M’Cheyne Bible Reading Plan
ಮೋಶೆಯ ಗೀತೆ
15 ಬಳಿಕ ಮೋಶೆ ಮತ್ತು ಇಸ್ರೇಲರು ಯೆಹೋವನಿಗೆ ಈ ಗೀತೆಯನ್ನು ಹಾಡತೊಡಗಿದರು:
“ನಾನು ಯೆಹೋವನಿಗೆ ಹಾಡುವೆನು.
ಆತನು ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನು ಕುದುರೆಗಳನ್ನೂ ಸವಾರರನ್ನೂ
ಸಮುದ್ರದೊಳಗೆ ಮುಳುಗಿಸಿದನು.
2 ಯೆಹೋವನೇ ನನ್ನ ಬಲ,
ಆತನು ನನ್ನನ್ನು ರಕ್ಷಿಸುತ್ತಾನೆ.
ನನ್ನ ಬಲವೂ ಕೀರ್ತನೆಯೂ ಯಾಹುವೇ; ಆತನಿಂದ ನನಗೆ ರಕ್ಷಣೆ ಆಯಿತು.
ಯೆಹೋವನು ನನ್ನ ದೇವರು.
ಮತ್ತು ನಾನು ಆತನನ್ನು ಸ್ತುತಿಸುತ್ತೇನೆ.
ಯೆಹೋವನೇ ನಮ್ಮ ಪೂರ್ವಿಕರ ದೇವರು.
ನಾನು ಆತನನ್ನು ಸನ್ಮಾನಿಸುತ್ತೇನೆ.
3 ಯೆಹೋವನೇ ಯುದ್ಧವೀರನು.
ಆತನ ನಾಮಧೇಯವು ಯೆಹೋವನೇ.
4 ಆತನು ಫರೋಹನ ರಥಗಳನ್ನೂ
ಸೈನಿಕರನ್ನೂ ಸಮುದ್ರದೊಳಗೆ ಕೆಡವಿದನು;
ಫರೋಹನ ಮಹಾವೀರರನ್ನು
ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
5 ಸಾಗರವು ಅವರನ್ನು ಮುಚ್ಚಿಕೊಂಡಿತು;
ಆಳವಾದ ನೀರಿನಲ್ಲಿ ಅವರು ಬಂಡೆಗಳಂತೆ ಮುಳುಗಿದರು.
6 “ನಿನ್ನ ಭುಜಬಲವು ಎಷ್ಟೋ ಶಕ್ತಿಯುಳ್ಳದ್ದಾಗಿದೆ.
ಯೆಹೋವನೇ, ನಿನ್ನ ಭುಜಬಲವು ವೈರಿಯನ್ನು ನುಚ್ಚುನೂರು ಮಾಡಿತು.
7 ನೀನು ಅತ್ಯಧಿಕ ಮಹತ್ವವುಳ್ಳವನಾಗಿ,
ನಿನಗೆದುರು ನಿಲ್ಲುವವರನ್ನು ನಾಶಗೊಳಿಸಿದೆ.
ಬೆಂಕಿಯು ಹುಲ್ಲನ್ನು ಸುಡುವಂತೆ
ನಿನ್ನ ಕೋಪವು ಅವರನ್ನು ನಾಶಮಾಡಿತು.
8 ನೀನು ಊದಿದ ಮಹಾಗಾಳಿಯಿಂದ
ನೀರು ಒತ್ತಟ್ಟಿಗೆ ಸೇರಿತು.
ವೇಗವಾಗಿ ಹರಿಯುವ ನೀರು ಗಟ್ಟಿಯಾದ ಗೋಡೆಯಾಯಿತು.
ಸಾಗರಗರ್ಭದೊಳಗಿನ ಜಲವು ಗಟ್ಟಿಯಾಯಿತು.
9 “‘ನಾವು ಅವರನ್ನು ಬೆನ್ನಟ್ಟಿ ಹಿಡಿಯುವೆವು;
ನಾವು ಅವರ ಸಂಪತ್ತನ್ನೆಲ್ಲಾ ತೆಗೆದುಕೊಳ್ಳುವೆವು.
ನಾವು ಖಡ್ಗದಿಂದ ಅವರನ್ನು ಸಂಹರಿಸುವೆವು.
ನಮ್ಮ ಭುಜಬಲದಿಂದ ಅವರ ಸ್ವತ್ತುಗಳನ್ನೆಲ್ಲಾ ವಶಪಡಿಸಿಕೊಳ್ಳುವೆವು’
ಎಂದುಕೊಂಡರು ವೈರಿಗಳು.
10 ಆದರೆ ನೀನು ಅವರ ಮೇಲೆ ಊದಿದ ಗಾಳಿಯಿಂದ
ಸಮುದ್ರವು ಅವರನ್ನು ಮುಚ್ಚಿಕೊಂಡಿತು;
ಅವರು ಸೀಸದಂತೆ
ಅಗಾಧವಾದ ಸಮುದ್ರದಲ್ಲಿ ಮುಳುಗಿದರು.
11 “ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು?
ಪರಿಶುದ್ಧತೆಯಲ್ಲಿ ನೀನೇ ಸರ್ವೋತ್ತಮನು.
ಭಯಂಕರ ಕಾರ್ಯಗಳನ್ನು ಮಾಡಿ ಪ್ರಖ್ಯಾತಿಹೊಂದಿದವನೂ ನೀನೇ.
ಅದ್ಭುತಕಾರ್ಯಗಳನ್ನು ಮಾಡುವಾತನೂ ನೀನೇ.
12 ನೀನು ನಿನ್ನ ಬಲಗೈಯನ್ನು ಚಾಚಿದಾಗ
ಭೂಮಿಯು ಶತ್ರುಗಳನ್ನು ನುಂಗಿಬಿಟ್ಟಿತು!
13 ನೀನು ಬಿಡುಗಡೆ ಮಾಡಿದ ನಿನ್ನ ಜನರನ್ನು
ಪ್ರೀತಿಯಿಂದ ನಡೆಸುವೆ.
ನಿನ್ನ ಬಲದಿಂದ ನೀನು ಈ ಜನರನ್ನು
ನಿನ್ನ ಪವಿತ್ರವಾದ ದೇಶಕ್ಕೆ ನಡಿಸುವೆ.
14 “ಬೇರೆ ಜನಾಂಗಗಳವರು ಇದನ್ನು ಕೇಳಿ ಭಯಭೀತರಾಗುವರು;
ಫಿಲಿಷ್ಟಿಯರು ಭಯದಿಂದ ತಲ್ಲಣಿಸುವರು.
15 ಆಗ ಎದೋಮಿನ ಕುಟುಂಬಗಳು ಭಯಭೀತರಾಗುವರು.
ಮೋವಾಬಿನ ನಾಯಕರು ಭಯದಿಂದ ನಡುಗುವರು.
ಕಾನಾನಿನ ಜನರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು.
16 ನಿನ್ನ ಭುಜಬಲವನ್ನು ಅವರು ಕಂಡು
ಭಯಭೀತರಾಗುವರು.
ಯೆಹೋವನ ಜನರು ದಾಟಿ ಹೋಗುವವರೆಗೆ,
ನೀನು ರೂಪಿಸಿದ ಜನರು ದಾಟಿ ಹೋಗುವವರೆಗೆ, ಅವರು ಬಂಡೆಯಂತೆ ಮೌನವಾಗಿರುವರು.
