Print Page Options
Previous Prev Day Next DayNext

M’Cheyne Bible Reading Plan

The classic M'Cheyne plan--read the Old Testament, New Testament, and Psalms or Gospels every day.
Duration: 365 days
Kannada Holy Bible: Easy-to-Read Version (KERV)
Version
ವಿಮೋಚನಕಾಂಡ 16

ದೇವರು ಆಹಾರವನ್ನು ಕಳುಹಿಸಿದ್ದು

16 ಬಳಿಕ ಅವರು ಏಲೀಮಿನಿಂದ ಪ್ರಯಾಣಮಾಡಿ ಸಿನ್ ಅರಣ್ಯಕ್ಕೆ ಬಂದರು. ಈ ಸ್ಥಳವು ಏಲೀಮಿನ ಮತ್ತು ಸೀನಾಯ್ ಬೆಟ್ಟದ ನಡುವೆ ಇತ್ತು. ಈಜಿಪ್ಟನ್ನು ಬಿಟ್ಟ ನಂತರ ಎರಡನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಅವರು ಈ ಸ್ಥಳಕ್ಕೆ ಬಂದರು. ಆಗ ಇಸ್ರೇಲರು ಮತ್ತೆ ಮರುಭೂಮಿಯಲ್ಲಿ ಮೋಶೆ ಆರೋನರ ಮೇಲೆ ಗುಣುಗುಟ್ಟಿದರು. ಅವರು, “ಯೆಹೋವನು ನಮ್ಮನ್ನು ಈಜಿಪ್ಟಿನಲ್ಲಿ ಕೊಂದಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು. ನಮಗೆ ಈಜಿಪ್ಟಿನಲ್ಲಿ ಮಾಂಸವೂ ರೊಟ್ಟಿಯೂ ಇತ್ತು. ನಮಗೆ ಬೇಕಿದ್ದ ಆಹಾರವೆಲ್ಲಾ ನಮ್ಮಲ್ಲಿತ್ತು. ಆದರೆ ಈಗ ನೀವು ನಮ್ಮನ್ನು ಈ ಅರಣ್ಯಕ್ಕೆ ಕರೆದುಕೊಂಡು ಬಂದಿರಿ. ನಾವೆಲ್ಲರೂ ಇಲ್ಲಿ ಹಸಿವೆಯಿಂದ ಸಾಯುವೆವು” ಎಂದು ಹೇಳಿದರು.

ಆಗ ಯೆಹೋವನು ಮೋಶೆಗೆ, “ಆಕಾಶದಿಂದ ನಿಮಗೋಸ್ಕರ ರೊಟ್ಟಿ ಸುರಿಯುವಂತೆ ಮಾಡುವೆನು. ಪ್ರತಿದಿನ ಅವರು ಹೊರಗೆ ಹೋಗಿ, ತಮಗೆ ಆ ದಿನದಲ್ಲಿ ತಿನ್ನಲು ಬೇಕಾದ ಆಹಾರವನ್ನು ಕೂಡಿಸಿಕೊಳ್ಳಬೇಕು. ನಾನು ಹೇಳುವುದನ್ನು ಅವರು ಮಾಡುತ್ತಾರೊ ಇಲ್ಲವೊ ಎಂದು ನೋಡಲು ನಾನು ಇದನ್ನು ಮಾಡುವೆನು. ಪ್ರತಿದಿನವು ಅವರು ಒಂದು ದಿನಕ್ಕೆ ಬೇಕಾದಷ್ಟು ಆಹಾರವನ್ನು ಕೂಡಿಸಿಕೊಳ್ಳಬೇಕು. ಆದರೆ ಶುಕ್ರವಾರ ಅವರು ತಮ್ಮ ಆಹಾರವನ್ನು ಸಿದ್ಧಪಡಿಸುವಾಗ ಎರಡು ದಿನಗಳಿಗೆ ಬೇಕಾದಷ್ಟು ಆಹಾರವಿರುವುದನ್ನು ಅವರು ನೋಡುವರು” ಎಂದು ಹೇಳಿದನು.

ಆದ್ದರಿಂದ ಮೋಶೆಯು ಮತ್ತು ಆರೋನನು ಇಸ್ರೇಲರಿಗೆ, “ಈ ರಾತ್ರಿ ನೀವು ಯೆಹೋವನ ಶಕ್ತಿಯನ್ನು ನೋಡುವಿರಿ. ನಿಮ್ಮನ್ನು ಈಜಿಪ್ಟಿನಿಂದ ರಕ್ಷಿಸಿದವನು ಆತನೇ ಎಂದು ತಿಳಿದುಕೊಳ್ಳುವಿರಿ. ನಾಳೆ ಬೆಳಿಗ್ಗೆ ನೀವು ಯೆಹೋವನ ಮಹಿಮೆಯನ್ನು ನೋಡುವಿರಿ. ನೀವು ಯೆಹೋವನ ಮೇಲೆ ಗುಣುಗುಟ್ಟಿದ್ದೀರಿ. ಆತನು ನಿಮ್ಮ ಗುಣುಗುಟ್ಟುವಿಕೆಯನ್ನು ಕೇಳಿದ್ದಾನೆ; ಆತನೇ ನಿಮಗೆ ಸಹಾಯ ಮಾಡುವನು. ನಮ್ಮ ಮೇಲೆ ನೀವು ಗುಣುಗುಟ್ಟುತ್ತಾ ಬರಲು ನಾವೆಷ್ಟರವರು? ನಿಮ್ಮನ್ನು ಈಜಿಪ್ಟಿನಿಂದ ಕರೆತಂದವನು ಯೆಹೋವನೇ. ಆತನೇ ನಿಮ್ಮ ಅಗತ್ಯತೆಗಳನ್ನು ಪೂರೈಸುವನು” ಎಂದು ಹೇಳಿದರು.

ಅಲ್ಲದೆ ಮೋಶೆಯು, “ನೀವು ಗೊಣಗುಟ್ಟುತ್ತಿರುವುದನ್ನು ಯೆಹೋವನು ಕೇಳಿದ್ದಾನೆ. ಆದ್ದರಿಂದ ರಾತ್ರಿಯಲ್ಲಿ ಆತನು ನಿಮಗೆ ಮಾಂಸವನ್ನು ಕೊಡುವನು. ಪ್ರತಿ ಮುಂಜಾನೆ ನಿಮಗೆ ಬೇಕಾದಷ್ಟು ರೊಟ್ಟಿಯು ದೊರಕುವುದು. ನೀವು (ಆರೋನನ ಮೇಲೂ ನನ್ನ ಮೇಲೂ) ಗೊಣಗುಟ್ಟುತ್ತಿದ್ದೀರಿ? ಆದರೆ ನಮಗೆ ದೂರು ಹೇಳಲು ನಾವೆಷ್ಟರವರು? ನೀವು ಯೆಹೋವನ ವಿರುದ್ಧವಾಗಿ ದೂರು ಹೇಳುತ್ತಿದ್ದೀರೆಂಬುದು ನಿಮ್ಮ ಜ್ಞಾಪಕದಲ್ಲಿರಲಿ” ಎಂದು ಹೇಳಿದನು.

ಬಳಿಕ ಮೋಶೆ ಆರೋನನಿಗೆ, “ಇಸ್ರೇಲರೊಂದಿಗೆ ಮಾತಾಡು. ಅವರಿಗೆ, ‘ಯೆಹೋವನ ಮುಂದೆ ಒಟ್ಟಾಗಿ ನೆರೆದು ಬನ್ನಿ: ಯಾಕೆಂದರೆ ಆತನು ನಿಮ್ಮ ಗೊಣಗುಟ್ಟುವಿಕೆಯನ್ನು ಕೇಳಿದ್ದಾನೆ’ ಎಂದು ಹೇಳು” ಅಂದನು.

10 ಅರೋನನು ಇಸ್ರೇಲರೆಲ್ಲರೊಂದಿಗೆ ಮಾತಾಡಿದನು. ಅವರೆಲ್ಲರೂ ಒಂದು ಸ್ಥಳದಲ್ಲಿ ಕೂಡಿಬಂದರು. ಆರೋನನು ಅವರೊಂದಿಗೆ ಮಾತಾಡುತ್ತಿದ್ದಾಗ ಅವರೆಲ್ಲರೂ ಅರಣ್ಯದ ಕಡೆಗೆ ತಿರುಗಿನೋಡಿದರು. ಮೇಘದಲ್ಲಿ ಯೆಹೋವನ ಮಹಿಮೆಯು ಪ್ರತ್ಯಕ್ಷವಾದದ್ದನ್ನು ಅವರೆಲ್ಲರೂ ಕಂಡರು.

11 ಯೆಹೋವನು ಮೋಶೆಗೆ, 12 “ನಾನು ಇಸ್ರೇಲರ ಗೊಣಗುಟ್ಟುವಿಕೆಯನ್ನು ಕೇಳಿದ್ದೇನೆ. ಆದ್ದರಿಂದ ಅವರಿಗೆ ಹೀಗೆ ಹೇಳು: ‘ಸೂರ್ಯಾಸ್ತಮಕ್ಕಿಂತ ಮೊದಲು ನೀವು ಮಾಂಸವನ್ನು ತಿನ್ನುವಿರಿ; ಪ್ರತಿ ಮುಂಜಾನೆ ಸೂರ್ಯೋದಯಕ್ಕಿಂತ ಮೊದಲು ನಿಮಗೆ ಬೇಕಾದಷ್ಟು ರೊಟ್ಟಿಯನ್ನು ತಿನ್ನುವಿರಿ. ಆಗ ನಾನೇ ದೇವರಾದ ಯೆಹೋವನೆಂಬುದನ್ನು ನೀವು ತಿಳಿದುಕೊಳ್ಳುವಿರಿ; ನನ್ನಲ್ಲಿ ಭರವಸೆ ಇಡುವಿರಿ’” ಎಂದು ಹೇಳಿದನು.

