ್ದನು.

19 ಆಗ ಯೆಹೋಶುವನು ಆಕಾನನಿಗೆ, “ನನ್ನ ಮಗನೇ, ಇಸ್ರೇಲಿನ ದೇವರಾದ ಯೆಹೋವನನ್ನು ಸನ್ಮಾನಿಸು; ಆತನಿಗೆ ಸ್ತೋತ್ರಸಲ್ಲಿಸು. ನಿನ್ನ ಪಾಪಗಳನ್ನು ಆತನಿಗೆ ಅರಿಕೆಮಾಡು. ನೀನು ಮಾಡಿದ್ದನ್ನು ನನಗೆ ಹೇಳು; ನನ್ನಿಂದ ಏನನ್ನೂ ಮುಚ್ಚಿಡಬೇಡ” ಎಂದನು.

20 ಆಗ ಆಕಾನನು, “ಇದು ಸತ್ಯ. ನಾನು ಇಸ್ರೇಲಿನ ದೇವರಾದ ಯೆಹೋವನಿಗೆ ವಿರೋಧವಾಗಿ ಪಾಪಮಾಡಿದ್ದೇನೆ. 21 ನಾವು ಜೆರಿಕೊ ನಗರವನ್ನು ಮತ್ತು ಅದರಲ್ಲಿದ್ದ ಎಲ್ಲ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡು ಕೊಳ್ಳೆ ಹೊಡೆಯುತ್ತಿದ್ದಾಗ, ಬಾಬಿಲೋನಿನ ಒಂದು ಸುಂದರವಾದ ನಿಲುವಂಗಿಯನ್ನೂ ಸುಮಾರು ಐದು ಪೌಂಡಿನಷ್ಟು ಬೆಳ್ಳಿಯನ್ನೂ ಒಂದು ಪೌಂಡಿಗಿಂತಲೂ ಹೆಚ್ಚು ಬಂಗಾರವನ್ನೂ ಕಂಡೆನು. ಈ ವಸ್ತುಗಳನ್ನು ನನಗಾಗಿ ಇಟ್ಟುಕೊಳ್ಳಬೇಕೆಂದು ತುಂಬ ಆಶೆಯಾಯಿತು. ಅದಕ್ಕಾಗಿ ನಾನು ಅವುಗಳನ್ನು ತೆಗೆದುಕೊಂಡೆ. ಅವುಗಳನ್ನು ನನ್ನ ಗುಡಾರದಲ್ಲಿ ಹುಗಿದಿಟ್ಟಿದ್ದೇನೆ. ಬೆಳ್ಳಿಯು ನಿಲುವಂಗಿಯ ಕೆಳಗಡೆ ಇದೆ” ಎಂದು ಒಪ್ಪಿಕೊಂಡನು.

22 ಆಗ ಯೆಹೋಶುವನು ಕೆಲವರನ್ನು ಗುಡಾರಕ್ಕೆ ಕಳುಹಿಸಿದನು. ಅವರು ಗುಡಾರಕ್ಕೆ ಓಡಿಹೋಗಿ ಹುಗಿದಿಟ್ಟಿದ್ದ ಆ ವಸ್ತುಗಳನ್ನು ಕಂಡರು. ಬೆಳ್ಳಿಯು ನಿಲುವಂಗಿಯ ಕೆಳಗಡೆ ಇತ್ತು. 23 ಜನರು ಆ ವಸ್ತುಗಳನ್ನು ಗುಡಾರದ ಹೊರಗೆ ತೆಗೆದುಕೊಂಡು ಬಂದು ಯೆಹೋಶುವನ ಮತ್ತು ಎಲ್ಲಾ ಇಸ್ರೇಲರ ಬಳಿಗೆ ಬಂದರು. ಅವರು ಯೆಹೋವನ ಮುಂದೆ ಆ ವಸ್ತುಗಳನ್ನೆಲ್ಲಾ ನೆಲದ ಮೇಲೆ ಹಾಕಿದರು.

24 ಆಗ ಯೆಹೋಶುವನು ಮತ್ತು ಎಲ್ಲಾ ಇಸ್ರೇಲರು ಸೇರಿ ಜೆರಹನ ಮಗನಾದ ಆಕಾನನನ್ನು, ಬೆಳ್ಳಿಯನ್ನು, ನಿಲುವಂಗಿಯನ್ನು, ಬಂಗಾರವನ್ನು, ಆಕಾನನ ಮಕ್ಕಳನ್ನು, ಅವನ ದನಕರುಗಳನ್ನು, ಕತ್ತೆಗಳನ್ನು, ಅವನ ಕುರಿಗಳನ್ನು, ಅವನ ಗುಡಾರವನ್ನು ಮತ್ತು ಅವನ ಎಲ್ಲ ಸ್ವತ್ತನ್ನು “ಆಕೋರ್” ಕಣಿವೆಗೆ ತೆಗೆದುಕೊಂಡು ಹೋದರು. 25 ಆಗ ಯೆಹೋಶುವನು ಅವನಿಗೆ, “ನೀನು ನಮಗೆ ಕೇಡನ್ನು ಬರಮಾಡಿರುವೆ! ಆದ್ದರಿಂದ ಯೆಹೋವನು ನಿನಗೂ ಕೇಡನ್ನು ಮಾಡಲಿ!” ಎಂದನು. ಆಗ ಜನರೆಲ್ಲರೂ ಕಲ್ಲುಗಳನ್ನು ತೂರಿ ಆಕಾನನನ್ನೂ ಅವನ ಕುಟುಂಬದವರನ್ನೂ ಕೊಂದರು ಮತ್ತು ಅವನ ಎಲ್ಲ ಸ್ವತ್ತನ್ನು ಸುಟ್ಟುಹಾಕಿದರು. 26 ಆಕಾನನನ್ನು ಸುಟ್ಟ ಬಳಿಕ ಅವರು ಅವನ ದೇಹದ ಮೇಲೆ ಕಲ್ಲುಗಳ ಒಂದು ದೊಡ್ಡ ಕುಪ್ಪೆಯನ್ನು ಹಾಕಿದರು. ಆ ಕುಪ್ಪೆಯು ಇಂದಿಗೂ ಅಲ್ಲಿದೆ. ಹೀಗೆ ದೇವರು ಆಕಾನನನ್ನು ಶಿಕ್ಷಿಸಿದನು. ಅದಕ್ಕಾಗಿ ಆ ಕಣಿವೆಗೆ “ಆಕೋರ್ ಕಣಿವೆ” ಎಂಬ ಹೆಸರು ಬಂದಿತು. ಬಳಿಕ ಯೆಹೋವನಿಗೆ ಜನರ ಮೇಲಿದ್ದ ಕೋಪ ಶಮನವಾಯಿತು.

