M’Cheyne Bible Reading Plan
ಯಜ್ಞಗಳ ನಿಯಮಗಳು
15 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 2 “ಇಸ್ರೇಲರಿಗೆ ಹೀಗೆ ಆಜ್ಞಾಪಿಸಬೇಕು: ನಾನು ನಿಮ್ಮ ನಿವಾಸಕ್ಕಾಗಿ ಒಂದು ದೇಶವನ್ನು ಕೊಡುತ್ತಿದ್ದೇನೆ. ನೀವು ಆ ದೇಶಕ್ಕೆ ಸೇರಿದ ನಂತರ 3 ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವುದಕ್ಕಾಗಿ ನಿಮ್ಮ ಮಂದೆಯಿಂದಾಗಲಿ ಹಿಂಡಿನಿಂದಾಗಲಿ ಅಗ್ನಿಯ ಮೂಲಕ ಯಜ್ಞವನ್ನರ್ಪಿಸುವವನು ಸರ್ವಾಂಗಹೋಮ ಮಾಡಿದರೂ ಅಥವಾ ಸಮಾಧಾನಯಜ್ಞಮಾಡಿದರೂ ಹರಕೆಯ ಯಜ್ಞಮಾಡಿದರೂ ಅಥವಾ ಸ್ವಇಚ್ಛೆಯಿಂದ ಯಜ್ಞಮಾಡಿದರೂ ನಿಯಮಿತ ಹಬ್ಬಗಳಲ್ಲಿ ಯಜ್ಞಮಾಡಿದರೂ 4 ಅದರೊಂದಿಗೆ ಧಾನ್ಯನೈವೇದ್ಯಕ್ಕಾಗಿ ಒಂದೂವರೆ ಸೇರು ಎಣ್ಣೆ ಬೆರಸಿದ ಮೂರು ಸೇರು ಗೋಧಿಯ ಹಿಟ್ಟನ್ನೂ 5 ಪಾನದ್ರವ್ಯಕ್ಕಾಗಿ ಒಂದೂವರೆ ಸೇರು ದ್ರಾಕ್ಷಾರಸವನ್ನೂ ತರಬೇಕು. ನೀವು ಸರ್ವಾಂಗಹೋಮವಾಗಿ ಇಲ್ಲವೆ ಸಮಾಧಾನಯಜ್ಞವಾಗಿ ಸಮರ್ಪಿಸುವ ಒಂದೊಂದು ಕುರಿಯೊಂದಿಗೆ ಇದನ್ನೂ ಸಮರ್ಪಿಸಬೇಕು.
6 “ನೀವು ಟಗರನ್ನು ಸಮರ್ಪಿಸುವುದಾದರೆ, ಧಾನ್ಯನೈವೇದ್ಯಕ್ಕಾಗಿ ಎರಡು ಸೇರು ಎಣ್ಣೆ ಬೆರಸಿದ ಆರು ಸೇರು ಒಳ್ಳೆಯ ಗೋಧಿಯ ಹಿಟ್ಟನ್ನೂ 7 ಪಾನದ್ರವ್ಯಕ್ಕಾಗಿ ಎರಡು ಸೇರು ದ್ರಾಕ್ಷಾರಸವನ್ನೂ ಸಮರ್ಪಿಸಬೇಕು. ಅದು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವ ಯಜ್ಞವಾಗಿರುತ್ತದೆ.
8 “ನಿಮ್ಮಲ್ಲಿ ಎಳೆಹೋರಿಯನ್ನು ಯೆಹೋವನಿಗೆ ಸರ್ವಾಂಗಹೋಮವನ್ನಾಗಲಿ ಹರಕೆಯ ಯಜ್ಞವನ್ನಾಗಲಿ ಸಮಾಧಾನಯಜ್ಞವನ್ನಾಗಲಿ ಅರ್ಪಿಸುವವನು 9 ಅದರೊಂದಿಗೆ ಧಾನ್ಯನೈವೇದ್ಯಕ್ಕಾಗಿ ಮೂರು ಸೇರು ಎಣ್ಣೆ ಬೆರಸಿದ ಒಂಭತ್ತು ಸೇರು ಗೋಧಿಯ ಹಿಟ್ಟನ್ನೂ 10 ಪಾನದ್ರವ್ಯಕ್ಕಾಗಿ ಮೂರು ಸೇರು ದ್ರಾಕ್ಷಾರಸವನ್ನೂ ತಂದು ಸಮರ್ಪಿಸಬೇಕು. ಇದು ಅಗ್ನಿಯ ಮೂಲಕ ಸಮರ್ಪಿಸುವ ಯಜ್ಞವಾಗಿದೆ. ಇದರ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯನ್ನು ಉಂಟುಮಾಡುತ್ತದೆ. 11 ಕುರಿ, ಆಡು, ಟಗರು, ಹೋರಿ ಇವುಗಳಲ್ಲಿ ಯಾವುದನ್ನು ಅರ್ಪಿಸಿದರೂ ಇದನ್ನು ಮಾಡಲೇಬೇಕು. 12 ನೀವು ಸಮರ್ಪಿಸುವ ಪಶುಗಳ ಲೆಕ್ಕದ ಪ್ರಕಾರವೇ ಒಂದೊಂದು ಪಶುವಿನ ಸಂಗಡ ಈ ರೀತಿಯಾಗಿ ಮಾಡಬೇಕು.
13 “ಇಸ್ರೇಲಿನ ಪ್ರತಿಯೊಬ್ಬ ಸ್ವದೇಶಿಯೂ ಯೆಹೋವನಿಗೆ ಸುಗಂಧಹೋಮವನ್ನು ಸಮರ್ಪಿಸುವಾಗ ಈ ರೀತಿಯಾಗಿ ಮಾಡಬೇಕು. 14 ನಿಮ್ಮ ಮಧ್ಯದಲ್ಲಿ ವಾಸಿಸುವ ವಿದೇಶಿಯರಲ್ಲಿ ಯಾವನೇ ಆಗಲಿ, ಯೆಹೋವನಿಗೆ ಸುಗಂಧಹೋಮ ಮಾಡಬೇಕಾದರೆ ನಿಮ್ಮಂತೆಯೇ ಅವನು ಮಾಡಬೇಕು. 15 ನಿಮಗೂ ನಿಮ್ಮಲ್ಲಿರುವ ಪರದೇಶದವರಿಗೂ ಒಂದೇ ವಿಧಿಯಿರಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮ. ಯೆಹೋವನ ಸನ್ನಿಧಿಯಲ್ಲಿ ನೀವೂ ಪರದೇಶಿಯರೂ ಒಂದೇ ಆಗಿದ್ದೀರಿ. 16 ನಿಮಗೂ ನಿಮ್ಮ ಬಳಿಯಲ್ಲಿ ವಾಸಿಸುವ ಪರದೇಶದವನಿಗೂ ಒಂದೇ ವಿಧವಾದ ಪ್ರಮಾಣ ವಿಧಿಗಳಿರಬೇಕು.”
17 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 18 “ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನಾನು ನಿಮ್ಮನ್ನು ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ. 19 ನೀವು ಆ ದೇಶದ ಭೂಮಿಯ ಬೆಳೆಯನ್ನು ಅನುಭೋಗಿಸುವಾಗ, ಸ್ವಲ್ಪವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು. 20 ನೀವು ಕಣದಲ್ಲಿರುವ ಗೋಧಿಯಲ್ಲಿ ಪ್ರಥಮಫಲವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡುವಂತೆಯೇ ನೀವು ಪ್ರಥಮವಾಗಿ ನಾದಿದ ಹಿಟ್ಟಿನಿಂದ ಒಂದು ರೊಟ್ಟಿಯನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. 21 ನೀವೂ ನಿಮ್ಮ ಸಂತತಿಯವರೂ ಕಣಕದಿಂದ ಮಾಡುವ ಮೊದಲನೆಯ ರೊಟ್ಟಿಯನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು.
