M’Cheyne Bible Reading Plan
ದಶಾಜ್ಞೆಗಳು
20 ಬಳಿಕ ಯೆಹೋವನು ಈ ದಶಾಜ್ಞೆಗಳನ್ನು ಅವರಿಗೆ ಕೊಟ್ಟನು:
2 “ಯೆಹೋವನೆಂಬ ನಾನೇ ನಿಮ್ಮ ದೇವರು. ಈಜಿಪ್ಟಿನಲ್ಲಿ ಗುಲಾಮರಾಗಿದ್ದ ನಿಮ್ಮನ್ನು ಆ ದೇಶದಿಂದ ಹೊರಗೆ ನಡಿಸಿದವನು ನಾನೇ.
3 “ನನ್ನನ್ನಲ್ಲದೆ ಬೇರೆ ಯಾವ ದೇವರುಗಳನ್ನೂ ನೀವು ಆರಾಧಿಸಬಾರದು.
4 “ನೀವು ಯಾವ ವಿಗ್ರಹಗಳನ್ನೂ ಮಾಡಬಾರದು. ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ನೀರಿನಲ್ಲಾಗಲಿ ಇರುವ ಯಾವುದೇ ವಸ್ತುವಿನ ರೂಪವನ್ನು ನೀವು ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜಿಸಲೂ ಬಾರದು. 5 ನಿಮ್ಮ ದೇವರಾದ ಯೆಹೋವನೆಂಬ ನನಗೆ ಸಲ್ಲತಕ್ಕ ಗೌರವವನ್ನು ನೀವು ಬೇರೆಯವರಿಗೆ ಸಲ್ಲಿಸಿದರೆ ನಾನು ನಿಮ್ಮನ್ನು ದ್ವೇಷಿಸುತ್ತೇನೆ. ನನಗೆ ವಿರುದ್ಧವಾಗಿ ಪಾಪಮಾಡುವವರ ದೋಷಫಲವನ್ನು ಅವರ ಮೂರು ನಾಲ್ಕು ತಲೆಮಾರುಗಳವರೆಗೂ ಬರಮಾಡುವೆನು. 6 ಆದರೆ ನನ್ನ ಆಜ್ಞೆಗಳಿಗೆ ವಿಧೇಯರಾಗಿರುವವರಿಗೆ ಅವರ ಸಾವಿರ ತಲೆಮಾರುಗಳವರೆಗೂ ದಯೆತೋರಿಸುವೆನು.
7 “ನಿಮ್ಮ ದೇವರಾದ ಯೆಹೋವನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಉಪಯೋಗಿಸಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಉಪಯೋಗಿಸುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.
8 “ನೀವು ಸಬ್ಬತ್ ದಿನವನ್ನು ದೇವರ ದಿನವೆಂದು ಜ್ಞಾಪಕದಲ್ಲಿಟ್ಟುಕೊಂಡು ಅದನ್ನು ಆಚರಿಸಿರಿ. 9 ವಾರದ ಆರು ದಿನಗಳಲ್ಲಿ ಕೆಲಸಮಾಡಿರಿ. 10 ಆದರೆ ಏಳನೆ ದಿನವು ನಿಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಲು ಮೀಸಲಾಗಿರುವ ವಿಶ್ರಾಂತಿ ದಿನವಾಗಿದೆ. ಅಂದು ನೀವು ಯಾವ ಕೆಲಸವನ್ನೂ ಮಾಡಬಾರದು. ನೀವಾಗಲಿ ನಿಮ್ಮ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಸೇವಕರಾಗಲಿ ಸೇವಕಿಯರಾಗಲಿ ನಿಮ್ಮ ಪಶುಗಳಾಗಲಿ ನಿಮ್ಮಲ್ಲಿರುವ ವಿದೇಶಿಯರಾಗಲಿ ಕೆಲಸ ಮಾಡಬಾರದು. 11 ಯಾಕೆಂದರೆ ಯೆಹೋವನು ಆರು ದಿನಗಳಲ್ಲಿ ಕೆಲಸ ಮಾಡಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಿಸಿ ಏಳನೆಯ ದಿನದಲ್ಲಿ ವಿಶ್ರಮಿಸಿದನು. ಆದ್ದರಿಂದ ಯೆಹೋವನು ಸಬ್ಬತ್ ದಿನವನ್ನು ಆಶೀರ್ವದಿಸಿ ಅದನ್ನು ತನ್ನ ದಿನವನ್ನಾಗಿ ಮಾಡಿದನು.
12 “ನೀವು ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು; ನೀವು ಸನ್ಮಾನಿಸಿದರೆ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ಬಹುಕಾಲ ಬಾಳುವಿರಿ.
13 “ನೀವು ಯಾರನ್ನೂ ಕೊಲೆ ಮಾಡಬಾರದು.
14 “ನೀವು ವ್ಯಭಿಚಾರ ಮಾಡಬಾರದು.
15 “ನೀವು ಕದಿಯಬಾರದು.
16 “ನೀವು ಬೇರೆಯವರ ಮೇಲೆ ಸುಳ್ಳುಸಾಕ್ಷಿ ಹೇಳಬಾರದು.[a]
17 “ನೀವು ನೆರೆಯವನ ಮನೆಯನ್ನು ಆಶಿಸಬಾರದು. ನೀವು ಮತ್ತೊಬ್ಬನ ಹೆಂಡತಿಯನ್ನಾಗಲಿ ಸೇವಕರನ್ನಾಗಲಿ ದಾಸಿಯರನ್ನಾಗಲಿ ಪಶುಗಳನ್ನಾಗಲಿ ಆಶಿಸಬಾರದು.”
ಜನರು ದೇವರಿಗೆ ಭಯಪಟ್ಟಿದು
18 ಆಗ ಅಲ್ಲಿದ್ದ ಜನರು ಗುಡುಗಿನ ಧ್ವನಿಯನ್ನು ಕೇಳಿದರು; ಬೆಟ್ಟದ ಮೇಲೆ ಮಿಂಚುಗಳನ್ನು ನೋಡಿದರು; ಹೊಗೆಯು ಬೆಟ್ಟದಿಂದ ಏರುವುದನ್ನು ಕಂಡರು. ಅವರೆಲ್ಲರೂ ಭಯದಿಂದ ನಡುಗಿದರು; ಬೆಟ್ಟದಿಂದ ದೂರದಲ್ಲಿದ್ದುಕೊಂಡು ಅವುಗಳನ್ನೆಲ್ಲಾ ಗಮನಿಸಿದರು. 19 ಆಗ ಜನರು ಮೋಶೆಗೆ, “ನೀನು ನಮ್ಮೊಡನೆ ಮಾತಾಡು; ನಾವು ನಿನಗೆ ಕಿವಿಗೊಡುವೆವು. ಆದರೆ ಯೆಹೋವನು ನಮ್ಮೊಡನೆ ಮಾತಾಡದಿರಲಿ. ಇಲ್ಲವಾದರೆ ನಾವು ಸಾಯುವೆವು” ಅಂದರು.
20 ಆಗ ಮೋಶೆಯು ಜನರಿಗೆ, “ಭಯಪಡಬೇಡಿರಿ, ಯೆಹೋವನು ನಿಮ್ಮನ್ನು ಪರೀಕ್ಷಿಸಲು ಬಂದಿದ್ದಾನೆ. ನೀವು ಆತನಲ್ಲಿ ಭಕ್ತಿಯುಳ್ಳವರಾಗಿರಬೇಕೆಂದು ಆತನು ಬಯಸುತ್ತಾನೆ. ಆಗ ನೀವು ಪಾಪ ಮಾಡುವುದಿಲ್ಲ” ಎಂದು ಹೇಳಿದನು.
21 ದೇವರ ಸನ್ನಿಧಾನಕ್ಕೆ ಹೋಗಲು ಮೋಶೆಯು ಕಾರ್ಮುಗಿಲಿನೊಳಗೆ ಹೋದಾಗ, ಜನರು ಬೆಟ್ಟದಿಂದ ದೂರ ನಿಂತುಕೊಂಡರು. 22 ಆಗ ಯೆಹೋವನು ಈ ಸಂಗತಿಗಳನ್ನು ಇಸ್ರೇಲರಿಗೆ ತಿಳಿಸಲು ಮೋಶೆಗೆ ಆಜ್ಞಾಪಿಸಿದನು: “ನಾನು ಪರಲೋಕದಿಂದ ನಿಮ್ಮ ಸಂಗಡ ಮಾತಾಡಿದ್ದನ್ನು ನೀವು ನೋಡಿದ್ದೀರಿ. 23 ಆದ್ದರಿಂದ ನನ್ನೊಡನೆ ಸ್ಪರ್ಧಿಸಲು, ನೀವು ಬೆಳ್ಳಿಬಂಗಾರಗಳಿಂದ ಮೂರ್ತಿಗಳನ್ನು ಮಾಡಿಕೊಳ್ಳಬಾರದು. ಈ ಸುಳ್ಳು ದೇವರುಗಳನ್ನು ನೀವು ಮಾಡಿಕೊಳ್ಳಲೇಬಾರದು.”
