M’Cheyne Bible Reading Plan
ಯಾವಾಗಲೂ ದೇವರನ್ನು ಪ್ರೀತಿಸಿ ಆತನಿಗೆ ವಿಧೇಯರಾಗಿರಿ
6 “ನಿಮ್ಮದೇವರಾದ ಯೆಹೋವನು ನಿಮಗೆ ಉಪದೇಶಿಸಲೆಂದು ನನಗೆ ಕೊಟ್ಟ ಆಜ್ಞೆಗಳು, ಕಟ್ಟಳೆಗಳು ಮತ್ತು ನಿಯಮಗಳು ಇವೇ. ನೀವು ವಾಸಮಾಡಲು ಪ್ರವೇಶಿಸಲಿರುವ ದೇಶದಲ್ಲಿ ಅವುಗಳನ್ನು ಪಾಲಿಸಿರಿ. 2 ನೀವೂ ಮತ್ತು ನಿಮ್ಮ ಸಂತತಿಯವರೂ ಜೀವಿಸುವ ದಿನಗಳಲ್ಲೆಲ್ಲಾ ದೇವರಾದ ಯೆಹೋವನನ್ನು ಗೌರವಿಸಬೇಕು. ನಾನೀಗ ಕೊಡುವ ಎಲ್ಲಾ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಅನುಸರಿಸಬೇಕು. ಹಾಗೆ ಮಾಡಿದ್ದಲ್ಲಿ ನೀವು ನೆಲೆಸುವ ಜಾಗದಲ್ಲಿ ನೀವು ಬಹುಕಾಲ ಜೀವಿಸುವಿರಿ. 3 ಇಸ್ರೇಲಿನ ಜನರೇ, ಕಿವಿಗೊಟ್ಟು ಕೇಳಿರಿ. ದೇವರ ಆಜ್ಞೆಗಳಿಗೆ ವಿಧೇಯರಾಗಿರಿ. ಆಗ ನಿಮಗೆ ಎಲ್ಲಾದರಲ್ಲಿ ಶುಭವಾಗುವುದು. ನಿಮಗೆ ಹೆಚ್ಚು ಮಕ್ಕಳಾಗುವವು. ನೀವು ನೆಲೆಸುವ ದೇಶವು ನಿಮ್ಮ ಪೂರ್ವಿಕರಿಗೆ ದೇವರು ವಾಗ್ದಾನ ಮಾಡಿದ ಪ್ರಕಾರ ಫಲಭರಿತವಾಗುವುದು.
4 “ಇಸ್ರೇಲಿನ ಜನರೇ, ಕಿವಿಗೊಡಿರಿ. ಯೆಹೋವನೇ ನಮ್ಮ ದೇವರು. ದೇವರು ಒಬ್ಬನೇ! 5 ನಿಮ್ಮ ದೇವರಾದ ಯೆಹೋವನನ್ನು ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. 6 ನಾನೀಗ ಕೊಡುವ ಆಜ್ಞೆಗಳನ್ನು ಯಾವಾಗಲೂ ನಿಮ್ಮ ಜ್ಞಾಪದಲ್ಲಿಟ್ಟುಕೊಂಡಿರಿ. 7 ನಿಮ್ಮ ಮಕ್ಕಳಿಗೆ ಇದನ್ನು ಕಲಿಸಲು ಮರೆಯಬೇಡಿರಿ. ನಿಮ್ಮ ಮನೆಗಳಲ್ಲಿ ಕುಳಿತಿರುವಾಗ, ರಸ್ತೆಗಳಲ್ಲಿ ನಡೆಯುತ್ತಿರುವಾಗ, ನೀವು ಮಲಗಿರುವಾಗ, ಎದ್ದಾಗ ಈ ಆಜ್ಞೆಗಳ ಕುರಿತಾಗಿ ಮಾತಾಡಿಕೊಳ್ಳಿರಿ. 8 ಈ ಆಜ್ಞೆಗಳನ್ನು ಬರೆದು ನಿಮ್ಮ ಕೈಗಳಿಗೆ ಕಟ್ಟಿರಿ, ನಿಮ್ಮ ಹಣೆಗಳ ಮೇಲೆ ಕಟ್ಟಿರಿ. ಇವು ನನ್ನ ಬೋಧನೆಯ ವಿಚಾರವಾಗಿ ನಿಮಗೆ ಜ್ಞಾಪಕ ಹುಟ್ಟಿಸಲು ಸಹಾಯವಾಗುವುದು. 9 ಅವುಗಳನ್ನು ನಿಮ್ಮ ಬಾಗಿಲಿನ ಮೇಲೆಯೂ ನಿಲುವುಪಟ್ಟಿಗಳ ಮೇಲೆಯೂ ಬರೆಯಿರಿ.
10 “ದೇವರಾದ ಯೆಹೋವನು ನಮಗೆ ಈ ದೇಶವನ್ನು ಕೊಡುವುದಾಗಿ ನಮ್ಮ ಪೂರ್ವಿಕರಾದ ಅಬ್ರಹಾಮನಿಗೆ, ಇಸಾಕನಿಗೆ ಮತ್ತು ಯಾಕೋಬನಿಗೆ ವಾಗ್ದಾನ ಮಾಡಿದ್ದನು. ಈಗ ಆ ದೇಶವನ್ನು ನಿಮಗೆ ಕೊಡುತ್ತಿದ್ದಾನೆ. ಅದರಲ್ಲಿರುವ ದೊಡ್ಡದೊಡ್ಡ ನಗರಗಳನ್ನು ನೀವು ಕೈಯಿಂದ ಕಟ್ಟಲಿಲ್ಲ. 11 ನೀವು ಕೂಡಿಸಿಡದ ಉತ್ತಮ ವಸ್ತುಗಳಿಂದ ತುಂಬಿರುವ ಮನೆಗಳನ್ನು ಯೆಹೋವನು ನಿಮಗೆ ಕೊಡುತ್ತಾನೆ. ನೀವು ತೋಡದಿರುವ ಬಾವಿಗಳನ್ನು ನಿಮಗೆ ಕೊಡುವನು. ನೀವು ನೆಡದಿರುವ ದ್ರಾಕ್ಷಾತೋಟಗಳನ್ನೂ ಎಣ್ಣೆಮರಗಳ ತೋಪುಗಳನ್ನೂ ನಿಮಗೆ ಕೊಡುವನು. ನಿಮಗೆ ತಿನ್ನಲು ಯಾವ ಕೊರತೆಯೂ ಇರುವುದಿಲ್ಲ.
