Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ಯೆಹೋಶುವನು 6:6-27

ಜೆರಿಕೊವನ್ನು ಸ್ವಾಧೀನಪಡಿಸಿಕೊಂಡದ್ದು

ಆದ್ದರಿಂದ ನೂನನ ಮಗನಾದ ಯೆಹೋಶುವನು ಯಾಜಕರನ್ನು ಒಟ್ಟಿಗೆ ಕರೆದು, ಅವರಿಗೆ, “ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿರಿ. ಏಳು ಮಂದಿ ಯಾಜಕರು ತುತ್ತೂರಿಗಳನ್ನು ತೆಗೆದುಕೊಂಡು ಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಹೇಳಿದನು.

ಬಳಿಕ ಯೆಹೋಶುವನು ಜನರಿಗೆ, “ಈಗ ನಗರದ ಸುತ್ತ ಪ್ರದಕ್ಷಿಣೆ ಹಾಕಿರಿ. ಆಯುಧಗಳನ್ನು ಹಿಡಿದುಕೊಂಡು ಯೋಧರು ಯೆಹೋವನ ಪವಿತ್ರಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಆಜ್ಞಾಪಿಸಿದನು.

ಯೆಹೋಶುವನು ಜನರೊಂದಿಗೆ ಮಾತನಾಡುವದನ್ನು ಮುಗಿಸಿದ ಮೇಲೆ, ಏಳು ಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಊದುತ್ತಾ ಯೆಹೋವನ ಮುಂದೆ ನಡೆಯಲು ಪ್ರಾರಂಭಿಸಿದರು. ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ಅವರನ್ನು ಹಿಂಬಾಲಿಸಿದರು. ಆಯುಧಗಳನ್ನು ಹಿಡಿದುಕೊಂಡ ಯೋಧರು ಯಾಜಕರ ಮುಂದೆ ನಡೆದರು. ಪವಿತ್ರ ಪೆಟ್ಟಿಗೆಯ ಹಿಂದೆ ಜನರು ಕ್ರಮಬದ್ಧವಾಗಿ ಹೆಜ್ಜೆಯನ್ನು ಹಾಕುತ್ತಾ ತಮ್ಮ ತುತ್ತೂರಿಗಳನ್ನು ಊದುತ್ತಿದ್ದರು. 10 ಯೆಹೋಶುವನು ಜನರಿಗೆ, “ಆರ್ಭಟಿಸಬೇಡಿರಿ, ನಾನು ಹೇಳುವ ದಿನದವರೆಗೆ ಒಂದು ಶಬ್ದವನ್ನೂ ಉಚ್ಚರಿಸಬೇಡಿರಿ. ಆಮೇಲೆ ನೀವು ಆರ್ಭಟಿಸಬಹುದು” ಎಂದು ಹೇಳಿದನು.

11 ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಒಂದು ಸಲ ನಗರವನ್ನು ಸುತ್ತಿದ ಮೇಲೆ ಪಾಳೆಯಕ್ಕೆ ಹಿಂತಿರುಗಿ ಬಂದು ಆ ರಾತ್ರಿ ಅಲ್ಲಿಯೇ ಉಳಿದುಕೊಂಡರು.

12 ಯೆಹೋಶುವನು ಮರುದಿನ ಬೆಳಿಗ್ಗೆ ಎದ್ದನು. ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಪುನಃ ಹೊತ್ತುಕೊಂಡು ಹೋದರು. 13 ಏಳುಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಯೆಹೋವನ ಪವಿತ್ರ ಪೆಟ್ಟಿಗೆಯ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ನಡೆದರು. ಆಯಧ ಸನ್ನದ್ಧರಾದ ಸೈನಿಕರು ಅವರ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ನಡೆದರು. ಯೆಹೋವನ ಪವಿತ್ರ ಪೆಟ್ಟಿಗೆಯ ಹಿಂಭಾಗದಲ್ಲಿ ಉಳಿದ ಜನರು ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ಪಟ್ಟಣದ ಸುತ್ತಲೂ ನಡೆದರು. 14 ಎರಡನೆಯ ದಿನ ಅವರೆಲ್ಲರು ನಗರವನ್ನು ಒಂದು ಸಲ ಕ್ರಮಬದ್ಧವಾಗಿ ಸುತ್ತಿ ಪಾಳೆಯಕ್ಕೆ ಹಿಂತಿರುಗಿದರು. ಹೀಗೆ ಅವರು ಆರು ದಿನಗಳವರೆಗೆ ಮಾಡಿದರು.

15 ಏಳನೆಯ ದಿನ ಸೂರ್ಯೋದಯವಾಗುತ್ತಲೇ ಅವರು ಎದ್ದರು. ಪಟ್ಟಣದ ಸುತ್ತಲು ಅವರು ಏಳು ಸಲ ಸುತ್ತಿದರು. ಅವರು ಮುಂಚಿನ ದಿನಗಳಲ್ಲಿ ನಡೆದ ಕ್ರಮದಲ್ಲಿಯೇ ನಡೆದರು. ಆದರೆ ಆ ದಿನ ಅವರು ನಗರದ ಸುತ್ತಲು ಏಳು ಸಲ ಸುತ್ತಿದರು. 16 ಏಳನೆಯ ಸಲ ಅವರು ನಗರವನ್ನು ಸುತ್ತುವಾಗ ಯಾಜಕರು ತುತ್ತೂರಿಗಳನ್ನು ಊದಿದರು. ಆಗ ಯೆಹೋಶುವನು ಜನರಿಗೆ, “ಈಗ ಆರ್ಭಟಿಸಿರಿ, ಯೆಹೋವನು ಈ ನಗರವನ್ನು ನಿಮಗೆ ಕೊಟ್ಟಿದ್ದಾನೆ. 17 ಈ ನಗರ ಮತ್ತು ಇದರಲ್ಲಿರುವದೆಲ್ಲವೂ ಯೆಹೋವನ ಸ್ವತ್ತಾಗಿದೆ. ವೇಶ್ಯೆಯಾದ ರಾಹಾಬಳು ಮತ್ತು ಅವಳ ಮನೆಯಲ್ಲಿರುವ ಎಲ್ಲ ಜನರು ಮಾತ್ರ ಜೀವಸಹಿತ ಉಳಿಯಲಿ, ಅವರನ್ನು ಕೊಲ್ಲಬಾರದು. ಏಕೆಂದರೆ ರಾಹಾಬಳು ನಮ್ಮ ಆ ಇಬ್ಬರು ಗೂಢಚಾರರಿಗೆ ಸಹಾಯ ಮಾಡಿದ್ದಾಳೆ. 18 ಅಲ್ಲದೆ ನಾವು ಉಳಿದೆಲ್ಲವನ್ನು ನಾಶಪಡಿಸಬೇಕೆಂಬುದನ್ನು ನೆನಪಿಡಿ. ಅವರ ವಸ್ತುಗಳನ್ನು ತೆಗೆದುಕೊಳ್ಳಬೇಡಿ. ನೀವು ಅವರ ವಸ್ತುಗಳನ್ನು ತೆಗೆದುಕೊಂಡರೆ ಮತ್ತು ಅವುಗಳನ್ನು ನಮ್ಮ ಪಾಳೆಯಕ್ಕೆ ತಂದರೆ ನೀವೇ ನಾಶವಾಗುವಿರಿ; ಇಸ್ರೇಲಿನ ಎಲ್ಲಾ ಜನರಿಗೆ ಕಷ್ಟವನ್ನುಂಟುಮಾಡುವಿರಿ. 19 ಬೆಳ್ಳಿ, ಬಂಗಾರ, ಕಂಚು ಮತ್ತು ಕಬ್ಬಿಣಗಳಿಂದ ಮಾಡಿದ ಎಲ್ಲಾ ವಸ್ತುಗಳು ಯೆಹೋವನ ಸ್ವತ್ತಾಗಿವೆ. ಆದ್ದರಿಂದ ಅವುಗಳನ್ನು ಆತನ ಭಂಡಾರಕ್ಕೆ ಸೇರಿಸಬೇಕು” ಎಂದು ಆಜ್ಞಾಪಿಸಿದನು.