ಕೀರ್ತನೆಗಳು 137-138

137 ನಾವು ಬಾಬಿಲೋನ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು
    ಚೀಯೋನನ್ನು ನೆನಸಿಕೊಳ್ಳುತ್ತಾ ಅತ್ತೆವು.
ಸಮೀಪದಲ್ಲಿದ್ದ ನೀರವಂಜಿ ಮರಗಳಿಗೆ ನಾವು ನಮ್ಮ ಹಾರ್ಪ್‌ವಾದ್ಯಗಳನ್ನು ತೂಗುಹಾಕಿದೆವು.
ನಮ್ಮನ್ನು ಸೆರೆಹಿಡಿದಿದ್ದ ಜನರು
    ಬಾಬಿಲೋನಿನಲ್ಲಿ ನಮಗೆ ಚೀಯೋನಿನ ಕುರಿತು ಹರ್ಷಗೀತೆಗಳನ್ನು ಹಾಡಲು ಹೇಳಿದರು.
ಆದರೆ ಪರದೇಶದಲ್ಲಿ
    ಯೆಹೋವನ ಹಾಡುಗಳನ್ನು ನಾವು ಹಾಡುವಂತಿಲ್ಲ!
ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ,
    ನಾನು ಮತ್ತೆಂದಿಗೂ ಹಾಡನ್ನು ಹಾಡದಂತಾಗಲಿ.
ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ,
    ನಾನು ಮತ್ತೆಂದಿಗೂ ಹಾಡಲು ಶಕ್ತನಾಗದಂತಾಗಲಿ.
ಜೆರುಸಲೇಮೇ, ನಿನ್ನ ವಿಷಯದಲ್ಲೇ
    ನಾನು ಅತ್ಯಾನಂದಪಡುವೆನೆಂದು ಪ್ರಮಾಣ ಮಾಡುವೆ.

ಯೆಹೋವನೇ ನಿಶ್ಚಯವಾಗಿ ಎದೋಮ್ಯರನ್ನು ದಂಡಿಸು.
    ಯಾಕೆಂದರೆ ಜೆರುಸಲೇಮ್ ಸೆರೆಹಿಡಿಯಲ್ಪಟ್ಟಾಗ
ಅವರು, “ಅದರ ಕಟ್ಟಡಗಳನ್ನು ಕೆಡವಿಹಾಕಿ.
    ಅವುಗಳನ್ನು ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಆರ್ಭಟಿಸಿದರು.
ಬಾಬಿಲೋನೇ, ನೀನು ನಾಶವಾಗುವೆ!
    ನಿನಗೆ ತಕ್ಕ ದಂಡನೆಯನ್ನು ಕೊಡುವವನು ಧನ್ಯನು.
    ನೀನು ನಮ್ಮನ್ನು ನೋಯಿಸಿದಂತೆ ನಿನ್ನನ್ನೂ ನೋಯಿಸುವವನು ಧನ್ಯನು.
    ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಧನ್ಯನು.

ಸ್ತುತಿಗೀತೆ. ರಚನೆಗಾರ: ದಾವೀದ.

138 ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಕೊಂಡಾಡುವೆನು.
    ನಿನ್ನ ಹಾಡುಗಳನ್ನು ಎಲ್ಲಾ ದೇವರುಗಳ ಎದುರಿನಲ್ಲಿ ಹಾಡುವೆನು.
ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ಅಡ್ಡಬೀಳುವೆನು.
    ನಾನು ನಿನ್ನ ಹೆಸರನ್ನೂ ನಿನ್ನ ಪ್ರೀತಿಯನ್ನೂ ನಿನ್ನ ನಂಬಿಗಸ್ತಿಕೆಯನ್ನೂ ಕೊಂಡಾಡುವೆನು.
ನೀನು ನಿನ್ನ ವಾಕ್ಯವನ್ನು ನೆರವೇರಿಸಿ ನಿನ್ನ ನಾಮಮಹತ್ವವನ್ನು ಹೆಚ್ಚಿಸಿರುವೆ.
ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಟ್ಟಾಗ
    ನೀನು ನನಗೆ ಸದುತ್ತರವನ್ನು ದಯಪಾಲಿಸಿದೆ; ನನಗೆ ಬಲವನ್ನು ಅನುಗ್ರಹಿಸಿದೆ.

