M’Cheyne Bible Reading Plan
ಪವಿತ್ರಗುಡಾರದ ಸ್ಥಾಪನೆ
40 ತರುವಾಯ ಯೆಹೋವನು ಮೋಶೆಗೆ, 2 “ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ದೇವದರ್ಶನಗುಡಾರವಾದ ಪವಿತ್ರಗುಡಾರವನ್ನು ಎತ್ತಿನಿಲ್ಲಿಸು. 3 ಪವಿತ್ರಗುಡಾರದಲ್ಲಿ ಒಡಂಬಡಿಕೆಯ ಪೆಟ್ಟಿಗೆಯನ್ನು ಇಡು. ಪೆಟ್ಟಿಗೆಯನ್ನು ಪರದೆಯಿಂದ ಮುಚ್ಚಿಸು. 4 ಬಳಿಕ ಮೇಜನ್ನು ಒಳಗೆ ತರಿಸಿ ಮೇಜಿನ ಮೇಲಿರಬೇಕಾದ ವಸ್ತುಗಳನ್ನು ಅದರ ಮೇಲಿರಿಸು. ದೀಪಸ್ತಂಭವನ್ನು ಗುಡಾರದಲ್ಲಿ ಇರಿಸು. ದೀಪಸ್ತಂಭದಲ್ಲಿ ಸರಿಯಾದ ಜಾಗಗಳಲ್ಲಿ ಹಣತೆಗಳನ್ನು ಇರಿಸು. 5 ಗುಡಾರದೊಳಗೆ ಧೂಪವನ್ನು ಅರ್ಪಿಸಲು ಬಂಗಾರದ ವೇದಿಕೆಯನ್ನು ಇಡು. ವೇದಿಕೆಯನ್ನು ಒಡಂಬಡಿಕೆಯ ಪೆಟ್ಟಿಗೆಯ ಮುಂದಿರಿಸು. ಬಳಿಕ ಪವಿತ್ರಗುಡಾರದ ಪ್ರವೇಶದಲ್ಲಿ ಪರದೆಯನ್ನು ಇರಿಸು.
6 “ದೇವದರ್ಶನಗುಡಾರವಾದ ಪವಿತ್ರಗುಡಾರದ ಪ್ರವೇಶದ್ವಾರದ ಮುಂದೆ ಯಜ್ಞವೇದಿಕೆಯನ್ನು ಇರಿಸು. 7 ಗಂಗಾಳವನ್ನು ದೇವದರ್ಶನಗುಡಾರ ಮತ್ತು ವೇದಿಕೆಯ ನಡುವೆ ಇರಿಸು. ಗಂಗಾಳದಲ್ಲಿ ನೀರನ್ನು ಹಾಕಿಸು. 8 ಅಂಗಳದ ಸುತ್ತಲೂ ಪರದೆಗಳ ಗೋಡೆಯನ್ನು ನಿಲ್ಲಿಸು. ಬಳಿಕ ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಬೇಕು.
9 “ಅಭಿಷೇಕತೈಲವನ್ನು ಉಪಯೋಗಿಸಿ ಪವಿತ್ರಗುಡಾರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಅಭಿಷೇಕಿಸು. ನೀನು ತೈಲವನ್ನು ಈ ವಸ್ತುಗಳ ಮೇಲೆ ಹಾಕುವಾಗ, ಅವುಗಳನ್ನು ಪವಿತ್ರಗೊಳಿಸುವೆ. 10 ಯಜ್ಞವೇದಿಕೆಯನ್ನು ಅಭಿಷೇಕಿಸು. ವೇದಿಕೆಯ ಮೇಲಿರುವ ಪ್ರತಿಯೊಂದನ್ನು ಅಭಿಷೇಕಿಸಿ ಪ್ರತಿಷ್ಠಿಸು. ಆಗ ಅದು ಬಹು ಪವಿತ್ರವಾಗುವುದು. 11 ಬಳಿಕ ಗಂಗಾಳವನ್ನೂ ಅದರ ಕೆಳಗಿರುವ ಪೀಠವನ್ನೂ ಅಭಿಷೇಕಿಸಿ ಪವಿತ್ರಗೊಳಿಸು.
12 “ಆರೋನನನ್ನೂ ಅವನ ಪುತ್ರರನ್ನೂ ದೇವದರ್ಶನಗುಡಾರದ ಬಾಗಿಲಿಗೆ ಕರೆಸು. ಅವರಿಗೆ ನೀರಿನಿಂದ ಸ್ನಾನ ಮಾಡಿಸು. 13 ಬಳಿಕ ಆರೋನನಿಗೆ ವಿಶೇಷ ಬಟ್ಟೆಯನ್ನು ತೊಡಿಸು. ತೈಲದಿಂದ ಅವನನ್ನು ಅಭಿಷೇಕಿಸಿ ಪವಿತ್ರಗೊಳಿಸು. ಆಗ ಅವನು ಯಾಜಕನಾಗಿ ನನ್ನ ಸೇವೆ ಮಾಡಬಹುದು. 14 ಬಳಿಕ ಅವನ ಪುತ್ರರಿಗೆ ಬಟ್ಟೆಗಳನ್ನು ತೊಡಿಸು. 15 ಅವರ ತಂದೆಯನ್ನು ಅಭಿಷೇಕಿಸಿದಂತೆ ಪುತ್ರರನ್ನೂ ಅಭಿಷೇಕಿಸು. ಆಗ ಅವರು ಯಾಜಕರಾಗಿ ತಲೆತಲೆಮಾರುಗಳವರೆಗೆ ನನ್ನ ಸೇವೆ ಮಾಡಬಹುದು. ನೀನು ಅವರನ್ನು ಅಭಿಷೇಕಿಸಿದಾಗ, ಅವರು ಯಾಜಕರಾಗುವರು. ಇನ್ನು ಮುಂದೆ ಆ ಕುಟುಂಬವು ಯಾಜಕರಾಗಿ ಮುಂದುವರಿಯುವುದು” ಎಂದು ಹೇಳಿದನು. 16 ಯೆಹೋವನು ಆಜ್ಞಾಪಿಸಿದಂತೆಯೇ ಪ್ರತಿಯೊಂದನ್ನೂ ಮೋಶೆಯು ಮಾಡಿದನು.
17 ಆದ್ದರಿಂದ ಪವಿತ್ರಗುಡಾರವು, ಅವರು ಈಜಿಪ್ಟನ್ನು ಬಿಟ್ಟಕಾಲದಿಂದ ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಸ್ಥಾಪಿಸಲ್ಪಟ್ಟಿತು. 18 ಯೆಹೋವನು ಹೇಳಿದಂತೆಯೇ ಮೋಶೆಯು ಪವಿತ್ರಗುಡಾರವನ್ನು ನಿಲ್ಲಿಸಿದನು. ಅವನು ಮೊದಲು ಗದ್ದಿಗೇಕಲ್ಲುಗಳನ್ನು ಕೆಳಗೆ ಇರಿಸಿದನು. ಬಳಿಕ ಅವನು ಗದ್ದಿಗೇಕಲ್ಲುಗಳ ಮೇಲೆ ಚೌಕಟ್ಟುಗಳನ್ನು ಇರಿಸಿದನು. ಬಳಿಕ ಅವನು ಅಗುಳಿಗಳನ್ನಿರಿಸಿ ಕಂಬಗಳನ್ನು ನಿಲ್ಲಿಸಿದನು. 19 ನಂತರ, ಮೋಶೆಯು ಪವಿತ್ರಗುಡಾರದ ಮೇಲೆ ಹೊರಗಣ ಡೇರೆಯನ್ನು ಹಾಕಿಸಿದನು. ಬಳಿಕ ಅವನು ಹೊರಗಿನ ಡೇರೆಗೆ ಮೇಲ್ಹೊದಿಕೆಯನ್ನು ಹಾಕಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಅವನು ಈ ಕಾರ್ಯಗಳನ್ನು ಮಾಡಿದನು.