20 ಯಾಜಕರು ತುತ್ತೂರಿಗಳನ್ನು ಊದಿದಾಗ ಜನರು ಆರ್ಭಟಿಸತೊಡಗಿದರು. ಆಗ ಗೋಡೆಗಳು ಬಿದ್ದವು; ಜನರು ನೇರವಾಗಿ ನಗರದೊಳಗೆ ನುಗ್ಗಿದರು. ಹೀಗೆ ಇಸ್ರೇಲರು ನಗರವನ್ನು ಸ್ವಾಧೀನಪಡಿಸಿಕೊಂಡರು. 21 ಅವರು ನಗರದಲ್ಲಿದ್ದ ಎಲ್ಲವನ್ನು ನಾಶಪಡಿಸಿದರು; ಅಲ್ಲಿದ್ದ ತರುಣರನ್ನು, ವೃದ್ಧರನ್ನು, ತರುಣಿಯರನ್ನು, ವೃದ್ಧೆಯರನ್ನು, ದನಕರುಗಳನ್ನು, ಕುರಿಗಳನ್ನು ಮತ್ತು ಕತ್ತೆಗಳನ್ನು ಕೊಂದುಹಾಕಿದರು.

22 ಯೆಹೋಶುವನು ಆ ಇಬ್ಬರು ಗೂಢಚಾರರಿಗೆ, “ನೀವು ಪ್ರಮಾಣ ಮಾಡಿರುವುದರಿಂದ ಆ ವೇಶ್ಯೆಯ ಮನೆಗೆ ಹೋಗಿ ಅವಳನ್ನು ಹೊರಗೆ ಕರೆದುಕೊಂಡು ಬನ್ನಿ. ಅವಳ ಸಂಗಡ ಇರುವ ಎಲ್ಲಾ ಜನರನ್ನೂ ಕರೆದುಕೊಂಡು ಬನ್ನಿ” ಎಂದು ಹೇಳಿದನು.

23 ಆ ಇಬ್ಬರು, ರಾಹಾಬಳ ಮನೆಗೆ ಹೋಗಿ ಅವಳನ್ನು ಹೊರಗೆ ಕರೆದುಕೊಂಡು ಬಂದರು. ಅವಳ ತಂದೆ, ತಾಯಿ, ಸಹೋದರರು ಮತ್ತು ಅವಳ ಎಲ್ಲ ಕುಟುಂಬದವರನ್ನು ಮತ್ತು ಅವಳ ಸಂಗಡ ಅಲ್ಲಿ ಇದ್ದ ಬೇರೆ ಎಲ್ಲ ಜನರನ್ನು ಸಹ ಅವರು ಹೊರಗೆ ಕರೆದುಕೊಂಡು ಬಂದರು. ಅವರೆಲ್ಲರನ್ನು ಇಸ್ರೇಲಿನ ಜನರ ಪಾಳೆಯದ ಹೊರಗಡೆ ಒಂದು ಸುರಕ್ಷಿತವಾದ ಸ್ಥಳದಲ್ಲಿ ಇರಿಸಿದರು.

24 ಬಳಿಕ ಇಸ್ರೇಲರು ಇಡೀ ನಗರವನ್ನು ಸುಟ್ಟು ಹಾಕಿದರು. ಅವರು ಬೆಳ್ಳಿ, ಬಂಗಾರ, ಕಂಚು ಮತ್ತು ಕಬ್ಬಿಣಗಳಿಂದ ಮಾಡಿದ ವಸ್ತುಗಳನ್ನು ಬಿಟ್ಟು ನಗರದಲ್ಲಿನ ಉಳಿದೆಲ್ಲವನ್ನು ಸುಟ್ಟು ಹಾಕಿದರು. ಅವರು ಆ ವಸ್ತುಗಳನ್ನು ಯೆಹೋವನಿಗಾಗಿ ಉಳಿಸಿದರು. 25 ಯೆಹೋಶುವನು ವೇಶ್ಯೆಯಾದ ರಾಹಾಬಳನ್ನೂ ಅವಳ ಕುಟುಂಬವನ್ನೂ ಅವಳ ಸಂಗಡ ಇದ್ದ ಬೇರೆ ಜನರನ್ನೂ ಉಳಿಸಿದನು. ಯೆಹೋಶುವನು ಜೆರಿಕೊವಿಗೆ ಕಳಿಸಿಕೊಟ್ಟ ಗೂಢಚಾರರಿಗೆ ರಾಹಾಬಳು ಸಹಾಯ ಮಾಡಿದ್ದಕ್ಕಾಗಿ ಯೆಹೋಶುವನು ಅವರೆಲ್ಲರನ್ನು ಉಳಿಸಿದನು. ರಾಹಾಬಳು ಇಂದಿಗೂ ಸಹ ಇಸ್ರೇಲಿನ ಜನರೊಂದಿಗೆ ವಾಸವಾಗಿದ್ದಾಳೆ.

26 ಆ ಸಮಯದಲ್ಲಿ ಯೆಹೋಶುವನು, ಇಸ್ರೇಲಿನ ಜನರಿಂದ ಪ್ರಮಾಣಮಾಡಿಸಿ ಅವರಿಗೆ,

“ಈ ಜೆರಿಕೊ ಪಟ್ಟಣವನ್ನು ಪುನಃ ಕಟ್ಟಲು ಪ್ರಯತ್ನಿಸುವವನು
    ಯೆಹೋವನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಲಿ.
ಈ ನಗರಕ್ಕೆ ಅಡಿಗಲ್ಲನ್ನಿಡುವ ವ್ಯಕ್ತಿಯು
    ತನ್ನ ಹಿರಿಯ ಮಗನನ್ನು ಕಳೆದುಕೊಳ್ಳಲಿ;
ಹೆಬ್ಬಾಗಿಲನ್ನು ನಿಲ್ಲಿಸುವ ವ್ಯಕ್ತಿ
    ತನ್ನ ಕಿರಿಯ ಮಗನನ್ನು ಕಳೆದುಕೊಳ್ಳಲಿ”[a]

ಎಂದು ಹೇಳಿದನು.

27 ಯೆಹೋವನು ಯೆಹೋಶುವನ ಸಂಗಡ ಇದ್ದನು. ಯೆಹೋಶುವನು ದೇಶದಲ್ಲೆಲ್ಲಾ ಸುಪ್ರಸಿದ್ಧನಾದನು.

ಕೀರ್ತನೆಗಳು 135-136

135 ಯೆಹೋವನಿಗೆ ಸ್ತೋತ್ರವಾಗಲಿ!
    ಯೆಹೋವನ ಸೇವಕರೇ, ಆತನ ಹೆಸರನ್ನು ಸ್ತುತಿಸಿರಿ!
ಯೆಹೋವನ ಆಲಯದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
    ದೇವಾಲಯದ ಅಂಗಳದಲ್ಲಿ ನಿಂತಿರುವವರೇ, ಆತನನ್ನು ಸ್ತುತಿಸಿರಿ!
ಯೆಹೋವನಿಗೆ ಸ್ತೋತ್ರ ಮಾಡಿರಿ, ಯಾಕೆಂದರೆ ಆತನು ಒಳ್ಳೆಯವನು.
    ಆತನ ಹೆಸರನ್ನು ಸ್ತುತಿಸಿರಿ, ಅದು ಮನೋಹರವಾಗಿದೆ.

ಯೆಹೋವನು ಯಾಕೋಬನನ್ನು ಆರಿಸಿಕೊಂಡನು.
    ಇಸ್ರೇಲ್, ಆತನಿಗೆ ಸೇರಿದ್ದು.
ಯೆಹೋವನು ಮಹೋನ್ನತನೆಂದೂ
    ನಮ್ಮ ಒಡೆಯನು ಬೇರೆಲ್ಲಾ ದೇವರುಗಳಿಗಿಂತ ಮಹೋನ್ನತನೆಂದೂ ನಮಗೆ ಗೊತ್ತಿದೆ.
ಯೆಹೋವನು ಆಕಾಶದಲ್ಲಿಯೂ ಭೂಮಿಯಲ್ಲಿಯೂ
    ಸಮುದ್ರಗಳಲ್ಲಿಯೂ ಆಳವಾದ ಸಾಗರಗಳಲ್ಲಿಯೂ ತನ್ನ ಇಷ್ಟಾನುಸಾರವಾಗಿ ಮಾಡುವನು.
ಆತನು ಭೂಮಿಯ ಮೇಲೆಲ್ಲಾ ಮೋಡಗಳನ್ನು ಏಳಮಾಡುವನು;
    ಮಿಂಚನ್ನೂ ಮಳೆಯನ್ನೂ ಬರಮಾಡುವನು;
    ಗಾಳಿಯನ್ನು ಬೀಸಮಾಡುವನು.
ಆತನು ಈಜಿಪ್ಟಿನಲ್ಲಿ ಚೊಚ್ಚಲು ಪುರುಷರನ್ನೂ ಪ್ರಾಣಿಗಳನ್ನೂ ನಾಶಮಾಡಿದನು.
ಆತನು ಈಜಿಪ್ಟಿನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮತ್ತು ಮಹತ್ಕಾರ್ಯಗಳನ್ನು
    ಫರೋಹನಿಗೂ ಅವನ ಸೇವಕರುಗಳಿಗೂ ವಿರೋಧವಾಗಿ ಮಾಡಿದನು.
10 ಆತನು ಅನೇಕ ಜನಾಂಗಗಳನ್ನು ಸೋಲಿಸಿದನು.
    ಬಲಿಷ್ಠ ರಾಜರುಗಳನ್ನು ಕೊಂದುಹಾಕಿದನು.
11 ಆತನು ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದನು;
    ಬಾಷಾನಿನ ರಾಜನಾದ ಓಗನನ್ನೂ ಕಾನಾನ್ ದೇಶದ ಎಲ್ಲಾ ಜನಾಂಗಗಳನ್ನೂ ಸೋಲಿಸಿದನು.
12 ಆತನು ಅವರ ದೇಶವನ್ನು ತನ್ನ ಜನರಾದ ಇಸ್ರೇಲರಿಗೆ ಕೊಟ್ಟನು.