ಯೆಹೋವನೇ, ಭೂರಾಜರುಗಳೆಲ್ಲಾ ನಿನ್ನ ನುಡಿಗಳನ್ನು ಕೇಳಿ
    ನಿನ್ನನ್ನು ಕೊಂಡಾಡಬೇಕೆಂಬುದು ನನ್ನ ಅಪೇಕ್ಷೆ.
ಅವರೆಲ್ಲರೂ ಯೆಹೋವನ ಮಾರ್ಗವನ್ನು ಹಾಡಿ ಕೊಂಡಾಡುವರು;
    ಯಾಕೆಂದರೆ ಯೆಹೋವನ ಮಹಿಮೆಯು ಮಹತ್ವವಾದದ್ದು.
ಯೆಹೋವನೇ ಮಹೋನ್ನತನು.
    ಆದರೂ ಆತನು ದೀನರಿಗೋಸ್ಕರ ಚಿಂತಿಸುವನು.
ಗರ್ವಿಷ್ಠರ ಕಾರ್ಯಗಳು ಆತನಿಗೆ ಗೊತ್ತಿವೆ.
    ಆದರೆ ಆತನು ಅವರಿಗೆ ದೂರವಾಗಿಯೇ ಇರುತ್ತಾನೆ.
ಯೆಹೋವನೇ, ನಾನು ಆಪತ್ತಿನಲ್ಲಿದ್ದರೆ, ನನ್ನ ಪ್ರಾಣವನ್ನು ಕಾಪಾಡು.
    ನನ್ನ ವೈರಿಗಳು ನನ್ನ ಮೇಲೆ ಕೋಪಗೊಂಡಿದ್ದರೆ, ನನ್ನನ್ನು ಅವರಿಂದ ರಕ್ಷಿಸು.
ಯೆಹೋವನೇ, ನಿನ್ನ ವಾಗ್ದಾನಗಳನ್ನು ನೆರವೇರಿಸು.
    ಯೆಹೋವನೇ, ನಿನ್ನ ಪ್ರೀತಿಯು ಶಾಶ್ವತವಾದದ್ದು.
ನಮ್ಮನ್ನು ಸೃಷ್ಟಿಸಿದಾತನು ನೀನೇ. ನಮ್ಮನ್ನು ಕೈಬಿಡಬೇಡ!

ಯೆರೆಮೀಯ 1

ಇವು ಯೆರೆಮೀಯನ ಸಂದೇಶಗಳು. ಯೆರೆಮೀಯನು ಹಿಲ್ಕೀಯನೆಂಬುವನ ಮಗನು. ಯೆರೆಮೀಯನು ಅನಾತೋತ್ ನಗರದ ಯಾಜಕ ಕುಟುಂಬಕ್ಕೆ ಸೇರಿದವನಾಗಿದ್ದನು. ಆ ನಗರವು ಬೆನ್ಯಾಮೀನ್ಯರ ಪ್ರದೇಶದಲ್ಲಿತ್ತು. ಯೆಹೂದದಲ್ಲಿ ಆಮೋನನ ಮಗನಾದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಲ್ಲಿ ಯೆಹೋವನು ಯೆರೆಮೀಯನೊಂದಿಗೆ ಮಾತನಾಡಲು ಪ್ರಾರಂಭಿಸಿದನು. ಯೆಹೋಯಾಕೀಮನು ಯೆಹೂದದಲ್ಲಿ ಆಳುವಾಗಲೂ ಯೆಹೋವನು ಯೆರೆಮೀಯನೊಂದಿಗೆ ಮಾತನಾಡುವದನ್ನು ಮುಂದುವರೆಸಿದನು. ಯೆಹೋಯಾಕೀಮನು ಯೋಷೀಯನ ಮಗನು. ಯೆಹೂದದಲ್ಲಿ ಚಿದ್ಕೀಯನು ಆಳಿದ ಹನ್ನೊಂದು ವರ್ಷ ಐದು ತಿಂಗಳ ಕಾಲ ಯೆಹೋವನು ಯೆರೆಮೀಯನೊಂದಿಗೆ ಮಾತನಾಡುವದನ್ನು ಮುಂದುವರೆಸಿದನು. ಚಿದ್ಕೀಯನು ಸಹ ಯೋಷೀಯನ ಮಗನಾಗಿದ್ದನು. ಚಿದ್ಕೀಯನ ಆಳ್ವಿಕೆಯ ಹನ್ನೊಂದನೇ ವರ್ಷದ ಐದನೆಯ ತಿಂಗಳಿನಲ್ಲಿ ಜೆರುಸಲೇಮಿನ ನಿವಾಸಿಗಳು ಸೆರೆ ಒಯ್ಯಲ್ಪಟ್ಟರು.

ಯೆಹೋವನು ಯೆರೆಮೀಯನನ್ನು ಕರೆದನು

ಯೆರೆಮೀಯನಿಗೆ ಯೆಹೋವನ ಈ ಸಂದೇಶ ಬಂದಿತು:

“ನಾನು ನಿನ್ನನ್ನು ನಿನ್ನ ತಾಯಿಯ ಗರ್ಭದಲ್ಲಿ ರೂಪಿಸುವ ಮುಂಚೆಯೇ
    ನಿನ್ನನ್ನು ಬಲ್ಲವನಾಗಿದ್ದೆನು.
ನೀನು ಹುಟ್ಟುವದಕ್ಕಿಂತ ಮುಂಚೆಯೇ
    ನಾನು ನಿನ್ನನ್ನು ಒಂದು ವಿಶೇಷವಾದ ಕೆಲಸಕ್ಕೆ
    ಅಂದರೆ ಜನಾಂಗಗಳಿಗೆ ಪ್ರವಾದಿಯನ್ನಾಗಿ ಆರಿಸಿಕೊಂಡಿದ್ದೆನು.”