12 “ನಿಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಿ ಆತನನ್ನೇ ಸೇವಿಸಿರಿ. ಆತನನ್ನು ಮರೆತುಬಿಡಬೇಡಿರಿ. ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಾಗ ಆತನೇ ನಿಮ್ಮನ್ನು ವಿಮೋಚಿಸಿದನಲ್ಲಾ? 13 ಆತನ ಹೆಸರಿನಲ್ಲಿಯೇ ವಾಗ್ದಾನಗಳನ್ನು ಮಾಡಿರಿ; ಅನ್ಯ ದೇವರ ಹೆಸರಿನಲ್ಲಿ ಮಾಡಕೂಡದು. 14 ಇತರ ದೇವರುಗಳನ್ನು ಅವಲಂಭಿಸಬಾರದು. ನಿಮ್ಮ ಸುತ್ತಲೂ ಇರುವವರ ದೇವರುಗಳನ್ನು ಪೂಜಿಸಬಾರದು. 15 ನಿಮ್ಮ ದೇವರಾದ ಯೆಹೋವನು ಯಾವಾಗಲೂ ನಿಮ್ಮ ಜೊತೆಯಲ್ಲಿರುವನು. ಸುಳ್ಳುದೇವರನ್ನು ಪೂಜಿಸುವವರನ್ನು ಯೆಹೋವನು ದ್ವೇಷಿಸುವುದರಿಂದ ಅವರನ್ನು ಈ ಲೋಕದಿಂದ ಅಳಿಸಿಬಿಡುವನು.
16 “ಮಸ್ಸಾದಲ್ಲಿ ನೀವು ನಿಮ್ಮ ದೇವರನ್ನು ಪರೀಕ್ಷಿಸಿದಂತೆ ಆತನನ್ನು ಪರೀಕ್ಷಿಸಬಾರದು. 17 ಆತನ ಆಜ್ಞೆಗಳಿಗೆ ವಿಧೇಯರಾಗಿರಲು ಎಚ್ಚರದಿಂದಿರಬೇಕು. ಆತನು ನಿಮಗೆ ಕೊಟ್ಟ ವಿಧಿನಿಯಮಗಳನ್ನು ಪರಿಪಾಲಿಸಲು ತಯಾರಾಗಿರಬೇಕು. 18 ಯೋಗ್ಯವಾದವುಗಳನ್ನು, ಸರಿಯಾದವುಗಳನ್ನು ಮತ್ತು ಯೆಹೋವನು ಮೆಚ್ಚುವ ಕಾರ್ಯಗಳನ್ನು ನೀವು ಮಾಡಬೇಕು. ಆಗ ನಿಮ್ಮ ಕಾರ್ಯಗಳೆಲ್ಲವೂ ಸಫಲವಾಗುವುವು. ಅಲ್ಲದೆ ಯೆಹೋವನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ದೇಶದೊಳಗೆ ನೀವು ಹೋಗಿ ಅದನ್ನು ವಶಪಡಿಸಿಕೊಳ್ಳಬಹುದು. 19 ಯೆಹೋವನು ಹೇಳಿದಂತೆಯೇ, ಅಲ್ಲಿ ವಾಸವಾಗಿರುವ ನಿಮ್ಮ ವೈರಿಗಳನ್ನೆಲ್ಲಾ ಹೊರಗಟ್ಟುವಿರಿ.
ದೇವರ ಕಾರ್ಯಗಳನ್ನು ನಿಮ್ಮ ಮಕ್ಕಳಿಗೆ ತಿಳಿಸಬೇಕು
20 “ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳು ನಿಮಗೆ ಈ ಪ್ರಶ್ನೆ ಕೇಳಬಹುದು: ‘ಯೆಹೋವದೇವರು ನಮಗೆ ನ್ಯಾಯವಿಧಿ, ನಿಯಮಗಳನ್ನು ಕೊಟ್ಟಿರುತ್ತಾನೆ. ಇವುಗಳ ಅರ್ಥವೇನು?’ 21 ಆಗ ನೀವು ಹೀಗೆ ಉತ್ತರಿಸಬೇಕು: ‘ನಾವು ಈಜಿಪ್ಟಿನಲ್ಲಿ ಫರೋಹನ ಗುಲಾಮರಾಗಿದ್ದೆವು. ಆದರೆ ನಮ್ಮ ದೇವರಾದ ಯೆಹೋವನು ತನ್ನ ಪರಾಕ್ರಮದಿಂದ ನಮ್ಮನ್ನು ಬಿಡುಗಡೆ ಮಾಡಿದನು. 22 ಯೆಹೋವನು ಈಜಿಪ್ಟಿನವರನ್ನೂ ಫರೋಹನನ್ನೂ ಅವನ ಪರಿವಾರದವರನ್ನೂ ಸೂಚಕಕಾರ್ಯಗಳಿಂದಲೂ ಅದ್ಭುತಕಾರ್ಯಗಳಿಂದಲೂ ಮಹತ್ಕಾರ್ಯಗಳಿಂದಲೂ ಭಯಂಕರ ಕಾರ್ಯಗಳಿಂದಲೂ ಬಾಧಿಸಿದನು. 23 ಯೆಹೋವನು ನಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನದಂತೆ ನಮಗೆ ಆ ದೇಶವನ್ನು ಕೊಡುವುದಕ್ಕಾಗಿ ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. 24 ಈ ಉಪದೇಶಗಳನ್ನೆಲ್ಲಾ ಅನುಸರಿಸಬೇಕೆಂದು ಯೆಹೋವನು ನಮಗೆ ಆಜ್ಞಾಪಿಸಿದ್ದಾನೆ. ನಮ್ಮ ದೇವರಾದ ಯೆಹೋವನನ್ನು ನಾವು ಗೌರವಿಸತಕ್ಕದ್ದು. ಆಗ ಇಂದಿನಂತೆ ಯೆಹೋವನು ನಮ್ಮನ್ನು ಜೀವಂತವಾಗಿರಿಸಿ ನಮಗೆ ಒಳ್ಳೆಯದನ್ನು ಮಾಡುತ್ತಾನೆ. 25 ನಮ್ಮ ದೇವರಾದ ಯೆಹೋವನು ಹೇಳಿದಂತೆಯೇ, ಇಡೀ ಧರ್ಮಶಾಸ್ತ್ರಕ್ಕೆ ನಾವು ಚಾಚೂತಪ್ಪದೆ ಎಚ್ಚರಿಕೆಯಿಂದ ವಿಧೇಯರಾದರೆ, ನಾವು ಒಳ್ಳೆಯದನ್ನು ಮಾಡಿದೆವೆಂದು ದೇವರು ಹೇಳುತ್ತಾನೆ.’