13 ಯೆಹೋವನೇ, ನೀನು ಸದಾಕಾಲ ಪ್ರಸಿದ್ಧನಾಗಿರುವೆ!
    ಯೆಹೋವನೇ, ಜನರು ನಿನ್ನನ್ನು ಸದಾಕಾಲ ನೆನಸಿಕೊಳ್ಳುವರು.
14 ಯೆಹೋವನು ಜನಾಂಗಗಳನ್ನು ದಂಡಿಸಿದನು.
    ತನ್ನ ಜನರಿಗಾದರೋ ಕರುಣೆಯುಳ್ಳವನಾಗಿದ್ದನು.
15 ಅನ್ಯಜನರ ದೇವರುಗಳು ಮನುಷ್ಯರಿಂದಲೇ ಮಾಡಲ್ಪಟ್ಟ
    ಬೆಳ್ಳಿಬಂಗಾರಗಳ ಪ್ರತಿಮೆಗಳಾಗಿದ್ದವು.
16 ಆ ಪ್ರತಿಮೆಗಳಿಗೆ ಬಾಯಿಗಳಿದ್ದರೂ ಮಾತಾಡಲಾಗಲಿಲ್ಲ;
    ಕಣ್ಣುಗಳಿದ್ದರೂ ನೋಡಲಾಗಲಿಲ್ಲ;
17 ಆ ಪ್ರತಿಮೆಗಳಿಗೆ ಕಿವಿಗಳಿದ್ದರೂ ಕೇಳಲಾಗಲಿಲ್ಲ;
    ಮೂಗುಗಳಿದ್ದರೂ ಮೂಸಿನೋಡಲಾಗಲಿಲ್ಲ;
18 ಆ ಪ್ರತಿಮೆಗಳನ್ನು ಮಾಡಿದವರೂ ಅವುಗಳಂತೆಯೇ ಆಗುವರು!
    ಯಾಕೆಂದರೆ, ಅವರು ಸಹಾಯಕ್ಕಾಗಿ ಆ ಪ್ರತಿಮೆಗಳನ್ನೇ ನಂಬಿಕೊಂಡಿದ್ದಾರೆ.

19 ಇಸ್ರೇಲಿನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ.
    ಆರೋನನ ಮನೆತನದವರೇ, ಯೆಹೋವನನ್ನು ಸ್ತುತಿಸಿರಿ.
20 ಲೇವಿಯ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ!
    ಯೆಹೋವನ ಭಕ್ತರೇ, ಆತನನ್ನು ಸ್ತುತಿಸಿರಿ.
21 ಯೆಹೋವನಿಗೆ ಚೀಯೋನಿನಿಂದಲೂ
    ಆತನ ವಾಸಸ್ಥಾನವಾದ ಜೆರುಸಲೇಮಿನಿಂದಲೂ ಸ್ತೋತ್ರವಾಗಲಿ!

ಯೆಹೋವನಿಗೆ ಸ್ತೋತ್ರವಾಗಲಿ!

136 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ; ಆತನು ಒಳ್ಳೆಯವನು.
    ಆತನ ಪ್ರೀತಿ ಶಾಶ್ವತವಾದದ್ದು.
ದೇವಾಧಿದೇವನಿಗೆ ಕೃತಜ್ಞತಾಸ್ತುತಿಮಾಡಿರಿ!
    ಆತನ ಪ್ರೀತಿ ಶಾಶ್ವತವಾದದ್ದು.
ಪ್ರಭುಗಳ ಪ್ರಭುವಿಗೆ ಕೃತಜ್ಞತಾಸ್ತುತಿಮಾಡಿರಿ.
    ಆತನ ಪ್ರೀತಿ ಶಾಶ್ವತವಾದದ್ದು.
ಮಹತ್ಕಾರ್ಯಗಳನ್ನು ಮಾಡಬಲ್ಲ ಆತನಿಗೆ ಸ್ತೋತ್ರಮಾಡಿರಿ.
    ಆತನ ಪ್ರೀತಿ ಶಾಶ್ವತವಾದದ್ದು.
ಜ್ಞಾನದಿಂದ ಆಕಾಶವನ್ನು ನಿರ್ಮಿಸಿದ ಆತನೊಬ್ಬನನ್ನೇ ಸ್ತುತಿಸಿರಿ!
    ಆತನ ಪ್ರೀತಿ ಶಾಶ್ವತವಾದದ್ದು.
ಆತನು ಭೂಮಿಯನ್ನು ಜಲರಾಶಿಗಳ ಮೇಲೆ ಹಾಸಿದ್ದಾನೆ.
    ಆತನ ಪ್ರೀತಿ ಶಾಶ್ವತವಾದದ್ದು.
ಆತನು ಮಹಾಬೆಳಕುಗಳನ್ನು ಸೃಷ್ಟಿಮಾಡಿದನು.
    ಆತನ ಪ್ರೀತಿ ಶಾಶ್ವತವಾದದ್ದು.
ಹಗಲನ್ನು ಆಳುವುದಕ್ಕಾಗಿ ಆತನು ಸೂರ್ಯನನ್ನು ಸೃಷ್ಟಿಮಾಡಿದನು.
    ಆತನ ಪ್ರೀತಿ ಶಾಶ್ವತವಾದದ್ದು.
ರಾತ್ರಿಯನ್ನು ಆಳುವುದಕ್ಕಾಗಿ ಆತನು ಚಂದ್ರನನ್ನೂ ನಕ್ಷತ್ರಗಳನ್ನೂ ಸೃಷ್ಟಿಮಾಡಿದನು.
    ಆತನ ಪ್ರೀತಿ ಶಾಶ್ವತವಾದದ್ದು.
10 ಆತನು ಈಜಿಪ್ಟಿನಲ್ಲಿ ಚೊಚ್ಚಲು ಪುರುಷರನ್ನೂ ಪ್ರಾಣಿಗಳನ್ನೂ ಸಂಹರಿಸಿದನು.
    ಆತನ ಪ್ರೀತಿ ಶಾಶ್ವತವಾದದ್ದು.
11 ಆತನು ಇಸ್ರೇಲರನ್ನು ಈಜಿಪ್ಟಿನಿಂದ ಹೊರತಂದನು.
    ಆತನ ಪ್ರೀತಿ ಶಾಶ್ವತವಾದದ್ದು.
12 ಆತನು ತನ್ನ ಮಹಾಶಕ್ತಿಯನ್ನೂ ಬಲವನ್ನೂ ತೋರಿದನು.
    ಆತನ ಪ್ರೀತಿ ಶಾಶ್ವತವಾದದ್ದು.
13 ಆತನು ಕೆಂಪು ಸಮುದ್ರವನ್ನು ಎರಡು ಭಾಗವನ್ನಾಗಿ ಮಾಡಿದನು.
    ಆತನ ಪ್ರೀತಿ ಶಾಶ್ವತವಾದದ್ದು.
14 ಆತನು ಇಸ್ರೇಲರನ್ನು ಸಮುದ್ರದ ಮಧ್ಯದಲ್ಲಿ ನಡೆಸಿದನು.
    ಆತನ ಪ್ರೀತಿ ಶಾಶ್ವತವಾದದ್ದು.
15 ಆತನು ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮುದ್ರದಲ್ಲಿ ಮುಳುಗಿಸಿದನು.
    ಆತನ ಪ್ರೀತಿ ಶಾಶ್ವತವಾದದ್ದು.
16 ಆತನು ತನ್ನ ಜನರನ್ನು ಅರಣ್ಯದೊಳಗೆ ನಡೆಸಿದನು.
    ಆತನ ಪ್ರೀತಿ ಶಾಶ್ವತವಾದದ್ದು.
17 ಆತನು ಶಕ್ತಿಯುತರಾದ ರಾಜರುಗಳನ್ನು ಸೋಲಿಸಿದನು.
    ಆತನ ಪ್ರೀತಿ ಶಾಶ್ವತವಾದದ್ದು.
18 ಆತನು ಬಲಿಷ್ಠರಾದ ರಾಜರುಗಳನ್ನು ಸೋಲಿಸಿದನು.
    ಆತನ ಪ್ರೀತಿ ಶಾಶ್ವತವಾದದ್ದು.
19 ಆತನು ಅಮೋರಿಯರ ರಾಜನಾದ ಸೀಹೋನನನ್ನು ಸೋಲಿಸಿದನು.
    ಆತನ ಪ್ರೀತಿ ಶಾಶ್ವತವಾದದ್ದು.
20 ಆತನು ಬಾಷಾನಿನ ರಾಜನಾದ ಓಗನನ್ನು ಸೋಲಿಸಿದನು.
    ಆತನ ಪ್ರೀತಿ ಶಾಶ್ವತವಾದದ್ದು.
21 ಆತನು ಅವರ ದೇಶಗಳನ್ನು ಇಸ್ರೇಲರಿಗೆ ಕೊಟ್ಟನು.
    ಆತನ ಪ್ರೀತಿ ಶಾಶ್ವತವಾದದ್ದು.
22 ಆತನು ಆ ದೇಶಗಳನ್ನು ಇಸ್ರೇಲರಿಗೆ ಉಡುಗೊರೆಯಾಗಿ ಕೊಟ್ಟನು.
    ಆತನ ಪ್ರೀತಿ ಶಾಶ್ವತವಾದದ್ದು.
23 ನಾವು ಸೋತುಹೋಗಿದ್ದಾಗ ಆತನು ನಮ್ಮನ್ನು ಜ್ಞಾಪಿಸಿಕೊಂಡನು.
    ಆತನ ಪ್ರೀತಿ ಶಾಶ್ವತವಾದದ್ದು.
24 ಆತನು ನಮ್ಮನ್ನು ನಮ್ಮ ಶತ್ರುಗಳಿಂದ ರಕ್ಷಿಸಿದನು.
    ಆತನ ಪ್ರೀತಿ ಶಾಶ್ವತವಾದದ್ದು.
25 ಆತನು ಪ್ರತಿಯೊಬ್ಬರಿಗೂ ಆಹಾರವನ್ನು ಕೊಡುವನು.
    ಆತನ ಪ್ರೀತಿ ಶಾಶ್ವತವಾದದ್ದು.
26 ಪರಲೋಕದ ದೇವರನ್ನು ಸ್ತುತಿಸಿರಿ!
    ಆತನ ಪ್ರೀತಿ ಶಾಶ್ವತವಾದದ್ದು.