24 “ಒಂದು ವಿಶೇಷ ಯಜ್ಞವೇದಿಕೆಯನ್ನು ನನಗೋಸ್ಕರ ಮಣ್ಣಿನಿಂದ ಕಟ್ಟಿರಿ. ಈ ಯಜ್ಞವೇದಿಕೆಯ ಮೇಲೆ ಕುರಿದನಗಳನ್ನು ನನಗೆ ಸರ್ವಾಂಗಹೋಮಗಳನ್ನಾಗಿಯೂ ಸಮಾಧಾನಯಜ್ಞಗಳನ್ನಾಗಿಯೂ ಸಮರ್ಪಿಸಿರಿ. ನಾನು ನಿಮಗೆ ಹೇಳುವ ಪ್ರತಿಯೊಂದು ಸ್ಥಳದಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಳ್ಳಲು ಹೀಗೆಯೇ ಮಾಡಿರಿ. ಆಗ ನಾನು ಬಂದು ನಿಮ್ಮನ್ನು ಆಶೀರ್ವದಿಸುವೆನು. 25 ನೀವು ಯಜ್ಞವೇದಿಕೆಯನ್ನು ಕಲ್ಲುಗಳಿಂದ ಕಟ್ಟಬೇಕೆಂದಿದ್ದರೆ, ಉಳಿಯಿಂದ[b] ಕೆತ್ತಿದ ಕಲ್ಲುಗಳನ್ನು ಉಪಯೋಗಿಸಬೇಡಿರಿ. ಅಂಥ ಕಲ್ಲುಗಳನ್ನು ಉಪಯೋಗಿಸಿದರೆ, ಯಜ್ಞವೇದಿಕೆಯು ಅಪವಿತ್ರವಾಗುವುದು. 26 ಅಲ್ಲದೆ ಯಜ್ಞವೇದಿಕೆಯನ್ನು ಹತ್ತುವುದಕ್ಕೆ ಮೆಟ್ಟಲುಗಳನ್ನು ಮಾಡಬಾರದು. ಮೆಟ್ಟಲುಗಳಿದ್ದರೆ ಜನರು ತಲೆ ಎತ್ತಿ ಯಜ್ಞವೇದಿಕೆಯನ್ನು ನೋಡುವಾಗ ನಿಮ್ಮ ರಹಸ್ಯಾಂಗವು ಕಾಣಿಸೀತು.”
ರಾಜ್ಯಪಾಲ ಪಿಲಾತನಿಂದ ಯೇಸುವಿನ ವಿಚಾರಣೆ
(ಮತ್ತಾಯ 27:1-2,11-14; ಮಾರ್ಕ 15:1-5; ಯೋಹಾನ 18:28-38)
23 ಬಳಿಕ ಅಲ್ಲಿ ಸೇರಿಬಂದಿದ್ದವರೆಲ್ಲ ಎದ್ದು ಯೇಸುವನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋದರು. 2 ಅವರು ಯೇಸುವಿನ ಮೇಲೆ ದೋಷಾರೋಪಣೆ ಮಾಡತೊಡಗಿದರು. ಅವರು ಪಿಲಾತನಿಗೆ, “ಈ ಮನುಷ್ಯನು ನಮ್ಮ ಜನರನ್ನು ತಪ್ಪುದಾರಿಗೆ ನಡೆಸುವ ಸಂಗತಿಗಳನ್ನು ಹೇಳುತ್ತಿದ್ದನು. ನಾವು ಸೀಸರನಿಗೆ ತೆರಿಗೆ ಕೊಡಬಾರದೆಂದೂ ಇವನು ಹೇಳುತ್ತಿದ್ದನು. ಅಲ್ಲದೆ ಇವನು ತನ್ನನ್ನು ಕ್ರಿಸ್ತನೆಂಬ ಅರಸನೆಂದು ಹೇಳಿಕೊಳ್ಳುತ್ತಾನೆ. ಆದ್ದರಿಂದ ನಾವು ಇವನನ್ನು ಬಂಧಿಸಿದೆವು” ಎಂದು ಹೇಳಿದರು.
3 ಪಿಲಾತನು ಯೇಸುವನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು.
ಯೇಸು, “ನೀನೇ ಹೇಳಿರುವೆ!” ಎಂದು ಉತ್ತರಿಸಿದನು.
4 ಪಿಲಾತನು ಮಹಾಯಾಜಕರಿಗೆ ಮತ್ತು ಜನರಿಗೆ, “ನಾನು ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ” ಎಂದು ಹೇಳಿದನು.
5 ಅದಕ್ಕೆ ಅವರು, “ಇವನು ಜುದೇಯ ಪ್ರಾಂತ್ಯದಲ್ಲೆಲ್ಲಾ ಉಪದೇಶಿಸಿ ಕ್ರಾಂತಿ ಎಬ್ಬಿಸಿದ್ದಾನೆ. ಗಲಿಲಾಯದಲ್ಲಿ ಪ್ರಾರಂಭಿಸಿದ ಇವನು ಈಗ ಇಲ್ಲಿಗೂ ಬಂದಿದ್ದಾನೆ” ಎಂದು ಪದೇಪದೇ ಹೇಳಿದರು.
ಹೆರೋದನ ಮುಂದೆ ಯೇಸು
6 ಪಿಲಾತನು ಇದನ್ನು ಕೇಳಿ, “ಇವನು ಗಲಿಲಾಯದವನೋ?” ಎಂದು ಕೇಳಿದನು. 7 ಯೇಸು ಹೆರೋದನ ಅಧಿಕಾರಕ್ಕೊಳಪಟ್ಟವನೆಂದು ಪಿಲಾತನಿಗೆ ತಿಳಿಯಿತು. ಆ ಸಮಯದಲ್ಲಿ ಹೆರೋದನು ಜೆರುಸಲೇಮಿನಲ್ಲಿದ್ದನು. ಆದ್ದರಿಂದ ಪಿಲಾತನು ಯೇಸುವನ್ನು ಅವನ ಬಳಿಗೆ ಕಳುಹಿಸಿದನು.
8 ಹೆರೋದನು ಯೇಸುವನ್ನು ನೋಡಿದಾಗ ಬಹಳ ಸಂತೋಷಪಟ್ಟನು. ಏಕೆಂದರೆ ಅವನು ಯೇಸುವಿನ ಬಗ್ಗೆ ಎಲ್ಲವನ್ನೂ ಕೇಳಿದ್ದನು ಮತ್ತು ಬಹಳ ಕಾಲದಿಂದ ಆತನಿಂದ ಒಂದು ಅದ್ಭುತಕಾರ್ಯವನ್ನು ನೋಡಬೇಕೆಂದಿದ್ದನು. 9 ಹೆರೋದನು ಯೇಸುವಿಗೆ ಅನೇಕ ಪ್ರಶ್ನೆಗಳನ್ನು ಕೇಳಿದನು. ಆದರೆ ಯೇಸು ಒಂದಕ್ಕೂ ಉತ್ತರ ನೀಡಲಿಲ್ಲ. 10 ಮಹಾಯಾಜಕರು ಮತ್ತು ಧರ್ಮೋಪದೇಶಕರು ಅಲ್ಲಿ ನಿಂತುಕೊಂಡಿದ್ದರು. ಅವರು ಯೇಸುವಿಗೆ ವಿರುದ್ಧವಾಗಿ ಕೂಗುತ್ತಿದ್ದರು. 11 ಆಗ ಹೆರೋದನು ಮತ್ತು ಅವನ ಸೈನಿಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು ಯೇಸುವಿಗೆ ರಾಜನ ಬಟ್ಟೆ ಉಡಿಸಿ ಹಾಸ್ಯ ಮಾಡಿದರು. ಬಳಿಕ ಹೆರೋದನು ಯೇಸುವನ್ನು ಪಿಲಾತನ ಬಳಿಗೆ ತಿರುಗಿ ಕಳುಹಿಸಿಕೊಟ್ಟನು. 12 ಮೊದಲು ಪಿಲಾತನು ಮತ್ತು ಹೆರೋದನು ವೈರಿಗಳಾಗಿದ್ದರು. ಆದರೆ ಅಂದು ಹೆರೋದನು ಮತ್ತು ಪಿಲಾತನು ಮತ್ತೆ ಸ್ನೇಹಿತರಾದರು.