20 ಮೋಶೆಯು ಒಡಂಬಡಿಕೆಯ ಆಜ್ಞಾಶಾಸನಗಳನ್ನು ತೆಗೆದುಕೊಂಡು ಪವಿತ್ರ ಪೆಟ್ಟಿಗೆಯಲ್ಲಿಟ್ಟನು. ಮೋಶೆಯು ಪೆಟ್ಟಿಗೆಯ ಎರಡು ಕಡೆಗಳಲ್ಲಿ ಕೋಲುಗಳನ್ನು ಇರಿಸಿದನು. ಬಳಿಕ ಅವನು ಪೆಟ್ಟಿಗೆಯ ಮೇಲೆ ಕೃಪಾಸನವನ್ನು ಇಟ್ಟನು. 21 ಬಳಿಕ ಮೋಶೆಯು ಪವಿತ್ರಪೆಟ್ಟಿಗೆಯನ್ನು ಪವಿತ್ರಗುಡಾರದೊಳಗೆ ತಂದನು. ಅದನ್ನು ಸಂರಕ್ಷಿಸುವುದಕ್ಕಾಗಿ ಸರಿಯಾದ ಸ್ಥಳದಲ್ಲಿ ಪರದೆಯನ್ನು ಹಾಕಿದನು. ಹೀಗೆ ಒಡಂಬಡಿಕೆ ಪೆಟ್ಟಿಗೆಯನ್ನು ಪರದೆಯ ಹಿಂಭಾಗದಲ್ಲಿರಿಸಿ ಸಂರಕ್ಷಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಇದನ್ನು ಮಾಡಿದನು. 22 ತರುವಾಯ ಮೋಶೆಯು ದೇವದರ್ಶನಗುಡಾರದಲ್ಲಿ ಮೇಜನ್ನು ಇರಿಸಿದನು. ಪವಿತ್ರಗುಡಾರದ ಉತ್ತರಭಾಗದಲ್ಲಿ ಅದನ್ನು ಇರಿಸಿದನು. ಅವನು ಅದನ್ನು ಪವಿತ್ರಸ್ಥಳದಲ್ಲಿ ಪರದೆಯ ಮುಂಭಾಗದಲ್ಲಿ ಇರಿಸಿದನು. 23 ಬಳಿಕ ಅವನು ಯೆಹೋವನ ಸನ್ನಿಧಿಯಲ್ಲಿ ಮೇಜಿನ ಮೇಲೆ ನೈವೇದ್ಯದ ರೊಟ್ಟಿಯನ್ನಿರಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಅವನು ಇದನ್ನು ಮಾಡಿದನು. 24 ಬಳಿಕ ಮೋಶೆಯು ದೀಪಸ್ತಂಭವನ್ನು ಪವಿತ್ರಗುಡಾರದೊಳಗೆ ಇರಿಸಿದನು. ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನಿರಿಸಿದನು. 25 ತರುವಾಯ ಮೋಶೆಯು ಯೆಹೋವನ ಮುಂದಿರುವ ದೀಪಸ್ತಂಭದಲ್ಲಿ ಹಣತೆಗಳನ್ನು ಇರಿಸಿದನು. ಯೆಹೋವನು ಆಜ್ಞಾಪಿಸಿದಂತೆಯೇ ಅವನು ಇದನ್ನು ಮಾಡಿದನು.
26 ಬಳಿಕ ಮೋಶೆಯು ಚಿನ್ನದ ವೇದಿಕೆಯನ್ನು ದೇವದರ್ಶನಗುಡಾರದೊಳಗೆ ಇರಿಸಿದನು. ಅವನು ವೇದಿಕೆಯನ್ನು ಪರದೆಯ ಮುಂಭಾಗದಲ್ಲಿ ಇರಿಸಿದನು. 27 ಬಳಿಕ ಅವನು ವೇದಿಕೆಯ ಮೇಲೆ ಸುಗಂಧವಾಸನೆಯುಳ್ಳ ಧೂಪವನ್ನು ಉರಿಸಿದನು. ಯೆಹೋವನು ಅವನಿಗೆ ಆಜ್ಞಾಪಿಸಿದಂತೆಯೇ ಇದನ್ನು ಮಾಡಿದನು. 28 ಬಳಿಕ ಮೋಶೆಯು ಪವಿತ್ರಗುಡಾರದ ಬಾಗಿಲಿಗೆ ಪರದೆಯನ್ನು ಹಾಕಿಸಿದನು.
29 ಪವಿತ್ರಗುಡಾರದ ಪ್ರವೇಶದ್ವಾರದ ಬಳಿಯಲ್ಲಿ ಯಜ್ಞವೇದಿಕೆಯನ್ನು ಇರಿಸಿದನು. ಅವನು ಯೆಹೋವನಿಗಾಗಿ ಆ ವೇದಿಕೆಯ ಮೇಲೆ ಸರ್ವಾಂಗಹೋಮವನ್ನೂ ಧಾನ್ಯಸಮರ್ಪಣೆಯನ್ನೂ ಮಾಡಿದನು. ಯೆಹೋವನು ಆಜ್ಞಾಪಿಸಿದಂತೆ ಅವನು ಇದನ್ನು ಮಾಡಿದನು.
30 ತರುವಾಯ ಮೋಶೆಯು ಗಂಗಾಳವನ್ನು ದೇವದರ್ಶನಗುಡಾರ ಮತ್ತು ವೇದಿಕೆಯ ನಡುವೆ ಇಟ್ಟನು. ತೊಳೆದುಕೊಳ್ಳುವುದಕ್ಕಾಗಿ ನೀರನ್ನು ಗಂಗಾಳದಲ್ಲಿ ಹಾಕಿಸಿದನು. 31 ಮೋಶೆ, ಆರೋನ ಮತ್ತು ಆರೋನನ ಪುತ್ರರು ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳುವುದಕ್ಕಾಗಿ ಈ ಗಂಗಾಳವನ್ನು ಉಪಯೋಗಿಸಿದರು. 32 ಅವರು ದೇವದರ್ಶನಗುಡಾರವನ್ನು ಪ್ರವೇಶಿಸುವಾಗಲೆಲ್ಲಾ ಮತ್ತು ಯಜ್ಞವೇದಿಕೆಯ ಸಮೀಪ ಹೋಗುವಾಗಲೆಲ್ಲಾ ತಮ್ಮನ್ನು ತೊಳೆದುಕೊಳ್ಳುತ್ತಿದ್ದರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಇದನ್ನು ಮಾಡಿದರು.
33 ತರುವಾಯ ಮೋಶೆಯು ಪವಿತ್ರಗುಡಾರದ ಅಂಗಳದ ಸುತ್ತಲೂ ಪರದೆಗಳನ್ನು ನಿಲ್ಲಿಸಿದನು. ಮೋಶೆಯು ವೇದಿಕೆಯನ್ನು ಅಂಗಳದಲ್ಲಿರಿಸಿದನು. ಬಳಿಕ ಅವನು ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಿಸಿದನು. ಹೀಗೆ ಮೋಶೆ ಯೆಹೋವನು ತನಗೆ ಕೊಟ್ಟ ಎಲ್ಲಾ ಕೆಲಸವನ್ನು ಮಾಡಿ ಮುಗಿಸಿದನು.
ಯೆಹೋವನ ಮಹಿಮೆ
34 ತರುವಾಯ ಮೋಡವು ದೇವದರ್ಶನಗುಡಾರವನ್ನು ಕವಿಯಿತು. ಯೆಹೋವನ ಮಹಿಮೆಯು ಪವಿತ್ರಗುಡಾರವನ್ನು ತುಂಬಿಕೊಂಡಿತು. 35 ಮೋಡವು ದೇವದರ್ಶನಗುಡಾರದ ಮೇಲೆ ನಿಂತಿತು. ಯೆಹೋವನ ಮಹಿಮೆಯು ಪವಿತ್ರಗುಡಾರವನ್ನು ತುಂಬಿಕೊಂಡಿದ್ದರಿಂದ ಮೋಶೆಯು ಒಳಗೆ ಪ್ರವೇಶಿಸಲಾಗಲಿಲ್ಲ.