17 ನೀನು ನಿನ್ನ ಜನರನ್ನು
ನಿನ್ನ ಬೆಟ್ಟದ ಸೀಮೆಗೂ
ನಿನ್ನ ಸಿಂಹಾಸನಕ್ಕಾಗಿ ನೀನು ಸಿದ್ಧಮಾಡಿದ ಸ್ಥಳಕ್ಕೂ ನಡಿಸುವೆ.
ಯೆಹೋವನೇ, ಒಡೆಯನೇ, ನಿನ್ನ ಕೈಗಳಿಂದ ನಿನ್ನ ಆಲಯವನ್ನು ಕಟ್ಟು.
18 “ಯೆಹೋವನು ಎಂದೆಂದಿಗೂ ಆಳುವನು!”
19 ಫರೋಹನ ಕುದುರೆಗಳು, ಸವಾರರು, ರಥಗಳು ಸಮುದ್ರದೊಳಕ್ಕೆ ಹೋದಾಗ ಸಮುದ್ರದ ನೀರು ಅವರನ್ನು ಆವರಿಸಿಕೊಳ್ಳುವಂತೆ ಯೆಹೋವನು ಮಾಡಿದನು. ಆದರೆ ಇಸ್ರೇಲರು ಸಮುದ್ರದೊಳಗಿನ ಒಣನೆಲದ ಮೇಲೆ ನಡೆದು ಸಮುದ್ರವನ್ನು ದಾಟಿದರು.
20 ಆರೋನನ ಅಕ್ಕ ಮಿರ್ಯಾಮಳು ಪ್ರವಾದಿನಿಯಾಗಿದ್ದು ದಮ್ಮಡಿಯನ್ನು ಕೈಯಲ್ಲಿ ತೆಗೆದುಕೊಂಡಳು. ಮಿರ್ಯಾಮಳು ಮತ್ತು ಸ್ತ್ರೀಯರು ಹಾಡುವುದಕ್ಕೂ ಕುಣಿಯುವುದಕ್ಕೂ ಪ್ರಾರಂಭಿಸಿದರು. 21 ಮಿರ್ಯಾಮಳು ಅವರ ಹಾಡಿಗೆ ಹೀಗೆ ಪಲ್ಲವಿ ಹಾಡಿದಳು:
“ಯೆಹೋವನಿಗೆ ಗಾನಮಾಡಿರಿ;
ಆತನು ಮಹಾಜಯಶಾಲಿಯಾದನು.
ಕುದುರೆಗಳನ್ನೂ ರಾಹುತರನ್ನೂ
ಸಮುದ್ರದೊಳಗೆ ಮುಳುಗಿಸಿ ನಾಶಮಾಡಿದನು…”
ಅರಣ್ಯದಲ್ಲಿ ಕಹಿನೀರು ಸಿಹಿಯಾದದ್ದು
22 ಮೋಶೆಯು ಇಸ್ರೇಲರನ್ನು ಕೆಂಪುಸಮುದ್ರದಿಂದ ಮುನ್ನಡೆಸಿದನು. ಅವರು ಶೂರಿನ ಅರಣ್ಯದೊಳಗೆ ಹೋದರು. ಅವರು ಅರಣ್ಯದಲ್ಲಿ ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಜನರಿಗೆ ಎಲ್ಲಿಯೂ ನೀರು ಸಿಕ್ಕಲಿಲ್ಲ. 23 ಆ ಬಳಿಕ ಅವರು ಮಾರಾ ಎಂಬ ಸ್ಥಳವನ್ನು ತಲುಪಿದರು. ಅಲ್ಲಿ ನೀರಿತ್ತು. ಆದರೆ ಅವರು ಆ ನೀರನ್ನು ಕುಡಿಯಲಾಗಲಿಲ್ಲ. ಯಾಕೆಂದರೆ ಅದು ಬಹು ಕಹಿಯಾಗಿತ್ತು. (ಆದಕಾರಣವೇ ಆ ಸ್ಥಳಕ್ಕೆ “ಮಾರಾ” ಎಂಬುದಾಗಿ ಹೆಸರು ಕೊಡಲ್ಪಟ್ಟಿತ್ತು.)
24 ಅವರು ಮೋಶೆಗೆ ದೂರು ಹೇಳತೊಡಗಿದರು. “ಈಗ, ನಾವೇನು ಕುಡಿಯೋಣ?” ಎಂದು ಅವರು ಕೇಳಿದರು.
25 ಮೋಶೆಯು ಯೆಹೋವನಿಗೆ ಪ್ರಾರ್ಥಿಸಲು ಆತನು ಅವನಿಗೆ ಒಂದು ಗಿಡವನ್ನು ತೋರಿಸಿದನು. ಮೋಶೆಯು ಆ ಗಿಡವನ್ನು ನೀರಿನಲ್ಲಿ ಹಾಕಿದಾಗ ಕಹಿನೀರು ಸಿಹಿ ನೀರಾಯಿತು.
ಆ ಸ್ಥಳದಲ್ಲಿ ಯೆಹೋವನು ಅವರಿಗಾಗಿ ನಿಯಮವನ್ನು ಮಾಡಿದನು. ಯೆಹೋವನು ಅವರ ನಂಬಿಕೆಯನ್ನು ಸಹ ಪರೀಕ್ಷಿಸಿದನು. 26 ಆತನು ಅವರಿಗೆ, “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ಆತನ ದೃಷ್ಟಿಗೆ ಯೋಗ್ಯವಾದವುಗಳನ್ನು ಮಾಡಬೇಕು; ಆತನ ಆಜ್ಞೆಗಳಿಗೆ ವಿಧೇಯರಾಗಿದ್ದು ಆತನ ಕಟ್ಟಳೆಗಳನ್ನೆಲ್ಲಾ ಅನುಸರಿಸಬೇಕು. ಆಗ ನಾನು ಈಜಿಪ್ಟಿನವರಿಗೆ ಉಂಟುಮಾಡಿದ ಕಾಯಿಲೆಗಳಲ್ಲಿ ಒಂದನ್ನೂ ನಿಮಗೆ ಬರಗೊಡಿಸುವುದಿಲ್ಲ. ಯೆಹೋವನೆಂಬ ನಾನೇ ನಿಮಗೆ ಆರೋಗ್ಯದಾಯಕನಾಗಿದ್ದೇನೆ” ಎಂದು ಹೇಳಿದನು.
27 ಬಳಿಕ ಜನರು ಏಲೀಮಿಗೆ ಪ್ರಯಾಣ ಮಾಡಿದರು. ಏಲೀಮಿನಲ್ಲಿ ನೀರಿನ ಹನ್ನೆರಡು ಬುಗ್ಗೆಗಳಿದ್ದವು; ಅಲ್ಲಿ ಎಪ್ಪತ್ತು ಖರ್ಜೂರದ ಮರಗಳಿದ್ದವು. ಆದ್ದರಿಂದ ಅವರು ನೀರಿನ ಹತ್ತಿರ ತಮ್ಮ ಪಾಳೆಯ ಹಾಕಿದರು.