13 ಸಾಯಂಕಾಲ ಲಾವಕ್ಕಿಗಳು ಪಾಳೆಯದ ಸುತ್ತಲೂ ಬಂದವು. ಜನರು ಮಾಂಸಕ್ಕಾಗಿ ಈ ಪಕ್ಷಿಗಳನ್ನು ಹಿಡಿದರು ಮತ್ತು ಪ್ರತಿ ಮುಂಜಾನೆ ಅವರ ಪಾಳೆಯದ ಸುತ್ತಲೂ ಮಂಜು ನೆಲದ ಮೇಲೆ ಬಿದ್ದಿತ್ತು. 14 ಸೂರ್ಯನು ಮೇಲಕ್ಕೇರಿದ ನಂತರ ಮಂಜು ಕರಗಿ ಇಲ್ಲವಾಯಿತು. ಆದರೆ ಮಂಜು ಕರಗಿ ಹೋದನಂತರ ನೆಲದ ಮೇಲೆ ಮಂಜಿನ ಹನಿಗಳಂತಿದ್ದ ತೆಳುವಾದ ಕಾಳುಗಳು ಬಿದ್ದಿದ್ದವು. 15 ಇಸ್ರೇಲರು ಅದನ್ನು ನೋಡಿ “ಏನದು” ಎಂಬುದಾಗಿ ಒಬ್ಬರನ್ನೊಬ್ಬರು ಕೇಳಿದರು. ಅದು ಏನೆಂದು ಅವರಿಗೆ ಗೊತ್ತಿಲ್ಲದ ಕಾರಣ ಅವರು ಈ ಪ್ರಶ್ನೆಯನ್ನು ಕೇಳಿದರು. ಆದ್ದರಿಂದ ಮೋಶೆ ಅವರಿಗೆ, “ಇದು ಯೆಹೋವನು ನಿಮಗೆ ಕೊಟ್ಟಿರುವ ಆಹಾರ. 16 ಯೆಹೋವನು ಆಜ್ಞಾಪಿಸುವುದೇನೆಂದರೆ, ‘ಪ್ರತಿಯೊಬ್ಬನು ತನಗೆ ಬೇಕಾದಷ್ಟನ್ನು ಮಾತ್ರ ಕೂಡಿಸಿಕೊಳ್ಳಬೇಕು. ನಿಮ್ಮಲ್ಲಿ ಪ್ರತಿಯೊಬ್ಬನು ನಿಮ್ಮ ಕುಟುಂಬದಲ್ಲಿರುವ ಪ್ರತಿಯೊಬ್ಬನಿಗೆ ಸುಮಾರು ಮೂರು ಸೇರಿನಷ್ಟು ಕೂಡಿಸಿಕೊಳ್ಳಬೇಕು’” ಎಂದು ಹೇಳಿದನು.

17 ಅಂತೆಯೇ ಇಸ್ರೇಲರು ಮಾಡಿದರು. ಪ್ರತಿಯೊಬ್ಬನೂ ತನ್ನ ಆಹಾರವನ್ನು ಕೂಡಿಸಿಕೊಂಡನು. ಕೆಲವರು ಇತರರಿಗಿಂತ ಹೆಚ್ಚಾಗಿ ಕೂಡಿಸಿಕೊಂಡರು. 18 ಅವರು ತಮ್ಮ ಕುಟುಂಬದಲ್ಲಿದ್ದ ಪ್ರತಿಯೊಬ್ಬರ ಆಹಾರವನ್ನು ಒಟ್ಟಾಗಿ ಸೇರಿಸಿ ಅಳತೆಮಾಡಿದಾಗ ಅಲ್ಲಿ ಯಾವಾಗಲೂ ಪ್ರತಿಯೊಬ್ಬನಿಗೆ ಬೇಕಾದಷ್ಟು ಮಾತ್ರ ಆಹಾರವಿರುತ್ತಿತ್ತು. ಅದು ಹೆಚ್ಚಾಗಿಯೂ ಇರುತ್ತಿರಲಿಲ್ಲ; ಕಡಿಮೆಯಾಗಿಯೂ ಇರುತ್ತಿರಲಿಲ್ಲ. ಹೀಗೆ ಪ್ರತಿಯೊಬ್ಬನು ತನಗೆ ಮತ್ತು ತನ್ನ ಕುಟುಂಬಕ್ಕೆ ಬೇಕಾದಷ್ಟನ್ನು ಮಾತ್ರ ಕೂಡಿಸಿಕೊಂಡನು.

19 ಮೋಶೆಯು ಅವರಿಗೆ, “ಆಹಾರವನ್ನು ಮರುದಿನಕ್ಕಾಗಿ ಉಳಿಸಿಕೊಳ್ಳಬೇಡಿರಿ” ಎಂದು ಹೇಳಿದನು. 20 ಆದರೆ ಅವರು ಮೋಶೆಯ ಮಾತಿಗೆ ವಿಧೇಯರಾಗಲಿಲ್ಲ. ಕೆಲವು ಜನರು ಮರುದಿನ ತಿನ್ನುವುದಕ್ಕಾಗಿ ಆಹಾರವನ್ನು ಉಳಿಸಿಕೊಂಡರು; ಹೀಗೆ ಉಳಿಸಿಟ್ಟ ಆಹಾರವು ಹುಳಗಳಿಂದ ತುಂಬಿ ಕೊಳೆಯತೊಡಗಿತು. ಮೋಶೆಯು ಹೀಗೆ ಮಾಡಿದ ಜನರ ಮೇಲೆ ಕೋಪಗೊಂಡನು.

21 ಪ್ರತಿ ಮುಂಜಾನೆ ಅವರು ಆಹಾರವನ್ನು ಕೂಡಿಸಿಕೊಂಡರು. ಪ್ರತಿಯೊಬ್ಬನು ತಾನು ಎಷ್ಟು ತಿನ್ನಬಹುದೋ ಅಷ್ಟನ್ನೇ ಕೂಡಿಸಿಕೊಂಡನು. ಆದರೆ ಬಿಸಿಲೇರಿದಾಗ ಆಹಾರವು ಕರಗಿಹೋಯಿತು.

22 ಆರನೆಯ ದಿನವಾದ ಶುಕ್ರವಾರದಲ್ಲಿ ಜನರು ಎರಡರಷ್ಟನ್ನು ಕೂಡಿಸಿಕೊಂಡರು. ಅವರು ಪ್ರತಿಯೊಬ್ಬನಿಗೆ ಆರು ಸೇರಿನಷ್ಟು ಕೂಡಿಸಿಕೊಂಡರು. ಆದ್ದರಿಂದ ಜನನಾಯಕರೆಲ್ಲರೂ ಬಂದು ಮೋಶೆಗೆ ಇದನ್ನು ತಿಳಿಸಿದರು.

23 ಮೋಶೆಯು ಅವರಿಗೆ, “ಯೆಹೋವನೇ ಇದರ ಬಗ್ಗೆ ತಿಳಿಸಿದ್ದನು. ನಾಳೆ ಮುಂಜಾನೆ ಯೆಹೋವನನ್ನು ಸನ್ಮಾನಿಸತಕ್ಕ ವಿಶೇಷ ವಿಶ್ರಾಂತಿ ದಿನವಾದ ಸಬ್ಬತ್ತಾಗಿದೆ. ಆದ್ದರಿಂದ ಇದು ಹೀಗೆ ಸಂಭವಿಸಿತು. ಈ ದಿನಕ್ಕೆ ಬೇಕಾದ ಅಡಿಗೆಯನ್ನು ನೀವು ತಯಾರಿಸಿಕೊಳ್ಳಿರಿ. ಆದರೆ ಈ ಆಹಾರದಲ್ಲಿ ಉಳಿದದ್ದನ್ನು ನಾಳೆ ಪ್ರಾತಃಕಾಲಕ್ಕಾಗಿ ಉಳಿಸಿಕೊಳ್ಳಿರಿ” ಎಂದು ಹೇಳಿದನು.

24 ಆದ್ದರಿಂದ ಉಳಿದ ಆಹಾರವನ್ನು ಜನರು ಮರುದಿನಕ್ಕಾಗಿ ಉಳಿಸಿದರು; ಆದರೆ ಆ ಆಹಾರವು ಕೆಡಲಿಲ್ಲ ಮತ್ತು ಹುಳಗಳು ಆ ಆಹಾರಕ್ಕೆ ಬರಲಿಲ್ಲ.