ಆಗ ಯೆರೆಮೀಯನೆಂಬ ನಾನು, “ಸರ್ವಶಕ್ತನಾದ ಯೆಹೋವನೇ, ಹೇಗೆ ಮಾತನಾಡಬೇಕೆಂಬುದೇ ನನಗೆ ತಿಳಿಯದು. ನಾನು ಕೇವಲ ಹುಡುಗನಷ್ಟೇ” ಎಂದು ಹೇಳಿದೆ.

ಆದರೆ ಯೆಹೋವನು ನನಗೆ,

“ನಾನು ಕೇವಲ ಹುಡುಗನೆಂದು ಹೇಳಬೇಡ,
    ನಾನು ಕಳುಹಿಸುವ ಸ್ಥಳಗಳಿಗೆ ನೀನು ಹೋಗಬೇಕು.
    ನಾನು ಹೇಳು ಅಂದದ್ದನ್ನೆಲ್ಲ ನೀನು ಹೇಳಬೇಕು.
ಯಾರಿಗೂ ನೀನು ಹೆದರಬೇಡ, ನಾನೇ ನಿನ್ನ ಜೊತೆ ಇದ್ದೇನೆ.
    ನಾನು ನಿನ್ನನ್ನು ಕಾಪಾಡುತ್ತೇನೆ.
ಈ ಮಾತನ್ನು ಯೆಹೋವನಾದ ನಾನೇ ಹೇಳುತ್ತಿದ್ದೇನೆ” ಎಂದನು.

ಆಗ ಯೆಹೋವನು ಕೈಚಾಚಿ ನನ್ನ ಬಾಯನ್ನು ಮುಟ್ಟಿ,

“ಯೆರೆಮೀಯನೇ, ಇಗೋ, ನಾನು ನನ್ನ ಮಾತುಗಳನ್ನು ನಿನ್ನ ಬಾಯಲ್ಲಿ ಇಡುತ್ತಿದ್ದೇನೆ.
10 ಕಿತ್ತುಹಾಕಲು, ಕೆಡವಲು, ನಾಶಪಡಿಸಲು, ಹಾಳುಮಾಡಲು,
    ಕಟ್ಟಲು, ನೆಡಲು, ಜನಾಂಗಗಳ ಮೇಲೂ ರಾಜ್ಯಗಳ ಮೇಲೂ
    ನಿನ್ನನ್ನು ಈ ದಿನ ನೇಮಿಸಿದ್ದೇನೆ” ಅಂದನು.

ಎರಡು ದರ್ಶನಗಳು

11 ಯೆಹೋವನಿಂದ ನನಗೆ ಈ ಸಂದೇಶ ಬಂದಿತು: “ಯೆರೆಮೀಯನೇ, ನಿನಗೆ ಏನು ಕಾಣುತ್ತಿದೆ?” ಎಂದು ಯೆಹೋವನು ಕೇಳಿದನು.

ನಾನು ಆತನಿಗೆ, “ಬಾದಾಮಿಯ ಮರದಿಂದ ಮಾಡಿದ ಒಂದು ದಂಡ ಕಾಣಿಸುತ್ತಿದೆ” ಎಂದು ಉತ್ತರಕೊಟ್ಟೆನು.

12 ಆಗ ಯೆಹೋವನು, “ನೀನು ಸರಿಯಾಗಿ ನೋಡಿರುವೆ, ನನ್ನ ಮಾತನ್ನು ನೆರವೇರಿಸಲು ಎಚ್ಚರಗೊಂಡಿದ್ದೇನೆ” ಎಂದು ತಿಳಿದುಕೊ ಎಂಬುದಾಗಿ ಹೇಳಿದನು.

13 ಇನ್ನೊಂದು ಸಲ ಯೆಹೋವನು, “ನಿನಗೆ ಏನು ಕಾಣುತ್ತಿದೆ?” ಎಂದು ಕೇಳಿದನು.

ನಾನು ಯೆಹೋವನಿಗೆ, “ಕುದಿಯುವ ನೀರಿನ ಒಂದು ಹಂಡೆ ಕಾಣುತ್ತಿದೆ. ಆ ಹಂಡೆಯು ಉತ್ತರದಿಂದ ಈ ಕಡೆಗೆ ಬಾಗಿಕೊಂಡಿದೆ” ಎಂದು ಉತ್ತರಿಸಿದೆನು.

