Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 33

“ನಾನು ನಿಮ್ಮೊಂದಿಗೆ ಬರುವುದಿಲ್ಲ”

33 ತರುವಾಯ ಯೆಹೋವನು ಮೋಶೆಗೆ, “ನೀನು ಮತ್ತು ಈಜಿಪ್ಟಿನಿಂದ ನೀನು ಕರೆದುಕೊಂಡು ಬಂದ ಜನರು ಈ ಸ್ಥಳವನ್ನು ಬಿಡಬೇಕು. ನಾನು ಅಬ್ರಹಾಮನಿಗೆ, ಇಸಾಕನಿಗೆ ಮತ್ತು ಯಾಕೋಬನಿಗೆ ವಾಗ್ದಾನ ಮಾಡಿದ ದೇಶಕ್ಕೆ ಹೋಗಿ. ನಾನು ಅವರಿಗೆ ‘ನಿಮ್ಮ ನಂತರ ಜೀವಿಸುವ ನಿಮ್ಮ ಸಂತತಿಯವರಿಗೆ ಆ ದೇಶವನ್ನು ಕೊಡುವೆನು’ ಎಂದು ನಾನು ಅವರಿಗೆ ವಾಗ್ದಾನ ಮಾಡಿದ್ದೇನೆ. ನಿಮ್ಮ ಮುಂದೆ ಹೋಗುವುದಕ್ಕೆ ನಾನು ಒಬ್ಬ ದೂತನನ್ನು ಕಳುಹಿಸುವೆನು. ಕಾನಾನ್ಯರನ್ನು, ಅಮೋರಿಯರನ್ನು, ಹಿತ್ತಿಯರನ್ನು, ಪೆರಿಜೀಯರನ್ನು, ಹಿವ್ವಿಯರನ್ನು ಮತ್ತು ಯೆಬೂಸಿಯರನ್ನು ನಾನು ಸೋಲಿಸುವೆನು. ನಿಮ್ಮ ದೇಶದಿಂದ ಅವರನ್ನು ಬಲವಂತದಿಂದ ಅಟ್ಟಿಬಿಡುವೆನು. ಆದ್ದರಿಂದ ಸಮೃದ್ಧಿಕರವಾದ ಆ ದೇಶಕ್ಕೆ ಹೋಗಿರಿ. ಆದರೆ ನಾನು ನಿಮ್ಮೊಂದಿಗೆ ಬರುವುದಿಲ್ಲ. ನೀವು ನನ್ನ ಆಜ್ಞೆಗೆ ವಿಧೇಯರಾಗದೆ ನನ್ನನ್ನು ಕೋಪಗೊಳಿಸುತ್ತೀರಿ. ನಾನು ನಿಮ್ಮೊಂದಿಗೆ ಬಂದರೆ, ದಾರಿಯಲ್ಲಿ ನಿಮ್ಮನ್ನು ಸಂಹರಿಸುವೆನು” ಎಂದು ಹೇಳಿದನು.

ಈ ದುಃಖದ ಸಮಾಚಾರವನ್ನು ಕೇಳಿ ಜನರು ನೊಂದುಕೊಂಡರು. ಅವರಲ್ಲಿ ಒಬ್ಬರಾದರೂ ತಮ್ಮ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ. ಯೆಹೋವನು ಮೋಶೆಗೆ, “ಇಸ್ರೇಲರಿಗೆ ಹೀಗೆಂದು ಹೇಳು: ನೀವು ಅವಿಧೇಯರಾದ ಜನರಾಗಿದ್ದೀರಿ. ನಾನು ನಿಮ್ಮೊಡನೆ ಕ್ಷಣಹೊತ್ತು ಸಂಚರಿಸಿದರೆ, ನಿಮ್ಮನ್ನು ಸಂಹರಿಸುವೆನು. ಆದ್ದರಿಂದ ನಿಮ್ಮೆಲ್ಲಾ ಆಭರಣಗಳನ್ನು ತೆಗೆದುಬಿಡಿರಿ. ನೀವು ಮಾಡಬೇಕಾದದ್ದನ್ನು ನಾನೇ ತಿಳಿಸುವೆನು!” ಎಂದು ಹೇಳಿದನು. ಇಸ್ರೇಲರು ಹೋರೆಬ್ ಬೆಟ್ಟದಲ್ಲಿದ್ದಾಗ ಆಭರಣಗಳನ್ನು ಧರಿಸಿಕೊಳ್ಳುವುದನ್ನು ಬಿಟ್ಟುಬಿಟ್ಟರು.

ತಾತ್ಕಾಲಿಕ ದೇವದರ್ಶನಗುಡಾರ

ಮೋಶೆಯು ಗುಡಾರವನ್ನು ಪಾಳೆಯದ ಹೊರಗೆ ಸ್ವಲ್ಪದೂರ ತೆಗೆದುಕೊಂಡು ಹೋಗುತ್ತಿದ್ದನು. ಮೋಶೆಯು ಅದನ್ನು, “ದೇವದರ್ಶನದ ಗುಡಾರ” ಎಂದು ಕರೆದನು. ಯೆಹೋವನಿಂದ ಉತ್ತರವನ್ನು ಕೇಳಬೇಕೆಂದು ಬಯಸುವ ವ್ಯಕ್ತಿಯು ಪಾಳೆಯದ ಹೊರಗಿದ್ದ ದೇವದರ್ಶನ ಗುಡಾರಕ್ಕೆ ಹೋಗುತ್ತಿದ್ದನು. ಮೋಶೆಯು ಆ ಗುಡಾರದೊಳಗೆ ಹೋಗುವಾಗ ಜನರೆಲ್ಲರೂ ಅವನನ್ನು ಗಮನಿಸುತ್ತಿದ್ದರು. ಜನರು ತಮ್ಮ ಡೇರೆಗಳ ದ್ವಾರಗಳಲ್ಲಿ ನಿಂತುಕೊಂಡು ಮೋಶೆಯು ದೇವದರ್ಶನಗುಡಾರಕ್ಕೆ ಪ್ರವೇಶಿಸುವವರೆಗೆ ಅವನನ್ನು ಗಮನಿಸುತ್ತಿದ್ದರು. ಮೋಶೆಯು ಗುಡಾರದೊಳಕ್ಕೆ ಹೋದಾಗ ಎತ್ತರವಾದ ಮೇಘಸ್ತಂಭವು ಯಾವಾಗಲೂ ಕೆಳಗಿಳಿಯುತ್ತಿತ್ತು. ಆ ಮೇಘಸ್ತಂಭವು ಗುಡಾರದ ದ್ವಾರದಲ್ಲಿ ನಿಲ್ಲುತ್ತಿತ್ತು. ಹೀಗೆ ಯೆಹೋವನು ಮೋಶೆಯೊಡನೆ ಮಾತಾಡುತ್ತಿದ್ದನು. 10 ಗುಡಾರದ ದ್ವಾರದಲ್ಲಿ ಮೇಘಸ್ತಂಭವಿರುವುದನ್ನು ಜನರು ನೋಡಿದಾಗ, ಅವರು ತಮ್ಮ ಸ್ವಂತ ಡೇರೆಗಳ ದ್ವಾರದಲ್ಲಿ ತಲೆಬಾಗಿ ಯೆಹೋವನನ್ನು ಆರಾಧಿಸುತ್ತಿದ್ದರು.