ತನ್ನ ಜನರಿಗೆ ದೇವರ ಉತ್ತರ
18 ನಿರಾಶರಾಗದೆ ಯಾವಾಗಲೂ ಪ್ರಾರ್ಥಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು: 2 “ಒಂದು ಊರಿನಲ್ಲಿ ಒಬ್ಬ ನ್ಯಾಯಾಧೀಶನಿದ್ದನು. ಅವನಿಗೆ ದೇವರಲ್ಲಿ ಭಯಭಕ್ತಿಯಿರಲಿಲ್ಲ. ಜನರು ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಅವನು ಗಮನ ಕೊಡಲಿಲ್ಲ. 3 ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಆಕೆಯು ಅನೇಕ ಸಲ ನ್ಯಾಯಾಧೀಶನ ಬಳಿಗೆ ಬಂದು, ‘ಇಲ್ಲಿ ನನಗೊಬ್ಬನು ತೊಂದರೆ ಕೊಡುತ್ತಿದ್ದಾನೆ. ದಯವಿಟ್ಟು ನನಗೆ ನ್ಯಾಯವನ್ನು ದೊರಕಿಸಿಕೊಡಿ!’ ಎಂದು ಬೇಡಿಕೊಂಡಳು. 4 ಆದರೆ ನ್ಯಾಯಾಧೀಶನು ಆ ಸ್ತ್ರೀಗೆ ಸಹಾಯಮಾಡಲು ಬಯಸಲಿಲ್ಲ. ಬಹಳ ಸಮಯದ ನಂತರ ಆ ನ್ಯಾಯಾಧೀಶನು ತನ್ನೊಳಗೆ, ‘ನನಗಂತೂ ದೇವರಲ್ಲಿ ಭಯಭಕ್ತಿಯಿಲ್ಲ. ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆಂಬುದರ ಬಗ್ಗೆಯೂ ಗಮನವಿಲ್ಲ. 5 ಆದರೆ ಈ ಸ್ತ್ರೀ ಬಂದುಬಂದು ನನ್ನನ್ನು ಕುಗ್ಗಿಸಿಬಿಡುತ್ತಾಳೆ. ಈಕೆಗೆ ನಾನು ನ್ಯಾಯವನ್ನು ದೊರಕಿಸಿಕೊಟ್ಟರೆ, ಈಕೆ ನನ್ನನ್ನು ಕಾಡಿಸುವುದಿಲ್ಲ. ಇಲ್ಲವಾದರೆ, ಈಕೆಯು ನನ್ನನ್ನು ಕಾಡಿಸುತ್ತಲೇ ಇರುವಳು’ ಎಂದುಕೊಂಡನು.”
6 ಪ್ರಭುವು ಈ ಸಾಮ್ಯವನ್ನು ಹೇಳಿದ ಮೇಲೆ ತನ್ನ ಶಿಷ್ಯರಿಗೆ, “ಕೇಳಿರಿ! ಆ ಅನ್ಯಾಯಗಾರನಾದ ನ್ಯಾಯಾಧೀಶನು ಹೇಳಿದ್ದರಲ್ಲಿ ಅರ್ಥವಿದೆ. 7 ದೇವಜನರು ದೇವರಿಗೆ ಹಗಲಿರುಳು ಮೊರೆಯಿಡಬೇಕು. ದೇವರು ತನ್ನ ಜನರಿಗೆ ಸರಿಯಾದದ್ದನ್ನೇ ಯಾವಾಗಲೂ ಕೊಡುತ್ತಾನೆ. ತನ್ನ ಜನರಿಗೆ ಉತ್ತರ ಕೊಡುವುದರಲ್ಲಿ ದೇವರು ತಡಮಾಡುವುದಿಲ್ಲ! 8 ದೇವರು ತನ್ನ ಜನರಿಗೆ ಬೇಗನೆ ಸಹಾಯ ಮಾಡುತ್ತಾನೆ ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಮನುಷ್ಯಕುಮಾರನು ಮತ್ತೆ ಬಂದಾಗ, ಜಗತ್ತಿನಲ್ಲಿ ನಂಬಿಕೆಯನ್ನು ಕಾಣುವನೋ?” ಎಂದನು.
ನೀತಿನಿರ್ಣಯ
9 ಅಲ್ಲಿ ಕೆಲವರು ತಾವೇ ಬಹಳ ಒಳ್ಳೆಯವರೆಂದು ಭಾವಿಸಿಕೊಂಡಿದ್ದರು. ಈ ಜನರು ತಾವು ಬೇರೆಯವರಿಗಿಂತ ಉತ್ತಮರೋ ಎಂಬಂತೆ ವರ್ತಿಸುತ್ತಿದ್ದರು. ಯೇಸು ಅವರಿಗೆ ಈ ಸಾಮ್ಯದ ಮೂಲಕ ಉಪದೇಶಿಸಿದನು. 10 “ಒಮ್ಮೆ ಒಬ್ಬ ಫರಿಸಾಯನು ಮತ್ತು ಒಬ್ಬ ಸುಂಕವಸೂಲಿಗಾರನು ಪ್ರಾರ್ಥಿಸಲು ದೇವಾಲಯಕ್ಕೆ ಹೋದರು. 11 ಫರಿಸಾಯನು ಸುಂಕವಸೂಲಿಗಾರನನ್ನು ಕಂಡು ದೂರದಲ್ಲಿ ನಿಂತುಕೊಂಡು ಹೀಗೆ ಪ್ರಾರ್ಥಿಸಿದನು: ‘ದೇವರೇ, ನಾನು ಬೇರೆಯವರಂತೆ ಸುಲಿಗೆಗಾರನಲ್ಲ, ಮೋಸಗಾರನಲ್ಲ, ಅಥವಾ ವ್ಯಭಿಚಾರಿಯಲ್ಲ. ನಾನು ಈ ಸುಂಕವಸೂಲಿಗಾರನಂತೆಯೂ ಅಲ್ಲ. ಇದಕ್ಕಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. 12 ನಾನಾದರೋ ವಾರದಲ್ಲಿ ಎರಡಾವರ್ತಿ ಉಪವಾಸ ಮಾಡುತ್ತೇನೆ. ಸಂಪಾದಿಸುವ ಪ್ರತಿಯೊಂದರಲ್ಲಿಯೂ ಹತ್ತನೆಯ ಒಂದು ಭಾಗವನ್ನು ನಿನಗೆ ಕೊಡುತ್ತೇನೆ!’ ಅಂದನು.
13 “ಸುಂಕವಸೂಲಿಗಾರನು ಅಲ್ಲಿ ಒಬ್ಬಂಟಿಗನಾಗಿಯೇ ನಿಂತುಕೊಂಡಿದ್ದನು. ಅವನು ಆಕಾಶದ ಕಡೆಗೆ ಕಣ್ಣೆತ್ತಿ ನೋಡದೇ, ದೇವರ ಮುಂದೆ ತನ್ನನ್ನು ಬಹಳವಾಗಿ ತಗ್ಗಿಸಿಕೊಂಡು, ‘ದೇವರೇ, ನನಗೆ ಕರುಣೆತೋರು; ನಾನು ಪಾಪಿಯಾಗಿದ್ದೇನೆ’ ಎಂದು ಪ್ರಾರ್ಥಿಸಿದನು. 14 ಅವನು ಪ್ರಾರ್ಥಿಸಿದ ಬಳಿಕ ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ಮನೆಗೆ ಹೋದನು ಎಂದು ನಾನು ನಿಮಗೆ ಹೇಳುತ್ತೇನೆ. ಆದರೆ ಆ ಫರಿಸಾಯನು ನೀತಿವಂತನೆಂದು ನಿರ್ಣಯಿಸಲ್ಪಡಲಿಲ್ಲ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವ ಪ್ರತಿಯೊಬ್ಬನೂ ಹೆಚ್ಚಿಸಲ್ಪಡುವನು.”