14 ಯೆಹೋವನು ನನಗೆ, “ಉತ್ತರ ದಿಕ್ಕಿನಿಂದ
    ಈ ದೇಶದ ನಿವಾಸಿಗಳೆಲ್ಲರ ಮೇಲೆ ಒಂದು ಕೇಡು ಬರುವದು.
15 ಸ್ವಲ್ಪ ಸಮಯದಲ್ಲಿಯೇ ನಾನು ಉತ್ತರ ರಾಜ್ಯಗಳ ಎಲ್ಲಾ ಜನರನ್ನು ಕರೆಯುತ್ತೇನೆ” ಎಂದನು.
ಮತ್ತೆ ಯೆಹೋವನು ಹೀಗೆ ಹೇಳಿದನು:

“ಆ ದೇಶಗಳ ರಾಜರು ಬರುವರು.
    ಅವರು ಜೆರುಸಲೇಮಿನ ಹೆಬ್ಬಾಗಿಲಿನ ಹತ್ತಿರ ತಮ್ಮ ಆಸನಗಳನ್ನು ಹಾಕುವರು.
ಅವರು ಜೆರುಸಲೇಮಿನ ಎಲ್ಲಾ ಕೋಟೆಗೋಡೆಗಳಿಗೆ ಮುತ್ತಿಗೆಹಾಕುವರು.
    ಅವರು ಯೆಹೂದ ಪ್ರದೇಶದ ಎಲ್ಲಾ ನಗರಗಳ ಮೇಲೆ ಧಾಳಿ ಮಾಡುವರು.
16 ನಾನು ನನ್ನ ಜನರ ವಿರುದ್ಧ ನನ್ನ ನ್ಯಾಯನಿರ್ಣಯವನ್ನು ಘೋಷಿಸುವೆನು.
    ಅವರು ಕೆಟ್ಟ ಜನರು, ಅವರು ನನ್ನ ವಿರೋಧಿಗಳಾಗಿದ್ದಾರೆ.
ನನ್ನ ಜನರು ನನ್ನನ್ನು ತ್ಯಜಿಸಿದ್ದಾರೆ.
    ಅವರು ನನ್ನನ್ನು ಹೇಗೆ ತ್ಯಜಿಸಿದರು?
ಅವರು ಅನ್ಯದೇವರುಗಳಿಗೆ ಹೋಮ ಮಾಡಿದರು.
    ಅವರು ತಮ್ಮ ಕೈಗಳಿಂದಲೇ ಮಾಡಿದ ವಿಗ್ರಹಗಳನ್ನು ಪೂಜಿಸಿದರು.

17 “ಯೆರೆಮೀಯನೇ, ಸಿದ್ಧನಾಗು! ಎದ್ದುನಿಲ್ಲು!
    ನಾನು ಹೇಳಿದ್ದೆಲ್ಲವನ್ನು ಜನರಿಗೆ ಹೇಳು.
    ಅವರಿಗೆ ಹೆದರಬೇಡ.
ನೀನು ಅವರಿಗೆ ಹೆದರಿಕೊಂಡರೆ,
    ನಾನು ನಿನ್ನನ್ನು ಅವರೆದುರಿನಲ್ಲಿ ಹೆದರಿಸುವೆನು.
18 ಇಗೋ, ನೀನು ನನ್ನ ವಿಷಯವಾಗಿ ಹೇಳಬೇಕು.
    ನಾನು ನಿನ್ನನ್ನು ಭದ್ರವಾದ ನಗರವನ್ನಾಗಿಯೂ
    ಕಬ್ಬಿಣದ ಕಂಬವನ್ನಾಗಿಯೂ
    ಕಂಚಿನ ಗೋಡೆಯನ್ನಾಗಿಯೂ ಮಾಡುತ್ತೇನೆ.
ನೀನು ದೇಶದಲ್ಲಿ ಎಲ್ಲರಿಗೂ ಎದುರಾಗಿ ನಿಲ್ಲಬಹುದು,
    ಯೆಹೂದ ದೇಶದ ರಾಜರ ವಿರುದ್ಧವಾಗಿಯೂ
    ಯೆಹೂದದ ನಾಯಕರ ವಿರುದ್ಧವಾಗಿಯೂ
    ಯೆಹೂದದ ಯಾಜಕರ ವಿರುದ್ಧವಾಗಿಯೂ
    ಯೆಹೂದದೇಶದ ಜನರ ವಿರುದ್ಧವಾಗಿಯೂ ನೀನು ನಿಲ್ಲುವೆ.
19 ಆ ಜನರೆಲ್ಲಾ ನಿನ್ನ ವಿರುದ್ಧ ಹೋರಾಡುವರು,
    ಆದರೆ ಅವರು ನಿನ್ನನ್ನು ಸೋಲಿಸಲಾಗುವುದಿಲ್ಲ.
ಏಕೆಂದರೆ ನಾನೇ ನಿನ್ನೊಂದಿಗೆ ಇರುವೆನು.
    ನಾನೇ ನಿನ್ನನ್ನು ರಕ್ಷಿಸುವೆನು.”
ಇದು ಯೆಹೋವನಾದ ನನ್ನ ಮಾತು.

ಮತ್ತಾಯ 15

ದೇವರ ಆಜ್ಞೆ ಮತ್ತು ಮನುಷ್ಯರ ನಿಯಮ

(ಮಾರ್ಕ 7:1-23)

15 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಿಂದ ಯೇಸುವಿನ ಬಳಿಗೆ ಬಂದು, “ನಮ್ಮ ಪೂರ್ವಿಕರಿಂದ ಬಂದ ಸಂಪ್ರದಾಯಗಳಿಗೆ ನಿನ್ನ ಶಿಷ್ಯರು ಏಕೆ ವಿಧೇಯರಾಗಿರುವುದಿಲ್ಲ? ನಿನ್ನ ಶಿಷ್ಯರು ಊಟ ಮಾಡುವುದಕ್ಕೆ ಮುಂಚೆ ಕೈ ತೊಳೆಯುವುದಿಲ್ಲವೇಕೆ?” ಎಂದು ಕೇಳಿದರು.