22-23 “ಯೆಹೋವನು ಮೋಶೆಯ ಮೂಲಕ ಪ್ರಕಟಿಸಿದ ಆಜ್ಞೆಗಳನ್ನು ಅಂದರೆ ಯೆಹೋವನು ಆಜ್ಞೆಯನ್ನು ಕೊಟ್ಟ ದಿನದಿಂದಿಡಿದು ಮುಂದಿನ ಎಲ್ಲಾ ಕಾಲದಲ್ಲಿ ನೀವು ತಿಳಿಯದೆ ಯೆಹೋವನ ಆಜ್ಞೆಗಳನ್ನು ಉಲ್ಲಂಘಿಸಿದರೆ ಹೀಗೆ ಮಾಡಬೇಕು: 24 ನಿರುದ್ದೇಶದಿಂದ ಮತ್ತು ಸಮುದಾಯಕ್ಕೆ ತಿಳಿಯದಂತೆ ಇದನ್ನು ಮಾಡಿದ್ದಾಗಿದ್ದರೆ, ಯೆಹೋವನಿಗೆ ಸುಗಂಧ ವಾಸನೆಯನ್ನು ಉಂಟುಮಾಡುವುದಕ್ಕಾಗಿ ಒಂದು ಎಳೆಹೋರಿಯನ್ನು ಸರ್ವಾಂಗಹೋಮವಾಗಿ ಅರ್ಪಿಸಬೇಕು ಮತ್ತು ಅದರೊಡನೆ ಧಾನ್ಯಾರ್ಪಣೆಯನ್ನೂ ಪಾನಾರ್ಪಣೆಯನ್ನೂ ಪಾಪಪರಿಹಾರಕ ಯಜ್ಞವಾಗಿ ಒಂದು ಹೋತವನ್ನೂ ಅರ್ಪಿಸಬೇಕು.
25 “ಈ ರೀತಿಯಲ್ಲಿ ಇಸ್ರೇಲರ ಇಡೀ ಸಮುದಾಯದವರ ಕ್ಷಮೆಗಾಗಿ ಯಾಜಕನು ಪ್ರಾಯಶ್ಚಿತ್ತ ಮಾಡುವನು. ಯಾಕೆಂದರೆ ಅದು ತಿಳಿಯದೆ ಮಾಡಿದ ತಪ್ಪಾಗಿತ್ತು ಮತ್ತು ಆ ತಪ್ಪಿಗಾಗಿ ಅವರು ತಮ್ಮ ಅರ್ಪಣೆಯನ್ನು ಯೆಹೋವನಿಗೆ ಕಾಣಿಕೆಯಾಗಿ ತಂದರು ಮತ್ತು ಯೆಹೋವನ ಎದುರಿನಲ್ಲಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿದರು.[a] 26 ಆದ್ದರಿಂದ ಇಡೀ ಇಸ್ರೇಲ್ ಸಮುದಾಯದವರಿಗೆ ಕ್ಷಮಾಪಣೆಯಾಗುವುದು ಮತ್ತು ಅವರ ಮಧ್ಯದಲ್ಲಿ ವಾಸಿಸುವ ಪರದೇಶಸ್ಥರಿಗೂ ಕ್ಷಮಾಪಣೆಯಾಗುವುದು; ಯಾಕೆಂದರೆ ಜನರೆಲ್ಲರೂ ನಿರುದ್ದೇಶದಿಂದ ಮಾಡಿದ ಆ ತಪ್ಪಿನಲ್ಲಿ ಸಿಕ್ಕಿಕೊಂಡಿದ್ದರು.
27 “ಆದರೆ ಒಬ್ಬನು ತಿಳಿಯದೆ ಪಾಪಮಾಡಿದರೆ, ಅವನು ಒಂದು ವರ್ಷದ ಹೆಣ್ಣು ಆಡನ್ನು ದೋಷ ಪರಿಹಾರಕ ಯಜ್ಞವಾಗಿ ಅರ್ಪಿಸಬೇಕು. 28 ಆಗ ಯಾಜಕನು ನಿರುದ್ದೇಶದಿಂದ ತಪ್ಪುಮಾಡಿದವನ ಕ್ಷಮಾಪಣೆಗಾಗಿ ಯೆಹೋವನ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡುವನು. 29 ನಿರುದ್ದೇಶದಿಂದ ತಪ್ಪುಮಾಡಿದ ಪ್ರತಿಯೊಬ್ಬರಿಗೂ ಈ ನಿಯಮ ಅನ್ವಯಿಸುತ್ತದೆ. ಈ ವಿಷಯದಲ್ಲಿ ಇಸ್ರೇಲರಲ್ಲಿರುವ ಸ್ವದೇಶದವರಿಗೂ ಪರದೇಶದವರಿಗೂ ಒಂದೇ ವಿಧಿಯಿರಬೇಕು.
30 “ಆದರೆ ಉದ್ದೇಶಪೂರ್ವಕವಾಗಿ ಪಾಪಮಾಡುವವನು ಯೆಹೋವನಿಗೆ ಅವಮಾನ ಮಾಡುವವನಾಗಿದ್ದಾನೆ. ಅವನನ್ನು ಕುಲದಿಂದ ಬಹಿಷ್ಕರಿಸಬೇಕು. ಈ ನಿಯಮವು ಇಸ್ರೇಲರಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಹಾಗೂ ಪರದೇಶಸ್ಥರಿಗೂ ಅನ್ವಯಿಸುವುದು. 31 ಆ ಮನುಷ್ಯನು ಯೆಹೋವನ ಮಾತನ್ನು ತಾತ್ಸಾರಮಾಡಿ ಆತನ ಆಜ್ಞೆಯನ್ನು ಮೀರಿದ್ದರಿಂದ ಕುಲದಿಂದ ತೆಗೆದುಹಾಕಲ್ಪಡಲೇಬೇಕು. ಅವನು ತನ್ನ ಪಾಪದ ಫಲವನ್ನು ಅನುಭವಿಸಲಿ.”
ಸಬ್ಬತ್ ದಿನದಲ್ಲಿ ಕೆಲಸಮಾಡುವ ಮನುಷ್ಯನು
32 ಇಸ್ರೇಲರು ಇನ್ನೂ ಮರುಭೂಮಿಯಲ್ಲಿದ್ದಾಗ ಒಬ್ಬನು ಸಬ್ಬತ್‌ದಿನದಲ್ಲಿ ಕಟ್ಟಿಗೆ ಕೂಡಿಸುವುದನ್ನು ಅವರಲ್ಲಿ ಕೆಲವರು ಕಂಡರು. 33 ಕಂಡವರು ಅವನನ್ನು ಮೋಶೆ ಆರೋನರ ಮತ್ತು ಸರ್ವಸಮೂಹದವರ ಬಳಿಗೆ ಹಿಡಿದುಕೊಂಡು ಬಂದರು. 34 ಅವನನ್ನು ಶಿಕ್ಷಿಸಬೇಕಾದ ವಿಧಿಯನ್ನು ಅವರು ತಿಳಿಯದೆ ಇದ್ದುದರಿಂದ ಅವನನ್ನು ಕಾವಲಲ್ಲಿಟ್ಟರು.
35 ಆಗ ಯೆಹೋವನು ಮೋಶೆಗೆ, “ಆ ಮನುಷ್ಯನು ಸಾಯಬೇಕು. ಅವನನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಿ ಎಲ್ಲಾ ಜನರು ಕಲ್ಲೆಸೆದು ಕೊಲ್ಲಬೇಕು” ಎಂದು ಹೇಳಿದನು. 36 ಆಗ ಜನರು ಅವನನ್ನು ಪಾಳೆಯದ ಹೊರಗೆ ಕರೆದುಕೊಂಡು ಹೋಗಿ ಕಲ್ಲೆಸೆದು ಕೊಂದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಇದನ್ನು ಮಾಡಿದರು.