ದೇವರ ರಾಜ್ಯಕ್ಕೆ ಯಾರು ಪ್ರವೇಶಿಸುವರು?
(ಮತ್ತಾಯ 19:13-15; ಮಾರ್ಕ 10:13-16)
15 ಕೆಲವು ಜನರು ತಮ್ಮ ಚಿಕ್ಕಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತಂದರು. ಆದರೆ ಶಿಷ್ಯರು ಇದನ್ನು ನೋಡಿ, “ಮಕ್ಕಳನ್ನು ತರಕೂಡದು” ಎಂದು ಜನರಿಗೆ ಹೇಳಿದರು. 16 ಆದರೆ ಯೇಸುವು ಚಿಕ್ಕಮಕ್ಕಳನ್ನು ತನ್ನ ಬಳಿಗೆ ಕರೆದು ತನ್ನ ಶಿಷ್ಯರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಗೊಡಿಸಿರಿ. ಅವರಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಈ ಚಿಕ್ಕಮಕ್ಕಳಂತಿರುವ ಜನರದೇ. 17 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಶಿಶುಭಾವದಿಂದ ನೀವು ದೇವರ ರಾಜ್ಯವನ್ನು ಅಂಗೀಕರಿಸಬೇಕು. ಇಲ್ಲವಾದರೆ, ನೀವು ಎಂದಿಗೂ ಅದರೊಳಗೆ ಪ್ರವೇಶಿಸುವುದಿಲ್ಲ!” ಎಂದು ಹೇಳಿದನು.
ಐಶ್ವರ್ಯವಂತನೊಬ್ಬನು ಯೇಸುವಿಗೆ ಕೇಳಿದ ಪ್ರಶ್ನೆ
(ಮತ್ತಾಯ 19:16-30; ಮಾರ್ಕ 10:17-31)
18 ಒಬ್ಬ ಯೆಹೂದ್ಯನಾಯಕನು ಯೇಸುವಿಗೆ, “ಒಳ್ಳೆಯ ಉಪದೇಶಕನೇ, ನಿತ್ಯಜೀವ ಹೊಂದಲು ನಾನೇನು ಮಾಡಬೇಕು?” ಎಂದು ಕೇಳಿದನು.
19 ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ನೀನು ಏಕೆ ಕರೆಯುತ್ತೀ? ದೇವರೊಬ್ಬನೇ ಒಳ್ಳೆಯವನು. 20 ದೇವರ ಈ ಆಜ್ಞೆಗಳು ನಿನಗೆ ಗೊತ್ತೇ ಇವೆ: ‘ನೀನು ವ್ಯಭಿಚಾರ ಮಾಡಬಾರದು, ಯಾರನ್ನೂ ಕೊಲೆಮಾಡಬಾರದು, ಯಾವುದನ್ನೂ ಕದಿಯಬಾರದು, ಬೇರೆ ಜನರ ಬಗ್ಗೆ ನೀನು ಸುಳ್ಳನ್ನು ಹೇಳಬಾರದು ಮತ್ತು ನೀನು ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’”(A) ಎಂದನು.
21 ಅದಕ್ಕೆ ಅವನು, “ನಾನು ಚಿಕ್ಕಂದಿನಿಂದಲೂ ಆ ಆಜ್ಞೆಗಳಿಗೆಲ್ಲಾ ವಿಧೇಯನಾಗಿದ್ದೇನೆ!” ಎಂದು ಹೇಳಿದನು.
22 ಆಗ ಯೇಸು ಅವನಿಗೆ, “ನೀನು ಮಾಡಬೇಕಾದ ಇನ್ನೊಂದು ಕಾರ್ಯವಿದೆ. ನಿನ್ನ ಆಸ್ತಿಯನ್ನೆಲ್ಲಾ ಮಾರಿ ಅದರಿಂದ ಬಂದ ಹಣವನ್ನು ಬಡ ಜನರಿಗೆ ಕೊಡು. ನಿನಗೆ ಪರಲೋಕದಲ್ಲಿ ಪ್ರತಿಫಲ ದೊರೆಯುವುದು. ನೀನಾದರೋ ಬಂದು ನನ್ನನ್ನು ಹಿಂಬಾಲಿಸು!” ಅಂದನು. 23 ಯೇಸುವಿನ ಈ ಮಾತುಗಳನ್ನು ಕೇಳಿದಾಗ ಅವನಿಗೆ ಬಹಳ ದುಃಖವಾಯಿತು. ಏಕೆಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.
24 ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರರಾಜ್ಯಕ್ಕೆ ಸೇರುವುದು ಬಹಳ ಕಷ್ಟ! 25 ಐಶ್ವರ್ಯವಂತನು ದೇವರ ರಾಜ್ಯಕ್ಕೆ ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನ ಮೂಲಕ ನುಸುಳಿ ಹೋಗುವುದು ಸುಲಭ!” ಎಂದನು.
ಯಾರಿಗೆ ರಕ್ಷಣೆಯಾಗುವುದು?
26 ಜನರು ಯೇಸುವಿನ ಈ ಮಾತನ್ನು ಕೇಳಿ, “ಹಾಗಾದರೆ ಯಾರಿಗೆ ರಕ್ಷಣೆಯಾಗುವುದು?” ಎಂದು ಕೇಳಿದರು.
27 ಯೇಸು ಅವರಿಗೆ, “ಜನರಿಗೆ ಅಸಾಧ್ಯವಾದ ಕಾರ್ಯಗಳನ್ನು ದೇವರು ಮಾಡಬಲ್ಲನು” ಎಂದು ಉತ್ತರಿಸಿದನು.
28 ಪೇತ್ರನು, “ನೋಡು, ನಾವು ನಮ್ಮದೆಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದೆವು!” ಅಂದನು.