ರಚನೆಗಾರ: ಜೇರಹ ಕುಟುಂಬದ ಏತಾನ.
89 ಯೆಹೋವನೇ, ನಿನ್ನ ಪ್ರೀತಿಯನ್ನೂ
ನಂಬಿಗಸ್ತಿಕೆಯನ್ನೂ ಸದಾಕಾಲ ಹಾಡಿ ಕೊಂಡಾಡುವೆನು!
2 ನಿನ್ನ ಶಾಶ್ವತ ಪ್ರೀತಿಯಲ್ಲಿ ನನಗೆ ದೃಢವಾದ ನಂಬಿಕೆಯಿದೆ.
ನಿನ್ನ ನಂಬಿಗಸ್ತಿಕೆಯು ಆಕಾಶಗಳಂತೆ ಶಾಶ್ವತವಾಗಿದೆ.
3 ಆತನು ಹೇಳಿದ್ದೇನೆಂದರೆ: “ನಾನು ಆರಿಸಿಕೊಂಡ ರಾಜನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡೆನು.
ನನ್ನ ಸೇವಕನಾದ ದಾವೀದನಿಗೆ ಒಂದು ವಾಗ್ದಾನವನ್ನು ಮಾಡಿದೆನು; ಅದೇನೆಂದರೆ,
4 ‘ದಾವೀದನೇ, ನಿನ್ನ ಕುಟುಂಬವನ್ನು ಶಾಶ್ವಾತಗೊಳಿಸುವೆನು,
ನಿನ್ನ ರಾಜ್ಯವನ್ನೂ ಶಾಶ್ವತಗೊಳಿಸುವೆನು.’”
5 ಯೆಹೋವನೇ, ನಿನ್ನ ಮಹತ್ಕಾರ್ಯಗಳ ಕುರಿತು ಆಕಾಶಮಂಡಲವು ಸ್ತುತಿಸುತ್ತಿದೆ.
ಪರಿಶುದ್ಧರ ಸಭೆಯು ಅವುಗಳ ಕುರಿತು ಹಾಡಿಕೊಂಡಾಡುವುದು.
6 ಪರಲೋಕದಲ್ಲಿ ಯಾವನೂ ಯೆಹೋವನಿಗೆ ಸಮಾನನಲ್ಲ.
ಯಾವ ದೇವರುಗಳನ್ನೂ ಯೆಹೋವನಿಗೆ ಹೋಲಿಸಲಾಗದು.
7 ದೇವರು ಪರಿಶುದ್ಧರ ಸಭೆ ಸೇರಿಸುವನು.
ಆ ದೇವದೂತರೆಲ್ಲಾ ಆತನ ಸುತ್ತಲೂ ಸೇರಿಬರುವರು.
ಅವರು ದೇವರಲ್ಲಿ ಭಯಭಕ್ತಿಯಿಂದಿರುವರು.
ಆತನಿಗೆ ಭಯಪಡುತ್ತಾ ಆತನ ಸನ್ನಿಧಿಯಲ್ಲಿ ನಿಂತುಕೊಳ್ಳುವರು.
8 ಸೇನಾಧೀಶ್ವರನಾದ ಯೆಹೋವ ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ.
ನೀನು ನಮ್ಮ ಸಂಪೂರ್ಣಭರವಸೆಗೆ ಯೋಗ್ಯನಾಗಿರುವೆ.
9 ಸಮುದ್ರವು ನಿನ್ನ ಅಧೀನದಲ್ಲಿದೆ.
ಅದರ ರೋಷದ ಅಲೆಗಳನ್ನು ನೀನು ಶಾಂತಗೊಳಿಸುವೆ.
10 ರಹಾಬನನ್ನು ಸೋಲಿಸಿದಾತನು ನೀನೇ.
ನಿನ್ನ ಭುಜಬಲದಿಂದ ನೀನು ಶತ್ರುಗಳನ್ನು ಚದರಿಸಿಬಿಟ್ಟಿ.
11 ದೇವರೇ, ಭೂಮ್ಯಾಕಾಶಗಳಲ್ಲಿರುವುದೆಲ್ಲಾ ನಿನ್ನವೇ.
ಪ್ರಪಂಚವನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ.
12 ಉತ್ತರ, ದಕ್ಷಿಣ ದಿಕ್ಕುಗಳನ್ನೂ ಪ್ರತಿಯೊಂದನ್ನೂ ಸೃಷ್ಟಿಸಿದಾತನು ನೀನೇ.
ತಾಬೋರ್ ಮತ್ತು ಹೆರ್ಮೋನ್ ಬೆಟ್ಟಗಳು ನಿನ್ನ ಹೆಸರನ್ನು ಸಂಕೀರ್ತಿಸುತ್ತವೆ.
13 ದೇವರೇ, ಬಲವು ನಿನ್ನಲ್ಲೇ ಇದೆ.
ನಿನ್ನ ಬಲವು ಮಹಾ ಬಲವೇ ಸರಿ!
ಜಯವಂತೂ ನಿನ್ನದೇ!
14 ನಿನ್ನ ರಾಜ್ಯವು ಸತ್ಯದ ಮೇಲೆಯೂ ನ್ಯಾಯದ ಮೇಲೆಯೂ ಕಟ್ಟಲ್ಪಟ್ಟಿದೆ.
ನಿನ್ನ ಸಿಂಹಾಸನದ ಮುಂದೆ ಪ್ರೀತಿಯೂ ನಂಬಿಗಸ್ತಿಕೆಯೂ ಸೇವಕರುಗಳಾಗಿವೆ.
15 ಯೆಹೋವನೇ, ನಿನ್ನ ಸದ್ಭಕ್ತರು ನಿಜವಾಗಿಯೂ ಸಂತೋಷವಾಗಿದ್ದಾರೆ.
ಅವರು ನಿನ್ನ ಕರುಣೆಯ ಬೆಳಕಿನಲ್ಲಿ ವಾಸಿಸುತ್ತಿದ್ದಾರೆ.