ಜನರು ವಿಧಿಗಳನ್ನು ಜ್ಞಾಪಕ ಮಾಡುವಂತೆ ದೇವರು ಸಹಾಯ ಮಾಡಿದ್ದ
37 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 38 “ಇಸ್ರೇಲರಿಗೆ ಈ ಸಂಗತಿಗಳನ್ನು ತಿಳಿಸು: ನನ್ನ ಅಪ್ಪಣೆಗಳನ್ನು ಜ್ಞಾಪಕಮಾಡುವುದಕ್ಕೆ ನಿಮಗೆ ಒಂದು ಗುರುತನ್ನು ಕೊಡುತ್ತೇನೆ. ನಿಮ್ಮ ಬಟ್ಟೆಗಳ ಮೂಲೆಯಲ್ಲಿ ಗೊಂಡೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿಯೊಂದು ಗೊಂಡೆಯೂ ಒಂದೊಂದು ನೀಲಿದಾರದಿಂದ ಕೂಡಿರಬೇಕು. ನೀವು ಇವುಗಳನ್ನು ಇಂದಿನಿಂದ ಯಾವಾಗಲೂ ಧರಿಸಿಕೊಳ್ಳಬೇಕು. 39 ಈ ಗೊಂಡೆಗಳನ್ನು ನೀವು ನೋಡುವಾಗ, ಯೆಹೋವನು ನಿಮಗೆ ಕೊಟ್ಟ ಅಪ್ಪಣೆಗಳನ್ನೆಲ್ಲ ಜ್ಞಾಪಕಮಾಡಿಕೊಳ್ಳಬೇಕು ಮತ್ತು ಅವುಗಳಿಗೆ ವಿಧೇಯರಾಗಬೇಕು. ನೀವು ನಿಮ್ಮ ಮನಸ್ಸಿಗೆ ಮತ್ತು ಕಣ್ಣಿಗೆ ತೋರಿದ ಪ್ರಕಾರ ನಡೆಯದೆ ನಂಬಿಗಸ್ತರಾಗಿರಬೇಕು. 40 ನೀವು ನನ್ನ ಎಲ್ಲಾ ಆಜ್ಞೆಗಳನ್ನು ಜ್ಞಾಪಿಸಿಕೊಂಡು ವಿಧೇಯರಾಗಿರಬೇಕು. ಆಗ ನೀವು ನಿಮ್ಮ ದೇವರ ವಿಶೇಷವಾದ ಜನರಾಗಿರುವಿರಿ. 41 ನಿಮ್ಮ ದೇವರಾಗಿರುವುದಕ್ಕೆ ನಿಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆತಂದ ನಿಮ್ಮ ದೇವರಾದ ಯೆಹೋವನು ನಾನೇ.”
ದಾವೀದನು ಬತ್ಷೆಬಳೊಂದಿಗೆ ವ್ಯಭಿಚಾರ ಮಾಡಿದಾಗ ಪ್ರವಾದಿಯಾದ ನಾತಾನನು ದಾವೀದನ ಬಳಿಗೆ ಹೋಗಿ ದೇವರ ನ್ಯಾಯತೀರ್ಪನ್ನು ಹೇಳುತ್ತಾನೆ. ಆಗ ಈ ಕೀರ್ತನೆ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.
51 ಪ್ರೀತಿಸ್ವರೂಪನಾದ ದೇವರೇ, ನನಗೆ ಕರುಣೆತೋರು;
ಕರುಣಾನಿಧಿಯೇ, ನನ್ನ ಪಾಪಗಳನ್ನೆಲ್ಲಾ ಅಳಿಸಿಬಿಡು.
2 ನನ್ನ ದೋಷವನ್ನು ತೊಳೆದುಬಿಡು.
ನನ್ನ ಪಾಪವನ್ನು ಪರಿಹರಿಸಿ ನನ್ನನ್ನು ಮತ್ತೆ ಶುದ್ಧೀಕರಿಸು!
3 ನಾನು ಪಾಪಮಾಡಿದ್ದೇನೆಂದು ನನಗೆ ಗೊತ್ತಿದೆ.
ಆ ಪಾಪಗಳು ನನ್ನ ಮುಂದೆಯೇ ಇವೆ.
4 ನಿನ್ನ ದೃಷ್ಟಿಗೆ ಕೆಟ್ಟದ್ದಾಗಿದ್ದನ್ನೇ ಮಾಡಿದ್ದೇನೆ.
ಹೌದು, ನಾನು ಪಾಪ ಮಾಡಿದ್ದು ನಿನಗೇ.
ನಾನು ತಪ್ಪಿತಸ್ಥನೆಂತಲೂ ನೀನು ನೀತಿವಂತನೆಂತಲೂ
ಜನರಿಗೆ ಗೊತ್ತಾಗಲೆಂದೇ ಇವುಗಳನ್ನು ಅರಿಕೆಮಾಡಿಕೊಳ್ಳುತ್ತಿದ್ದೇನೆ.
ನಿನ್ನ ತೀರ್ಪುಗಳು ನ್ಯಾಯಬದ್ಧವಾಗಿವೆ.
5 ಹುಟ್ಟಿದಂದಿನಿಂದ ನಾನು ಪಾಪಿಯೇ.
ಮಾತೃಗರ್ಭವನ್ನು ಪ್ರವೇಶಿಸಿದ ದಿನದಿಂದ ನಾನು ದ್ರೋಹಿಯೇ.
6 ದೇವರೇ, ನಾನು ನಿನಗೆ ನಂಬಿಗಸ್ತನಾಗಿರಬೇಕೆಂಬುದೇ ನಿನ್ನ ಅಪೇಕ್ಷೆ.
ಆದ್ದರಿಂದ ಸುಜ್ಞಾನದ ರಹಸ್ಯಗಳನ್ನು ನನಗೆ ಉಪದೇಶಿಸು.
7 ಹಿಸ್ಸೋಪ್ ಗಿಡದ ಬರಲಿನಿಂದ ನನ್ನನ್ನು ತೊಳೆದು ಶುದ್ಧೀಕರಿಸು;
ನಾನು ಹಿಮಕ್ಕಿಂತಲೂ ಬಿಳುಪಾಗುವ ತನಕ ನನ್ನನ್ನು ತೊಳೆ!
8 ನನ್ನಲ್ಲಿ ಆನಂದವನ್ನೂ ಉಲ್ಲಾಸವನ್ನೂ ಬರಮಾಡು.
ನೀನು ಜಜ್ಜಿಹಾಕಿದ ಮೂಳೆಗಳು ಮತ್ತೆ ಉಲ್ಲಾಸಿಸಲಿ!
9 ನನ್ನ ಪಾಪಗಳನ್ನು ನೋಡಬೇಡ!
ಅವುಗಳನ್ನೆಲ್ಲ ಅಳಿಸಿಬಿಡು!
10 ದೇವರೇ, ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು!
ನನ್ನ ಆತ್ಮವನ್ನು ಮತ್ತೆ ಬಲಗೊಳಿಸಿ ನನ್ನನ್ನು ನೂತನಪಡಿಸು.
11 ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಿಬಿಡಬೇಡ!
ನಿನ್ನ ಪವಿತ್ರಾತ್ಮನನ್ನು ನನ್ನಿಂದ ತೆಗೆಯಬೇಡ!
12 ನಿನ್ನ ರಕ್ಷಣೆಯಿಂದುಂಟಾಗುವ ಆನಂದವನ್ನು ನನಗೆ ಮತ್ತೆ ದಯಪಾಲಿಸು!
ನಿನಗೆ ವಿಧೇಯನಾಗಿರಲು ನನ್ನ ಮನಸ್ಸನ್ನು ದೃಢಪಡಿಸು.
13 ನಿನ್ನ ಜೀವಮಾರ್ಗವನ್ನು ನಾನು ಪಾಪಿಗಳಿಗೆ ಉಪದೇಶಿಸುವೆನು;
ಆಗ ಅವರು ನಿನ್ನ ಬಳಿಗೆ ಹಿಂತಿರುಗಿ ಬರುವರು.
14 ದೇವರೇ, ನನ್ನನ್ನು ಮರಣದಂಡನೆಯಿಂದ ತಪ್ಪಿಸು.
ನನ್ನ ದೇವರೇ, ನನ್ನನ್ನು ರಕ್ಷಿಸುವಾತನು ನೀನೇ.
ನಿನ್ನ ಒಳ್ಳೆಯತನವನ್ನು ಕುರಿತು ನಾನು ಹಾಡುವೆನು!
15 ನನ್ನ ಯೆಹೋವನೇ, ನನ್ನ ಬಾಯಿ ತೆರೆದು ನಿನ್ನನ್ನು ಕೊಂಡಾಡುವಂತೆ ನನ್ನ ತುಟಿಗಳನ್ನು ತೆರೆಯಮಾಡು.
16 ನಿನಗೆ ನಿಜವಾಗಿಯೂ ಬೇಕಾದದ್ದು ಯಜ್ಞಗಳಲ್ಲ.