36 ಜನರು ಯಾವಾಗ ಚಲಿಸಬೇಕೆಂದು ಮೋಡವು ತೋರಿಸುತ್ತಿತ್ತು. ಮೋಡವು ಪವಿತ್ರಗುಡಾರವನ್ನು ಬಿಟ್ಟು ಮೇಲೆದ್ದಾಗ, ಜನರು ಪ್ರಯಾಣ ಮಾಡತೊಡಗುತ್ತಿದ್ದರು. 37 ಆದರೆ ಮೋಡವು ಪವಿತ್ರಗುಡಾರದ ಮೇಲಿದ್ದಾಗ ಜನರು ಪ್ರಯಾಣ ಮಾಡುತ್ತಿರಲಿಲ್ಲ. ಮೋಡವು ಮೇಲೇಳುವವರೆಗೆ ಅವರು ಅಲ್ಲೇ ಇರುತ್ತಿದ್ದರು. 38 ಹೀಗೆ ಯೆಹೋವನ ಮೋಡವು ಹಗಲಿನಲ್ಲಿ ಪವಿತ್ರಗುಡಾರದ ಮೇಲೆ ನಿಂತಿತು. ರಾತ್ರಿಯಲ್ಲಿ ಮೋಡದಲ್ಲಿ ಅಗ್ನಿಯು ಪ್ರಕಾಶಿಸುತ್ತಿತ್ತು. ಆದ್ದರಿಂದ ಇಸ್ರೇಲ್ ಜನರೆಲ್ಲರೂ ತಾವು ಪ್ರಯಾಣ ಮಾಡುವಾಗ, ಮೋಡವನ್ನು ನೋಡಬಹುದಾಗಿತ್ತು.
19 ಬಳಿಕ, ಯೇಸುವನ್ನು ಕರೆದುಕೊಂಡು ಹೋಗಿ, ಕೊರಡೆಯಿಂದ ಹೊಡೆಯಬೇಕೆಂದು ಪಿಲಾತನು ಆಜ್ಞಾಪಿಸಿದನು. 2 ಸೈನಿಕರು ಮುಳ್ಳುಬಳ್ಳಿಗಳಿಂದ ಒಂದು ಕಿರೀಟವನ್ನು ಮಾಡಿ ಯೇಸುವಿನ ತಲೆಯ ಮೇಲೆ ಇಟ್ಟರು. ಬಳಿಕ ಸೈನಿಕರು ಯೇಸುವಿಗೆ ಕಡುಕೆಂಪಾದ ಅಂಗಿಯನ್ನು ತೊಡಿಸಿದರು. 3 ಸೈನಿಕರು ಪದೇಪದೇ ಯೇಸುವಿನ ಬಳಿಗೆ ಬಂದು, “ಯೆಹೂದ್ಯರ ರಾಜನೇ, ನಿನಗೆ ನಮಸ್ಕಾರ!” ಎಂದು ಹೇಳುತ್ತಾ ಆತನ ಕೆನ್ನೆಗೆ ಹೊಡೆದರು.
4 ಪಿಲಾತನು ಮತ್ತೆ ಹೊರಗೆ ಬಂದು, ಯೆಹೂದ್ಯರಿಗೆ, “ನೋಡಿ! ನಾನು ಯೇಸುವನ್ನು ನಿಮ್ಮ ಬಳಿಗೆ ತರುತ್ತಿದ್ದೇನೆ. ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ ಎಂಬುದು ನಿಮಗೆ ತಿಳಿದಿರಲಿ” ಎಂದು ಹೇಳಿದನು. 5 ಆಗ ಯೇಸು ಹೊರಗೆ ಬಂದನು. ಆತನ ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಇಟ್ಟಿದ್ದರು ಮತ್ತು ಕೆಂಪು ಅಂಗಿಯನ್ನು ಆತನಿಗೆ ತೊಡಿಸಿದ್ದರು. ಪಿಲಾತನು ಯೆಹೂದ್ಯರಿಗೆ, “ಇಗೋ, ಈ ಮನುಷ್ಯನು!” ಎಂದು ಹೇಳಿದನು.
6 ಮಹಾಯಾಜಕರು ಮತ್ತು ಯೆಹೂದ್ಯ ಕಾವಲುಗಾರರು ಯೇಸುವನ್ನು ಕಂಡು, “ಅವನನ್ನು ಶಿಲುಬೆಗೆ ಹಾಕಿಸು! ಅವನನ್ನು ಶಿಲುಬೆಗೆ ಹಾಕಿಸು!” ಎಂದು ಕೂಗಿದರು.
ಆದರೆ ಪಿಲಾತನು, “ನೀವೇ ಆತನನ್ನು ಶಿಲುಬೆಗೆ ಹಾಕಿರಿ. ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ” ಎಂದು ಉತ್ತರಕೊಟ್ಟನು.
7 ಯೆಹೂದ್ಯರು, “ನಮಗೊಂದು ನಿಯಮವಿದೆ. ಅದರ ಪ್ರಕಾರ ಇವನಿಗೆ ಮರಣದಂಡನೆ ಆಗಲೇಬೇಕು. ಯಾಕೆಂದರೆ ಇವನು ತನ್ನನ್ನು ದೇವರ ಮಗನೆಂದು ಹೇಳಿಕೊಂಡಿದ್ದಾನೆ” ಎಂದು ಉತ್ತರಕೊಟ್ಟರು.
8 ಪಿಲಾತನು ಇದನ್ನು ಕೇಳಿ ಬಹು ಭಯಗೊಂಡು, 9 ಮತ್ತೆ ಭವನದೊಳಗೆ ಹೋಗಿ, ಯೇಸುವಿಗೆ, “ನೀನು ಎಲ್ಲಿಯವನು?” ಎಂದು ಕೇಳಿದನು. ಆದರೆ ಯೇಸು ಮೌನವಾಗಿದ್ದನು. 10 ಪಿಲಾತನು, “ನೀನು ನನ್ನೊಂದಿಗೆ ಮಾತಾಡುವುದಿಲ್ಲವೇ? ನಿನ್ನನ್ನು ಬಿಡಿಸುವ ಅಧಿಕಾರವೂ ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗಿದೆ ಎಂಬುದು ನಿನಗೆ ತಿಳಿಯದೋ?” ಎಂದನು.
11 ಯೇಸು “ನನ್ನ ಮೇಲೆ ನಿನಗಿರುವ ಅಧಿಕಾರವೆಂದರೆ ದೇವರು ನಿನಗೆ ಕೊಟ್ಟಿರುವ ಅಧಿಕಾರವೊಂದೇ. ಆದ್ದರಿಂದ ನನ್ನನ್ನು ನಿನ್ನ ಕೈಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪದೋಷವಿರುವುದು” ಎಂದು ಉತ್ತರಕೊಟ್ಟನು.
12 ಇದಾದ ಮೇಲೆ, ಯೇಸುವನ್ನು ಬಿಡುಗಡೆ ಮಾಡಲು ಪಿಲಾತನು ಪ್ರಯತ್ನಿಸಿದನು. ಆದರೆ ಯೆಹೂದ್ಯರು, “ತನ್ನನ್ನು ರಾಜನೆಂದು ಹೇಳಿಕೊಳ್ಳುವ ಯಾವ ವ್ಯಕ್ತಿಯಾಗಲಿ ಸೀಸರನ ವಿರೋಧಿಯಾಗಿದ್ದಾನೆ. ಆದ್ದರಿಂದ ನೀನು ಈ ಮನುಷ್ಯನನ್ನು (ಯೇಸುವನ್ನು) ಬಿಡುಗಡೆ ಮಾಡಿದರೆ, ನೀನು ಸೀಸರನ ಮಿತ್ರನಲ್ಲವೆಂದೇ ಅದರ ಅರ್ಥ” ಎಂದು ಕೂಗಿದರು.