16 ನಿನ್ನ ಹೆಸರು ಅವರನ್ನು ಯಾವಾಗಲೂ ಸಂತೋಷಗೊಳಿಸುತ್ತದೆ.
ಅವರು ನಿನ್ನ ನೀತಿಯನ್ನು ಸ್ತುತಿಸುವರು.
17 ನೀನೇ ಅವರ ಅದ್ಭುತ ಶಕ್ತಿಯಾಗಿರುವೆ.
ಅವರ ಶಕ್ತಿಯು ನಿನ್ನಿಂದಲೇ ಬರುತ್ತದೆ.
18 ಯೆಹೋವನೇ, ನೀನೇ ನಮ್ಮ ಸಂರಕ್ಷಕನು.
ಇಸ್ರೇಲಿನ ಪರಿಶುದ್ಧನೇ ನಮ್ಮ ರಾಜನು.
19 ನೀನು ನಿನ್ನ ಸದ್ಭಕ್ತರೊಂದಿಗೆ ದರ್ಶನದಲ್ಲಿ ಮಾತಾಡಿದ್ದೇನೆಂದರೆ:
“ಯುದ್ಧವೀರನೊಬ್ಬನಿಗೆ ಬಲವನ್ನು ಅನುಗ್ರಹಿಸಿದೆ.
ಜನಸಮೂಹದಿಂದ ಒಬ್ಬ ಯೌವನಸ್ಥನನ್ನು ಆರಿಸಿಕೊಂಡು
ಗಣ್ಯವ್ಯಕ್ತಿಯನ್ನಾಗಿ ಮಾಡಿದೆ.
20 ನನ್ನ ಸೇವಕನಾದ ದಾವೀದನನ್ನು ಕಂಡುಕೊಂಡೆ.
ನನ್ನ ವಿಶೇಷವಾದ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದೆ.
21 ನನ್ನ ಬಲಗೈಯಿಂದ ದಾವೀದನಿಗೆ ಬೆಂಬಲ ನೀಡಿದೆ,
ನನ್ನ ಶಕ್ತಿಯಿಂದ ಅವನನ್ನು ಬಲಗೊಳಿಸಿದೆ.
22 ನಾನು ಆರಿಸಿಕೊಂಡ ರಾಜನನ್ನು ಸೋಲಿಸಲು ಶತ್ರುವಿಗೆ ಆಗಲಿಲ್ಲ.
ಅವನನ್ನು ಸೋಲಿಸಲು ದುಷ್ಟಜನರಿಗೆ ಆಗಲಿಲ್ಲ.
23 ನಾನು ಅವನ ಶತ್ರುಗಳನ್ನು ಮುಗಿಸಿದೆನು.
ನಾನು ಆರಿಸಿಕೊಂಡ ರಾಜನ ಮೇಲೆ ದ್ವೇಷಕಾರಿದ ಜನರನ್ನು ಸೋಲಿಸಿದೆನು.
24 ನಾನು ಆರಿಸಿಕೊಂಡ ರಾಜನನ್ನು ಯಾವಾಗಲೂ ಪ್ರೀತಿಸುವೆನು; ಅವನಿಗೆ ಬೆಂಬಲ ನೀಡುವೆನು.
ನಾನು ಅವನನ್ನು ಯಾವಾಗಲೂ ಬಲಗೊಳಿಸುವೆನು.
25 ನಾನು ಆರಿಸಿಕೊಂಡ ರಾಜನನ್ನು ಸಮುದ್ರದ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು.
ಅವನು ನದಿಗಳನ್ನು ಹತೋಟಿಯಲ್ಲಿಡುವನು.
26 ಅವನು ನನಗೆ, ‘ನೀನೇ ನನ್ನ ತಂದೆ; ನೀನೇ ನನ್ನ ದೇವರು.
ನೀನೇ ನನ್ನ ಬಂಡೆ; ನೀನೇ ನನ್ನ ರಕ್ಷಕ’ ಎಂದು ಹೇಳುವನು.
27 ನಾನು ಅವನನ್ನು ನನ್ನ ಚೊಚ್ಚಲು ಮಗನನ್ನಾಗಿ ಮಾಡುವೆನು.
ಅವನು ಭೂಲೋಕದಲ್ಲಿ ಮಹಾರಾಜನಾಗಿರುವನು.
28 ನಾನು ಆರಿಸಿಕೊಂಡ ರಾಜನನ್ನು ನನ್ನ ಪ್ರೀತಿಯು ಸದಾಕಾಲ ಸಂರಕ್ಷಿಸುವುದು.
ನಾನು ಅವನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯು ಎಂದಿಗೂ ಕೊನೆಯಾಗದು.
29 ಅವನ ಕುಟುಂಬವು ಶಾಶ್ವತವಾಗಿರುವುದು.
ಅವನ ರಾಜ್ಯವು ಆಕಾಶಗಳಿರುವವರೆಗೂ ಇರುವುದು.
30 ಅವನ ಸಂತತಿಯವರು ನನ್ನ ಧರ್ಮಶಾಸ್ತ್ರವನ್ನು ತೊರೆದುಬಿಟ್ಟು
ನನ್ನ ಆಜ್ಞೆಗಳಿಗೆ ಅವಿಧೇಯರಾದರೆ ಅವರನ್ನು ಶಿಕ್ಷಿಸುವೆನು.
31 ನಾನು ಆರಿಸಿಕೊಂಡ ರಾಜನ ಸಂತತಿಯವರು
ನನ್ನ ಕಟ್ಟಳೆಗಳನ್ನು ಉಲ್ಲಂಘಿಸಿ ನನ್ನ ಆಜ್ಞೆಗಳನ್ನು ಅಲಕ್ಷಿಸಿದರೆ,
32 ನಾನು ಅವರನ್ನು ಅವರ ದ್ರೋಹಕ್ಕಾಗಿ ಬಹು ಕಠಿಣವಾಗಿ ಶಿಕ್ಷಿಸುವೆನು.
ಅವರ ಅಪರಾಧಕ್ಕಾಗಿ ಬೆತ್ತದಿಂದ ಹೊಡೆಯುವೆನು.
33 ಆದರೆ ಅವರ ಮೇಲೆ ನನಗಿರುವ ಪ್ರೀತಿಯು ಎಂದಿಗೂ ನಿಂತುಹೋಗುವುದಿಲ್ಲ.