ಹೀಗಿರಲು ನಿನಗೆ ಇಷ್ಟವೇ ಇಲ್ಲದ ಯಜ್ಞಗಳನ್ನು ನಾನೇಕೆ ಅರ್ಪಿಸಲಿ!
17 ದೇವರೇ, ನೀನು ಅಪೇಕ್ಷಿಸುವ ಯಜ್ಞ ದೀನ ಮನಸ್ಸೇ.
ದೀನತೆ ಮತ್ತು ವಿಧೇಯತೆಯುಳ್ಳ ಹೃದಯವನ್ನು ನೀನು ತಿರಸ್ಕರಿಸುವುದಿಲ್ಲ.
18 ಚೀಯೋನಿಗೆ ಕರುಣೆತೋರಿ
ಜೆರುಸಲೇಮಿನ ಕೋಟೆಗಳನ್ನು ಮತ್ತೆ ನಿರ್ಮಿಸು.
19 ಆಗ ಜನರು ಯಜ್ಞಗಳನ್ನೂ ಸರ್ವಾಂಗಹೋಮಗಳನ್ನೂ ಅರ್ಪಿಸಿ
ನಿನಗೆ ಸಂತೋಷವನ್ನು ಉಂಟು ಮಾಡುವರು.
ಜನರು ನಿನ್ನ ಯಜ್ಞವೇದಿಕೆಯ ಮೇಲೆ ಹೋರಿಗಳನ್ನು ಮತ್ತೆ ಅರ್ಪಿಸುವರು.
ಇಸ್ರೇಲು ದೇವರ ವಿಶೇಷವಾದ ತೋಟ
5 ನನ್ನ ಪ್ರಿಯನನ್ನೂ ಆತನ ತೋಟವನ್ನೂ ಕುರಿತು ಗೀತೆಯೊಂದನ್ನು ಹಾಡುವೆ.
ಫಲವತ್ತಾದ ಪ್ರದೇಶದಲ್ಲಿ
ನನ್ನ ಪ್ರಿಯನಿಗೆ ದ್ರಾಕ್ಷಿತೋಟವಿತ್ತು.
2 ಆತನು ಭೂಮಿಯನ್ನು ಅಗೆದು ಹಸನು ಮಾಡಿದನು;
ಅದರಲ್ಲಿ ಉತ್ತಮವಾದ ದ್ರಾಕ್ಷಿಯ ಸಸಿಗಳನ್ನು ನೆಟ್ಟನು.
ತೋಟದ ಮಧ್ಯದಲ್ಲಿ ಒಂದು ಗೋಪುರವನ್ನು ಕಟ್ಟಿಸಿ
ದ್ರಾಕ್ಷಿಯ ತೊಟ್ಟಿಯನ್ನು ಮಾಡಿಸಿದನು.
ತೋಟವು ಒಳ್ಳೆಯ ದ್ರಾಕ್ಷಿಹಣ್ಣನ್ನು ಕೊಡುವುದೆಂದು ಎದುರುನೋಡತೊಡಗಿದನು.
ಆದರೆ ಅದು ಹೊಲಸು ಹಣ್ಣನ್ನು ಬಿಟ್ಟಿತು.
3 ಆಗ ಆತನು, “ಜೆರುಸಲೇಮಿನ ನಿವಾಸಿಗಳೇ, ಯೆಹೂದದ ಜನರೇ, ನನ್ನ ವಿಚಾರವಾಗಿಯೂ
ನನ್ನ ದ್ರಾಕ್ಷಿತೋಟದ ವಿಚಾರವಾಗಿಯೂ ಯೋಚಿಸಿರಿ.
4 ನನ್ನ ದ್ರಾಕ್ಷಿತೋಟಕ್ಕೆ ನಾನು ಇನ್ನೇನು ಮಾಡಬೇಕಿತ್ತು.
ನಾನು ಮಾಡಬೇಕಿದ್ದನ್ನೆಲ್ಲಾ ಮಾಡಿದೆನು.
ಒಳ್ಳೆಯ ದ್ರಾಕ್ಷಿಹಣ್ಣು ಬಿಡುವುದೆಂದು ಆಶಿಸಿದ್ದೆನು.
ಆದರೆ ಅದು ಹೊಲಸು ದ್ರಾಕ್ಷಿಗಳನ್ನೇ ಬಿಟ್ಟಿತು.
ಹೀಗೆ ಆದದ್ದೇಕೆ?
5 “ನಾನೀಗ ನನ್ನ ದ್ರಾಕ್ಷಿತೋಟಕ್ಕೆ ಏನು ಮಾಡುವೆನೆಂದು ತಿಳಿಸುವೆನು:
ಅದರ ಸುತ್ತಲೂ ರಕ್ಷಣೆಗಾಗಿ ಹಾಕಿದ್ದ ಮುಳ್ಳಿನ ಬೇಲಿಯನ್ನು
ಕಿತ್ತು ಸುಟ್ಟುಬಿಡುವೆನು.
ಅದರ ಕಲ್ಲಿನ ಗೋಡೆಯನ್ನು ಕೆಡವಿ
ತುಳಿದಾಟಕ್ಕೆ ಈಡುಮಾಡುವೆನು.
6 ನಾನು ಅದನ್ನು ಬೆಂಗಾಡಾಗಿ ಮಾಡುವೆನು.
ಅದರಲ್ಲಿರುವ ಸಸಿಗಳನ್ನು ಯಾರೂ ಲಕ್ಷಿಸರು.
ತೋಟದಲ್ಲಿ ಯಾರೂ ಕೆಲಸ ಮಾಡುವದಿಲ್ಲ.
ಮುಳ್ಳುಗಳೂ ಹಣಜಿಗಳೂ ಅಲ್ಲಿ ಬೆಳೆಯುವವು.
ಅಲ್ಲಿ ಮಳೆಗರೆಯದಂತೆ ಮೋಡಗಳಿಗೆ ಆಜ್ಞಾಪಿಸುವೆನು.”
7 ಸರ್ವಶಕ್ತನಾದ ಯೆಹೋವನ ದ್ರಾಕ್ಷಿತೋಟವೇ ಇಸ್ರೇಲ್ ದೇಶ. ಯೆಹೋವನು ಪ್ರೀತಿಸುವ ದ್ರಾಕ್ಷಿಬಳ್ಳಿಯೇ ಯೆಹೂದದ ಪ್ರಜೆ.
ಯೆಹೋವನು ನ್ಯಾಯವನ್ನು ಅಪೇಕ್ಷಿಸಿದರೂ
ಸಿಕ್ಕಿದ್ದು ನರಹತ್ಯವೇ.
ಯೆಹೋವನು ಧರ್ಮವನ್ನು ಅಪೇಕ್ಷಿಸಿದರೂ
ದೊರಕಿದ್ದು ಗೋಳಾಟವೇ.
8 ನೀವು ಒಬ್ಬರಿಗೊಬ್ಬರು ಸಮೀಪದಲ್ಲಿ ವಾಸಿಸುತ್ತೀರಿ. ಬೇರೆ ಯಾವುದಕ್ಕೂ ಸ್ಧಳ ಸಿಗದಂತೆ ನೀವು ಹತ್ತಿರಹತ್ತಿರವಾಗಿ ಮನೆಗಳನ್ನು ಕಟ್ಟಿಕೊಳ್ಳುತ್ತೀರಿ. ಆದರೆ ಯೆಹೋವನು ನಿಮ್ಮನ್ನು ಶಿಕ್ಷಿಸಿ ಇಡೀ ದೇಶದಲ್ಲಿಯೇ ನೀವು ಒಬ್ಬಂಟಿಗರಾಗಿ ವಾಸಿಸುವಂತೆ ಮಾಡುವನು. 9 ಸರ್ವಶಕ್ತನಾದ ಯೆಹೋವನ ನುಡಿಗಳಿವು. ನಾನು ಈ ಮಾತುಗಳನ್ನು ಕಿವಿಯಾರೆ ಕೇಳಿದೆನು: “ಈಗ ಅನೇಕ ಮನೆಗಳಿವೆ, ಆದರೆ ನಾನು ಖಂಡಿತವಾಗಿ ಹೇಳುವುದೇನೆಂದರೆ ಎಲ್ಲಾ ಮನೆಗಳು ಕೆಡವಲ್ಪಡುವವು. ಈಗ ಭವ್ಯವಾದ ಬಂಗಲೆಗಳಿವೆ, ಆದರೆ ಅವುಗಳೆಲ್ಲಾ ಬರಿದಾಗುವವು. 10 ಆ ದಿವಸಗಳಲ್ಲಿ ಹತ್ತು ಎಕರೆ ವಿಶಾಲವಾದ ದ್ರಾಕ್ಷಿತೋಟದಲ್ಲಿ ಸ್ವಲ್ಪ ಮಾತ್ರವೇ ದ್ರಾಕ್ಷಾರಸವು ದೊರಕುವದು. ಅನೇಕ ಚೀಲ ಬೀಜವನ್ನು ಬಿತ್ತಿದರೆ ಸ್ವಲ್ಪ ಧಾನ್ಯ ಮಾತ್ರ ಸಿಗುವುದು.”