ಯೆಶಾಯ 66

ದೇವರು ಎಲ್ಲಾ ಜನಾಂಗಗಳಿಗೆ ತೀರ್ಪು ಕೊಡುವನು

66 ಯೆಹೋವನು ಹೇಳುವುದೇನೆಂದರೆ,
“ಆಕಾಶವೇ ನನ್ನ ಸಿಂಹಾಸನ,
    ಭೂಮಿಯೇ ನನ್ನ ಪಾದಪೀಠ.
ಹೀಗಿರಲು, ನೀವು ನನಗೊಂದು ಮನೆಯನ್ನು ಕಟ್ಟಲು ಸಾಧ್ಯವೆಂದು ಯೋಚಿಸುವಿರಾ?
    ವಿಶ್ರಮಿಸಿಕೊಳ್ಳಲು ನೀವು ಸ್ಥಳ ಮಾಡುವಿರಾ? ಇಲ್ಲ, ಸಾಧ್ಯವಿಲ್ಲ!
ನಾನೇ ಎಲ್ಲವನ್ನು ಉಂಟುಮಾಡಿದೆನು.
    ನಾನು ಸೃಷ್ಟಿಸಿದ್ದರಿಂದ ಅವು ಅಸ್ತಿತ್ವದಲ್ಲಿವೆ.”
    ಇವು ಯೆಹೋವನ ನುಡಿಗಳು.
“ಎಂಥ ಜನರನ್ನು ನಾನು ಪರಿಪಾಲಿಸುತ್ತೇನೆಂದು ಕೇಳುವಿರಾ?
    ಬಡವರ ವಿಷಯದಲ್ಲಿ ನಾನು ಚಿಂತಿಸುತ್ತೇನೆ.
ದುಃಖಿಸುವ ಜನರಿಗಾಗಿ ನಾನು ಚಿಂತಿಸುತ್ತೇನೆ.
    ನನ್ನ ಮಾತುಗಳಿಗೆ ವಿಧೇಯರಾಗುವವರಿಗಾಗಿ ನಾನು ಚಿಂತಿಸುತ್ತೇನೆ.
ಕೆಲವರು ಒಂದು ಕಡೆಯಲ್ಲಿ ಹೋರಿಯನ್ನು ಯಜ್ಞಮಾಡುವರು.
    ಇನ್ನೊಂದು ಕಡೆಯಲ್ಲಿ ಜನರಿಗೆ ಹಿಂಸೆ ಕೊಡುವರು.
ಅವರು ಬಲಿಯರ್ಪಿಸಲು ಕುರಿಗಳನ್ನು ಕೊಯ್ಯುವರು,
    ಅದೇ ಸಮಯದಲ್ಲಿ ನಾಯಿಗಳ ಕುತ್ತಿಗೆಗಳನ್ನು ಮುರಿಯುವರು.
    ಅವರು ನನಗೆ ಹಂದಿಗಳ ರಕ್ತವನ್ನು ಅರ್ಪಿಸುವರು.
ನನಗೆ ಧೂಪವನ್ನು ಹಾಕಲು ಯಾವಾಗಲೂ ತಯಾರಿರುವರು.
    ಅದೇ ಸಮಯದಲ್ಲಿ ಅಯೋಗ್ಯವಾದ ತಮ್ಮ ವಿಗ್ರಹಗಳನ್ನು ಪ್ರೀತಿಸುವರು.
ಅವರು ನನ್ನ ಮಾರ್ಗವನ್ನು ಅನುಸರಿಸದೆ ತಮ್ಮ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ.
    ಅವರು ತಮ್ಮ ಭಯಂಕರವಾದ ವಿಗ್ರಹಗಳನ್ನು ಪೂಜಿಸುತ್ತಾರೆ.
ಆದ್ದರಿಂದ ನಾನು ಅವರ ಉಪಾಯಗಳನ್ನೇ ಬಳಸಿಕೊಳ್ಳಲು ನಿರ್ಧರಿಸಿದೆನು.
    ಅವರು ಬಹು ಭಯಪಡುವ ವಸ್ತುಗಳಿಂದಲೇ ಅವರನ್ನು ಶಿಕ್ಷಿಸಲು ತೀರ್ಮಾನಿಸಿದೆನು.
ಎಕೆಂದರೆ ನಾನು ಅವರನ್ನು ಕರೆದರೂ
    ಅವರು ಕಿವಿಗೊಡಲಿಲ್ಲ.
ನಾನು ಅವರೊಂದಿಗೆ ಮಾತಾಡಿದರೂ ಅವರು ಕೇಳಲಿಲ್ಲ.
    ಆದ್ದರಿಂದ ನಾನು ಅವರಿಗೆ ಅದನ್ನೇ ಮಾಡುವೆನು.
ನಾನು ಯಾವದನ್ನು ಕೆಟ್ಟದೆಂದು ಪರಿಗಣಿಸಿದ್ದೆನೋ ಅದನ್ನೇ ಅವರು ಮಾಡಿದರು.
    ನಾನು ಇಷ್ಟಪಡದ ಸಂಗತಿಗಳನ್ನು ಅವರು ಮಾಡಿದರು.”