ನಾನು ಅವರಿಗೆ ಯಾವಾಗಲೂ ನಂಬಿಗಸ್ತನಾಗಿರುವೆನು.
34 ನಾನು ದಾವೀದನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ನು
ಮುರಿದುಹಾಕುವುದೂ ಇಲ್ಲ, ಬದಲಾಯಿಸುವುದೂ ಇಲ್ಲ.
35 ನನ್ನ ಪವಿತ್ರತ್ವದ ಮೇಲೆ ಆಣೆಯಿಟ್ಟು ದಾವೀದನಿಗೆ ವಿಶೇಷವಾದ ವಾಗ್ದಾನವನ್ನು ಮಾಡಿದೆನು.
ನಾನು ದಾವೀದನಿಗೆ ಸುಳ್ಳುಗಾರನಾಗುವುದಿಲ್ಲ.
36 ದಾವೀದನ ಕುಟುಂಬವು ಶಾಶ್ವತವಾಗಿರುವುದು.
ಅವನ ರಾಜ್ಯವು ಸೂರ್ಯನು ಇರುವವರೆಗೂ ಇರುವುದು.
37 ಅದು ಚಂದ್ರನಂತೆ ಶಾಶ್ವತವಾಗಿರುವುದು.
ಈ ಒಪ್ಪಂದಕ್ಕೆ ಆಕಾಶವೇ ಸಾಕ್ಷಿ.
ಈ ಒಪ್ಪಂದವು ನಂಬಿಕೆಗೆ ಯೋಗ್ಯವಾಗಿದೆ.”
38 ಆದರೆ ನೀನು ಅಭಿಷೇಕಿಸಿದ ರಾಜನ ಮೇಲೆ ನೀನು ಕೋಪಗೊಂಡಿದ್ದರಿಂದಲೇ
ಅವನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಟ್ಟೆ.
39 ನೀನು ನಿನ್ನ ಒಡಂಬಡಿಕೆಯನ್ನು ತಿರಸ್ಕರಿಸಿ
ಅವನ ಕಿರೀಟವನ್ನು ನೆಲದ ಮೇಲೆ ಎಸೆದುಬಿಟ್ಟೆ.
40 ಅವನ ಪಟ್ಟಣದ ಗೋಡೆಗಳನ್ನು ಕೆಡವಿಹಾಕಿದೆ;
ಅವನ ರಕ್ಷಣಾದುರ್ಗಗಳನ್ನೆಲ್ಲಾ ನಾಶಮಾಡಿದೆ.
41 ಅವನ ನೆರೆಹೊರೆಯವರು ಅವನನ್ನು ನೋಡಿ ನಗುವರು.
ದಾರಿಯಲ್ಲಿ ಹಾದುಹೋಗುವವರು ಅವನಿಂದ ವಸ್ತುಗಳನ್ನು ಕದ್ದುಕೊಳ್ಳುವರು.
42 ಅವನ ಶತ್ರುಗಳಿಗೆಲ್ಲಾ ನೀನು ಸಂತೋಷವನ್ನುಂಟು ಮಾಡಿರುವೆ.
ಅವನ ಶತ್ರುಗಳಿಗೆ ಯುದ್ಧದಲ್ಲಿ ಜಯವಾಗುವಂತೆ ಮಾಡಿರುವೆ.
43 ತಮ್ಮನ್ನು ರಕ್ಷಿಸಿಕೊಳ್ಳಲು ನೀನು ಅವರಿಗೆ ಸಹಾಯ ಮಾಡಿದೆ.
ನಿನ್ನ ರಾಜನಿಗಾದರೋ ಯುದ್ಧದಲ್ಲಿ ಗೆಲ್ಲಲು ಸಹಾಯಮಾಡಲಿಲ್ಲ.
44 ನೀನು ಅವನ ತೇಜಸ್ಸನ್ನು ತಡೆದುಬಿಟ್ಟಿದ್ದಿ;
ನೀನು ಅವನ ಸಿಂಹಾಸನವನ್ನು ನೆಲಕ್ಕೆ ಉರುಳಿಸಿಬಿಟ್ಟೆ.
45 ನೀನು ಅವನ ಜೀವಿತವನ್ನು ಮೊಟಕುಗೊಳಿಸಿ
ಅವನಿಗೆ ಅವಮಾನ ಮಾಡಿದೆ.
46 ಯೆಹೋವನೇ, ಇನ್ನೆಷ್ಟರವರೆಗೆ ನೀನು ನಮಗೆ ಮರೆಯಾಗಿರುವೆ?
ನಿನ್ನ ಕೋಪಾಗ್ನಿಯು ನಮ್ಮ ಮೇಲೆ ಶಾಶ್ವತವಾಗಿ ಉರಿಯುವುದೋ?
47 ನಮ್ಮ ಜೀವಿತಕಾಲ ಸ್ವಲ್ಪವೆಂಬುದನ್ನು ಜ್ಞಾಪಿಸಿಕೊ.
ನಾವು ಸ್ವಲ್ಪಕಾಲ ಬದುಕಿ ಸಾಯುವುದಕ್ಕಾಗಿಯೇ ನೀನು ನಮ್ಮನ್ನು ಸೃಷ್ಟಿಸಿದೆ.
48 ಮರಣ ಹೊಂದದೆ ಚಿರಂಜೀವಿಯಾಗಿರುವವನು ಯಾರೂ ಇಲ್ಲ.
ಯಾವ ವ್ಯಕ್ತಿಯೂ ಸಮಾಧಿಯಿಂದ ತಪ್ಪಿಸಿಕೊಳ್ಳಲಾರನು.
49 ಯೆಹೋವನೇ, ಹಿಂದಿನಕಾಲದಲ್ಲಿ ನೀನು ತೋರಿದ ಪ್ರೀತಿ ಎಲ್ಲಿ ಹೋಯಿತು?
ದಾವೀದ ಕುಟುಂಬಕ್ಕೆ ನಂಬಿಗಸ್ತನಾಗಿರುತ್ತೇನೆಂದು ನೀನು ವಾಗ್ದಾನ ಮಾಡಿದೆಯಲ್ಲಾ!
50-51 ಯೆಹೋವನೇ ನಿನ್ನ ಸೇವಕನಿಗೆ ಜನರು ಮಾಡಿದ ಅವಮಾನವನ್ನು ದಯವಿಟ್ಟು ಜ್ಞಾಪಿಸಿಕೊ.