11 ಯೆಹೋವನು ಮೋಶೆಯೊಂದಿಗೆ ಮುಖಾಮುಖಿಯಾಗಿ ಮಾತಾಡುತ್ತಿದ್ದನು. ಒಬ್ಬನು ತನ್ನ ಸ್ನೇಹಿತನೊಂದಿಗೆ ಮಾತಾಡುವಂತೆ ಯೆಹೋವನು ಮೋಶೆಯೊಂದಿಗೆ ಮಾತಾಡುತ್ತಿದ್ದನು. ಯೆಹೋವನೊಂದಿಗೆ ಮಾತಾಡಿದ ನಂತರ ಮೋಶೆಯು ಪಾಳೆಯಕ್ಕೆ ಮರಳಿ ಹೋಗುತ್ತಿದ್ದನು. ನೂನನ ಮಗನೂ ಯೌವನಸ್ಥನೂ ಆಗಿದ್ದ ಯೆಹೋಶುವನು ಮೋಶೆಯ ಸಹಾಯಕನಾಗಿದ್ದನು. ಮೋಶೆಯು ಗುಡಾರವನ್ನು ಬಿಟ್ಟುಹೋದಾಗ ಯೆಹೋಶುವನು ಗುಡಾರದಲ್ಲಿಯೇ ಇರುತ್ತಿದ್ದನು.

ಮೋಶೆಯು ಯೆಹೋವನ ಮಹಿಮೆಯನ್ನು ನೋಡುವನು

12 ಮೋಶೆಯು ಯೆಹೋವನಿಗೆ, “ಈ ಜನರನ್ನು ಮುನ್ನಡೆಸಬೇಕೆಂದು ನೀನು ನನಗೆ ಹೇಳಿರುವೆ. ಆದರೆ ನನ್ನೊಂದಿಗೆ ಯಾರನ್ನು ಕಳುಹಿಸುತ್ತೀಯೆಂದು ನೀನು ಹೇಳಲಿಲ್ಲ. ನೀನು ನನಗೆ, ‘ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು. ನಾನು ನಿನ್ನನ್ನು ಮೆಚ್ಚಿದ್ದೇನೆ’ ಎಂದು ಹೇಳಿದೆ. 13 ನಾನು ನಿನ್ನನ್ನು ನಿಜವಾಗಿಯೂ ಮೆಚ್ಚಿಸಿರುವುದಾದರೆ, ನಾನು ನಿನ್ನನ್ನು ತಿಳಿದುಕೊಳ್ಳುವಂತೆ ನಿನ್ನ ಮಾರ್ಗಗಳನ್ನು ಬೋಧಿಸು. ಆಗ ನಾನು ನಿನ್ನನ್ನು ಯಾವಾಗಲೂ ಮೆಚ್ಚಿಸಲು ಸಾಧ್ಯವಾಗುವುದು. ಇವರೆಲ್ಲರೂ ನಿನ್ನ ಜನರೆಂದು ಜ್ಞಾಪಕಮಾಡಿಕೊ” ಎಂದು ವಿಜ್ಞಾಪಿಸಿದನು.

14 ಯೆಹೋವನು “ನಾನೇ ನಿಮ್ಮೊಡನೆ ಬರುವೆನು. ನಾನೇ ನಿಮ್ಮನ್ನು ಮುನ್ನಡೆಸುವೆನು”[a] ಎಂದು ಉತ್ತರಿಸಿದನು.

15 ಆಗ ಮೋಶೆ ಯೆಹೋವನಿಗೆ, “ನೀನು ನಮ್ಮೊಂದಿಗೆ ಬರದಿದ್ದರೆ, ಈ ಸ್ಥಳದಿಂದ ನಮ್ಮನ್ನು ಕಳುಹಿಸಬೇಡ. 16 ಮಾತ್ರವಲ್ಲದೆ ನನಗೂ ಈ ಜನರಿಗೂ ನಿನ್ನ ದಯೆ ದೊರಕಿದೆಯೆಂದು ನಾವು ತಿಳಿದುಕೊಳ್ಳುವುದಾದರೂ ಹೇಗೆ? ನೀನು ನಮ್ಮೊಡನೆ ಬಂದರೆ, ಆಗ ನಾವು ಇದನ್ನು ಖಚಿತವಾಗಿ ತಿಳಿದುಕೊಳ್ಳುವೆವು. ನೀನು ನಮ್ಮೊಡನೆ ಬಾರದಿದ್ದರೆ, ಆಗ ನಮಗೂ ಭೂಮಿಯ ಮೇಲಿರುವ ಇತರ ಜನರಿಗೂ ಯಾವ ವ್ಯತ್ಯಾಸವಿರುವುದಿಲ್ಲ” ಎಂದು ಹೇಳಿದನು.

17 ಆಗ ಯೆಹೋವನು ಮೋಶೆಗೆ, “ನಿನ್ನ ಕೋರಿಕೆಯನ್ನು ಅನುಗ್ರಹಿಸುತ್ತೇನೆ. ನಾನು ನಿನ್ನನ್ನು ಮೆಚ್ಚಿಕೊಂಡದ್ದರಿಂದಲೇ ಇದನ್ನು ಮಾಡುತ್ತೇನೆ. ನಾನು ನಿನ್ನನ್ನು ಚೆನ್ನಾಗಿ ಬಲ್ಲೆನು” ಅಂದನು.

18 ಬಳಿಕ ಮೋಶೆ, “ಈಗ ದಯವಿಟ್ಟು ನಿನ್ನ ಮಹಿಮೆಯನ್ನು ನನಗೆ ತೋರಿಸು” ಅಂದನು.

19 ಆಗ ಯೆಹೋವನು “ನನ್ನ ನಾಮದ ಮಹತ್ವವನ್ನು ನಿನ್ನ ಮುಂದೆ ದಾಟಿಹೋಗುವಂತೆ ಮಾಡುವೆನು. ನಾನೇ ಯೆಹೋವನು. ನಿನಗೆ ಕೇಳಿಸುವಂತೆ ನನ್ನ ಹೆಸರನ್ನು ಪ್ರಕಟಿಸುವೆನು. ನಾನು ಆರಿಸಿಕೊಂಡ ಜನರಿಗೆ ದಯೆಯನ್ನೂ ಪ್ರೀತಿಯನ್ನೂ ಅನುಗ್ರಹಿಸುವೆನು. 20 ನನ್ನನ್ನು ಯಾರೂ ಮುಖಾಮುಖಿಯಾಗಿ ಕಾಣಲು ಸಾಧ್ಯವಿಲ್ಲ. ನನ್ನನ್ನು ನೋಡಿದ ಯಾವನೂ ಬದುಕಲಾರನು.

21 “ಇಲ್ಲಿ ಒಂದು ಬಂಡೆ ಇದೆ. ನೀನು ಆ ಬಂಡೆಯ ಮೇಲೆ ನಿಂತುಕೊ. 22 ನನ್ನ ಮಹಿಮೆಯು ಆ ಸ್ಥಳದ ಮೂಲಕ ದಾಟಿಹೋಗುವುದು. ನಾನು ನಿನ್ನನ್ನು ಆ ಬಂಡೆಯ ದೊಡ್ಡದಾದ ಬಿರುಕಿನಲ್ಲಿ ಇರಿಸುವೆನು; ನಾನು ದಾಟಿ ಹೋಗುವಾಗ ನನ್ನ ಕೈಯಿಂದ ನಿನ್ನನ್ನು ಮುಚ್ಚುವೆನು. 23 ಬಳಿಕ ನನ್ನ ಕೈಯನ್ನು ತೆಗೆಯುವೆನು. ಆಗ ನೀನು ನನ್ನ ಹಿಂಭಾಗವನ್ನು ನೋಡುವೆ; ಆದರೆ ನನ್ನ ಮುಖವು ನಿನಗೆ ಕಾಣಿಸದು” ಎಂದು ಉತ್ತರಕೊಟ್ಟನು.