ಯೆಹೋವನ ಆಜ್ಞೆಗಳನ್ನು ಪರಿಪಾಲಿಸುವ ನೀವು
    ಆತನು ಹೇಳುವ ಸಂಗತಿಗಳನ್ನು ಕಿವಿಗೊಟ್ಟು ಕೇಳಬೇಕು.
ಆತನು ಹೇಳುವುದೇನೆಂದರೆ, “ನಿಮ್ಮ ಸಹೋದರರು ನಿಮ್ಮನ್ನು ದ್ವೇಷಿಸಿದರು.
    ನೀವು ನನ್ನನ್ನು ಅನುಸರಿಸಿದ್ದರಿಂದ ನಿಮ್ಮ ಮೇಲೆರಗಿದರು.
‘ಯೆಹೋವನು ಸನ್ಮಾನ ಹೊಂದಿದ ಬಳಿಕ ನಿಮ್ಮ ಬಳಿಗೆ ಬರುತ್ತೇವೆ.
    ಆಮೇಲೆ ನಿಮ್ಮ ಆನಂದವನ್ನು ಅನುಭವಿಸುತ್ತೇವೆ’ ಎಂದು ನಿಮ್ಮ ಸಹೋದರರು ಅಂದರು.
    ಆ ದುಷ್ಟ ಜನರು ಶಿಕ್ಷಿಸಲ್ಪಡುವರು.”

ಶಿಕ್ಷೆ ಮತ್ತು ಹೊಸ ಜನಾಂಗ

ಆಲೈಸಿರಿ! ಪಟ್ಟಣದೊಳಗಿಂದ ಮತ್ತು ದೇವಾಲಯದೊಳಗಿಂದ ದೊಡ್ಡ ಶಬ್ದವು ಕೇಳಿಸುತ್ತದೆ. ಯೆಹೋವನು ತನ್ನ ವೈರಿಗಳನ್ನು ಶಿಕ್ಷಿಸುವುದೇ ಆ ಶಬ್ದ. ಅವರಿಗೆ ತಕ್ಕ ಶಿಕ್ಷೆಯನ್ನು ಯೆಹೋವನು ಕೊಡುತ್ತಿದ್ದಾನೆ.

7-8 “ಪ್ರಸವವೇದನೆಗಿಂತ ಮೊದಲು ಸ್ತ್ರೀಯು ಮಗುವನ್ನು ಹೆರುವದಿಲ್ಲ. ತಾನು ಹೆರುವ ಶಿಶುವನ್ನು ನೋಡುವ ಮೊದಲು ಸ್ತ್ರೀಯು ಪ್ರಸವವೇದನೆ ಅನುಭವಿಸಲೇಬೇಕು. ಅದೇ ರೀತಿಯಲ್ಲಿ ಒಂದೇ ದಿನದಲ್ಲಿ ಹೊಸ ಭೂಮ್ಯಾಕಾಶಗಳು ಉಂಟಾಗುವದನ್ನು ಯಾರೂ ನೋಡುವದಿಲ್ಲ. ಒಂದೇ ದಿವಸದಲ್ಲಿ ಉಂಟಾದ ಜನಾಂಗದ ಬಗ್ಗೆ ಯಾರೂ ಕೇಳಲಿಲ್ಲ. ದೇಶವು ಪ್ರಸವವೇದನೆಯಂಥ ಬೇನೆಯನ್ನು ಅನುಭವಿಸಬೇಕು. ಆ ಬಳಿಕ ದೇಶವು ಹೊಸ ಜನಾಂಗವೆಂಬ ಮಕ್ಕಳನ್ನು ಹೆರುವುದು. ಅದೇ ರೀತಿಯಲ್ಲಿ ಹೊಸದಾಗಿ ಹುಟ್ಟುವ ಕಾರಣದಿಂದಲೇ ನಾನು ಬೇನೆಯನ್ನು ನಿಮಗೆ ಕೊಡುವೆನು.”

ಯೆಹೋವನು ಹೇಳುವುದೇನೆಂದರೆ: “ನಾನು ನಿಮಗೆ ಹೆರಿಗೆ ಬೇನೆಯನ್ನು ಕೊಡದೆಹೋದರೆ ನೀವು ಹೊಸ ಜನಾಂಗವಾಗಲಾರಿರಿ.” ಇದು ಯೆಹೋವನ ನುಡಿ.

10 ಜೆರುಸಲೇಮೇ, ಹರ್ಷಿಸು. ಜೆರುಸಲೇಮನ್ನು ಪ್ರೀತಿಸುವ ಜನರೇ, ಹರ್ಷಿಸಿರಿ.
    ಜೆರುಸಲೇಮಿಗೆ ದುಃಖಕೊಡುವ ವಿಷಯಗಳು ಜರುಗಿದ್ದರಿಂದ ನೀವು ದುಃಖಪಡುತ್ತಿದ್ದೀರಿ.
    ಆದರೆ ನೀವೀಗ ಸಂತೋಷಪಡಬೇಕು.
11 ಯಾಕೆಂದರೆ ಆಕೆಯ ಎದೆಯಿಂದ ದೊರಕುವ ಹಾಲಿನಂತೆ ನಿಮಗೆ ಕರುಣೆಯು ದೊರಕುವದು.
    ಆ ಹಾಲು ನಿಮ್ಮನ್ನು ಪೂರ್ಣವಾಗಿ ತೃಪ್ತಿಗೊಳಿಸುವದು.
    ನೀವು ಆ ಹಾಲನ್ನು ಕುಡಿದು ಜೆರುಸಲೇಮಿನ ವೈಭವದಲ್ಲಿ ಆನಂದಿಸುವಿರಿ.

12 ಯೆಹೋವನು ಹೇಳುವುದೇನೆಂದರೆ:
“ಇಗೋ, ನಾನು ನಿನಗೆ ಸಮಾಧಾನವನ್ನು ಕೊಡುತ್ತೇನೆ.
ಒಂದು ದೊಡ್ಡ ಹೊಳೆಯು ಹರಿಯುವಂತೆ ನಿನಗೆ ಸಮಾಧಾನವು ಹರಿದುಕೊಂಡು ಬರುವದು.
    ಭೂಮಿಯ ಮೇಲಿರುವ ಎಲ್ಲಾ ದೇಶಗಳ ಐಶ್ವರ್ಯವು ನಿನ್ನ ಬಳಿಗೆ ಹರಿದುಬರುವದು.
    ಅದು ಪ್ರವಾಹದಂತೆ ಹರಿದುಬರುವದು.
ನೀವು ಸಣ್ಣ ಮಕ್ಕಳಂತೆ ಆ ಹಾಲನ್ನು ಕುಡಿಯುವಿರಿ.
    ನಾನು ನಿಮ್ಮನ್ನೆತ್ತಿ ಕೈಗಳಲ್ಲಿ ಅಪ್ಪಿಕೊಳ್ಳುವೆನು.
    ನನ್ನ ತೊಡೆಯ ಮೇಲೆ ನಿಮ್ಮನ್ನು ಕುಳ್ಳಿರಿಸಿ ಆಟವಾಡಿಸುವೆನು.
13 ನಾನು ನಿಮ್ಮನ್ನು ಜೆರುಸಲೇಮಿನಲ್ಲಿ ಸಂತೈಸುವೆನು.
    ತಾಯಿಯು ತನ್ನ ಮಗುವನ್ನು ಸಂತೈಸುವಂತೆ ನಾನು ನಿಮ್ಮನ್ನು ಸಂತೈಸುವೆನು.”

14 ನಿಮ್ಮನ್ನು ಹರ್ಷಗೊಳಿಸುವಂಥ ಸಂಗತಿಗಳನ್ನು ನೀವು ನೋಡುವಿರಿ.
    ನೀವು ಸ್ವತಂತ್ರರಾಗಿದ್ದು ಹುಲ್ಲಿನಂತೆ ಹುಲುಸಾಗಿ ಬೆಳೆಯುವಿರಿ.
ಯೆಹೋವನ ಸೇವಕರು ಆತನ ಶಕ್ತಿಯನ್ನು ನೋಡುವರು.
    ಆದರೆ ಯೆಹೋವನ ವೈರಿಗಳು ಆತನ ಕೋಪವನ್ನು ಕಾಣುವರು.
15 ಇಗೋ, ಯೆಹೋವನು ಬೆಂಕಿಯೊಂದಿಗೆ ಬರುತ್ತಿದ್ದಾನೆ.
    ಯೆಹೋವನ ಸೈನ್ಯಗಳು ಧೂಳಿನ ಮೋಡಗಳೊಂದಿಗೆ ಬರುತ್ತಿವೆ.
ಯೆಹೋವನು ತನ್ನ ಕೋಪದಿಂದ ಆ ಜನರನ್ನು ಶಿಕ್ಷಿಸುವನು.
    ಯೆಹೋವನು ಕೋಪದಲ್ಲಿರುವಾಗ ಬೆಂಕಿಯ ನಾಲಿಗೆಗಳಿಂದ ಅವರನ್ನು ಶಿಕ್ಷಿಸುತ್ತಾನೆ.
16 ಯೆಹೋವನು ಜನರಿಗೆ ನ್ಯಾಯತೀರ್ಪು ಮಾಡುವನು.
    ಆ ಬಳಿಕ ಯೆಹೋವನು ಜನರನ್ನು ಬೆಂಕಿಯಿಂದಲೂ ಖಡ್ಗದಿಂದಲೂ ನಾಶಮಾಡುವನು.
    ಯೆಹೋವನು ಅನೇಕಾನೇಕ ಜನರನ್ನು ನಾಶಮಾಡುವನು.