29 ಅದಕ್ಕೆ ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ದೇವರ ರಾಜ್ಯದ ನಿಮಿತ್ತ ತನ್ನ ಮನೆ, ಹೆಂಡತಿ, ಸಹೋದರರು, ತಂದೆತಾಯಿಗಳು ಅಥವಾ ಮಕ್ಕಳನ್ನು ತ್ಯಜಿಸಿದ ಪ್ರತಿಯೊಬ್ಬನು ತಾನು ತ್ಯಜಿಸಿದ್ದಕ್ಕಿಂತಲೂ ಹೆಚ್ಚು ಪಡೆಯುವನು. 30 ಅವನು ಈ ಜೀವನದಲ್ಲಿಯೇ ಅವುಗಳಿಗಿಂತ ಅನೇಕ ಪಾಲು ಹೆಚ್ಚಾದವುಗಳನ್ನು ಪಡೆಯುವನು ಮತ್ತು ತನ್ನ ಮುಂದಿನ ಲೋಕದಲ್ಲಿ ದೇವರೊಂದಿಗೆ ಸದಾಕಾಲ ಜೀವಿಸುವನು” ಎಂದು ಹೇಳಿದನು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ
(ಮತ್ತಾಯ 20:17-19; ಮಾರ್ಕ 10:32-34)
31 ಬಳಿಕ ಯೇಸು ತನ್ನ ಹನ್ನೆರಡು ಮಂದಿ ಅಪೊಸ್ತಲರೊಂದಿಗೆ ಪ್ರತ್ಯೇಕವಾಗಿ ಮಾತಾಡಿದನು. ಅವರಿಗೆ, “ಕೇಳಿರಿ! ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ದೇವರು ತನ್ನ ಪ್ರವಾದಿಗಳ ಮೂಲಕ ಮನುಷ್ಯಕುಮಾರನ ಬಗ್ಗೆ ಬರೆಸಿರುವ ಪ್ರತಿಯೊಂದು ಸಂಗತಿಯೂ ಸಂಭವಿಸುವುದು! 32 ಆತನ ಜನರೇ ಆತನಿಗೆ ವಿರೋಧವಾಗಿ ಎದ್ದು ಯೆಹೂದ್ಯರಲ್ಲದ ಜನರಿಗೆ ಆತನನ್ನು ಒಪ್ಪಿಸಿಕೊಡುವರು. ಅವರು ಆತನನ್ನು ಗೇಲಿಮಾಡಿ ಆತನ ಮುಖಕ್ಕೆ ಉಗುಳುವರು. ಆತನಿಗೆ ಅವಮಾನ ಮಾಡುವರು ಮತ್ತು ನಾಚಿಕೆಪಡಿಸುವರು. 33 ಅವರು ಆತನಿಗೆ ಕೊರಡೆಗಳಿಂದ ಹೊಡೆಯುವರು ಮತ್ತು ಆತನನ್ನು ಕೊಲ್ಲುವರು! ಆದರೆ ಆತನು ತನ್ನ ಮೂರನೇ ದಿನದಲ್ಲಿ ಮತ್ತೆ ಜೀವಂತವಾಗಿ ಎದ್ದುಬರುವನು” ಅಂದನು. 34 ಅಪೊಸ್ತಲರು ಇದನ್ನು ಗ್ರಹಿಸಿಕೊಳ್ಳಲು ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಲಿಲ್ಲ, ಏಕೆಂದರೆ ಅದರ ಅರ್ಥವು ಅವರಿಗೆ ಮರೆಯಾಗಿತ್ತು.
ಯೇಸುವಿನಿಂದ ಕಣ್ಣುಪಡೆದ ಕುರುಡ
(ಮತ್ತಾಯ 20:29-34; ಮಾರ್ಕ 10:46-52)
35 ಯೇಸು ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ, ಆ ರಸ್ತೆಯ ಪಕ್ಕದಲ್ಲಿ ಒಬ್ಬ ಕುರುಡನು ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು. 36 ಆ ರಸ್ತೆಯಲ್ಲಿ ಜನಸಮೂಹದ ಶಬ್ದವನ್ನು ಕೇಳಿ ಆ ಕುರುಡನು, “ಯಾವ ಸಮಾರಂಭ ನಡೆಯುತ್ತಿದೆ?” ಎಂದು ಕೇಳಿದನು.
37 ಜನರು ಅವನಿಗೆ, “ನಜರೇತಿನ ಯೇಸು ಬರುತ್ತಿದ್ದಾನೆ” ಎಂದು ತಿಳಿಸಿದರು.
38 ಆ ಕುರುಡನು ಗಟ್ಟಿಯಾಗಿ, “ಯೇಸುವೇ, ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.
39 ಜನಸಮೂಹದ ಮುಂದಿದ್ದ ಜನರು ಕುರುಡನನ್ನು ಗದರಿಸಿ, ಅವನಿಗೆ ಮಾತಾಡಕೂಡದೆಂದು ಹೇಳಿದರು. ಆದರೆ ಆ ಕುರುಡನು ಮತ್ತಷ್ಟು ಗಟ್ಟಿಯಾಗಿ, “ದಾವೀದನ ಕುಮಾರನೇ, ದಯಮಾಡಿ ನನಗೆ ಸಹಾಯಮಾಡು!” ಎಂದು ಕೂಗಿದನು.
40 ಯೇಸು ಅಲ್ಲೇ ನಿಂತು, “ಆ ಕುರುಡನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಹೇಳಿದನು. ಆ ಕುರುಡನು ಹತ್ತಿರಕ್ಕೆ ಬಂದಾಗ, ಯೇಸು ಅವನಿಗೆ 41 “ನಾನು ನಿನಗಾಗಿ ಏನು ಮಾಡಬೇಕು?” ಎಂದು ಕೇಳಿದನು.
ಕುರುಡನು, “ಪ್ರಭುವೇ, ನನಗೆ ಮತ್ತೆ ಕಣ್ಣು ಕಾಣುವಂತೆ ಮಾಡು” ಅಂದನು.
42 ಯೇಸು ಅವನಿಗೆ, “ನೀನು ನಂಬಿದ್ದರಿಂದಲೇ ನಿನಗೆ ವಾಸಿಯಾಯಿತು” ಎಂದು ಹೇಳಿದನು.
43 ಆಗ ಆ ಕುರುಡನಿಗೆ ದೃಷ್ಟಿ ಬಂದಿತು. ಅವನು ದೇವರನ್ನು ಸ್ತುತಿಸುತ್ತಾ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ಈ ಮಹತ್ಕಾರ್ಯಕ್ಕಾಗಿ ದೇವರನ್ನು ಕೊಂಡಾಡಿದರು.
33 “ಈಗಲಾದರೋ ಯೋಬನೇ, ನನ್ನ ಸಂದೇಶಕ್ಕೆ ಕಿವಿಗೊಡು.
ನನ್ನ ಮಾತುಗಳಿಗೆ ಗಮನ ಕೊಡು.
2 ಈಗ ನಾನು ನನ್ನ ಬಾಯಿ ತೆರೆಯುವೆನು; ನಾನು ಮಾತಾಡಲು ಸಿದ್ಧನಾಗಿದ್ದೇನೆ.
3 ನನ್ನ ಹೃದಯವು ಯಥಾರ್ಥವಾಗಿದೆ; ಆದ್ದರಿಂದ ನಾನು ಯಥಾರ್ಥವಾದ ಮಾತುಗಳನ್ನು ಹೇಳುವೆನು,
ನನಗೆ ತಿಳಿದಿರುವ ಸಂಗತಿಗಳ ಬಗ್ಗೆ ಸತ್ಯವನ್ನು ಹೇಳುವೆನು.
4 ದೇವರಾತ್ಮನು ನನ್ನನ್ನು ನಿರ್ಮಿಸಿದನು.
ಸರ್ವಶಕ್ತನಾದ ದೇವರ ಉಸಿರು ನನಗೆ ಜೀವವನ್ನು ಕೊಟ್ಟಿತು.