25 ಶನಿವಾರದಲ್ಲಿ ಮೋಶೆಯು ಜನರಿಗೆ, “ಈ ದಿನ ಸಬ್ಬತ್ತಾಗಿದೆ. ಇದು ಯೆಹೋವನನ್ನು ಸನ್ಮಾನಿಸುವುದಕ್ಕಿರುವ ವಿಶೇಷವಾದ ವಿಶ್ರಾಂತಿ ದಿನವಾಗಿದೆ. ನೀವು ನಿನ್ನೆಯಿಂದ ಇಟ್ಟುಕೊಂಡಿದ್ದ ಆಹಾರವನ್ನು ಊಟಮಾಡಿರಿ. ಇಂದು ನೀವು ಹೊಲದಲ್ಲಿ ಯಾವ ಆಹಾರವನ್ನೂ ಕಾಣುವುದಿಲ್ಲ. 26 ನೀವು ಆರು ದಿನಗಳಲ್ಲಿ ಆಹಾರವನ್ನು ಕೂಡಿಸಬೇಕು. ಆದರೆ ವಾರದ ಏಳನೆಯ ದಿನವು ಸಬ್ಬತ್ ದಿನವಾಗಿದೆ, ಅಂದರೆ ವಿಶ್ರಾಂತಿಯ ದಿನವಾಗಿದೆ. ಆದ್ದರಿಂದ ಆ ದಿನದಲ್ಲಿ ನೆಲದ ಮೇಲೆ ಯಾವ ಆಹಾರವೂ ಇರುವುದಿಲ್ಲ” ಅಂದನು.

27 ಏಳನೆಯ ದಿನದಲ್ಲಿ ಕೆಲವು ಜನರು ಆಹಾರವನ್ನು ಕೂಡಿಸಿಕೊಳ್ಳಲು ಹೊರಗೆ ಹೋದರು. ಆದರೆ ಅವರಿಗೆ ಏನೂ ಸಿಕ್ಕಲಿಲ್ಲ. 28 ಆಗ ಯೆಹೋವನು ಮೋಶೆಗೆ, “ಜನರೇ, ನೀವು ಇನ್ನೆಷ್ಟರವರೆಗೆ ನನ್ನ ಆಜ್ಞೆಗಳಿಗೆ ಮತ್ತು ಬೋಧನೆಗಳಿಗೆ ವಿಧೇಯರಾಗುವುದಿಲ್ಲ? 29 ನೋಡಿರಿ, ಯೆಹೋವನು ಸಬ್ಬತ್ ದಿನವನ್ನು ನಿಮಗೆ ವಿಶ್ರಾಂತಿ ದಿನವನ್ನಾಗಿ ಮಾಡಿದ್ದಾನೆ. ಆದ್ದರಿಂದ ಯೆಹೋವನು ಶುಕ್ರವಾರದಂದು ನಿಮಗೆ ಎರಡು ದಿನಗಳಿಗೆ ಬೇಕಾದಷ್ಟು ಆಹಾರವನ್ನು ಕೊಡುವನು. ಆದ್ದರಿಂದ ಸಬ್ಬತ್ತಿನಲ್ಲಿ ನಿಮ್ಮಲ್ಲಿ ಪ್ರತಿಯೊಬ್ಬನು ಕುಳಿತುಕೊಂಡು ವಿಶ್ರಮಿಸಿಕೊಳ್ಳಬೇಕು. ನೀವು ಇರುವಲ್ಲೇ ಇರಿ” ಎಂದು ಹೇಳಿದನು. 30 ಆದ್ದರಿಂದ ಜನರು ಸಬ್ಬತ್ತಿನಲ್ಲಿ ವಿಶ್ರಮಿಸಿಕೊಂಡರು.

31 ಜನರು ಈ ವಿಶೇಷ ಆಹಾರವನ್ನು ಮನ್ನ ಎಂದು ಕರೆಯತೊಡಗಿದರು. ಮನ್ನವು ಚಿಕ್ಕದಾದ ಬಿಳಿ ಕೊತ್ತಂಬರಿ ಬೀಜಗಳಂತಿದ್ದವು ಮತ್ತು ಜೇನುತುಪ್ಪದಿಂದ ಮಾಡಿದ ತೆಳುವಾದ ರೊಟ್ಟಿಯಂತೆ ರುಚಿಯಾಗಿತ್ತು. 32 ಮೋಶೆಯು, “ಯೆಹೋವನು ಆಜ್ಞಾಪಿಸಿದ್ದೇನೆಂದರೆ, ‘ಮೂರು ಸೇರಿನಷ್ಟು ಮನ್ನವನ್ನು ನಿಮ್ಮ ಮುಂದಿನ ಸಂತತಿಯವರಿಗಾಗಿ ಉಳಿಸಿರಿ. ನಾನು ನಿಮ್ಮನ್ನು ಈಜಿಪ್ಟಿನಿಂದ ಹೊರಗೆ ನಡೆಸಿದಾಗ ಅರಣ್ಯದಲ್ಲಿ ನಾನು ನಿಮಗೆ ಕೊಟ್ಟ ಈ ಆಹಾರವನ್ನು ನೋಡುವರು’” ಎಂದು ಹೇಳಿದನು.

33 ಆದ್ದರಿಂದ ಮೋಶೆಯು ಆರೋನನಿಗೆ, “ಒಂದು ಭರಣಿಯನ್ನು ತೆಗೆದುಕೊಂಡು ಅದರಲ್ಲಿ ಮೂರು ಸೇರಿನಷ್ಟು ಮನ್ನವನ್ನು ತುಂಬಿಸು. ನಿಮ್ಮ ಮುಂದಿನ ಸಂತತಿಯವರು ನೋಡುವುದಕೋಸ್ಕರ ಇದನ್ನು ಉಳಿಸಿ ಯೆಹೋವನ ಮುಂದೆ ಇಡು” ಎಂದು ಹೇಳಿದನು. 34 (ನಂತರ ಆರೋನನು, ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಮಾಡಿದನು. ಆರೋನನು ಮನ್ನದ ಭರಣಿಯನ್ನು ಒಡಂಬಡಿಕೆಯ ಮುಂದುಗಡೆಯಲ್ಲಿ ಇಟ್ಟನು.) 35 ನಲವತ್ತು ವರ್ಷಗಳವರೆಗೆ ಜನರು ಮನ್ನವನ್ನು ತಿಂದರು. ಅವರು ವಿಶ್ರಾಂತಿಯ ದೇಶಕ್ಕೆ ಬರುವ ತನಕ, ಅಂದರೆ ಕಾನಾನಿನ ಗಡಿಗೆ ಬರುವವರೆಗೆ ಮನ್ನವನ್ನು ತಿಂದರು. 36 (ಅವರು ಮನ್ನವನ್ನು ಅಳೆಯುವುದಕ್ಕೆ ಗೋಮೆರ್ ಎಂಬ ಅಳತೆಯನ್ನು ಉಪಯೋಗಿಸಿದರು.)

ಲೂಕ 19

ಜಕ್ಕಾಯ

19 ಒಮ್ಮೆ ಯೇಸು ಜೆರಿಕೊ ಪಟ್ಟಣದ ಮೂಲಕ ಹೋಗುತ್ತಿದ್ದನು. ಆ ಪಟ್ಟಣದಲ್ಲಿ ಜಕ್ಕಾಯನೆಂಬ ಮನುಷ್ಯನಿದ್ದನು. ಅವನು ಐಶ್ವರ್ಯವಂತನೂ ಪ್ರಧಾನ ಸುಂಕವಸೂಲಿಗಾರನೂ ಆಗಿದ್ದನು. ಅವನು ಯೇಸುವನ್ನು ನೋಡಲು ಬಯಸಿದನು. ಯೇಸುವನ್ನು ನೋಡುವುದಕ್ಕಾಗಿ ಇತರ ಅನೇಕ ಜನರೂ ಅಲ್ಲಿದ್ದರು. ಜಕ್ಕಾಯನು ಬಹಳ ಗಿಡ್ಡನಾಗಿದ್ದುದರಿಂದ ಆ ಜನರ ಗುಂಪಿನ ದೆಸೆಯಿಂದ ಯೇಸುವನ್ನು ನೋಡಲಾಗಲಿಲ್ಲ. ಆದ್ದರಿಂದ ಅವನು ಬೇರೊಂದು ಸ್ಥಳಕ್ಕೆ ಓಡಿಹೋಗಿ ಒಂದು ಆಲದ ಮರವನ್ನು ಹತ್ತಿ ಕುಳಿತುಕೊಂಡನು. ಯೇಸು ಆ ಸ್ಥಳದ ಮೂಲಕ ಹೋಗುವನೆಂದು ಜಕ್ಕಾಯನಿಗೆ ಗೊತ್ತಿತ್ತು.

ಯೇಸು ಆ ಸ್ಥಳಕ್ಕೆ ಬಂದಾಗ, ಮರದ ಮೇಲೆ ಕುಳಿತಿದ್ದ ಜಕ್ಕಾಯನನ್ನು ಕಣ್ಣೆತ್ತಿ ನೋಡಿ ಅವನಿಗೆ, “ಜಕ್ಕಾಯನೇ ಬೇಗನೆ ಕೆಳಗಿಳಿದು ಬಾ! ಈ ದಿನ ನಾನು ನಿನ್ನ ಮನೆಯಲ್ಲಿ ಇಳಿದುಕೊಳ್ಳಬೇಕು” ಎಂದು ಹೇಳಿದನು.