ಯೇಸು, “ನಿಮ್ಮ ಸಂಪ್ರದಾಯಗಳನ್ನು ಅನುಸರಿಸಲು ದೇವರ ಆಜ್ಞೆಗೆ ಅವಿಧೇಯರಾಗುವುದೇಕೆ? ‘ನಿಮ್ಮ ತಂದೆತಾಯಿಗಳಿಗೆ ಗೌರವ ನೀಡಿ’(A) ಎಂಬುದು ದೇವರ ಆಜ್ಞೆ. ‘ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಹೀನೈಸಿದರೆ ಅವನನ್ನು ಕೊಲ್ಲಬೇಕು’(B) ಎಂಬುದೂ ದೇವರ ಆಜ್ಞೆ. ಆದರೆ ಒಬ್ಬ ವ್ಯಕ್ತಿಯು ತನ್ನ ತಂದೆಗಾಗಲಿ ತಾಯಿಗಾಗಲಿ ‘ನಿಮಗೆ ಸಹಾಯ ಮಾಡಲು ನನಗೆ ಸಾಧ್ಯವಿಲ್ಲ, ಏಕೆಂದರೆ ನನ್ನಲ್ಲಿರುವ ಪ್ರತಿಯೊಂದು ದೇವರಿಗೆ ಪ್ರತಿಷ್ಠಿತವಾಗಿದೆ’ ಎಂದು ಹೇಳಿದರೆ, ಅವನು ತನ್ನ ತಂದೆಯನ್ನು ಗೌರವಿಸಬೇಕಿಲ್ಲ ಎಂದು ನೀವು ಬೋಧಿಸುತ್ತೀರಿ. ಹೀಗಿರಲು ನಿಮ್ಮ ಸಂಪ್ರದಾಯವೇ ದೇವರ ಆಜ್ಞೆಯನ್ನು ತಳ್ಳಿಹಾಕಿದೆ. ನೀವು ಕಪಟಿಗಳು. ಯೆಶಾಯನು ನಿಮ್ಮನ್ನು ಕುರಿತು ಸರಿಯಾಗಿ ಹೇಳಿದ್ದಾನೆ. ಅದೇನೆಂದರೆ:

‘ಇವರು ನನ್ನನ್ನು ಮಾತಿನಿಂದ ಗೌರವಿಸುತ್ತಾರೆ.
    ಇವರ ಮನಸ್ಸಾದರೋ ನನಗೆ ದೂರವಾಗಿದೆ.
ಇವರು ನನ್ನನ್ನು ಆರಾಧಿಸುವುದೂ ನಿರರ್ಥಕ.
    ಇವರು ಮನುಷ್ಯರ ಕಟ್ಟಳೆಗಳನ್ನೇ ಉಪದೇಶಿಸುತ್ತಾರೆ.’(C)

10 ಯೇಸು ಜನರನ್ನು ತನ್ನ ಬಳಿಗೆ ಕರೆದು, “ನಾನು ಹೇಳುವುದನ್ನು ಆಲಿಸಿರಿ ಮತ್ತು ಅರ್ಥಮಾಡಿಕೊಳ್ಳಿರಿ. 11 ಒಬ್ಬನು ಕಲುಷಿತನಾಗುವುದು ತನ್ನ ಬಾಯಿಂದ ತಿನ್ನುವ ಪದಾರ್ಥಗಳಿಂದಲ್ಲ. ಅವನ ಬಾಯಿಂದ ಬರುವ ಕೆಟ್ಟಮಾತುಗಳೇ ಅವನನ್ನು ಕಲುಷಿತಗೊಳಿಸುತ್ತವೆ” ಎಂದು ಹೇಳಿದನು.

12 ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀನು ಹೇಳಿದ್ದನ್ನು ಕೇಳಿ ಫರಿಸಾಯರು ಬೇಸರಗೊಂಡದ್ದು ನಿನಗೆ ತಿಳಿಯಿತೋ?” ಎಂದು ಕೇಳಿದರು.

13 ಯೇಸು, “ಪರಲೋಕದಲ್ಲಿರುವ ನನ್ನ ತಂದೆ ನೆಡದಿರುವ ಪ್ರತಿಯೊಂದು ಗಿಡವನ್ನು ಬೇರಿನೊಂದಿಗೆ ಕಿತ್ತುಹಾಕಲಾಗುವುದು. 14 ಫರಿಸಾಯರಿಂದ ದೂರವಾಗಿರಿ. ಅವರೇ ಕುರುಡರು, ಮತ್ತೊಬ್ಬರಿಗೆ ದಾರಿ ತೋರಿಸಲು ಹೋಗುತ್ತಾರೆ. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಅವರಿಬ್ಬರೂ ಹಳ್ಳದಲ್ಲಿ ಬೀಳುವರು” ಎಂದು ಉತ್ತರಕೊಟ್ಟನು.

15 ಆಗ ಪೇತ್ರನು, “ನೀನು ಜನರಿಗೆ ಮೊದಲು ಹೇಳಿದ್ದನ್ನು ನಮಗೆ ವಿವರಿಸು” ಎಂದನು.