11 ನೀವು ಮುಂಜಾನೆ ಎದ್ದು ಮದ್ಯಕ್ಕಾಗಿ ಹುಡುಕಾಡುವಿರಿ. ಮಧ್ಯರಾತ್ರಿಯವರೆಗೆ ಎಚ್ಚರವಿದ್ದು ಕುಡಿದು ಮತ್ತರಾಗುವಿರಿ. 12 ನೀವು ಕುಡಿಯುತ್ತಾ ಹಾರ್ಪ್‌ವಾದ್ಯಗಳನ್ನೂ ದಮ್ಮಡಿಗಳನ್ನೂ ಕೊಳಲುಗಳನ್ನೂ ಬಾರಿಸುತ್ತಾ ನೃತ್ಯಮಾಡುವಿರಿ. ಆದರೆ ಯೆಹೋವನು ಮಾಡಿದ ಕಾರ್ಯಗಳನ್ನು ನೀವು ಗಮನಿಸುವುದಿಲ್ಲ. ಯೆಹೋವನ ಹಸ್ತವು ಅನೇಕಾನೇಕ ಕಾರ್ಯಗಳನ್ನು ಮಾಡಿದೆ. ಆದರೆ ನೀವು ಅವುಗಳನ್ನು ಲಕ್ಷಿಸುವುದಿಲ್ಲ. ಆದ್ದರಿಂದ ನಿಮಗೆ ಕೇಡಾಗುವುದು.
13 ಯೆಹೋವನು ಹೇಳುವುದೇನೆಂದರೆ: “ನನ್ನ ಜನರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು. ಯಾಕೆಂದರೆ ಅವರು ನಿಜವಾಗಿಯೂ ನನ್ನನ್ನು ಅರಿತಿಲ್ಲ. ಇಸ್ರೇಲಿನಲ್ಲಿ ವಾಸಿಸುವ ಕೆಲವು ಜನರು ಈಗ ಪ್ರಮುಖರಾಗಿದ್ದಾರೆ. ತಮ್ಮ ಸುಖಜೀವಿತದಲ್ಲಿ ಆನಂದಿಸುತ್ತಾರೆ. ಆದರೆ ಆ ಗಣ್ಯವ್ಯಕ್ತಿಗಳೆಲ್ಲಾ ಬಾಯಾರಿಕೆಯಿಂದಲೂ ಹಸಿವೆಯಿಂದಲೂ ನರಳುವರು. 14 ಬಳಿಕ ಅವರು ಸತ್ತು ಪಾತಾಳಕ್ಕೆ ಇಳಿದುಹೋಗುವರು. ಪಾತಾಳವು ತನ್ನ ಬಾಯನ್ನು ಅಗಲವಾಗಿ ತೆರೆದು ಅವರನ್ನೆಲ್ಲಾ ನುಂಗಿಬಿಡುವುದು.”
15 ಆ ಜನರು ತಗ್ಗಿಸಲ್ಪಡುವರು. ಆ ಗಣ್ಯವ್ಯಕ್ತಿಗಳು ತಮ್ಮ ತಲೆಗಳನ್ನು ಕೆಳಗೆ ಮಾಡಿ ನೆಲದ ಕಡೆಗೆ ನೋಡುವರು. 16 ಸರ್ವಶಕ್ತನಾದ ಯೆಹೋವನು ನೀತಿಯಿಂದ ನ್ಯಾಯತೀರಿಸುವನು. ಯೆಹೋವನು ಉನ್ನತೋನ್ನತನೆಂದು ಜನರೆಲ್ಲರೂ ಅರಿತುಕೊಳ್ಳುವರು. ಪರಿಶುದ್ಧನಾದ ದೇವರು ನ್ಯಾಯವಾದದ್ದನ್ನೇ ಮಾಡುವನು. ಜನರು ಆತನನ್ನು ಗೌರವಿಸುವರು. 17 ಆತನು ಇಸ್ರೇಲ್ ದೇಶದ ಜನರನ್ನು ದೇಶಭ್ರಷ್ಟರನ್ನಾಗಿ ಮಾಡುವನು. ಆಗ ದೇಶವು ಬರಿದಾಗುವುದು. ಕುರಿಗಳು ತಮ್ಮ ಮನಸ್ಸು ಬಂದೆಡೆಗೆ ಹೋಗುವವು. ಐಶ್ವರ್ಯವಂತರಿಗೆ ಸೇರಿದ್ದ ಜಮೀನಿನ ಮೇಲೆ ಕುರಿಮರಿಗಳು ನಡೆದಾಡುವವು.
18 ಆ ಜನರನ್ನು ನೋಡಿರಿ. ಜನರು ಹಗ್ಗಗಳಿಂದ ಗಾಡಿಯನ್ನು ಎಳೆದುಕೊಂಡು ಹೋಗುವಂತೆ ಅವರು ತಮ್ಮ ಪಾಪಗಳನ್ನು ಎಳೆದುಕೊಂಡು ಹೋಗುತ್ತಿದ್ದಾರೆ. 19 ಅವರು, “ದೇವರು ತಾನು ಮಾಡಲಿಕ್ಕಿರುವುದನ್ನು ಬೇಗನೇ ಮಾಡಿಮುಗಿಸಲಿ. ಆಗ ಏನಾಗುವದೋ ನೋಡೋಣ. ಆತನ ಯೋಜನೆ ಬೇಗನೆ ಕಾರ್ಯರೂಪಕ್ಕೆ ಬರಲಿ. ಆಗ ಆತನ ಯೋಜನೆ ಏನೆಂಬುದು ನಮಗೆ ತಿಳಿಯುವುದು” ಎಂದು ಹೇಳುತ್ತಿದ್ದಾರೆ.
20 ಆ ಜನರು ಒಳ್ಳೆಯವುಗಳನ್ನು ಕೆಟ್ಟವುಗಳೆಂದೂ ಕೆಟ್ಟವುಗಳನ್ನು ಒಳ್ಳೆಯವುಗಳೆಂದೂ ಹೇಳುತ್ತಾರೆ. ಅವರು ಬೆಳಕನ್ನು ಕತ್ತಲೆಯೆಂದೂ ಕತ್ತಲೆಯನ್ನು ಬೆಳಕೆಂದೂ ಅನ್ನುತ್ತಾರೆ. ಅವರು ಸಿಹಿಯನ್ನು ಕಹಿಯೆಂದೂ ಕಹಿಯನ್ನು ಸಿಹಿಯೆಂದೂ ಹೇಳುವರು. 21 ಅವರು ತಾವು ತುಂಬಾ ಬುದ್ಧಿವಂತರೆಂದೂ ಜ್ಞಾನಿಗಳೆಂದೂ ಹೇಳಿಕೊಳ್ಳುವರು. 22 ಅವರು ಮದ್ಯವನ್ನು ಬೆರೆಸುವುದರಲ್ಲಿ ಪರಿಣಿತರು; ಮದ್ಯಸೇವನೆ ಮಾಡುವದಕ್ಕೆ ಹೆಸರಾದವರು. 23 ಅವರಿಗೆ ಹಣಕೊಟ್ಟರೆ, ಅಪರಾಧಿಯನ್ನೂ ಬಿಟ್ಟುಬಿಡುವರು; ಆದರೆ ಒಳ್ಳೆಯವರಿಗೆ ಸರಿಯಾದ ನ್ಯಾಯತೀರ್ಪು ದೊರಕಲು ಅವರು ಅವಕಾಶ ಕೊಡುವುದಿಲ್ಲ. 24 ಆದ್ದರಿಂದ ಅವರಿಗೆ ಕೇಡುಗಳಾಗುವವು. ಅವರ ಸಂತತಿಯವರು ತರಗೆಲೆಯೂ ಹುಲ್ಲೂ ಬೆಂಕಿಯಲ್ಲಿ ಸುಟ್ಟುಹೋಗುವಂತೆ ನಾಶವಾಗುವರು. ಅವರ ಸಂತತಿಯವರು ಸತ್ತು ಧೂಳಾಗುವ ಬೇರಿನಂತೆ ನಾಶವಾಗುವರು. ಬೆಂಕಿಯಲ್ಲಿ ಸುಟ್ಟುಹೋದ ಹೂವಿನ ಬೂದಿಯು ಗಾಳಿಯಲ್ಲಿ ಹಾರಿಹೋಗುವಂತೆ ಅವರ ಸಂತತಿಯವರು ನಾಶವಾಗುವರು.