ಆಗ ಜಕ್ಕಾಯನು ಬೇಗನೆ ಕೆಳಗಿಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಜನರೆಲ್ಲರೂ ಇದನ್ನು ನೋಡಿ, “ಯೇಸು ಎಂಥವನ ಮನೆಯಲ್ಲಿ ಇಳಿದುಕೊಳ್ಳುತ್ತಾನೆ. ಜಕ್ಕಾಯನು ಪಾಪಿ!” ಎಂದು ಆಕ್ಷೇಪಣೆ ಮಾಡತೊಡಗಿದರು.

ಜಕ್ಕಾಯನು ಪ್ರಭುವಿಗೆ (ಯೇಸುವಿಗೆ), “ನಾನು ಜನರಿಗೆ ಉಪಕಾರ ಮಾಡಬೇಕೆಂದಿದ್ದೇನೆ. ನಾನು ನನ್ನ ಹಣದಲ್ಲಿ ಅರ್ಧವನ್ನು ಬಡವರಿಗೆ ಕೊಡುವೆನು. ನಾನು ಯಾರಿಗಾದರೂ ಮೋಸಮಾಡಿದ್ದರೆ, ಆ ವ್ಯಕ್ತಿಗೆ ಅದರ ನಾಲ್ಕರಷ್ಟು ಹೆಚ್ಚಾಗಿ ಕೊಡುತ್ತೇನೆ” ಎಂದು ಹೇಳಿದನು.

ಯೇಸು, “ಈ ಮನುಷ್ಯನು ಒಳ್ಳೆಯವನೇ ಸರಿ. ಇವನು ನಿಜವಾಗಿಯೂ ಅಬ್ರಹಾಮನ ಕುಟುಂಬಕ್ಕೆ ಸೇರಿದ್ದಾನೆ. ಇಂದೇ ಈ ಮನೆಗೆ ರಕ್ಷಣೆ ಆಯಿತು. 10 ಮನುಷ್ಯಕುಮಾರನು ಬಂದದ್ದು ತಪ್ಪಿಹೋದ ಜನರನ್ನು ಹುಡುಕಿ ರಕ್ಷಿಸುವುದಕ್ಕಾಗಿಯಷ್ಟೇ” ಎಂದು ಹೇಳಿದನು.

ದೇವರು ಕೊಡುವ ವರಗಳನ್ನು ಉಪಯೋಗಿಸಿರಿ

(ಮತ್ತಾಯ 25:14-30)

11 ಯೇಸು ಪ್ರಯಾಣ ಮಾಡುತ್ತಾ ಜೆರುಸಲೇಮಿನ ಸಮೀಪಕ್ಕೆ ಬಂದನು. ಕೆಲವು ಜನರು ದೇವರ ರಾಜ್ಯವು ಬೇಗನೆ ಬರಲಿದೆ ಎಂದುಕೊಂಡರು. 12 ಜನರ ಈ ಭಾವನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು ಈ ಸಾಮ್ಯವನ್ನು ಹೇಳಿದನು: “ಬಹಳ ಪ್ರಾಮುಖ್ಯನಾದ ಒಬ್ಬನು ರಾಜ್ಯಾಧಿಕಾರವನ್ನು ಪಡೆದುಕೊಂಡು ಬರುವುದಕ್ಕಾಗಿ ದೂರದೇಶಕ್ಕೆ[a] ಹೊರಟನು. ರಾಜ್ಯಾಧಿಕಾರವನ್ನು ಪಡೆದುಕೊಂಡ ಮೇಲೆ ಹಿಂತಿರುಗಿ ಬಂದು ತನ್ನ ಜನರನ್ನು ಆಳಬೇಕೆಂಬುದು ಅವನ ಬಯಕೆಯಾಗಿತ್ತು. 13 ಆದ್ದರಿಂದ ಅವನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಒಟ್ಟಾಗಿ ಕರೆದು ಅವರಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸಾವಿರ ರೂಪಾಯಿ ಕೊಟ್ಟು, ‘ನಾನು ಹಿಂತಿರುಗಿ ಬರುವವರೆಗೆ ಈ ಹಣದಿಂದ ವ್ಯಾಪಾರ ಮಾಡಿರಿ’ ಎಂದು ಹೇಳಿದನು. 14 ಆದರೆ ಅವನ ದೇಶದ ಜನರು ಅವನನ್ನು ದ್ವೇಷಿಸಿ, ಜನರ ಒಂದು ಗುಂಪನ್ನು ಅವನ ಹಿಂದೆ ಕಳುಹಿಸಿದರು. ಆ ಗುಂಪಿನ ಜನರು ದೂರದೇಶದಲ್ಲಿ, ‘ಇವನು ನಮ್ಮ ರಾಜನಾಗುವುದು ನಮಗೆ ಇಷ್ಟವಿಲ್ಲ!’ ಎಂದು ಹೇಳಿದರು.

15 “ಆದರೂ ಅವನು ಅರಸನಾದನು. ಅವನು ತನ್ನ ದೇಶಕ್ಕೆ ಹಿಂತಿರುಗಿದಾಗ, ‘ನನ್ನ ಹಣ ಹೊಂದಿರುವ ಸೇವಕರನ್ನು ಕರೆಯಿರಿ. ಅವರು ಅದರಿಂದ ಎಷ್ಟು ಹೆಚ್ಚು ಹಣ ಸಂಪಾದಿಸಿದ್ದಾರೆಂದು ನಾನು ನೋಡಬೇಕು’ ಎಂದು ಹೇಳಿದನು. 16 ಮೊದಲನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿ ಸಂಪಾದಿಸಿದ್ದೇನೆ!’ ಎಂದು ಹೇಳಿದನು. 17 ಅರಸನು ಆ ಸೇವಕನಿಗೆ, ‘ಭಲೇ! ನೀನು ಒಳ್ಳೆಯ ಆಳು. ಚಿಕ್ಕವಿಷಯಗಳಲ್ಲಿ ನಾನು ನಿನ್ನ ಮೇಲೆ ಭರವಸೆ ಇಡಬಹುದೆಂದು ನನಗೆ ತಿಳಿಯಿತು. ಆದ್ದರಿಂದ ನನ್ನ ಹತ್ತು ಪಟ್ಟಣಗಳನ್ನು ಆಳುವುದಕ್ಕೆ ನಿನ್ನನ್ನು ನೇಮಿಸುವೆನು!’ ಎಂದು ಹೇಳಿದನು.

18 “ಎರಡನೆಯ ಸೇವಕನು ಬಂದು, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿಯಿಂದ ಐದು ಸಾವಿರ ರೂಪಾಯಿ ಸಂಪಾದಿಸಿದ್ದೇನೆ’ ಅಂದನು. 19 ಅರಸನು ಆ ಸೇವಕನಿಗೆ, ‘ನೀನು ನನ್ನ ಐದು ಪಟ್ಟಣಗಳಿಗೆ ಅಧಿಕಾರಿಯಾಗಿರು’ ಎಂದು ಹೇಳಿದನು.

20 “ಆ ಬಳಿಕ ಇನ್ನೊಬ್ಬ ಆಳು ಬಂದು ಅರಸನಿಗೆ, ‘ಸ್ವಾಮೀ, ನಿನ್ನ ಒಂದು ಸಾವಿರ ರೂಪಾಯಿ ಇಲ್ಲಿದೆ. 21 ನೀನು ಬಲಿಷ್ಠನೂ ಕಠಿಣ ಮನುಷ್ಯನೂ ಸ್ವತಃ ಸಂಪಾದನೆ ಮಾಡದ ಹಣವನ್ನು ದೋಚಿಕೊಳ್ಳುವವನೂ ಸ್ವತಃ ನೀನೇ ಬೆಳೆಯದ ದವಸಧಾನ್ಯಗಳನ್ನು ಒಟ್ಟುಗೂಡಿಸುವವನೂ ಆಗಿರುವೆ. ಆದ್ದರಿಂದ ನಿನಗೆ ಹೆದರಿ ನಿನ್ನ ಹಣವನ್ನು ಬಟ್ಟೆಯಲ್ಲಿ ಸುತ್ತಿ ಬಚ್ಚಿಟ್ಟಿದ್ದೆ’ ಎಂದನು.

22 “ಆಗ ಅರಸನು ಆ ಸೇವಕನಿಗೆ, ‘ನೀನು ಕೆಟ್ಟ ಆಳು! ನಿನ್ನ ಸ್ವಂತ ಮಾತುಗಳಿಂದಲೇ ನಿನಗೆ ತೀರ್ಪು ಮಾಡುತ್ತೇನೆ. ನನ್ನನ್ನು ಕಠಿಣ ಮನುಷ್ಯನೆಂದು ನೀನು ಹೇಳಿದೆ. ಸ್ವತಃ ನಾನೇ ಸಂಪಾದನೆ ಮಾಡದ ಹಣವನ್ನು ನಾನು ತೆಗೆದುಕೊಳ್ಳುವುದಾಗಿಯೂ ಸ್ವತಃ ನಾನೇ ಬೆಳೆಯದ ದವಸಧಾನ್ಯಗಳನ್ನು ನಾನು ಸಂಗ್ರಹಿಸುವುದಾಗಿಯೂ ನೀನು ಹೇಳಿದೆ. 23 ಅದು ನಿಜವಾಗಿದ್ದರೆ, ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ನಾನು ಮರಳಿ ಬಂದಾಗ, ನನಗೆ ಸ್ವಲ್ಪ ಬಡ್ಡಿಯಾದರೂ ಸಿಕ್ಕುತ್ತಿತ್ತು’ ಎಂದನು. 24 ಬಳಿಕ ಅರಸನು ಅಲ್ಲಿದ್ದ ಜನರಿಗೆ, ‘ಈ ಸೇವಕನ ಒಂದುಸಾವಿರ ರೂಪಾಯಿ ತೆಗೆದುಕೊಂಡು ಹತ್ತುಸಾವಿರ ರೂಪಾಯಿ ಸಂಪಾದಿಸಿದವನಿಗೆ ಕೊಡಿರಿ’ ಎಂದು ಹೇಳಿದನು.