16 ಯೇಸು, “ನಿಮಗೆ ಇನ್ನೂ ಅರ್ಥವಾಗುವುದಿಲ್ಲವೇ? 17 ಒಬ್ಬ ಮನುಷ್ಯನ ಬಾಯಿಂದ ಆಹಾರ ಹೊಟ್ಟೆಯೊಳಕ್ಕೆ ಹೋಗುತ್ತದೆ. ನಂತರ ಅದು ದೇಹದಿಂದ ಹೊರಗೆ ಹೋಗಿಬಿಡುತ್ತದೆ. ಇದು ನಿಮಗೆ ತಿಳಿದೇ ಇದೆ. 18 ಆದರೆ ಒಬ್ಬ ಮನುಷ್ಯನ ಬಾಯಿಂದ ಹೊರಡುವ ಕೆಟ್ಟಮಾತುಗಳು ಅವನ ಆಲೋಚನೆಯಿಂದ ಉದ್ಭವಿಸಿ ಅವನನ್ನು ಅಶುದ್ಧನನ್ನಾಗಿ ಮಾಡುತ್ತವೆ. 19 ಮನುಷ್ಯನ ಮನಸ್ಸಿನಲ್ಲಿ ದುರಾಲೋಚನೆ, ಕೊಲೆ, ವ್ಯಭಿಚಾರ, ಸೂಳೆಗಾರಿಕೆ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ಬೈಗಳು ಹೊರಟುಬರುತ್ತವೆ. 20 ಇವು ಮನುಷ್ಯನನ್ನು ಅಶುದ್ಧನನ್ನಾಗಿ ಮಾಡುತ್ತವೆ. ಆದರೆ ಊಟಕ್ಕೆ ಮೊದಲು ಕೈತೊಳೆಯದ ಮಾತ್ರಕ್ಕೆ ಮನುಷ್ಯನೇನೂ ಅಶುದ್ಧನಾಗುವುದಿಲ್ಲ” ಎಂದು ಹೇಳಿದನು.

ಯೆಹೂದ್ಯಳಲ್ಲದ ಸ್ತ್ರೀಗೆ ಯೇಸು ಮಾಡಿದ ಸಹಾಯ

(ಮಾರ್ಕ 7:24-30)

21 ಯೇಸು ಆ ಸ್ಥಳವನ್ನು ಬಿಟ್ಟು, ಟೈರ್ ಮತ್ತು ಸೀದೋನ್‌ಗಳ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. 22 ಆ ಸ್ಥಳದಿಂದ ಕಾನಾನ್ಯಳಾದ ಒಬ್ಬ ಸ್ತ್ರೀ ಯೇಸುವಿನ ಬಳಿಗೆ ಬಂದು, “ಪ್ರಭುವೇ, ದಾವೀದನ ಮಗನೇ, ದಯವಿಟ್ಟು ನನಗೆ ಕರುಣೆ ತೋರು! ನನ್ನ ಮಗಳಲ್ಲಿ ದೆವ್ವ ಸೇರಿಕೊಂಡಿದೆ ಮತ್ತು ಆಕೆ ಬಹಳ ಸಂಕಟಪಡುತ್ತಿದ್ದಾಳೆ” ಎಂದು ಗಟ್ಟಿಯಾಗಿ ಕೂಗಿಕೊಂಡಳು.

23 ಆದರೆ ಯೇಸು ಆ ಸ್ತ್ರೀಗೆ ಉತ್ತರ ಕೊಡಲಿಲ್ಲ. ಆದ್ದರಿಂದ ಶಿಷ್ಯರು ಯೇಸುವಿನ ಬಳಿಗೆ ಬಂದು, “ಆ ಸ್ತ್ರೀಗೆ ಹೊರಟುಹೋಗುವುದಕ್ಕೆ ಹೇಳು. ಆಕೆಯು ಕೂಗಿಕೊಂಡು ನಮ್ಮ ಹಿಂದೆಯೇ ಬರುತ್ತಿದ್ದಾಳೆ” ಎಂದು ಕೇಳಿಕೊಂಡರು.

24 ಯೇಸು, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಮಾತ್ರ ದೇವರು ನನ್ನನ್ನು ಕಳುಹಿಸಿದನು” ಎಂದನು.

25 ಆಗ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಅಡ್ಡಬಿದ್ದು, “ಪ್ರಭುವೇ, ನನಗೆ ಸಹಾಯ ಮಾಡು” ಎಂದು ಕೇಳಿದಳು.

26 ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ” ಎಂದು ಉತ್ತರಕೊಟ್ಟನು.

27 ಆ ಸ್ತ್ರೀಯು, “ಹೌದು ಪ್ರಭುವೇ, ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ಆಹಾರದ ತುಂಡುಗಳನ್ನು ತಿನ್ನುತ್ತವೆಯಲ್ಲಾ” ಎಂದಳು.

28 ಆಗ ಯೇಸು, “ಅಮ್ಮಾ, ನಿನ್ನ ನಂಬಿಕೆ ದೊಡ್ಡದು. ನಿನ್ನ ಕೋರಿಕೆಯನ್ನು ನಾನು ಈಡೇರಿಸುತ್ತೇನೆ” ಎಂದನು. ಆ ಕ್ಷಣದಲ್ಲೇ ಆಕೆಯ ಮಗಳು ಗುಣವಾದಳು.

ಯೇಸುವಿನಿಂದ ಅನೇಕರಿಗೆ ಸ್ವಸ್ಥತೆ

29 ಆಗ ಯೇಸು ಆ ಸ್ಥಳವನ್ನು ಬಿಟ್ಟು ಗಲಿಲಾಯ ಸರೋವರದ ದಡಕ್ಕೆ ಹೋಗಿ ಒಂದು ಬೆಟ್ಟದ ಮೇಲೆ ಕುಳಿತುಕೊಂಡನು.