ಯೇಸುವಿಗೆ ಮರಣದಂಡನೆ
(ಮತ್ತಾಯ 27:15-26; ಮಾರ್ಕ 15:6-15; ಯೋಹಾನ 18:39–19:16)
13 ಪಿಲಾತನು ಮಹಾಯಾಜಕರನ್ನೂ ಯೆಹೂದ್ಯನಾಯಕರನ್ನೂ ಇತರ ಜನರನ್ನೂ ಒಟ್ಟಾಗಿ ಕರೆಸಿ, 14 ಅವರಿಗೆ, “ನೀವು ಈ ಮನುಷ್ಯನನ್ನು (ಯೇಸುವನ್ನು) ನನ್ನ ಬಳಿಗೆ ಕರೆದುಕೊಂಡು ಬಂದಿರಿ. ಇವನು ಜನರನ್ನು ತಪ್ಪುದಾರಿಗೆ ನಡೆಸುತ್ತಿದ್ದಾನೆ ಎಂದು ಹೇಳಿದಿರಿ. ಆದರೆ ನಾನು ನಿಮ್ಮೆಲ್ಲರ ಮುಂದೆ ಇವನನ್ನು ವಿಚಾರಣೆ ಮಾಡಿದೆನು. ಆದರೆ ನಾನು ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ನಿಮ್ಮ ದೋಷಾರೋಪಣೆಗಳು ಇವನಿಗೆ ಅನ್ವಯಿಸುವುದಿಲ್ಲ. 15 ಇದಲ್ಲದೆ ಹೆರೋದನು ಸಹ ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ಹೆರೋದನು ಯೇಸುವನ್ನು ನಮ್ಮ ಬಳಿಗೆ ಮತ್ತೆ ಕಳುಹಿಸಿದನು. ನೋಡಿರಿ, ಯೇಸು ಯಾವ ತಪ್ಪನ್ನೂ ಮಾಡಿಲ್ಲ. ಅವನಿಗೆ ಮರಣದಂಡನೆ ಆಗಬಾರದು. 16 ಆದ್ದರಿಂದ ನಾನು ಇವನನ್ನು ಸ್ವಲ್ಪ ಶಿಕ್ಷಿಸಿ ಬಿಟ್ಟುಬಿಡುತ್ತೇನೆ” ಎಂದು ಹೇಳಿದನು. 17 [a]
18 ಆದರೆ ಜನರೆಲ್ಲರೂ, “ಅವನನ್ನು ಕೊಲ್ಲಿಸು! ಬರಬ್ಬನನ್ನು ಬಿಟ್ಟುಕೊಡು” ಎಂದು ಕೂಗಿದರು. 19 (ಬರಬ್ಬನು ಪಟ್ಟಣದಲ್ಲಿ ದಂಗೆ ಎಬ್ಬಿಸಿದ್ದರಿಂದ ಸೆರೆಮನೆಯಲ್ಲಿದ್ದನು. ಅವನು ಕೆಲವು ಜನರನ್ನು ಕೊಂದಿದ್ದನು.)
20 ಪಿಲಾತನು ಯೇಸುವನ್ನು ಬಿಡಿಸಬೇಕೆಂದಿದ್ದನು. ಆದ್ದರಿಂದ ಯೇಸುವನ್ನು ಬಿಟ್ಟುಬಿಡೋಣ ಎಂದು ಪಿಲಾತನು ಮತ್ತೆ ಅವರಿಗೆ ಹೇಳಿದನು. 21 ಆದರೆ ಅವರು ಮತ್ತೆ, “ಅವನನ್ನು ಕೊಲ್ಲಿಸು! ಅವನನ್ನು ಶಿಲುಬೆಗೇರಿಸು!” ಎಂದು ಕೂಗಿದರು.
22 ಮೂರನೇ ಸಲ ಪಿಲಾತನು ಜನರಿಗೆ, “ಏಕೆ? ಆತನು ಏನು ತಪ್ಪುಮಾಡಿದನು? ಆತನು ತಪ್ಪಿತಸ್ಥನಲ್ಲ. ಆತನನ್ನು ಕೊಲ್ಲಿಸುವುದಕ್ಕೆ ನನಗೆ ಯಾವ ಕಾರಣವೂ ಕಾಣಿಸುವುದಿಲ್ಲ. ಆದ್ದರಿಂದ ಆತನನ್ನು ಸ್ವಲ್ಪ ಶಿಕ್ಷಿಸಿ ಬಿಟ್ಟುಬಿಡುತ್ತೇನೆ” ಎಂದು ಹೇಳಿದನು.
23 ಆದರೆ ಅವರು ಕೂಗಾಟವನ್ನು ಮುಂದುವರಿಸಿ ಯೇಸುವನ್ನು ಶಿಲುಬೆಗೆ ಹಾಕಿ ಕೊಲ್ಲಿಸಬೇಕೆಂದು ಬಲವಂತಪಡಿಸಿದರು. ಅವರ ಕೂಗಾಟ ಬಹಳ ಹೆಚ್ಚಾದದ್ದರಿಂದ, 24 ಪಿಲಾತನು ಅವರ ಬಯಕೆಯನ್ನು ಈಡೇರಿಸಲು ನಿರ್ಧರಿಸಿದನು. 25 ಬರಬ್ಬನನ್ನು ಬಿಡುಗಡೆ ಮಾಡಬೇಕೆಂದು ಜನರು ಕೇಳಿಕೊಂಡರು. ದಂಗೆ ಎಬ್ಬಿಸಿದ್ದರಿಂದ ಮತ್ತು ಕೊಲೆಮಾಡಿದ್ದರಿಂದ ಬರಬ್ಬನು ಸೆರೆಮನೆಯಲ್ಲಿದ್ದನು. ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿ, ಯೇಸುವನ್ನು ಕೊಲ್ಲಿಸುವುದಕ್ಕೆ ಜನರಿಗೆ ಒಪ್ಪಿಸಿದನು. ಜನರ ಬಯಕೆಯೂ ಇದೇ ಆಗಿತ್ತು.
ಯೇಸುವನ್ನು ಶಿಲುಬೆಗೇರಿಸಿದರು
(ಮತ್ತಾಯ 27:32-44; ಮಾರ್ಕ 15:21-32; ಯೋಹಾನ 19:17-19)
26 ಸೈನಿಕರು ಯೇಸುವನ್ನು ಕೊಲ್ಲಲು ಕರೆದೊಯ್ಯುವಾಗ ಹೊಲದಿಂದ ಪಟ್ಟಣದೊಳಗೆ ಬರುತ್ತಿದ್ದ ಸೀಮೋನ ಎಂಬವನನ್ನು ಕಂಡರು. ಸೀಮೋನನು ಸಿರೇನ್ ಪಟ್ಟಣದವನು. ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡು ಯೇಸುವಿನ ಹಿಂದೆ ಬರುವಂತೆ ಸೈನಿಕರು ಸೀಮೋನನನ್ನು ಬಲವಂತ ಮಾಡಿದರು.
27 ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ದೊಡ್ಡಗುಂಪಾಗಿ ಸೇರಿದ್ದ ಸ್ತ್ರೀಯರು ಯೇಸುವಿಗಾಗಿ ದುಃಖಪಟ್ಟು ಎದೆ ಬಡಿದುಕೊಂಡು ಗೋಳಾಡುತ್ತಿದ್ದರು. 28 ಆದರೆ ಯೇಸು, ಆ ಸ್ತ್ರೀಯರಿಗೆ, “ಜೆರುಸಲೇಮಿನ ಸ್ತ್ರೀಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ! 29 ‘ಬಂಜೆಯರೇ ಭಾಗ್ಯವಂತರು! ಹೆರದವಳೇ ಹಾಲುಕುಡಿಸದವಳೇ ಭಾಗ್ಯವಂತಳು’ ಎಂದು ಜನರು ಹೇಳುವ ಸಮಯ ಬರುತ್ತದೆ. 30 ಆಗ ಜನರು ಬೆಟ್ಟಕ್ಕೆ, ‘ನಮ್ಮ ಮೇಲೆ ಬೀಳು!’ ಎಂತಲೂ ಗುಡ್ಡಗಳಿಗೆ, ‘ನಮ್ಮನ್ನು ಮುಚ್ಚಿಕೊಳ್ಳಿರಿ!’(A) ಎಂತಲೂ ಕೂಗಿಕೊಳ್ಳುವರು. 31 ಜೀವನ ಸುಖಕರವಾಗಿರುವಾಗ ಜನರು ಈ ರೀತಿ ವರ್ತಿಸಿದರೆ, ಜೀವನ ಕಷ್ಟಕರವಾದಾಗ ಏನು ಮಾಡುವರು?”[b] ಎಂದು ಹೇಳಿದನು.