13 ಯೆಹೂದ್ಯರು ಹೇಳಿದ್ದನ್ನು ಕೇಳಿ ಪಿಲಾತನು ಯೇಸುವನ್ನು ಹೊರಗೆ ಕರೆಯಿಸಿ, “ಹಾಸುಗಲ್ಲು” ಎಂಬ ಕಟ್ಟೆಯ (ಯೆಹೂದ್ಯರ ಭಾಷೆ[a] ಯಲ್ಲಿ ಅದರ ಹೆಸರು ಗಬ್ಬಥ.) ಮೇಲಿದ್ದ ನ್ಯಾಯಪೀಠದಲ್ಲಿ ಕುಳಿತುಕೊಂಡನು. 14 ಅಂದು ಪಸ್ಕಹಬ್ಬದ ಸಿದ್ಧತೆಯ ದಿನ ಮತ್ತು ಆಗಲೇ ಮಧ್ಯಾಹ್ನವಾಗಿತ್ತು. ಪಿಲಾತನು ಯೆಹೂದ್ಯರಿಗೆ, “ಇಗೋ, ನಿಮ್ಮ ರಾಜನು!” ಎಂದು ಹೇಳಿದನು.
15 ಯೆಹೂದ್ಯರು, “ಕೊಲ್ಲಿರಿ, ಕೊಲ್ಲಿರಿ; ಅವನನ್ನು ಶಿಲುಬೆಗೇರಿಸಿರಿ!” ಎಂದು ಕಿರುಚಿದರು.
ಪಿಲಾತನು ಯೆಹೂದ್ಯರಿಗೆ, “ನಿಮ್ಮ ರಾಜನನ್ನು ಶಿಲುಬೆಗೇರಿಸಬೇಕೇ?” ಎಂದು ಕೇಳಿದನು.
ಮಹಾಯಾಜಕರು, “ನಮಗಿರುವ ಒಬ್ಬನೇ ರಾಜನೆಂದರೆ ಸೀಸರ್!” ಎಂದು ಉತ್ತರಕೊಟ್ಟರು.
16 ಆಗ ಪಿಲಾತನು, ಯೇಸುವನ್ನು ಶಿಲುಬೆಗೇರಿಸಲು ಅವರಿಗೆ ಒಪ್ಪಿಸಿಕೊಟ್ಟನು.
ಯೇಸುವನ್ನು ಶಿಲುಬೆಗೇರಿಸಿದರು
(ಮತ್ತಾಯ 27:32-44; ಮಾರ್ಕ 15:21-32; ಲೂಕ 23:26-39)
ಸೈನಿಕರು ಯೇಸುವನ್ನು ಕರೆದೊಯ್ದರು. 17 ಯೇಸು ತನ್ನ ಸ್ವಂತ ಶಿಲುಬೆಯನ್ನು ಹೊತ್ತುಕೊಂಡು, “ಕಪಾಲ” ಎಂಬ ಸ್ಥಳಕ್ಕೆ ಹೊರಟನು. (ಯೆಹೂದ್ಯರ ಭಾಷೆಯಲ್ಲಿ ಈ ಸ್ಥಳದ ಹೆಸರು “ಗೊಲ್ಗೊಥಾ.”) 18 ಅವರು ಗೊಲ್ಗೊಥಾದಲ್ಲಿ ಯೇಸವನ್ನೂ ಆತನ ಸಂಗಡ ಇನ್ನಿಬ್ಬರನ್ನೂ ಶಿಲುಬೆಗೇರಿಸಿದರು. ಅವರಿಬ್ಬರನ್ನು ಯೇಸುವಿನ ಎರಡು ಕಡೆಗಳಲ್ಲಿ ಹಾಕಿ, ಯೇಸುವನ್ನು ಅವರ ಮಧ್ಯದಲ್ಲಿ ಹಾಕಿದರು.
19 ಪಿಲಾತನು ಒಂದು ಫಲಕವನ್ನು ಬರೆದು ಶಿಲುಬೆಯ ಮೇಲೆ ಹಚ್ಚಿದನು. ಆ ಫಲಕದಲ್ಲಿ, “ನಜರೇತಿನ ಯೇಸು, ಯೆಹೂದ್ಯರ ರಾಜನು” ಎಂದು ಬರೆದಿತ್ತು. 20 ಆ ಫಲಕವನ್ನು ಯೆಹೂದ್ಯರ ಭಾಷೆಯಲ್ಲಿ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು. ಫಲಕದಲ್ಲಿ ಬರೆದಿರುವುದನ್ನು ಅನೇಕ ಯೆಹೂದ್ಯರು ಓದಿದರು. ಏಕೆಂದರೆ ಯೇಸುವನ್ನು ಶಿಲುಬೆಯ ಮೇಲೆ ಕೊಂದ ಸ್ಥಳವು ಪಟ್ಟಣದ ಸಮೀಪದಲ್ಲಿತ್ತು.
21 ಯೆಹೂದ್ಯ ಮಹಾಯಾಜಕರು ಪಿಲಾತನಿಗೆ, “‘ಯೆಹೂದ್ಯರ ರಾಜನು’ ಎಂದು ಬರೆಯಬೇಡ. ಆದರೆ, ‘ಇವನು ತನ್ನನ್ನು ಯೆಹೂದ್ಯರ ರಾಜ ಎಂದು ಹೇಳಿಕೊಂಡನು’ ಎಂಬುದಾಗಿ ಬರೆ” ಎಂದರು.
22 ಪಿಲಾತನು, “ನಾನು ಬರೆದಿರುವುದನ್ನು ಬದಲಾಯಿಸಲಾಗುವುದಿಲ್ಲ” ಎಂದು ಉತ್ತರಕೊಟ್ಟನು.
23 ಸೈನಿಕರು ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಆತನ ಬಟ್ಟೆಗಳನ್ನು ನಾಲ್ಕು ಭಾಗ ಮಾಡಿ ಒಬ್ಬೊಬ್ಬರು ಒಂದೊಂದು ಭಾಗವನ್ನು ತೆಗೆದುಕೊಂಡರು. ಅಲ್ಲದೆ ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಅದು ಹೊಲಿಗೆಯಿಲ್ಲದೆ ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು. 24 ಆದ್ದರಿಂದ ಸೈನಿಕರು, “ನಾವು ಇದನ್ನು ಹರಿದು ಪಾಲುಮಾಡಬಾರದು. ನಾವು ಚೀಟಿಹಾಕಿ ಇದು ಯಾರಿಗೆ ಬರುತ್ತದೋ ನೋಡೋಣ” ಎಂದು ಮಾತಾಡಿಕೊಂಡು ಹಾಗೆಯೇ ಮಾಡಿದರು.
“ಅವರು ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲು ಮಾಡಿಕೊಂಡರು;
ನನ್ನ ಅಂಗಿಗಾಗಿ ಚೀಟಿ ಹಾಕಿದರು”(A)
ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ಮಾತು ಹೀಗೆ ನೆರವೇರಿತು.
25 ಯೇಸುವಿನ ತಾಯಿ, ತಾಯಿಯ ಸಹೋದರಿ, ಕ್ಲೋಪನ ಹೆಂಡತಿಯಾದ ಮರಿಯಳು ಮತ್ತು ಮಗ್ದಲದ ಮರಿಯಳು ಶಿಲುಬೆಯ ಬಳಿಯಲ್ಲಿ ನಿಂತುಕೊಂಡಿದ್ದರು. 26 ಯೇಸು ತನ್ನ ತಾಯಿಯನ್ನೂ ಅಲ್ಲೇ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಅಮ್ಮಾ, ಇಗೋ, ನಿನ್ನ ಮಗನು” ಎಂದು ಹೇಳಿದನು. 27 ಬಳಿಕ ಯೇಸು ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದನು. ಅಂದಿನಿಂದ ಆ ಶಿಷ್ಯನು ಆಕೆಯನ್ನು ಕರೆದುಕೊಂಡು ಹೋಗಿ ತನ್ನ ಮನೆಯಲ್ಲೇ ಇರಿಸಿಕೊಂಡನು.