5 ಯೋಬನೇ, ಕಿವಿಗೊಡು! ನಿನಗೆ ಸಾಧ್ಯವೆನಿಸಿದರೆ ನನಗೆ ಉತ್ತರಕೊಡು.
ನಿನ್ನ ವಾದವನ್ನು ಸಿದ್ಧಪಡಿಸಿಕೊ; ನನ್ನೆದುರಿನಲ್ಲಿ ನಿನ್ನ ಪರವಾಗಿ ಪ್ರತಿವಾದಿಸು!
6 ನೀನು ಮತ್ತು ನಾನು ದೇವರ ಎದುರಿನಲ್ಲಿ ಒಂದೇ ರೀತಿಯಲ್ಲಿದ್ದೇವೆ.
ದೇವರು ನಮ್ಮಿಬ್ಬರನ್ನು ಮಣ್ಣಿನಿಂದ ನಿರ್ಮಿಸಿದನು.
7 ಯೋಬನೇ, ನನಗೆ ಭಯಪಡಬೇಡ.
ನಾನು ನಿನ್ನನ್ನು ಸೋಲಿಸುವುದಿಲ್ಲ.
8 “ಆದರೆ ಯೋಬನೇ,
ನೀನು ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ:
9 ‘ಯೋಬನಾದ ನಾನು ಪರಿಶುದ್ಧನು; ನಾನು ನಿರಪರಾಧಿ;
ನಾನು ಯಾವ ತಪ್ಪನ್ನೂ ಮಾಡಲಿಲ್ಲ; ನಾನು ದೋಷಿಯಲ್ಲ!
10 ನಾನು ತಪ್ಪು ಮಾಡಿಲ್ಲದಿದ್ದರೂ ದೇವರು ನನಗೆ ವಿರೋಧವಾಗಿದ್ದಾನೆ.
ದೇವರು ನನ್ನನ್ನು ತನ್ನ ವೈರಿಯೆಂದು ಪರಿಗಣಿಸಿದ್ದಾನೆ;
11 ದೇವರು ನನ್ನ ಕಾಲುಗಳನ್ನು ಸರಪಣಿಯಿಂದ ಕಟ್ಟಿದ್ದಾನೆ;
ನಾನು ಮಾಡುವ ಪ್ರತಿಯೊಂದನ್ನೂ ದೇವರು ಗಮನಿಸುತ್ತಿದ್ದಾನೆ.’
12 “ಆದರೆ ಯೋಬನೇ, ಈ ವಿಷಯದಲ್ಲಿ ನೀನು ತಪ್ಪಿತಸ್ಥನಾಗಿರುವೆ. ನಾನು ಅದನ್ನು ನಿರೂಪಿಸುವೆ.
ದೇವರು ಮನುಷ್ಯನಿಗಿಂತ ದೊಡ್ಡವನು.
13 ಯೋಬನೇ, ನೀನು ದೇವರೊಂದಿಗೆ ವಾದಿಸುವುದೇಕೆ?
ದೇವರು ನಿನಗೆ ಪ್ರತಿಯೊಂದನ್ನೂ ವಿವರಿಸಬೇಕೆಂದು ಭಾವಿಸಿಕೊಂಡಿರುವೆಯೋ?
14 ಒಂದುವೇಳೆ ದೇವರು ತನ್ನ ಕಾರ್ಯದ ಕುರಿತಾಗಿ ವಿವರಿಸಬಹುದು.
ಒಂದುವೇಳೆ ನಮಗೆ ಅರ್ಥವಾಗದ ರೀತಿಯಲ್ಲಿ ಆತನು ಮಾತಾಡಬಹುದು.
15 ಜನರು ಗಾಢನಿದ್ರೆಯಲ್ಲಿರುವಾಗ
ದೇವರು ಕನಸಿನ ಮೂಲಕವಾಗಲಿ ದರ್ಶನದ ಮೂಲಕವಾಗಲಿ ಮಾತಾಡಬಹುದು.
16 ಆತನು ಅವರ ಕಿವಿಗಳಲ್ಲಿ ಮಾತಾಡಬಹುದು.
ಆಗ ಅವರು ದೇವರ ಎಚ್ಚರಿಕೆಗಳಿಂದ ಬಹು ಭಯಗೊಳ್ಳುವರು.
17 ಜನರು ತಪ್ಪು ಮಾಡಬಾರದೆಂದೂ ಅಹಂಕಾರಿಗಳಾಗಿರಬಾರದೆಂದೂ
ದೇವರು ಅವರಿಗೆ ಎಚ್ಚರಿಕೆ ಕೊಡುತ್ತಾನೆ.
18 ಮರಣದ ಸ್ಥಳಕ್ಕೆ ಹೋಗುತ್ತಿರುವ ಜನರನ್ನು ರಕ್ಷಿಸುವುದಕ್ಕಾಗಿ ದೇವರು ಎಚ್ಚರಿಕೆ ಕೊಡುತ್ತಾನೆ.
ನಾಶವಾಗುತ್ತಿರುವವನನ್ನು ರಕ್ಷಿಸುವುದಕ್ಕಾಗಿ ದೇವರು ಎಚ್ಚರಿಸುತ್ತಾನೆ.
19 “ಇದಲ್ಲದೆ ಒಬ್ಬನು ದೇವರ ಶಿಕ್ಷೆಯಿಂದ ಹಾಸಿಗೆಹಿಡಿದು ಸಂಕಟಪಡುತ್ತಿರುವಾಗ ದೇವರ ಸ್ವರಕ್ಕೆ ಕಿವಿಗೊಟ್ಟರೂ ಕೊಡಬಹುದು.
ದೇವರು ಅವನನ್ನು ಎಲುಬುಗಳೆಲ್ಲಾ ಬಾಧಿಸುವಂಥ ನೋವಿನಿಂದ ಎಚ್ಚರಿಸುತ್ತಾನೆ.
20 ಅವನಿಗೆ ಊಟಮಾಡಲೂ ಸಾಧ್ಯವಿಲ್ಲ.
ಅವನು ಅತ್ಯಧಿಕವಾದ ನೋವಿನಿಂದ ಬಳಲುತ್ತಿರುವುದರಿಂದ ಮೃಷ್ಠಾನ್ನಕ್ಕೂ ಅಸಹ್ಯಪಡುವನು.
21 ಅವನು ಆಸ್ತಿಪಂಜರದಂತೆ ಕ್ಷೀಣವಾಗುವನು.
ಕಾಣದಿದ್ದ ಅವನ ಎಲುಬುಗಳು ಚರ್ಮಕ್ಕೆ ಅಂಟಿಕೊಂಡು ಅವು ಹೊರತೋರುತ್ತವೆ.
22 ಅವನಿಗೆ ಸಾವು ಸಮೀಪವಾಗಿದೆ;
ಅವನ ಜೀವವು ಪಾತಾಳಕ್ಕೆ ಹತ್ತಿರವಾಗಿದೆ.
23 ಒಂದುವೇಳೆ ದೇವರ ದೂತರಲ್ಲೊಬ್ಬನು ಮಧ್ಯಸ್ಥಗಾರನಾಗಿ ಬಂದು
ಅವನ ನೀತಿಕಾರ್ಯಗಳನ್ನು ದೃಢಪಡಿಸಿ ಅವನ ಮೇಲೆ ಪ್ರೀತಿಯುಳ್ಳವನಾಗಿ,
24 ‘ಇವನನ್ನು ಪಾತಾಳದಿಂದ ರಕ್ಷಿಸು!