ಯೆಹೋವನೇ, ನಿನ್ನ ಶತ್ರುಗಳಿಂದ ಅವಮಾನಕರವಾದ ಮಾತುಗಳನ್ನು ನಾನು ಕೇಳಬೇಕಾಯಿತು.
ನೀನು ಅಭಿಷೇಕಿಸಿದ ರಾಜನನ್ನು ಅವರು ಅವಮಾನ ಮಾಡಿದರು!
52 ಯೆಹೋವನನ್ನು ಎಂದೆಂದಿಗೂ ಕೊಂಡಾಡಿರಿ!
ಆಮೆನ್, ಆಮೆನ್!
ದೇವರು ತನ್ನ ಶತ್ರುಗಳನ್ನು ಶಿಕ್ಷಿಸುತ್ತಾನೆ
34 ಎಲ್ಲಾ ಜನಾಂಗಗಳೇ, ಹತ್ತಿರ ಬಂದು ಕೇಳಿರಿ; ಜನಗಳೇ ಸ್ಪಷ್ಟವಾಗಿ ಕೇಳಿಸಿಕೊಳ್ಳಿರಿ. ಭೂಮಿಯೂ ಭೂಮಿಯ ಮೇಲಿರುವ ಸಮಸ್ತವೂ ಅವುಗಳಿಗೆ ಕಿವಿಗೊಡಬೇಕು. ಲೋಕವೂ ಅದರಲ್ಲಿರುವ ಸಮಸ್ತವೂ ಆಲಿಸಲಿ. 2 ಯೆಹೋವನು ಎಲ್ಲಾ ದೇಶಗಳವರ ಮೇಲೆಯೂ ಅವುಗಳ ಸೈನ್ಯದ ಮೇಲೆಯೂ ಕೋಪಗೊಂಡಿದ್ದಾನೆ. ಯೆಹೋವನು ಅವರೆಲ್ಲರನ್ನು ನಾಶಮಾಡುತ್ತಾನೆ. ಅವರೆಲ್ಲರೂ ಕೊಲ್ಲಲ್ಪಡುವಂತೆ ಮಾಡುತ್ತಾನೆ. 3 ಅವರ ಹೆಣಗಳು ಹೊರಗೆ ಬಿಸಾಡಲ್ಪಡುವವು. ದುರ್ವಾಸನೆಯು ಹರಡುವದು, ರಕ್ತವು ಪರ್ವತದಿಂದ ಹರಿಯುವುದು. 4 ಆಕಾಶವು ಸುರುಳಿಯಂತೆ ಮುಚ್ಚಿಹೋಗುವದು. ನಕ್ಷತ್ರಗಳು ದ್ರಾಕ್ಷಾಲತೆಯ ಒಣಗಿದ ಎಲೆಗಳಂತೆಯೂ ಅಂಜೂರದ ಒಣಗಿದ ಎಲೆಗಳಂತೆಯೂ ಉದುರಿಬೀಳುವವು. ಆಕಾಶದಲ್ಲಿರುವ ಎಲ್ಲಾ ನಕ್ಷತ್ರಗಳು ಕರಗಿಹೋಗುವವು. 5 “ಆಕಾಶದಲ್ಲಿರುವ ನನ್ನ ಖಡ್ಗವು ರಕ್ತದಲ್ಲಿ ಮುಳುಗಿದಾಗ ಇವೆಲ್ಲಾ ಸಂಭವಿಸುವದು” ಎಂದು ಯೆಹೋವನು ಅನ್ನುತ್ತಾನೆ.
ಯೆಹೋವನ ಖಡ್ಗವು ಎದೋಮನ್ನು ತುಂಡರಿಸುವುದು. ಆತನು ಆ ಜನರನ್ನು ದೋಷಿಗಳೆಂದು ನ್ಯಾಯತೀರಿಸಿದ್ದಾನೆ. ಆದ್ದರಿಂದ ಅವರು ಸಾಯಬೇಕು. 6 ಆತನು ಬೊಚ್ರದಲ್ಲಿ ಮತ್ತು ಎದೋಮಿನಲ್ಲಿ ಕೊಲ್ಲುವ ಸಮಯವನ್ನು ನಿರ್ಧರಿಸಿರುತ್ತಾನೆ. ಯೆಹೋವನ ಖಡ್ಗವು ವಪೆಯಿಂದಲೂ, ಕುರಿಹೋತಗಳ ರಕ್ತದಿಂದಲೂ, ಟಗರುಗಳ ಪಿತ್ತಕೋಶದ ಕೊಬ್ಬಿನಿಂದಲೂ ರಕ್ತಭರಿತವಾಗಿದೆ. 7 ಟಗರುಗಳು, ದನಕುರಿಗಳು ಮತ್ತು ಬಲವಾದ ಹೋರಿಗಳು ಕೊಲ್ಲಲ್ಪಡುವವು. ಭೂಮಿಯು ಅವುಗಳ ರಕ್ತದಿಂದ ತುಂಬಿಹೋಗುವದು. ಅಲ್ಲಿನ ಧೂಳು ಅವುಗಳ ಕೊಬ್ಬಿನಿಂದ ಆವೃತವಾಗಿದೆ.