32 ಯೇಸುವಿನ ಸಂಗಡ ಇಬ್ಬರು ದುಷ್ಕರ್ಮಿಗಳನ್ನು ಕೊಲ್ಲಬೇಕೆಂದು ಅವರು ನಿರ್ಧರಿಸಿದರು. 33 ಯೇಸುವನ್ನು ಮತ್ತು ಇಬ್ಬರು ದುಷ್ಕರ್ಮಿಗಳನ್ನು ಅವರು “ಕಪಾಲ”ವೆಂಬ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸೈನಿಕರು ಯೇಸುವನ್ನೂ ಆ ದುಷ್ಕರ್ಮಿಗಳನ್ನೂ ಶಿಲುಬೆಗಳಿಗೆ ಜಡಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದರು.
34 ಯೇಸು, “ತಂದೆಯೇ, ಇವರನ್ನು ಕ್ಷಮಿಸು. ಇವರಿಗೆ ತಾವು ಮಾಡುತ್ತಿರುವುದು ತಿಳಿದಿಲ್ಲ” ಎಂದು ಪ್ರಾರ್ಥಿಸಿದನು.
ಸೈನಿಕರು ಚೀಟುಹಾಕಿ ಯೇಸುವಿನ ಬಟ್ಟೆಗಳು ಯಾರಿಗೆ ಸೇರಬೇಕೆಂದು ತೀರ್ಮಾನಿಸಿದರು. 35 ಜನರು ನೋಡುತ್ತಾ ಅಲ್ಲಿ ನಿಂತಿದ್ದರು. ಯೆಹೂದ್ಯನಾಯಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು, “ಇವನು ದೇವರಿಂದ ಆರಿಸಲ್ಪಟ್ಟ ಕ್ರಿಸ್ತನಾಗಿದ್ದರೆ ತನ್ನನ್ನು ರಕ್ಷಿಸಿಕೊಳ್ಳಲಿ. ಇವನು ಬೇರೆಯವರನ್ನು ರಕ್ಷಿಸಿದನಲ್ಲವೇ?” ಅಂದರು.
36 ಸೈನಿಕರೂ ಯೇಸುವನ್ನು ಗೇಲಿಮಾಡಿದರು. ಅವರು ಯೇಸುವಿನ ಬಳಿಗೆ ಬಂದು, ಸ್ವಲ್ಪ ಹುಳಿದ್ರಾಕ್ಷಾರಸವನ್ನು ನೀಡಿ, 37 “ನೀನು ಯೆಹೂದ್ಯರ ಅರಸನಾಗಿದ್ದರೆ, ನಿನ್ನನ್ನು ರಕ್ಷಿಸಿಕೊ!” ಎಂದು ಹೇಳಿದರು. 38 (ಶಿಲುಬೆಯ ಮೇಲ್ಭಾಗದಲ್ಲಿ, “ಈತನು ಯೆಹೂದ್ಯರ ಅರಸನು” ಎಂದು ಬರೆಯಲಾಗಿತ್ತು.)
39 ದುಷ್ಕರ್ಮಿಗಳಲ್ಲೊಬ್ಬನು ಯೇಸುವನ್ನು ದೂಷಿಸಿ, “ನೀನು ಕ್ರಿಸ್ತನಲ್ಲವೋ? ಹಾಗಾದರೆ ನಿನ್ನನ್ನು ರಕ್ಷಿಸಿಕೊ! ನಮ್ಮನ್ನೂ ರಕ್ಷಿಸು!” ಅಂದನು.
40 ಆದರೆ ಇನ್ನೊಬ್ಬ ದುಷ್ಕರ್ಮಿಯು ಅವನನ್ನು ಗದರಿಸಿ, “ನೀನು ದೇವರಿಗೆ ಹೆದರಬೇಕು! ನಾವೆಲ್ಲರೂ ಬೇಗನೆ ಸಾಯುವೆವು! 41 ನೀನೂ ನಾನೂ ಅಪರಾಧಿಗಳಾಗಿದ್ದೇವೆ. ನಾವು ತಪ್ಪು ಮಾಡಿದ್ದರಿಂದ ಶಿಕ್ಷಿಸಲ್ಪಡಬೇಕು. ಆದರೆ ಈ ಮನುಷ್ಯನು (ಯೇಸು) ಯಾವ ತಪ್ಪನ್ನೂ ಮಾಡಲಿಲ್ಲ!” ಎಂದು ಹೇಳಿದನು. 42 ಬಳಿಕ ಆ ದುಷ್ಕರ್ಮಿಯು ಆತನಿಗೆ, “ಯೇಸುವೇ ನೀನು ನಿನ್ನ ರಾಜ್ಯವನ್ನು ಸ್ಥಾಪಿಸುವಾಗ ನನ್ನನ್ನು ನೆನಸಿಕೊ!” ಎಂದು ಹೇಳಿದನು.
43 ಆಗ ಯೇಸು ಅವನಿಗೆ, “ಕೇಳು! ನಾನು ಸತ್ಯವನ್ನೇ ಹೇಳುತ್ತೇನೆ. ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ” ಎಂದು ಹೇಳಿದನು.
ಯೇಸುವಿನ ಮರಣ
(ಮತ್ತಾಯ 27:45-56; ಮಾರ್ಕ 15:33-41; ಯೋಹಾನ 19:28-30)
44 ಇಷ್ಟರಲ್ಲಿ ಹೆಚ್ಚುಕಡಿಮೆ ಮಧ್ಯಾಹ್ನವಾಗಿತ್ತು. ಆದರೆ ಇಡೀ ಪ್ರದೇಶವು ಮಧ್ಯಾಹ್ನ ಮೂರು ಗಂಟೆಯ ತನಕ ಕತ್ತಲಾಯಿತು. 45 ಸೂರ್ಯನ ಬೆಳಕೇ ಇರಲಿಲ್ಲ! ದೇವಾಲಯದ ಪರದೆಯು ಎರಡು ಭಾಗವಾಗಿ ಹರಿದುಹೋಯಿತು. 46 ಆಮೇಲೆ ಯೇಸು, “ತಂದೆಯೇ, ನನ್ನ ಆತ್ಮವನ್ನು ನಿನಗೆ ಒಪ್ಪಿಸುತ್ತೇನೆ”[c] ಎಂದು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟನು.
47 ಅಲ್ಲಿದ್ದ ಶತಾಧಿಪತಿ ನಡೆದದ್ದನ್ನು ನೋಡಿ, “ಈ ಮನುಷ್ಯನು ಒಳ್ಳೆಯವನೆಂದು ನನಗೆ ಗೊತ್ತಿತ್ತು” ಎಂದು ಹೇಳಿ ದೇವರನ್ನು ಸ್ತುತಿಸಿದನು.
48 ಈ ಸಂಗತಿಯನ್ನು ನೋಡುವುದಕ್ಕೆ ಅನೇಕ ಜನರು ಪಟ್ಟಣದ ಹೊರಗೆ ಬಂದಿದ್ದರು. ಜನರು ಇದ್ದನ್ನು ನೋಡಿ, ಬಹಳ ದುಃಖದಿಂದ ಹೊರಟುಹೋದರು. 49 ಯೇಸುವಿನ ಆತ್ಮೀಯ ಸ್ನೇಹಿತರೂ ಅಲ್ಲಿದ್ದರು. ಗಲಿಲಾಯದಿಂದ ಯೇಸುವನ್ನು ಹಿಂಬಾಲಿಸಿದ ಕೆಲವು ಸ್ತ್ರೀಯರೂ ಅಲ್ಲಿದ್ದರು. ಅವರೆಲ್ಲರೂ ಶಿಲುಬೆಯಿಂದ ದೂರದಲ್ಲಿ ನಿಂತುಕೊಂಡು ಈ ಸಂಗತಿಗಳನ್ನು ನೋಡಿದರು.