ಯೋಹಾನ 12

ಬೆಥಾನಿಯಲ್ಲಿ ಯೇಸು

(ಮತ್ತಾಯ 26:6-13; ಮಾರ್ಕ 14:3-9)

12 ಪಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿದ್ದಾಗ ಯೇಸು ಬೆಥಾನಿಗೆ ಹೋದನು. ಲಾಜರನು ವಾಸವಾಗಿದ್ದ ಊರೇ ಬೆಥಾನಿ. (ಯೇಸು ಸತ್ತವರೊಳಗಿಂದ ಎಬ್ಬಿಸಿದ ಮನುಷ್ಯನೇ ಲಾಜರನು.) ಅವರು ಯೇಸುವಿಗೆ ರಾತ್ರಿಭೋಜನವನ್ನು ಏರ್ಪಡಿಸಿದ್ದರು. ಮಾರ್ಥಳು ಊಟವನ್ನು ಬಡಿಸುತ್ತಿದ್ದಳು. ಯೇಸುವಿನೊಂದಿಗೆ ಊಟ ಮಾಡುತ್ತಿದ್ದವರಲ್ಲಿ ಲಾಜರನೂ ಒಬ್ಬನಾಗಿದ್ದನು. ಆಗ ಮರಿಯಳು, ಬಹು ಬೆಲೆಬಾಳುವ ಸುಗಂಧತೈಲವನ್ನು[a] ಅರ್ಧ ಲೀಟರಿನಷ್ಟು ತೆಗೆದುಕೊಂಡು ಬಂದು, ಯೇಸುವಿನ ಪಾದಗಳಿಗೆ ಹಚ್ಚಿದಳು. ಬಳಿಕ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರೆಸಿದಳು. ಆ ಪರಿಮಳದ್ರವ್ಯದ ಸುವಾಸನೆಯು ಇಡೀ ಮನೆಯನ್ನೇ ತುಂಬಿಕೊಂಡಿತು.

ಇಸ್ಕರಿಯೋತ ಯೂದನು ಅಲ್ಲಿದ್ದನು. ಅವನು ಯೇಸುವಿನ ಶಿಷ್ಯರಲ್ಲಿ ಒಬ್ಬನಾಗಿದ್ದನು. (ಮುಂದೆ, ಯೇಸುವಿಗೆ ದ್ರೋಹ ಮಾಡಿದವನು ಇವನೇ.) ಮರಿಯಳು ಮಾಡಿದ ಈ ಕಾರ್ಯವನ್ನು ಯೂದನು ಇಷ್ಟಪಡಲಿಲ್ಲ. ಅವನು, “ಆ ಪರಿಮಳದ ದ್ರವ್ಯದ ಬೆಲೆ ಮುನ್ನೂರು ಬೆಳ್ಳಿನಾಣ್ಯಗಳು.[b] ಅದನ್ನು ಮಾರಿ ಆ ಹಣವನ್ನು ಬಡವರಿಗೆ ಕೊಡಬೇಕಿತ್ತು” ಎಂದು ಟೀಕಿಸಿದನು. ಆದರೆ ಯೂದನಿಗೆ ಬಡವರ ಬಗ್ಗೆ ನಿಜವಾಗಿಯೂ ಚಿಂತೆಯಿರಲಿಲ್ಲ. ಅವನು ಕಳ್ಳನಾಗಿದ್ದುದರಿಂದ ಹಾಗೆ ಹೇಳಿದನು. ಶಿಷ್ಯಸಮುದಾಯಕ್ಕೋಸ್ಕರವಿದ್ದ ಹಣದ ಪೆಟ್ಟಿಗೆಯು ಅವನ ವಶದಲ್ಲಿತ್ತು. ಅವನು ಆಗಾಗ್ಗೆ ಆ ಪೆಟ್ಟಿಗೆಯಿಂದ ಹಣವನ್ನು ಕದ್ದುಕೊಳ್ಳುತ್ತಿದ್ದನು.

ಯೇಸು ಅವನಿಗೆ, “ಆಕೆಯನ್ನು ತಡೆಯಬೇಡ. ನನ್ನನ್ನು ಶವಸಂಸ್ಕಾರಕ್ಕೆ ಸಿದ್ಧಪಡಿಸುವ ಈ ದಿನಕ್ಕೋಸ್ಕರ ಆಕೆ ಸುಗಂಧ ದ್ರವ್ಯವನ್ನು ಶೇಖರಿಸಿದ್ದು ಒಳ್ಳೆಯದೇ ಸರಿ. ಬಡವರು ಯಾವಾಗಲೂ ನಿಮ್ಮೊಂದಿಗಿರುತ್ತಾರೆ ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ” ಎಂದು ಉತ್ತರಕೊಟ್ಟನು.

ಲಾಜರನ ವಿರುದ್ಧ ಸಂಚು

ಯೇಸು ಬೆಥಾನಿಯಲ್ಲಿದ್ದಾನೆ ಎಂಬ ಸುದ್ದಿಯನ್ನು ಅನೇಕ ಯೆಹೂದ್ಯರು ಕೇಳಿ ಆತನನ್ನೂ ಲಾಜರನನ್ನೂ ನೋಡಬೇಕೆಂದು ಅಲ್ಲಿಗೆ ಹೋದರು. ಯೇಸುವಿನಿಂದ ಜೀವಂತವಾಗಿ ಎಬ್ಬಿಸಲ್ಪಟ್ಟವನೇ ಲಾಜರನು. 10 ಆದರೆ ಮಹಾಯಾಜಕರು ಲಾಜರನನ್ನು ಸಹ ಕೊಲ್ಲಲು ಯೋಜನೆಗಳನ್ನು ಮಾಡಿದರು. 11 ಲಾಜರನ ನಿಮಿತ್ತ ಅನೇಕ ಯೆಹೂದ್ಯರು ತಮ್ಮ ನಾಯಕರನ್ನು ತೊರೆದು ಯೇಸುವಿನಲ್ಲಿ ನಂಬಿಕೆ ಇಡುತ್ತಿದ್ದರು. ಆದಕಾರಣವೇ ಯೆಹೂದ್ಯ ನಾಯಕರು ಲಾಜರನನ್ನು ಸಹ ಕೊಲ್ಲಬೇಕೆಂದಿದ್ದರು.

ಜೆರುಸಲೇಮಿಗೆ ಯೇಸುವಿನ ಪ್ರವೇಶ

(ಮತ್ತಾಯ 21:1-11; ಮಾರ್ಕ 11:1-11; ಲೂಕ 19:28-40)

12 ಮರುದಿನ, ಯೇಸು ಜೆರುಸಲೇಮಿಗೆ ಬರುತ್ತಿದ್ದಾನೆ ಎಂಬ ಸುದ್ದಿ ಅಲ್ಲಿಯ ಜನರಿಗೆ ತಿಳಿಯಿತು. ಪಸ್ಕಹಬ್ಬಕ್ಕಾಗಿ ಬಂದಿದ್ದ ಅನೇಕರು ಅಲ್ಲಿದ್ದರು. 13 ಜನರು ಖರ್ಜೂರದ ಗರಿಗಳನ್ನು ತೆಗೆದುಕೊಂಡು ಯೇಸುವನ್ನು ಎದುರುಗೊಳ್ಳಲು ಹೋದರು.

“ಆತನಿಗೆ ಸ್ತೋತ್ರವಾಗಲಿ!
    ‘ಪ್ರಭುವಿನ ಹೆಸರಿನಲ್ಲಿ ಬರುವಾತನಿಗೆ ದೇವರಾಶೀರ್ವಾದವಾಗಲಿ!’(A)

ಇಸ್ರೇಲ್ ರಾಜನಿಗೆ ದೇವರಾಶೀರ್ವಾದವಾಗಲಿ!”

ಎಂದು ಜನರು ಕೂಗಿದರು.