25 “ಆ ಜನರು ಅರಸನಿಗೆ, ‘ಸ್ವಾಮೀ, ಆ ಸೇವಕನ ಬಳಿ ಈಗಾಗಲೇ ಹತ್ತುಸಾವಿರ ರೂಪಾಯಿ ಇದೆಯಲ್ಲಾ!’ ಎಂದು ಹೇಳಿದರು.

26 “ಅರಸನು, ‘ತನ್ನಲ್ಲಿರುವುದನ್ನು ಉಪಯೋಗಿಸುವವನು ಹೆಚ್ಚು ಪಡೆಯುವನು. ಆದರೆ ತನ್ನಲ್ಲಿರುವುದನ್ನು ಉಪಯೋಗಿಸದವನಿಂದ ಇದ್ದದ್ದನ್ನೂ ತೆಗೆದುಕೊಳ್ಳಲಾಗುವುದು. 27 ಈಗ ನನ್ನ ವೈರಿಗಳೆಲ್ಲಿ? ನಾನು ಅರಸನಾಗುವುದನ್ನು ವಿರೋಧಿಸಿದ ಜನರೆಲ್ಲಿ? ನನ್ನ ವೈರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ನನ್ನ ಕಣ್ಣೆದುರಿನಲ್ಲಿಯೇ ಕೊಲ್ಲಿರಿ!’ ಎಂದು ಹೇಳಿದನು.”

ಜೆರುಸಲೇಮಿಗೆ ಯೇಸುವಿನ ಪ್ರವೇಶ

(ಮತ್ತಾಯ 21:1-11; ಮಾರ್ಕ 11:1-11; ಯೋಹಾನ 12:12-19)

28 ಯೇಸು ಈ ಸಂಗತಿಗಳನ್ನು ಹೇಳಿದ ನಂತರ ಜೆರುಸಲೇಮಿನ ಕಡೆಗೆ ಪ್ರಯಾಣ ಮುಂದುವರಿಸಿದನು. 29 ಯೇಸು ಬೇತ್ಛಗೆ ಮತ್ತು ಬೆಥಾನಿಯ ಎಂಬ ಊರುಗಳ ಸಮೀಪಕ್ಕೆ ಬಂದನು. ಈ ಊರುಗಳು ಆಲಿವ್ ಮರಗಳ ಬೆಟ್ಟ[b] ಎಂದು ಕರೆಯಲ್ಪಟ್ಟ ಗುಡ್ಡದ ಹತ್ತಿರವಿತ್ತು. ಯೇಸು ಇಬ್ಬರು ಶಿಷ್ಯರನ್ನು ಕರೆದು ಅವರಿಗೆ, 30 “ಅಲ್ಲಿ ಕಾಣುವ ಊರಿಗೆ ಹೋಗಿರಿ. ನೀವು ಆ ಊರನ್ನು ಪ್ರವೇಶಿಸಿದಾಗ ಕಟ್ಟಿಹಾಕಿರುವ ಒಂದು ಪ್ರಾಯದ ಕತ್ತೆಯನ್ನು ಕಾಣುವಿರಿ. ಆ ಕತ್ತೆಯ ಮೇಲೆ ಯಾರೂ ಇದುವರೆಗೆ ಸವಾರಿಮಾಡಿಲ್ಲ. ಆ ಕತ್ತೆಯನ್ನು ಬಿಚ್ಚಿಕೊಂಡು ಇಲ್ಲಿಗೆ ಕರೆತನ್ನಿರಿ. 31 ನೀವು ಏಕೆ ಈ ಕತ್ತೆಯನ್ನು ಬಿಚ್ಚಿಕೊಂಡು ಹೋಗುತ್ತಿದ್ದೀರೆಂದು ಯಾರಾದರೂ ನಿಮ್ಮನ್ನು ಕೇಳಿದರೆ, ‘ಗುರುವಿಗೆ ಈ ಕತ್ತೆ ಬೇಕಾಗಿದೆ’ ಎಂದು ಹೇಳಿರಿ” ಎಂದನು.

32 ಆ ಇಬ್ಬರು ಶಿಷ್ಯರು ಪಟ್ಟಣದೊಳಕ್ಕೆ ಹೋದರು. ಯೇಸು ಅವರಿಗೆ ಹೇಳಿದ ಪ್ರಕಾರವೇ ಅವರು ಕತ್ತೆಯನ್ನು ಕಂಡು 33 ಅದನ್ನು ಬಿಚ್ಚಿದರು. ಆದರೆ ಕತ್ತೆಯ ಯಜಮಾನ ಹೊರಗೆ ಬಂದು ಶಿಷ್ಯರಿಗೆ, “ಆ ಕತ್ತೆಯನ್ನು ನೀವು ಏಕೆ ಬಿಚ್ಚುತ್ತಿದ್ದೀರಿ?” ಎಂದು ಕೇಳಿದನು.

34 ಶಿಷ್ಯರು, “ಪ್ರಭುವಿಗೆ ಇದು ಬೇಕಾಗಿದೆ” ಎಂದು ಉತ್ತರಿಸಿದರು. 35 ಹೀಗೆ, ಶಿಷ್ಯರು ಆ ಕತ್ತೆಯನ್ನು ಯೇಸುವಿನ ಬಳಿಗೆ ತಂದರು. ಶಿಷ್ಯರು ತಮ್ಮ ಬಟ್ಟೆಗಳನ್ನು ಕತ್ತೆಯ ಬೆನ್ನಿನ ಮೇಲೆ ಹಾಕಿ ಯೇಸುವನ್ನು ಕತ್ತೆಯ ಮೇಲೆ ಕುಳ್ಳಿರಿಸಿದರು. 36 ಯೇಸು ಜೆರುಸಲೇಮಿನ ಕಡೆಗೆ ಪ್ರಯಾಣ ಮಾಡಿದನು. ಶಿಷ್ಯರು ತಮ್ಮ ಬಟ್ಟೆಗಳನ್ನು ರಸ್ತೆಯಲ್ಲಿ ಯೇಸುವಿನ ಮುಂದೆ ಹಾಸಿದರು.

37 ಯೇಸು ಜೆರುಸಲೇಮಿಗೆ ಸಮೀಪಿಸಿ ಆಲಿವ್ ಮರಗಳ ಗುಡ್ಡದ ಬಳಿಗೆ ಬಂದನು. ಆತನನ್ನು ಹಿಂಬಾಲಿಸುತ್ತಿದ್ದ ಶಿಷ್ಯ ಸಮೂಹದಲ್ಲಿದ್ದವರೆಲ್ಲರೂ ಸಂತೋಷಪಡುತ್ತಾ ತಾವು ನೋಡಿದ ಎಲ್ಲಾ ಮಹತ್ಕಾರ್ಯಗಳಿಗಾಗಿ ದೇವರನ್ನು ಸ್ತುತಿಸಿದರು. 38 ಅವರು,

“‘ಪ್ರಭುವಿನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದವಾಗಲಿ!’(A)

ಪರಲೋಕದಲ್ಲಿ ಸಮಾಧಾನವಾಗಲಿ; ದೇವರಿಗೆ ಮಹಿಮೆಯಾಗಲಿ”

ಎಂದು ಆರ್ಭಟಿಸಿದರು.

39 ಫರಿಸಾಯರಲ್ಲಿ ಕೆಲವರು, “ಬೋಧಕನೇ, ಈ ರೀತಿಯೆಲ್ಲಾ ಹೇಳಕೂಡದೆಂದು ನಿನ್ನ ಶಿಷ್ಯರಿಗೆ ಹೇಳು!” ಅಂದರು.

40 ಅದಕ್ಕೆ ಯೇಸು, “ಅವರು ಹೀಗೆ ಹೇಳಲೇಬೇಕು. ಒಂದುವೇಳೆ ಅವರು ಹೀಗೆ ಹೇಳದಿದ್ದರೆ, ಈ ಕಲ್ಲುಗಳೇ ಅವರ ಬದಲಾಗಿ ಹೇಳುತ್ತವೆ ಎಂದು ನಿಮಗೆ ಹೇಳುತ್ತೇನೆ” ಎಂಬುದಾಗಿ ಉತ್ತರಿಸಿದನು.