8 ಇದು ನೆರವೇರುವುದು, ಯಾಕೆಂದರೆ ದೇವರು ದಂಡನೆಗಾಗಿ ಸಮಯವನ್ನು ಆರಿಸಿಕೊಂಡಿದ್ದಾನೆ. ಜನರು ಚೀಯೋನಿನಲ್ಲಿ ಮಾಡಿದ ಕಾರ್ಯಗಳಿಗೆ ದಂಡನೆಯನ್ನು ಅನುಭವಿಸುವುದಕ್ಕಾಗಿ ಆತನು ಒಂದು ವರ್ಷವನ್ನು ಆರಿಸಿಕೊಂಡಿದ್ದಾನೆ. 9 ಎದೋಮಿನ ನದಿಗಳು ಕರಗಿರುವ ರಾಳದಂತಿರುವದು. ಅದರ ನೆಲವು ಸುಡುವ ಗಂಧಕದಂತಿರುವದು. 10 ಬೆಂಕಿಯು ಹಗಲಿರುಳು ಉರಿಯುವದು. ಯಾರಿಗೂ ಅದನ್ನು ನಂದಿಸಲು ಸಾಧ್ಯವಿಲ್ಲ. ಎದೋಮಿನಿಂದ ಹೊಗೆಯು ಯಾವಾಗಲೂ ಮೇಲಕ್ಕೇರುವದು. ಆ ದೇಶವು ನಿತ್ಯಕಾಲಕ್ಕೂ ನಾಶವಾಗಿ ಹೋಗುವದು. ಆ ದೇಶದೊಳಗೆ ಯಾರೂ ಪ್ರಯಾಣ ಮಾಡುವದಿಲ್ಲ. 11 ಪಕ್ಷಿಗಳು ಮತ್ತು ಚಿಕ್ಕಪ್ರಾಣಿಗಳೂ ಅದರಲ್ಲಿ ವಾಸಿಸುವವು. ಗೂಬೆಗಳೂ ಕಾಗೆಗಳೂ ಅಲ್ಲಿ ವಾಸಿಸುವವು. ಅದು “ಬೆಂಗಾಡಿನ ಮರುಭೂಮಿ” ಎಂದು ಕರೆಯಲ್ಪಡುವದು. 12 ಅದರ ನಾಯಕರೂ ಸ್ವತಂತ್ರರೂ[a] ಇಲ್ಲವಾಗುವರು; ಯಾಕೆಂದರೆ ಅವರಿಗೆ ಆಳಲಿಕ್ಕೆ ಅಲ್ಲಿ ಏನೂ ಇರದು.
13 ಮುಳ್ಳುಗಿಡಗಳು ಅಲ್ಲಿಯ ಸುಂದರವಾದ ಬಂಗಲೆಗಳಲ್ಲಿ ಬೆಳೆಯುವವು. ಕಾಡುನಾಯಿಗಳೂ ಗೂಬೆಗಳೂ ಆ ಮನೆಗಳಲ್ಲಿ ವಾಸಿಸುವವು. ಕಾಡುಪ್ರಾಣಿಗಳು ಅದನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುವವು. ಅಲ್ಲಿ ಬೆಳೆಯುವ ಎತ್ತರವಾದ ಹುಲ್ಲುಗಳಲ್ಲಿ ಉಷ್ಟ್ರಪಕ್ಷಿಗಳು ವಾಸಮಾಡುವವು. 14 ಕಾಡುಬೆಕ್ಕುಗಳು ಮತ್ತು ಕತ್ತೆಕಿರುಬಗಳು ಅಲ್ಲಿ ವಾಸಮಾಡುವವು. ಕಾಡುಹೋತಗಳು ತಮ್ಮ ಸ್ನೇಹಿತರನ್ನು ಕರೆಯುವವು. ರಾತ್ರಿಪ್ರಾಣಿಗಳು ಅಲ್ಲಿ ವಿಶ್ರಮಿಸಿಕೊಳ್ಳುವವು. 15 ಅಲ್ಲಿ ಹಾವುಗಳು ತಮ್ಮ ಮನೆಗಳನ್ನು ಮಾಡಿಕೊಳ್ಳುವವು. ಅಲ್ಲಿಯೇ ಮೊಟ್ಟೆಗಳನ್ನಿಡುವವು, ಮೊಟ್ಟೆಗಳು ಒಡೆದಾಗ ಸಣ್ಣ ಹಾವುಮರಿಗಳು ಆ ಕತ್ತಲೆಯ ಜಾಗದಲ್ಲಿ ಹರಿದಾಡುವವು. ಹೆಂಗಸರು ಪರಸ್ಪರ ಸಂಧಿಸಿ ಮಾತನಾಡುವಂತೆ ಸತ್ತಪ್ರಾಣಿಗಳ ಮಾಂಸವನ್ನು ತಿನ್ನುವ ಪಕ್ಷಿಗಳು ಒಟ್ಟಾಗಿ ಸೇರುವವು.
16 ಯೆಹೋವನ ಸುರುಳಿಯನ್ನು ನೋಡಿರಿ. ಅಲ್ಲಿ ಬರೆದಿರುವದನ್ನು ಓದಿರಿ. ಅದರಲ್ಲಿ ಯಾವದೂ ಕಳೆದುಹೋಗಿಲ್ಲ. ಆ ಪ್ರಾಣಿಗಳು ಒಟ್ಟಾಗಿ ವಾಸಿಸುವವೆಂದು ಆ ಸುರುಳಿಯಲ್ಲಿ ಬರೆದದೆ. ಅವುಗಳನ್ನು ಒಟ್ಟಾಗಿ ಸೇರಿಸುತ್ತೇನೆಂದು ದೇವರು ಹೇಳಿದ್ದಾನೆ. ಆದ್ದರಿಂದ ಯೆಹೋವನ ಆತ್ಮವು ಅವುಗಳನ್ನು ಒಟ್ಟಾಗಿ ಸೇರಿಸುವದು. 17 ಅವುಗಳಿಗೆ ಮಾಡತಕ್ಕದ್ದನ್ನು ದೇವರು ತೀರ್ಮಾನಿಸಿದ್ದಾನೆ. ಆತನು ಅವುಗಳಿಗೆ ಒಂದು ಸ್ಥಳವನ್ನು ಆರಿಸಿದ್ದಾನೆ. ಆತನು ಮೇರೆಯನ್ನು ನಿರ್ಮಿಸಿ ಅವುಗಳ ದೇಶವನ್ನು ತೋರಿಸಿದ್ದಾನೆ. ಹೀಗೆ ಆ ಪ್ರಾಣಿಗಳು ದೇಶವನ್ನು ನಿತ್ಯಕಾಲಕ್ಕೂ ತಮ್ಮದಾಗಿ ಮಾಡಿಕೊಳ್ಳುವವು. ವರ್ಷವರ್ಷವೂ ಅವುಗಳು ಅಲ್ಲಿಯೇ ವಾಸಮಾಡುವವು.