ಯೇಸುವಿನ ಮರಣ
(ಮತ್ತಾಯ 27:45-56; ಮಾರ್ಕ 15:33-41; ಲೂಕ 23:44-49)
28 ಇದಾದ ಮೇಲೆ ಎಲ್ಲವೂ ನೆರವೇರಿತೆಂದು ತಿಳಿದುಕೊಂಡು ಪವಿತ್ರ ಗ್ರಂಥದ ಮಾತನ್ನು ನೆರವೇರಿಸುವುದಕ್ಕಾಗಿ ಆತನು, “ನನಗೆ ದಾಹವಾಗಿದೆ”[b] ಎಂದು ಹೇಳಿದನು. 29 ಅಲ್ಲಿ ಹುಳಿರಸ ತುಂಬಿದ ಪಾತ್ರೆಯೊಂದಿತ್ತು. ಸೈನಿಕರು ಸ್ಪಂಜನ್ನು ಹುಳಿರಸದಲ್ಲಿ ತೋಯಿಸಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಅದನ್ನು ಮೇಲೆತ್ತಿ ಯೇಸುವಿನ ಬಾಯಿಗೆ ಮುಟ್ಟಿಸಿದರು. 30 ಯೇಸು ಹುಳಿರಸವನ್ನು ರುಚಿನೋಡಿ, “ತೀರಿತು” ಎಂದು ಹೇಳಿ ತಲೆಬಾಗಿ ಪ್ರಾಣಬಿಟ್ಟನು.
31 ಆ ದಿನವು ಸಿದ್ಧತೆಯ ದಿನವಾಗಿತ್ತು. ಮರುದಿನ ವಿಶೇಷವಾದ ಸಬ್ಬತ್‌ದಿನವಾಗಿತ್ತು. ಸಬ್ಬತ್‌ದಿನದಂದು ದೇಹಗಳು ಶಿಲುಬೆಯ ಮೇಲಿರುವುದು ಯೆಹೂದ್ಯರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವರ ಕಾಲುಗಳನ್ನು ಮುರಿದು ಬೇಗನೆ ಸಾಯಿಸಲು ಆಜ್ಞಾಪಿಸಬೇಕೆಂಬುದಾಗಿ ಅವರು ಪಿಲಾತನನ್ನು ಕೇಳಿಕೊಂಡರು. 32 ಆದ್ದರಿಂದ ಸೈನಿಕರು ಬಂದು ಯೇಸುವಿನೊಂದಿಗೆ ಶಿಲುಬೆಗೇರಿಸಲ್ಪಟ್ಟಿದ್ದ ಇಬ್ಬರ ಕಾಲುಗಳನ್ನು ಮುರಿದುಹಾಕಿದರು. 33 ಬಳಿಕ ಅವರು ಯೇಸುವಿನ ಅತಿ ಸಮೀಪಕ್ಕೆ ಬಂದಾಗ ಆತನು ಆಗಲೇ ಸತ್ತುಹೋಗಿರುವುದನ್ನು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ.
34 ಆದರೆ ಸೈನಿಕರಲ್ಲಿ ಒಬ್ಬನು ತನ್ನ ಈಟಿಯಿಂದ ಯೇಸುವಿನ ಪಕ್ಕೆಗೆ ತಿವಿದನು. ಪಕ್ಕೆಯಿಂದ ರಕ್ತ ಮತ್ತು ನೀರು ಹೊರಗೆ ಹರಿದುಬಂದವು. 35 (ಇದನ್ನು ಕಂಡವನೇ ಇದರ ಬಗ್ಗೆ ಹೇಳಿದ್ದಾನೆ. ನೀವು ಸಹ ನಂಬಬೇಕೆಂದು ಅವನು ಇದನ್ನು ತಿಳಿಸಿದ್ದಾನೆ. ಅವನು ಹೇಳುವ ಸಂಗತಿಗಳು ಸತ್ಯವಾಗಿವೆ. ತಾನು ಹೇಳುತ್ತಿರುವುದು ಸತ್ಯವೆಂದು ಅವನಿಗೆ ಗೊತ್ತಿದೆ.) 36 ಪವಿತ್ರ ಗ್ರಂಥದಲ್ಲಿ ಬರೆದಿರುವ, “ಆತನ ಎಲುಬುಗಳಲ್ಲಿ ಒಂದಾದರೂ ಮುರಿಯಲ್ಪಡುವುದಿಲ್ಲ”(B) ಎಂಬ ಮಾತು ಹೀಗೆ ನೆರವೇರಿತು. 37 ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ, “ಜನರು ತಾವು ಈಟಿಯಿಂದ ಇರಿದವನನ್ನೇ ದಿಟ್ಟಿಸಿ ನೋಡುವರು”(C) ಎಂತಲೂ ಬರೆದಿದೆ.
ಯೇಸುವಿನ ಶವಸಂಸ್ಕಾರ
(ಮತ್ತಾಯ 27:57-61; ಮಾರ್ಕ 15:42-47; ಲೂಕ 23:50-56)
38 ತರುವಾಯ, ಅರಿಮಥಾಯ ಊರಿನ ಯೋಸೇಫ ಎಂಬವನು ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಪಿಲಾತನನ್ನು ಕೇಳಿಕೊಂಡನು. (ಯೋಸೇಫನು ಯೇಸುವಿನ ಒಬ್ಬ ಅನುಯಾಯಿ ಆಗಿದ್ದನು. ಆದರೆ ಅವನು ಯೆಹೂದ್ಯರಿಗೆ ಹೆದರಿಕೊಂಡಿದ್ದರಿಂದ ಅದರ ಬಗ್ಗೆ ಜನರಿಗೆ ಹೇಳಿಕೊಳ್ಳಲಿಲ್ಲ.) ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗಲು ಪಿಲಾತನು ಅವನಿಗೆ ಅಪ್ಪಣೆಕೊಟ್ಟನು. ಆದ್ದರಿಂದ ಅವನು ಬಂದು ಯೇಸುವಿನ ದೇಹವನ್ನು ತೆಗೆದುಕೊಂಡು ಹೋದನು.
39 ನಿಕೊದೇಮನೂ ಯೋಸೇಫನೊಂದಿಗೆ ಹೋದನು. ಹಿಂದೊಮ್ಮೆ, ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನೊಂದಿಗೆ ಮಾತಾಡಿದ್ದವನೇ ನಿಕೊದೇಮನು. ಅವನು ಸುಮಾರು ಐವತ್ತು ಕಿಲೋಗ್ರಾಮಿನಷ್ಟು ಸುಗಂಧದ್ರವ್ಯಗಳನ್ನು ತೆಗೆದುಕೊಂಡು ಬಂದನು. ಆ ಸುಗಂಧದ್ರವ್ಯವು ರಕ್ತ ಬೋಳ ಮತ್ತು ಅಗರುಗಳ ಮಿಶ್ರಣವಾಗಿತ್ತು. 40 ಈ ಇಬ್ಬರು ಯೇಸುವಿನ ದೇಹವನ್ನು ತೆಗೆದುಕೊಂಡು ಅದಕ್ಕೆ ಸುಗಂಧದ್ರವ್ಯವನ್ನು ಹಾಕಿ ನಾರುಬಟ್ಟೆಗಳಿಂದ ಸುತ್ತಿದರು. (ಯೆಹೂದ್ಯರು ಸತ್ತವರನ್ನು ಇದೇರೀತಿ ಸಮಾಧಿ ಮಾಡುತ್ತಾರೆ.) 41 ಯೇಸುವನ್ನು ಶಿಲುಬೆಯ ಮೇಲೆ ಕೊಂದ ಸ್ಥಳದಲ್ಲೇ ಒಂದು ತೋಟವಿತ್ತು. ಆ ತೋಟದಲ್ಲಿ ಒಂದು ಹೊಸ ಸಮಾಧಿಯಿತ್ತು. ಅದರಲ್ಲಿ ಹಿಂದೆಂದೂ ಯಾರನ್ನೂ ಸಮಾಧಿ ಮಾಡಿರಲಿಲ್ಲ. 42 ಅದು ಸಮೀಪವಾಗಿದ್ದುದರಿಂದ ಮತ್ತು ಯೆಹೂದ್ಯರು ತಮ್ಮ ಸಬ್ಬತ್ ದಿನವನ್ನು ಆರಂಭಮಾಡಲು ಸಿದ್ಧರಾಗುತ್ತಿದುದರಿಂದ ಅವರು ಯೇಸುವನ್ನು ಆ ಸಮಾಧಿಯಲ್ಲಿಟ್ಟರು.
16 ಜನರು ತಾವು ಹೇಳಬೇಕಾದದ್ದನ್ನು ಆಲೋಚಿಸಿಕೊಂಡರೂ ನಾಲಿಗೆಗೆ ತಕ್ಕ ಮಾತುಗಳನ್ನು ಕೊಡುವವನು ಯೆಹೋವನೇ.