ಜೆರುಸಲೇಮಿನ ವಿಷಯದಲ್ಲಿ ಯೇಸು ಅತ್ತನು

41 ಯೇಸು ಜೆರುಸಲೇಮಿನ ಸಮೀಪಕ್ಕೆ ಬಂದಾಗ ಆ ಪಟ್ಟಣವನ್ನು ನೋಡಿ ಅದರ ವಿಷಯದಲ್ಲಿ ಕಣ್ಣೀರಿಟ್ಟು 42 ಜೆರುಸಲೇಮಿಗೆ, “ನಿನಗೆ ಯಾವುದರಿಂದ ಸಮಾಧಾನವಾಗುತ್ತದೆ ಎಂಬುದನ್ನು ನೀನು ಇಂದೇ ತಿಳಿದುಕೊಂಡಿದ್ದರೆ ಎಷ್ಟೋ ಒಳ್ಳೆಯದಾಗಿತ್ತು! ಆದರೆ ನೀನು ಅದನ್ನು ತಿಳಿಯಲಾರೆ, ಏಕೆಂದರೆ ಅದು ನಿನಗೆ ಮರೆಯಾಗಿದೆ. 43 ನಿನ್ನ ವೈರಿಗಳು ನಿನ್ನ ಸುತ್ತಲೂ ಗೋಡೆ ಕಟ್ಟಿ ನಿನ್ನನ್ನು ಎಲ್ಲಾ ಕಡೆಗಳಿಂದಲೂ ಮುತ್ತಿಗೆ ಹಾಕಿ, 44 ನಿನ್ನನ್ನೂ ನಿನ್ನ ಜನರೆಲ್ಲರನ್ನೂ ನಾಶಮಾಡುವರು. ನಿನ್ನ ಕಟ್ಟಡಗಳಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ದೇವರು ನಿನ್ನನ್ನು ರಕ್ಷಿಸುವುದಕ್ಕೆ ಬಂದ ಸಮಯವನ್ನು ನೀನು ತಿಳಿದುಕೊಳ್ಳಲಿಲ್ಲವಾದ್ದರಿಂದ ಇದೆಲ್ಲಾ ನಿನಗೆ ಸಂಭವಿಸುವುದು” ಎಂದು ಹೇಳಿದನು.

ದೇವಾಲಯಕ್ಕೆ ಯೇಸುವಿನ ಪ್ರವೇಶ

(ಮತ್ತಾಯ 21:12-17; ಮಾರ್ಕ 11:15-19; ಯೋಹಾನ 2:13-22)

45 ಯೇಸು ದೇವಾಲಯದೊಳಗೆ ಹೋಗಿ, ಅಲ್ಲಿ ಮಾರಾಟ ಮಾಡುತ್ತಿದ್ದ ಜನರನ್ನೆಲ್ಲಾ ಹೊರಕ್ಕೆ ಓಡಿಸತೊಡಗಿ, 46 ಅವರಿಗೆ, “‘ನನ್ನ ಆಲಯವು ಪ್ರಾರ್ಥನಾಲಯವಾಗಿರುವುದು’(B) ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ಆದರೆ ನೀವು ಅದನ್ನು ‘ಕಳ್ಳರ ಗವಿಯನ್ನಾಗಿ ಮಾರ್ಪಡಿಸಿದ್ದೀರಿ’”(C) ಎಂದನು.

47 ಯೇಸು ದೇವಾಲಯದಲ್ಲಿ ಪ್ರತಿದಿನ ಜನರಿಗೆ ಉಪದೇಶಿಸಿದನು. ಮಹಾಯಾಜಕರು, ಧರ್ಮೋಪದೇಶಕರು ಮತ್ತು ಜನರ ನಾಯಕರಲ್ಲಿ ಕೆಲವರು ಯೇಸುವನ್ನು ಕೊಲ್ಲಲು ಬಯಸಿದರು. 48 ಆದರೆ ಜನರೆಲ್ಲರೂ ಯೇಸುವಿನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಯೇಸು ಹೇಳಿದ ವಿಷಯಗಳಲ್ಲಿ ಅವರು ಬಹಳ ಆಸಕ್ತರಾಗಿದ್ದರು. ಆದ್ದರಿಂದ ಮಹಾಯಾಜಕರಿಗೆ, ಧರ್ಮೋಪದೇಶಕರಿಗೆ ಮತ್ತು ಜನನಾಯಕರಿಗೆ ಯೇಸುವನ್ನು ಹೇಗೆ ಕೊಲ್ಲಬೇಕೆಂದೇ ತಿಳಿಯಲಿಲ್ಲ.

ಯೋಬನು 34

34 ಎಲೀಹು ತನ್ನ ಮಾತನ್ನು ಮುಂದುವರಿಸಿದನು:

“ಜ್ಞಾನಿಗಳೇ, ನನ್ನ ಮಾತುಗಳನ್ನು ಕೇಳಿರಿ.
    ಜಾಣರೇ, ನನಗೆ ಗಮನಕೊಡಿರಿ.
ಕಿವಿಯು ಮಾತುಗಳನ್ನು ವಿವೇಚಿಸುತ್ತದೆ;
    ನಾಲಿಗೆಯು ಆಹಾರವನ್ನು ರುಚಿನೋಡುತ್ತದೆ.
ಅಂತೆಯೇ ನಾವು ಈ ವಾದಗಳನ್ನು ಪರೀಕ್ಷಿಸಿ
    ನ್ಯಾಯವಾದದ್ದನ್ನೇ ಆರಿಸಿಕೊಳ್ಳೋಣ.
ಯೋಬನು ಹೇಳುವುದೇನೆಂದರೆ, ‘ನಾನು ನಿರಪರಾಧಿ.
    ದೇವರು ನನಗೆ ನ್ಯಾಯದೊರಕಿಸುತ್ತಿಲ್ಲ.
ನಾನು ನೀತಿವಂತನಾಗಿದ್ದರೂ ಅಪರಾಧಿಯೆನಿಸಿಕೊಂಡಿದ್ದೇನೆ.
    ನಾನು ನಿರ್ದೋಷಿಯಾಗಿದ್ದರೂ ಆತನ ಬಾಣದ ಪೆಟ್ಟು ವಿಪರೀತವಾಗಿದೆ.’

“ಯೋಬನಿಗೆ ಸಮಾನನು ಯಾರು?
    ಅವನು ನೀರು ಕುಡಿದಂತೆ ದೇವರನ್ನು ದೂಷಿಸುತ್ತಾನೆ.
ಯೋಬನು ದುಷ್ಟರೊಂದಿಗೆ ಸ್ನೇಹದಿಂದಿರುವನು;
    ಕೆಟ್ಟವರ ಸಂಗಡ ನಡೆದಾಡುವನು.
ಯಾಕೆಂದರೆ, ‘ದೇವರಿಗೆ ವಿಧೇಯನಾಗಿರುವವನಿಗೆ
    ಅದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಅವನೇ ಹೇಳಿದ್ದಾನೆ.

10 “ಆದ್ದರಿಂದ ಬುದ್ಧಿವಂತರೇ, ನನ್ನ ಮಾತುಗಳಿಗೆ ಕಿವಿಗೊಡಿ.
    ದೇವರು ಕೆಟ್ಟದ್ದನ್ನು ಎಂದಿಗೂ ಮಾಡುವುದಿಲ್ಲ.
    ಸರ್ವಶಕ್ತನಾದ ದೇವರು ಎಂದಿಗೂ ತಪ್ಪು ಮಾಡುವುದಿಲ್ಲ.
11 ಆತನು ಮನುಷ್ಯನಿಗೆ ಅವನ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವನು.
    ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ದೇವರಿಂದ ಹೊಂದಿಕೊಳ್ಳುವನು.
12 ಹೌದು, ನಿಜ, ದೇವರು ಕೆಟ್ಟದ್ದನ್ನು ಮಾಡುವುದಿಲ್ಲ;
    ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕು ಮಾಡುವುದಿಲ್ಲ.
13 ಭೂಲೋಕಕ್ಕೆ ದೇವರನ್ನು ಅಧಿಪತಿಯನ್ನಾಗಿ ಯಾರು ಆರಿಸಿಕೊಂಡರು?
    ಇಡೀ ಪ್ರಪಂಚದ ಮೇಲಿನ ಜವಾಬ್ದಾರಿಯನ್ನು ದೇವರಿಗೆ ಯಾರು ಕೊಟ್ಟರು?
14 ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು,
    ತನ್ನ ಆತ್ಮವನ್ನೂ ಜೀವದ ಉಸಿರನ್ನೂ ಜನರಿಂದ ತೆಗೆದುಕೊಳ್ಳುವುದಾದರೆ,
15 ಆಗ ಭೂಮಿಯ ಮೇಲಿರುವ ಎಲ್ಲಾ ಜನರು
    ಸತ್ತುಹೋಗಿ ಧೂಳಾಗುವರು.