17 ಅವರು ತಮ್ಮ ವಿಶೇಷವಾದ ತೋಟದೊಳಗೆ ಪೂಜೆಮಾಡಲು ತಮ್ಮನ್ನು ಶುದ್ಧಮಾಡಿಕೊಳ್ಳುವಂತೆ ಸ್ನಾನಮಾಡುವರು. ತಮ್ಮ ವಿಶೇಷ ತೋಟದೊಳಗೆ ಹೋಗಲು ಒಬ್ಬರನ್ನೊಬ್ಬನು ಹಿಂಬಾಲಿಸುವರು. ಅಲ್ಲಿ ಅವರ ವಿಗ್ರಹಗಳನ್ನು ಪೂಜಿಸುವರು. ಆದರೆ ಯೆಹೋವನು ಅವರೆಲ್ಲರನ್ನು ನಾಶಮಾಡುವನು. “ಆ ಜನರು ಹಂದಿ, ಇಲಿ ಮತ್ತು ಇತರ ಅಶುದ್ಧ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ. ಆದರೆ ಅವರೆಲ್ಲರೂ ಒಟ್ಟಾಗಿ ನಾಶವಾಗುವರು.” ಇದು ಯೆಹೋವನು ಹೇಳಿದ ಮಾತುಗಳು.

18 “ಆ ಜನರಲ್ಲಿ ಕೆಟ್ಟ ಯೋಜನೆಗಳು ಇದ್ದು ಕೆಟ್ಟದ್ದನ್ನೇ ಮಾಡುವವರಾಗಿದ್ದಾರೆ. ಅದಕ್ಕಾಗಿ ನಾನು ಅವರನ್ನು ಶಿಕ್ಷಿಸಲು ಬರುತ್ತಿದ್ದೇನೆ. ನಾನು ಎಲ್ಲಾ ಜನಾಂಗಗಳನ್ನೂ ಎಲ್ಲಾ ಜನರನ್ನೂ ಒಟ್ಟುಗೂಡಿಸುವೆನು. ಎಲ್ಲಾ ಜನರು ಒಟ್ಟುಗೂಡಿ ನನ್ನ ಸಾಮರ್ಥ್ಯವನ್ನು ನೋಡುವರು. 19 ಅವರಲ್ಲಿ ಕೆಲವರಿಗೆ ನಾನು ಗುರುತು ಹಾಕುವೆನು. ನಾನು ಅವರನ್ನು ರಕ್ಷಿಸುವೆನು. ರಕ್ಷಿಸಲ್ಪಟ್ಟ ಕೆಲವರನ್ನು ನಾನು ತಾರ್ಷೀಷ್, ಲಿಬ್ಯ, ಲೂದ್, ತೂಬಾಲ್, ಗ್ರೀಸ್ ಮತ್ತು ದೂರದೇಶಗಳಿಗೆ ಕಳುಹಿಸುವೆನು. ಅಲ್ಲಿಯ ಜನರು ನನ್ನ ಬೋಧನೆಯನ್ನು ಎಂದೂ ಕೇಳಿರಲಿಲ್ಲ. ಅವರು ನನ್ನ ಮಹಿಮೆಯನ್ನು ಎಂದೂ ಕಂಡಿರಲಿಲ್ಲ. ಆದ್ದರಿಂದ ರಕ್ಷಿಸಲ್ಪಟ್ಟ ಜನರು ನನ್ನ ಮಹಿಮೆಯನ್ನು ಅವರಿಗೆ ತಿಳಿಸುವರು. 20 ಅವರು ನಿಮ್ಮ ಸಹೋದರಸಹೋದರಿಯರನ್ನು ಎಲ್ಲಾ ಜನಾಂಗಗಳೊಳಗಿಂದ ಕರೆದುಕೊಂಡು ನನ್ನ ಪವಿತ್ರ ಪರ್ವತವಾದ ಜೆರುಸಲೇಮಿಗೆ ಬರುವರು. ನಿನ್ನ ಸಹೋದರಸಹೋದರಿಯರು ಕುದುರೆ, ಕತ್ತೆ, ಒಂಟೆ, ರಥ ಮತ್ತು ಗಾಡಿಗಳಲ್ಲಿ ಕುಳಿತುಕೊಂಡು ಬರುವರು. ಯೆಹೋವನ ಮಂದಿರದೊಳಗೆ ಶುದ್ಧವಾದ ತಟ್ಟೆಯ ಮೇಲೆ ಕಾಣಿಕೆಗಳನ್ನು ತರುವಂತೆಯೇ ನಿನ್ನ ಸಹೋದರಸಹೋದರಿಯರಾದ ಇಸ್ರೇಲರು ಬರುವರು. 21 ನಾನು ಅವರಲ್ಲಿ ಕೆಲವರನ್ನು ಯಾಜಕರನ್ನಾಗಿಯೂ ಲೇವಿಯರನ್ನಾಗಿಯೂ ಆರಿಸುವೆನು.” ಇವು ಯೆಹೋವನ ನುಡಿಗಳು.

ಹೊಸ ಭೂಮ್ಯಾಕಾಶಗಳು

22 “ನಾನು ಹೊಸ ಪ್ರಪಂಚವನ್ನು ಸೃಷ್ಟಿಸುವೆನು; ಹೊಸ ಆಕಾಶವೂ ಹೊಸ ಭೂಮಿಯೂ ಶಾಶ್ವತವಾಗಿರುವವು. ಹಾಗೆಯೇ ನಿಮ್ಮ ಹೆಸರುಗಳು ಯಾವಾಗಲೂ ನನ್ನೊಂದಿಗೆ ಇರುತ್ತವೆ; ನಿಮ್ಮ ಮಕ್ಕಳು ನನ್ನೊಂದಿಗೆ ಯಾವಾಗಲೂ ಇರುತ್ತಾರೆ. 23 ಪ್ರತಿಯೊಂದು ಆರಾಧನಾ ದಿನದಲ್ಲಿ ಪ್ರತಿಯೊಬ್ಬರೂ ಬಂದು ನನ್ನನ್ನು ಆರಾಧಿಸುವರು. ಪ್ರತಿಯೊಂದು ಸಬ್ಬತ್ ದಿನದಲ್ಲೂ ತಿಂಗಳ ಮೊದಲ ದಿನದಲ್ಲೂ ಅವರು ನನ್ನ ಬಳಿಗೆ ಬರುವರು.”

24 “ಅವರು ನನ್ನ ಪವಿತ್ರ ಪಟ್ಟಣದಲ್ಲಿ ವಾಸಿಸುವರು. ಅವರು ಪಟ್ಟಣದಿಂದ ಹೊರಗೆ ಹೋದರೆ ನನಗೆ ವಿರುದ್ಧವಾಗಿ ಪಾಪಮಾಡಿದವರ ಹೆಣಗಳನ್ನು ನೋಡುವರು. ಅವರ ಹೆಣಗಳೊಳಗೆ ಸಾಯದ ಹುಳಗಳಿರುವವು. ಬೆಂಕಿಯು ಆ ಹೆಣಗಳನ್ನು ಸುಟ್ಟುಬಿಡುವುದು. ಆ ಬೆಂಕಿಯು ಆರುವದೇ ಇಲ್ಲ. ಅವು ಜನರ ಮುಂದೆ ಅಸಹ್ಯವಾಗಿರುವವು.”