2 ಜನರು ತಮ್ಮ ಕಾರ್ಯಗಳೆಲ್ಲಾ ಸರಿಯೆಂದು ಆಲೋಚಿಸಿಕೊಂಡರೂ ಅವುಗಳ ಉದ್ದೇಶಕ್ಕನುಸಾರವಾಗಿ ತೀರ್ಪು ಕೊಡುವವನು ಯೆಹೋವನೇ.
3 ನಿಮ್ಮ ಕಾರ್ಯಗಳನ್ನು ಯೆಹೋವನಿಗೆ ವಹಿಸಿರಿ; ಆಗ ನಿಮ್ಮ ಯೋಜನೆಗಳೆಲ್ಲಾ ಸಫಲವಾಗುವವು.
4 ಯೆಹೋವನು ಪ್ರತಿಯೊಂದನ್ನು ತನ್ನ ಉದ್ದೇಶಕ್ಕನುಸಾರವಾಗಿ ಮಾಡಿದ್ದಾನೆ. ಆತನು ಕೆಡುಕರನ್ನು ನಾಶನದ ದಿನಕ್ಕಾಗಿ ಇಟ್ಟಿದ್ದಾನೆ.
5 ಗರ್ವಿಷ್ಠರು ಯೆಹೋವನಿಗೆ ಅಸಹ್ಯ. ಆ ಗರ್ವಿಷ್ಠರಿಗೆ ಯೆಹೋವನ ದಂಡನೆ ಖಂಡಿತ.
6 ಪ್ರೀತಿ ಮತ್ತು ನಂಬಿಗಸ್ತಿಕೆಗಳು ದೋಷಕ್ಕೆ ಪ್ರಾಯಶ್ಚಿತ್ತವಾಗಿವೆ. ಯೆಹೋವನಲ್ಲಿ ಭಯಭಕ್ತಿಯಿಂದಿರಿ, ಆಗ ನೀವು ದುಷ್ಟತನದಿಂದ ದೂರವಾಗುವಿರಿ.
7 ಯೆಹೋವನ ಚಿತ್ತಕ್ಕನುಸಾರವಾಗಿ ಜೀವಿಸುವವನು ತನ್ನ ವೈರಿಗಳೊಡನೆಯೂ ಸಮಾಧಾನದಿಂದಿರುವನು.
8 ಅನ್ಯಾಯದಿಂದ ಹೆಚ್ಚು ಸಂಪಾದಿಸುವುದಕ್ಕಿಂತ ನ್ಯಾಯವಾಗಿ ಸ್ವಲ್ಪ ಸಂಪಾದಿಸುವುದೇ ಉತ್ತಮ.
9 ಒಬ್ಬನು ಅನೇಕ ಯೋಜನೆಗಳನ್ನು ಮಾಡಿಕೊಂಡರೂ ಭವಿಷ್ಯತ್ತನ್ನು ನಿರ್ಧರಿಸುವವನು ಯೆಹೋವನೇ.
10 ರಾಜನ ಮಾತು ದೇವರಿಂದ ಬಂದ ಸಂದೇಶದಂತಿದೆ. ಅವನ ತೀರ್ಮಾನ ಯಾವಾಗಲೂ ನ್ಯಾಯವಾಗಿರಬೇಕು.
11 ಎಲ್ಲಾ ನ್ಯಾಯವಾದ ಅಳತೆಮಾಪಕಗಳು ಮತ್ತು ತಕ್ಕಡಿಗಳು ಯೆಹೋವನಿಗೆ ಇಷ್ಟ. ನ್ಯಾಯವಾದ ಒಪ್ಪಂದವು ಆತನಿಗೆ ಇಷ್ಟ.
12 ರಾಜನು ಕೆಟ್ಟದ್ದನ್ನು ಸಹಿಸಲಾರನು; ಯಾಕೆಂದರೆ ಒಳ್ಳೆಯದರಿಂದಲೇ ಅವನ ರಾಜ್ಯಕ್ಕೆ ಬಲ.
13 ರಾಜರಿಗೆ ಸತ್ಯವನ್ನು ಕೇಳಲು ಇಷ್ಟ, ಸುಳ್ಳಾಡದ ಜನರೂ ಇಷ್ಟ.
14 ರಾಜನು ಕೋಪದಿಂದಿರುವಾಗ ಯಾರನ್ನಾದರೂ ಕೊಂದರೂ ಕೊಲ್ಲಬಹುದು. ಆದರೆ ಜ್ಞಾನಿಯು ಆತನ ಕೋಪವನ್ನು ಶಮನಗೊಳಿಸಬಲ್ಲನು.
15 ರಾಜನು ಸಂತೋಷದಿಂದಿರುವಾಗ ಎಲ್ಲರ ಜೀವನವು ಉತ್ತಮವಾಗಿರುವುದು. ರಾಜನು ನಿನ್ನನ್ನು ಮೆಚ್ಚಿಕೊಂಡರೆ, ಅದು ನಿನ್ನ ಪಾಲಿಗೆ ಮೋಡದಿಂದ ಸುರಿಯುವ ಮುಂಗಾರು ಮಳೆಯಂತಿರುವುದು.
16 ಜ್ಞಾನ ಸಂಪಾದನೆಯು ಬಂಗಾರ ಸಂಪಾದನೆಗಿಂತಲೂ ಶ್ರೇಷ್ಠ. ವಿವೇಕ ಸಂಪಾದನೆಯು ಬೆಳ್ಳಿ ಸಂಪಾದನೆಗಿಂತಲೂ ಉತ್ತಮ.
17 ನೀತಿವಂತನ ಜೀವಿತವು ದುಷ್ಟತನದಿಂದ ದೂರವಾಗಿರುವುದು. ತನ್ನ ಜೀವಿತದ ಬಗ್ಗೆ ಎಚ್ಚರಿಕೆಯುಳ್ಳವನು ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವನು.
18 ಅಹಂಕಾರಿಯು ನಾಶನದ ಅಪಾಯದಲ್ಲಿದ್ದಾನೆ. ದುರಾಭಿಮಾನಿಯು ಸೋಲಿನ ಅಪಾಯದಲ್ಲಿದ್ದಾನೆ.
19 ಗರ್ವಿಷ್ಠರೊಡನೆ ಐಶ್ವರ್ಯವನ್ನು ಹಂಚಿಕೊಳ್ಳುವದಕ್ಕಿಂತ ದೀನರಾಗಿದ್ದು ಬಡಜನರೊಡನೆ ವಾಸಿಸುವುದೇ ಉತ್ತಮ.
20 ಉಪದೇಶವನ್ನು ಗಮನವಿಟ್ಟು ಕೇಳುವವನು ಅದರ ಲಾಭ ಹೊಂದುವನು; ಯೆಹೋವನಲ್ಲಿ ಭರವಸೆ ಇಡುವವನು ಆಶೀರ್ವಾದ ಹೊಂದುವನು.
21 ಜ್ಞಾನಿಯನ್ನು ಅವನ ಜ್ಞಾನದಿಂದಲೇ ಜನರು ಗುರುತಿಸುವರು. ಎಚ್ಚರಿಕೆಯಿಂದ ಮಾತಾಡುವವನು ಒಡಂಬಡಿಸುವನು.
22 ವಿವೇಕವು ವಿವೇಕಿಗಳಿಗೆ ನಿಜಜೀವವನ್ನು ಕೊಡುತ್ತದೆ. ಆದರೆ ಮೂಢರು ತಮ್ಮ ಮೂಢತನದಿಂದಲೇ ದಂಡಿಸಲ್ಪಡುವರು.
23 ಜ್ಞಾನಿಯ ಹೃದಯವು ಅವನ ಬಾಯಿಗೆ ಮಾರ್ಗದರ್ಶನ. ಅವನ ಮಾತುಗಳು ಒಳ್ಳೆಯದಾಗಿವೆ; ಕೇಳಲು ಯೋಗ್ಯವಾಗಿವೆ.