16 “ನೀನು ವಿವೇಕಿಯಾಗಿದ್ದರೆ,
    ನನ್ನ ಮಾತುಗಳಿಗೆ ಕಿವಿಗೊಡು.
17 ನ್ಯಾಯವನ್ನು ದ್ವೇಷಿಸುವವನು ಅಧಿಪತಿಯಾಗುವನೇ?
    ಯೋಬನೇ, ಬಲಿಷ್ಠನೂ ಒಳ್ಳೆಯವನೂ ಆಗಿರುವ ದೇವರನ್ನು
    ದೋಷಿಯೆಂಬುದಾಗಿ ತೀರ್ಪುನೀಡಲು ನಿನಗೆ ಸಾಧ್ಯವೇ?
18 ‘ನೀವು ಅಯೋಗ್ಯರು!’ ಎಂದು ರಾಜರುಗಳಿಗೆ ಹೇಳುವವನು ದೇವರೊಬ್ಬನೇ.
    ‘ನೀವು ಕೆಡುಕರು!’ ಎಂದು ನಾಯಕರುಗಳಿಗೆ ಹೇಳುವವನು ದೇವರೇ.
19 ದೇವರಲ್ಲಿ ಸಾಮಾನ್ಯರು ಮತ್ತು ಪ್ರಮುಖರು ಎಂದಾಗಲಿ
    ಬಡವರು ಮತ್ತು ಶ್ರೀಮಂತರು ಎಂದಾಗಲಿ ಭೇದಭಾವವಿಲ್ಲ.
    ಯಾಕೆಂದರೆ ಎಲ್ಲರನ್ನೂ ಸೃಷ್ಟಿಮಾಡಿದವನು ದೇವರೇ.
20 ಒಬ್ಬನು ಕ್ಷಣಮಾತ್ರದೊಳಗೆ ಮಧ್ಯರಾತ್ರಿಯಲ್ಲಿ ಸಾಯಬಹುದು.
    ಜನರು ಕಾಯಿಲೆಯಿಂದ ಸಾಯಬಹುದು.
    ದುಷ್ಟರು ಸಹ ಯಾವುದೇ ಕಾರಣವಿಲ್ಲದೆ ಸಾಯಬಹುದು.

21 “ಮನುಷ್ಯರ ಕಾರ್ಯಗಳನ್ನು ದೇವರು ಗಮನಿಸುತ್ತಾನೆ.
    ಅವನ ಪ್ರತಿಯೊಂದು ಹೆಜ್ಜೆ ಆತನಿಗೆ ಗೊತ್ತಿದೆ.
22 ದುಷ್ಟನನ್ನು ದೇವರಿಂದ ಮರೆಮಾಡಬಲ್ಲ ಕತ್ತಲೆಯ ಸ್ಥಳವಾಗಲಿ
    ಕಾರ್ಗತ್ತಲೆಯ ಸ್ಥಳವಾಗಲಿ ಇಲ್ಲವೇ ಇಲ್ಲ.
23 ದೇವರು ಮನುಷ್ಯರನ್ನು ಪರೀಕ್ಷಿಸಲು ಸಮಯವನ್ನು ಗೊತ್ತು ಪಡಿಸಬೇಕಿಲ್ಲ;
    ನ್ಯಾಯತೀರ್ಪು ನೀಡಲು ಅವರನ್ನು ತನ್ನ ಮುಂದೆ ಕರೆಸಬೇಕಿಲ್ಲ.
24 ಬಲಿಷ್ಠರು ತಪ್ಪು ಮಾಡಿದಾಗ
    ದೇವರು ಅವರನ್ನು ವಿಚಾರಿಸದೆ ನಾಶಮಾಡಿ
ಅವರ ಸ್ಥಳದಲ್ಲಿ ಬೇರೆಯವರನ್ನು ನೆಲೆಗೊಳಿಸುವನು.
25 ಹೀಗೆ ಆತನು ಅವರ ಕಾರ್ಯಗಳನ್ನು ಲಕ್ಷಿಸಿ,
    ರಾತ್ರಿಯಲ್ಲಿ ಅವರನ್ನು ಸೋಲಿಸಿ ನಾಶಮಾಡುವನು.
26 ದೇವರು ದುಷ್ಟರನ್ನು
    ಅವರ ದುಷ್ಕೃತ್ಯಗಳ ನಿಮಿತ್ತ ಬಹಿರಂಗವಾಗಿ ದಂಡಿಸುವನು.
27 ಯಾಕೆಂದರೆ ದುಷ್ಟರು ದೇವರಿಗೆ ವಿಧೇಯರಾಗಲಿಲ್ಲ;
    ಆತನ ಮಾರ್ಗಗಳನ್ನು ಲಕ್ಷಿಸಲಿಲ್ಲ.
28 ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ದುಷ್ಟರು ಮಾಡಿದರು.
    ಆತನು ದಿಕ್ಕಿಲ್ಲದವರ ಕೂಗನ್ನು ಕೇಳಿದನು.
29 ಆದರೆ ದೇವರು ಬಡಜನರಿಗೆ ಸಹಾಯಮಾಡದಿರಲು ನಿರ್ಧರಿಸಿದರೆ,
    ಆತನನ್ನು ದೋಷಿಯೆಂದು ತೀರ್ಪುಮಾಡುವವನು ಯಾರು?
ದೇವರು ತನ್ನ ಮುಖವನ್ನು ಅವರಿಗೆ ಮರೆಮಾಡಿಕೊಂಡರೆ ಆತನನ್ನು ನೋಡಬಲ್ಲವರು ಯಾರು?
    ಮನುಷ್ಯರನ್ನೂ ಜನಾಂಗಗಳನ್ನೂ ಆಳುವವನು ದೇವರೇ.
30 ದೈವಹೀನನಾದ ರಾಜನು ಜನರನ್ನು ನಾಶನಕ್ಕೆ ನಡೆಸುವುದಾದರೆ
    ದೇವರು ಅವನನ್ನು ಪದಚ್ಯುತಿಗೊಳಿಸುವನು.

31 “ಮನುಷ್ಯನು ದೇವರಿಗೆ, ‘ನಾನು ದೋಷಿ,
    ನಾನು ಇನ್ನೆಂದಿಗೂ ಪಾಪ ಮಾಡುವುದಿಲ್ಲ.
32 ದೇವರೇ, ನೀನು ನನಗೆ ಅಗೋಚರವಾಗಿದ್ದರೂ ನೀತಿಮಾರ್ಗವನ್ನು ಬೋಧಿಸು,
    ನಾನು ತಪ್ಪು ಮಾಡಿದ್ದರೆ ಅದನ್ನು ಮತ್ತೆ ಮಾಡುವುದಿಲ್ಲ’ ಎಂದು ಹೇಳಬಹುದು.
33 ಯೋಬನೇ, ನೀನು ಮಾರ್ಪಾಟಾಗದೆ
    ದೇವರಿಂದ ಪ್ರತಿಫಲವನ್ನು ಅಪೇಕ್ಷಿಸುವುದೇಕೆ?
ಯೋಬನೇ, ಇದು ನಿನ್ನ ನಿರ್ಧಾರ, ನನ್ನದಲ್ಲ.
    ನಿನ್ನ ಆಲೋಚನೆಯನ್ನು ನನಗೆ ತಿಳಿಸು.
34 ಜ್ಞಾನಿಗಳೂ ಬುದ್ಧಿವಂತರೂ
    ನನ್ನ ಮಾತುಗಳಿಗೆ ಕಿವಿಗೊಟ್ಟು,
35 ‘ಯೋಬನು ತಿಳುವಳಿಕೆಯಿಲ್ಲದೆ ಮಾತಾಡುತ್ತಾನೆ.
    ಅವನ ಮಾತುಗಳಿಗೆ ಅರ್ಥವೇ ಇಲ್ಲ!’
36 ಯೋಬನಿಗೆ ಪರಿಶೋಧನೆ ನಿರಂತರವಾಗಿದ್ದರೆ ಒಳ್ಳೆಯದು.
    ಯಾಕೆಂದರೆ ಅವನು ದುಷ್ಟನಂತೆ ಉತ್ತರಿಸುತ್ತಿದ್ದಾನೆ.
37 ಅವನು ತನ್ನ ಪಾಪಕ್ಕೆ ಇನ್ನೂ ಕೂಡಿಸಿಕೊಳ್ಳುತ್ತಿದ್ದಾನೆ;
    ನಮ್ಮ ಮಧ್ಯದಲ್ಲಿ ತನ್ನ ದುಷ್ಟತನವನ್ನು ಅಧಿಕಮಾಡಿಕೊಳ್ಳುತ್ತಿದ್ದಾನೆ; ದೇವದ್ರೋಹವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ” ಎಂದು ನನಗೆ ಹೇಳುವರು.