14 ಯೇಸು ಅಲ್ಲಿದ್ದ ಕತ್ತೆಯೊಂದನ್ನು ಕಂಡು, ಅದರ ಮೇಲೆ ಕುಳಿತುಕೊಂಡು ಹೊರಟನು. ಪವಿತ್ರ ಗ್ರಂಥ ಹೇಳುವಂತೆಯೇ ಇದು ನೆರವೇರಿತು:

15 “ಸಿಯೋನ್ ನಗರವೇ, ಭಯಪಡಬೇಡ!
    ನೋಡು! ನಿನ್ನ ರಾಜನು ಬರುತ್ತಿದ್ದಾನೆ.
ಆತನು ಪ್ರಾಯದ ಕತ್ತೆಯ ಮೇಲೆ ಕುಳಿತುಕೊಂಡು ಬರುತ್ತಿದ್ದಾನೆ.”(B)

16 ಯೇಸುವಿನ ಶಿಷ್ಯರು ಆ ಸಮಯದಲ್ಲಿ ಇದನ್ನು ಅರ್ಥಮಾಡಿಕೊಳ್ಳಲಿಲ್ಲ. ಆದರೆ ಯೇಸು ಮಹಿಮಾಪದವಿಗೆ ಏರಿಹೋದ ನಂತರ, ಈ ಸಂಗತಿಗಳು ಆತನ ವಿಷಯವಾಗಿ ಬರೆಯಲ್ಪಟ್ಟಿವೆ ಎಂಬುದನ್ನು ಶಿಷ್ಯರು ಅರ್ಥಮಾಡಿಕೊಂಡರು; ಮತ್ತು ತಾವು ಆತನಿಗಾಗಿ ಮಾಡಿದ ಕಾರ್ಯಗಳನ್ನು ಜ್ಞಾಪಿಸಿಕೊಂಡರು.

17 ಯೇಸು ಲಾಜರನಿಗೆ ಸಮಾಧಿಯೊಳಗಿಂದ ಬರುವಂತೆ ಹೇಳಿ ಅವನನ್ನು ಜೀವಂತವಾಗಿ ಎಬ್ಬಿಸಿದಾಗ ಅನೇಕ ಜನರು ಯೇಸುವಿನ ಸಂಗಡ ಇದ್ದರು. ಯೇಸು ಮಾಡಿದ ಈ ಕಾರ್ಯದ ಬಗ್ಗೆ ಅವರು ಇತರರಿಗೆ ಹೇಳುತ್ತಿದ್ದರು. 18 ಯೇಸು ಮಾಡಿದ ಈ ಅದ್ಭುತಕಾರ್ಯವನ್ನು ಕೇಳಿ, ಅನೇಕ ಜನರು ಯೇಸುವನ್ನು ಎದುರುಗೊಳ್ಳಲು ಹೋಗಿದ್ದರು. 19 ಆದ್ದರಿಂದ ಫರಿಸಾಯರು, “ನೋಡಿ! ನಮ್ಮ ಯೋಜನೆಯು ನಿಷ್ಪ್ರಯೋಜಕವಾಯಿತು. ಜನರು ಆತನನ್ನೇ ಹಿಂಬಾಲಿಸುತ್ತಿದ್ದಾರೆ!” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.

ಜೀವ, ಮರಣಗಳ ಬಗ್ಗೆ ಯೇಸುವಿನ ಉಪದೇಶ

20 ಅಲ್ಲಿ ಗ್ರೀಕ್ ಜನರು ಸಹ ಇದ್ದರು. ಪಸ್ಕಹಬ್ಬದಲ್ಲಿ ಆರಾಧಿಸುವುದಕ್ಕಾಗಿ ಜೆರುಸಲೇಮಿಗೆ ಹೋಗಿದ್ದವರಲ್ಲಿ ಇವರೂ ಸೇರಿದ್ದರು. 21 ಈ ಗ್ರೀಕ್ ಜನರು ಫಿಲಿಪ್ಪನ ಬಳಿಗೆ ಹೋದರು. (ಫಿಲಿಪ್ಪನು ಗಲಿಲಾಯದ ಬೆತ್ಸಾಯಿ ಎಂಬ ಊರಿನವನಾಗಿದ್ದವನು.) ಅವರು, “ಸ್ವಾಮೀ, ನಾವು ಯೇಸುವನ್ನು ನೋಡಬೇಕು” ಎಂದು ಅವನನ್ನು ಕೇಳಿಕೊಂಡರು. 22 ಫಿಲಿಪ್ಪನು ಅಂದ್ರೆಯನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದನು. ಬಳಿಕ ಅಂದ್ರೆಯನು ಮತ್ತು ಫಿಲಿಪ್ಪನು ಒಟ್ಟಾಗಿ ಯೇಸುವಿನ ಬಳಿಗೆ ಹೋಗಿ ಈ ವಿಷಯವನ್ನು ತಿಳಿಸಿದರು.

23 ಯೇಸು ಅವರಿಗೆ, “ಮನುಷ್ಯಕುಮಾರನು ತನ್ನ ಮಹಿಮೆಯನ್ನು ಹೊಂದುವ ಸಮಯ ಇದೇ ಆಗಿದೆ. 24 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಗೋಧಿಯ ಕಾಳು ಭೂಮಿಗೆ ಬಿದ್ದು ಸಾಯಲೇಬೇಕು. ಬಳಿಕ ಅದು ಬೆಳೆದು ಅನೇಕ ಕಾಳುಗಳನ್ನು ಫಲಿಸುವುದು. ಸಾಯದಿದ್ದರೆ, ಅದು ಯಾವಾಗಲೂ ಕೇವಲ ಒಂದೇ ಕಾಳಾಗಿರುವುದು. 25 ತನ್ನ ಸ್ವಂತ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುವನು. ಆದರೆ ಈ ಲೋಕದಲ್ಲಿ ತನ್ನ ಪ್ರಾಣವನ್ನು ದ್ವೇಷಿಸುವವನು ಅದನ್ನು ಉಳಿಸಿಕೊಳ್ಳುವನು. ಅವನು ನಿತ್ಯಜೀವವನ್ನು ಹೊಂದುವನು. 26 ನನ್ನ ಸೇವೆ ಮಾಡುವವನು ನನ್ನನ್ನು ಹಿಂಬಾಲಿಸಬೇಕು. ಆಗ ನಾನು ಇರುವಲ್ಲೆಲ್ಲಾ ನನ್ನ ಸೇವಕನು ಇರುವನು. ನನ್ನ ಸೇವೆಮಾಡುವ ಜನರನ್ನು ನನ್ನ ತಂದೆಯು ಸನ್ಮಾನಿಸುವನು” ಎಂದು ಹೇಳಿದನು.

ತನ್ನ ಮರಣದ ಕುರಿತು ಯೇಸುವಿನ ಹೇಳಿಕೆ

27 ಯೇಸು ಮಾತನ್ನು ಮುಂದುವರಿಸಿ, “ನನ್ನ ಪ್ರಾಣವು ತತ್ತರಿಸುತ್ತಿದೆ. ನಾನೇನು ಹೇಳಲಿ? ‘ತಂದೆಯೇ, ನನ್ನನ್ನು ಈ ಸಂಕಟ ಕಾಲದಿಂದ ರಕ್ಷಿಸು ಎನ್ನಬೇಕೇ?’ ಇಲ್ಲ! ಸಂಕಟಪಡುವುದಕ್ಕೋಸ್ಕರವೇ ನಾನು ಬಂದಿದ್ದೇನೆ. 28 ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೊ!” ಎಂದು ಹೇಳಿದನು.

ಆಗ ಪರಲೋಕದಿಂದ, “ನನ್ನ ಹೆಸರನ್ನು ಮಹಿಮೆಪಡಿಸಿಕೊಂಡಿದ್ದೇನೆ. ನಾನು ಮತ್ತೆ ಮಹಿಮೆಪಡಿಸಿಕೊಳ್ಳುವೆನು” ಎಂಬ ವಾಣಿ ಆಯಿತು.

29 ಅಲ್ಲಿ ನಿಂತಿದ್ದ ಜನರು ಈ ವಾಣಿಯನ್ನು ಕೇಳಿ “ಅದು ಗುಡುಗು” ಎಂದರು.

ಆದರೆ ಇತರರು, “ದೇವದೂತನೊಬ್ಬನು ಯೇಸುವಿನೊಂದಿಗೆ ಮಾತಾಡಿದನು!” ಎಂದರು.