ಮತ್ತಾಯ 14

ಯೇಸುವಿನ ಕುರಿತು ಹೆರೋದನ ಅಭಿಪ್ರಾಯ

(ಮಾರ್ಕ 6:14-29; ಲೂಕ 9:7-9)

14 ಆ ಕಾಲದಲ್ಲಿ ಹೆರೋದನು ಗಲಿಲಾಯದಲ್ಲಿ ಆಳುತ್ತಿದ್ದನು. ಜನರು ಯೇಸುವಿನ ಕುರಿತು ಹೇಳುತ್ತಿದ್ದ ಸಂಗತಿಗಳೆಲ್ಲ ಅವನಿಗೆ ತಿಳಿಯಿತು. ಆದ್ದರಿಂದ ಹೆರೋದನು ತನ್ನ ಸೇವಕರಿಗೆ, “ನಿಜವಾಗಿಯೂ ಯೇಸುವೇ ಸ್ನಾನಿಕ ಯೋಹಾನನು. ಅವನು ಮತ್ತೆ ಜೀವಂತವಾಗಿ ಬಂದಿದ್ದಾನೆ. ಆದಕಾರಣವೇ ಅವನು ಈ ಅದ್ಭುತಕಾರ್ಯಗಳನ್ನು ಮಾಡಲು ಶಕ್ತನಾಗಿದ್ದಾನೆ” ಎಂದು ಹೇಳಿದನು.

ಸ್ನಾನಿಕ ಯೋಹಾನನು ಕೊಲ್ಲಲ್ಪಟ್ಟ ರೀತಿ

ಈ ಸಮಯಕ್ಕೆ ಮೊದಲೇ ಹೆರೋದ್ಯಳ ನಿಮಿತ್ತವಾಗಿ ಹೆರೋದನು ಯೋಹಾನನನ್ನು ಸರಪಣಿಗಳಿಂದ ಬಂಧಿಸಿ, ಸೆರೆಮನೆಯಲ್ಲಿ ಹಾಕಿಸಿದ್ದನು. ಹೆರೋದ್ಯಳು ಹೆರೋದನ ಸಹೋದರನಾದ ಫಿಲಿಪ್ಪನ ಹೆಂಡತಿ. ಯೋಹಾನನು ಹೆರೋದನಿಗೆ, “ಹೆರೋದ್ಯಳನ್ನು ನೀನು ಇಟ್ಟುಕೊಂಡಿರುವುದು ಸರಿಯಲ್ಲ” ಎಂದು ಹೇಳುತ್ತಿದ್ದುದೇ ಈ ಸೆರೆವಾಸಕ್ಕೆ ಕಾರಣ. ಹೆರೋದನು ಯೋಹಾನನನ್ನು ಕೊಲ್ಲಿಸಬೇಕೆಂದಿದ್ದರೂ ಜನರಿಗೆ ಭಯಪಟ್ಟು ಕೊಲ್ಲಿಸಿರಲಿಲ್ಲ. ಜನರು ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರು.

ಹೆರೋದನ ಹುಟ್ಟುಹಬ್ಬದ ದಿನದಂದು ಹೆರೋದ್ಯಳ ಮಗಳು ಹೆರೋದನ ಮತ್ತು ಅವನ ಅತಿಥಿಗಳ ಮುಂದೆ ನರ್ತಿಸಿದಳು. ಹೆರೋದನು ಅವಳನ್ನು ಬಹಳ ಮೆಚ್ಚಿಕೊಂಡನು. ಆದ್ದರಿಂದ ಅವನು, “ನಿನಗೆ ಏನು ಬೇಕಾದರೂ ನಾನು ಕೊಡುತ್ತೇನೆ” ಎಂದು ಅವಳಿಗೆ ವಾಗ್ದಾನ ಮಾಡಿದನು. ಏನು ಕೇಳಿಕೊಳ್ಳಬೇಕೆಂದು ಹೆರೋದ್ಯಳು ತನ್ನ ಮಗಳಿಗೆ ಹೇಳಿಕೊಟ್ಟಳು. ಆದ್ದರಿಂದ ಅವಳು ಹೆರೋದನಿಗೆ, “ಸ್ನಾನಿಕ ಯೋಹಾನನ ತಲೆಯನ್ನು ಇಲ್ಲಿಯೇ ಈ ತಟ್ಟೆಯ ಮೇಲೆಯೇ ನನಗೆ ಕೊಡು” ಎಂದು ಹೇಳಿದಳು.

ರಾಜ ಹೆರೋದನು ಬಹಳವಾಗಿ ದುಃಖಪಟ್ಟನು. ಆದರೆ ಏನು ಕೇಳಿದರೂ ಕೊಡುತ್ತೇನೆಂದು ಅವನು ಅವಳಿಗೆ ವಾಗ್ದಾನ ಮಾಡಿದ್ದನು. ಹೆರೋದನ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದವರು ಸಹ ಆ ವಾಗ್ದಾನವನ್ನು ಕೇಳಿಸಿಕೊಂಡಿದ್ದರು. ಆದ್ದರಿಂದ ಅವಳು ಕೇಳಿದ್ದನ್ನು ಕೊಡುವುದಕ್ಕೆ ಹೆರೋದನು ಅಪ್ಪಣೆಕೊಟ್ಟನು. 10 ಸೆರೆಮನೆಗೆ ಹೋಗಿ ಯೋಹಾನನ ತಲೆಯನ್ನು ಕತ್ತರಿಸಿಕೊಂಡು ಬರಲು ಅವನು ಸೈನಿಕರನ್ನು ಕಳುಹಿಸಿಕೊಟ್ಟನು. 11 ಅವರು ಯೋಹಾನನ ತಲೆಯನ್ನು ತಟ್ಟೆಯ ಮೇಲೆ ತಂದು ಅವಳಿಗೆ ಕೊಟ್ಟರು. ಅವಳು ಅದನ್ನು ತನ್ನ ತಾಯಿಯಾದ ಹೆರೋದ್ಯಳ ಬಳಿಗೆ ತೆಗೆದುಕೊಂಡು ಹೋದಳು. 12 ಯೋಹಾನನ ಶಿಷ್ಯರು ಬಂದು ಅವನ ದೇಹವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು. ಬಳಿಕ ಅವರು ಯೇಸುವಿನ ಬಳಿಗೆ ಹೋಗಿ ಸಂಭವಿಸಿದ್ದನ್ನೆಲ್ಲ ತಿಳಿಸಿದರು.

ಐದು ಸಾವಿರಕ್ಕಿಂತ ಹೆಚ್ಚು ಜನರಿಗೆ ಆಹಾರದಾನ

(ಮಾರ್ಕ 6:30-44; ಲೂಕ 9:10-17; ಯೋಹಾನ 6:1-14)

13 ಯೋಹಾನನಿಗೆ ಸಂಭವಿಸಿದ್ದನ್ನು ಕೇಳಿದಾಗ ಯೇಸು ದೋಣಿಹತ್ತಿ ನಿರ್ಜನವಾದ ಸ್ಥಳಕ್ಕೆ ಒಬ್ಬನೇ ಹೋದನು. ಆದರೆ ಈ ಸುದ್ದಿ ಜನರಿಗೆ ತಿಳಿಯಿತು. ಆದ್ದರಿಂದ ಅವರು ತಮ್ಮ ಊರುಗಳನ್ನು ಬಿಟ್ಟು ಕಾಲುನಡಿಗೆಯಲ್ಲೇ ಆತನಿದ್ದ ಸ್ಥಳಕ್ಕೆ ಹೋದರು. 14 ಯೇಸು ಅಲ್ಲಿಗೆ ಬಂದಾಗ, ಜನರು ಗುಂಪುಗುಂಪಾಗಿ ನೆರೆದಿರುವುದನ್ನು ಕಂಡು ಅವರಿಗಾಗಿ ದುಃಖಪಟ್ಟು ಕಾಯಿಲೆಯವರನ್ನು ಗುಣಪಡಿಸಿದನು.

15 ಸಂಜೆಯಾದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, “ಈ ಸ್ಥಳದಲ್ಲಿ ಜನರು ವಾಸಿಸುವುದಿಲ್ಲ. ಈಗಾಗಲೇ ಸಮಯವಾಗಿದೆ. ಜನರು ತಮಗಾಗಿ ಆಹಾರವನ್ನು ಕೊಂಡುಕೊಳ್ಳಲು ಅವರನ್ನು ಊರುಗಳಿಗೆ ಕಳುಹಿಸಿಬಿಡು” ಎಂದು ಹೇಳಿದರು.

16 ಯೇಸು, “ಜನರು ಹೋಗುವುದು ಬೇಡ. ನೀವೇ ಅವರಿಗೆ ಸ್ವಲ್ಪ ಊಟವನ್ನು ಕೊಡಿ” ಎಂದು ಹೇಳಿದನು.