2 ಕೊರಿಂಥದವರಿಗೆ 4

ಮಡಕೆಗಳಲ್ಲಿರುವ ಆತ್ಮಿಕ ಭಂಡಾರ

ದೇವರು ತನ್ನ ಕೃಪೆಯಿಂದ ಈ ಸೇವೆಯನ್ನು ನಮಗೆ ಒಪ್ಪಿಸಿದ್ದಾನೆ. ಆದ್ದರಿಂದ ನಾವು ಧೈರ್ಯಗೆಡುವುದಿಲ್ಲ. ರಹಸ್ಯವಾದ ಮತ್ತು ನಾಚಿಕೆಕರವಾದ ಮಾರ್ಗಗಳಿಗೆ ನಾವು ವಿಮುಖರಾಗಿದ್ದೇವೆ. ನಾವು ಕುತಂತ್ರವನ್ನು ಉಪಯೋಗಿಸುವುದೂ ಇಲ್ಲ, ದೇವರ ಉಪದೇಶವನ್ನು ಬದಲಾಯಿಸುವುದೂ ಇಲ್ಲ. ನಾವು ಸತ್ಯವನ್ನು ಸ್ಪಷ್ಟವಾಗಿ ಬೋಧಿಸುತ್ತೇವೆ. ನಾವು ಯಾರೆಂಬುದನ್ನು ಜನರಿಗೆ ಈ ರೀತಿ ತೋರಿಸಿಕೊಡುತ್ತೇವೆ. ಹೀಗೆ ನಾವು ದೇವರ ಸಮ್ಮುಖದಲ್ಲಿ ಎಂಥಾ ಜನರಾಗಿದ್ದೇವೆ ಎಂಬುದನ್ನು ಅವರು ತಮ್ಮ ಹೃದಯಗಳಲ್ಲಿ ತಿಳಿದುಕೊಳ್ಳಬಲ್ಲರು. ನಾವು ಬೋಧಿಸುವ ಸುವಾರ್ತೆಯು ಮರೆಯಾಗಿರಬಹುದು. ಆದರೆ ನಾಶನದ ಮಾರ್ಗದಲ್ಲಿರುವವರಿಗೆ ಮಾತ್ರ ಅದು ಮರೆಯಾಗಿದೆ. ಈ ಲೋಕದ ಅಧಿಪತಿಯು (ಸೈತಾನನು) ನಂಬದವರ ಮನಸ್ಸುಗಳನ್ನು ಕುರುಡುಗೊಳಿಸಿದ್ದಾನೆ. ಕ್ರಿಸ್ತನ ಮಹಿಮೆಯ ವಿಷಯವಾದ ಸುವಾರ್ತೆಯ ಬೆಳಕನ್ನು (ಸತ್ಯವನ್ನು) ಅವರು ಕಾಣಲಾರರು. ಕ್ರಿಸ್ತನೊಬ್ಬನೇ ದೇವರಿಗೆ ಪ್ರತಿರೂಪವಾಗಿದ್ದಾನೆ. ನಾವು ನಮ್ಮ ಬಗ್ಗೆ ಬೋಧಿಸುವುದಿಲ್ಲ. ಆದರೆ ಯೇಸು ಕ್ರಿಸ್ತನೇ ಪ್ರಭುವೆಂದು ಮತ್ತು ಯೇಸುವಿಗೋಸ್ಕರ ನಿಮ್ಮ ಸೇವಕರಾಗಿದ್ದೇವೆಂದು ಬೋಧಿಸುತ್ತೇವೆ. “ಬೆಳಕು ಕತ್ತಲೆಯೊಳಗಿಂದ ಪ್ರಕಾಶಿಸಲಿ!” ಎಂದು ದೇವರು ಒಮ್ಮೆ ಹೇಳಿದ್ದಾನೆ. ಈ ದೇವರೇ ನಮ್ಮ ಹೃದಯಗಳಲ್ಲಿ ತನ್ನ ಬೆಳಕನ್ನು ಬೆಳಗಿಸಿದ್ದಾನೆ. ಕ್ರಿಸ್ತನ ಮುಖದಲ್ಲಿರುವ ದೇವರ ಮಹಿಮೆಯನ್ನು ನಮಗೆ ತಿಳಿಯಪಡಿಸುವುದರ ಮೂಲಕ ಆತನು ನಮಗೆ ಬೆಳಕನ್ನು ಕೊಟ್ಟಿದ್ದಾನೆ.

ನಮಗೆ ಈ ನಿಕ್ಷೇಪವು ದೇವರಿಂದ ದೊರೆತಿದೆ. ನಾವಾದರೋ ನಿಕ್ಷೇಪವನ್ನು ತುಂಬಿ ಕೊಂಡಿರುವ ಕೇವಲ ಮಡಕೆಗಳಂತಿದ್ದೇವೆ. ಈ ಮಹಾಶಕ್ತಿಯು ಬಂದದ್ದು ದೇವರಿಂದಲೇ ಹೊರತು ನಮ್ಮಿಂದಲ್ಲವೆಂಬುದನ್ನು ಇದು ತೋರಿಸುತ್ತದೆ. ನಮ್ಮ ಸುತ್ತಮುತ್ತಲೆಲ್ಲಾ ಇಕ್ಕಟ್ಟುಗಳಿವೆ, ಆದರೆ ಸೋತುಹೋಗಿಲ್ಲ. ಅನೇಕಸಲ, ಏನು ಮಾಡಬೇಕೋ ನಮಗೆ ತಿಳಿಯದು, ಆದರೂ ನಾವು ಧೈರ್ಯಗೆಡುವುದಿಲ್ಲ. ನಾವು ಹಿಂಸೆಗೆ ಗುರಿಯಾದೆವು, ಆದರೆ ದೇವರು ನಮ್ಮನ್ನು ತೊರೆದುಬಿಡಲಿಲ್ಲ. ಕೆಲವು ಸಲ ನಮಗೆ ನೋವಾಯಿತು, ಆದರೂ ನಾಶವಾಗಲಿಲ್ಲ. 10 ನಮ್ಮ ದೇಹಗಳಲ್ಲಿ ಯೇಸುವಿನ ಜೀವವು ತೋರಿಬರಲೆಂದು ಆತನ ಮರಣಾವಸ್ಥೆಯನ್ನು ಅನುಭವಿಸುತ್ತಿದ್ದೇವೆ. 11 ನಾವು ಜೀವಂತವಾಗಿದ್ದರೂ ಯೇಸುವಿಗೋಸ್ಕರ ಯಾವಾಗಲೂ ಮರಣದ ಅಪಾಯದಲ್ಲಿದ್ದೇವೆ. ಸತ್ತುಹೋಗುವ ನಮ್ಮ ದೇಹಗಳಲ್ಲಿ ಆತನ ಜೀವವು ಕಾಣಬರಲೆಂದು ಇದು ನಮಗೆ ಸಂಭವಿಸುತ್ತದೆ. 12 ಆದ್ದರಿಂದ ಮರಣವು ನಮ್ಮಲ್ಲಿ ಕಾರ್ಯಮಾಡುತ್ತಿದೆ, ಆದರೆ ನಿಮ್ಮಲ್ಲಿ ಜೀವವು ಕಾರ್ಯಮಾಡುತ್ತಿದೆ.

13 “ನಾನು ನಂಬಿದ್ದರಿಂದಲೇ ಮಾತಾಡಿದೆನು.” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನಮ್ಮ ನಂಬಿಕೆಯು ಸಹ ಅದೇ ರೀತಿಯಲ್ಲಿದೆ. ನಾವು ನಂಬುವುದರಿಂದಲೇ ಮಾತಾಡುತ್ತೇವೆ. 14 ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರು ನಮ್ಮನ್ನು ಸಹ ಕ್ರಿಸ್ತನೊಂದಿಗೆ ಎಬ್ಬಿಸುತ್ತಾನೆ ಎಂಬುದು ನಮಗೆ ಗೊತ್ತಿದೆ. ದೇವರು ನಮ್ಮನ್ನು ನಿಮ್ಮ ಜೊತೆಯಲ್ಲಿ ತನ್ನ ಮುಂದೆ ನಿಲ್ಲಿಸುವನು. 15 ಇವುಗಳೆಲ್ಲ ನಿಮಗೋಸ್ಕರವಾಗಿಯೇ. ಹೀಗೆ ದೇವರ ಕೃಪೆಯು ಹೆಚ್ಚುಹೆಚ್ಚು ಜನರಿಗೆ ಕೊಡಲ್ಪಡುವುದು. ಇದರಿಂದಾಗಿ, ಹೆಚ್ಚುಹೆಚ್ಚು ಜನರು ದೇವರ ಮಹಿಮೆಗಾಗಿ ಕೃತಜ್ಞತಾಸುತ್ತಿ ಸಲ್ಲಿಸುವರು.

ನಂಬಿಕೆಯ ಜೀವನ

16 ಆದಕಾರಣವೇ, ನಾವೆಂದಿಗೂ ಬಲಹೀನರಾಗುವುದಿಲ್ಲ. ನಮ್ಮ ಭೌತಿಕ ದೇಹಕ್ಕೆ ವಯಸ್ಸಾಗುತ್ತಿದೆ ಮತ್ತು ಅದು ಬಲಹೀನವಾಗುತ್ತಿದೆ. ಆದರೆ ನಮ್ಮ ಆಂತರ್ಯವು ಪ್ರತಿದಿನ ಹೊಸದಾಗುತ್ತಿದೆ. 17 ಸ್ವಲ್ಪಕಾಲದವರೆಗೆ ನಮಗೆ ಚಿಕ್ಕಪುಟ್ಟ ಇಕ್ಕಟ್ಟುಗಳಿರುತ್ತವೆ. ಆದರೆ ನಿತ್ಯವಾದ ಮಹಿಮೆಯನ್ನು ಹೊಂದಿಕೊಳ್ಳಲು ಅವು ನಮಗೆ ಸಹಾಯಕವಾಗಿವೆ. ಆ ಮಹಿಮೆಯು ಇಂದಿನ ಇಕ್ಕಟ್ಟುಗಳಿಗಿಂತಲೂ ಮಹತ್ವವುಳ್ಳದ್ದಾಗಿದೆ. 18 ಆದ್ದರಿಂದ ನಮಗೆ ಕಾಣುವಂಥವುಗಳ ಬಗ್ಗೆ ಯೋಚಿಸದೆ ನಮಗೆ ಕಾಣದಿರುವಂಥವುಗಳ ಬಗ್ಗೆ ಯೋಚಿಸುತ್ತೇವೆ. ನಮಗೆ ಕಾಣುವಂಥವುಗಳು ಕೇವಲ ಸ್ವಲ್ಪಕಾಲ ಮಾತ್ರ ಇರುತ್ತವೆ. ಆದರೆ ನಮಗೆ ಕಾಣದಂಥವುಗಳು ಎಂದೆಂದಿಗೂ ಇರುತ್ತವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International