ಅರಿಮಥಾಯದ ಯೋಸೇಫನು
(ಮತ್ತಾಯ 27:57-61; ಮಾರ್ಕ 15:42-47; ಯೋಹಾನ 19:38-42)
50-51 ಅರಿಮಥಾಯ ಎಂಬುದು ಯೆಹೂದ್ಯರ ಒಂದು ಊರು. ಯೋಸೇಫನು ಇದರ ನಿವಾಸಿ. ಇವನು ಒಳ್ಳೆಯ ಧಾರ್ಮಿಕ ವ್ಯಕ್ತಿಯಾಗಿದ್ದನು. ದೇವರ ರಾಜ್ಯದ ಆಗಮನವನ್ನು ಇವನು ನಿರೀಕ್ಷಿಸಿದ್ದನು. ಯೋಸೇಫನು ಯೆಹೂದ್ಯರ ಹಿರಿಸಭೆಯ ಸದಸ್ಯನಾಗಿದ್ದನು. ಆದರೆ ಬೇರೆ ಯೆಹೂದ್ಯ ನಾಯಕರು ಯೇಸುವನ್ನು ಕೊಲ್ಲಲು ತೀರ್ಮಾನಿಸಿದಾಗ ಇವನು ಅದಕ್ಕೆ ಒಪ್ಪಲಿಲ್ಲ. 52 ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಯೋಸೇಫನು ಪಿಲಾತನನ್ನು ಕೇಳಿಕೊಂಡನು. 53 ಬಳಿಕ ಇವನು ಯೇಸುವಿನ ದೇಹವನ್ನು ಶಿಲುಬೆಯಿಂದ ಇಳಿಸಿ ಬಟ್ಟೆಯಲ್ಲಿ ಸುತ್ತಿ, ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿ ಇಟ್ಟನು. ಈ ಸಮಾಧಿಯಲ್ಲಿ ಬೇರೆ ಯಾರನ್ನೂ ಎಂದೂ ಹೂಳಿರಲಿಲ್ಲ. 54 ಅದು ಸಿದ್ಧತೆಯ ದಿನದ[d] ಸಾಯಂಕಾಲವಾಗಿತ್ತು. ಸೂರ್ಯನು ಮುಳುಗಿದಾಗ, ಸಬ್ಬತ್‌ದಿನ ಪ್ರಾರಂಭವಾಗಲಿಕ್ಕಿತ್ತು.
55 ಗಲಿಲಾಯದಿಂದ ಯೇಸುವಿನ ಸಂಗಡ ಬಂದಿದ್ದ ಸ್ತ್ರೀಯರು ಯೋಸೇಫನನ್ನು ಹಿಂಬಾಲಿಸಿದರು. ಅವರು ಸಮಾಧಿಯನ್ನೂ ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳವನ್ನೂ ನೋಡಿದರು. 56 ಬಳಿಕ ಆ ಸ್ತ್ರೀಯರು ಯೇಸುವಿನ ದೇಹಕ್ಕೆ ಹಚ್ಚಲು ಪರಿಮಳದ್ರವ್ಯಗಳನ್ನು ಸಿದ್ಧಮಾಡುವುದಕ್ಕಾಗಿ ಹೊರಟುಹೋದರು.
ಸಬ್ಬತ್ ದಿನದಲ್ಲಿ ಅವರು ವಿಶ್ರಮಿಸಿಕೊಂಡರು. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಸಬ್ಬತ್‌ದಿನದಂದು ಜನರೆಲ್ಲರೂ ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು.
ಯೋಬನಿಗೆ ದೇವರ ಉತ್ತರ
38 ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು:
2 “ನನ್ನ ಉದ್ದೇಶಗಳನ್ನು ಮೂರ್ಖತನದ ಮಾತುಗಳಿಂದ ಗಲಿಬಿಲಿಗೊಳಿಸುತ್ತಿರುವ
ಈ ಮನುಷ್ಯನು ಯಾರು?
3 ಯೋಬನೇ, ನಡುಕಟ್ಟಿಕೊಂಡು ಬಲಿಷ್ಠನಾಗಿರು.
ನಾನು ನಿನಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಾಗು.
4 “ಯೋಬನೇ, ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದೆ?
ನೀನು ಬಹು ಜಾಣನಾಗಿದ್ದರೆ ನನಗೆ ಉತ್ತರಕೊಡು.
5 ಯೋಬನೇ, ಭೂಮಿಯ ಅಳತೆಗಳನ್ನು ಯಾರು ನಿರ್ಧರಿಸಿದರು?
ಭೂಮಿಯ ಅಳತೆಯನ್ನು ನೂಲುಗುಂಡಿನಿಂದ ಅಳೆದವರು ಯಾರು?
6 ಭೂಮಿಯ ಆಧಾರಸ್ತಂಭಗಳು ಯಾವುದರ ಮೇಲೆ ನೆಲೆಗೊಂಡಿವೆ?
ಭೂಮಿಯ ಅಸ್ತಿವಾರಕ್ಕೆ ಮೊದಲ ಕಲ್ಲನ್ನು ಹಾಕಿದವರು ಯಾರು?
7 ಅದು ಸಂಭವಿಸಿದಾಗ, ಮುಂಜಾನೆಯ ನಕ್ಷತ್ರಗಳು ಒಟ್ಟಾಗಿ ಹಾಡಿದವು;
ದೇವದೂತರುಗಳು ಆನಂದಘೋಷ ಮಾಡಿದರು!
8 “ಯೋಬನೇ, ಭೂಮಿಯ ಗರ್ಭದೊಳಗಿಂದ ನುಗ್ಗಿ ಬರುವ ಸಮುದ್ರದ ನೀರನ್ನು
ನಿಲ್ಲಿಸುವುದಕ್ಕಾಗಿ ಬಾಗಿಲುಗಳನ್ನು ಮುಚ್ಚಿದವರು ಯಾರು?
9 ಆ ಸಮಯದಲ್ಲಿ ನಾನು ಸಮುದ್ರವನ್ನು ಮೋಡಗಳಿಂದ ಮುಚ್ಚಿ
ಕಾರ್ಗತ್ತಲನ್ನು ಬಟ್ಟೆಯಂತೆ ಸುತ್ತಿಟ್ಟೆನು.
10 ನಾನು ಸಮುದ್ರಕ್ಕೆ ಮೇರೆಯನ್ನು ನಿಗದಿಪಡಿಸಿ
ಕದ ಹಾಕಿದ ಬಾಗಿಲುಗಳ ಹಿಂಭಾಗದಲ್ಲಿಟ್ಟೆನು.
11 ನಾನು ಸಮುದ್ರಕ್ಕೆ, ‘ನೀನು ಇಲ್ಲಿಯವರೆಗೆ ಬರಬಹುದು, ಆದರೆ ಇದಕ್ಕಿಂತ ಹೆಚ್ಚಿಗೆ ಬರಕೂಡದು.
ನಿನ್ನ ಹೆಮ್ಮೆಯ ಅಲೆಗಳು ಇಲ್ಲೇ ನಿಲ್ಲಬೇಕು’ ಎಂದು ಅಪ್ಪಣೆಕೊಟ್ಟೆನು.
12 “ಯೋಬನೇ, ನಿನ್ನ ಜೀವಮಾನದಲ್ಲಿ ಎಂದಾದರೂ
ಮುಂಜಾನೆಗಾಗಲಿ ಹಗಲಿಗಾಗಲಿ ಆರಂಭವಾಗೆಂದು ಆಜ್ಞಾಪಿಸಿರುವಿಯಾ?
13 ಯೋಬನೇ, ದುಷ್ಟರನ್ನು ಅವರು ಅಡಗಿಕೊಂಡಿರುವ ಸ್ಥಳಗಳಲ್ಲಿ ಹಿಡಿದು
ನಡುಗಿಸಬೇಕೆಂದು ನೀನು ಮುಂಜಾನೆಯ ಬೆಳಕಿಗೆ ಎಂದಾದರೂ ಆಜ್ಞಾಪಿಸಿರುವಿಯಾ?
14 ಮುಂಜಾನೆಯ ಬೆಳಕು ಬೆಟ್ಟಗಳನ್ನೂ ಕಣಿವೆಗಳನ್ನೂ
ಸ್ಪಷ್ಟವಾಗಿ ಕಾಣಮಾಡುತ್ತವೆ.
ಹಗಲುಬೆಳಕು ಭೂಮಿಗೆ ಬಂದಾಗ
ಆ ಸ್ಥಳಗಳ ರೂಪಗಳು ಮೇಲಂಗಿಯ ನೆರಿಗೆಗಳಂತೆ ಎದ್ದುಕಾಣುತ್ತವೆ.
ಆ ಸ್ಥಳಗಳು ಮುದ್ರೆಯೊತ್ತಿದ
ಜೇಡಿಮಣ್ಣಿನಂತೆ ರೂಪಗೊಳ್ಳುತ್ತವೆ.