ಯೋಹಾನನು ಪರಲೋಕವನ್ನು ನೋಡಿದನು
4 ನಂತರ ನಾನು ನೋಡಿದಾಗ ನನ್ನ ಎದುರಿನಲ್ಲಿ ಪರಲೋಕದ ಬಾಗಿಲು ತೆರೆದಿರುವುದನ್ನು ಕಂಡೆನು. ನನ್ನ ಜೊತೆಯಲ್ಲಿ ಮೊದಲು ಮಾತನಾಡಿದ್ದ ಧ್ವನಿಯೇ ಮತ್ತೆ ನನ್ನೊಂದಿಗೆ ಮಾತಾಡಿತು. ಆ ಧ್ವನಿಯು ತುತೂರಿಯ ಧ್ವನಿಯಂತಿತ್ತು. ಆ ಧ್ವನಿಯು, “ಇಲ್ಲಿಗೆ ಹತ್ತಿ ಬಾ. ಮುಂದೆ ಸಂಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ” ಎಂದು ಹೇಳಿತು. 2 ಕೂಡಲೇ ನಾನು ಪವಿತ್ರಾತ್ಮನ ವಶನಾದೆನು. ಪರಲೋಕದಲ್ಲಿ ನನ್ನೆದುರಿಗೆ ಒಂದು ಸಿಂಹಾಸನವಿತ್ತು. ಯಾರೋ ಒಬ್ಬನು ಆ ಸಿಂಹಾಸನದ ಮೇಲೆ ಕುಳಿತಿದ್ದನು. 3 ಸಿಂಹಾಸನದ ಮೇಲೆ ಕುಳಿತಿದ್ದಾತನು ಅಮೂಲ್ಯವಾದ ಸೂರ್ಯಕಾಂತ, ಪದ್ಮರಾಗ ಮಣಿಗಳಂತೆ ಕಾಣುತ್ತಿದ್ದನು. ಸಿಂಹಾಸನದ ಸುತ್ತಲೂ ಪಚ್ಚೆಬಣ್ಣದ ಕಾಮನಬಿಲ್ಲಿತ್ತು.
4 ಆ ಸಿಂಹಾಸನದ ಸುತ್ತಲೂ ಇಪ್ಪತ್ನಾಲ್ಕು ಮಂದಿ ಹಿರಿಯರು ಕುಳಿತುಕೊಂಡಿದ್ದರು. ಅವರು ಬಿಳಿ ವಸ್ತ್ರಗಳನ್ನು ಧರಿಸಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. 5 ಆ ಸಿಂಹಾಸನದಿಂದ ಸಿಡಿಲಿನ ಆರ್ಭಟವೂ ಗುಡುಗಿನ ಧ್ವನಿಯೂ ಬರುತ್ತಿತ್ತು. ಆ ಸಿಂಹಾಸನದ ಮುಂದೆ ಏಳು ದೀಪಗಳು ಬೆಳಗುತ್ತಿದ್ದವು. ಈ ದೀಪಗಳು ದೇವರ ಏಳು ಆತ್ಮಗಳಾಗಿದ್ದವು. 6 ಇದಲ್ಲದೆ ಸಿಂಹಾಸನದ ಮುಂದೆ ಗಾಜಿನ ಸಮುದ್ರದಂತೆ ಕಾಣುವ ವಸ್ತುವೊಂದಿತ್ತು. ಅದು ಸ್ಫಟಿಕದಂತೆ ಸ್ಪಚ್ಛವಾಗಿತ್ತು.
ಆ ಸಿಂಹಾಸನದ ಮುಂದೆ ಮತ್ತು ಅದರ ಪ್ರತಿಯೊಂದು ಮಗ್ಗುಲಿನಲ್ಲೂ ನಾಲ್ಕು ಜೀವಿಗಳಿದ್ದವು. ಈ ಜೀವಿಗಳ ಹಿಂಭಾಗದಲ್ಲೆಲ್ಲಾ ಮತ್ತು ಮುಂಭಾಗದಲ್ಲೆಲ್ಲಾ ಕಣ್ಣುಗಳು ತುಂಬಿದ್ದವು. 7 ಮೊದಲನೆ ಜೀವಿಯು ಸಿಂಹದಂತಿತ್ತು. ಎರಡನೆಯದು ಹಸುವಿನಂತಿತ್ತು. ಮೂರನೆಯದರ ಮುಖ ಮಾನವನ ಮುಖದಂತಿತ್ತು. ನಾಲ್ಕನೆಯದು ಹಾರುವ ಗರುಡನಂತಿತ್ತು.[a] 8 ಈ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಈ ಜೀವಿಗಳ ಹೊರಭಾಗದಲ್ಲೆಲ್ಲಾ ಮತ್ತು ಒಳಭಾಗದಲ್ಲೆಲ್ಲಾ ಕಣ್ಣುಗಳಿದ್ದವು. ಈ ನಾಲ್ಕು ಜೀವಿಗಳು ಹಗಲಿರುಳು ಎಡಬಿಡದೆ ಹೀಗೆ ಹೇಳುತ್ತಿದ್ದವು:
“ದೇವರಾದ ಪ್ರಭು, ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಆತನು ಸರ್ವಶಕ್ತನು.
ಆತನು ಭೂತಕಾಲದಲ್ಲಿ ಇದ್ದವನೂ ವರ್ತಮಾನಕಾಲದಲ್ಲಿ ಇರುವಾತನೂ ಮುಂದೆ ಬರುವಾತನೂ ಆಗಿದ್ದಾನೆ.”
9 ಈ ಜೀವಿಗಳು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಪ್ರಭಾವ, ಗೌರವ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದವು. ಯುಗಯುಗಾಂತರಗಳಲ್ಲಿಯೂ ಜೀವಿಸುವವನು ಆತನೇ. 10 ಇಪ್ಪತ್ತನಾಲ್ಕು ಮಂದಿ ಹಿರಿಯರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಮೊಣಕಾಲೂರಿ ನಮಸ್ಕರಿಸಿ, ಯುಗಯುಗಾಂತರಗಳಲ್ಲಿಯೂ ಜೀವಿಸುವ ಆತನನ್ನು ಆರಾಧಿಸುತ್ತಾ ಇಂತೆಂದರು:
11 “ನಮ್ಮ ಪ್ರಭುವೇ, ನಮ್ಮ ದೇವರೇ!
ನೀನು ಪ್ರಭಾವ, ಗೌರವ, ಅಧಿಕಾರಗಳನ್ನು ಪಡೆಯಲು ಯೋಗ್ಯನಾಗಿರುವೆ.
ಎಲ್ಲವನ್ನೂ ನಿರ್ಮಿಸಿದಾತನು ನೀನೇ.
ನಿನ್ನ ಚಿತ್ತದಂತೆಯೇ ಎಲ್ಲವೂ ಇದ್ದವು; ಎಲ್ಲವೂ ಸೃಷ್ಟಿಗೊಂಡವು.”
Kannada Holy Bible: Easy-to-Read Version. All rights reserved. © 1997 Bible League International