ಇವನಿಗೋಸ್ಕರ ಪ್ರಾಯಶ್ಚಿತ್ತದ ಮಾರ್ಗವೊಂದನ್ನು ಕಂಡುಕೊಂಡಿದ್ದೇನೆ’ ಎಂದು ಹೇಳಿದರೆ
25 ಅವನ ದೇಹವು ಬಾಲ್ಯದಂತೆ ಕೋಮಲವಾಗುವುದು;
ಯೌವನಪ್ರಾಯದಂತೆ ದೃಢಕಾಯವಾಗುವುದು.
26 ಆಗ ಅವನು ದೇವರಿಗೆ ಪ್ರಾರ್ಥಿಸಲು ಆತನು ಅವನ ಪ್ರಾರ್ಥನೆಗೆ ಉತ್ತರಕೊಡುವನು.
ಅವನು ಆನಂದ ಧ್ವನಿಗೈದು ದೇವರನ್ನು ಆರಾಧಿಸುವನು;
ಆತನ ಮುಂದೆ ನೀತಿವಂತನಾಗಿ ಜೀವಿಸುವನು.
27 ಬಳಿಕ ಅವನು ಜನರ ಮುಂದೆ ನಿಂತುಕೊಂಡು, ‘ನಾನು ಪಾಪಮಾಡಿದೆನು;
ಒಳ್ಳೆಯದನ್ನು ಕೆಟ್ಟದ್ದನ್ನಾಗಿ ಮಾಡಿದೆನು.
ಆದರೆ ದೇವರು ಅದಕ್ಕೆ ತಕ್ಕಂತೆ ನನ್ನನ್ನು ದಂಡಿಸಲಿಲ್ಲ!
28 ದೇವರು ನನ್ನ ಆತ್ಮವನ್ನು ಪಾತಾಳಕ್ಕೆ ಹೋಗದಂತೆ ರಕ್ಷಿಸಿದನು.
ಆದ್ದರಿಂದ ನಾನು ಜೀವನದಲ್ಲಿ ಮತ್ತೆ ಸುಖಪಡುವಂತಾಯಿತು’ ಎಂದು ಅರಿಕೆಮಾಡಿಕೊಳ್ಳುವನು.
29-30 “ಅವನನ್ನು ಎಚ್ಚರಿಸಿ ಅವನ ಆತ್ಮವನ್ನು ಪಾತಾಳದಿಂದ ರಕ್ಷಿಸಬೇಕೆಂದೂ ಜೀವನದ ಸುಖವನ್ನು ಅವನು ಮತ್ತೆ ಅನುಭವಿಸಲೆಂದೂ
ದೇವರು ಈ ಕಾರ್ಯಗಳನ್ನು ಪದೇಪದೇ ಮಾಡುವನು.
31 “ಯೋಬನೇ, ನನ್ನ ಮಾತುಗಳಿಗೆ ಗಮನಕೊಟ್ಟು ಕೇಳು, ಮೌನವಾಗಿರು.
ನಾನು ಮಾತಾಡುವೆನು.
32 ಯೋಬನೇ, ನೀನು ಏನಾದರೂ ಹೇಳಬೇಕೆಂದಿದ್ದರೆ, ಅದನ್ನು ನಾನು ಕೇಳುವಂತಾಗಲಿ.
ಮುನ್ನಡೆದು ಮಾತಾಡು,
ಯಾಕೆಂದರೆ ನಿನ್ನನ್ನು ನೀತಿವಂತನೆಂದು ಸ್ಥಾಪಿಸಲು ನನಗೆ ಸಂತೋಷ.
33 ಯೋಬನೇ, ಹೇಳುವುದಕ್ಕೆ ನಿನ್ನಲ್ಲಿ ಏನೂ ಇಲ್ಲದಿದ್ದರೆ ನನಗೆ ಕಿವಿಗೊಟ್ಟು ಮೌನವಾಗಿರು.
ನಾನು ನಿನಗೆ ಜ್ಞಾನವನ್ನು ಬೋಧಿಸುವೆನು.”
ದೇವರ ಸೇವಕರ ಹೊಸ ಒಪ್ಪಂದ
3 ನಾವು ನಮ್ಮ ವಿಷಯವಾಗಿ ಮತ್ತೆ ಹೊಗಳಿಕೊಳ್ಳಲು ಆರಂಭಿಸಿದ್ದೇವೆಯೇ? ಇತರ ಕೆಲವು ಜನರಿಗೆ ಬೇಕಾಗುವಂತೆ ನಿಮ್ಮ ಬಳಿಗೆ ಬರಲು ನನಗೆ ಯೋಗ್ಯತಾಪತ್ರಗಳನ್ನು ತೆಗೆದು ಕೊಳ್ಳಬೇಕಾಗಿದೆಯೋ? ಅಥವಾ ಬೇರೆಡೆಗೆ ಹೋಗುವಾಗ ನಿಮ್ಮಿಂದ ಯೋಗ್ಯತಾ ಪತ್ರಗಳನ್ನು ತೆಗೆದುಕೊಳ್ಳಬೇಕಾಗಿದೆಯೋ? 2 ಸ್ವತಃ ನೀವೇ ನಮಗೆ ಯೋಗ್ಯತಾಪತ್ರವಾಗಿದ್ದೀರಿ. ಆ ಪತ್ರಗಳು ನಮ್ಮ ಹೃದಯಗಳಲ್ಲಿ ಬರೆಯಲ್ಪಟ್ಟಿವೆ. ಆ ಪತ್ರವನ್ನು ಎಲ್ಲರೂ ಬಲ್ಲರು, ಎಲ್ಲರೂ ಓದುತ್ತಾರೆ. 3 ಕ್ರಿಸ್ತನು ನಮ್ಮ ಮೂಲಕವಾಗಿ ಕಳುಹಿಸಿದ ಕ್ರಿಸ್ತನ ಪತ್ರ ನೀವಾಗಿದ್ದೀರಿ. ಆ ಪತ್ರವನ್ನು ಬರೆದಿರುವುದು ಶಾಯಿಯಿಂದಲ್ಲ, ಜೀವಸ್ವರೂಪನಾದ ದೇವರ ಆತ್ಮನಿಂದ. ಇದನ್ನು ಕಲ್ಲುಹಲಿಗೆಗಳ ಮೇಲೆ ಬರೆದಿಲ್ಲ. ಇದನ್ನು ಮಾನವ ಹೃದಯಗಳ ಮೇಲೆ ಬರೆಯಲಾಗಿದೆ.