24 ಸವಿನುಡಿಗಳು ಜೇನಿನಂತಿವೆ. ಅವು ಸ್ವೀಕಾರಕ್ಕೆ ಸುಲಭ; ಆರೋಗ್ಯಕ್ಕೆ ಉಪಯುಕ್ತ.
25 ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ಮಾರ್ಗವಿದೆ; ಆದರೆ ಅದರ ಅಂತ್ಯವು ಮರಣ.
26 ಕೆಲಸಗಾರನನ್ನು ಅವನ ಹೊಟ್ಟೆಯೇ ದುಡಿಮೆಯಲ್ಲಿ ತೊಡಗಿಸುತ್ತದೆ. ಅವನ ಹಸಿವೇ ಊಟಕ್ಕಾಗಿ ಅವನನ್ನು ದುಡಿಸುತ್ತದೆ.
27 ನೀಚನು ಕೆಟ್ಟಕಾರ್ಯಗಳನ್ನು ಆಲೋಚಿಸಿಕೊಳ್ಳುವನು. ಅವನ ಮಾತುಗಳು ಬೆಂಕಿಯಂತೆ ನಾಶಕರ.
28 ಕೆಡುಕನು ಜಗಳ ಎಬ್ಬಿಸುವನು; ಗಾಳಿಸುದ್ದಿಯನ್ನು ಹಬ್ಬಿಸುವವನು ಆಪ್ತಸ್ನೇಹಿತರಲ್ಲಿ ಒಡಕು ಉಂಟುಮಾಡುವನು.
29 ಕೆಡುಕನು ತನ್ನ ಸ್ನೇಹಿತರನ್ನೇ ಮೋಸಗೊಳಿಸಿ ನಾಶನಕ್ಕೆ ನಡೆಸುವನು.
30 ಕಣ್ಣುಮಿಟುಕಿಸಿ ನಗುವವನು ತಪ್ಪಾದ ಹಾಗೂ ಕೆಟ್ಟಕಾರ್ಯವೆಸಗಲು ಯೋಜಿಸುತ್ತಿರುವನು.
31 ಒಳ್ಳೆಯವರಿಗೆ ಅವರ ನರೆಕೂದಲೇ ವೈಭವದ ಕಿರೀಟ.
32 ಶೂರನಾಗಿರುವುದಕ್ಕಿಂತ ತಾಳ್ಮೆಯಿಂದಿರುವುದೇ ಶ್ರೇಷ್ಠ; ಪಟ್ಟಣವನ್ನು ವಶಪಡಿಸಿಕೊಳ್ಳುವುದಕ್ಕಿಂತ ನಿಮ್ಮ ಕೋಪವನ್ನು ಸ್ವಾಧೀನದಲ್ಲಿಟ್ಟುಕೊಳ್ಳವುದೇ ಉತ್ತಮ.
33 ಜನರು ಚೀಟುಹಾಕಿ ನಿರ್ಧಾರ ಮಾಡಿದರೂ ಆ ನಿರ್ಧಾರಗಳು ಬರುವುದು ಯೆಹೋವನಿಂದಲೇ.
ಕ್ರಿಸ್ತನೇ ಎಲ್ಲಕ್ಕಿಂತಲೂ ಮುಖ್ಯ
3 ನನ್ನ ಸಹೋದರ ಸಹೋದರಿಯರೇ, ಪ್ರಭುವಿನಲ್ಲಿ ಸಂತೋಷವಾಗಿರಿ. ನಾನು ಮೊದಲು ಬರೆದದ್ದನ್ನೇ ಮತ್ತೆ ಬರೆಯಲು ನನಗೆ ಬೇಸರವೇನೂ ಇಲ್ಲ; ಏಕೆಂದರೆ ಅದು ನಿಮ್ಮನ್ನು ಮತ್ತಷ್ಟು ಸಂರಕ್ಷಿಸುತ್ತದೆ.
2 ಕೇಡುಮಾಡುವಂಥ ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಅವರು ನಾಯಿಗಳಂತಿದ್ದಾರೆ. ಸುನ್ನತಿ ಎಂದು ಹೇಳಿಕೊಂಡು ಅಂಗಚ್ಛೇದನೆ ಮಾಡುವವರ ವಿಷಯದಲ್ಲಿ ಎಚ್ಚರಿಕೆಯಾಗಿರಿ. 3 ನಾವಾದರೋ ನಿಜವಾದ ಸುನ್ನತಿಯನ್ನು ಹೊಂದಿದವರಾಗಿದ್ದೇವೆ; ದೇವರನ್ನು ಆತ್ಮನ ಮೂಲಕ ಆರಾಧಿಸುವವರಾಗಿದ್ದೇವೆ.[a] ನಾವು ಕ್ರಿಸ್ತ ಯೇಸುವಿನಲ್ಲಿರಲು ಹೆಮ್ಮೆಪಡುತ್ತೇವೆ. ನಾವು ನಮ್ಮ ಮೇಲಾಗಲಿ ನಾವು ಮಾಡಬಲ್ಲವುಗಳ ಮೇಲಾಗಲಿ ಭರವಸೆ ಇಡುವುದಿಲ್ಲ. 4 ನಾನು ನನ್ನ ಮೇಲೆ ಭರವಸೆ ಇಡಬಲ್ಲವನಾಗಿದ್ದರೂ ಇಡುವುದಿಲ್ಲ. ತನ್ನ ಮೇಲೆ ಭರವಸೆ ಇಡಲು ತನಗೆ ಆಧಾರವಿರುವುದಾಗಿ ಯಾವನಾದರೂ ಯೋಚಿಸಿದರೆ, ನನ್ನ ಮೇಲೆ ಭರವಸೆ ಇಡಲು ನನಗೆ ಅದಕ್ಕಿಂತಲೂ ಹೆಚ್ಚಿನ ಆಧಾರವಿದೆ. 5 ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು. ನಾನು ಇಸ್ರೇಲ್ ವಂಶದವನು ಮತ್ತು ಬೆನ್ಯಾಮೀನನ ಕುಲದವನು. ನಾನು ಇಬ್ರಿಯನು ಮತ್ತು ನನ್ನ ತಂದೆತಾಯಿಗಳು ಸಹ ಇಬ್ರಿಯರು. ನಾನು ಮೋಶೆಯ ಧರ್ಮಶಾಸ್ತ್ರವನ್ನು ಮುಖ್ಯವಾದದ್ದೆಂದು ಪರಿಗಣಿಸಿ ಫರಿಸಾಯನಾದೆನು; 6 ಯೆಹೂದ್ಯ ಧರ್ಮದಲ್ಲಿ ಬಹಳ ಆಸಕ್ತಿಯುಳ್ಳವನಾಗಿದ್ದು ಕ್ರೈಸ್ತಸಭೆಯನ್ನು (ವಿಶ್ವಾಸಿಗಳನ್ನು) ಹಿಂಸಿಸಿದೆನು. ಮೋಶೆಯ ಧರ್ಮಶಾಸ್ತ್ರಕ್ಕೆ ಯಾವಾಗಲೂ ವಿಧೇಯನಾಗಿದ್ದುದರಿಂದ ಯಾರೂ ನನ್ನ ವಿಷಯದಲ್ಲಿ ತಪ್ಪನ್ನು ಕಂಡುಹಿಡಿಯಲಾಗಲಿಲ್ಲ.