30 ಯೇಸು ಜನರಿಗೆ, “ಆ ವಾಣಿಯಾದದ್ದು ನನಗೋಸ್ಕರವಲ್ಲ, ನಿಮಗೋಸ್ಕರ. 31 ಈ ಲೋಕಕ್ಕೆ ತೀರ್ಪಾಗುವ ಕಾಲ ಇದೇ ಆಗಿದೆ. ಈಗ ಈ ಲೋಕದ ಅಧಿಪತಿಯನ್ನು (ಸೈತಾನ) ಹೊರಗೆ ದಬ್ಬಲಾಗುವುದು. 32 ನಾನು ಭೂಮಿಯಿಂದ ಮೇಲೆತ್ತಲ್ಪಡುವೆನು. ಆಗ ನಾನು ಎಲ್ಲಾ ಜನರನ್ನು ನನ್ನ ಬಳಿಗೆ ಸೆಳೆದುಕೊಳ್ಳುವೆನು” ಎಂದು ಹೇಳಿದನು. 33 ತಾನು ಸಾಯುವ ರೀತಿಯನ್ನು ಯೇಸು ಈ ಮಾತಿನ ಮೂಲಕ ಸೂಚಿಸಿದನು.

34 ಜನರು, “ಕ್ರಿಸ್ತನು ಸದಾಕಾಲ ಜೀವಿಸುತ್ತಾನೆ ಎಂದು ನಮ್ಮ ಧರ್ಮಶಾಸ್ತ್ರವು ಹೇಳುತ್ತದೆ. ಹೀಗಿರಲಾಗಿ, ‘ಮನುಷ್ಯಕುಮಾರನು ಮೇಲೆತ್ತಲ್ಪಡುವನು’ ಎಂದು ನೀನು ಹೇಳುವುದೇಕೆ? ಈ ಮನುಷ್ಯಕುಮಾರನು ಯಾರು?” ಎಂದು ಕೇಳಿದರು.

35 ಅದಕ್ಕೆ ಯೇಸು, “ಇನ್ನು ಸ್ವಲ್ಪಕಾಲ ಮಾತ್ರ ಬೆಳಕು ನಿಮ್ಮೊಂದಿಗಿರುತ್ತದೆ. ಆದ್ದರಿಂದ ಬೆಳಕು ನಿಮ್ಮೊಂದಿಗೆ ಇರುವಾಗಲೇ ನಡೆಯಿರಿ. ಆಗ ಕತ್ತಲೆಯು (ಪಾಪ) ನಿಮ್ಮನ್ನು ಕವಿದುಕೊಳ್ಳುವುದಿಲ್ಲ. ಕತ್ತಲೆಯಲ್ಲಿ ನಡೆಯುವವನಿಗೆ ತಾನು ಎಲ್ಲಿಗೆ ಹೋಗುತ್ತಿದ್ದೇನೆಂಬುದು ತಿಳಿಯದು. 36 ಆದ್ದರಿಂದ ನೀವು ಬೆಳಕನ್ನು ಇನ್ನೂ ಹೊಂದಿರುವಾಗಲೇ ಅದರಲ್ಲಿ ನಂಬಿಕೆ ಇಡಿರಿ. ಆಗ ನೀವು ಬೆಳಕಿನವರಾಗುವಿರಿ” ಎಂದು ಹೇಳಿದನು. ಈ ಸಂಗತಿಗಳನ್ನು ಹೇಳಿದ ಮೇಲೆ ಯೇಸು ಅಲ್ಲಿಂದ ಹೊರಟು, ತನ್ನನ್ನು ಜನರು ಕಂಡುಕೊಳ್ಳಲಾಗದ ಸ್ಥಳಕ್ಕೆ ಹೋದನು.

ಯೆಹೂದ್ಯರ ಅಪನಂಬಿಕೆ

37 ಯೇಸು ಅನೇಕ ಮಹತ್ಕಾರ್ಯಗಳನ್ನು ಮಾಡಿದನು. ಜನರು ಆ ಕಾರ್ಯಗಳನ್ನೆಲ್ಲಾ ನೋಡಿದರೂ ಆತನಲ್ಲಿ ನಂಬಿಕೆ ಇಡಲಿಲ್ಲ. 38 ಇದರಿಂದಾಗಿ, ಪ್ರವಾದಿಯಾದ ಯೆಶಾಯನು ಹೇಳಿದ್ದ ಮಾತುಗಳು ನೆರವೇರಿದವು. ಅದೇನೆಂದರೆ:

“ಪ್ರಭುವೇ, ನಾವು ಹೇಳಿದ ಸಂಗತಿಗಳನ್ನು ಯಾರು ನಂಬಿದರು?
    ಪ್ರಭುವಿನ ಬಾಹುಬಲವು ಯಾರಿಗೆ ಗೋಚರವಾಯಿತು?”(C)

39 ಆದಕಾರಣವೇ ಜನರು ನಂಬಲಾಗಲಿಲ್ಲ. ಏಕೆಂದರೆ ಯೆಶಾಯನು ಮತ್ತೊಂದು ಕಡೆಯಲ್ಲಿ ಹೀಗೆ ಹೇಳಿದ್ದಾನೆ:

40 “ತಮ್ಮ ಕಣ್ಣುಗಳಿಂದ ಕಾಣದಂತೆ
    ತಮ್ಮ ಮನಸ್ಸುಗಳಿಂದ ಅರ್ಥಮಾಡಿಕೊಳ್ಳದಂತೆ
ಪರಿವರ್ತನೆಗೊಂಡು ಗುಣಹೊಂದದಂತೆ ಆತನು ಅವರನ್ನು ಕುರುಡರನ್ನಾಗಿ ಮಾಡಿದ್ದಾನೆ,
ಅವರ ಮನಸ್ಸುಗಳನ್ನು ಕಲ್ಲಾಗಿಸಿದ್ದಾನೆ.”(D)

41 ಯೆಶಾಯನು ಆತನ (ಯೇಸುವಿನ) ಮಹಿಮೆಯನ್ನು ನೋಡಿದ್ದರಿಂದಲೇ ಹೀಗೆ ಹೇಳಿದನು.

42 ಆದರೆ ಅನೇಕ ಜನರು ಯೇಸುವಿನಲ್ಲಿ ನಂಬಿಕೆ ಇಟ್ಟರು. ಅನೇಕ ಯೆಹೂದ್ಯನಾಯಕರು ಸಹ ಯೇಸುವಿನಲ್ಲಿ ನಂಬಿಕೆಯಿಟ್ಟರು. ಆದರೆ ಅವರು ಫರಿಸಾಯರಿಗೆ ಹೆದರಿಕೊಂಡು ತಮ್ಮ ನಂಬಿಕೆಯನ್ನು ಬಹಿರಂಗಪಡಿಸಲಿಲ್ಲ. ತಮ್ಮನ್ನು ಫರಿಸಾಯರು ಸಭಾಮಂದಿರದಿಂದ ಬಹಿಷ್ಕರಿಸುತ್ತಾರೆ ಎಂಬ ಭಯ ಅವರಿಗಿತ್ತು. 43 ಈ ಜನರು ದೇವರ ಹೊಗಳಿಕೆಗಿಂತಲೂ ಜನರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.

ಯೇಸುವಿನ ಉಪದೇಶ ಜನರಿಗೆ ತೀರ್ಪು ಮಾಡುವುದು

44 ಬಳಿಕ ಯೇಸು ಗಟ್ಟಿಯಾಗಿ ಹೀಗೆಂದನು: “ನನ್ನಲ್ಲಿ ನಂಬಿಕೆ ಇಡುವವನು ನನ್ನನ್ನು ಕಳುಹಿಸಿದಾತನಲ್ಲಿ (ದೇವರು) ನಿಜವಾಗಿಯೂ ನಂಬಿಕೆ ಇಡುವವನಾಗಿದ್ದಾನೆ. 45 ನನ್ನನ್ನು ನೋಡುವವನು ನನ್ನನ್ನು ಕಳುಹಿಸಿದಾತನನ್ನು ನಿಜವಾಗಿಯೂ ನೋಡುವವನಾಗಿದ್ದಾನೆ. 46 ನಾನೇ ಬೆಳಕಾಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಕತ್ತಲೆಯಲ್ಲಿ ಇರಬಾರದೆಂದು ನಾನೇ ಈ ಲೋಕಕ್ಕೆ ಬಂದಿದ್ದೇನೆ.