15 ದುಷ್ಟರು ಹಗಲುಬೆಳಕನ್ನು ಇಷ್ಟಪಡುವುದಿಲ್ಲ.
ಅದು ಪ್ರಕಾಶಮಾನವಾಗಿ ಹೊಳೆಯುವಾಗ, ದುಷ್ಕೃತ್ಯಗಳನ್ನು ಮಾಡದಂತೆ ಅದು ಅವರನ್ನು ತಡೆಯುತ್ತದೆ.
16 “ಯೋಬನೇ, ಸಮುದ್ರವು ಆರಂಭವಾಗುವ ಅತ್ಯಂತ ಆಳವಾದ ಭಾಗಗಳಿಗೆ ನೀನು ಎಂದಾದರೂ ಹೋಗಿರುವಿಯಾ?
ಸಾಗರದ ತಳದ ಮೇಲೆ ನೀನು ಎಂದಾದರೂ ನಡೆದಿರುವಿಯಾ?
17 ಯೋಬನೇ, ಪಾತಾಳದ ದ್ವಾರಗಳನ್ನಾಗಲಿ
ಘೋರಾಂಧಕಾರದ ಬಾಗಿಲುಗಳನ್ನಾಗಲಿ ನೀನು ಎಂದಾದರೂ ನೋಡಿರುವಿಯಾ?
18 ಯೋಬನೇ, ಭೂಮಿಯ ವಿಶಾಲತೆಯನ್ನು ನೋಡಿರುವಿಯಾ?
ನೀನು ನಿಜವಾಗಿಯೂ ಅರ್ಥಮಾಡಿಕೊಳ್ಳುವಿಯಾ?
ನಿನಗೆ ಇದೆಲ್ಲಾ ತಿಳಿದಿದ್ದರೆ, ನನಗೆ ಹೇಳು.
19 “ಯೋಬನೇ, ಬೆಳಕು ಎಲ್ಲಿಂದ ಬರುತ್ತದೆ?
ಕತ್ತಲೆಯು ಎಲ್ಲಿಂದ ಬರುತ್ತದೆ?
20 ಯೋಬನೇ, ಬೆಳಕನ್ನೂ ಕತ್ತಲೆಯನ್ನೂ ಅವುಗಳ ಉಗಮಸ್ಥಳಕ್ಕೆ ತೆಗೆದುಕೊಂಡು ಹೋಗಬಲ್ಲೆಯಾ?
ಅಲ್ಲಿಗೆ ಹೋಗುವ ಮಾರ್ಗ ನಿನಗೆ ಗೊತ್ತಿದೆಯೋ?
21 ಯೋಬನೇ, ಇವು ನಿನಗೆ ತಿಳಿದಿವೆ, ಯಾಕೆಂದರೆ ನೀನು ಬಹು ವೃದ್ಧನೂ ಜ್ಞಾನಿಯೂ ಆಗಿರುವೆ.
ನಾನು ಅವುಗಳನ್ನು ನಿರ್ಮಿಸಿದಾಗ ನೀನು ಅಲ್ಲಿ ವಾಸವಾಗಿರಲಿಲ್ಲವೇ?
22 “ಯೋಬನೇ, ನಾನು ಹಿಮವನ್ನೂ ಆಲಿಕಲ್ಲನ್ನೂ ಇಟ್ಟಿರುವ ಉಗ್ರಾಣಗಳೊಳಗೆ
ನೀನು ಎಂದಾದರೂ ಹೋಗಿರುವಿಯಾ?
23 ಇಕ್ಕಟ್ಟಿನ ಕಾಲಕ್ಕಾಗಿಯೂ ಯುದ್ಧಕದನಗಳ ಕಾಲಕ್ಕಾಗಿಯೂ
ನಾನು ಅವುಗಳನ್ನು ಕೂಡಿಸಿಟ್ಟಿದ್ದೇನೆ.
24 ಯೋಬನೇ, ಸೂರ್ಯನು ಹೊರಟ ಸ್ಥಳಕ್ಕೂ ಪೂರ್ವದಿಕ್ಕಿನ ಗಾಳಿಯು ಭೂಮಿಯ ಮೇಲೆಲ್ಲಾ ಬೀಸುವುದಕ್ಕಾಗಿ ಹೊರಟುಬರುವ ಸ್ಥಳಕ್ಕೂ
ನೀನು ಎಂದಾದರೂ ಹೋಗಿರುವಿಯಾ?
25 ಯೋಬನೇ, ದೊಡ್ಡ ಮಳೆಗಾಗಿ ಆಕಾಶದಲ್ಲಿ ಅಗೆದು ಸುರಂಗಮಾಡಿದವರು ಯಾರು?
ಗುಡುಗು ಮಿಂಚಿನ ಮಳೆಗೆ ಹಾದಿಯನ್ನು ಮಾಡಿದವರು ಯಾರು?
26-27 ಯೋಬನೇ, ಯಾರೂ ವಾಸಿಸದಿರುವ ಸ್ಥಳದಲ್ಲಿ ನೀರು ಇರುವಂತೆಯೂ
ಆ ನೀರು ಬರಿದಾದ ಸ್ಥಳವನ್ನು ತೃಪ್ತಿಪಡಿಸಿ ಬಹಳ ಹುಲ್ಲಿನಿಂದ ಅದನ್ನು ಹಸಿರುಗೊಳಿಸುವಂತೆಯೂ ಮಾಡಿದವರು ಯಾರು?
28 ಯೋಬನೇ, ಮಳೆಗೆ ತಂದೆಯಿರುವನೇ?
ಇಬ್ಬನಿಯ ಹನಿಗಳನ್ನು ನಿರ್ಮಿಸಿದವರು ಯಾರು?
29 ಯೋಬನೇ, ಮಂಜಿಗೆ ತಾಯಿ ಇರುವಳೇ?
ಆಕಾಶದ ಇಬ್ಬನಿಯನ್ನು ಹೆತ್ತವರು ಯಾರು?
30 ನೀರು ಕಲ್ಲಿನಂತೆ ಗಟ್ಟಿಯಾದಾಗ,
ಸಾಗರಗಳ ಮೇಲ್ಭಾಗವು ಹೆಪ್ಪುಗಟ್ಟಿದಾಗ ಆಕಾಶದ ಹಿಮಕ್ಕೆ ಜನನ ಕೊಡುವವರು ಯಾರು?
31 “ಯೋಬನೇ, ಪ್ಲೆಯಡ್ಸ್[a] ಎಂಬ ನಕ್ಷತ್ರಗುಂಪನ್ನು ನೀನು ಕಟ್ಟಬಲ್ಲೆಯಾ?
ನೀನು ಒರೈಯನ್[b] ನಕ್ಷತ್ರ ಗುಂಪಿನ ನಡುಪಟ್ಟಿಯನ್ನು ಬಿಚ್ಚಬಲ್ಲೆಯಾ?
32 ಯೋಬನೇ, ನೀನು ಸಮಯಕ್ಕೆ ಸರಿಯಾಗಿ ನಕ್ಷತ್ರರಾಶಿಗಳನ್ನು ಬರಮಾಡಬಲ್ಲೆಯಾ?
ನೀನು ಬೇರ್[c] ನಕ್ಷತ್ರಗಳನ್ನು ಅದರ ಮರಿಗಳೊಂದಿಗೆ ನಡೆಸಬಲ್ಲೆಯಾ?
33 ಯೋಬನೇ, ಆಕಾಶವನ್ನು ಆಳುವ ನಿಯಮಗಳು ನಿನಗೆ ಗೊತ್ತಿವೆಯೋ?
ಅವುಗಳ ಆಳ್ವಿಕೆಯನ್ನು ನೀನು ಭೂಮಿಯ ಮೇಲೆ ಆರಂಭಿಸಬಲ್ಲೆಯಾ?
34 “ಯೋಬನೇ, ನೀನು ಮೋಡಗಳಿಗೆ ಮಹಾಧ್ವನಿಯಿಂದ ಆಜ್ಞಾಪಿಸಿ
ಅವು ನಿನ್ನನ್ನು ದೊಡ್ಡ ಮಳೆಯಿಂದ ಆವರಿಸಿಕೊಳ್ಳುವಂತೆ ಮಾಡಬಲ್ಲೆಯಾ?
35 ಯೋಬನೇ, ನೀನು ಸಿಡಿಲಿಗೆ ಆಜ್ಞಾಪಿಸಬಲ್ಲೆಯಾ?