17 ಆಗ ಶಿಷ್ಯರು, “ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳು ಮಾತ್ರ ಇವೆ” ಎಂದು ಉತ್ತರಕೊಟ್ಟರು.

18 ಯೇಸು, “ಆ ರೊಟ್ಟಿ ಮತ್ತು ಮೀನುಗಳನ್ನು ನನ್ನ ಬಳಿಗೆ ತನ್ನಿರಿ” ಅಂದನು. 19 ಬಳಿಕ ಆತನು ಜನರಿಗೆ ಹುಲ್ಲಿನ ಮೇಲೆ ಕುಳಿತುಕೊಳ್ಳುವುದಕ್ಕೆ ಹೇಳಿ ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು, ಆಕಾಶದ ಕಡೆಗೆ ನೋಡಿ, ಅವುಗಳಿಗಾಗಿ ದೇವರಿಗೆ ಸ್ತೋತ್ರಸಲ್ಲಿಸಿ, ರೊಟ್ಟಿಯನ್ನು ಮುರಿದು ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರು ರೊಟ್ಟಿಯನ್ನು ಜನರಿಗೆ ಹಂಚಿದರು. 20 ಜನರೆಲ್ಲರೂ ತಿಂದು ತೃಪ್ತರಾದರು. ಜನರು ತಿಂದು ಮುಗಿಸಿದ ನಂತರ, ತಿನ್ನಲಾರದೆ ಉಳಿಸಿದ ಚೂರುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು. 21 ಊಟ ಮಾಡಿದವರಲ್ಲಿ ಹೆಂಗಸರು ಮತ್ತು ಮಕ್ಕಳನ್ನು ಬಿಟ್ಟರೆ, ಗಂಡಸರೇ ಸುಮಾರು ಐದುಸಾವಿರ ಇದ್ದರು.

ಸರೋವರದ ಮೇಲೆ ಯೇಸುವಿನ ಕಾಲುನಡಿಗೆ

(ಮಾರ್ಕ 6:45-52; ಯೋಹಾನ 6:15-21)

22 ಬಳಿಕ ಯೇಸು ತನ್ನ ಶಿಷ್ಯರಿಗೆ, “ನಾನು ಈ ಜನರನ್ನು ಬೀಳ್ಕೊಟ್ಟು ಬರುತ್ತೇನೆ. ನೀವು ಈಗಲೇ ದೋಣಿ ಹತ್ತಿಕೊಂಡು ಸರೋವರದ ಆಚೆದಡಕ್ಕೆ ಹೋಗಿರಿ” ಎಂದು ಹೇಳಿ ಕಳುಹಿಸಿದನು. 23 ಆತನು ಜನರಿಗೆ ಶುಭವನ್ನು ಕೋರಿ ಕಳುಹಿಸಿದ ನಂತರ ಪ್ರಾರ್ಥನೆ ಮಾಡುವುದಕ್ಕಾಗಿ ತಾನೊಬ್ಬನೇ ಬೆಟ್ಟದ ಮೇಲಕ್ಕೆ ಹೋದನು. ಆಗಲೇ ರಾತ್ರಿಯಾಗಿತ್ತು. ಅಲ್ಲಿ ಆತನೊಬ್ಬನೇ ಇದ್ದನು. 24 ಅಷ್ಟರಲ್ಲಿ ದೋಣಿಯು ಸರೋವರದ ಮೇಲೆ ಬಹಳ ದೂರ ಹೋಗಿತ್ತು. ಎದುರುಗಾಳಿಯಿಂದ ಅಲೆಗಳ ಬಡಿತಕ್ಕೆ ಸಿಕ್ಕಿಹಾಕಿಕೊಂಡಿತ್ತು.

25 ಆ ರಾತ್ರಿಯ ಕಡೇ ಜಾವದ ಸಮಯದಲ್ಲಿ ಆತನ ಶಿಷ್ಯರು ದೋಣಿಯಲ್ಲೇ ಇದ್ದರು. ಆತನು ಸರೋವರದ ನೀರಿನ ಮೇಲೆ ನಡೆಯುತ್ತಾ ಅವರ ಬಳಿಗೆ ಬರತೊಡಗಿದನು. 26 ನೀರಿನ ಮೇಲೆ ನಡೆದುಕೊಂಡು ಬರುತ್ತಿದ್ದ ಆತನನ್ನು ಕಂಡ ಶಿಷ್ಯರು ಭೂತವೆಂದು ಭಾವಿಸಿ ಭಯದಿಂದ ಕೂಗಿಕೊಂಡರು.

27 ಕೂಡಲೇ ಯೇಸು, “ಚಿಂತಿಸಬೇಡಿ! ನಾನೇ! ಭಯಪಡಬೇಡಿ” ಎಂದು ಅವರೊಂದಿಗೆ ಮಾತಾಡಿದನು.

28 ಪೇತ್ರನು, “ಪ್ರಭುವೇ, ನಿಜವಾಗಿಯೂ ನೀನೇ ಆಗಿದ್ದರೆ, ನೀರಿನ ಮೇಲೆ ನಡೆದುಕೊಂಡು ನಿನ್ನ ಬಳಿಗೆ ಬರಲು ನನಗೆ ಆಜ್ಞಾಪಿಸು” ಎಂದನು.

29 ಯೇಸು, “ಪೇತ್ರನೇ, ಬಾ” ಅಂದನು.

ಕೂಡಲೆ ಪೇತ್ರನು ದೋಣಿಯಿಂದ ಇಳಿದು ಯೇಸುವಿನ ಬಳಿಗೆ ನೀರಿನ ಮೇಲೆ ನಡೆದನು. 30 ಆದರೆ ಅವನು ಗಾಳಿಯನ್ನು ಮತ್ತು ಅಲೆಗಳನ್ನು ನೋಡಿ ಭಯಪಟ್ಟದ್ದರಿಂದ ನೀರಿನಲ್ಲಿ ಮುಳುಗತೊಡಗಿ, “ಪ್ರಭುವೇ, ನನ್ನನ್ನು ರಕ್ಷಿಸು” ಎಂದು ಕೂಗಿಕೊಂಡನು.

31 ಯೇಸು ತನ್ನ ಕೈ ಚಾಚಿ ಪೇತ್ರನನ್ನು ಹಿಡಿದುಕೊಂಡನು. ಯೇಸು, “ಅಲ್ಪವಿಶ್ವಾಸಿಯೇ, ಏಕೆ ಸಂದೇಹಪಟ್ಟೆ?” ಎಂದನು.

32 ಪೇತ್ರನು ಮತ್ತು ಯೇಸು ದೋಣಿ ಹತ್ತಿದ ಮೇಲೆ ಗಾಳಿ ಶಾಂತವಾಯಿತು. 33 ದೋಣಿಯಲ್ಲಿದ್ದ ಶಿಷ್ಯರು ಯೇಸುವನ್ನು ಆರಾಧಿಸಿ, “ನೀನು ನಿಜವಾಗಿಯೂ ದೇವರ ಮಗನು” ಎಂದು ಹೇಳಿದರು.

ಅನೇಕ ರೋಗಿಗಳಿಗೆ ಯೇಸುವಿನಿಂದ ಸ್ವಸ್ಥತೆ

(ಮಾರ್ಕ 6:53-56)

34 ಅವರು ಸರೋವರವನ್ನು ದಾಟಿ ಗೆನೆಸರೇತ್ ದಡಕ್ಕೆ ಬಂದರು. 35 ಅಲ್ಲಿದ್ದ ಜನರು ಯೇಸುವನ್ನು ನೋಡಿದರು. ಆತನು ಯಾರೆಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಅವರು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಯೇಸು ಬಂದಿದ್ದಾನೆ ಎಂದು ತಿಳಿಸಿದರು. ಜನರು ರೋಗಗಳಿಂದ ಬೇನೆಗಳಿಂದ ನರಳುತ್ತಿದ್ದವರನ್ನೆಲ್ಲ ಆತನ ಬಳಿಗೆ ತಂದರು. 36 ಆತನ ಮೇಲಂಗಿಯನ್ನಾದರೂ ಮುಟ್ಟಿ ಗುಣಹೊಂದಲು ಅವಕಾಶಕೊಡಬೇಕೆಂದು ಅವರು ಬೇಡಿಕೊಂಡರು. ಆತನ ಮೇಲಂಗಿಯನ್ನು ಮುಟ್ಟಿದ ಜನರೆಲ್ಲರೂ ಗುಣಹೊಂದಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International