47 “ನಾನು ಈ ಲೋಕಕ್ಕೆ ಬಂದದ್ದು ಜನರಿಗೆ ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದಲ್ಲಿರುವ ಜನರನ್ನು ರಕ್ಷಿಸುವುದಕ್ಕಾಗಿ ನಾನು ಬಂದೆನು. ಆದ್ದರಿಂದ ನನ್ನ ಮಾತುಗಳನ್ನು ಕೇಳಿಯೂ ನಂಬದಿರುವ ಜನರಿಗೆ ತೀರ್ಪು ಮಾಡುವವನು ನಾನಲ್ಲ. 48 ನನ್ನಲ್ಲಿ ನಂಬಿಕೆ ಇಡದಿರುವವನಿಗೆ ಮತ್ತು ನಾನು ಹೇಳುವುದನ್ನು ತಿರಸ್ಕರಿಸುವವನಿಗೆ ತೀರ್ಪುಮಾಡುವಂಥದ್ದು ನಾನು ಆಡಿದ ಮಾತುಗಳೇ. ಅಂತಿಮ ದಿನದಂದು ಅವೇ ಅವನಿಗೆ ತೀರ್ಪುಮಾಡುತ್ತವೆ. 49 ಏಕೆಂದರೆ, ನನ್ನ ಮಾತುಗಳು ನನ್ನಿಂದ ಬಂದವುಗಳಲ್ಲ. ನನ್ನನ್ನು ಕಳುಹಿಸಿದ ತಂದೆಯೇ ನಾನು ಏನು ಹೇಳಬೇಕು, ಏನು ಮಾತಾಡಬೇಕು ಎಂದು ನನಗೆ ಹೇಳಿಕೊಟ್ಟಿದ್ದಾನೆ. 50 ತಂದೆಯ ಆಜ್ಞೆಯು ನಿತ್ಯಜೀವಕ್ಕೆ ನಡೆಸುತ್ತದೆ ಎಂದು ನಾನು ಬಲ್ಲೆನು. ಆದ್ದರಿಂದ ತಂದೆಯು ನನಗೆ ಹೇಳಿಕೊಟ್ಟ ಸಂಗತಿಗಳನ್ನೇ ನಾನು ತಿಳಿಸುತ್ತೇನೆ.”

ಜ್ಞಾನೋಕ್ತಿಗಳು 9

ಜ್ಞಾನ ಮತ್ತು ಮೂರ್ಖತನ

ಜ್ಞಾನವೆಂಬಾಕೆ ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ. ಆಕೆ ಅದಕ್ಕೆ ಏಳು ಕಂಬಗಳನ್ನು ಹಾಕಿದ್ದಾಳೆ. ಜ್ಞಾನವೆಂಬಾಕೆ ಮಾಂಸದ ಅಡಿಗೆಯನ್ನೂ ದ್ರಾಕ್ಷಾರಸವನ್ನೂ ತಯಾರಿಸಿದ್ದಾಳೆ. ಆಕೆ ತನ್ನ ಮೇಜಿನ ಮೇಲೆ ಆಹಾರವನ್ನು ಇಟ್ಟಿದ್ದಾಳೆ. ಆಮೇಲೆ ಆಕೆ, ತನ್ನ ಸೇವಕಿಯರನ್ನು ಕಳುಹಿಸಿ ನಗರದ ಎತ್ತರವಾದ ಸ್ಥಳದಿಂದ, “ಕಲಿತುಕೊಳ್ಳಬೇಕಾಗಿರುವ ಜನರೇ, ಬನ್ನಿರಿ” ಎಂದು ಕೂಗುತ್ತಾಳೆ. ಆಕೆಯು ಬುದ್ಧಿಹೀನರಿಗೆ, “ಬನ್ನಿರಿ, ನನ್ನ ಜ್ಞಾನದ ಆಹಾರವನ್ನು ತಿನ್ನಿರಿ. ನಾನು ತಯಾರಿಸಿರುವ ದ್ರಾಕ್ಷಾರಸವನ್ನು ಕುಡಿಯಿರಿ. ನಿಮ್ಮ ಮೂರ್ಖ ಮಾರ್ಗಗಳನ್ನು ತೊರೆದುಬಿಡಿ. ಆಗ ನಿಮಗೆ ಜೀವವು ದೊರೆಯುವುದು. ವಿವೇಕಮಾರ್ಗದಲ್ಲಿ ಮುಂದೆ ಸಾಗಿರಿ” ಎಂದು ಆಕೆ ಹೇಳಿದಳು.

ನೀನು ಅಹಂಕಾರಿಗೆ ಅವನ ತಪ್ಪನ್ನು ತಿಳಿಸಲು ಪ್ರಯತ್ನಿಸಿದರೆ ಅವನು ನಿನ್ನನ್ನೇ ಖಂಡಿಸುವನು. ನೀನು ಕೆಡುಕನಿಗೆ ಅವನ ತಪ್ಪನ್ನು ತಿಳಿಸಿದರೆ ಅವನು ನಿನ್ನನ್ನೇ ಗೇಲಿಮಾಡುವನು. ದುರಾಭಿಮಾನಿಯನ್ನು ಗದರಿಸಬೇಡ; ಅವನು ನಿನ್ನನ್ನೇ ದ್ವೇಷ ಮಾಡುವನು. ಆದರೆ ನೀನು ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿಸುವನು. ನೀನು ಜ್ಞಾನಿಗೆ ಉಪದೇಶಿಸಿದರೆ ಅವನು ಮತ್ತಷ್ಟು ಜ್ಞಾನಿಯಾಗುವನು. ನೀನು ನೀತಿವಂತನಿಗೆ ಬೋಧಿಸಿದರೆ, ಅವನು ಮತ್ತಷ್ಟು ತಿಳುವಳಿಕೆಯನ್ನು ಪಡೆದುಕೊಳ್ಳುವನು.

10 ಯೆಹೋವನಲ್ಲಿ ಭಯಭಕ್ತಿಯಿಂದಿರುವುದೇ ಜ್ಞಾನದ ಮೂಲ. ಯೆಹೋವನ ತಿಳುವಳಿಕೆಯನ್ನು ಪಡೆದುಕೊಳ್ಳುವುದೇ ವಿವೇಕದ ಮೂಲ. 11 ನೀನು ಜ್ಞಾನಿಯಾಗಿದ್ದರೆ, ಬಹುಕಾಲ ಬದುಕುವೆ. 12 ನೀನು ಜ್ಞಾನಿಯಾಗಿದ್ದರೆ ನಿನ್ನ ಜ್ಞಾನವು ನಿನಗೇ ಲಾಭಕರ. ಆದರೆ ನೀನು ದುರಾಭಿಮಾನದಿಂದ ಬೇರೆಯವರನ್ನು ಗೇಲಿಮಾಡಿದರೆ ನಿನ್ನನ್ನೇ ಕಷ್ಟಕ್ಕೆ ಗುರಿಮಾಡಿಕೊಳ್ಳುವೆ.