ಅದು ನಿನ್ನ ಬಳಿಗೆ ಬಂದು, ‘ಇಗೋ ಬಂದಿದ್ದೇನೆ;
ತಮಗೇನಾಗಬೇಕು’ ಎನ್ನುವುದೇ?
36 “ಯೋಬನೇ, ಮನುಷ್ಯರನ್ನು ಜ್ಞಾನಿಗಳನ್ನಾಗಿ ಮಾಡುವವರು ಯಾರು?
ಅವರ ಅಂತರಾಳದಲ್ಲಿ ಜ್ಞಾನವನ್ನು ಇಡುವವರು ಯಾರು?
37 ಮೋಡಗಳನ್ನು ಲೆಕ್ಕಿಸಿ
ಮಳೆ ಸುರಿಸಲು ಅವುಗಳನ್ನು ಮೊಗಚಿಹಾಕಿ
38 ಧೂಳನ್ನು ಮಣ್ಣನ್ನಾಗಿಯೂ ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆಯೂ
ಮಾಡುವ ಜ್ಞಾನಿ ಯಾರು?
39-40 “ಯೋಬನೇ, ಹೆಣ್ಣುಸಿಂಹಕ್ಕೆ ನೀನು ಆಹಾರವನ್ನು ಹುಡುಕುವೆಯಾ?
ಗವಿಗಳಲ್ಲಿ ಮಲಗಿಕೊಂಡಿರುವ ಸಿಂಹಗಳಿಗೂ ಪೊದೆಯಲ್ಲಿ ಹೊಂಚುಹಾಕುತ್ತಿರುವ ಪ್ರಾಯದ ಸಿಂಹಗಳಿಗೂ ನೀನು ಉಣಿಸಬಲ್ಲೆಯಾ?
41 ಕಾಗೆಗಳು ಆಹಾರವಿಲ್ಲದೆ ಅಲೆದಾಡುತ್ತಿರುವ ಅವುಗಳ ಮರಿಗಳು ದೇವರಿಗೆ ಮೊರೆಯಿಡುವಾಗ
ಅವುಗಳಿಗೆ ಆಹಾರವನ್ನು ಒದಗಿಸುವವರು ಯಾರು?
ಕ್ರೈಸ್ತರ ಕೊಡುವಿಕೆ
8 ಸಹೋದರ ಸಹೋದರಿಯರೇ, ಮಕೆದೋನಿಯದ ಸಭೆಗಳಲ್ಲಿ ದೇವರು ತೋರಿದ ಕೃಪೆಯ ಬಗ್ಗೆ ನಿಮಗೆ ತಿಳಿಸಲು ಇಷ್ಟಪಡುತ್ತೇವೆ. 2 ಆ ವಿಶ್ವಾಸಿಗಳು ಅತೀವ ಕಷ್ಟಗಳಿಂದ ಪರೀಕ್ಷಿಸಲ್ಪಟ್ಟಿದ್ದಾರೆ. ಅವರು ಬಹಳ ಬಡಜನರು. ಆದರೆ ಅವರು ತಮ್ಮ ಮಹಾ ಆನಂದದಿಂದ ಬಹಳವಾಗಿ ಕೊಟ್ಟರು. 3 ತಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಕೊಟ್ಟಿದ್ದಾರೆಂದು ನಾನು ನಿಮಗೆ ಹೇಳುತ್ತೇನೆ. ಅವರು ತಮ್ಮ ಶಕ್ತಿಮೀರಿ ಕೊಟ್ಟಿದ್ದಾರೆ. ಅವರು ತಾವಾಗಿಯೇ ಕೊಟ್ಟರು. ಕೊಡಬೇಕೆಂದು ಅವರಿಗೆ ಯಾರೂ ಹೇಳಲಿಲ್ಲ. 4 ದೇವಜನರಿಗೋಸ್ಕರವಾದ ಈ ಸೇವೆಯಲ್ಲಿ ತಾವೂ ಪಾಲುಗಾರರಾಗುವ ಭಾಗ್ಯ ದೊರೆಯಬೇಕೆಂದು ಅವರು ನಮ್ಮನ್ನು ಪದೇಪದೇ ಕೇಳಿಕೊಂಡರು ಮತ್ತು ಬೇಡಿಕೊಂಡರು. 5 ನಾವೆಂದೂ ನೆನಸಿಲ್ಲದ ರೀತಿಯಲ್ಲಿ ಅವರು ಕೊಟ್ಟರು. ಅವರು ತಮ್ಮ ಹಣವನ್ನು ನಮಗೆ ಕೊಡುವುದಕ್ಕಿಂತ ಮೊದಲು ತಮ್ಮನ್ನೇ ಪ್ರಭುವಿಗೂ ನಮಗೂ ಒಪ್ಪಿಸಿಕೊಟ್ಟರು. ದೇವರು ಬಯಸುವುದು ಇದನ್ನೇ.
6 ಆದ್ದರಿಂದ, ವಿಶೇಷವಾದ ಈ ಕೃಪಾಕಾರ್ಯವನ್ನು ಪೂರೈಸಲು ನಿಮಗೆ ಸಹಾಯ ಮಾಡಬೇಕೆಂದು ನಾವು ತೀತನನ್ನು ಕೇಳಿಕೊಂಡೆವು. ಈ ಕಾರ್ಯವನ್ನು ಪ್ರಾರಂಭಿಸಿದವನು ತೀತನೇ. 7 ನೀವು ಪ್ರತಿಯೊಂದರಲ್ಲಿಯೂ ಅಂದರೆ, ನಂಬಿಕೆಯಲ್ಲಿ, ಮಾತಾಡುವುದರಲ್ಲಿ, ಜ್ಞಾನದಲ್ಲಿ, ಸಹಾಯಮಾಡಬೇಕೆಂಬ ಆಸಕ್ತಿಯಲ್ಲಿ ಮತ್ತು ನಮ್ಮಿಂದ ಕಲಿತುಕೊಂಡ ಪ್ರೀತಿಯಲ್ಲಿ ಶ್ರೀಮಂತರಾಗಿದ್ದೀರಿ. ಆದ್ದರಿಂದ ಕೃಪಾಕಾರ್ಯದಲ್ಲಿಯೂ ನೀವು ಶ್ರೀಮಂತರಾಗಿರಬೇಕೆಂದು ನಾವು ಬಯಸುತ್ತೇವೆ.
8 ನೀವು ಕೊಡಬೇಕೆಂದು ನಾನು ಆಜ್ಞಾಪಿಸುತ್ತಿಲ್ಲ. ಆದರೆ ನಿಮ್ಮ ಪ್ರೀತಿಯು ನಿಜವಾದ ಪ್ರೀತಿಯೇ ಎಂಬುದನ್ನು ನಾನು ನೋಡಬಯಸುತ್ತೇನೆ. ಸಹಾಯ ಮಾಡಲು ಇತರ ಜನರಿಗಿರುವ ನಿಜವಾದ ಬಯಕೆಯನ್ನು ನಿಮಗೆ ತೋರಿಸುವುದರ ಮೂಲಕವಾಗಿ ನಾನು ನಿಮ್ಮನ್ನು ಪರೀಕ್ಷಿಸುತ್ತೇನೆ. 9 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಿದೆ. ಕ್ರಿಸ್ತನು ದೇವರೊಂದಿಗೆ ಶ್ರೀಮಂತಿಕೆಯಲ್ಲಿದ್ದರೂ ನಿಮಗೋಸ್ಕರವಾಗಿ ಬಡವನಾದದ್ದು ನಿಮಗೆ ಗೊತ್ತಿದೆ. ನೀವು ಶ್ರೀಮಂತರಾಗಬೇಕೆಂದು ಕ್ರಿಸ್ತನು ಬಡವನಾದನು.