ಅವರು ಸರ್ವಶಕ್ತನಾದ ಯೆಹೋವನ ಬೋಧನೆಗಳನ್ನು ಅನುಸರಿಸಲು ನಿರಾಕರಿಸಿದ್ದಾರೆ. ಇಸ್ರೇಲಿನ ಪರಿಶುದ್ಧನ ವಾಕ್ಯವನ್ನು ಅವರು ದ್ವೇಷಿಸುತ್ತಾರೆ. 25 ಆದ್ದರಿಂದ ಯೆಹೋವನು ತನ್ನ ಜನರ ಮೇಲೆ ಬಹಳವಾಗಿ ಕೋಪಗೊಂಡಿದ್ದಾನೆ. ಯೆಹೋವನು ತನ್ನ ಕೈಗಳನ್ನೆತ್ತಿ ಅವರನ್ನು ಶಿಕ್ಷಿಸುವನು. ಆಗ ಪರ್ವತಗಳೂ ಹೆದರಿಕೊಳ್ಳುವವು; ಹೆಣಗಳು ಕಸದಂತೆ ರಸ್ತೆಗಳಲ್ಲಿ ಬಿದ್ದುಕೊಂಡಿರುವವು. ಆದರೆ ದೇವರು ಅವರ ಮೇಲೆ ಕೋಪಿಸಿಕೊಂಡೇ ಇರುವನು. ಜನರನ್ನು ಶಿಕ್ಷಿಸಲು ಆತನ ಕೈಗಳು ಮೇಲೆತ್ತಲ್ಪಟ್ಟಿರುವವು.
ಇಸ್ರೇಲರನ್ನು ಶಿಕ್ಷಿಸಲು ದೇವರು ಸೈನ್ಯವನ್ನು ತರುವನು
26 ಎದ್ದು ನೋಡು! ದೂರದೇಶದ ಜನಾಂಗಗಳಿಗೆ ದೇವರು ಗುರುತನ್ನು ಕೊಡುತ್ತಿದ್ದಾನೆ. ಆತನು ಧ್ವಜವನ್ನೆತ್ತಿ ಆ ಜನರನ್ನು ಸಿಳ್ಳುಹಾಕಿ ಕರೆಯುತ್ತಿದ್ದಾನೆ.
ಶತ್ರುಗಳು ದೂರದೇಶದಿಂದ ಬರುತ್ತಿದ್ದಾರೆ. ಅವರು ಬೇಗನೆ ನಿನ್ನ ದೇಶವನ್ನು ಪ್ರವೇಶಿಸುವರು. ಅವರು ಬಹುವೇಗವಾಗಿ ಬರುತ್ತಿದ್ದಾರೆ. 27 ಶತ್ರುಗಳು ಆಯಾಸಗೊಳ್ಳುವುದಿಲ್ಲ, ನೆಲಕ್ಕೆ ಬೀಳುವುದಿಲ್ಲ. ಅವರು ತೂಕಡಿಸುವುದಿಲ್ಲ, ನಿದ್ರೆ ಮಾಡುವುದಿಲ್ಲ. ಅವರ ಸೊಂಟಪಟ್ಟಿಯು ಆಯುಧದೊಂದಿಗೆ ಯಾವಾಗಲೂ ಸಿದ್ಧವಾಗಿರುವುದು. ಅವರ ಪಾದರಕ್ಷೆಗಳ ದಾರವು ಎಂದಿಗೂ ತುಂಡಾಗುವದಿಲ್ಲ. 28 ವೈರಿಗಳ ಬಾಣಗಳು ಬಹು ಹರಿತವಾದದ್ದು. ಅವರ ಬಿಲ್ಲುಗಳೆಲ್ಲವೂ ಬಾಣವೆಸೆಯಲು ತಯಾರಾಗಿವೆ. ಅವರ ಕುದುರೆಗಳ ಪಾದಗಳು ಬಂಡೆಯಂತೆ ಗಟ್ಟಿಯಾಗಿವೆ. ಅವರ ರಥಗಳ ಹಿಂದಿನಿಂದ ಧೂಳಿನ ಮೋಡವೇ ಹಾರುವದು.
29 ಶತ್ರುಗಳು ಆರ್ಭಟಿಸುವರು, ಆ ಆರ್ಭಟವು ಪ್ರಾಯದ ಸಿಂಹಗಳ ಗರ್ಜನೆಯಂತಿರುವುದು. ಶತ್ರುಗಳು ಹೂಂಕರಿಸುತ್ತಾ ತಮ್ಮೊಂದಿಗೆ ಯುದ್ಧ ಮಾಡುತ್ತಿರುವವರನ್ನು ಹಿಡಿದುಬಿಡುವರು. ಜನರು ಹೋರಾಡಿ ಪಾರಾಗಲು ಪ್ರಯತ್ನಿಸುವರು. ಆದರೆ ಅವರನ್ನು ರಕ್ಷಿಸುವವರು ಯಾರೂ ಇರುವುದಿಲ್ಲ. 30 ಆದ್ದರಿಂದ ಸಮುದ್ರವು ಭೋರ್ಗರೆಯವಂತೆ ಆ ದಿನದಲ್ಲಿ ಗರ್ಜನೆಯಿರುವುದು. ಸೆರೆಹಿಡಿಯಲ್ಪಟ್ಟ ಜನರು ನೆಲದ ಕಡೆ ನೋಡುವರು. ಅಲ್ಲಿ ಬರೇ ಕತ್ತಲೆಯೇ. ಆ ದಟ್ಟವಾದ ಮೋಡಗಳಲ್ಲಿ ಎಲ್ಲವೂ ಕಪ್ಪಾಗಿಯೇ ಕಾಣುತ್ತದೆ.
ಯೇಸುವನ್ನೇ ಅನುಸರಿಸಿರಿ
12 ನಮ್ಮ ಸುತ್ತಲೂ ನಂಬಿಕೆಯುಳ್ಳ ಅನೇಕ ಜನರಿದ್ದಾರೆ. ನಂಬಿಕೆ ಎಂದರೇನೆಂದು ಅವರ ಜೀವಿತಗಳೇ ಸಾಕ್ಷಿ ಹೇಳುತ್ತವೆ. ಆದ್ದರಿಂದ ನಾವು ಅವರಂತಿರಬೇಕು. ನಮ್ಮ ಮುಂದಿರುವ ಗುರಿಯನ್ನು ಮುಟ್ಟಲು ಓಡಬೇಕು ಮತ್ತು ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು. ನಮ್ಮನ್ನು ತಡೆಯುವ ಎಲ್ಲಾ ವಿಷಯಗಳನ್ನೂ ನಮ್ಮ ಜೀವಿತದಿಂದ ತೆಗೆದುಹಾಕಬೇಕು. ನಮ್ಮನ್ನು ಸುಲಭವಾಗಿ ಹಿಡಿದುಕೊಳ್ಳುವ ಪಾಪದಿಂದ ಬಿಡಿಸಿಕೊಳ್ಳಬೇಕು. 2 ನಾವು ಯಾವಗಲೂ ಯೇಸುವನ್ನು ಮಾದರಿಯಾಗಿ ಇಟ್ಟುಕೊಂಡಿರಬೇಕು. ನಮ್ಮ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆತನೇ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡನು. ಈಗ ಆತನು ದೇವರ ಸಿಂಹಾಸನದ ಬಲಭಾಗದಲ್ಲಿ ಕುಳಿತಿರುವನು. 3 ಯೇಸುವನ್ನು ಕುರಿತು ಯೋಚಿಸಿರಿ. ಪಾಪಪೂರಿತವಾದ ಜನರು ಆತನ ವಿರುದ್ಧವಾಗಿ ಕೆಟ್ಟದ್ದನ್ನು ಮಾಡುವಾಗ ಆತನು ತಾಳ್ಮೆಯಿಂದ ಇದ್ದನು. ಅದೇ ರೀತಿ ನೀವೂ ತಾಳ್ಮೆಯಿಂದಿರಬೇಕು ಮತ್ತು ಧೈರ್ಯಗೆಡಬಾರದು.