30 ಜನರು ಗುಂಪುಗುಂಪಾಗಿ ಯೇಸುವಿನ ಬಳಿಗೆ ಬಂದರು. ಅವರು ಅನೇಕ ಬಗೆಯ ಕಾಯಿಲೆಯವರನ್ನು ಕರೆದುತಂದು, ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಅಲ್ಲಿ ಅಂಗವಿಕಲರು, ಕುರುಡರು, ಕುಂಟರು, ಕಿವುಡರು ಮತ್ತು ಇತರ ಅನೇಕ ಜನರಿದ್ದರು. ಆತನು ಇವರನ್ನೆಲ್ಲರನ್ನು ಗುಣಪಡಿಸಿದನು. 31 ಮೂಕರು ಮತ್ತೆ ಮಾತಾಡುವುದನ್ನೂ ಕುಂಟರು ನಡೆದಾಡುವುದನ್ನೂ ಅಂಗವಿಕಲರು ಸ್ವಸ್ಥರಾದದ್ದನ್ನೂ ಕುರುಡರಿಗೆ ಮತ್ತೆ ದೃಷ್ಟಿ ಬಂದದ್ದನ್ನೂ ಕಂಡು ಜನರೆಲ್ಲರೂ ಅತ್ಶಾಶ್ಚರ್ಯಪಟ್ಟು ಇಸ್ರೇಲರ ದೇವರನ್ನು ಕೊಂಡಾಡಿದರು.

ನಾಲ್ಕು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮಾರ್ಕ 8:1-10)

32 ಯೇಸು ತನ್ನ ಶಿಷ್ಯರನ್ನು ಕರೆದು, “ನಾನು ಈ ಜನರಿಗಾಗಿ ದುಃಖಪಡುತ್ತೇನೆ. ಇವರು ಮೂರು ದಿನಗಳಿಂದ ನನ್ನ ಜೊತೆಯಲ್ಲಿದ್ದಾರೆ. ಈಗ ಇವರಿಗೆ ಊಟಕ್ಕೆ ಏನೂ ಇಲ್ಲ. ಇವರನ್ನು ಹಸಿವಿನಿಂದ ಕಳುಹಿಸಿಬಿಡುವುದಕ್ಕೆ ನನಗೆ ಮನಸ್ಸಿಲ್ಲ. ಇವರು ಮನೆಗೆ ಹೋಗುತ್ತಿರುವಾಗ ಬಳಲಿಹೋಗಬಹುದು” ಎಂದು ಹೇಳಿದನು.

33 ಶಿಷ್ಯರು ಯೇಸುವಿಗೆ, “ಈ ಜನರೆಲ್ಲರಿಗೂ ಊಟಕ್ಕೆ ಬೇಕಾಗುವಷ್ಟು ರೊಟ್ಟಿ ನಮಗೆ ಎಲ್ಲಿ ಸಿಕ್ಕುತ್ತದೆ? ಇಲ್ಲಿಗೆ ಯಾವ ಊರೂ ಸಮೀಪವಾಗಿಲ್ಲ” ಎಂದು ಹೇಳಿದರು.

34 ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದನು.

ಶಿಷ್ಯರು, “ನಮ್ಮಲ್ಲಿ ಏಳು ರೊಟ್ಟಿಗಳಿವೆ ಮತ್ತು ಕೆಲವು ಸಣ್ಣ ಮೀನುಗಳಿವೆ” ಎಂದರು.

35 ಆಗ ಜನರಿಗೆ ನೆಲದ ಮೇಲೆ ಕುಳಿತುಕೊಳ್ಳುವುದಕ್ಕೆ ಆತನು ಆಜ್ಞಾಪಿಸಿ, 36 ಆ ಏಳು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ಅವುಗಳಿಗಾಗಿ ದೇವರಿಗೆ ಸ್ತೋತ್ರ ಸಲ್ಲಿಸಿದನು. ಬಳಿಕ ಅವುಗಳನ್ನು ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅವುಗಳನ್ನು ಜನರಿಗೆ ಹಂಚಿದರು. 37 ಜನರೆಲ್ಲರೂ ತಿಂದು ತೃಪ್ತರಾದರು. ಬಳಿಕ ತಿನ್ನಲಾರದೆ ಉಳಿದುಹೋದ ಆಹಾರದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಏಳು ಬುಟ್ಟಿಗಳು ತುಂಬಿಹೋದವು. 38 ಅಂದು ಊಟ ಮಾಡಿದ್ದವರಲ್ಲಿ ಗಂಡಸರೇ ಸುಮಾರು ನಾಲ್ಕುಸಾವಿರ ಮಂದಿಯಿದ್ದರು. ಇವರಲ್ಲದೆ ಹೆಂಗಸರು ಮತ್ತು ಮಕ್ಕಳು ಸಹ ಊಟಮಾಡಿದರು. 39 ಬಳಿಕ ಯೇಸು ತಮ್ಮತಮ್ಮ ಮನೆಗಳಿಗೆ ಹೋಗುವಂತೆ ಅವರಿಗೆ ಹೇಳಿ ಕಳುಹಿಸಿದನು. ಅನಂತರ ದೋಣಿಯನ್ನು ಹತ್ತಿ ಮಗದಾನ್ ಎಂಬ ಪ್ರಾಂತ್ಯಕ್ಕೆ ಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International