10 ನಾನು ನಿಮಗೆ ಹೇಳುವುದೇನೆಂದರೆ: ಕಳೆದ ವರ್ಷ ಕೊಡುವುದರಲ್ಲಿ ನೀವೇ ಮೊದಲಿಗರಾಗಿದ್ದಿರಿ ಮತ್ತು ಮೊಟ್ಟಮೊದಲನೆಯದಾಗಿ ಕೊಟ್ಟವರು ನೀವೇ. 11 ಆದ್ದರಿಂದ ನೀವು ಆರಂಭಿಸಿದ ಕಾರ್ಯವನ್ನು ಈಗ ಪೂರ್ಣಗೊಳಿಸಿರಿ. ಆಗ, ನಿಮ್ಮ ಕಾರ್ಯ ಮತ್ತು ನಿಮ್ಮ ಸಿದ್ಧಮನಸ್ಸು ಸರಿಸಮಾನವಾಗಿರುವುದು. ನಿಮ್ಮಲ್ಲಿರುವುದನ್ನು ಕೊಡಿರಿ. 12 ನೀವು ಕೊಡಬೇಕೆಂದು ಕೊಟ್ಟರೆ ನಿಮ್ಮ ದಾನವು ಸ್ವೀಕೃತವಾಗುವುದು. ನಿಮ್ಮ ದಾನದ ಮೌಲ್ಯಮಾಪನವು ನೀವು ಏನನ್ನು ಹೊಂದಿದ್ದೀರಿ ಎಂಬುದರ ಮೇಲೆಯೇ ಹೊರತು ನೀವು ಏನನ್ನು ಹೊಂದಿಲ್ಲ ಎಂಬುದರ ಮೇಲೆ ಆಧಾರಗೊಂಡಿಲ್ಲ. 13 ಇತರ ಜನರು ಸುಖವಾಗಿರುವಾಗ ನೀವು ಕಷ್ಟದಿಂದಿರುವುದು ನಮಗೆ ಇಷ್ಟವಿಲ್ಲ. ಪ್ರತಿಯೊಂದರಲ್ಲಿಯೂ ಸಮಾನತೆ ಇರಬೇಕೆಂಬುದೇ ನಮ್ಮ ಬಯಕೆ. 14 ಈಗ ನಿಮ್ಮಲ್ಲಿ ಬೇಕಾದಷ್ಟಿದೆ. ನಿಮ್ಮ ಈ ಸಮೃದ್ಧಿಯು ಇತರ ಜನರ ಕೊರತೆಯನ್ನು ನೀಗಿಸುವುದು. ಬಳಿಕ, ಅವರು ಸಮೃದ್ಧರಾಗಿರುವಾಗ ನಿಮ್ಮ ಕೊರತೆಯನ್ನು ನೀಗಿಸುವರು. ಹೀಗೆ ಎಲ್ಲರೂ ಸಮಾನರಾಗಿರುವರು. 15 ಪವಿತ್ರ ಗ್ರಂಥದಲ್ಲಿ ಬರೆದಿರುವಂತೆ ಇದಾಗುವುದು,
“ಬಹಳವಾಗಿ ಶೇಖರಿಸಿಕೊಂಡವನಿಗೆ ಏನೂ ಹೆಚ್ಚಾಗಲಿಲ್ಲ,
ಸ್ವಲ್ಪ ಶೇಖರಿಸಿಕೊಂಡವನಿಗೆ ಏನೂ ಕಡಿಮೆಯಾಗಲಿಲ್ಲ.”(A)
ತೀತನು ಮತ್ತು ಅವನ ಸಂಗಡಿಗರು
16 ನಿಮ್ಮ ಮೇಲೆ ನನಗಿರುವ ಪ್ರೀತಿಯನ್ನು ದೇವರು ತೀತನಿಗೂ ಕೊಟ್ಟದ್ದಕ್ಕಾಗಿ ದೇವರನ್ನು ಸ್ತುತಿಸುತ್ತೇನೆ. 17 ನಾವು ಕೇಳಿಕೊಂಡ ಕಾರ್ಯಗಳನ್ನು ಮಾಡಲು ತೀತನು ಒಪ್ಪಿಕೊಂಡನು. ನಿಮ್ಮ ಬಳಿಗೆ ಬರಲು ಅವನು ಅತ್ಯಾಸಕ್ತನಾಗಿದ್ದನು. ಇದು ಅವನ ಸ್ವಂತ ಆಲೋಚನೆ. 18 ಎಲ್ಲಾ ಸಭೆಗಳಲ್ಲಿ ಹೊಗಳಿಕೆಗೆ ಪಾತ್ರನಾಗಿರುವ ಒಬ್ಬ ಸಹೋದರನನ್ನು ತೀತನೊಡನೆ ಕಳುಹಿಸುತ್ತಿದ್ದೇವೆ. ಈ ಸಹೋದರನು ಸುವಾರ್ತಾಸೇವೆಯ ವಿಷಯದಲ್ಲಿ ಕೀರ್ತಿಪಡೆದಿದ್ದಾನೆ. 19 ಇದಲ್ಲದೆ, ನಾವು ಈ ಸಹಾಯಧನವನ್ನು ತೆಗೆದುಕೊಂಡು ಹೋಗುವಾಗ ನಮ್ಮ ಸಂಗಡವಿರುವುದಕ್ಕಾಗಿ ಸಭೆಗಳವರು ಈ ಸಹೋದರನನ್ನು ಆಯ್ಕೆಮಾಡಿದ್ದಾರೆ. ದೇವರ ಮಹಿಮೆಗಾಗಿಯೂ ಮತ್ತು ಸಹಾಯ ಮಾಡಲು ನಿಜವಾಗಿ ಬಯಸುತ್ತೇವೆ ಎಂಬುದನ್ನು ತೋರಿಸುವುದಕ್ಕಾಗಿಯೂ ಈ ಸೇವಾಕಾರ್ಯವನ್ನು ಮಾಡುತ್ತಿದ್ದೇವೆ.
20 ಹೇರಳವಾದ ಈ ಸಹಾಯಧನವನ್ನು ನಾವು ನೋಡಿಕೊಳ್ಳುವ ಬಗ್ಗೆ ಟೀಕಿಸಲು ಯಾರಿಗೂ ಅವಕಾಶ ಕೊಡಬಾರದೆಂದು ಎಚ್ಚರಿಕೆಯಿಂದಿದ್ದೇವೆ. 21 ಪ್ರಭುವು ಯಾವುದನ್ನು ಸರಿಯಾದದ್ದೆಂದು ಸ್ವೀಕರಿಸಿಕೊಳ್ಳುವನೋ ಮತ್ತು ಜನರು ಯಾವುದನ್ನು ಸರಿಯಾದದ್ದೆಂದು ಯೋಚಿಸುವರೋ ಅದನ್ನೇ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ.
22 ಇದಲ್ಲದೆ, ಸಹಾಯ ಮಾಡಲು ಯಾವಾಗಲೂ ಸಿದ್ಧನಾಗಿರುವ ನಮ್ಮ ಸಹೋದರನನ್ನು ಅವರೊಂದಿಗೆ ಕಳುಹಿಸಿಕೊಡುತ್ತಿದ್ದೇವೆ. ಅವನು ಅನೇಕ ವಿಧದಲ್ಲಿ ತನ್ನನ್ನು ನಿರೂಪಿಸಿದ್ದಾನೆ. ಈಗ ಅವನಿಗೆ ನಿಮ್ಮಲ್ಲಿ ಹೆಚ್ಚು ಭರವಸೆ ಇರುವುದರಿಂದ ಮತ್ತಷ್ಟು ಸಹಾಯ ಮಾಡಲು ಬಯಸುತ್ತಾನೆ.
23 ನಾನು ತೀತನ ಬಗ್ಗೆ ಹೇಳುವುದೇನೆಂದರೆ, ಅವನು ನನ್ನ ಜೊತೆಕೆಲಸಗಾರನಾಗಿದ್ದಾನೆ. ನಿಮಗೆ ಸಹಾಯ ಮಾಡಲು ಅವನು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾನೆ. ಇತರ ಸಹೋದರರ ಬಗ್ಗೆ ನಾನು ಹೇಳುವುದೇನೆಂದರೆ, ಅವರು ಸಭೆಗಳಿಂದ ಕುಳುಹಿಸಲ್ಪಟ್ಟವರಾಗಿದ್ದಾರೆ ಮತ್ತು ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುವಂಥವರಾಗಿದ್ದಾರೆ. 24 ಆದ್ದರಿಂದ ನಿಮ್ಮಲ್ಲಿ ನಿಜವಾಗಿಯೂ ಪ್ರೀತಿಯಿದೆ ಎಂಬುದನ್ನು ಈ ಜನರಿಗೆ ತೋರಿಸಿಕೊಡಿರಿ. ನಾವು ನಿಮ್ಮ ವಿಷಯದಲ್ಲಿ ಯಾಕೆ ಹೆಮ್ಮೆಪಡುತ್ತೇವೆಂಬುದನ್ನು ಇವರಿಗೆ ತೋರಿಸಿಕೊಡಿರಿ. ಆಗ ಎಲ್ಲಾ ಸಭೆಗಳವರು ಅದನ್ನು ನೋಡಲು ಸಾಧ್ಯವಾಗುವುದು.
Kannada Holy Bible: Easy-to-Read Version. All rights reserved. © 1997 Bible League International