ಅಜ್ಞಾನಿಯೆಂಬ ಹೆಂಗಸು

13 ಅಜ್ಞಾನವೆಂಬಾಕೆಯು ಬಾಯಿಬಡುಕಿ; ಮಂದಮತಿ ಮತ್ತು ಮೂಢಳು, 14 ಅವಳು ತನ್ನ ಮನೆಯ ಬಾಗಿಲ ಬಳಿಯಲ್ಲಿ ನಗರದ ಎತ್ತರವಾದ ಸ್ಥಳಗಳಲ್ಲಿ ಕುಳಿತಿದ್ದಾಳೆ. 15 ತಮ್ಮ ಕೆಲಸಕಾರ್ಯಗಳ ನಿಮಿತ್ತ ಹಾದುಹೋಗುವ ಜನರನ್ನು, 16 “ಕಲಿತುಕೊಳ್ಳಬೇಕಾಗಿರುವ ಜನರೇ ಬನ್ನಿ” ಎಂದು ಕೂಗಿಕರೆಯುತ್ತಾಳೆ. ಅವಳು ಮೂಢರನ್ನು ಸಹ ಕರೆದು, 17 “ನೀವು ಕದ್ದ ನೀರು ಸ್ವಂತ ನೀರಿಗಿಂತಲೂ ಹೆಚ್ಚು ರುಚಿಯಾಗಿರುವುದು. ನೀವು ಕದ್ದ ರೊಟ್ಟಿ ತಯಾರಿಸಿದ ರೊಟ್ಟಿಗಿಂತಲೂ ಹೆಚ್ಚು ರುಚಿಯಾಗಿರುವುದು” ಎಂದು ಹೇಳುವಳು. 18 ಆದರೆ ಆ ಮೂಢರಿಗೆ, ಅವಳ ಮನೆ ಕೇವಲ ದೆವ್ವಗಳಿಂದ ತುಂಬಿರುವುದಾಗಲಿ ಆಕೆಯ ಅತಿಥಿಗಳು ಅಗಾಧವಾದ ಪಾತಾಳದಲ್ಲಿ ಬಿದ್ದಿರುವುದಾಗಲಿ ತಿಳಿದಿಲ್ಲ.

ಎಫೆಸದವರಿಗೆ 2

ಮರಣದಿಂದ ಜೀವಕ್ಕೆ

ಮೊದಲು ನಿಮ್ಮ ಆತ್ಮಿಕ ಜೀವಿತಗಳು, ನಿಮ್ಮ ಪಾಪಗಳ ಮತ್ತು ನೀವು ದೇವರಿಗೆ ವಿರುದ್ಧವಾಗಿ ಮಾಡಿದ ಕೆಟ್ಟಕಾರ್ಯಗಳ ದೆಸೆಯಿಂದ ಸತ್ತುಹೋಗಿದ್ದವು. ಹೌದು, ಮೊದಲು ನೀವು ಆ ಪಾಪಗಳನ್ನೇ ಮಾಡುತ್ತಿದ್ದಿರಿ. ಈ ಲೋಕದ ಮಾರ್ಗಗಳಿಗನುಸಾರವಾಗಿ ನೀವು ಜೀವಿಸಿದಿರಿ. ವಾಯುಮಂಡಲದಲ್ಲಿರುವ ದುಷ್ಟಶಕ್ತಿಗಳ ಅಧಿಪತಿಯನ್ನು ನೀವು ಅನುಸರಿಸಿದಿರಿ. ದೇವರಿಗೆ ಅವಿಧೇಯರಾದ ಜನರಲ್ಲಿ ಈಗ ಕಾರ್ಯಮಾಡುತ್ತಿರುವುದು ಅದೇ ಆತ್ಮ. ಮೊದಲು ನಾವೆಲ್ಲರೂ ಆ ಜನರಂತೆಯೇ ಜೀವಿಸುತ್ತಿದ್ದೆವು. ಶರೀರಭಾವದ ನಮ್ಮ ಇಚ್ಛೆಗಳನ್ನು ಪೂರೈಸಲು ನಾವು ಪ್ರಯತ್ನಿಸುತ್ತಿದ್ದೆವು. ನಮ್ಮ ದೇಹ, ಮನಸ್ಸುಗಳು ಬಯಸಿದ್ದನ್ನೆಲ್ಲಾ ನಾವು ಮಾಡಿದೆವು. ನಾವು ದುಷ್ಟಜನರಾಗಿದ್ದೆವು. ನಮ್ಮ ಆ ಜೀವಿತದ ದೆಸೆಯಿಂದ ನಾವು ಆಗಲೇ ದೇವರ ಕೋಪಕ್ಕೆ ಗುರಿಯಾಗಬೇಕಿತ್ತು. ನಮಗೂ ಇತರ ಜನರಿಗೂ ಯಾವ ವ್ಯತ್ಯಾಸವೂ ಇರಲಿಲ್ಲ.

ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಬಹಳವಾಗಿ ಪ್ರೀತಿಸಿದನು. ನಾವು ದೇವರಿಗೆ ವಿರುದ್ಧವಾಗಿ ಮಾಡಿದ ಕಾರ್ಯಗಳ ದೆಸೆಯಿಂದ ಸತ್ತವರಾಗಿದ್ದೆವು. ಆದರೆ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ನೀವು ದೇವರ ಕೃಪೆಯಿಂದ ರಕ್ಷಣೆ ಹೊಂದಿದವರಾಗಿದ್ದೀರಿ. ದೇವರು ನಮ್ಮನ್ನು ಕ್ರಿಸ್ತನೊಂದಿಗೆ ಎಬ್ಬಿಸಿ ಆತನೊಂದಿಗೆ ಪರಲೋಕದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿದ್ದಾನೆ. ಕ್ರಿಸ್ತ ಯೇಸುವಿನಲ್ಲಿರುವ ನಮಗಾಗಿ ದೇವರು ಇದನ್ನು ಮಾಡಿದನು. ದೇವರು ತನ್ನ ಮಹಾತಿಶಯವಾದ ಕೃಪೆಯನ್ನು ಮುಂದಿನ ಕಾಲದಲ್ಲೆಲ್ಲಾ ತೋರಿಸಬೇಕೆಂದು ಹೀಗೆ ಮಾಡಿದ್ದಾನೆ. ದೇವರು ಈ ಕೃಪೆಯನ್ನು ತನ್ನ ಕರುಣೆಯ ಮೂಲಕ ನಮಗೆ ಕ್ರಿಸ್ತ ಯೇಸುವಿನಲ್ಲಿ ತೋರಿಸುತ್ತಾನೆ.

ಆದ್ದರಿಂದ ನೀವು ನಂಬಿಕೆಯ ಮೂಲಕ ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಅದು ದೇವರ ವರ. ನಿಮಗೆ ರಕ್ಷಣೆ ದೊರೆತದ್ದು ನಿಮ್ಮ ಒಳ್ಳೆಯ ಕಾರ್ಯಗಳಿಂದಲ್ಲ. ಆದ್ದರಿಂದ ತನ್ನನ್ನು ತಾನೇ ರಕ್ಷಿಸಿಕೊಂಡಿರುವುದಾಗಿ ಯಾರೂ ಹೊಗಳಿಕೊಳ್ಳಲು ಸಾಧ್ಯವಿಲ್ಲ. 10 ನಾವು ದೇವರ ನಿರ್ಮಾಣ. ನಾವು ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ದೇವರು ನಮ್ಮನ್ನು ಕ್ರಿಸ್ತಯೇಸುವಿನಲ್ಲಿ ಹೊಸ ಜನರನ್ನಾಗಿ ಮಾಡಿದನು. ದೇವರು ನಮಗೋಸ್ಕರವಾಗಿ ಆ ಒಳ್ಳೆಯ ಕಾರ್ಯಗಳನ್ನು ಮೊದಲೇ ಯೋಜನೆ ಮಾಡಿದನು. ನಾವು ಆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಜೀವಿಸಬೇಕೆಂಬುದು ದೇವರ ಯೋಜನೆಯಾಗಿತ್ತು.