ದೇವರು ತಂದೆಯಂತಿದ್ದಾನೆ
4 ನೀವು ಪಾಪದ ವಿರುದ್ಧ ಹೋರಾಡುತ್ತಿದ್ದರೂ ನಿಮ್ಮ ಹೋರಾಟಗಳು ನಿಮ್ಮನ್ನು ಸಾವಿನ ಸಮೀಪಕ್ಕೆ ಇನ್ನೂ ತಂದಿಲ್ಲ. 5 ನೀವು ದೇವರ ಮಕ್ಕಳಾಗಿದ್ದೀರಿ. ಆತನು ನಿಮಗೆ ನೆಮ್ಮದಿಯ ಮಾತುಗಳನ್ನು ನುಡಿಯುತ್ತಾನೆ. ನೀವು ಆ ಮಾತುಗಳನ್ನು ಮರೆತಿರುವಿರಿ:
“ಮಗನೇ, ಪ್ರಭುವಿನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ.
ಪ್ರಭುವು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ.
6 ಪ್ರಭುವು ತಾನು ಪ್ರೀತಿಸುವವನನ್ನೇ ದಂಡಿಸುತ್ತಾನೆ;
ಯಾರನ್ನು ಮಗನೆಂದು ಒಪ್ಪಿಕೊಳ್ಳುವನೋ ಅವನನ್ನು ದಂಡಿಸುತ್ತಾನೆ.”(A)
7 ಆದ್ದರಿಂದ ತಂದೆಯು ನೀಡುವ ದಂಡನೆ ಎಂಬುದಾಗಿ ಅವುಗಳನ್ನು ಸಹಿಸಿಕೊಳ್ಳಿ. ತಂದೆಯು ತನ್ನ ಮಕ್ಕಳನ್ನು ದಂಡಿಸುವಂತೆ ದೇವರು ನಿಮ್ಮನ್ನು ಈ ರೀತಿ ಶಿಕ್ಷಿಸುತ್ತಾನೆ. ಎಲ್ಲಾ ಮಕ್ಕಳು ತಮ್ಮ ತಂದೆಗಳಿಂದ ಶಿಕ್ಷಿಸಲ್ಪಡುತ್ತಾರೆ. 8 ನೀವು ಎಂದೂ ಶಿಕ್ಷಿಸಲ್ಪಡದಿದ್ದರೆ ನಿಮ್ಮ ತಂದೆಗೆ ನೀವು ನಿಜವಾದ ಮಕ್ಕಳಲ್ಲ. 9 ಈ ಲೋಕದಲ್ಲಿ ನಮ್ಮೆಲ್ಲರನ್ನೂ ಶಿಕ್ಷಿಸಿದಂಥ ತಂದೆಗಳು ನಮಗಿದ್ದರು. ನಾವು ಅವರನ್ನು ಗೌರವಿಸಿದೆವು. ಆದ್ದರಿಂದ ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಂದ ದಂಡನೆಗಳನ್ನು ಸ್ವೀಕರಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. ನಾವು ಹೀಗೆ ಮಾಡಿದರೆ ಜೀವವನ್ನು ಹೊಂದಿಕೊಳ್ಳುವೆವು. 10 ಈ ಲೋಕದ ನಮ್ಮ ತಂದೆಗಳು ನಮ್ಮನ್ನು ಸ್ವಲ್ಪಕಾಲ ದಂಡಿಸಿದರು. ಅವರು ತಮಗೆ ಉತ್ತಮವೆಂದು ತೋರಿದ ರೀತಿಯಲ್ಲಿ ನಮ್ಮನ್ನು ಶಿಕ್ಷಿಸಿದರು. ಆದರೆ ದೇವರು ನಮಗೆ ಸಹಾಯ ಮಾಡಲು ನಮ್ಮನ್ನು ಶಿಕ್ಷಿಸುತ್ತಾನೆ. ಏಕೆಂದರೆ ನಾವೂ ಆತನಂತೆ ಪರಿಶುದ್ಧರಾಗಬೇಕೆಂಬುದೇ ಆತನ ಉದ್ದೇಶ. 11 ಯಾವುದೇ ದಂಡನೆಯಾಗಲಿ ತತ್ಕಾಲಕ್ಕೆ ಸಂತೋಷಕರವಾಗಿರದೆ ದುಃಖಕರವಾಗಿರುತ್ತದೆ. ಆದರೆ ಆ ತರುವಾಯ ದಂಡನೆಯಿಂದ ನಾವು ಕಲಿತುಕೊಂಡು ಯೋಗ್ಯವಾದ ಜೀವಿತವನ್ನು ಆರಂಭಿಸುವುದರ ಮೂಲಕ ನಮಗೆ ಸಮಾಧಾನ ಉಂಟಾಗುತ್ತದೆ.
ಯೋಗ್ಯ ಮಾರ್ಗದಲ್ಲಿ ಜೀವಿಸಿರಿ
12 ನೀವು ದುರ್ಬಲರಾಗಿದ್ದೀರಿ. ಆದ್ದರಿಂದ ನಿಮ್ಮನ್ನು ಮತ್ತೆ ಬಲಪಡಿಸಿಕೊಳ್ಳಿರಿ. 13 ನೀವು ಯೋಗ್ಯವಾದ ಮಾರ್ಗದಲ್ಲಿ ಜೀವಿಸಿದರೆ ರಕ್ಷಣೆ ಹೊಂದುವಿರಿ ಮತ್ತು ನಿಮ್ಮನ್ನು ನಾಶಗೊಳಿಸಲು ನಿಮ್ಮ ಬಲಹೀನತೆಗಳಿಗೆ ಸಾಧ್ಯವಾಗುವುದಿಲ್ಲ.
14 ಎಲ್ಲಾ ಜನರೊಂದಿಗೆ ಸಮಾಧಾನದಿಂದಲೂ ಪರಿಶುದ್ಧರಾಗಿಯೂ ಜೀವಿಸಲು ಪ್ರಯತ್ನಿಸಿರಿ. ಯಾವನ ಜೀವಿತವು ಪರಿಶುದ್ಧವಾಗಿರುವುದಿಲ್ಲವೋ ಅವನೆಂದಿಗೂ ಪ್ರಭುವನ್ನು ನೋಡುವುದಿಲ್ಲ. 15 ನಿಮ್ಮಲ್ಲಿ ಯಾರೂ ದೇವರ ಕೃಪೆಯನ್ನು ಕಳೆದುಕೊಳ್ಳದಂತೆ ಎಚ್ಚರದಿಂದಿರಿ. ನಿಮ್ಮಲ್ಲಿ ಯಾವನೂ ಚಿಗುರಿ ಬೆಳೆಯುವ ವಿಷದ ಬೇರಿನಂತಾಗದಂತೆ ಎಚ್ಚರಿಕೆಯಿಂದಿರಿ. ಅಂಥವನಿಂದ ನಿಮ್ಮ ಇಡೀ ಗುಂಪೇ ಹಾಳಾಗುವುದು. 16 ನಿಮ್ಮಲ್ಲಿ ಯಾರೂ ಮಾಡದಂತೆ ಜಾಗ್ರತೆಯಿಂದಿರಿ; ಪ್ರಾಪಂಚಿಕನಾದ ಏಸಾವನಂತೆ ಆಗದಿರಲು ಎಚ್ಚರದಿಂದಿರಿ. ಹಿರಿಯ ಮಗನಾದ ಏಸಾವನು ತನ್ನ ತಂದೆಯ ಸಮಸ್ತಕ್ಕೂ ವಾರಸುದಾರನಾಗುತ್ತಿದ್ದನು. ಆದರೆ ಅವನು ಒಂದು ಹೊತ್ತಿನ ಊಟಕ್ಕಾಗಿ ಎಲ್ಲವನ್ನೂ ಮಾರಿದನು. 17 ನಿಮಗೇ ತಿಳಿದಿರುವಂತೆ, ಆ ಬಳಿಕ ಅವನು ತನ್ನ ತಂದೆಯ ಆಶೀರ್ವಾದವನ್ನು ಪಡೆದುಕೊಳ್ಳಲು ಬಹಳವಾಗಿ ಗೋಳಾಡಿದನು. ಏಸಾವನು ತಾನು ಮಾಡಿದ್ದನ್ನು ಬದಲಾಯಿಸಲಾಗದ್ದರಿಂದ ತಂದೆಯ ಆಶೀರ್ವಾದವು ಅವನಿಗೆ ದೊರೆಯಲಿಲ್ಲ.