7 ಒಂದು ಕಾಲದಲ್ಲಿ ಇವುಗಳೆಲ್ಲ ನನಗೆ ಮುಖ್ಯವಾಗಿದ್ದವು. ಆದರೆ ಈಗ ಅವುಗಳೆಲ್ಲ ಕ್ರಿಸ್ತನ ದೆಸೆಯಿಂದ ನಿಷ್ಪ್ರಯೋಜಕವಾಗಿವೆ. 8 ಅಷ್ಟೇ ಅಲ್ಲ, ನನ್ನ ಪ್ರಭುವಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದೇ ಎಲ್ಲಾ ಸಂಗತಿಗಳಿಗಿಂತಲೂ ಅತಿಶ್ರೇಷ್ಠವಾದದ್ದೆಂದು ನನಗೆ ಮನದಟ್ಟಾಗಿದೆ. ನಾನು ಯಾವುದನ್ನು ಮುಖ್ಯವಾದವುಗಳೆಂದು ಪರಿಗಣಿಸಿದ್ದೆನೋ ಅವುಗಳನ್ನೆಲ್ಲ ಕ್ರಿಸ್ತನ ನಿಮಿತ್ತ ಕಳೆದುಕೊಂಡೆನು. ಅವುಗಳೆಲ್ಲ ನಿಷ್ಪ್ರಯೋಜಕವಾದವುಗಳೆಂದು ನನಗೆ ತಿಳಿದಿದೆ. 9 ನಾನು ಕ್ರಿಸ್ತನನ್ನು ಹೊಂದಿಕೊಳ್ಳಲು ಮತ್ತು ಕ್ರಿಸ್ತನಲ್ಲಿರಲು ಇದು ನನಗೆ ಅವಕಾಶ ಮಾಡಿಕೊಡುತ್ತದೆ. ನಾನು ಕ್ರಿಸ್ತನ ಮೂಲಕ ನೀತಿವಂತನಾಗಿದ್ದೇನೆ. ಈ ನೀತಿಯು, ಧರ್ಮಶಾಸ್ತ್ರವನ್ನು ಅನುಸರಿಸಿದ ಮಾತ್ರಕ್ಕೆ ದೊರೆಯುವುದಿಲ್ಲ. ಇದು ನಂಬಿಕೆಯ ಮೂಲಕ ದೇವರಿಂದ ಬರುತ್ತದೆ. ಕ್ರಿಸ್ತನಲ್ಲಿ ನನಗಿರುವ ನಂಬಿಕೆಯ ಮೂಲಕ ದೇವರು ನನ್ನನ್ನು ನೀತಿವಂತನನ್ನಾಗಿ ಮಾಡಿದನು. 10 ಕ್ರಿಸ್ತನನ್ನೂ ಪುನರುತ್ಥಾನದ ಶಕ್ತಿಯನ್ನೂ ತಿಳಿದುಕೊಂಡು ಆತನ ಸಂಕಟದಲ್ಲಿ ಪಾಲುಗಾರನಾಗಿ ಆತನ ಮರಣದಲ್ಲಿ ಆತನಂತಾಗಬೇಕೆಂಬುದೇ ನನ್ನ ಅಪೇಕ್ಷೆ. 11 ಹೀಗಾದರೆ, ನಾನು ಸತ್ತವರೊಳಗಿಂದ ಎಬ್ಬಿಸಲ್ಪಡುತ್ತೇನೆ ಎಂಬ ನಿರೀಕ್ಷೆ ನನಗಿದೆ.
ಗುರಿಮುಟ್ಟಲು ಪ್ರಯತ್ನ
12 ಈಗಾಗಲೇ ನಾನು ಇದೆಲ್ಲವನ್ನು ಸಾಧಿಸಿ ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ಹೇಳುತ್ತಿಲ್ಲ. ನಾನು ಆ ಗುರಿಯನ್ನು ಇನ್ನೂ ಮುಟ್ಟಿಲ್ಲ. ಆದರೆ ಆ ಗುರಿಯನ್ನು ಮುಟ್ಟಿ ಅದನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದು ಕ್ರಿಸ್ತನ ಅಪೇಕ್ಷೆ. ಆದಕಾರಣವೇ, ಕ್ರಿಸ್ತನು ನನ್ನನ್ನು ತನ್ನವನನ್ನಾಗಿ ಮಾಡಿಕೊಂಡನು. 13 ಸಹೋದರ ಸಹೋದರಿಯರೇ, ನಾನಿನ್ನೂ ಆ ಗುರಿಯನ್ನು ಮುಟ್ಟಿಲ್ಲವೆಂಬುದು ನನಗೆ ಗೊತ್ತಿದೆ. ಆದರೆ ನಾನು ಯಾವಾಗಲೂ ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ನನ್ನ ಮುಂದಿರುವ ಗುರಿಯನ್ನು ಮುಟ್ಟಲು ನನ್ನಿಂದಾದಷ್ಟರ ಮಟ್ಟಿಗೆ ಓಡುತ್ತಿದ್ದೇನೆ. 14 ದೇವರು ನಮ್ಮನ್ನು ಕ್ರಿಸ್ತನ ಮೂಲಕ ಮೇಲೋಕದ ಜೀವಿತಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಹುಮಾನವನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ.
15 ಆತ್ಮಿಕತೆಯಲ್ಲಿ ಪರಿಪೂರ್ಣವಾದ ಮಟ್ಟಕ್ಕೆ ಬಂದಿರುವ ನಾವೆಲ್ಲರೂ ಇದೇ ರೀತಿ ಯೋಚಿಸಬೇಕು. ನೀವು ಈ ಸಂಗತಿಗಳಲ್ಲಿ ಯಾವುದನ್ನಾದರೂ ಒಪ್ಪಿಕೊಳ್ಳದಿದ್ದರೆ ದೇವರೇ ನಿಮಗೆ ಅದನ್ನು ಸ್ಪಷ್ಟಪಡಿಸುವನು. 16 ಆದರೆ ನಾವು ಈಗಾಗಲೇ ಹೊಂದಿರುವ ಸತ್ಯವನ್ನು ಅನುಸರಿಸುತ್ತಾ ನಡೆಯೋಣ.
17 ಸಹೋದರ ಸಹೋದರಿಯರೇ, ನೀವೆಲ್ಲರೂ ನನ್ನಂತೆ ಜೀವಿಸಲು ಪ್ರಯತ್ನಿಸಿ. ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ಜೀವಿಸುವವರನ್ನು ಅನುಸರಿಸಿರಿ. 18 ಅನೇಕರು ಕ್ರಿಸ್ತನ ಶಿಲುಬೆಗೆ ವೈರಿಗಳೊ ಎಂಬಂತೆ ಜೀವಿಸುತ್ತಾರೆ. ಅವರ ಬಗ್ಗೆ ನಾನು ನಿಮಗೆ ಅನೇಕ ಸಲ ತಿಳಿಸಿದ್ದೇನೆ. ಈಗಲೂ ಕಣ್ಣೀರಿನಿಂದ ಹೇಳುತ್ತೇನೆ. 19 ಅವರ ನಡತೆಯು ಅವರನ್ನು ನಾಶದೆಡೆಗೆ ನಡೆಸುತ್ತಿದೆ. ಅವರು ದೇವರ ಸೇವೆ ಮಾಡುತ್ತಿಲ್ಲ. ಆ ಜನರು ಕೇವಲ ತಮ್ಮ ಸಂತೋಷಕ್ಕಾಗಿ ಜೀವಿಸುತ್ತಿದ್ದಾರೆ. ಅವರು ನಾಚಿಕೆಕರವಾದ ಕೆಲಸಗಳನ್ನು ಮಾಡಿ, ಅವುಗಳ ಬಗ್ಗೆ ಹೆಮ್ಮೆಪಡುತ್ತಾರೆ. ಅವರು ಕೇವಲ ಈ ಲೋಕದ ವಿಷಯಗಳ ಬಗ್ಗೆ ಆಲೋಚಿಸುತ್ತಾರೆ. 20 ನಾವಾದರೋ ಪರಲೋಕ ಸಂಸ್ಥಾನದವರು. ನಮ್ಮ ರಕ್ಷಕನು ಅಲ್ಲಿಂದಲೇ ಬರುವುದನ್ನು ನಾವು ಎದುರುನೋಡುತ್ತಿದ್ದೇವೆ. ಪ್ರಭುವಾದ ಯೇಸು ಕ್ರಿಸ್ತನೇ ನಮ್ಮ ರಕ್ಷಕನು. 21 ಆತನು ತನ್ನ ಶಕ್ತಿಯಿಂದ ಸಮಸ್ತವನ್ನು ಆಳುತ್ತಾನೆ ಮತ್ತು ನಮ್ಮ ದೀನಾವಸ್ಥೆಯ ಈ ಶರೀರವನ್ನು ರೂಪಾಂತರಪಡಿಸಿ ತನ್ನ ಸ್ವಂತ ಮಹಿಮಾಶರೀರದಂತೆ ಮಾಡುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International