4 ನಾವು ಈ ಸಂಗತಿಗಳನ್ನು ಹೇಳಬಲ್ಲೆವು; ಏಕೆಂದರೆ ನಾವು ಕ್ರಿಸ್ತನ ಮೂಲಕ ದೇವರ ಸನ್ನಿಧಿಯಲ್ಲಿ ಭರವಸದಿಂದಿದ್ದೇವೆ. 5 ನಮ್ಮ ಸ್ವಂತ ಶಕ್ತಿಯಿಂದಲೇ ನಾವು ಯಾವ ಒಳ್ಳೆಯದನ್ನಾದರೂ ಮಾಡಬಲ್ಲೆವೆಂದು ನಾನು ಹೇಳುತ್ತಿಲ್ಲ. ನಾವು ಮಾಡುವ ಕಾರ್ಯಗಳನ್ನು ದೇವರು ಒದಗಿಸಿದ ಸಾಮರ್ಥ್ಯದಿಂದಲೇ ಮಾಡುತ್ತೇವೆ. 6 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ದೇವರೇ ನಮಗೆ ಕೊಟ್ಟನು. ಈ ಹೊಸ ಒಡಂಬಡಿಕೆಯು ಲಿಖಿತ ರೂಪವಾದ ಧರ್ಮಶಾಸ್ತ್ರವಲ್ಲ. ಇದು ಪವಿತ್ರಾತ್ಮನದು. ಲಿಖಿತ ರೂಪವಾದ ಧರ್ಮಶಾಸ್ತ್ರವು ಮರಣವನ್ನು ತರುತ್ತದೆ, ಆದರೆ ಪವಿತ್ರಾತ್ಮನು ಜೀವವನ್ನು ಕೊಡುತ್ತಾನೆ.
ಹೊಸ ಒಡಂಬಡಿಕೆಯು ಹೆಚ್ಚಿನ ಮಹಿಮೆಯನ್ನು ತರುತ್ತದೆ
7 ಮರಣವನ್ನು ವಿಧಿಸುವ ಸೇವೆಯು (ಧರ್ಮಶಾಸ್ತ್ರ) ಕಲ್ಲಿನ ಹಲಗೆಗಳ ಮೇಲೆ ಅಕ್ಷರಗಳಲ್ಲಿ ಬರೆಯಲ್ಪಟ್ಟಿತ್ತು. ಅದು ದೇವರ ಮಹಿಮೆಯೊಂದಿಗೆ ಬಂದಿತು. ಮೋಶೆಯ ಮುಖವು ಪ್ರಕಾಶಮಾನವಾಗಿ ಹೊಳೆಯುತ್ತಿದ್ದುದರಿಂದ ಇಸ್ರೇಲರು ಅವನ ಮುಖವನ್ನು ನೋಡಲಾರದೆ ಹೋದರು. ಆ ಬಳಿಕ ಆ ಮಹಿಮೆಯು ಕುಂದಿಹೋಯಿತು. 8 ಹೀಗಿರಲಾಗಿ ಪವಿತ್ರಾತ್ಮನ ಸಂಬಂಧವಾದ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ. 9 ಇದರರ್ಥವೇನೆಂದರೆ: ಆ ಸೇವೆಯು (ಧರ್ಮಶಾಸ್ತ್ರ) ಜನರನ್ನು ಅಪರಾಧಿಗಳೆಂದು ತೀರ್ಪು ನೀಡಿತು, ಆದರೆ ಅದು ಮಹಿಮೆಯನ್ನು ಹೊಂದಿತ್ತು. ಹೀಗಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಉಂಟುಮಾಡುವುದು ಎಷ್ಟೋ ನಿಶ್ಚಯವಾಗಿದೆ. 10 ಆ ಹಳೆ ಸೇವೆಯು ಮಹಿಮೆಯನ್ನು ಹೊಂದಿತ್ತು. ಆದರೆ ಅದು ಹೊಸ ಸೇವೆಯ ಎದುರಿನಲ್ಲಿ ಮಹಿಮೆಯಿಲ್ಲದ್ದಾಯಿತು. 11 ಲಯಗೊಂಡ ಆ ಸೇವೆಯು ಮಹಿಮೆಯೊಂದಿಗೆ ಬಂದಿರುವುದಾಗಿದ್ದರೆ, ಎಂದೆಂದಿಗೂ ಮುಂದುವರಿಯುವ ಈ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಹೊಂದಿದೆ.
12 ನಮಗೆ ಈ ನಿರೀಕ್ಷೆ ಇರುವುದರಿಂದ ನಾವು ಬಹಳ ಧೈರ್ಯವಾಗಿದ್ದೇವೆ. 13 ನಾವು ಮೋಶೆಯಂತಿಲ್ಲ. ಕುಂದಿ ಹೋಗುವ ಮಹಿಮೆಯು ಅಂತ್ಯಗೊಳ್ಳುವುದನ್ನು ಇಸ್ರೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಂಡನು. 14 ಆದರೆ ಅವರ ಬುದ್ಧಿಗೆ ಮಂಕು ಕವಿದಿದ್ದರಿಂದ ಅವರು ಅರ್ಥಮಾಡಿಕೊಳ್ಳಲಾಗಲಿಲ್ಲ. ಅವರು ಹಳೆ ಒಡಂಬಡಿಕೆಯನ್ನು ಓದುವಾಗ ಇಂದಿಗೂ ಅದೇ ಮುಸುಕು ಅರ್ಥವನ್ನು ಮರೆಮಾಡುತ್ತದೆ. ಆ ಮುಸುಕನ್ನು ತೆಗೆದು ಹಾಕಲಿಲ್ಲ. ಏಕೆಂದರೆ ಕ್ರಿಸ್ತನ ಮೂಲಕವಾಗಿ ಮಾತ್ರ ಅದು ತೆಗೆದುಹಾಕಲ್ಪಡುತ್ತದೆ. 15 ಆದರೆ ಇಂದಿಗೂ ಸಹ, ಮೋಶೆಯ ಧರ್ಮಶಾಸ್ತ್ರವನ್ನು ಓದುವಾಗ, ಅವರ ಮನಸ್ಸುಗಳ ಮೇಲೆ ಮುಸುಕು ಇರುತ್ತದೆ. 16 ಆದರೆ ಒಬ್ಬ ವ್ಯಕ್ತಿಯು ಮಾರ್ಪಾಟಾಗಿ ಪ್ರಭುವನ್ನು ಅನುಸರಿಸುವಾಗ ಆ ಮುಸುಕು ತೆಗೆಯಲ್ಪಡುವುದು. 17 ಆ ಪ್ರಭುವು ಪವಿತ್ರಾತ್ಮನೇ. ಎಲ್ಲಿ ಪ್ರಭುವಿನ ಆತ್ಮನು ಇರುತ್ತಾನೋ ಅಲ್ಲಿ ಸ್ವತಂತ್ರವಿರುತ್ತದೆ. 18 ನಮ್ಮ ಮುಖಗಳು ಮುಸುಕಿನಿಂದ ಮುಚ್ಚಲ್ಪಟ್ಟಿಲ್ಲ. ನಾವೆಲ್ಲರೂ ಮುಸುಕು ತೆರೆದ ಮುಖವುಳ್ಳವರಾಗಿದ್ದು ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತಿದ್ದೇವೆ. ಪ್ರಭುವಿನಿಂದ ಹೊರಹೊಮ್ಮುವ ಮಹಿಮೆಯು ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಆತನನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮನಾಗಿರುವ ಪ್ರಭುವಿನ ಕಾರ್ಯವೇ.
Kannada Holy Bible: Easy-to-Read Version. All rights reserved. © 1997 Bible League International