18 ನೀವು ಒಂದು ಹೊಸ ಸ್ಥಳಕ್ಕೆ ಬಂದಿರುವಿರಿ. ಅದು ಇಸ್ರೇಲಿನ ಜನರು ಬಂದ ಬೆಟ್ಟದ ಸ್ಥಳವಲ್ಲ. ಮುಟ್ಟುವುದಕ್ಕೆ ಸಾಧ್ಯವಾಗುವಂತಹ ಮತ್ತು ಬೆಂಕಿ ಹತ್ತಿಕೊಂಡಿರುವಂತಹ ಬೆಟ್ಟದ ಬಳಿಗೆ ನೀವು ಬಂದಿಲ್ಲ. ನೀವು ಕಗ್ಗತ್ತಲೆ, ದುಃಖ ಮತ್ತು ಬಿರಗಾಳಿಯ ಬಳಿಗೆ ಬಂದಿಲ್ಲ. 19 ನೀವು ತುತೂರಿಯ ಧ್ವನಿಯ ಬಳಿಗಾಗಲಿ ಅಥವಾ ನಿಮ್ಮೊಂದಿಗೆ ಮಾತನಾಡುವ ಸ್ವರದ ಬಳಿಗಾಗಲಿ ಬಂದಿಲ್ಲ. ಜನರು ಆ ಧ್ವನಿಯನ್ನು ಕೇಳಿದಾಗ, ಮತ್ತೊಂದು ಮಾತನ್ನು ತಮಗೆ ಹೇಳಬಾರದೆಂದು ಬೇಡಿಕೊಂಡರು. 20 “ಆ ಬೆಟ್ಟವನ್ನು ಮುಟ್ಟುವ ಏನನ್ನಾದರೂ ಸರಿ, ಅದು ಒಂದು ಪ್ರಾಣಿಯಾಗಿದ್ದರೂ ಅದನ್ನು ಕಲ್ಲೆಸೆದು ಕೊಂದುಹಾಕಿರಿ”(B) ಎಂಬ ಆಜ್ಞೆಯನ್ನು ಕೇಳಲು ಅವರು ಇಷ್ಟಪಡಲಿಲ್ಲ. 21 ಆ ಜನರು ಅಂದು ಕಂಡದ್ದು ಭಯಂಕರವಾಗಿದ್ದುದರಿಂದ ಮೋಶೆಯು, “ನಾನು ಭಯದಿಂದ ನಡುಗುತ್ತಿದ್ದೇನೆ”(C) ಎಂದು ಹೇಳಿದನು.
22 ಆದರೆ ನೀವು ಅಂಥ ಸ್ಥಳಕ್ಕೆ ಬಂದಿಲ್ಲ. ನೀವು ಬಂದಿರುವ ಹೊಸ ಸ್ಥಳ ಚೀಯೋನ್ ಬೆಟ್ಟ, ಜೀವಸ್ವರೂಪನಾದ ದೇವರು ವಾಸವಾಗಿರುವ ಪರಲೋಕದ ಜೆರುಸಲೇಮಿಗೂ ಸಹಸ್ರಾರು ದೇವದೂತರು ಸಂತೋಷದಿಂದ ಒಟ್ಟುಗೂಡಿರುವ ಸ್ಥಳಕ್ಕೂ ಬಂದಿರುವಿರಿ. 23 ದೇವರ ಚೊಚ್ಚಲು ಮಕ್ಕಳ ಸಭೆಗೆ ನೀವು ಬಂದಿರುವಿರಿ. ಅವರ ಹೆಸರುಗಳನ್ನು ಪರಲೋಕದಲ್ಲಿ ಬರೆಯಲಾಗಿದೆ. ನೀವು ಜನರಿಗೆಲ್ಲ ತೀರ್ಪು ನೀಡುವ ದೇವರ ಬಳಿಗೂ ಪರಿಪೂರ್ಣರನ್ನಾಗಿ ಮಾಡಲ್ಪಟ್ಟ ಒಳ್ಳೆಯ ಜನರ ಆತ್ಮಗಳ ಬಳಿಗೂ ಬಂದಿರುವಿರಿ. 24 ದೇವರಿಂದ ಹೊಸ ಒಡಂಬಡಿಕೆಯನ್ನು ತಂದಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಉತ್ತಮ ಸಂಗತಿಗಳನ್ನು ನಮಗೆ ತಿಳಿಸುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
25 ದೇವರು ಮಾತನಾಡುವಾಗ ಆಲಿಸದೆ ಇರಬೇಡಿ. ಆತನು ಇಸ್ರೇಲರಿಗೆ ಈ ಲೋಕದಲ್ಲಿ ಎಚ್ಚರಿಕೆ ನೀಡಿದಾಗ, ಅವರು ಆತನ ಮಾತನ್ನು ಕೇಳಲಿಲ್ಲ. ಆದರೆ ಅವರು ತಪ್ಪಿಸಿಕೊಳ್ಳಲಾಗಲಿಲ್ಲ. ಈಗ ದೇವರು ಪರಲೋಕದಿಂದ ಮಾತಾಡುತ್ತಿದ್ದಾನೆ. ಆತನ ಮಾತನ್ನು ಆಲಿಸದ ಜನರು ಹೇಗೆ ತಪ್ಪಿಸಿಕೊಳ್ಳಲಾದೀತು? 26 ಆತನು ಮುಂಚೆ ಮಾತನಾಡಿದಾಗ, ಆತನ ಧ್ವನಿಯು ಭೂಮಿಯನ್ನು ನಡುಗಿಸಿತು. ಆದರೆ ಈಗ ಆತನು, “ಮತ್ತೊಂದು ಸಾರಿ ನಾನು ಭೂಮಿಯನ್ನು ನಡುಗಿಸುತ್ತೇನೆ, ಪರಲೋಕವನ್ನೂ ನಡುಗಿಸುತ್ತೇನೆ”(D) ಎಂದು ವಾಗ್ದಾನ ಮಾಡಿದ್ದಾನೆ. 27 “ಮತ್ತೊಂದು ಸಾರಿ” ಎಂಬ ಮಾತುಗಳು ಸೃಷ್ಟಿಗೊಂಡ ಎಲ್ಲವೂ ನಾಶವಾಗುತ್ತವೆ ಎಂಬುದನ್ನು ನಮಗೆ ಸ್ಪಷ್ಟಪಡಿಸುತ್ತವೆ. ಅವುಗಳನ್ನು ನಡುಗಿಸಲು ಸಾಧ್ಯ. ನಡುಗಿಸಲಾಗದಂಥವುಗಳು ಮಾತ್ರ ಸ್ಥಿರವಾಗಿರುತ್ತವೆ.
28 ಆದ್ದರಿಂದ, ನಡುಗಿಸಲಾಗದಿರುವ ರಾಜ್ಯವನ್ನು ನಾವು ಹೊಂದಿರುವುದರಿಂದ ದೇವರಿಗೆ ಕೃತಜ್ಞತೆಯಿಂದಿರಬೇಕು. ಆತನಿಗೆ ಮೆಚ್ಚಿಕೆಕರವಾದ ಆರಾಧನೆಯನ್ನು ಭಯಭಕ್ತಿಯಿಂದ ಮಾಡಬೇಕು. 29 ಏಕೆಂದರೆ ನಮ್ಮ “ದೇವರು ನಾಶಮಾಡುವ ಬೆಂಕಿಯಂತಿದ್ದಾನೆ.”(E)
Kannada Holy Bible: Easy-to-Read Version. All rights reserved. © 1997 Bible League International