ಕ್ರಿಸ್ತನ ಮೂಲಕ ಸಮಾನತ್ವ

11 ನೀವು ಹುಟ್ಟಿದಂದಿನಿಂದ ಅನ್ಯಜನರಾಗಿದ್ದೀರಿ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಯೆಹೂದ್ಯರು ಕರೆಯುತ್ತಾರೆ. ನಿಮ್ಮನ್ನು “ಸುನ್ನತಿಯಿಲ್ಲದವರು” ಎಂದು ಕರೆಯುವ ಯೆಹೂದ್ಯರು ತಮ್ಮ ಬಗ್ಗೆ “ಸುನ್ನತಿಯವರು” ಎಂದು ಹೇಳಿಕೊಳ್ಳುತ್ತಾರೆ. (ಅವರ ಸುನ್ನತಿಯು ಶರೀರದಲ್ಲಿ ಕೈಯಿಂದ ಮಾಡಲ್ಪಡುತ್ತದೆ.) 12 ಪೂರ್ವಕಾಲದಲ್ಲಿ ನೀವು ಕ್ರಿಸ್ತನಿಲ್ಲದವರಾಗಿದ್ದಿರಿ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ನೀವು ಇಸ್ರೇಲಿನ ಪ್ರಜೆಗಳಾಗಿರಲಿಲ್ಲ. ದೇವರು ತನ್ನ ಜನರೊಂದಿಗೆ ಮಾಡಿಕೊಂಡಿದ್ದ ವಾಗ್ದಾನಗಳಿಗೆ ಸಂಬಂಧಪಟ್ಟ ಒಡಂಬಡಿಕೆಗಳನ್ನು ನೀವು ಹೊಂದಿರಲಿಲ್ಲ. ನಿಮಗೆ ನಿರೀಕ್ಷೆಯಿರಲಿಲ್ಲ ಮತ್ತು ನೀವು ದೇವರನ್ನು ತಿಳಿದಿರಲಿಲ್ಲ. 13 ಹೌದು, ಒಂದು ಕಾಲದಲ್ಲಿ ನೀವು ದೇವರಿಗೆ ಬಹು ದೂರವಾಗಿದ್ದಿರಿ. ಆದರೆ ಈಗ ನೀವು ಕ್ರಿಸ್ತ ಯೇಸುವಿನ ರಕ್ತದ ಮೂಲಕ ದೇವರಿಗೆ ಸಮೀಪಸ್ಥರಾದಿರಿ.

14 ಕ್ರಿಸ್ತನಿಂದ ಈಗ ನಮಗೆ ಸಮಾಧಾನ ದೊರೆತಿದೆ. ಕ್ರಿಸ್ತನು ಯೆಹೂದ್ಯರನ್ನೂ ಯೆಹೂದ್ಯರಲ್ಲದವರನ್ನೂ ಒಂದೇ ಜನಾಂಗವನ್ನಾಗಿ ಮಾಡಿದ್ದಾನೆ. ಯೆಹೂದ್ಯರೂ ಯೆಹೂದ್ಯರಲ್ಲದವರೂ ತಮ್ಮ ಮಧ್ಯೆ ಒಂದು ಅಡ್ಡಗೋಡೆಯಿದೆಯೋ ಎಂಬಂತೆ ಬೇರ್ಪಟ್ಟಿದ್ದರು. ಅವರು ಒಬ್ಬರನ್ನೊಬ್ಬರು ದ್ವೇಷಿಸಿದರು. ಆದರೆ ಕ್ರಿಸ್ತನು ತನ್ನ ದೇಹವನ್ನೇ ಅರ್ಪಿಸುವುದರ ಮೂಲಕ ದ್ವೇಷವೆಂಬ ಆ ಗೋಡೆಯನ್ನು ಕೆಡವಿದನು. 15 ಯೆಹೂದ್ಯರ ಧರ್ಮಶಾಸ್ತ್ರವು ಅನೇಕ ಆಜ್ಞೆಗಳನ್ನೂ ನಿಯಮಗಳನ್ನೂ ಹೊಂದಿತ್ತು. ಆದರೆ ಕ್ರಿಸ್ತನು ಆ ಧರ್ಮಶಾಸ್ತ್ರವನ್ನು ಅಂತಿಮಗೊಳಿಸಿದನು. ಯೆಹೂದ್ಯರನ್ನು ಮತ್ತು ಯೆಹೂದ್ಯರಲ್ಲದವರನ್ನು ತನ್ನಲ್ಲಿ ಒಂದು ಜನಾಂಗವನ್ನಾಗಿ ಮಾಡಿ ಶಾಂತಿಯನ್ನು ಸ್ಥಾಪಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 16 ಈ ಎರಡು ಜನಾಂಗಗಳ ನಡುವೆ ಇದ್ದ ದ್ವೇಷವನ್ನು ಕ್ರಿಸ್ತನು ಶಿಲುಬೆಯ ಮೂಲಕ ಕೊನೆಗೊಳಿಸಿದನು. ಈ ಜನಾಂಗಗಳು ಒಂದೇ ದೇಹವಾದ ಬಳಿಕ ಅವರನ್ನು ದೇವರ ಬಳಿಗೆ ನಡೆಸಬೇಕೆಂಬುದು ಕ್ರಿಸ್ತನ ಬಯಕೆಯಾಗಿತ್ತು. ಶಿಲುಬೆಯ ಮೇಲೆ ಪ್ರಾಣಕೊಡುವುದರ ಮೂಲಕ ಕ್ರಿಸ್ತನು ತನ್ನ ಈ ಬಯಕೆಯನ್ನು ಪೂರೈಸಿದನು. 17 ದೇವರಿಗೆ ದೂರವಾಗಿದ್ದ ನಿಮ್ಮ ಬಳಿಗೂ ಸಮೀಪಸ್ಥರಾಗಿದ್ದವರ ಬಳಿಗೂ ಕ್ರಿಸ್ತನು ಬಂದು ಸಮಾಧಾನದ ಕುರಿತು ಉಪದೇಶಿಸಿದನು. 18 ಹೌದು, ಕ್ರಿಸ್ತನ ಮೂಲಕ ನಾವೆಲ್ಲರೂ ಒಬ್ಬ ಆತ್ಮನಿಂದ ನಮ್ಮ ತಂದೆಯಾದ ದೇವರ ಬಳಿಗೆ ಬರಲು ಶಕ್ತರಾಗಿದ್ದೇವೆ.

19 ಆದ್ದರಿಂದ ಯೆಹೂದ್ಯರಲ್ಲದವರಾದ ನೀವು ಈಗ ವಿದೇಶಿಯರಲ್ಲ ಮತ್ತು ಅನ್ಯಜನರಲ್ಲ. ಈಗ ನೀವು ದೇವರ ಪರಿಶುದ್ಧ ಜನರೊಂದಿಗೆ ಪ್ರಜೆಗಳಾಗಿದ್ದೀರಿ. ನೀವು ದೇವರ ಕುಟುಂಬಕ್ಕೆ ಸೇರಿದವರಾಗಿದ್ದೀರಿ. 20 ವಿಶ್ವಾಸಿಗಳಾದ ನೀವು ದೇವರ ಸ್ವಂತ ಕಟ್ಟಡವಾಗಿದ್ದೀರಿ. ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ಆ ಕಟ್ಟಡವು ಕಟ್ಟಲ್ಪಟ್ಟಿದೆ. ಕ್ರಿಸ್ತನೇ ಆ ಕಟ್ಟಡಕ್ಕೆ ಮೂಲೆಗಲ್ಲಾಗಿದ್ದಾನೆ. 21 ಇಡೀ ಕಟ್ಟಡವು ಕ್ರಿಸ್ತನಲ್ಲಿ ಒಂದಾಗಿ ಸೇರಿಕೊಂಡಿದೆ. ಕ್ರಿಸ್ತನೇ ಅದನ್ನು ಬೆಳೆಯಿಸಿ ಪ್ರಭುವಿನಲ್ಲಿ ಪರಿಶುದ್ಧವಾದ ದೇವಾಲಯವನ್ನಾಗಿ ಮಾಡುತ್ತಾನೆ. 22 ನೀವು ಕ್ರಿಸ್ತನಲ್ಲಿ ಇತರ ಜನರೊಂದಿಗೆ (ಯೆಹೂದ್ಯರೊಂದಿಗೆ) ಕಟ್ಟಲ್ಪಡುತ್ತಿದ್ದೀರಿ. ದೇವರು ತನ್ನ ಆತ್ಮನ ಮೂಲಕ ವಾಸಿಸತಕ್ಕ ನಿವಾಸಸ್ಥಾನವಾಗಿ ನಿರ್ಮಿತರಾಗುತ್ತಿದ್ದೀರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International